ವಿಷಯದ ವಿವರಗಳಿಗೆ ದಾಟಿರಿ

ಜುಲೈ 16, 2013

ಕಟ್ಟಡ ವಿನ್ಯಾಸದಲ್ಲಿ ನೈಸರ್ಗಿಕ ಬೆಳಕಿನ ಬಳಕೆ

‍ನಿಲುಮೆ ಮೂಲಕ

-ವಿ.ಆರ್ ಭಟ್

Image 05ವಾಸ್ತುಶಿಲ್ಪ ಮತ್ತು ಬೆಳಕು ಎಂಬೆರಡು ಪರಿಕಲ್ಪನೆಗಳು ಇತಿಹಾಸಕಾಲದಿಂದಲೂ ಪರಸ್ಪರ ಅವಲಂಬಿತವಾಗಿಯೇ ಇರುವುದನ್ನು ಕಾಣುತ್ತೇವೆ. ಈ ಸಂಬಂಧ ಹೊಸದೇನೂ ಅಲ್ಲ ಮತ್ತು ಹೊಸತಲೆಮಾರಿನ ಸ್ಥಪತಿಗಳು, ವಿನ್ಯಾಸಗಾರರು ಅದನ್ನು ನಿರ್ಲಕ್ಷ್ಯಿಸುವಂತಿಲ್ಲ ಎನ್ನುತ್ತಾರೆ ವಾಸ್ತುವಿನ್ಯಾಸಗಾರ ಪ್ರಶಾಂತ್ ನಂದಿಪ್ರಸಾದ್. ಬೆಳಕಿನ ಕಥೆಯನ್ನು ಅವರ ಬಾಯಲ್ಲೇ ಕೇಳುವುದು ಬಹಳ ಚಂದ:

ವಿದ್ಯುತ್ತಿನಂತಹ ಕೃತ್ರಿಮ ಬೆಳಕಿನ ಮೂಲಗಳು ಬಳಕೆಗೆ ಸಿಗದಿದ್ದ ಕಾರಣ, ಗೋಡೆ ಮತ್ತು ಮುಚ್ಚಿಗೆಗಳಿಂದ ಆವರಿಸಲ್ಪಡುವ ಜಾಗಗಳಲ್ಲಿ ನೈಸರ್ಗಿಕ ಬೆಳಕಿನ ಲಭ್ಯತೆಗಳಿಗೆ ಆದ್ಯತೆಯನ್ನಿತ್ತ   ಪ್ರಾಚೀನ ವಾಸ್ತುಶಿಲ್ಪಶಾಸ್ತ್ರದಲ್ಲಿ, ಸ್ಥಾಪತ್ಯ ಮತ್ತು ಬೆಳಕು ಇವೆರಡೂ ಪರಸ್ಪರ ಅಂತರ್ಗತವಾಗಿ ಹೆಜ್ಜೆಹಾಕಿವೆ. ಹೀಗಾಗಿ ವಾಸ್ತುಶಿಲ್ಪಶಾಸ್ತ್ರ ಎಂಬುದು ’ನಾಲ್ಕುಗೋಡೆ ಮತ್ತು ಒಂದು ಛಾವಣಿ’ ಎಂಬುದಕ್ಕಿಂದ ವಿಸ್ತೃತವಾದ ವಿಷಯವಾಗಿದೆ. ಅಂಗಣದ ಭೂಭಾಗದ ತಗ್ಗು ದಿಣ್ಣೆಗಳನ್ನು ಅನುಕೂಲಕ್ಕೆ ತಕ್ಕಂತೇ ಪರಿವರ್ತಿಸಿ, ಕಟ್ಟಡದೊಳಗೆ ಬೆಳಕಿನ ಹರಿವು ಹೆಚ್ಚುವಂತೇ ಮಾಡುವ ಮೂಲಕ ಅಲ್ಲಿನ ನಿವಾಸಿಗಳಿಗೆ ಪುಷ್ಕಳ ಬೆಳಕು ಲಭ್ಯವಾಗುವಂತೇ ನೋಡಿಕೊಳ್ಳುತ್ತಿದ್ದುದು ಅಂದಿನ ಸಂಪ್ರದಾಯ. ಉತ್ತಮ ಬೆಳಕಿನ ಪ್ರವಾಹ ಇರುವ ಕಟ್ಟಡಗಳಲ್ಲಿ ನಾವದನ್ನು ಹೆಚ್ಚಾಗಿ ಗಮನಿಸುವುದೇ ಇಲ್ಲ, ಆದರೂ ಬೆಳಕಿನಿಂದಾಗಿಯೇ ನಾವಲ್ಲಿ ಆಕರ್ಷಿತರಾಗಿರುತ್ತೇವೆ, ಅಲ್ಲಿಯೇ ಇರಲು ಇಷ್ಟಪಡುತ್ತೇವೆ.

ಹಿಂದೂ ಮತ್ತು ಇಸ್ಲಾಂ ವಾಸ್ತುಶಿಲ್ಪ ಶಾಸ್ತ್ರಗಳಲ್ಲಿ, ಅವರ ವಸಾಹತುಗಳುಳ್ಳ ಭೂಖಂಡದ ಕೆಲವು ಪೂಜಾ/ಪ್ರಾರ್ಥನಾ ಪ್ರದೇಶಗಳಲ್ಲಿ, ಬೆಳಕೆಂಬ ಮೂಲವಸ್ತುವಿನ ಬಳಕೆ ಹಲವೆಡೆಗಳಲ್ಲಿ ನಿಯಂತ್ರಣಕ್ಕೆ ಒಳಪಡುತ್ತಿತ್ತು. ವ್ಯವಸ್ಥಾಪನೆಗೊಳಪಟ್ಟ ಪ್ರದೇಶಗಳಲ್ಲಿ ಪದರಗಳನ್ನು ನಿರ್ಮಾಣಮಾಡುವ ಮೂಲಕ ಹೊರಜಗತ್ತಿನ ಗದ್ದಲ, ಧೂಳು ಮತ್ತು ಸುಡುವ ಬಿಸಿಲು ನೇರವಾಗಿ ಒಳಗೆ ಬರದಂತೇ ತಡೆಯಲಾಗುತ್ತಿತ್ತು. ಉದಾಹರಣೆಗೆ: ವಿಶೇಷ ದಿನಗಳಲ್ಲಿ ಸೇರುವ ಜನಸಂದಣಿಯನ್ನು ಗಣನೆಯಲ್ಲಿಟ್ಟುಕೊಂಡು,  ಪ್ರಮುಖ ಪೂಜಾಸ್ಥಳ ಮತ್ತು ಬರುವ ಜನರ ಅನುಕೂಲಕ್ಕಾಗಿ ನಿರ್ಮಿಸುವ ಸಭಾಗೃಹ ಇತ್ಯಾದಿಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರಿಸಲಾಗುತ್ತಿತ್ತು. ಗರ್ಭಗುಡಿಗಳಲ್ಲಂತೂ ಸೂರ್ಯನ ಬೆಳಕು ಪ್ರವೇಶಿಸದೇ ಇರುವಂತಿದ್ದು, ಅಲ್ಲಿಯೇ ಉರಿಸಲ್ಪಡುವ ಎಣ್ಣೆಯ ದೀಪಗಳಿಂದ ಹೊಮ್ಮುವ ಬೆಳಕು ವಿಗ್ರಹಗಳ ದಿವ್ಯಪ್ರಭಾವಲಯಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದವು. ವಿನ್ಯಾಸ ಮತ್ತು ಬೆಳಕಿನ ವಿಶಿಷ್ಟ ಬಳಕೆಗಳು ಈಜಿಪ್ಟ್ ನಲ್ಲಿಯೂ ಕಂಡುಬಂದಿದ್ದು, ಅವರ ದೇವಾಲಯಗಳಲ್ಲಿರುವ  ಮಾನವ ಶರೀರಕ್ಕಿಂತ ದೊಡ್ಡದಾದ, ಬೃಹದಾಕಾರದ ವಿಗ್ರಹಗಳನ್ನು ದರ್ಶಿಸಲು ಇದೇ ಮಾದರಿಯ ವ್ಯವಸ್ಥೆ ಅಲ್ಲಿತ್ತು.

ಗ್ರೀಕ್ ಮತ್ತು ರೋಮನ್ ವಾಸ್ತುವಿನ್ಯಾಸಗಳಲ್ಲಿ ಇದಕ್ಕಿಂತ ಭಿನ್ನವಾಗಿ, ರಕ್ಷಣೆ ನೀಡುವ ಬೆಳಕನ್ನು ಭಕ್ತಿ ಮತ್ತು ಧ್ಯಾನಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಗೋತಿಕ್ ಶೈಲಿಯಲ್ಲಿ ಕಟ್ಟಲಾದ ಇಗರ್ಜಿಗಳಲ್ಲಿ, ಕಿಟಕಿಗಳ ಬಣ್ಣದ ಗಾಜುಗಳ ಮೇಲೆ ಬೆಳಕನ್ನು ಪ್ರವಹಿಸುವುದರ ಮೂಲಕ,ಇಗರ್ಜಿಯ ಒಳಗಿರುವವರಿಗೆ ಅತಿಮಾನುಷ ಶಕ್ತಿಯ ದಿವ್ಯಪ್ರಭೆಯನ್ನು ಕಂಡಂತಹ ಪ್ರಲೋಭನೆ ಉಂಟಾಗುವಂತೇ ಮಾಡಿದ್ದಾರೆ. ವಿಲಕ್ಷಣ ಮಾದರಿಯ ಕಟ್ಟಡಗಳು ಪ್ರಖರ ಬೆಳಕಿಗೆ ಆದ್ಯತೆ ನೀಡಿದ್ದರೆ, ಪುನರುಜ್ಜೀವನಗೊಂಡ ಕಟ್ಟಡಗಳಲ್ಲಿ ಮಾನವ ನಿರ್ಮಿತ ಬೆಳಕಿನಂತೇ ಬೆಳಕು ಪ್ರವಹಿಸುವಂತೆ ಯತ್ನಿಸಲಾಗಿದೆ.

ಆಧುನಿಕ ವಾಸ್ತುವಿನ್ಯಾಸ ಶಾಸ್ತ್ರದ ಇತಿಹಾಸದಲ್ಲಿ, ಲೀ ಕಾರ್ಬ್ಯೂಸಿಯರ್ ಎಂಬ ಫ್ರೆಂಚ್-ಸ್ವಿಸ್ ಆಧುನಿಕ ವಾಸ್ತುವಿನ್ಯಾಸತಜ್ಞ [ಚಂಡೀಗಡ ನಗರವನ್ನು ವಿನ್ಯಾಸಗೊಳಿಸಿದಾತ] ಹೇಳುತ್ತಾನೆ:    “ಬೆಳಕಿನಡಿಯಲ್ಲಿ ಬೃಹದ್ವಸ್ತುಗಳನ್ನು ಕಲೆಹಾಕಿಕೊಂಡು,  ತಿಳುವಳಿಕೆಯುಳ್ಳ-ಸರಿಯಾದ ಮತ್ತು ಭವ್ಯವಾದ ರೀತಿಯಲ್ಲಿ ಜೋಡಿಸುವ ಆಟವೇ ವಾಸ್ತುಶಿಲ್ಪಶಾಸ್ತ್ರ.” ಆತ ನಿರ್ಮಿಸಿದ ಬಹುತೇಕ ಕಟ್ಟಡಗಳು ರಂಧ್ರಗಳನ್ನೂ ಮತ್ತು ತೆರೆದ ಭಾಗಗಳನ್ನೂ ಹೊಂದಿದ್ದು, ನೈಸರ್ಗಿಕ ಬೆಳಕನ್ನು ಒಳಗೆ ತರುವಲ್ಲಿ ಮತ್ತು ನಿಯಂತ್ರಿಸುವಲ್ಲಿ ನಿಖರವಾಗಿ ನಿರೂಪಿತವಾಗಿವೆ. ಜಗತ್ತಿನೆಲ್ಲೆಡೆ, ಜನರು ಸೂರ್ಯನ ಬೆಳಕನ್ನು ಲಕ್ಷ್ಯಿಸುವಲ್ಲಿ, ಬೆಳಕಿನ ಸಂಪರ್ಕವನ್ನು ಪಡಕೊಳ್ಳುವಲ್ಲಿ ಮತ್ತು ಬೆಳಕನ್ನು ನಿಯಂತ್ರಿಸುವಲ್ಲಿ, ಅಲ್ಲಲ್ಲಿನ ಪ್ರಾದೇಶಿಕತೆ ಅಥವಾ ವಾತಾವರಣಗಳೇ ಕಾರಣೀಭೂತವಾಗಿವೆ.

ತೀರಾ ಇತ್ತೀಚಿನವರೆಗೆ, ವಿಶೇಷವಾಗಿ ಭಾರತದ ಭೂಭಾಗದಲ್ಲಿ, ಹಲವು ವಾಸ್ತುವಿನ್ಯಾಸಗಾರರು ನೈಸರ್ಗಿಕವಾಗಿ ದೊರೆಯುವ ಬೆಳಕನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾದ ವಿನ್ಯಾಸಗಳನ್ನು ಮಾಡುತ್ತಿರಲಿಲ್ಲ. ವಾಸಯೋಗ್ಯ ಜಾಗಗಳನ್ನು ಸೃಷ್ಟಿಸುವುದಕ್ಕೆ ಸೂರ್ಯನ ಬೆಳಕು ಒಂದು ಉಪಕರಣದಂತಾಗಿದೆ. ಕಾಲದ ಕರೆಯಿರಬೇಕು; ಅಧುನಿಕತೆಯ ಬಹುಮುಖೀ ಒತ್ತಡಗಳಿಂದ  ಸಂಕಷ್ಟಕ್ಕೊಳಗಾದ ವಾಸ್ತುಶಿಲ್ಪಶಾಸ್ತ್ರದ ಕೊಡುಗೆ ಎನ್ನೋಣವೋ ಅಥವಾ ಸಂಸ್ಕೃತಿ ಮತ್ತು ವಾತಾವರಣವನ್ನು ಮರೆತ ರೀತಿಯೆನ್ನೋಣವೋ ಇಂದಿನ ವೃತ್ತಿನಿರತ  ವಾಸ್ತುವಿನ್ಯಾಸಗಾರರು ತಮ್ಮ ಅನೇಕ ಪ್ರಾಜೆಕ್ಟುಗಳಲ್ಲಿ, ನೈಸರ್ಗಿಕ ಬೆಳಕು ಒಂದು ಸೃಜನಾತ್ಮಕ ಮೂಲವಸ್ತು  ಎಂಬುದಕ್ಕೆ ಆದ್ಯತೆಯನ್ನೇ ನೀಡುತ್ತಿಲ್ಲ! ನೈಸರ್ಗಿಕ ಬೆಳಕಿನ ಮಹತ್ವವರಿಯದ ಕಕ್ಷಿದಾರರ ತೊಡಗಿಕೊಳ್ಳುವಿಕೆಯಿಂದ, ಮಾರುಕಟ್ಟೆಯ ಒತ್ತಡಗಳಿಗೆ ಮಣಿದು, ಬಂಡವಾಳಶಾಹಿಗಳಿಂದ ತಯಾರಿಸಲ್ಪಟ್ಟು-ಬಳಕೆ ಅನಿವಾರ್ಯವೆಂಬಷ್ಟು ಧಾರಾಳವಾಗಿ ಕೈಗಡವಾಗಿ ಸಿಗುವ ಕೃತಕ ವಸ್ತುಗಳ ಅತಿಯಾದ ಬಳಕೆಯಿಂದ, ಇಂದಿನ ಕಟ್ಟಡಗಳು ಒಳಗಿನಿಂದಲೂ ಹೊರಗಿನಿಂದಲೂ ನಿಸರ್ಗ-ವಿಧ್ವಂಸಕವಾದ ಹಾವಳಿಯನ್ನು ನಡೆಸುತ್ತಿವೆ. ಪರಿಶುದ್ಧ ಆಲೋಚನೆಗಳಿಲ್ಲದ್ದರ ಪರಿಣಾಮವಾಗಿ, ಬೇಕಾದಾಗಲೆಲ್ಲಾ ಬದಲಾಯಿಸುವ ನಿರ್ಮಾಣ ಯೋಜನೆಗಳಿಂದಾಗಿ, ನಿರ್ಮಿತಿವಸ್ತುಗಳ ದೂರಗ್ರಾಹಿತ್ವ ರಹಿತ ಬಳಕೆಯಿಂದಾಗಿ, [ವಿದ್ಯುತ್]ಶಕ್ತಿಯ ಬಳಕೆ ವಿಪರೀತ ಹೆಚ್ಚಿದೆ.

ಉದಾಹರಣೆಗೆ ’ಮಾಲ್’ ಥರದ ಕಟ್ಟಡವನ್ನು ತೆಗೆದುಕೊಳ್ಳೋಣ. ಮುಂಬಾಗಿಲೊಂದನ್ನು ಬಿಟ್ಟು ಮಿಕ್ಕುಳಿತ ಎಲ್ಲಾಭಾಗಗಳಲ್ಲೂ ಗೋಡೆಗಳಿಂದ ಆವರಿಸಲ್ಪಟ್ಟ ಅಂತಹ ಕಟ್ಟಡಗಳಲ್ಲಿ, ವಿದೇಶೀ ಅನುಕರಣೆಯೆಂಬರೀತಿಯಲ್ಲಿ ಎಲ್ಲೆಲ್ಲೋ ಒಂದಷ್ಟು ಕಿಟಕಿ ಗಾಜುಗಳನ್ನು ಇಡಲಾಗುತ್ತದೆ; ಹೆಚ್ಚಿನ ಕಟ್ಟಡಗಳಲ್ಲಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನೆಡೆಗೇ ಗಾಜುಗಳು ಇಡಲ್ಪಡುವುದರಿಂದ, ಆ ಮೂಲಕ ಹರಿದು ಬರುವ ಸೂರ್ಯನ ಬೆಳಕು ಪ್ರಖರವಾಗಿದ್ದು-ಒಳಗಡೆಯ ಉಷ್ಣಾಂಶ ಹೆಚ್ಚಿ, ಸಾಧಾರಣವಾಗಿ ಬೇಕಾಗಬಹುದಾದ ಹವಾನಿಯಂತ್ರಣ ಸೌಲಭ್ಯಕ್ಕಿಂತ ಅಧಿಕಮಟ್ಟದ ಹವಾನಿಯಂತ್ರಕಗಳ ಅವಶ್ಯಕತೆ ಬೀಳುತ್ತದೆ. ಸಂಪೂರ್ಣವಾಗಿ ಗೋಡೆಗಳಿಂದಾವೃತವಾದ ಭಾಗಗಳು ಹೆಚ್ಚಿನ ವಿದ್ಯುದ್ದೀಪಗಳ ಮತ್ತು ಅಧಿಕ ಹವಾನಿಯಂತ್ರಕಗಳ ಅವಲಂಬನೆಯನ್ನು ಅರ್ಥೈಸಿದರೆ, ಈ ಸಲುವಾಗಿ ತಗಲುವ ಹೆಚ್ಚಿನ ವಿದ್ಯುತ್ತಿನ ತಯಾರಿ ಮತ್ತು ಸರಬರಾಜು ಕೆಲಸಗಳ ಅವಲಂಬನೆಯನ್ನು ಒಟ್ಟಾರೆ ವ್ಯವಸ್ಥೆ ಅರ್ಥೈಸುತ್ತದೆ. ಹವಾನಿಯಂತ್ರಕಗಳೂ ಮತ್ತೆಮತ್ತೆ ನಿಯಂತ್ರಿತ ಹವೆಯನ್ನೇ ಮರುಬಳಕೆ ಮಾಡುವುದರಿಂದ ಉಸಿರಾಟಯೋಗ್ಯ ಹವೆಯ ಪರಿಮಾಣ ಕಮ್ಮಿಯಾಗುತ್ತದೆ. ಇಂತಹ ಬೃಹನ್ಮಮಟ್ಟದ ವಿದ್ಯುತ್ ಬೇಡಿಕೆಯನ್ನು ನಾಡು ಭರಿಸಲಾಗದಾಗ, ಪೆಟ್ರೋಲಿಯಂ ಪದಾರ್ಥಗಳನ್ನು ಉಪಯೋಗಿಸಿ ಸ್ಥಳದಲ್ಲೇ ವಿದ್ಯುಜ್ಜನಕಗಳನ್ನು ಹಚ್ಚುವುದರ ಮೂಲಕ ತಮ್ಮ ಕೊರತೆಯನ್ನು ಮಾಲ್ ಗಳು ನೀಗಿಕೊಳ್ಳುತ್ತವೆ. ಇಲ್ಲಿ ಕಾರ್ಬನ್ ಬಿಡುಗಡೆಯಾಗುವುದರ ಜೊತೆಗೆ ಇದಕ್ಕೆ ತಗಲುವ ವೆಚ್ಚ ಕೂಡಾ ದುಬಾರಿಯಾಗಿರುತ್ತದೆ. ಬಾಡಿಗೆಗಳೂ ಬಹಳ ಹೆಚ್ಚಿನಮಟ್ಟದಲ್ಲಿದ್ದು ಅವುಗಳನ್ನೆಲ್ಲಾ ಬರುವ ಗಿರಾಕಿಗಳಿಗೆ ಪರೋಕ್ಷವಾಗಿ ವರ್ಗಾಯಿಸಲಾಗುತ್ತದೆ. ಇದನ್ನೆಲ್ಲಾ ನೋಡಿದರೆ, ಮಾಲ್ ಗಳು ಎಲ್ಲೋ ತಮ್ಮಪಾದಗಳಿಗೆ ತಾವೇ ಗುಂಡುಹೊಡೆದುಕೊಂಡು ನಡೆಸುವ ರೀತಿ ಭಾಸವಾಗುತ್ತದೆ. ಅಗತ್ಯಕ್ಕಿಂತಾ ಹೆಚ್ಚಾಗಿ ಗೋಡೆಗಳಿಂದ ಆವೃತವಾಗುವ ಮಾಲ್ ಗಳಲ್ಲಿ ಕೃತಕ ದೀಪಗಳನ್ನೇ ಬಳಸುವುದು ಉದ್ದೇಶ ಪೂರ್ವಕವಾಗಿದೆ; ಗಿರಾಕಿಗಳು ಒಳಗೆ ಬಂದಾಗ, ಹೊರಜಗತ್ತಿನ ಮತ್ತು ನೈಸರ್ಗಿಕ ಬೆಳಕಿನ ಸಂಪರ್ಕ ಕಡಿತಗೊಳ್ಳುವುದರಿಂದ, ಸಮಯದ ಪರಿವೆಯೇ ಇಲ್ಲದಂತೇ ಗಿರಾಕಿಗಳು ಮಾಲ್ ನಲ್ಲೇ ಓಡಾಡಿ ಖರೀದಿಸುತ್ತಿರುವಂತಾಗುತ್ತದೆ!

ಇದಕ್ಕೆ ಬದಲಾಗಿ,  ಕಟ್ಟಡವನ್ನೂ ಮತ್ತು ಅಲ್ಲಿ ಬಳಸಲ್ಪಡುವ ಸಾಮಗ್ರಿಗಳನ್ನೂ ಪರಿಪಕ್ವ ಕ್ರಮದಲ್ಲಿ ನಿಯೋಜಿಸಿದರೆ, ನಿಯಂತ್ರಿತ ನೈಸರ್ಗಿಕ ಬೆಳಕನ್ನು ಯಾವುದೇ ದುಷ್ಪರಿಣಾಮಗಳಿಲ್ಲದಂತೇ ಇಡೀ ಕಟ್ಟಡದೊಳಗೆ ಬಳಸಿಕೊಳ್ಳಬಹುದು. ಜಾಗಗಳನ್ನು ವಿಂಗಡಿಸುವುದರಿಂದ, ಅಡ್ಡಗಾಳಿ ಬೀಸಲು ಅನುಕೂಲವಾಗುವ ರೀತಿಯಲ್ಲಿ ಗೋಡೆಗಳ ನಿರ್ಮಿತಿಯನ್ನು ಮಾಡುವುದರಿಂದ ಕಟ್ಟಡದೊಳಗಿನ ತಾಪಮಾನ ತಡೆದುಕೊಳ್ಳಬಹುದಾದ ಮಟ್ಟದಲ್ಲಿರುವಂತೇ ಸಹಜವಾಗಿ ನಿಯಂತ್ರಿಸಬಹುದಾಗಿದೆ. ಇದು ಮಾಲ್ ಗಳ ವಿದ್ಯುತ್ ಶುಲ್ಕದಲ್ಲಿ ಕಡಿತವುಂಟುಮಾಡಲು ಪೂರಕವಾಗುತ್ತದೆ. ಮೇಲಾಗಿ ಹಲವಾರು ವಿದ್ಯುದ್ದುಪಕರಣಗಳ ಬಳಕೆ ಕಮ್ಮಿಯಾಗುವುದರಿಂದ ಹೆಚ್ಚಿನ ಸ್ಥಳಗಳನ್ನು ಬಾಡಿಗೆಗೆ ನೀಡಬಹುದಾದ ಅನುಕೂಲ ಒದಗಲಿದೆ.

ಇಂತಹ ಯುಕ್ತಿಯುಕ್ತ ಯೋಜನೆಗಳ ಆಯ್ಕೆ ವಾಸ್ತುವಿನ್ಯಾಸಗಾರರಿಗೆ ಸದಾ ದೊರೆಯುತ್ತದೆ ಮತ್ತು ಮನೆಗಳ ನಿರ್ಮಾಣಗಳಲ್ಲಿ ಕೂಡ ಅವರು ಇಂಥಾ ಯುಕ್ತಿಗಳನ್ನು ಬಳಸಿಕೊಳ್ಳಬಹುದಾಗಿದೆ. ಏರುತ್ತಿರುವ ಭೂಮಿಯ ದರ ಮತ್ತು ನಿರ್ಮಾಣವೆಚ್ಚಗಳಿಂದ ನಗರವಾಸಿಗಳು ಚಿಕ್ಕ ಚಿಕ್ಕ ನಿವೇಶನಗಳನ್ನು ಕೊಳ್ಳುವಂತಾಗಿದೆ. ಇಂಥಾ ಜಾಗಗಳನ್ನು ಕಂಡಾಗ, ವಾಸ್ತುವಿನ್ಯಾಸಗಾರನೊಬ್ಬ ತನ್ನ ಕಕ್ಷಿದಾರನ ಬಗ್ಗೆ ಮತ್ತು ಅಲ್ಲಿನ ನೆರೆಹೊರೆಯ ಜಾಗಗಳವರ ಬಗ್ಗೆ ಪಶ್ಚಾತ್ತಾಪ ಪಡುತ್ತಾನೆ; ಗಾಳಿ ಮತ್ತು ಬೆಳಕನ್ನು ನೀಡುವ ಸುತ್ತಲ ಜಾಗ ಸಾಕಷ್ಟಿಲ್ಲದಾದಾಗ ವಾಸ್ತುಶಿಲ್ಪಿ ಖೇದಗೊಳ್ಳುತ್ತಾನೆ. ಅಂತಹ ಸ್ಥಿತಿಯಲ್ಲಿ, ಒಳ್ಳೆಯ ಆಯ್ಕೆಯೆಂದರೆ ಆಗಸದತ್ತ ನೋಡುವುದು; ಆಗಸದ ತುಣುಕನ್ನು ಮನೆಯೊಳಗೆ ಇಳಿಸಿಕೊಳ್ಳುವುದಕ್ಕೆ ಯೋಜನೆ ರೂಪಿಸುವುದು!

ಆಕಾಶದೆಡೆಯಿಂದ ಸಿಗುವ ಬೆಳಕನ್ನು ಈ ಹಿಂದೆ ಎಲ್ಲೆಲ್ಲಾ ನಮ್ಮ ಯೋಜನೆಗಳಲ್ಲಿ ಅಳವಡಿಸಿದ್ದೇವೆಯೋ, ಅಲ್ಲಿ ವಾಸಿಸುತ್ತಿರುವ ಕಕ್ಷಿದಾರರು ಸಿಕ್ಕಾಗ, ತಾವು ತಡರಾತ್ರಿಯವರೆಗೂ ಕೃತ್ರಿಮ ಬೆಳಕನ್ನು ಬಳಸುವ ಅಗತ್ಯ ತಮಗೆ ಬರುವುದೇ ಇಲ್ಲ, ಈ ಕಾರಣದಿಂದ ಮನೆಯ ಅಂದ ಹೆಚ್ಚುವುದರ ಜೊತೆಗೆ ವಿದ್ಯುತ್ತಿನ ಬಳಕೆ ಮತ್ತು ಬಳಕೆಗೆ ತಗಲುವ ವೆಚ್ಚ ಕೂಡಾ ಕಮ್ಮಿಯಾಗಿದೆ ಎಂದು ಹೇಳುತ್ತಾರೆ. ಕಕ್ಷಿದಾರರೊಬ್ಬರ ಕಥೆಯಂತೂ ಹೃದಯ ಮುದಗೊಳಿಸುತ್ತದೆ: ಒಂದುರಾತ್ರಿ ಅವರ ಮಗು ರೋಧಿಸುತ್ತಿದ್ದಾಗ ಮನೆಯಲ್ಲಾಗಲೀ ಆ ಪ್ರದೇಶದಲ್ಲೇ ಆಗಲಿ ವಿದ್ಯುತ್ತು ಇರಲಿಲ್ಲ. ಎದ್ದು, ಅಡುಗೆಮನೆಗೆ ತೆರಳಿ, ಮಗುವಿಗೆ ಹಾಲುಮಾಡಿ ಕುಡಿಸಿ-ನಿದ್ದೆಗೆ ಜಾರಿಸಿ, ಗಂಡ-ಹೆಂಡತಿ ಬೆಳತನಕ ಹಾಯಾಗಿ ಮಾತನಾಡುತ್ತಾ ಕೂತುಬಿಟ್ಟರಂತೆ-ಅದು ಪಾರದರ್ಶಕ ಛಾವಣಿಯಿಂದ ಹಾದುಬಂದ ತಂಗದಿರನ ಬೆಳಕಿನಲ್ಲಿ!

ಮುಕ್ತಾಯಗೊಳಿಸುವ ಮುನ್ನ, ಯಾವುದೇ ಹೋಲಿಕೆಯನ್ನೂ ಮಾಡದೇ, ವಿನಮ್ರನಾಗಿ, ಅಮೇರಿಕಾದ ಲೂಯಿಸ್ ಇಸಡೋರ್ ಖಾನ್ ಎಂಬ ಜಗದ್ವಿಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರನನ್ನು ನೆನೆಯುತ್ತೇನೆ. [ ಆತ ಜಗತ್ತಿನ ಹಲವೆಡೆಗಳಲ್ಲೂ, ನಮ್ಮ ಭೂಭಾಗದಲ್ಲಿ ಅದರಲ್ಲೂ ಅಹಮದಾಬಾದಿನಲ್ಲೂ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದಾನೆ.] ಅವನ ಅರ್ಥಗ್ರಾಹ್ಯ ಸಾಮರ್ಥ್ಯ ಮತ್ತು ದಿನಬೆಳಕಿನ ಬಳಕೆಯ ವೈಖರಿ ಅವನ  ವಿನ್ಯಾಸಗಳಲ್ಲೆಲ್ಲಾ ಕಾಣಸಿಗುತ್ತವೆ; ಆಧುನಿಕ ವಾಸ್ತುಶಿಲ್ಪ ವಿನ್ಯಾಸಗಳ ಇತಿಹಾಸದಲ್ಲೇ ಅವು ಅನನ್ಯ ಮತ್ತು ಅನ್ಯಾದೃಶ. ಅವನು ಹೇಳುತ್ತಾನೆ:”ಕೊಠಡಿ ಕಟ್ಟುವುದಕ್ಕೂ ಮೊದಲು ಅದೆಷ್ಟು ಸುಂದರವಾಗಿರಬಹುದೆಂದು ಸೂರ್ಯನ ತಿಳುವಳಿಕೆಗೆ ಅದು ನಿಲುಕಲಿಲ್ಲ. ಮಾನವನೊಬ್ಬನ ಸೃಷ್ಟಿ-ಒಂದು ಕೋಣೆ, ಅದೊಂದು ಚಮತ್ಕಾರ, ಅದೊಂದು ಪವಾಡ, ಸ್ವಲ್ಪ ವಿಚಾರಮಾಡಿನೋಡಿ-ಒಬ್ಬ ಮನುಷ್ಯ ಸೂರ್ಯನ ಬಂದು ಭಾಗವನ್ನೇ ತನ್ನದಾಗಿಸಿಕೊಳ್ಳಬಲ್ಲ!”

ಆರ್ಕ್ಕಿಟೆಕ್ಟ್ ಪ್ರಶಾಂತ್ ನಂದಿಪ್ರಸಾದರನ್ನು ಈ ಮೂಲಕ ಸಂಪರ್ಕಿಸಬಹುದು: +91 9886124035 / Email: wip.code@gmail.com

——–೦——–

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments