ಮೂರು ಬಿಟ್ಟವರ ನೂರು ಮಾತು
– ಭಾರತೀತನಯ
ಬೆಳಗ್ಗೆದ್ದು ನಿತ್ಯಕರ್ಮಗಳ ಮುಗಿಸಿ ಒಂದು ಕಪ್ ಕಾಫಿ ಅಥವಾ ಟೀ ಕುಡಿದು ಪತ್ರಿಕೆಯ ಕಡೆ ಕಣ್ಣು ಹಾಯಿಸದಿದ್ದರೆ ಏನೋ ಕಳೆದುಕೊಂಡವರ ಹಾಗೆ ಆಗಿಬಿಡುತ್ತೀವಿ. ಜಗತ್ತಿನ ಘಟನೆಗಳು, ರಾಜಕೀಯ, ದೇಶದ ಸಮಸ್ಯೆ, ಅನಾಹುತಗಳು, ಅಂಕಣಗಳು, ಭವಿಷ್ಯ,ಕ್ರೀಡೆಗಳು, ಹೊಸ ಚಲನಚಿತ್ರಗಳಾಗಿರಬಹುದು, ಹೀಗೆ ಹತ್ತು ಹಲವು ವಿಚಾರಗಳಿಗೆ ಪತ್ರಿಕೆಯನ್ನು ಅವಲಂಬಿಸಿರುತ್ತೇವೆ. ಈ ಎಲ್ಲ ವಿಷಯಗಳನ್ನು ಪತ್ರಿಕೆಗಳು ಎರಡು, ಮೂರು ರುಪಾಯಿಯೊಳಗೆ ನಮಗೆ ತಲುಪಿಸಿಬಿಡುತ್ತವೆ. ದೂರ ದರ್ಶನಗಳಲ್ಲಿ ಇಪ್ಪತ್ನಾಲಕು ಗಂಟೆಗಳು ನಿರೂಪಕರು ಗಂಟಲು ಹರಿದುಕೊಂಡು ಬೊಬ್ಬಿಕ್ಕಿದರೂ ನಮಗೆ ಪತ್ರಿಕೆಯ ಮೇಲಿನ ಮೋಹ ಕಡಿಮೆಯಾಗಲಿಲ್ಲ. ಅಷ್ಟು ಗಾಡವಾದ ಸೆಳೆತ ನಮ್ಮ ಮತ್ತು ಪತ್ರಿಕೆಯ ನಡುವಿನದು.ಪೂರ್ವಗ್ರಹಗಳ ಪೀಡಿತರಾಗಿ ಇರುತ್ತಿರಲಿಲ್ಲ. ಪತ್ರಿಕೆಯಲ್ಲಿ ವಿಷಯ ಬಂದಿದೆಯೆಂದರೆ ಅಧಿಕೃತವೆಂದೇ ಭಾವಿಸುತಿದ್ದೆವು.
ಪತ್ರಿಕೆಯಲ್ಲಿ ನಮ್ಮ ಗೆಳೆಯರ, ಸಂಬಂದಿಕರ, ಪಕ್ಕದ ಮನೆಯ ಹುಡುಗ ಹುಡುಗಿ ರಾಜ್ಯದಲ್ಲಿ ಅಥವಾ ಜಿಲ್ಲಮಟ್ಟದಲ್ಲಿ ಮೊದಲನೆಯ ಸ್ಥಾನ ಬಂದಿರುವುದು ಭಾವಚಿತ್ರದೊಂದಿಗೆ ಬಂದಿದ್ದರೆ ಅದೆಷ್ಟು ಹೆಮ್ಮೆ ಪಡುತಿದ್ವಿ.ಮನದೊಳಗೆ ಪತ್ರಿಕೆ ಆ ಸ್ಥಾನ ಪಡೆದಿತ್ತು. ಸಾವಿರಾರು ಜನರನ್ನು ಸ್ಪೂರ್ತಿಗೊಳಿಸುತಿತ್ತು, ಅಷ್ಟೇ ಏಕೆ ಸ್ವಾತಂತ್ರ್ಯಪೂರ್ವ ಪರಿಸ್ತಿತಿಗಳ ಬಗ್ಗೆ ವಿಚಾರ ಮುಟ್ಟಿಸುವಲ್ಲಿ ಪತ್ರಿಕೆಯು ಬಹಳ ನಿಷ್ಟೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸುತಿದ್ದವು. ನಮ್ಮ ಸಮಾಜದ ಆಗುಹೋಗುಗಳನ್ನು ಪತ್ರಿಕೆಯ ಮೂಲಕವೇ ತಿಳಿಯುತಿತ್ತು. ಹಲವು ಮೌಲ್ಯಗಳ ಹೊಂದಿದ್ದ ಪತ್ರಿಕೆ ಸಮಾಜದ ಉಸಿರಾಗಿತ್ತು ಎಂದು ವರ್ಣಿಸಲು ಉತ್ಪ್ರೇಕ್ಷೆ ಎನಿಸಲು ಸಾಧ್ಯವಿಲ್ಲ.
ಇಂದು ಪರಿಸ್ಥಿತಿ ಸಂಪೂರ್ಣ ವಿಭಿನ್ನ. ದೃಶ್ಯಮಾದ್ಯಮಗಳಂತೂ ಅವರಿಗೆ ಅವರೇ ಸಾಟಿ, ಸಮಾಜದ ಯಾವ ವಿಷಯವೂ ಸಿಗುತ್ತಿಲ್ಲ ವರ್ಣಿಸಲು.ಮೌಲ್ಯಗಳು ಹಣಕ್ಕೆ ಹರಾಜಿಗಿಡಲಾಗಿದೆ. ಪತ್ರಿಕೆಯು ಈಗ ತಮ್ಮ ಮೌಲ್ಯವ ಕಳೆದುಕೊಳ್ಳತೊಡಗಿದೆಯೆಂದರೆ ಸ್ವಸ್ಥ ಸಮಾಜದಲ್ಲಿ ಉಸಿರಿಗೆ ತೊಂದರೆ ಬಂದಿರುವುದಂತು ಖಂಡಿತ. ಸಮಾಜದ ಉತ್ತಮ ಸ್ಥಿತಿಗಳಿಗೆ ಸ್ಪೂರ್ತಿಯಾಗಬೇಕಿದ್ದ ಪತ್ರಿಕೆ ಹಣದ ಹಿಂದೆ ಹೊಟಿರುವುದು ಪತ್ರಿಕಾ ಧರ್ಮವನ್ನೇ ಅಣಕಿಸುತಿದೆ.ಬರೆಯುವ ವಿಷಯಗಳೆಲ್ಲ ಬದಲಾಗಿದೆ. ಉತ್ತಮ ಸಮಾಜಕ್ಕೆ ದುಡಿದ ಹೀರೋಗಳ ಜಾಗದಲ್ಲಿ ಸಿನಿಮಾ ತಾರೆಯರು, ಕ್ರಿಕೆಟ್ ಪುಂಡರು, ಕಳ್ಳ ಕಾಕರು ಬಂದು ಮೊದಲ ಪುಟವನ್ನು ಆಕ್ರಮಿಸಿಕೊಂಡರು. ಈ ಮೊದಲ ಪುಟದ ಸ್ಪರ್ದೆ ಬಿರುಸಾಗಿಎಲ್ಲಾ ಪತ್ರಿಕೆಗಳನ್ನು ಆವರಿಸತೊಡಗಿದೆ. ಯುವ ಜನಾಂಗಕ್ಕೆ ದಾರಿ ತಪ್ಪಿಸುವ ಮೂರನೆಯ ದರ್ಜೆಯ ವಿಷಯಗಳೆಲ್ಲ ಬಿರುಸಾಗಿ ರಸವತ್ತಾಗಿ ಬರೆಯತೊಡಗಿವೆ. ಒಂದು ಉದಹಾರಣೆ ನೋಡಿ ಯಾವುದೋ ದೇಶದ ಯುವತಿ ತನ್ನಯ ಶೀಲವನ್ನು
ಹರಾಜಿಗೆ ಹಾಕಿದ್ದಾಳೆ. ಕೆಲವು ಕೋಟಿಗಳಿಗೆ ಹರಾಜಾದ ನಂತರ ಉಂಡು ಹೋದ ಕೊಂಡು ಹೋದ ಎಂಬಂತೆ ಯುವಕ ಹೋಗಿದ್ದಾನೆ. ಇದನ್ನೇ ಪತ್ರಿಕೆಯಲ್ಲಿ ಯಾವುದೇ ಮೂರನೆ ದರ್ಜೆಯ ಪುಸ್ತಕ್ಕೂ ಕಡಿಮೆ ಇಲ್ಲದಂತೆ ಬರೆಯಲಾಗಿದೆ.
ರಾಜಕಾರಿಣಿಗಳು ಧರಿಸಿರುವ ಮುಖವಾಡವನ್ನು ಮಾದ್ಯಮದವರು ಬಳಸುತ್ತಿರುವುದು ನಾಚಿಕೇಡಿನ ಸಂಗತಿ. ಸೆಕ್ಯೂಲರ್ ಎಂಬ ಮಂತ್ರ ಅಭಿವೃದ್ದಿಯಲ್ಲದೇ ಅನಾಹುತ ಚಟುವಟಿಕೆಗಳಲ್ಲಿ ಬಳಸುತ್ತಿರುವುದು ಯಾವ ಸಮಾಜ ಕಟ್ಟಲು ಹೊರಟಿದ್ದಾರೆಂಬುದು ಗೊಂದಲಕ್ಕೀಡಾಗುವಂತೆ ಮಾಡಿದೆ. ಇಸ್ಲಾಂ ಪುರದಲ್ಲಿ ನಡೆದ ಘಟನೆ ಮಾದ್ಯಮದಲ್ಲಿ ಸೆಕ್ಯೂಲರ್ ಹೆಸರಿನೊಂದಿಗೆ ಮುಳುಗಿ ಹೋಯಿತು. ಅತ್ಯಂತ ಅಮಾನುಷದ ಘಟನೆ ಅದಾಗಿತ್ತು. ದುಷ್ಕೃತ್ಯ ಯಾರು ಮಾಡಿದ್ದರೇನು, ಅದನ್ನು ನಿರ್ಭೀತಿಯಿಂದ ವೀಕ್ಷಕರ ಮುಂದೆ ಓದುಗರ ಮುಂದೆ ತೆರೆದಿಡಬೇಕಾಗಿತ್ತು. ಒಂದು ವಾಹಿನಿಯ ನಿರೂಪಕನೊಬ್ಬ ಪಾಸ್ ಪೋರ್ಟ್ ಧಂದೆಯಲ್ಲಿ ಮುಳುಗಿ ತಾನು ಕೆಲಸ ಮಾಡುತಿದ್ದ ವಾಹಿನಿಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಘಟನೆಯನ್ನು ಮುಚ್ಚಿಹಾಕಿದ್ದು ಯಾವ ಪುರುಷಾರ್ಥಕ್ಕಾಗಿ.ಮಾಧ್ಯಮದಲ್ಲಿ ಬರದಿದ್ದರೂ ಸಾಮಾಜಿಕ ತಾಣದ ಮೂಲಕ ಜಗಜ್ಜಾಹಿರಾತಾಯಿತು. ವಾಹಿನಿಯವರು ಈ ಘಟನೆಯನ್ನು ವೀಕ್ಷಕರ ಮುಂದಿಟ್ಟಿದ್ದರೆ ಆ ಧೈರ್ಯವನ್ನು ಅಭಿನಂದಿಸಬಹುದಿತ್ತು. ಆ ಧೈರ್ಯವನ್ನು ಮಾಡದೆ ರಾಜ್ಯದ ಜನತೆಯ ಮುಂದೆ ಬೆತ್ತಲೆಯಾಯಿತು.
ಅಂದು ಟೀವಿಯಲ್ಲಿ ಬಂದಾಗ ಜನ ಹೆಮ್ಮೆ ಪಡುತಿದ್ದರು…. ಇಂದು ಬಂದರೆ ಏನೋ ಅನಾಹುತ ಮಾಡಿದ್ದಾನೆಂಬುದು ಖಾತ್ರಿಯಾಗುತ್ತಿದೆ. ಇವರ ಬೆತ್ತಲೆ ಹೀರೋಗಳ ಮುಂದೆ ನಮ್ಮ ಸಮಾಜದ ಹೀರೋಗಳು ಪುಟದ ಕೆಳಗೆ ಸಾಗಿರುವುದು ವಿಷಾದನೀಯ…