ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 7, 2013

8

ಅಘೋರಿಗಳ ನಡುವೆ….. ಭಯಾನಕತೆಯ ಲೋಕದ ಅನಾವರಣ…

‍ನಿಲುಮೆ ಮೂಲಕ

 – ಕೆ.ಗುರುಪ್ರಸಾದ್

Aghorigala Naduveಇತ್ತೀಚೆಗೆ ನನ್ನ ಗೆಳೆಯನೋರ್ವನ ಬಳಿ ಒಂದು ಪುಸ್ತಕ ನೋಡಲು ಸಿಕ್ಕಿತ್ತು. ” ಅಘೋರಿಗಳ ನಡುವೆ” ಮೂಲ “ಸುರೇಶ್ ಸೋಮಪುರ” ಬರೆದಿರುವ ಪುಸ್ತಕ ” ಎಮ್. ಎ. ನಾಗರಾಜ್ ರಾವ್ ” ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.(ಬಹಳ ವರ್ಷಗಳ ಹಿಂದೆ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಿತ್ತಂತೆ) ಕುಂಭಮೇಳದ ಸಂಧರ್ಭಗಳಲ್ಲಿ ಕಾಣಸಿಗುವ “ಅಘೋರಿ” ಗಳ ಜೀವನ ಶೈಲಿಯನ್ನ ಸುರೇಶ್ ಸೋಮಪುರ ಅವರು ತಮ್ಮ ಪುಸ್ತಕದ ವಸ್ತುವನ್ನಾಗಿಸಿದ್ದಾರೆ. ನಿಜಕ್ಕೂ, ಈ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಭಯಾನಕತೆಯ ಅನಾವರಣವಾಗುತ್ತಾ ಹೋಗುತ್ತದೆ. ಅಘೋರಿಗಳ ಜೀವನ ಅಂದರೆ ಈ ರೀತಿಯಲ್ಲೂ ಇರುತ್ತಾ ಅನ್ನುವಷ್ಟು ಭೀಕರವಾಗಿರುತ್ತಾ ಅಂತನಿಸತೊಡಗುತ್ತದೆ. ಅದಕ್ಕೆ ಅಲ್ವಾ ಅಘೋರಿಗಳನ್ನ ಹಠಯೋಗಿಗಳು ಅಂತ ಕರೆಯೋದು. ಹಿಮಾಲಯದ ಮಂಜಿನಲ್ಲಿ ನಗ್ನರಾಗಿ ಮಲಗುವುದು, ಚೂಪಾದ ಮೊಳೆಯ ಹಾಸಿಗೆಯ ಮೇಲೆ ಮಲಗುವುದು, ಸೂಜಿಯಿಂದ ಚುಚ್ಚಿಸಿಕೊಂಡು ತಮ್ಮನ್ನು ತಾವು ನೋಯಿಸಿಕೊಳ್ಳುವುದು ಇವೆಲ್ಲಾ ಅವರ ಹಠಯೋಗದ ಕೆಲವು ನಿದರ್ಶನಗಳು.

ಒಬ್ಬ ಅಘೋರಿಯಿಂದಾದ ತನ್ನ ಗೆಳೆಯನ ಸಾವು , ಲೇಖಕರನ್ನು ಈ ಅಘೋರಿಗಳ ಸಿದ್ಧಿಯ ಹಿಂದಿನ ರಹಸ್ಯವನ್ನು ತಿಳಿದುಕೊಳ್ಳಲು ಕಾತರರಾಗುವಂತೆ ಮಾಡುತ್ತದೆ. ಅದೃಷ್ಟವಶಾತ್ ಲೇಖಕರಿಗೆ ಅಜ್ನಾತ ಸ್ಥಳವೊಂದರಲ್ಲಿ ನಡೆಯುವ ಈ ಅಘೋರಿಗಳ ಸಾಧನಾ ಶಿಬಿರಕ್ಕೆ ಅತಿಥಿಯಾಗಿ ಹೋಗುವ ಅವಕಾಶ ಸಿಗುತ್ತದೆ. ಆ ಸಾಧನಾ ಶಿಬಿರದಲ್ಲಿ ಲೇಖಕರ ಸಹಾಯಕ್ಕಾಗಿ ಸಿಗುವ ಅಘೋರಿಯೊಬ್ಬ ತನ್ನ ಪೂರ್ವಾಶ್ರಮದಲ್ಲಿ ಒಬ್ಬ ಡಾಕ್ಟರ್ ಆಗಿದ್ದಿರುತ್ತಾನೆ ಅನ್ನೋ ವಿಷಯ ನಿಜಕ್ಕೂ ನಮ್ಮಲ್ಲಿ ಆಶ್ಚರ್ಯವನ್ನುಂಟುಮಾಡುತ್ತದೆ. ಅಲ್ಲಿಂದ ಮುಂದೆ ಓದುತ್ತಿದ್ದಂತೆ ನಿಮ್ಮ ಕಣ್ಣೆದುರು ಭಯ ಸುಳಿದಾಡಲು ಪ್ರಾರಂಭವಾಗುತ್ತದೆ. ತಮ್ಮ ಮಂತ್ರಶಕ್ತಿಯ ಬಲದಿಂದಾಗಿ ಈ ಅಘೋರಿಗಳು ಅನೇಕ ಸಿದ್ಧಿಗಳನ್ನು ಕರಗತ ಮಾಡಿಕೊಂಡಿರುತ್ತಾರಂತೆ. ಅವರಿಗೆ ತಮ್ಮ ಮಂತ್ರಶಕ್ತಿಯ ಮೇಲೆ ಬಲವಾದ ನಂಬಿಕೆ. ಸಾಧಾನಾ ಶಿಬಿರವನ್ನು ತಲುಪುತ್ತಿದ್ದಂತೆಯೇ ಲೇಖಕರಿಗೆ ಇದರ ಅನುಭವವಾಗುತ್ತದೆ. ನಿರ್ಮಲ್ ಆನಂದ್ ಅನ್ನುವ ಅಘೋರಿಯೊಬ್ಬ ಲೇಖಕರ ಕೈಗಳನ್ನು ಗೋಡೆಗೆ ಅಂಟುವಂತೆ ಮಾಡುತ್ತಾನೆ. ಅದೆಷ್ಟೇ ಪ್ರಯತ್ನ ಪಟ್ಟರೂ ಲೇಖಕರಿಗೆ ತಮ್ಮ ಕೈಗಳನ್ನು ಹಿಂಪಡೆಯಲಾಗುವುದಿಲ್ಲ. ಇದೊಂದು ಸಣ್ಣ ಉದಾಹರಣೆ… ಹೀಗೆ ಮುಂದೆ ಹೋದಂತೆಲ್ಲಾ ಲೇಖಕರು ಅನುಭವಿಸಿದ ಭೀಕರತೆಯನ್ನು ನಿಮ್ಮ ಕಂಗಳಿಗೆ ಉಣಬಡಿಸುತ್ತಾರೆ.

ಈ ಅಘೋರ ಪಂಥವು ಐದು “ಮ”ಕಾರಗಳನ್ನು ನೆಚ್ಚಿಕೊಂಡಿದೆಯಂತೆ ಮದ್ಯ, ಮಾಂಸ, ಮಂತ್ರ, ಮೈಥುನ, ಮೃತ್ಯು. ಇದಕ್ಕೆ ಪೂರಕವೆಂಬಂತೆ ಸಾಧನಾ ಶಿಬಿರದಲ್ಲಿ ಹಲವು ಆಚರಣೆಗಳನ್ನು ಲೇಖಕರು ನೋಡುತ್ತಾರೆ. ಅದು ಕೋಣದ ಬಲಿ ಆಗಿರಬಹುದು, ಬರಿಯ ದೃಷ್ಟಿಯನ್ನು ಆಕಾಸದೆಡೆ ಬೀರಿ ಹಾರಾಡುತ್ತಿದ್ದ ಹಕ್ಕಿಗಳನ್ನು ಯಜ್ನಕುಂಡಕ್ಕೆ ಬೀಳುವಂತೆ ಮಾಡುವ ಕಲೆಯಾಗಿರಬಹುದು, ನಗ್ನರಾಗಿ ಸಮ್ಮೋಹನಕ್ಕೊಳಗಾದ ಯುವತಿಯರೊಂದಿಗಿನ ಮಿಥುನ ನೃತ್ಯ ಆಗಿರಬಹುದು, ಆತ್ಮಗಳೊಡನೆ ಸಂವಾದ ಆಗಿರಬಹುದು ಅಥವಾ ಪರಕಾಯ ಪ್ರವೇಶ ಆಗಿರಬಹುದು, ಹಲವು ಸಿದ್ಧಿಗಳ ಉಲ್ಲೇಖ ಮತ್ತು ಅದರ ಪ್ರಯೋಗ ಆದುದನ್ನು ಉಲ್ಲೇಖಿಸುತ್ತಾ ಹೋಗುತ್ತಾರೆ. ಅದರಲ್ಲಿಯೂ “ಖೇಚರಿ ವಿದ್ಯೆ” ಎನ್ನುವಂಥಾ ವಿಶಿಷ್ಟ ಸಾಧನೆ ಮಾಡಿದ ಹಿರಿಯ ಅಘೋರಿಯೊಬ್ಬರೊಡನೆ ಆದ ಸಂವಾದವನ್ನೂ ಉಲ್ಲೇಖಿಸುತ್ತಾರೆ. ಈ ಖೇಚರಿ ವಿದ್ಯೆ ಅಂದರೆ ತಮ್ಮ ಬಾಯಿಯ ತಾಲೂ( ಮೇಲ್ಭಾಗದ ಹಲ್ಲು ಮತ್ತು ಅಂಗಳದ ಮಧ್ಯ ಭಾಗ) ವನ್ನು ತಮ್ಮ ಉಗುರಿನಿಂದ ಕೊರೆದು ರಂಧ್ರ ಮಾಡುವುದು. ಹಾಗೆ ಮಾಡಿ ಆಜ್ನಾ ಚಕ್ರ ಮತ್ತು ಸಹಸ್ರಾರ ಚಕ್ರವನ್ನು ಭೇಧಿಸಿವುದು. ಇದನ್ನು ಸಾಧಿಸಿದವನಿಗೆ ರೋಗದಿಂದ ಮರಣ ಬರುವುದಿಲ್ಲವಂತೆ, ನಿದ್ದೆ ಇರುವುದಿಲ್ಲವಂತೆ ಮತ್ತು ನೋವುಂಟಾಗುವುದಿಲ್ಲವಂತೆ. ಅಬ್ಬಾ ಅದೆಂಥಾ ಸಿದ್ಧಿ ಅಲ್ವಾ ಆದರೆ ಅದನ್ನು ಸಾಧಿಸಲು ಅಘೋರಿಗಳಂಥಾ ಹಠಯೋಗಿಗಳಿಗಷ್ಟೇ ಸಾಧ್ಯ ಅನ್ನುವುದು ನನ್ನ ಅಭಿಪ್ರಾಯ.

ಈ ಪುಸ್ತಕವು ಅಘೋರಿಗಳ ಜೀವನಶೈಲಿಯ ಬಗ್ಗೆ ಒಂದೆಡೆ ತಿಳಿಸಿದರೆ ಇನ್ನೊಂದೆಡೆ ಎರಡು ಬಗೆಯ ಅಧ್ಯಾತ್ಮಿಕ ಚಿಂತನೆಗಳ ನಡುವಿನ ಯುದ್ದವೊಂದನ್ನು ತೋರಿಸುತ್ತದೆ. ಇದಕ್ಕೆ ಕಾರಣ ಲೇಖಕರು ” ಚೈತನ್ಯಾನಂದ ” ಅನ್ನುವ ಗುರುಗಳಿಂದ ಕಲಿತ ” ಕಲ್ಪನಾಯೋಗ “ಎನ್ನುವ ಸಿದ್ಧಿ. ಈ ಕಲ್ಪನಾಯೋಗ ಏನು ಹೇಳುತ್ತೆ… ಅಂದರೆ ಸತ್ಯದ ಕಡೆ ಸದಾ ಗತಿಶೀಲನಾಗಿ ಇರಲು ನಮ್ಮ ಕಲ್ಪನಾಶಕ್ತಿಯನ್ನು ಜಾಗೃತಗೊಳಿಸುವುದು. ನಮ್ಮೊಳಗಿನ ಇಚ್ಛಾಶಕ್ತಿಯನ್ನು ಪ್ರಬಲಗೊಳಿಸುವುದು. ಲೇಖಕರು ತಮ್ಮ ಈ ಸಿದ್ಧಿಯ ಬಲದಿಂದ ಮತ್ತು ತಮ್ಮ ತರ್ಕದಿಂದ ಒಂದಷ್ಟು ಜನ ಅಘೋರಿಗಳ ಜೊತೆ ತರ್ಕಕ್ಕೆ ಇಳಿದು ಬಿಡುತ್ತಾರೆ. ಕೆಲವು ತರ್ಕಗಳಲ್ಲಿ ಜಯ ಸಾಧಿಸುವ ಲೇಖಕರು ಆ ಸಾಧನಾ ಶಿಬಿರಕ್ಕೆ ಬಂದಿದ್ದ ಒಬ್ಬ ಹಿರಿಯ ಅಘೋರಿಯ ಆತ್ಮಾಹುತಿಗೆ ಮತ್ತು ಇನ್ನೊಬ್ಬರ ಜೀವಂತ ಸಮಾಧಿಯಾಗುವಿಕೆ ಕಾರಣರಾಗುತ್ತಾರೆ. ಈ ಎರಡು ಘಟನೆಗಳು ಆದ ನಂತರ ಉಳಿದ ಅಘೋರಿಗಳು ಲೇಖಕರನ್ನು ಸಾಧನಾ ಶಿಬಿರವನ್ನು ಬಿಟ್ಟು ಹೋಗುವಂತೆ ಕೇಳಿಕೊಳ್ಳುತ್ತಾರೆ .
ಹಾಗೆ ಲೇಖಕರು ಪೂರ್ತಿ ಶಿಬಿರ ಮುಗಿಯುವ ಮುನ್ನವೇ ತೆರಳಬೇಕಾದ ಸಂದರ್ಭದಲ್ಲಿ, ಆ ಸಾಧನಾ ಶಿಬಿರದಲ್ಲಿದ್ದ ” ಅದಿತಿ ಮಾತೆ ” ಅನ್ನುವ ಹೆಣ್ಣು ಅಘೋರಿಯೊಡನೆ ಕೊನೆಯ ಬಾರಿಗೆ ಸಂವಾದ ನಡೆಯುತ್ತದೆ. ಇಡೀ ಪುಸ್ತಕದಲ್ಲಿ ನನಗೆ ಬಹಳಾನೆ ಖುಷಿ ಕೊಟ್ಟ ಪ್ರಸಂಗ ಇದು. ಆಕೆ ಇತರ ಮಾನವರಿಗೂ ಮತ್ತು ಅಘೋರಿಗಳಿಗಿರುವ ವ್ಯತ್ಯಾಸವನ್ನ ಎತ್ತಿ ಹಿಡಿಯುತ್ತಾ ಹೇಳುತ್ತಾಳೆ….” ನಿಮಗೆ ನಮ್ಮ ಆಚರಣೆಗಳು , ವಿಚಾರಧಾರೆ ಸರಿಯಲ್ಲ ಅಂತನಿಸಬಹುದು. ಆದರೆ ನಮಗೆ ನಮ್ಮ ಪ್ರತಿಯೊಂದು ವಿಚಾರಗಳ ಬಗೆಗೂ ಪೂರ್ಣ ಶ್ರದ್ಧೆ ಇದೆ. ಅದೇ ನಿಮ್ಮಲ್ಲಿ ಯಾವುದೇ ವಿಚಾರದಲ್ಲೂ ಸಂಪೂರ್ಣ ಶ್ರದ್ಧೆ ಇಲ್ಲ. ಹಾಗಾಗಿಯೆ ನಿಮ್ಮ ಪ್ರತಿಯೊಂದು ಶಬ್ದಗಳು ಕೂಡ ಶಬ್ದವಾಗಿರುತ್ತದೆಯೇ ಹೊರತು ನಮ್ಮಲ್ಲಿರುವಂತೆ ಮಂತ್ರವಾಗುತ್ತಿಲ್ಲ. ನೀವು ನಮ್ಮನ್ನು ಬದಲಾಯಿಸಲೆಂದು ಬಂದಿರಿ… ಅದರಲ್ಲಿ ಕೊಂಚ ಸಾಫಲ್ಯತೆಯನ್ನೂ ಪಡೆದಿರಿ… ಆದರೆ ಒಮ್ಮೆಗೇ ಎಲ್ಲಾ ಬದಲಾಗುವುದಿಲ್ಲ… ಹಾಗೇನಾದರೂ ಯೋಚನೆಗಳಿದ್ದರೆ ಅದು ನಿರಾಸೆಯಾಗಿ ಬದಲಾಗುತ್ತದೆ. ಇದಕ್ಕೊಂದು ಉತ್ತಮವಾದ ಉದಾಹರಣೆಯನ್ನು ಕೊಡುತ್ತಾ ತನ್ನ ಸಂವಾದ ಮುಗಿಸುತ್ತಾಳೆ ಆ ಒಂದು ಉದಾಹರಣೆ ಲೇಖಕರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತದೆ. ( ಬಹುಶ ಓದುಗನಾಗಿ ನನ್ನ ಮೇಲೂ ಪ್ರಭಾವ ಬೀರಿದ ಸಾಲಿದು ) ” ಹೂವಿನ ಕೆಲಸ ಸುಗಂಧವನ್ನು ಹರಡುವುದು ಮಾತ್ರ, ಈ ಸುಗಂಧದಿಂದ ಇಡೀ ಜಗತ್ತು ಮೈಮರೆಯಬೇಕೆಂದು ಬಯಸುವುದಾದರೂ ಏಕೆ…?”

ಇದರ ಒಳಾರ್ಥವನ್ನ ಗ್ರಹಿಸಿದ ಲೇಖಕ ತಲೆದೂಗುತ್ತಾ ಹೇಳುತ್ತಾನೆ ” ಧರ್ಮ ಅಧರ್ಮಗಳ ನಡುವಿನ ಜಿಜ್ನಾಸೆಯನ್ನು ಹೊತ್ತು ಬಂದವ ನಾನು, ನೀವೀಗ ನನ್ನೀ ತುಮುಲಕ್ಕೆ ಪರಿಹಾರ ನೀಡಿದಿರಿ… ಸುಗಂಧವನ್ನು ಹರಡುವುದೇ ಧರ್ಮ ಆ ಸುಗಂಧವನ್ನು ಎಲ್ಲರೂ ಆಘ್ರಾಣಿಸಲೇಬೇಕು ಅನ್ನುವುದು ಅಧರ್ಮ…” ಎನ್ನುತ್ತಾರೆ.

ಈ ರೀತಿ ತೃಪ್ತ ಭಾವದಿಂದ ಹೊರ ನಡೆಯುವಾಗ ಅಲ್ಲಿನ ಅಘೋರಿಗಳು ಯಾವುದಾದರೂ ವಿಶಿಷ್ಟ ಪ್ರಯೋಗ ನೋಡಬಯಸುತ್ತೀರಾ…? ಎಂದು ಕೇಳುತ್ತಾರೆ. ಅದಕ್ಕೆ ಲೇಖಕರು ಮತ್ತೊಮ್ಮೆ ನನ್ನ ಕೈಗಳನ್ನು ಗೋಡೆಗೆ ಅಂಟುವಂತೆ ಮಾಡುತ್ತೀರಾ ಅನ್ನುತ್ತಾರೆ. ಆದರೆ ಈ ಬಾರಿ ಜಯ ಲೇಖಕರದ್ದಾಗುತ್ತದೆ. ಅಂದರೆ ಅಘೋರಿಗಳು ಸಾಧಾರಣವಾಗಿ ಮಾಡುವ ಸಮ್ಮೋಹನ ವಿದ್ಯೆಗೆ ಅವರು ಒಳಗಾಗುವುದಿಲ್ಲ, ನಮ್ಮ ಇಚ್ಛಾ ಶಕ್ತಿ ಪ್ರಬಲವಾಗಿದ್ದಲ್ಲಿ ನಮ್ಮನ್ನು ನಾವು ಈ ಸಮ್ಮೋಹನಕ್ಕೊಳಪಡದಂತೆ ತಡೆಯಬಹುದು ಅನ್ನುವುದನ್ನು ಲೇಖಕರು ನಿರೂಪಿಸುತ್ತಾರೆ.

ನಾವು ತಿಳಿಯದ ಅಘೋರಿಗಳ ಲೋಕಕ್ಕೆ ಕೊಂಡೊಯ್ಯುವ ಈ ಪುಸ್ತಕ ಕೊನೆಯಲ್ಲಿ ಒಂದು ಸಂಶಯವನ್ನೂ ನಮ್ಮಲ್ಲಿ ಹುಟ್ಟಿಸುತ್ತದೆ. ಅಂದರೆ ಸಾಮಾನ್ಯ ಜನರೆದುರು ತಮ್ಮನ್ನು ತಾವು ಎಂದಿಗೂ ತೆರೆದುಕೊಳ್ಳದ ಜನ ತಮ್ಮ ಸಿದ್ಧಾಂತಗಳನ್ನು ಬುಡಮೇಲು ಮಾಡಲೆತ್ನಿಸಿದ ವ್ಯಕ್ತಿಯನ್ನ, ತಮ್ಮ ಪಂಗಡದ ಹಿರಿಯರಿಬ್ಬರ ಅವಸಾನಕ್ಕೆ ಕಾರಣನಾದವನನ್ನ ಸುಮ್ಮನೆ ಬಿಟ್ಟಾರೆ…? ಸಮಯಾವಕಾಶ ಸಿಕ್ಕಲ್ಲಿ ನೀವೂ ಒಮ್ಮೆ ಓದಿ ನೋಡಿ ನನಗೆ ಬಂದ ಸಂಶಯ ನಿಮ್ಮಲ್ಲೂ ಕಾಣಿಸಿಕೊಳ್ಳಬಹುದು.

8 ಟಿಪ್ಪಣಿಗಳು Post a comment
 1. vageesh
  ಆಗಸ್ಟ್ 7 2013

  80’s nalli dharavahiyagi bandittu. may be avaga naanu 12-14 varsha vayasinava. adara nenapalli kaleda varsha kaadambari purchase maadiddene. aaga adu bhoota-pretada bhayanaka kateyagitti, eega adannu puna oduvaaga bere reetiyalli kaanuttade. ade reeti RAKSHASA SAMHARA anuva dharavahi sudha atava tarangadalli banditti. adu kaanunannu tiruchuva, adara kannige mannu erachuva kolegaranobbana kate DHARMATEJA. aa book elli siguttade endu gottiddara dayavittu tilisi. vagei123@gmail.com, 9980215174

  ಉತ್ತರ
  • ಆಗಸ್ಟ್ 2 2019

   ಅಘೋರಿಗಳ ವಿಳಾಸ ವಿದ್ದರೆ ತಿಳಿಸಿ,ಒಂದು ಬಾರಿ ಬೇಟಿಯಾಗಲು ಬಯಸುತೇನೆ.

   ಉತ್ತರ
 2. ಆಗಸ್ಟ್ 7 2013

  this was serialised in suda long ago… at that time i read it as if it were a real story…. now when i read the translated novel, i was surprised to see that it was fiction!

  ಉತ್ತರ
 3. Vishnuprasad
  ಆಗಸ್ಟ್ 9 2013

  This book analyses how multi faceted our Hindu religion is. Though the rituals may appear horrific but there is lot of penance and practice behind it. Such records of aghoris have been available in different sources. As we are all Hindus we must respect those saintly people

  ಉತ್ತರ
 4. ಗಿರೀಶ್
  ಸೆಪ್ಟೆಂ 12 2014

  ಆ ಇಡೀ ಕಥೆಯೆ ಜೀವಾಳವೇ ಆ ಕೊನೆಯ ಸಾಲುಗಳಲ್ಲಿದೆ ಎಂದು ನನ್ನ ಅನಿಸಿಕೆ. ಉತ್ತಮ ಬರಹ. ಇಂತಹ ಪುಸ್ತಕ ಪರಿಚಯ ಬರಹ ಹೆಚ್ಚಾದರೆ ನಿಲುಮೆ ತಾಣಕ್ಕೆ ಹೆಚ್ಚು ಮೆರಗು

  ಉತ್ತರ
 5. ಮರಳಿ ಮರಳಿ ಓದಬೇಕೆನಿಸುವ ವಿಶಯವಸ್ತುವನ್ನು ಈ ಪುಸ್ತಕ ಹೊಂದಿದೆ. ಲೇಖಕರ ಧೈಯ೯ಕೆ ಒಂದು ನಮಸ್ಕಾರ..

  ಉತ್ತರ
 6. sampath
  ಆಗಸ್ಟ್ 17 2019

  ಅಘೋರಿಗಳ ನಡುವೆ- ಕೃತಿಯ ಸಂಕ್ಷಿಪ್ತ ವಿವರಣೆ ಕೊಟ್ಟಿದ್ದೀರಿ. ಇದನ್ನು ಓದಿದ ಮೇಲೆ ಕೃತಿ ಓದುವ ತವಕ ಹೆಚ್ಚಿದೆ. ಈ ಕೃತಿ ಎಲ್ಲಿ ಸಿಗುತ್ತದೆ ಎಂದು ತಿಳಿಸಲು ಸಾಧ್ಯವೇ?

  ಉತ್ತರ
 7. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments