ಸುಭಾಷರ ನೆನಪಿನೊಂದಿಗೆ ಮರೆಯಬಾರದ ಹೆಣ್ಣು
– ಚೇತನಾ ತೀರ್ಥಹಳ್ಳಿ
ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!……….. ಸುಭಾಷ್ ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ….
“ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ. ಹಾಗೇನಾದರೂ ವಿಧಿ ನಮ್ಮಿಬ್ಬರನ್ನು ಶಾಶ್ವತವಾಗಿ ಅಗಲಿಸಿದನೆಂದುಕೋ… ಮುಂದಿನ ಹುಟ್ಟಿನಲ್ಲಿ ಮತ್ತೆ ನಿನ್ನ ಸೇರಲು ನಾನು ಪರಿತಪಿಸುವೆ. ನನ್ನ ಕಿನ್ನರೀ… Jeden tag denke ich an sie- ನಿನ್ನನ್ನ ಪ್ರತಿದಿನವೂ ನೆನೆಸಿಕೊಳ್ಳುತ್ತೇನೆ”
( ಸುಭಾಷ್ ಚಂದ್ರ ಬೋಸ್, ಎಮಿಲೀ ಶೆಂಕಲ್ ಗೆ ಬರೆದ ಪತ್ರದಲ್ಲಿ)
ನರನರದಲ್ಲಿ ನೆಲದ ಉನ್ಮಾದ. ಹೋರಾಟದ ಕೆಚ್ಚು. ತನ್ನನ್ನೇ ದೇಶದ ಹೆಸರಿಗೆ ಬರೆದಿಟ್ಟ ಪ್ರೌಢ ಗಂಡಸಿನ ಎದೆಯಲ್ಲೂ ಒಂದು ಬೆಚ್ಚಗಿನ ಗೂಡು. ಪುಟ್ಟದೊಂದು ಖಾಸಗಿ ಬದುಕು. ಅಲ್ಲಿ, ಮೊಗೆದಷ್ಟೂ ಚಿಮ್ಮುವ ಪ್ರೀತಿ. ಎದೆ ಸೀಯುವ ವಿರಹದ ಕಾವು. ಕಾಸಗಲ ಕಣ್ಣೆದುರು ಮುಕ್ತ ಭಾರತದ ಕನಸು. ಒಳಗಿನೊಳಗಲ್ಲಿ ಅವಳ ಪ್ರೇಮ ಬಂಧನದ ನೆನಪು.
ಸುಭಾಷ್ ಚಂದ್ರ ಬೋಸ್…
ಹಾಗೆಂದ ಕೂಡಲೆ ಏನೆಲ್ಲ ಹಾದುಹೋಗುವುದು ಕಣ್ಣೆದುರು! ಭಾರತ, ಬ್ರಿಟಿಷರು, ಜಪಾನ್, ಹಿಟ್ಲರ್, ಗಾಂಧಿ, ವಿವೇಕಾನಂದ ಕೂಡಾ!!
ಎದೆಯಾಳದಲ್ಲಿ ಕೊರೆಯತೊಡಗುತ್ತಾಳೆ ಎಮಿಲೀ ಶೆಂಕಲ್ ಎನ್ನುವ ದಿಟ್ಟ ಹೆಣ್ಣು. ಭೋರ್ಗರೆಯುವ ಪ್ರವಾಹಕ್ಕೆ ಒಡ್ಡಾದವಳು. ಬೇಸಗೆಯಾಕಾಶದಲ್ಲಿ ಪ್ರೀತಿ ಹನಿಸಿ ಕಾಮನ ಬಿಲ್ಲು ಕಾಣಿಸಿದವಳು. ಇವಳ ನೆನಪು, ನಮಗೆ ಜಾಣ ಮರೆವು.
ವಿಯೆನ್ನಾದಲ್ಲಿ ಎಮಿಲಿ- ಸುಭಾಷರ ಭೇಟಿಯಾದಾಗ ಆಕೆಯ ವಯಸ್ಸಿನ್ನೂ ಇಪ್ಪತ್ತನಾಲ್ಕು. ಸುಭಾಷರಿಗೆ ನಲವತ್ತರ ಆಸುಪಾಸು. ಎಳಸು ಹುಡುಗಿ, ಪುರುಷ ಸಿಂಹ! ಅದು, ಸುಭಾಷರು ತಲೆಮರೆಸಿಕೊಂಡಿದ್ದ ಕಾಲ. ಅನಾಮಿಕತೆ, ಅಲೆಮಾರಿತನಗಳ ಜತೆ ಕಾಯಿಲೆಯೂ ಸೇರಿಕೊಂಡು ಅವರನ್ನ ಹೈರಾಣಾಗಿಸಿತ್ತು. ಚಿಕಿತ್ಸೆ- ವಿಶ್ರಾಂತಿಯ ಹೊತ್ತಲ್ಲಿ ಭಾರತದ ಇತಿಹಾಸ ಬರೆಯುವ ಕೆಲಸಕ್ಕೆ ಕೈಹಾಕಿದರು ಸುಭಾಷ್ ಬಾಬು. ಎಮಿಲಿ ಅವರ ಬಳಿ ಟೈಪಿಸ್ಟಳಾಗಿ ಸೇರಿಕೊಂಡಳು. ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಅಕ್ಕರೆಯಿಂದ ನೋಡಿಕೊಂಡಳು.
ಗಂಡಸು! ಎಂದಿಗೂ ತಲೆ ತಗ್ಗಿಸದ ವೀರ… ಯಾರೇ ಆದರೂ, ಹಿಡಿ ಪ್ರೀತಿಗೆ ಕರಗದ ಜೀವವುಂಟೆ? ಎಮಿಲಿಯ ಮುಗ್ಧತೆ, ಮಮತೆ, ಚಾಣಾಕ್ಷತೆಗಳು ಸುಭಾಷರನ್ನ ಸೆಳೆದೇ ಸೆಳೆದವು. ಬಹುದಿನದ ಒಡನಾಟ ಅವರಿಬ್ಬರನ್ನು ಬಂಧಿಸಿತು.
ಸುಭಾಷರ ಸಹಾಯಕಿಯಾಗಿ ಬಂದವಳು ಆಪ್ತ ಸಖಿಯಾದಳು. ಹೋರಾಟದ ಬೇಗೆಯಲ್ಲಿ ತತ್ತರಿಸಿಹೋಗುತ್ತಿದ್ದ ಮನಸಿಗೆ ತಂಪೂಡಿದಳು. ಕಿತ್ತು ತಿನ್ನುವ ಸಾವಿರ ಸಾವಿರ ಯೋಚನೆ- ಯೋಜನೆಗಳ ನಡುವೆಯೂ ಎಮಿಲಿಯ ಸಹವಾಸದಲ್ಲಿ ಸಾಂತ್ವನ ಕಂಡರು ಸುಭಾಷ್ ಬಾಬು. ಅದು, ಅವಳ ಪ್ರೇಮದ ತಾಖತ್ತು!
ಪ್ರಬುದ್ಧ ಹೆಣ್ಣು ಎಮಿಲಿ. ನೇತಾಜಿಯ ಅದೆಷ್ಟೋ ಚಿಂತನೆಗಳಿಗೆ ಕಿವಿಯಾದಳು. ಪ್ರಯೋಗಗಳಿಗೆ ಸಾಕ್ಷಿಯಾದಳು. ಸದಾ ನೆಲದ ಗುಂಗಲ್ಲೆ ಮುಳುಗಿರುತ್ತಿದ್ದ ಅವರಿಗೆ ಆಸರೆಯೂ ಆದಳು. ತನ್ನನ್ನ ತಾನು ಪೂರ್ತಿ ಇಲ್ಲವಾಗಿಸಿಕೊಂಡು, ಅವರ ಇರುವಿಕೆಯಲ್ಲಿ ಹೊಸ ಹುಟ್ಟು ಕಂಡುಕೊಂಡಳು.
ಆಸ್ಟ್ರಿಯಾದ ಹೆಣ್ಣು, ಭಾರತದ ಗಂಡು. ಜಾತಿ, ಭಾಷೆ, ಗಡಿಗಳನ್ನು ಮೀರಿದ ಪ್ರೇಮ. ಅವರಿಬ್ಬರ ಮದುವೆಯಾಯ್ತು. ಕಾಲ ಕರೆಯುತ್ತಲೇ ಇದ್ದ. ಎಲ್ಲರಂತಲ್ಲ ಸುಭಾಷ್… ಎಮಿಲಿಯ ಸಂಗದಲ್ಲಿ ಮೈಮರೆಯಲಿಲ್ಲ. ಕರ್ತವ್ಯದ ಕೈಹಿಡಿದು ಭಾರತಕ್ಕೆ ಮರಳಿದರು.
ಎಮಿಲಿ ಕೂಡ ಎಲ್ಲರಂತಲ್ಲ… ಬದುಕೆಂದರೆ ಬರೀ ಚರ್ಮದ ಹಪಾಹಪಿಯಲ್ಲ ಎನ್ನುವುದೆಲ್ಲ ಗೊತ್ತಿದ್ದ ಹೆಣ್ಣು. ಅತ್ತು ಕರೆದು ಕಾಡಲಿಲ್ಲ. ಅವರಿಗಾಗಿ ಕಾದಳು. ಕಾಯುತ್ತ ಕಾಯುತ್ತ ಪಕ್ವವಾದಳು. ಕೊನೆಗೂ ಧ್ಯಾನ ಸಿದ್ಧಿಸಿತು. ಕೋಲ್ಕೊತಾದಿಂದ ವೇಷ ಮರೆಸಿಕೊಂಡು ಹೊರಟ ಸುಭಾಷ್, ಆ ಹೊತ್ತಿಗಾಗಲೇ ಎಮಿಲಿಯನ್ನು ಕಾಣಲೇಬೇಕೆಂಬ ನಿಶ್ಚಯ ಮಾಡಿಕೊಂಡಿದ್ದರು- ತಮ್ಮ ಕರ್ತವ್ಯಕ್ಕೂ ಅಡ್ಡಿಯಾಗದ ಹಾಗೆ. ದೀರ್ಘ ಅಗಲಿಕೆಯ ನಂತರ ವಿಯೆನ್ನಾದಲ್ಲಿ ಸುಭಾಷರು ಎಮಿಲಿಯೊಂದಿಗೆ ಸಂಸಾರ ನಡೆಸುವಂತಾಯ್ತು. ದೂರವಿದ್ದಷ್ಟು ಕಾಲವಾದರೂ ಅವರು ಜೊತೆಯಲ್ಲಿರಲು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ಮಾತು.
ಮೂರು ವರ್ಷದ ಸಂಸಾರದಲ್ಲಿ ಒಡಲಕುಡಿ ಚಿಗುರೊಡೆದು ಹೊರಬಂತು. ಅನಿತಾ, ಅವರಿಬ್ಬರ ಪ್ರೇಮದ ವಾರಸುದಾರಳಾದಳು.
ಎಮಿಲಿ ಯಾವತ್ತೂ ತಮ್ಮ ಮದುವೆಯ ಸಂಗತಿಯನ್ನ ಜಾಹೀರು ಮಾಡೆಂದು ಸುಭಾಷರನ್ನ ಪೀಡಿಸಲಿಲ್ಲ. ಭಾರತದ ಮಡಿವಂತಿಕೆಯ ಅರಿವು ಅವಳಿಗಿತ್ತು. ಗಂಡನ ಎತ್ತರವೂ ಗೊತ್ತಿತ್ತು. ಅವಳಿಗೆಂದೂ ಸಂಬಂಧದ ಸರ್ಟಿಫಿಕೇಟು ಮುಖ್ಯವಾಗಲೇ ಇಲ್ಲ. ಹಾಗೆಂದೇ ಬೋಸ್ ಬಾಬು ಕಳೆದುಹೋದ ನಂತರವೂ ಎಷ್ಟೋ ಕಾಲ ಪರದೆಯ ಹಿಂದೆಯೇ ಇದ್ದಳು. ಆಮೇಲೂ ಅವರ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡದೆ ಉಳಿದಳು.
ಸುಭಾಷ್ ಬಾಬು ತಮ್ಮ ಮದುವೆಯ ಸಂಗತಿಯನ್ನ ಬಚ್ಚಿಟ್ಟಿದ್ದೇಕೆ? ಇದೊಂದು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಆಗಿನ ಸಂದರ್ಭದಲ್ಲಿ, ಎಮಿಲಿ ವಿದೇಶೀಯನನ್ನು ಮದುವೆಯಾಗಿದ್ದುದು ಜಾಹೀರಾಗಿದ್ದಿದ್ದರೆ ಆಕೆ ತನ್ನ ದೇಶದ (ಜರ್ಮನ್) ನಾಗರಿಕತ್ವವನ್ನು ಕಳೆದುಕೊಂಡುಬಿಡುವ ಅಪಾಯವಿತ್ತು. ಹೀಗಾಗಿಯೇ ಅವರು ಅದನ್ನು ಮುಚ್ಚಿಟ್ಟರು ಎನ್ನುವುದೊಂದು ತರ್ಕ.
ಆದರೆ ಸುಭಾಷರು ತಮ್ಮ ಸಹೋದರನ ಹೊರತಾಗಿ ಇನ್ಯಾರ ಬಳಿಯೂ ಈ ವಿಷಯವನ್ನು ಹೇಳಿಕೊಂಡಿರಲಿಲ್ಲ. ಹೀಗೇಕೆ?
‘ಬ್ರಹ್ಮಚರ್ಯ’ವೇ ಉನ್ನತ ಸಾಧನೆಯೆಂದು ನಂಬಿಕೊಂಡ ಭಾರತೀಯರ ಕಣ್ಣಲ್ಲಿ ಕೆಳಗಿಳಿಯುವೆನೆಂದೇ? ವಿದೇಶಿ- ವಿಜಾತಿಯ ಹೆಣ್ಣನ್ನು ಅವರು ಒಪ್ಪಲಾರರೆಂದೇ? ಅದೇನೇ ಇರಲಿ… ತನ್ನ ಜನರ ನಂಬಿಕೆಗಳಿಂದ ಹೊರಡುವ ವಿರೋಧ, ತನ್ನ ಹೋರಾಟಕ್ಕೆ ಅಡ್ಡಿಯಾಗಬಾರದೆಂದೇ ಅವರು ಹಾಗೆ ಮಾಡಿದ್ದಿರಬೇಕು. ಅದರ ಹೊರತು, ಸುಭಾಷರಿಗೆ ಇನ್ಯಾರ ಮರ್ಜಿಯೂ ಇದ್ದಂತೆ ತೋರುವುದಿಲ್ಲ.
ಇವತ್ತಿಗೂ, ಸಾರ್ವಜನಿಕ ಜೀವನಕ್ಕೆ ತನ್ನನ್ನ ಕೊಟ್ಟುಕೊಂಡ ವ್ಯಕ್ತಿಗೆ ಖಾಸಗಿ ಜೀವನ ಇರಲೇಬಾರದೆಂದು ಬಯಸುವ ಜನರು ನಾವು. ಹಾಗೆಂದೇ, ಪಿಚ್ಚರಿನಲ್ಲಿ ಕೂಡ ಸುಭಾಷರ ‘ಪ್ರೇಮ ಜೀವನ’ದ ದೃಶ್ಯಗಳಿಗೆ ಕತ್ತರಿ ಹಾಕಿರೆಂದು ಎಡ-ಬಲವೆನ್ನದೆ ಬೊಬ್ಬಿಟ್ಟೆವು. ಎಮಿಲಿಯ ವ್ಯಕ್ತಿತ್ವವನ್ನೇ ಸಂಶಯಪಟ್ಟೆವು. ಸುಭಾಷ್ ಸಾವಿನಷ್ಟೇ ಅವರ ವಿವಾಹ ಜೀವನವೂ ವಿವಾದಾತ್ಮಕ ಸಂಗತಿಯೆಂದುಬಿಟ್ಟೆವು!
ಇಷ್ಟಕ್ಕೂ ಪುರಾವೆಯೇ ಬೇಕೆನ್ನುವುದಾದಲ್ಲಿ, ಸುಭಾಷರು ೧೯೩೪ರಿಂದ ೧೯೪೫ರ ವರೆಗಿನ ಅವಧಿಯಲ್ಲಿ ಎಮಿಲೀ ಶೆಂಕೆಲ್‌ಗೆ ಬರೆದ ೧೬೨ ಪತ್ರಗಳಿವೆ. ಅವು, ‘ಲೆಟರ್ಸ್ ಟು ಎಮಿಲೀ ಶೆಂಕೆಲ್ ’ ಹೆಸರಲ್ಲಿ ಪ್ರಕಟಗೊಂಡಿವೆ ಕೂಡಾ. ಈ ಪತ್ರಗಳಲ್ಲಿ, ಪ್ರಿಯತಮನ ಕನವರಿಕೆಗಳಿವೆ. ಪತ್ನಿಯ ಆರೋಗ್ಯದ ಕಾಳಜಿಯಿದೆ. ಮಗುವಿನ ಸಿಹಿ ನೆನಪಿದೆ. ಒಡನಾಟದ ನೆನಪುಗಳ ಘಮವಿದೆ…
ಅಷ್ಟೇ ಅಲ್ಲ, ಒಳ- ಹೊರಗಿನ ರಾಜಕಾರಣದ ತಲ್ಲಣಗಳ ಚಿತ್ರಣವಿದೆ. ತನ್ನ ಮತ್ತು ತನ್ನ ದೇಶದ ಏಳುಬೀಳುಗಳ ವರದಿಯಿದೆ. ಜೊತೆಗೆ, ‘ನಾನು ಸದಾ ನಿನ್ನ ನೆನಪಲ್ಲೇ ಇರುತ್ತೇನೆ… ನನ್ನ ಮೇಲೆ ಭರವಸೆ ಇಡು’ ಎನ್ನುವ ಅಪ್ಪಟ ಪ್ರೇಮಿಯ ಬಿನ್ನಹವೂ ಇದೆ!
ಆದರೆ, ಹೀಗೆ ಪುರಾವೆ ಕೇಳುವುದೇ ಒಂದು ನಾಚಿಕೆಗೇಡು.
ಮನುಷ್ಯನೊಬ್ಬನ ಪ್ರೇಮವನ್ನು ಅವಮಾನಿಸುವುದು ಖಂಡಿತ ಸಂಸ್ಕೃತಿಯಾಗಲಾರದು. ಹೀಗೆ ಯೋಚಿಸುವ ವಿವೇಚನೆ ನಮಗೆ ಇಂದಿಗೂ ಇಲ್ಲವಾಗಿದೆ.
ಕೊನೆಗೂ, ಸುಭಾಷರನ್ನು ಪ್ರೀತಿಸಿದ- ಮದುವೆಯಾದ ಎಮಿಲೀಗೆ ದಕ್ಕಿದ್ದೇನು? ಆಕೆಯೇ ಹೇಳಿಕೊಂಡಿರುವಂತೆ ಆತ್ಮ ತೃಪ್ತಿ. ಸುಭಾಷರ ಜೊತೆ ಆಕೆ ಜೀವಿಸಿದ್ದು ಹೆಚ್ಚೆಂದರೆ ೫ ವರ್ಷಗಳು. ಅವರ ನೆನಪುಗಳ ಜತೆ ಜೀವಿಸಿದ್ದು ೫೦ ವರ್ಷಗಳು!
ಯಾವತ್ತೂ ತನ್ನ- ಸುಭಾಷರ ಒಡನಾಟದ ಬಗ್ಗೆ ಹೇಳಿಕೊಳ್ಳಲು ಬಯಸದೆ ಉಳಿದ ಎಮಿಲೀಗೆ ಭಾರತೀಯರು ಸುಭಾಷರನ್ನು ಅರ್ಥ ಮಾಡಿಕೊಳ್ಳಬೇಕೆಂಬ ಬಯಕೆಯಿತ್ತು. ಅವರನ್ನು ದೇವರಂತೆ ಮಾತ್ರವಲ್ಲದೆ, ಒಬ್ಬ ಮಾನವನಾಗಿಯೂ ಅರ್ಥ ಮಾಡಿಕೊಳ್ಳಬೇಕೆಂಬ ಬಯಕೆ ಅದು. ಆಕೆಯ ಪಾಲಿಗಂತೂ ಅವರು ಪ್ರಥಮ ಮತ್ತು ಪರಮೋನ್ನತ ಮನುಷ್ಯರಾಗಿದ್ದರು. ಈ ಮಾತನ್ನೆಲ್ಲ ಎಮಿಲೀ ತನ್ನ ಆಪ್ತರ ಬಳಿ ಮಾತ್ರವೇ ಬಿಚ್ಚಿಟ್ಟರುವಳು.
ನೆಲ, ನೆಲ, ನೆಲ ಎನ್ನುತ್ತಲೇ ತನ್ನ ಸಾಗರದ ಎದೆಯಲ್ಲಿ ಎತ್ತರದ ಜಾಗವನ್ನು ಎಮಿಲೀಗೆ ಬಿಟ್ಟುಕೊಟ್ಟಿದ್ದರು ಸುಭಾಷ್ ಬಾಬು. ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ?
ಅವರು ಹಂಬಲಿಸಿದ ನೆಲ ಭಾರತ. ಮತ್ತು,
ಅವರು ಪ್ರೇಮಿಸಿದ ಹೆಣ್ಣು ಎಮಿಲೀ!
* * * * * * * *
ಚಿತ್ರಕೃಪೆ : ಅಂತರ್ಜಾಲ
ಕಣ್ಣು ಮಂಜಾದವು ಪ್ರೀತಿಗೆ.. “ತ್ಯಾಗ” ಅನ್ನುವ ನೆವ ಒಡ್ಡಿ ಎಮಿಲಿ ಈ ದೇಶದ ಸೋಸೆಯಾಗಿಯೂ ಅಧಿಕಾರ ಕೇಳಲಿಲ್ಲ! ಸಿಂಹದ ಹೆಂಡತಿಗೂ ವ್ಯಾಪಾರಿಗಳಿಗೂ ಇರುವ ವ್ಯತ್ಯಾಸ!
ನಾನು ಓದಿಕೊಂಡ ಇತಿಹಾಸದಲ್ಲಿ ಬಹಳ ಕಾಡಿದ್ದು ಕಾಡುತ್ತಿರುವುದು ಸುಭಾಷ್…! ಅದೆಂತ ದುರಂತ ಅಂತ್ಯ… ಎಮಿಲೀಗೊಂದು ಸಲಾಂ…!
ಅವಳ ಪರಿಚಯ ಮಾಡಿಸಿದ ನಿಮಗೆ ವಂದನೆಗಳು… 🙂
ಸುಭಾಷರಂತ ಮಹಾನ್ ವ್ಯಕ್ತಿಯ ಹಾರೈಕೆ ಮಾಡಿ, ಅವರ ಪತ್ನಿಯಾಗಿ ಆಕೆಯ ವ್ಯಕ್ತಿತ್ವ ಸುಭಾಷರ ವ್ಯಕ್ತಿತ್ವಕ್ಕೆ ಸಮನಾಗಿ ಕಾಣುತ್ತಿದೆ. ಆಕೆಯನ್ನು ತಾಯಿ ಎಂದು ಕರೆದರೂ ತಪ್ಪಲ್ಲ. ಇಂಥ ಮಹಾನ್ ವ್ಯಕ್ತಿತ್ವನ್ನು ಪರಿಚಯಿಸಿ ನನ್ನ ಹಲವು ವರ್ಷಗಳ “ಎಮಿಲಿ ಯಾರು?” ಎಂಬ ಪ್ರಶ್ನೆಗೆ ಉತ್ತರ ನೀಡಿದ್ದೀರಿ.
ವಂದನೆಗಳು
ಸುಭಾಷ ಚಂದ್ರ ಭೋಸ್ ರಷ್ಟೇ ನಿಸ್ವಾರ್ಥಿ ಎಮಿಲಿ ಶೆಂಕಲ್. ಸುಭಾಷರು ಈ ಸಂಬಂದ/ಮದುವೆ ಯನ್ನು ಸಾರ್ವಜನಿಕವಾಗಿ ಹೇಳಿಕೊಳ್ಳದಿರುವುದರಲ್ಲಿ ಅವರ ವೈಯುಕ್ತಿಕ ಸ್ವಾರ್ಥವಿರಲಿಲ್ಲ ಆದರೆ ಬೇರೆಯದೇ ಆದ ಕಾರಣಗಳಿದ್ದವು ನನಗನಿಸುತ್ತದೆ.
ನೀವು ಹೇಳಿದಂತೆ..
” ಅವರು ಹಂಬಲಿಸಿದ ನೆಲ ಭಾರತ. ಮತ್ತು,
ಅವರು ಪ್ರೇಮಿಸಿದ ಹೆಣ್ಣು ಎಮಿಲೀ! “
ನನ್ನ ನಂಬು. ನೀನು ಸದಾ ನನ್ನ ……………..
ಭಾವದಲ್ಲಿ ಎಷ್ಟು ಆಪ್ತತೆ. ಧನ್ಯವಾದಗಳು ಚೇತನಾ.
ಉಮಾ ಭಟ್.
ಗಾಂದಿ ಹಾಗೂ ನೆಹರು ಕುಟುಂಬದಿಂದಲೇ ಬೋಷ್ ರವರಿಗೆ ಎಮಿಲಯವರಿಗೆ ಹಾಗೂ ದೇಶಕ್ಕೆ ಭಾರೀ ಅನ್ಯಾಯವಾಗಿದೆ. ಇಂದಿರಾ, ರಾಜೀವ, ಸಂಜಯಗಾಂಧಿಗಳನ್ನು ಕೊಂದ ರೀತಿಯಲ್ಲೆ ಇನ್ನು ಉಳಿದ ನೆಹರು ಕುಟುಂಬದವರನ್ನು ಕೊಲ್ಲಬೇಕು ಆಗಲೇ ಸುಭಾಷ್ ರವರ ಸಾವಿಗೆ ನ್ಯಾಯ ದೊರಕುವುದು.