ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 22, 2013

5

ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು” ಪುಸ್ತಕದ ಕುರಿತು

‍ನಿಲುಮೆ ಮೂಲಕ

– ಮು . ಅ . ಶ್ರೀರಂಗ  ಯಲಹಂಕ  ಬೆಂಗಳೂರು

ನಮಗೆ ನಾವೇ ಪರಕೀಯರುರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು ” (ನ. ನಾ. ಪ) (ಪ್ರಕಾಶಕರು : ರಾಷ್ಟ್ರೋತ್ಹಾನ ಸಾಹಿತ್ಯ ಬೆಂಗಳೂರು -೧೯ )ಪುಸ್ತಕ ಓದುವ ಮುನ್ನ ನಾನು ಪ್ರೊ .ಎಸ್ .ಎನ್. ಬಾಲಗಂಗಾಧರ (ಬಾಲು)ಅವರ ವಿಚಾರಗಳನ್ನು ಆಧರಿಸಿದ ಕನ್ನಡಕ್ಕೆ ಅನುವಾದವಾಗಿರುವ ಮೂರುಪುಸ್ತಕಗಳನ್ನು ಓದಿದ್ದೆ (ಪೂರ್ವಾವಲೋಕನ ,ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ? ಮತ್ತು ಹುಡುಕಾಟವನ್ನು ನಿಲ್ಲಿಸದಿರೊಣ). ಸ್ಮೃತಿ-ವಿಸ್ಮೃತಿ ;ಭಾರತೀಯ ಸಂಸ್ಕೃತಿ ತನ್ನ ವಿಚಾರ ಮತ್ತು ಗಾತ್ರದಲ್ಲಿ ತುಂಬಾ ಘನವಾಗಿದೆ ಹೀಗಾಗಿ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾಗಿದೆ. ಇದುವರೆಗೆ ಸುಮಾರು ಇನ್ನೂರು ಪುಟಗಳನ್ನು ಓದಿದ್ದೆನೆ. ರಮಾನಂದರ ಪ್ರಸ್ತುತ ಪುಸ್ತಕ ಮೇಲೆ ಹೇಳಿದ ಬಾಲು ಅವರ ನಾಲ್ಕು ಪುಸ್ತಕಗಳ ಅದರಲ್ಲೂ ಮುಖ್ಯವಾಗಿ ಸ್ಮೃತಿ-ವಿಸ್ಮೃತಿ ಪುಸ್ತಕದಲ್ಲಿರುವ ವಿಷಯಗಳನ್ನು ನೇರವಾಗಿ ಭಟ್ಟಿ ಇಳಿಸಿರುವುದರ ಪ್ರತಿಫಲ! ಇದಕ್ಕೆ ಪುರಾವೆಗಳು ರಮಾನಂದರ ನ.ನಾ.ಪ.. ಪುಸ್ತಕದಲ್ಲೇ ಇವೆ.

,         ೧. ಬಾಲು ಅವರೇ ತಮ್ಮ ಮುನ್ನುಡಿಯಲ್ಲಿ—ರಮಾನಂದರ ಎಲ್ಲಾ ಲೇಖನಗಳು ಈ ವಿಷಯಗಳ ಕುರಿತಾಗಿ ಬೆಲ್ಜಿಯಂ ಹಾಗೂ ಭಾರತದಲ್ಲಿ ಕುವೆಂಪು ವಿ. ವಿ. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಭಾವಿತವಾಗಿವೆ ಎಂದ್ದಿದ್ದಾರೆ (ಪುಟxii)

೨. ಲೇಖಕರ ಮಾತಿನಲ್ಲಿ ಸ್ವತಃ ರಮಾನಂದ ಐನಕೈ ಅವರೇ ಮೇಲೆ ಹೇಳಿದ ಬಾಲು ಅವರ ಮಾತುಗಳನ್ನೇ ಅನುಮೋದಿಸಿದ್ದಾರೆ—ಬಾಲು ಅವರ ಮೂಲ ಸಿದ್ಧಾಂತಕ್ಕೆ ಚ್ಯುತಿ ಬಾರದ ಹಾಗೆ ಅವರ ವಿಚಾರಗಳನ್ನು ನನ್ನ ಅನುಭವಗಳ ಮೂಲಕ ಸರಳವಾಗಿ ನಿರೂಪಿಸುವ ಕೆಲಸ ಮಾಡಿದ್ದೇನೆ (ಪುಟ xvi )(ರಮಾನಂದರ ಅನುಭವಗಳ ಪ್ರಮಾಣ ಈ ಪುಸ್ತಕದ ವಿಚಾರದಲ್ಲಿ ತೀರಾ ಕಡಿಮೆ ಎಂಬುದು ಓದುಗರಿಗೆ ಮನವರಿಕೆಯಾಗುತ್ತದೆ!)

೩. ರಮಾನಂದರ ಪ್ರಸ್ತುತ ಪುಸ್ತಕ್ಕಕ್ಕೆ (ನ.ನಾ.ಪ) ಹಿನ್ನೆಲೆ ಬರೆದಿರುವ ದಾ॥ ರಾಜಾರಾಮ ಹೆಗಡೆಯವರು ಸಹ ರಮಾನಂದರದು ಸ್ವತಂತ್ರ ಲೇಖನಗಳಾದರೂ ಕೂಡ ಭಾರತೀಯ ಸಂಸ್ಕೃತಿಯ ಕುರಿತು ಎಸ್ . ಎನ್ . ಬಾಲಗಂಗಧರ ಅವರ ಹೊಸ ವಾದಗಳಿಂದ ಪ್ರಭಾವಿತವಾಗಿವೆ. (ಪುಟ xviii)

೪. ರಮಾನಂದರ ಈ ಪುಸ್ತಕದ ಪುಟ ೩೮ರಲ್ಲಿರುವ ಚಿತ್ರ ಮತ್ತು ಪುಟ ೩೯ರಲ್ಲಿ ಅದರ ಬಗ್ಗೆ ಇರುವ ಸಂಕ್ಷಿಪ್ತ ವಿವರಣೆ ಸಹ ಬಾಲು ಅವರ ಸ್ಮೃತಿ-ವಿಸ್ಮೃತಿಯಿಂದ ವರ್ಗಯಿಸಿಕೊಂಡಿರುವುದೇ  ಆಗಿದೆ!

ಇಷ್ಟೆಲ್ಲಾ ಸಾಕ್ಷಿಗಳು ರುಜುವಾತುಗಳಿರುವುದರಿಂದ ರಮಾನಂದರು ತಮ್ಮ ಪುಸ್ತಕದ ಮುಖಪುಟದಲ್ಲಿ,ಮೊದಲಪುಟದಲ್ಲಿ,ಹೋಗಲಿ ಕೊನೆಗೆ ಹಿಂಬದಿಯ ರಕ್ಷಾಪುಟದಲ್ಲಿ ಆದರೂ ಪ್ರೊ.ಎಸ್ ಎನ್.ಬಾಲಗಂಗಾಧರ ಅವರ ಪುಸ್ತಕಗಳಿಂದ/ವಿಚಾರಗಳಿಂದ ಪ್ರೇರಣೆ,ಪ್ರಭಾವ,ಅಥವಾ ಆಧಾರವಾದದ್ದು ಎಂದು ಮುದ್ರಿಸಬೇಕಾಗಿತ್ತು. ಲೇಖಕರ ಮಾತಿನಲ್ಲಿ ಅಥವಾ ೧೪೩ ಪುಟಗಳ ಈ ಪುಸ್ತಕದ ಮೂರು ಅಥವಾ ನಾಲ್ಕು ಪುಟಗಳಲ್ಲಿ ಬಾಲು ಅವರ ಹೆಸರನ್ನು ಹೇಳಿದ ಮಾತ್ರಕ್ಕೆ ಪ್ರಾಮಾಣಿಕತನಕ್ಕೆ ಪುರಾವೆಯಾದೀತೆ? ರಮಾನಂದರ ಜವಾಬ್ದಾರಿ ಮುಗಿದು ಹೋಗಬಹುದೆ?

—-ಭಾಗ  ೨—-

ಇನ್ನು ಈ ಪುಸ್ತಕದ ಪ್ರಮುಖ ದೋಷವೆಂದರೆ ಸರಿಸುಮಾರು ಎಲ್ಲಾ ಲೇಖನಗಳಲ್ಲೂ ಎದ್ದು ಕಾಣುವ ಪುನರುಕ್ತಿಗಳು. ಉದಾ: ರಿಲಿಜಿನ್,ಧರ್ಮ,ಸಂಸ್ಕೃತಿ ಮತ್ತು ಗಾಡ್,ಪ್ರವಾದಿ,ಧರ್ಮಗ್ರಂಥ,ಪವಿತ್ರ ಸ್ಥಳ,ವರ್ಷಿಪ್ ಇವುಗಳ ಪ್ರಸ್ತಾಪ. ಈ ಪುಸ್ತಕ ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಾಗಿರುವುದರಿಂದ ಓದುಗರಿಗೆ ಅನುಕೂಲವಾಗಲೆಂದು ಪ್ರತಿವಾರ ಈ ಅಂಶಗಳನ್ನು ಜ್ಞಾಪಿಸುವುದು ಅವಶ್ಯವಾಗಿರಬಹುದಾದರೂ ಪುಸ್ತಕ ಪ್ರಕಟಿಸುವಾಗ ಪುನರುಕ್ತಿಗಳನ್ನು ಆದಷ್ಟೂ ತಪ್ಪಿಸಬಹುದಾಗಿತ್ತು.

ರಿಲಿಜನ್ನಿನಲ್ಲಿ ಬದುಕುವವನಿಗೆ ತಿಳುವಳಿಕೆ ಹಾಗೂ ಜ್ಞಾನವೇ ಮುಖ್ಯ. ಧರ್ಮದಲ್ಲಿ ಬದುಕುವವರಿಗೆ ಅನುಭವ ಮುಖ್ಯ(ಪುಟ ೧೭) ಎಂಬ ವಾಕ್ಯ ಸಂದಿಗ್ಧವಾಗಿದೆ. ಏಕೆಂದರೆ ಧರ್ಮಕ್ಕೆ ಅಥವಾ ಅನುಭವಕ್ಕೆ ತಿಳುವಳಿಕೆ ಮತ್ತು ಜ್ಞಾನ ವಿರೋಧಿಯೇ?ವರ್ಜ್ಯವೆ?

ಶ್ರಮಣ ಮತ್ತು ಬ್ರಾಹ್ಮಣ ಎಂಬ ಎರಡು ಸಂಪ್ರದಾಯಗಳಲ್ಲಿ ಶ್ರಮಣ ಗುಂಪು ಜೈನ ಸಂಪ್ರದಾಯವಾಗಿ ಬೆಳೆದು ಬಂತು ಹಾಗೂ ಅನಂತರದಲ್ಲಿ ಬೌದ್ಧ ಸಂಪ್ರದಾಯವಾಗಿ ಬೆಳೆಯಿತು(ಪುಟ ೧೦೦). ಈ ವಾಕ್ಯಗಳನ್ನು ಓದಿದರೆ ಜೈನ ಸಂಪ್ರದಾಯ ಬೌದ್ಧ ಸಂಪ್ರದಾಯವಾಗಿ ಪರಿವರ್ತನೆ ಆಯಿತೆಂದು ಅರ್ಥ ಬರುತ್ತದಲ್ಲವೆ? ಅಂದರೆ ಕ್ರಮೇಣ ಜೈನ ಸಂಪ್ರದಾಯ ಇಲ್ಲವಾಗುತ್ತಾ ಬಂತು! ಆದರೆ ಬಾಲು ಅವರ ಸ್ಮೃತಿ-ವಿಸ್ಮೃತಿ ಗ್ರಂಥದ ಪುಟ ೨೫೨ರಲ್ಲಿ “ಈ ಗುಂಪಿನಿಂದ ಆಜೀವಿಕರು(ಅಂದರೆ ಶ್ರಮಣರು) ಜೈನ ಸಂಪ್ರದಾಯ ಮತ್ತು ಬಹಳ ನಂತರ ಬೌದ್ಧ ಸಂಪ್ರದಾಯಗಳು ಬೆಳೆದವು “ಎಂದಿದೆ. ಅಂದರೆ ಎರಡೂ ಸಂಪ್ರದಾಯಗಳು ಅಸ್ತಿತ್ವದಲ್ಲಿವೆ ಎಂಬ ಅರ್ಥ ಅಲ್ಲವೆ? ಆದರೆ ರಮಾನಂದರು ಜೈನ ಸಂಪ್ರದಾಯವನ್ನೇ ಹೈಜಾಕ್ ಮಾಡಿಸಿ ಬೌದ್ಧ ಸಂಪ್ರದಾಯದಲ್ಲಿ ವಿಲೀನಗೊಳಿಸಿ ಬಿಟ್ಟಿದ್ದಾರೆ!

ಕೊನೆಯದಾಗಿ,ನಮಗೆ ನಾವೇ ಪರಕೀಯರು ಪುಸ್ತಕಕ್ಕೆ ಹಿನ್ನಲೆ ಬರೆದಿರುವ ಡಾ।। ರಾಜಾರಾಮ ಹೆಗಡೆಯವರು ಹೇಳಿರುವಂತೆ ಸ್ಮೃತಿ-ವಿಸ್ಮೃತಿ:ಭಾರತೀಯ ಸಂಸ್ಕೃತಿ ಎಂಬ ಬಾಲಗಂಗಾಧರರ(ಬಾಲು) ಗ್ರಂಥದಲ್ಲಿರುವ ವಿಚಾರಗಳನ್ನು ಸಾಮಾನ್ಯ ಓದುಗರಿಗೆ ತಲುಪಿಸಬೇಕಾದರೆ ಇನ್ನೂ ಒಂದು ಹಂತವನ್ನು ಅದು ಇಳಿಯಬೇಕು(ಪುಟ xx ). ಅಂತಹ ಒಂದು ಕೈಪಿಡಿಯನ್ನು(ಎಡಿಟೆಡ್ ವರ್ಷನ್)ಬಾಲು ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವ ರಾಜಾರಾಮ ಹೆಗಡೆ ಅವರೇ ಮಾಡಿದರೆ ಅತ್ಯುತ್ತಮ ಎಂದು ನನ್ನ ಅಭಿಪ್ರಾಯ. ಏಕೆಂದರೆ ಹೆಗಡೆಯವರು ಆಶಿಸಿರುವಂತೆ ರಮಾನಂದರ ಈ ಪುಸ್ತಕ ಆ ನಿಟ್ಟಿನಲ್ಲಿ ವಿಫಲವಾಗಿದೆಯೆಂದು ವಿಷಾದದಿಂದ ಹೇಳಬೇಕಾಗಿದೆ.

ಚಿತ್ರ ಕೃಪೆ : ರಮಾನಂದ ಐನಕೈ

5 ಟಿಪ್ಪಣಿಗಳು Post a comment
 1. Ramananda Ainkai
  ಆಗಸ್ಟ್ 22 2013

  ಧನ್ಯವಾದಗಳು. ನನ್ನ ದೋಷಗಳನ್ನು ತೋರಿಸಿದ್ದಕ್ಕಿಂತ ಮುಖ್ಯವಾಗಿ ಪುಸ್ತಕ ಓದಿದ್ದಕ್ಕಾಗಿ. ನನ್ನ ತಿಳುವಳಿಕೆಯ ಮಟ್ಟದಲ್ಲಿ ಬರೆದಿದ್ದೇನೆ. ತಮಗೆ ಸಾಧ್ಯವಾದರೆ ಇನ್ನೂ ವಿವರವಾಗಿ ಬರೆಯಿರಿ. ನನ್ನ ಬಗ್ಗೆ ನನಗೆ ವಿಶ್ವಾಸವಿಲ್ಲದ ಕಾರಣಕ್ಕಾಗೇ ನಾನು ಬಾಲೂರವರ ವಿಚಾರಧಾರೆ ಆಧಾರಿತ ಎಂದು ಹಾಕಿಕೊಂಡಿಲ್ಲ. ಬಾಲೂರವರೂ ಕೂಡ ಹಾಕಬೇಡ ಎಂದಿದ್ದರು. ಇದರಲ್ಲಿ ಏನಾದರೂ ನ್ಯೂನ್ಯತೆಗಳಿದ್ದರೆ ಅದು ನನ್ನ ಅನುಭವದ್ದು, ಬಾಲೂರವರ ಸಿದ್ಧಾಂತದ್ದಲ್ಲ. ನಾನು ಅಕಾಡೆಮಿಕ್ ಮನುಷ್ಯನಲ್ಲ. ಒಬ್ಬ ಸಾಮಾನ್ಯ ರೈತ. ವಿಮ್ಮ ವಿಮಶೆ‍ಯನ್ನು
  ಸ್ವಾಗತ್ತಿಸುತ್ತೇನೆ

  ಉತ್ತರ
 2. Ramananda Ainkai
  ಆಗಸ್ಟ್ 22 2013

  ನನ್ನ ಅನುಭವವನ್ನು ಪ್ರಶ್ನಿಸಿದ್ದೀರಿ. ನಿಮ್ಮ ಪ್ರಕಾರ ಅನುಭವ ಅಂದರೆ ಏನು? ಪುಸ್ತಕದ ತುಂಬೆಲ್ಲ ಎಷ್ಟೊಂದು ಅನುಭವದ ುದಾಹರಣೆ ಕೊಟ್ಟಿದ್ದೇನೆ. ಬಹುಶಹ ಸರಳವಾದ ಭಾಷೆ ನಿಮಗೆ ಹಿಡಿಸಿಲ್ಲ ಅಂತ ಕಾಣುತ್ತದೆ, ಕ್ಷಮಿಸಿ, ಅಥವಾಗದ ಹಾಗೆ ನನಗೆ ಬರೆಯಲು ಬರುವುದಿಲ್ಲ. ಹಾಗೆ ಬರೆದಿದ್ದರೆ ಬಹುಶಹ ನಿಮಗೆ ತಪ್ಪುಗಳೆ ಕಾಣುತ್ತಿರಲಿಲ್ಲ. ಪುಸ್ತಕ ಚನ್ನಾಗಿಲ್ಲ ಅಂತ ಹೇಳಿ. ಅದು ನಿಮ್ಮ ಸ್ವಾತಂತ್ರ್ಯ. ಅನುಭವಕ್ಕೆ ಕೈಹಾಕಬೇಡಿ. ನೀವೇ ಒಂದು ಪುಸ್ತಕ ಬರೆದು ತೋರಿಸಿ. ಅನುಭವವನ್ನು ಅನುಭವಿಸಿ ನೋಡಿದರೇ ಚೆನ್ನ.

  ಉತ್ತರ
 3. M A Sriranga
  ಆಗಸ್ಟ್ 23 2013

  I think I need not defend what I have written about your book. If you take my views very personally it is not my fault. Instead of giving reply to two doubts which I have raised in the 2nd and 3rd paras of 2nd part my article you are challenging me to write a book. Ok. I take this as your blessings and try to write If possible. Thanks for responding to my article.

  ಉತ್ತರ
 4. rajaram hegde
  ಆಗಸ್ಟ್ 28 2013

  ರಮಾನಂದ ಹಾಗೂ ಶ್ರೀರಂಗರ ಸಂಭಾಷಣೆಯನ್ನು ನೋಡಿ ಈ ಪ್ರತಿಕ್ರಿಯೆ. ನಾನು ಕೆಲವು ದಿನ ನಿಲುಮೆಗೆ ಭೇಟಿ ನೀಡಲು ಆಗಿರಲಿಲ್ನ.
  ಬೌದ್ಧ, ಜೈನ ಇತ್ಯಾದಿಗಳೆಲ್ಲ ಶ್ರಮಣ ಸಂಪ್ರದಾಯಕ್ಕೆ ಸೇರಿವೆ. ಶ್ರಮಣ ಸಂಪ್ರದಾಯವು ಈ ಎರಡೂ ರೂಪಗಳನ್ನು ತಳೆದಿದೆ ಎಂಬರ್ಥದಲ್ಲೇ ಬಾಲು ಕೂಡ ಹೇಳುವುದು ಹೌದು. ಆದರೂ ಬೌದ್ಧರಿಗಿಂತ ಜೈನರು ಪ್ರಾಚೀನತೆಯನ್ನು ಹೇಳಿಕೊಳ್ಳುತ್ತಾರೆ. (ಅದು ಸರಿಯೊ ಎಂದು ಹೇಳುವುದು ಕಷ್ಟವೇ. ) ರಮಾನಂದರ ತಲೆಯಲ್ಲಿ ಈ ಇತಿಹಾಸ ಇದ್ದಿರಬಹುದಾದ ಸಾಧ್ಯತೆಯಿದೆ. ( ಓದುಗರ ಸಾಮಾನ್ಯಜ್ಞಾನಕ್ಕೂ ಅದು ಸಮಸ್ಯೆಯನ್ನೊಡ್ಡಲಾರದು).ಹಾಗಾಗಿ ಶ್ರಮಣ ಸಂಪ್ರದಾಯವು ಮೊದಲು ಜೈನ ರೂಪವನ್ನು ತಳೆದು ನಂತರ ಬೌದ್ಧರೂಪವನ್ನು ತಳೆಯಿತು ಎಂಬುದಾಗಿ ಬರೆದಿದ್ದಾರೆ ಅನಿಸುತ್ತದೆ. ಅದರರ್ಥ ಬೌದ್ಧರ ಉಗಮದಿಂದ ಜೈನ ಸಂಪ್ರದಾಯ ಅಳಿಯಿತು ಅಂತ ಹೇಗೆ ಅರ್ಥ ಹೊರಡುತ್ತದೆ ಎಂಬುದು ನನಗಂತೂ ಸ್ಪಷ್ಟವಾಗಿಲ್ಲ. ಹಾಗಾಗಿ ಹೈಜಾಕಿನ ಕಲ್ಪನೆ ಅತಿಶಯೋಕ್ತಿಯಾಗಿದೆ. ಇಲ್ಲಿ ಬಾಲಗಂಗಾಧರರ ವಿಚಾರಗಳನ್ನು ರಮಾನಂದ ತಮ್ಮ ಭಾಷೆಯಲ್ಲಿ ಇಡುವಾಗ ಈ ಪಲ್ಲಟಗಳಾಗಿವೆ. ಈ ನಿದಿರ್ಷ್ಟ ಕಾರಣಕ್ಕಾಗಿಯೇ ಇದು ಬಾಲಗಂಗಾಧರ ಅನುವಾದವಲ್ಲ. ಆದರೆ ಈ ಲೇಖನಗಳು ಬಾಲಗಂಗಾಧರರ ಅನುವಾದವಾಗಲೀ, ಸರಳೀಕರಣವಾಗಲೀ ತಲುಪಲಾಗದ ಬೇರೆಯದೇ ಪ್ರಜ್ಞಾ- ಸ್ತರದ ಜನರ ಕುತೂಹಲವನ್ನು ಕೆಣಕುತ್ತವೆ ಎಂಬುದನ್ನಂತೂ ನಾನು ಕಂಡುಕೊಂಡಿದ್ದೇನೆ. ಬಹುಶಃ ಹಾಗೆ ಕುತೂಹಲವನ್ನು ಹುಟ್ಟಿಸಿಕೊಂಡವರು ಬಾಲು ಅವರು ಏನನ್ನು ಹೇಳುತ್ತಾರೆ ಎಂಬುದನ್ನು ತಿಳಿಯಲು ಅವರ ಅನುವಾದಗಳಿಗೆ ಹೊರಳಬಹುದು. ಹಾಗೂ ಅನುವಾದಗಳನ್ನು ಗ್ರಹಿಸಲು ಈ ಲೇಖನಗಳು ಖಂಡಿತವಾಗಿಯೂ ಭೂಮಿಕೆಯನ್ನು ನಿರ್ಮಿಸುತ್ತವೆ. ಹಾಗೆ ಓದುವ ಪ್ರಕ್ರಿಯೆಯಲ್ಲಿ ಯಾರಾದರೂ ರಮಾನಂದರ ಲೇಖನಗಳ ಮಿತಿಯನ್ನೂ ಅರಿಯಬಹುದು. ಆದರೆ ಆಕಾರಣಕ್ಕಾಗಿ ಅವುಗಳ ಮಹತ್ವವನ್ನು ಅಲ್ಲಗಳೆಯಬೇಕಾಗಿಲ್ಲ ಹಾಗೂ ದೋಷಗಳನ್ನೂ ಅಲ್ಲಗಳೆಯಬೇಕಾಗಿಲ್ಲ. ಇದು ಬೌದ್ಧಿಕ ಚರ್ಚೆಯೊಂದರ ಸಂವಹನದ ಕುರಿತಾದ ಸವಾಲನ್ನು ಯಾವ ಯಾವ ರೂಪದಲ್ಲಿ ಎದುರಿಸಬಹುದು ಎಂಬುದರ ಕುರಿತು ನಮಗೆ ಸ್ವ-ಕಲಿಕೆಯಾಗಿದೆ. ಹಾಗೆಯೇ ಬಾಲು ಅವರ ವಿಚಾರ ಲೋಕಕ್ಕೆ ನೇರವಾಗಿ ಪ್ರವೇಶಿಸಲು ಪಕ್ಕಾಗದ ಹಾಗೂ ಸಾಧ್ಯವಾಗದವರಿಗೂ ಕೂಡ ಸ್ವ-ಕಲಿಕೆಯಾಗಿದೆ. ರಮಾನಂದರಿಗೂ ಇದು ಸ್ವ-ಕಲಿಕೆಯಾಗಿದೆ. ಕಲಿಕೆ ಎಂದರೆ ತಪ್ಪುಗಳನ್ನು ಮಾಡಿ ತಿದ್ದಿಕೊಳ್ಳುವ ಕೆಲಸ ತಾನೆ?
  ಈ ಪ್ರಕ್ರಿಯೆಯಲ್ಲಿ ಶ್ರೀರಂಗರ ವಿಮರ್ಶೆಯನ್ನು ಕೂಡ ಬೇರೆ ಪಾತಳಿಯಲ್ಲಿಟ್ಟು ಯತಾರ್ಥವಾಗಿಯೇ ನೋಡಬಹುದು. ಹಾಗೆಯೇ ಶ್ರೀರಂಗರು ಕೂಡ ರಮಾನಂದರ ಲೇಖನಗಳ ಇತಿಮಿತಿಗಳನ್ನು ಈ ಮೇಲಿನ ಹಿನ್ನೆಲೆಯಿಂದ ನೋಡಿದರೆ ಅವರಿಗೂ ಅವುಗಳ ಮಹತ್ವ ಮನದಟ್ಟಾಗಬಹುದು. ನಾನು ಬಾಲು ಅವರ ವಿಚಾರಗಳನ್ನು ಇನ್ನೂ ಯತಾರ್ಥವಾಗಿ ಸರಳೀಕರಿಸಬಹುದು, ಆದರೆ ಅಷ್ಟು ಮಾಡಿದರೂ ರಮಾನಂದರ ಲೇಖನಗಳು ತಲುಪುವೆಡೆ ಇವು ತಲುಪುತ್ತವೆ ಎಂಬ ಭರವಸೆ ನನಗಿನ್ನೂ ಹುಟ್ಟಿಲ್ಲ. ಏಕೆ ‘ಅದರ ಬದಲಾಗಿ ಇದು’ ಎಂಬ ಪರಿಭಾಷೆಯಲ್ಲಿ ನಾವು ಮಾತನಾಡಬೇಕು? ‘ಅದರ ಜೊತೆಗೆ ಇದು’ ಎಂಬ ಧೋರಣೆಯನ್ನಿಟ್ಟುಕೊಂಡರೆ ನಮ್ಮ ಒಟ್ಟಾರೆ ಕೆಲಸಕ್ಕೆ ಶ್ರೇಯಸ್ಸು ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಶ್ರೀರಂಗರೇ ಪುಸ್ತಕ ಬರೆಯಲಿ, ರಾಜಾರಾಮ ಹೆಗಡೆಯವರೇ ಬರೆಯಲಿ ಎಂಬ ಹೇಳಿಕೆಗಳು ಬೇಡ. ಎಲ್ಲರೂ ಬರೆಯೋಣ. ಆದರೆ ನಮ್ಮ ಮಿತಿಗಳನ್ನು ಹಾಗೂ ತಪ್ಪುಗಳನ್ನು ಮೀರಲೂ ಪ್ರಯತ್ನಿಸೋಣ.
  ಇನ್ನು ತಿಳುವಳಿಕೆ, ಅನುಭವ, ರಿಲಿಜನ್ನು, ಧರ್ಮ ಇತ್ಯಾದಿಗಳ ಕುರಿತು. ರಮಾನಂದ ಈ ಪ್ರಶ್ನೆಯನ್ನು ಸರಿಯಾಗಿ ಗ್ರಹಿಸದೇ ವಯುಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಆದರೆ ಅವು ತೀರಾ ಮೂಲಭೂತ ಪ್ರಶ್ನೆಗಳೇ ಎಂಬುದನ್ನು ರಮಾನಂದ ಗಮನಿಸಬೇಕು. ರಮಾನಂದರ ಪುಸ್ತಕ ಈ ಪ್ರಶ್ನೆಗಳನ್ನು ಎತ್ತುವಂತೆ ಮಾಡಲಿಕ್ಕೆ ಇದೆಯೇ ಹೊರತೂ ಉತ್ತರಿಸಲಿಕ್ಕಲ್ಲ. ಶ್ರೀರಂಗರು ಎತ್ತಿದ ಪ್ರಶ್ನೆಗಳಿಗೆ ಅವರೇ ಬಾಲು ಅವರ ಕೃತಿಗಳನ್ನು ಓದಿ ಉತ್ತರ ಹುಡುಕಿಕೊಳ್ಳುವುದೊಂದೇ ಮಾರ್ಗ. ಸಾಧ್ಯವಾದರೆ ಇಂಗ್ಲೀಷಿನಲ್ಲೇ ಓದಿ. ಇದು ಭಾಷಾಂತರದ ಮಿತಿ
  ಕೂಡಾ ಆಗಿದೆ.

  ಉತ್ತರ
 5. M A Sriranga
  ಸೆಪ್ಟೆಂ 1 2013

  ನನ್ನ ಲೇಖನದಿಂದ ಶ್ರೀ ರಮಾನಂದ ಮತ್ತು ಶ್ರೀ ರಾಜಾರಾಮ ಹೆಗಡೆ ಅವರ ಭಾವನೆಗಳಿಗೆ ಧಕ್ಕೆಯಾಗಿದ್ದಕ್ಕೆ ವಿಷಾದಿಸುತ್ತೇನೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments