ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 30, 2013

1

ಅನುಭವಕ್ಕೆ ಮುಖಾಮುಖಿಯಾಗಿಸುವ ವಿಶೇಷ ಪುಸ್ತಕ

by ನಿಲುಮೆ

– ಡಂಕಿನ್ ಝಳಕಿ, ಸಂಶೋಧಕರು.

  ಶಿವಕುಮಾರ, ಸಂಶೋಧನಾ ವಿದ್ಯಾರ್ಥಿ.

ನಮಗೆ ನಾವೇ ಪರಕೀಯರು‘ಗ್ರಾಮೀಣ ಭಾರತದ ಸಾಮಾನ್ಯ ಜಗತ್ತಿನಲ್ಲಿ ಅನುಭವದೊಂದಿಗೆ ರೂಪತಾಳಿದ ಅಪರೂಪದ ಕೃತಿ’ : ನಮಗೆ ನಾವೇ ಪರಕೀಯರು

ಇತ್ತೀಚೆಗೆ ಕರ್ನಾಟಕದಲ್ಲಿ ಎಸ್.ಎನ್. ಬಾಲಗಂಗಾಧರರ (ಬಾಲುರವರ) ವಿಚಾರಧಾರೆಯು ಒಂದು ಸಂಶೋಧನಾ ಸಂಪ್ರದಾಯವಾಗಿ, ಒಂದು ಚಳುವಳಿಯಾಗಿ ಬೆಳೆಯುತ್ತಿರುವುದು ನಮಗೆ ತಿಳಿಯದ ಹೊಸ ವಿಚಾರವೇನಲ್ಲ. 2002ರಲ್ಲಿ ವಚನಗಳ ಕುರಿತ ಒಂದು ಕಾರ್ಯಾಗಾರವಾಗಿ ಕರ್ನಾಟಕಕ್ಕೆ ಕಾಲಿಟ್ಟ ಈ ವಿಚಾರಧಾರೆ ಕೇವಲ ಹತ್ತು ವರ್ಷಗಳಲ್ಲಿ ಎರಡು ಸಂಶೋಧನಾ ಸಂಸ್ಥೆಗಳಾಗಿ, ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಯೋಜನೆಗಳಾಗಿ ಬೆಳೆದು ನಿಂತಿದೆ. ಈ ವಿಚಾರಧಾರೆಯನ್ನು ಕನ್ನಡಕ್ಕೆ ಪರಿಚಯಿಸುವ ಹಲವು ಕೃತಿಗಳೂ ಈಗಾಗಲೇ ಪ್ರಕಟವಾಗಿವೆ. ರಾಷ್ಟ್ರೋತ್ಥಾನ ಸಾಹಿತ್ಯದವರು ಪ್ರಕಟಿಸಿರುವ ರಮಾನಂದ ಐನಕೈಯವರÀ ನಮಗೆ ನಾವೇ ಪರಕೀಯರು (2012) ಈ ಸಾಲಿಗೆ ಸೇರುವ ಒಂದು ವಿಶೇಷ ಕೃತಿ.

ಈ ಕೃತಿಯನ್ನು ಎರಡು ಪ್ರಮುಖ ಕಾರಣಗಳಿಗಾಗಿ ವಿಶೇಷ ಕೃತಿಯೆನ್ನಬಹುದು. ಇದುವರೆಗೂ ಬಾಲುರವರ ವಿಚಾರಧಾರೆಯ ಕುರಿತು ಪುಸ್ತಕರೂಪದಲ್ಲಿ ಬಂದ ಕೃತಿಗಳೆಲ್ಲಾ ಬಾಲಗಂಗಾಧರರ ಆಂಗ್ಲ ಕೃತಿಗಳ ಕನ್ನಡ ಅವತರಣಿಕೆಗಳೇ. ಈ ಕೃತಿ ಅವರ ವಿಚಾರಗಳನ್ನಿಟ್ಟುಕೊಂಡು ಕನ್ನಡದಲ್ಲಿ ಬಂದ ಮೊದಲ ಸ್ವತಂತ್ರ ಕೃತಿ. ಇದು ಈ ಕೃತಿಯ ಮೊದಲನೆಯ ವಿಶೇಷತೆ. ಇದರ ಎರಡನೆಯ ವಿಶೇಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಪ್ರದಾಯ ಮತ್ತು ಚಳುವಳಿಗಳ ಕುರಿತು ಒಂದು ವಿಚಾರವನ್ನು ನಾವು ಮನಗಾಣಬೇಕು. ಸಂಪ್ರದಾಯ ಮತ್ತು ಚಳುವಳಿಗಳ ಯಶಸ್ಸು ಅದು ಹುಟ್ಟುಹಾಕುವ ಅನುಯಾಯಿಗಳ ಸಂಖ್ಯೆ ಮತ್ತು ಪ್ರಕಟಿಸುವ ಕೃತಿಗಳ ಸಂಖ್ಯೆಯ ಮೇಲೆ ನಿರ್ಧಾರವಾಗುವುದಿಲ್ಲ. ಉದಾಹರಣೆಗೆ ವಚನ ಸಂಪ್ರದಾಯದ ಮತ್ತು ಚಳುವಳಿಯ ಯಶಸ್ಸು ಅದು ಹುಟ್ಟುಹಾಕಿದ (ಇಂದು ನಮಗೆ ತಿಳಿದಿರುವ ಅಂಕಿಸಂಖೆಗಳ ಆಧಾರದ ಮೇಲೆ ಹೇಳುವುದಾದರೆ) ಸುಮಾರು 200 ವಚನಕಾರರ ಮತ್ತು 21500 ವಚನಗಳ ಆಧಾರದ ಮೇಲೆ ನಾವು ಅಳೆಯುವುದಿಲ್ಲ್ಲ. ಒಂದು ಸಂಪ್ರದಾಯ, ಅನುಭವಗಳ ಕುರಿತು ಚಿಂತಿಸುವ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕಬೇಕು. ಆದರೆ ಎರಡು ವಸಾಹತುಶಾಹಿಗಳ ಬಳಿಕ, 21ನೇ ಶತಮಾನದಲ್ಲಿ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕುವ ಮೊದಲು, ಒಂದು ಸಂಸ್ಕøತಿಯಾಗಿ ನಾವು (ಭಾರತೀಯರು) ಮರೆತಿರುವ ನಮ್ಮ ಅನುಭವಗಳನ್ನು ಕುರಿತು ಚಿಂತಿಸುವ ಪ್ರಕ್ರಿಯೆಯನ್ನೇ ಮತ್ತೊಮ್ಮೆ ಪುನರುಜ್ಜೀವನಗೊಳಿಸಬೇಕಾಗುತ್ತದೆ. ಇದು ಬಾಲುರವರ ಸಂಶೋಧನೆಯ ಪ್ರಮುಖ ಉದ್ದೇಶ. ಈ ಪ್ರಕ್ರಿಯೆಯನ್ನು ಅವರು ಪ್ರತ್ಯಭಿಜ್ಞಾನ ಎಂದು ಕರೆಯುತ್ತಾರೆ. ಒಂದು ಸಂಸ್ಕøತಿಯಾಗಿ ನಾವು ಕಲಿತು ಮರೆತಿರುವ ‘ಅನುಭವಗಳನ್ನು ಕುರಿತು ಚಿಂತಿಸುವ’ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವ ಈ ಪ್ರಕ್ರಿಯೆ ಒಂದು ಅಕಾಡೆಮಿಕ್ ಯೋಜನೆಯಷ್ಟೇ ಅಲ್ಲ, ಇದೊಂದು ಸಾಂಸ್ಕøತಿಕ ಚಳುವಳಿ ಕೂಡ. ಅಂದರೆ ಇದು ಎಲ್ಲಿ ಮತ್ತು ಹೇಗೆ ಆರಂಭವಾದರೂ ಸರಿ, ಅಂತಿಮವಾಗಿ ತನ್ನ ನಿತ್ಯದ ಸಾಮಾಜಿಕ ಜೀವನವನ್ನು ಇನ್ನಷ್ಟು ಅರ್ಥವತ್ತಾಗಿ ಬಾಳಲು ಇದರಿಂದ ಪ್ರತಿಯೋರ್ವನಿಗೂ ಸಹಾಯವಾಗಬೇಕು. ಪ್ರಸ್ತುತ ಕೃತಿ ಅಂತಹ ಪ್ರಕ್ರಿಯೆಗೆ ಒಂದು ಅತ್ಯುತ್ತಮ ಉದಾಹರಣೆ. ಅಷ್ಟೇ ಅಲ್ಲ ಅಂತಹ ಪ್ರಕ್ರಿಯೆಗೆ ಪ್ರೇರಣೆಯನ್ನೂ ನೀಡುತ್ತದೆ ಎನ್ನುವುದು ಈ ಕೃತಿಯ ಎರಡನೇ ಮತ್ತು ಅತ್ಯಂತ ಪ್ರಮುಖವಾದ ವಿಶೇಷತೆ.

ಈ ಕೃತಿಯ ಲೇಖಕ ಒಬ್ಬ ಸಾಹಿತಿಯೂ ಅಲ್ಲ, ಪಿ.ಎಚ್.ಡಿ ಮುಗಿಸಿಕೊಂಡು ವಿಶ್ವವಿದ್ಯಾಲಯದಲ್ಲಿ ಭೋದಿಸುತ್ತಿರುವ ಅದ್ಯಾಪಕನೂ ಅಲ್ಲ. ರಮಾನಂದರೇ  ಹೇಳಿಕೊಳ್ಳುವಂತೆ “ಹೈಸ್ಕೂಲು ಮುಗಿಸಿ ಪಿ.ಯು.ಸಿ. ಓದುವಾಗ ನಾನು ಅರ್.ಎಸ್.ಎಸ್ ಕಾರ್ಯಕರ್ತನಾಗಿದ್ದೆ. ಸಮವಸ್ತ್ರಧರಿಸಿ ಶಾಖೆ ನಡೆಸುತ್ತಿದ್ದೆ. ನಂತರ ಡಿಗ್ರಿ ಓದುವಾಗ ಸಾಹಿತ್ಯಾಸಕ್ತಿಯ ಮೂಲಕ ಎಡಪಂಥೀಯ ವಿಚಾರಗಳತ್ತ ಆಕರ್ಷಿತನಾದೆ. ಪತ್ರಿಕೋದ್ಯಮ ಓದಿದೆ, ವರದಿಗಾರನಾದೆ, ಸ್ವಂತ ಪತ್ರಿಕೆ ನಡೆಸಿ ಸಂಪಾದಕನಾದೆ, ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ನನ್ನೊಳಗೆ ಏನೊ ಗೊಂದಲ ಇರುವುದು ಸೂಚಿತವಾಗುತ್ತಿತ್ತು. ಆದರೆ ಅದನ್ನು ತಿಳಿದುಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. … ಒಂದು ಕೃಷಿಭೂಮಿಯನ್ನು ಖರೀದಿಸಿ ಅಜ್ಞಾತವಾಸಕ್ಕೆ ಹೋದೆÉ” (xvi).

ಸಾಮಾಜಿಕ ವಿಷಯಗಳಿಗೆ ತೆರೆದುಕೊಳ್ಳುತ್ತಾ ಹೋದ ಹಾಗೆ ಒಬ್ಬ ವ್ಯಕ್ತಿಗೆ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳು ಈ ಲೇಖಕÀರಿಗೆ ಎದುರಾಗಿವೆ. ಅವರ ಬದುಕಿನ ರೀತಿಗೂ ಮತ್ತು ಪಡೆದ ಶಿಕ್ಷಣಕ್ಕೂ ನಡುವೆ ಇರುವ ಅಂತರ ಇಂತಹ ಗೊಂದಲಗಳನ್ನು ಮತ್ತೂ ಹೆಚ್ಚಿಸಿವೆ. ಇದು ಈ ಲೇಖಕರೊಬ್ಬರ ಸಮಸ್ಯೆ ಮಾತ್ರವಲ್ಲ. ಕಳೆದ ನೂರು ವರ್ಷಗಳಲ್ಲಿ ಬಹುಷಃ ಭಾರತೀಯರೆಲ್ಲರಿಗೂ ಎದುರಾಗಿರುವ ಸಮಸ್ಯೆ ಇದು. ಇಂತಹ ಗೊಂದಲಗಳಿಗೆ ಬಾಲಗಂಗಾಧರರ ಸಿದ್ಧಾಂತದಲ್ಲಿ ಉತ್ತರ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಇವÀರು ಅಕಾಡೆಮಿಕ್ ಪ್ರಶ್ನೆಯಾಗಿ ಎತ್ತುವುದಿಲ್ಲ, ಬದಲಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತಾರೆ: “ನಾನೇನೋ ಬರೆದಿದ್ದೇನೆ ಎನ್ನುವುದಕ್ಕಿಂತ ಇಲ್ಲಿನ ಬರಹಗಳ ಮೂಲಕ ಹೊಸ ವಿಚಾರವೊಂದನ್ನು ಇನ್ನೂ ಹೆಚ್ಚು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ” (xvi-xvii) ವಿನಮೃವಾಗಿ ಹೇಳಿಕೊಳ್ಳುತ್ತಾರೆ.

ಉದಾಹರಣೆಯಾಗಿ “ಸಂಪ್ರದಾಯಗಳ ಸುತ್ತ…” ಲೇಖನದಲ್ಲಿ ಇವರು ತಾವು ನಿತ್ಯವೂ ಎದುರಿಸುತ್ತಾ ಬಂದ ಸಮಸ್ಯೆಯೊಂದನ್ನು ಚರ್ಚೆಗೆತ್ತುಕೊಳ್ಳುವ ಈ ಪರಿಯನ್ನು ನೋಡಿ: “ವಿದ್ಯಾವಂತರೆನಿಸಿಕೊಂಡ ನಮಗೆಲ್ಲ ಒಂದು ತೊಂದರೆ ಇದೆ. ಅದೇನೆಂದರೆ ನಮ್ಮ ಜೀವನಶೈಲಿಯೊಂದಿಗೆ ಅನಿವಾರ್ಯವಾಗಿ ಪಾಲಿಸಲೇಬೇಕಾದ ಸಂಪ್ರದಾಯಗಳು. ಇದನ್ನು ಪಾಲಿಸದಿದ್ದರೆ ನಾವು ಸಮುದಾಯದಿಂದ ಹೊರಗುಳಿಯತ್ತೇವೆ. ಕೆಲವೊಮ್ಮೆ ಮಾನಸಿಕವಾಗಿ ನಮ್ಮೊಳಗೇ ಅಭದ್ರತೆಗೊಳಗಾಗುತ್ತೇವೆ”. ಕಾಲೇಜಿನ ಮೆಟ್ಟಿಲು ಹತ್ತುತ್ತಲೇ, ದೇವಸ್ಥಾನಕ್ಕೆ ಹೋಗುವುದರ ಅಥವಾ ಇನ್ಯಾವುದೇ ಸಾಂಪ್ರದಾಯಿಕ ಆಚರಣೆಗಳ ಕುರಿತು ಈ ರೀತಿಯ ಸಮಸ್ಯೆಗಳನ್ನು ನಾವು ಎದುರಿಸುತ್ತಲೇ ಬಂದಿದ್ದೇವೆ. ಒಂದೆಡೆ ಆಚರಣೆಗಳನ್ನು ಪಾಲಿಸುವ ಒತ್ತಾಯ, ಆದರೆ ಇನ್ನೊಂದೆಡೆ “ಸಂಪ್ರದಾಯವನ್ನು ಪಾಲಿಸಲು ನಮ್ಮ ವೈಚಾರಿಕತೆ ಅನುವು ಮಾಡಿಕೊಡುವುದಿಲ್ಲ. ನಾವು ಭೌತಿಕವಾಗಿ ಬದುಕುತ್ತಿರುವುದು ಸಂಪ್ರದಾಯದ ಸಮಾಜದಲ್ಲಿ. ಮಾನಸಿಕವಾಗಿ ಬದುಕುತ್ತಿರುವುÀದು ವೈಚಾರಿಕತೆಯೆಂಬ ಭ್ರಮೆಯಲ್ಲಿ. ಯಾಕೆ ಹೀಗಾಗುತ್ತಿದೆ? ನಮ್ಮ ಸಂಪ್ರದಾಯಗಳಲ್ಲಿ ನಮಗೇಕೆ ಅರ್ಥ ಕಾಣುತ್ತಿಲ್ಲ?”. ಹೀಗೆ ತಮ್ಮ ನಿತ್ಯದ ಸಮಸ್ಯೆಯ ಕುರಿತು ಆರಂಭವಾಗುವ ಮಾತು ಧತ್ತನೆ ದೊಡ್ಡ ಸವಾಲೊಂದನ್ನು ನಮ್ಮ ಮುಂದಿಟ್ಟುಬಿಡುತ್ತದೆ: “ಸ್ವತಂತ್ರ ಭಾರತದ 60 ವರ್ಷ ಕಳೆದರೂ ಇಂಥ ಗೊಂದಲಗಳಿಂದ ಮುಕ್ತರಾಗದೇ ಇದ್ದದ್ದು ನಿಜಕ್ಕೂ ಗಂಭೀರವಾಸ್ತವ”. ವಸಾಹತೋತ್ತರ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ನಂಬಿಕೊಂಡು ಅದರ ಕುರಿತು ಮಾತನಾಡುತ್ತಾ ಬಂದಿರುವ ಬೌದ್ಧಿಕಲೋಕ ಕೇಳಿಕೊಳ್ಳಬೇಕಾದ ಸವಾಲು ಇದು. ಇವರ ಈ ಸಮಸ್ಯೆಗೆ ಉತ್ತರ ಸಿಗುವುದು ಬಾಲಗಂಗಾಧರರ ಒಂದು ಒಳನೋಟದಲ್ಲಿ,  ಹದಿನೆಂಟು, ಹತ್ತೊಂಬತ್ತನೇ ಶತಮಾನದಲ್ಲಿ, ಯುರೋಪಿಯನ್ನರು ನಮ್ಮನ್ನು “ಮೂರ್ತಿಪೂಜೆ ಮಾಡುವವರು ನೀತಿಭ್ರಷ್ಟರು, ಮೂಢನಂಬಿಕೆಯವರು … ಹಾಗಾಗಿ ಭಾರತೀಯರ ಸಂಪ್ರದಾಯಗಳೆಲ್ಲವೂ ಭ್ರಷ್ಟ ಧಾರ್ಮಿಕ ಆಚರಣೆಗಳೆಂಬ”  ರೀತಿಯಲ್ಲಿ ಕಂಡು ಹೇಳಿದ ಅದೇ ವಿಚಾರಗಳನ್ನು ನಾವು ಇಂದಿಗೂ ಶಿಸ್ತುಬದ್ಧವಾಗಿ ನಮ್ಮದೇ ಆಚರಣೆಗಳ ಕುರಿತು ಗಿಳಿಪಾಟ ಒಪ್ಪಿಸುತ್ತಾ ಬಂದಿದ್ದೇವೆ. ಹೀಗೆ ಆರಂಭವಾಗುವ ಮಂಥನ ಹೊಸ ಪ್ರಶ್ನೆಯನ್ನು, ಉತ್ತರವನ್ನೂ ಪಡೆದುಕೊಳ್ಳುತ್ತದೆ: “ಎಷ್ಟೋ ವಿಜ್ನಾನಿಗಳು ದೇವರ ಫೋಟೋ ಪೂಜಿಸುವುದು, ಹಣೆಗೆ ಕುಂಕುಮ ಇಡುವುದು ಇತ್ಯಾದಿಗಳನ್ನು ನೋಡುತ್ತೇವೆ. ಅಂದಾಕ್ಷಣ ಅವರು ವಿಜ್ನಾನಿಗಳಲ್ಲ. ಅವರಿಗಿಂತ ಸಂಪ್ರದಾಯಬಿಟ್ಟವರೇ ವಿಜ್ನಾನಿಗಳೆಂದು ಒಪ್ಪಿಕೊಳ್ಳಲು ಸಾಧ್ಯವೇ? … ಶಾಸ್ತ್ರೋಕ್ತ ಪೂಜೆ ಮಾಡಿ ರಾಕೆಟ್ ಹಾರಿಸಿದರೆ ಪೂಜೆ ಮಾಡಿದ್ದರಿಂದ ರಾಕೆಟ್ ಹಾರಿತು ಎಂಬುದು ಎಷ್ಟು ಹಾಸ್ಯಾಸ್ಪದವೋ ಪೂಜೆ ಮಾಡುವುದರಿಂದ ರಾಕೆಟ್ ಹಾರುವುದಿಲ್ಲ ಎಂಬ ವಾದವೂ ಅಷ್ಟೇ ಹಾಸ್ಯಾಸ್ಪದ. ಇಲ್ಲಿ ಎಂಥವನಿಗೂ ಸ್ಪಷ್ಟವಾಗುತ್ತದೆ. ರಾಕೆಟ್‍ಗೆ ಪೂಜೆ ಮಾಡುವುದು ನಮ್ಮ ಸಂಪ್ರದಾಯ ಹಾಗೂ ನಂಬಿಕೆ. ರಾಕೆಟ್ ಹಾರುವುದು ವಿಜ್ನಾನದಿಂದ. ಹೀಗಿದ್ದಾಗ ಮುಜುಗರ ಪಡುವುದು ಏನಿದೆ? ಹಾಗಾಗಿ ಸಂಪ್ರದಾಯ ಬೇರೆ, ವಿಜ್ನಾನ ಬೇರೆ, ವೈಚಾರಿಕತೆ ಬೇರೆ. ಇವೆಲ್ಲವೂ ಒಟ್ಟಿಗೇ ಇರಬೇಕೆಂದೇನೂ ಇಲ್ಲ. ಒಟ್ಟಿಗೆ ಇರಬಾರದೆಂಬ ನಿಯಮವೂ ಇಲ್ಲ. ಇದು ಮುಂದುವರಿದಿರುವಿಕೆ ಅಥವಾ ಹಿಂದುಳಿದಿರುವಿಕೆಯನ್ನು ನಿರ್ಧರಿಸಲಾರದು”.

ತನ್ನ ಅನುಭವಕ್ಕೆ ದಕ್ಕುವ, ದಕ್ಕಿದಷ್ಟು ಸಮಸ್ಯೆಗಳನ್ನು ಈ ಕೃತಿಯು ಅಕಾಡೆಮಿಕ್ ಪರಿಭಾಷೆಯನ್ನು (ಜಾರ್ಗನ್‍ಅನ್ನು) ಬಳಸೆದೆಯೆ, ಸರಳವಾದ ಭಾಷೆ ಮತ್ತು ನೇರ ನಿರೂಪಣೆಗಳ ಮೂಲಕ ಮಂಡಿಸುತ್ತದೆ. ಹೀಗೆ ಇದು ಎಲ್ಲರಿಗೂ ತಲುಪುವ ಸಾಧ್ಯತೆಯಿದ್ದರೂ, ಜಾರ್ಗನ್‍ಅನ್ನೇ ಬಳಸುತ್ತಾ ಬಂದಿರುವ ‘ವಿದ್ವಾಂಸರಿಗೆ’ ಈ ಶೈಲಿ ರುಚಿಸದಿರುವ ಸಾಧ್ಯತೆಗಳಿವೆ. ಆದ್ದರಿಂದ ಈ ಕೃತಿಯನ್ನು ಬರೆದಿರುವುದು ಬುದ್ಧಿಜೀವಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಲ್ಲ, ಬದಲಿಗೆ ಬುದ್ಧಿವಂತರನ್ನು ಎಂದರೆ ತಪ್ಪಲ್ಲ. ಅಲ್ಲದೇ ನಮ್ಮ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲಾಗದಷ್ಟು ಸಾಮಾಜಿಕ ವಾಸ್ತವಗಳಿಂದ ದೂರವಾಗುತ್ತಿರುವ ಸಮಾಜವಿಜ್ಞಾನ ಅಥವಾ ಅಕಾಡೆಮಿಕ್ ಚರ್ಚೆಗಳ ಅನುಪಸ್ಥಿತಿ ಹಾಗೂ ಅವುಗಳು ಪುನರ್ ಪರಿಶೀಲನೆಗೆ ಒಳಗಾಗಬೇಕಾದ ಇಂಗಿತಗಳು ಎಲ್ಲ ಲೇಖನಗಳುದ್ದಕ್ಕೂ ಸೂಚ್ಯಗೊಳ್ಳತ್ತಾ ಸಾಗುವುದು ನಾವಿಲ್ಲಿ ನೋಡಬಹುದು.

ವಸಾಹತು ಕಣ್ಣಿನಲ್ಲಿ ನಮ್ಮ ಸಮಾಜವನ್ನು ನೋಡುತ್ತಿರುವುದರಿಂದಾಗಿ ನಮ್ಮ ಅನುಭವವೇ ನಮಗೆ ದಕ್ಕದಂತಾದ ಮೇಲೆ ನಮಗೆ ನಾವೇ ಪರಕೀಯರಾಗುವುದು ಅನಿವಾರ್ಯವಾಗುತ್ತದೆ. ಪರಿಣಾಮವಾಗಿ ಇಂದು ನಾವು ವೈಜ್ಞಾನಿಕ ಮತ್ತು ಅತ್ಯುತ್ತಮ ಮೌಲ್ಯ ಎಂದು ಒಪ್ಪಿಕೊಂಡಿರುವ ಸೆಕ್ಯುಲರಿಸಂನ ಚರ್ಚೆಗಳು ಹೇಗೆ ದಿಕ್ಕು ತಪ್ಪಿವೆ ಎಂಬ ವಿಚಾರ ಹಾಗು ಈ ರೀತಿಯ ಇನ್ನು ಹಲವಾರು ವಿಚಾರಗಳ ಕುರಿತ ಬಾಲಗಂಗಾಧರರವರ ಸಿದ್ಧಾಂತವನ್ನು ಸರಳವಾಗಿ ಈ ಕೃತಿಯು ನಮ್ಮ ಮುಂದೆ ತೆರದಿಡುತ್ತದೆ. ಸಣ್ಣಸಣ್ಣ ಲೇಖನಗಳ ರೂಪದಲ್ಲಿ ಚರ್ಚೆಗೊಳಗಾಗಿರುವ ಸಮಸ್ಯೆಗಳು ಜನಸಾಮಾನ್ಯರಿಗೆ ಸ್ಪಂದಿಸುವ ಹಾಗೂ ಆ ಸಮಸ್ಯೆಗಳ ಕುರಿತಾಗಿ ಹೊಸ ರೀತಿಯಲ್ಲಿ ಯೋಚಿಸುವ, ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟಿಸುವಂತೆ ಮಾಡುವಷ್ಟರ ಮಟ್ಟಿಗೆ ಪ್ರಸ್ತುತ ಕೃತಿಯು ಯಶಸ್ವಿಯಾಗಿವೆ.

ತಮ್ಮ ಒಂದು ಲೇಖನದಲ್ಲಿ ಕುರ್ತಕೋಟಿಯವರು ಹೀಗೆ ಹೇಳುತ್ತಾರೆ: “ಹೊಸ ತಿಳುವಳಿಕೆಯಿಂದ ಕಣ್ಣು ತೆರೆಯಬಹುದು: ಕಣ್ಣು ತೆರೆದ ಮೇಲೆ ನೋಡುವುದನ್ನೂ ಅವರೇ ಕಲಿಸುವಂತಾಗಬಾರದು. ಹಾಗೆ ಆದರೆ ಮುಚ್ಚಿದ ಕಣ್ಣಿಗೂ ತೆರೆದ ಕಣ್ಣಿಗೂ ಅಂತರವೇ ಉಳಿಯುವುದಿಲ್ಲ. … ಈಗ ಹೊಸ [ತಿಳುವಳಿಕೆಯಿಂದ ಹೊಸ] ಮನುಷ್ಯ ಸಂಬಂಧಗಳು ನಿರ್ಮಾಣಗೊಳ್ಳಬೇಕಾಗಿದೆ, ಅದಕ್ಕಾಗಿ ತಿಳುವಳಿಕೆ ಪಡೆದವರೆಲ್ಲಾ ಶ್ರಮಿಸಬೇಕು” (“ನಿರೂಪಣೆಯ ಶಕ್ತಿ”, ಉರಿಯ ನಾಲಗೆ. ಮನೋಹರ: ಧಾರಡಾಡ, ಪು. 105).

ಕಣ್ಣುತೆರೆದ ಮೇಲೆ ನೋಡುವುದನ್ನು ಸ್ವತಃ ಅಭ್ಯಾಸಿಸುತ್ತಿರುವ ಮತ್ತು ಹೊಸ ಮನುಷ್ಯ ಸಂಬಂಧಗಳ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಒಬ್ಬ ವ್ಯಕ್ತಿಯ(ರಮಾನಂದ) ಪ್ರಯತ್ನದ ಫಲದಂತಿದೆ ಈ ಕೃತಿ.

Advertisements
1 ಟಿಪ್ಪಣಿ Post a comment
  1. ಗಿರೀಶ್
    ಆಗಸ್ಟ್ 30 2013

    ಹೌದು ರಮಾನಂದ ಅವರ ಬರಹಗಳು ಅತ್ಯಂತ ಸರಳ ಪದಗಳಲ್ಲಿ ಕ್ಲಿಷ್ಟಕರ ಸಂಗತಿಗಳನ್ನು ಪರಿಣಾಮಕಾರಿಯಾಗಿ ವಿವರಿಸುತ್ತವೆ. ಅವರ ಬರಹಗಳನ್ನು ವಿಜಯವಾಣಿಯಲ್ಲಿ ಓದುತ್ತೇನೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments