ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 1, 2013

3

ಮೌಲ್ಯ ಕಳೆದುಕೊಳ್ಳುತ್ತಿರುವ ಜೀವನವೂ ಸಡಿಲಗೊಳ್ಳುತ್ತಿರುವ ಸಂಬಂಧಗಳೂ..

‍ನಿಲುಮೆ ಮೂಲಕ

– ಗುರುಮೂರ್ತಿ ಚಕ್ಕೋಡಬೈಲು

Kids N Divorceಇತ್ತೀಚಿಗೆ ಪತ್ರಿಕೆಯೊಂದರಲ್ಲಿ ವಿಚಿತ್ರ ವರದಿಯೊಂದು ಪ್ರಕಟಗೊಂಡಿತ್ತು.ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು ಗಂಡನಿಂದ ವಿಚ್ಛೇಧನ ಪಡೆದು ಬಾಯ್ ಫ್ರೆಂಡ್ ಜೊತೆಗೆ ಲಿವಿಂಗ್ ಟುಗೆದರ್ ರೀತಿಯ ಜೀವನ ನಡೆಸುತ್ತಿದ್ದರು.ಆದರೆ ಇಬ್ಬರೊಂದಿಗೂ ದೈಹಿಕ ಸಂಬಂಧ ಇಟ್ಟುಕೊಂಡಿದ್ದ ಆಕೆ ಈಗ ಗರ್ಭಿಣಿಯಾಗಿದ್ದು ತನಗೆ ಹುಟ್ಟಲಿರುವ ಮಗುವಿನ ಅಪ್ಪನನ್ನು ಗುರುತಿಸುವ ಸಲುವಾಗಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದ ವಿಚಾರ ಪತ್ರಿಕೆಗಳಿಗೆ ಸುದ್ದಿಯಾಗಿತ್ತು.ಎಲ್ಲೋ ಅಮೆರಿಕಾ,ಇಂಗ್ಲೆಂಡ್ ಗಳಲ್ಲಿ ನಡೆಯುವ ಇಂತಹ ಘಟನೆಗಳ ಬಗ್ಗೆ ಓದಿ ಸುಮ್ಮನಾಗುತ್ತಿದ್ದ ನನಗೆ, ಬೆಂಗಳೂರಿನಲ್ಲೇ ನಡೆದ ಈ ಘಟನೆ ಆಶ್ಚರ್ಯ ಜೊತೆಗೆ ಆತಂಕವನ್ನೂ ಉಂಟುಮಾಡಿತು.ಅನೈತಿಕತೆ,ಸ್ವೇಚ್ಛೆಯನ್ನೇ ಬದುಕನ್ನಾಗಿಸಿಕೊಳ್ಳುವ ಹೊಸ ತಲೆಮಾರಿನ ಪ್ರತಿನಿಧಿಗಳೆಂಬಂತೆ ಕೆಲವರು ಕಾಣತೊಡಗಿದ್ದಾರೆ.ಡೈವೋರ್ಸ್ ಪದವೇ ಅಪರಿಚಿತವಾಗಿದ್ದ ನೆಲದಲ್ಲಿ ಹೊಂದಾಣಿಕೆಯ ಕೊರತೆಯ ಹೆಸರಿನಲ್ಲಿ ಡೈವೋರ್ಸ್ ಪ್ರಕರಣಗಳು ಹೆಚ್ಚತೊಡಗಿವೆ.ದಿನದಿಂದ ದಿನಕ್ಕೆ ಗಂಡು-ಹೆಣ್ಣಿನ ಸಂಬಂಧ,ಜೀವನ ಮೌಲ್ಯಗಳು ಗಟ್ಟಿಯಾಗುವುದರ ಬದಲು ದುರ್ಬಲವಾಗಲು ಕಾರಣವೇನು?? ಅನೈತಿಕ,ಅಕ್ರಮ,ನಿರ್ಲಜ್ಜ ಸಂಬಂಧಗಳೂ ಕೂಡ ಮುಜುಗರವಿಲ್ಲದೆ ಗುರುತಿಸಿಕೊಳ್ಳುವ ಮಟ್ಟಕ್ಕೆ ನಾವು ತಲುಪುತ್ತಿದ್ದೇವೆಯೇ??ಅದಕ್ಕೆ ಪೂರಕವಾದ ಸಮಾಜ ನಮಗರಿವಿಲ್ಲದೆಯೇ ನಿರ್ಮಾಣವಾಗುತ್ತಿದೆಯೇ?? ಇಂತಹ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿವೆ.

ಪ್ರಾಚೀನ ಜೀವನ ಪದ್ಧತಿಗೆ ಹೋಲಿಸಿದರೆ ಇವತ್ತಿನ ನಮ್ಮ ಜೀವನ ಶೈಲಿ ನೈತಿಕತೆಯಿಂದ ದೂರವಾಗುತ್ತಿರುವುದು ಸ್ಪಷ್ಟಗೊಳ್ಳುತ್ತದೆ.ದುರಂತದ ಸಂಗತಿಯೆಂದರೆ ನಮ್ಮನ್ನು ನಾವು ಶಿಕ್ಷಿತರು,ಪದವೀಧರರು ಎಂದು ಕರೆದುಕೊಳ್ಳುತಿರುವುದು.ಶಿಕ್ಷಣ ನಮ್ಮನ್ನು ಸುಶಿಕ್ಷಿತ,ವಿದ್ಯಾವಂತರನ್ನಾಗಿ ಮಾಡಬೇಕಿತ್ತು ಆದರೆ ಇವತ್ತು ಆಗುತ್ತಿರುವುದೇನು?? ಶಿಕ್ಷಣವೂ ಮೌಲ್ಯಗಳನ್ನು ಕಲಿಸುತ್ತಿಲ್ಲ ಸುತ್ತಲಿನ ಸಮಾಜವೂ ಮೌಲ್ಯರಹಿತವಾಗುತ್ತಿದೆ.ಉತ್ತಮ ಶಿಕ್ಷಣ ಪಡೆದು,ಸಂಬಂಧಗಳ ಸೂಕ್ಷ್ಮತೆಯನ್ನು ಗ್ರಹಿಸಬಲ್ಲವರೇ ಸಂಬಂಧಗಳನ್ನು ಮುರಿದುಕೊಳ್ಳುವುದೇಕೆ???ಪತಿ ಅಥವಾ ಪತ್ನಿ ತಮ್ಮ ಅಹಂಗಳನ್ನು,ತಪ್ಪುಗಳನ್ನು ಅವರೇ ಏಕೆ ಗುರುತಿಸಲಾರರು??ಅತಿ ಬುದ್ದಿವಂತರೆಂದು ಶಿಕ್ಷಣ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದು,ಪ್ರತಿಷ್ಠಿತ ಐಟಿ-ಬಿಟಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾವಂತರಲ್ಲೇ ಇಂತಹ ಕೆಟ್ಟ ಪ್ರವೃತ್ತಿಗಳು ಹೆಚ್ಚುತ್ತಿರುವುದು ದುರಂತವೇ ಸರಿ.

ಪತ್ರಿಕೆಯ ಸುದ್ದಿಯನ್ನು ಓದಿದಾಗ ನನಗೆ ನನ್ನೂರಿನ ಧರ್ಮಣ್ಣ-ಸುಮಿತ್ರ ಅನ್ನುವ ದಂಪತಿಗಳ ನೆನಪಾಯಿತು.ಧರ್ಮಣ್ಣನಿಗೆ ಕುಡಿಯುವ ಅಭ್ಯಾಸ ಆಗಾಗ ಕುಡಿದು ಬರುವ ಅವರು ಮನೆಯಲ್ಲಿ ಜಗಳ ಮಾಡುವುದುಂಟು.ರಾತ್ರಿ ಗಲಾಟೆ ಜೋರಾಗಿ ಧರ್ಮಣ್ಣನ ಕಾಟ ತಾಳಲಾರದೆ ಸುಮಿತ್ರ ಬೇರೆಯವರ ಮನೆಯಲ್ಲಿ ರಾತ್ರಿ ಕಳೆದದ್ದು ಇದೆ.ಆದರೆ ಬೆಳಗಾದರೆ ಸಾಕು ರಾತ್ರಿಯ ಘಟನೆಯನ್ನೆಲ್ಲಾ ಮರೆತು ಅನ್ಯೋನ್ಯವಾಗಿರುತ್ತಾರೆ.ಒಮ್ಮೆ ಜಗಳ ಮುಗಿದ ನಂತರ ಅಹಂ,ದ್ವೇಷ,ಅಸಮಾಧಾನಕ್ಕೆ ಅವರಿಬ್ಬರ ಮನಸ್ಸಿನ್ನಲ್ಲಿ ಜಾಗವಿಲ್ಲ.ಅವರಿಬ್ಬರಲ್ಲೂ ಮುಗ್ದ ಪ್ರೀತಿಯೊಂದು ಯಾವಾಗಲೂ ಜೀವಂತವಾಗಿರುತ್ತದೆ.ರಾತ್ರಿಯ ಜಗಳ ವರ್ಷದಲ್ಲಿ ಸುಮಾರು ಹತ್ತು ಹದಿನೈದು ರಾತ್ರಿ ನಡೆಯಬಹುದು.ಉಳಿದ ಮುನ್ನೂರ ಐವತ್ತು ದಿನ ಸಂತೋಷವಾಗಿರುತ್ತಾರೆ.ಅವರಿಬ್ಬರು ಶಿಕ್ಷಿತರಲ್ಲ ಆದರೆ ಅವರಿಬ್ಬರ ನಡುವಿನ ಹೊಂದಾಣಿಕೆ ವಿದ್ಯಾವಂತರಿಗೆ ಆದರ್ಶವಾಗಬಲ್ಲದು.ಅವರಿಗೂ ನಮಗೂ ಇರುವ ವ್ಯತ್ಯಾಸವೆಂದರೆ ೧೫ ದಿನ ನಡೆಯುವ ಜಗಳವನ್ನು ಮರೆತು ಉಳಿದ ೩೫೦ ದಿನ ಸಂತೋಷವಾಗಿರುತ್ತಾರೆ ಆದರೆ ನಾವು ಆ ಹದಿನೈದು ದಿನದ ಜೊತೆಗೆ ೩೫೦ ದಿನಗಳ ನೆಮ್ಮದಿಯನ್ನೂ ಬಲಿಕೊಡುತ್ತೇವೆ.ಶಿಕ್ಷಣದ ಮೂಲಕ ವಿವೇಕ,ತಾಳ್ಮೆ,ಸಹನೆಯನ್ನು ಕಲಿಬೇಕಿದ್ದ ನಾವು ಅಹಂ,ಅಸಮಧಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ.ಹಾಗಾದರೆ ಯಾರು ಸುಶಿಕ್ಷಿತರು?? ನಮ್ಮಲ್ಲಿನ ಮುಗ್ದತೆಯನ್ನು ಕೊಂದು ಸಂಕುಚಿತರನ್ನಾಗಿಸುತ್ತಿದೆಯೇ ನಮ್ಮ ಶಿಕ್ಷಣ??

ವಿದ್ಯಾವಂತರೇಕೆ ಒಬ್ಬರಿಗೊಬ್ಬರು ಹೊಂದಿಕೊಳ್ಳಲಾರರು?? ಹಿಂದೆಲ್ಲಾ ಪತಿ ಪತ್ನಿ ಸಂಬಂಧಗಳು ಮುರಿದು ಬೀಳಲು ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರಣರಾಗುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಅಂತಹ ಪುರುಷರಿಗೆ ಪೈಪೋಟಿ ನೀಡುತ್ತಿದ್ದಾರೆ.ಗಂಡು ಹೆಣ್ಣು ಇಬ್ಬರೂ ಸಮಾನ ಇಬ್ಬರಿಗೂ ಶಿಕ್ಷಣ ದೊರೆಯಬೇಕು,ಸಮಾನ ಹಕ್ಕುಗಳು ದೊರೆಯಬೇಕು ಆಗ ಸಮಾಜ ಮತ್ತು ಸಂಬಂಧಗಳು ಸುಧಾರಿಸುತ್ತವೆ ಅನ್ನುವ ಆಶಾಭಾವನೆ ಹೊಂದಿದ್ದೆವು.ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನುವ ನಂಬಿಕೆ ನಮ್ಮದಾಗಿತ್ತು.ಆದರೆ ಇವತ್ತು ಆಗುತ್ತಿರುವುದೇನು?? ಹಾದಿ ತಪ್ಪಲು ತುದಿಗಾಲಲ್ಲಿ ನಿಲ್ಲುವ ಗಂಡನ್ನು ತಡೆಯುವ ಶಕ್ತಿಯಿರುವ ಹೆಣ್ಣು ಅದನ್ನ ಮಾಡದೇ ತಾನೂ ಅವನ ಹಾದಿ ಹಿಡಿಯುತ್ತಿದ್ದಾಳೆ.

‘ಹೆಂಡ ಸರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ’ ಅನ್ನುವ ಗಾದೆ ಬದಲಾಗಿ ‘ಗಂಡ-ಹೆಂಡತಿ ಸರಾಯಿ ಸಹವಾಸ, ಮಕ್ಕಳ ಉಪವಾಸ’ ಎನ್ನುವಂತಾಗಿದೆ.ಬಾರ್ ನಲ್ಲಿ ಕುಡಿದು ಒಂಟಿಯಾಗಿ ಬರುತ್ತಿದ್ದ ಗಂಡನಿಗೆ ಹೆಂಡತಿಯೇ ಜೊತೆಯಾಗಲು ಹೊರಟಿದ್ದಾಳೆ…ಬಾರ್ ,ಡಿಸ್ಕೋತೆಕ್,ಹುಕ್ಕಾ ಅಡ್ಡೆಗಳಲ್ಲಿ ಹೆಚ್ಚಿನ ಸಂಖ್ಯೆ ಹದಿಹರೆಯದ ಹುಡುಗಿರದ್ದೇ.MNC ಕಂಪನಿಗಳ ಸ್ಮೋಕ್ ಜೋನ್ ಗಳಲ್ಲಿ ಹೊರಡುವ ಹೊಗೆಯಲ್ಲಿ ಹುಡುಗಿಯರದ್ದೂ ಸಮಪಾಲಿದೆ.ಗಂಡಿಗೆ ಪಾಠ ಕಲಿಸುವ ಹುಚ್ಚಿಗೆ ಬಿದ್ದು ಸುಳ್ಳು ವರದಕ್ಷಿಣೆ ಕೇಸುಗಳು ದಾಖಲಾಗುತ್ತಿವೆ.ಲಿವಿಂಗ್ ಟುಗೆದರ್ ಅಂತಹ ಸಂಬಂಧಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ.ಅವರು ಹಾದಿ ತಪ್ಪುತಿರುವ ಬಗ್ಗೆ ತಿಳಿ ಹೇಳಿದರೆ ಸ್ತ್ರೀ ಸಮಾನತೆಯ ಹೆಸರಲ್ಲಿ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ.ವಿದ್ಯಾವಂತ ಮಹಿಳೆಯರೆಲ್ಲರೂ ಹಾದಿ ತಪ್ಪುತ್ತಿದ್ದಾರೆ ಅನ್ನುವುದು ನನ್ನ ವಾದವಲ್ಲ.ಆದರೆ,ಹಾದಿ ತಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರ ಬಗ್ಗೆಯಷ್ಟೆ ನನ್ನ ಆತಂಕ.ಹೆಣ್ಣಿಗೂ ಶಿಕ್ಷಣ ದೊರೆತರೆ ಗಂಡಿನ ಅನೈತಿಕತೆ ಅನಾಚಾರಗಳು ಕಡಿಮೆಯಾಗುತ್ತವೆ ಆತನ ಮನಸ್ಸನ್ನು ಪರಿವರ್ತಿಸುತ್ತಾಳೆ ಕುಟುಂಬಗಳು ಮತ್ತಷ್ಟು ಸುಶಿಕ್ಷಿತಗೊಳ್ಳುತ್ತವೆ ಗಟ್ಟಿಗೊಳ್ಳುತ್ತವೆ ಎಂದು ನಂಬಿದ್ದೆವು.ನಮ್ಮ ಆಶಾಭಾವ ಎಷ್ಟು ನಿಜವಾಗಿದೆ?? ಮೌಲ್ಯಾಧಾರಿತ ಜೀವನ ಪದ್ದತಿಯಲ್ಲಿ ಸ್ತ್ರೀ ಸಮಾನತೆ ಹೊಂದಬೇಕೇ ಹೊರತು ಗಂಡಿನ ಅನೈತಿಕ ಚಟುವಟಿಕೆಯಲ್ಲಲ್ಲ.ಭಾರತೀಯ ಸನಾತನ ಸಂಸ್ಕೃತಿಯನ್ನು,ಅದರ ಆಗತ್ಯವನ್ನು,ಶ್ರೇಷ್ಟತೆಯನ್ನು ಇವತ್ತಿನ ಯುವಪೀಳಿಗೆಗೆ ಕಲಿಸುವ ಕೆಲಸವಾಗಬೇಕು.ಗಂಡ-ಹೆಂಡತಿ ಅಥವಾ ಗಂಡು-ಹೆಣ್ಣಿನ ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ,ಹಣವೇ ಎಲ್ಲವೂ ಆಗುತ್ತಿರುವ ಇಂದಿನ ಜೀವನ ಪದ್ದತಿ ಬದಲಾಗಬೇಕಿದೆ ಭೋಗ ಸಂಸ್ಕೃತಿಯಿಂದ ಹೊರಬರಬೇಕಿದೆ..ಹಣಗಳಿಸುವ ಶಿಕ್ಷಣದ ಬದಲಾಗಿ ಮೌಲ್ಯಾಧಾರಿತ ಶಿಕ್ಷಣ ಎಲ್ಲರಿಗೂ ಕಲಿಸಬೇಕಿದೆ.ಅದು ಸಾಧ್ಯವಾಗುತ್ತದೆಯೇ???

ಚಿತ್ರ ಕೃಪೆ : http://www.bleifusslaw.com
http://www.uthtime.in

3 ಟಿಪ್ಪಣಿಗಳು Post a comment
 1. manikanta
  ಆಕ್ಟೋ 1 2013

  true words ,,,,,,,,,,,

  ಉತ್ತರ
 2. Vikas Nayak
  ಆಕ್ಟೋ 2 2013

  ಜೀವನದ ಮೌಲ್ಯ ಎಂದರೇನು? ಇದಕ್ಕೆ ಉತ್ತರ ಅನೇಕ. ಉತ್ತರ, ತಾಳ್ಮೆಯಿಂದ ಹಿಡಿದು ಉದ್ಧಟತನದ ವರೆಗೆ ಕುತೂಹಲಕಾರಿ ಯಿಂದ ಅಹಿತಕಾರಿ ತನಕ ಚಿತ್ರ-ವಿಚಿತ್ರ !!! ಅದಾಗ್ಯೂ ಉತ್ತರಗಳು ವಿಮರ್ಶಾರ್ಹವೇ ಹೌದು. ಕಾರಣ ಇದು ಸಮಾಜದ ವಿಷಯ. ಯಾವ ವ್ಯಕ್ತಿಯೇ ಆಗಲಿ, ವೈಯಕ್ತಿಕ ಹಕ್ಕು, ಅಧಿಕಾರಗಳು ಇಡೀ ಸಮಾಜದ ಉದ್ದೇಶಕ್ಕೆ ಪ್ರಶ್ನಾತೀತ ಆಗಲಾರವು. ಭಾರತೀಯ ಶಾಸಕಿಯ ನಿಯಮ ನಿಬಂಧನೆಗಳು ಆಧುನಿಕ ವಿಚಾರ ಧಾರೆಯ ಹೆಸರಿನಲ್ಲಿ ಸ್ವೆಚ್ಚ್ಹಾಚಾರಕ್ಕೆ ಅನುವು ಮಾಡಿ ಕೊಡುತ್ತಿವೆ. ಸಮಾಜದ ಮಹತ್ವ ದಿನಂದಿನ ಕುಗ್ಗುತ್ತಿದೆ. ಯಾರೆನೆನ್ನುತ್ತಾರೆ ಅನ್ನುವುದರಕಡೆ ನಾವೇಕೆ ಲಕ್ಷ ಕೊಡಬೇಕು? ನಮ್ಮ ಜೀವನ ನಮ್ಮದು. ಇತರರ ಜೀವನದಲ್ಲಿ ಬೊಟ್ಟು ಮಾಡುವ ಹಕ್ಕು ಯಾರಿಗೂ ಇಲ್ಲ. ನಮಗೇನು ಸರಿ ಎನಿಸುತ್ತದೆಯೋ ನಾವು ಅದನ್ನೇ ಮಾಡುವೆವು…. ಈ ಗೊಗ್ಗು ಸಮಾಜ, ಎಲ್ಲಾ ಹುಮ್ಬುತನ. ಮದುವೆ ಎಂದರೆ ನಮ್ಮ ವೈಯ್ಯಕ್ತಿಕ ಇಚ್ಚ್ಹೆಗಳನ್ನು ಕಳೆದುಕೊಳ್ಳ ಬೇಕೇ? ಸ್ವೆಚ್ಚ್ಹಾಚಾರಕ್ಕೆ ನಾಂದಿ ಹಾಡುವುದು ಗಂಡಸರು ಎನ್ನಲಾಗುತ್ತದೆ ಹೆಂಗಸರು ಅದಕ್ಕೆ ಮಾರು ಹೋಗುತ್ತಾರೆ ಮಾತ್ರ..ಆ ವಾಕ್ಯಕ್ಕೆ ಜೋಡುವಾಕ್ಯ. ಒಂದಾನೊಮ್ಮೆ ಹೆಂಗಸರಿಗೆ ಹಾಗು ಶ್ರಮಜೀವಿಗಳಿಗೆ ಶಿಕ್ಷಣ ವ್ಯರ್ಜವಾಗಿತ್ತು. ಅದಕ್ಕೆ ಪ್ರಾಚಿನ ಕಾಲದಲ್ಲಿ ಕಂಡ ಇಂತಹ ಉದಾಹರಣೆಗಳೇ ಕಾರಣ. ಅಂದಮಾತ್ರಕ್ಕೆ ಅದು ಸರಿ ಎಂದರ್ಥವಲ್ಲ ಬದಲಾಗಿ ಅದರ ಬಗ್ಗೆ ಗಂಭಿರವಾಗಿ ವಿಚಾರ ಮಾಡ ಬೇಕು, ಎನ್ನುವ ಅಂಬೋಣ ಅಷ್ಟೇ. ತನ್ನ ಕುಟುಂಬ, ಸಂಸಾರವನ್ನು ಕಡೆಗಣಿಸುವ ವ್ಯಕ್ತಿಯ ಮೇಲೆ ಮೂರ್ಖರೆ ವಿಶ್ವಾಸ ಮಾಡ ಬಹುದು. ಯಾರೇ ಆಗಲಿ ಇಂತಹವರ ಮೇಲೆ ಯಾವ ಕಾರಣಕ್ಕೂ ಪೂರ್ಣ ವಿಶ್ವಾಸ ಮಾಡುವುದೇ ಇಲ್ಲ. ಎದುರು ಏನೇ ಅನ್ನಬಹುದು, ಹೇಳಬಹುದು ಅಂತರಾಳದಲ್ಲಿ ಇಂತಹವರ ಬಗ್ಗೆ ಸಂಶಯ ಇದ್ದೆ ಇರುತ್ತದೆ. ನನ್ನ ಗಂಡ ಹೀಗೆ, ನನ್ನ ಹೆಂಡತಿ ಹಾಗೆ ಎನ್ನುವುದು ನೆಪಮಾತ್ರ. ನಾನು ಸ್ವತಂತ್ರ…. ನನ್ನ ಜೀವನ ನನ್ನ ಹಕ್ಕು,…ನಾನ್ಯಾರಿಗೂ ಕಡೆಮೆಯಲ್ಲ…. ನನ್ನ ವೈಯಕ್ತಿಕ ಜೀವನದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನನ್ನ ಹೊರತು ಬೇರೆ ಯಾರಿಗೂ ಇಲ್ಲ….ಇದರಲ್ಲಿ ಜೀವನದ ಮೌಲ್ಯ ಮಾಪನೆ ಮಾಡುವುದಾದರೂ ಹೇಗೆ. ಬೇರೆಯವರ ಬದಕು ಹಾಳು ಮಾಡದಿದ್ದರೆ ಸಾಕು, ಎನ್ನ ಬಹುದಾ? ಹಾಳಾಗುತ್ತಿದ್ದರೂ, ನಾನೇನು ಮಾಡಲಿ???? ನಿಮ್ಮ ಜೀವನದ ಗುತ್ತಿಗೆ ತೆಗೆದು ಕೊಂಡಿಲ್ಲ….. ಕಾನೂನು ಹೇಳುವುದೂ ಇದೇ. ಬರಹ ಬರೆಯುತ್ತಿರಿ, ಕಥೆ, ಕಾದಂಬರಿ, ಟಿ.ವಿ. ಧಾರಾವಾಹಿಗಳು, ಸಿನಮಾಗಳೂ, ಈ ತರಹದ ಮಾನಸಿಕತೆಯನ್ನು ಖಂಡಿಸುತ್ತವೆ. ಓದುವಾಗ, ನೋಡುವಾಗ ಎಲ್ಲ ಹೌದಲ್ಲ !!!! ನಿಜ ಜೀವನದಲ್ಲಿ ನಾಯಿ ಬಾಲ ಡೊಂಕೇ!!! ಅಂದ ಹಾಗೆ -ಯಾರೇನು ಮಾಡುವರು ತಾ ಪಾಪಿಯಾದೊಡೆ????? ನೆನಪಾಗುತ್ತದೆ.

  ಉತ್ತರ
 3. turuvekere prasad
  ಆಕ್ಟೋ 4 2013

  ಲೇಖನ ಅರ್ಥಪೂರ್ಣವಾಗಿದೆ. ಸ್ವಾಂತಂತ್ರ್ಯವನ್ನು ಸ್ವೇಚ್ಛೆ ಎಂದು ಅರ್ಥೈಸುವ, ನೈತಿಕ ಮೌಲ್ಯಗಳನ್ನು ಗೊಡ್ಡು ಸಂಪ್ರದಾಯ ಎಂದು ಹೀಗಳೆಯುವ, ಅಪ್ಪ,ಅಮ್ಮನನ್ನು ವೃದ್ಧಾಶ್ರಮ ಸೇರಿಸಿ ಫಾದರ್ಸ್ ಡೇ ಮದರ್ಸ್ ಡೇ ಆಚರಿಸುವ, ಡೇಟಿಂಗ್ ಸಂಸ್ಕೃತಿಗೆ ವ್ಯಾಲೈಂಟೈನ್ ಹೆಸರು ಕೊಡುವ, ಹುಟ್ಟಿದ ಹಬ್ಬ ಮಾಡಿ ದೀಪ ಊದಿ ಆರಿಸುವ, ಮನರಂಜನೆಯ ಹೆಸರಿನಲ್ಲಿ ಅರೆಬೆತ್ತಲೆ ಚಿತ್ರಗಳ ನೋಡಿ ಉದ್ರೇಕಗೊಳ್ಳುವ, ಬ್ರೆಡ್ ಹಂಚುವ ಬದಲು ಬೆಡ್ ಹಂಚಿಕೊಳ್ಳುವ ನಾಗರಿಕತೆಯ ಹೆಸರಿನ ವಿಕಾರಗಳು ಇರುವ ತನಕ ನೈತಿಕ ಮೌಲ್ಯಗಳನ್ನು ಉದ್ದೀಪನಗೊಳಸಸುವ ಕೆಲಸ ನಿರಂತರವಾಗಿ ನಡೆಯಲೇಬೇಕಿದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments