ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 1, 2013

ಲೋಕಾಯುಕ್ತ ಆಸ್ತಿ ವಿವರ ನೀಡುವುದೇ ಯುಕ್ತ!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

RTI       ಈಚೆಗೆ ಪತ್ರಿಕೆಗಳಲ್ಲಿ ಹಲವು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ ಎಂಬ ಸಂಗತಿ ವರದಿಯಾಗಿತ್ತು. ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಜನಪ್ರತಿನಿಧಿಗಳು ಕಡ್ಡಾಯವಾಗಿ ಪ್ರತಿವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿದೆ. ಆದರೆ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಷ್ಟೇ ಅಲ್ಲ, ಜನಪ್ರತಿನಿಧಿಗಳು ಸಲ್ಲಿಸಿರುವ ಆಸ್ತಿ ವಿವರವೂ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಸಾರ್ವಜನಿಕರು  ತಿಳಿಯಲಾಗುತ್ತಿಲ್ಲ. ಏಕೆಂದರೆ ಲೋಕಾಯುಕ್ತ ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡಲು ನಿರಾಕರಿಸುತ್ತದೆ.

       ಕಳೆದ ಮಾರ್ಚ್ 18ರಂದು ನಾನು ವಿಧಾನಸಭಾ ಚುನಾವಣೆಗಳ ಹಿನ್ನಲೆಯಲ್ಲಿ ಕೆಲವು ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರವನ್ನು ಮಾಹಿತಿ ಹಕ್ಕು ಕಾಯಿದೆಯಡಿ  ನೀಡುವಂತೆ ಕೋರಿದ್ದೆ. ಆದರೆ ಲೋಕಾಯುಕ್ತ ಆ ಮಾಹಿತಿ ನೀಡಲು ನಿರಾಕರಿಸಿತು. ಅದಕ್ಕೆ ಲೋಕಾಯುಕ್ತ ಕೊಟ್ಟ ಕಾರಣ ಮಾಹಿತಿ ಹಕ್ಕು ಕಾಯಿದೆಯಡಿ ನಾಗರಿಕರಿಗೆ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಸಂಗತಿಗಳ ಬಗ್ಗೆ ಮಾತ್ರ ಮಾಹಿತಿ ನೀಡಲಾಗುತ್ತದೆ. ನೀವು ಕೆಲವು ವ್ಯಕ್ತಿಗಳ ಖಾಸಗಿ ವಿವರಗಳ ಬಗ್ಗೆ ಮಾಹಿತಿ ಕೇಳಿದ್ದೀರಿ. ಇದು ಸಾರ್ವಜನಿಕ ಪ್ರಾಧಿಕಾರ ಅಥವಾ ಆಢಳಿತಕ್ಕೆ ಸಂಬಂಧಿಸಿದ ಸಾರ್ವಜನಿಕ ವಿಷಯವಲ್ಲ ಎಂಬುದು.(The intention of the legislation is to provide right to information of a citizen pertaining to public affairs of the public authority, but you have sought the information of an individual which is purely personal one and is not with respect to public affairs)

 ಜೊತೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ಅಭಿಪ್ರಾಯದಲ್ಲಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಅಪರಾಧದ ಹಿನ್ನಲೆ ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳು ಮುಖ್ಯವೇ ಹೊರತು ಅವರ ವೈಯಕ್ತಿಕ ಆಸ್ತಿ ವಿವರಗಳಲ್ಲ. ಅಂತಹ ವ್ಯಕ್ತಿಗತ ವಿವರ ನೀಡುವುದರಿಂದ ಅವರ ಖಾಸಗಿ ಬದುಕನ್ನು ಅತಿಕ್ರಮಿಸಿದಂತಾಗುತ್ತದೆ ಮತ್ತು ಇಂತಹ ಕ್ರಮ ಅವರ ಆಸ್ತಿ ಮತ್ತು ಕುಟುಂಬದ ಜೀವಕ್ಕೆ ಹಾನಿ ಉಂಟು ಮಾಡಬಹುದು.ಇಂತಹ ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಮಾಹಿತಿ ನೀಡಲು ನಿರಾಕರಿಸಿದರು. ಆ ನಂತರ ನಾನು ಮತ್ತೆ ಲೋಕಾಯುಕ್ತದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಪತ್ರ ಬರೆದು ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲರ ಆಸ್ತಿ ವಿವರಗಳನ್ನು ತಮ್ಮ ನಾಮಪತ್ರದೊಂದಿಗೆ ಘೋಷಿಸಬೇಕು. ಆ ಆಸ್ತಿ ವಿವರವನ್ನು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಈ ವಿವರಗಳನ್ನು ಯಾರು ಬೇಕಾದರೂ ಪಡೆಯಬಹುದಾಗಿದೆ. ನಾನು ಆಸ್ತಿ ವಿವರ ಕೇಳಿರುವ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿದ್ದಾರೆ. ಈಗಾಗಲೇ ಚುನಾವಣೆಗೆ ನಿಂತು ತಮ್ಮ ಆಸ್ತಿಯನ್ನು ಘೋಷಿಸಿಕೊಂಡವರೇ ಆಗಿದ್ದಾರೆ. ಈ ಬಾರಿಯೂ ಸದರಿ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವ ಸಂಭವವಿರುವುದರಿಂದ ಲೋಕಾಯುಕ್ತಕ್ಕೆ ಸದರಿ ಜನಪ್ರತಿನಿಧಿಗಳು ನೀಡಿರುವ ಅಸ್ತಿ ವಿವರಗಳನ್ನು ಏಕೆ ಕೊಡಲಾಗುವುದಿಲ್ಲ ಎಂದು  ಕೇಳಿದೆ. ಅದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಉತ್ತರಿಸಿ ಮಾಹಿತಿಯ ವ್ಯಾಖ್ಯೆಯಲ್ಲಿ ಏಕೆ? ಎಂಬುದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಒಂದು ವಿಷಯದ ಸಮರ್ಥನೆಗೆ ಕಾರಣ ಕೇಳಿದಂತಾಗುತ್ತದೆ. ಸಾರ್ವಜನಿಕ ಮಾಹಿತಿ ಪ್ರಾಧಿಕಾರಗಳು ಸಾರ್ವಜನಿಕರಿಗೆ ಯಾವುದನ್ನು ಏಕೆ ಮಾಡಿದೆ? ಅಥವಾ ಮಾಡಿಲ್ಲ ಎಂದು ಸಮರ್ಥನೆ ನೀಡುವ ಅಗತ್ಯವಿಲ್ಲ. ಏಕೆಂದರೆ ಸಾರ್ವಜನಿಕರು ಮಾಹಿತಿಗಾಗಿ ಕೇವಲ ಕೋರಿಕೆ ಸಲ್ಲಿಸುತ್ತಾರೆ,ಸ್ಪಷ್ಟೀಕರಣ ಹಾಗೂ ಕಾರಣ ನೀಡುವುದು ಪ್ರಾಧಿಕಾರದ ಆಂತರಿಕ ವಿಚಾರಗಳು ಎಂಬರ್ಥದಲ್ಲಿ ಮತ್ತೆ ಮಾಹಿತಿ ನೀಡಲು ಸ್ಪಷ್ಟವಾಗಿ ನಿರಾಕರಿಸಿದರು.

       ನನ್ನ ಪ್ರಶ್ನೆ ಇಷ್ಟು. ಅಧಿಕಾರಿಗಳ ಅಥವಾ ಉದ್ಯಮಿಗಳ ಆಸ್ತಿ ವಿವರ ಕೇಳುವುದು ಅವರ ಖಾಸಗಿ ಬದುಕಿನ ಅತಿಕ್ರಮಣ ಎನಿಸಬಹುದು. ಹಲವರು ಮಾಹಿತಿ ಹಕ್ಕಿನ ಹೆಸರಿನಲ್ಲಿ ಬೇರೆಯವರ ವೈಯಕ್ತಿಕ ಬದುಕಿಗೆ ಹಾನಿ ಉಂಟು ಮಾಡಿ, ಮಾನಸಿಕ ಹಿಂಸೆ ನೀಡಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸಬಹುದು. RTI ಸೆಕ್ಷನ್ 8(1)ಜೆ ಅನ್ವಯ, ಬಾಂಬೆ ಹೈಕೋರ್ಟ್, ವ್ಯಕ್ತಿಯೊಬ್ಬ ಹೊಂದಿರುವ ಆಸ್ತಿಯು ಸಾರ್ವಜನಿಕ ಚಟುವಟಿಕೆ ಇಲ್ಲವೇ ಹಿತಾಸಕ್ತಿಗೆ ಸಂಬಂಧಿಸದೇ ಇದ್ದಲ್ಲಿ ಆ ಕುರಿತು ಮಾಹಿತಿ ಅಧಿಕಾರಿ ವಿವರಗಳನ್ನು ಒದಗಿಸುವ ಅಗತ್ಯ ಇಲ್ಲ ಎಂದು ಹೇಳಿರುವುದು ಸರಿಯಾಗೇ ಇದೆ.(ಅವರನ್ನು ಬ್ಲಾಕ್‍ಮೇಲ್ ಮಾಡಲಲ್ಲದೆ ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪ್ರಾಮಾಣಿಕ ಪ್ರಯತ್ನಕ್ಕಾದರೆ ನಿಜಕ್ಕೂ ಅದೂ ತಪ್ಪಲ್ಲ.) 

ಆದರೆ,ಸಾರ್ವಜನಿಕ ಬದುಕಿನಲ್ಲೇ ಇರುವ ಜನಪ್ರತಿನಿಧಿಗಳ ಆಸ್ತಿ ವಿವರ ನೀಡುವುದು ಹೇಗೆ ಖಾಸಗಿ ಬದುಕಿನ ಅತಿಕ್ರಮಣವಾಗುತ್ತದೆ? ಜನಪ್ರತಿನಿಧಿಗಳನ್ನು ಲೋಕಾಯುಕ್ತ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ, ಪ್ರಜಾಪ್ರತಿನಿಧಿ ಕಾಯಿದೆ ಹಾಗು ಚುನಾವಣಾ ಆಯೋಗ ಬೇರೆ ಬೇರೆಯಾಗಿ ವ್ಯಾಖ್ಯಾನಿಸಿವೆಯೇ? ಚುನಾವಣಾ ಆಯೋಗ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಕಡ್ಡಾಯವಾಗಿ  ತಮ್ಮ ಹಾಗೂ ಕುಟುಂಬದ ಆಸ್ತಿ ಮತ್ತು ಅಪರಾಧಗಳ ಘೋಷಣೆ  ಮಾಡಬೇಕೆಂದು ಆದೇಶಿಸಿದೆ. ಆ ಪ್ರಕಾರ ಈ ಆಸ್ತಿ ವಿವರಗಳು ಸಾರ್ವಜನಿಕ ದಾಖಲೆಗಳಾಗಿ ಯಾರು ಬೇಕಾದರೂ ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯಬಹುದಾಗಿರುತ್ತದೆ. ಇಲ್ಲಿ ಬಾರದ ಖಾಸಗಿ ಬದುಕಿನ ಅತಿಕ್ರಮಣ ಲೋಕಾಯುಕ್ತದವರು ಇದೇ ಜನಪ್ರತಿನಿಧಿಗಳ ಆಸ್ತಿ ವಿವರ ನೀಡಿದರೆ ಹೇಗಾಗುತ್ತದೆ? ಚುನಾವಣೆಗೆ ನಿಲ್ಲುವ ಒಬ್ಬ ವ್ಯಕ್ತಿ ಕೋಟ್ಯಂತರ ರೂಪಾಯಿ ಆಸ್ತಿ ಘೋಷಿಸುತ್ತಾನೆ. ಈ ಸಂದರ್ಭದಲ್ಲಿ ಅವನ ಆಸ್ತಿಗೆ ಹಾನಿ ಆಗುತ್ತದೆಯೇ? ಅವನ ಕುಟುಂಬಕ್ಕೆ ಯಾರಾದರೂ ಜೀವ ಬೆದರಿಕೆ ಒಡ್ಡಿದ್ದಾರೆಯೇ? ( ರಾಜಕೀಯದವರು ಸಾಮಾನ್ಯರಿಗೆ ಹೆದರುವಷ್ಟು ಪುಕ್ಕಲರಾ? ಆಸ್ತಿ ವಿವರ ಪಡೆದು ಒಬ್ಬ ಸಾಮಾನ್ಯ ವ್ಯಕ್ತಿ ಈ ದೇಶದ ರಾಜಕಾರಣಿಯನ್ನು ಹೆದರಿಸುವುದನ್ನೂ ಯಾರೂ ಊಹಿಸಲಿಕ್ಕೂ ಸಾಧ್ಯವಿಲ್ಲ. ಹಾಗೆ ನೋಡಿದರೆ ನಿಜವಾಗಿ ಜೀವ ಬೆದರಿಕೆ ಮತ್ತು ಹಾನಿ ಹಲವು ಜನಪ್ರತಿನಿಧಿಗಳಿಂದ ಸಾರ್ವಜನಿಕರಿಗೇ ಆಗಿರುತ್ತದೆ). ಲೋಕಾಯುಕ್ತದವರು ಆಸ್ತಿ ವಿವರ ನೀಡುವುದರಿಂದ ಇಂತಹ ಪ್ರಮಾದಗಳು ಘಟಿಸುತ್ತವೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹೇಗೆ ನಿರ್ಧಾರಕ್ಕೆ ಬರುತ್ತಾರೆ?

            ಮತ್ತೂ ಸ್ವಾರಸ್ಯದ ಸಂಗತಿಯೆಂದರೆ ಲೋಕಾಯುಕ್ತ ಜುಲೈ 1, 2008ರಿಂದ ಇಂತಹ ವಿವರಗಳನ್ನು ನೀಡುತ್ತಿಲ್ಲ ಎಂದು ಹೇಳಲಾಗಿದೆ. ಆದರೆ ಈ ಹಿಂದೆ ಆಗಸ್ಟ್ 2008ರಲ್ಲಿ ಇದೇ ಲೋಕಾಯುಕ್ತ ನನಗೆ ಇದೇ ಮೂವರು ಜನಪ್ರತಿನಿಧಿಗಳ ಆಸ್ತಿ ವಿವರಗಳ ದಾಖಲೆಗಳ ಪ್ರತಿ ನೀಡಿದೆ. ಆಗ ಈ ವಿವರಗಳನ್ನು ಲೋಕಾಯುಕ್ತ ಹೇಗೆ ನೀಡಿತು? ಎಂದು ಕೇಳಿದರೆ ಅದಕ್ಕೆ ಸ್ಪಷ್ಟೀಕರಣ ಕೊಡುವುದು ಮಾಹಿತಿ ಹಕ್ಕು ಕಾಯಿದೆಯಡಿ ಬರುವುದಿಲ್ಲ ಎಂದು ನುಣುಚಿಕೊಳ್ಳುವುದು ಸರಿಯೇ?

            ಜನಪ್ರತಿನಿಧಿಯೊಬ್ಬರ ಆಸ್ತಿ ಅವರೇ ಘೋಷಿಸಿಕೊಂಡಂತೆ 8 ವರ್ಷಗಳಲ್ಲಿ 8 ಪಟ್ಟು ಹೆಚ್ಚಾಗುತ್ತದೆ. ಮತ್ತೊಬ್ಬ ಜನಪ್ರತಿನಿಧಿಗಳ ಆಸ್ತಿ 4 ವರ್ಷಗಳಲ್ಲಿ ಶೇ.143ರಷ್ಟು ಹೆಚ್ಚಾಗುತ್ತದೆ. ಮುಂದಿನ ಎಂಟೇ ತಿಂಗಳಲ್ಲಿ ಶೇ.81ರಷ್ಟು ಹೆಚ್ಚಾಗುತ್ತದೆ. ಮತ್ತೆ 4 ವರ್ಷಗಳಲ್ಲಿ ಶೇ.85ರಷ್ಟು ಹೆಚ್ಚಾಗುತ್ತದೆ. ಲೋಕಾಯುಕ್ತ ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ಪ್ರತಿವರ್ಷ ಪಡೆಯುತ್ತದೆ. ಆದರೆ ಇಂತಹ ಆಸ್ತಿಯಲ್ಲಿ ಎಷ್ಟು ಪ್ರಮಾಣದ ಹೆಚ್ಚಳ ಆಗಿದೆ? ಅದು ಕಾನೂನು ಬದ್ಧವಾಗಿದೆಯೇ? ಜನಪ್ರತಿನಿಧಿಗಳ ವರಮಾನಕ್ಕೆ ತಕ್ಕ ಪ್ರಮಾಣದಲ್ಲಿದೆಯೇ? ಎಂಬ ಬಗ್ಗೆ ತನಿಖೆ ನಡೆಸಿ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿದೆಯಾ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಆದರೆ ಇದೇ ಕೆಲಸವನ್ನು ಕರ್ನಾಟಕ ಎಲೆಕ್ಷನ್ ವಾಚ್ಮಾಡಿ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸುತ್ತದೆ.

ಸಾರ್ವಜನಿಕರಿಗೆ ತಮ್ಮ ಜನಪ್ರತಿನಿಧಿಗಳ ಪಾರದರ್ಶಕತೆಯ ಬಗ್ಗೆ ತಿಳಿದುಕೊಳ್ಳಲು ಎಲ್ಲಾ ರೀತಿಯ ಮುಕ್ತ ಅವಕಾಶವಿರಬೇಕು. ಲೋಕಾಯುಕ್ತ ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ನೀಡಲು ನಿರಾಕರಿಸುವ ಮೂಲಕ ಅವರಿಗೆ ರಕ್ಷಣೆ ನೀಡುತ್ತಿದೆ ಎಂದೇ ಭಾವಿಸಬೇಕಾಗಿದೆ. ಏಕೆಂದರೆ ಈ ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಸಲ್ಲಿಸುವ ಆಸ್ತಿ ವಿವರ ಏನು ಎಂಬುದು ಯಾರಿಗೂ ತಿಳಿಯುವುದೇ ಇಲ್ಲವಲ್ಲ! ಇದು ಯಾರಿಗೂ ತಿಳಿಯಲಾರದು ಎಂದಾದ ಮೇಲೆ ಎಲ್ಲಾ ಜನಪ್ರತಿನಿಧಿಗಳೂ ಸರಿಯಾದ ಆಸ್ತಿ ವಿವರಗಳನ್ನೇ ಘೋಷಿಸಿರುತ್ತಾರೆ ಎಂದು ಹೇಗೆ ನಂಬುವುದು?

ಉದಾಹರಣೆಗೆ 2008ರಲ್ಲಿ ರಾಜಕೀಯ ವ್ಯಕ್ತಿಯೊಬ್ಬರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ಆಸ್ತಿ ವಿವರಗಳೇ ಬೇರೆ! ಅದೇ ವರ್ಷ ಜೂನ್ 30ರಲ್ಲಿ ಅವರು ಲೋಕಾಯುಕ್ತಕ್ಕೆ ನೀಡಿರುವ ಆಸ್ತಿ ವಿವರಗಳೇ ಬೇರೆ! ಲೋಕಾಯುಕ್ತ ಈ ಬಗ್ಗೆ ತನಿಖೆ ನಡೆಸಿ ಈವರೆಗೆ ವಿವರಣೆ ಕೇಳಿದೆಯೋ ಇಲ್ಲವೋ ಗೊತ್ತಿಲ್ಲ. ಮತದಾರರ ನಂಬಿಕೆಗೆ ಮೋಸ ಮಾಡಿ ವಿವಿಧ ರಾಜಕೀಯ ಆಪರೇಶನ್‍ಗಳಿಗೆ ಒಳಗಾಗಿ ರಾತ್ರೋ ರಾತ್ರಿ ಅಕ್ರಮ ಸಂಪತ್ತು ಗಿಟ್ಟಿಸುವ ಹಲವು ಜನಪ್ರತಿನಿಧಿಗಳು ನೇರವಾಗಿ ಚುನಾವಣೆಗೆ ಸ್ಪರ್ಧಿಸದೆ ಹಿತ್ತಲ ಬಾಗಿಲಿನಿಂದ ಮೇಲ್ಮನೆ ಪ್ರವೇಶಿಸುವ ಪ್ರವೃತ್ತಿ ಇದೆ. ಇಂತಹ ಜನಪ್ರತಿನಿಧಿಗಳು ಯಾವ ಪ್ರಮಾಣದಲ್ಲಿ ಬೆಳೆದಿದ್ದಾರೆ (?) ಎಂದು ತಿಳಿದುಕೊಳ್ಳುವ ಹಕ್ಕು ಜನಸಾಮಾನ್ಯರಿಗೆ ಇಲ್ಲವೇ? ಅಂತಹ ಮಾಹಿತಿಯನ್ನು ನಿರಾಕರಿಸುವುದು ಜನರಿಗೆ ಮಾಡುವ ದ್ರೋಹವಲ್ಲವೇ? ಅವರ ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಒರೆಹಚ್ಚುವ ಮತ್ತು ಸತ್ಯವನ್ನು ಬಯಲಿಗೆಳೆಯುವ ಹಕ್ಕು ಜನರಿಗಿಲ್ಲವೇ? ಲೋಕಾಯುಕ್ತ ಈ ಮಾಹಿತಿಯೇ ನೀಡುವುದಿಲ್ಲ ಎಂದರೆ ಬೇರೆ ಯಾವ ಮೂಲದಿಂದ ಈ ಮಾಹಿತಿ ಪಡೆಯಲು ಸಾಧ್ಯ? ಇದು ಲೋಕಾಯುಕ್ತ ಜನಪ್ರತಿನಿಧಿಗಳ  ಅಕ್ರಮ ಸಂಪತ್ತಿನ ರಕ್ಷಣೆಗೆ ಪರೋಕ್ಷವಾಗಿ ನಿಂತಂತಲ್ಲವೇ?

ಚಿತ್ರ ಕೃಪೆ :http://www.tzronline.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments