ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 9, 2013

10

ಫ್ಯೂಡಲ್, ಲಿಬರಲ್, ಸ್ಲೇವರಿ: ಪರಿಕಲ್ಪನೆಗಳ ಭೌದ್ದಿಕ ದಾರಿದ್ರ್ಯ

‍ನಿಲುಮೆ ಮೂಲಕ

empty_mind_440ಡಾ. ಸಂತೋಷ್ ಕುಮಾರ‍್ ಪಿ.ಕೆ 

ಹೀಗೋಮ್ಮೆ ಮಾಸ್ತಿ ಹಾಗು ಕುರ್ತಕೋಟಿಯವರ ಲೇಖನಗಳನ್ನು ಓದುವಾಗ ಅವರು ಹೇಳುತ್ತಿದ್ದ ವಿಚಾರಗಳು ಎಷ್ಟು ಆಪ್ತವಾಗಿದ್ದವು ಎಂದರೆ ಅವು ಇಂದಿಗೂ ಪ್ರಸ್ತುತ ಎನಿಸುತ್ತದೆ. ಕೆ.ವಿ.ನಾರಾಯಣ ಸ್ವಾಮಿಯವರು ಮಾಸ್ತಿಯವರನ್ನು ಒಮ್ಮೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಕೆ.ವಿ.ಎನ್ ರವರು ಪ್ರಶ್ನೆ ಕೇಳುವ ರಭಸದಲ್ಲಿ ಲಿಬರಲ್/ಉದಾರವಾದಿ ಶಬ್ದವನ್ನು ಪ್ರಯೋಗಿಸದರಂತೆ, ಅದಕ್ಕೆ ಮಾಸ್ತಿಯವರು ಹಾಗೆಂದರೇನು? ಎಂದು ಮರುಪ್ರಶ್ನೆ ಮಾಡಿದರಂತೆ, ಕೊನೆಗೂ ಲಿಬರಲ್ ಅಥವಾ ಉದಾರವಾದಿ ಎಂದರೇನು ಎಂಬುದನ್ನು ವಿವರಿಸುವಲ್ಲಿ ಕೆ.ವಿ.ಎನ್ ವಿಫಲರಾಗಿ ತಬ್ಬಿಬ್ಬಾಗಿದ್ದನ್ನು ಅವರೇ ಒಪ್ಪಿಕೊಳ್ಳುತ್ತಾರೆ. ಒಟ್ಟಿನಲ್ಲಿ ನಮ್ಮದಲ್ಲದ ಜೊತೆಗೆ ನಮಗೆ ಅರ್ಥವಾಗದ ಪದಗಳನ್ನು ಬಳಸುವುದರಿಂದ ನಿರುಪಯುಕ್ತವಾದ ಸಂಭಾಷಣೆಯಾಗುತ್ತದೆ ಎಂಬುದು ಅದರ ತಾತ್ಪರ್ಯವಾಗಿತ್ತು. ಅದೇ ರೀತಿ ‘ನಿರೂಪಣಾ ಶಕ್ತಿ’ ಎಂಬ ಕುರ್ತಕೋಟಿಯವ ಲೇಖನವಿದೆ. ಆ ಲೇಖನದಲ್ಲಿ ಕುಂ.ವೀರಭದ್ರಪ್ಪನವರು ‘ಫ್ಯೂಡಲ್’ ಪದವನ್ನು ಬಳಸುವ ಮೂಲಕ ಅವರ ತಂದೆಯವರ ಚಿತ್ರಣವನ್ನು ಎಷ್ಟು ಹದಗೆಡಿಸಿದರೆಂದರೆ, ಕುಂ.ವಿ.ಯವರು ಅವರ ತಂದೆಯ ಚಿತ್ರಣವನ್ನೂ ಪ್ರೇಕ್ಷಕರಿಗೆ ಸರಿಯಾಗಿ ಕಟ್ಟಿಕೊಡಲಾಗಲಿಲ್ಲ, ಜೊತೆಗೆ ಫ್ಯೂಡಲ್ ಎಂಬುದನ್ನೂ ಸರಿಯಾಗಿ ಅರ್ಥಮಾಡಿಸಲು ಆಗಲಿಲ್ಲ.

ಇಂತಹ ಅನುಭವ ಭೌದ್ದಿಕವಲಯದ ಪರಿಚಯವಿದ್ದವರಿಗೆ ಸರ್ವೇಸಾಮಾನ್ಯವಾದುದು. ಅದರಲ್ಲಿಯೂ ಪ್ರಗತಿಪರರ ಭಾಷಣಗಳನ್ನು ಕೇಳಿದರೆ ಅವುಗಳಲ್ಲಿ ಅರ್ಥವಾದ್ದಕ್ಕಿಂತ ಅರ್ಥವಾಗದೆ ಇರುವ ಪದಗಳೇ ಹೆಚ್ಚಾಗಿರುತ್ತವೆ. ಇದು ಕೇವಲ ಪ್ರಗತಿಪರರಗೆ ಮಾತ್ರ ಸೀಮಿತವಾಗಿರದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಅಲ್ಲಿ ಕಾಣಸಿಗುತ್ತದೆ. ಲಿಬರಲ್, ಫ್ಯೂಡಲ್, ನಂತಹ ಶಬ್ದಗಳು ನಮ್ಮ ಸಂಸ್ಕೃತಿಯ ಮೂಲದವುಗಳಲ್ಲ. ಬದಲಿಗೆ ಪಾಶ್ಚಾತ್ಯರ ಸಂಸ್ಕೃತಿಯನ್ನು ವಿವರಿಸಲು ಬೆಳೆದುಬಂದಿರುವ ಪದಗಳಾಗಿವೆ. ಭಾರತದಲ್ಲಿ ಜಮೀನುದಾರರನ್ನು ಹಾಗೂ ಅವರ ದರ್ಪವನ್ನು ವಿವರಿಸಲು ಫ್ಯೂಡಲ್ ಪದವನ್ನು ಸಾಮಾನ್ಯವಾಗಿ ಬುದ್ದಿಜೀವಿಗಳು ಬಳಸುತ್ತಾರೆ. ಆದರೆ ಅದು ನಿಜವಾಗಿಯೂ ಫ್ಯೂಡಲಿಸಂನ್ನು ಪ್ರತಿನಿಧಿಸುತ್ತದೆಯೆ? ಎಂದು ಕೇಳಿಕೊಂಡರೆ, ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು. ಏಕೆಂದರೆ ಫ್ಯೂಡಲ್ ನ ಅರ್ಥವನ್ನು ನೋಡುತ್ತಾ ಹೋದರೆ, ಸಾಮಾನ್ಯವಾಗಿ ಕೆಲವೊಂದು ಕಾನೂನು ಹಾಗೂ ಮಿಲಿಟರಿ ಶಕ್ತಿ ಅಥವಾ ಅದಕ್ಕೆ ಪರ್ಯಾಯವಾದ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಮಾಜವನ್ನು ಅದಕ್ಕೆ ತಕ್ಕಂತೆ ರೂಪಿಸುವುದು, ಹಾಗೂ ಅದನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಎಂದರ್ಥವಾಗುತ್ತದೆ.  ಅದರ ಒಟ್ಟಿಗೆ ಸರ್ಫ್ ಡಮ್ ಎಂಬುದಾಗಿಯೂ ಅದನ್ನು ಕರೆಯುತ್ತಾರೆ, ಅಂದರೆ ಲ್ಯಾಂಡ್ ಲಾರ್ಟ್ ಮತ್ತು ಸರ್ಫ್ ಗಳ ಸಂಬಂಧವು ಪ್ರಧಾನ ಭೂಮಿಕೆಯಲ್ಲಿರುತ್ತದೆ. ಹಾಗೂ ಸ್ಲೇವರಿ ಎಂದು ಬಳಸುವ ಪರಿಕಲ್ಪನೆಯ ಹಿಂದೆ ಮಾಸ್ಟರ್ ಮತ್ತು ಸ್ಲೇವ್ ಎಂಬ ಸಾಮಾಜಿಕ ಮತ್ತು ಅಂತಸ್ತಿನ ವಿಭಾಗವಿರುತ್ತದೆ. ಇಲ್ಲಿ ಸ್ಲೇವ್ ಆದವನಿಗೆ ಯಾವುದೇ ರೀತಿಯ ಸ್ವಂತಿಕೆ (ಸೆಲ್ಫ್) ಇರುವುದಿಲ್ಲ. ಆತ ಕೇವಲ ವ್ಯಾಪಾರ ಒಂದು ವಸ್ತುವಾಗಿ  ಅಸ್ತಿತ್ವದಲ್ಲಿ ಇರುತ್ತಾನೆ. ಆದರೆ ಭಾರತದಲ್ಲಿ ಇಂತಹ ರಚನೆಯನ್ನು ಎಲ್ಲಿ ಕಾಣಬಹುದು? ಅಬ್ಬಬ್ಬಾ ಎಂದರೆ ಜಮೀನುದಾರರನ್ನು ಕಾಣಬಹುದು, ಅಥವಾ ಅವರ ಒಕ್ಕಲುಗಳನ್ನು ಕಾಣಬಹುದು, ಜಮೀನುದಾರರಲ್ಲೇ ಒಳ್ಳೆಯವರನ್ನೂ  ಹಾಗೂ ಕೆಟ್ಟವರನ್ನೂ ಕಾಣಬಹುದು, ಆದರೆ ಫ್ಯೂಡಲ್ ಲಾರ್ಡಗಳನ್ನು ಕಾಣುವುದು ಎಲ್ಲಿ? ಯಾವ ಸಮುದಾಯಗಳು ಮಿಲಿಟರಿ ಶಕ್ತಿಯನ್ನು ಹೊಂದಿ ಕಾನೂನು ಗಳ ಮೂಲಕ ಇಡೀ ಸಮಾಜವನ್ನು ಅವರಿಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ?

ಯಾವುದೋ ಒಂದು ಪ್ರಾಣಿಯನ್ನು ಮನುಷ್ಯ ಎಂದು ಕರೆಯಬೇಕಾದರೆ ಅದಕ್ಕೆ ನಿರ್ದಿಷ್ಟವಾದ ಗುಣಲಕ್ಷಣಗಳು ಇರಬೇಕಾಗುತ್ತವೆ. ಅಂದರೆ ಯಾವ ಯಾವ ಅಂಶಗಳನ್ನು ಒಳಗೊಂಡಿದ್ದರೆ ಒಂದು ಪ್ರಾಣಿಯನ್ನು ಮನುಷ್ಯ ಎಂದು ಗುರುತಿಸಲು ಸಾಧ್ಯ ಎಂಬುದು ಅದರ ಕುರಿತು ಮಾತನಾಡುವವನಿಗೆ ಇರಬೇಕಾದ ಕನಿಷ್ಟ ಜ್ಞಾನ. ಮನುಷ್ಯ ಎಂಬ ಪದ ಗೊತ್ತಿದ್ದ ಮಾತ್ರಕ್ಕೆ ಕಣ್ಣಿಗೆ ಕಾಣುವ ಪ್ರಾಣಿಗಳನ್ನೆಲ್ಲಾ ಆ ಪದದಿಂದ ಸೂಚಿಸಿದರೆ ಅದು ಸಮಂಜಸವಾಗಲಾರದು. ಅಂತೆಯೇ ಫ್ಯೂಡಲ್ ಎಂಬುದು ಪಾಶ್ಚಾತ್ಯರ ಅರ್ಥಪ್ರಪಂಚವನ್ನು ಪ್ರತಿನಿಧಿಸುವ ಶಬ್ದವಾಗಿದ್ದು ಅದು ಇತರರ ಅರ್ಥಪ್ರಪಂಚವನ್ನು ಪ್ರತಿನಿಧಿಸುವುದಿಲ್ಲ. ಆದರೂ ಅಂತಹ ಶಬ್ದಗಳನ್ನು ಏಕೆ ಹೆಚ್ಚಾಗಿ ಭಾರತೀಯರು ಬಳಸುತ್ತಿದ್ದಾರೆ? ಇದಕ್ಕೆ ಮಾಸ್ತಿಯವರು ಅರ್ಧ ಉತ್ತವನ್ನು ನೀಡುತ್ತಾರೆ; ಆ ರೀತಿ ನಮಗೆ ಅರ್ಥವಾಗದ ಪದಗಳನ್ನು ಬಳಸುವುದು ನಮಗೆ ರೂಢಿಯಾಗಿಬಿಟ್ಟಿದೆ. ಆ ಪದದ ಮೂಲವ್ಯುತ್ಪತ್ತಿ ಏನು ಅದರ ಸಮಸಂಜಸತೆ ಏನು? ಎಂಬುದನ್ನು ಅರ್ಥಮಾಡಿಕೊಳ್ಳದೆ ಬಳಸಿಕೊಳ್ಳುವುದು ರೂಢಿಮಾಡಿಕೊಂಡಿದ್ದಾರೆ ಎಂದು ವಿವರಿಸುತ್ತಾರೆ. ಅದರ ಜೊತೆಗೆ ನಾವು ಬಳಸುವ ಭಾಷೆ ನಮ್ಮ ಅನುಭವವನ್ನು ಅಥವಾ ನಾವು ಬದುಕುವ ರೀತಿಯನ್ನು ವಿವರಿಸಬೇಕು ಎಂಬುದು ಮಾಸ್ತಿಯವರ ಪರಿಹಾರಾತ್ಮಕ ಉತ್ತರ.

ನಮ್ಮ ಅನುಭವದ ಭಾಷೆ ಎಂದರೇನು? ಕನ್ನಡ, ತಮಿಳು ಅಥವಾ ಯಾವುದಾದರೂ ಭಾರತೀಯ ಭಾಷೆಯಲ್ಲಿ ಮಾತನಾಡಿದರೆ ಅದು ಅನುಭವಾತ್ಮಕ ಭಾಷೆಯೆ? ಖಂಡಿತ ಅಲ್ಲ, ಬದಲಿಗೆ ಅನುಭವದ ಭಾಷೆ ಎಂದರೆ ನಾವು ಬದುಕುತ್ತಿರುವ ವಿಧಾನವನ್ನು ನಮಗೆ ಮತ್ತು ನಮ್ಮನ್ನು ಆಲಿಸುತ್ತಿರುವವರಿಗೆ ಅರ್ಥವಾಗುವ ರೀತಿಯಲ್ಲಿ ಮಾತನಾಡಲು ಬಳಸುವ ಪದಗಳು ಪರಿಕಲ್ಪನೆಗಳು ಅಥವಾ ಇತರ ಭಾಷಾ ಸಾಮಾಗ್ರಿಗಳು. ಉದಾಹರಣೆಗೆ ರಿಲಿಜನ್ ಪರಿಕಲ್ಪನೆಯನ್ನು ಕೆಲವು ಕಡೆ ರಿಲಿಜನ್ ಎಂದು ಮತ್ತೆ ಕೆಲವು ಕಡೆ ಧರ್ಮ ಎಂದು ಬಳಸಲಾಗುತ್ತಿದೆ. ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ವಿವರಿಸಲು ರಿಲಿಜನ್ ಎಂಬ ಶಬ್ದವನ್ನು ಯಥೇಚ್ಚವಾಗಿ ಬಳಸುತ್ತಿರುವುದನ್ನು ನೋಡಬಹುದು. ಜೊತೆಗೆ ಅದನ್ನು ಧರ್ಮ ಎಂದೂ ಸಹ ಅನುವಾದ ಮಾಡಲಾಗಿದೆ. ಆದರೆ ನಮ್ಮಲ್ಲಿರುವ ಧರ್ಮವನ್ನು ರಿಲಿಜನ್ ಪರಿಕಲ್ಪನೆಗೆ ಸಮಾನವಾಗಿ ಬಳಸಲು ಸಾಧ್ಯವಿಲ್ಲ. ರಿಲಿಜನ್ ನ ಅರ್ಥಪ್ರಪಂಚವೇ ಬೇರೆ, ಧರ್ಮದ ಅರ್ಥಪ್ರಪಂಚವೇ ಬೇರೆಯಾಗಿದೆ. ಧರ್ಮವು ಒಳ್ಳೆಯ ಕೆಲಸ, ದಾನ, ಕರ್ತವ್ಯ ದಂತಹ ಸಂಗತಿಗಳನ್ನು ಪ್ರತಿನಿಧಿಸಿದರೆ, ರಿಲಿಜನ್ ನಿರ್ದಿಷ್ಟವಾಗಿ ಸಾಂಸ್ಥಿಕ ರೂಪ ಹೊಂದಿರುವ, ಡಾಕ್ಟ್ರಿನ್ ಗಳನ್ನು, ಹೋಲಿ ಗ್ರಂಥಗಳನ್ನು ಪ್ರತಿನಿಧಿಸುವ ಪರಿಕಲ್ಪನೆಯಾಗಿದೆ. ಅವೆರಡು ವಿಭಿನ್ನ ಸಂಸ್ಕೃತಿಗಳಲ್ಲಿ ಹುಟ್ಟಿಬಂದಿರುವ ಪರಿಕಲ್ಪನೆಗಳಾಗಿವೆ. ಹಾಗೆಯೇ ಪೂಜೆಯನ್ನು ವರ್ಷಿಪ್ ಎಂದೂ ಸಹ ಅನುವಾದ ಮಾಡಲಾಗುತ್ತಿದೆ, ಅದೂ ಸಹ ಸಂಸ್ಕೃತಿ ನಿರ್ದಿಷ್ಟ ಅರ್ಥಗಳನ್ನು ಹೊಂದಿದ್ದು ವರ್ಷಿಪ್ ನ್ನು ಭಾರತದ ಯಾವ ಭಾಷೆಯಲ್ಲೂ ತರ್ಜುಮೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆ ಪರಿಕಲ್ಪನೆಗಳು ಇಲ್ಲಿಯ ವಾಸ್ತವವನ್ನು ಪ್ರತಿನಿಧಿಸುತ್ತವೆಯೇ ಎಂದು ಮೊದಲು ಅರ್ಥಮಾಡಿಕೊಳ್ಳಬೇಕಾದ ಜರೂರು ಇದ್ದೇ ಇದೆ.

ಹಾಗೆಯೇ ಫ್ಯೂಡಲ್ ಎಂಬ ಶಬ್ದ ಬಳಸಿದೊಡನೆ ಮನುಷ್ಯರ ನಡುವೆ ಇದ್ದಿರಬಹುದಾದ ಹಲವು ಬಗೆಯ ಸಂಬಂಧಗಳು, ಸಾಮರಸ್ಯಗಳು ಮಾಯವಾಗಿಬಿಡುತ್ತವೆ. ಎಲ್ಲವೂ ನಗಣ್ಯಗೊಂಡು ಕೊನೆಗೆ ಶೋಷಕ ಮತ್ತು ಶೋಷಿತ ಎಂಬುದು ಮಾತ್ರವೇ ಮನುಷ್ಯ ಸಂಬಂಧದ ನಿರ್ಣಾಯಕ ಅಂಶಗಳು ಎಂದಂತೆ ಆಗುತ್ತದೆ. ಆದರೆ ಇದು ವಾಸ್ತವವೆ? ಕುಂ.ವೀರಭದ್ರಪ್ಪನವರ ಅನುಭವವನ್ನೇ ನೋಡಿದರೂ ಅವರ ತಂದೆ ಎಷ್ಟೇ ದರ್ಪಿಷ್ಟರಾಗಿದ್ದರೂ, ಎಷ್ಟೇ ಅಹಂಕಾರ, ವೇಶ್ಯರೆನ್ನೂ ಹೊಂದಿದ್ದರೂ, ಅವರ ವಿರುದ್ದ ಮಾತನಾಡಿದವರಿಗೆ ಅಲ್ಲೇ ಹೊಡೆದು ಪೋಲೀಸ್ ಗು ಹಿಡಿದುಕೊಟ್ಟರೂ ಸಹ ಅಲ್ಲಿನ ಜನರಿಗೆ ಅನೇಕ ರೀತಿಯ ಸಹಾಯಗಳನ್ನು ಅವರು ಮಾಡುತ್ತಿದ್ದರು ಎಂಬುದನ್ನು ಹೇಳಲು ಕುಂ. ವಿ.ಯವರು ಮರೆಯುವುದಿಲ್ಲ. ಹಾಗಾದರೆ ಫ್ಯೂಡಲ್ ಆದ ಆ ವ್ಯಕ್ತಿ ಏಕ ಕಾಲಕ್ಕೆ ಅತೀಕೆಟ್ಟವನೂ ಆಗಿ ಜೊತೆಗೆ ಸಹಾಯ ಮಾಡುವ ಒಳ್ಳೆಯವನೂ ಆಗಿರಲು ಹೇಗೆ ಸಾಧ್ಯ? ಇದಕ್ಕೆ ಫ್ಯೂಡಲ್ ಪರಿಕಲ್ಪನೆಯ ಬೆನ್ನು ಬಿದ್ದರೆ ಉತ್ತರ ದೊರಕುವುದಿಲ್ಲ. ಆದರೂ ಇಂದು ಬಹುತೇಕವಾಗಿ ನಮ್ಮ ಬದುಕಿನ ವಿಧಾನಗಳನ್ನು ವಿವರಿಸಲು ಒಂದೋ ಪಾಶ್ಚಾತ್ಯರ ಯಥಾವತ್ತು ಕಲ್ಪನೆಗಳನ್ನು ಬಳಸುತ್ತಿದ್ದೇವೆ, ಇಲ್ಲವೇ ಆ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಂಡು ಬಳಸುತ್ತಿದ್ದೇವೆ. ಇದರ ಮೂಲಕ ನಮ್ಮ ಬದುಕನ್ನೂ ವಿವರಿಸದೆ ಆ ಪರಿಕಲ್ಪನೆಗಳ ಮೂಲ ಸ್ವರೂಪವನ್ನೂ ತಿಳಿದುಕೊಳ್ಳದೆ, ಪರಿಕಲ್ಪನೆಗಳನ್ನು ಹಾಗೂ ನಮ್ಮ ಬದುಕಿನ ವಿವರಣೆಗಳೆರಡನ್ನೂ ಸರ್ವನಾಶ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ.

ಈ ರೀತಿಯಾಗಿ ನಮ್ಮದಲ್ಲದ ಪರಿಕಲ್ಪನೆಗಳನ್ನು ನಮ್ಮ ಬದುಕನ್ನು ವಿವರಿಸಲು ಬಳಸುವಾಗ ಆಗುವ ಪ್ರಕ್ರಿಯೆಯೇ ಅಪಭ್ರಂಶತೆ. ಅಂದರೆ ಮೂಲ ಪರಿಕಲ್ಪನೆಯ ಅರ್ಥವನ್ನು ಹಾಳುಮಾಡುವುದು ಜೊತೆಗೆ ನಮ್ಮ ಬದುಕಿನ ಚಿತ್ರಣಗಳನ್ನೂ ಸರಿಯಾಗಿ ಕಟ್ಟಿಕೊಡದಿರುವುದು, ಎರಡೂ ಸೇರಿ ಈ ಅಪಭ್ರಂಶತೆ ಉಂಟಾಗುತ್ತದೆ. ಈ ಅಪಭ್ರಂಶತೆಯನ್ನು ಅರಿತುಕೊಳ್ಳದೆ ವಾಸ್ತವವನ್ನೇ ಹೇಳುತ್ತಿದ್ದೇವೆ ಎಂಬ ಹುಂಬುತನದ ಮಾತುಗಳು ವಾಸ್ತವವನ್ನು ತಿರುಚುತ್ತವೆಯೇ ಹೊರತು ಮತ್ತೇನನ್ನೂ ಹೇಳುವುದಿಲ್ಲ. ಇದಕ್ಕೆ ಸೆಕ್ಯುಲರಿಸಂ ತುಂಬಾ ಒಳ್ಳೆಯ ಉದಾಹರಣೆಯಾಗಬಹುದು. ಸೆಕ್ಯುಲರಿಸಂ ಎಂಬುದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಿಲಿಜನ್ ಮತ್ತು ಪ್ರಭುತ್ವದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಹುಟ್ಟಿಕೊಂಡ ಪರಿಕಲ್ಪನೆಯಾಗಿದೆ. ಅದನ್ನು ಭಾರತದಲ್ಲಿ ಇಂದು ‘ಧರ್ಮಸಹಿಷ್ಣುತೆ’, ‘ಜಾತ್ಯಾತೀತತೆ’, ‘ಸರ್ವಧರ್ಮ ಸಮಭಾವ’, ‘ಧರ್ಮನಿರಪೇಕ್ಷತೆ’ ಇನ್ನೂ ಮುಂತಾದ ರೀತಿಯಲ್ಲಿ ಅನುವಾದ ಮಾಡಲಾಗಿದೆ, ಆದರೆ ಸತ್ಯ ಏನೆಂದರೆ, ಅವ್ಯಾವ ಅನುವಾದಗಳು ಸೆಕ್ಯುಲರಿಸಂ ನಿಜ ಅರ್ಥವನ್ನು ಪ್ರತಿನಿಧಿಸುವುದಿಲ್ಲ. ನಮ್ಮಲ್ಲಿರುವ ಸಾಮರಸ್ಯವನ್ನು ವಿವರಿಸಲು ಸೆಕ್ಯುಲರ್ ಬಿಟ್ಟು ಬೇರೆ ಪದಗಳು ಇಲ್ಲವೆ?

ಗ್ರಾಮೀಣ ಪ್ರದೇಶಗಳಲ್ಲಿರುವ ಜನಜೀವನವನ್ನು ವಿವರಿಸಲು ಫ್ಯೂಡಲ್ ಒಂದೇ ಏಕಮೇವ ಮತ್ತು ಸೂಕ್ತವಾದ ಪರಿಕಲ್ಪನೆ ಎಂದಾದರೆ ನಮ್ಮ ಸಮಾಜದಲ್ಲಿರುವ ಬಹುತ್ವವನ್ನು, ವಿಭಿನ್ನ ಸಮುದಾಯಗಳ ನಡುವೆ ಇರುವ ಬೇರೆ ಬೇರೆ ತರಹದ ಸಂಬಂಧಗಳನ್ನು ಅರ್ಥೈಸಿಕೊಳ್ಳಲು ನಾವು ಅಸಮರ್ಥರು ಎಂದೇ ಅರ್ಥ.. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಅವರ ಸಂಸ್ಕೃತಿಗಳನ್ನು ಅರ್ಥೈಸಲು ಹಾಗು ಅವುಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಬೆಳೆದುಬಂದಿರುವ ಪರಿಕಲ್ಪನೆಗಳನ್ನೇ ನಮ್ಮ ಸಂಸ್ಕೃತಿಯನ್ನು ವಿವರಿಸಲಾಗಲಿ ಅಥವ ಇಲ್ಲಿನ ಸಮಸ್ಯೆ ಗಳನ್ನು ಚರ್ಚಿಸಲಾಗಲಿ ಬಳಸಿಕೊಂಡರೆ ಉಪಯುಕ್ತವಾಗುವುದಿಲ್ಲ. ಆದರೆ ಅಂತಹುದೇ ಹಲವಾರು ಪರಿಕಲ್ಪನೆಗಳನ್ನು ಪ್ರಭುತ್ವ ಹಾಗೂ ಬುದ್ದಿಜೀವಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದರಿಂದ ಭಾರತೀಯ ಸಮಾಜದ ಸಮಸ್ಯೆಗಳನ್ನು ಸರಿಯಾಗಿ ಗ್ರಹಿಸುವಲ್ಲಿ ಮತ್ತು ಅವುಗಳನ್ನು ಪರಿಹರಿಸುವಲ್ಲಿ ಹೀನಾಯವಾಗಿ ಸೋಲುತ್ತಿದ್ದಾರೆ.

ಚಿತ್ರ ಕೃಪೆ:http://www.kuukusblog.com/

10 ಟಿಪ್ಪಣಿಗಳು Post a comment
 1. ನವೀನ
  ಆಕ್ಟೋ 9 2013

  ಪದ ವೈಭವದಿಂದಲೇ ಸುಳ್ಳು ಇತಿಹಾಸ ಸೃಷ್ಟಿಸುವ ನಮ್ಮ ನಾಡಿನ ಬುದ್ಧಿಜೀವಿಗಳ ಬೌದ್ಧಿಕ ದಾರಿದ್ರ್ಯ ನೋಡಿದರೆ ವಿಷಾದವಾಗುತ್ತದೆ.ಇವರ ಬೌದ್ಧಿಕ ದಾರಿದ್ರ್ಯ ಎಲ್ಲಿಯವರೆಗೆಂದರೆ ಈಗಲೂ ಒಮ್ಮೊಮ್ಮೆ ‘ಇವತ್ತಿಗೆ ಅವರು ಬದುಕಿರಬೇಕಿತ್ತು,ಇವರು ಬದುಕಿರಬೇಕಿತ್ತು.ಆಗ ನಿಮಗೆ ಉತ್ತರ ಸಿಕ್ಕಿರುತಿತ್ತು ಅನ್ನುತ್ತಾರೆ” ಪೂರ್ ಫೆಲೋಸ್

  ಉತ್ತರ
 2. Nagesh nayak
  ಆಕ್ಟೋ 9 2013

  ಇದು ಬರೀ ಈ ಒ೦ದು ಪದದ ಸ್ಥಿತಿಯಲ್ಲ,ಕೆಲವು ಸಾಹಿತಿಗಳೂ ( ಮುಖ್ಯವಾಗಿ ಬುದ್ದಿಜೀವಿಗಳು) ಅತೀಯಾದ ಭಾಷಾ ಆಡ೦ಬರಕ್ಕೆ ಒತ್ತುಕೊಟ್ಟು ಓದನ್ನು ಮತ್ತಷ್ಟು ಕಠಿಣಗೊಳಿಸಿಬಿಡುತ್ತಾರೆ.ಹಾಗಾಗಿ ಜನ ಅ೦ಥಹ ಬುದ್ದಿಜೀವಿಗಳಿಗಿ೦ತ,ಅತ್ಯ೦ತ ಕಠೀಣ ತತ್ವ ಅಥವಾ ಸನ್ನಿವೇಶವನ್ನೂ,ಸುಲಭವಾಗಿ ಎಲ್ಲರಿಗೂ ಅರ್ಥವಾಗುವ೦ತೇ ಬರೆಯುವ ಬರಹಗಾರನನ್ನೇ ಇಷ್ಟಪಡುವುದು …good artice

  ಉತ್ತರ
 3. Umesh
  ಆಕ್ಟೋ 9 2013

  ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಬುದ್ಧಿಜೀವಿ ಅಂದರೆ ಯಾರು? ಯಾಕೆ ಕೆಲವೇ ಕೆಲವು ಗುಂಪಿನವರನ್ನು ಬುದ್ಧಿಜೀವಿ ಅಂತ ಕರೆಯುತ್ತೇವೆ? ಹಾಗೆ ನೋಡಿದರೆ ಎಲ್ಲರೂ ಬುದ್ಧಿಜೀವಿಗಳೇ. ಅವರವರಿಗೆ ದೇವರು ಕೊಟ್ಟಿರುವ ಬುದ್ಧಿಯನ್ನು ಆಯಾ ಸಂದರ್ಭಗಳಿಗೆ ಉಪಯೋಗಿಸಿಕೊಂಡು ಜೀವನ ಸಾಗಿಸುವವರು ಬುದ್ಧಿಜೀವಿಗಳು. ಅದು ಬಿಟ್ಟು ಕೆಲವೇ ಮಂದಿಗೆ ‘ಬುದ್ಧಿ’ ಜೀವಿ ಪಟ್ಟ ಕಟ್ಟಿ ಪತ್ರಿಕೆಗಳು ಹಾಗು ಟೀವಿ ಅವರ ಅಹಂಅನ್ನು ವೈಭವಿಕರಿಸುತ್ತಿವೆ ಅಷ್ಟೇ. ಒಂದು ಸಲ ಬುದ್ಧಿಜೀವಿ ಪಟ್ಟಸಿಕ್ಕಿಬಿಟ್ಟರೆ ಸಾಕು ಅವರನ್ನು ಹಿಡಿಯುವವರೇ ಇಲ್ಲ. ಅವರು ಹೇಳಿದ್ದೆಲ್ಲ ಶಾಸನವಾಗಿಬಿಡುತ್ತೆ. ಈಗ ಪಟ್ಟಕ್ಕೆ ಏರಿಸಲ್ಪಟ್ಟ “ಬುದ್ಧಿಜೀವಿ “ಗಳು ತಾವು ಎಲ್ಲ ವಿಚಾರಗಳಲ್ಲಿ ಪರಿಣಿತರು ಎಂದು ಭಾವಿಸಿ ಹೇಳಿಕೆಗಳನ್ನು ಕೊಡಲು ಯಾವಾಗಲೂ ತಯಾರು.

  ಉತ್ತರ
 4. ರಮೇಶ ಆನೇಹಟ್ಟಿ
  ಆಕ್ಟೋ 10 2013

  ಸಂತೋಷರೇ,

  ಇಷ್ಟೆಲ್ಲ ಸುತ್ತಿ ಬಳಸಿ ವಾದಿಸಿ ಏನು ಸಾಧಿಸುತ್ತಿದ್ದೀರೋ ತಿಳಿಯಲಿಲ್ಲ, ಅರ್ಥವಾಗಲಿಲ್ಲ.

  ನೀವನ್ನುತ್ತೀರಿ:
  “…ಸ್ಲೇವ್ ಆದವನಿಗೆ ಯಾವುದೇ ರೀತಿಯ ಸ್ವಂತಿಕೆ (ಸೆಲ್ಫ್) ಇರುವುದಿಲ್ಲ. ….ಭಾರತದಲ್ಲಿ ಇಂತಹ ರಚನೆಯನ್ನು ಎಲ್ಲಿ ಕಾಣಬಹುದು? ಅಬ್ಬಬ್ಬಾ ಎಂದರೆ ಜಮೀನುದಾರರನ್ನು ಕಾಣಬಹುದು, ಅಥವಾ ಅವರ ಒಕ್ಕಲುಗಳನ್ನು ಕಾಣಬಹುದು,…”

  ನಿಮ್ಮ ಈ ತರಹದ ವಾಕ್ಯಗಳನ್ನು ಓದಿದರೆ, “ಅಬ್ಬಬ್ಬಾ ಎಂದರೆ” ಅನ್ನುವಂತಹ ಪ್ರಯೋಗಗಳನ್ನು ಗಮನಿಸಿದರೆ, ಓದುಗರಲ್ಲಿ ಜಮೀನುದಾರಿವರ್ಗದ ದೌರ್ಜನ್ಯ ಕೃತ್ಯಗಳು (ಪ್ರಮಾಣದಲ್ಲಾಗಲೀ / ಪರಿಣಾಮದಲ್ಲಾಗಲೀ) ಕ್ಶುಲ್ಲಕವೇನೋ ಎಂದು ಭಾವನೆಯಾಗಬೇಕು. ನಿಮ್ಮ ಈ ತರಹದ ಸಾರಸಗಟು ಗ್ರಹಿಕೆ-ತೀರ್ಮಾನಗಳೇ ಸಮಂಜಸವೆನ್ನುವುದಾದ ಪ‍ಕ್ಷದಲ್ಲಿ, “ತುಳಿತಕ್ಕೊಳಗಾದ ಒಂದು ದೊಡ್ಡಸಂಖ್ಯೆಯ ವರ್ಗದ ಇತಿಹಾಸ-ಭವಿಷ್ಯಗಳ ಮೇಲೆ ತುಳಿಯುವ ವರ್ಗಗಳ ಪರಿಣಾಮವಿರುವುದೇನು ನಗಣ್ಯವೇನು?” -ಅಂತ ಒಂದು ಪ್ರಶ್ನೆ ಏಳುತ್ತೆ.

  ನಿಮ್ಮ ಕಣ್ಣಿಗೆ ಭಾರತದಲ್ಲಿ ‘ಸ್ಲೇವ್’ ಕಾಣಲಿಲ್ಲ ಎನ್ನುವಂತೆ ಬರೆಯುತ್ತೀರಿ. ‘ಫ್ಯೂಡಲಿಸಂ’ ಎಲ್ಲಿತ್ತು ಅಂತ ಕೇಳುತ್ತೀರಿ. ನಮಗಾದರೋ ಐದನೇ ತರಗತಿಯ ಸಮಾಜವಿಜ್ನಾನದಲ್ಲಿ ಅದನ್ನ ಊಳಿಗಮಾನ್ಯ ಪದ್ಧತಿ, ಜೀತ ಪದ್ದತಿ ಅಂತ ತಿಳಿಸಿದ್ದರು.
  ನೀವೇ ಬಳಸಿರುವ ‘ಒಕ್ಕಲು’ ಅನ್ನೋದಕ್ಕೂ ‘ಜೀತಗಾರ’ ಅಂತಲೂ ಅರ್ಥವಿದೆ (ಇನ್ಯಾವ ‘ಸಾಧು’ ಅರ್ಥದಲ್ಲಿ ನೀವು ಬಳಸಿರಬಹುದೋ ತಿಳಿಯದು). ಈಗಲೂ ಪತ್ರಿಕೆಗಳಲ್ಲಿ ಮನಕಲಕುವ ಜೀತಪದ್ದತಿಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ‘ಸ್ಲೇವ್’ ಬೆಂಕಿಯಾದರೆ ‘ಜೀತ’ ಅನ್ನೊದೇನು ಬಾಣೆಲೆಗೆ ಕಮ್ಮಿಯಲ್ಲ ಬಿಡಿ. (ಇಲ್ಲಿ ನಾನು ಹೇಳಿದ ಪ್ರತೀ ಅನುವಾದ/ಅರ್ಥವನ್ನು ಬರಹ ಅಂತರ್ಜಾಲ ನಿಘಂಟಲ್ಲಿ ನೋಡಿ ಧೃಢಪಡಿಸಿಕೊಳ್ಳಬಹುದು.)

  ಒಟ್ಟಿನಲ್ಲಿ ಭಾರತದಲ್ಲಿ ಜೀತಪದ್ದತಿಯಾಗಲಿ ಜಮೀನ್ದಾರೀ ದರ್ಪ ದೌರ್ಜನ್ಯಗಳಾಗಲೀ, -ಅದರಲ್ಲಿ ಹಿಂಸೆ-ಶೋಷಣೆಗಳಾಗಲೀ ಇದ್ದಿದ್ದು ಸುಳ್ಳಾ? ಅವುಗಳ ಪಳೆಯುಳಿಕೆಗಳು ಈಗಲೂ ಕಾಣಸಿಗುತ್ತದಲ್ಲ? (ರಾಯಲಸೀಮಾಗೆ ಹೋಗಿ ಬನ್ನಿ ಬೇಕಾದರೆ…) ಇನ್ನೂ ಸಹಾ ಉದ್ಧಾರವಾಗದ ಈ ದಮನಿತ ವರ್ಗದವರ – ವಂಚಿತರ ಏಳ್ಗೆಗೆ ನಿಮ್ಮ ಈ ತರಹದ ಬೌದ್ಧಿಕ ಕಸರತ್ತುಗಳು ಯಾವ ರೀತಿ ಸಹಕಾರಿಯಾದಾವು?

  ಉತ್ತರ
  • ಆಕ್ಟೋ 10 2013

   ರಮೇಶ್ ರವರೆ
   ಭಾರತದಲ್ಲಿರುವ ಮತ್ತು ಇದ್ದ ಜೀತ ಪದ್ದತಿಗೂ ಉಳಿಗಮಾನ್ಯ ಪದ್ದತಿಗೂ ಸಂಬಂಧವಿಲ್ಲ, ಜೀತ ಪದ್ದತಿಯನ್ನು ಉಳಿಗಮಾನ್ಯ ಪದ್ದತಿ ಎಂದು ಗುರುತಿಸಿದರೆ ಉಳಿಗಮಾನ್ಯ ಪದ್ದತಿಯ ಹಿನ್ನೆಲೆಯಲ್ಲಿ ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಬೇಕಾಗುತ್ತದೆಯೇ ಹೊರತು ಜೀತಪದ್ದತಿಗಲ್ಲ. ಜೀತವನ್ನು, ಕೆಲವು ಜನರ ದೌರ್ನ್ಯಜಗಳನ್ನು ಅವುಗಳು ಯಾವ ಸ್ವರೂಪದಲ್ಲಿವೆಯೋ ಅದೇ ಸ್ವರೂಪದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವಾಗ, ನಮಗೆ ಅರ್ಥವಾಗದಿರುವ ಕಲ್ಪನೆಗಳನ್ನು ತೆಗೆದುಕೊಂಡು ಸಂಗತಿಗಳನ್ನು ಇನ್ನೂ ಸಂಕೀರ್ಣಮಾಡುವ ಅಗತ್ಯವಾದರೂ ಏನಿದೆ.

   ಅಂತರ್ಜಾಲದಲ್ಲಿ ಅನುವಾದವನ್ನು ದೃಢಪಡಿಸಿಕೊಂಡ ಮಾತ್ರಕ್ಕೆ ಅದು ನಮ್ಮ ಅನುಭವದ ಭಾಷೆಯಾಗಬೇಕಿಲ್ಲ. ಇದೇ ಸಮಸ್ಯೆಯನ್ನು ಲೇಖನದಲ್ಲಿ ಚರ್ಚಿಸಿರುವುದು. ವಿದ್ವಾಂಸರುಗಳು ಬಳಸಿದ ಮಾತ್ರಕ್ಕೆ, ಅಂತರ್ಜಾಲದಲ್ಲಿ ಇರುವ ಮಾತ್ರಕ್ಕೆ ಆ ಶಬ್ದಗಳೇ ವಾಸ್ತವವನ್ನು ಪ್ರತಿನಿಧಿಸಿಬಿಡುತ್ತವೆ ಅನ್ನುವುದು ಭ್ರಮೆ….

   ಉತ್ತರ
 5. Strawman
  ಆಕ್ಟೋ 10 2013

  ಈ ಬರಹದಲ್ಲಿ ಹಲವು ಸ್ವಕಲ್ಪಿತ ವೈರಿಗಳ ಜತೆ ಲೇಖಕರು ಗುದ್ದಾಡುತ್ತಿರುವಂತೆ ತೋರುತ್ತದೆ.
  ೧) ಮಾಸ್ತಿ ಹೇಳಿದಂತೆ – ಪದಗಳು ಬದುಕು, ಅನುಭವವನ್ನು ವಿವರಿಸಬೇಕು – ಆದರೆ ಈ ‘ಬುದ್ಧಿಜೀವಿ’ ಯಾರು ಎಂದು ತಿಳಿಯುವುದಿಲ್ಲ. “intelligentsia”ದ ಕನ್ನಡ ಅನುವಾದವಲ್ಲವೆ? ನಮ್ಮಲ್ಲಿರುವ ಅಂತಹವರ ಗುಣ ಲಕ್ಷಣಗಳನ್ನು ಮೊದಲು ವಿವರಿಸಬೇಕಲ್ಲವೆ?
  ೨) ಪದಗಳು “ಪಾಶ್ಚಾತ್ಯ ಸಂಸ್ಕೃತಿ”ಯಿಂದ ಆಮದಾದುದು ಎಂಬ ಟೀಕೆ. feudal ಎಂಬಂತಹ ಪದಗಳಿಗೆ “ಪಾಶ್ಚಾತ್ಯ”ರಲ್ಲೇ ಹಲವು ಅರ್ಥವಿದ್ದು ಹಲವು ಅನುಭವಗಳನ್ನು ವಿವರಿಸುತ್ತವೆ ಎಂಬ ಮಾತು ಲೇಖಕರಿಗೆ ಗೊತ್ತಿಲ್ಲ ಎಂದು ನಂಬಲಾಗುತ್ತಿಲ್ಲ. ಅದಕ್ಕೊಂದು “ಸೀಮಿತ” “ಸರಳ” ಅರ್ಥವನ್ನು ಹಿಡಿದು ಹೊರಟರೆ ಹಲವು ಗೊಂದಲಕ್ಕೆ ಲೇಖಕರು ಬಿದ್ದಂತೆ ಬೀಳಬೇಕಾಗುತ್ತದೆ.ಹಾಗಾಗಿಯೇ ಅಂತಹ ಪದಗಳ ನಮ್ಮ ಅರ್ಥ/ಅನುಭವ ಏನು ಎಂದು ಪರಿಶೀಲಿಸಬೇಕೇ ಹೊರತು ಅದನ್ನು “ಅಬ್ಬಬ್ಬಾ ಎಂದರೆ” ಎಂಬಂತಹ value judgement ಮಾಡಿದರೆ ಸಂಪ್ರದಾಯವಾದಿಗಳ ಚಪ್ಪಾಳೆ ಗಿಟ್ಟಿಸಬಹುದಷ್ಟೆ ಹೊರತು ಬೇರೇನು ಲಾಭವಿಲ್ಲ.
  ೩) “ಹಾಗೆಯೇ ಫ್ಯೂಡಲ್ ಎಂಬ ಶಬ್ದ ಬಳಸಿದೊಡನೆ ಮನುಷ್ಯರ ನಡುವೆ ಇದ್ದಿರಬಹುದಾದ ಹಲವು ಬಗೆಯ ಸಂಬಂಧಗಳು, ಸಾಮರಸ್ಯಗಳು ಮಾಯವಾಗಿಬಿಡುತ್ತವೆ.” ಎನ್ನುತ್ತಾರೆ. “ಫ್ಯೂಡಲ್” ಪದ ನಮ್ಮ ಅನುಭವವನ್ನು ವಿವರಿಸದೇ ಹೋದ ಮೇಲೆ ಅದು ಹೇಗೆ “ಮಾಯ” ಮಾಡಿಬಿಡುತ್ತದೆ? ಹೆಚ್ಚೆಂದರೆ ಸಂಬಂಧ ಹಾಗು ಸಾಮರಸ್ಯಗಳನ್ನು ವಿವರಸಿಲ್ಲ ಎಂದಷ್ಟೇ ಹೇಳಬಹುದು. ತೀರ alarmist ನಿಲುವು.
  ೪) “ಫ್ಯೂಡಲ್” ಪದದ ಕ್ಲಿಷ್ಟತೆ ಕುಂವಿಗೆ ಅರಿವಿರುವಷ್ಟು ಲೇಖಕರಿಗೆ ಇದ್ದಹಾಗಿಲ್ಲ. ಏಕೆಂದರೆ ಕುಂವಿಗೆ ಅದರ ಅನುಭವವಿದೆ. ಲೇಖಕರಿಗೆ ಇಲ್ಲ. ಹಾಗಾಗಿ ಲೇಖಕರು ಸರಳೀಕೃತ ಅರ್ಥದ ಬೆನ್ನು ಹತ್ತಿ “ಹಾಗಾದರೆ ಫ್ಯೂಡಲ್ ಆದ ಆ ವ್ಯಕ್ತಿ ಏಕ ಕಾಲಕ್ಕೆ ಅತೀಕೆಟ್ಟವನೂ ಆಗಿ ಜೊತೆಗೆ ಸಹಾಯ ಮಾಡುವ ಒಳ್ಳೆಯವನೂ ಆಗಿರಲು ಹೇಗೆ ಸಾಧ್ಯ?” ಎಂಬಂತಹ ಬಾಲಿಶ ಪ್ರಶ್ನೆಗಳನ್ನು ಎತ್ತಬಲ್ಲವರಾಗುತ್ತಾರೆ. ಜೈ ಹೋ!
  ೫)ಸಮಾಜ ವಿಜ್ಞಾನ(?)ದಲ್ಲಿ ಡಾಕ್ಟರೇಟ್ ಮಾಡಿರುವ ಲೇಖಕರು ಸಮಾಜದ ಕ್ಲಿಷ್ಟ ವಿಷಯಗಳನ್ನು ವಿವರಿಸಲು ಇರುವ ಕಷ್ಟಗಳನ್ನು ಅರಿಯದವರೆ? ವಿಜ್ಞಾನದಲ್ಲಿ ಕ್ಲಿಷ್ಟ ವಿಷಯಗಳು ಅರಿವಾಗಬೇಕಾದರೆ, ಮೂಲಭೂತ ವಿಷಯಗಳನ್ನು ಬಿಡಿಸಿ ಅರ್ಥಮಾಡಿಕೊಳ್ಳಬೇಕು ಎಂಬ ಸಂಗತಿ ನಿಜ. ಆದರೆ ಅದನ್ನು ಹೀಗೆ ಸರಳೀಕರಿಸುತ್ತಾ ಹೊರಟರೆ ಕ್ಲಿಷ್ಟ ಸಂಗತಿಗಳನ್ನು ವಿವರಸುವಲ್ಲಿಯೇ ಸೋಲುವುದು ಕಟ್ಟಿಟ್ಟ ಬುತ್ತಿ. “ಗ್ರಾಮೀಣ ಪ್ರದೇಶಗಳಲ್ಲಿರುವ ಜನಜೀವನವನ್ನು ವಿವರಿಸಲು ಫ್ಯೂಡಲ್ ಒಂದೇ ಏಕಮೇವ ಮತ್ತು ಸೂಕ್ತವಾದ ಪರಿಕಲ್ಪನೆ ಎಂದಾದರೆ” ಎಂಬಂತಹ ಮಾತುಗಳು (http://en.wikipedia.org/wiki/Straw_man) ಉಳಿದವರ “ಅಪಭ್ರಂಶತೆ” ಹಾಗಿರಲಿ – ಲೇಖಕರ ಅರಿವಿನ “ಅಪಭ್ರಂಶತೆ”ಯನ್ನು ಮುಖಕ್ಕೆ ರಾಚುವಂತಿದೆ.

  ಉತ್ತರ
  • ಆಕ್ಟೋ 10 2013

   ಇಲ್ಲಿ ಸ್ವಕಲ್ಪಿತ ವೈರಿಗಳೊಡನೆ ಗುದ್ದಾಡುವ ಪ್ರಮೇಯವಿಲ್ಲ, ಸಾಮಾಣ್ಯವಾಗಿ ಭೌದ್ದಿಕ ಜಗತ್ತು ಬಳಸುತ್ತಿರುವ ಪರಿಕಲ್ಪನೆಗಳಲ್ಲಿರುವ ಸಮಸ್ಯೆಗಳನ್ನು ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.

   ಬುದ್ದಿಜೀವಿಗಳು ಇಂಗ್ಲೀಷಿನ ಇಂಟಲೆಕ್ಟುವಲ್ ಪದದ ಅನುವಾದವಾಗಿದೆ, ಅದರಲ್ಲೇನೂ ಅನುಮಾನವಿಲ್ಲ. ನಾವು ಬಳಸುವ ಎಲ್ಲಾ ಪರಿಕಲ್ಪನೆಗಳಲ್ಲಿಯೂ ಸಮಸ್ಯೆ ಇದೆ ಎಂದು ನಾನು ಹೇಳುತ್ತಿಲ್ಲ, ಹಲವಾರು ಪಾಶ್ಚಾತ್ಯ ಪದಗಳು ಕನ್ನಡದಲ್ಲಿ ಅನುವಾದವಾಗಿ ಬಳಕೆಯಲ್ಲಿವೆ, ಅವುಗಳಲ್ಲೆಲ್ಲಾ ತೊಂದರೆ ಇದೆ ಎಂಬ ಬಾಲಿಶ ವಾದವನ್ನು ಇಲ್ಲಿ ಯಾರೂ ಮಾಡುತ್ತಿಲ್ಲ, ಶರ್ಟ್ ಗೆ ಅಂಗಿ ಎಂದು ಕರೆದರೆ ಅದು ಅನುವಾದವಲ್ಲವೇ? ಎಂದರೆ ಹೌದು ಅದು ಅನುವಾದವೇ..ಅದರಲ್ಲಿ ಏನೂ ತೊಂದರೆ ಇಲ್ಲ,ಏಕೆಂದರೆ ಅಂಗಿ ಮತ್ತು ಶರ್ಟ್ ಎಂಬ ಎರಡೂ ಶಬ್ದಗಳು ನಿರ್ದಿಷ್ಟ ವಸ್ತುವನ್ನು ಗುರುತಿಸಲು ಅನುಮಾನ ಮೂಡಿಸುವುದಿಲ್ಲ..ಬುದ್ದಿಜೀವಿಗಳ ಗುಣಕ್ಷಣಗಳನ್ನು ವಿವರಿಸುವುದು ಲೇಖನದ ಉದ್ದೇಶವಲ್ಲ, ಬದಲಿಗೆ ಸಮಾಜವನ್ನು ವಿವರಿಸಲು ಬಳಸುತ್ತಿರುವ ಕೆಲವಾರು ಪರಿಕಲ್ಪನೆಗಳಲ್ಲಿ ಇರುವ ಸಮಸ್ಯೆಗಳನ್ನು ತೋರಿಸುವುದು ಮುಖ್ಯ ಉದ್ದೇಶವಾಗಿದೆ.

   ಫ್ಯೂಡಲ್ ಪದಕ್ಕೆ ಪಾಶ್ಚಾತ್ಯರಲ್ಲೇ ಬೇರೆ ಬೇರೆ ಅರ್ಥಗಳಿವೆಯೇ? ಯಾವ ಯಾವ ಅರ್ಥಗಳಿವೆ ಎಂಬುದನ್ನು ತಿಳಿಸಿ. ಹಾಗೂ ವಿಭಿನ್ನ ರೀತಿಯ ವಿವರಣೆಗಳಿದ್ದಾಗ, ಅವೆಲ್ಲವನ್ನೂ ಒಳಗೊಳ್ಳುವ ಒಂದು ಸರಳ ಅರ್ಥವನ್ನು ತೆಗೆದುಕೊಂಡರೆ ತೊಂದರೆ ಏನು? ಸರಳ ಅರ್ಥ ತೆಗೆದುಕೊಂಡರೆ ಗೊಂದಲಗಳು ಹೇಗೆ ಏಳುತ್ತವೆ,ಏಕೆಂದರೆ ಸಂಕೀರ್ಣವಾದ ವಿಭಿನ್ನ ಅರ್ಥಗಳನ್ನು ತೆಗೆದುಕೊಂಡರೆ ಮಾತ್ರ ಗೊಂದಲಗಳು ಏಳುತ್ತವೆ, ಇಲ್ಲವಾದರೆ ಹೇಗೆ ಏಳಲು ಸಾಧ್ಯ? ಜೊತೆಗೆ ಲೇಖನದ ಯಾವ ಭಾಗದಲ್ಲಿ ವ್ಯಾಲ್ಯೂ ಜಡ್ಜ್ ಮೆಂಟ್ ಇದೆ ತಿಳಿಸಿ, ನಿರ್ದಿಷ್ಟ ಸಮುದಾಯಗಳಿಂದ ಚಪ್ಪಾಳೆ ಗಿಟ್ಟಿಸುವುದು, ಪ್ರಶಸ್ತಿ ಪಡೆಯುವುದು ಇಂತಹ ಉದ್ದೇಶಗಳಿಗಾಗಿಯೇ ಬರೆಯುವ ಇನ್ನೊಂದು ಸಮೂಹ ಕರ್ನಾಟಕದಲ್ಲಿ ಇದೆ. ಅದರಲ್ಲಿ ಅದು ಸಫಲವಾಗುತ್ತಲೂ ಇದೆ, ನನಗೆ ಆ ಎರಡೂ ಉದ್ದೇಶಗಳೂ ಇಲ್ಲ, ನಿಮಗೆ ಹಾಗನ್ನಿಸಿದ್ದರೆ ಅದು ಯಾವುದೋ ಒಂದು ಪ್ರಮಾದವಿರಬಹುದು ಬಿಡಿ..ಸಮಸ್ಯೆ ಇದೆ ಎಂದು ಎನಿಸಿದರೆ ಮಾತ್ರ ಅದರ ಕುರಿತು ಬರೆಯುವ ಆಸಕ್ತಿ ನನ್ನಲ್ಲಿರುವುದು.

   ಫ್ಯೂಡಲ್ ಪದ ಬಳಸಿಕೊಂಡು ವಿವರಣೆ ನೀಡಲು ಪ್ರಾರಂಭಿಸಿದರೆ ಆ ವಿವರಣೆಯಲ್ಲಿ ಸಾಮರಸ್ಯಗಳು ಸಂಬಂಧಗಳು ಮಾಯವಾಗಿಬಿಡುತ್ತವೆ ಎನ್ನುವುದಕ್ಕೂ ಅಂತಹ ಸಂಬಂಧಗಳನ್ನು ವಿವರಿಸುವುದಿಲ್ಲ ಎಂದು ಹೇಳುವುದಕ್ಕೂ ಏನು ವ್ಯತ್ಯಾಸ? ಎರಡೂ ಒಂದೇ ಅರ್ಥವನ್ನು ಕೊಡುತ್ತಿಲ್ಲವೆ? ಅದರಲ್ಲಿ ನಿಮ್ಮ ಪ್ರಶ್ನೆ ಏನು? ಇದನ್ನೇ ಇಲ್ ಫಾರ್ಮಡ್ ಪ್ರಶ್ನೆ ಎನ್ನುವುದು, ಅದರಲ್ಲಿ alarmist ನಿಲುವು ಏನಿದೆ? ಇದು ವೃಥಾ ಆರೋಪದಂತೆ ಕಾಣುತ್ತಿರುವ “ವಿರೋಧಕ್ಕಾಗಿ ವಿರೋಧ” ಪ್ರಶ್ನೆಗಾಗಿ ಪ್ರಶ್ನೆ”ಯ ನಿಲುವನ್ನು ತೋರಿಸುತ್ತಿದೆ.

   ಕ್ಲಿಷ್ಟ ಪರಿಕಲ್ಪನೆಗಳನ್ನು ಕ್ಲಿಷ್ಟವಾಗಿ ಬರೆದಿರುವ ಲೇಖನವೂ ಇದೆ, ಅದರ ಆಡಿಯನ್ಸ್ ಬೇರೆ, ಆದರೆ ಇಲ್ಲಿ ಸರಳವಾಗಿ ಬರೆದ ಉದ್ದೇಶ ಎಲ್ಲರಿಗೂ ಅರ್ಥವಾಗಲಿ ಎಂದು..ಸರಳವಾಗಿ ಬರೆಯಲು ಸಾಧ್ಯವಾಗದಿದ್ದರೆ ಆ ಪರಿಕಲ್ಪನೆಗಳು ಬರೆಯವವರಿಗೆ ಅರ್ಥವೇ ಆಗಿಲ್ಲ ಎಂದೇ ಅರ್ಥ..ಅರಿವಿನ ಅಪಭ್ರಂಶತೆ ಏನಿದೆ, ನಿಮ್ಮ ವಾದವನ್ನು ಮಂಡಿಸಿ, ಚರ್ಚಿಸುವ, ತದನಂತರ ನಿರ್ದರಿಸುವ ಯಾರದ್ದು ಅಪಭ

   ಉತ್ತರ
 6. kiran gajanur
  ಆಕ್ಟೋ 10 2013

  olleya lekhana

  ಉತ್ತರ
 7. vageesh
  ಆಕ್ಟೋ 10 2013

  ಕರ್ನಾಟಕದಲ್ಲಿ ಊಳಿಗಮಾನ್ಯ ಮತ್ತು ಜಮೀನ್ದಾರಿ ಪದ್ಧತಿಯ ತೀವ್ರತೆ ಕಡಿಮೆ ಇರಬಹುದು. ಆದರೆ ಆಂಧ, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ದಕ್ಷಿಣದ ಕೆಲವು ಹಾಗೂ ಉತ್ತರದ ಹಲವು ರಾಜ್ಯಗಳಲ್ಲಿ ಈಗಲೂ ಆ ದರ್ಪ ದೌರ್ಜನ್ಯ ಮುಂದುವರಿದಿದೆ. ರಣವೀರ ಸೇನೆಯಂತಹ ಸಂಘಟನೆಗಳಿವೆ. ೧೯೮೨ರಲ್ಲಿ ನಮ್ಮ ಮನೆ ಪಕ್ಕದಲ್ಲೇ ಕೆಲಸದವಳೊಬ್ಬಳನ್ನು (ಅವಳು ದಲಿತೆಯಲ್ಲ )ಬೆತ್ತಲೆ ಮಾಡಿ, ಕವಲು ಇರುವ ಕೋಲಿನಿಂದ ದೂಡಿ ದೂಡಿ ಹೊಡೆದ ಘಟನೆ ನಾನು ನೋಡಿರದಿದ್ದರೂ ಕೇಳಿ ಬಲ್ಲೆ. ಇಂತಹ ಅವಮಾನವೀಯ ಘಟನೆಗಳು ನಡೆದಿರುವುದು ಜಮೀನ್ದಾರರ ದೌರ್ಜನ್ಯಕ್ಕೆ ಸಿಗುವ ನಿರ್ದಶನಗಳಿವೆ. ಹೀಗಾಗಿ ಅಬ್ಬಬ್ಬಾ ಶಬ್ದ ಪ್ರಯೋಗ ಸರಿಯಲ್ಲ. ಸ್ಲೇವ್ ಅಂದರೆ ಸೇವಕ ಅಂತಾನೂ ಹೇಳಬಹುದು. ಆದರೆ, ಒಂದು ಶಬ್ದ ಸಾಂದರ್ಭಿಕ ಅರ್ಥದ ಜೊತೆಗೆ ಒಳಾರ್ಥವನ್ನೂ ಹೊಂದಿರುತ್ತದೆ. ನಮ್ಮಲ್ಲಿರುವ ಜೀತ ಪದ್ಧತಿ ಅತ್ಯಂತ ಹೇಯವಾದುದು. ಹೀಗಾಗಿ ಸ್ಲೇವ್ ಎಂಬುದು ನಮ್ಮಲ್ಲಿಲ್ಲ ಎನ್ನುವುದು ತಪ್ಪು. ಒಕ್ಕಲುತನದ ಬಗ್ಗೆ ನಾನು ಕಂಡಿದ್ದು ಹೇಳುತ್ತೇನೆ. ನಮ್ಮ ಮನೆಯಲ್ಲೂ ೮೦ರ ಮಧ್ಯಭಾಗದವರೆಗೂ (ಸರಕಾರದ ಕ್ವಾರ್ಟರ್ಸ್ ಪರಿಕಲ್ಪನೆ ಆರಂಭವಾಗುವವರೆಗೂ) ಇತ್ತು. ಅವರಿಗೆ ಮನೆ ನಾವು ಕೊಡುತ್ತಿದ್ದೆವು. ಅದಕ್ಕೆ ಪ್ರತಿಯಾಗಿ ಅವರ ಮನೆಯವರೆಲ್ಲಾ ನಮ್ಮ ಅಡಿಕೆ ತೋಟಕ್ಕೆ ಕೆಲಸಕ್ಕೆ ಬರಲೇಬೇಕಾಗಿತ್ತು. ಆದರೆ ಅವರಿಗೆ ವೇತನವನ್ನು ಮತ್ತು ಬೇಕಾದಾಗ ಸಾಲ ಕೊಡಲಾಗುತ್ತಿತ್ತು. ಮನೆಯಲ್ಲಿ ಶುಭ ಸಮಾರಂಭವಿದ್ದರೆ ಅಂದಿನ ಸಂಪೂರ್ಣ ದಿನ ಅವರಿಗೆ ಊಟ, ತಿಂಡಿ ಎಲ್ಲವೂ ಮನೆಯಲ್ಲೇ ಆಗುತ್ತಿತ್ತು.ಜೊತೆಗೆ ಅವರ ಮನೆಯಲ್ಲಾಗುವ ಮದುವೆ ಮೊದಲಾದ ಶುಭ ಸಮಾರಂಭಕ್ಕೆ ಒಂದಿಷ್ಟು ಹಣ, ಅಕ್ಕಿ ಸೇರಿದಂತೆ ಅವಶ್ಯಕ ವಸ್ತುಗಳನ್ನೂ ಕೂಡ ನೀಡಲಾಗುತ್ತಿತ್ತು. ದಿನ ನಿತ್ಯ ಅವರಿಗೆ ಒಂದು ತೆಂಗಿನ ಕಾಯಿ, ಎಲೆ ಅಡಿಕೆ ತಿನ್ನುವವರಿಗೆ ಹೊಗೆಸೊಪ್ಪು ಮಧ್ಯಾಹ್ನ ಊಟ ಆದ ಬಳಿಕ ಜಗಲಿಯಲ್ಲಿ ಇಟ್ಟು ಬಿಡುವ ಕ್ರಮವಿತ್ತು. ಅವರು ಅಥವಾ ಅವರ ಮುಂದಿನ ಪೀಳಿಗೆ ಕ್ವಾರ್ಟರ್ಸ್‌ಗೆ ಹೋದ ಬಳಿಕ ಈಗಲೂ ನಮ್ಮ ಮನೆಗೆ ವರ್ಷಕ್ಕೊಮ್ಮೆಯಾದರೂ ಬರುವ ಪರಿಪಾಠವಿದೆ.

  ಉತ್ತರ
 8. ಮೇ 20 2016

  ನಾನು ಒಂದು ಚರ್ಚೆಯಲ್ಲಿ ತೊಡಗಿದ್ದಾಗ ಹೀಗೆ ಒಬ್ಬ ಫ್ಯೂಡಲ್ ಎಂದು ದೂರಿದನು. ಆಗ ನಾನು ಆ ವ್ಯಕ್ತಿಗೆ ಕೇಳಿದೆ ಫ್ಯೂಡಲ್ ಎಂದರೆ ಏನು? ಅದರ ಅರ್ಥ ಗೊತ್ತಿದೆಯಾ? ಎಂದು ಪ್ರಶ್ನೆ ಹಾಕಿದೆ, ಆಗ ಆ ವ್ಯಕ್ತಿ ಅರ್ಥವಿರಲಿ, ಕನಿಷ್ಠಪಕ್ಷ ಅದರ ವ್ಯುತ್ಪತ್ತಿ ಆದದ್ದು ಎಲ್ಲಿಂದ ಎಂಬುದರ ಬಗ್ಗೆಯೇ ತಿಳಿದಿಲ್ಲ. ಯಾರೋ ಏನೋ ಹೇಳಿದ್ದನ್ನು ಕೇಳಿಕೊಂಡು ಎಲ್ಲರ ಮುಂದೆಯೂ ಫ್ಯೂಡಲ್ ಎಂದು ಹೇಳಿಕೊಂಡು ಓಡಾಡುತ್ತಿದ್ದವನ ಬಾಯಿಗೆ ಬೀಗ ಜಡಿದು, ಕೊಂಚ ಬುದ್ದಿಗೆ ಕೆಲಸ ಹಚ್ಚಿದೆ.ಇನ್ನು ಮಾತನಾಡಬೇಕಾದರೆ ಅರ್ಥ ಗೊತ್ತಿರದ ಪದಗಳನ್ನು ಬಳಸಿ ಅನರ್ಥ ಮಾಡುವವರು ಹಲವು ಬಾರಿ ಯೋಚಿಸಬೇಕು

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments