ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 12, 2013

1

ಸುದ್ಧಿ ಮಾಡುವವರಲ್ಲಿ ಶುದ್ಧಿ ಇಲ್ಲವಾದರೆ. . .

‍ನಿಲುಮೆ ಮೂಲಕ

– ಡ್ಯಾನಿ ಪಿರೇರಾ,ಹಳ್ಳಿಮೈಸೂರು

Paid Media       ಇಂದು ವಾರ್ತಾ ವಾಹಿನಿಗಳು ಯಥಾತ್‍ಶಿರ್ಘ ಸುದ್ಧಿಗಳನ್ನು ಜಗತ್ತಿನ ಮೂಲೆ ಮೂಲೆಗೂ ಅತಿ ವೇಗದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತಿವೆ. ಇದರಿಂದ ಉಪಯೋಗವಿದೆ ಎನ್ನುವುದು ನಿಜವೇ  ಆದರೂ ಸುದ್ಧಿ ಹೇಳುವ ಮನಸ್ಸುಗಳ ಹಿಂದೆ ಶುದ್ಧಿ ಇಲ್ಲದಿರುವುದು ಗೋಚರವಾಗುತ್ತಿದೆ. ಹಾಗಾಗಿ ಅವುಗಳ ಹಿಂದಿರುವ ಉದ್ದೇಶ ಪ್ರಶ್ನಾರ್ಹವಾಗುತ್ತಿದೆ.  ಒಂದು ಕಾಲವಿತ್ತು ಒಬ್ಬ ವ್ಯಕ್ತಿಗೆ  ಅಪಮಾನವೆನಿಸುವ  ಸುದ್ಧಿಯೊಂದು ಪತ್ರಿಕೆ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಬಂದರೆ ಅದರಿಂದ ವ್ಯಕ್ತಿಗೆ ಅದು ನಿಜವಿರಲಿ, ಸುಳ್ಳಿರಲಿ  ಒಂದೋ ಅವನಿಗದು ಆಘಾತ ತರುವಂತಿತ್ತು ಅಥವಾ ಆತ ತನ್ನನ್ನು ತಾನು ಆತ್ಮ ವಿಮರ್ಶೆಗೆ ಒಳಪಡಿಸುವ ಸಾಧನವಾಗಿರುತ್ತಿತ್ತು. ಅದು ವ್ಯಕ್ತಿಯೊಬ್ಬ ಸಾರ್ವಜನಿಕ ಜೀವನದಲ್ಲಿರುವವನಾಗಿದ್ದರೆ ಕೂಡಲೇ ರಾಜೀನಾಮೆ ನೀಡಿ ಅದರಿಂದ ಬಿಡುಗಡೆ ಹೊಂದುವ ಸಾಕ್ಷಿಪ್ರಜ್ಞೆ ಆತನನ್ನು ಎಚ್ಚರಿಸುತ್ತಿತ್ತು. ಆದರೆ ಕಾಲ ಬದಲಾಗಿದೆ. ಅಕ್ಷರ ಮಾಧ್ಯಮಗಳಿಗಿಂತ ದೃಶ್ಯ ಮಾಧ್ಯಮಗಳು ಅದರಲ್ಲೂ ಸುದ್ಧಿ ವಾಹಿನಿಗಳು ಇನ್ನಿಲ್ಲದ ವೇಗದಲ್ಲಿ ಕಾರ್ಯಪ್ರವೃತ್ತವಾಗಿವೆ.  ಕ್ಷಣಾರ್ಧದಲ್ಲಿ ಅದು ಅಸಲಿಯೋ ನಕಲಿಯೋ ಅಂತೂ ಸುದ್ಧಿಗಳು ಬಿತ್ತರವಾಗುತ್ತವೆ. ಆದರೆ ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಮಾತ್ರ ಅದು ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ.  ಏಕೆಂದರೆ ಸುದ್ಧಿ ಮಾಡುವವನ ಮತ್ತು ಸುದ್ಧಿಯಾಗುವವನಲ್ಲಿ  ಚಿತ್ತಶುದ್ಧಿಯಿಲ್ಲದಿರುವುದು! ಸುದ್ಧಿ ಮಾಡುವ ದಾವಂತದಲ್ಲಿ ಅದರಿಂದಾಗುವ ಪರಿಣಾಮವನ್ನು ಸುದ್ಧಿ ಮಾಡುವವ ಯೋಚಿಸುತ್ತಿಲ್ಲವೋ ಅಥವಾ ಅದು ತನಗೆ ಸಂಬಂದಿಸಿದ್ದಲ್ಲ ಎನ್ನುವ ತಾತ್ಸಾರ ಮನೋಭಾವವೋ ಗೊತ್ತಿಲ್ಲ ಅಂತೂ ಅನಾಹುತ ಮಾಡುವುದರಲ್ಲೇ ಆನಂದ ಕಾಣುತ್ತಿವೆ ನಮ್ಮ ಅನೇಕ ದೃಶ್ಯ ಮಾಧ್ಯಮಗಳು.

ಕೆಲ ವರ್ಷಗಳ ಹಿಂದೆ ಕನ್ನಡದ ಸುದ್ಧಿ ಮಾಧ್ಯಮವೊಂದು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಕ್ಕಳು ತೀವ್ರ ಅಸ್ವಸ್ಥವೆಂದು ‘ಬ್ರೇಕಿಂಕ್ ನ್ಯೂಸ್’ ಹಾಕಿತು. ಲಸಿಕೆ ಹಾಕಿಸಿಕೊಂಡ ಮಕ್ಕಳ ಪೋಷಕರು ಆತಂಕದಿಂದ ಆಸ್ಪತ್ರೆ ಸುತ್ತ ಜಮಾವಣೆಗೊಂಡರು. ಜನರಿಗೆ ಅಲ್ಲಿನ ಆಸ್ಪತ್ರೆ ಮತ್ತು ಅದರ ಸಿಬ್ಬಂದಿ ದಾಳಿಯ ವಸ್ತುವಾದರು. ಆದರೆ ಅದರ ನೈಜ ವಿಚಾರವೆಂದರೆ ಅಸ್ವಸ್ಥಗೊಂಡ ಒಂದೆರಡು ಮಕ್ಕಳು ಸೇವಿಸಿದ ಆಹಾರ Food Poison ಅಗಿದ್ದು .  ಆ ಸುದ್ಧಿ ಮಾಧ್ಯಮ ಮಾಡಿದ ಅವಾಂತರದ ಬಗ್ಗೆ ಅಂದಿನ  ಗೃಹ ಸಚಿವರಾದ ವಿ.ಎಸ್. ಆಚಾರ್ಯರು ಗಮನ ಸೆಳೆದರೂ ಅದು ತನ್ನ ದುಡುಕುತನದ ಬಗ್ಗೆ ವಿಷಾದ ವ್ಯಕ್ತಪಡಿಸಲಿಲ್ಲ. ಹೀಗೆ ಸುದ್ಧಿ ಮಾಧ್ಯಮಗಳು ಸುದ್ಧಿ ಮಾಡುವ ಭರದಲ್ಲಿ ಅವುಗಳು ಮಾಡುವ ಅವಾಂತರಗಳೇ ದೊಡ್ಡ ಸುದ್ಧಿಯಾದರೂ ಅವುಗಳಿಗೇನು ಪಶ್ಚತ್ತಾಪವಾಗುವುದಿಲ್ಲ. ಜನರಿಗೆ ಉಚಿತ ಬುದ್ಧಿ ಹೇಳುವುದಷ್ಟೇ ಅವುಗಳ ಕೆಲಸ

       ಇಂದು ತಮ್ಮ ಚಾನೆಲ್‍ನಲ್ಲಿ ‘ಇದು ನಮ್ಮ ಚಾನಲ್‍ನಲ್ಲಿ ಮಾತ್ರ’ ಎಂದು ಹೇಳುತ್ತ ಮತ್ತೊಬ್ಬರ ಚಾರಿತ್ರ್ಯಗೆಡಿಸುವ ಕೆಲಸ ಮಾಡುತ್ತಿವೆ. ಯಾವನೊ ಒಬ್ಬ ಮತಿಗೇಡಿ ಅಶ್ಲೀಲ ಕೆಲಸ ಮಾಡುತ್ತಿದ್ದಾನೆ ಎನ್ನುವ ದೃಶ್ಯವನ್ನು ಮತ್ತೊಷ್ಟು ಅಶ್ಲೀಲಗೋಳಿಸಿ ತೋರಿಸುವ ಕೆಲಸ ಮಾಡಲಾಗುತ್ತಿದೆ. ಅಂದು ನೀಲಿ ಚಿತ್ರದ ವೀಕ್ಷಣೆ ಮಾಡಿದ ಸುದ್ಧಿ ವಿಧಾನ ಸೌಧದಿಂದ ಹರಿದು ಬಂತು.  ಅಲ್ಲಿದ್ದ ಮಂತ್ರಿ ಮಹಾಶಯರು ಅದನ್ನು ವಿಕ್ಷಿಸಿ, ಕೆಟ್ಟಕಾರಣಕ್ಕಾಗಿ ಸುದ್ಧಿಯಾಗಿದ್ದರು. ಆದರೆ ಅದನ್ನು ಮಾಧ್ಯಮದಲ್ಲಿ ‘Blue Boys’ ಎನ್ನುವ ಶಿರ್ಷಿಕೆಯೊಂದಿಗೆ ಅದರಲ್ಲಿನ ಹೆಣ್ಣೊಬ್ಬಳ ಚಿತ್ರವನ್ನು ಸುದ್ಧಿ ಮಾಧ್ಯಮದ ತಂತ್ರಜ್ಞಾನ ಬಳಸಿ ಮತ್ತಷ್ಟು ರಂಗಾಗಿ ತೋರಿಸಲಾಯಿತು. ಒಂದು ಸುದ್ಧಿಯನ್ನು ಅವಶ್ಯಕತೆಗಿಂದ ಹೆಚ್ಚು ತೋರಿಸುತ್ತಾ, ಮಂತ್ರಿಗಳಷ್ಟೇ ನೋಡಿದ ಬೆತ್ತಲೆ ಹೆಣ್ಣೆನ ದೃಶ್ಯವನ್ನು ಇಡೀ ಜಗತ್ತಿಗೆ ತೋರಿಸಿ ತಾವೇ ಬೆತ್ತಲಾದ ಕುಖ್ಯಾತಿ ಈ ಸುದ್ಧಿ ವಾಹಿನಿ ಪಡೆದುಕೊಂಡಿತು. ಇದರಿಂದ ಸಮಾಜಕ್ಕೆ ಕೊಟ್ಟ ಸಂದೇಶ ಮಾತ್ರ ಸ್ಪಷ್ಟವಿತ್ತು, ಅದೆಂದರೆ ‘ನೀಲಿ ಚಿತ್ರ’ ಎಂದರೆ ಏನೆಂದು ತಿಳಿಯದವರಿಗೆ ಇದರ ಪರಿಚಯವನ್ನು ಈ ಸುದ್ಧಿ ವಾಹಿನಿಗಳು ಮಾಡಿದವು.

ಕಳೆದ ವಾರ ಬೀದರ್ ಜಿಲ್ಲೆಯ ಬಿಜೆಪಿ ನಾಯಕರಿಬ್ಬರು ಒಂದು ಅಶ್ಲೀಲ ನೃತ್ಯ ಪ್ರದರ್ಶನ ವೀಕ್ಷಿಸುತ್ತಿದ್ದ ದೃಶ್ಯಗಳನ್ನು ಕನ್ನಡದ ಒಂದೆರಡು ಸುದ್ಧಿ ಚಾನಲ್‍ಗಳು ಅವುಗಳನ್ನು ಅತಿರಂಜಿತವಾಗಿ ವಿಶ್ಲೇಷಣೆಯೊಂದಿಗೆ  ಮಾಡಿದವು. ಅಷ್ಟೇ ಅಲ್ಲದೇ ಬೆತ್ತಲೆ ಇರುವ ಹೆಣ್ಣೊಬ್ಬಳ ಸ್ಥಿರ ಚಿತ್ರವನ್ನು ಪರದೆ ಎಡತುದಿಯಲ್ಲಿ ಅದಕ್ಕೊಂದು ಅಸಹ್ಯವೆನಿಸುವ ಶಿರ್ಷಿಕೆ ಕೊಟ್ಟು ಆ ವಿಚಾರದ ಬಗ್ಗೆ ದೊಡ್ಡ ಚರ್ಚೆಯನ್ನೇ ಆರಂಭಿಸಲಾಯಿತು. ನಿಜ ಹೇಳಬೇಕೆಂದರೆ ಆ ದೃಶ್ಯಗಳನ್ನು ಯಾವುದೇ ಪೂರ್ವಗ್ರಹವಿಲ್ಲದೇ, ಒಂದಷ್ಟು ಕಾಮನ್ ಸೆನ್ಸ್ ಇರಿಸಿಕೊಂಡು ವೀಕ್ಷಿಸಿದರೆ ಅದೊಂದು ನಕಲಿ ವಿಡಿಯೊ ತುಣುಕು ಎನ್ನುವ ತನ್ನ ಅಸಲಿ ತನವನ್ನು ಅದು ಹೇಳುತ್ತಿತ್ತು. ತಾಂತ್ರಿಕತೆಯನ್ನೇ  ಕೈಚಳಕವನ್ನಾಗಿರಿಸಿಕೊಂಡಿರುವ ಈ ಸುದ್ಧಿಮಾಧ್ಯಮಗಳಿಗೆ ಇದು ಅಸಲಿ ಚಿತ್ರಣವಲ್ಲ ಎಂದು ತಿಳಿಯದಷ್ಟು ಅಜ್ಞಾನ ಆವರಿಸಿತ್ತು. ಈ ನಾಯಕರ ಗೌರವ-ಮರ್ಯಾದೆಯನ್ನು ಈ ಸುದ್ಧಿ ಮಾಧ್ಯಮಗಳು ತಮ್ಮ ಪ್ರಚಾರದ ವಸ್ತುವನ್ನಾಗಿಸಿಕೊಂಡಿದ್ದವು. ಆ ದೃಶ್ಯದಲ್ಲಿ ಬಂದ ಮುಖ್ಯ ಪಾತ್ರಧಾರಿಗಳು ತಾವಲ್ಲ, ಅದು ನಕಲಿ ಚಿತ್ರಣ. ಒಂದೊಮ್ಮೆ ಅದರಲ್ಲಿರುವವರು ನಾವೇ ಆಗಿದ್ದೇವೆ ಎಂದು ರೂಪಿತವಾದರೇ ನಮ್ಮನ್ನು ವಿಧಾನ ಸೌಧದ ಮುಂದೆ ನೇಣಿಗೇರಿಸಿ ಎಂದು ಸ್ಪಷ್ಟೀಕರಿಸಿದರೂ, ಅಲ್ಲಿನ ಜಿಲ್ಲಾ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿ ಅದರಲ್ಲಿರುವ ವ್ಯಕ್ತಿಗಳು ನಾವಲ್ಲ, ಅದು ಕೃತಕ ಜೋಡಣೆ ಇದರ ಬಗ್ಗೆ ತನಿಖೆ ನಡೆಸಿ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಆ ವ್ಯಕ್ತಿಗಳ ಮುಖದಲ್ಲಿ ತಾವು  ಈ ತಪ್ಪನ್ನು ಮಾಡಿಲ್ಲ ಎನ್ನುವ ಆ ಆತ್ಮವಿಶ್ವಾಸ ಗೋಚರಿಸುತ್ತಿದ್ದರೂ ಈ ಚಾನಲ್‍ಗಳ  ಕ್ಯಾಮರ ಕಣ್ಣುಗಳಿಗೆ ಗೋಚರಿಸದಿರುವುದು ಸುದ್ಧಿ ಮಾಧ್ಯಮಗಳ ಅಸಲಿ ತನಕ್ಕೆ ಸಾಕ್ಷಿಯಾಗಿತ್ತು.    ಇವರಿಗೆ ನೈಜ ಸುದ್ಧಿಗಿಂತ ಟಿಆರ್‍ಪಿ ಹೆಚ್ಚಿಸುವುದೇ ಮೂಲ ಗುರಿ ಎನ್ನುವಂತೆ, ಈ ನಾಯಕರ ಹಾಗೂ ಅವರ ಪಕ್ಷಗಳಿಗೆ ‘ಸರ್ಟಿಪಿಕೇಟ್’ಕೊಡುವ ಕೆಲಸವನ್ನು ಬೆಳಿಗ್ಗೆಯಿಂದ ಮಧ್ಯಾಹ್ನ ಮೂರರವರೆಗೆ  ಮುಂದುವರೆಸಿದ್ದವು. ಬೋಳು ಹಣೆ, ಕೆದರಿದ ಕೂದಲಿನೊಂದಿಗೆ ಮಾಧ್ಯಮದಲ್ಲಿ ವಿಷಯ ನಿರೂಪಿಸುತ್ತಿದ್ದ ನಿರೂಪಕಿ ಹೆಣ್ಣಿನ ಮಾನಾಪಮಾನ, ಭಾರತೀಯ ಸಂಸ್ಕøತಿಯ ಬಗ್ಗೆ ಮಾತಾಡುತ್ತಿರುವುದನ್ನು ನೋಡಿದರೆ ಇದು ವಿಚಾರಣೆ ನಡೆಸದೇ ಆಪಾದಿತನಿಗೆ ನೇಣುಗಂಬಕ್ಕೇರಿಸಬೇಕೆನ್ನುವಂತೆ ತೀರ್ಪು ನೀಡುವ ನ್ಯಾಯಧೀಶನಂತೆ ನಡೆಯುತ್ತಿತ್ತು ಇವರ ಚರ್ಚೆ, ಬಿಜೆಪಿ ಪಕ್ಷದವರು ಮಾತ್ರ ‘ನೀಲಿ ಚಿತ್ರ’ಗಳನ್ನ ವೀಕ್ಷಿಸುವುದು ಎಂಬಂತಿತ್ತು ಇವರ ವಿಶ್ಲೇಷಣೆ!

ನೀಲಿ ಚಿತ್ರಗಳು ಎಂದರೆ ಗೊತ್ತಿಲ್ಲದ ಮಕ್ಕಳಿಗೆ ಇದರ ಪ್ರದರ್ಶನ ಮತ್ತು ಪರಿಚಯ ದಾರಾಳವಾಗಿ ಇದರಿಂದ ಆಗುತ್ತಿದೆ. ವೀಕ್ಷಕರಿಗೆ ಉಚಿತ ನೀತಿ ಪಾಠ ಹೇಳುವ ಈ ಸುದ್ದಿ ಮಾಧ್ಯಮಗಳು  ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳು ಅನುಸರಿಸುತ್ತಿರುವ ಮಾರ್ಗ ಸಂಪೂರ್ಣ ಅನೈತಿಕ ಎಂದು ಇವರಿಗೇಕೆ ಅನಿಸುವುದಿಲ್ಲ?

ಕಳೆದೆರಡು ದಿನಗಳ ಹಿಂದೆ ಹಿಂದಿ ಚಿತ್ರ ನಟ ಹೃತಿಕ್ ರೋಶನ್ ಬೆಂಗಳೂರಿನ ಕಾಲೇಜೊಂದರಲ್ಲಿ ಹೆಣ್ಣು ಮಕ್ಕಳೊಂದಿಗೆ ಕುಣಿದು ಕುಪ್ಪಳಿಸುವ ದೃಶ್ಯಗಳನ್ನು ತೋರಿಸಲಾಯಿತು. ಆತ ವಿದ್ಯಾರ್ಥಿನಿಯೊಬ್ಬಳನ್ನು ಎತ್ತಿ ಕುಣಿದಾಡುವ ದೃಶ್ಯ ಅದರಲ್ಲಿ ತೋರಿಸಲಾಯಿದಲ್ಲದೇ ಅಲ್ಲಿನ ವಿದ್ಯಾರ್ಥಿನಿಯರು ಸಾಲು ಸಾಲಾಗಿ ಬಂದು ಅಪ್ಪಿಕೊಳ್ಳುವುದು ಆ ಅಪ್ಪುಗೆಯಲ್ಲಿ ಆ ಹೆಣ್ಣುಮಕ್ಕಳು ಧನ್ಯತಾಭಾವ ಕಾಣುವ ದೃಶ್ಯಗಳನ್ನು ಪದೇ ಪದೇ ತೋರಿಸಲಾಯಿತು. ಶೈಕ್ಷಣಿಕ ಚಟುವಟಕೆ ನಡೆಯುವ ಕಾಲೇಜೊಂದರಲ್ಲಿ ಈ ರೀತಿಯ ಕಾರ್ಯಕ್ರಮವೊಂದು ಅನಪೇಕ್ಷಿತವೇ ಎನ್ನಬಹುದು. ಆದರೆ ಹೃತಿಕನನ್ನು ದೇವಲೋಕದಿಂದ ಇಳಿದು ಬಂದ ದೇವದೂತನಂತೆ ಹೊಗಳಲಾಗುತ್ತಿತ್ತು. ಆ ದೃಶ್ಯಗಳಿಗಿಂತ ಆ ದೃಶ್ಯಗಳಿಗೆ ಕೊಡಲಾದ ಶಿರ್ಷಿಕೆಗಳು ಹೆಚ್ಚು ಮುಜುಗರ ಎನಿಸುತ್ತಿದ್ದವು- ಹೃತಿಕನನ್ನು ಅಪ್ಪಿ ಮುದ್ದಾಡಿದ ಹೆಣ್ಣು ಮಕ್ಕಳು, ಕಾಲೇಜು ಹೆಣ್ಣು ಮಕ್ಕಳಿಗೆ ರೋಮಾಂಚನ. . . ಇತ್ಯಾದಿ. ಇವು ಯಾವ ಸಂದೇಶ ಕೊಡಬಲ್ಲವು?  ಸುದ್ಧಿ ಮಾಧ್ಯಮವೊಂದು ನಟನೊಬ್ಬನನ್ನು ಸಾಕ್ಷಾತ್ ಭಗವಂತ ಪ್ರತ್ಯಕ್ಷಗೊಂಡಂತೆ ತೋರುತ್ತಿದ್ದದ್ದು. ಆ ನಟ ಆ ಹೆಣ್ಣು ಮಕ್ಕಳಲ್ಲಿ ಮತ್ತು ಆ ಕಾಲೇಜಿನ ವಾತಾವರಣದಲ್ಲಿ ಒಬ್ಬ ವಿದ್ಯಾರ್ಥಿಯಲ್ಲಿರಬೇಕಾದ ಸಹಜ ಗಾಂಭೀರ್ಯ ತಂದು ಕೊಟ್ಟೀತೆ? ಒಂದೊಮ್ಮೇ ಆ ದೃಶ್ಯಗಳು ಅವರ ಪೋಷಕರು ಈ ದೃಶ್ಯಗಳನ್ನು ವೀಕ್ಷಿಸುವಾಗ ಅವರ ಮಕ್ಕಳ ಮೇಲೆ ಅವರಿಗುಂಟಾಗುವ ಮುಜುಗರ ಯಾವ ರೀತಿಯದ್ದಾಗಬಹುದು? ಇಷ್ಟಕ್ಕೂ ಒಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಒಡಮೂಡಿ ಬರುವ ಒಂದು ‘Role Model’ ಕಲ್ಪನೆ ಯಾವ ಮಟ್ಟದ್ದಾಗಿರಬೇಕು?  ಇಂದು ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳ ‘ಸಿನಿಕತನ’ ಅವರನ್ನು ಎತ್ತಕೊಂಡೊಯ್ಯಬಹುದು. ಈ ಪರಿಕಲ್ಪನೆ ಆ ವಯಸ್ಸಿನಲ್ಲಿ ಆ ಹೆಣ್ಣು ಮಕ್ಕಳಿಗೆ ಇಲ್ಲದೇ ಹೋಗಬಹುದು ಆದರೆ ಅದನ್ನು ತೋರಿದ್ದೇ ತೋರುವ ಸುದ್ದಿ ವಾಹಿನಿಗಿರಬೇಕು ಅಲ್ಲವೇ?

ಅದು ಎನ್‍ಡಿಎ ಸರ್ಕಾರದ ಆಡಳಿತವಿದ್ದ ಕಾಲ. ಕೆಲ ಪಾಶ್ಚಿಮಾತ್ಯ ಮೂಲದ ದೃಶ್ಯ ಮಾಧ್ಯಮಗಳು ತಮ್ಮ ಚಾನಲ್‍ಗಳಲ್ಲಿ ಸೌಂದರ್ಯ ಸ್ಪರ್ಧೆಗಳ  ಹೆಸರಿನಲ್ಲಿ ಪಾಶ್ಚತ್ಯ ಹೆಣ್ಣನ್ನು ಬೆತ್ತಲೆ ಮಾಡಿ ತೋರಿಸುವ ಕೆಲಸವನ್ನು ಹೆಗ್ಗಿಲ್ಲದೆ ಮಾಡುತ್ತಿದ್ದವು. ಅಂದಿನ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಈ ರೀತಿ ಅಶ್ಲೀಲ ಪ್ರದರ್ಶನವನ್ನು ತಡೆಯುವ ಹಿನ್ನೆಲೆಯಲ್ಲಿ ಅದಕ್ಕೋದು ಕಾನೂನು ರೂಪದ ನೀತಿ ಸಂಹಿತೆಯನ್ನು ತರುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನವನ್ನು ಇಲ್ಲಿನ ಅಕ್ಷರ ಮಾಧ್ಯಮಗಳು Fashion TV ಗೆ ಸೀರೆ ತೊಡಿಸಿದ ಸುಷ್ಮಾ ಸ್ವರಾಜ್ ಎಂಬ ಅಗ್ರಬರೆಹದೊಂದಿಗೆ ವರದಿ ಮಾಡಿದ್ದವು. ಈ ಕಾನೂನು ಕನ್ನಡ ನೆಲದಲ್ಲಿ ಜಾರಿಗೆ ಬರಲು ಇಲ್ಲಿನ ಕೆಲ ಸುದ್ಧಿ ವಾಹಿನಿಗಳು ಬೇಕಾಗುವ ಅರ್ಹತೆ ಸಂಪಾದಿಸುವ ಕಾರ್ಯದಲ್ಲಿ  ಪೈಪೋಟಿ ನಡೆಸದಿದ್ದರೆ ಅಷ್ಟರ ಮಟ್ಟಿಗೆ ಕನ್ನಡಾಂಬೆ ಧನ್ಯೆ ಎನ್ನಬಹುದು.

ಚಿತ್ರ ಕೃಪೆ : hyderabad-india-online.com

1 ಟಿಪ್ಪಣಿ Post a comment
  1. Rajesh j
    ಆಕ್ಟೋ 12 2013

    Good one …sir..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments