ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 18, 2013

ಸೇವಾ ಮನೋಭಾವನೆ ಮತ್ತು ಯುವಕ ಮಂಡಲ

‍ನಿಲುಮೆ ಮೂಲಕ

– ಶ್ರೀ ಸಿದ್ಧಕೃಷ್ಣ, ಶ್ರೀ ಸಂತೋಷ್ ಹೆಚ್, ಶ್ರೀ ವಿಶ್ವನಾಥ ಆಚಾರ್ಯ

untitledಭಾರತ ಗ್ರಾಮಗಳ ದೇಶ, ಸರಿ ಸುಮಾರು ಆರು ಸಾವಿರಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ, ಭಾರತದ ಹೃದಯ ಗ್ರಾಮಗಳಲ್ಲಿದೆ. ಇಂತಹ ಗ್ರಾಮಗಳಲ್ಲೊಂದು ವೈಶಿಷ್ಟ್ಯ ಗ್ರಾಮವೇ ಎಲ್ಲೂರು. ‘ದಕ್ಷಿಣದ ಕಾಶಿ’ ಎಂದೇ ಪ್ರಸಿದ್ದಿ ಪಡೆದಿರುವ ಮಹತೋಭಾರ ಶ್ರೀ ವಿಶ್ವನಾಥ ದೇವಾಲಯವಿರುವ ಗ್ರಾಮ ಇದಾಗಿದೆ. ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ಸಾಂಸ್ಕೃತಿಕ ಮೆರುಗಿನೊಂದಿಗೆ ತನ್ನದೇ ಛಾಪನ್ನು ಉಡುಪಿ ಜಿಲ್ಲೆಯಲ್ಲಿ ಮೂಡಿಸಿದೆ. ಕರ್ನಾಟಕದಲ್ಲಿ ಕರಾವಳಿಯು ಮಾನವ ಸಂಪನ್ಮೂಲದಲ್ಲಿ ತನ್ನದೇ ಶ್ರೇಷ್ಠತೆ ಹೊಂದಿರುವಂತೆಯೇ ಎಲ್ಲೂರು ಗ್ರಾಮವೂ ಈ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಐವತ್ತು ವರ್ಷ ಪೂರ್ಣಗೊಳಿಸಿರುವ ಇಲ್ಲಿನ ಯುವಕ ಮಂಡಲವೇ ಸಾಕ್ಷಿ. ಎಲ್ಲೂರು ಯುವಕ ಮಂಡಲವು ಸಾಮಾಜಿಕ; ದಾರ್ಮಿಕ ಕಾರ್ಯಗಳ ಸೇವೆಯೊಂದಿಗೆ ವಿಶಿಷ್ಟ ಸಂಘಟನೆಯಾಗಿ ತನ್ನದೇ ಆದ ಒಂದು ಹೊಸ ಮಾದರಿಯನ್ನೇ ಹುಟ್ಟು ಹಾಕಿದೆ ಎಂದರೇ ಅತಿಶಯೋಕ್ತಿಯಲ್ಲ.

ಕೆಲ ಯುವಕ ಮಂಡಲಗಳಂತೆ ವಾರ್ಷಿಕೋತ್ಸವ, ಮನರಂಜನೆಗೆ ಮಾತ್ರ ಸೀಮಿತಗೊಳ್ಳದೆ ‘ಯುವಕರು ನಿಜವಾದ ಸಂಪನ್ಮೂಲ’ ಎಂಬುದನ್ನು ಕಾರ್ಯವೈಖರಿಯಿಂದ ಸಾಧಿಸಿದ ಹಿರಿಮೆ ಎಲ್ಲೂರು ಯುವಕ ಮಂಡಲದ್ದು. ಇಂದೂ ಕೂಡ ಊರಿನಲ್ಲಿ ಎಲ್ಲಿ ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳಿರಲಿ, ಧಾರ್ಮಿಕ ಕಾರ್ಯಗಳಿರಲಿ,ದೇವಸ್ಥಾನದ ಕಾರ್ಯಗಳಿಲ್ಲಿ ಉಚಿತ ಸೇವೆಗೆ ಯುವ ಪಡೆ ನಾಮುಂದು ತಾಮುಂದು ಎಂದು ಶ್ರದ್ಧೆಯಿಂದ ತೊಡಗಿಸಿಕೊಳ್ಳುವುದನ್ನು ಕಂಡಾಗ ಅಲ್ಲಿನ ಸ್ಥಳ ಮಹಿಮೆಯನ್ನು ಕಂಡವರೆಲ್ಲ ಕೊಂಡಾಡಲೇ ಬೇಕು. ಇತ್ತೀಚಿನ ದಿನಗಳಲ್ಲಿ ಸುತ್ತ ಮುತ್ತಲ ಗ್ರಾಮಕ್ಕೂ ಇವರ ಸೇವೆ ವಿಸ್ತಾರಗೊಂಡು ಜನಮನ ಮೆಚ್ಚಿಸಿದೆ. ಶಾಲಾ ಕಾಲೇಜು ಬಾಲಕರು, ತರುಣರು, ಉದ್ಯೋಗಸ್ಥರು ಅಲ್ಲದೆ ಮಧ್ಯವಯಸ್ಕರು ಸಕ್ರಿಯವಾಗಿ ಧರ್ಮ ಜಾತಿ ಭೇದವಿಲ್ಲದೆ, ಹಿರಿಕಿರಿಯರೆನ್ನದೆ, ಒಡನಾಡಿಗಳಂತೆ, ಸಹೋದರರಂತೆ ಪರಸ್ಪರ ಕೈಜೋಡಿಸಿ ಸೇವಾ ಕಾರ್ಯದಲ್ಲಿ ತತ್ಪರರಾಗಿ ದುಡಿಯುವುದರಿಂದಲೇ ಎಲ್ಲೂರು ಇಂದು ತನ್ನದೇ ಆದ ಐಕ್ಯತೆಯನ್ನು ಹೊಂದಿ ತನ್ನದೇ ಆದ ಸುಖ ಶಾಂತಿ ನೆಲೆಸಿರುವ ಗ್ರಾಮವೆನಿಸಿದೆ. ಯುವಕ ಮಂಡಲದ ಕಾರ್ಯಗಳೆಲ್ಲವೂ ಸಮಾಜೋಪಯೋಗಿಯಾಗಿದ್ದು ಶ್ರಮದಾನದ ಮೂಲಕ ಹಗಲಿರುಳೆನ್ನದೆ ದುಡಿವ ಯುವ ಪಡೆಯು ತಮ್ಮ ಬಿಡುವಿನ ವೇಳೆ ಹಾಗೂ ರಜಾದಿನಗಳನ್ನು ಬಳಸಿಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿರುವುದು ಸ್ತುತ್ಯಾರ್ಹ.

ಕ್ರಿ.ಶ 1962 ರ ನವೆಂಬರ್ 27ರಂದು ಎಲ್ಲೂರಿನಲ್ಲಿ ಆರಂಭಗೊಂಡ ಯುವಕ ಮಂಡಲವು ಉದ್ಘಾಟನೆಯ ದಿನದಂದೇ ಭಾರತ ಮತ್ತು ಚೀನಾ ಯುದ್ದದ ಸಂದರ್ಭದಲ್ಲಿ ಭಾರತೀಯ ಯೋಧರ ರಕ್ಷಣಾ ನಿಧಿಗೆ ಅಪಾರ ಧನ ಹಾಗೂ ಚಿನ್ನವನ್ನು ಸಂಗ್ರಹಿಸಿ ಕಳುಹಿಸುವ ಮೂಲಕ ತನ್ನ ಸೇವಾ ಮನೋಭಾವದ ಮೊದಲ ಹೆಜ್ಜೆಯನ್ನಿಟ್ಟು ದೇಶಪ್ರೇಮವನ್ನು ಪ್ರದರ್ಶಿಸಿದೆ. ಅಂದಿನಿಂದ ಇಂದಿನವರೆಗೂ ‘ಸಂಘಶಕ್ತಿ ಕಲಿಯುಗೇ’ ಎಂಬ ಮಾತು ಅಕ್ಷರಶ ನಿಜ ಎಂಬುದನ್ನು ಇಂದಿನವರೆಗೂ ಪುಷ್ಠೀಕರಿಸುತ್ತಾ ಬಂದಿದೆ. ಇವರ ಸಾಧನೆಗಳು ಸಾವಿರಾರು, ಅವುಗಳನ್ನು ಶೈಕ್ಷಣಿಖ, ಸಾಂಸ್ಕೃತಿಕ, ಆರೋಗ್ಯ, ಕೃಷಿ, ಕ್ರೀಡೆ, ಶ್ರಮದಾನದೊಂದಿಗೆ ಸಮಾಜಸೇವೆ ಮುಂತಾದವುಗಳಲ್ಲಿ ಕಾಣಬಹುದಾಗಿದೆ.

‘ಶಿಕ್ಷಣವೇ ಶಕ್ತಿ’ ಎಂದು ತಿಳಿದ ಯುವ ಪಡೆ ತನ್ನ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರಕ್ಕೆ ಆಶ್ರಯ ನೀಡಿ ಗ್ರಾಮೀಣ ಮಕ್ಕಳ ಸರ್ವತೋಮುಖ ಏಳಿಗೆಗೆ ನಾಂದಿ ಹಾಡಿದೆ. ಪ್ರಾಥಮಿಕ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿ ಶಾಲಾ ಆಟದ ಮೈದಾನವನ್ನು ಸಮತಟ್ಟುಗೊಳಿಸಿದೆ. ಪ್ರೌಢ ಮತ್ತು ಉನ್ನತ ಶಿಕ್ಷಣ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಿ ಅವರು ಗ್ರಾಮದ ಕೀರ್ತಿಯನ್ನು ಹೆಚ್ಚಿಸುವಂತೆ ಗಮನ ನೀಡಿದೆ. ರಾಷ್ಟ್ರ ಭಾಷಾ ಪ್ರಚಾರಕ್ಕಾಗಿ ಹಿಂದಿ ಶಿಕ್ಷಣ ತರಭೇತಿಗಳನ್ನು ನೀಡಿ ಮಾಧ್ಯಮ ಪ್ರವೇಶ ಹಾಗೂ ಉತ್ತಮ ಪ್ರವೇಶ ಹಾಗೂ ಉತ್ತಮ ಪರೀಕ್ಷೆಗೆ ಅಭ್ಯರ್ಥಿಗಳನ್ನು ತರಭೇತುಗೊಳಿಸಿ ಶೇಕಡ 100 ಪಲಿತಾಂಶ ತರುವಲ್ಲಿ ಯಶಸ್ವಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ವಾರ್ಷಿಕೋತ್ಸವದ ಸಂದರ್ಭದಲ್ಲಿ ಯುವಕಲಾವಿದರೂ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಹಸ್ತ ನೀಡುತ್ತಿರುವುದು, ಸಂಪ್ರದಾಯವಾಗಿ ಬಂದಿದೆ.

ಸಂಸ್ಕೃತಿ ದೇಶದ ಘನತೆಯ ದ್ಯೋತಕವಾಗಿದೆ. ಅದನ್ನು ಹಿರಿಯರಿಂದ ಪಡೆದು ಮುಂದಿನ ಪೀಳಿಗೆಗೆ ವರ್ಗಾಯಿಸುವುದರಲ್ಲಿ ಈ ಗ್ರಾಮದ ಯುವಕರ ಪಾತ್ರ ಶ್ಲಾಘನೀಯ. ಈ ದಿಸೆಯಲ್ಲಿ 1972 – 73 ರಲ್ಲಿ ಪಂಚಾಕ್ಷರಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಇಂದಿನವರೆಗೂ ನಿರಂತರವಾಗಿ ಯಕ್ಷಗಾನ ಕಲಿಕೆಗೆ ಪ್ರೋತ್ಸಾಹ ನೀಡುತ್ತಾ ಪ್ರತಿ ವರ್ಷವೂ ಪ್ರದರ್ಶನ ನೀಡುತ್ತಾ ಬಂದಿದೆ. ಯುವಕರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಕಡಲ ತೀರದ ಭಾರ್ಗವ, ಜ್ಙಾನಪೀಠ ಪ್ರಶಸ್ತಿ ಪುರಸ್ಕೃತ ಡಾ!! ಕೆ. ಶಿವರಾಮ ಕಾರಂತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ‘ಅಭಿನವ ರಂಗಮಂಟಪವನ್ನು’ ಉದ್ಘಾಟಿಸಿದ್ದಾರೆ. ಅನೇಕ ಐತಿಹಾಸಿಕ ಮತ್ತು ಪೌರಾಣಿಕ ನಾಟಕ, ನೃತ್ಯ ಕಲಾವಿದರನ್ನು ತರಭೇತಿಗೊಳಿಸಿ ಕಲಾವಿದರನ್ನಾಗಿ ಮಾಡುವಲ್ಲಿ ಈ ಸಂಘಟನೆಯ ಪಾತ್ರ ಅವಿಸ್ಮರಣೇಯವಾದದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ, ಹಾಗೂ ಭಜನಾ ಸ್ಪರ್ಧೆಯನ್ನು ಸುವರ್ಣ ಮಹೋತ್ಸವ ವರ್ಷದಲ್ಲಿ ಏರ್ಪಡಿಸಿ ನಾಟಕ ಕಲೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಎಲ್ಲೂರಿನಲ್ಲಾಗುವ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ದೇವಾಲಯದ, ಯುವಕ ಮಂಡಲದ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲೂರಿನ ಕಲಾವಿದರೇ ಸಂಪೂರ್ಣವಾಗಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಿರುವುದು ಯುವಕ ಮಂಡಲದ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದೆ. ಜೊತೆಗೆ ತಾಲೂಕು ಮಟ್ಟದ ಯುವಜನ ಮೇಳವನ್ನು ಈ ಸಂಘದ ಆತೀಥ್ಯದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಗ್ರಾಮೀಣ ಜನತೆಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಆಗಾಗ ಜಿಲ್ಲೆಯ ವಿವಿಧ ಪ್ರಸಿದ್ಧ ವೈದ್ಯರಿಂದ ಆರೋಗ್ಯ ತಪಸಣಾ ಶಿಬಿರ, ಕಣ್ಣಿನ ತಪಾಸಣೆ, ಚರ್ಮರೋಗ ತಪಾಸಣೆ, ದಂತ ಚಿಕಿತ್ಸೆ, ರಕ್ತದ ಗುಂಪು ಪರೀಕ್ಷೆ, ಆಯುರ್ವೇದ ಚಿಕಿತ್ಸೆ ಮುಂತಾದ ಉಚಿತ ಶಿಬಿರಗಳನ್ನು ಏರ್ಪಡಿಸಿ ಸಂಘದ ಸದಸ್ಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ಪೀಡಿತರಿಗೂ ತಮ್ಮದೇ ಆದ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ. ‘ಕೃಷಿ ಮತ್ತು ಕೃಷಿಕ ರಾಷ್ಟ್ರದ ಬೆನ್ನೆಲುಬು’ ಎಂದು ತಿಳಿದಿರುವ ಯುವಕರು ಗ್ರಾಮದ ಕೃಷಿ ಆಧುನೀಕರಣದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿಯಾಗಿರುವುದರಿಂದ ಕೃಷಿ ಸುಧಾರಣೆಗಾಗಿ ಮಾರ್ಗದರ್ಶನ ಶಿಬಿರಗಳನ್ನು ಏರ್ಪಡಿಸಿ ನುರಿತ ತಜ್ಞರಿಂದ ವಿಶೇಷ ಮಾಹಿತಿಯನ್ನು ನಿರಂತರವಾಗಿ ಒದಗಿಸುತ್ತಿದ್ದಾರೆ. ಪ್ರಾಮುಖ್ಯವಾಗಿ ಸಾವಯವ ಗೊಬ್ಬರ ತಯಾರಿ, ಕ್ರಿಮಿನಾಶಕ ಬಳಕೆ, ರಾಸಾಯನಿಕ ಗೊಬ್ಬರಗಳ ಬಳಕೆ, ಮಣ್ಣು ಪರೀಕ್ಷೆ, ಉತ್ತಮ ತಳಿಯ ಬೀಜದ ಕುರಿತು ತಿಳುವಳಿಕೆ ಮೂಡಿಸಿ ಕೃಷಿ ಲಾಭದಾಯಕವಾಗುವಂತೆ ಪ್ರಯತ್ನಿಸುತ್ತಿದ್ದಾರೆ. ವಿದ್ಯಾವಂತರಾಗಿದ್ದರೂ ಯುವಕರು ಕೃಷಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಯುವಕ ಮಂಡಲವು ಕೃಷಿ ಮೇಳಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸಿರುವುದು ಪ್ರಶಂಸನೀಯವಾಗಿದೆ.

ಪಾರಂಪರಿಕ ಕ್ರೀಡೆಗಳಾದ ಕೆಸರು ಗದ್ದೆ ಓಟ, ತೆಂಗಿನ ಮರ ಹತ್ತುವ ಸ್ಪರ್ಧೆ, ತೆಂಗಿನ ಗರಿ ಹೆಣೆಯುವ ಸ್ಪರ್ಧೆ ಮುಂತಾದವುಗಳಲ್ಲದೆ ಅನೇಕ ಗ್ರಾಮೀಣ ಕ್ರೀಡೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿ ಉತ್ತೇಜನ ನೀಡಿರುತ್ತಾರೆ ಕ್ರೀಡೆಗಳಲ್ಲಿ ಅತ್ಯಂತ ಆಸಕ್ತಿ ವಹಿಸಿರುವ ಯುವಕರು ವಾಲಿಬಾಲ್, ಕ್ರಿಕೆಟ್ ಮುತಾಂದವುಗಳನ್ನು ದಿನನಿತ್ಯ ಆಡುತ್ತಾ ಕ್ರೀಡಾ ಮನೋಭಾವವನ್ನು ಹೊಂದಿರುವರು. ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಗಳನ್ನು ಎಲ್ಲೂರಿನಲ್ಲಿಯೇ ನಡೆಸಿರುವುದು ಯುವಕ ಮಂಡಲವು ಕ್ರೀಡೆಗೆ ನೀಡಿದ ಪ್ರಾಧಾನ್ಯತೆಯನ್ನು ವ್ಯಕ್ತಗೊಳಿಸುತ್ತದೆ. ಕ್ರೀಡಾಕೂಟಗಳ ಸಂಯೋಜನೆಯು ಯುವಕ ಮಂಡಲದ ಕರ್ತೃತ್ವ ಶಕ್ತಿ, ಶಿಸ್ತುಗಳಿಗೆ ಸಂಕೇತವಾಗಿದೆ. ಸಂಘದ ಸದಸ್ಯರಾದ ಶ್ರೀ ಕಪಿಲ್ ದೇವ್ ವಾಲಿಬಾಲ್ನಲ್ಲಿ ಅರ್ಜುನ ಪ್ರಶಸ್ತಿ ಗಳಿಸಿರುವುದು ಯುವಕ ಮಂಡಲದ ಕ್ರೀಡಾಭಿಮಾನಕ್ಕೆ ಕಿರೀಟವಿಟ್ಟಂತೆ. ಇವರು ಹಮ್ಮಿಕೊಂಡ ಕ್ರೀಡಾಕೂಟಗಳು ಯುವಪಡೆಯ ಸಂಘಟನೆಗೆ ಪ್ರಮುಖ ಪಾತ್ರ ವಹಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರದ್ಧೆಯಿಂದ ಸಮಾಜಸೇವೆ ಮಾಡುವ ನೂರಾರು ಯುವಕರ ಸೇನಾಪಡೆ ಕರೆ ಕೊಟ್ಟಾಗ ತಕ್ಷಣವೇ ಸ್ಪಂದಿಸುತ್ತದೆ. ಎಂತಹ ಸನ್ನಿವೇಶದಲ್ಲೂ ದೃತಿಗೆಡದೆ ದುಃಖದಲ್ಲಿದ್ದವರಿಗೆ, ಆಶಕ್ತರಿಗೆ ತಮ್ಮಕೈ ಮೀರಿ ಸೇವೆ ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕೆಂಬ ಮನೋಭಾವವನ್ನು ಹೊಂದಿದೆ. ಬಡ ಬಗ್ಗರಿಗೆ ಮನೆಕಟ್ಟಲು ನೆರವಾಗುವುದು, ರಸ್ತೆ ಚರಂಡಿಗಳ ದುರಸ್ತಿ, ಕೆರೆಗಳ ಹೂಳೆತ್ತುವಿಕೆ, ಕಾಲು ಸೇತುವೆ ನಿರ್ಮಾಣ, ಕಡುಬಡವರಿಗೆ ಬಿ.ಪಿ.ಎಲ್ ಕಾರ್ಡ್, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಮುಂತಾದ ಸರ್ಕಾರಿ ಯೋಜನೆಗಳನ್ನು ಕೊಡಿಸುವಲ್ಲಿ ಮಾರ್ಗದರ್ಶನ ನೀಡಿ ಶ್ರಮಿಸಿದ್ದಾರೆ. ದೇವಾಲಯ, ದೈವಸ್ಥಾನಗಳ ಧಾರ್ಮಿಕ ಸಮಾರಂಭಗಳಲ್ಲಿ ಸ್ವಯಂ ಸೇವಕರಾಗಿ ಸಮವಸ್ತ್ರ ಧರಿಸಿ ವಿನಯದಿಂದ ಸೇವೆ ಸಲ್ಲಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಎಲ್ಲೂರು ಮಹತೋಭಾರ ಶ್ರೀ ವಿಶ್ವನಾಥ ದೇವಳದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಾರಗಟ್ಟಲೆ ಪ್ರತಿ ಮನೆಯಿಂದಲೂ ಪಾಲ್ಗೊಂಡು ಹಗಲಿರುಳು ಸೇವೆ ಸಲ್ಲಿಸಿರುವುದನ್ನು ಭಕ್ತಾದಿಗಳು ಕೊಂಡಾಡಿದ್ದಾರೆ. ಗ್ರಾಮದ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇದ್ದ ಕೆರೆಯ ಹೂಳೆತ್ತಿ ಅಧುನಿಕ ರೀತಿಯಲ್ಲಿ ಯುವಕರ ಶ್ರಮದಾನದಿಂದಲೇ ನಿರ್ಮಿಸಿ ಸುಂದರ ಕೊಳ ಗ್ರಾಮಕ್ಕೆ ಕೊಡುಗೆ ನೀಡಿರುವ ಇವರ ಕಾರ್ಯ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.

ಯುವಕ ಮಂಡಲವು ಕಾಪು ಸರ್ಕಾರಿ ಪದವಿ ಕಾಲೇಜು ಹಾಗೂ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಅದಮಾರಿನ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರಕ್ಕೆ ಸರ್ವ ರೀತಿಯ ಸಹಕಾರವನ್ನಿತ್ತು ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ. ಅದಮಾರು ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರ ಪ್ರಶಂಸೆಗೂ ಭಾಜನರಾಗಿದ್ದಾರೆ. ಗ್ರಾಮದ ಜನತೆಗೆ ಉಪಯುಕ್ತವಾದ ಗ್ರಂಥಾಲಯವೊಂದನ್ನು ಸ್ಥಾಪಿಸಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಿ ಓದುಗರಿಗೆ ನೀಡಿ ಜ್ಞಾನದಾಹವನ್ನು ತಣಿಸುತ್ತಿದ್ದಾರೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಉದ್ಯೋಗ ಮಾಹಿತಿಯ ವಿಚಾರಗಳನ್ನು ತಿಳಿಸುವ ಪತ್ರಿಕೆಗಳನ್ನೆಲ್ಲಾ ತರಿಸಿ ಗ್ರಾಮೀಣ ಜನತೆಗೆ ಜಗತ್ತಿನ ಸಂಪರ್ಕವನ್ನು ಕಲ್ಪಿಸಿ ಅಭಿವೃದ್ಧಿಗೆ ಅವಕಾಶವನ್ನು ಒದಗಿಸುತ್ತಿದೆ,

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸಿನ ಗ್ರಾಮರಾಜ್ಯದ ಚಿಂತನೆಯು ಪರಿಪೂರ್ಣಗೊಳ್ಳುವಿಕೆಯಲ್ಲಿ ಯುವಕರು ಮಹತ್ವದ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದಕ್ಕೆ ಈ ಸಂಘಟನೆ ಸಾಕ್ಷಿಯಾಗಿದೆ. ‘ಯುವಕರೇ ಜೀವಂತ ಸಂಪನ್ಮೂಲಗಳು’ ಎನ್ನುತ್ತಾ ಸ್ವಾಮಿ ವಿವೇಕಾನಂದರು ನನಗೆ ನೂರು ಜನ ಸಿಂಹದ ಬಲವಿರುವ, ಧೈರ್ಯವಂತ ಸಾಹಸಿ ಯುವಕರನ್ನು ನೀಡಿ ನಾನು ಇಡೀ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದಿದ್ದರು. ಹಾಗೆಯೇ ದೇಶದ 12 ನೇ ರಾಷ್ಟ್ರಧ್ಯಕ್ಷರಾಗಿದ್ದ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರವರು ತಮ್ಮ ‘ವಿಶನ್2020’ ಕೃತಿಯಲ್ಲಿ ವಿವರಿಸಿರುವಂತೆ, ಭಾರತ ದೇಶದ ಬದಲಾವಣೆಯಲ್ಲಿ ಯುವಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಕನಸನ್ನು ಹೊತ್ತಿದ್ದಾರೆ. ಎಲ್ಲೂರು ಗ್ರಾಮದ ನೂರಾರು ಯುವಕರು ಮಹಾತ್ಮರು ನಿರೀಕ್ಷಿಸಿದ ಬದಲಾವಣೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಹೀಗೆ ದೇಶದ ಪ್ರತಿಯೊಂದು ಗ್ರಾಮದ ಯುವ ಪೀಳಿಗೆ ಸಂಘಟಿತರಾಗಿ ಗ್ರಾಮದ ಏಳಿಗೆಗಾಗಿ ದುಡಿದಲ್ಲಿ ದೇಶೋದ್ಧಾರ ನಿಶ್ಚಿತ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments