ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 25, 2013

25

ಧರ್ಮವನ್ನು ಅಫೀಮು ಎಂದವರಿಂದ ಮತ್ತೇನು ನಿರೀಕ್ಷಿಸಲಾದೀತು?

‍ನಿಲುಮೆ ಮೂಲಕ

– ನರೇಂದ್ರ ಕುಮಾರ ಎಸ್.ಎಸ್

Tarun Tejpalತೆಹಲ್ಕಾ’ದ ತರುಣ್ ತೇಜಪಾಲ್ ಅವರು ನಡೆಸಿರುವರೆನ್ನಲಾದ ಲೈಂಗಿಕ ಹಲ್ಲೆ ಪ್ರಕರಣ, ಮಾಧ್ಯಮದ ಮುಖವಾಡವನ್ನು ಕಿತ್ತೆಸೆದಿದೆ. ಇದೇ ’ತೆಹಲ್ಕಾ’ವು, ಆಗಾಗ “ಕುಟುಕು ಕಾರ್ಯಾಚರಣೆ”ಯ ಮೂಲಕ ರಾಜಕಾರಣಿಗಳನ್ನು ಸಿಕ್ಕಿಹಾಕಿಸುತ್ತಿತ್ತು. ಒಂದು ಗುಪ್ತ ಕ್ಯಾಮೆರಾ ಜೊತೆಗೆ ತೆರಳುವ ಈ “ಕುಟುಕು ಕಾರ್ಯಾಚರಣೆ ಪಡೆ”, ರಾಜಕಾರಣಿಗಳಿಗೆ ತಿಳಿಯದಂತೆ ಬಲೆ ಬೀಸುತ್ತಿತ್ತು. ಅವರಿಗೆ ಆಮಿಷವನ್ನು ತೋರಿಸಿ, ಆಗ ನಡೆಯುವ ಪೂರ್ಣ ಸಂಭಾಷಣೆಯನ್ನು ಕ್ಯಾಮೆರಾ ಮೂಲಕ ಸೆರೆಹಿಡಿದು, ಆ ನಂತರ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿತ್ತು. ಆ ವಿಡಿಯೋ ನೋಡಿದ ಜನ, ಅದರಲ್ಲಿರುವ ರಾಜಕಾರಣಿ ಭ್ರಷ್ಟಾಚಾರಿಯೇ ಎಂದು ನಿರ್ಧಾರಕ್ಕೆ ಬರುವ ರೀತಿಯಲ್ಲಿ ಅದನ್ನು ಪ್ರಸ್ತುತ ಪಡಿಸಲಾಗುತ್ತಿತ್ತು. ನ್ಯಾಯಾಂಗ ವಿಚಾರಣೆಯ ಬದಲು ಮಾಧ್ಯಮಗಳೇ ವಿಚಾರಣೆ ನಡೆಸಿ, ರಾಜಕಾರಣಿಯನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿಬಿಡುತ್ತಿತ್ತು.

ವ್ಯಕ್ತಿಯೊಬ್ಬ ಭ್ರಷ್ಟಾಚಾರಿ ಅಲ್ಲದಿದ್ದರೂ, ಆಮಿಷಕ್ಕೊಳಗಾಗಿ ಕೆಲವು ತಪ್ಪುಗಳನ್ನು ಮಾಡುವನು. ಉದಾಹರಣೆಗೆ, ಮನೆಗೆಲಸಕ್ಕೆ ಬರುವ ಹುಡುಗ/ಹುಡುಗಿ ಕಳ್ಳರಾಗಿರುವುದಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡಿ ಸಂಪಾದಿಸುವ ಉದ್ದೇಶ ಹೊಂದಿಯೇ ಕೆಲಸಕ್ಕೆ ಬಂದಿರುತ್ತಾರೆ. ಆದರೆ, ಅವರು ಕೆಲಸ ಮಾಡುವ ಮನೆಯಲ್ಲಿ, ಈ ಹುಡುಗ/ಹುಡುಗಿಯ ಕಣ್ಣಿಗೆ ಕಾಣಿಸುವಂತೆ ಹಣವನ್ನೋ ಇಲ್ಲವೇ ಆಭರಣಗಳನ್ನೋ ಇಟ್ಟಿದ್ದರೆ, ಅವರು ಆಮಿಷಕ್ಕೆ ಒಳಗಾಗಿಬಿಡುತ್ತಾರೆ. ಅಲ್ಲಿ ಇಟ್ಟಿರುವ ಹಣ/ಆಭರಣವನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದಾಗ, ಅದನ್ನು ತೆಗೆದುಕೊಳ್ಳೋಣ ಎಂದೆನ್ನಿಸಿಬಿಡಬಹುದು. ಆಮಿಷದಿಂದ ಉಂಟಾದ ಆಸೆಯಿಂದ ತಪ್ಪಿಸಿಕೊಳ್ಳಲಾಗದೆ “ಕಳ್ಳತನ” ನಡೆದುಬಿಡುತ್ತದೆ. ಇಲ್ಲಿ ಕಳ್ಳತನ ಮಾಡಿದ ಹುಡುಗ/ಹುಡುಗಿಯದು ಎಷ್ಟು ತಪ್ಪೋ, ಅಷ್ಟೇ ತಪ್ಪು ಆ ಹಣ/ಆಭರಣಗಳನ್ನು ಇವರ ಕಣ್ಣಿಗೆ ಕಾಣುವಂತೆ ಇಟ್ಟು ಆಮಿಷ ಕೊಟ್ಟವರದೂ ಆಗಿರುತ್ತದೆ, ಅಲ್ಲವೆ?

ಇದೀಗ, ಕುಟುಕು ಕಾರ್ಯಾಚರಣೆಗಳ ಮೂಲಕ, ರಾಜಕಾರಣಿಗಳಿಗೆ “ಆಮಿಷ”ಗಳನ್ನು ನೀಡಿ, ಅವರು ತಪ್ಪು ಮಾಡುವಂತೆ ಪ್ರಚೋದಿಸಿ, ಅದನ್ನು ಜಗಜ್ಜಾಹೀರುಗೊಳಿಸುತ್ತಿದ್ದ, ತೆಹಲ್ಕಾದ ತರುಣ್ ತೇಜಪಾಲ್ ಅವರೇ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ರಾಜಕಾರಣಿಗಳೆಲ್ಲಾ ಭ್ರಷ್ಟರು ಎಂದು ಬಣ್ಣ ಬಳಿಯುತ್ತಿದ್ದ ವ್ಯಕ್ತಿ, ಅವಕಾಶ ಸಿಕ್ಕಾಗ ತಾನೂ ತಪ್ಪೆಸಗುವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತರುಣ್ ತೇಜಪಾಲ್ ವಿಷಯದಲ್ಲಿ ನಡೆದಿರುವುದು “ಕುಟುಕು ಕಾರ್ಯಾಚರಣೆ”ಯಲ್ಲ. ಅವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೇ ಅವರ ಮೇಲೆ ಆರೋಪ ಹೊರಿಸಿದ್ದಾಳೆ. “ತನ್ನಿಂದ ತಪ್ಪಾಗಿದೆ” ಎಂದು ಒಪ್ಪಿಕೊಂಡಿರುವ ತೇಜಪಾಲ್ ಅವರು, ತಮ್ಮ ಸಂಪಾದಕ ಹುದ್ದೆಯಿಂದ ಕೆಳಗಿಳಿದು, ಆರು ತಿಂಗಳ ಕಾಲ ಆ ಹುದ್ದೆಗೆ ವಾಪಸ್ಸಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ರಾಜಕಾರಣಿಗಳಿಂದ ಸ್ವಚ್ಚ ವ್ಯವಹಾರ ಬಯಸುವ, ಅವರು ತಪ್ಪು ಮಾಡಿದಾಗ, ಅದನ್ನು ಜಗಜ್ಜಾಹೀರುಗೊಳಿಸಿ, ಅವರ ರಾಜಕೀಯ ಜೀವನವೇ ಕೆಲವು ಹೆಜ್ಜೆ ಹಿಂದೆ ಹೋಗುವಂತೆ ಮಾಡುತ್ತಿದ್ದ ವ್ಯಕ್ತಿ, ತನ್ನ ತಪ್ಪಿಗೆ ಸ್ವತಃ ಘೋಷಿಸಿಕೊಂಡಿರುವ ಶಿಕ್ಷೆ ಸಾಕೇ? ಅವರಿಂದ ಹಲ್ಲೆಗೊಳಗಾದ ವ್ಯಕ್ತಿಗೆ ಇದರಿಂದ ಸಮಾಧಾನವಾಗಿದೆಯೇ? ತೆಹಲ್ಕಾದಂತಹ ಪ್ರತಿಷ್ಠಿತ ಮತ್ತು ಸುಪ್ರಸಿದ್ಧ ಮಾಧ್ಯಮ ಸಂಸ್ಥೆಯು, ಈ ಪ್ರಕರಣವನ್ನು ಇಷ್ಟೊಂದು ಹಗುರವಾಗಿ ಕಾಣುತ್ತಿರುವುದು ಮತ್ತು ತಪ್ಪಿತಸ್ಥನಿಗೆ ಶಿಕ್ಷೆಯೇ ಇಲ್ಲದೆ ಪರಾರಿಯಾಗಲು ಬಿಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಬೇರೆಯವರ ಮುಖಕ್ಕೆ ಮಸಿ ಬಳಿದು, ನಂತರ ಅವರು ಪೇಚಾಡುವುದನ್ನು ಕಂಡು ಒಳಗೊಳಗೇ ಸಂತಸ ಪಡುತ್ತಿದ್ದವರು, ತಾವೇ ಸ್ವತಃ ತಪ್ಪಿತಸ್ಥರಾದಾಗ, ತಮ್ಮ ಮಾನವೂ ಹರಾಜಾಗುತ್ತದೆ ಮತ್ತು ತಮಗೂ ಶಿಕ್ಷೆಯಾಗುತ್ತದೆ ಎನ್ನುವುದನ್ನು ನೆನಪಿಡಬೇಕು.

ದೇಶದ ಎಲ್ಲೆಡೆ “ಲೈಂಗಿಕ ಹಲ್ಲೆ” ಕೇಳಿಬರುತ್ತಿರುವ ಈ ದಿನಗಳಲ್ಲಿ, ಮಾಧ್ಯಮದಲ್ಲಿರುವ ಪ್ರಮುಖ ವ್ಯಕ್ತಿಯೇ “ಲೈಂಗಿಕ ಹಲ್ಲೆ” ನಡೆಸಿದ್ದಾರೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ಕೇವಲ ನೈತಿಕತೆ ಮಾತನಾಡುವುದರಿಂದ, ಅಥವಾ ನೈತಿಕತೆಯನ್ನು ಇತರರಿಗೆ ಉಪದೇಶ ಮಾಡುವುದರಿಂದ ಮನುಷ್ಯನಿಗೆ ನೈತಿಕತೆ ಬಂದುಬಿಡುವುದಿಲ್ಲ ಎನ್ನುವುದು ಅನೇಕ ಬಾರಿ ಸಾಬೀತಾಗಿದೆ. ಭ್ರಷ್ಟಾಚಾರವಿರಬಹುದು, ಲೈಂಗಿಕ ಹಲ್ಲೆಯಿರಬಹುದು – ಇವೆರಡೂ ಸಹ, ವ್ಯಕ್ತಿಯ ನೈತಿಕ ಅಧಃಪತನವನ್ನೇ ತೋರಿಸುತ್ತದೆ. ಕೇವಲ, ಇದರ ಕುರಿತಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದರಿಂದ, ಆಂದೋಲನ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ವ್ಯಕ್ತಿಗೆ ಚಿಕ್ಕಂದಿನಿಂದಲೇ ಅತ್ಯುತ್ತಮ ಸಂಸ್ಕಾರಗಳು ಸಿಗಬೇಕು. ಆ ರೀತಿ ಸಂಸ್ಕಾರವಿಲ್ಲದ ವ್ಯಕ್ತಿ ಮೃಗದಂತೆ ವರ್ತಿಸುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ನಮ್ಮ ಶಿಕ್ಷಣದಲ್ಲಿ ಗಣಿತ, ವಿಜ್ಞಾನ, ಸಮಾಜ, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ – ಈ ರೀತಿಯ ಭೌತಿಕ ವಿಷಯಗಳಿಗೇ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. “ನೈತಿಕ ಶಿಕ್ಷಣ” ಎನ್ನುವುದಕ್ಕೆ ಯಾವುದೇ ಒತ್ತು ಇರುವುದಿಲ್ಲ. ಅದನ್ನು ಕಲಿಸುವ ಶಿಕ್ಷಕರಿಗೂ ಅದರಲ್ಲಿ ಆಸಕ್ತಿಯಿರುವುದಿಲ್ಲ; ಏಕೆಂದರೆ, ಅದನ್ನೇನೂ ಪರೀಕ್ಷೆಯಲ್ಲಿ ಕೇಳುವುದಿಲ್ಲವಲ್ಲ! ಚಿಕ್ಕಂದಿನಿಂದ ನೈತಿಕ ಶಿಕ್ಷಣ ಪಡೆಯದ ಮಕ್ಕಳಿಂದ, ದೊಡ್ಡವರಾದ ನಂತರ ನೈತಿಕತೆಯನ್ನು ಅಪೇಕ್ಷಿಸುವುದು ಎಷ್ಟರಮಟ್ಟಿಗೆ ಸರಿ?

ಭಾರತದಲ್ಲಿ ಹಿಂದಿನಿಂದಲೂ ನೈತಿಕತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಈ ರೀತಿಯ ನೈತಿಕತೆಯೇ ನಮ್ಮ ಧರ್ಮದ ಸಾರವೂ ಆಗಿದೆ. “ಆಹಾರ, ನಿದ್ರೆ, ಭಯ, ಮೈಥುನಗಳಲ್ಲಿ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿಲ್ಲ. ಅವನನ್ನು ಪ್ರಾಣಿಗಳಿಂದ ಪ್ರತ್ಯೇಕವಾಗಿಡುವುದು ಧರ್ಮ” ಎಂಬುದಾಗಿ ಒಂದು ಸುಭಾಷಿತ ಹೇಳುತ್ತದೆ. ಆದರೆ, ನಮ್ಮ ದೇಶದಲ್ಲಿ “ಜಾತ್ಯಾತೀತ” ಎನ್ನುವ ಪದವನ್ನು ಹಿಡಿದುಕೊಂಡು “ಧರ್ಮವನ್ನೇ ನಾಶ ಮಾಡುವ” ಪ್ರಯತ್ನ ನಡೆಯುತ್ತಿದೆ. ಧರ್ಮದ ವಿಷಯ ಮಾತನಾಡಿದವರನ್ನು “ಕೋಮುವಾದಿ” ಎಂದು ಹಣೆಪಟ್ಟಿ ಕಟ್ಟಿಬಿಡಲಾಗುತ್ತದೆ. ಧರ್ಮಕ್ಕೂ ದೇವರಿಗೂ ಸಂಬಂಧವಿಲ್ಲ; ಧರ್ಮಕ್ಕೂ ಮತೀಯತೆಗೂ ಸಂಬಂಧವಿಲ್ಲ; ಧರ್ಮಕ್ಕೂ ಮತೀಯ ಆಚರಣೆಗಳಿಗೂ ಸಂಬಂಧವಿಲ್ಲ; ಧರ್ಮಕ್ಕೂ ಜಾತಿಗಳಿಗೂ ಸಂಬಂಧವಿಲ್ಲ; ಧರ್ಮಕ್ಕೂ Religionಗೂ ಸಂಬಂಧವಿಲ್ಲ. ಧರ್ಮ ಎನ್ನುವುದು ಕರ್ತವ್ಯಗಳಿಗೆ ಸಂಬಂಧಿಸಿದ್ದು; ಧರ್ಮ ಎನ್ನುವುದು ನೈತಿಕತೆಗೆ ಸಂಬಂಧಿಸಿದ್ದು; “ಗಾಳಿಗೆ ಬೀಸುವುದು ಧರ್ಮ; ನೀರಿಗೆ ಹರಿಯುವುದು ಧರ್ಮ” ಎಂದೂ ಹೇಳುತ್ತೇವೆ. ಧರ್ಮ ಎನ್ನುವುದಕ್ಕೆ ಯಾವುದೇ ಸಮಾನಾರ್ಥಕ ಪದ ಆಂಗ್ಲ ಭಾಷೆಯಲ್ಲಿಲ್ಲ. ಅನೇಕ ಪದಗಳು ಆಯಾ ಸ್ಥಳದಲ್ಲಿನ ಸಂಸ್ಕೃತಿಯೊಂದಿಗೆ ಜೋಡಿಕೊಂಡಿರುತ್ತದೆ. ಹೀಗಾಗಿ, ಮತ್ತೊಂದು ಭಾಷೆಯಲ್ಲಿ ಅದಕ್ಕೆ ಸಮಾನಾರ್ಥಕ ಪದ ಇರಬೇಕೆಂದು ಅಪೇಕ್ಷಿಸುವುದೇ ತಪ್ಪು. ಸಮಾನಾರ್ಥಕ ಪದ ಇಲ್ಲದಿದ್ದ ಪಕ್ಷದಲ್ಲಿ, ಮೂಲ ಭಾಷೆಯ ಪದವನ್ನೇ ಉಪಯೋಗಿಸಬೇಕಾಗುತ್ತದೆ. ಹೀಗಾಗಿಯೇ, ’ಗುರು’ ಎನ್ನುವ ಪದವನ್ನು ಆಂಗ್ಲ ನಿಘಂಟಿಗೆ ಸೇರಿಸಲಾಯಿತು – Teacher ಎನ್ನುವುದು ’ಗುರು’ ಪದಕ್ಕೆ ಸಮಾನಾರ್ಥಕ ಪದವಲ್ಲ. ಅದೇ ರೀತಿ, ’ಪುಣ್ಯ’ ಎನ್ನುವ ಪದಕ್ಕೆ ಆಂಗ್ಲ ಭಾಷೆಯಲ್ಲಿ ಸಮಾನಾರ್ಥಕ ಪದವಿಲ್ಲ. ಏಕೆಂದರೆ, ’ಪುಣ್ಯ’ದ ಕಲ್ಪನೆಯೇ ಪಶ್ಚಿಮದ ಸಂಸ್ಕೃತಿಯಲ್ಲಿಲ್ಲ – ಅವರು ಕೇವಲ ’ಪಾಪ’ದ ಕುರಿತಾಗಿ ಚಿಂತಿಸುತ್ತಾರೆ ಮತ್ತು ಇದಕ್ಕಾಗಿ ’Sin’ ಎನ್ನುವ ಪದವನ್ನು ಸೃಷ್ಟಿಸಿಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರು, “ಧರ್ಮವೇ ಭಾರತದ ಆತ್ಮ” ಎಂದಿದ್ದರು. ಆದರೆ, ಧರ್ಮವನ್ನು ತುಳಿಯುತ್ತಿರುವುದರ ಪರಿಣಾಮವಾಗಿಯೇ, ಮನುಷ್ಯನ ಮೃಗೀಯತೆ ಹೆಚ್ಚೆಚ್ಚು ಕಂಡುಬರುತ್ತಿದೆ. ಇದಕ್ಕಿರುವ ಪರಿಹಾರ ಒಂದೇ – ಧರ್ಮವನ್ನು ಎತ್ತಿ ಹಿಡಿಯುವುದು.

ಚಿತ್ರ ಕೃಪೆ : http://www.ndtv.com

25 ಟಿಪ್ಪಣಿಗಳು Post a comment
 1. ನವೆಂ 25 2013

  ತೇಜಪಾಲರಿಂದ ಹಲ್ಲೆಗೊಳಗಾದ ಹುಡುಗಿ ಬರೆದಿರುವ ಪತ್ರದ ಪೂರ್ಣ ಪಾಠ:
  http://newindianexpress.com/thesundaystandard/The-victims-letter-to-Shoma-Chaudhuri/2013/11/24/article1907442.ece

  ಉತ್ತರ
  • Nagshetty Shetkar
   ನವೆಂ 25 2013

   ಕುಮಾರ್, ಆ ಪತ್ರದಲ್ಲಿ ಮುಜುಗರ ಹುಟ್ಟಿಸುವ ವಿವರಗಳು ಇವೆ. ನಿಲುಮೆಯ ಅನೇಕ ಓದುಗರಿಗೆ ಆ ವಿವರಗಳು ವಾಕರಿಕೆ ತರಿಸಬಹುದು. ತಾವು ಓದುಗರಿಗೆ ಸೂಕ್ತ ಎಚ್ಚರಿಕೆ ಕೊಡಬೇಕಿತ್ತು. ಅದು ತಮ್ಮ ಕರ್ತವ್ಯ.

   ಉತ್ತರ
   • Nagshetty Shetkar
    ನವೆಂ 26 2013

    ತಪ್ಪು ಮಾಡಿದ ಮೇಲೂ ಕ್ಷಮಾಪಣೆ ಕೇಳದೆ ಮೌನವಾಗಿರುವುದು ಸುಸಂಸ್ಕೃತರ ಲಕ್ಷಣವಲ್ಲ ಮಿ. ಕುಮಾರ್.

    ಉತ್ತರ
    • Mukhesh
     ನವೆಂ 26 2013

     ಈ ಲಕ್ಷಣ ತಮಗಿದೆಯೇ?

     ಉತ್ತರ
    • ರವಿ
     ನವೆಂ 26 2013

     @ಶೆಟ್ಕರ್,
     ಕ್ಷಮೆ ನೀವು ಕೇಳಬೇಕು. ಅಲ್ಲಿ ಮುಜುಗರವಾಗುವ ವಿಷಯಗಳಿವೆ ಎಂದು ನೀವು ಹೇಳಿದ ನಂತರ ಎಷ್ಟೋ ಮಂದಿ ಆ ಲಿಂಕ್ ಅನ್ನುಹಿಂಬಾಲಿಸಿರುತ್ತಾರೆ. ಅಷ್ಟಕ್ಕೂ ಅಲ್ಲಿರುವುದು ಯುವತಿಯೊಬ್ಬಳ ದೂರು. ಸ್ವಯಂಘೋಷಿತ ಪ್ರಗತಿಪರರ ಕಥೆ ಕಾದಂಬರಿಗಳಲ್ಲಿರುವ ದೃಶ್ಯವಲ್ಲ.

     ಉತ್ತರ
   • ವಿಜಯ್ ಪೈ
    ನವೆಂ 26 2013

    ಹ್ಮ..ಈ ಸ್ವಘೋಷಿತ, ಸ್ವಯಂ ಅಪಾದಿಸಿಕೊಂಡ ‘ಪ್ರಗತಿಪರ’ ವಿಚಾರವಂತರ, ಸಮಾಜದ ಸಾಕ್ಷಿಪ್ರಜ್ಞೆ’ ಗಳ ಕಾರಾನಾಮಗಳ ವಿವರಗಳು ಕೆದಕಿದರೆ ವಾಕರಿಕೆ ಬರುವಂತೆಯೇ ಇರುತ್ತವೆ!. ವಾಕರಿಕೆ ಬರುವವರು ಒವಾಮಿನ್ ತೆಗೆದುಕೊಳ್ಳಲಿ. ಕುಮಾರ್..ಲಿಂಕಿಗೆ ಧನ್ಯವಾದ.

    ಅಂದ ಹಾಗೆ ಕರ್ನಾಟಕದ ಈ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ ಗಳಿಗೆ ತಾವುಗಳು ಹರಡುತ್ತಿರುವ ಸುಳ್ಳುಗಳು ಇತರರಿಗೆ ವಾಕರಿಕೆ ತರಿಸುತ್ತವೆ ಎಂಬ ಸತ್ಯ ಏಕೆ ಹೊಳೆಯುವುದಿಲ್ಲವೊ..!

    ಉತ್ತರ
   • ನವೆಂ 27 2013

    [[ತಾವು ಓದುಗರಿಗೆ ಸೂಕ್ತ ಎಚ್ಚರಿಕೆ ಕೊಡಬೇಕಿತ್ತು. ಅದು ತಮ್ಮ ಕರ್ತವ್ಯ.]]
    ಹೌದು. ನಾನು ಇದರ ಕುರಿತಾಗಿ ಯೋಚಿಸಲಿಲ್ಲ. ನನ್ನ ತಪ್ಪಿಗೆ ದಯವಿಟ್ಟು ಕ್ಷಮಿಸಿ.
    ಅದು ಸರಿಯಿಲ್ಲವೆಂದಾದರೆ ಮಾಡರೇಟರ್ ಅವರು, ಆ ಪ್ರತಿಕ್ರಿಯೆಯನ್ನು ಇಲ್ಲಿಂದ ತೆಗೆದು ಹಾಕಲಿ.

    > ತಪ್ಪು ಮಾಡಿದ ಮೇಲೂ ಕ್ಷಮಾಪಣೆ ಕೇಳದೆ ಮೌನವಾಗಿರುವುದು ಸುಸಂಸ್ಕೃತರ ಲಕ್ಷಣವಲ್ಲ ಮಿ. ಕುಮಾರ್.
    ನಾನು ಈ ಲೇಖನಕ್ಕೆ ‘Subscribe’ ಆಗಿರಲಿಲ್ಲ. ಹೀಗಾಗಿ, ನನಗೆ ಇಲ್ಲಿ ಬರೆದಿರುವ ಪ್ರತಿಕ್ರಿಯೆಗಳು ಮಿಂಚಂಚೆ ಮೂಲಕ ಬಂದಿಲ್ಲ. ಕುತೂಹಲಕ್ಕಾಗಿ, ಈಗ ತಾನೆ ಲೇಖನವನ್ನು ತೆರೆದಾಗ ನಿಮ್ಮ ಪ್ರತಿಕ್ರಿಯೆ ಓದಿದೆ.
    ನೀವೇಕೆ ಇಷ್ಟೊಂದು ಅವಸರದಲ್ಲಿದ್ದೀರಿ? ನೀವು ಕಾಮೆಂಟು ಹಾಕಿದ ಕೂಡಲೇ ನಾನು ಅದನ್ನು ಓದಿಬಿಡಬೇಕೆಂದು ಏಕೆ ನಿರೀಕ್ಷಿಸುತ್ತಿರುವಿರಿ?

    ನೀವು ‘ಕನ್ನಡ’ದಲ್ಲೇ ಪ್ರತಿಕ್ರಿಯಿಸುತ್ತಿರುವುದು ನೋಡಿ ಸಂತೋಷವಾಯಿತು. ಇದು ಹೀಗೇ ಮುಂದುವರೆಯಲಿ.

    ಉತ್ತರ
    • Nagshetty Shetkar
     ನವೆಂ 27 2013

     ಕುಮಾರ್, ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ಲೈಂಗಿಕ ಚಿತ್ರಣವಿರುವ ಯಾವುದೇ ಬರಹವನ್ನು reference ಆಗಿ ಕೊಡುವ ಮೊದಲು ಓದುಗರಿಗೆ ಆ ಬಗ್ಗೆ ಎಚ್ಚರಿಕೆ ಕೊಡುವುದು ಕರ್ತವ್ಯ. “ವಾಕರಿಕೆ ಬರುವವರು ಒವಾಮಿನ್ ತೆಗೆದುಕೊಳ್ಳಲಿ” ಎಂಬ ಧೋರಣೆ ಸರಿಯಲ್ಲ.

     ಉತ್ತರ
 2. Nagshetty Shetkar
  ನವೆಂ 25 2013

  ಗುಜರಾತಿನಲ್ಲಿ ಧರ್ಮದ ಝಂಡ ಹಿಡಿದು ನಿಂತಿರುವ ನೇತಾರನೊಬ್ಬನ ಬಗ್ಗೆಯೂ ಇಂಥದ್ದೇ ಸುದ್ದಿ ಕೇಳಬರುತ್ತಿದೆ. ಅದೇನೋ ಸಿ ಡಿ ಅಂತೆ. ಅದರಲ್ಲೇನೋ ಇದೆಯಂತೆ.

  ಉತ್ತರ
  • ರವಿ
   ನವೆಂ 25 2013

   ಬಹುಶ ಸಾಹಿಬ್ ಕಥೆಗೂ ಇದಕ್ಕೂ ತಾಳೆಯಾಗುವುದಿಲ್ಲ.. ಅಲ್ಲಿ ಯುವತಿಯೂ, ಯುವತಿಯ ತಂದೆ ಯಾರಿಗೂ ದೂರು ಕೊಟ್ಟಿಲ್ಲ.. ಯಾರೋ ಮೂರನೆಯವರು ಹೇಳುತ್ತಿರುವ ಕಥೆ.

   ಉತ್ತರ
  • ವಿಜಯ್ ಪೈ
   ನವೆಂ 26 2013

   ‘ಶರಣ’ರಿಗೆ ಏನಿದೆ ಎಂದು ನೋಡುವ ಕುತೂಹಲ ತುಂಬ ಇರಬೇಕು! 🙂

   ಉತ್ತರ
   • Nagshetty Shetkar
    ನವೆಂ 27 2013

    Cheap and derogatory comment Mr. Vijay.

    @Rakesh: why have u not removed Vijay’s cheap and derogatory comment on Sharanas? Do you use Nilume to spread hatred about certain communities?

    ಉತ್ತರ
    • ವಿಜಯ್ ಪೈ
     ನವೆಂ 27 2013

     [ನಾಗಶೆಟ್ಟಿ ಶೆಟ್ಕರ್ : I’m a humble Sharana.]
     ಆದ್ದರಿಂದ ನಾಗಶೆಟ್ಟಿ ಶೆಟ್ಕರ್ = humble Sharana
     ಈಗ
     [ನಾಗಶೆಟ್ಟಿ ಶೆಟ್ಕರ್ : ಅದೇನೋ ಸಿ ಡಿ ಅಂತೆ. ಅದರಲ್ಲೇನೋ ಇದೆಯಂತೆ.]
     ಇಲ್ಲಿ ನಮ್ಮ humble Sharana ರು ಕುತೂಹಲ ತೋರಿಸಿದರು.
     ಆದ್ದರಿಂದ ನಾನಂದಿದ್ದು..
     ‘ಶರಣ’ರಿಗೆ ಏನಿದೆ ಎಂದು ನೋಡುವ ಕುತೂಹಲ ತುಂಬ ಇರಬೇಕು!
     ಈಗ ಹೇಳಿ..ನಾನು ಬರೆದದ್ದು ತಪ್ಪೆ??

     [Nilume to spread hatred about certain communities?]
     ನಿಮಗೆ ನೀವು, ನಿಮ್ಮ ಬಳಗದವರು ಮಾಡಿದ್ದು, ಮಾಡುವುದು, ಇನ್ನು ಮುಂದೆ ಮಾಡುವುದು ಎಲ್ಲ ಸಮಾಜಮುಖಿ, ಪ್ರಗತಿಪರ, ಸಮಾಜದಲ್ಲಿ ಶಾಂತಿ ಹರಡುವ ಕೆಲಸಗಳು ಎಂಬ ತಪ್ಪು ಕಲ್ಪನೆ ಇರುವುದು ಏಕೊ….!. ಬಿತ್ತಿದಂತೆ ಬೆಳೆ!!

     ಉತ್ತರ
  • ನವೆಂ 27 2013

   ಶೇಟ್ಕರ್ ಅವರೇ,
   ನೀವು ಶರಣರೆಂದು ಹೇಳಿಕೊಳ್ಳುವಿರಿ, ಮತ್ತೊಬ್ಬರ ತಪ್ಪನ್ನು ಎತ್ತಿ ತೋರಿಸುವಿರಿ, ಪ್ರಗತಿಪರರೆಂದು ಹೇಳಿಕೊಳ್ಳುವಿರಿ.
   ಈ ಲೇಖನವು ತೆಹಲ್ಕಾದಲ್ಲಾದ ಕೃತ್ಯಕ್ಕೆ ಸಂಬಂಧಿಸಿದ್ದು. ತೆಹಲ್ಕಾದ ಸಂಪಾದಕರೇ ಅಲ್ಲಿನ ಪತ್ರಕರ್ತೆಗೆ (ಅದೂ ತನ್ನ ಮಗಳ ವಯಸ್ಸಿನ ಮತ್ತು ಮಗಳ ಆಪ್ತಮಿತ್ರೆ) ಲೈಂಗಿಕ ಕಿರುಕುಳ ನೀಡಿದಂತಹ ನೀಚ ಕೃತ್ಯವಿದು. ಹುಡುಗಿ ನೀಡಿದ ದೂರು ಅಂತರ್ಜಾಲದಲ್ಲೆಲ್ಲಾ ತಿರುಗಾಡುತ್ತಿದೆ.
   ಹೀಗಿರುವಾಗ, ನೀವು ಇದನ್ನು ಖಂಡಿಸಿ ಒಂದು ಸಣ್ಣ ಪ್ರತಿಕ್ರಿಯೆಯನ್ನೂ ನೀಡಿಲ್ಲವಲ್ಲ!
   ಅಂದರೆ, ನೀವು ಇದನ್ನು ಸಮರ್ಥಿಸುತ್ತಿರುವಿರಿ ಎಂದು ತಿಳಿಯೋಣವೇ?

   ನೀವು ಯಾವುದೇ ಪ್ರತಿಕ್ರಿಯೆಯನ್ನು ಈ ಲೇಖನದಲ್ಲಿ ದಾಖಲಿಸದಿದ್ದಿದ್ದರೆ, ನಾನು ಈ ಮೇಲಿನ ಪ್ರಶ್ನೆಯನ್ನು ಎತ್ತುತ್ತಿರಲಿಲ್ಲ.
   ನೀವು ಲೇಖನವನ್ನು ಓದಿ, ಒಂದೆರಡು ಪ್ರತಿಕ್ರಿಯೆಯನ್ನೂ ದಾಖಲಿಸಿರುವಿರಿ. ಒಂದು ಪ್ರತಿಕ್ರಿಯೆಯಲ್ಲಂತೂ “ಧರ್ಮದ ಝಂಡಾ ಹಿಡಿದ ಗುಜರಾತಿನ ನೇತಾ…..” ಎಂದು ಪ್ರಶ್ನಿಸಿರುವಿರಿ. ಆದರೆ, ಎಲ್ಲೂ ಕೂಡಾ ತೆಹಲ್ಕಾ ಕೃತ್ಯವು ತಪ್ಪೆಂದು ತಿಳಿಸಿದ್ದು ಕಾಣಲಿಲ್ಲ!

   ಉತ್ತರ
   • Nagshetty Shetkar
    ನವೆಂ 27 2013

    Kumar, ” ನೀವು ಇದನ್ನು ಖಂಡಿಸಿ ಒಂದು ಸಣ್ಣ ಪ್ರತಿಕ್ರಿಯೆಯನ್ನೂ ನೀಡಿಲ್ಲವಲ್ಲ!
    ಅಂದರೆ, ನೀವು ಇದನ್ನು ಸಮರ್ಥಿಸುತ್ತಿರುವಿರಿ ಎಂದು ತಿಳಿಯೋಣವೇ?”

    You are wrong again! Your prejudice has made you blind. Please see below:

    Nagshetty Shetkar

    Nov 21 2013

    Mr. Mahatma, why are you linking my name with misdeeds of Mr. Tejpal??? I have no connections with him and I have no sympathy for his sexual misconduct!!! Let us all join our voices in demanding strict and just legal action against Mr. Tejpal.
    Reply .

    mahatma

    Nov 21 2013

    ok sorry

    ಉತ್ತರ
 3. ಗಿರೀಶ್
  ನವೆಂ 26 2013

  ಧರ್ಮೆವೆಂದರೆ ಸನ್ನಡತೆಯ ಪಾಲನೆ ಎನ್ನುವುದು ಬಹುತೇಕರು ಮರೆತು ಬಿಟ್ಟಿರುವುದರಿಂದ. ಸಮಾಜದ ಒಳಿತಿಗಾಗಿ ಯಾರಿಂದಲೂ ಯಾರಿಗೂ ತೊಂದರೆಯಾಗದಂತೆ ತನ್ನನ್ನು ತಾನೆ ನಿಯಂತ್ರಿಸಿಕೊಂಡು ಸಮಾಜದ ಮುನ್ನಡಗೆ ಸ್ವಯಂ ನಿಯಂತ್ರಣ ಸಾಧಿಸುವುದೇ ಧರ್ಮ. ಅದು ಕಾಣೆಯಾದಾಗ ಇಂತಹ ಪರಿಸ್ಥಿತಿ ನಿರ್ಮಾಣ ಸಹಜ. ಇದೇ ಧರ್ಮದ ಅವನತಿಯಿಂದಾಗುವ ಪರಿಣಾಮಗಳಲ್ಲೊಂದು. ಉತ್ತಮ ಲೇಖನ

  ಉತ್ತರ
 4. mahatma
  ನವೆಂ 26 2013

  Kshamapane kelidare ellavoo mugiyutta shetkar sir ?

  ಉತ್ತರ
 5. ನವೆಂ 27 2013

  [[Nagshetty Shetkar> ಗುಜರಾತಿನಲ್ಲಿ ಧರ್ಮದ ಝಂಡ ಹಿಡಿದು ನಿಂತಿರುವ ನೇತಾರನೊಬ್ಬನ ಬಗ್ಗೆಯೂ ಇಂಥದ್ದೇ ಸುದ್ದಿ ಕೇಳಬರುತ್ತಿದೆ. ಅದೇನೋ ಸಿ ಡಿ ಅಂತೆ. ಅದರಲ್ಲೇನೋ ಇದೆಯಂತೆ.]]
  ಶೇಟ್ಕರ್ ಅವರೇ,
  ಗುಜರಾತಿನಲ್ಲೇ ಆಗಲಿ, ನಾಗಪುರದಲ್ಲೇ ಆಗಲಿ, ಕಾಶಿಯಲ್ಲೇ ಆಗಲಿ, ತಪ್ಪು ನಡೆದರೆ ತಪ್ಪೇ. ತಪ್ಪನ್ನು ಸಮರ್ಥಿಸಿಕೊಳ್ಳುವುದು ಅಧರ್ಮ.
  ಧರ್ಮದ ಝಂಡಾ ಹಿಡಿದವರೆಲ್ಲರೂ ‘ಧರ್ಮ ಪಾಲನೆ’ ಮಾಡುತ್ತಿರುತ್ತಾರೆ ಎನ್ನುವ ಊಹೆಯನ್ನೇಕೆ ಮಾಡಿಕೊಳ್ಳುತ್ತಿರುವಿರಿ?
  ಧರ್ಮವನ್ನು ಮತ ಅಥವಾ Religion ಎಂದು ಅಂದುಕೊಂಡುಬಿಟ್ಟಿದ್ದರೆ, ಈ ರೀತಿಯ ಅಪಾರ್ಥಗಳು ಆಗಿಬಿಡುತ್ತವೆ.

  “ಗಾಳಿಗೆ ಬೀಸುವುದು ಧರ್ಮ; ನೀರಿಗೆ ಹರಿಯುವುದು ಧರ್ಮ; ಬೆಂಕಿಗೆ ಸುಡುವುದು ಧರ್ಮ; ಮನುಷ್ಯನಿಗೆ ಪ್ರತಿಯೊಂದು ಜೀವಿಯನ್ನೂ ತನ್ನಂತೆಯೇ ಕಾಣುವುದು ಧರ್ಮ”
  ಇದನ್ನೇ ಬಸವಣ್ಣನವರು: “ದಯೆಯೇ ಧರ್ಮದ ಮೂಲವಯ್ಯ; ದಯೆಯಿಲ್ಲದ ಧರ್ಮವದಾವುದಯ್ಯಾ” ಎಂದಿರುವುದು.

  ಉತ್ತರ
  • Nagshetty Shetkar
   ನವೆಂ 27 2013

   ಕುಮಾರ್, ಅವರೇ ನೀವು ಹೇಳಿದ ಧರ್ಮವನ್ನು ಝಂಡಾ ಹಿಡಿದ ಗುಜರಾತಿನ ನೇತಾರ ಮಾಡುತ್ತಿಲ್ಲ ಅಂತ ನಾನೂ ಒಪ್ಪುತ್ತೇನೆ.

   ಉತ್ತರ
   • ನವೆಂ 27 2013

    [[ ಕುಮಾರ್, ಅವರೇ ನೀವು ಹೇಳಿದ ಧರ್ಮವನ್ನು ಝಂಡಾ ಹಿಡಿದ ಗುಜರಾತಿನ ನೇತಾರ ಮಾಡುತ್ತಿಲ್ಲ ಅಂತ ನಾನೂ ಒಪ್ಪುತ್ತೇನೆ.]]
    ನೀವು ಯಾವ ನೇತಾರನ ಕುರಿತು ಮಾತನಾಡುತ್ತಿರುವಿರಿ ಎನ್ನುವುದು ನನಗೆ ತಿಳಿದಿಲ್ಲ.
    ಹೀಗಾಗಿ, ನನ್ನ ಪ್ರತಿಕ್ರಿಯೆ ಯಾವ ಒಬ್ಬ ವ್ಯಕ್ತಿಯ ಕುರಿತಾಗಿಯೂ ಅಲ್ಲ.

    ನೀವು ವ್ಯಕ್ತಿಯ ಹೆಸರನ್ನು ಹೇಳಿದರೆ, ಅವರು ಮಾಡಿರುವುದು ಧರ್ಮವೇ ಅಥವಾ ಅಧರ್ಮವೇ ಎಂದು ವಿಮರ್ಶಿಸಬಹುದು.
    ಅಥವಾ ನಿಮಗೆ ಆ ವಿಷಯದ ಕುರಿತು ಪೂರ್ಣ ಮಾಹಿತಿ ಮತ್ತು ಆಧಾರಗಳು ಇದ್ದರೆ, ನೀವೇ ಒಂದು ಸ್ವತಂತ್ರ ಲೇಖನವನ್ನೂ ಬರೆಯಬಹುದು. ಮತ್ತು ಪ್ರಸ್ತುತ ಲೇಖನವು, ತೆಹಲ್ಕಾದಲ್ಲಾದ ಕೃತ್ಯಕ್ಕೆ ಸಂಬಂಧಿಸಿದ್ದು. ಇನ್ಯಾವುದೋ ವಿಷಯವನ್ನು ಇಲ್ಲಿ ತಂದು ಚರ್ಚೆಯ ದಿಕ್ಕು ತಪ್ಪಿಸಬಾರದೆಂದು ವಿನಂತಿ.

    ಉತ್ತರ
 6. ನವೆಂ 27 2013

  [[ Nagshetty Shetkar
  Nov 21 2013
  Mr. Mahatma, why are you linking my name with misdeeds of Mr. Tejpal???]]

  ಪ್ರಸ್ತುತ ಲೇಖನ ಪ್ರಕಟವಾಗಿದ್ದು ನವೆಂಬರ್ 25ರಂದು.
  ಆದರೆ, ನೀವು ಮೇಲೆ ಉದ್ದರಿಸಿರುವ ಪ್ರತಿಕ್ರಿಯೆಯ ದಿನಾಂಕ ನವೆಂಬರ್ 21!!

  ಈ ಲೇಖನದಲ್ಲಂತೂ ನೀವು ತೇಜಪಾಲರನ್ನು ಖಂಡಿಸಿದ ಪ್ರತಿಕ್ರಿಯೆ ಇಲ್ಲಿಯವರೆಗೂ ದಾಖಲಾಗಿಲ್ಲ.
  ಪ್ರಸ್ತುತ ಲೇಖನ, ತೇಜಪಾಲರು ನಡೆಸಿದ ಲೈಂಗಿಕ ಕಿರುಕುಳಕ್ಕೆ ನೇರ ಸಂಬಂಧಿಸಿದ್ದು.
  ಇಲ್ಲಲ್ಲವೇ ನೀವು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದ್ದು?

  > Your prejudice has made you blind
  ಇಲ್ಲಿ ಪೂರ್ವಾಗ್ರಹ ಎಲ್ಲಿಂದ ಬಂತು? ನೀವು ಬೇರಾವುದೋ ಲೇಖನ/ತಾಣದಲ್ಲಿ ತೇಜಪಾಲರನ್ನು ಖಂಡಿಸಿಯೇ ಇರುತ್ತೀರಿ ಎಂದು ‘ನಂಬಿದರೆ’ ಅದು ಪೂರ್ವಾಗ್ರಹವಾದೀತು.
  ನೀವು ಈ ಲೇಖನದಲ್ಲಿ ಎಲ್ಲಿಯೂ ಖಂಡಿಸಿಲ್ಲ ಎನ್ನುವುದು ಢಾಳಾಗಿ ಎಲ್ಲರಿಗೂ ಎದ್ದು ಕಾಣುತ್ತಿರುವ ವಿಷಯ.

  ಎಲ್ಲಾ ವಿಷಯಗಳಲ್ಲೂ ನೀವು ಮಾತನಾಡಿರುವಿರಿ, ಎಲ್ಲರನ್ನೂ ಹಿಗ್ಗಾಮುಗ್ಗಾ ಖಂಡಿಸಿರುವಿರಿ. ಈ ಲೇಖನಕ್ಕೆ ಸಂಬಂಧವೇ ಇರದ “ಧರ್ಮದ ಝಂಡಾ….” ವಿಷಯವನ್ನೂ ಎಳೆದು ತಂದಿರುವಿರಿ.
  ಇಷ್ಟೆಲ್ಲಾ ಸತರ್ಕರೂ, ಸಮಾಜದ ಕುರಿತಾದ ಕಳಕಳಿಯುಳ್ಳವರೂ ಆದ ನೀವು, ತೆಹಲ್ಕಾ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಖಂಡನೆಯನ್ನೂ ಮಾಡಲಿಲ್ಲ ಎನ್ನುವುದು ಏನನ್ನು ಸೂಚಿಸುತ್ತದೆ?

  ಉತ್ತರ
  • Nagshetty Shetkar
   ನವೆಂ 27 2013

   This was response to Mahatma in Nilume itself. You can search archive. No point in repeating what I have already written just for the sake satisfying you. My stand on Tejpal scandal is unchanged. Let the issue be probed by authorities and appropriate actions be taken. If Tejpal is guilty, let him join Bangaru Laxman in jail.

   By the way what happened to Raghavji, the former BJP minister of MP who is accused of sexually assaulting some one of his grand son’s age? Did Nilume and you condemn Raghavji and demand probe?

   ಉತ್ತರ
 7. ನವೆಂ 27 2013

  [[This was response to Mahatma in Nilume itself. You can search archive]]
  ನಿಮ್ಮ ಪ್ರತಿಕ್ರಿಯೆ ‘ನಿಲುಮೆ’ಯಲ್ಲೇ ಪ್ರಕಟವಾಗಿರಬಹುದು. ಅಥವಾ ಮತ್ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿರಬಹುದು.
  ನಿಮ್ಮ ಪ್ರತಿಕ್ರಿಯೆ ಎಲ್ಲೆಲ್ಲಿ ಪ್ರಕಟಗೊಂಡಿದೆ ಎನ್ನುವುದನ್ನು ಅಧ್ಯಯನ ನಡೆಸಿ, ನಂತರ ನಿಮ್ಮ ನಿಲುವನ್ನು ತಿಳಿದುಕೊಳ್ಳುವ ಅಗತ್ಯ ನಮಗಿಲ್ಲ.
  ಇಲ್ಲಿ ಪ್ರಕಟಗೊಳ್ಳುವ ಪ್ರತಿಯೊಂದು ಲೇಖನವೂ ಪ್ರತ್ಯೇಕ ಚರ್ಚೆಯೇ. ಆಯಾ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಆಯಾ ಲೇಖನಕ್ಕೆ ಮಾತ್ರ ಪ್ರಸ್ತುತ. ನೀವು Mahatma ಅವರಿಗೆ ನಿಲುಮೆಯ ಮತ್ಯಾವುದೋ ಲೇಖನದಲ್ಲಿ ಬರೆದ ಪ್ರತಿಕ್ರಿಯೆಗಳು, ಈ ಲೇಖನದ ಮಟ್ಟಿಗೆ ಅಪ್ರಸ್ತುತ.
  ನಿಮಗೆ ನಿಮ್ಮ ನಿಲುವನ್ನು ಪ್ರಕಟಪಡಿಸಬೇಕು, ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು ಎನ್ನುವ ಆಸಕ್ತಿಯಿದ್ದಲ್ಲಿ, ನೀವೇ ನಿಮ್ಮ ಪ್ರತಿಕ್ರಿಯೆಗಳನ್ನು ಹಾಕಬೇಕು. ಅದನ್ನು ಬಿಟ್ಟು, ಬೇರೆಯವರಿಗೆ ಹುಡುಕಿ ಎನ್ನುವುದು ಬಾಲಿಶ ವರ್ತನೆ ಎನ್ನಬೇಕಾಗುತ್ತದೆ.

  [[Let the issue be probed by authorities and appropriate actions be taken. If Tejpal is guilty, let him join Bangaru Laxman in jail.]
  ನಿಮ್ಮ ನಿಲುವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ನಿಮಗೆ ಬಂಗಾರು ಲಕ್ಷ್ಮಣ್ ಅವರ ಕುರಿತಾಗಿ ಅದೇನು ಪ್ರೀತಿಯೋ, ಅನುಕಂಪವೋ ತಿಳಿಯುತ್ತಿಲ್ಲ! 😉

  [[By the way what happened to Raghavji, the former BJP minister of MP who is accused of sexually assaulting some one of his grand son’s age?]]
  ನಿಮಗೆ ತೆಹಲ್ಕಾದ ತರುಣ್ ತೇಜಪಾಲರ ಕುರಿತಾದ ಲೇಖನದಿಂದ ದುಃಖವಾಗಿದ್ದಂತಿದೆ. 😉
  ಅವರನ್ನು ಸಮರ್ಥಿಸಿ ಒಂದು ಲೇಖನ ಬರೆಯಿರಿ, ಅದೂ ಪ್ರಕಟವಾಗಬಹುದು.
  ನೀವು ನಿಜಕ್ಕೂ ತ್ರಯಸ್ಥರಾಗಿದ್ದಿದ್ದರೆ, ಈ ಲೇಖನಕ್ಕೆ ಸಂಬಂಧಿಸದ “ಧರ್ಮದ ಝಂಡಾ…..ರಾಘವ್^ಜಿ…..” ಇತ್ಯಾದಿಗಳನ್ನು ಇಲ್ಲಿ ಎಳೆದು ತರುತ್ತಿರಲಿಲ್ಲ; ಬದಲಾಗಿ ತೆಹಲ್ಕಾದ ಕರ್ಮಕಾಂಡದ ಕುರಿತಾಗಿ ಮಾತ್ರ ಮಾತನಾಡುತ್ತಿದ್ದಿರಿ. ತೆಹಲ್ಕಾ ವಿಷಯ ತೆಗೆದಕೂಡಲೇ ನೀವು ಮತ್ಯಾವುದೋ ವಿಷಯ ತೆಗೆಯುತ್ತಿರುವುದು, ನಿಮ್ಮ ಮನಸ್ಸಿನಾಳದಲ್ಲಿ ಅಡಗಿರುವ ಭಾವನೆಗಳನ್ನು ತೋರಿಸುತ್ತಿದೆ!

  [[Did Nilume and you condemn Raghavji and demand probe]]
  ನಿಲುಮೆ ಎನ್ನುವುದು ಒಂದು ಸಾಮಾಜಿಕ ತಾಣ. ಆ ತಾಣವು ನಿಮ್ಮಂತಹ ‘ಪ್ರಬುದ್ಧ’ರ ಲೇಖನಗಳನ್ನು ಪ್ರಕಟಿಸುತ್ತದೆ.
  ಅಷ್ಟೇ ಹೊರತು, ಅದು ಯಾವ ವ್ಯಕ್ತಿಯ ಪರವೂ ಅಲ್ಲ, ವಿರೋಧವೂ ಅಲ್ಲ.
  ನೀವು ರಾಘವ್^ಜಿ ಎನ್ನುವವರ ವಿಷಯಕ್ಕೆ ಸಂಬಂಧಿಸಿದಂತೆ, ‘ನಿಲುಮೆ’ಗೆ ಕರೆ ನೀಡುತ್ತಿರುವುದು, “Did facebook/twitter condemn Raghavji and demand probe” ಎಂದು ಕೇಳಿದಷ್ಟೇ ಹಾಸ್ಯಾಸ್ಪದವಾಗಿದೆ!! 😀

  ನಿಮಗೆ ರಾಘವ್^ಜಿ ವಿಷಯದ ಕುರಿತು ಅಷ್ಟೊಂದು ಆಸ್ತೆ ಇದ್ದಲ್ಲಿ, ಆ ವಿಷಯಕ್ಕೆ ಸಂಬಂಧಿಸಿದ ಆಧಾರಗಳಿದ್ದಲ್ಲಿ, ಅವನ್ನೆಲ್ಲಾ ಸೇರಿಸಿ ಒಂದು ಲೇಖನ ಬರೆದು ನಿಲುಮೆಯ ತಂಡಕ್ಕೆ ಕಳುಹಿಸಿ. ಅದನ್ನು ಬಿಟ್ಟು, ನಿಲುಮೆಯ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವುದರಿಂದ ಯಾವ ಉಪಯೋಗವೂ ಇಲ್ಲ.

  ಉತ್ತರ
 8. Nagshetty Shetkar
  ನವೆಂ 27 2013

  I am asking you. Do you condemn Raghavji’s sexual assault or not?

  ಉತ್ತರ
  • ನವೆಂ 27 2013

   [[ I am asking you. Do you condemn Raghavji’s sexual assault or not?]]
   ನೀವು ಹೇಳುತ್ತಿರುವ ರಾಘವ್^ಜಿ ಲೈಂಗಿಕ ಹಲ್ಲೆಯ ಕುರಿತಾಗಿ ನಾನು ಅಧ್ಯಯನ ನಡೆಸಿಲ್ಲ.
   ಆ ರೀತಿ ಹಲ್ಲೆ ನಿಜಕ್ಕೂ ನಡೆದಿದ್ದಲ್ಲಿ, ಅದು ಖಂಡನೀಯ ಎನ್ನುವುದರಲ್ಲಿ ಅನುಮಾನವಿಲ್ಲ. ಎಲ್ಲೇ ಈ ರೀತಿಯ ಹಲ್ಲೆಗಳು ನಡೆದರೂ, ನಾನದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ.

   ಈ ಲೇಖನಕ್ಕೆ ಅದು ಸಂಬಂಧವಿಲ್ಲ ಎಂದ ಮೇಲೂ, ನೀವು “ರಾಘವ್^ಜಿ ಲೈಂಗಿಕ ಹಲ್ಲೆ” ವಿಷಯದ ಕುರಿತಾಗಿ ಪ್ರಶ್ನಿಸುತ್ತಿದ್ದೀರಿ. ಅದರ ಕುರಿತಾಗಿ ಮಾತ್ರ ನಿಮಗೇಕೆ ಅಷ್ಟೊಂದು ಕಾಳಜಿ? ಅದೇ ರೀತಿಯ ಅಥವಾ ಅದಕ್ಕಿಂತಲೂ ಭೀಭತ್ಸ ಹಲ್ಲೆಗಳು ನಡೆದಿವೆಯಲ್ಲಾ (ದೆಹಲಿಯ ನಿರ್ಭಯಾ ಪ್ರಕರಣ, ಕೇರಳದ ಚರ್ಚುಗಳಲ್ಲಿ ನಡೆದಿರುವ ಲೈಂಗಿಕ ಹಗರಣಗಳು, ಹರಿಯಾಣಾದ ಉಪ ಮುಖ್ಯಮಂತ್ರಿ ನಡೆಸಿದ ಲೈಂಗಿಕ ಹಗರಣ, ನಿತ್ಯಾನಂದರ ಕ್ರೀಡೆಗಳು, ಎನ್.ಡಿ.ತಿವಾರಿ ಪ್ರಕರಣ, ಇತ್ಯಾದಿಗಳಿನ್ನೂ ಹಸಿರಾಗೇ ಇವೆ) ಅದರ ಕುರಿತಾಗಿ ನೀವೇಕೆ ಕೇಳುತ್ತಿಲ್ಲ?

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments