ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 25, 2013

3

ನೋಡುವ ‘ದೃಷ್ಟಿ’ ಬದಲಿಸಬಲ್ಲ ‘ನೈನ್ ಲೈಫ್ಸ್’

by ನಿಲುಮೆ

– ಡಾ.ಅಶೋಕ್ ಕೆ ಆರ್

nine-livesಪ್ರವಾಸಕಥನವೆಂದರೆ ಭೇಟಿ ನೀಡಿದ ತಾಣಗಳ ಮಾಹಿತಿ, ಆ ಜಾಗಕ್ಕೆ ಹೋಗಲಿರುವ ಸಾರಿಗೆ ವ್ಯವಸ್ಥೆಯ ಬಗೆಗಿನ ಮಾಹಿತಿ, ಅಲ್ಲಿ ಸಿಗುವ ವಿಧವಿಧದ ಭೋಜನಗಳ ಮಾಹಿತಿ, ಅಬ್ಬಬ್ಬಾ ಎಂದರೆ ಆ ಸ್ಥಳದ ಪೂರ್ವೇತಿಹಾಸದ ಮಾಹಿತಿ – ಇವು ಸಿದ್ಧರೂಪದ ಬಹುತೇಕ ಪ್ರವಾಸಕಥನಗಳ ಹೂರಣ. ಈ ಸಿದ್ಧ ರೂಪವನ್ನು ಹೊರತುಪಡಿಸಿದ ಪ್ರವಾಸಕಥನಗಳೂ ಉಂಟು, ಅವು ಆತ್ಮರತಿಯೊಡನೆ ತಮ್ಮದೇ ಸ್ವಂತ ಸಂಗತಿಗಳನ್ನು, ಸಣ್ಣಪುಟ್ಟ ಸಮಸ್ಯೆಗಳನ್ನು ವೈಭವೀಕರಿಸಿಕೊಂಡು ಬರೆಯಲ್ಪಟ್ಟ ಹೆಸರಿಗಷ್ಟೇ ಪ್ರವಾಸಕಥನವೆನ್ನಿಸಿಕೊಳ್ಳುವ ಬರವಣಿಗೆಗಳು. ಇವೆಲ್ಲ ರೀತಿಯ ಪ್ರವಾಸಕಥನಗಳು ನಾಚುವಂತೆ ಇರುವ ಪುಸ್ತಕ “ನೈನ್ ಲೈಫ್ಸ್” (Nine Lives). ಪ್ರಕೃತಿ ಸೌಂದರ್ಯದ ವರ್ಣನೆ, ಸ್ಥಳಪುರಾಣದ ಜೊತೆಜೊತೆಗೆ ಆಯ್ದ ಒಂಭತ್ತು ಜನರ ಮತ್ತವರ ಸುತ್ತಲಿನವರ ಕಥೆಯಿದೆ. ಪ್ರಾಚೀನ ಭಾರತದಿಂದ ಇಂದಿನವರೆಗೂ ಸಾಗಿ ಬಂದಿರುವ ‘ವೃತ್ತಿ’ಯಲ್ಲಿ ಕಾಲ ಸರಿದಂತೆ ಆದ ಬದಲಾವಣೆಗಳಿವೆ. ತನ್ನ ಇಪ್ಪತ್ತೈದು ವರುಷಗಳ ಭಾರತದ ಪ್ರವಾಸದಲ್ಲಿ ಭಾರತದ ಸಾಂಸ್ಕೃತಿಕ – ಬಹಿಷ್ಕೃತ ಲೋಕದರ್ಶನ ಮಾಡಿಸುವವನು ವಿಲಿಯಂ ಡ್ಯಾಲ್ರಿಂಪಲ್ (William Dalrymple) ಎಂಬ ಸ್ಕಾಟಿಷ್ ಲೇಖಕ! ಭಾರತೀಯನಾಗದೇ ಹೋದ ಕಾರಣಕ್ಕೆ ಇಂಥದೊಂದು ಒಳನೋಟ ಈ ಲೇಖಕನಿಗೆ ಲಭ್ಯವಾಯಿತಾ? ಒಳಗಿದ್ದು ನೋಡುವವರ ಭಾವಪರಿಧಿಗೆ ದಕ್ಕದ ವಿಷಯಗಳು ಹೊರಗಿನಿಂದ ನೋಡುವವರಿಗೆ ದಕ್ಕುತ್ತದೆ.

ಜೈನ ಧರ್ಮದ ಸನ್ಯಾಸಿನಿ, ಕಣ್ಣೂರಿನ ನೃತ್ಯಪಟು, ಕರ್ನಾಟಕದ ದೇವದಾಸಿಯರು, ಸಾವಿರಾರು ಪುಟದ ಗೀತೆಗಳನ್ನು ಹಾಡುವ ಅನಕ್ಷರಸ್ಥರು, ಸೂಫಿ ಪಂತದ ಹೆಂಗಸು, ಟಿಬೆಟ್ಟಿನಿಂದ ಭಾರತಕ್ಕೆ ವಲಸೆ ಬಂದ ಬೌದ್ಧ ಬಿಕ್ಕು, ಚೋಳರ ಕಾಲದ ಶೈಲಿಯ ಕೆತ್ತುವ ಶಿಲ್ಪಿ, ಮಾಟಗಾತಿ, ಕುರುಡು ಹಾಡುಗಾರ – ಇವಿಷ್ಟು ನೈನ್ ಲೈಫ್ಸ್ ಪುಸ್ತಕದಲ್ಲಿ ಲೇಖಕ ನಮ್ಮೊಡನೆ ಮುಖಾಮುಖಿಯಾಗಿಸುವ ವ್ಯಕ್ತಿಗಳು. ಓದುಗರೊಡನೆ ಮುಖಾಮುಖಿಯಾಗುವುದು ಕೇವಲ ವ್ಯಕ್ತಿ ಮಾತ್ರವಲ್ಲ; ಆ ವ್ಯಕ್ತಿಯ ವ್ಯಕ್ತಿತ್ವ, ಅವರ ಮನೆಯವರ ತಲ್ಲಣ – ಸಂತಸ, ಆ ವ್ಯಕ್ತಿಯ ಸಾಮಾಜಿಕ ಆರ್ಥಿಕ ಸ್ಥಿತಿ – ಸಮಸ್ಯೆ, ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸುತ್ತೇನೆಂದು ಹೇಳುವ ಲೇಖಕ ಆ ವ್ಯಕ್ತಿಯ ಮೂಲಕ ಒಂದಿಡೀ ಪ್ರಾದೇಶಿಕತೆಯ ವಿವರವನ್ನು ಧರ್ಮ – ಧರ್ಮಗಳ ನಡುವಿನ ತಿಕ್ಕಾಟ – ಸಾಮರಸ್ಯಗಳನ್ನು ಸುಲಲಿತ ಓದಿನ ಮೂಲಕ ಮನಸ್ಸಿಗೆ ತಲುಪಿಸುತ್ತಾರೆ. ಹೊರಗಣನವನಾದ ಕಾರಣಕ್ಕೋ ಏನೋ ಯಾವೊಂದು ಪೂರ್ವಾಗ್ರಹವೂ ಇಲ್ಲದೆ ಕಂಡದ್ದನ್ನು ಕೇಳಿದ್ದನ್ನು ಯಥಾವತ್ತಾಗಿ ಬರೆದಿರುವ ಪ್ರಯತ್ನವನ್ನೂ ಗಮನಿಸಬಹುದು.

ವರ್ಷದ ಬಹುತೇಕ ತಿಂಗಳುಗಳ ಕಾಲ ಹುಟ್ಟಿನ ಜಾತಿಯಿಂದಾಗಿ ಬಹಿಷ್ಕೃತನಾಗಿ ಬದುಕುವ ವ್ಯಕ್ತಿ ತನ್ನ ನೃತ್ಯಪಟು ಕಲೆಯಿಂದಾಗಿ ದೇವರಾಗಿ ಬಹಿಷ್ಕಾರ ಹಾಕಿದವರ ಕೈಯಲ್ಲೇ ಪೂಜೆ ಮಾಡಿಸಿಕೊಳ್ಳುವ, ಬಹಿಷ್ಕಾರ ಹಾಕುವ ಜನರಿಗೆ ಬೈಯ್ಯುವ ವೈಚಿತ್ರವಿದೆ. ಹಬ್ಬದ ಅವಧಿ ಮುಗಿಯುತ್ತಿದ್ದಂತೆ ಯಥಾಪ್ರಕಾರ ಮತ್ತೆ ಆತ ಬಹಿಷ್ಕೃತನೇ! ತಾಲಿಬಾನಿಗಳಿಂದ ಮೊಟ್ಟ ಮೊದಲು ಹಾನಿಗೊಳಗಾಗುವುದು ಇಸ್ಲಾಂ ಧರ್ಮವೇ ಎಂಬ ಸೂಫಿ ಸಂತರ ಮಾತುಗಳು ಮೂಲಭೂತವಾದದೆಡೆಗೆ ಆಕರ್ಷಿತರಾಗುವವರಿಗೆ ಪಾಠವಾಗಬೇಕು. ಸುಶ್ರಾವ್ಯವಾಗಿ ಸಾವಿರಾರು ವಾಕ್ಯಗಳ ರಚನೆಯನ್ನು ಸರಾಗವಾಗಿ ಹಾಡುವ ಗಾಯಕರು ಅನಕ್ಷರಸ್ಥರು. ಮೌಖಿಕ ಸಾಹಿತ್ಯ ಪರಂಪರೆ ಅಕ್ಷರತೆಯೊಂದಿಗೆ ನಾಶವಾಗುತ್ತದೆ ಎಂಬ ಅಚ್ಚರಿಯ ಅಭಿಪ್ರಾಯ ಮಂಡಿಸಿದ್ದಾರೆ ಲೇಖಕರು! ಅಕ್ಷರ ಕಲಿಕೆಯೊಂದಿಗೆ ‘ಓದಿಕೊಂಡರಾಯಿತು ಬಿಡು’ ಎಂಬ ಮೆದುಳಿನ ಸ್ವಗತ ನೆನಪಿನ ಶಕ್ತಿಗೆ ಮಾರಕವಾಗಿ ಪರಿಣಮಿಸುತ್ತಿದೆಯಾ? ಮೊಬೈಲು ಬಂದ ಮೇಲೆ ಫೋನ್ ನಂಬರ್ರುಗಳನ್ನು ನೆನಪಿಟ್ಟುಕೊಳ್ಳುವುದನ್ನೇ ನಾವು ಮರೆತಿರುವಾಗ ಅಕ್ಷರ ಮತ್ತು ಮೌಖಿಕ ಸಾಹಿತ್ಯ ಪರಂಪರೆಯ ಸಂಬಂಧವೂ ಲೇಖಕರ ಅಭಿಪ್ರಾಯದಂತೆಯೇ ಇರಬಹುದು. ಬಹಳಷ್ಟು ಹೊಸ ಚಿಂತನೆ – ವಿಚಾರಗಳ, ನಮ್ಮದೇ ದೇಶವನ್ನು ಹೊಸ ದೃಷ್ಟಿಕೋನದಲ್ಲಿ ನೋಡಲು ಈ ಪುಸ್ತಕ ಸಹಕಾರಿ. ಕಥೆ ಕಾದಂಬರಿ ಓದಿ ಬೇಸತ್ತವರು ಒಂದು ಹೊಸ ಓದಿಗಾಗಿ ಈ ಪುಸ್ತಕ ಕೊಳ್ಳಬಹುದು!

ಚಿತ್ರಮೂಲ  : 32minutes.wordpress.com

3 ಟಿಪ್ಪಣಿಗಳು Post a comment
 1. Nagaraj
  ನವೆಂ 25 2013

  I like this….

  ಉತ್ತರ
 2. b.lakshmikanthasa
  ನವೆಂ 26 2013

  ಲೇಖನ ಚೆನ್ನಾಗಿದೆ. ಆದರೆ, ಇಂತಹ ಪುಸ್ತಕಗಳು ಕನ್ನಡಕ್ಕೆ ಅನುವಾದವಾಗುವ ಅಗತ್ಯವಿದೆ. ಅದರಲ್ಲೂ ಕರ್ನಾಟಕದ ದೇವದಾಸಿಯರ ಬಗ್ಗೆ ಏನು ಹೇಳಿದ್ದಾರೆ ತಿಳಿಯಲಿಲ್ಲ.

  ಉತ್ತರ
 3. Prasanna Rameshwara T S
  ನವೆಂ 26 2013

  I have ordered this book with Sapna Book House.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments