ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 26, 2013

20

ಆಚರಣೆ, ಸಂಪ್ರದಾಯ,ನಂಬಿಕೆ ಮತ್ತು ಕಾಕತಾಳಿಯಗಳು

‍ನಿಲುಮೆ ಮೂಲಕ

-ಮು.ಅ ಶ್ರೀರಂಗ,ಬೆಂಗಳೂರು

Indian Tradition N Heritageಒಬ್ಬ ಬ್ರಾಹ್ಮಣನ  ಮನೆಯಲ್ಲಿ ಬೆಕ್ಕೊಂದು ಓಡಾಡಿಕೊಂಡಿತ್ತು. ಹಳೆಯ ಕಾಲದ ಆ ಮನೆಯಲ್ಲಿದ್ದ ಇಲಿ,ಹೆಗ್ಗಣಗಳನ್ನು ತಿಂದುಕೊಂಡು ಅವುಗಳ ಕಾಟ ತಪ್ಪಿಸ್ಸಿದ್ದರಿಂದ ಸಹಜವಾಗಿ ಆ ಬೆಕ್ಕನ್ನು ಕಂಡರೆ ಮನೆಮಂದಿಗೆಲ್ಲಾ ಅಕ್ಕರೆಯಿತ್ತು.ಆ ಕುಟುಂಬದ  ಯಜಮಾನನ ತಂದೆಯದೋ ತಾಯಿಯದೋ  ತಿತಿ ಮಾಡಬೇಕಾದ ದಿನ ಬೆಕ್ಕು ಮನೆಯೊಳಗೆಲ್ಲಾ ಓಡಾಡಿ ಮೈಲಿಗೆ ಮಾಡುವುದು ಸರಿಯಲ್ಲ ಎಂದು ಅದನ್ನು ಮನೆಯ ಕಂಬವೊಂದಕ್ಕೆ ಕಟ್ಟಿಹಾಕಿದರು. ಆ ದಿನದ ಕೆಲಸ, ಊಟ ಎಲ್ಲಾ ಮುಗಿದ ನಂತರ ಆ ಬೆಕ್ಕಿಗೆ ಬಂಧನದಿಂದ ಬಿಡುಗಡೆಯಾಯ್ತು. ಕಾಲ ಕಳೆದಂತೆ ಆ ಮನೆಯ ಯಜಮಾನ ತೀರಿಕೊಂಡ. ಅವನ ಮಕ್ಕಳು ಅಪ್ಪನ ತಿತಿ ಮಾಡುವ ಸಮಯ ಬಂತು. ಆಗ ಮನೆಯಲ್ಲಿ  ಬೆಕ್ಕು ಇರಲಿಲ್ಲ. ಹೀಗಾಗಿ ಅಕ್ಕ ಪಕ್ಕದ ಮನೆಯವರಿಂದ ಕಾಡಿ ಬೇಡಿ ಬೆಕ್ಕೊಂದನ್ನು ತಂದು ಕಂಬಕ್ಕೆ ಕಟ್ಟಿದರು. ಅಂದಿನ ಕೆಲಸ ಮುಗಿದ ನಂತರ ವಾಪಸ್ಸು ಕೊಟ್ಟರು. ಇದು ಹೀಗೆ ಪ್ರತಿ ಸಾರಿ ತಿತಿ ಮಾಡುವಾಗಲೂ ಮುಂದುವರಿಯಿತು.  ಇದೊಂದು ಕಾಲ್ಪನಿಕ ಕಥೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆ ನೋಡಿದರೆ ಐತಿಹಾಸಿಕವಾದುದನ್ನು ಬಿಟ್ಟರೆ ನಾವು ಓದುವ ಕತೆ ಕಾದಂಬರಿಗಳೆಲ್ಲ ಕಾಲ್ಪನಿಕವಾದವುಗಳೇ. ಅದರ  ಬಗ್ಗೆ ಚರ್ಚೆ ಈಗ ಬೇಡ. ಏಕೆಂದರೆ ಈ ಬರಹ ಸಾಹಿತ್ಯಕ್ಕೆ ಸಂಬಧಿಸಿದ್ದಲ್ಲ. ಈ ಬೆಕ್ಕಿನ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಒಂದಿದೆ. ನಾವುಗಳು ಕೆಲವೊಂದು ಆಚರಣೆಗಳಿಗೆ ಇದು ಏಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಮಕ್ಕಳೇನಾದರು ಕೇಳಿದರೆ “ನೀನೊಬ್ಬ ಅಧಿಕ ಪ್ರಸಂಗಿ, ತಲೆಹರಟೆ”ಎಂದು ಬೈದು ಅವರನ್ನು ಸುಮ್ಮನಾಗಿಸುತ್ತೇವೆ. ತಂದೆ ತಾಯಿಗೆ  ಅಜ್ಜಿ, ತಾತನಿಗೆ ಹೆದರಿದ ಆ ಮಕ್ಕಳು ಸುಮ್ಮನಾಗುತ್ತವೆ. ಅವರು ದೊಡ್ಡವರಾದ ಮೇಲೆ ಹಿಂದಿನವರು ತಮಗೆ  ಮಾಡಿದ್ದನ್ನೇ ತಮ್ಮ ಮಕ್ಕಳಿಗೂ ಮಾಡುತ್ತಾರೆ. ಈ ಕೊಂಡಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾಹೋಗಿ ಆಚರಣೆಗಳಾಗಿ,ಸಂಪ್ರದಾಯಗಳಾಗಿ ಮುಂದುವರಿಯುತ್ತವೆ.
ಪ್ರಹ್ಲಾದ ಮತ್ತು ಅವನ ತಂದೆ ಹಿರಣ್ಯಕಶ್ಯಪುವಿನ  ಪುರಾಣದ ಕಥೆ ನಮಗೆಲ್ಲ ತಿಳಿದಿದೆ. ಹಿರಣ್ಯಕಷ್ಯಪು ತಪಸ್ಸು ಮಾಡಿ ತನಗೆ ಪ್ರಾಣಿಗಳಿಂದಾಗಲಿ, ಮನುಷ್ಯರಿಂದಾಗಲೀ, ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ,ಮನೆಯ ಒಳಗಡೆಯಾಗಲಿ ಹೊರಗಡೆಯಾಗಲಿ ಯಾವುದೇ ಆಯುಧದಿಂದಾಗಲಿ ಸಾವು ಬರಬಾರದು ಎಂಬ ವರವನ್ನು ಶಿವನಿಂದ ಪಡೆದುಕೊಳ್ಳುತ್ತಾನೆ. ಕಾಲ ಕಳೆದಂತೆ ಲೋಕ ಕಂಟಕನಾಗುತ್ತಾನೆ. ಹರ ಕೊಟ್ಟ ವರದಿಂದಾದ ಅನಾಹುತವನ್ನು ಸರಿಪಡಿಸಲು ಹರಿ(ವಿಷ್ಣು) ನರಸಿಂಹಾವತಾರದಿಂದ (ನರ +ಸಿಂಹ) ಹಿರಣ್ಯಕಶ್ಯಪುವನ್ನು. ಮುಸ್ಸಂಜೆಯಲ್ಲಿ (ಅದು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಒಂದು ಮಧ್ಯದ ಸಮಯ),ಸಂಹಾರಮಾದುತ್ತಾನೆ. ಪ್ರಹ್ಲಾದನ ಹರಿ ಭಕ್ತಿಯಿಂದ ಕೋಪಗೊಂಡ ಹಿರಣ್ಯಕಶ್ಯಪು  ಈ ಕಂಭದಲ್ಲಿ  ನಿನ್ನ ಹರಿಯಿದ್ದಾನೋ ಎಂದು ತನ್ನ ಗದೆಯಿಂದ ಅದಕ್ಕೆ ಹೊಡೆದಾಗ ಅಲ್ಲಿ ಹರಿಯು ನರಸಿಂಹಾವತಾರದಲ್ಲಿ ಪ್ರತ್ಯಕ್ಷನಾಗಿ ಅವನನ್ನು ಹೊಸ್ತಿಲತನಕ(ಅದು ಮನೆಯ ಒಳಗೂ ಅಲ್ಲ ಹೊರಗೂ ಅಲ್ಲ) ಎಳೆದುಕೊಂಡು ಹೋಗಿ ಅಲ್ಲಿ ಕೂತು ತನ್ನ ಕೈಗಳಿಂದಲೇ ಅವನ ಎದೆ ಸೀಳಿ ಸಾಯಿಸುತ್ತಾನೆ.

ಈ ಪುರಾಣದ ಕಥೆಯಿಂದ ಈಗಲೂ ಅದರಲ್ಲೂ ಬ್ರಾಹ್ಮಣರ ಕುಟುಂಬಗಳಲ್ಲಿ ಹೊಸ್ತಿಲ ಮೇಲೆ ಕೂರುವುದು ತಪ್ಪು, ಅಶುಭ ಎಂಬ ಭಾವನೆಯಿದೆ. ಜತೆಗೆ ಹರಿಯು ಪ್ರತ್ಯಕ್ಷವಾದ ಜಾಗ ಎಂದು  ಮನೆಯ ಹೊಸ್ತಿಲನ್ನು ಪೂಜೆ ಮಾಡುವ ಆಚರಣೆ, ಸಂಪ್ರದಾಯ ಈ ಕಥೆಯಿಂದ ಪ್ರೇರಿತವಾಗಿದ್ದಿರಬಹುದು. ಇದೇ ರೀತಿ  ಅಮಾವಾಸ್ಯೆಯ ದಿನ  ಪ್ರಯಾಣ ಮಾಡಬಾರದು ರಾಹುಕಾಲದಲ್ಲಿ ಪ್ರಯಾಣಕ್ಕೆ ಹೊರಡಬಾರದು, ಯಾರಾದರೂ ಮನೆಯಿಂದ ಆಚೆ ಹೋರಾಟ ತಕ್ಷಣ ಮನೆಯ ಮುಂಬಾಗಿಲಿಗೆ ನೀರು ಹಾಕಬಾರದು, ಮನೆಬಿಟ್ಟು  ಆಚೆಕಡೆ ಹೊರಡುವಾಗ ಹೋಗ್ತೀನಿ ಅನ್ನಬಾರದು, ಹೋಗಿಬಿಟ್ಟು  ಬರುತ್ತೀನಿ ಅಂತಲೋ ಬರುತ್ತೇನೆ ಅಂತಲೋ ಹೇಳಬೇಕು …ಹೀಗೆ ಇನ್ನೂ ಎಷ್ಟೋ ಮಾತು, ಆಚರಣೆಗಳ ಹಿಂದೆ  ಸಾವಿನ ಭಯವಿದೆ. ಅಂತಹ ವೇಳೆಯಲ್ಲಿ ಹೊರಟವರು ಯಾರೋ ಯಾವತ್ತೋ ಬೇರೆ ಯಾವುದೋ ಕಾರಣದಿಂದ ನಿಧನರಾಗಿರುತ್ತಾರೆ . ಇಷ್ಟೆಲ್ಲಾ precautions ತೆಗೆದುಕೊಂಡ ಎಷ್ಟೋ ಜನರೂ ಸಹ ಅಪಘಾತದಿಂದ ಅಥವಾ ಸಹಜವಾಗೇ ದಾರಿಯಲ್ಲೇ ನಿಧನರಾಗಿಲ್ಲವೇ? ಆಗ ಆತನ ಆಯಸ್ಸು ಮುಗಿದಿತ್ತು;ವಿಧಿಯನ್ನು ಯಾರು ತಾನೇ ತಪ್ಪಿಸಲು ಸಾಧ್ಯ? ಮನೆಯ ಒಳಗಿದ್ದರೂ ಆಗುವುದು ಆಗಲೇ ಬೇಕಲ್ಲವೆ? ಎಂಬ ready made ಸಿದ್ಧಾಂತವನ್ನು ಎಲ್ಲರೂ ಹೇಳುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಸತ್ತ ಮನುಷ್ಯ ಮನೆಯಿಂದ ಹೊರಡುವ ಸಮಯದಲ್ಲಿ ನಡೆದ ಘಟನೆಗಳಿಗೂ ಆತನ ಸಾವಿಗೂ ಸಂಬಂಧ ಕಲ್ಪಿಸುವ ಕಾಕತಾಳಿಯ ಸಿದ್ಧಾಂತಗಳು ಹುಟ್ಟಿಕೊಳ್ಳುತ್ತವೆ.

ಜನಸಾಮಾನ್ಯರಷ್ಟೇ ಅಲ್ಲದೆ ನಮ್ಮ ರಾಜ್ಯದ ದೇಶದ ಹೊರದೇಶಗಳ ಎಲ್ಲಾ ರಂಗಗಳ ಪ್ರಮುಖ ವ್ಯಕ್ತಿಗಳು ಪುಟ್ಟಪರ್ತಿ ಸಾಯಿಬಾಬ  ಅವರ ಭಕ್ತರಾಗಿದ್ದದ್ದು, ಸಾಯಿಬಾಬಾರ ನಿಧನದ ನಂತರ ಈಗಲೂ ಅವರನ್ನು ದೇವರಂತೆ ಪೂಜಿಸುವವರು ಇರುವುದು ನಮಗೆಲ್ಲಾ ತಿಳಿದಿದೆ. ಬೆಂಗಳೂರು ವಿ ವಿ ಉಪಕುಲಪತಿಗಳಾಗಿದ್ದ ಡಾ।। ಎಚ್ ನರಸಿಂಹಯ್ಯನವರ ನೇತೃತ್ವದ ಸತ್ಯಶೋಧನಾ ಸಮಿತಿಯವರು ನಮ್ಮೆಲ್ಲರ ಎದುರಿಗೆ ಬಂದು ನಿಮ್ಮ ಪವಾಡ ಪ್ರದರ್ಶಿಸಿ ಎಂದಾಗ ಸಾಯಿಬಾಬ ಅವರು ಆ ಆಹ್ವಾನವನ್ನು ಸ್ವೀಕರಿಸಲಿಲ್ಲ. ಅದಕ್ಕೆ ಬದಲಾಗಿ “ಇರುವೆಗೆ ಸಮುದ್ರದ ಆಳ ಹೇಗೆ ತಾನೇ ತಿಳಿಯುತ್ತದೆ” ಎಂದು ಉತ್ತರ ಕೊಟ್ಟರು. ತಮ್ಮ ಸತ್ಯಸಾಯಿ ಟ್ರಸ್ಟ್ ಮೂಲಕ ಸಾಯಿಬಾಬ ಅವರು ಮಾಡಿದ ಸಾಮಾಜಿಕ ಸೇವಾ ಕಾರ್ಯಗಳು, ಆಸ್ಪತ್ರೆಗಳು, ಶಿಕ್ಷಣ, ಆಂಧ್ರದ ರಾಯಲಸೀಮಾ ಪ್ರದೇಶಕ್ಕೆ ಮಾಡಿದ ಕುಡಿಯುವ ನೀರಿನ ವ್ಯವಸ್ತೆ ಇತ್ಯಾದಿಗಳ ಬಗ್ಗೆ ನನಗೆ ಗೌರವವಿದೆ. ಆದರೆ ಇವಕ್ಕೆಲ್ಲಾ ತಮ್ಮ ದೇವಮಾನವ ಎಂಬ ಅವತಾರ ಕಾರಣವಾಯಿತಲ್ಲವೇ? ಎಂಬ ಸೋಜಿಗವೂ ಅದರ ಜತೆಗೆ ಆ ಅವತಾರದ concept  ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿತ್ತೆ ಎಂಬ ಸಂಶಯವೂ ಕಾಡುತ್ತದೆ.

ವೃತ್ತಿಯಿಂದ ಆರ್ಕಿಟೆಕ್ಟ್ ಆಗಿರುವ ಕಥೆಗಾರ ನಾಗರಾಜ ವಸ್ತಾರೆ ಅವರು “ಪರಂಪರೆ ಮತ್ತು ಪ್ರತಿಭೆಯ ನಡುವೆ ನಾನೆಂಬ ಪರಕೀಯ” ಎಂಬ ತಮ್ಮ ಲೇಖನದಲ್ಲಿ (ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ  ೩೦-೮-೨೦೦೯) ಎರಡು ಕುತೂಹಲಕಾರಿಯಾದ ಸಂಗತಿಗಳನ್ನು ಹೇಳಿದ್ದಾರೆ. (೧) ಕೇರಳದ ಕೊಚ್ಹಿನ್ನಲ್ಲಿರುವ ಅವರ ಗೆಳೆಯ (ಆತನೂ ಆರ್ಕಿಟೆಕ್ಟ್) ಹಿಮಾಲಯದ ತಪ್ಪಲಿನಲ್ಲಿ,ಕಡಲತಡಿಯ ನೆಲೆಗಳಲ್ಲಿ,ಕಗ್ಗಾಡಿನ ಕೊರಕಲುಗಳಲ್ಲಿ, ಯಾವುದೇ ಆರ್ಕಿಟೆಕ್ಟ್ಗಗೆ   ಸಾಧಾರಣವಾಗಿ ಸಿಕ್ಕದ ಅವಕಾಶಗಳ projectಗಳಲ್ಲಿ ಕೆಲಸ ಮಾಡುತ್ತಿರುವಂತಹವವನು. ಇದು ಹೇಗೆ ಸಾಧ್ಯವಾಯಿತು ಎಂದು ವಸ್ತಾರೆ ಅವರು ಕೇಳಿದಕ್ಕೆ ಆತ ತನ್ನ ಮೇಜಿನ ಡ್ರಾಯರ್ ಒಳಗೆ ಇಟ್ಟುಕೊಂಡಿದ್ದ ದಾಳಿಂಬೆ ಗಾತ್ರದ ರುದ್ರಾಕ್ಷಿಯೊಂದನ್ನು  ತೆಗೆದು ಕಣ್ಣಿಗೊತ್ತಿಕೊಂಡು  ಮೇಜಿನ ಮೇಲೆ  ಇಟ್ಟು ಎಲ್ಲಾ ಇದರ ಮಹಾತ್ಮೆ ಎನ್ನುತ್ತಾನೆ!

ಇಡೀ ಪ್ರಪಂಚದಲ್ಲಿ ಇಂತಹ ರುದ್ರಾಕ್ಷಿಗಳು ಕೇವಲ ಆರು ಮಾತ್ರ ಇದೆ ಎಂದು ಹೆಮ್ಮೆಯಿಂದ ಅದರ ವಿವರ ಹೇಳಲು ಪ್ರಾರಂಭಿಸುತ್ತಾನೆ.  (೨) ಇಸ್ಲಾಂ ಅನ್ನು ಕಟ್ಟಾ ನಂಬುವ, ಎಲ್ಲೇ ಇರಲಿ ದಿನಕ್ಕೆ ಮೂರು ಹೊತ್ತು ನಮಾಜು ಮಾಡುವ, ಅವಿವಾಹಿತ ಯುವತಿಯದು ಮತ್ತೊಂದು ಪ್ರಸಂಗ. ಸಿಂಗಪುರ ಮೂಲದ ದೊಡ್ಡ ಫ಼ರ್ಮ್  ಒಂದರ ಬೆಂಗಳೂರಿನ ವಹಿವಾಟು ನೋಡಿಕೊಳ್ಳುವ ಆಕೆ ತಿರುಪತಿಯ ಅಂತರಂಗದ ಭಕ್ತೆಯಂತೆ. ಆಕೆಯ ವ್ಯಾನಿಟಿ ಬ್ಯಾಗಿನಲ್ಲಿ ಆ ದೇವರಿಗೆ ಅಭಿಷೇಕದ ಸಮಯದಲ್ಲಿ ತೊಡಿಸಿ ತೆಗೆದ “ಕೌಪೀನ”ವಿದೆಯಂತೆ ! ಅದರ ದೆಸೆಯಿಂದಲೇ ಆಕೆಯ ಅದೃಷ್ಟ ಖುಲಾಯಿಸಿ ದೊಡ್ಡ ಹುದ್ದೆ ಸಿಕ್ಕಿದಂತೆ!  ಆ ರುದ್ರಾಕ್ಷಿ, ಈ  ಕೌಪೀನವನ್ನು ಇಟ್ಟುಕೊಂಡಿರುವವರು ಅಂದುಕೊಂಡಿರುವಷ್ಟು  ಅವು  ಪ್ರಭಾವಶಾಲಿಯೇ? ಅವರಿಗೆ ಅದು ಹೇಗೆ ಸಿಕ್ಕಿತು? ಇತ್ಯಾದಿ ಪ್ರಶ್ನೆಗಳಿಗಿಂತ ಆ ಇಬ್ಬರಿಗೂ ತಮ್ಮ “ಪ್ರತಿಭೆ”ಗಿಂತ ಆ ವಸ್ತುಗಳ ದೆಸೆಯಿಂದಲೇ ತಾವು ಇಷ್ಟು ಎತ್ತರಕ್ಕೆ ಏರಿದ್ದು ಎಂಬ ನಂಬಿಕೆಗಳಿಗೆ  ಏನೆಂದು ಹೇಳಬೇಕು?

ಇತ್ತೀಚಿಗೆ ಇಸ್ರೋ ಅಧ್ಯಕ್ಷರಾದ ಕೆ. ರಾಧಾಕೃಷ್ಣನ್ ಅವರು “ಮಂಗಳಯಾನ”ದ ಹಿಂದಿನ ದಿನ ತಿರುಪತಿ ತಿಮ್ಮಪ್ಪನ ಮುಂದೆ ಚಿನ್ನದ ರಾಕೆಟ್ ಮಾದರಿ ಇರಿಸಿ ಪ್ರಾರ್ಥನೆ ಸಲ್ಲಿಸಿದ ಚಿತ್ರ ಮತ್ತು ವರದಿಯನ್ನು ಪತ್ರಿಕೆಗಲ್ಲಿ ನಾವೆಲ್ಲಾ ನೋಡಿದ್ದೇವೆ. ರಾಕೆಟ್ ಉಡಾವಣೆಯಾದ ಮೇಲೆ ಆ “ಮಾದರಿ ಚಿನ್ನದ ರಾಕೆಟ್”ಅನ್ನು ಕೈಯಲ್ಲಿ ಹಿಡಿದು ಸಂತೋಷಪಟ್ಟ ಚಿತ್ರವೂ ಪ್ರಕಟವಾಗಿದೆ ಅವರ ಜೀವನದ ಸಾರ್ಥ್ಯಕ್ಯದ ಸಂತೋಷದ ಘಳಿಗೆಗೆ ನಾವೆಲ್ಲಾ ಗೌರವ ಸಲ್ಲಿಸಲೇಬೇಕು. ಅದರಲ್ಲಿ ಯಾವ ಅನುಮಾನವಿಲ್ಲ. ಇಲ್ಲಿಯೂ ಸಹ ಪ್ರತಿಭೆ ಮತ್ತು ಭಕ್ತಿಗಳ combination ಇದೆ. (ಮೊದಲಿನ ಚಿತ್ರಕ್ಕೆ ಕನ್ನಡ ಪ್ರಭ ದಿನಪತ್ರಿಕೆ ಕೊಟ್ಟ ಶೀರ್ಷಿಕೆ “ರಾಕೆಟ್ ಕಾಯೋ ತಂದೆ …..”) ಭಕ್ತಿಯ ಶಕ್ತಿಯನ್ನೋ,ಪ್ರಭಾವವನ್ನೋ ಸದ್ಯದ ವಿಜ್ಞಾನದ ಪರಿಮಿತಿಯಲ್ಲಿ ವಿಶ್ಲೇಷಿಸುವಂತಹ ನಿಯಮಗಳಿಲ್ಲ,ಉಪಕರಣಗಳಿಲ್ಲ  ಎಂಬ ಒಂದು ಕಾರಣವನ್ನು .ಆಗಾಗ ನಾವು ಕೇಳುತ್ತಿರುತ್ತೇವೆ. ಆದರೆ ಈ ಒಂದೇ ಒಂದು ಕಾರಣದಿಂದ ವಿಜ್ಞಾನದ ತೆಕ್ಕೆಗೆ ಸಿಕ್ಕದ “ಅಲೌಕಿಕ” ಶಕ್ತಿಗಳ ಮಹಿಮೆಯನ್ನು,ಅಸ್ತಿತ್ವವನ್ನು ಒಪ್ಪಲೇಬೇಕು ಎಂಬ ನಿಲುವು ಸರಿಯೇ? ಅತಿ ಮುಂದುವರಿದ ಪಾಶ್ಚ್ಯಾತ ದೇಶಗಳ ವಿಜ್ಞಾನಿಗಳೂ ಸಹ ವಿಜ್ಞಾನಕ್ಕೆ ಕಾಣದ, ಮೀರಿದ “ಶಕ್ತಿ” ಒಂದಿದೆ ಎಂದು ನಂಬುತ್ತಾರೆ ಎಂಬ ವಾದದಿಂದ ನಮ್ಮ  ಭಕ್ತಿವಾದವನ್ನು ಸಮರ್ಥಿಸಿಕೊಳ್ಳುವುದು ಸಮಂಜಸವೇ?

ಭಕ್ತಿ,ನಂಬಿಕೆ ಇತ್ಯಾದಿಗಳಿಗೆ ಮನಶಾಸ್ತ್ರದ(psychology) ಮೂಲಕ ಕೆಲವೊಂದು ಸನ್ನಿವೇಶಗಳಿಗೆ ಅದು ಬೇಕಾಗುತ್ತದೆ ಎಂಬತಹ ವಾದಗಳನ್ನು ಕೆಲವರು ಆಗಾಗ ಮಂಡಿಸುತ್ತಿರುತ್ತಾರೆ. ಆ ವಾದಗಳು ಒಂದು ಸನ್ನಿವೇಶದಿಂದ ಮತ್ತೊಂದಕ್ಕೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಬದಲಾಗುತ್ತವೆ. ಹೀಗಾಗಿ ಅವು ವಿಜ್ನಾದ ನಿಯಮಗಳಂತೆ universal ಅಲ್ಲ. ಇನ್ನೂ ಕೆಲವರು “ನಾವು ವೈಜ್ನಾನಿಕತೆಗಿಂತ ವಿಜ್ನಾದ ಮೂಢನಂಬಿಕೆಯಲ್ಲಿ ಬದುಕುತ್ತಿದ್ದೇವೆ” ಎಂಬಂತಹ extremityಯ ವಾದಕ್ಕೂ ತಲುಪಿದ್ದಾರೆ.  ಇವರು ಯಾವುದೇ ತರಹದ ಮಾತುಕತೆಗೆ,ಚರ್ಚೆಗೆ ನಿಲುಕದ ಅತೀತರು. ಇಂತಹವರ ಬಗ್ಗೆ ಹೇಳುವಂತಹುದು ಏನೂ ಇಲ್ಲ.

ಚಿತ್ರ ಕೃಪೆ : http://www.eraindiatours.com

20 ಟಿಪ್ಪಣಿಗಳು Post a comment
 1. Nagshetty Shetkar
  ನವೆಂ 26 2013

  ಇಂತಹ ಬಹುತೇಕ ಆಚರಣೆ ಹಾಗೂ ನಂಬಿಕೆಗಳ ಹಿಂದೆ ಕರ್ಮಸಿದ್ಧಾಂತದ ಕೈವಾಡ ಇದೆ ಅಲ್ಲವೇ ಮಿ. ಶ್ರೀರಂಗ?

  ಉತ್ತರ
  • ನವೀನ
   ನವೆಂ 26 2013

   ಕರ್ಮಸಿದ್ಧಾಂತದ ಕೈವಾಡ ಕಾಣಿಸಿಕೊಳ್ಳುತ್ತದೆ ಅನ್ನುವುದು ಸೆಕ್ಯುಲರಿಸಂನ ಚಿಂತನೆಯಾಗಿದೆ.ಇಂತ ಆಚರಣೆಗಳನ್ನು ಮಾಡುವವರು ಅವರ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಅಗತ್ಯವಿದೆ ಎಂದುಕೊಂಡಿರುತ್ತಾರೆ.ಅವರಿಗೆ ಆ ಆಚರಣೆಗಳ ಜೊತೆಗೆ ಒಂದು ನಂಟು ಬೆಳೆದಿರಬಹುದಾದ ಸಾಧ್ಯತೆಯಿದೆ.ಇವೆಲ್ಲವನ್ನೂ ಕರ್ಮ ಸಿದ್ಧಾಂತಕ್ಕೆ ಗಂಟು ಹಾಕುವುದು ಸೋಜಿಗವಾಗಿದೆ.

   ಉತ್ತರ
 2. M.A.Sriranga
  ನವೆಂ 26 2013

  Yes.But how to overcome from that is the problem.

  ಉತ್ತರ
 3. ನವೆಂ 26 2013

  ನಂಬಿಕೆಗಳು ಮನುಷ್ಯನಿಗೆ ಅಗತ್ಯವಾದ ಮನೋಬಲ ನೀಡುತ್ತವೆ. ಅವು ಊರುಗೋಲಿನಂತೆ ಕೆಲಸ ಮಾಡುತ್ತವೆ. ಊರುಗೋಲು ಇಲ್ಲದಿದ್ದರೂ ನಡೆಯಬಹುದೇನೋ; ಊರುಗೋಲಿಲ್ಲದೆ ನಡೆದವರ ಉದಾಹರಣೆಯೂ ಸಿಗಬಹುದು; ಆದರೆ, ಆ ಊರುಗೋಲನ್ನು ಇಟ್ಟುಕೊಂಡವನಿಗೆ ತಾನು ಬೀಳಲಾರೆ ಎನ್ನುವ ವಿಶ್ವಾಸ.

  ಅಗತ್ಯವಿದ್ದವರು ಊರುಗೋಲು ಇಟ್ಟುಕೊಳ್ಳಲಿ, ಅಗತ್ಯವಿಲ್ಲದವರು ಅದನ್ನು ಇಟ್ಟುಕೊಳ್ಳದಿದ್ದರಾಯಿತು. ಯಾರೂ ಸಹ ಊರುಗೋಲು ಇಟ್ಟೊಕೊಳ್ಳಬಾರದೆನ್ನುವ ಹಠವೇಕೆ?

  ಉತ್ತರ
 4. M.A.Sriranga
  ನವೆಂ 26 2013

  If we start using stick(oorugolu) for walking from the childhood itself we may forget how to walk. So is there any harm to try and test whether we actually need the stick?.

  ಉತ್ತರ
  • ನವೆಂ 26 2013

   Excellent point. I was about to say that this metaphor is flawed. Science has not yet developed to the extent where it can explain the role played by faith in human life.

   ಉತ್ತರ
  • ನವೆಂ 27 2013

   ‘ನಿಲುಮೆ’ ಕನ್ನಡದ ತಾಣ. ಇಲ್ಲಿ ಕನ್ನಡ ಲಿಪಿಯಲ್ಲೇ ಬರೆದರೆ ಚೆನ್ನ.

   ನಾನೇನೂ ಎಲ್ಲರೂ ಯಾವಾಗಲೂ ಊರುಗೋಲನ್ನು ಬಳಸಬೇಕು ಎಂದೇನೂ ಹೇಳಲಿಲ್ಲವಲ್ಲ.
   ಮತ್ತು ನಡೆಯುವಾಗಲೆಲ್ಲಾ ಊರುಗೋಲು ಬೇಕು ಎಂದೂ ನಾನು ಹೇಳಲಿಲ್ಲ.
   ಹಿಮಾಲಯದ ಚಾರಣ ಮಾಡಿದವರನ್ನು ಕೇಳಿ ನೋಡಿ; ಅವರು ಊರುಗೋಲು ಇಲ್ಲದೆ ಹಿಮಾಲಯ ಹತ್ತಲು ಸಾಧ್ಯವೇ ಎಂದು?
   ನೀವು ತಲುಪಬೇಕಾದ ಗುರಿ, ಹಿಡಿದ ದಾರಿಗೆ ಅನುಗುಣವಾಗಿ ಸಾಧನವನ್ನು ಬಳಸುವಿರಿ.
   ಆ ಅರ್ಥದಲ್ಲಿ ನಾನು ‘ಊರುಗೋಲು’ ಎನ್ನುವ ಪದವನ್ನು ಬಳಸಿದ್ದು.

   ಉತ್ತರ
   • M.A.Sriranga
    ನವೆಂ 28 2013

    ಕುಮಾರ್ ಅವರಿಗೆ–ತಾವು ಪ್ರಸ್ತಾಪಿಸಿರುವ “ಊರುಗೋಲು”ವಿನ ಪ್ರಸ್ತಾಪವನ್ನು ನಾನು ನನ್ನ ಲೇಖನದಲ್ಲಿ ಈಗಾಗಲೇ ಹೇಳಿದ್ದೇನೆ.(ಸಾಯಿಬಾಬ ಅವರ ಭಕ್ತರ ವಿಷಯ………ಇಸ್ರೊ ಅಧ್ಯಕ್ಷರ ವಿಷಯದಲ್ಲಿ ಹೀಗೆ….) ಹಲವು ಬಾರಿ ನಾವು ತರ್ಕಕ್ಕೆ,ವಾದಕ್ಕೆ ನಿಲುಕದ ವಿಷಯಗಳನ್ನು ಉಪಮೆಗಳ ಮೂಲಕ,ಭಾಷೆಯ ಚಮತ್ಕಾರಿಕ ಉಪಯೋಗದ ಮೂಲಕ ವಿವರಿಸಿ ಆ ವಿಷಯದಿಂದ ಪಾರಾಗಿಬಿಡುತ್ತೇವೆ. ಇದು ಸರಿಯೇ? ಎಂಬುದು ನನ್ನ ಸಂದೇಹ. ಅವರ ಭಕ್ತಿ, ನಂಬಿಕೆ, ಆಚರಣೆಗಳಿಂದ ಸಮಾಜಕ್ಕೆ ಏನೂ ತೊಂದರೆಯಾಗುತ್ತಿಲ್ಲವಲ್ಲ. ಅದಕ್ಕೇಕೆ ನಿಮ್ಮ ಟೀಕೆ ಎಂದು ನನ್ನನ್ನು ತಾವು ಕೇಳಬಹುದು. ಆ ಊರುಗೋಲಿನ ಆಸರೆ ಇಲ್ಲದಿದ್ದರೂ ಅವರು ಮುಂದೆ ಬರಲು, ಅವರ ಕೆಲಸ ನೆರವೇರಲು ಸಾಧ್ಯವಾಗುತ್ತಿತ್ತಲ್ಲವೇ? ಇದು ನನ್ನ ಲೇಖನದ ಹಿಂದಿರುವ ಪ್ರಶ್ನೆ.

    ಉತ್ತರ
    • ನವೆಂ 28 2013

     ಕನ್ನಡದಲ್ಲಿ ಬರೆದದ್ದಕ್ಕೆ ಧನ್ಯವಾದಗಳು. 🙂

     [[ಆ ಊರುಗೋಲಿನ ಆಸರೆ ಇಲ್ಲದಿದ್ದರೂ ಅವರು ಮುಂದೆ ಬರಲು, ಅವರ ಕೆಲಸ ನೆರವೇರಲು ಸಾಧ್ಯವಾಗುತ್ತಿತ್ತಲ್ಲವೇ?]]
     ಅದನ್ನು ನೀವು ಹೇಗೆ ಹೇಳಬಲ್ಲಿರಿ? ನೀವು ಆ ರೀತಿ ಭಾವಿಸುವುದೂ ಒಂದು ‘ನಂಬಿಕೆ’ಯೇ ಆಗಿಬಿಡುತ್ತದಲ್ಲವೇ?

     ಯಾವುದೇ ವ್ಯಕ್ತಿಗೆ ಯಾವ ಸಮಯದಲ್ಲಿ ‘ಊರುಗೋಲು’ ಬೇಕೆನ್ನುವುದನ್ನು ಆ ವ್ಯಕ್ತಿಯೇ ನಿಶ್ಚಯಿಸಬೇಕಲ್ಲವೇ?
     ‘ಊರುಗೋಲಿನ’ ಆವಶ್ಯಕತೆಯಿಲ್ಲ ಎನ್ನಿಸಿದಾಗ ಆ ವ್ಯಕ್ತಿಯೇ ಅದನ್ನು ಬಿಸಾಡುತ್ತಾನೆ.
     ನಂಬಿಕೆ ಎನ್ನುವುದು ವೈಯಕ್ತಿಕ ವಿಚಾರ. ಮತ್ತು ಅದೇ ಜಗತ್ತಿನ ಆಧಾರ ಸಹ.
     ಹುಟ್ಟಿದ ಮಗುವಿಗೆ ತಾಯಿ ಮತ್ತು ತಂದೆ ಎನ್ನುವುದು ಒಂದು ನಂಬಿಕೆ. ಅವರು ನಮ್ಮವರು ಎನ್ನುವ ನಂಬಿಕೆ, ಆ ಮಗುವಿಗೆ ಒಂದು ಮಾನಸಿಕ ಭದ್ರತೆ ನೀಡುತ್ತದೆ. ವ್ಯಕ್ತಿ ಬೆಳೆದಂತೆಲ್ಲಾ ಹೊಸ ಹೊಸ ನಂಬಿಕೆಗಳನ್ನು ಆಶ್ರಯಿಸುತ್ತಾ ಹೋಗುತ್ತಾನೆ.
     ನಂಬಿಕೆಯೇ ಇಲ್ಲದ ವ್ಯಕ್ತಿ ಇರಲು ಸಾಧ್ಯವಿಲ್ಲ.
     ಈ ರೀತಿಯ ನಂಬಿಕೆಗಳು ಸಮಾಜವನ್ನೂ ವ್ಯಾಪಿಸುತ್ತದೆ ಮತ್ತು ಅದೇ ಆಚರಣಗಳ ರೂಪದಲ್ಲಿ ಹೊರಹೊಮ್ಮುತ್ತದೆ.
     ಅವೇ ಸಮಾಜಗಳನ್ನು ಒಂದಾಗಿ ಹಿಡಿದಿಡುವ ಕೊಂಡಿಗಳಾಗುತ್ತವೆ.

     ಉತ್ತರ
    • ವಿಜಯ್ ಪೈ
     ನವೆಂ 28 2013

     ಶ್ರೀರಂಗ ಅವರೆ..

     [ಸಾಯಿಬಾಬ ಅವರ ಭಕ್ತರ ವಿಷಯ………ಇಸ್ರೊ ಅಧ್ಯಕ್ಷರ ವಿಷಯದಲ್ಲಿ ಹೀಗೆ…]
     ಅದು ಅವರ ವೈಯುಕ್ತಿಕ. ನನ್ನ ನಂಬಿಕೆ ನನ್ನದು..ಇಸ್ರೊ ಅಧ್ಯಕ್ಷರ ನಂಬಿಕೆ ಅವರದು. ನಾವು ಪ್ರಶ್ನೆ ಮಾಡಬೇಕಾಗಿದ್ದು
     – ಯಾರಾದರೂ ತಮ್ಮ ನಂಬಿಕೆಯನ್ನು ಇತರರ ಮೇಲೆ ಒತ್ತಾಯಪೂರ್ವಕವಾಗಿ ಹೇರಿದರೆ
     – ಜವಾಬ್ದಾರಿ ಸ್ಥಾನಗಳಲ್ಲಿರುವವರು , ಯಶ ಸಾಧಿಸಲು ತಾವು ಅವಶ್ಯ ಮಾಡಬೇಕಾದ ಕಾರ್ಯಗಳನ್ನು ಸಂಪೂರ್ಣ ಬದಿಗೊತ್ತಿ ಕೇವಲ ‘ನಂಬಿಕೆ’ ಯ ಆಧಾರದ ಮೇಲೆಯೇ ತಮ್ಮ ನಿಯೋಜಿತ ಕೆಲಸ-ಕಾರ್ಯಗಳನ್ನು ಮಾಡಿಸಲು ನೋಡಿದಾಗ

     [ಆ ಊರುಗೋಲಿನ ಆಸರೆ ಇಲ್ಲದಿದ್ದರೂ ಅವರು ಮುಂದೆ ಬರಲು, ಅವರ ಕೆಲಸ ನೆರವೇರಲು ಸಾಧ್ಯವಾಗುತ್ತಿತ್ತಲ್ಲವೇ?]
     ಹಾಸಿಗೆ ಇದೆ ಎಂದಾಕ್ಷಣ ದಿನವಿಡಿ ಮಲಗುವ ಬಯಕೆ ಬರುತ್ತದೆ ಅನ್ನುವುದು ಸರಿಯೆ?
     ಇದರಿಂದ ಸಮಾಜಕ್ಕೆ ಆಗುವ ತೊಂದರೆ ಏನು? ಉದಾಹರಣೆಗೆ ಇಬ್ಬರು ಜ್ಞಾನಪೀಠ ಸಾಹಿತಿಗಳನ್ನೇ ತೆಗೆದುಕೊಳ್ಳೋಣ..ಶಿವರಾಂ ಕಾರಂತರು ಮತ್ತು ವಿ.ಕೃ.ಗೋಕಾಕ. ನಂಬಿಕೆಯ ವಿಷಯದಲ್ಲಿ ಈ ಇಬ್ಬರೂ ಉತ್ತರ-ದಕ್ಷಿಣ. ನಾವು ಈ ಇಬ್ಬರನ್ನೂ ಮೆಚ್ಚುವುದಿಲ್ಲವೆ? ಶಿವರಾಂ ಕಾರಂತರ ಮಡದಿ ಲೀಲಾ ಕಾರಂತ ಸಾಯಿ ಭಕ್ತರಾಗಿದ್ದರು..ಕಾರಂತರು ಮಡದಿಯ ನಂಬಿಕೆಯನ್ನು ಗೌರವಿಸಿದರು. ಕಾರಂತರ ಈ ಮಾತುಗಳನ್ನು ನೋಡಿ..
     ” ನನ್ನ ಬಾಳಿನೊಡನೆ ತೇಲಿಬಂದು ನನ್ನ ಸಹಭಾಗಿನಿಯಾದ ಮಡದಿಯೂ ನನ್ನಷ್ಟೇ ಅಲ್ಪಕಾಲ ನನ್ನೊಡನೆ ಇರಬಲ್ಲಳು. ದಾಂಪತ್ಯದ ಕಟ್ಟಿನಲ್ಲಿ ಸಿಲುಕಿಸಿ ಅವಳ ವ್ಯಕ್ತಿತ್ವವನ್ನು ನನ್ನ ಅಚ್ಚಿನಲ್ಲಿ ಎರೆಯುವುದಕ್ಕೆ ನಾನು ಪ್ರಯತ್ನಿಸಿಲ್ಲ. ಸಂಸಾರದ ಸುಖ ದುಖಃಗಳಲ್ಲಿ ಅನಿವಾರ್ಯವಾದ ಪಾಲು ಅವಳಿಗೆ ಬಂದರೂ, ಅವಳ ಮನೋಧರ್ಮದ ಒಡೆತನ ಅವಳದ್ದೆ.”

     ಉನ್ನತ ಸ್ತರದಲ್ಲಿರುವವರ/ಸಾಧಕರ ನಂಬಿಕೆಗಳು ಸಮಾಜಕ್ಕೆ ತಪ್ಪು ಸಂದೇಶವನ್ನು ಕೊಡುತ್ತವೆ ಅನ್ನುವುದು ಸಮಂಜಸವಲ್ಲ. ನಾವು ಇನ್ನೊಬ್ಬ ರನ್ನು / ಇನ್ನೊಂದು ಸಿದ್ಧಾಂತವನ್ನು ಕುರುಡಾಗಿ ಭಟ್ಟಂಗಿತನ ದಿಂದ ಅನುಸರಿಸಲು ಪ್ರಾರಂಭಿಸಿದಾಗ ಮಾತ್ರ ಸಮಾಜಕ್ಕೆ ಹಾನಿಯಾಗುತ್ತದೆ. ಮನುಷ್ಯ ಆಸ್ತಿಕನಾಗಿದ್ದೂ ..ವಿಚಾರವಂತನಾಗಿ ಸಮಾಜಕ್ಕೆ ಸಾಕಷ್ಟು ಸೇವೆ ಸಲ್ಲಿಸಬಹುದು. ನಾಸ್ತಿಕನಾಗಿದ್ದೂ..ತಮ್ಮ ವಿಚಾರವಂತಿಕೆಯಿಂದ, ಪ್ರಾಮಾಣಿಕ ಜೀವನದಿಂದ ಉನ್ನತ ಹಂತವನ್ನು ತಲುಪಿ ಎಲ್ಲರ ಆದರಕ್ಕೆ ಒಳಗಾಗಬಹುದು (ಉದಾ: ನಮ್ಮ ಕಾರಂತರು, ಅ.ನ ಮೂರ್ತಿರಾಯರು, ಎಚ್ಚೆನ್ ಮೇಸ್ಟ್ರು ). ಇದೇ ಪ್ರಮಾಣಿತ ಸತ್ಯ..ಇದರಂತೆಯೇ ಎಲ್ಲರೂ ಬದುಕಬೇಕು ಎಂದು ಸಮಾಜಕ್ಕೆ ಬೋಧಿಸುವವರು ಎಲ್ಲ ತಿಳಿದ ಮಹಾಜ್ಞಾನಿಗಳಾಗಿರಬೇಕಷ್ಟೆ..ಅಂತವರು ಇದ್ದಾರೆಯೆ?

     ಉತ್ತರ
     • M.A.Sriranga
      ನವೆಂ 28 2013

      ವಿಜಯ್ ಪೈ ಅವರಿಗೆ–(೧)ಜವಾಬುದಾರಿಯ ಸ್ಥಾನದಲ್ಲಿರುವವರ ಭಕ್ತಿಯ ಸಾರ್ವಜನಿಕ ಪ್ರದರ್ಶನ ಸರಿಯೇ ಎಂಬ ಹಿನ್ನೆಲೆಯಲ್ಲಿ ನಾನು ಇಸ್ರೋ ಅಧ್ಯಕ್ಷರ ವಿಷಯ ಹೇಳಿದ್ದು. ಆಂತಹವರ ಭಕ್ತಿಯ ಪ್ರದರ್ಶನ ಸಮಾಜಕ್ಕೆ ಯಾವ messageಅನ್ನು ತಲುಪಿಸಬಹುದು ಎಂಬ ಪ್ರಶ್ನೆ ಸದ್ಯದ ಪರಿಸ್ಥಿತಿಯಲ್ಲಿ ನನಗೆ ಮುಖ್ಯವೆನಿಸಿದೆ. ಜನಗಳು ಅವರನ್ನು ಅನುಸರಿಸಲಿ ಅಥವಾ ಬಿಡಲಿ ಅಂತಹವರ ನಿದರ್ಶನಗಳೇ ಕೆಲವೊಮ್ಮೆ ಮಾರಾಟದ ವಸ್ತುಗಳಾಗುವ ಆಪಾಯವಿದೆ. ಅವರ ವೈಯಕ್ತಿಕ ನಂಬಿಕೆ ಬಗ್ಗೆ ನಾನೇನೂ ಹೇಳಲಾರೆ. ಅವರಂತಹವರು ನಮ್ಮ ನಡುವೆ ಹಲವರು ಇದ್ದಾರೆ.
      (೨)ಶಿವರಾಮ ಕಾರಂತರು ತಮ್ಮ ಮಡದಿಯ ಆಶಯದಂತೆ ಅವರನ್ನು ಸಾಯಿಬಾಬ ಅವರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದು ನಿಜ.ಆದರೆ ತಾವು ಮಾತ್ರ ಹೊರಗಡೆಯೇ ಕುಳಿತಿದ್ದರು. ಈ ಅಂಶವನ್ನೂ ನಾವು ಗಮನಿಸಬೇಕಲ್ಲವೆ?

      ಕುಮಾರ್ ಅವರಿಗೆ– ತಮ್ಮ ಪ್ರಶ್ನೆಗೆ ನಾನು ಬಹುಶಃ ನನ್ನ ಈ ದಿನದ ಮೊದಲ ಪ್ರತಿಕ್ರಿಯೆಯಲ್ಲಿ ಉತ್ತರಿಸಿರಬಹುದು ಎಂದು ಭಾವಿಸಿದ್ದೆನೆ. ಕನ್ನಡದಲ್ಲಿ ಉತ್ತರಿಸಲು ಪ್ರೇರೇಪಿಸಿದ ತಮಗೆ ವಂದನೆಗಳು.

      ಉತ್ತರ
      • ವಿಜಯ್ ಪೈ
       ನವೆಂ 28 2013

       [ಜವಾಬುದಾರಿಯ ಸ್ಥಾನದಲ್ಲಿರುವವರ ಭಕ್ತಿಯ ಸಾರ್ವಜನಿಕ ಪ್ರದರ್ಶನ ಸರಿಯೇ ಎಂಬ ಹಿನ್ನೆಲೆಯಲ್ಲಿ ನಾನು ಇಸ್ರೋ ಅಧ್ಯಕ್ಷರ ವಿಷಯ ಹೇಳಿದ್ದು. ಆಂತಹವರ ಭಕ್ತಿಯ ಪ್ರದರ್ಶನ ಸಮಾಜಕ್ಕೆ ಯಾವ messageಅನ್ನು ತಲುಪಿಸಬಹುದು ಎಂಬ ಪ್ರಶ್ನೆ ಸದ್ಯದ ಪರಿಸ್ಥಿತಿಯಲ್ಲಿ ನನಗೆ ಮುಖ್ಯವೆನಿಸಿದೆ.]
       ೧) ಇಸ್ರೊ ಅಧ್ಯಕ್ಷರು ಹೋಗಿದ್ದು ದೇವಸ್ಥಾನಕ್ಕೆ. ಅದು ಅವರ ಖಾಸಗಿ ಭೇಟಿಯೇ. ಅದನ್ನು ಸಾರ್ವಜನಿಕಗೊಳಿಸಿದ್ದು ಮಾಧ್ಯಮಗಳು. ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿದ್ದು ಅವರ ಹುದ್ದೆಯಿಂದ.
       ೨) ಇಸ್ರೊ ಅಧ್ಯಕ್ಷರು ಸ್ವಂತ ಖರ್ಚಿನಿಂದ ಪೂಜೆ ಸಲ್ಲಿಸಿದ್ದರೆ ಅದು ಅವರ ವೈಯುಕ್ತಿಕ.
       ೩) ಇಸ್ರೋದ ಖರ್ಚಿನಲ್ಲಿ ಅಧಿಕೃತವಾಗಿ ಪೂಜೆ ಮಾಡಿದ್ದರೆ ಅದು ತಪ್ಪು. ತಮಗೆ ನಂಬಿಕೆ ಇದೆಯೆಂದು, ಇಸ್ರೋದಲ್ಲಿ ಆ ಪೂಜೆ ಮಾಡಿದ್ದಿದ್ದರೆ ಅದು ತಪ್ಪು.
       ೪) ಪಂಚಾಂಗದಿಂದ ಮೂಹುರ್ತ ನೋಡಿ ಉಪಗ್ರಹ ಉಡಾಯಿಸಿದಿದ್ದರೆ ಅದು ತಪ್ಪು!.

       [ಜನಗಳು ಅವರನ್ನು ಅನುಸರಿಸಲಿ ಅಥವಾ ಬಿಡಲಿ ಅಂತಹವರ ನಿದರ್ಶನಗಳೇ ಕೆಲವೊಮ್ಮೆ ಮಾರಾಟದ ವಸ್ತುಗಳಾಗುವ ಆಪಾಯವಿದೆ.]
       ಬೆಂಕಿಯಿಂದ ಸುಡುವುದು ಅಥವಾ ಅಡುಗೆ ಮಾಡಿಕೊಳ್ಳುವುದು ನಮಗೆ ಬಿಟ್ಟಿದ್ದು. ಬೆಂಕಿಯನ್ನು ದೂರುವುದಕ್ಕಿಂತ ಸಂದರ್ಭಕ್ಕೆ ತಕ್ಕಂತೆ ವಸ್ತುಗಳ ಬಳಕೆ ಮಾಡಿಕೊಳ್ಳುವ ವಿವೇಚನೆ ನಮಗೆ ಬರಬೇಕು ಅಂದು ಕೊಳ್ಳುತ್ತೇನೆ.

       [ಶಿವರಾಮ ಕಾರಂತರು ತಮ್ಮ ಮಡದಿಯ ಆಶಯದಂತೆ ಅವರನ್ನು ಸಾಯಿಬಾಬ ಅವರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದು ನಿಜ.ಆದರೆ ತಾವು ಮಾತ್ರ ಹೊರಗಡೆಯೇ ಕುಳಿತಿದ್ದರು. ಈ ಅಂಶವನ್ನೂ ನಾವು ಗಮನಿಸಬೇಕಲ್ಲವೆ?]
       ಅದನ್ನೆ ಹೇಳಿದ್ದು ನಾನು. ಅವರು ತಮ್ಮಷ್ಟು ಬುದ್ದಿವಂತರು ಯಾರೂ ಇಲ್ಲ ಎಂದುಕೊಂಡು ತಮ್ಮ ನಂಬಿಕೆಯನ್ನು ತಮ್ಮ ಹೆಂಡತಿಯ ಮೇಲೆ ಹೇರಲಿಲ್ಲ. ‘ಅವಳ ಮನೋಧರ್ಮದ ಒಡೆತನ ಅವಳದ್ದೆ’ ಎಂದರು. ತಮ್ಮ ಹೆಂಡತಿಯ ನಂಬುಗೆಯನ್ನು ತಮ್ಮ ಮೇಲೆ ಕೂಡ ಹೇರಿಕೊಳ್ಳಲಿಲ್ಲ. ಪ್ರಾಮಾಣಿಕರಾಗಿ ಉಳಿದರು. ಎಚ್ಚೆನ್ ಮೇಷ್ಟ್ರು ವಿದ್ಯಾರ್ಥಿಗಳು ಮಾಡುತ್ತಿದ್ದ ಗಣೇಶೋತ್ಸವದಲ್ಲಿ ಪಾಲುಗೊಳ್ಳುತ್ತಿದ್ದರಂತೆ. ಇವರು ಇನ್ನೊಬ್ಬರ ನಂಬಿಕೆ ಬಗ್ಗೆ ಕುಹಕವಾಡಲಿಲ್ಲ. ಆದರೆ ಭಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಪ್ರಶ್ನೆ ಎತ್ತಿದರು. ಸಾಯಿಬಾಬಾರ ಜೊತೆ ಅವರ ಜಗಳ ಈಗಿನ ಅರ್ಧ ತುಂಬಿದ ಕೊಡಗಳಂತಿರುವ, ಆದರೆ ಸಮಾಜ ಸುಧಾರಿಸುವ ಗುತ್ತಿಗೆ ಹಿಡಿದುಕೊಂಡಿರುವ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳ ಪುಂಗಿನಾದದಂತೆ ಹೊಟ್ಟೆ ಹೊರೆದುಕೊಳ್ಳುವ ವ್ಯವಸ್ಥಿತ ಯೋಜನೆಯಾಗಿರಲಿಲ್ಲ. ಪ್ರಾಮಾಣಿಕವಾಗಿತ್ತು. ಆದಕಾರಣ ಇವರೆಲ್ಲ ಜನ ಮಾನಸದ ನೆನಪಿನಲ್ಲಿ ಇಂದಿಗೂ ಇದ್ದಾರೆ.ವಂದನೀಯರಾಗಿದ್ದಾರೆ.

       ಕೊನೆಯದಾಗಿ ಸಾರ್ವಜನಿಕವಾಗಿ ಏನನ್ನು ಪ್ರಕಟಿಸಬೇಕು, ಏನನ್ನು ಪ್ರಕಟಿಸಬಾರದು..ಯಾವ ಕಾರ್ಯಕ್ರಮ ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಕಟ್ಟಲೆಗಳು ಏನಾದರೂ ಇವೆಯೆ? ಇದರಿಂದ ಇಂತವರಿಗೆ ತೊಂದರೆಯಾಗುತ್ತದೆ, ಸಮಾಜದ ಸ್ವಾಸ್ಥ ಕೆಡಿಸುತ್ತದೆ, ಇದು ವ್ಯಾಪಾರಿಕರಣ, ಇದು ವ್ಯಾಪಾರಿಕರಣವಲ್ಲ ಎಂದು ನಿರ್ಧರಿಸಬೇಕಾದವರು ಯಾರು? ಮನುಷ್ಯನ ಭಾವನೆಗಳನ್ನು ಪ್ರಕಟಿಸುವ, ಆದರೆ ಅವು ಇಲ್ಲದೆಯೂ ಆರಾಮವಾಗಿ ಬದುಕಬಹುದಾದ ಈ ಸಂಗೀತ, ಸಾಹಿತ್ಯ, ಕವನ, ನೃತ್ಯ ಎಲ್ಲವುಗಳು ಯಾವ ವಿಭಾಗದಲ್ಲಿ ಬರುತ್ತವೆ? ಉದಾಹರಣೆಗೆ ಪ್ರಚಲಿತದಲ್ಲಿ ಮೂಡಬಿದ್ರಿಯಲ್ಲಿ ನಡೆಯುವ ಅಳ್ವಾಸ್ ನುಡಿಸಿರಿ ಕಾರ್ಯಕ್ರಮದಿಂದ ಕೆಲವರಿಗೆ ತೊಂದರೆ ಆಗುತ್ತಿದೆಯಂತೆ. ಫ್ಯೂಡಲ್ ಮೆಂಟಾಲಿಟಿಯ ಪ್ರದರ್ಶನವಂತೆ ಅದು., ವ್ಯಾಪಾರಿಕರಣವಂತೆ. ಏನು ಮಾಡೋಣ ಅಂತೀರಿ?

       ಉತ್ತರ
 5. Nagshetty Shetkar
  ನವೆಂ 28 2013

  “ಪಂಚಾಂಗದಿಂದ ಮೂಹುರ್ತ ನೋಡಿ ಉಪಗ್ರಹ ಉಡಾಯಿಸಿದಿದ್ದರೆ ಅದು ತಪ್ಪು!.”

  ಯಾಕೆ?

  ಉತ್ತರ
  • ವಿಜಯ್ ಪೈ
   ನವೆಂ 29 2013

   ಹಾ..ಕೆಲವು ಜನ ಇಸ್ರೋದವರು ಪಂಚಾಂಗ ನೋಡಿ ಲಾಂಚ್ ಮಾಡ್ತಾರೆ ಎಂಬ ಸುದ್ದಿ ಹಬ್ಬಿಸಿದರು ಏನು ದೊಡ್ಡದಲ್ಲ ಎಂಬುದಕ್ಕೆ ಆ ಉದಾಹರಣೆ ಕೊಟ್ಟೆ. 🙂
   ಮಂಗಳಯಾನದ ಹೊತ್ತಿಗೆ ಬಂದ ಸುದ್ದಿ :
   The launch of India’s maiden mission to Mars has been postponed by a week; it is now to be launched in November if weather permits. Ironically, rough weather in the Pacific Ocean has forced this decision

   ಉತ್ತರ
 6. ನವೆಂ 29 2013
 7. ನವೆಂ 29 2013

  ಎಚ್.ನರಸಿಂಹಯ್ಯನವರ ಸತ್ಯ ಸಾಯಿ ಬಾಬಾ ಭೇಟಿಗೆ ಸಂಬಂಧಿಸಿದಂತೆ:
  ೧. ನರಸಿಂಹಯ್ಯನವರು ಭೇಟಿ ಮಾಡಲು ಹೋಗುವ ಹೊತ್ತಿಗೆ ಸಂದರ್ಶನದ ವೇಳೆ ಮುಗಿದಿತ್ತು.
  ಅವರು ಹೋಗಿದ್ದು ಬೆಂಗಳೂರಿನ ವೈಟ್^ಫೀಲ್ಡ್^ನಲ್ಲಿರುವ ವೃಂದಾವನ ಆಶ್ರಮಕ್ಕೆ.
  ಅಲ್ಲಿನ ನಿಯಮದಂತೆ, ಸಂದರ್ಶನದ ವೇಳೆ ಮುಗಿದ ನಂತರ ಯಾರನ್ನೂ ಬಾಬಾ ಅವರು ಭೇಟಿ ಮಾಡುವುದಿಲ್ಲ.
  ಬಂದಿರುವವರು ದೇಶದ ರಾಷ್ಟ್ರಾಧ್ಯಕ್ಷರೇ ಆಗಿರಬಹುದು, ಪ್ರಧಾನಿಗಳೇ ಆಗಿರಬಹುದು. ಅವರು ಮುಂದಿನ ಸಂದರ್ಶನಕ್ಕೇ ಬರಬೇಕಾಗುತ್ತದೆ. ಈ ರೀತಿಯ ಕಟ್ಟುನಿಟ್ಟಿನ ನಿಯಮ ಅಲ್ಲಿದೆ.
  ಹೀಗಾಗಿ, ನರಸಿಂಹಯ್ಯನವರಿಗೆ ಮರುದಿನ ಬರುವಂತೆ ತಿಳಿಸಲಾಯಿತು.
  ನರಸಿಂಹಯ್ಯನವರು ಮತ್ತೆ ಹೋಗಲೇ ಇಲ್ಲ. ಬದಲಿಗೆ, “ಸಾಯಿಬಾಬಾ ನನ್ನನ್ನು ಭೇಟಿಯಾಗಲು ಹೆದರಿದರು. ಅವರು ಭೇಟಿಯಾಗಿದ್ದರೆ ನಾನು ಅವರ ಹತ್ತಿರ ಕುಂಬಳಕಾಯಿ ಸೃಷ್ಟಿಸುವಂತೆ ಕೇಳುತ್ತಿದ್ದೆ. ಇದನ್ನರಿತ ಅವರು ಹೆದರಿಬಿಟ್ಟರು” ಎಂದು ಹೇಳಿಕೆ ನೀಡಿಬಿಟ್ಟರು.
  ೨. ನರಸಿಂಹಯ್ಯನವರು ಸಮಾನ ಮನಸ್ಕ ಗುಂಪಿನೊಡನೆ ಅಲ್ಲಿಗೆ ಹೋಗಿದ್ದರು.
  ಅವರ ಗುಂಪಿನಲ್ಲಿ NMKRV ಕಾಲೇಜಿನ ಪ್ರಾಂಶುಪಾಲರೂ ಇದ್ದರು.
  ಅವರು ಮತ್ತೊಮ್ಮೆ ಬಾಬಾ ಅವರನ್ನು ಭೇಟಿಯಾಗಲು ಹೋಗಿದ್ದರು.
  ಮುಂದೆ ಅವರು ಬಾಬಾ ಅವರ ಭಕ್ತರಾದರು.

  ಉತ್ತರ
 8. M.A.Sriranga
  ನವೆಂ 30 2013

  ವಿಜಯ್ ಪೈ ಅವರಿಗೆ– ತಾವು ಹೇಳಿರುವ ೧,೨,೩ ಮತ್ತು ೪ ಅಂಶಗಳ ಬಗ್ಗೆ ನನಗೆ ಮತ್ತೊಮ್ಮೆ ಹೇಳಬಹುದಾದಂತಹ ಭಿನ್ನಾಭಿಪ್ರಾಯವೇನೂ ಇಲ್ಲ. ಸುದ್ದಿ ಮಾಡುವುದೇ ಪತ್ರಿಕೆಗಳ ಕೆಲಸವಾದ್ದರಿಂದ ಸಹಜವಾಗಿ ಇಸ್ರೊದಂತಹ ಸಂಸ್ಠೆಯ ಅಧ್ಯಕ್ಷರ ತಿರುಪತಿಯ ಭೇಟಿ ಪ್ರಾಮುಖ್ಯತೆ ಪಡೆಯಿತು. ತಾವು ಬೆಂಕಿಯ ಉದಾಹರಣೆ ಕೊಟ್ಟಿದ್ದೀರಿ. ಅದನ್ನು ನಾನು ಸಾಹಿತ್ಯಿಕವಾಗಿ ಒಂದು ಉತ್ತಮ ರೂಪಕ ಎಂದು ಮೆಚ್ಚುತ್ತೇನೆ. ಆದರೆ ಕೆಲವೊಮ್ಮೆ ವಿವೇಚನೆ ಬಾಹ್ಯಕಾರಣಗಳಿಂದಲೂ ಪ್ರಭಾವಿತವಾಗುತ್ತವೆ.ಇದು ತಮಗೆ ತಿಳಿದಿದೆ. ಡಿಎಂಕೆಯ ಕರುಣಾನಿಧಿ,ಮಾಜಿ ರಾಷ್ತ್ರಪತಿ ಮತ್ತು ವಿಜ್ಣ್ಯಾನಿ ಅಬ್ದುಲ್ ಕಲಾಮ್ ಅವರು ಸಾಯಿಬಾಬ ಅವರ ಜತೆ ಇರುವ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದನ್ನು ನೋಡಿದಾಗ ತಾವು ಹೇಳಿದ ನಾಲ್ಕೂ ಅಂಶಗಳೂ ಮಸುಕಾಗ ಬಹುದಲ್ಲವೆ? ಈ ಕಾರಣದಿಂದ ನಾನು ವ್ಯಾಪಾರಿಕರಣ ಎಂದು ಹೇಳಿದ್ದು.

  ಉತ್ತರ
 9. M.A.Sriranga
  ನವೆಂ 30 2013

  ಕುಮಾರ್ ಅವರಿಗೆ– ಸಾಯಿಬಾಬ ಅವರು ನಿಧನರಾದ ಮಾರನೇ ದಿನದ ಕನ್ನದ ಪ್ರಭ ಪತ್ರಿಕೆಯಲ್ಲಿ(25-4-11) ತಾವು ಹೇಳಿದ ವಿಷಯವಿಲ್ಲ. ಇತರರು ನಾನಾ ಕಡೆ ಮಾಡುತ್ತಿದ್ದ ಪವಾಡಗಳನ್ನು ಬಯಲಿಗೆಳಿದಿದ್ದರ ಬಗ್ಗೆ ರಾಷ್ಟ್ರೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಡಾ. ನರೇಂದ್ರನಾಯಕ್ ಅವರು ಬರೆದಿದ್ದಾರೆ. ಎಚ್ಚೆನ್ ಅವರು ಭೇಟಿಯ ಸಮಯ ಮೀರಿ ಹೋಗಿದ್ದರ ಬಗ್ಗೆ ಅದರಲ್ಲಿ ಪ್ರಸ್ತಾಪವಿಲ್ಲ. ಎಚ್ಚೆನ್ ಅವರು ಬರೆದ ಪತ್ರಗಳಿಗೆ ಬಾಬಾ ಅವರು ಉತ್ತರಿಸಲಿಲ್ಲ. ಅದಕ್ಕೆ ಬದಲಾಗಿ “ಇದು ಆಧ್ಯಾತ್ಮಿಕ ಹಾದಿಗೆ ಮಾತ್ರ ತಿಳಿಯುತ್ತದೆ;ವಿಜ್ಞಾನದ ಹಾದಿಗಲ್ಲ” ಎಂದು ಹೇಳಿಕೆಕೊಟ್ಟರು. ಖ್ಯಾತ ಜಾದೂಗಾರ ಪಿ ಸಿ ಸರ್ಕಾರ್(ಜ್ಯೂ) ಅವರು ಬಾಬ ಅವರು ಮಾಡುವ ಪವಾಡಗಳನ್ನು ಅವರಿಗಿಂತ ವೇಗವಾಗಿ ಬಾಬರ ಎದುರೇ ಮಾಡಿ ತೋರಿಸಿದಾಗ ಸರ್ಕಾರ್ ಅವರನ್ನು ಆಶ್ರಮದಿಂದಲೇ ಓಡಿಸಲಾಯಿತೆಂಬ ಮಾಹಿತಿಯಿದೆ. ಬೇರೆ ಪತ್ರಿಕೆಗಳಲ್ಲಿ ನೀವು ಹೇಳಿರುವ ಸಂಗತಿ ಇರಬಹುದು. ಅದನ್ನು ನಾನು ನಿರಾಕರಿಸುವುದಿಲ್ಲ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments