ಯಾವುದು ನಂಬಿಕೆ?ಯಾವುದು ಮೂಢನಂಬಿಕೆ?
-ಡಾ.ಕಿರಣ್ ಎಂ ಗಾಜನೂರು
ಕರ್ನಾಟಕ ಸರ್ಕಾರ ಮೂಢನಂಬಿಕೆಗಳ ಕುರಿತು ವಿಧೇಯಕ ಮಂಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಕ್ರಮ. ಏಕೆಂದರೆ ಭಾರತ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಸೋ-ಕಾಲ್ಡ್ ನಂಬಿಕೆಗಳ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.ಅದರಲ್ಲಿಯೂ ಯಾವುದೇ ಜನ-ಚಳುವಳಿಯಿಲ್ಲದೆ,ನಮ್ಮ ಘನಸರ್ಕಾರ ಸ್ವತಃ ಈ ನಿರ್ಧಾರಕ್ಕೆ ಮುಂದಾಗಿರುವುದು ಪ್ರಶಂಸನೀಯ.ಪಕ್ಕದ ಮಹಾರಾಷ್ಟ್ರದಲ್ಲಿ ಈ ಮಾದರಿಯ ಕ್ರಮವನ್ನು ಅಲ್ಲಿನ ಸರ್ಕಾರ ತೆಗೆದುಕೊಳ್ಳಬೇಕಾದರೆ,ಒಂದು ದೊಡ್ಡ ಜನಚಳುವಳಿಯೆ ನಡೆಯಬೇಕಾಯಿತು ಮತ್ತು ಈ ಕುರಿತು ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಹತ್ಯೆಯು ಆಯಿತು.ಈ ನೆಲೆಯಲ್ಲಿ ಕರ್ನಾಟಕ ಸರ್ಕಾರ ಜನಪರವಾಗಿದೆ ಎಂಬುದನ್ನು ನಾವು ಒಪ್ಪಬಹುದು.ಆದರೆ, ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಈ ಕ್ರಮ ಕೇವಲ ಪ್ರಗತಿಪರ ಮತ್ತು ಕಾನೂನಾತ್ಮಕ ಅಂಶವಾಗಿರದೆ ಸಮುದಾಯ ಸತ್ವದ ಪ್ರಶ್ನೆಯು ಆಗಿರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.ಅದೂ ಅಲ್ಲದೆ ಸದರಿ ವಿಧೇಯಕದ ಕುರಿತು ನಡೆಯುತ್ತಿರುವ ಚರ್ಚೆ ಪರ-ವಿರೋಧವೆಂಬ ಸಂಕುಚಿತ ಅರ್ಥದಲ್ಲಿ ನಡೆಯುತ್ತಿದೆ.ಒಂದು ಸಂಶೋಧನೆ ಅಥವಾ ಚರ್ಚೆಯಲ್ಲಿ ಸಂಶೋಧನೆ/ಚರ್ಚೆಗೆ ಒಳಪಡಿಸಬೇಕಾದ ವಿದ್ಯಾಮಾನದ ಕುರಿತು ಸಂಶೋಧಕನಿಗೆ ಪರ ಅಥವಾ ವಿರೋಧ ಅಭಿಪ್ರಾಯಗಳು ಇರಬೇಕು ಎಂದು ನೀರಿಕ್ಷಿಸುವುದೇ ಸಂಶೋಧನೆ/ಚರ್ಚೆಯ ಲಕ್ಷಣವಲ್ಲ. ಉದಾಹರಣೆಗೆ : ಕರ್ನಾಟಕದ ಮೂಢನಂಬಿಕೆ ವಿರೋಧಿ ವಿಧೇಯಕ ಕುರಿತು ನೀವು ಇದರ ಪರವೂ ವಿರೋಧವೂ ಎಂದು ಕೇಳಿದರೆ ನಾನು ನನಗೆ ಗೊತ್ತಿಲ್ಲ ಎಂದಷ್ಟೆ ಉತ್ತರಿಸಬಲ್ಲೆ. ಏಕೆಂದರೆ ನಿಜಕ್ಕೂ ನನಗೆ ಅದು ಸರಿಯೋ/ತಪ್ಪೋ ಗೊತ್ತಿಲ್ಲ ಅಥವಾ ಪ್ರಸ್ತುತ ಚರ್ಚೆ ಮತ್ತು ಮಾಹಿತಿಯ ಆಧಾರದಲ್ಲಿ ಒಂದು ನಿರ್ಣಯಕ್ಕೆ ಬರಲೂ ಸಾಧ್ಯವಾಗುತ್ತಿಲ್ಲ. ಆದರೆ,ಒಬ್ಬ ಸಮಾಜ ಸಂಶೋಧಕನಾಗಿ ನನ್ನ ಸಮಸ್ಯೆ ಇರುವುದು ಪರವಾಗಿ ಮತ್ತು ವಿರೋಧವಾಗಿ ಮಾತನಾಡುತ್ತಿರುವ ಎರಡೂ ಗುಂಪಿನ ವಾದ ಆ ವಿದ್ಯಮಾನವನ್ನು ಸಮರ್ಥಿಸಲು ಅಥವಾ ವಿರೋಧಿಸಲು ಶಕ್ತವಾಗಿಲ್ಲ ಮತ್ತು ಆದನ್ನು ಆಚರಿಸುತ್ತಿರುವ ಜನರಿಗೆ ಅರ್ಥವಾಗುತ್ತಿಲ್ಲ ಎಂಬುದು.
ಇದಕ್ಕೆ ಕಾರಣವೇನು? ಏಕೆ ಜನಕ್ಕೆ ಈ ವಾದಗಳು ಅರ್ಥವಾಗುತ್ತಿಲ್ಲ? ಎಂದೂ ಯೋಚಿಸಿದಾಗ ಮತ್ತು ಇತ್ತಿಚೀನ ಕೆಲವು ಸಂಶೋಧನಾ ಬರಹಗಳನ್ನು ಒದಿದಾಗ ನನಗೆ ತಿಳಿದ ಅಂಶ,ನಮ್ಮ ಬೌದ್ದಿಕ ವಲಯ ಸಮಸ್ಯೆಯನ್ನು ಗುರುತಿಸುವಲ್ಲಿಯೆ ಎಡವುತ್ತಿದೆ ಎಂಬುದು.ನಮ್ಮ ಸಮಾಜದ ಆಚರಣೆಗಳಲ್ಲಿ ಇಷ್ಟುನ್ನು ನಂಬಬಹುದು ಇಷ್ಟನ್ನು ನಂಬಲಾಗದು ಎಂದು ಏಕಘನಾಕೃತಿಯಲ್ಲಿ ಪಟ್ಟಿಮಾಡಲು ಸಾಧ್ಯವಿಲ್ಲ.ಏಕೆಂದರೆ,ನಮ್ಮ ದಿನನಿತ್ಯ ಅನುಭವಕ್ಕೆ ಬರುವಂತೆ ಇಲ್ಲಿನ ಜನರ ಸೋ-ಕಾಲ್ಡ್ ನಂಬಿಕೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತವೆ.ಇಂದು ಒಳ್ಳೆಯದಾಗುತ್ತದೆ ಎಂದು ಒಂದು ದೇವರನ್ನು ಪೂಜಿಸುವ ನಾವು,ನಾಳೆ ಇನ್ನೂಂದು ದೇವರನ್ನು ಪೂಜಿಸುತ್ತಿರುತ್ತೇವೆ.ನಾಡಿದ್ದು ಯಾವುದೋ ಮರವನ್ನೋ,ನಾಗರ ಕಟ್ಟೆಯನ್ನೋ ಸುತ್ತುತ್ತಿರುತ್ತೇವೆ.ಮುಂದುವರಿದು,ಮಸೀದಿಗೆ ಸಕ್ಕರೆ ಹೊದಿಸಿ ತಾಯತ ಕಟ್ಟಿಸಿಕೊಳ್ಳುತ್ತಿರುತ್ತೇವೆ.
ಇದರಲ್ಲಿ ಯಾವುದು ನಂಬಿಕೆ?ಯಾವುದು ಮೂಢನಂಬಿಕೆ? ಎಂದು ಕೇಳಿದರೆ ಜನಕ್ಕೆ ನಮ್ಮ ಪ್ರಶ್ನೆಯೆ ಅರ್ಥವಾಗುವುದಿಲ್ಲ.ಏಕೆಂದರೆ ಅವರ ಅನುಭವಾತ್ಮಕ ಬದುಕಿನಲ್ಲಿ ನಂಬಿಕೆ,ಮೂಢನಂಬಿಕೆ ಎಂಬ ಪರಿಕಲ್ಪನೆಗಳಿಗೆ ಅರ್ಥವೆ ಇರುವುದಿಲ್ಲ.ಅವರು ಎಲ್ಲವನ್ನೂ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಮಾಡುತ್ತಿರುತ್ತಾರೆ (ಇದರ ಅರ್ಥ ಅವರು ಮಾಡುವುದೆಲ್ಲಾ ಸರಿ ಎನ್ನುವುದಲ್ಲ).ಇದರ ಅರ್ಥ ಭಾರತದಂತಹ ಬಹುಸಂಸ್ಕೃತಿಯುಳ್ಳ ದೇಶದ ಜನರ ಆಚರಣೆಗಳನ್ನು ನಂಬಿಕೆ ಮತ್ತು ಮೂಢನಂಬಿಕೆ ಎಂದು ನಾವು ಗುರುತಿಸಲು ಸಾಧ್ಯವಿಲ್ಲ.ಏಕೆಂದರೆ,ಹಾಗೆ ಗುರುತಿಸುವಂತಹ ಸಾಂಸ್ಕೃತಿಕ ಹಿನ್ನಲೆ ಭಾರತ ಸಮಾಜಕ್ಕೆ ಮತ್ತು ಇಲ್ಲಿನ ಜನಸಮುದಾಯಕ್ಕೆ ಇಲ್ಲ.ಆಚರಣೆಯೇ ಪ್ರಧಾನವಾಗಿರುವ ಸಂಸ್ಕೃತಿಯ ಹಿನ್ನಲೆಯಿಂದ ಬಂದಿರುವ ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಲು ಮತ್ತು ಸಮಸ್ಯೆಗಳನ್ನು ನಿವಾರಿಸಲು ನಾವು, ಆಚರಣೆಗಳು ಮತ್ತು ಅವು ಒಂದು ತಲೆಮಾರಿನಿಂದ ಮತ್ತೂಂದು ತಲೆಮಾರಿಗೆ ಬೆಳೆದು ಬಂದ ರೀತಿಯನ್ನು ಅಭ್ಯಾಸಿಸಬೇಕು.
ಆ ನಂತರ ಅದರ ಕುರಿತ ವಿಮರ್ಶೆಗಳನ್ನು ಬೆಳೆಸಬೇಕು.ವಿಮರ್ಶೆ/ಚರ್ಚೆಯ ನಂತರ ಅದನ್ನು ಕಾನೂನು ರೂಪದಲ್ಲಿ ಜಾರಿಗೆ ತರುವ ಕುರಿತು ಅಲೋಚಿಸಬೇಕು.ನನಗೆ ತಿಳಿದಂತೆ ಪ್ರಸ್ತುತ ವಿಧೇಯಕವನ್ನು ಸಿದ್ಧಪಡಿಸಿರುವ ವಿದ್ವಾಂಸರ ಗುಂಪು ಈ ಎಲ್ಲಾ ಹಂತಗಳನ್ನು ನಿರ್ವಹಿಸಿದೆ ಎಂದು ಅನ್ನಿಸುತ್ತಿಲ್ಲ.ಅಲ್ಲದೆ ಆಚರಣೆಗಳನ್ನು ನಂಬಿಕೆಗೆ ವಿರುದ್ಧವಾದ ಮೂಢನಂಬಿಕೆ ಎಂದೂ ಗುರುತಿಸಲು ಈ ವಿಧೇಯಕ ರಚಿಸಿರುವ ವಿದ್ವಾಂಸರು ಮಾಡಿರುವ ಸಂಶೋಧನೆ,ಬಳಸಿದ ಆಕರ,ಮಾಹಿತಿ ಮತ್ತು ಸಂಗ್ರಹಿಸಿದ ಜನಾಭಿಪ್ರಾಯವಾದರೂ ಯಾವುದು? ಈ ಇಡೀ ವಿಧೇಯಕ (ವೈಜ್ಞಾನಿಕ ಮತ್ತು ಸಮಾಜ ಸಂಶೋಧನೆಯ ಆಧಾರದ ಮೇಲೆ ಕೆಲವು ಜನರು ಮಾಡುವ ಮೋಸಗಳಿಗೆ ಕಡಿವಾಣ ಹಾಕುವುದಾದದರೆ ನನ್ನ ಅಭ್ಯಂತರವಿಲ್ಲ ಅದನ್ನು ನಂಬಿಕೆಗೆ ವಿರುದ್ಧವಾದ ಮೂಢನಂಬಿಕೆ ಎಂದು ಅರ್ಥಮಾಡಿಕೊಳ್ಳುವಲ್ಲಿಯೆ ಕಮಿಟಿ ಎಡವಿದೆ) ಹಲವು ವರ್ಷಗಳಿಂದ ಪ್ರಗತಿಪರತೆಯ ಹೆಸರಿನಲ್ಲಿ ಸಾಹಿತಿಗಳು ವ್ಯಕ್ತಪಡಿಸುತ್ತಾ ಬಂದಿರುವ ಅಭಿಪ್ರಾಯವನ್ನು ಆಧರಿಸಿದೆಯೇ ಹೊರತು,ಸಂಶೋಧನೆಯನ್ನಲ್ಲ.ಅದೂ ಅಲ್ಲದೆ, ಸಾಮಾಜಿಕ ಸಂಶೋಧನೆಯಿಂದ ಮತ್ತು ಮನಶಾಸ್ತ್ರೀಯ ಚಿಂತಕರಿಂದ ಅರ್ಥಮಾಡಿಕೊಳ್ಳಬಹುದಾದ ಕೆಲವು ಘಟನೆಗಳ ಕುರಿತು ಕೇವಲ ಸಾಹಿತಿಗಳು ಯಾವುದೇ ಸಂಶೋಧನೆಯ ಆಧಾರವಿಲ್ಲದೆ ಕಾನೂನು ರೂಪಿಸುವುದೇ ನಗೆಪಾಟಲಿನ ಕೆಲಸ. ಅದೂ ಅಲ್ಲದೆ, ಭಾರತದ ಸಂದರ್ಭದಲ್ಲಿ ನಂಬಿಕೆ ಎಂದರೆ ಏನು ಎಂಬ ಕುರಿತು ವೈಜ್ನಾನಿಕ ವಿವರಣೆಗಳು ಇಂದಿಗೂ ಬೌದ್ಧಿಕ ವಲಯದಲ್ಲಿ ಇಲ್ಲ.ಆದರೂ,ನಂಬಿಕೆಗಳ ವಿರುದ್ಧವಾದ ಮೂಢನಂಬಿಕೆಗಳ ಕುರಿತು ನಾವು ಕಾನೂನು ಮಾಡಲು ಹೋರಟಿದ್ದೇವೆ.
ಮೊದಲು ನಮ್ಮ ಸಮಾಜ ಮತ್ತು ಸಂಸ್ಕೃತಿಯಲ್ಲಿ ಜನರು ನಾವು ನಂಬಿಕೆ ಎಂದೂ ಗುರುತಿಸುವ ವಿದ್ಯಮಾನವನ್ನು ಹೇಗೆ ನೋಡುತ್ತಾರೆ ಎಂಬುದನ್ನು ಸಂಶೋಧಿಸಬೇಕಿದೆ. ಆದರೆ,ನಾವು ಹಾಗೆ ಮಾಡುತ್ತಿಲ್ಲ ಬದಲಾಗಿ ಪ್ರಗತಿಪರತೆಯ ಹೆಸರಿನಲ್ಲಿ ಯುರೋಪ್ ಸಿದ್ಧಾಂತಗಳ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಜನರ ವರ್ತನೆಗಳನ್ನು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಿವಾರಿಸಲು ಪ್ರಯತ್ನಿಸುತ್ತಿದ್ದೆವೆ.ಆದರೆ,ಜನಕ್ಕೆ ನಮ್ಮ ವಾದಗಳು ಇರಲಿ ಕಡೆ ಪಕ್ಷ ನಮ್ಮ ಪ್ರಯತ್ನವೆ ಅರ್ಥವಾಗುತ್ತಿಲ್ಲ.ಇದಕ್ಕೆ ಮುಖ್ಯಕಾರಣ ನಮ್ಮ ಸಮಾಜದ ಅನುಭವಜನ್ಯ ಸಿದ್ಧಾಂತಗಳ ಕೊರತೆ.ಇನ್ನು ನಕಲಿ ಬಾಬಾಗಳು, ಮುಲ್ಲಾಗಳು, ಡೋಂಗಿ ದೇವಮಾನವರು, ಪಾದ್ರಿಗಳು ಇವರ ಕ್ರಿಯೆಯನ್ನು ಮೋಸ ಎಂದು ಅವೈಜ್ನಾನಿಕ ಎಂದು ಕರೆಯಲಿ.ಅದನ್ನು ವಿರೋಧಿಸಲು ಕಾನೂನು ಕ್ರಮ ಕೈಗೊಳ್ಳಲಿ .ಅದನ್ನು ಬಿಟ್ಟು ಇವರೆಲ್ಲಾ ಮಾಡುವುದು ನಾವು ನಂಬಿರುವ ನಂಬಿಕೆಗೆ ವಿರುಧ್ದವಾಗಿರುವ ಮೂಢನಂಬಿಕೆಗಳು ಎಂದು ಯಾವ ಆಧಾರದ ಮೇಲೆ ಕಮಿಟಿ ತಿರ್ಮಾನಕ್ಕೆ ಬಂದಿದೆ? ಅದಕ್ಕೂ, ಮುಖ್ಯವಾಗಿ ನಮ್ಮ ಸಮಾಜದಲ್ಲಿ ನಂಬಿಕೆ ಎನ್ನುವುದನ್ನು ನಮ್ಮ ಜನ ಹೇಗೆ ಗುರುತಿಸುತ್ತಾರೆ ಎನ್ನುವುದನ್ನು ಕಮಿಟಿ ಯಾವ ಸಂಶೋಧನಾ ಆಧಾರದ ಮೇಲೆ ಗುರುತಿಸಿದೆ ಎನ್ನವುದನ್ನು ನಾವು ಚರ್ಚಿಸಬೇಕಿದೆ.
ಮೂಡನಂಬಿಕೆ ಎಂದರೆ, ಪರ ಹಾಗೂ ವಿರೋದಗಳ ಸಂಗರ್ಶದಿಂದ ಹುಟ್ಟುವ ವಿಕೋಪದ ಹಿಂದಿನ ನಂಬಿಕೆಯನ್ನು ಮಾತ್ರ ಮೂಡನಂಬಿಕೆ ಎನ್ನಬಹುದು.
ಆದರೆ, ನಂಬಿಕೆಯನ್ನು ವ್ಯಾಕ್ಯಾನಿಸುವುದು ಕಶ್ಟದ ಕೆಲಸ. ಏಕೆಂದರೆ, ಸಮಾಜ/ಗುಂಪು/ವ್ಯಕ್ತಿಗಳಿಗೆ ಬೇರೆಬೇರೆಯಾಗಿದ್ದು ತಮ್ಮದೇ ಆಲೋಚನೆಗಳನ್ನು ಒತ್ತಾಯಿಸುವ/ಆಚರಿಸುವ/ಪ್ರಬಲವನ್ನು ಸಾದಿಸುವ ಮನೋಬಾವ ನಂಬಿಕೆಯಲ್ಲಿ ಅಡಗಿರುತ್ತದೆ.
“ಇಲ್ಲಿನ ಜನರ ಸೋ-ಕಾಲ್ಡ್ ನಂಬಿಕೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತವೆ.ಇಂದು ಒಳ್ಳೆಯದಾಗುತ್ತದೆ ಎಂದು ಒಂದು ದೇವರನ್ನು ಪೂಜಿಸುವ ನಾವು,ನಾಳೆ ಇನ್ನೂಂದು ದೇವರನ್ನು ಪೂಜಿಸುತ್ತಿರುತ್ತೇವೆ.ನಾಡಿದ್ದು ಯಾವುದೋ ಮರವನ್ನೋ,ನಾಗರ ಕಟ್ಟೆಯನ್ನೋ ಸುತ್ತುತ್ತಿರುತ್ತೇವೆ.ಮುಂದುವರಿದು,ಮಸೀದಿಗೆ ಸಕ್ಕರೆ ಹೊದಿಸಿ ತಾಯತ ಕಟ್ಟಿಸಿಕೊಳ್ಳುತ್ತಿರುತ್ತೇವೆ”
what does this mean then? Such beliefs are irrational.
ತರುಣ್ ತೇಜ್‌ಪಾಲ್ ಒಳ್ಳೆಯನಿರಬಹುದು ಎಂದು ಎನ್ನುವುದು ನಂಬಿಕೆ. ಅವನು ಖಚಿತವಾಗಿಯೂ ಒಳ್ಳೆಯವ, ಅವನಿಂದ ಹಾನಿಯಾಗುವುದಿಲ್ಲ ಎನ್ನುವುದು ಮೂಢನಂಬಿಕೆ.
ಕಿರಣ್,
ನಿಮ್ಮ ಲೇಖನವು, ‘ನಂಬಿಕೆ/ಮೂಢನಂಬಿಕೆ’ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಮೂಲಭೂತ ಸಂಗತಿಯನ್ನು ತೆರೆದಿಟ್ಟಿದೆ.
ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನದೊಂದು ಪ್ರಶ್ನೆಯಿದೆ.
ನಮ್ಮ ಸಂವಿಧಾನದ ಪ್ರಕಾರ, ನಾವೊಂದು ‘ಜಾತ್ಯಾತೀತ’ ಗಣರಾಜ್ಯ. ಜಾತ್ಯಾತೀತ ಎಂಬ ಶಬ್ದದ ಮೂಲ ಆಶಯ, ರಾಜ್ಯಕರ್ತರು ಸಮಾಜದ ಜನರ ಮತಾಚರಣೆಗಳ ವಿಷಯದಲ್ಲಿ ಆಸಕ್ತಿ ವಹಿಸುವುದಿಲ್ಲ ಎಂಬುದಾಗಿದೆ.
ಮತ್ತು ಇಂದು ನಮ್ಮ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವಂತೂ ‘ಜಾತ್ಯಾತೀತ’ಕ್ಕೆ ಸಂಪೂರ್ಣ ಬದ್ಧವೆಂದು ಸದಾ ಹೇಳಿಕೊಳ್ಳುತ್ತದೆ.
ಹೀಗಿರುವಾಗ, ಸರಕಾರವು ಜನರ ನಂಬಿಕೆ/ಆಚರಣೆಗಳ ವಿಷಯದಲ್ಲಿ ಮೂಗು ತೂರಿಸಿದರೆ, ‘ಜಾತ್ಯಾತೀತ’ ಆಶಯಕ್ಕೆ ಪೆಟ್ಟು ಬಿದ್ದಂತೆ ಅಲ್ಲವೇ? ಈ ರೀತಿಯ ಪ್ರಯತ್ನಗಳು ‘ಜಾತ್ಯಾತೀತ ವಿರೋಧಿ’ ಎನಿಸಿಕೊಳ್ಳುವುದಿಲ್ಲವೇ?
> ಇನ್ನು ನಕಲಿ ಬಾಬಾಗಳು, ಮುಲ್ಲಾಗಳು, ಡೋಂಗಿ ದೇವಮಾನವರು, ಪಾದ್ರಿಗಳು ಇವರ ಕ್ರಿಯೆಯನ್ನು ಮೋಸ….
ನೀವು ಏಕೆ ‘ನಕಲಿ/ಡೋಂಗಿ’ ಪದವನ್ನು ಮುಲ್ಲಾ ಮತ್ತು ಪಾದ್ರಿಗಳಿಗೆ ಸೇರಿಸಿಲ್ಲ?
“ಬಾಬಾಗಳು ಮತ್ತು ದೇವಮಾನವರಲ್ಲಿ ಕೆಲವರು ಮಾತ್ರ ನಕಲಿಗಳು/ಡೋಂಗಿಗಳು ಮತ್ತು ಇಂತಹವರು ಮೋಸ ಮಾಡುತ್ತಾರೆ; ಆದರೆ, ಮುಲ್ಲಾಗಳೂ ಮತ್ತು ಪಾದ್ರಿಗಳಲ್ಲಿ ನಕಲಿ/ಡೋಂಗಿಗಳು ಇಲ್ಲ – ಎಲ್ಲಾ ಮುಲ್ಲಾ/ಪಾದ್ರಿಗಳೂ ಮೋಸ ಮಾಡುವವರೇ” ಎಂದು ಅರ್ಥವಾಗಿಬಿಡುವುದಿಲ್ಲವೇ!?
ಜನರು ತಮ್ಮ ನಂಬಿಕೆ ಪ್ರಕಾರ ’ಒಂದು ಜೀವವನ್ನ ಬಲಿಕೊಟ್ಟು ದೇವರನ್ನ ತ್ರುಪ್ತಿ ಪಡಿಸುವುದು’ ಎಂದಾಗ ಒಂದು ಜಾತ್ಯಾತೀತ ರ್ಸಕಾರ ಆ ನಂಬಿಕೆ ಸುಳ್ಳು ಹಾಗೆ ಮಾಡುವುದು ಅಪರಾಧ ಎಂದು ಹೇಳಲು ಮೂಗು ತೂರಿಸುವುದು ಸರಿ.
Nagshetty Shetkar ನನ್ನ ಪ್ರಶ್ನೆಯು ಅದೆ ಈ ಮೇಲೆ ತಿಳಿಸಿದ ನಮ್ಮ ದಿನನಿತ್ಯದ ಕ್ರೀಯೆಗಳನ್ನು ನಂಬಿಕೆಗೆ ವಿರುದ್ಧವಾದ ಮೂಢನಂಬಿಕೆ ಎಂದು ಹೇಗೆ ಅರ್ಥಮಾಡಿಕೊಳ್ಳಲಾಗಿದೆ ಮತ್ತು ಹೇಗೆ ನಮ್ಮ ಆಚರಣೆಗಳನ್ನು ನಂಬಿಕೆ ಮತ್ತು ಮೂಢನಂಬಿಕೆ ಎಂಬುದಾಗಿ ವಿಂಗಡಿಸಲಾಗಿದೆ ಅದಕ್ಕೆ ಇರುವ ದಾಖಲೆ ಪುರಾವೆ ವಿವರಣೆಗಳಾವುವು ಅದು ಅಲ್ಲದೆ ಸದರಿ ಕಾಯ್ದೆಯ ಕರಡನ್ನು ಮೂಢನಂಬಿಕೆ ನಿಷೇಧ ಕಾಯ್ದೆ ಎಂದು ಅದನ್ನು ಕರೆಯಲಾಗಿದೆ ಸೂ ಮೇಲಿನ ನಮ್ಮ ಆಚರಣೆಗಳು ಮೂಢನಂಬಿಕೆಯಾದರೆ ಇದೇ ಆಚರಣೆಯ ನಂಬಿಕೆಯ ಭಾಗ ಯಾವುದು ಎನ್ನುವುದನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು ನನಗೆ ತಿಳಿದಂತೆ ಮೂಢನಂಬಿಕೆ ಎಂದರೆ ನಂಬಿಕೆಗೆ ವಿರುದ್ದವಾಗಿ ಅಥವಾ ನಂಬಿಕೆಯನ್ನು ತಪ್ಪಾಗಿ ಆಚರಿಸುವುದು ಸೂ ಮೇಲಿನ ಮೂಢನಂಬಿಕೆಯ (ಬೇರೆ ದೇವರ ಪೂಜೆ, ಮರ, ಮಸಿದಿ ಇತ್ಯದಿಗಳ ಅರಾಧನೆ) ಸರಿಯಾದ ನಂಬಿಕೆ ಯಾವುದು ಸಾರ್. . . . ಇದು ಅರ್ಥವಾಗುತ್ತಿಲ್ಲಾ ಮತ್ತು ಕರಡು ರೂಪಿಸಿದವರು ಆಚರಣೆಗಳ ಕುರಿತ ಸರಿಯಾದ ಅಧ್ಯಯನವನ್ನು ಮಾಡದೆ ರೂಪಿಸಿದ್ದಾರೆ ಇದನ್ನು ಕರಡಿಗೆ ಬಳಸಿದ ಆಧಾರ ಗ್ರಂಥಗಳನ್ನು ನೊಡಿದರೆ ಅರ್ಥವಾಗಿಬಿಡುತ್ತದೆ
Kumar ಮೊದಲು ಸಮಾಜದಲ್ಲಿ ನಂಬಿಕೆಗಳ ಹೆಸರಿನಲ್ಲಿ ಅಮಾಯಕರನ್ನು ಮೊಸಗೊಳಿಸಲಾಗುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ ಮತ್ತು ಅದಕ್ಕೆ ಸಾಕಷ್ಟು ಘಟನೆಗಳು ನಮ್ಮ ಎದುರಿಗೆ ಇವೆ ಆದರೆ ಇವನ್ನು ನಂಬಿಕೆ ಮೂಢನಂಬಿಕೆ ಎಂಬ ವಿದ್ಯಾಮಾನವಾಗಿ ಅರ್ಥಮಾಡಿಕೊಳ್ಳಲು ಮತ್ತು ಆ ಕುರಿತ ಕಾನೂನು ರಚಿಸಿ ಅದನ್ನು ಸರಿಪಡಿಸಲು ಸಾಧ್ಯವಾ ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ ಮತ್ತು ಇದೊಂದು ತಾತ್ವಿಕ ಪ್ರಶ್ನೆಯಾಗಿ ನಮ್ಮ ಮುಂದಿದೆ ಇನ್ನೂ ಜಾತ್ಯತೀತ ತತ್ವದ ಚೌಕಟ್ಟಿನಲ್ಲಿ ನೋಡಿದರೆ ಖಂಡಿತಾ ಇದು ದ್ವಂದ್ವ ನಿಲುವು ಎಂಬುದು ಸ್ಪಷ್ಟ ಇನ್ನೂ ನಕಲಿ/ಡೋಂಗಿ’ ಪದವನ್ನು ಮುಲ್ಲಾ ಮತ್ತು ಪಾದ್ರಿಗಳಿಗೆ ಸೇರಿಸಿ ಅರ್ಥಮಾಡಿಕೊಂಡರು ಲೇಖನದ ಉದ್ದೇಶಕ್ಕೆ ತೊಂದರೆ ಇಲ್ಲಾ
[[ ಸಮಾಜದಲ್ಲಿ ನಂಬಿಕೆಗಳ ಹೆಸರಿನಲ್ಲಿ ಅಮಾಯಕರನ್ನು ಮೊಸಗೊಳಿಸಲಾಗುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ]]
ಈ ರೀತಿಯ ಮೋಸಗಾರರಿಗೆ ಚಿನ್ನವಾದರೂ ಸರಿ, ಮತೀಯ ಆಚರಣೆಗಳಾದರೂ ಸರಿ – ಜನರನ್ನು ಮರಳು ಮಾಡಿ, ಹಣ ಹೊಡೆಯುವುದೇ ಅವರ ಗುರಿ. ಮತೀಯ ಆಚರಣೆಯನ್ನು ನಿಷೇಧಿಸಿದರೆ, ಮತ್ತಿನ್ನೇನನ್ನೋ ಬಳಸಿ ಅವರು ತಮ್ಮ ಮೋಸದ ಕಾರ್ಯವನ್ನು ಮುಂದುವರೆಸುತ್ತಾರೆ ಅಲ್ಲವೇ?
ಜನರನ್ನು ಮೋಸ ಮಾಡುವವರು ಹೊಸಹೊಸ ದಾರಿಯನ್ನು ಹುಡುಕುತ್ತಿರುತ್ತಾರೆ.
ಉದಾಹರಣೆಗೆ, ಚಿನ್ನವನ್ನು polish ಮಾಡಿ ಹೊಳಪು ತರಿಸಿಕೊಡುತ್ತೇವೆ ಎಂದು ಮನೆಗಳ ಮುಂದೆ ಬರುವ ಜನರಿರುತ್ತಾರೆ.
ಇದರಿಂದ ಅನೇಕರು ಮೋಸಹೋಗಿ ಚಿನ್ನ ಕಳೆದುಕೊಂಡ ಪ್ರಕರಣಗಳು ನಡೆದಿವೆ.
ಮೋಸಗಾರರು ‘ಚಿನ್ನ’ದ ವಿಷಯ ಇಟ್ಟುಕೊಂಡು ಮೋಸ ಮಾಡುತ್ತಾರೆ ಎಂದು ಹೇಳಿ, ಚಿನ್ನವನ್ನೇ ನಿಷೇಧಿಸಿಬಿಟ್ಟರೆ ಸರಿಯೇ?
ಇದೇ ರೀತಿ, “ಮನ್ ಜೋಗ್”, “ಕೃಷ್ಣ ಪ್ಯಾಲೇಸ್”, “ವಿನಿ ವಿಂಕ್” ಹೆಸರುಗಳಲ್ಲಿ ಜನರಿಂದ ಹಣ ಸಂಗ್ರಹಿಸಿ ‘ಮಂಗ’ ಮಾಡಿದ್ದಾರೆ.
ಹಾಗೆಂದು, ‘ಚಿಟ್ ಫಂಡ್’ ಉದ್ಯಮವನ್ನೇ ನಿಷೇಧಿಸುವುದು ಎಷ್ಟರಮಟ್ಟಿಗೆ ಸರಿ?
ರಸ್ತೆಯಲ್ಲಿ ಅಪಘಾತವಾಗುತ್ತದೆ ಎಂದು ರಸ್ತೆಯನ್ನೇ ನಿಷೇಧಿಸುವುದಿಲ್ಲ ಅಲ್ಲವೇ? ರಸ್ತೆಯನ್ನು ಉಪಯೋಗಿಸುವಾಗ ಹೆಚ್ಚೆಚ್ಚು ಎಚ್ಚರಿಕೆಯಿಂದರುವಂತೆ, ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಮಾಡುತ್ತಾರೆ ಅಲ್ಲವೇ?
ಜನರನ್ನು ಮೋಸಗಾರರ ವಿಷಯದಲ್ಲಿ ಹೆಚ್ಚು ಜಾಗರೂಕರಾಗುವಂತೆ ಮಾಡುವುದಲ್ಲವೇ ಇದಕ್ಕಿರುವ ಪರಿಹಾರ?
*** ‘ಚಿಟ್ ಫಂಡ್’ ಉದ್ಯಮವನ್ನೇ ನಿಷೇಧಿಸುವುದು ಎಷ್ಟರಮಟ್ಟಿಗೆ ಸರಿ?
ಹೌದು, ತಪ್ಪು.
ನಿಮ್ಮ anology ಪ್ರಕಾರವೇ ಹೋಗುವುದಾದರೆ, ‘ಚಿಟ್ ಫಂಡ್’ ಉದ್ಯಮವನ್ನ ನಿಷೇಧ ಮಾಡಿಲ್ಲ. ‘ಚಿಟ್ ಫಂಡ್’ ಹೆಸರಿನಲ್ಲಿ ಮೋಸ ಮಾಡೊದನ್ನ ನಿಷೇಧ ಮಾಡಲಾಗಿದೆ. ಹಾಗೆನೇ ಧರ್ಮದ ಆಚರಣೆಯನ್ನ ನಿಷಧ ಮಾಡುವುದಲ್ಲ, ಧರ್ಮದ ಹೆಸರಿನಲ್ಲಿ ಮೋಸ ಮಾಡೊದನ್ನ ನಿಷೇಧ ಮಾದುವುದು ಉದ್ದೇಶ.
[[ಧರ್ಮದ ಆಚರಣೆಯನ್ನ ನಿಷಧ ಮಾಡುವುದಲ್ಲ, ಧರ್ಮದ ಹೆಸರಿನಲ್ಲಿ ಮೋಸ ಮಾಡೊದನ್ನ ನಿಷೇಧ ಮಾದುವುದು ಉದ್ದೇಶ.]]
ಅದು ನಿಮ್ಮ ಅನಿಸಿಕೆ. ವಿಧೇಯಕದ ಹೆಸರನ್ನು ಮತ್ತೊಮ್ಮೆ ಓದಿ ನೋಡಿ. ಅದು “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ”.
ಕೇವಲ ಮೋಸ ಮಾಡುವುದನ್ನು ತಡೆಯುವುದಷ್ಟೇ ಇದರ ಉದ್ದೇಶವಲ್ಲ. “ಮೋಸ ನಡೆಯುತ್ತಿದೆ” ಎಂದು ಹೇಳಿಕೊಂಡು, ಆಚರಣೆಗಳನ್ನೇ ತಡೆಯುವುದು.
“ಸಮಾಜದಲ್ಲಿ ನಂಬಿಕೆಗಳ ಹೆಸರಿನಲ್ಲಿ ಅಮಾಯಕರನ್ನು ಮೊಸಗೊಳಿಸಲಾಗುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ ಮತ್ತು ಅದಕ್ಕೆ ಸಾಕಷ್ಟು ಘಟನೆಗಳು ನಮ್ಮ ಎದುರಿಗೆ ಇವೆ ”
this is a good point. At least one person in nilume had the honesty and guts to admit this truth.
I too have said that government’s move is flawed and counter productive. There are alternative ways of countering anti-social effects of beliefs. For example, government can make all astrologers compulsory register with authorities. It can put heavy tax on them. It can make them accountable.
Kumar ಸಾರ್ ನೀವು ಯಾವುದನ್ನು ಮತೀಯ ಆಚರಣೆಗಳು ಎಂದು ಕರೆಯುತ್ತಿದ್ದಿರೂ ಅವು ಈ ನೆಲದ ಜನರು ಬದುಕುವ ಬದುಕು ಅಷ್ಟೆ ಅವಕ್ಕೆ ಮತಿಯ ವಿವರಣೆಗಳು ಇತ್ತಿಚೆಗೆ ದೊರಕಿವೆ ಈ ಕುರಿತಾದ ಚರ್ಚೆ ಬಹಳ ನಡೆಯುತ್ತಿದೆ ಅದು ಬಿಡಿ ನೀವು ಹೇಳುವ ಪ್ರಕಾರ ಅಲೋಚಿಸಲು ಸಾಧ್ಯವಿಲ್ಲ ಎಕೆಂದರೆ ನಾವು ಅಲೋಚಿಸುತ್ತಿರುವುದು ನಂಬಿಕೆ ಮೂಢನಂಬಿಕೆ ಎಂಬ ಚೌಕಟ್ಟಿನಲ್ಲಿ ಇದನ್ನು ಚಿನ್ನದ ಪಾಲಿಶ್, “ಮನ್ ಜೋಗ್”, “ಕೃಷ್ಣ ಪ್ಯಾಲೇಸ್”, “ವಿನಿ ವಿಂಕ್” ಮೊಸಗಳ ನೆಲೆಯಲ್ಲಿ ಸಂಕುಚಿತಗೊಳಿಸಲು ಸಾಧ್ಯವಿಲ್ಲ ಬಾಷಿಕ ತರ್ಕ ಬಳಸಿ ನಾವು ವಾದವನ್ನು ಗೆಲ್ಲಬಹುದುದೆ ಹೊರತು ವಾಸ್ತವದ ವಿವರಣೆ ಕಷ್ಟಸಾಧ್ಯ ಮೇಲಾಗಿ ಸದರಿ ಕಾಯ್ದೆ (ಅದರಲ್ಲಿ ಬಹಳಷ್ಟು ತೋಡಕಿದೆ ಆ ಕುರಿತ ಚರ್ಚೆ ನಡೆಯುತ್ತಿದೆ) ಕೆಲವು ನಂಬಿಕೆಗಳ ಹೆಸರಿನಲ್ಲಿ ಅಮಾಯಕರನ್ನು ಮೊಸಗೋಳಿಸುವ ಜನರನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದಲೇ ಚರ್ಚೆಯಲ್ಲಿ ಇರುವುದು ಇದನ್ನು ನೀವು ಒಪ್ಪುತ್ತಿರಾ ಎಂದುಕೊಳ್ಳುತ್ತೇನೆ.
ಕಿರಣ್,
ನೀವೇಕೆ ಇದನ್ನು “ಬಾಷಿಕ ತರ್ಕ ಬಳಸಿ ನಾವು ವಾದವನ್ನು ಗೆಲ್ಲಬಹುದು” ಎಂದು ಹೇಳುತ್ತಿದ್ದೀರೋ ತಿಳಿಯುತ್ತಿಲ್ಲ.
ನಾನು ನೀಡಿರುವ ಉದಾಹರಣೆಗಳು ಕೇವಲ ತರ್ಕಕ್ಕಾಗಿ ಬಳಸಿದ್ದಲ್ಲ, ಅವು ವಾಸ್ತವ.
ಮೋಸಗಾರರಿಗೆ ಹಲವು ದಾರಿ. ಜನರ ನಂಬಿಕೆ/ಆಚರಣೆಗಳನ್ನು ದುರುಪಯೋಗಿಸಿಕೊಳ್ಳುವುದೂ ಅವುಗಳಲ್ಲಿ ಒಂದು, ಅಷ್ಟೇ!
[[ಕೆಲವು ನಂಬಿಕೆಗಳ ಹೆಸರಿನಲ್ಲಿ ಅಮಾಯಕರನ್ನು ಮೊಸಗೋಳಿಸುವ ಜನರನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದಲೇ]]
ವಿದೇಯಕದ ಉದ್ದೇಶ, ಮೋಸಗೊಳಿಸುವ ಜನರನ್ನು ನಿಯಂತ್ರಣಕ್ಕೆ ತರುವುದು ಎಂದೇ ಇಟ್ಟುಕೊಳ್ಳೋಣ (ಅವರ ಉದ್ದೇಶ ಶುದ್ಧಿಯ ಬಗ್ಗೆ ನನಗೆ ಗಂಭೀರ ಅನುಮಾನಗಳಿವೆ).
ಕೇವಲ ನಂಬಿಕೆ/ಆಚರಣೆಗಳನ್ನು ನಿಷೇಧಿಸುವುದರಿಂದ ಮೋಸವು ನಿಲ್ಲುವುದಿಲ್ಲ ಎನ್ನುವುದು ನಿಜವಲ್ಲವೇ?
ಅವರು ಈಗಿರುವ ನಂಬಿಕೆ/ಆಚರಣೆಗಳ ಬದಲು ಹೊಸ ನಂಬಿಕೆ/ಆಚರಣೆ ಅಥವಾ ಮತ್ಯಾವುದೋ ದಾರಿ ಹಿಡಿದೇ ಹಿಡಿಯುತ್ತಾರೆ.
ಮೋಸಗಾರರನ್ನು ಹಿಡಿಯುವ ಸರಿಯಾದ ವ್ಯವಸ್ಥೆ ಬೇಕು ಮತ್ತು ಅವರಿಗೆ ಉಗ್ರ ಶಿಕ್ಷೆಯಾಗಬೇಕು.
ಕೇವಲ ನಂಬಿಕೆ/ಆಚರಣೆಗಳನ್ನು ನಿಷೇಧಿಸುವುದೆಂದರೆ, “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ” ಎಂಬ ಗಾದೆಯಂತಾಗುತ್ತದೆ ಎನ್ನುವುದು ನನ್ನ ಅನಿಸಿಕೆ.
ಶೆಟ್ಕರ್ ಸರ್,
ಮೋಸ,ವಂಚನೆಗಳಿಗೆ ತಕ್ಕ ಶಿಕ್ಷೆ ಈಗಿರುವ ಐಪಿಸಿ ಕ್ರಿಮಿನಲ್ ಕಾಯ್ದೆಯೊಳಗೆ ಇರುವುದಾಗಿದೆ.ಆದುರಿಂದ ಈ ಮಸೂದೆಯ ಅವಶ್ಯಕತೆಯ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ
+1
ಹೊಸ ಕಾನೂನಿನ ಅಗತ್ಯವಿಲ್ಲ ಅಂತ ನಾನು ಪ್ರತಿಪಾದಿಸುತ್ತಲೇ ಬಂದಿದ್ದೇನೆ.
ನಿಮ್ಮ ನಿಲುವು ಬದಲಾಗಿರುವುದು ಸಂತೋಷದಾಯಕವಾದುದಾಗಿದೆ.
ಈ ತಾಣದಲ್ಲಿ,ಈ ಕುರಿತು ಶುರುವಾದ ಚರ್ಚೆಯ ಮೊದಲಲ್ಲಿ ನೀವು ಬೇರೆ ಏನೋ ಮಾತನಾಡುತಿದ್ದನ್ನು ಗಮನಿಸಬಹುದಾಗಿದೆ.ಆದರೆ ನೀವು ಈಗ ಒಪ್ಪಿದ್ದು ಒಳ್ಳೆಯ ಬೆಳವಣಿಗೆ ಈ ಬಗ್ಗೆ ಇತರರು ಅರಿಯಬೇಕಿದೆ
Mr. Naveen, you are wrong. What change did you see?? I’ve always said this new law will backfire and we progressive thinkers have to look for alternative ways.
Nagshetty Shetkar ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ನನಗೆ ತಿಳಿದಂತೆ ಸದರಿ ಕರಡಿನ ಕುರಿತ ಚರ್ಚೆ ಕರಡನ್ನು ರಚಿಸಿದವರು ಅದನ್ನು ರಚಿಸಲು ಅನುಸರಿಸಬೇಕಾದ ಮಾನದಂಡಗಳನ್ನು, ಮಾಹಿತಿಗಳನ್ನು, ಮುಖ್ಯವಾಗಿ ಸಂಶೋಧನೆಯನ್ನು ನಡೆಸಿಲ್ಲ ಮತ್ತು ಆಚರಣೆಗಳ ಕುರಿತ ನಮ್ಮ ಸಮಾಜದ ವಾಸ್ತವತೆಯನ್ನು ಜನರ ಬದುಕನ್ನು ಭಾವನೆಗಳನ್ನು ಪರಿಗಣಿಸಿಲ್ಲ ಎಂಬುದರ ಕುರಿತಾಗಿದೆಯೇ ಹೊರತು ಈ ಚರ್ಚೆ ಮೂಢನಂಬಿಕೆ ವಿರೋಧಿ ಕಾಯ್ದೆಯನ್ನೆ ಅದರ ಅಗತ್ಯತೆಯನ್ನೆ ನಿರಾಕರಿಸುತ್ತಿಲ್ಲಾ ಈ ಅರ್ಥದಲ್ಲಿ ಇದು ಒಂದು ಒಳ್ಳೆಯ ಚರ್ಚೆ ಇದು ನಮಗೆ ತಿಳಿದಿರಬೇಕಾದ ಅಂಶ ಇದರಲ್ಲಿ ಮುಚ್ಚಿಡುವಂತಹದ್ದು ಎನೂ ಇಲ್ಲ ಮುಖ್ಯವಾಗಿ ಸಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸುವಾಗ ನಾವು ನಮ್ಮ ರಾಜಕೀಯ ಸರಿತನಗಳ ಆಚೆಗೆ ಅಲೋಚಿಸಬೇಕಿದೆ ಇದು ತುಂಬಾ ಜನಕ್ಕೆ ಸಾಧ್ಯವಾಗುವುದಿಲ್ಲ (ಎಡ/ಬಲ ಇಬ್ಬರಿಗೂ) ಹಾಗಾಗಿ ಈ ಮಾದರಿಯ ಚರ್ಚೆ ಒಂದು ವಿಷಯದ ಕುರಿತು ಪರ/ವಿರೋಧ ಅಭಿಪ್ರಾಯ ಸೃಷ್ಟಿಸುತ್ತದೆಯೆ ಹೊರತು ಆ ವಿಷಯದ ಕುರಿತ ಜ್ಞಾನವನ್ನಲ್ಲ ಮತ್ತು ಹೀಗೆ ಪರ/ವಿರೋಧ ನೆಲೆಯಲ್ಲಿನ ಅಭಿಪ್ರಾಯಗಳು ಕಾಲಾನಂತರ ಸಮುದಾಯಗಳ ನಡುವೆ ಹಿಂಸೆಯನ್ನು ಸೃಷ್ಟಿಸಿಬಿಡುತ್ತವೆ ಇದು ಬಹಳ ಅಪಾಯಕಾರಿ ಈ ಪ್ರವೃತ್ತಿ ನಮ್ಮ ಶಿಕ್ಷಿತರಲ್ಲಿಯೆ ಹೆಚ್ಚಿರುವುದು ಇನ್ನಷ್ಟು ಅಪಾಯಕಾರಿ ಬೆಳವಣಿಗೆ ಅದ್ದರಿಂದ ನಿಲುವೆಯಲ್ಲಿನ ಚರ್ಚೆಯಾಗಲಿ ಅಥವಾ ಯಾವುದೆ ಚರ್ಚೆಯಾಗಲಿ ನಾವು ಚರ್ಚಿಸುವ ವಿಷಯ/ಸಮಸ್ಯೆಯ ನೆಲೆಯಿಂದ ಅಲೋಚಿಸಬೇಕೆ ಹೊರತು ನಮ್ಮ ರಾಜಕೀಯ ನಿಲುವುಗಳ ನೆಲೆಯಿಂದ ವಿಷಯ/ಸಮಸ್ಯೆಯನ್ನು ಅವಲೋಕಿಸಬಾರದು ಇದು ನನ್ನ ನಿಲುವು
+1
Very sensible post on this serious topic. +1s.
ಜನರಲ್ಲಿ ಅರಿವು ಮೂಡ ಬೇಕು. ಈ ದಿಕ್ಕಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಇಲ್ಲವಾದರೆ ಏನೂ ಪ್ರಯೋಜನವಿಲ್ಲ. ಲಂಚಕ್ಕೆ ಈ ಕಾನೂನು ಇನ್ನೊಂದು ಮಾರ್ಗವಾಗಬಹುದು. ಸಾಹಿತಿಗಳು ತರ-ತಮಗಳನ್ನು ಅರಿಯಲಾರರು ಎಂಬ ನಿಲುವು ಸರಿಯೆ?
ಜನರಲ್ಲಿ ಅರಿವು ಮೂಡ ಬೇಕು. ಈ ದಿಕ್ಕಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಇಲ್ಲವಾದರೆ ಏನೂ ಪ್ರಯೋಜನವಿಲ್ಲ. ಲಂಚಕ್ಕೆ ಈ ಕಾನೂನು ಇನ್ನೊಂದು ಮಾರ್ಗವಾಗಬಹುದು.