ಎಎಪಿ ಗೆಲುವಿನ ಗುಂಗಿನಲ್ಲಿ ‘ಪೊರಕೆ’ ಹಿಡಿಯಲು ಹೊರಟವರು
– ರಾಕೇಶ್ ಶೆಟ್ಟಿ
ಮಿನಿ ಲೋಕಸಭಾ ಚುನಾವಣೆ ಎಂದೇ ಪರಿಗಣಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಯಂತೆಯೇ ೪ ರಾಜ್ಯಗಳಲ್ಲಿ ಬಿಜೆಪಿ ಮತ್ತು ೧ ರಾಜ್ಯದಲ್ಲಿ ಕಾಂಗ್ರೆಸ್ಸ್ ತನ್ನ ಮುದ್ರೆಯೊತ್ತಿದೆ.ಆದರೆ,ಆಮ್ ಆದ್ಮಿ ಪಕ್ಷಕ್ಕೆ ೨೮ ಸ್ಥಾನಗಳನ್ನು ನೀಡುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದ್ದು ದೆಹಲಿಯ ಮತದಾರರು.
ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎಎಪಿ ಪಕ್ಷ ೧೦-೧೫ ಸೀಟು ಪಡೆಯಬಹುದು ಮತ್ತು ಆ ಮೂಲಕ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಹುದು ಅನ್ನುವ ಅಭಿಪ್ರಾಯಗಳೇ ಬಂದಿತ್ತು.ಆದರೆ ಮತದಾರಪ್ರಭು ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದೆಡೆಗೆ ಹೆಚ್ಚು ಉದಾರಿಯಾಗಿದ್ದಾನೆ.’ರಾಜಕಾರಣಿಗಳೆಲ್ಲ ಭ್ರಷ್ಟರು’ ಅನ್ನುತಿದ್ದ ಕೇಜ್ರಿವಾಲ್ ತಾವೇ ಒಂದು ರಾಜಕೀಯ ಪಕ್ಷ ಸ್ಥಾಪಿಸುತ್ತೇವೆ ಅಂತ ಹೊರಟು ನಿಂತು ಪ್ರಸಕ್ತ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ ಅದನ್ನು ಕಟ್ಟಿಕೊಳ್ಳುತ್ತ ಹೊರಟಾಗ ಯಾವ ರಾಜಕಾರಣಿಗಳು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸ್ ನಡುವೆ ನೇರಾನೇರ ಹಣಾಹಣಿ ನಡೆಯಲಿದೆ ಅನ್ನುವಷ್ಟು ನಿರ್ಲಕ್ಷ್ಯದಲ್ಲಿದ್ದ ಶೀಲಾ ದಿಕ್ಷೀತ್ ಕೂಡ,ಕೇಜ್ರಿವಾಲ್ ಮುಂದೆ ಸೋತು ಸುಣ್ಣವಾಗಿದ್ದಾರೆ.
ಜೆಪಿ ಚಳುವಳಿಯ ನಂತರ ದೇಶದಲ್ಲಿ ನಡೆದ ಅತಿದೊಡ್ಡ ಜನಾಂದೋಲನ ಅಣ್ಣಾ ಹಜಾರೆ ನೇತೃತ್ವದ ಜನಲೋಕಪಾಲ ಚಳುವಳಿ.ಅಂತ ಹೋರಾಟವನ್ನು ಹಳ್ಳಹಿಡಿಸಿ,ಹೋರಾಟದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಜನರ ನಂಬಿಕೆ ದ್ರೋಹ ಬಗೆದ ಕೀರ್ತಿಯೂ ಇದೇ ಕೇಜ್ರಿವಾಲ್ ಅವರಿಗೇ ಸಲ್ಲುತ್ತದೆ. ಜಂತರ್ ಮಂಥರ್ ನಲ್ಲಿ ಶುರುವಾದ ಹೋರಾಟ ತುತ್ತ ತುದಿಗೆ ಮುಟ್ಟಿದ್ದು ರಾಮ್ ಲೀಲಾ ಮೈದಾನದಲ್ಲಿ ನಡೆದ ೧೬ ದಿನಗಳ ನಿರಂತರ ಉಪವಾಸದ ಸಮಯದಲ್ಲಿ.ಆಗ ಸರ್ಕಾರ ನಿಜಕ್ಕೂ ಬೆದರಿತ್ತು.ಆದರೆ,ಆಗ ಅನಗತ್ಯ ಆತುರ ತೋರಿದ ಕೇಜ್ರಿವಾಲ್ ತಂಡ ಅಣ್ಣಾ ಅವರ ದಿಕ್ಕು ತಪ್ಪಿಸಿ ಮತ್ತೊಮ್ಮೆ ಉಪವಾಸಕ್ಕಿಳಿದು ಜನಲೋಕಪಾಲ ಹೋರಾಟದ ಶವಪೆಟ್ಟಿಗೆಗೆ ಕೊನೆಯಮೊಳೆ ಹೊಡೆಯುವಂತೆ ಮಾಡಿದ್ದನ್ನು ಮರೆಯಲಾದೀತೆ? ಅಂತ ಜನಾಂದೋಲನವನ್ನು ಮಣ್ಣುಮುಕ್ಕಿಸಿ ಹುಟ್ಟಿಕೊಂಡ ಎಎಪಿ ಪಕ್ಷ ವರ್ಷವಾಗುವಷ್ಟರಲ್ಲೇ ಇಂತ ಅದ್ಭುತ ಸಾಧನೆ ಮಾಡುವಲ್ಲಿ,ಅದರ ಹುಟ್ಟಿಗೆ ಕಾರಣವಾದ ‘ಜನಲೋಕಪಾಲ ಚಳುವಳಿ’ಯ ಕೊಡುಗೆ ಮತ್ತು ಕೇಜ್ರಿವಾಲ್ ಗೆಲುವಿನಲ್ಲಿ ‘ಅಣ್ಣಾ ಹಜಾರೆ’ ಫ್ಯಾಕ್ಟರ್ ಅನ್ನು ನಿರ್ಲಕ್ಷಿಸುವಂತಿಲ್ಲ.
ಐಐಟಿ ಖರಗಪುರದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರರಾದ ಕೇಜ್ರಿವಾಲ್ ಆರಂಭದಲ್ಲಿ ಟಾಟಾ ಸ್ಟೀಲ್ಸ್ ನಲ್ಲಿ ಕೆಲಸ ಮಾಡಿ ಆ ನಂತರ ಭಾರತೀಯ ಕಂದಾಯ ಇಲಾಖೆಯಲ್ಲೂ ಕೆಲಸ ಮಾಡಿದವರು.ಅಲ್ಲಿಂದ ರಾಜೀನಾಮೆ ಕೊಟ್ಟು ಹೊರಬಂದವರು ‘ಪರಿವರ್ತನ್’ ಹೆಸರಿನ ಎನ್.ಜಿ.ಒ ಮಾಡಿಕೊಂಡು ಭ್ರಷ್ಟಚಾರ ಪ್ರಕರಣಗಳ ವಿರುದ್ಧ ದನಿಯೆತ್ತುತ್ತ ಬಂದರು.ಇವತ್ತು ಭ್ರಷ್ಟಚಾರವನ್ನು ಬಯಲಿಗೆಳೆಯುವ ಜನಸಾಮಾನ್ಯರ ಪಾಲಿನ ಬ್ರಹ್ಮಾಸ್ತ್ರವಾದ ಆರ್.ಟಿ.ಐ ಗಾಗಿ ದನಿಯೆತ್ತಿದವರಲ್ಲಿ ಕೇಜ್ರಿವಾಲ್ ಕೂಡ ಒಬ್ಬರು.ಆದರೆ,ರಾಷ್ಟ್ರಮಟ್ಟದಲ್ಲಿ ಕಾಣಿಸಿಕೊಂಡಿದ್ದು ಅಣ್ಣಾ ಹಜಾರೆಯವರ ಜನಲೋಕಪಾಲ ಹೋರಾಟದ ಸಂದರ್ಭದಲ್ಲಿ.ಒಂದು ಕಾಲದಲ್ಲಿ ಅಣ್ಣಾ ಅವರ ಬಲಗೈನಂತಾಗಿದ್ದ ಕೇಜ್ರಿವಾಲ್ ಕಡೆಗೆ ಅಣ್ಣಾ ಟೀಂ ಇಬ್ಭಾಗವಾಗಿಸುವಲ್ಲಿಗೆ ಬಂದು ನಿಂತರು.ಆ ನಂತರ ಸ್ಥಾಪನೆಯಾಗಿದ್ದೇ ಎಎಪಿ ಪಕ್ಷ.
ರಾಬರ್ಟ್ ವಾಧ್ರಾ,ಅಂಬಾನಿ,ಗಡ್ಕರಿಯಂತವರ ಭ್ರಷ್ಟಚಾರಗಳನ್ನು ಬಯಲಿಗೆಳೆದು ಸುದ್ದಿ ಮಾಡುತ್ತ ಅಖಾಡಕ್ಕಿಳಿದು ಎಲ್ಲಾ ಪಕ್ಷಗಳಿಂದ ಟೀಕೆ ಎದುರಿಸುತ್ತ ಬಂದ ಪಕ್ಷ, ಮತ್ತೆ ಗಮನ ಸೆಳೆದಿದ್ದು ಚುನಾವಣೆಗಾಗಿ ೨೦ ಕೋಟಿ ಬೇಕಾಗುತ್ತದೆ ಅನ್ನುವ ಗುರಿ ಇಟ್ಟುಕೊಂಡು ಅಷ್ಟೇ ಮೊತ್ತವನ್ನು ಸಂಗ್ರಹಿಸುವ ಮೂಲಕ.
ಒಂದೆಡೆ ತನ್ನದು ಭ್ರಷ್ಟಚಾರ ಮುಕ್ತ ರಾಜಕೀಯದ ಕನಸು ಅನ್ನುತಿದ್ದ ಕೇಜ್ರಿವಾಲ್ ಅವರನ್ನೂ ಸಿಕ್ಯುಲರಿಸಂನ ಭೂತ ಬಿಡಲಿಲ್ಲ.ಹಾಗಾಗಿಯೇ, ಕೇಜ್ರಿವಾಲ್ ಅವರಿಗೆ ‘ಬಾಟ್ಲಾ ಎನ್ಕೌಂಟರ್’ ಅನ್ನುವುದು ನಕಲಿಯೆನಿಸಿ ಅವರು ಆ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಪತ್ರ ಬರೆದಿದ್ದು. ಪುಡಿವೋಟಿನ ಆಸೆಗಾಗಿ,ತಸ್ಲೀಮಾ ನಸ್ರೀನ್ ಅಂತವರಿಗೆ ಫತ್ವಾ ಹೊರಡಿಸಿದ ಮುಲ್ಲಾನ ಬಳಿ ಹೋಗಿ ನಿಲ್ಲುವಾಗ ಅವರಿಗೆ ನೈತಿಕತೆ ಸತ್ತು ಹೋಗಿತ್ತೇನೋ!
ಇಷ್ಟೆಲ್ಲಾ ಆದರೂ,ಈ ಪಕ್ಷ ಅಬ್ಬಾಬ್ಬಾ ಎಂದರೆ ೧೫ ಸೀಟುಗಳನ್ನೂ ಮೀರಬಲ್ಲದು ಅನ್ನುವ ಕನಸು ಯಾರಿಗೂ ಇದ್ದಿರಲಿಲ್ಲ.ಆದರೆ,ದೆಹಲಿಯ ಮತದಾರನ ಮನಸ್ಸಿಲಿದ್ದಿದ್ದೇ ಬೇರೆ.ಅವನು ೨೮ ಸೀಟುಗಳನ್ನು ದಯಪಾಲಿಸಿದ.
ಸಾತಂತ್ರ್ಯ ಹೋರಾಟಗಾರರ ಪಕ್ಷ ಅಂತೇಳಿಕೊಂಡು ಬಂದ ಕಾಂಗ್ರೆಸ್ಸ್,’ಎ ಪಾರ್ಟಿ ವಿಥ್ ಡಿಫರೆನ್ಸ್’ ಅಂದುಕೊಂಡು ಬಂದು ಆ ನಂತರ ಭ್ರಷ್ಟಚಾರದ ವಿಷಯದಲ್ಲಿ ‘ಎ ಪಾರ್ಟಿ ಜಸ್ಟ್ ಲೈಕ್ ಕಾಂಗ್ರೆಸ್ಸ್’ ಅನ್ನುವಂತಾಗಿ ಹೋದ ಬಿಜೆಪಿ ಮತ್ತು ಭಾಷೆ/ಜಾತಿಗಳ ಆಧಾರದ ಮೇಲೆ ನೆಲೆ ಕಂಡುಕೊಂಡ ಇತರೆ ಪ್ರಾದೇಶಿಕ ಪಕ್ಷಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ನೋಡಿ ರೋಸಿಹೋದ ಜನರಿಗೆ, ಬಿರುಬಿಸಿಲಿನಲ್ಲಿ ತಂಪುಮಳೆಯಂತೆ ಆಮ್ ಆದ್ಮಿ ಪಕ್ಷ ಕಂಡಿತು. ಕಾಂಗ್ರೆಸ್ಸು ಹಾಕಿಕೊಟ್ಟ ಹಾದಿಯಲ್ಲೇ ಸಾಗಿಕೊಂಡು ರಾಜಕೀಯ ಮಾಡುವುದು ಬಿಟ್ಟು ಬೇರೆ ದಾರಿಯೇ ಇಲ್ಲವೆಂದೂ ಮತ್ತು ಹಣ,ಹೆಂಡದ ಹೊಳೆ ಹರಿಸದೇ,ತೋಳ್ಬಲವಿಲ್ಲದೇ ಯಾವುದೇ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಅನ್ನುವಂತ ಪರಿಸ್ಥಿತಿ ಉಂಟಾಗಿರುವ ಈ ಸಂದರ್ಭದಲ್ಲಿ, ಆಮ್ ಆದ್ಮಿ ಪಕ್ಷ ನೈತಿಕತೆ ಮತ್ತು ಪಾರದರ್ಶಕತೆಯ ಅಂಶಗಳನ್ನಿಟ್ಟುಕೊಂಡು ಗೆದ್ದುಬಂದಿದ್ದನ್ನು ಖಂಡಿತವಾಗಿ ಅಭಿನಂದಿಸಲೇಬೇಕು.ಮೈಕಿನ ಮುಂದೆ ನಿಂತರೆ ಕೇಜ್ರಿವಾಲ್ ಫೈರ್ ಬ್ರಾಂಡ್ ಇದ್ದಂತೆ.ಬಸವನಗುಡಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಸರ್ಕಾರಕ್ಕೆ ಕೊಡುತಿದ್ದ ಛಡಿಯೇಟುಗಳನ್ನು ಖುದ್ದು ಕೇಳಿಸಿಕೊಂಡಿದ್ದೇನೆ.ಸಾತ್ವಿಕ ಸಿಟ್ಟಿರುವ ಇಂತವರು ನಮ್ಮ ರಾಜಕಾರಣದಲ್ಲಿರುವುದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅವಶ್ಯಕವೂ ಹೌದು.
ಹಾಗಾಗಿಯೇ,ಎಎಪಿ ಪಕ್ಷದ ಈ ಗೆಲುವು ಸಹಜವಾಗಿಯೇ ಮೌಲ್ಯಾಧಾರಿತ ಚುನಾವಣೆಯೆಡೆಗೆ ತುಡಿಯುತ್ತಿರುವ ಮನಸ್ಸುಗಳಿಗೆ ಮರಳುಗಾಡಿನ ನಡುವೆ ಓಯಸಿಸ್ ಕಂಡಂತೆಯೇ ಆಗಿದೆ.ಹಾಗಾಗಿಯೇ ಮೊನ್ನೆಯ ಫಲಿತಾಂಶ ಬಂದಾಗಿನಿಂದ ಕೆಲವರಿಗೆ ತಾವು ಒಂದು ಕೈ ನೋಡಬಾರದೇಕೆ ಅನ್ನಿಸಲಿಕ್ಕಾರಂಭವಾಗಿದೆ.ಆದರೆ,ದೆಹಲಿಯ ಗೆಲುವು ಭಾರತವಿಡಿ ವಿಸ್ತರಿಸಬಲ್ಲದೇ?
ವ್ಯಂಗ್ಯವೇನೆಂದರೇ, ಇವತ್ತು ಕೇಜ್ರಿವಾಲ್ ಅವರನ್ನು ಹಾಡಿ ಹೊಗಳುತ್ತಿರುವ ಇದೇ ಮಂದಿಯೇ ಅಂದು ಅಣ್ಣಾ ಅವರ ಜನಲೋಕಪಾಲ ಚಳುವಳಿಯನ್ನು ಮನುವಾದಿಗಳ ಸಂಚು ಎನ್ನುತಿದ್ದರು.ಜನಲೋಕಪಾಲ ಹೋರಾಟವನ್ನು ‘ವಿಕೇಂಡ್ ಹೋರಾಟ’ ಅನ್ನುತ್ತ ಗೇಲಿ ಮಾಡುತಿದ್ದರು.ಇದೊಂದು ‘ಕಾರ್ಪೋರೇಟ್ ಕೃಪಾಪೋಷಿತ’ ಹೋರಾಟ ಅನ್ನುತ್ತಿದ್ದರು.ಆವತ್ತು,ಇದೇ ತಂಡವನ್ನು “ರೈತರ ಮೇಲೆ ಗೋಲಿಬಾರ್ ಆದಾಗ,ದಲಿತರ ಮೇಲೆ ದಬ್ಬಾಳಿಕೆಗಳಾದಾಗ ನೀವೆಲ್ಲ ಎಲ್ಲಿ ಹೋಗಿದ್ದೀರಿ” ಅಂತ ಕೇಳುತಿದ್ದ ಈ ಅವಕಾಶವಾದಿ ಮಹಾಶಯರುಗಳಿಗೆ ಈಗ ಕೇಜ್ರಿವಾಲ್ ತಂಡದ ಮೇಲೆ ಧಿಡೀರ್ ಪ್ರೀತಿ ಹುಟ್ಟಿದೆ! ಎಂತಾ ಅದ್ಭುತವಲ್ಲವೇ?
ದೆಹಲಿ ಫಲಿತಾಂಶದ ನಂತರ ಖುದ್ದು ಕೇಜ್ರಿವಾಲ್ ತಮ್ಮ ಪಕ್ಷವನ್ನೂ ಇತರೆಡೆಗೆ ವಿಸ್ತರಿಸುವ ಮಾತನ್ನಾಡಿದ್ದಾರೆ.ಅವರ ಮುಂದಿನ ಗುರಿ ‘ಮುಂಬೈ’. ಉತ್ತರ ಮತ್ತು ಪಶ್ಚಿಮ ಭಾರತವನ್ನು ಬಿಟ್ಟು ದಕ್ಷಿಣದೆಡೆಗೆ ಅದರಲ್ಲೂ ಕರ್ನಾಟಕದೆಡೆಗೆ ಬಂದಾಗ ಈ ‘ಆಮ್ ಆದ್ಮಿ ಪಕ್ಷ’ದ ಮ್ಯಾಜಿಕ್ ನಡೆಯಬಲ್ಲದೇ? ಹೆಸರಿನಲ್ಲೇ ‘ಹಿಂದಿಯನ್ಸ್’ ಆಗಿರುವ ಪಕ್ಷವನ್ನು ಕನ್ನಡಿಗರು ಒಪ್ಪಿಕೊಳ್ಳಬಲ್ಲರೇ? ಅಥವಾ ಈ ಪಕ್ಷದ ಪ್ರೇರಣೆಯಿಂದ ಇಲ್ಲೇ ಇನ್ಯಾವುದಾದರೂ ಹೊಸ ಪಕ್ಷ ಹುಟ್ಟಿಕೊಳ್ಳಬಹುದೇ?
ಹಾಗೆ ನೋಡಿದರೆ ಕರ್ನಾಟಕದಲ್ಲಿ ಈಗಾಗಲೇ ‘ಸರ್ವೋದಯ ಪಕ್ಷ,ಲೋಕ ಸತ್ತಾ’ ಅನ್ನುವ ಪಕ್ಷಗಳು ಆದರ್ಶದ ಮಾತನಾಡುತ್ತವೆ.ಆದರೂ ಇವುಗಳೇಕೆ ಕೇಜ್ರಿವಾಲ್ ಅವರಂತೆ ಜನರನ್ನು ತಲುಪಲಿಲ್ಲ.
ಜನರಿಗೆ,ಈ ಸರ್ವೋದಯ ಪಕ್ಷದವರು ಮಾತನಾಡುವ “ಜನಪರ,ಜೀವಪರ,ಮಾನವಪರ…ಇತ್ಯಾದಿ ಪರ,ಪರ…” ಮಾತುಗಳು ನೈಜ ಅನ್ನಿಸಿದಿರಬಹುದು ಅಥವಾ ಇವರು ಈಗಿನ ಟ್ರೆಂಡ್ಗೆ ತಕ್ಕಂತೆ Update ಆಗದೇ Outdate ಆಗಿರಬಹುದೇ? ರೈತನಾಯಕರಾಗಿ ಸರ್ವೋದಯ ಪಕ್ಷದಿಂದ ಈ ಬಾರಿ ಗೆದ್ದು ಬಂದು ’ಎಲ್ಲರ ಆಶಯ-ಕೆ.ಎಸ್.ಪುಟ್ಟಣ್ಣಯ್ಯ’ ಅನ್ನುವ ಘೋಷಣೆಯ ಸಮಾವೇಶದಲ್ಲಿ ಪಾಲ್ಗೊಂಡು ಪುಟ್ಟಣ್ಣಯ್ಯನವರು, ಕಬ್ಬು ಬೆಳೆಗಾರರ ಸಮಸ್ಯೆಗೆ ಮತ್ತು ರೈತನ ಆತ್ಮಹತ್ಯೆಗೆ ವಿಧಾನಸೌಧದಲ್ಲಿ ದನಿಯೆತ್ತಿದರೇ? ಇಲ್ಲವೆಂದರೆ ಇವರು ರೈತರ ಹೆಸರಿನಲ್ಲಿ ಗೆದ್ದು ಬಂದು ಮಾಡಿದ್ದೇನು? ಸುಮ್ಮನೇ ರೈತಪರ ಅಂದರಾಯಿತೇ? ಜನರು ಪ್ರಾಮಾಣಿಕತೆಯನ್ನೂ ಬಯಸುತ್ತಾರೆ ಅಲ್ಲವೇ?
ಇನ್ನು ಲೋಕಸತ್ತಾ ಅನ್ನುವ ಪದವೂ ಕನ್ನಡಿಗರಿಗೆ ಪರಕೀಯವೇ.ಆ ಪಕ್ಷದ ಮೂಂಚೂಣಿಯಲ್ಲಿರುವವರನ್ನು ನಾನು ಜನಲೋಕಪಾಲ ಚಳುವಳಿಯ ಸಮಯದಲ್ಲಿ ಹತ್ತಿರದಿಂದ ಗಮನಿಸಿದಂತೆ ಅವರಿಗೂ ಕರ್ನಾಟಕ/ಕನ್ನಡದ ಬಗ್ಗೆ ಅಂತ ಒಳನೋಟಗಳಿರುವ ಬಗ್ಗೆ ಅನುಮಾನವೆನಿಸಿತು.ನಿಜ ಹೇಳುವುದಾದರೆ ಅದೊಂದು ಎಲೈಟ್ ಕ್ಲಾಸ್ ಜನರ ಪಕ್ಷದಂತಷ್ಟೇ ನನಗೆ ಕಾಣುತ್ತದೆ.ಇದೀಗ ಅವರು ಸಹ ಮಾನವಪರ,ಜೀವಪರ ಅಂತೆಲ್ಲ ಮಾತನಾಡಲಿಕ್ಕೆ ಶುರು ಮಾಡಿದ್ದಾರೆ. ಬಹುಷಃ ಅವರಿಗೆ ಕರ್ನಾಟಕದ ಜನರು ದಕ್ಷಿಣದ ಇತರೆ ರಾಜ್ಯಗಳ ಜನರಂತಲ್ಲ,ಅವರು ಈ ಸೆಕ್ಯುಲರ್ ಸುಳ್ಳಿನ ಆಟಗಳನ್ನು ಕ್ಯಾರೇ ಅನ್ನುವುದಿಲ್ಲ ಮತ್ತು ಅದೇ ಕಾರಣಕ್ಕಾಗಿಯೇ ಇಲ್ಲಿ ಬಿಜೆಪಿ ಸರ್ಕಾರವೂ ಬಂದಿತ್ತು ಅನ್ನುವುದನ್ನು ಮರೆತಿರಬಹುದು! ಇಲ್ಲವೇ ಅವರಿಗಿನ್ನೂ ಈ ರಾಜ್ಯವೇ ಸರಿಯಾಗಿ ಅರ್ಥವಾಗದಿರಬಹುದು.
ಗಮನಿಸಬೇಕಾದ ಮುಖ್ಯ ಅಂಶವೆಂದರೆ,ದೆಹಲಿ ಅನ್ನುವುದು ನಗರ ಕೇಂದ್ರಿಕೃತ ಮತದಾರರೇ ಹೆಚ್ಚಿರುವ ರಾಜ್ಯ.ಆದರೆ,ನಮ್ಮ ಕರ್ನಾಟಕದ ವಿಷಯಕ್ಕೆ ಬಂದರೆ ವಸ್ತುಸ್ಥಿತಿ ಬೇರೆಯೇ ಇದೆ.ಕೇಜ್ರಿವಾಲ್ ಗೆಲುವಿನ ಗುಂಗಿನಲ್ಲಿ ಕರ್ನಾಟಕದಲ್ಲಿ ಕಸಪೊರಕೆ ಹಿಡಿಯಲು ಹೊರಡುವವರರು ತಮ್ಮ ಹಳೆಯ ಕಿತ್ತುಹೋದ ‘ಮನುವಾದಿ,ಫ್ಯಾಸಿಸ್ಟು’ ಇತ್ಯಾದಿ ಪದಪುಂಜಗಳ ಟೇಪ್ ರೆಕಾರ್ಡರ್ ಗಳನ್ನು ಮೂಲೆಗೆಸೆದು, ಜನರಲ್ಲಿ ಅದರಲ್ಲೂ ಯುವಜನರಲ್ಲಿ ಒಂದು ಭರವಸೆ ಮೂಡಿಸಿದರೆ ಗೆಲ್ಲಬಲ್ಲರು,ಇಲ್ಲದಿದ್ದರೆ ಕಸಪೊರಕೆಯ ಜೊತೆಗೆ ಕಸದ ಬುಟ್ಟಿ ಸೇರುವುದರಲ್ಲಿ ಆಶ್ಚರ್ಯವೇನಿಲ್ಲ.
ಚುನಾವಣೆಯೆಂದರೆ ಕೇವಲ ಹಣ ಖರ್ಚು ಮಾಡುವುದಲ್ಲ, ಜಾಹಿರಾತು-ಭಿತ್ತಿಪತ್ರಗಳ ಮೂಲಕ ಪ್ರಚಾರ ಮಾಡುವುದಲ್ಲ.
ಜನರ ಮಧ್ಯೆ ಓಡಾಡಬೇಕು, ಪ್ರತಿಯೊಂದು ಮೊಹಲ್ಲಾಕ್ಕೂ ಹೋಗಬೇಕು, ಅಲ್ಲಿನ ಜನರಿಗೆ ತಮ್ಮ ಕಾರ್ಯಕ್ರಮವನ್ನು ವಿವರಿಸಬೇಕು. ಈ ರೀತಿ ಪದೇಪದೇ ಮಾಡುವ ಮೂಲಕ, ಜನರಿಗೆ ಇವರ ಪಕ್ಷ, ಇದರ ಹಿಂದಿರುವ ಜನರ ಪರಿಚಯವಾಗುತ್ತದೆ. ಜೊತೆಗೆ, ಇವರ ಉದ್ದೇಶಶುದ್ಧಿಯೂ ಮುಖ್ಯ – ಇದೂ ಸ್ವಲ್ಪ ಸಮಯದಲ್ಲೇ ಜನರಿಗೆ ತಿಳಿಯುತ್ತದೆ. ಜನರಿಗೆ, ಇವರು ಪ್ರಾಮಾಣಿಕರು, ಬದಲಾವಣೆ ತರಬಲ್ಲರು, ಎಂಬ ನಂಬಿಕೆ ಮೂಡುವಂತೆ ಮಾಡುವುದು ಅತಿ ಮುಖ್ಯ.
ಈ ಕೆಲಸವನ್ನು ಆಮ್ ಆದ್ಮಿ ಪಕ್ಷ ಸಮರ್ಥವಾಗಿ ನಿಬಾಯಿಸಿತು. ಕರ್ನಾಟಕದಲ್ಲಿ ಚುನಾವಣೆಗಳನ್ನೆದುರಿಸಿದ ಲೋಕಸತ್ತಾ ಪಕ್ಷ ಜನರ ಹತ್ತಿರ ಹೋಗಲೇ ಇಲ್ಲ. ಇನ್ನು ಇದರ ಕುರಿತಾಗಿ ಜನರಿಗೆ ಹೇಗೆ ತಿಳಿಯಬೇಕು? ಚುನಾವಣೆ ಬರುವ ಹಲವು ತಿಂಗಳ ಮೊದಲೇ ಕೆಲಸ ಆರಂಭಿಸಬೇಕಾಗುತ್ತದೆ. ಹಗಲು-ರಾತ್ರಿ ದುಡಿಯಬೇಕಾಗುತ್ತದೆ. ಪ್ರಾಮಾಣಿಕ ಕಾರ್ಯಕರ್ತರ ಪಡೆ ಕಟ್ಟಬೇಕಾಗುತ್ತದೆ. ಇದಾವುದನ್ನೂ ಲೋಕಸತ್ತಾ ಮಾಡಲಿಲ್ಲ. ಹೀಗಾಗಿ ಅದು ಗೆಲ್ಲಲಿಲ್ಲ.
ಕರ್ನಾಟದಲ್ಲಿ ಭಾಜಪ ಆರಿಸಿ ಬಂದದ್ದಕ್ಕೆ, ಅದರ ಪರಿಶ್ರಮಕ್ಕಿಂತ, ಯೆಡ್ಯೂರಪ್ಪನವರಿಗೆ ಕುಮಾರಸ್ವಾಮಿ ಮಾಡಿದ ಅನ್ಯಾಯದ ಅನುಕಂಪವೇ ಕಾರಣ. ಆದರೆ, ಅಧಿಕಾರದಲ್ಲಿದ್ದಾಗ ಜನಪರವಾದ ಕಾರ್ಯಕ್ರಮಕ್ಕಿಂತ, ಜಗಳಗಳಲ್ಲೇ ಕಾಲ ಕಳೆದು, ಭ್ರಷ್ಟಾಚಾರದ ಕಳಂಕ ಹೊತ್ತು ಕಾಲ ಕಳೆದದ್ದೇ ಇವರ ಸಾಧನೆ. ಇದಕ್ಕೆ ತಕ್ಕಂತ ಜನ ಪಾಠ ಕಲಿಸಿದರು. ಆದರೆ, ಸಿದ್ದರಾಮಯ್ಯನವರ ಸರಕಾರವೇನೂ ಹಿಂದಿನ ಘಟನೆಗಳಿಂದ ಪಾಠ ಕಲಿತಂತಿಲ್ಲ. ಹೀಗಾದರೆ, ಇತಿಹಾಸ ಮರುಕಳಿಸುವುದು ಖಂಡಿತ.
ಕರ್ನಾಟಕದ ಜನತೆಯೂ ಹೊಸಗಾಳಿಗಾಗಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲೂ “ಮೋದಿ ಜಪ” ಕೇಳಿಬರುತ್ತಿದೆ. ಜನ ಬದಲಾವಣೆ ಬೇಕೆನ್ನುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಲೋಕಸತ್ತಾ ಅಥವಾ ಎಎಪಿ ಪಕ್ಷಗಳು ಈಗಲೇ ಕೆಲಸ ಆರಂಭಿಸಿ, ಜನರ ಹತ್ತಿರ ಹೋದರೆ, ಅವರಿಗೆ ಯಶಸ್ಸು ಸಿಗಬಹುದು.
ಮಿ ರಾಕೇಶ್ ಶೆಟ್ಟಿಯವರೆ, ಆಪ್(ಫ್) ಕೇವಲ ೨೮ ಸೀಟುಗಳನ್ನು ಗೆದ್ದದ್ದಕ್ಕೆ ನೀವೇಕೆ ಚೊಣಚ ಹೊಕ್ಕರವಂತೆ ಆಡುತ್ತಿದ್ದೀರಿ? ಅವರೇನು ಭಾರತವನ್ನು ಗೆಲ್ಲಿಸುವಂತಹ ಮಹಾನ್ ಕಾರ್ಯವನ್ನಾಗಲೀ, ದೇಶ ಕಟ್ಟುವ ಕೆಲಸವನ್ನಾಗಲೀ ಅಥವಾ ಇಡೀ ಸಂಸ್ಕೃತಿಯನ್ನು ಉಳಿಸಿ ಬೆಳಸಿ ದೇಶವನ್ನು ಕಾಪಾಡುತ್ತೇವೆಂದಾಗಲೀ ಎಲ್ಲೂ ಹೇಳಿಲ್ಲವಲ್ಲ. ಅವರಿಷ್ಟಕ್ಕೆ ಅವರು ಯಾವುದೋ ಒಂದು ಮೂಲೆಯಲ್ಲಿ ಕಸ ಗುಡಿಸುತ್ತೇವೆಂದು ಹೇಳಿದ್ದಕ್ಕೆ ಜನಸಾಮಾನ್ಯರು ಅವರ ಕೈಗೆ ಕಸಪೊರಕೆ ಕೊಟ್ಟಿದ್ದಾರೆ. ಸಾಧ್ಯವಾದರೆ ಕಸಗುಡಿಸುತ್ತಾರೆ, ಇಲ್ಲವೆಂದಾದರೆ, ಕಸಪೊರಕೆ ಸಾಲುತ್ತಿಲ್ಲ ಕಸಗುಡಿಸುವ ಕೆಲಸ ಸರಿಯಾಗಿ ಮಾಡಲು ಆಗುತ್ತಿಲ್ಲ ಇನ್ನೂ ಸ್ವಲ್ಪ ಕಸಪೊರಕೆ ಕೊಡಿ ಎಂದು ಜನಸಾಮಾನ್ಯರನ್ನು ಕೇಳುತ್ತಾರೆ. ಕೊಟ್ಟರೆ ಗುಡಿಸುತ್ತಾರೆ, ಇಲ್ಲವೆಂದಾದರೆ ಸುಮ್ನೆ ಅವರವರ ಮನೆಗಳಿಗೆ ಹೋಗಿ ಅವರವರ ಮನೆ ಕಸಗುಡಿಸಿಕೊಂಡಿರುತ್ತಾರೆ. ನೀವೇಕೆ ಅವರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿದ್ದೀರ. ಛೆ, ಅವರನ್ನು ಅವರ ಪಾಡಿಗೆ ಬಿಟ್ಟು ನೀವು ಭಾರತವನ್ನು ಗೆಲ್ಲಿಸಿ, ಸಂಸ್ಕೃತಿಯನ್ನು ಉಳಿಸಿ ಬೆಳಸಿ ದೇಶವನ್ನು ಕಟ್ಟಿ. ಆ ನೀಚ ಜನರ ಸಹವಾಸವಾಗಲೀ ಅವರ ಬಗ್ಗೆ ಯೋಚಿಸುವುದಾಗಲೀ ಮಾಡಲು ಹೋಗಿ ನಿಮ್ಮ ಭಾರತ ಗೆಲ್ಲಿಸಲು ಬೇಕಿರುವ ಅಮೂಲ್ಯವಾದ ಸಮಯ ಹಾಳು ಮಾಡಿಕೊಳ್ಳಬೇಡಿ. ಆದರೆ ಒಂದು ಎಚ್ಚರಿಕೆ ಮಾತ್ರ ಇರಲಿ. ಅದೇನೆಂದರೆ, ನಿಮ್ಮ ಭಾರತ ಗೆಲ್ಲಿಸುವ, ಸಂಸ್ಕೃತಿ ಉಳಿಸಿ ಬೆಳಸಿ ದೇಶ ಕಟ್ಟುವ ಭರದಲ್ಲಿ ಅವರು ರಸ್ತೆ ಬದಿಯಲ್ಲಿ ಕಸ ಗುಡಿಸುವಾಗ ಅವರ ಕಸಪೊರಕೆಗೆ ಸಿಗದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ, ಆಕಸ್ಮಾತ್(ಟ್) ಅವರ ಕಸಪೊರಕೆಗೇನಾದರೂ ಸಿಕ್ಕಲ್ಲಿ ಅವರು ನಿಮ್ಮನ್ನೂ ಗುಡಿಸಿಹಾಕಿಬಿಡಬಹುದು. ಅವರಿಗೆ ನಿಮ್ಮಂತಹವರ ದೊಡ್ಡ ದೊಡ್ಡಾ ಮಾತು, ಕೆಲಸ, ಜಿಜ್ಣ್ಾಸೆ ದೇಶ ಭಾಷೆ ಸಂಸ್ಕೃತಿ ಯಾವುದೂ ತಿಳಿಯದೆ, ಅರ್ಥವಾಗದೆ ಹಾಗೆ ಮಾಡಿಯಾರೇ ವಿನಹಃ ನೀವು ಯಾರು ಮತ್ತು ನೀವು ಸಾಧಿಸಲು ಹೊರಟಿರುವ ಮಹಾತ್ಕಾರ್ಯ ಯಾವುದೆಂದು ತಿಳಿದು ಹಾಗೆ ಮಾಡುವುದಲ್ಲ. ಅವರು ಸಾಮಾನ್ಯರಲ್ಲಿ ಸಾಮಾನ್ಯ ಜನಸಾಮಾನ್ಯರು, ದಡ್ಢರು ಅವರನ್ನು ಕ್ಷಮಿಸಿ ನೀವು ಭಾರತ ಗೆಲ್ಲಿಸಿ ಮತ್ತು ಸಂಸ್ಕೃತಿ ಉಳಿಸಿ ಬೆಳಸಿ ದೇಶ ಕಟ್ಟಿ. ನಾನು ಹೇಳಿದ್ದರಲ್ಲೇನಾದರೂ ತಪ್ಪಿದ್ದಲ್ಲಿ ನನ್ನನ್ನೂ ಒಬ್ಬ ಜನಸಾಮಾನ್ಯನೆಂದು ತಿಳಿದು ಕ್ಷಮಿಸಿ ಬಿಡಿ.
ನನ್ನ ಲೇಖನ ನಿಮಗೆ ಬಹಳ ನೋವಾಗುವಂತ ಜಾಗಕ್ಕೇ ತಟ್ಟಿದೆ ಅನ್ನುವುದು ನಿಮ್ಮ ಅನಿಸಿಕೆಯಿಂದ ಅರ್ಥವಾಗುತ್ತಿದೆ.ಸ್ವಲ್ಪ ಸಮಾಧಾನ ಮಾಡಿಕೊಂಡು ಇನ್ನೊಮ್ಮೆ ಲೇಖನವನ್ನು ಓದಿಕೊಂಡಿದ್ದರೆ ತಮ್ಮ ಕಮೆಂಟಿಗೂ ನನ್ನ ಲೇಖನಕ್ಕೂ ಸಂಬಂಧವಿದೆಯೇ ಅನ್ನುವುದು ತಮ್ಮ ಗಮನಕ್ಕೆ ಬರುತಿತ್ತು.ಆದರೆ,ಪಾಪ ನಿಮಗೆ ವಿರೋಧ ದಾಖಲಿಸುವ ತವಕ.
ನಾನು ಎ.ಎ.ಪಿಯ ಗೆಲುವನ್ನು ಅಭಿನಂದಿಸಿದ್ದೇನೆ.ನನ್ನ ಲೇಖನ ಮುಖ್ಯವಾಗಿ ಕೇಜ್ರಿವಾಲ್ ಅವರ ಕಸಪೊರಕೆಯನ್ನು ಕರ್ನಾಟಕದಲ್ಲಿ ಎತ್ತಿ ಎತ್ತಿ ತೋರಿಸಲು ಹೊರಟ ಅವಕಾಶವಾದಿಗಳ ಕುರಿತು ಮತ್ತು ಹಿಂದಿಯನ್ಸ್ ಮನಸ್ಥಿತಿಯವರ ಹಿಡಿತದಲ್ಲಿರುವ ಎ.ಎ.ಪಿ ಕರ್ನಾಟಕದಲ್ಲಿ ಗೆಲ್ಲಬಹುದೇ ಅನ್ನುವ ಬಗ್ಗೆಯಾಗಿದೆಯಷ್ಟೇ.
ಇನ್ನು ನೀವು ಭಾರತ ಸಂಸ್ಕೃತಿಯ ಬಗ್ಗೆ ತಲೆಕೆಡಿಸಿಕೊಳ್ಳದೇ ಹೋಗಿ ಕಾಂಗ್ರೆಸ್ಸ್ ಕನ್ನಡಿಗರ ಕೆಲಸವನ್ನು ಮುಂದುವರೆಸಿಕೊಳ್ಳಿ.ಪೊರಕೆ ಗುಡಿಸಿ ತಿಪ್ಪೆಗೆ ಎಸೆದಿರುವುದು ಅವರನ್ನೇ
ತಟ್ಟುವ ಜಾಗ ವರೆಸುವ ಜಾಗ ಎಲ್ಲಾ ಒಂದೇ. ಕರ್ನಾಟಕ ಮತ್ತು ದೇಶದ ಇತರೆ ಭಾಗಕ್ಕೂ ಕಸ ಗುಡಿಸುವವರು ಬಂದರೆ ನಿಮ್ಮಂತಹವರ ಕತೆ ಏನು ಎಂಬುದೇ ನಿಮ್ಮ ಚಿಂತೆ. ಕರ್ನಾಟಕವನ್ನು ನಿಮಗೆ ಜಹಗೀರು ಕೊಟ್ಟಿರುವವರು ಯಾರೆಂದು ಕೇಳಬಹುದೇ? ಹಿಂದಿಯನ್ಸ್ ಅಂದರೆ ಯಾರು ಕನ್ನಡಿಯನ್ಸ್ ಅಂದರೆ ಯಾರು ಇವರೆಲ್ಲಾ ಯಾವ ಯಾವ ದೇಶದವರು? ಕರ್ನಾಟಕದ ಕಸಗುಡಿಸಲು ಕರ್ನಾಟಕಕ್ಕೆ ಬಂದರೂ ಹಿಂದಿಯನ್ಸ್ ಸ್ಸೇ ಬರುವುದಿಲ್ಲ ಅವರು ಹೇಗೆ ಕಸಗುಡಿಸಬಹುದು ಎಂದು ತೋರಿಸಬಹುದು ಅಷ್ಟೆ. ಬಹುಷಃ ನೀವು ನಾನು ಕಾಂಗ್ರೆಸ್ಸಿನವನೆಂದು ನನಗೆ ಉತ್ತರಿಸಿದಂತೆ ಕಾಣುತ್ತದೆ ಅಲ್ಲದೆ ಅದಕ್ಕಾಗಿ ತಟ್ಟುವ ಜಾಗ ಕುಟ್ಟುವ ಜಾಗ ಎಂದೆಲ್ಲಾ ಬಡಬಡಿಸಿದಂತಿದೆ. ಅದಿರಲಿ, ದೆಹಲಿಯಲ್ಲಿ ಭಾರತ ಗೆಲ್ಲಿಸುವ, ದೇಶ ಕಟ್ಟುವವರ ಶೇಕಡಾವಾರು ಮತಗಳು ಕಡಿಮೆಯಾಗಿರುವುದು ತಮ್ಮ ಗಮನಕ್ಕೆ ಬಂದಂತಿಲ್ಲ. ಇರಲಿ ಅದೇನೂ ಅಷ್ಟು ಪ್ರಮುಖವಾದ ವಿಷಯವಲ್ಲ. ಇದೆಲಾ ಇದ್ದದ್ದೆ ನೀವು ಬೇಸರ ಮಾಡಿಕೊಳ್ಳಬೇಡಿ ಪ್ಲೀಸ್.
ನಿಮ್ಮ ಲೇಖನ ಸಮಯೋಚಿತವಾಗಿ, ವಸ್ತುನಿಷ್ಟ ವಿಮರ್ಶೆಯಿಂದ ಕೂಡಿದೆ.. ಅಭಿನಂದನೆಗಳು. AAP ಗೆದ್ದಿರುವುದು ಅಪ್ಪಟ ನಗರ ಕೇಂದ್ರಿತ ಪ್ರದೇಶದಲ್ಲಿ. ಅದೂ ಕೇಂದ್ರ ದಿಲ್ಲಿ ಯಲ್ಲಿ ಮಾತ್ರ. ದಿಲ್ಲೀ ನಗರದ ಹೊರವಲಯದ ಒಂದೂ ಸ್ಥಾನ ಗೆಲ್ಲದಿರುವುದನ್ನು ನಾವು ಗಮನಿಸಬಹುದು. AAP ದಿಲ್ಲೀ Assemblyಗಾಗಿ ಮತ್ತೆ ಚುನಾವಣೆಗೆ ಹೋಗುವುದಾಗಿ ಹೇಳುತ್ತಿರುವುದನ್ನು ಗಮನಿಸಿದರೆ ಅವರಿಗೆ ಸಾಮಾನ್ಯರ ಬಗ್ಗೆ ಆಗಲಿ ದೇಶದ ಬಗ್ಗೆ ಯಾಗಲಿ ಯಾವುದೇ ಕಳಕಳಿ ಕಾಣುತ್ತಿಲ್ಲ. ಅದರ ಬದಲು ಗೆಲುವಿನ ಅಹಂಕಾರದ ಭೂತ ತಲೆ ಹೊಕ್ಕಿರುವುದನ್ನು ಕಾಣುತ್ತೇವೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ತನ್ನ ಜನ್ಮದಾತ ಕಾಂಗ್ರೆಸ್ ಪಕ್ಷದೊಂದಿಗೆ ಇತಿಹಾಸ ಸೇರಿದರೆ, ಬಾಲ್ಯದಲ್ಲೇ ಸಾವನ್ನು ಆಲಂಗಿಸಿದರೆ ಆಶ್ಚರ್ಯವಿಲ್ಲ
ಪಾಪ ಕೆಲವರಿಗೆ ಈ ಎಲೆಕ್ಷನ್ ನಲ್ಲಿ ಯಾರನ್ನು ಗುಡಿಸಿ ತಿಪ್ಪೆಗೆಸೆಯಲಾಯಿತು ಎಂಬ ಬಗ್ಗೆ ಗೊಂದಲವಿದೆ! ಸೋತು ಸುಣ್ಣವಾಗಿರುವವರು ಆಪ್ ಗೆಲುವಿನಲ್ಲಿ ತಮ್ಮ ಗೆಲವು ಕಂಡು ಸಂಭ್ರಮಿಸುತ್ತಿದ್ದಾರೆ…ನಿಜವಾಗಿಯೂ ಕರುಣಾಜನಕ ಸ್ಥಿತಿ!
ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗೆಲುವು ಮೋದಿಯ ಗೆಲುವಲ್ಲ..ಬಿಜೆಪಿಯ ಗೆಲವು ಆದರೆ ದೆಹಲಿಯ ಸೋಲು ಬಿಜೆಪಿಯ ಸೋಲಲ್ಲ..ಮೋದಿಯ ಸೋಲು!. ಇವರ ಹೇಳಿಕೆ/ವಿಶ್ಲೇಷಣೆಗಳನ್ನು ನೋಡಿ ಅಚ್ಚರಿ ಪಡುವಂತದ್ದು ಏನಿಲ್ಲ..ಇವರ ಉದ್ದೇಶ ಸ್ಫಷ್ಟ..ಬಹಳಷ್ಟು ಜನ ಮೋದಿಯವರನ್ನು ಬೆಂಬಲಿಸುವವರು ಬಿಜೆಪಿಯ ಬೆಂಬಲಿಗಲಿಗರಲ್ಲ ಎಂದು ಇವರಿಗೆ ಗೊತ್ತು. ದೆಹಲಿ ವಿಧಾನ ಸಭೆಗೆ ಆಮ್ ಆದ್ಮಿ ಯನ್ನು ಬೆಂಬಲಿಸಿದವರಲ್ಲಿ ಬಹಳಷ್ಟು ಜನ ಮೋದಿ ಬಗ್ಗೆ ಸಾಫ್ಟ್ ಕಾರ್ನರ್ ಇರುವವರು ಮತ್ತು ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸುತ್ತಾರೆ ಎಂಬುದು ಕೂಡ ಗೊತ್ತು. ಅದಕ್ಕೆ ಮತದಾರರು ಮೋದಿ ಮತ್ತು ಬಿಜೆಪಿಯನ್ನು ಬೇರೆ-ಬೇರೆಯಾಗಿ ನೋಡುವಂತೆ ಮಾಡುವುದು ಇವರ ಉಪಾಯ. ಅದರ ಪ್ರಕಾರ, ನೀವು ತಿಳಿದುಕೊಂಡಂತೆ ಮೋದಿ ಮ್ಯಾಜಿಕ್ ನಡೆಯುತ್ತಿಲ್ಲ..ಇಲ್ಲಿದೆ ನೋಡಿ ಮೋದಿಗೆ ಪರ್ಯಾಯ ಎಂದು ಆಮ್ ಆದ್ಮಿ ಪಾರ್ಟಿಯನ್ನು ತೋರಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ‘ಮುಂದಿನ ಲೋಕಸಭಾ ಚುನಾವಣೆ ಆಮ್ ಆದ್ಮಿ v/s ಮೋದಿಯೆ?’ ಎಂಬಂತಹ ಸುದ್ದಿಯನ್ನು ಹರಿ ಬಿಡಲು ಸುರುಮಾಡಿದ್ದಾರೆ. ಹೀಗೆ ಆಮ್ ಆದ್ಮಿಯಲ್ಲಿ ಇಲ್ಲದ ಉತ್ಸಾಹ ತುಂಬಿ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಮಾಡುವುದು ಮತ್ತು ಮೋದಿ ಪರ ಇರುವ ಮತದಾರರ ಮತಗಳನ್ನು ಒಡೆಯುವಂತೆ ನೋಡಿಕೊಳ್ಳುವುದು ಈಗಿನ ತಂತ್ರ. ಅಕಸ್ಮಾತ ಇವರ ಇಂದ್ರ-ಚಂದ್ರ ಹೊಗಳಿಕೆಯನ್ನು ನಂಬಿ ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಇಳಿದಿದ್ದೆ ಆದರೆ..ಲೋಕಸಭಾ ಚುನಾವಣೆಯ ನಂತರ ನಾಮ್ ಬಿ ನಹಿ..ಕಾಮ್ ಬಿ ನಹಿ ಪಾರ್ಟಿಯಾಗಿ ಅವಸಾನವಾಗುತ್ತದೆ..ಆಮೇಲೆ ಮಾರಿಕೊಳ್ಳಲು ಹೋದರೆ ದಾಮ್ ಭಿ ನಹಿ ಅನ್ನುವ ಪರಿಸ್ಥಿತಿ ಕಾಣುತ್ತದೆ.
ದೆಹಲಿಯ ಚುನಾವಣೆಯ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೊರನೋಟಕ್ಕೆ ಕಾಣದ ಮಹತ್ವದ ವಿಷಯವೊಂದು ತಿಳಿಯುತ್ತದೆ.
ಮೇಲ್ನೋಟಕ್ಕೆ ಎಎಪಿ ಪಕ್ಷವು ಕಾಂಗ್ರೆಸ್ ಮತ್ತು ಭಾಜಪ ಪಕ್ಷಗಳಿಂದ ಸ್ಥಾನಗಳನ್ನು ಕಸಿದುಕೊಂಡಿದೆ.
ಆದರೆ, ಪಕ್ಷಗಳಿಗೆ ಬಂದಿರುವ ಶೇಕಡಾವಾರು ಮತಗಳು ಬೇರೆಯೇ ಕಥೆಯನ್ನು ಬಿಚ್ಚಿಡುತ್ತವೆ.
ಕಾಂಗ್ರೆಸ್ ಪಕ್ಷವು ಹಿಂದಿನ ಚುನಾವಣೆಯಲ್ಲಿ 40.31% ಮತ ಗಳಿಸಿತ್ತು. ಈ ಬಾರಿ, ಅದು ಗಳಿಸಿದ್ದು ಕೇವಲ 24.55%.
ಭಾಜಪವು ಹಿಂದಿನ ಚುನಾವಣೆಯಲ್ಲಿ 36.84% ಗಳಿಸಿತ್ತು. ಈ ಬಾರಿ ಅದು ಗಳಿಸಿದ್ದು 33.07%.
ಎಎಪಿ ಪಕ್ಷವು ಗಳಿಸಿದ್ದು 29.49%.
ಮೇಲಿನ ಅಂಕಿ-ಅಂಶಗಳಿಂದ, ಎಎಪಿ ಪಕ್ಷವು ಕಾಂಗ್ರೆಸ್^ನಿಂದ ಮತಗಳನ್ನು ಕಸಿದಿರುವುದು ಕಾಣುತ್ತದೆ. ಆದರೆ, ಕಾಂಗ್ರೆಸ್^ಗಿಂತ ಬಹುದೊಡ್ಡ ಹೊಡೆತ ಬಿದ್ದಿರುವುದು ಬಹುಜನ ಸಮಾಜ ಪಕ್ಷಕ್ಕೆ.
ಬಹುಜನ ಸಮಾಜ ಪಕ್ಷದ ಕುರಿತಾಗಿ ಯಾರೂ ಮಾತನಾಡದೇ ಇರುವುದರಿಂದ, ಮುಖ್ಯವಾದ ಈ ಅಂಶ ಯಾರೂ ಗಮನಿಸಿಲ್ಲವೆನಿಸುತ್ತದೆ.
ಬಹುಜನ ಸಮಾಜ ಪಕ್ಷವು ಹಿಂದಿನ ಚುನಾವಣೆಯಲ್ಲಿ 14.05% ಗಳಿಸಿತ್ತು. ಈ ಬಾರಿ ಅದಕ್ಕೆ ಬಿದ್ದಿರುವುದು ಕೇವಲ 5.35%!!
ಅಂದರೆ, ಅದು ಶೇಕಡಾ 60ರಷ್ಟು ಮತಗಳನ್ನು ಕಳೆದುಕೊಂಡಿದೆ. ಈ ಎಲ್ಲಾ ಮತಗಳು ಎಎಪಿ ಪಕ್ಷಕ್ಕೆ ಹೋಗಿದೆ.
ಭಾಜಪದ ಮತದಲ್ಲಿ ಶೇಕಡಾ 3 ಕಡಿಮೆಯಾಗಿದೆ ಅಷ್ಟೇ. ಇದರ ಅರ್ಥ, ಭಾಜಪ ತನ್ನ ಮತಗಳನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಸಫಲವಾಗಿದೆ. ಭಾಜಪದ ಮತದಾರರು ಅದರ ಕೈಹಿಡಿದಿರುವುದು ಸ್ಪಷ್ಟ.
ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷಗಳ ಕೈಬಿಟ್ಟ ಮತದಾರರು ಯಾರು ಎನ್ನುವುದು ಕುತೂಹಲದ ಪ್ರಶ್ನೆ.
ಆ ಪಕ್ಷಗಳಿಗೆ ಮತ ನೀಡುತ್ತಿದ್ದ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ಎಎಪಿ ಕೈಹಿಡಿದಿದ್ದಾರೆ!
ಇದರ ಅರ್ಥ ಇಷ್ಟೇ. ಎಎಪಿ ಪಕ್ಷವು ದೇಶದೆಲ್ಲೆಡೆ ಚುನಾವಣೆಗೆ ನಿಂತರೆ, ಅದರಿಂದ ಹೊಡೆತ ಬೀಳುವುದು, ಕಾಂಗ್ರೆಸ್ ಮತ್ತು ಇನ್ನಿತರ “ತಥಾಕಥಿತ ಜಾತ್ಯಾತೀತ ಪಕ್ಷಗಳಿಗೆ”. ಅಂದರೆ, ಕಾಂಗ್ರೆಸ್^ನ ಮತಗಳು ಎಲ್ಲೆಡೆ ಹಂಚಿ ಹೋಗುವುದು. ಇದರಿಂದ ಲಾಭವಾಗುವುದು ಭಾಜಪಕ್ಕೆ ಮಾತ್ರ!
ಇನ್ನು ದೆಹಲಿಗೇ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಕಿ-ಅಂಶ:
ಈ ಸಲದ ಚುನಾವಣೆಯಲ್ಲಿ ಬಿದ್ದಿರುವ ಮತಗಳನ್ನು ಗಮನಿಸಿದರೆ, ದೆಹಲಿಯಲ್ಲಿರುವ 7 ಲೋಕಸಭಾ ಕ್ಷೇತ್ರಗಳಲ್ಲಿ ಭಾಜಪವು 6 ಸ್ಥಾನಗಳಲ್ಲಿ ಮೊದಲ ಪಕ್ಷವಾಗಿ ನಿಂತಿದೆ. ಉಳಿದ 1 ಸ್ಥಾನದಲ್ಲಿ ಎಎಪಿ ಪಕ್ಷವು ಮುಂದಿದೆ. ಕಾಂಗ್ರೆಸ್^ಗೆ ಸಿಕ್ಕಿರುವುದು 0!!
ಇದಕ್ಕೆ ಕಾರಣ, ಎಎಪಿ ಉಮೇದುವಾರರು ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದರೂ, ಅವರು ಗೆದ್ದಿರುವುದು ಬಹಳ ಕಡಿಮೆ ಅಂತರದಿಂದ. ಆದರೆ, ಭಾಜಪದ ಉಮೇದುವಾರರು ಗೆದ್ದಿರುವಲ್ಲೆಲ್ಲಾ ದೊಡ್ಡ ಅಂತರದಿಂದ ಗೆದ್ದಿದ್ದಾರೆ, ಆದರೆ, ಸೋತಿರುವಲ್ಲೆಲ್ಲಾ ಕಡಿಮೆ ಅಂತರದಿಂದ ಸೋತಿದ್ದಾರೆ!
ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಎಎಪಿ ಪಕ್ಷವು ದೆಹಲಿಯ ಸ್ಥಳೀಯ ಚುನಾವಣೆಯಲ್ಲಿ ತನ್ನ ಪ್ರತಾಪ ತೋರಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಅದು ಮಿಸುಕಾಡುವುದು ಕಷ್ಟ. ಹೆಚ್ಚೆಂದರೆ, ಅದು ಕಾಂಗ್ರೆಸ್ ಮತಗಳನ್ನು ಕದಿಯುತ್ತದೆ. ಇದರಿಂದ ಭಾಜಪಕ್ಕೇ ಲಾಭವಾಗುತ್ತದೆ. ವಿಧಾನ ಸಭಾ ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಮತ ಹಾಕಿದವರೂ, ಲೋಕಸಭಾ ಚುನಾವಣೆಯಲ್ಲಿ ಭಾಜಪಕ್ಕೆ (ಅರ್ಥಾತ್ ನರೇಂದ್ರ ಮೋದಿ) ಮತ ಹಾಕುವೆವೆಂದು ಹೇಳಿರುವುದು ಗಮನಿಸಬೇಕಾದ ಅಂಶ. ಹೀಗೆ, ಇದನ್ನೆಲ್ಲಾ ಗಮನಿಸಿದಾಗ, ಎಎಪಿ ನಿಲ್ಲುವುದರಿಂದ ಭಾಜಪವು ಸ್ವಂತ ಶಕ್ತಿಯ ಆಧಾರದ ಮೇಲೇ ಕೇಂದ್ರ ಸರಕಾರ ರಚಿಸುವ ದಿನಗಳು ದೂರವಿಲ್ಲ ಎನಿಸುತ್ತದೆ!
ಮಾನ್ಯರೇ, ಆಂ ಆದ್ಮಿ ಪಕ್ಷದ ಸಾಧನೆ ದೇಶದ ಪ್ರಗತಿಪರರಿಗೆ ಹೆಮ್ಮೆ ಹಾಗೂ ಸ್ಥೈರ್ಯವನ್ನು ನೀಡಿದೆ. ನಮ್ಮ ಕೃಷ್ಣಪ್ಪ ಸರ್ ಅವರು ಈ ಹಿಂದೆ ಅಭಿಪ್ರಾಯ ಪಟ್ಟ ಹಾಗೆ ದೇಶದ ಪ್ರಗತಿಪರರು ಕೋಮುವಾದಿ ಶಕ್ತಿಗಳನ್ನು ಹೊಡೆದೋಡಿಸಲು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಆಂ ಆದ್ಮಿ ಪಕ್ಷಕ್ಕೆ ನೆಲೆ ಇಲ್ಲದ ರಾಜ್ಯಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮತದಾರರಿಗೆ ಇರುವ ಜಿಗುಪ್ಸೆ ಹಾಗೂ ಸಿಟ್ಟನ್ನು ಕೋಮುವಾದಿ ಪಕ್ಷಗಳು ಲಾಭಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದುದರಿಂದ ಕರ್ನಾಟಕದ ಪ್ರಗತಿಪರರೆಲ್ಲರೂ ಕಾಂಗ್ರೆಸ್ ಪಕ್ಷದ ನೆರವಿಗೆ ಬರಬೇಕಾಗಿದೆ. ಕರ್ನಾಟಕದಲ್ಲಿ ಆಂ ಆದ್ಮಿ ಪಕ್ಷಕ್ಕೆ ಭದ್ರ ನೆಲೆ ಉಂಟಾಗುವ ವರೆಗೆ ಕಾಂಗ್ರೆಸ್ ಪಕ್ಷವನ್ನು ಸ್ಥಳೀಯವಾಗಿ ಬೆಂಬಲಿಸುವುದು ಪ್ರಗತಿಪರರಿಗೆ ಅನಿವಾರ್ಯ. “ಕಾಂಗ್ರೆಸ್ ಇನ್ ಶಾರ್ಟ್ ಟರ್ಮ ಎಎಪಿ ಇನ್ ಲಾಂಗ್ ಟರ್ಮ. ಬಿಜೆಪಿ ನೆವರ್ ಎವರ್.” ಇದು ಪ್ರಗತಿಪರರ ಬೀಜಮಂತ್ರವಾದಾಗ ಮಾತ್ರ ನಮ್ಮ ನಾಡಿನ ಶೋಷಿತರಿಗೆ ಮಹಿಳೆಯರಿಗೆ ಅಲ್ಪಸಂಖ್ಯಾತರಿಗೆ ದಲಿತರಿಗೆ ಬಡವರಿಗೆ ಭವಿಷ್ಯದ ಬಗ್ಗೆ ಆಶಾವಾದ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
[[ ನಮ್ಮ ಕೃಷ್ಣಪ್ಪ ಸರ್ ಅವರು ಈ ಹಿಂದೆ ಅಭಿಪ್ರಾಯ ಪಟ್ಟ ಹಾಗೆ]]
ಯಾರಿವರು ಕೃಷ್ಣಪ್ಪ? ಅವರಿಗೂ ಈ ಚರ್ಚೆಗೂ ಏನು ಸಂಬಂಧ?
ಅವರಿಗೆ ನೀವು “ಮುಖವಾಣಿ”ಯೋ ಅಥವಾ “ಕಾರ್ಯದರ್ಶಿ”ಯೋ ಆಗಿರುವಿರಾ?
ಅಥವಾ ಕೃಷ್ಣಪ್ಪನವರಿಗೆ ಬರೆಯಲು ಬರುವುದಿಲ್ಲವೇ?
ಅವರ ಅಭಿಪ್ರಾಯವನ್ನು ಅವರೇ ತಿಳಿಸಬಹುದಲ್ಲಾ?
[[ದೇಶದ ಪ್ರಗತಿಪರರು ಕೋಮುವಾದಿ ಶಕ್ತಿಗಳನ್ನು ಹೊಡೆದೋಡಿಸಲು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ.]]
ಶೇಟ್ಕರ್ ಅವರೇ,
ದಯವಿಟ್ಟು ನನ್ನ ಈ ಕೆಳಗಿನ ಸಂದೇಹಗಳನ್ನು ಪರಿಹರಿಸಿ:
೧. ಕೋಮುವಾದ ಎಂದರೇನು?
೨. ಕೋಮುವಾದಿಗಳು ಯಾರು?
೩. ಕಾಂಗ್ರೆಸ್^ನವರು ಏಕೆ ಕೋಮುವಾದಿಗಳಲ್ಲ?
೪. ಎಎಪಿ ಪಕ್ಷದವರು ಏಕೆ ಕೋಮುವಾದಿಗಳಲ್ಲ?
೫. ಎಎಪಿ ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಕೋಮುವಾದ ಹೇಗೆ ದೂರಾಗುತ್ತದೆ?
೬. ಪ್ರಗತಿಪರರು ಎಂದರೆ ಯಾರು?
೭. ಅವರು ತಮ್ಮ ಸ್ವಂತದ ಪ್ರಗತಿಯಲ್ಲದೆ ಮತ್ಯಾರ ಪ್ರಗತಿ ಮಾಡಿದ್ದಾರೆ?
೮. ಅವರು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ “ಪ್ರಗತಿ”ಗೂ ಮತ್ತು ನಿಘಂಟಿನಲ್ಲಿರುವ ಅದೇ ಅಕ್ಷರಗಳ ಪದಕ್ಕೂ ಏನಾದರೂ ಸಂಬಂಧವಿದೆಯೇ?
ಅಥವಾ ಅದೂ ಕೂಡಾ “ಕುಬೇರ ಎನ್ನುವ ಭಿಕ್ಷುಕ”ನಂತೆ ಕೇವಲ ಹೆಸರಿಗೆ ಮಾತ್ರವೇ?
೧. ಕೋಮುವಾದ ಎಂದರೇನು?
೨. ಕೋಮುವಾದಿಗಳು ಯಾರು?
೩. ಕಾಂಗ್ರೆಸ್^ನವರು ಏಕೆ ಕೋಮುವಾದಿಗಳಲ್ಲ?
೪. ಎಎಪಿ ಪಕ್ಷದವರು ಏಕೆ ಕೋಮುವಾದಿಗಳಲ್ಲ?
೫. ಎಎಪಿ ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಕೋಮುವಾದ ಹೇಗೆ ದೂರಾಗುತ್ತದೆ?
೬. ಪ್ರಗತಿಪರರು ಎಂದರೆ ಯಾರು?
೭. ಅವರು ತಮ್ಮ ಸ್ವಂತದ ಪ್ರಗತಿಯಲ್ಲದೆ ಮತ್ಯಾರ ಪ್ರಗತಿ ಮಾಡಿದ್ದಾರೆ?
೮. ಅವರು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ “ಪ್ರಗತಿ”ಗೂ ಮತ್ತು ನಿಘಂಟಿನಲ್ಲಿರುವ ಅದೇ ಅಕ್ಷರಗಳ ಪದಕ್ಕೂ ಏನಾದರೂ ಸಂಬಂಧವಿದೆಯೇ?
ಅಥವಾ ಅದೂ ಕೂಡಾ “ಕುಬೇರ ಎನ್ನುವ ಭಿಕ್ಷುಕ”ನಂತೆ ಕೇವಲ ಹೆಸರಿಗೆ ಮಾತ್ರವೇ? ಶೆಟ್ಕರ ಅವರೆ ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವಿಲ್ಲ ಇನ್ನೊಂದೆಡೆಗೆ ಔರಂಗಜೇಬನ ಕುರಿತ ಪ್ರಶ್ನೆಗೂ ಉತ್ತರಿಸಿಲ್ಲ?? ಏಕೆ??
[[ಶೆಟ್ಕರ ಅವರೆ ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವಿಲ್ಲ ಇನ್ನೊಂದೆಡೆಗೆ ಔರಂಗಜೇಬನ ಕುರಿತ ಪ್ರಶ್ನೆಗೂ ಉತ್ತರಿಸಿಲ್ಲ?? ಏಕೆ?]]
ಅವರಿಗೆ ಅರ್ಥಪೂರ್ಣ ಚರ್ಚೆಯಲ್ಲಿ ನಂಬಿಕೆಯಿಲ್ಲ. ಏನಿದ್ದರೂ ಚರ್ಚೆಯನ್ನು ಹಳ್ಳಹಿಡಿಸುವುದರಲ್ಲೇ ಆನಂದ.
ಅದ್ಯಾಕೆ ಅವರು ಹಳ್ಳದಲ್ಲಿರುತ್ತಾರೋ, ಎಲ್ಲರನ್ನೂ ಅಲ್ಲಿಗೇ ಏಕೆ ಎಳೆದುಕೊಳ್ಳುತ್ತಾರೋ, ಅವರಿಗೇ ಗೊತ್ತಿರಬೇಕು!
ಉತ್ತರ ಕೊಡದೇ ನಿರ್ವಾಹವಿಲ್ಲ ಎನ್ನಿಸಿಬಿಟ್ಟಾಗ “Fake Id” ನಾಟಕ ಪ್ರಾರಂಭವಾಗಿಬಿಡುತ್ತದೆ! 😉
ಮೇಲಿನ ಲೇಖನದಲ್ಲಿ ಬದಲಾವಣೆ ಎಂದು ಬಂದ ಎಲ್ಲಾ ರಾಜಕೀಯ ಪಕ್ಷಗಳನ್ನೂ ಒಂದೇ ರೀತಿ ನೋಡಿದ್ದೀರಿ; ಅದರಲ್ಲಿ ಎಎಪಿಯೂ ಹೊರತಾಗಿಲ್ಲ. ಅಣ್ಣಾ ಹೋರಾಟದಂತಹ ಬಹುದೊಡ್ಡ ಹೋರಾಟವನ್ನು ದೆಹಲಿಯಂತಹ ನಗರ ಕೇಂದ್ರಿತ 72 ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ 28 ಸ್ಥಾನಗಳನ್ನು ಗೆದ್ದಿದ್ದು ದೊಡ್ಡ ಸಾಧನೆ ಎಂದೆನಿಸಲಿಲ್ಲ! ಕಾಂಗ್ರೆಸ್ ಮತಗಳು ಎಎಪಿಯ ಕಡೆಗೆ ತಿರುಗಿವೆ ಅಷ್ಟೇ. ಎಕೆ ಮತ್ತೆ ಆತುರಕ್ಕೆ ಬೀಳುತ್ತಿರುವಂತಿದೆ, ಇತ್ತೀಚಿನ ಆಪ್ ನ ನಿರ್ಧಾರಗಳು. ವಿಧಾನಸಭಾ ಕ್ಷೇತ್ರವನ್ನು ಸುತ್ತಿದಂತಲ್ಲ ಲೋಕಸಭಾ ಕ್ಷೇತ್ರವನ್ನು ಸುತ್ತುವುದು. ಇತ್ತೀಚೆಗೆ ಒಂದು ವಿಷಯ ಹರಿದಾಡ್ತಿದೆ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಮೋದಿ ಹಾಗೆ ಎಕೆ ಇರೋದು. ಎಕೆ ಹೆಸರು ಯಾವ ಆಧಾರದಲ್ಲಿ ಪ್ರಧಾನಿ ಅಭ್ಯರ್ಥಿ ಲಿಸ್ಟ್ ನಲ್ಲಿ ಸೇರಿಸುತ್ತಿದ್ದಾರೋ ದೇಬರೆ ಬಲ್ಲ! ದೆಹಲಿ ಸಿಎಂ ಆಗಿಯೇ ಇನ್ನೂ ಸರಿಯಾದ ಆಡಳಿತ ನೀಡಿಲ್ಲ. ಆಗಲೇ ಮೋದಿಗೆ ಸಮ ಎನ್ನುತ್ತಿದ್ದಾರೆ.
ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ಆಪ್ ಗೆ ರಾಕೇಶ್ ಅವರ ಲೇಖನ ಕನ್ನಡಿ ಹಿಡಿದಂತಿದೆ.
AAP is the need of hour in karnataka…we have seen enough of drama of BJP/Congress…No improvements in karnataka…unlimitted scams…if you want real development pls vote AAP…It gives you power in the form of Swaraj…see how Delhi will improve…now in Delhi…auto and food prices have been reducing since these ppl stopped paying Hafta…All media and parties are afraid on AAP..They are not projecting the truth because media is owned by political parties…jon twitter and fb…to know truth…http://www.aamaadmiparty.org/
ರವಿ ಸರ್, ಕೇಜ್ರಿವಾಲು ಮೊದಲು ದೆಹಲಿಯಲ್ಲಿ ಸಾಧಿಸಿ ತೋರಿಸಿಬೇಕಿದೆ.ಆಮೇಲೆ ದೇಶದ ಬಗ್ಗೆ ಮಾತನಾಡುವುದು ಒಳ್ಳೆಯ ನಡೆಯಾಗುತ್ತದೆ.ಮುಖ್ಯಮಂತ್ರಿಯೊಬ್ಬರು ಧರಣಿ ಕೂರುವುದು ಸರಿಯಲ್ಲ.ಇಂತ ಬಾಲಿಶ ವರ್ತನೆಯನ್ನು ಖಂಡಿಸುವ ಅಗತ್ಯವಿದೆ