ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 20, 2013

ವಿಡಂಬನೆ:ಪೊರೆ ಪೊರೆ ಪೊರಕೆ..!

‍ನಿಲುಮೆ ಮೂಲಕ

–  ತುರುವೇಕೆರೆ ಪ್ರಸಾದ್

ಪೊರಕೆದೆಹಲಿಲಿ ಆಮ್ ಆದ್ಮಿ ಪಕ್ಷ ‘ಹಾಥ್ ಕಾ ಸಫಾಯಾ’ ಮಾಡಾದ ಮೇಲೆ ದೇಶದ ಎಲ್ಲಾ ಪಕ್ಷಗಳನ್ನೂ ಗುಡಿಸಿ ಗುಂಡಾಂತರ ಮಾಡುತ್ತೆ ಅನ್ನೋ ಹಸಿ ಬಿಸಿ ಸುದ್ದಿ ಹಿನ್ನಲೆಯಲ್ಲಿ ಧೂಮಕೇತು ಸಂಪಾದಕ ಪರ್ಮೇಶಿ ಕನ್ನಡ ನಾಡಿನ ಖ್ಯಾತ ನಾಮರು ಹಾಗೂ ಆಮ್ ಆದ್ಮಿಗಳಿಗೆ ಕೇಜ್ರಿವಾಲ್, ಅವರ ಪೊರಕೆ ಗೊತ್ತಾ? ಪೊರಕೆ ಎಫೆಕ್ಟ್  ಸಿಕ್ಕಾಪಟ್ಟೆ ಡ್ಯಾಮೇಜ್ ಮಾಡಿದೆ ಅಲ್ವಾ? ಕರ್ನಾಟಕದಲ್ಲೂ ಜನ ಪೊರಕೆ ಹಿಡ್ಕಂಡ್ರೆ ಏನ್ಮಾಡ್ತೀರ? ಇತ್ಯಾದಿ ಪ್ರಶ್ನೆಹಾಕಿ ಮಾಡಿದ ಸಂದರ್ಶನದ ಗಿಳಿಪಾಠ ಇಲ್ಲಿದೆ.

ಮುದ್ದುರಾಮಯ್ಯ: ಕ್ರೇಜಿ ಪೊರಕೆಗೆ ನೋ ಛಾನ್ಸ್! ನಮ್ಮನೆ ಕಸ ನಾವೇ ಗುಡಿಸ್ಕಂಡ್ರೆ ಬೇರೆಯವರು ಪರಕೆ ಹಿಡ್ಕಂಡು ಅಲ್ಲಾಡಿಸೋ ಛಾನ್ಸೇ ಇರಲ್ಲ..ನಾನು  ಮೊದ್ಲೇ ಎಲ್ಲ ಕಾಂಗ್ರೆಸ್ ಕಳೆ ಬೆಳೀದಂಗೆ ಔಷ್ಧಿ ಹೊಡ್ದಿದ್ದೆ. ಎಲ್ಲೋ ಒಂದು ಸೇರ್ಕಂಡು ಬಿಟ್ಟಿತ್ತು.ಅದ್ನೂ ಗುಡಿಸಿ ಕ್ಲೀನ್ ಮಾಡಿದೀನಿ. ಮೊನ್ನೆ ಮೊನ್ನೆ ಇನ್ನೂ ಅಲ್ಲಾಡ್ತಿದ್ ಕೂಳೆನೂ ಕಿತ್ ಎಸ್ದಿದೀನಿ..! ದೊಡ್ ಮಠದೋರಿಗೆ ಎಲ್ಲಾ ಗುಡಿಸಿ ಹಾಕೋ ಕಾಂಟ್ರಾಕ್ಟ್ ಕೊಟ್ಟಿದೀನಿ. ಇಷ್ಟಕ್ಕೂ ನಮ್ದು ಹೈಟೆಕ್ ರಾಜ್ಯ..! ಪೊರಕೆ, ಗಿರಕೆ ಎಲ್ಲಾ ನಮ್ ಹತ್ರ ನಡೆಯಲ್ಲ..ನಮ್ದೇನಿದ್ರೂ ವಾಕ್ಯೂಮ್ ಕ್ಲೀನರ್ ಸಂಸ್ಕೃತಿ..! ಹಾಗೂ ಬೇಕು ಅಂದ್ರೆ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದೀ ಭಾಗ್ಯದ ತರ ಪೊರಕೆ ಭಾಗ್ಯ ಅಂತ ಮನೆ ಮನೆಗೆ ಇಂಪೋರ್ಟೆಡ್ ಪೊರಕೆ ಸಪ್ಲೈ ಮಾಡ್ತೀವಿ..ನಾವು ಪೊರಕೆ ಹಿಡಿಯೋ ಹೆಣ್ ಮಗಳು ಹೇಳ್ದಂಗೆ ಕೇಳ್ಕಂಡಿರೋ ಮಂದಿ..ಏನೋ ಆ ಶೀಲಮ್ಮ, ಸ್ವಲ್ಪ ಏಮಾರುದ್ರು ಅಂದ್ರೆ ನಾವೂ ಏಮಾರ್ತೀವಾ ?’ಕೈಯ್ಯೇ’ಇಲ್ಲದೆ ಪೊರಕೆ ಹಿಡಿಯೋದು ಹೆಂಗೆ? ಇವತ್ತಲ್ಲ ನಾಳೆ ಆ ಪೊರಕೆನ ನಾವು ಹಿಡ್ಕೊತೀವಿ ಅನ್ನೋ ನಂಬಿಕೆ ನನಗಿದೆ..

ಜೋಕು ಮಾರ್ಸ್ವಾಮಿ: ಒಳ್ಳೇ ತಮಾಷೆ ಮಾಡ್ತೀರಲ್ಲಪ್ಪ ನೀವು..! ನಂಗೆ ಬೀಚಿ ಜೋಕ್ ಜ್ಞಾಪಕಕ್ಕೆ ಬರುತ್ತೆ.ತಿಂಮ ಗುರುಗಳ ಮನೆಗೆ ಡಿಕ್ಷನರಿ ಕೇಳಕ್ಕೆ ಹೋದ್ನಂತೆ.ಗುರುಗಳು ಇಲ್ಲೇ ಉಪಯೋಗಿಸಿ ಇಟ್ಟು ಹೋಗು ಅಂದ್ರಂತೆ..ಮಾರ್ನೇ ದಿನ ಗುರುಗಳು ತಿಂಮನ ಮನೆಗೆ ಹೋಗಿ ಸ್ವಲ್ಪ ಪೊರಕೆ ಕೊಡು ಅಂದ್ರಂತೆ..ಅದಕ್ಕೆ ತಿಂಮ ಇಲ್ಲೇ ಉಪಯೋಗಿಸಿ ಇಟ್ಟು ಹೋಗಿ ಅಂದ್ನಂತೆ..! ಅಷ್ಟು ಬುದ್ದಿವಂತರು ನಾವು..!ನಮ್ ತಾತನ್ ಕಾಲದ ಪೊರಕೆ ನಮ್ ಹತ್ರ ಇರುತ್ತೆ? ಯಾರೋ ಪೊರಕೆವಾಲಾ ಇಲ್ಲಿಗೆ ಬಂದು ಪೊರಕೆ ಸೇಲ್ ಮಾಡೋದೇನಿದೆ? ಆ ಪೊರಕೆವಾಲಾ ಇಲ್ಲಿಗೆ ಬರೋಕೆ ಮುಂಚೆ ನಾನು ಕೇಳ್ತೀನಿ, ಇವರಿಗೆ 19 ಕೋಟಿ ರೂಪಾಯಿ ಎಲ್ಲಿಂದ ಬಂತು? ಗುಡುಸ್ತೀವಿ ಗುಡುಸ್ತೀವಿ ಅಂತ ದುಡ್ಡು ಗುಡ್ಡೆ ಹಾಕ್ಕಂಡಿದಾರಲ್ಲ..ಇದ್ರ ಬಗ್ಗೆ ತನಿಖೆ ಆಗಬೇಕು..ಇಷ್ಟಕ್ಕೂ ನಮ್ದು ಹೊರೆ ಹೊತ್ತ ಮಹಿಳೆ ಸಿಂಬಲ್ಲು..ಹೊರೆಲಿ ಏನಿದೆ ಅಂದ್ಕೊಂಡಿದೀರಿ..ಅಕ್ಕು ಹುಲ್ಲು..ಕಾಡು ಹಂಚಿ ಹುಲ್ಲು..ಅದರಲ್ಲೇ ಸ್ವಾಮಿ ಪೊರಕೆ ಮಾಡೋದು..! ಪೊರಕೆ ಅಂದ್ರೆ ಬೆಚ್ಚಿ ಬೀಳಬೇಕಾದೋರು ಕೈನೋರು..ನಮ್ಗೇನು ಹೆದರ್ಕೆ? ಹಂಚಿಕಡ್ಡಿ, ಈಚಲು, ತೆಂಗಿನಕಡ್ಡಿ ಪೊರಕೆ ಕಸಿ ಮಾಡಿ ಒಂದು ಬೆರಕೆ ಪೊರಕೆ ಮಾಡಿ ಎಲ್ಲಾ ಪಕ್ಷಗಳನ್ನ ಪೂರಾ ಗುಡಿಸಿ ಹಾಕ್ತೀವಿ ನೋಡ್ತಿರಿ..

ಉಸ್ ವರಪ್ಪ: ನೋಡಿ ನಾವು ಈಗಾಗ್ಲೇ ನಮ್ ಪಕ್ಷದಿಂದ ಬರೀ ಕಸ ಮಾತ್ರ ಅಲ್ಲ,  ಗುಡಿಸಿ ಗುಡಿಸಿ ಕಸ ಕಟ್ಕಂಡಿದ್ದ ಹಳೇ ಪೊರಕೆಗಳನ್ನೂ ಎತ್ತಿ ಎಸ್ದಿದೀವಿ.ನಾವು ಮೊದ್ಲಿಂದನೂ ನಮ್ ಕಸ ನಾವೇ ಹೊಡ್ಕಂಡು ಬಂದೋರು. ಅಂದು ಗಾಂಧಿ ಫಾಲೋಯರ್ಸ್.. ಈಗ ಮೋದಿ ಫಾಲೋಯರ್ಸ್! ರಂಗೀಲಾ ಸ್ವಯಂ ಸ್ವೀಪರ್ಸ್ ನಮ್ ಮಾತೃಸಂಘ, ಹಾಗಾಗಿ ಯಾರೋ ಬಂದು ಇಲ್ಲಿ ಕಸ ಗುಡ್ಸೋ ಅಗತ್ಯ ಇಲ್ಲ. ಇಷ್ಟಕ್ಕೂ ನಮ್ಮಲ್ಲಿ ಸುಕುಮಾರ್ ಸೊರಕೆ ಇದಾರಲ್ಲ..ಅವರ ಅಧ್ಯಕ್ಷತೆಯಲ್ಲಿ ನಾವು ಪೊರಕೆ ಸಮನ್ವಯ ಸಮಿತಿ ಮಾಡಿ ಇದರ ಸಾಧಕ ಬಾಧಕಗಳನ್ನು  ಪರಿಶೀಲಿಸ್ತೀವಿ.

ಜಡೆಯಪ್ಪ: ರೀ! ನಾನು ಕಸದ ಗುಡ್ಡೆಯಿಂದೆದ್ದು ಬಂದ ಫೀನಿಕ್ಸ್ ಪಕ್ಷಿ ಇದ್ದ ಹಾಗೆ..! ನಮ್ಗೆ ಪೊರಕೆನೂ ಬೇಕು, ಜನರ ಹರಕೆನೂ ಬೇಕು..ಈ ಹಳೇ ಕಸನೆಲ್ಲಾ ಗುಡ್ಸಿ ಗುಂಡಿಗೆ ಹಾಕಬೇಕು ಅಂದ್ರೆ ಹೊಸ ಹೊಸ ಪರಕೆಗಳು ಬೇಕೇ ಬೇಕು.ಎಲ್ಲಾ ಪಕ್ಷಗಳೂ ಜನರ ‘ಧಮ್ ಅದುಮಿ ‘ ಪಕ್ಷಗಳಾಗಿವೆ. ಹಾಗಾಗಿ ಜನ ಮತ್ತೆ ಸಿಡಿದೇಳಬೇಕು ಅಂದ್ರೆ ಅವರ ಕೈಗೆ ಪೊರಕೆ ಕೊಡಬೇಕು.  ನಾವು ಜನಕ್ಕೆ ಭಾಗ್ಯಲಕ್ಷ್ಮಿ ಬಾಂಡ್  ಕೊಟ್ಟ ತರ  ಮುದ್ದುರಾಮಯ್ಯ ಸರ್ಕಾರ ಪೊರಕೆ ಬಾಂಡ್ ಕೊಡಬೇಕು. ನಾವು  ಎನ್‍ಡಿಎ ಜೊತೆ ಅಲಯನ್ಸ್‍ಗೆ ಅರ್ಜಿ ಹಾಕ್ಕಂಡಿದೀವಿ.ಅದು ಗಿಟ್ಟಲಿಲ್ಲ ಅಂದ್ರೆ ಪೊರಕೆವಾಲಾ ಜೊತೆ ಅಲಯನ್ಸ್ ಮಾಡ್ಕೊತೀವಿ..ನಮ್ ‘ಶೀಬಾ ಖಾಯಂರಜೆ’ ಹೊಸ ಪೊರಕೆ ಚಳುವಳಿ ರೂಪಿಸ್ತಿದಾರೆ..ಆದ್ರೂ ಒಂದು ಆಫ್ ರೆಕಾರ್ಡ್ ವಿಷಯ ಇದೆ. ಗುಟ್ಟಾಗಿಟ್ಕೊಳಿ..ಈ ಪೊರಕೆ ಅಂದ್ರೆ ಧೂಮಕೇತು ಇದ್ದ ಹಾಗೆ..ಅದು ಬಂದ್ರೆ ಕೆಟ್ಟ ಕಾಲ ಶುರುವಾಯ್ತು ಅಂತ..ಅದಕ್ಕೇ ಎಲ್ಲಾ ಮಠಗಳಲ್ಲಿ, ಗುಡಿಗಳಲ್ಲಿ ಪೊರಕೆ ಶಾಂತಿ ಹೋಮ ಮಾಡಿಸೋಕೆ ನಮ್ ಕಿಂದರಿಜೋಗಿ ಪಕ್ಷದಿಂದ ತೀರ್ಮಾನ ಮಾಡಿದೀವಿ..

ಸರ್ವಾನಂದ ಸ್ವಾಮೀಜಿ: ಯಾರು ನಿಮಗೆ ಹೇಳಿದ್ದು ಪೊರಕೆ ಅಶುಭ ಅಂತ. ಪೊರಕೆ ಅಂದ್ರೆ ಲಕ್ಷ್ಮಿ ಇದ್ದ ಹಾಗೆ..! ಆದ್ರೂ ಎಲ್ಲಾ ಕಡೆ ಪೊರಕೆ ಅಂದ್ರೆ ಭಯ ಶುರುವಾಗಿದೆ. ಅದಕ್ಕೇ ನಾವು ನಮ್ ಮಠದಲ್ಲಿ ಕೋಟಿ ಪೊರಕೆ ಪೂಜೆ ಅನ್ನೋ ಒಂದು ವಿಶೇಷ ವ್ರತ ಮಾಡೋ ಸಂಕಲ್ಪ ಮಾಡಿದೀವಿ. ಹಾಗೇ ಒಂದು ಮಹಾ ಪೊರಕೆ ಯಜ್ಞ ಮಾಡ್ತೀವಿ. ಈ ಯಜ್ಞಕ್ಕೆ ನಾಡಿನ ಮೂಲೆ ಮೂಲೆಗಳಿಂದ ಜನ ಪೊರಕೆ ತಂದು ಕೊಡಬಹುದು. ಎಲ್ಲಾ ಪೊರಕೆನೂ ಪೂರ್ಣಾಹುತಿಗೆ ಹಾಕಿ ಭಸ್ಮನ ಹಣೆಗೆ ಹಚ್ಕೊಂಡ್ರೆ ಪೊರಕೆ ಕಂಡ್ರೆ ಹೆದರೋದು,ಬೆಚ್ಚಿ ಬೀಳೋದು ತಪ್ಪುತ್ತೆ..ನಮ್ ರಾಜಕೀಯದೋರು ಈ ಪೊರಕೆ ಯಾಗದಲ್ಲಿ ಪಾಲ್ಗೊಳ್ಳೋದು ಬಿಡೋದು ಅವರಿಗೇ ಬಿಟ್ಟಿದ್ದು..

ಸ್ವಾನ್ರಾಜ್: ನೋಡಿ ನಾನು ಕರ್ನಾಟಕಕ್ಕೆ ಬಂದ ಮೇಲೆ ಇಲ್ಲಿ ಕಸ ಜಾಸ್ತಿ ಆಗೋಗಿದೆ. ಬೆಂಗಳೂರಂತೂ ಗಬ್ಬೆದ್ದು ಹೋಗಿದೆ.ಈ ಕಸದ ವಿಲೇವಾರಿ ಮಾಡೋದೇ ಒಂದು ದೊಡ್ಡ ಪ್ರಾಬ್ಲಂ ಆಗೋಗಿದೆ. ನಾನೂ ಹಿಂದೊಂದ್ಸಾರಿ ಪೊರಕೆ ಕೈಗೆ ತಗೊತೀನಿ ಅಂತ ಹೇಳಿದ್ದೆ. ಆಮೇಲೆ ಮನೇಲಿ ದಿನಾ ಕಸ ಗುಡಿಸ್ಬೇಕಾಗುತ್ತೆ ಅಂತ ಭಯ ಆಗಿ ಸುಮ್ನಾದೆ..ನೀವು ಮೀಡಿಯೋದೋರು ಅದನ್ನೇ ಒಂದು ದೊಡ್ಡ ಸುದ್ದಿ ಮಾಡಿದ್ರಿ..ಬಿಜೆಪಿಯೋರು ಲೋಕಾಯುಕ್ತ ಅನ್ನೋ ಪೊರಕೆ ತೆಗೆದು ಹಾಕಿ ವಿಪರೀತ ಕಸಮಾಡ್ಕಂಡಿದ್ರು..ಆದ್ರೆ ಎಲ್ಲ ಕ್ಲೀನ್ ಮಾಡೋಕೆ ಡೆಲ್ಲಿ ಪೊರಕೇನೇ ಬೇಕು ಅಂತ ಏನಿಲ್ಲ..ಲೋಕಲ್‍ನಲ್ಲಿ ಖುಷಿ ಬ್ರಾಂಡ್ , ಬಿಗ್‍ಮಠ ಬ್ರಾಂಡ್ ಪೊರಕೆಗಳೇ ಆಗುತ್ವೆ.

ಬುಸ್ರಾಜ್ :   ನಾನಂತೂ ಅದೆಷ್ಟು ಬಾರಿ ಪೊರಕೆ ಹಿಡಿದು ಚಳುವಳಿ ಮಾಡಿದೀನೋ ಆ ದೇವರಿಗೇ ಗೊತ್ತು…ಆದ್ರೂ ಕಸ ಕ್ಲೀನಾಗ್ತಿಲ್ಲ..ಕ್ಲೀನ್ ಮಾಡೊ ಪೊರಕೆನೇ ತಿನ್ನೋ ಭಾರಿ ಹೆಗ್ಗಣಗಳು ಸೇರ್ಕಂಡಿವೆ..ಅದಕ್ಕೇ ನಾನು ಕತ್ತೆ ಮುಂದೆ ಪೊರಕೆ ಕಟ್ಟಿ ಹೊಸ ಚಳುವಳಿ ಮಾಡಬೇಕು ಅಂತಿದೀನಿ.  ನಮ್ಮಲ್ಲಿ ಕಸ ಹೊಡೆಯೋಕೆ ಪೊರಕೆ ಒಂದೇ ಸಾಕಾಗಲ್ಲ.. ಈ ಕಡೆಯಿಂದ ಕಸ ಹೊಡುದ್ರೆ ಆ ಕಡೆಯಿಂದ ಕಸ ಹಾಕ್ಕಂಡು ಬರ್ತಾರೆ..ಅದಕ್ಕೇ ನಾವು ಪೊರಕೆ ಜೊತೆಗೆ  ಪಿಕಾಸಿ, ಉಗಿಯೋ ತೂಕುದಾನಿ, ತೊಳೆಯೋ ಬ್ರಶ್ಶು ಎಲ್ಲಾ ಜನದ ಕೈಗೆ ಕೊಡೋಣ ಅಂದ್ಕೊಂಡಿದೀನಿ.. ಎಲ್ಲಕ್ಕಿಂತ ಮುಖ್ಯ ಕಸ ಹೊತ್ತಾಕೋಕೆ ಒಂದು ಸಕತ್ ಬಾಂಡ್ಲಿ ಬೇಕು..

ಕೆಟ್ಟೆಮುತ್ಯಾ : ನಾನು ಮೇಯೋರ್ ಆಗಿದ್ದಾಗ ಒಂದ್ಸಾರಿ ಬೆಂಗಳೂರಿನ ತಿಪ್ಪೆ ನೋಡ್ಲಾರದೆ ಪೊರಕೆ ಹಿಡ್ಕಂಡು ಕಸ ಗುಡಿಸಿದ್ದೆ,. ಅದೇ ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪಾಗೋಯ್ತು.ಎಲ್ಲಿ ಹೋದ್ರೂ ಸಂಘಟನೆಯೋರು ನನ್ ಮುಂದೆ ಒಂದು ಪೊರಕೆ ಹಾಕಿ ಮುಸಿ ಮುಸಿ ನಗ್ತಾರೆ..ನಂಗೆ ಪೊರಕೆ ಮುತ್ಯಾ ಅನ್ನೋ ಅಡ್ ಹೆಸ್ರು ಕಟ್ಟಿದಾರೆ..ಅವಾಗಿಂದ ಮನೇಲೂ ಕಮಕ್ ಗಿಮಕ್ ಅನ್ದೆ ಕಸ ಗುಡಿಸೋ ಹಾಗಾಗೋಗಿದೆ..

ಆಮ್ ಆದ್ಮಿ: ಏನಂದ್ರಿ? ಕೇಜ್ರಿವಾಲಾ ಪೊರಕೆ ಪಕ್ಷ ಅಷ್ಟೊಂದು ಎಫೆಕ್ಟ್ ಮಾಡಿದೆಯಾ? ಏನೋ ಅದನ್ನೆಲ್ಲಾ ಕೇಳೋಕೆ ಯಾರಿಗೆ ಪುರಸೊತ್ತಿದೆ? ಪೊರಕೆ ಕೊಳ್ಳೋಕೆ ತಾನೇ ದುಡ್ಡೆಲ್ಲಿದೆ? ಒಂದೊಂದು ಮಂಕಿ ಬ್ರಾಂಡ್ ಪೊರಕೆ ರೇಟು 90-100 ರೂಪಾಯಿ. ನಾವು ಎಲ್ಲಿಂದ ಪೊರಕೆ ತಗಳ್ಳೋದು? ಸರ್ಕಾರ ಪೊರಕೆಗೂ ಸಬ್ಸಿಡಿ ಕೊಡಬೇಕು.

ಪೊರ್ಕಿ ಶಿವ: ನೋಡಿ ನಮ್ಗೆ ಈ ಕೇಜ್ರಿವಾಲಾ ಯಾರೂ ಅಂತಾನೇ ಗೊತ್ತಿಲ್ಲ. ‘ಕ್ರೇಜಿ ಕಿಯಾರೆ’ಗೆ ಡ್ಯಾನ್ಸ್ ಮಾಡಿರೋ ಐಶ್ವರ್ಯ ರೈ ಗೊತ್ತು, ಪೊರ್ಕಿ ಸಿನಿಮಾ ಗೊತ್ತು. ಪೊರಕೆನ ನಾವು ಮನೇಲೆಲ್ಲೂ ನೋಡಿಲ್ಲಪ್ಪ..ಹೋಟ್ಲಲ್ಲಿ ಮಸಾಲೆ ದೋಸೆ ಹಾಕಕ್ಕೆ ಮುಂಚೆ ಕಾವಲಿನ ಬಳೀತಾರಲ್ಲ ಅದನ್ನೇ ತಾನೇ ನೀವು ಪೊರಕೆ ಅಂತಿರೋದು..! ಹಂಗೆ ಅದರಲ್ಲಿ ನೀರು ಹೊಡುದ್ರೇ ಮಸಾಲೆ ರುಚಿ ಬರೋದು..ಬರಲಿ..ಬರಲಿ ಸಾವಿರ ಪೊರಕೆ..ನಾವು ಹೊಡೆಯೋದು ಬಿಡಲ್ಲ ಗೊರಕೆ..!

 ಚಿತ್ರ ಕೃಪೆ : http://www.ablble.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments