ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 25, 2013

13

ಆಪ್ ಎಂಬ ನೀರಮೇಲಣ ಗುಳ್ಳೆ …

‍ನಿಲುಮೆ ಮೂಲಕ

– ಅವಿನಾಶ್ ಹೆಗ್ಡೆ

AAPಒಂದು ರಾಜಕೀಯ ಪಕ್ಷಕ್ಕೆ ಸೈದ್ದಾಂತಿಕ ಹಿನ್ನೆಲೆ ಇಲ್ಲದೆ ಇದ್ದರೆ, ಮತ್ತು ಸ್ಪಷ್ಟ ಗುರಿಯಿಲ್ಲದೆ ಇದ್ದರೆ ಏನಾಗಬಹುದು ಅನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಆಮ್ ಆದ್ಮಿ ಪಾರ್ಟಿ …. ಆಪ್ ರಾಜಕೀಯಕ್ಕೆ ಪ್ರವೇಶ ಕೊಡುತ್ತೇವೆ ಅಂದಾಗ ಅವರನ್ನ ಗಂಭೀರವಾಗಿ ಪರಿಗಣಿಸಿದವರ ಸಂಖ್ಯೆ ತುಂಬಾ ಕಡಿಮೆ.ಆದರೆ ದೆಹಲಿ ಚುನಾವಣಾ ಆಪ್ ಕಡೆ ದೇಶ ನೋಡುವಂತೆ ಮಾಡಿದ್ದು ಸುಳ್ಳಲ್ಲ ..

ಆದರೆ ಬಂಗಾಳದಲ್ಲಿ ೩೪ ವರ್ಷದ ಸರಕಾರವನ್ನ ಬೇರು ಸಮೇತ ಕಿತ್ತು ಹಾಕಿದ್ದ ಮಮತಾ ಬ್ಯಾನರ್ಜಿಗೆ ಕೂಡ ಕೊಡದ ಪ್ರಚಾರವನ್ನ ಮಾಧ್ಯಮಗಳು ಆಪ್ ಗೆ ಕೊಟ್ಟಿದ್ದವು ಮತ್ತು  ಅದರ ಹಿಂದೆ ಮಾದ್ಯಮಗಳ ಸ್ಪಷ್ಟ ಕಮ್ಯುನಿಸ್ಟ್ ಹಿತಾಸಕ್ತಿ ಇತ್ತು,ಬಿಜೆಪಿಯ ಗೆಲುವನ್ನ ಮರೆಮಾಚುವ ಉದ್ದೇಶ ಸ್ಪಷ್ಟವಾಗಿತ್ತು. ಲೋಕಪಾಲ್ ಚಳುವಳಿಯ ಹೋರಾಟವನ್ನ ಮತ್ತು ಅಣ್ಣ ಹಜಾರೆಯವರನ್ನ ಬಳಸಿಕೊಂಡಿದರ ಬಗ್ಗೆ ಮಾಧ್ಯಮಗಳು ಈ ಸಂದರ್ಭದಲ್ಲಿ ಯಾಕೆ ಕಣ್ಣು ಮುಚ್ಚಿಕೊಂಡವು ಅನ್ನುವುದು ಎಲ್ಲರಿಗು ಗೊತ್ತಿರುವಂತದೆ.ಇರಲಿ …..

ಚುನಾವಣೆಯ ನಂತರದ ಬೆಳವಣಿಗೆ ಗಮನಿಸಿದರೆ ಆಪ್ ಗೆ ಸರ್ಕಾರ ಮಾಡುವ ಯಾವ ಆಸಕ್ತಿ ಕೂಡ ಇದ್ದಂತೆ ಕಾಣಲಿಲ್ಲ, ನಿಜ ಹೇಳಬೇಕೆಂದರೆ ಸ್ವತಹ ಕೇಜ್ರಿವಾಲ್ ಅವರಿಗೆ ಆಪ್ ಇಷ್ಟೊಂದು ಸೀಟ್ ಗೆದ್ದು ಅಧಿಕಾರದ ಹೊಸ್ತಿಲಲ್ಲಿ ನಿಲ್ಲಿಸುತ್ತದೆ ಅನ್ನೋ ಕಲ್ಪನೆ ಇರಲಿಲ್ಲ ಅನ್ನಿಸುತ್ತದೆ. ಒಂದು ರಾಜಕೀಯ ಪಕ್ಷ ಸರ್ಕಾರವಾಗಿ ರೂಪಗೊಳ್ಳಲು ಬೇಕಾದ ಯಾವ ಸಿದ್ದತೆಯು ಆಪ್ ನಲ್ಲಿ ಇಲ್ಲ.ಗೆದ್ದ ನಂತರ ಹೇಳಿದ ಹೇಳಿಕೆ ನಾವು ಪ್ರತಿಪಕ್ಷದಲ್ಲಿ ಕೂರುತ್ತೇವೆ ಎಂದು, ಸರ್ಕಾರವೇ ಇಲ್ಲದ ಮೇಲೆ ಪ್ರತಿಪಕ್ಷ ಎಲ್ಲಿಂದ ಬರಬೇಕು ?

ಈಗ ಕಾಂಗ್ರೆಸ್ ನ ಬೇಷರತ್ ಬಾಹ್ಯ ಬೆಂಬಲದ ಭರವಸೆ ಪಡೆದಿರುವ ಆಪ್,ಸರ್ಕಾರ ರಚನೆಗೆ ಮೀನಾ ಮೇಷ ಎಣಿಸುತ್ತಿದೆ. ಸರ್ಕಾರ ರಚನೆ ಬೇಕೋ ಬೇಡವೋ ಅನ್ನೋ ಅಡ್ಡಕತ್ತರಿಯಲ್ಲಿ ಸಿಕ್ಕಿರುವ ಆಪ್ , ತನ್ನ ಅನುಭವ ಕೊರತೆಯನ್ನ ದೇಶಕ್ಕೆ ಪರಿಚಯಿಸುತ್ತಿದೆ, ಇಷ್ಟೇ ಅಲ್ಲದೆ ಸರ್ಕಾರ ರಚನೆ ಬಗ್ಗೆ ಅಭಿಪ್ರಾಯ ತಿಳಿಯಲು SMS ಅಭಿಯಾನ,ಕಾಂಗ್ರೆಸ್ಸ್,ಬಿಜೆಪಿ ಗೆ ೧೮ ಪ್ರಶ್ನೆಗಳು ಇಂತಹ ಅತಿರೇಕದ ವರ್ತನೆಗಳನ್ನ ಪ್ರದರ್ಶಿಸುತ್ತಿದೆ.ಇವೆಲ್ಲ ಒಂದು ರಾಜಕೀಯ ಪಕ್ಷಕ್ಕಿಂತ,ಸಾಮಾಜಿಕ ಸಂಘಟನೆಗಳು ಮಾಡಬಹುದಾದ ಕೆಲಸ.ಅದರಲ್ಲೂ ಬಿಜೆಪಿಗೆ ಯಾವ ಕಾರಣಕ್ಕೆ ೧೮ ಪ್ರಶ್ನೆ ಕೇಳಲಾಗಿತ್ತು.ಅನ್ನೋದು ಇವತ್ತು ಸ್ಪಷ್ಟವಾಗಿಲ್ಲ… ಬಿಜೆಪಿ ಏನು ಆಪ್ ಗೆ ಬಾಹ್ಯ ಬೆಂಬಲ ಕೊಡುತ್ತೇವೆ ಎಂದು ಹೇಳಿರಲಿಲ್ಲ.. ಆದರೂ ಬಿಜೆಪಿಗೆ ಪ್ರಶ್ನೆಗಳನ್ನ ಕಳಿಸಿ ತಾವು ಭಿನ್ನ ಎಂದು ತೋರಿಸುವ ಪ್ರಯತ್ನವನ್ನ ಕೇಜ್ರಿವಾಲ್  ಪಟ್ಟರು ಅನ್ನಿಸುತ್ತದೆ. ಆಪ್ ನ ಕೆಲವು ಪ್ರಶ್ನೆಗಳು ಎಷ್ಟು ಬಾಲಿಶ ಎಂದರೆ ಓದಿದ ಕಾಂಗ್ರೆಸ್,ಬಿಜೆಪಿ ನಾಯಕರು ಹೊಟ್ಟೆ ತುಂಬಾ ನಕ್ಕಿರಬಹುದು ….

ಇರಲಿ ಆಪ್ ನ ಕೆಲವು ಪ್ರಶ್ನೆಗಳ ಬಗ್ಗೆ ಚರ್ಚಿಸೋಣ

*೧.ಸರ್ಕಾರದ ಯಾರು ಕೂಡ ಕೆಂಪು ದೀಪದ ಗಾಡಿಗಳನ್ನ ಮತ್ತು ಐಶರಾಮಿ ಬಂಗಲೆಗಳನ್ನ ಉಪಯೋಗಿಸಬಾರದು* ,
ಇದನ್ನು ಯಾಕೆ ಪ್ರತಿಪಕ್ಷದವರಿಗೆ ಕೇಳಿದ್ದಾರೆ ಅನ್ನೋದೇ ಆಶ್ಚರ್ಯ ..? ತಾನು ರಚಿಸಲಿರುವ ಸರ್ಕಾರದ ಸದಸ್ಯರಿಗೆ ಹೇಳಿದ್ದರೆ ನಡೆಯುತ್ತಿತ್ತು ಅಲ್ಲವೇ ? ನೀವು ಕೆಂಪು ದೀಪದ ಕಾರಿನಲ್ಲೇ ಓಡಾಡಬೇಕು ಎಂದು ಕಾಂಗ್ರೆಸ್ ಆಗಲಿ ಬಿಜೆಪಿ ಆಗ್ರಹಿಸುತ್ತಿತ್ತೆ?

*೨.ಅಣ್ಣ ಹಜಾರೆ ಬಯಸಿದಂತಹ ಲೋಕಪಾಲ್ ಜಾರಿಯಾಗಬೇಕು** …*
ಈ ವಿಷಯದಲ್ಲಿ ಆಪ್ ಸರಿಯಾಗಿಯೇ ಸಿಕ್ಕಿ ಹಾಕಿಕೊಂಡಿದೆ,ಈಗ ಸರ್ಕಾರ ಮಂಡಿಸಿರುವ ಲೋಕಪಾಲ್ ವಿಧೇಯಕವನ್ನ ಅಣ್ಣಾ ಒಪ್ಪಿಕೊಂಡಿದ್ದಾರೆ.ಆದರೆ ಆಪ್ ಅದನ್ನ ವಿರೋದಿಸುತ್ತಿದೆ . ಅಲ್ಲಿಗೆ ತನ್ನ ಪ್ರಶ್ನೆಯನ್ನು ತಾನೇ ಕೇಳಿಕೊಳ್ಳಬೇಕಾದ ಸ್ತಿತಿಗೆ ಬಂದು ನಿಂತಿದೆ… ಇಲ್ಲಿ ಅಣ್ಣಾ ಹಜಾರೆ ಬಯಸಿದಂತಹ ಲೋಕಪಾಲ್ ಎಂದು ಪ್ರಶ್ನೆಯಲ್ಲಿ ನಮೂದಿಸುವ ದಡ್ಡತನ ತೋರಿಸಿದ್ದು ಅದಕ್ಕೆ ಮುಳುವಾಗಿದೆ … ಅದರಲ್ಲೂ ಆಪ್ ನ ಪ್ರಮುಖ ನಾಯಕ ಕುಮಾರ್ ವಿಶ್ವಾಸ್, ಸರ್ಕಾರದ ಲೋಕಪಾಲ್ ಒಪ್ಪಿಕೊಳ್ಳುವವರು “ಗದ್ದಾರ್” ಇದ್ದಂತೆ ಎಂದು ಪರೋಕ್ಷವಾಗಿ ಅಣ್ಣಾ ಅವರ ಮೇಲೆ ವಾಗ್ಧಾಳಿ
ಮಾಡಿದ್ದಾರೆ… ತಮಗೆ ಒಂದು ರಾಜಕೀಯ ನೆಲೆ ಕಲ್ಪಿಸಿ ಕೊಟ್ಟವರಿಗೆ ಆಪ್ ಕೊಡುತ್ತಿರುವ ಬೆಲೆ ಇದು.

*೩. ಸರ್ಕಾರದ ನಿರ್ಧಾರಗಳನ್ನ ಜನರೇ “ಮೊಹಲ್ಲ ಸಭಾ“ ಗಳಲ್ಲಿ ತೆಗೆದುಕೊಳ್ಳುತ್ತಾರೆ..ಸರ್ಕಾರ ದೆಹಲಿಯ ಎಲ್ಲ ಭಾಗದಲ್ಲೂ ಇಂತಹ ಸಭೆಗಳನ್ನ ನಡೆಸುತ್ತದೆ.*

ಒಂದು ದಿನದ ಮತದಾನ ಮಾಡಲು ಉದಾಸಿನ ತೋರಿಸುವ ನಮ್ಮ ಜನ ಇಂಥಹ ಸಭೆಗಳಲ್ಲಿ ಹೇಗೆ ಭಾಗವಿಸುತ್ತಾರೆ?ಅವರ ಅಭಿಪ್ರಾಯ ಕ್ರೋಡೀಕರಣ ಹೇಗೆ?ದಿನಕ್ಕೊಂದು ಚುನಾವಣೆ ನಡೆಸುತ್ತಾರ?ಜನಪ್ರತಿನಿಧಿಗಳ,ವಿಧಾನಸಭೆಗಳ ಉಪಯೋಗ ಆದರು ಏನು? ಅಂತ ಆಪ್ ತೀರ್ಮಾನಿಸಿದಂತೆ ಇಲ್ಲ…. ನೇರ ಪ್ರಜಾಪ್ರಭುತ್ವದ ಕಲ್ಪನೆ ಇಷ್ಟು ಹೇರಳ ಜನಸಂಖ್ಯೆಯ ದೇಶದಲ್ಲಿ ಸಾಧ್ಯವಾಗುವುದಿಲ್ಲ ಅನ್ನೋ ಕಲ್ಪನೆ ಕೂಡ ಆಪ್ ಗೆ ಇಲ್ಲ… ಇಷ್ಟಕ್ಕೂ ಇದರಿಂದ ಪ್ರತಿಪಕ್ಷಕ್ಕೆ ಆಗಬೇಕಾದದ್ದು ಏನು ಇಲ್ಲ … ಈ ಪ್ರಶ್ನೆ ಕೇಳಿದ್ದು ಕೂಡ ಕೇಳಿದ್ದು ಯಾಕೋ ಗೊತ್ತಿಲ್ಲ.

*೫.ವಿದ್ಯುತ್ ಕಂಪನಿಗಳ ಆಡಿಟ್ ಆಗಬೇಕು …*
ಈ ನಿರ್ಧಾರಗಳನ್ನ ಸರ್ಕಾರ ತನ್ನ ಸಂಪುಟ ಸಭೆಯಲ್ಲೇ ತೆಗೆದುಕೊಳ್ಳಬಹುದು…ಪ್ರತಿಪಕ್ಷದ ಅಗತ್ಯ ಇದಕ್ಕೆ ಬೇಡ … ಆದರೂ…

*೬.ವಿದ್ಯುತ್ ಮೀಟರ್ ಗಳ ಪರೀಕ್ಷೆ ನಡಿಯಬೇಕು..*
ಇಂತಹ ಬಾಲಿಶ ಪ್ರಶ್ನೆಯನ್ನು ಇದುವರೆಗೂ ಯಾರು ಕೇಳಿರಲಿಕ್ಕೆ ಸಾದ್ಯನೇ ಇಲ್ಲ… ನಾಳೆ ಸಿದ್ದರಾಮಯ್ಯ ಬಂದು ನಿಮ್ಮ ಮನೆಯ ಎಲೆಕ್ಟ್ರಿಕ್ ಮೀಟರ್ ಪರೀಕ್ಷೆ ಮಾಡುತ್ತಿನೆ ಎಂದರೆ ನೀವು ಬೇಡ ಎನ್ನುತ್ತಿರ?ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಅಂತೆ.ಇದನ್ನು ಪ್ರತಿಪಕ್ಷದ ಹತ್ತಿರ ಅನುಮತಿ ಕೇಳಿ ಮಾಡಬೇಕ?

*೭. ಪ್ರತಿದಿನ ಒಬ್ಬ ಮನುಷ್ಯನಿಗೆ ೨೨೦ ಲೀಟರ್ ನೀರು ಲಭ್ಯವಾಗುತ್ತಿದೆ … ಹಾಗಾದರೆ ಆ ನೀರು ಎಲ್ಲಿದೆ ? *
ಇದನ್ನು ಕೇಳ ಬೇಕಿರುವುದು ಜಲಮಂಡಲಿ ಅಧಿಕಾರಿಯವರನ್ನ ಅಲ್ಲವೇ? ಇಷ್ಟಕ್ಕೂ ಆಪ್ ಒಬ್ಬ ಮನುಷ್ಯನಿಗೆ ದಿನಕ್ಕೆ ೭೦೦ ಲೀಟರ್ ನೀರು ಉಚಿತವಾಗಿ ಕೊಡುವ ಭರವಸೆ ನೀಡಿದೆ.ಅಲ್ಲಿಗೆ ಅದು ಹುಡುಕ ಬೇಕಿರುವುದು ೨೨೦ ಲೀ ಅಲ್ಲ ೭೦೦ ಲೀಟರ್ …

ಇಷ್ಟೇ ಅಲ್ಲ,ಸ್ಲಂ ಜನರಿಗೆ ಮನೆ ಕಟ್ಟಿಕೊಡುವುದು,ಗುತ್ತಿಗೆ ನೌಕರರನ್ನ ಖಾಯಂ ಮಾಡಿಕೊಳ್ಳುವುದು,ರೈತರಿಗೆ ಸಬ್ಸಿಡಿ, ಸ್ಕೂಲ್ ಶಾಲೆ ಕಟ್ಟುವುದು, ರಸ್ತೆ ನಿರ್ಮಾಣ ಇಂತಹ ವಿಷಯಗಳ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭಿಪ್ರಾಯ ಕೇಳಿದೆ…. ಎಂತಹ ಬಾಲಿಶತನ ..?

ತಾನು ಮಾಡಬೇಕೆಂದಿರುವ ಅಭಿವೃದ್ದಿ ಕಾರ್ಯಕ್ರಮಗಳಿಗೆ ಬಿಜೆಪಿಯ ಅಭಿಪ್ರಾಯ ಕೇಳುವ ಅಗತ್ಯತೆ ಏನಿದೆ?ಇದು ಪ್ರತಿಪಕ್ಷಗಳಿಗೆ ಕೇಳಿದ ಪ್ರಶ್ನೆಗಳು ಅನ್ನುವುದಕ್ಕಿಂತ ಇನ್ನೊಂದು ಪ್ರಣಾಳಿಕೆಯೋ ಅಥವಾ ಸರ್ಕಾರ ರಚಿಸಲು ಸಾಧ್ಯವಾಗದೆ ಇದ್ದರೆ ದೆಹಲಿ ಜನತೆಯಿಂದ ಮೊದಲೇ ಪಡೆದುಕೊಳ್ಳ ಬಯಸಿರುವ ನಿರೀಕ್ಷಣ ಜಾಮೀನೇನೋ ಅನ್ನೋ ಅನುಮಾನ ಕಾಡುತ್ತದೆ.

ಒಂದು ಪಕ್ಷ ಕಾಂಗ್ರೆಸ್ ಅಥವಾ ಬಿಜೆಪಿ ಇದರ ಬಗ್ಗೆ ಏನಾದರು ವಿರುದ್ದ ಅಭಿಪ್ರಾಯ ಮಂಡಿಸಿದರೆ ಅದನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಗಳಿಸುವ ಆಸೆ ಕೇಜ್ರಿವಾಲ್ ಗೆ ಇದ್ದಂತೆ ತೋರುತ್ತದೆ…ಆದರೆ ಬಿಜೆಪಿ ಆಗಲಿ ಕಾಂಗ್ರೆಸ್ ಆಗಲಿ ಉತ್ತರಿಸುವ ಗೋಜಿಗೆ ಹೋಗದ ಕಾರಣ ಕೇಜ್ರಿವಾಲ್ ಪ್ಲಾನ್ ಸದ್ಯದ ಮಟ್ಟಿಗೆ ಟುಸ್ ಆಗಿದೆ… ಹಾಗಾಗಿಯೇ SMS ವೋಟಿಂಗ್ ಅನ್ನೋ ಹೊಸ ಅಸ್ತ್ರ ಹೊರ ತೆಗೆದಿದ್ದಾರೆ ಅಷ್ಟೇ.

ಇಷ್ಟಕ್ಕೂ ಕೇಜ್ರಿವಾಲ್ ಸರ್ಕಾರ ನಡೆಸುವುದು ಅಷ್ಟು ಸುಲಭದ ಮಾತು ಕೂಡ ಅಲ್ಲ… ಆಪ್ ನ ಕಣ್ಣು ಇರುವುದು ಮುಂದಿನ ಲೋಕಸಭಾ ಚುನಾವಣೆಯ ಕಡೆಗೆ.ಸರ್ಕಾರ ರಚನೆ ಮಾಡದೆ,ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದರೆ, ಮುಂದಿನ ಲೋಕಸಭಾ ಚುನಾವಣೆಯ ಸಮಯಕ್ಕೆ ದೆಹಲಿ ವಿಧಾನಸಭಾ ಚುನಾವಣೆಗೂ ಸಿದ್ದವಾಗಬೇಕು… ಇದು ಆಪ್ ಗೆ ಸಾಧ್ಯವಾಗದ ಮಾತು. ಹಾಗಾಗಿ ಇನ್ನು ಉಳಿದಿರುವ ಆರು ತಿಂಗಳಲ್ಲಿ ಒಂದು ಜನಪ್ರಿಯ ಸರ್ಕಾರ ಕೊಡುವ,ಮತ್ತು ಅದರ ಅಲೆಯ ಮೇಲೆ ಲೋಕ ಸಭಾ ಚುನಾವಣೆಗೆ ಸಿದ್ದವಾಗುವ ಬಯಕೆ ಆಪ್ ನದು.ಆದರೆ,ಆಪ್ ಕೊಟ್ಟಿರುವ ಭರವಸೆಗಳ ಈಡೇರಿಕೆ ಅಷ್ಟು ಸುಲಭದ ಮಾತಲ್ಲ. ವಿದ್ಯುತ್ ದರ ೫೦% ರಷ್ಟು ಕಡಿಮೆ ಮಾಡುವುದು, ಮತ್ತು ಪ್ರತಿ ವ್ಯಕ್ತಿಗೆ ಸರಾಸರಿ ೭೦೦ ಲೀಟರ್ ನೀರನ್ನು ಪ್ರತಿದಿನ ಉಚಿತವಾಗಿ ಪೂರೈಸುವುದು ಆಪ್ ನ ಪ್ರಮುಖ ಉದ್ದೇಶ.

ವಿದ್ಯುತ್ ದರ ನಿರ್ಣಯಿಸುವುದು ಯಾವುದೇ ಸರ್ಕಾರದ ಕೆಲಸವಲ್ಲ ಅದಕ್ಕಾಗಿಯೇ ಒಂದು ತಜ್ಞರ ಸಮಿತಿ ಇರುತ್ತದೆ ಹಾಗು ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ವಿದ್ಯುತ್ ಉತ್ಪಾದಿಸುವ ಕಂಪನಿಗಳ ಜೊತೆ ದರ ಒಡಂಬಡಿಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ಪಕ್ಷ,ವಿದ್ಯುತ್ ಉತ್ಪಾದಿಸುವ ಕಂಪನಿಗೆ ದರ ಒಪ್ಪಿಗೆ ಆಗಿಲ್ಲ ಅಂದರೆ ವಿದ್ಯುತ್ ಪೂರೈಸದೇ ಇರಬಹುದು ಅಥವಾ ಕೋರ್ಟ್ ಮೆಟ್ಟಿಲೇರಬಹುದು.ಪರಿಸ್ತಿತಿ ಹೀಗಿರಬೇಕಾದರೆ ತಕ್ಷಣವೇ ದರ ಕಡಿತಗೊಳಿಸುವೆ ಅನ್ನೋದು ಸಾಧ್ಯವಾಗದ ಮಾತಾಗುತ್ತದೆ… ಅಲ್ಲದೆ ಕಂಪನಿಗಳು ವಿಧ್ಯುತ್ ಪೂರೈಕೆ ನಿಲ್ಲಿಸಿದರೆ ದೆಹಲಿ ವಿಧ್ಯುತ್ ಇಲ್ಲದ ಭಯಂಕರ ಬೇಸಿಗೆ ಕಳೆಯಬೇಕದ ಪರಿಸ್ತಿತಿ ಬರಬಹುದು.ಇನ್ನು ನೀರಿನ ವಿಷಯದಲ್ಲೂ ಕೂಡ ಆಪ್ ನದು ಅವಿವೇಕತನದ ನಡವಳಿಕೆ , ಯಾವುದೇ ಹೊಸ ಯೋಜನೆ ಇಲ್ಲದೆ ಅಧಿಕ ನೀರು ಪೂರೈಸುವುದು ಹೇಗೆ ಎಂಬುದರ ಬಗ್ಗೆ ಸ್ವತಹ ಕೇಜ್ರಿವಾಲ್ ಅವರಿಗೆ ಸ್ಪಷ್ಟತೆ ಇಲ್ಲ…

ಜನರಿಗೆ ಕೊಟ್ಟ ಭರವಸೆ ಈಡೇರಿಸದೇ ಸರ್ಕಾರ ನಡೆಸುವುದು ಆಪ್ ಗೆ ಮುಳುಗು ನೀರಾಗಬಹುದು.ಕೇಜ್ರಿವಾಲ್ ರ ಸುತ್ತ ತುಂಬಿರುವ ಕುಮಾರ್ ವಿಶ್ವಾಸ್ ಅಂತಹ ತಲೆಹರಟೆಗಳ ನೇರ ದುಷ್ಪರಿಣಾಮ ಇದು.

ರಾಜಕೀಯ ಕಾರಣಗಳಲ್ಲೂ ಕೇಜ್ರಿವಾಲ್ ದ್ವಂದತೆ ಕಾಣಬಹುದು.ಅದು ಲೋಕಪಾಲ್ ಚಳುವಳಿಯ ಸಂದರ್ಭದಲ್ಲಿ,ಭಾರತ ಮಾತೆಯ ಚಿತ್ರವನ್ನ ವೇದಿಕೆಯಿಂದ ತೆಗಿಸಿದರಿಂದ ಹಿಡಿದು, ಸುಪಾರಿ ಮುಲ್ಲಗಳನ್ನ ಅಪ್ಪಿಕೊಳ್ಳುವ ತನಕ ಬಂದು ತಲುಪಿದೆ. ಮೋದಿ ಒಬ್ಬ ಭ್ರಷ್ಟಾಚಾರಿ ಎಂದು ೨೦೧೨ ರ ಜೂನ್ ನಲ್ಲೆ ಹೇಳಿಕೆ ನೀಡಿದ್ದ ಕೇಜ್ರಿವಾಲ್ ಇಂದಿನವರೆಗೂ ಅದನ್ನ ಸಾಭೀತು ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ, ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿರುವ ಕೇಂದ್ರ ಸರ್ಕಾರದ ಮೂಗಿನ ಕೆಳಗೆನೆ ಕೂತು , ಗುಜಾರತ್ ನಲ್ಲಿ ಸ್ಪರ್ದಿಸುತ್ತೇವೆ ಅನ್ನೋ ಮೂಲಕ ತಮ್ಮ ಉದ್ದೇಶ ಏನು ಎಂದು ಸ್ಪಷ್ಟ ಪಡಿಸಿದ್ದಾರೆ. ಕೇಜ್ರಿವಾಲ್ ಉದ್ದೇಶ ಕೇವಲ ಭ್ರಷ್ಟಾಚಾರ ವಿರುದ್ಧದ ಹೋರಾಟವಲ್ಲ, ಅದರ ಹಿಂದೆ ಕೆಲವೊಂದು ಕಾಣದ “ಕೈ”ಗಳು ಇವೆ ಅನ್ನೋದು ಸ್ಪಷ್ಟ.

ಲೋಕಪಾಲ್ ವಿಷಯದಲ್ಲಿ ಕೇಜ್ರಿವಾಲ್ ರಾಜಕಿಯವನ್ನ ಸ್ವತಹ ಅಣ್ಣ ಹಜಾರೆ ಉಗ್ರವಾಗಿ ಟೀಕಿಸಿದ್ದಾರೆ.ಕಿರಣ್ ಬೇಡಿ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಕೇಜ್ರಿವಾಲ್ ಲೋಕಪಾಲ್ ವಿದೇಯಕ ವಿರೋದಿಸುತ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ .

ಕೇಜ್ರಿವಾಲ್ ನಾಳೆ ಸರ್ಕಾರ ರಚಿಸಲಿದ್ದಾರೆ.ಭಾರತದ ಇತಿಹಾಸದಲ್ಲಿಯೇ ಆಪ್ ಅತ್ಯಂತ ಬಾಲಿಶ ಸರ್ಕಾರ ಆಗುವ ಎಲ್ಲ ಲಕ್ಷಣ ಈಗಲೇ ಗೋಚರಿಸುತ್ತಿವೆ. ಕೇಜ್ರಿವಾಲ್ ಒಂದು ಚೋಟ ರಾಹುಲ್ ಗಾಂಧಿಯಂತೆ , ಆಪ್ ಒಂದು ಚೋಟ ಕಾಂಗ್ರೆಸ್ ನಂತೆ ಕಾಣಿಸುತ್ತಿದ್ದಾರೆ ಅಂದರೆ ಈ ಸಂದರ್ಭದಲ್ಲಿ ತಪ್ಪಾಗಲಾರದು .

13 ಟಿಪ್ಪಣಿಗಳು Post a comment
 1. vidya
  ಡಿಸೆ 25 2013

  ಬ್ರಷ್ಟಾಚಾರದ ವಿರೋಧಿ ಎಂಬ ಕಾರಣಕ್ಕೆ ಕೇಜ್ರಿವಾಲಾಗೆ ಜನ ಓಟ್ ಹಾಕಿದ್ದಾರೆ. ಈಗ ಜನಾದೇಶ ಧಿಕ್ಕರಿಸಿ ಅವರು ಕಾಂಗ್ರೆಸ್‍ನೊಂದಿಗೆ ಕೂಡಿ ಸರ್ಕಾರ ರಚಿಸಲು ಹೊರಟಿದ್ದಾರೆ. ಇದನ್ನು ನೋಡಿ ದಿಲ್ಲಿ ಜನತೆ ತಲೆ ಜಜ್ಜಿಕೊಳ್ಳುತ್ತಿರಬೇಕೆನಿಸುತ್ತಿದೆ. ಅಧಿಕಾರಕ್ಕೆ ಬಂದ ಮೇಲೆ ಎಲ್ಲರೂ ಒಂದೇ ಎಂದು ಕೇಜ್ರಿವಾಲಾ ತೋರಿಸಿದ್ದಾರೆ.

  ಉತ್ತರ
 2. ಗಿರೀಶ್
  ಡಿಸೆ 25 2013

  ಬಹುಶಃ ಈ ಸೆಟಪ್ ೨೦೧೪ರ ಚುನಾವಣೆ ಮುಗಿಯುವವರೆಗೆ ಮಾತ್ರ. ದೆಹಲಿಯ ಮರು ಚುನಾವಣೆ ಲೋಕಸಭೆಯ ಚುನಾವಣೆಯೊಡನೆ ನಡೆದರೆ, ಎರಡೂ ಪಕ್ಷಗಳೂ ಮಣ್ಣು ಮುಕ್ಕುವುದು ಶತಃಸಿದ್ದ. ಹಾಗಾಗಿ ಅನಿವಾರ್ಯ ಈ ಕೂಡಿಕೆ

  ಉತ್ತರ
 3. kiran gajanur
  ಡಿಸೆ 26 2013

  ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಯನ್ನು ನಾವು ಸೈಂಧಾಂತಿಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಸಮರ್ಥಿಸಲು ಸಾಧ್ಯವಿಲ್ಲ ಎಕೆಂದರೆ ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಆಯ್ಕೆಗೊಂಡ ಸರ್ಕಾರ ಜನರ ಉತ್ತಮ ಬದುಕಿಗೆ ಪೂರಕವಾಗಿ ಆಡಳಿತ ನಡೆಸಬೇಕಾಗುತ್ತದೆಯೇ ಹೊರತು ಜನರು ಹೇಳಿದಂತೆ ಆಡಳಿತ ನಡೆಸುವುದಲ್ಲ (ಜನರು ಹೇಳಿದಂತೆ ಆಡಳಿತ ನಡೆಸುತ್ತೇವೆ ಎಂಬಲ್ಲಿಯೆಆಮ್ ಆದ್ಮಿ ಎಡವಿದೆ) ಮತ್ತು ಜನರು ಹೇಳಿದಂತೆ ಆಡಳಿತ ಎನ್ನುವುದು ವಾಸ್ತವದಲ್ಲಿ ಸಾಧ್ಯವೂ ಇಲ್ಲ(ಎಕೆಂದರೆ ಜನರ ಅಭಿಪ್ರಾಯವನ್ನೂ ನಾವು ಎಕಘನಾಕೃತಿಯಲ್ಲಿ ಊಹಿಸಲು ಸಾದ್ಯವಿಲ್ಲ ಅದು ಪಂಗಡದಿಂದ ಪಂಗಡಕ್ಕೆ (ಭಾರತದಲ್ಲಿ ಹೀಗೆ ಜಾತಿಯಿಂದ ಜಾತಿಗೆ) ವರ್ಗದಿಂದ ವರ್ಗಕ್ಕೆ ಭಿನ್ನವಾಗಿರುತ್ತದೆ) ಉದಾ;ಗುತ್ತಿಗೆದಾರರ ಗುಂಪಿನ ಅಭಿಪ್ರಾಯದಂತೆ ಅಧ್ಯಪಕರ ಗುಂಪಿನ ಅಥವಾ ಕಾರ್ಮಿಕರ ಗುಂಪಿನ/ಬಡವರ ಗುಂಪಿನ ಅಭಿಪ್ರಾಯ ಇರುವುದಿಲ್ಲ ಇದು ಒಂದು ಅಂಶವಾದರೆ ಇನ್ನೂ ಸಂವಿಧಾನಿಕ ಅರ್ಥದಲ್ಲಿ ಆಮ್ ಆದ್ಮಿ ಬಹುಮತ ಪಡೆದ ಪಕ್ಷಕ್ಕೆ ಬೆಂಬಲ ನೀಡಬೇಕಿತ್ತು ಅಥವಾ ಪಡೆಯಬೇಕಿತ್ತು (ಬಿ.ಜೆ.ಪಿ ಗೆ) ಆದರೆ ಅದು ಹಾಗೆ ಮಾಡಿಲ್ಲ ಸೊ ಆಮ್ ಆದ್ಮಿಗೆ ಸಂವಿಧಾನಿಕ ಪಕ್ವತೆ ಇಲ್ಲ ಅಥವಾ ತರಬೇತಿ ಇಲ್ಲ. . . .೫ ವರ್ಷದಲ್ಲಿ ಇಡಿ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ ಎನ್ನುವ ಪಕ್ಷಕ್ಕೆ ಅದೆ ಐದು ವರ್ಷದಲ್ಲಿ ಬಿ.ಜೆ.ಪಿ ಎಂಬ ಸಣ್ಣ(ಆಡಳಿತಕ್ಕೆ ಹೊಲಿಸಿದರೆ) ಪಕ್ಷವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದೆ ಹಾಸ್ಯಾಸ್ಪದ ಎನ್ನಿಸುತ್ತಿದೆ. . .. . ಖಂಡಿತಾ ಅಮ್ ಆದ್ಮಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶ ಇದೆ ಆದರೆ ಅದರ ದಾರಿಯನ್ನು ಗುರುತಿಸಿಕೊಳ್ಳುವಲ್ಲಿಯೆ ಎಡವಿದ್ದಾರೆ ಅಂದರೆ ಇದುವರೆಗಿನ ವಾದಗಳ ಹಿನ್ನಲೆಯಲ್ಲಿಯೆ ಅವರು ರಾಜಕಾರಣವನ್ನು ನೋಡುತ್ತಿದ್ದಾರೆ ಮತ್ತು ಅದಕ್ಕೆ ಸ್ಪಂದಿಸುತ್ತಿದ್ದಾರೆ ಇದರಿಂದ ಪರ್ಯಾಯ ರಾಜಕಾರಣ ಸಾದ್ಯವಿಲ್ಲ ಬದಲಾಗಿ ಹೊಂದಾಣಿಕೆಯ ರಾಜಕಾರಣ ಸಾಧ್ಯವಾಗಬಹುದು ಇದರಿಂದ ಪ್ರಯೋಜನವಿಲ್ಲ. . .. .

  ಉತ್ತರ
 4. ಅವಿನಾಶ್ ಹೆಗ್ಡೆ
  ಡಿಸೆ 26 2013

  ಆಪ್ ನಲ್ಲಿ , ಎಲ್ಲ ಪಕ್ಷಗಳಂತೆ ಪಕ್ವ ರಾಜಕಾರಣಿಗಳಿಲ್ಲ , ಇದು ಲಾಭವು ಮತ್ತು ನಷ್ಟವು ಎರಡು ಹೌದು. ಅಲ್ಲದೆ ಆಪ್ ಮಾಡಹೊರಟಿರುವುದು ಕಾಂಗ್ರೆಸ್ ಇಷ್ಟು ವರ್ಷ ಮಾಡಿದ ರಾಜಕಾರಣವನ್ನೇ… ಕಡಿಮೆ ಬೆಲೆಯ ವಿದ್ಯುತ್ , ಉಚಿತ ಅಕ್ಕಿ, ನೀರು ಇವೆಲ್ಲ ಭ್ರಷ್ಟಾಚಾರವನ್ನ ಹೆಚ್ಸಿಸುತ್ತವೆಯೇ ವಿನಹ ಕಡಿಮೆ ಮಾಡುವುದಿಲ್ಲ , ಉದಾಹರಣೆಗೆ : ಕೇಂದ್ರ ಸರ್ಕಾರವು ಕಡಿಮೆ ಬೆಲೆಯ ವಿದ್ಯುತ್ ಅನ್ನು ಗ್ರಾಹಕರಿಗೆ ವಿತರಿಸಬೇಕು ಅನ್ನೋ ಉದ್ದೇಶದಿಂದ ಕಲ್ಲಿದ್ದಲು ಗಣಿಗಳನ್ನ ಹರಾಜ್ ಮಾಡದೆಯೇ ಕಂಪನಿಗಳಿಗೆ ಲೀಸ್ ಕೊಡಲಾಯಿತು ಇದು ದೇಶದ ಅತಿ ದೊಡ್ಡ ಹಗರಣವಾದ ಕಲ್ಲಿದ್ದಲು ಹಗರಣಕ್ಕೆ ನಾಂದಿಯಾಯಿತು…. ಈಗ ಅನ್ನಭಾಗ್ಯದ ಗತಿಯು ಇದೆ ಆಗಿದೆ… ದೇಶಕ್ಕೆ ಒಂದು ಪ್ರಬಲ ನಾಯಕತ್ವದ ಅಗತ್ಯವಿದೆ .. ಆದರೆ ಆಪ್ ಆ ನಿರೀಕ್ಷೆಯನ್ನ ಹುಸಿ ಮಾಡಿದೆ.

  ಉತ್ತರ
 5. Rajaram Hegde
  ಡಿಸೆ 28 2013

  ಈ ಮೇಳಿನ ಲೇಖನದ ಹಾಗೂ ಪ್ರತಿಕ್ರಿಯೆಗಳ ಜೊತೆಗೆ ನನ್ನ ಸಹಮತ ವ್ಯಕ್ತಪಡಿಸುವುದು ನನಗೆ ಕಷ್ಟವಾಗುತ್ತದೆ. ನನ್ನ ಪ್ರಕಾರ ಆಪ್ ವಿಫಲವಾದರೆ ಅದು ನಮ್ಮ ಪ್ರಜಾತಂತ್ರದ ವೈಫಲ್ಯವೇ ಸರಿ. ಆದರೆ ಆಪ್ ಭರವಸೆಗಳ್ನನು ಈಡೇರಿಸಲು ಸಫಲವಾಗುತ್ತದೆಯೋ ವಿಫಲವಾಗುತ್ತದೆಯೋ ಎಂಬುದಕ್ಕಿಂತ ಅದು ಏನನ್ನು ಸೂಚಿಸುತ್ತದೆ ಎಂಬುದು ಮುಖ್ಯ. 1.ಮೊದಲನೆಯದಾಗಿ ದೆಹಲಿಯ ನಿರ್ಣಾಯಕ ಸಂಖ್ಯೆಯ ಮತದಾರರು ಬದಲಾವಣೆಗಾಗಿ ತುಡಿಯುತ್ತಿದ್ದರು ಹಾಗೂ ಈಗ ವೇಷ ಧರಿಸಿ ರಂಗದಲ್ಲಿರುವ ಯಾವ ಪಕ್ಷದ ಮೇಲೂ ಅವರಿಗೆ ವಿಶ್ವಾಸವಿಲ್ಲ. ಈಗಾಗಲೇ ರೂಢಮೂಲವಾಗಿರುವ ಪಕ್ಷಗಳು ಮಂತ್ರದಂಡವೆಂದು ಭಾವಿಸಿ ಉಪಯೋಗಿಸುವ ಆದರೆ ವಾಸ್ತವದಲ್ಲಿ ಚಿಂದಿಯಾದ ಘೋಷಣೆಗಳಾವವೂ ( ಅದರಲ್ಲಿ ಸರ್ಕಾರೀ ಕೃಪಾಪೋಷಿತ ಬುದ್ಧಿಜೀವಿಗಳ ಚಿಂತನೆಯೂ ಸೇರಿದೆ) ಈ ಜನರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಪ್ರಸ್ತುತವಾಗಿವೆ.
  2.ಈಗಿರುವ ರಾಜಕಾರಣಿಗಳು ಚುನವಣೆಯ ಕುರಿತು ಕೆಲವು ತರ್ಕಗಳನ್ನು ಕಟ್ಟಿಕೊಂಡು ಅದೇ ಸತ್ಯವೆಂಬಂತೇ ಬಿಂಬಿಸಿದ್ದಾರೆ. ಅದರ ಪ್ರಕಾರ ಆಪ್ ಗೆಲ್ಲಲು ಸಾಧ್ಯವೇ ಇಲ್ಲ. ಆದರೆ ಆಪ್ ಅಂಥದ್ದೊಂದು ತರ್ಕವು ಸುಳ್ಳು ಎಂಬುದಾಗಿ ತೋರಿಸಿದೆ.
  3. ಈಗ ಅಧಿಕಾರದಲ್ಲಿರುವ ಬಹುತೇಕ ರಾಜಕಾರಣಿಗಳ ಮಾತನ್ನು ಕೇಳುವಾಗ ಅವರು ತಾವೇ ನಂಬದ ವಿಷಯವನ್ನು ಕೇವಲ ಜನರನ್ನು ನಂಬಿಸಲಿಕ್ಕಾಗಿ ಹೇಳುತ್ತಿದ್ದಾರೆಂದು ಕಣ್ಣಿಗೆ ರಾಚುವಂತೇ ಕಾಣಿಸುತ್ತದೆ. ರಾಜಕಾರಣವೆಂಬುದು ಮಾತಿನ ಚಾತುರ್ಯವಾಗಿ, ಅಪ್ರಾಮಾಣಿಕ ದಂಧೆಯಾಗಿ ಪರಿಣಮಿಸಿದೆ. ಕೇಜ್ರಿವಾಲರ ಟೀಮು ನನಗೆ ಈ ರಾಜಕಾರಣದಲ್ಲಿ ಕೊಳಚೆಯೊಳಗಿನ ಹೊಸನೀರಿನ ಬುಗ್ಗೆಯಂತೇ ಕಾಣಿಸುತ್ತಿದೆ. ಅವರೆಲ್ಲರೂ ಅನನುಭವಿಗಳಾಗಿರಬಹುದು, ಪೆದ್ದರಾಗಿರಬಹುದು, ಆದರೆ ಈ ಅಪ್ರಾಮಾಣಿಕ ಕಳ್ಳರಂತೇ ಕಾಣಿಸುವುದಿಲ್ಲ.
  ಭಾರತೀಯ ಜನತಂತ್ರದಲ್ಲಿ ರೂಢಮೂಲ ರಾಜಕಾರಣವು ಒತ್ತಿ ಇಟ್ಟ ಶಕ್ತಿಯೊಂದು ಬುಗ್ಗೆಯಾಗಿ ಚಿಮ್ಮಿದಂತೇ ನನಗೆ ಕಾಣಿಸುತ್ತಿದೆ, ಇಲ್ಲ ಅದರ ಒಡಲಲ್ಲಿ ಇರುವ ಕುದಿ ಗುಳ್ಳೆಯಾಗಿ ಚಿಮ್ಮಿದಂತೇ ಕಾಣಿಸುತ್ತಿದೆ. ಅದು ನೀರಮೇಲಣ ಗುಳ್ಳೆಯಂತೇ ಒಡೆದು ಠಪ್ಪೆಂದರೆ ಸಂಭ್ರಮಿಸಬೇಕಾದ ಸಂಗತಿಯಂತೂ ಅಲ್ಲ. ಆದರೆ ಇಂಥದ್ದೊಂದು ಅಪ್ಪಟ ಕ್ಷಣವು ನಮ್ಮ ರಾಜಕೀಯ ಇತಿಹಾಸದಲ್ಲಿ ಬಹಳ ಅಪರೂಪವಂತೂ ಹೌದು. ತುರ್ತುಸ್ಥಿತಿಯ ಕಾಲದಲ್ಲಿ ಅಂಥದ್ದೊಂದು ಗುಳ್ಳೆ ಹುಟ್ಟಿ ಮರೆಯಾಯಿತು. ಅದರ ಹೆಸರು ಹೇಳಿಕೊಂಡು ತಾಳಕುಟ್ಟಿಕೊಂಡು ನಂತರ ದ ರಾಜಕಾರಣಿಗಳು ತಿರುಗಿದರೇ ಹೊರತೂ ಅದರಲ್ಲಿ ಜನಾದೇಶವೇನು ಎಂಬುದನ್ನು ಓದುವಲ್ಲಿ ಅವರು ವಿಫಲರಾದರು. ಅದೇ ಸಮಯಸಾಧಕತನವನ್ನಾಗಲೀ, ನಿರ್ಲಕ್ಷ್ಯವನ್ನಾಗಲೀ ರೂಢಮೂಲ ರಾಜಕಾರಣ ಮತ್ತು ಅದರ ಕೃಪಾಪೋಷಿತ ಬುದ್ಧಿಜೀವಿಗಳು ಆಪ್ ಬಗ್ಗೆ ತೋರಿಸಿ ಅದರೊಳಗಿರುವ ಜನಾದೇಶವನ್ನು ಗುರುತಿಸದಿದ್ದರೆ ನಮ್ಮ ದೇಶಕ್ಕೆ ಅದೊಂದು ದುರಂತವೇ ಸರಿ.

  ಉತ್ತರ
  • Nagshetty Shetkar
   ಡಿಸೆ 29 2013

   ಕೃಷ್ಣಪ್ಪ ಸರ್, ನಿಮ್ಮ ಅಭಿಪ್ರಾಯಗಳನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಆಮ್ ಆದ್ಮಿ ಪಕ್ಷದ ವಿಜಯವು
   ಭಾರತದ ಪ್ರಜಾಪ್ರಭುತ್ವದ ಚೇತನದ ಬಗ್ಗೆ ವಿಶ್ವಾಸವುಳ್ಳವರ ವಿಜಯವೇ ಆಗಿದೆ. ಪ್ರಜಾಪ್ರಭುತ್ವ ರಾಜಕಾರಣದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಮಾರ್ಗವು ಫ್ಯಾಸಿಸಂ ಆಗಬೇಕಿಲ್ಲ ಎಂಬುದನ್ನು ಆಂ ವಿಜಯ ಸಾರಿ ಹೇಳಿದೆ. ಮೋದಿ ಸೈಬರ್ ಪಡೆಗೆ ಈ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅದು ಆಂ ಅನ್ನು ನೀರ ಮೇಲಿನ ಗುಳ್ಳೆ ಎಂದು ಹಾಸ್ಯ ಮಾಡುತ್ತಿದೆ.

   ಉತ್ತರ
   • ವಿಜಯ್ ಪೈ
    ಡಿಸೆ 29 2013

    ಈ ಶೆಟ್ಕರ್ ಸಾಹೇಬರು ಎಲ್ಲಲ್ಲೊ ಬಂದು ಕೃಷ್ಣಪ್ಪ ಸರ್..ಕೃಷ್ಣಪ್ಪ ಸರ್ ಎಂದು ಕನಸಿನಲ್ಲಿದ್ದವರ ಹಾಗೆ ಬಡಬಡಿಸುವುದು ನೋಡಿ ಕರುಣೆ ಹುಟ್ಟುತ್ತದೆ. ಮೊದಲು ದರ್ಗಾ ಸರ್..ದರ್ಗಾ ಸರ್ ಅನ್ನುತ್ತಿದ್ದ ಮಹಾನುಭಾವರು ಈಗ ಪಕ್ಷಾಂತರ ಮಾಡಿರುವ ಹಾಗೆ ಕಾಣುತ್ತಿದೆ!. ಇಲ್ಲವಾದರೆ ಆ ಮೊದಲ ಗುರು ಧರ್ಮಾಂತರ ಮಾಡಿರಬೇಕು!.

    ಆಮ್ ವಿಜಯ ಬಿಜೆಪಿಗೆ ಅರಗಿಸಿಕೊಳ್ಳಲು ಆಗಿದೆಯೋ ಇಲ್ಲವೊ..ಆದರೆ ಗಂಜಿಗಾಗಿ ತಡಕಾಡುತ್ತಿರುವ, ನಿರಾಶ್ರಿತ ಶಿಬಿರದ ಈ ಎಡಪಂಥಿ ಗಿರಾಕಿಗಳು ಕಾಂಗೈ ಜೊತೆ ಸೇರಿ ಆಮ್ ನ್ನು ಅರಗಿಸಿಕೊಳ್ಳುವುದಂತು ಭವಿಷ್ಯದ ಸತ್ಯ. ಇಷ್ಡು ದಿವಸ ಬೃಷ್ಟಾಚಾರ ಪರವಾಗಿಲ್ಲ, ಕೋಮುವಾದ ಅತಿ ಭಯಂಕರವಾದದ್ದು ಎಂದೆಲ್ಲ ಬೊಬ್ಬೆ ಹೊಡೆದು, ಅದಕ್ಕೆ ಪರಿಹಾರವೆಂದರೆ ಜಾತ್ಯತೀತ ತತ್ವಗಳ ಕಾಂಗೈ ಒಂದೇ ಎಂದು ನಂಬಿರುವಂತೆ ನಟಿಸುತ್ತ, ಕಾಂಗಿಗಳ ಹಿಂದೆ ಹೋದವರು, ಈಗ ಒಮ್ಮಿಂದೊಮ್ಮೆಲೆ ಪ್ರಜಾಪ್ರಬುತ್ವವಾದಿಗಳಾಗಿ ಆಮ್ ಹಿಂದೆ ಹೊರಟಿರುವುದು ಸೋಜಿಗವೇನಲ್ಲ!

    ಉತ್ತರ
    • Nagshetty Shetkar
     ಡಿಸೆ 29 2013

     “ಪ್ರಜಾಪ್ರಭುತ್ವ ರಾಜಕಾರಣದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಮಾರ್ಗವು ಫ್ಯಾಸಿಸಂ ಆಗಬೇಕಿಲ್ಲ ಎಂಬುದನ್ನು ಆಂ ವಿಜಯ ಸಾರಿ ಹೇಳಿದೆ”

     ಉತ್ತರ
     • ವಿಜಯ್ ಪೈ
      ಡಿಸೆ 30 2013

      ಒಹೊ..ಈಗ ಗೊತ್ತಾಯಿತೆ? ದೆಹಲಿಯಲ್ಲಿ ಚಳುವಳಿ ನಡೆದಾಗ ಎಡಪಂಥಿಗಳಿಗೆ ಇದು ಹೊಳೆದಿರಲಿಲ್ಲವೆ? ಆಗ ಅಣ್ಣಾ,ಕೇಜ್ರಿವಾಲ್ ಮುಂತಾದವರೆಲ್ಲ ಪ್ರಜಾಪ್ರಭುತ್ವ ಹೈಜಾಕ್ ಮಾಡುತ್ತಿದ್ದಾರೆ ಎಂದು ಇದೇ ಎಡಬಿಡಂಗಿಗಳು ಪ್ರಚಾರ ಮಾಡುತ್ತಿದ್ದಿದ್ದು ಮರೆತು ಹೋಯಿತೆ? ಏನೇ ಇರಲಿ..ಇನ್ನು ಮುಂದೆ ಇರುವುದು ಬಿಜೆಪಿ, ಕಾಂಗೈ,ಆಮ್ ಮತ್ತು ಎರಡು-ಮೂರು ಪ್ರಾದೇಶಿಕ ಪಕ್ಷಗಳು ಅಷ್ಟೇ..ಈ ಎಡಪಂಥಿಗಳು ತಿಪ್ಪೆ ಸೇರುವ ಕಾಲ ಬಂದಿದೆ, ಅವರ ಎರವಲು ಜೊಳ್ಳು ವಿಚಾರಗಳು ನಮಗೆ ಬೇಕಾಗಿಲ್ಲ, ಅವರು ಈ ದೇಶಕ್ಕೆ ಅಪ್ರಸ್ತುತ, ಅವರು ರಾಜಕೀಯವಾಗಿ ಬದುಕಿರಬೇಕಾದರೆ ಯಾವುದಾದರೂ ಒಂದು ಗೆದ್ದೆತ್ತಿನ ಬಾಲ ಹಿಡಿಯಬೇಕು ಎಂಬುದನ್ನು ಕೂಡ ಈ ಚುನಾವಣೆ ತೋರಿಸಿ ಕೊಟ್ಟಿದೆ. ಅದಕ್ಕಾಗಿ ಮತದಾರನಿಗೆ ಧನ್ಯವಾದ. ಈ ದೇಶಕ್ಕೆ, ಸಮಾಜಕ್ಕೆ ಕಾಂಗೈಗಿಂತ ಹೆಚ್ಚಿನ ಹಾನಿ ಈ ಗೆದ್ದಲು ಎಡಪಂಥಿಯರಿಂದ ಇದೆ.

      ಉತ್ತರ
 6. ವಿಜಯ್ ಪೈ
  ಡಿಸೆ 29 2013

  ಆಮ್ ನ ವಿರುದ್ಧ ಬಿಜೆಪಿ ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ ಎಂದು ನನಗೆ ಅನಿಸುತ್ತದೆ. ಆಮ್ ಗೆ ಸಹಾನುಭೂತಿ ತೋರುವಲ್ಲೇ ಬಿಜೆಪಿಗೆ ಲಾಭವಿದೆ.. ಈ ಪಕ್ಷದ ಜೊತೆಗೆ ಅಣ್ಣಾ, ಕಿರಣ ಬೇಡಿ, ವಿ.ಕೆ ಸಿಂಗ್, ಸಂತೋಷ ಹೆಗಡೆ ಇವರು ಇದ್ದಲ್ಲಿ, ಅದರ ಪ್ರಭಾವ ಬೇರೆ ರೀತಿಯೇ ಇರುತ್ತಿತ್ತು. ಈಗ ಈ ಆಮ್ ನ ಪ್ರಭಾವ ಮೆಟ್ರೊ ಗಳಲ್ಲಿ, ಅದೂ ಅಲ್ಪ ಪ್ರಮಾಣದಲ್ಲಿ ಇದೆ. ಆಮ್ ನ್ನು ಕಾಂಗಿಗಳು ದೂಡುತ್ತಿರುವುದು ಮೋದಿ ಹಿಂದೆ ಇರುವ ಯುವ ವಿದ್ಯಾವಂತರ ಒಂದಿಷ್ಟು ಮತಗಳನ್ನು ಕಸಿಯಲಿ ಎಂದು..ಅಸಲಿಗೆ ಕಾಂಗೈ ವಿಚಾರ ದೆಹಲಿಯಲ್ಲಿ ಆಮ್ ಬರಬೇಕು, ದಿನೇ ದಿನೇ ಬೆಳೆಯುತ್ತಿರುವ ಮೋದಿಗೆ ವಿರುದ್ಧವಾಗಿ ಇನ್ನೊಂದು ಶಕ್ತಿಕೇಂದ್ರ ತಯಾರು ಮಾಡಬೇಕು ಎನ್ನುವದೇ ಆಗಿತ್ತು. ದಿಲ್ಲಿಯಲ್ಲಿ ಅದು ನಿರಿಕ್ಷಿತ ಮಟ್ಟದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳಲೇ ಇಲ್ಲ. ಭೃಷ್ಟಾಚಾರವೇ ಮುಂಬುರುವ ಚುನಾವಣೆಯ ಮುಖ್ಯ ವಿಷಯವಾಗುವುದರಿಂದ, ತನ್ನ ಮುಖ ನೋಡಿ ಯಾರೂ ಮತ ಹಾಕಲಾರರು ಎಂಬುದು ಕಾಂಗೈಗೆ ಗೊತ್ತಿದ್ದೇ ಇದೆ..ಆದಕ್ಕಾಗಿಯೇ ಆಮ್ ನ ಜಯದಲ್ಲೇ ತನ್ನ ಜಯ ಕಂಡುಕೊಂಡು, ‘ಈ ಜಯ ಅದ್ಭುತ..ಮೋದಿಗೊಬ್ಬ ಪ್ರತಿಸ್ಪರ್ಧಿ ಹುಟ್ಟಿದ’ ಎಂಬಂತೆಲ್ಲ ತನ್ನ ಚಮಾಚಾಗಳದ ಎಡಪಂಥೀಯ ಪತ್ರಿಕಾಕರ್ತರಿಂದ ಪ್ರಚಾರ ಸಿಗುವಂತೆ ನೋಡಿಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ನ ನಡುವೆ ಮತ ಹಂಚಿ ಹೋಗಿ, ತನ್ನ ಸಾಂಪ್ರದಾಯಿಕ ಗುಲಾಮಿ ಮತ ಬ್ಯಾಂಕ ಗಳಿಂದ, ಅಲ್ಪ ಬಹುಮತದಿಂದಾದರೂ ಆರಿಸಿ ಬರುವ ಆಸೆ ಕಾಂಗಿಗಳದ್ದು. ಅದಕ್ಕೆ ಮತ್ತು ಈ ದೇಶವನ್ನು ಗೆದ್ದಲು ಹುಳಗಳಾಗಿ ಕಾಡುತ್ತಿರುವ ಎಡಬಿಡಂಗಿ ಪಂಥಿಗಳಿಗೆ ನಿರಾಸೆ ಆಗುವ ದಿನಗಳು ದೂರವಿಲ್ಲ.

  ಉತ್ತರ
 7. P R kamalakshi baby
  ಡಿಸೆ 29 2013

  ಏನೇ ಇರಲಿ ಪರಿವರ್ತನೆಯ ಗಾಳಿ ಬೀಸಲು ಕಾರಣವಾಗಿರೋ ಎಎಪಿ ಯನ್ನು ದಿಲ್ಲಿಯ ಜನತೆ ಅಪ್ಪಿ ಒಪ್ಪಿಕೊಂಡಿರುವುದು ಸರಿಯಾಗಿಯೇ ಇದೆ.
  ಒಳ್ಳೆಯ ಬದಲಾವಣೆಯ ಅಪೇಕ್ಷೆ, ಸುರಕ್ಷತೆ ಹಾಗೂ ಪ್ರಗತಿಯ ಸಂಕೇತ.

  ಉತ್ತರ
  • ವಿಜಯ್ ಪೈ
   ಡಿಸೆ 30 2013

   ಹೌದು…ದೇಶಕ್ಕೆ ಒಳ್ಳೆಯ, ಪಾರದರ್ಶಕ, ಬ್ರಷ್ಟಾಚಾರ ಮುಕ್ತ ಆಡಳಿತವನ್ನು ಯಾರೇ ಕೊಟ್ಟರೂ ಅದನ್ನು ನಾವು ಸ್ವಾಗತಿಸಬೇಕು. ದೇಶದ ಮುಂದೆ ಯಾವತ್ತೂ ಎರಡು ಒಳ್ಳೆಯ ಆಯ್ಕೆಗಳು ಇರಬೇಕು..
   ನಾವು ಕಾಂಗೈ ಆಡಳಿತ ಶೈಲಿಯನ್ನು ಇಷ್ಟು ವರ್ಷದಿಂದ ಗಮನಿಸಿದಾಗ, ಈಗಿನ ಪರಿಸ್ಥಿತಿಯಲ್ಲಿ ಕಾಂಗೈ ಹಂಗಿನಲ್ಲಿರುವ ಆಮ್ ನ ಪಾಡು ಹಾವಿನ ಬಾಯಿಯೊಳಗಿರುವ ಕಪ್ಪೆ ಹೊರಗಿರುವ ಕೀಟವನ್ನು ಕಂಡು ಆಸೆ ಪಟ್ಟಂತೆ!.

   ಉತ್ತರ
 8. M.A.Sriranga
  ಡಿಸೆ 30 2013

  ನಿನ್ನೆ ಟಿ ವಿ ಯಲ್ಲಿ ಕೇಜ್ರಿವಾಲರು ರಾಮಲೀಲಾ ಮೈದಾನದಲ್ಲಿ ಮಾಡಿದ ಪೂರ್ತಿ ಭಾಷಣ ನೋಡಿದ ಮತ್ತು ಕೇಳಿದ ಮೇಲೆ ಖುಷಿ ಏನೋ ಆಯಿತು. ಅವರ ಯೋಚನೆಗಳು ,ಯೋಜನೆಗಳು ಕೇಳಿದ ಮೇಲೆ ರಾಮ ರಾಜ್ಯದ ಹೊಸ್ತಿಲಲ್ಲಿ ದಿಲ್ಲಿಯ ಜನತೆ ನಿಂತಿದ್ದಾರೋ ಏನೋ ಎನ್ನುವಂತೆ ಭಾಸವಾಯಿತು. ಆದರೆ ಆಪ್ ಗೆ ಮೊದಲನೇ ಪರೀಕ್ಷೆ ಇನ್ನು ಎಂಟು ದಿನಗಳ ಒಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಎದುರಿಸುವುದರಲ್ಲಿದೆ. ಅದಾದಮೇಲೆ ಎರಡನೇ ಅಗ್ನಿಪರೀಕ್ಷೆ ಚುನಾವಣೆಯ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವುದರಿಲ್ಲಿದೆ. ಮೊದಲನೆಯದನ್ನು ಗೆಲ್ಲಲ್ಲಿ ಎಂದು ನಾವೆಲ್ಲಾ ಹಾರೈಸೋಣ. ಎರಡನೆಯ ಉಚಿತ ಮತ್ತು ಕಮ್ಮಿ ದರದ ಸೌಲಭ್ಯಗಳನ್ನು ಈಡೇರಿಸಲು ಅಷ್ಟೊಂದು ಹಣ ಯಾವ ಮೂಲದಿಂದ ತರುತ್ತಾರೆ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments