ಬೆನ್ನಿ ಹಿನ್ ಕಂಡರೆ ಪ್ರಗತಿಪರರಿಗೇಕೆ ಅಷ್ಟೊಂದು ಭಯ!?
– ನರೇಂದ್ರ ಕುಮಾರ್ ಎಸ್.ಎಸ್
ಬೆನ್ನಿ ಹಿನ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 2005ರಲ್ಲಿ ಬೆನ್ನಿ ಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಬಹಳ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಜ್ಯ ಸರಕಾರದ ಸಹಕಾರದಿಂದಾಗಿ, ಆತನ “ಕಣ್ ಕಟ್ ಪ್ರದರ್ಶನ ಮತ್ತು ಮತಾಂತರ” ನಿರಾತಂಕವಾಗಿ ನಡೆಯಿತು. ಆ ನಂತರ ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು (ಆತನ ಕಣ್ ಕಟ್ನ ಪ್ರಭಾವವೂ ಇರಬಹುದೇ?). ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಮತ್ತು ಕೂಡಲೇ “ಬೆನ್ನಿ ಹಿನ್ ಅವರ ಕಣ್ ಕಟ್ ಕಾರ್ಯಕ್ರಮ” ಆಯೋಜಿತವಾಗಿದೆ! ಇದು ಕೇವಲ ಕಾಕತಾಳೀಯವಿರಲಾರದು ಅಲ್ಲವೇ!?
ಬೆನ್ನಿ ಹಿನ್ ಇಸ್ರೇಲಿನ ಜೆರೂಸೆಲಂನಲ್ಲಿ ಜನಿಸಿ, ಮುಂದೆ ಅಮೆರಿಕದ ಪ್ರಜೆಯಾದರು. ಅವರೊಬ್ಬ ಕ್ರೈಸ್ತ ಮತ ಪ್ರಚಾರಕ. ಅವರು ಹೋದಲ್ಲೆಲ್ಲಾ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾರೆ. ತನ್ನ ಸಭೆಗಳಲ್ಲಿ ಹಾಜರಿದ್ದು, ತನ್ನೊಡನೆ ಪ್ರಾರ್ಥನೆ ಮಾಡಿದವರಿಗೆ ಮತ್ತು ತನ್ನನ್ನು ಸ್ಪರ್ಶಿಸಿದವರಿಗೆ ಯಾವುದೇ ರೋಗವಿದ್ದರೂ ಗುಣವಾಗುತ್ತದೆ, ಎಂದು ಅವರು ಹೇಳಿಕೊಳ್ಳುತ್ತಾರೆ. “ಕ್ಯಾನ್ಸರ್/ ಏಡ್ಸ್ ನಂತಹ ಕಾಯಿಲೆಗಳನ್ನೂ ಕೇವಲ ಸ್ಪರ್ಶದ ಮೂಲಕವೇ ವಾಸಿ ಮಾಡುತ್ತೇನೆ” ಎಂದು ಹೇಳಿ ಜನರನ್ನು ಯಾಮಾರಿಸಲು ಪ್ರಯತ್ನಿಸುತ್ತಾರೆ! 3 ರಿಂದ 5 ದಿನಗಳ ಕಾಲ ನಡೆಯುವ ಇವರ ಕಾರ್ಯಕ್ರಮಗಳಲ್ಲಿ, ಕೊನೆಯ ದಿನಗಳು ಹತ್ತಿರ ಬಂದಂತೆ, ವೇದಿಕೆಯ ಮೇಲೆ ನಡೆಯುವ ನಾಟಕವೂ ಹೆಚ್ಚುತ್ತದೆ. ಇದ್ದಕ್ಕಿದ್ದಂತೆ ಮೈಮೇಲೆ ಏನೋ ಬಂದಂತೆ, ಕಣ್ಣೀರು ಸುರಿಸುತ್ತಾ ಕೆಲವರು ನುಗ್ಗುತ್ತಾರೆ. ತಮಗೆ ಯಾವುದೇ ಔಷಧದಿಂದಲೂ ಗುಣವಾಗದ ಖಾಯಿಲೆಯಿತ್ತು ಮತ್ತು ಇಲ್ಲಿ ಪ್ರಾರ್ಥಿಸಿದ ನಂತರ ಖಾಯಿಲೆ ವಾಸಿಯಾಗಿಬಿಟ್ಟಿತು; ಬೆನ್ನಿ ಹಿನ್ ಅವರೇ ಪ್ರತ್ಯಕ್ಷ ದೇವರು; ಎಂದೆಲ್ಲಾ ಕುಣಿದಾಡುತ್ತಾರೆ. ಇದೆಲ್ಲಾ ಪೂರ್ವನಿಯೋಜಿತ ನಾಟಕ ಎಂಬುದು ಹಲವು ಬಾರಿ ನಿರೂಪಿತವಾಗಿದ್ದರೂ, ಮುಂದಿನ ಬಾರಿಯೂ ಇದೇ ರೀತಿಯ ನಾಟಕ ಇದ್ದೇ ಇರುತ್ತದೆ. ಈ ರೀತಿಯ ನಾಟಕ ನಡೆಯದಿದ್ದರೆ, ಇವರ ಸಭೆಗೆ ಜನರೇ ಬರುವುದಿಲ್ಲವಲ್ಲ; ಹೀಗಾಗಿ ನಾಟಕ ನಿಲ್ಲಿಸುವಂತಿಲ್ಲ!
“ಬೆನ್ನಿ ಹಿನ್ ಅವರು ಪ್ರಾರ್ಥನೆ ಮತ್ತು ಸ್ಪರ್ಶದ ಮೂಲಕ ಖಾಯಿಲೆ ವಾಸಿ ಮಾಡುವುದಾದರೆ, ಕ್ರೈಸ್ತ ಮಿಶನರಿಗಳಿಗೆ ಆಸ್ಪತ್ರೆ ಮುಚ್ಚುವಂತೆ ಏಕೆ ಕರೆ ಕೊಡುವುದಿಲ್ಲ?” ಎಂಬ ಪ್ರಶ್ನೆಗೆ ಬೆನ್ನಿ ಹಿನ್ ಅವರೇ ಉತ್ತರಿಸಬೇಕು. ಈ ಬೆನ್ನಿ ಹಿನ್ ಮತ್ತು ಇಂತಹ ಮಿಷನರಿಗಳು, ಪಾಕಿಸ್ತಾನ, ಆಫ್ಘಾನಿಸ್ತಾನ ಅಥವಾ ಚೈನಾ ದೇಶಗಳಲ್ಲಿ ಸಭೆ ನಡೆಸುವುದಿಲ್ಲ! ಇವರ ಕಾರ್ಯಕ್ರಮಕ್ಕೆ ಭಾರತವೇ ಬೇಕು!! ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಬೆನ್ನಿ ಹಿನ್ ಕಾರ್ಯಕ್ರಮ ಆಯೋಜಿತವಾಗಿದೆ. ಮತ್ತೊಮ್ಮೆ ನಾಟಕವನ್ನು ವೀಕ್ಷಿಸಲು ಬೆಂಗಳೂರಿಗರೆಲ್ಲಾ ಸಿದ್ದರಾಗಿ.
ಈ ಬೆನ್ನಿ ಹಿನ್ ಅವರ “ಕಣ್ ಕಟ್ ಕಾರ್ಯಕ್ರಮ”ದ ಹಿನ್ನೆಲೆಯಲ್ಲಿ, ಕರ್ನಾಟಕ ಸರಕಾರ ಉದ್ದೇಶಿಸಿರುವ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲದ “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ-2013” ಕುರಿತಾಗಿ ಪ್ರಶ್ನೆಗಳೇಳುತ್ತಿವೆ. ಕರ್ನಾಟಕದಲ್ಲಿ ಮೂಢನಂಬಿಕೆಯನ್ನು ತೊಲಗಿಸಿಬಿಡುತ್ತೇವೆ ಎಂದೆಲ್ಲಾ ಹೇಳಿಕೊಂಡ ಸರಕಾರ, ಇದೀಗ ಬೆನ್ನಿ ಹಿನ್ನನ ಕಾರ್ಯಕ್ರಮದ ಆತಿಥ್ಯ ವಹಿಸುತ್ತಿರುವುದು ಏನನ್ನು ತೋರಿಸುತ್ತದೆ? “ಮೂಢನಂಬಿಕೆ ವಿದೇಯಕ”ವನ್ನು ಬಲವಾಗಿ ಸಮರ್ಥಿಸಿದ ಪ್ರಗತಿಪರರು ಮತ್ತು ಜಾತ್ಯಾತೀತರು ಬೆನ್ನಿ ಹಿನ್ ವಿಷಯದಲ್ಲಿ ಸುಮ್ಮನಿರುವುದೇಕೆ? ನರೇಂದ್ರ ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಡುತ್ತೇನೆ ಎಂದೆಲ್ಲಾ ಬಡಬಡಾಯಿಸಿದವರೆಲ್ಲಾ, ಈಗ ಬಾಯಿ ಬಿದ್ದು ಹೋದಂತಿರುವುದು ಕಂಡರೆ, ಅವರ ಹೇಳಿಕೆಗಳ ಹಿಂದಿರುವ ಉದ್ದೇಶದ ಕುರಿತಾಗಿ ಅನುಮಾನ ಬರುವುದು ಸಹಜವಲ್ಲವೇ? ಹಿಂದುಗಳಲ್ಲಿರುವ ನಂಬಿಕೆಗಳನ್ನು, ನಿರ್ಲಜ್ಜವಾಗಿ “ಮೂಢನಂಬಿಕೆ” ಎಂದು ಘೋಷಿಸುವ, ಹಿಂದೂ ಆಚರಣೆಗಳನ್ನು “ಮಧ್ಯಯುಗೀನ ಆಚರಣೆ”ಗಳು ಎಂದು ಜರೆಯುವ ತಥಾಕಥಿತ ಪ್ರಗತಿಶೀಲರಿಗೆ, ಬೆನ್ನಿ ಹಿನ್ ಕಂಡರೆ ಅಷ್ಟೊಂದು ಭಯವೇಕೆ? ಆತನ ಮೈಬಣ್ಣ ಬಿಳುಪು; ಹೀಗಾಗಿ ಆತ ಹೇಳುವುದೆಲ್ಲಾ ಪ್ರಗತಿಪರ ಎಂಬ “ಮೌಢ್ಯ”ವೋ, ಅಥವಾ ಆತ ಕ್ರೈಸ್ತನಾದ್ದರಿಂದ ವಿರೋಧಿಸಬಾರದು ಎಂಬ “ಬುದ್ಧಿವಂತಿಕೆ”ಯೋ!!?
ಚಿತ್ರ ಕೃಪೆ : ಜೀಸಸ್-ಇಸ್-ಸೇವಿಯರ್.ಕಾಂ
ಇಲ್ಲಿನ ಕಾಂಗೈ ಸರಕಾರಕ್ಕೆ ಮೇಡಂ ಭಯ! ಇನ್ನು ಪ್ರಗತಿಪರರಿಗೆ ಬಿನ್ನಿಹಿನ್ ಅನ್ನು ವಿರೋಧಿಸಿದರೆ ಅದು ಮಾನವ ಹಕ್ಕುಗಳನ್ನು ವಿರೋಧಿಸಿದಂತೆ ಅನ್ನುವ ಕುಂಟು ನೆವ ಮತ್ತು ಅದು non secular ಅನಿಸಿಕೊಂಡು ಬಿಡಬಹುದು ಎಂಬ ಚಿಂತೆ. ಎಷ್ಟಾದರೂ ಪ್ರಗತಿ ಪರರು ವಿಶ್ವ ಮಾನವರಲ್ಲವೇ?!!
[[M.A.Sriranga: ಬಿನ್ನಿಹಿನ್ ಅನ್ನು ವಿರೋಧಿಸಿದರೆ ಅದು ಮಾನವ ಹಕ್ಕುಗಳನ್ನು ವಿರೋಧಿಸಿದಂತೆ]]
ಅದು ಹೇಗೆ ಮಾನವ ಹಕ್ಕು ವಿರೋಧಿ ಎನಿಸಿಕೊಳ್ಳುತ್ತದೆ?
ಆತನನ್ನು ಸಮರ್ಥಿಸುವುದು ಅಥವಾ ವಿರೋಧಿಸದೇ ಇರುವುದು, ಮೂಢನಂಬಿಕೆಯ ಸಮರ್ಥನೆ ಎಂದೇಕೆ ಅನಿಸುವುದಿಲ್ಲ?
ಕಳೆದ ಬಾರಿ ಈ ಬೆನ್ನಿಹಿನ್ ಬಂದಿದ್ದಾಗ ಆತ ತಂದ ವಸ್ತುಗಳಿಗೆ ಕಸ್ಟಮ್ಸ್ ತೆರಿಗೆ ಪಾವತಿಸದೆ ಓಡಿ ಹೋದ ಬಗ್ಗೆ ಸುದ್ದಿಯಾಗಿತ್ತು. ಈ ಬಾರಿ ಅದನ್ನು ವಸೂಲಿ ಮಾಡಲು ಕರೆಸಿರಬಹುದು. ಎಲ್ಲ ಓಕೆ ಈ ಬೆನ್ನಿಹಿನ್ಸ್ ಕಾಂಗೈ ಸರ್ಕಾರವಿದ್ದಾಗ ಮಾತ್ರ ಬರ್ತನಲ್ಲ ಯಾಕೆ?
ಶ್ರೀಕಾಂತ್ ಅವ್ರೆ…. ಕಳ್ಳರು ಕತ್ತಲನ್ನ ತಾನೇ ಪ್ರೀತಿಸಬೇಕು ..?? ಅದಕ್ಕೆ ಕೈ ಇದ್ದಾಗ ಮಾತ್ರ ಬೆನ್ನು (ಬೆನ್ನಿ), ಕಾಲ್ ಇಡ್ತಾನೆ.. !!!
ಕುಮಾರ್ ಅವರಿಗೆ—–ನಾನು ನಮ್ಮ ಪ್ರಗತಿಪರರ,ಬುದ್ಧಿಜೀವಿಗಳ ಎಡಬಿಡಂಗಿತನವನ್ನು ವ್ಯಂಗ್ಯವಾಗಿ ಹೇಳಿದ್ದು. ಹಿಂದುಗಳ ವಿಷಯಕ್ಕೆ ಒಂದು ನೀತಿ;ಅಲ್ಪ ಸಂಖ್ಯಾತರೆಂಬ ಹಣೆಪಟ್ಟಿ ಧರಿಸಿದವರಿಗೊಂದು ನೀತಿ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣದ ನ್ಯಾಯ.
ಸರ್,
ನಾನು ಮಾತು ಸರಿಯಾಗಿಯೇ ಇದೆ. ಇಲ್ಲಸಲ್ಲದ ವಾದಗಳನ್ನು ಮುಂದಿಟ್ಟು ಸಿಕ್ಯುಲರ್^ಗಳು ಆತನನ್ನು ಸಮರ್ಥಿಸಿಕೊಳ್ಳುತ್ತಾರೆ.
ಅವರ ನಿಜವಾದ ಬಣ್ಣವನ್ನು, ನಾವು ಪ್ರಶ್ನೆಗಳ ಬಾಣಗಳನ್ನೆಸೆದು ಬಯಲಿಗೆಳೆಯಬೇಕು.
ಬೆನ್ನಿ ಹಿನ್ ಅನ್ನು ಅಲ್ಪಸಂಖ್ಯಾತರ ಪ್ರತಿನಿಧಿ ಎಂದೂ ಅವರು ಸಮರ್ಥಿಸಬಹುದು.
ಅದಕ್ಕೆ ನನ್ನ ಪ್ರಶ್ನೆ: ಅವನು ಹೇಗೆ ಅಲ್ಪಸಂಖ್ಯಾತನಾಗುತ್ತಾನೆ? ಪರದೇಶದವನೊಬ್ಬ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತನೆನಿಸಿಕೊಳ್ಳಬಹುದೇ? ನಮ್ಮ ಸಂವಿಧಾನದ ಪ್ರಕಾರ, ಪರದೇಶದವನು, ಇಲ್ಲಿ ಅಲ್ಪಸಂಖ್ಯಾತನಾಗಲಾರ ಮತ್ತು ಹೀಗಾಗಿ, ಆತ ಅಲ್ಪಸಂಖ್ಯಾತರ ಪ್ರತಿನಿಧಿಯೂ ಆಗಲಾರ.
ಹಾಗೆ ನೋಡಿದರೆ, ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎನ್ನುವ ಪದಗಳೇ ದಾರಿತಪ್ಪಿಸುವಂತಹ ಪದಗಳು.
ನಮ್ಮ ದೇಶದಲ್ಲಿರುವ ಸಮಸ್ತರೂ, ಒಂದೇ ಜನಾಂಗಕ್ಕೆ ಸೇರಿದವರು. ಕಾರಣಾಂತರಗಳಿಂದ ಅವರು ಮತಾಂತರಗೊಂಡಿರಬಹುದು ಅಷ್ಟೇ. ಭಾರತವು ಜಾತ್ಯಾತೀತವಾಗಿರುವಾಗ (ಅಂದರೆ, ಸರಕಾರದ ಕಣ್ಣಿಗೆ ಜನರ ಜಾತಿ-ಮತಗಳು ಕಾಣುವುದಿಲ್ಲ), ಜನರನ್ನು ಅಲ್ಪಸಂಖ್ಯಾತ ಎಂದು ಕರೆಯುವುದು ಸಂವಿಧಾನ ವಿರೋಧಿ ಎನಿಸುವುದಿಲ್ಲವೇ?
ದಯವಿಟ್ಟು, ಈ ವಾಕ್ಯವನ್ನು:
“ಸರ್, ನಾನು ಮಾತು ಸರಿಯಾಗಿಯೇ ಇದೆ.”
ಈ ರೀತಿ ತಿದ್ದಿಕೊಂಡು ಓದಿ:
“ಸರ್, ನಿಮ್ಮ ಮಾತು ಸರಿಯಾಗಿಯೇ ಇದೆ.”
ಬೆನ್ನಿಹಿನ್ ಯಾರ ಹೆಸರು ಹೇಳಿಕೊಂಡು ಭಾರತಕ್ಕೆ ಬರುತ್ತಿದ್ದಾನೋ ಆ ಜನಾಂಗಕ್ಕೆ ಸೇರಿದವರ ಮುಖ್ಯ(head office) ಶ್ರದ್ಧಾ ಕೇಂದ್ರ ವಿದೇಶದಲ್ಲಿದೆ.ಇಲ್ಲಿ ಆತನನ್ನು ನಿಷೇದಿಸಿದರೆ “ದೊಡ್ಡಣ್ಣ”ನಿಗೆ ಕೋಪ ಬರುತ್ತದೆ. ಆ ಮೇಲೆ ವಿಶ್ವಸಂಸ್ಥೆಯಿಂದ ಭಾರತಕ್ಕೆ breaking news ಬರುತ್ತದೆ. ಹೀಗೆ ಸರಣಿ ಮುಂದುವರಿಯುತ್ತದೆ.
ನಾನು ಈಗ ಯುವಕನಾಗಿದ್ದರೆ ಮೋದಿಯನ್ನು ಮುಕ್ಕಿ ಬಿಡುತಿದ್ದೆ ಅನ್ನುವ ಮೂರ್ತಿ ಸಾರ್ ಅವರ ತಲೆಯ ಮೇಲೆ ಬೆನ್ನಿಹಿನ್ ಕೈ ಇಡಿಸಿ ಪವಾಡ ಮಾಡಿಸುವ ಅಗತ್ಯವಿದೆ.ಸಾಕ್ಷಿಪ್ರಜ್ನೆಯವರಿಗೆ ಆ ರೀತಿಯ ಶಕ್ತಿ ತಂದು ಈ ಮತೀಯ ಶಕ್ತಿಗಳ ಹೋರಾಡಿಸುವ ಅಗತ್ಯವಿದೆ.ಹಾಗಾಗಿ ಬೆನ್ನಿಹಿನ್ ಬಳಿಗೆ ಸಾಕ್ಷಿಪ್ರಜ್ನೆಯನ್ನು ಕರೆದುಹೋಗಬೇಕಾದ ಜವಬ್ದಾರಿ ಪ್ರಗತಿಪರರ ಮೇಲಿದೆ
ಮೊದಲು ಮೊಘಲರು, ನಂತರ ಬ್ರಿಟಿಷರು ನೇರವಾಗಿ ದಾಳಿ ಮಾಡಿ ಶತಮಾನಗಳಷ್ಟು ಕಾಲ ಆಳಿದ್ರು…
ಇದೀಗ ಪರೋಕ್ಷವಾಗಿ ವಿದೇಶಿಯರಿಗೆ ದೇಶವಾಸಿಗಳನ್ನು ಮಾರಿಬಿಡುವ ಕೆಲಸ ನಡೆಯುತ್ತಿದೆ… ಇದು ಆರ್ಥಿಕ ವಿಚಾರದಲ್ಲೂ ಅಷ್ಟೇ; ಧಾರ್ಮಿಕ ವಿಚಾರದಲ್ಲೂ ಅಷ್ಟೇ.
ಪ್ರತಿಯೊಬ್ಬರಲ್ಲೂ ‘ನಮ್ಮತನ’ ಬರುವವರೆಗೂ ಗುಲಾಮಿ ಮನಸ್ಥಿತಿಯಿಂದ ಮುಕ್ತಿಯಿಲ್ಲ!
ನಮ್ಮದೇ ಧರ್ಮ, ಸಂಸ್ಕೃತಿಯನ್ನು ತಮ್ಮ ತಮ್ಮ ಹಣದಾಹಕ್ಕೆ ಬಳಸಿಕೊಳ್ಳುವ ಇಲ್ಲಿನ ಕೆಲವು ಕಿಡಿಗೇಡಿಗಳು, ಹಾಗೆ ಇಂತಹ ಕೆಲವೊಂದು ನ್ಯೂನ್ಯತೆಗಳನ್ನೇ ದಾಳ ಮಾಡಿಕೊಂಡು ಪರಕೀಯರನ್ನು ಸಮರ್ಥಿಸಿಕೊಳ್ಳುವ ‘ಬುದ್ಧು’ಗಳಿರುವವರೆಗೂ ಇದೆಲ್ಲಾ ಸಹಜವೇ!
ಸರಿಯಾಗಿ ಹೇಳಿದಿರಿ.
ನಮ್ಮ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ದೊಡ್ಡ ಆರ್ಥಿಕ ತಜ್ಞ ಎಂದು ಹೊಗಳಿ ಅಟ್ಟಕ್ಕೇರಿಸಿರುವರು. ಆದರೆ, ಕಳೆದ 10 ವರ್ಷಗಳಲ್ಲಿ ಅವರದೇ ನೇತೃತ್ವದಲ್ಲಿ ನಡೆದಿರುವ ಸರಕಾರದ ಅವಧಿಯಲ್ಲಿ ನಮ್ಮ ದೇಶದ ಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂಬುದನ್ನು ತಿಳಿಯಲು, ಈ ಕೊಂಡಿಯನ್ನೊಮ್ಮೆ ತೆಗೆದು ನೋಡಿ:
http://ssnarendrakumar.blogspot.com/2014/01/drmanmohan-singh-can-you-please-help-me.html
ಎಲ್ಲ ರಂಗದಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿರುವ ಯುಪಿಎ ಸರಕಾರ, “ಜಾತ್ಯಾತೀತತೆ” ಎಂಬುದನ್ನು ಬೆದರುಗೊಂಬೆಯಾಗಿ ಹಿಡಿದಿದೆಯಷ್ಟೇ! ಇದೇ ಗುಮ್ಮನನ್ನು ನಮ್ಮ ತಥಾಕಥಿತ ಪ್ರಗತಿಶೀಲರೂ ತಲೆಯಮೇಲೆ ಎತ್ತಿ ಆಡಿಸುತ್ತಿದ್ದಾರೆ!! ಮುಳುಗುವವನಿಗೆ ಹುಲ್ಲುಗಡ್ಡಿಯೂ ಆಸರೆ ಎನ್ನುವಂತೆ, ಇವರಿಗೆ ಬೆನ್ನಿ ಹಿನ್ ಕೂಡಾ “ಜಾತ್ಯಾತೀತ, ಪ್ರಗತಿಪರ, ಅಲ್ಪಸಂಖ್ಯಾತ ಪ್ರತಿನಿಧಿ, ವೈಜ್ಞಾನಿಕ ನಾಯಕ”ನಾಗಿ ಕಾಣುವನು! 😉