ವಿಷಯದ ವಿವರಗಳಿಗೆ ದಾಟಿರಿ

ಜನವರಿ 10, 2014

12

ಸಂಸ್ಕಾರ ಮತ್ತು ದಾಟು ಕಾದಂಬರಿಗಳಲ್ಲಿ ಜಾತಿ ಸಮಸ್ಯೆಗಳು

‍ನಿಲುಮೆ ಮೂಲಕ

– ಮು ಅ ಶ್ರೀರಂಗ ಬೆಂಗಳೂರು

ದಾಟು - ಭೈರಪ್ಪಈ ಲೇಖನವನ್ನು ನಾನು ಭೈರಪ್ಪನವರ ಕಾದಂಬರಿಗಳನ್ನು ಕುರಿತ ವಿಮರ್ಶೆಗಳ ಲೇಖನಮಾಲೆ ಮುಗಿದ ನಂತರ ಬರೆಯೋಣವೆಂದುಕೊಂಡಿದ್ದೆ. ಆದರೆ ಆ ಲೇಖನಗಳ ಸರಣಿಯಲ್ಲಿ ಇನ್ನು ಚರ್ಚಿಸಬೇಕಾದ ಕಾದಂಬರಿಗಳು “ಆವರಣ” ಮತ್ತು “ಕವಲು” ಮಾತ್ರ. ಇವುಗಳಲ್ಲಿ ಜಾತಿಯ ಸಮಸ್ಯೆಗಳ ಪ್ರಸ್ತಾಪವಿಲ್ಲದಿರುವುದರಿಂದ ಈಗಲೇ ಬರೆಯುವುದು ಸೂಕ್ತವೆನಿಸಿದೆ.

ಸಂಸ್ಕಾರ ಮತ್ತು ದಾಟು ಕಾದಂಬರಿಗಳನ್ನು ಕುರಿತಂತೆ ನಡೆದ ಚರ್ಚೆಗಳು ಪ್ರಾರಂಭದಲ್ಲಿ ವಿಚಾರಗಳ ವಿನಿಮಯದಂತೆ ಕಂಡರೂ ನಂತರದಲ್ಲಿ ಕವಲು ದಾರಿ ಹಿಡಿದವು. ಇದಕ್ಕೆ ನನಗನಿಸುವಂತೆ ಬಹುಶಃ ಜಾತಿ ಸಮಸ್ಯೆಯನ್ನು ಸಾಹಿತ್ಯವು ಅರಿಯಲು ನಡೆಸುವ ಪ್ರಯತ್ನಕ್ಕೂ ಅದೇ ಸಮಸ್ಯೆಯನ್ನು ಆಧಾರ,ಸಿದ್ಧಾಂತ,ಊಹೆ,ತರ್ಕ ಇತ್ಯಾದಿಗಳ ಮೂಲಕ ಬಿಡಿಸಲು ಪ್ರಯತ್ನಿಸುವ ಮಾನವಿಕ ಶಾಸ್ತ್ರಗಳಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಮನಗಾಣಿಸುವುದರಲ್ಲಿ ಆ ಚರ್ಚೆಗಳು ನಡೆಯದೇ ಹೋದದ್ದು. ಇದುವರೆಗೆ ಮಾನವಿಕ ಶಾಸ್ತ್ರಗಳು ತಮ್ಮ ಅಧ್ಯಯನದ ಮೂಲಕ ಕಂಡುಕೊಂಡಿರುವ ನಮ್ಮ ಸಮಾಜದ ಬಗೆಗಿನ ತಿಳುವಳಿಕೆಗಳನ್ನು ಆಧರಿಸಿ ಆ ಚೌಕಟ್ಟಿಗೆ ಈ ಸಾಹಿತ್ಯ ಕೃತಿಗಳು ಹೊಂದುವುದಿಲ್ಲ ಎಂದು ಒಂದೇ ಏಟಿಗೆ ಪಕ್ಕಕ್ಕೆ ಸರಿಸುವುದನ್ನು ಸಾಹಿತ್ಯದ ಒಬ್ಬ ಓದುಗನಾಗಿ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಸಾಹಿತ್ಯವನ್ನು ಜನಜೀವನದ ನಾಡಿಮಿಡಿತದ ಪ್ರತಿಧ್ವನಿ ಎಂದು ಹೇಳಲಾಗುತ್ತದೆ . ಮಾನವಿಕ ಶಾಸ್ತ್ರಗಳ ಮತ್ತು ಆಗಾಗ ಸಾಹಿತ್ಯದಲ್ಲೇ ಹುಟ್ಟುವ ಪಂಥ,ಪಂಗಡಗಳ ಪರಿಧಿಯನ್ನೂ ದಾಟಿ ನಿಲ್ಲುವ ಕೃತಿಗಳು ನಮ್ಮಲಿವೆ. ಮುಖಾಮುಖಿ ಸರಣಿಯ ಹಿಂದಿನ  ಮೂರು ಲೇಖನಗಳಲ್ಲಿ ಪ್ರಸ್ತಾಪಿಸಿದ ನಾಲ್ಕೂ ಕಾದಂಬರಿಗಳ ಬಗ್ಗೆ ಬಂದ ಪ್ರಮುಖ ಆರೋಪಗಳನ್ನು ಸಂಕ್ಷಿಪ್ತವಾಗಿ ಹೀಗೆ ಪಟ್ಟಿಮಾಡಬಹುದು (ಪ್ರಸ್ತುತ ಲೇಖನಕ್ಕೆ ಸಂಸ್ಕಾರ ಮತ್ತು ದಾಟು ಕಾದಂಬರಿಗಳನ್ನು ಮಾತ್ರ ಚರ್ಚೆಗೆ ತೆಗೆದುಕೊಳ್ಳಲಾಗಿದೆ).
೧. ಭಾರತೀಯ ಸಮಾಜ ಕುರಿತಂತೆ ಓರಿಯಂಟಲಿಸ್ಟ್ ವಿವರಣೆಗಳ ಪುನರುತ್ಪಾದನೆ.
೨. ಧರ್ಮಶಾಸ್ತ್ರಾಧಾರಿತ ಸಾಮಾಜಿಕ ಜೀವನಚಿತ್ರಣ.
೩. ವಸಾಹತುಶಾಹಿ ಕಾಲದ ಚಿತ್ರಣಗಳ ಪುನರುತ್ಪಾದನೆ.
ಈ ಮೂರೂ ಆಕ್ಷೇಪಣೆಗಳ ಒಟ್ಟು ಮೊತ್ತವೆಂದರೆ ಸಂಸ್ಕಾರ ಮತ್ತು ದಾಟು ಕಾದಂಬರಿಗಳಲ್ಲಿನ ಜೀವನ ಚಿತ್ರಣ ನೈಜವಲ್ಲ; ಕಲ್ಪನೆ. ಇದರ ಜತೆಗೆ ಒಂದು ಸಾಹಿತ್ಯ ಕೃತಿಯ ರಚನೆಯ ಸಂದರ್ಭದಲ್ಲಿ  ಆ ಕೃತಿಯ ಒಳಗೆ ಸೇರಿರಬಹುದಾದ ಆ ಸಾಹಿತಿಗಳ ಅನುಭವಗಳನ್ನು ಕೆಲಸಕ್ಕೆ ಬಾರದವು ಎಂಬ ತೀರ್ಮಾನ. ಈ ಚರ್ಚೆಯ ನಡುವೆ ಬೆಂಗಳೂರಿನಿಂದ ಪ್ರಕಟವಾಗುವ ‘ಸಂಚಯ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ‘ಸಂಸ್ಕಾರ’ ಕಾದಂಬರಿಯ ಬಗ್ಗೆ ಬಂದ ಲೇಖನದ ಬಗ್ಗೆ ನಾನು ಬರೆದ ಪ್ರತಿಕ್ರಿಯೆಯ ಪ್ರಸ್ತಾಪ ಬಂದಿದೆ. ಅದರಲ್ಲಿ ನಾನು ಹೇಳಿದ “ಒಂದು ಕೃತಿಯನ್ನು ಅದರ space, text ಮತ್ತು time ನಿಂದ ಬೇರ್ಪಡಿಸಿ ನೋಡಿದಾಗ ಮಾತ್ರ ‘ಸಂಸ್ಕಾರ ಕಾದಂಬರಿಯ ಲಿಂಗ ವಿವಕ್ಷೆಯು’ ಎಂಬಂತಹ ಲೇಖನಗಳು ಹುಟ್ಟಿಕೊಳ್ಳುತ್ತವೆ” ಎಂಬ ಒಂದು ಮಾತು ಸದ್ಯದ ನಮ್ಮ ಚರ್ಚೆಗೆ ಸಾಕು. (ವಿವಕ್ಷೆ=ಬಯಕೆ,ಆಸೆ,ವಿವರಣೆ,ವಿಭಜನೆ,ಅರ್ಥ)

—-೨—-
ಸಂಸ್ಕಾರ - ಅನಂತ ಮೂರ್ತಿನಮ್ಮ ನಡುವೆ ಈಗಲೂ ಇರುವ ಜಾತಿಗಳನ್ನು/ಜಾತಿ ಸಮಸ್ಯೆಗಳನ್ನು ಮೇಲೆ ಕಾಣಿಸಿದ ಮೂರು ಆಕ್ಷೇಪಣಾ ಪಟ್ಟಿಗಳಿಂದ ಹೆಸರಿಸಿ ಅಥವಾ ಇನ್ನೂ ಮೂರು ಹೊಸ ಪರಿಭಾಷೆಗಳಿಂದ ಕರೆಯಿರಿ, ಜಾತಿಯ definition  ಬದಲಾಯಿಸಿ; ಅದರಿಂದ ಜಾತಿಯ ಅಸ್ತಿತ್ವವನ್ನು ನಿರಾಕರಿಸಲು ಸಾಧ್ಯವಿಲ್ಲ. ಅದೇ ರೀತಿ ಅವುಗಳ ಒಳಗೊಳಗೇ ಇರುವ ತಣ್ಣನೆಯ ವೈಷಮ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಈ ವೈಷಮ್ಯಕ್ಕೆ ಮೇಲ್ಜಾತಿಗಳು ಕೊಡುವ ಕಾರಣಗಳು; ಕೆಳಜಾತಿಗಳು ನೀಡುವ ಕಾರಣಗಳು–ಇವೆರಡನ್ನೂ ಮರೆತು ಮಾತನಾಡುವ ಸ್ಥಿತಿಯಲ್ಲಿ/ಸನ್ನಿವೇಶದಲ್ಲಿ ನಾವು ಈಗ ಇಲ್ಲ. ಭಾರತ ಎಂದರೆ ಬಹು ಸಂಸ್ಕೃತಿಗಳ, ಬಹು ದೇವತೆಗಳ ಉಪಾಸನೆಯ, ನಾನಾ ನಂಬಿಕೆಗಳ ಮೊತ್ತ ಎಂದೇ ಹೇಳೋಣ. ಏನೇ ಹೇಳಿದರೂ ಆ ನಾನಾ ಸಂಸ್ಕೃತಿ, ನಂಬಿಕೆಗಳ ಒಳಗೇ ಜಾತಿಗಳು ಇವೆ; ಆ ಜಾತಿಗಳ ನಡುವೆಯೇ ತಾರತಮ್ಯವೂ ಇದೆ. ನಮ್ಮ ಕರ್ನಾಟಕದ ವಿಷಯವನ್ನೇ ತೆಗೆದುಕೊಳ್ಳೋಣ. ೧೯೭೫ರಲ್ಲಿ ದೇವರಾಜ ಅರಸು ಅವರು ಮುಖ್ಯ ಮಂತ್ರಿಗಳಾಗಿದ್ದಾಗ ಹಿಂದುಳಿದ ಜಾತಿ,ಪಂಗಡಗಳನ್ನು ಆರ್ಥಿಕವಾಗಿ,ಸಾಮಾಜಿಕವಾಗಿ ಕೆಳಹಂತದಿಂದ ಮೇಲಕ್ಕೆ ತರಲು ಹಾವನೂರು ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದರು. ಇದರಿಂದ ಆ ಜಾತಿ,ಪಂಗಡಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜತೆಗೆ ಇನ್ನಿತರ ಸಮಾಜ ಕಲ್ಯಾಣ ಯೋಜನೆಗಳು ಪ್ರಾರಂಭವಾದವು. ಆಗ ಈ ಜಾತಿಗಳು ಓರಿಯಂಟಲಿಸ್ಟರ ವಿವರಣೆಗಳ ಪುನರುತ್ಪಾದನೆ,ಧರ್ಮಶಾಸ್ತ್ರಾಧಾರಿತ ಸಾಮಾಜಿಕ ಜೀವನದ ಕಲ್ಪನೆ ಇತ್ಯಾದಿಗಳು ಗಣನೆಗೆ ಬರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಕಾದಂಬರಿಯಲ್ಲಿ ಬರುವ ಜಾತಿಗಳ ವಿವರಣೆ,ವ್ಯಾಖ್ಯಾನಗಳನ್ನು ಅವು ಈ ನೆಲದವಲ್ಲ; ಬ್ರಿಟಿಷರು ಮಾಡಿದ್ದು; ಒರಿಯಂಟಲಿಸ್ಟರ ರೋಮ್ಯಾಂಟಿಕ್ ಕಲ್ಪನೆ ಎಂದು ಅರ್ಥೈಸಿ ಆ ಕಾದಂಬರಿಯ ಮೌಲ್ಯಮಾಪನವನ್ನು ಮಾಡುವುದು  ಸಾಧುವಲ್ಲ. ಈ ಅರ್ಥದಲ್ಲಿ ನಾನು ಸಾಹಿತ್ಯವನ್ನು ಸಾಹಿತ್ಯೇತರ ವಿಧಾನಗಳಿಂದ ನೋಡಿದರೆ ಆಗಬಹುದಾದ ಪ್ರಮಾದಗಳೆಂದು ಹೇಳಿದ್ದು. ಜತೆಗೆ ಹೀಗಾದಾಗ ಸಾಹಿತ್ಯ ವಿಮರ್ಶೆಯ ಪಾಡೇನು ಎಂದು ಕೇಳಿದ್ದು. ಈ ಹಿಂದೆಯೂ ಸಹ ನಮ್ಮ ಕೆಲವು ಸಾಹಿತ್ಯ ವಿಮರ್ಶಕರಿಗೆ  ಮಾರ್ಕ್ಸ್ ವಾದ,ಸಮಾಜವಾದ,ಸಾಹಿತ್ಯದಲ್ಲಿ ಬ್ರಾಹ್ಮಣ-ಶೂದ್ರದ ಕಲ್ಪನೆ,ಪ್ರತಿಗಾಮಿ –ಪ್ರಗತಿಗಾಮಿ ಮುಂತಾದವು ಆಕರ್ಷಕವಾಗಿದ್ದಾಗ ಸಾಹಿತ್ಯ ವಿಮರ್ಶೆಯೆಂಬ ಹೆಸರಿನಲ್ಲಿ ಸಾಹಿತ್ಯದ ರಾಜಕೀಯ ನಡೆದದ್ದು ಉಂಟು
——೩——-
“ಸಂಸ್ಕಾರ” ಕಾದಂಬರಿಯಲ್ಲಿ ನಾರಾಣಪ್ಪನು ಹುಟ್ಟಿನಿಂದ ಬ್ರಾಹ್ಮಣನಾದರೂ ತನ್ನ ಜೀವನದಲ್ಲಿ ಬ್ರಾಹ್ಮಣ್ಯದ ಎಲ್ಲ ರೀತಿ-ರಿವಾಜುಗಳಿಗೆ ವಿರುದ್ಧವಾಗಿ ಬದುಕಿದವನು. ಈತ  ಸತ್ತಾಗ ಅವನ ಶವ ಸಂಸ್ಕಾರ ಹೇಗೆ ಮಾಡಬೇಕೆಂಬ ಪ್ರಶ್ನೆ ಎದುರಾದಾಗ ಪ್ರಾಣೇಶಾಚಾರ್ಯರು ಧರ್ಮಶಾಸ್ತ್ರದ ಗ್ರಂಥಗಳಲ್ಲಿ ಉತ್ತರವಿದೆಯೇ ಎಂದು ತಿಳಿಯಲು ಪ್ರಯತ್ನಿಸಿದ್ದು ‘ನಿಲುಮೆ’ಯಲ್ಲಿ ನಡೆದ ಚರ್ಚೆ ಮತ್ತು ಪ್ರತಿಕ್ರಿಯೆಗಳಲ್ಲಿ ಟೀಕೆಗೆ ಒಳಗಾಗಿದೆ. ನಾರಾಣಪ್ಪನನ್ನು ಬ್ರಾಹ್ಮಣ ಜಾತಿಯಿಂದ ಬಹಿಷ್ಕರಿಸಿರಲಿಲ್ಲ. ‘ಅವನು ಬ್ರಾಹ್ಮಣ್ಯವನ್ನು ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಡಲಿಲ್ಲ. ಶಾಸ್ತ್ರ ರೀತಿಯಲ್ಲಿ ಅವನು ಬಹಿಷ್ಕೃತನಾಗದೇ ಸತ್ತದ್ದರಿಂದ,ಅವನು ಬ್ರಾಹ್ಮಣನಾಗಿಯೇ ಸತ್ತಂತೆ’. (ಸಂಸ್ಕಾರ ಪುಟ ೯). ಇದು ದೂರ್ವಾಸಪುರಕ್ಕೆ ಪರಿಚಿತವಲ್ಲದ ಸಮಸ್ಯೆ ಆಗಿನ್ನೂ ಬ್ರಾಹ್ಮಣರ ಮೇಲೆ ಮಠದ ಹಿಡಿತವಿದ್ದುದರಿಂದ ಅವರು ಧರ್ಮಶಾಸ್ತ್ರಗಳಲ್ಲಿ ಏನು ಹೇಳಿದೆ ಎಂದು ನೋಡಿಯೇ ಅವನ ಸಂಸ್ಕಾರ ಮಾಡಬೇಕಿತ್ತು. ಈ ಸಮಸ್ಯೆಯನ್ನು ಯಾವ ಹೆಸರಿಂದಲೇ ಕರೆಯಿರಿ; ಕರ್ನಾಟಕದ್ದು/ ಭಾರತದ್ದು ಅಲ್ಲವೇ ಅಲ್ಲ ಎನ್ನಿರಿ. ಕಥೆಯ ಆ “ಕಾಲಕ್ಕೆ” ಧರ್ಮಶಾಸ್ತ್ರಗಳ ಉತ್ತರ,ತಮ್ಮ ಮಠದ ಅವಕೃಪೆಗೆ ಪಾತ್ರರಾಗದೇ ಇರುವಂತಹ ಪರಿಹಾರ ಅಗ್ರಹಾರದ ಆ ಬ್ರಾಹ್ಮಣರಿಗೆ ಬೇಕಾಗಿತ್ತು. ಆ ಕಾಲದ (time) ಪರಿಸ್ಥಿತಿಯನ್ನು ಪಕ್ಕಕ್ಕಿಟ್ಟು ನಡೆಸುವ ಇಂದಿನ ನಮ್ಮ ಸಮಾಜಶಾಸ್ತ್ರೀಯ ಚರ್ಚೆಗಳು ಆ ಕಾದಂಬರಿಯ ವಿಮರ್ಶೆಗೆ ಸಹಕಾರಿಯಾಗಲಾರವು.
——೪——
ಕಾದಂಬರಿಯೊಂದರಲ್ಲಿ  ಬರುವ ಕೆಲವು ಸನ್ನಿವೇಶಗಳನ್ನು ಕೇವಲ ಮಾನವಿಕ ಶಾಸ್ತ್ರಗಳು ಮತ್ತು ಇತರ ಆಧಾರಗಳಿಂದಷ್ಟೇ ನೋಡದೆ ಅವು “ಸಾಹಿತ್ಯದಲ್ಲಿನ ರೂಪಕಗಳು ಹಾಗು ಸಂಕೇತಗಳು”ಎಂದೂ ನೋಡಬೇಕಾಗುತ್ತದೆ. ಅವು ಕಾದಂಬರಿಯೊಂದರ ವಸ್ತುವಿನ ಚಿತ್ರಣಕ್ಕೆ ಪೂರಕವಾಗಿರುತ್ತದೆ. ಇದಕ್ಕೆ ಒಂದು ಉತ್ತಮ ನಿದರ್ಶನ “ದಾಟು” ಕಾದಂಬರಿಯಲ್ಲಿ ಬರುವ ಜಾತಿಗಳ/ಉಪಜಾತಿಗಳ ಮೇಲು-ಕೀಳು ಪ್ರಸ್ತಾಪದ ದೃಶ್ಯ ಮತ್ತು ಅದಕ್ಕೆ ಹಿಂದೆ ನಡೆದ ಸತ್ಯಭಾಮೆ-ವೆಂಕಟೇಶರ ನಡುವಿನ ಸಂಭಾಷಣೆ. ಅದನ್ನು ನಾನು ನನ್ನ ಪ್ರತಿಕ್ರಿಯೆಯಲ್ಲಿ ಈ ಹಿಂದೆ ತಿಳಿಸಿದ್ದೆ.(ಜತೆಗೆ ನನ್ನ ಅನುಭವಕ್ಕೆ ಬಂದ ಇದರ modernized ರೂಪವನ್ನೂ ತಿಳಿಸಿದ್ದೆ). ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದಾಟು  ಕಾದಂಬರಿಯಲ್ಲಿ  ಆ ನಿರ್ಣಯದ ಸಭೆ ಪೂರ್ತಿ ನಡೆಯದೆ ಗಲಭೆಯಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿ ಯಾವ ತೀರ್ಮಾನವೂ ಆಗುವುದಿಲ್ಲ. ಕಾರಣ  ಆ ಸಭೆಗೆ  ಸತ್ಯಭಾಮೆಯ  ಮಧ್ಯಪ್ರವೇಶ.  ಆದರೆ ಅಲ್ಲಿ ತನಕ ನಡೆದ ಘಟನೆಗಳಲ್ಲಿ  ಜಾತಿಗಳ ಶ್ರೇಣೀಕರಣದಲ್ಲಿ ಆದಷ್ಟೂ ತಾವು ಮೇಲಿರಬೇಕು ಎಂಬ ಜನಗಳ ತುಡಿತವನ್ನು ನಾವು ಕಾಣಬಹುದು. ಇದು ಈಗಲೂ ಈ ಕ್ಷಣಕ್ಕೂ ಮುಂದುವರಿದಿದೆ. ಇಂದು ಬ್ರಾಹ್ಮಣರು ನಾನಾ ಕಾರಣಗಳಿಂದ ಬಿಡುತ್ತಾ ಬಂದಿರುವ ಆಚರಣೆಗಳನ್ನು/ಪೂಜೆ/ವ್ರತ/ನಿಯಮಗಳನ್ನು  ಇತರೆ ಜಾತಿಗಳು ಪ್ರಾರಂಭಿಸಿಕೊಂಡಿದ್ದಾರೆ. ಇಂತಹ ‘ನವ ಬ್ರಾಹ್ಮಣರ’ ಸಂಕೇತವಾಗಿ ದಾಟು ಕಾದಂಬರಿಯ ಪಟೇಲ್ ತಿರುಮಲೇಗೌಡನಿದ್ದಾನೆ. ಹೊಸ ಕಾನೂನುಗಳು ಬಂದ ಮೇಲೆ ದೇವಸ್ಥಾನದ ಪೂಜೆಗೆಂದು ಕೊಟ್ಟಿರುವ ಇನಾಮತಿ ಜಮೀನು ಸರ್ಕಾರದ ಪಾಲಾಗುತ್ತದೆಂದು ತಿಳಿದ ವೆಂಕಟೇಶ ತನ್ನ ಜೀವನೋಪಾಯಕ್ಕೆ ಲೇವಾದೇವಿ,ಹೋಟೆಲ್,ಊರಿನ ಸಣ್ಣ ಪುಟ್ಟ ರಾಜಕೀಯಗಳಂತಹ ಪರ್ಯಾಯ ದಾರಿಗಳ ಕಡೆ ಗಮನ ಹರಿಸಿರುವಂತಹವನು. ದೇವಸ್ಥಾನದ ಪೂಜಾರಿಯ ಕೆಲಸ ಊರಿನಲ್ಲಿ ತನ್ನ ಘನತೆಗೆ ಕುಂದು ಎಂದು ಅವನ ತಂದೆ ಸತ್ತನಂತರ ಪೂಜಾರಿ ಕೆಲಸಕ್ಕೆ ತನ್ನ ಪರವಾಗಿ ಬೇರೊಬ್ಬರನ್ನು ನೇಮಿಸಿಕೊಂಡಿರುವಂತಹವನು.(ಇಂದಿರಾಗಾಂಧಿ  ಮತ್ತು ದೇವರಾಜ ಅರಸು ಅವರ ಸರ್ಕಾರಗಳ  ‘ಗರೀಬಿ ಹಟಾವೋ”ಮತ್ತು “ಉಳುವವನಿಗೇ ಭೂಮಿ” ಕಾನೂನುಗಳಿಂದ ಇನಾಮತಿ ಜಮೀನುಗಳು ಪೂಜಾರಿಗಳ ಕೈ ತಪ್ಪಿದ್ದು   ಈಗ ಎಲ್ಲರಿಗೂ ತಿಳಿದ ವಿಷಯ. . ಈ ಕಾನೂನುಗಳ ಹಿಂದಿನ ಆಶಯವನ್ನು ನಾನು ಪ್ರಶ್ನಿಸುತ್ತಿಲ್ಲ. ಇವು ಉತ್ತಮವಾದ,ಆಗಲೇ ಬೇಕಾಗಿದ್ದ ಕೆಲಸಗಳು. ಇದನ್ನು ನಾನು ಮರೆತಿಲ್ಲ).ಇದು ಸಾಹಿತ್ಯ ನಮ್ಮ ಸಮಾಜದ ಸತ್ಯವನ್ನು ತಿಳಿಸುವ ರೀತಿ. ಇದನ್ನು ಕಡೆಗಣಿಸುವುದು ಹೇಗೆ ಸಾಧ್ಯ?

ಭೈರಪ್ಪ ಮತ್ತು ಅನಂತಮೂರ್ತಿಯವರು ತಮ್ಮ ಕೆಲವು ಕಾದಂಬರಿಗಳ/ಕಥೆಗಳ ರಚನೆಗೆ ಅವರ  ಜೀವನದ ಕೆಲವು ಅನುಭವಗಳು ಹೇಗೆ ಒಂದಲ್ಲ ಒಂದು ರೂಪದಲ್ಲಿ ಕಾರಣವಾಗಿದೆ ಎಂಬುದನ್ನು ತಮ್ಮ   ಲೇಖನಗಳ ಸಂಗ್ರಹ ಮತ್ತು ಆತ್ಮಕಥೆಗಳಲ್ಲಿ ವಿವರಿಸಿದ್ದಾರೆ. ಸಾಹಿತಿಗಳ ಜೀವನಾನುಭವಕ್ಕೂ ಅವರ ಸೃಜನಶೀಲತೆಗೂ ಸಂಬಂಧವಿದೆ ಎಂದು ನಾನು ನಂಬಿದ್ದೇನೆ. ಭೈರಪ್ಪನವರು “ಪರ್ವ”ಕಾದಂಬರಿ ಬರೆಯಲು ನಡೆಸಿದ ಅಧ್ಯಯನ,ಪ್ರವಾಸ ಮತ್ತು “ಮಂದ್ರ” ಕಾದಂಬರಿ ಬರೆಯಲು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತದ್ದು ಇವೆಲ್ಲಾ ಆ ಕಾದಂಬರಿಗಳಲ್ಲಿ ಪ್ರತಿಫಲನವಾಗಿದೆ.

ಚಿತ್ರ ಕೃಪೆ : ಭೈರಪ್ಪನವರ ಫೇಸ್ಬುಕ್ ಪೇಜ್
ಮತ್ತು http://www.hindu.com  http://www.akrutibooks.com

12 ಟಿಪ್ಪಣಿಗಳು Post a comment
 1. Nagshetty Shetkar
  ಜನ 14 2014

  ಮಿ. ಶ್ರೀರಂಗ, ಘೆಂಟ್ ಬಾಲಂಗೋಚಿಗಳ ಇಂದಿನ ನಮ್ಮ ಸಮಾಜಶಾಸ್ತ್ರೀಯ ಚರ್ಚೆಯನ್ನು ತಿಪ್ಪೆಗುಂಡಿಗೆ ಎಸೆಯೋಣ. ಆದರೆ ಪೂಜಾರಿ ಅವರ ಕೆಳಗಿನ ಅಭಿಪ್ರಾಯಕ್ಕೆ ತಾವು ಏನಂತ ಪ್ರತಿಕ್ರಿಯಿಸುತ್ತೀರಿ? ಕಹಿ ಸತ್ಯವನ್ನೇ ಹೇಳಿದ್ದಾರೆ ಪೂಜಾರಿ ಅವರು!

  “ಶ್ರೇಣಿಕೃತ ಸಮಾಜದಲ್ಲಿ ಎಲ್ಲವೂ ಶ್ರೇಣಿಕೃತವಾಗಿಯೇ ಇರುತ್ತವೆ. ಏಣಿಯ ಬೇರೆ ಬೇರೆ ಹಂತದಲ್ಲಿರುವವರಿಗೆ ಸಂಸ್ಕೃತಿ ಲೋಕ ಕೂಡ ಬೇರೆ ಬೇರೆ ಕಾಣುತ್ತದೆ. ಮೇಲಿದ್ದವರಿಗೆ ಅವರ ದೇವರು, ಭಾಷೆ, ಊಟ ಉಪಚಾರ, ಆಚಾರ ವಿಚಾರಗಳು ಮೇಲಿದ್ದು; ಕೆಳಗಿರುವವರ ದೇವರು, ಭಾಷೆ, ಊಟ ಆಚಾರ ವಿಚಾರಗಳು ಕೆಳಮಟ್ಟದಲ್ಲಿರುವಂತೆ ಕಾಣುತ್ತದೆ. ಅಷ್ಟು ಮಾತ್ರವಲ್ಲ ಮೇಲಿರುವವರು ತಮ್ಮ ಸಾಂಸ್ಕತಿಕ ಸತ್ಯಗಳನ್ನು ಎಲ್ಲರ ಸಾಂಸ್ಕತಿಕ ಸತ್ಯಗಳನ್ನಾಗಿಸಲು ಎಲ್ಲ ವಿಧಗಳಿಂದಲೂ ಪ್ರಯತ್ನಿಸುತ್ತಾರೆ. ಸಂಸ್ಕತಿ, ಅರ್ಥ, ರಾಜಕೀಯಗಳು ಪ್ರತ್ಯೇಕವಾಗಿದ್ದರೆ ಮೇಲ್ವರ್ಗ ತನ್ನ ದೇವರು, ಭಾಷೆ, ಊಟ ಉಪಚಾರಗಳನ್ನು ಎಲ್ಲರ ಸಾಂಸ್ಕೃತಿಕ ಸತ್ಯಗಳನ್ನಾಗಿಸುವುದನ್ನು ವಿರೋಧಿಸುವ ಅಗತ್ಯವಿರಲಿಲ್ಲ. ಆದರೆ ಈಗ ಹಾಗಿಲ್ಲ. ಇವು ಪರಸ್ಪರ ಸಂಬಂಧಿಸಿವೆ. ಯಾರ ಭಾಷೆ, ದೇವರು, ಊಟಗಳು ನಮ್ಮ ಸಂಸ್ಕತಿಯ ಹಣೆಪಟ್ಟಿ ಗಳಿಸುತ್ತದೋ ಅದು ಎಲ್ಲರಿಗೂ ಸಹ್ಯವಾಗುತ್ತವೆ. ಸಮುದಾಯವೊಂದರ ಊಟ ಎಲ್ಲರೂ ಮಾಡಬಹುದಾದರೆ ಅವರು ಎಲ್ಲ ಕಡೆ ಹೋಟೆಲ್ ತೆರೆದು ವ್ಯಾಪಾರ ಮಾಡಬಹುದು. ಕೋಟಿಗಟ್ಟಲೆ ಗಳಿಸಬಹುದು. ಅಂದರೆ ಹೊಟೆಲ್ ತೆರೆದು ವ್ಯಾಪಾರ ಮಾಡಿ ಗಳಿಸುವ ಒಂದು ಅವಕಾಶವನ್ನೇ ಶ್ರೇಣಿಕೃತ ಸಂಸ್ಕತಿ ನಿರಾಕರಿಸುತ್ತದೆ.

  ಇದೇ ರೀತಿ ನಿರ್ದಿಷ್ಟ ಸಮುದಾಯದ ದೇವರಿಗೆ ಎಲ್ಲರೂ ನಡೆದುಕೊಳ್ಳಬಹುದು ಎಂದಾದರೆ ಆ ದೇವರು ಉತ್ತಮ ಆದಾಯ ಗಳಿಸುವ ಕೇಂದ್ರ ಕೂಡ ಆಗುತ್ತದೆ. ಇದರ ಬದಲು ನಿರ್ದಿಷ್ಟ ದೇವರಿಗೆ ಆ ಸಮುದಾಯದವರು ಮಾತ್ರ ನಡೆದುಕೊಳ್ಳುವುದಾದರೆ ಆ ದೇವರು ಹೆಚ್ಚು ಸಂಪಾದಿಸಲು ಸಾಧ್ಯವಾಗುವುದಿಲ್ಲ. ಇತರ ಕ್ಷೇತ್ರಗಳಲ್ಲೂ ಇದೇ ನೀತಿ ಅನ್ವಯವಾಗುತ್ತದೆ. ಹೀಗೆ ತೊಂಬತ್ತರ ದಶಕದ ನಂತರದ ಅಭಿವೃದ್ಧಿ ಅವಕಾಶಗಳು ಕೆಲವರ ಸೊತ್ತಾಗಲು ಶ್ರೇಣಿಕೃತ ಸಂಸ್ಕೃತಿ ಕೂಡ ಸಹಕರಿಸಿದೆ.”

  http://ladaiprakashanabasu.blogspot.in/2014/01/blog-post_3407.html

  ಉತ್ತರ
  • Nagshetty Shetkar
   ಜನ 15 2014

   ಶ್ರೀರಂಗ ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ. ಅವರು ಮೌನ ತಾಳಿದ್ದಾರೆ. ಯಾಕೆ? ಸತ್ಯ ಕಹಿ ಎಂದೇ?

   ಉತ್ತರ
  • akash
   ಜನ 16 2014

   ಸಮುದಾಯವೊಂದರ ಊಟ ಎಲ್ಲರೂ ಮಾಡಬಹುದಾದರೆ ಅವರು ಎಲ್ಲ ಕಡೆ ಹೋಟೆಲ್ ತೆರೆದು ವ್ಯಾಪಾರ ಮಾಡಬಹುದು. ಕೋಟಿಗಟ್ಟಲೆ ಗಳಿಸಬಹುದು. ಅಂದರೆ ಹೊಟೆಲ್ ತೆರೆದು ವ್ಯಾಪಾರ ಮಾಡಿ ಗಳಿಸುವ ಒಂದು ಅವಕಾಶವನ್ನೇ ಶ್ರೇಣಿಕೃತ ಸಂಸ್ಕತಿ ನಿರಾಕರಿಸುತ್ತದೆ.
   ಇವತ್ತು ಇದು ದಲಿತರ ಹೊಟೆಲ್ ಇದು ಬ್ರಾಹ್ಮಣರ ಹೊಟೆಲ್ ಎಂದು ಯಾವ ವ್ಯಕ್ತಿಯು ನೊಡುವದಿಲ್ಲ. ಕೇವಲ ಆ ಹೊಟೆಲಿನ ಊಟ ಉಪಚಾರ ಚನ್ನಾಗಿದೆ ಇಲ್ಲ, ರುಚಿ, ಶುಚಿ ಇದೆ ಇಲ್ಲ ಎಂದು ಮಾತ್ರವೇ ನೋಡಿ ಜನ ಹೊಟೇಲುಗಳಿಗೆ ಹೊಗುತ್ತಾರೆ. ಇನ್ನು ಬೆಂಗಳೂರು ಬಾಂಬೆಗಳಂಥ ನಗರಗಳಲ್ಲಿ ಜಾತಿಗಳು ಹೇಗೆ ಗೊತ್ತಾಗುತ್ತವೆ?? ಎಲ್ಲ ಕಡೆಯ ಜನವೂ ಬಂದು ನೆಲೆಯಾಗಿರುತ್ತಾರೆ. ಎಲ್ಲ್ರರದೂ ಈಗ ಒಂದೇ ತೆರನಾದ ಜಾಗತಿಕ ಸಂಸ್ಕೃತಿ. ಹೀಗಿರುವಾಗ ಕೆಲವು ಅವಕಾಶಗಳು ಕೆಲವರಿಗೆ ಮಾತ್ರ ಸಿಗುತ್ತಿವೆ ಎಂದು ಗೋಳಾಡುವದು ಎಷ್ಟು ಸರಿ?? ಇನ್ನು ನೌಕರಿಯ ಅವಕಾಶಗಳು ಕೆಲವರಿಗೆ ಮಾತ್ರ ಸಿಗುತ್ತಿವೆ ಎಂದು ಹೇಳುವದು ಕೂಡ ಅಷ್ಟೇನು ಸಮಂಜಸವಲ್ಲ. ಇವತ್ತು ಪ್ರತಿಭೆ ಇದ್ದರೆ ಅವಕಾಶದ ಬಾಗಿಲುಗಳೂ ಬಹಳ ಇವೆ. 70/80 ರ ದಶಕದಂತೆ ಈಗ ಸರ್ಕಾರಿ ಕೆಲಸ ಮಾತ್ರ ನೆಚ್ಚಿಕೊಂಡು ಕೂಡುವ ಪರಿಸ್ಥಿತಿ ಇಲ್ಲ. ಆದರೆ ಸರ್ಕಾರಿ ನೌಕರಿಯೇ ಬೇಕೆಂದು ಕೂತರೆ ಅವಕಾಶದ ಬಾಗಿಲು ಮುಚ್ಚಲ್ಪಡ್ತುತ್ತದೆ. ನಮಗಿರುವ ಪ್ರತಿಭೆಯನ್ನು ಉಪಯೋಗಿಸಿ ಯಾವ ಕ್ಷೇತ್ರದಲ್ಲಾದರೂ ಮುಂದುವರಿಯಲು ಅವಕಾಶಗಳು ಇವತ್ತು ಇವೆ. ಜಾತಿಗಳ ಶ್ರೇಣೀಕರಣದಿಂದ ಅವಕಾಶಗಳು ಸಿಗುವದು ತಪ್ಪುತ್ತದೆ ಎನ್ನುವದು ಕೇವಲ ಭ್ರಮೆ ಮಾತ್ರ. ಯಾವ ವ್ಯಕ್ತಿ ಉತ್ತಮ ಬಡಗಿ ಕೆಲಸ ಮಾಡುತ್ತಾನೋ ಯಾರು ಉತ್ತಮವಾಗಿ ಮನೆಗೆ ಪ್ಲ್ಯಾನ್ ಹಾಕುತ್ತಾರೆಂದು ; ಯಾರು ನಿಗದಿತ ಸಮಯಕ್ಕೆ ನಮ್ಮ ಕೆಲಸ ಮಾಡಿ ಕೊಡುತ್ತಾರೆ, ಯಾರು ನಾವು ನೀಡುವ ಹಣಕ್ಕೇ ಯೋಗ್ಯ ಸೇವೆ ಕೊಡುತ್ತಾರೆ ಇತ್ಯಾದಿಯನ್ನು ಇವತ್ತಿನ ಜನ ನೋಡುತ್ತಾರೆ ವಿನಃ ಆ ವ್ಯಕ್ತಿಯ ಜಾತಿಯಲ್ಲ. ಸುಮ್ಮನೇ ಇಲ್ಲದ ಜಾತಿಯನ್ನು ಇದೆ ಎಂದು ಹೇಳುತ್ತಾ ಬಂಡವಾಳ ಮಾಡಿಕೊಳ್ಳುವ ವ್ಯಕ್ತಿಗಳ ಬಡಬಡಿಕೆ ಯಾರಿಗೂ ಒಳ್ಳೆಯದು ಮಾಡುವದಿಲ್ಲ. ಇಂಥ ಲೇಖನಗಳಿಂದ ದಲಿತರ ವಿಶ್ವಾಸ ಇನ್ನಷ್ಟು ಕುಂದುತ್ತದಷ್ಟೇ.

   ಉತ್ತರ
 2. M.A.Sriranga
  ಜನ 15 2014

  ಶೆಟ್ಕರ್ ಅವರಿಗೆ-
  ತಮ್ಮ ಪ್ರಶ್ನೆಗಳ ಹಿಂದಿನ ಆಶಯದಲ್ಲಿ ನನಗೆ ಭಿನ್ನಾಭಿಪ್ರಾಯವೇನಿಲ್ಲ. ಜಾತಿ ಸಮಸ್ಯೆಗಳನ್ನು ಕುರಿತಂತೆ ನಾನು ನಿಲುಮೆಯಲ್ಲಿ ಬರೆದ ಇತ್ತೀಚಿನ ನಾಲ್ಕು ಲೇಖನಗಳು ಮತ್ತು ಪ್ರತಿಕ್ರಿಯೆಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ನನಗೆ ಸಾಹಿತ್ಯದಿಂದ ಸಮಾಜದ ಬದಲಾವಣೆ ಆಗುತ್ತದೆ ಎಂದು ಸದ್ಯದ ಪರಿಸ್ಥಿತಿಯಲ್ಲಿ ಹೇಳುವ ಧೈರ್ಯವಿಲ್ಲ. ಸತ್ಯಕಾಮರು ಒಂದೆಡೆ ಹೇಳಿದ್ದಾರೆ “ಸತ್ಯವನ್ನು ಹೇಳುವವರ ಕೈಯಲ್ಲಿ ಅದನ್ನು ನಡೆಸುವ ಯಂತ್ರವಿಲ್ಲ. ಇದೇ ಇಂದಿನ ದುರಂತ.”

  ಉತ್ತರ
  • Nagshetty Shetkar
   ಜನ 15 2014

   ಶ್ರೀರಂಗ ಅವರೆ, ಶ್ರೇಣೀಕೃತ ಸಮಾಜವೆಂಬುದು ಕಪೋಲ ಕಲ್ಪನೆ ಎಂದು ಕೆಲವು ನವಸಮಾಜಶಾಸ್ತ್ರಜ್ಞರು ಇತ್ತೀಚೆಗೆ ರಂಪ ಮಾಡುತ್ತಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ!

   ಉತ್ತರ
 3. M.A.Sriranga
  ಜನ 17 2014

  ಆಕಾಶ್ ಅವರಿಗೆ–“ಸುಮ್ಮನೆ ಇಲ್ಲದ ಜಾತಿಯನ್ನು ಇದೆ ಎಂದು ಹೇಳುತ್ತಾ ……. “ಎಂಬ ನಿಮ್ಮ ಅನಿಸಿಕೆ/ಅಭಿಪ್ರಾಯ ನಿಜವಲ್ಲ. ಇಡೀ ಭಾರತದ ರಾಜಕೀಯ ವ್ಯವಸ್ಥೆ ನಿಂತಿರುವುದೇ ಜಾತಿಯ ಆಧಾರದ ಮೇಲೆ. ಭಾರತದಲ್ಲಿ ರಾಜಕೀಯ ವ್ಯವಸ್ಥೆ ಎಂಬುದೇ ಇಲ್ಲ ಎಂದು ಹೇಳಬಲ್ಲಿರಾ? ಇನ್ನು ತಾವು ಬೆಂಗಳೂರು,ಬಾಂಬೆಯ ವಿಷಯ ಪ್ರಸ್ತಾಪಿಸಿದ್ದೀರಿ. ಅಷ್ಟು ದೂರ ಹೋಗುವುದು ಬೇಡ; ತಾಲ್ಲೂಕು ಮಟ್ಟಗಳಲ್ಲೇ ಸಂಜೆವೇಳೆ ರಸ್ತೆ ಬದಿಯಲ್ಲಿ ಪಾನಿಪೂರಿ,ಚರಮುರಿ ಮಾರಾಟ ಮಾಡುವವರ ಜಾತಿ ತಿಳಿದುಕೊಂಡು ಯಾರೂ ಅವುಗಳನ್ನು ತಿನ್ನುವುದಿಲ್ಲ. ಆದರೆ ಮನೆಗೆ ಬಂದ ಮೇಲೆ ಅವರು ಅವರೇ ಇವರು ಇವರೇ. ಕರ್ನಾಟಕದ ನಗರ/ಮಹಾನಗರಗಳಲ್ಲಿ ಜಾತಿವಾರು ಸಂಘ ಸಂಸ್ಥೆಗಳು,ಅವುಗಳ ಕೃಪಾ ಪೋಷಿತ ಶಾಲಾ ಕಾಲೇಜುಗಳು ಇಲ್ಲವೇ? ಜಾಗತೀಕರಣ,ಖಾಸಗೀಕರಣ ಇವೆಲ್ಲಾ ನಡೆಯುತ್ತಿದ್ದರೂ ಜಾತಿಗಳನ್ನು ನಿರಾಕರಿಸಿ ವಿಶ್ವ ಮಾನವರಾಗಿದ್ದೇವೆ ಎಂದು ಸುಮ್ಮನೆ ಸಭೆ ಸಮಾರಂಭಗಳಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದಷ್ಟೇ. ವಾಸ್ತವ ಬೇರೆಯದೇ ಆಗಿದೆ.

  ಉತ್ತರ
  • Nagshetty Shetkar
   ಜನ 17 2014
  • Nagshetty Shetkar
   ಜನ 17 2014

   ಶ್ರೀರಂಗ ಅವರೆ, ಒಬ್ಬ ಖ್ಯಾತ ಛಾಯಾಗ್ರಾಹಕ ಹೀಗೆ ಬರೆದಿದ್ದಾನೆ: “Tiep had a breakfast stall in the market that was her family’s main source of income. But once people learned that her husband, Khanh had AIDS, many of them stopped buying food from her.” ಇದು ಏಷಿಯಾ ದೇಶಗಳ ಕ್ರೂರ ಸತ್ಯ! ನಮ್ಮ ದೇಶದಲ್ಲಂತೂ ಪರಿಸ್ಥಿತಿ ಇನ್ನಷ್ಟು ಅಧ್ವಾನವಾಗಿದೆ. ನಿಲುಮೆಯ ನಮೋಸೇನೆಯ ಹುಡುಗರೆಲ್ಲರೂ ನಗರವಾಸಿಗಳು. ಇವರುಗಳಿಗೆ ಹಳ್ಳಿಗಳ ವಾಸ್ತವ ಗೊತ್ತೇ ಇಲ್ಲ. ಇಂದಿಗೂ ನಮ್ಮ ಹಳ್ಳಿಗಳಲ್ಲಿ ಹೋಟೇಲುಗಳು ಜಾತಿ ಲೆಕ್ಕಾಚಾರದ ಮೇಲೆ ನಡೆಯುತ್ತಿವೆ. ಮೇಲ್ಜಾತಿಯವರು ಕೆಳಜಾತಿಯವರು ನಡೆಸುವ ಹೋಟೇಲುಗಳಲ್ಲಿ ಆಹಾರ ಸೇವಿಸುವುದಿಲ್ಲ. ಮುಸಲ್ಮಾನರ ಚಾಯ್ ಅಂಗಡಿಗೆ ಬ್ರಾಹ್ಮಣರು ತಲೆ ಕೂಡ ಹಾಕುವುದಿಲ್ಲ!

   ಉತ್ತರ
   • Nagshetty Shetkar
    ಜನ 17 2014

    ಸ್ವತಃ ಶ್ರೀರಂಗ ಅವರೇ ಮುಸಲ್ಮಾನರು ನಡೆಸುವ ಹೋಟೇಲುಗಳಲ್ಲಿ ಕಾಫಿ ತಿಂಡಿ ತಿಂದವರಲ್ಲ ಅಂತ ಅನ್ನಿಸುತ್ತದೆ. 😀 ನನ್ನ ಗ್ರಹಿಕೆ ಸರಿಯೇ ಶ್ರೀರಂಗ ಅವರೆ? ತಪ್ಪಿದ್ದರೆ ಕ್ಷಮಿಸಿಬಿಡಿ.

    ಉತ್ತರ
  • akash
   ಜನ 17 2014

   ಶ್ರಿರಂಗ ಅವರೆ ನೀವೇ ಹೇಳುವಂತೆ (ಇನ್ನು ತಾವು ಬೆಂಗಳೂರು,ಬಾಂಬೆಯ ವಿಷಯ ಪ್ರಸ್ತಾಪಿಸಿದ್ದೀರಿ. ಅಷ್ಟು ದೂರ ಹೋಗುವುದು ಬೇಡ; ತಾಲ್ಲೂಕು ಮಟ್ಟಗಳಲ್ಲೇ ಸಂಜೆವೇಳೆ ರಸ್ತೆ ಬದಿಯಲ್ಲಿ ಪಾನಿಪೂರಿ,ಚರಮುರಿ ಮಾರಾಟ ಮಾಡುವವರ ಜಾತಿ ತಿಳಿದುಕೊಂಡು ಯಾರೂ ಅವುಗಳನ್ನು ತಿನ್ನುವುದಿಲ್ಲ) ಜಾತಿ ನೋಡಿಕೊಂಡು ಯಾರೂ ವ್ಯಾಪಾರ ಮಾಡುವದಿಲ್ಲ. ವ್ಯಕ್ತಿ ಉದ್ಯೋಗದಲ್ಲಿ ಮುಂದುವರಿಯಲು ಆತನ ಜಾತಿ ಅಡ್ಡಿಯಾಗುವದಿಲ್ಲ ಎಂದು ನೀವೆ ಒಪ್ಪಿದಂತಾಯಿತಲ್ಲವೆ?? ನಾನು ಈ ಕಮೆಂಟು ಬರೆದಿರುವದು ನಾಗಶೆಟ್ಟಿ ಲಡಾಯಿ ಬ್ಲಾಗಿನ ಲಿಂಕ್ ಕೊಟ್ಟು ಓದಿ ಎಂದು ಹೇಳಿದ ಲೇಖನದ ಬಗ್ಗೆ. ಆ ಲೇಖನದಲ್ಲಿ ಪೂಜಾರಿ ಎಂಬ ಲೇಖಕರು ಜಾತಿಯ ಶ್ರೇಣೀಕರಣದಿಂದಲೇ ದಲಿತರಿಗೆ ಶ್ರೀಮಂತರಾಗಲು ಉದ್ದಿಮೆ ಹೊಟೆಲು ತೆರೆಯಲು ಆಗುತ್ತಿಲ್ಲ ಎನ್ನುತ್ತಾರೆ. ಅದಕ್ಕೆ ಉತ್ತರವಾಗಿ ನಾನು ಆ ರೀತಿ ಬರೆದಿರುವೆ. ಆದರೆ ನನ್ನ ಅಭಿಪ್ರಾಯ ಜಾತಿಗಳೇ ಇಲ್ಲ ಎಂದಲ್ಲ. ನನ್ನ ಕಮೆಂಟದಲ್ಲೂ ಸ್ವಲ್ಫ ತಪ್ಪಾಗಿದೆ. ಇನ್ನೊಮ್ಮೆ ಅದನ್ನು ಓದಿದಾಗ ಆ ಅರ್ಥ ಬರುತ್ತದೆಂದು ನನಗೂ ಅನಿಸಿತು. ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ ನಾವಿಂದು ಎಲ್ಲದಕ್ಕು ಜಾತಿಯ ವಿವಾದ ಮುಂದು ಮಾಡುತ್ತೇವೆ. ಈ ರೀತಿ ಬರೆಯಬೇಕಿತ್ತು.

   ಉತ್ತರ
 4. M.A.Sriranga
  ಜನ 23 2014

  ಶೆಟ್ಕರ್ ಅವರಿಗೆ— ನಾನು ನನ್ನ ಜಾತಿ ಬಿಟ್ಟು ಬೇರೆ ಜಾತಿಯವರ ಮನೆಗಳಲ್ಲಿ ಕಾಫಿ,ಟೀ ಕುಡಿದಿದ್ದೇನೆ. ಜತೆಗೆ ಊಟ ತಿಂಡಿ ಸಹ ಮಾಡಿದ್ದೇನೆ. ರಾಮನಗರದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಪ್ರತೀ ದಿನ ಸಂಜೆ ಗೆಳೆಯರೊಡನೆ ರೈಲ್ವೆ ಸ್ಟೇಷನ್ ನಲ್ಲಿ ಟೀ ಚೆನ್ನಾಗಿರುತ್ತದೆ ಎಂದು ಅಲ್ಲಿಗೆ ಹೋಗಿ ಕುಡಿಯುತ್ತಿದೆ –ಟೀ ಮಾಡುವವನು ಕಾಕ ಜಾತಿಗೆ ಸೇರಿದವನೆಂದು ಗೊತ್ತಿದ್ದರೂ ಸಹ. ನನ್ನ ಸ್ನೇಹಿತರೆಲ್ಲರೂ ಬೇರೆ ಜಾತಿಗೆ ಸೇರಿದವರೇ. ಆದರೆ ನಾನು ಮನೆಗೆ ಬಂದು ಆಫೀಸಿನ ಬಟ್ಟೆ ಬದಲಿಸಿ,ಮತ್ತೊಮ್ಮೆ ಸ್ನಾನ ಮಾಡುವುದು ಇತ್ಯಾದಿ ಏನನ್ನೂ ಮಾಡಿದವನಲ್ಲ. ಇಷ್ಟು ಹೇಳಿದ ಮೇಲೆ ನನ್ನ ಜಾತಿ ಯಾವುದೆಂದು ನಾನು ಬಿಡಿಸಿ ಹೇಳಬೇಕಾಗಿಲ್ಲ. ತಮಗೇ ತಿಳಿಯುತ್ತದೆ. ಹುಟ್ಟಿನಿಂದ ಬರುವ ಜಾತಿಗೆ ನಾವ್ಯಾರೂ ಜವಾಬ್ದಾರರಲ್ಲ. ಆದರೆ ಆ ನಂತರ ನಾವು ಹೇಗೆ ಬಾಳುತ್ತೇವೆ ಎಂಬುದಷ್ಟೇ ಮುಖ್ಯ ಎಂದು ನನ್ನ ಭಾವನೆ. ಆದರೆ ಇವೆಲ್ಲವನ್ನೂ ಬಿಡಿಸಿ ಹೇಳುತ್ತಾ ಹೋದರೆ ನಾನು ಪುಂಗಿ ಊದುತ್ತಿದ್ದೇನೆ ಎಂಬ ಭಾವನೆ ಕೆಲವರಿಗೆ ಬರುವುದೂ ಅಷ್ಟೇ ಸಹಜ. ನಾನು ಬಾಳುತ್ತಾ ಬಂದಿರುವುದು,ನನ್ನ ಆಚರಣೆಗಳು ನನಗೆ ಸರಿ ಅನ್ನಿಸಿದೆ. ಅದನ್ನು ಪ್ರಚಾರ ಮಾಡಿಕೊಂಡು ಬೆನ್ನು ತಟ್ಟಿಸಿಕೊಳ್ಳುವ ಬಯಕೆ ನನಗಿಲ್ಲ. ಇಷ್ಟು ದಿನ ನಿಮ್ಮ ಮೇಲ್ಕಂಡ ಪ್ರಶ್ನೆಗೆ ಉತ್ತರಿಸದೆ ಮೌನವಾಗಿದ್ದಕ್ಕೆ ಇದೇ ಕಾರಣ. ಇದಕ್ಕಿಂತ ಹೆಚ್ಚೇನು ಹೇಳಲಾರೆ.

  ಉತ್ತರ
  • Nagshetty Shetkar
   ಜನ 23 2014

   ಸರಿ, ರೈಲ್ವೇ ಸ್ಟೇಷನ್ನಿನ ಚಹಾದ ಆಸೆಯಿಂದಾದರೂ ಸ್ವಲ್ಪ ಮಟ್ಟಿಗೆ ಜಾತಿಮೋಹ ಕಡಿಮೆ ಆಯಿತಲ್ಲ! ಆ ಕಾಕಾನನ್ನು ನೀವು ಇದಕ್ಕೋಸ್ಕವಾದರೂ ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳಬೇಕು.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments