ವಿಷಯದ ವಿವರಗಳಿಗೆ ದಾಟಿರಿ

ಜನವರಿ 15, 2014

2

ವಿಧಿ 370 – ಚರ್ಚೆ

‍ನಿಲುಮೆ ಮೂಲಕ

– ಪ್ರವೀಣ್ ಪಟವರ್ಧನ್

Jammu Kashmir- Debate on Article 370ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಜಮ್ಮುವಿನಲ್ಲಿ ನಡೆದ ಇತ್ತೀಚೆಗಿನ ಸಮಾವೇಶದಲ್ಲಿ ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಯವರ ನಿಲುವನ್ನು ಪ್ರಶ್ನಿಸಿದ್ದಾರೆ. ಡಾ|| ಶ್ಯಾಮಾ ಪ್ರಸಾದ್ ಮುಖರ್ಜೀ ಯವರ ಜಮ್ಮು ಕಾಶ್ಮೀರದಲ್ಲಿನ ಹೋರಾಟವನ್ನು, ಬಲಿದಾನವನ್ನು (ನಿಗೂಢ ಸಾವು ಎಂದರೆ ತಪ್ಪಾಗಲಾರದು) ನೆನಪಿಸಿಕೊಂಡಿದ್ದಾರೆ. ಭಾರತ ಸಂವಿಧಾನದ ವಿಧಿ 370 (Article 370) ಯನ್ನು ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿಸುವ ಕೆಲ ಮಾಧ್ಯಮ ವರ್ಗದವರು ಮೋದಿಯ ಭಾಷಣವನ್ನು ಆಕ್ಷೇಪಿಸಿದ್ದಾರೆ.ಕಾರಣ ಮಾಜಿ ಪ್ರಧಾನಿ ನೆಹರೂರಿಗೆ ಅವಮಾನವಾಯ್ತೆಂದೋ, ಅಥವಾ ನೆಹರೂರವರು ಕಾಶ್ಮೀರದಲ್ಲಿ ಗೊಂದಲ ಸೃಷ್ಟಿಸಿದ್ದನ್ನು ಒಪ್ಪಿಕೊಳ್ಳಲಾಗದೆಂದೋ ಗೊತ್ತಿಲ್ಲ. ಹಿಂದೊಮ್ಮೆ ಸರ್ದಾರ್ ವಲ್ಲಭ ಭಾಯಿ ಪಟೇಲ್, ನೆಹರೂರ ತುಲನೆ ಮಾಡಿದ್ದ ಮೋದಿಯನ್ನು ಆಕ್ಷೇಪಿಸಿದ್ದು ಸ್ಮರಿಸಬಹುದು. ನೆಹರೂ ರವರು ಅಪ್ರತಿಮ ದೇಶಭಕ್ತ, ದ್ರಷ್ಟಾರ; ಅವರ ಬಗ್ಗೆ ಲಘುವಾಗಿ ಮಾತನಾಡಿದ್ದು  ಮೋದಿಯವರ ತಪ್ಪು ಎಂದು ಅವರು ಸಮರ್ಥಿಸಿಕೊಂಡರೆ ಅದಕ್ಕಿಂತ ದೊಡ್ಡ ಹಾಸ್ಯ ಮತ್ತೊಂದಿರಲಿಕ್ಕಿಲ್ಲ.

ಮೊದಲನೆಯದಾಗಿ ನೆಹರೂ ಭಾರತದ ಜೊತೆಗಿನ ಕಾಶ್ಮೀರದ ವಿಲೀನವನ್ನು ಗೊಂದಲಕ್ಕೆ ಮಾರ್ಪಾಟು ಮಾಡಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಈಗಾಗಲೇ ಹಲವಾರು ಲೇಖಕರು, ಚಿಂತಕರು ತೋರಿಸಿಕೊಟ್ಟಿದ್ದಾರೆ. ಇನ್ನು ನೆಹರೂ ದೇಶಭಕ್ತರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಕ್ಕೆ ಬ್ರಿಟಿಷರಿಂದ ಬಿಡುಗಡೆ ತಂದುಕೊಟ್ಟವರಲ್ಲಿ ಅಗ್ರಗಣ್ಯರು – ಹಾಗಾಗಿ ನೆಹರೂ ರವರನ್ನು ದೂಷಿಸಬಾರದು ಎಂದಾದರೆ – ಅದೂ ಒಪ್ಪಿಕೊಳ್ಳುವ ಮಾತಲ್ಲವೇ ಅಲ್ಲ. ಒಬ್ಬರ ನಿಲುವನ್ನು ಪ್ರಶ್ನಿಸುವ, ತೆಗೆದುಕೊಂಡ ನಿಷ್ಕರ್ಷೆಯಿಂದ ದೇಶಕ್ಕೇ ಮಾರಕವಾದಾಗಲೂ ನಿಲುವನ್ನು ಪ್ರಷ್ನಿಸಬಾರದು ಎನ್ನುವುದು ಮೂರ್ಖತನದ ಪರಮಾವಧಿ. ಈ ದೇಶದ ಸಾಮಾನ್ಯ ಪ್ರಜೆಗೂ ಆ ಹಕ್ಕು ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ, ಕೆಲ ವರ್ಷಗಳ ನಂತರ ಮೋದಿಯವರು ತೆಗೆದುಕೊಂಡ ಯವುದೋ ನಿಲುವು ತಪ್ಪೆಂದು ಜನರು ಮೋದಿಯವರ ನಿರ್ಧಾರವನ್ನು ಟೀಕಿಸಬಹುದಲ್ಲವೇ?

ಟೀಕಿಸಲು ಜನರಿಗೆ ಅರ್ಹತೆ ಇದ್ದೇ ಇರುತ್ತದೆ ಅಲ್ಲವೇ? ನಾವು ತೆಗೆದುಕೊಳ್ಳುವ ಯಾವುದೋ ಒಂದು ನಿರ್ಧಾರವನ್ನು ಕೆಲ ದಿನಗಳೊಳಗಾಗಿ ಅವಲೋಕಿಸಿಕೊಂಡು ತಪ್ಪು ಮಾಡಿದೆವಾ ಎಂದು ಪ್ರಶ್ನೆ ಮಾಡಿಕೊಳ್ಳುತ್ತೇವೆ.  ಒಂದು ತಲೆಮಾರು ಮುಗಿಯುವ ಹೊತ್ತಿಗೆ ಹೊಸ ತಲೆಮಾರು ಯೋಚಿಸುವ ರೀತಿಯೇ ಬೇರೆಯದ್ದಾಗಿರುತ್ತದೆ. ಪ್ರಸ್ತಾಪವಾಗಿರುವುದು ಒಂದು ದೇಶದ ವಿಷಯ – ಚರ್ಚೆಯೂ ಬೇಡ, ಪ್ರಶ್ನೆಯೂ ಬೇಡ ಅಂದರೆ ಅದು ಅನುಮಾನಗಳನ್ನಲ್ಲದೇ ಬೇರೇನನ್ನೂ ಸೃಷ್ಟಿಸುವುದಿಲ್ಲ.  ಕಾಲಕಾಲಕ್ಕೆ ಈ ಬದಲಾವಣೆಯೂ, ಚರ್ಚೆಯೂ ಉಪಯುಕ್ತ.

ಜಮ್ಮುವಿನಲ್ಲಿ ಮೋದಿಯವರು ವಿಧಿ 370 ರ ಬಗ್ಗೆ ಮಾತನಾಡಿದ ಬಳಿಕ,  ಕೆಲ ಪತ್ರಿಕೆಗಳಲ್ಲಿ  ಜನಸಾಮಾನ್ಯರು ಸಂಪಾದಕರಿಗೆ ಪತ್ರ ಬರೆದಿದ್ದಾರೆ – ” ಈ ವಿಷಯದ ಬಗ್ಗೆ ಮಾತನಾಡುವುದು ಸರಿಯೇ ಇರಬಹುದು. ಆದರೆ ಮೋದಿ ಕಶ್ಮೀರಿ ಪಂಡಿತರ ವೋಟ್ ಬ್ಯಾಂಕ್ ಗೋಸ್ಕರವೇ ಈ ವಿಷಯ ಪ್ರಸ್ತಾಪಿಸಿದ್ದಾರೆ” ; “ವಿಧಿ 370 ರಿಂದಲೇ ಜಮ್ಮು ಕಾಶ್ಮೀರ ಈ ದೇಶದ ಭಾಗವಾಗಿದೆ” ಎಂದೆಲ್ಲವಾಗಿ ಹೇಳುವ ಮನಸ್ಥಿತಿಗಳೇ ಚರ್ಚೆ ನಡೆಯಬೇಕೆಂಬುದಕ್ಕೆ ಇನ್ನಷ್ಟು ಇಂಬು ನೀಡುತ್ತದೆ. ಕಾಶ್ಮೀರಿ ಪಂಡಿತರ, ಕಾಶ್ಮೀರಿ ಹಿಂದುಗಳ ಹೃದಯ ವಿದ್ರಾವಕ ಪರಿಸ್ಥಿತಿಯನ್ನು ಅರಿತವರು ಕಡಿಮೆ. ಜನವರಿ ೨೦, ೧೯೯೦ ರಿಂದಾಚೆ ಎಷ್ಟು ದಂಗೆಗಳನ್ನೆಬ್ಬಿಸಿ Exodus ಮುಖೇನ ಮುಗ್ಧ ಜನರು ದೇಶಾಂತರ ಹೋಗುವಂತೆ ಮಾಡಿದ, ತಮ್ಮದೇ ನೆಲದಲ್ಲಿ ತಾವು ನಿರಾಶ್ರಿತರ ಶಿಬಿರಗಳಲ್ಲಿ ಜೀವಿಸುತ್ತಿರುವವರ ಬಗ್ಗೆ ಜನಸಾಮಾನ್ಯರು ಓದಿದ್ದು ಕಡಿಮೆ, ಮಾಧ್ಯಮಗಳು ಆ ವಿಷಯದ ಪ್ರಸ್ತಾಪ ಮಾಡಿದ್ದು ಮತ್ತೂ ಕಡಿಮೆ. ಕಾಶ್ಮೀರದಲ್ಲಿ ೧೯೪೭ ರಲ್ಲಿ ಶೇಖಡ ೨೦ರಷ್ಟಿದ್ದ ಕಾಶ್ಮೀರಿ ಪಂಡಿತರ ಸಂಖ್ಯೆ 2010 ನಲ್ಲಿ ಸರ್ಕಾರದ ಗಣತಿಯ ಪ್ರಕಾರ 808 ಕುಟುಂಬಗಳು – 3500 ಜನ. ಇನ್ನುಳಿದಂತೆ ಜಮ್ಮುವಿನ ನಿರಾಶ್ರಿತರ ಶಿಬಿರಗಳಲ್ಲಿರುವವರಿಗೆ ಎಷ್ಟು ಜನರ ಹೆಸರುಗಳು ಚುನಾವಣಾ ಪಟ್ಟಿಯಲ್ಲಿದ್ದೀತು? ಈ ಪುಟ್ಟ ಸಂಖ್ಯೆಯ ವೋಟ್ ಬ್ಯಾಂಕ್ ಯಾವ ಚುನಾವಣೆ ಗೆಲ್ಲಲು ಸಹಕಾರ ಕೊಟ್ಟೀತು? ಇನ್ನು ಜಮ್ಮು ಮತ್ತು ಕಾಶ್ಮೀರ ದೇಶದ ಭಾಗವಾಗಿರುವುದು 370 ನೇ ವಿಧಿಯ ಅನುಸರಣೆಯಿಂದ ಎಂದು ಹೇಳುವವರಿಗೂ ಚರ್ಚೆಯ ಅಗತ್ಯ ಅಷ್ಟೇ ಇದೆ. ಈ ವಿಧಿಯಿಂದ ಆಗಿರುವ ಅನಿಷ್ಟ-ಅನೀತಿಗಳ ಬಗ್ಗೆ ಚರ್ಚೆ ಬೇಡವೆನ್ನುವುದಾದರೆ, ಇಂಥಹ ಬಾಲಿಷ ಹೇಳಿಕೆಗಳೂ ಬಾಹಿರವಾಗಬೇಡವೇ?

ಮೋದಿಯವರು ಜಮ್ಮುವಿನಲ್ಲಿ ಮಾತನಾಡುತ್ತಾ ಸಂವಿಧಾನದ 370ವಿಧಿಯನ್ನು ದೇಶದಲ್ಲಿ ಚರ್ಚಿಸಬೇಕಿದೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ಎಂಬುದು ತಿಳಿಯುತ್ತಿಲ್ಲ. ಚರ್ಚೆಯ ಮಾತು ಇಲ್ಲಿ ಬರುವುದೇಕೆಂದರೆ ಭಾರತದಲ್ಲಿ ನೆಲೆಸಿರುವ ನಮ್ಮ ಬಂಧುಗಳಿಗೆ ೩೭೦ ನೇ ವಿಧಿ ಎಂದರೇನು ಎಂಬುದೇ ತಿಳಿದಿಲ್ಲವಲ್ಲ. ಆ ವಿಧಿಯ ಹೆಸರಿನಲ್ಲಿ ನಡೆಯುತ್ತಿರುವ, ವ್ಯವಸ್ಥಿತವಾಗಿ ನಡೆಸುತ್ತಿರುವ ಅನಾಚಾರವನ್ನು ನಾವು ಎಂದೂ ತಲೆಕೆಡಿಸಿಕೊಳ್ಳಲೇ ಇಲ್ಲವಲ್ಲ. ನಮ್ಮ ಶಿಕ್ಷಣದ ವ್ಯವಸ್ಥೆಯನ್ನು ಗಮನಿಸೋಣ. ಅಲ್ಲೆಲ್ಲೂ ಕಾಶ್ಮೀರದಲ್ಲಿನ ಅನ್ಯಾಯವನ್ನು ಪಠ್ಯವೂ ಹೇಳಲಿಲ್ಲ. ಮೇಷ್ಟ್ರೂ ಹೇಳಲಿಲ್ಲ. ಕ್ರಮೇಣ ಚರ್ಚೆಯ, ಪುಸ್ತಕಗಳ ಮೂಲಕವೇ “ಹೀಗೂ ಉಂಟೇ?” ಎಂದು ಮೂಗಿನ ಮೇಲೆ ಕೈ ಇಟ್ಟು ಯೋಚಿಸಲಾರಂಭಿಸಿದ್ದೇವೆ.  ಮೋದಿಯವರು ಚರ್ಚೆಯ ವಿಷಯ ಪ್ರಸ್ತಾಪಿಸಿದ್ದು ತಪ್ಪೇ ಆಗಿದ್ದರೆ ನಮ್ಮ ದೇಶದಲ್ಲಿನ ಎಲ್ಲಾ ಪ್ರಜೆಗಳಿಗೂ ೩೭೦ ನೇ ವಿಧಿ ಯ ಬಗ್ಗೆ ತಿಳಿದಿದೆಯೇ? ಅದಿರಲಿ  ಭಾ.ಜ.ಪ. ನವರು ಹಿಂದೆ ೩೭೦ ನೇ ವಿಧಿಯನ್ನು ರದ್ದು ಮಾಡಬೇಕಾಗಿ ಹೇಳುತ್ತಿದ್ದಾಗ ಯಾರೂ ಚರ್ಚೆ ನಡೆಸಿರಲಿಲ್ಲ. ಈಗ ಮೊದಿಯವರು ಚರ್ಚೆ ನಡೆಸಬೇಕು ಎಂದರೆ ಚರ್ಚೆಯ ವಿಷಯಕ್ಕೇ ಯಾರೂ ಬರುತ್ತಿಲ್ಲ. ಈಗ ದೇಶದಲ್ಲಿ ನಡೆಯುತ್ತಿರುವುದು ತಮ್ಮ ಮೂಗಿನ ನೇರದ ಮಾತು, ಸತ್ಯತೆಯಿಂದ ದೂರ ಉಳಿದಿರುವ ವಿಷಯದ ಜ್ಞಾನ.

ಮಹಾರಾಜಾ ಹರಿ ಸಿಂಗ್ ರು ಮನ: ಪೂರಕವಾಗಿ ಜಮ್ಮು ಕಾಶ್ಮೀರವನ್ನು ಭಾರತಕ್ಕೆ ವಿಲೀನಗೊಳಿಸಲು ಒಪ್ಪಿದ ಮೇಲೆ, (Instrument of Accession ನ ಸಹಿಯಾದ ಬಳಿಕ) ಅಲ್ಲಿ ನಡೆದಿರುವ ವಿದ್ಯಮಾನಗಳನ್ನು  ಗಮನಿಸಿದರೆ, ಅಲ್ಲಿ ಕಾಣ ಬರುತ್ತಿರುವುದು ಒಂದು ಮುಸ್ಲಿಮ್ ವರ್ಗದ ಪ್ರತ್ಯೇಕತೆಯ ಕೂಗು. ಈ ಕೂಗಿಗೆ, ಕೆಲ ರಾಜಕೀಯ ನಾಯಕರ ತುಷ್ಟೀಕರಣದ ರೀತಿಗೆ, ಸಮಾಜ ಸುಧಾರಕರ ಓಲೈಕೆಯ ಮಾತುಗಳಿಗೆ ನಿಜವಾಗಿಯೂ ತೊಂದರೆ ಅನುಭವಿಸುತ್ತಿರುವವರು ಅಲ್ಲಿನ ಕೆಲ ಮುಗ್ಧರು.

ಇತಿಹಾಸ:

ಭಾರತ, ಪಾಕಿಸ್ತಾನ ವೆಂಬ ಎರಡು ದೇಶಗಳು ಹುಟ್ಟುತ್ತವೆ ಎಂದು, ಜಿನ್ನಾ ಪಾಕಿಸ್ತಾನದ ನಾಯಕ, ನೆಹರೂ ಭಾರತದ ನಾಯಕರಾಗುತ್ತಾರೆಂದು ತಿಳಿಯುತ್ತಿದ್ದಂತೆ,  ತನ್ನ ಸ್ಥಾನವನ್ನು, ಅಧಿಕಾರವನ್ನು ಪಡೆಯಬೇಕೆಂದು ಹೊಂಚು ಹಾಕುತ್ತಿದ್ದವನೇ ಷೇಖ್ ಅಬ್ದುಲ್ಲಾ್. ಈತ ಅಲಿಘರ್  ಮುಸ್ಲಿಮ್ ವಿಶ್ವವಿದ್ಯಾಲಯದ ಕುಡಿ. ಮುಸ್ಲಿಮ್ ಪ್ರತ್ಯೇಕತಾವಾದ, ಮುಸ್ಲಿಮ್ ರಾಷ್ಟ್ರೀಯತೆ ತದನಂತರದ ಪಾಕಿಸ್ತಾನ ನಿರ್ಮಾಣದ ಚಿಂತನೆ ಇವೆಲ್ಲವೂ ಈ ವಿಶ್ವವಿದ್ಯಾಲಯದ  ವಿಷ ಬೀಜಗಳು. ಇಂದಿನ ದಿನಗಳಲ್ಲಿ ಯಾವ ಮಟ್ಟದ ಕಿರಿಕಿರಿಗಳನ್ನು  ಇವು ಉಂಟು ಮಾಡಿವೆ ಎಂಬುದು ತಿಳಿದಿರುವ ಅಂಶವೇ. ಈ ಷೇಖ್ ಅಬ್ದುಲ್ಲಾ ಅಂದಿನ ಭಾರತದ ವೈಸ್‍ರಾಯ್ ಲಾರ್ಡ್ ಮೌಂಟ್‍ಬ್ಯಾಟನ್, ಪಂಡಿತ್ ನೆಹರೂ ಜೊತೆ ನಿಕಟ ಸಂಪರ್ಕ ಹೊಂದಿದ್ದನು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಸಮಯದಲ್ಲೇ, ನೆಹರೂರ ಮರ್ಜಿ, ಅಭಯದಿಂದಾಗಿ “ಕಾಶ್ಮೀರ ಬಿಟ್ಟು ತೊಲಗಿ” ಎಂಬ ಕರೆಯನ್ನು ಮಹಾರಾಜಾ ಹರಿ ಸಿಂಗ್ ಗೆ ನೀಡಿದ ಷೇಖ್ ನೆಹರೂಗೆ ಇನ್ನೂ ಆಪ್ತನಾಗುತ್ತಾ ಬಂದ. ತನ್ನ ಉಪಟಳ ಸಹಿಸದ ಮಹಾರಾಜ ಷೇಖ್ ನನ್ನು ಜೈಲಿಗೆ ಅಟ್ಟಿದರೂ ಅವನಿಗಿದ್ದ ನೆಹರೂ ಜತೆಗಿನ ಸ್ನೇಹ ಜೈಲಿನಿಂದ ಹೊರಬರಲು ಸಹಾಯ ಮಾಡಿತು. ಮತ್ತಷ್ಟು ಬಂಡಾಯವೇಳಲು ಕುಮ್ಮಕ್ಕು ನೀಡಿತ್ತು. ಜಮ್ಮು ಕಾಶ್ಮೀರ ಭಾರತದ ಜತೆ ವಿಲೀನವಾದ ಬಳಿಕ, ನೆಹರೂರ ಆಜ್ಞೆಯ ಮೇರೆಗೆ ಮಹಾರಾಜರು ಷೇಖ್ ಗೆ ಅಧಿಕಾರ ನೀಡಿದರು. ಅಧಿಕಾರ ಕೈಗೆ ಬಂದ ದಿನ ಭಾಷಣಕ್ಕೆ ನಿಂತ ಷೇಖ್ ಮಾತನಾಡಿದ್ದು ಅಲ್ಲಿನ ಜನರನ್ನು ಪ್ರಚೋದಿಸುವಂತೆ – “ನಾವೀಗ ಕಾಶ್ಮೀರದ ಕಿರೀಟವನ್ನು ಧೂಳಿನಿಂದ ಕಸಿದುಕೊಂಡಿದ್ದೇವೆ. ಭಾರತದ ಜೊತೆಗೋ, ಪಾಕಿಸ್ತಾನದ ಜೊತೆಗೋ ವಿಲೀನವಾಗುವುದು ಸದ್ಯದ ಆಸಕ್ತಿಯ ವಿಷಯವಲ್ಲ. ನಮಗೆ ಮೊದಲು ಬೇಕಿರುವುದು ಸಂಪೂರ್ಣ ಸ್ವಾತಂತ್ರ್ಯ” ಅವನ ಮಾತಿನಿಂದ ಗಮನಿಸಬೇಕಾದ ಅಂಶಗಳು ಇವು:

೧. “ಧೂಳು” – ಕಾಶ್ಮೀರವನ್ನು ಆಳುತ್ತಿದ್ದ ಡೋಗ್ರಾ ಕುಟುಂಬವನ್ನು ಕುರಿತು.

೨. ಆದಾಗಲೇ ಮಹರಾಜರು  ವಿಲಯನ ಪತ್ರಕ್ಕೆ ಸಹಿ ಹಾಕಿಯಾಗಿತ್ತು. ಜಮ್ಮು ಕಾಶ್ಮೀರ ಭಾರತದ ಭಾಗವೂ ಆಗಿತ್ತು.

೩. ಜಮ್ಮು ಕಾಶ್ಮೀರವನ್ನು ಸ್ವತಂತ್ರ್ಯ ದೇಶವನ್ನಾಗಿಸುವ ಉದ್ದೇಶವೇ ಸಂಪೂರ್ಣ ಸ್ವಾತಂತ್ರ್ಯದ ಉಲ್ಲೇಖಕ್ಕೆ ಕಾರಣ.

ಪಾಕಿಸ್ತಾನ ನಿರ್ಮಾಣವಾದ ದಿನದಿಂದಲೇ  ಪಾಕಿಯ ಯುವಕರು ಜಮ್ಮು ಕಾಶ್ಮೀರದ ಭಾಗವಾದ ಗಿಲ್ಗಿಟ್, ಬಾಲ್ಟಿಸ್ತಾನ್ ಅನ್ನು ಆಕ್ರಮಿಸಿದ್ದರು. ಅಷ್ಟರಲ್ಲಾಗಲೆ ಕೊಲೆ, ಸುಲಿಗೆ, ಹಿಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಪಾಕಿಸ್ತಾನದ ಈ ಯುವಕರು ಸಾಕಷ್ಟು ಜಾಗವನ್ನು ಆಪೋಷಣ ತೆಗೆದುಕೊಂಡಿದ್ದರು. ತಾವು ನಡೆದು ಹೋದ ದಾರಿಯೆಲ್ಲಾ ತಮ್ಮದೆನ್ನುವಂತೆ ವರ್ತಿಸುತ್ತಿದ್ದರು. ಮಹಾರಾಜರ ಆಳ್ವಿಕೆ ಮುಗಿದು ಷೇಖ್ ನ ಆಡಳಿತ  ಪ್ರಾರಂಭವಾಗುತ್ತಿದ್ದಂತೆ ಮತ್ತಷ್ಟು ಸೊಕ್ಕಿನಿಂದ ಕೂಡಿದ್ದ ಮುಸ್ಲಿಮರು ಮೀರ್ಪುರ್, ಕೋಟ್ಲಿ – ಭೇಂಬೇರ್ ಗಳಲ್ಲಿ ಹಿಂದುಗಳ ಮಾರಣ ಹೋಮ ನಡೆಸುತ್ತಿದ್ದರು. ಅದನ್ನು ತಡೆಯುವ ಸಲುವಾಗಿ ಭಾರತದ ಆಗಿನ ಗೃಹ ಮಂತ್ರಿಯಾಗಿದ್ದ ಸರ್ದಾರ್ ಪಟೇಲರು  ಆ ಭಾಗಕ್ಕೆ ಸೇನೆ ನಿಯೋಜಿಸಿದರೆ, ಸೇನೆಯನ್ನು ನಿಯಂತ್ರಿಸುತ್ತಿದ್ದದ್ದು ಇದೇ ಷೇಖ್. ಪಾಕಿಸ್ತಾನ್ ಆಕ್ರಮಿತ ಭಾರತವನ್ನು ಬಿಡುಗಡೆಗೊಳಿಸಲು ಗಿಲ್ಗೀಟ್ ಬಾಲ್ಟಿಸ್ತಾನದೆಡೆಗೆ ಮುನ್ನುಗ್ಗಿದ್ದ ಸೇನೆಗೆ ಹಿಂದಾಗಲು ಬಲವಂತದ ಆದೇಶ ನೀಡುತ್ತಿದ್ದುದೂ ಶೇಖ್. ಈ ಬಗ್ಗೆ ನೆಹರೂರಲ್ಲಿ ದೂರಿದ್ದ ಜೆನೆರಲ್ ಪರಾನ್ಜಪೆಗೆ ಸಿಕ್ಕ ಕಿವಿಮಾತೂ -ಷೇಖ್ ನ ಮಾತು ಕೇಳಬೇಕೆಂದು. ನೆಹರೂ ರವರು ಅದೇನು ಮುಸ್ಲಿಮ್ ವೋಟ್ ಓಲೈಕೆಯ ಪ್ರಾಥಮಿಕ ಹೆಜ್ಜೆ ಇಡುತ್ತಿದ್ದರೋ ಅಥವಾ ಷೇಖ್ ನನ್ನು ಅಪಾರವಾಗಿ ನಂಬುತ್ತಿದ್ದ ಬಗೆಯೋ ಅರ್ಥವಾಗದೇ ಉಳಿಯುತ್ತದೆ.

ಷೇಖ್ ಅಬ್ದುಲ್ಲಾ ಹೇಳಿದಂತೆ ನಡೆದುಕೊಳ್ಳುತ್ತಿದ್ದ ನೆಹರೂ ಹಾಗೂ ಕೆಲ ಸಹೋದ್ಯೋಗಿಗಳೂ ಮುಂದೆ ಎಡವಿದ್ದು ಭಾರತದ ಸಂವಿಧಾನದ ವಿಧಿ ೩೭೦ ರ ಅನುಷ್ಠಾನದಲ್ಲಿ. ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಮಂಡಿಸಿದ್ದ  ಮೂಲ ಕರಡಿನಲ್ಲಿ 370 ವಿಧಿಯ ಪ್ರಸ್ತಾಪವಿಲ್ಲ ಎನ್ನಲಾಗಿದೆ, ಹಾಗೂ ಗೋಪಾಲಸ್ವಾಮಿ ಅಯ್ಯಂಗಾರ್  ಭಾರತದ ಸಂವಿಧಾನ ಮಂಡಳಿಯಲ್ಲಿ ಮಂಡಿಸಲಾದ ೩೭೦ ವಿಧಿಯ ಬಗ್ಗೆ ಚರ್ಚೆ ನಡೆದದ್ದೂ ಅಷ್ಟಕ್ಕಷ್ಟೇ. ಈ ಹಿಂದೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಈ ವಿಷಯದ ಚರ್ಚೆ ನಡೆದಾಗ ಗೋಪಾಲಸ್ವಾಮಿ ಅಯ್ಯಂಗಾರ್ ರ ಸಮರ್ಥನೆಗೆ ನಿಂತವರು ಮೌಲಾನಾ ಅಬುಲ್ ಕಲಾಂ ಆಜಾದ್ ಒಬ್ಬರೇ. ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಷೇಖ್ ನನ್ನು ಕುರಿತು ಖಡಾಖಂಡಿತವಾಗಿ ಹೇಳಿದ್ದು ” ನಾನು ಭಾರತದ ಕಾನೂನು ಸಚಿವನಾಗಿ ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ ಮಹತ್ಕಾರ್ಯದಲ್ಲಿ ತೊಡಗುತ್ತೇನಾಗಲಿ ಭಾರತದ ಅವಮರ್ಯಾದೆ ಮಾಡಲು ಸಿದ್ಧನಿಲ್ಲ. ನಿಮಗೆ ಭಾರತಕ್ಕೆ ಜಮ್ಮು ಕಾಶ್ಮೀರದ ಅಧಿಕಾರ ನೀಡಲು ಮನಸ್ಸಿಲ್ಲ. ಆದರೆ ಕಾಶ್ಮೀರಿಗಳಿಗೆ ಸಮಾನ ಹಕ್ಕುಗಳು ಬೇಕೆನ್ನುತ್ತೀರಿ….” ಷೇಖ್ ಹಿಡಿದ ಪಟ್ಟು ಬಿಡಲೇ ಇಲ್ಲ. ನೆಹರೂ ಷೇಖ್ ರ ಮನ ಪರಿವರ್ತಿಸುವ ಬದಲು, ಓಲೈಕೆಯ ಹಾದಿ ಹಿಡಿದರು. ಸಂಪುಟದಲ್ಲಿದ್ದ ಉಳಿದ ಕಾಂಗ್ರೆಸ್ ನಾಯಕರು ನೆಹರೂ ರನ್ನು ಒಲಿಸಲು ೩೭೦ ವಿಧಿಯನ್ನು ಅಂತರ್ಗತಗೊಳಿಸಲು ಸಮ್ಮತಿಸಿದರು. ಸರ್ದಾರ್ ಪಟೇಲರಿಗಾಗಲಿ, ಅಂಬೇಡ್ಕರ್ ರಿಗಾಗಲಿ, ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದರಿಗಾಗಲಿ ಇದು ಸರಿ ಎಂದು ಅನ್ನಿಸಿರಲೇ ಇಲ್ಲ. ಡಾ|| ಶ್ಯಾಮಾ ಪ್ರಸಾದ್ ಮುಖರ್ಜೀ, 370 ವಿಧಿಯ ಅನ್ವಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವ ಬಗ್ಗೆ ತೀವ್ರ ಪ್ರರಿರೋಧ ಒಡ್ಡಿದ್ದರು. ಕಾಶ್ಮೀರಿ ಪ್ರಧಾನ ಮಂತ್ರಿಯ ಅನುಮತಿಯಿಲ್ಲದೇ ಭಾರತದ ಅಧ್ಯಕ್ಷರೂ ಕಾಶ್ಮೀರದ ನಾಡಿನಲ್ಲಿ ಕಾಲಿಡುವಂತಿಲ್ಲ ಎಂಬ ಉದ್ಧಟತನದ ನಿರ್ಬಂಧಕ್ಕೆ “ಈ ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನ ಮಂತ್ರಿ, ಎರಡು ಧ್ವಜಗಳು(ಚಿನ್ಹೆಗಳು) ಇರಕೂಡದು” ಎಂದು ಗುಡುಗಿ, ಕಾಶ್ಮೀರಕ್ಕೆ ಸತ್ಯಾಗ್ರಹದ ಸಲುವಾಗಿ ತೆರಳಿದ್ದರು. ರಾಜೇಂದ್ರ ಪ್ರಸಾದರು “ಈ ವಿಧಿಯನ್ನು ಅನುಷ್ಠಾನಗೊಳಿಸಿ ಏನು ಸಾಧಿಸುವಿರಿ. ದೇಶದ ಅಧ್ಯಕ್ಷರಿಗಿಂತಲೂ ಜಮ್ಮು ಕಾಶ್ಮೀರದ ವಿಧಾನ ಸಭೆ ಮಿಗಿಲೇ?” ಎಂದು ನೆಹರೂ ಗೆ ಪತ್ರ ಬರೆದಿದ್ದರಾದರೂ, ನೆಹರೂ ತುಷ್ಟೀಕರಣದ ಪೊರೆಯನ್ನು ಕಳಚಿ ಹೊರ ಬರಲೇ ಇಲ್ಲ.

ದೇಶದ ಸಂವಿಧಾನದಲ್ಲಿ 370 ನೇ ವಿಧಿಯನ್ನು ಸೇರ್ಪಡೆಗೊಳಿಸಿದುದು ಒಂದು ತಾತ್ಕಾಲಿಕ ಕ್ರಮವಾಗಿ, ವಿಶೇಷ ಕಾರಣದಿಂದ ಮತ್ತು ಸಂಕ್ರಮಣ ವಿಧಿ (transitional clause) ಎಂಬ ನೆಲೆಯಲ್ಲಿ, ಹಾಗೂ ಪರೋಕ್ಷವಾಗಿ ಸೂಚಿಸುವುದು:

೧. ಜಮ್ಮು ಕಾಶ್ಮೀರ ತನ್ನ ಸ್ವಂತದ ಸಂವಿಧಾನವನ್ನು ರಚಿಸಿಕೊಳ್ಳಬಹುದು

೨. ಭಾರತದ ಸಂವಿಧಾನ ಮಂಡಲಿಯ ರಾಜ್ಯದ ಮೇಲಿನ ಅಧಿಕಾರ ಇದ್ದುದು – ಭದ್ರತೆ, ವಿದೇಶಾಂಗ ವ್ಯವಹಾರ ಗಳ ವಿಷಯದಲ್ಲಿ ಮಾತ್ರ.

೩. ಭಾರತದ ಯಾವುದೇ ಸಂವಿಧಾನದ ನಿಬಂಧನೆಯನ್ನು ಜಮ್ಮು ಕಾಶ್ಮೀರ ಸರ್ಕಾರದ ಅನುಮತಿ ಇಲ್ಲದೇ ಹೇರುವಂತಿಲ್ಲ.

ಈಗ ಒಮ್ಮೆ ಯೋಚಿಸಿ ನೋಡೋಣ. ಮೇಲೆ ಹೇಳಿರುವ ಯಾವುದಾದರೂ ಅಂಶ ಜಮ್ಮು ಕಾಶ್ಮೀರವನ್ನು ನಮ್ಮ ದೇಶದ ಅಂಗ ಎಂದು ಬೆಸೆಯುವ ಸಂದೇಶ ನೀಡುತ್ತದೆಯೇ?

ಈ ವಿಧಿಯ ನಿಯಮವನ್ನು ಬಳಸಿಯೇ ಪ್ರತ್ಯೇಕತಾವಾದಿಗಳು ಹೋರಾಟ ಹಾರಾಟ ನಡೆಸುತ್ತಿದ್ದಾರಲ್ಲವೇ? ಈ ಪ್ರತ್ಯೇಕತಾವಾದವೂ ಹೊರಡುತ್ತಿರುವುದು ಕಾಶ್ಮೀರ ಕಣಿವೆಯಿಂದಷ್ಟೆ – ಇದು ಕೇವಲ ಶೇಖಡ ೧೫ ರ ಮುಸಲ್ಮಾನರ ಕೂಗು ಎಂಬುದು ನೆನಪಿರಲಿ. ೨೦೧೩ರ ವರೆಗೆ ಭಾರತದ ಸಂವಿಧಾನದ 260 ವಿಧಿಗಳು ಮಾತ್ರ ಜಮ್ಮು ಕಾಶ್ಮೀರದಲ್ಲಿ ಸೇರ್ಪಡಿಸಲಾಗಿದೆ. ನಮ್ಮ ದೇಶದ ಸಂವಿಧಾನದಲ್ಲಿರುವುದು 444 ವಿಧಿಗಳು. ವಿಶ್ವದ ಅತಿ ದೊಡ್ಡ ಸಂವಿಧಾನ ನಮ್ಮದು ಎಂಬದು ಹೆಮ್ಮೆ ನಮಗಿದೆ.

ಇಡಿಯ ದೇಶದಲ್ಲಿ ಸಿಖ್ ಸಮುದಾಯ ಅಲ್ಪ ಸಂಖ್ಯಾತ. ಆದರೆ ಪಂಜಾಬ್ ನಲ್ಲಿ ಇವರನ್ನು ಅಲ್ಪಸಂಖ್ಯಾತ ಎಂದು ಕರೆಯಲಾಗುವುದಿಲ್ಲ. ಅಲ್ಪಸಂಖ್ಯಾತರ ಸವಲತ್ತುಗಳು ಸಿಖ್‍ರಿಗೆ ದೊರೆಯುವುದಿಲ್ಲ. ಆದರೆ ಕಾಶ್ಮೀರದಲ್ಲಿನ ಕತೆಯೇ ಬೇರೆ. ಶೇಖಡ 58 ರಷ್ಟು ಮುಸ್ಲಿಮ್ ಜನಸಂಖ್ಯೆ ಇರುವ ಈ ರಾಜ್ಯದಲ್ಲಿ ಮುಸ್ಲಿಮರೇ ಅಲ್ಪಸಂಖ್ಯಾತರು. ಇಲ್ಲಿನ ಅಲ್ಪಸಂಖ್ಯಾತ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ದವರಿಗೆ ೧೯೯೧ ರ ವರೆಗೆ ಯಾವ ಮೀಸಲಾತಿಯೂ ಇರಲಿಲ್ಲ. 1991 ರಲ್ಲಿ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಮಾತ್ರ ಮೀಸಲಾತಿ. ಈ ಮೀಸಲಾತಿ ರಾಜಕಾರಣದಲ್ಲಿ ಇಂದಿನವರೆಗೂ ಬಂದಿಲ್ಲ. ಮುಂದೆ ಬರುವ ಲಕ್ಷಣಗಳು ಕಾಣುತ್ತಿಲ್ಲ.

ಇನ್ನೆಷ್ಟು ದಿನ ಈ ಅನ್ಯಾಯ? ಚರ್ಚೆಯೂ ನಡೆಯಲಿ. 370 ರ ವಿಧಿಯೂ ರದ್ದಾಗಲಿ.

2 ಟಿಪ್ಪಣಿಗಳು Post a comment
 1. ಜನ 16 2014

  370ನೇ ವಿಧಿಯು ಅಷ್ಟಂದು ಒಳ್ಳೆಯದಾಗಿದ್ದರೆ ಅದನ್ನು ಕರ್ನಾಟಕ ಮತ್ತು ಇತರ ರಾಜ್ಯಗಳಿಗೂ ಅನ್ವಯಿಸಲಿ.

  ಉತ್ತರ
 2. ಗಿರೀಶ .ಕೆ
  ಜನ 16 2014

  ಚೆನ್ನಾಗಿ ಬರೆದಿದ್ದೀರಿ. ಈ ನೆಹರು ಸಾಹೇಬನದ್ದು ‘ಹೆಂಗ’ರುಳು. ಇಲ್ಲಿ ಲೇಡಿ ಮೌಂಟ್ ಬ್ಯಾಟನ್ ಗೆ ಕರಗಿ ಮೌಂಟ್ ಬ್ಯಾಟನ್ ಗೆ ತಲೆ ಆಡಿಸಿದಂತೆ..ಅಲ್ಲಿ ಇನ್ನೊಂದಕ್ಕೆ ಕರಗಿ ಶೇಕ್ ಅಬ್ದುಲ್ ಗೆ ತಲೆಯಾಡಿಸುತ್ತಿದ್ದ. ಇನ್ನೊಂದಿಷ್ಟು ಕಾಲ ಬದುಕಿದ್ದರೆ, ನೊಬೆಲ್ ಶಾಂತಿ ಪಾರಿತೋಷಕ ಪಡೆಯಲು ದೇಶವನ್ನು ಯಾರಿಗಾದರೂ ಅಡವಿಡುತ್ತದ್ದೇನೊ ಈ ಚಾಚಾಚಾ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments