ವಿಡಂಬನೆ:ಕಟ್ಟುವೆವು ಕಸದ ನಾಡೊಂದನು!
– ತುರುವೇಕೆರೆ ಪ್ರಸಾದ್
ಮೊನ್ನೆ ಮೊನ್ನೆ ನಿಧಾನಸೌಧದದಲ್ಲಿ ಮಂತ್ರಿಗಳೊಬ್ಬರು ತಮ್ಮ ಕಛೇರಿಯ ಗೋಡೆ ಒಡೆದ ಹಿನ್ನಲೆಯಲ್ಲಿ ಹಲವರು ಮತ್ಸದ್ದಿಗಳ ತರ್ಕ-ಕುತರ್ಕಗಳ ಸಾರಾಂಶ ಇಲ್ಲಿದೆ:
ಅನುಮಾನುಲು : ನಿಧಾನ ಸೌಧದ ಗೋಡೆ ಒಡೆದಿದ್ರಲ್ಲಿ ತಪ್ಪೇನೂ ಇಲ್ಲ. ನಾವು ಏನಾದ್ರೂ ಒಡುದ್ರೆ ದೊಡ್ಡ ಇಶ್ಯೂ ಮಾಡ್ತೀರಿ.ಆದ್ರೆ ನೀವು ದೊಡ್ ದೊಡ್ಡೋರು ಎಲ್ಲಾ ಉರುಳುಸ್ತಿದ್ರೂ ಕೇಳೋರೇ ಇಲ್ಲ..ಈಗ ಗೋಡೆ ಒಡೆದಿದ್ರಿಂತ ಏನು ಆಕಾಶ ತಲೆ ಮೇಲೆ ಬಿದ್ದಿದೆಯಾ?ಡಿಶ್ಕುಂ ಕುಮಾರ್ ನನ್ ರೂಂ ಮೇಲೆ ಕಣ್ ಹಾಕಿದ್ರು. ಅವರು ಗೋಡೆ ಒಡೀದೆ ಬಿಡ್ತಿದ್ರಾ? ಶತಶತಮಾನಗಳಿಂದ ಕಟ್ಟಿರೋ ಜಾತಿ, ಮತ,ಪಂಥಗಳ ಗೋಡೆಯನ್ನು ಒಡೀರಿ, ಎಲ್ಲಾ ಈಚೆ ಬನ್ನಿ ಅಂತ ನಮ್ ಸಾಹಿತಿಗಳು ಹೇಳ್ತಾನೇ ಇರಲ್ವಾ? ನಾಲ್ಕು ಗೋಡೆ ಶಿಕ್ಷಣ ಅಂತ ಹೀಗಳೆಯಲ್ಲವಾ? ಏನೇ ಸುಧಾರಣೆ ಆದ್ರೂ ಮೊದ್ಲು ನಿಧಾನಸೌಧದಿಂದ ಆಗ್ಬೇಕು ಅಂತ ಹೇಳಲ್ವಾ? ಗೋಡೆ ಒಡೆಯೋದನ್ನೂ ಅಲ್ಲಿಂದಲೇ ಶುರು ಮಾಡಿದೀವಿ..ಇದೂ ಒಂದು ಆದರ್ಶ ಅಂತ ನಿಮಗ್ಯಾಕನಿಸಲ್ಲ..?
ಲೀಕಯ್ಯ,ಗುತ್ತಿಗೆದಾರರು: ನಮ್ಗೂ ಗೋಡೆ ಒಡೆದು ಅನುಭವ ಇದೆ.ಆದ್ರೆ ಗೋಡೆ ಒಡೆಯಕ್ಕೆ ನಮ್ಗೆ ಅವಕಾಶನೇ ಸಿಕ್ಕದ ಹಾಗೆ ಬೇರೆಯವರು ಗೋಡೆ ಹಾಕ್ಕಂಡಿದಾರೆ. ಮೊದ್ಲು ಪಕ್ಷದಲ್ಲಿರೋ ಆ ಗೋಡೆಗಳನ್ನ ಒಡೆದು ಹಾಕ್ಬೇಕು. ಗೋಡೆಲಿ ಲೀಕ್ ಆಗದ ಹಾಗೆ ನೋಡ್ಕೊಬೇಕು..ಲೀಕಾದ ಮೇಲೆ ಎಷ್ಟು ತೇಪೆ ಹಾಕುದ್ರೂ ಏನೂ ಪ್ರಯೋಜನ ಇಲ್ಲ, ಅದು ನಿಧಾನಸೌಧ ಇರಬಹುದು, ಪಕ್ಷ ಇರಬೋದು, ಗೋಡೆ ಒಡೆಯೋಕೆ ನಮ್ ಬೆಂಬಲ ಇದೆ. ಎಷ್ಟು ಅಂತ ಕಟ್ತಾನೇ ಇರೋದು? ನಿರುದ್ಯೋಗಿಗಳಿಗೆ ಕೆಲಸ ಇಲ್ದೆ ಒದ್ದಾಡ್ತಿದಾರೆ..ಈ ರೀತಿ ಕೆಲಸಕ್ಕೆ ಬಾರದ ಗೋಡೆಗಳನ್ನ ಒಡೆಯೋ ಕೆಲ್ಸ ಸಿಕ್ರೆ ಅವರಾದ್ರು ಬದುಕ್ಕೊತಾರೆ. ನಮ್ ಮುರ್ಗಿವಾಲಾ ಮತ್ತು ಮುಲುಕಪ್ಪ ಸಹ ಪಕ್ಷದೊಳಗಿನ ಗೋಡೆ ಒಡೆಯಕ್ಕೆ ಸಿಕ್ಕಾಪಟ್ಟೆ ಮುಲುಕಾಡ್ತಿದಾರೆ. ಆದ್ರೆ ಏನೂ ಪ್ರಯೋಜನ ಆಗಿಲ್ಲ..
ರಾಮೇಶ್ವರ್: ಗೋಡೆ ಇರಬೇಕೋ ಇರಬಾರದೋ ಅನ್ನೋದು ನಂಗೆ ಸಂಬಂಧಿಸಿದ್ದಲ್ಲ..ಎಲ್ಲಾ ಕಡೆ ಆಡಳಿತ ಪಾರದರ್ಶಕವಾಗಿರಬೇಕು ಅಂತ ಬೊಬ್ಬೆ ಹಾಕ್ತಾರೆ. ಗೋಡೆ ತೆಗೆದ್ರೆ ತಾನೇ ಎಲ್ಲಾ ಬಯಲಾಗೋದು..ಆದ್ರೆ ಗೋಡೆ ತೆಗೆಯೋಕೆ ಹೋಗಿ ಸೂರು ತಲೆಮೇಲೆ ಕೆಡವಿಕೊಂಡ್ರು ಅನ್ನೋ ಹಾಗಾಗ್ಬಾರ್ದು ಅಷ್ಟೇ.ಈಗ ನಂಗೆ ಅನಿಸ್ತಿದೆ. ಸರ್ಕಾರಿ ಕಛೇರಿಗಳ ಗೋಡೆ ಒಡೀಬೇಕಾ ಬೇಡವಾ ಅನ್ನೋಕೆ ಒಂದು ವಿಚಾರಣಾ ಸಮಿತಿ ನೇಮಿಸ್ಬೇಕು. ಅದರ ಆಧಾರದ ಮೇಲೆ ಗೋಡೆ ಒಡೆಯೋಕೇ ಒಂದು ಪ್ರತ್ಯೇಕ ಸಚಿವಾಲಯ ನಿರ್ಮಿಸಿ ಒಬ್ಬ ಮಂತ್ರಿನ ನೇಮಿಸಬೇಕು.
ರಂ-ಚಿತಾ:ನಾನು ಹಿಂದೆ ತಾರೆ, ಆಗಿದ್ದೆ ಈಗ ಆನಂದ ಸ್ವಾಮಿಗಳ ವಕ್-ತಾರೆ(ವಕ್ತಾರೆ) ಆಗಿದೀನಿ.ಎಣ್ಣೆ ಬಾಂಡ್ಲಿ ಬಗ್ಸುದ್ರೂ ಜಿಡ್ ಮಾತ್ರ ಹೋಗಲ್ಲ ಅನ್ನೋ ಹಾಗೆ ಹಳೇ ವೃತ್ತಿ ಮೇಲೆ ನಂಗಿನ್ನೂ ಒಂದಿಷ್ಟು ವ್ಯಾಮೋಹ ಇದೆ. ಗೋಡೆಗಳನ್ನೇ ಕೆಡವಿಬಿಟ್ರೆ ತಾರೆಯರ ವಾಲ್‍ಪೋಸ್ಟ್ ಅಂಟಿಸೋದೆಲ್ಲಿ? ನಮ್ ಸ್ವಾಮೀಜಿ ಕಾಲ ಕಾಲಕ್ಕೆ ಕೊಡೋ ಸಂದೇಶಗಳನ್ನು ಬರೆಯೋದೆಲ್ಲಿ? ಗೋಡೆ ಒಡೆಯೋರು ಗೋಡ್ಸೆಗಳು ಅಂತ ನಮ್ ಸ್ವಾಮೀಜಿ ಹೇಳ್ತಿರ್ತಾರೆ.
ಜಡಿಯೂರಪ್ಪ: ನೋಡಿ, ನನ್ ಪ್ರಕಾರ ಗೋಡೆಗಳನ್ನ ಒಡೀಬೇಕು.ಮನಸ್ಸು ಮನಸ್ಸುಗಳ,ಪಕ್ಷ ಪಕ್ಷಗಳ ನಡುವಿನ ಗೋಡೆಯನ್ನು ಈಡುಗಾಯಿ ತರ ಒಡೆದು ಚೂರು ಚೂರು ಮಾಡಬೇಕು. ಎಷ್ಟು ದಿವಸ ಅಂತ ಗೋಡೆಗಳನ್ನ ಕಂಟ್ಕೊಂಡಿರೋದು? ಈಗ ನಾನೇ ನೋಡಿ ಕಮಲದ ಮಧ್ಯೆ ಕಟ್ಟಿದ್ದ ಗೋಡೆ ಒಡೆದು ಕಾಯ್‍ನ ಅದರೊಳಗೆ ಚಟ್ನಿ ಮಾಡಿಲ್ವಾ? ಇವತ್ತಿನ ಪರಿಸ್ಥಿತೀಲಿ ನಮ್ಗೆ ಗೋಡೆಗಿಂತ ಮಹಾಯಾನಿ ಜೀಬ್ರಾಗಡೆ ಅವರದ್ದೇ ಚಿಂತೆ ಆಗಿದೆ.ನಮ್ ಮುಂದಿನ ಅಜೆಂಡ್ ಆದೇ! ಅವರಿಗೆ ಅಮೇರಿಕಾದಲ್ಲಿ ಅನ್ಯಾಯ ಆಗಿದೆ. ಗಡೆ ಅವರ ಪ್ರಕರಣನ ನಮ್ ಕೈ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ನಮ್ಗೆ ಒಬಾಮ ದ್ರೋಹ ಮಾಡ್ತಿದಾರೆ..ಮಹಾಯಾನಿ ಅವರನ್ನ ಅಮೇರಿಕಾದಿಂದ ಕರ್ಕೊಂಡು ಬರ್ತೀವಿ. ಅವರು ಒಪ್ಪೋದಾದ್ರೆ ಅವರಿಗೆ ನಮ್ ಪಕ್ಷದಲ್ಲಿ ಉನ್ನತ ಸ್ಥಾನಮಾನ ಕೊಡ್ತೀವಿ..ಒಬಾಮ ಅವರಿಗೆ ನಮ್ ಧಿಕ್ಕಾರ ಇದೆ.
ನಾರೀಶ್ವರ್: ಗೋಡೆ ವಿಷಯನ ವಿಷಯಾಂತರ ಮಾಡಿ ಖೋಬ್ರಾಗಡೆ ಅವರ ಬಗ್ಗೆ ಮಾತಾಡೋದು ಸರಿಯಲ್ಲ..ಇವರು ಯಾರು ಅವರಿಗೆ ಸ್ಥಾನಮಾನ ಕೊಡೋಕೆ? ಇವರಿಗೇ ಇಲ್ಲಿ ಗೂಟ ಸಿಕ್ಕಿಲ್ಲ, ಅವರಿಗೇನು ಕೊಡ್ತಾರೆ ? ಈಗಿರೋ ಸೀಬಾ ಅವರೇ ನಮ್ಗೆ ಮತ್ತೆ ಗೋಡೆಯಾಗಿದಾರೆ. ಇನ್ನು ಜೀಬ್ರಾ ಗಡೆಗೆ ಏನು ನ್ಯಾಯ ಕೊಡುಸ್ತಾರೆ? ಇನ್ನು ಗೋಡೆ ವಿಷಯಕ್ಕೆ ಬಂದ್ರೆ ನಾವು ಗೋಡೆ ಒಡೆಯೋದನ್ನ ಸುತರಾಂ ಒಪ್ಪಲ್ಲ.ನಮಗೂ ಗೋಡೆಗೂ ಅವಿನಾಭಾವ ಸಂಬಂಧ ಇದೆ. ಗೋಡೆ ಎಲ್ಲಾ ಒಡೆದು ಬಿಟ್ರೆ ಮುಚ್ಚು ಮರೆ ಅನ್ನೋದೇ ಇರಲ್ಲ. ನಾವು ಜನರಿಗೆ ಕೊಡೋ ಕಾಣಿಕೆಗಳನ್ನ ದಾಸ್ತಾನ ಮಾಡೋದೆಲ್ಲಿ? ಎಣ್ಣೆ ಪಣ್ಣೆ ಹಂಚೋದೆಲ್ಲಿ? ಅವರಿಗೇನು ಬುದ್ದಿ ಇದೆಯಾ? ನಮ್ಗೆ ಗೋಡೆ ಬೇಕೇ ಬೇಕು..ನಾವು ಗೋಡೆ ಒಡೆಯೋದನ್ನ ಉಗ್ರವಾಗಿ ಖಂಡಿಸ್ತೀವಿ
ಸೀಬಾ: ಯಾಕೆ ಖಂಡಿಸಬೇಕು ಅಂತೀನಿ. ನಮ್ ನಮೋ ಸಾಹೇಬ್ರು ಪಟೇಲ್ ವಿಗ್ರಹ ನಿರ್ಮಿಸ್ತಿದಾರೆ. ಅದಕ್ಕೆ ಹಳ್ಳಿ ಹಳ್ಳಿಗಳಿಂದ ಕಬ್ಬಿಣ ತಗೊಂಡು ಹೋಗ್ಬೇಕಾಗಿದೆ. ಈ ಕೆಲಸಕ್ಕೆ ಬಾರದಿರೋ ಗೋಡೆ ಒಡುದ್ರೆ ಅದರ ಜೊತೆ ಇರೋ ಕಬ್ಬಿಣನ ಹಳೇ ಪೇಪರ್ ಕಾಲಿ ಸೀಸದೋರಿಗೆ ಕೊಡೋ ಬದ್ಲು ನಮ್ ಮೋಡಿ ಅವರಿಗೇ ಕೊಟ್ರೆ ದೇಶ ಕಟ್ಟಕ್ಕೆ ಬಳಸಿದಂತಾಗುತ್ತಲ್ಲ..
ಚಂಚಲ್ ರೆಡ್ಡಿ: ನಮ್ಗೆನೂ ಸ್ವಾಭಿಮಾನ ಇಲ್ವಾ? ನಾವ್ಯಾಕೆ ಗೋಡೆ ಒಡೆದ ಹಳೇ ಕಬ್ಬಿಣದಿಂದ ಸರ್ದಾರ್ ಪಟೇಲ್ರ ಸ್ಟಾಚ್ಯು ಮಾಡಬೇಕು? ನಮ್ಮನ್ನ ಈ ಗೋಡೆ ಮಧ್ಯೆ ಹಾಕಿ ನಮ್ ಗಣಿ ತಾಕತ್ ಹೊಸಕಿ ಹಾಕಿದೀರಿ. ನಾವು ಮಾಡಿದ ತಪ್ಪಾದರೂ ಏನು? ನಾವೂ ಗಣಿ ಅದಿರು ತೆಗೆದಿದ್ದು ಬರೀ ಪಟೇಲ್ ಸ್ಟಾಚ್ಯೂ ಮಾಡಕ್ಕಲ್ಲ, ದಡ್ಕರಿ , ಮೋಡಿ, ನಾಥ್‍ಸಿಂಗ್, ಜಡಿಯೂರಪ್ಪ, ಎಲ್ಲಕ್ಕಿಂತ ಹೆಚ್ಚಾಗಿ ಆ ನಮ್ಮವ್ವ ಹುಶ್-ಮಾ ವಿಗ್ರಹ ಮಾಡಕ್ಕೆ! ಅದನ್ನ ಅರ್ಥ ಮಾಡ್ಕೊಳ್ದೆ ನಮ್ಮನ್ನ ಒಳಕ್ಕೆ ಹಾಕಿರೋದು ಸರೀನಾ? ಯಾವುದ್ಯಾವುದೋ ಗೊಡೆ ಒಡೆಯೋ ಬದ್ಲು ಜೈಲುಗಳ ಗೋಡೆ ಒಡೆದು ನಮ್ಮನ್ನ ಹೊರಗೆ ತನ್ನಿ! ಗಣಿಯಿಂದ ಫ್ರೆಶ್ ಕಬ್ಬಿಣ ತಂದು ದೇಶದ್ ತುಂಬಾ ಪಟೇಲ್ ಸ್ಟಾಚ್ಯೂ ಮಾಡಿಬಿಡ್ತೀವಿ.
ನಮೋ : ನೋಡಿ ನಾವು ಏನನ್ನಾದರೂ ಕಟ್ಟುದ್ರೆ ಚರಿತ್ರಾರ್ಹವಾಗಿ ಕಟ್ಟಬೇಕು, ಒಡೀಬೇಕು..ನಮ್ ಪಕ್ಷಕ್ಕೆ ಏನೇನೋ ಒಡೆದ ಖ್ಯಾತಿ ಇದೆ. ನಮ್ಗೆ ಗೋಡೆ ಯಾವ ಮಹಾ? ಒಡುದ್ರೆ ಚೀನಾ ಗೋಡೆ ಒಡೀಬೇಕು..ಎಲ್ಲೋ ಒಂದು ನಿಧಾನಸೌಧದ ಗೋಡೆ ಒಡೆದಿದ್ದಕ್ಕೆ ಇಷ್ಟು ಗುಲ್ಲೆಬ್ಸೋದು ಸರಿ ಅಲ್ಲ..ದೀವಾರ್ ಒಡೆಯೋದು ದೊಡ್ಡದಲ್ಲ..ಪ್ರಧಾನಿಯಾಗಿ ಕಾಲು ಕೆರ್ಕಂಡು ಬರೋರ ಮೇಲೆ ವಾರ್ ಡಿಕ್ಲೇರ್ ಮಾಡಬೇಕು…ಅದು ತಾಕತ್ತು!
ಡಾಲರ್ ಮಾರುತಿ: ಗೋಡೆ ಸಾಹಿತ್ಯ ನಮ್ಮಲ್ಲಿ ತುಂಬಾ ಜನಪ್ರಿಯ ಸಾಹಿತ್ಯ. ನಾನು ಕಾಲೇಜಲ್ಲಿದ್ದಾಗಲೂ ಸಿಕ್ಕಾಪಟ್ಟೆ ಗೋಡೆ ಸಾಹಿತ್ಯ ಇತ್ತು. ನಮಗಾಗದಿರೋ ಮೇಷ್ಟ್ರು, ಮೇಡಂಗಳ ಚರಿತ್ರೆನೆಲ್ಲ ಈ ಗೋಡೆ ಮೇಲೇ ನಾವು ಬರೀತಿದ್ದದ್ದು..ಈಗೀಗ ಗೋಡೆ ಪತ್ರಿಕೆಗಳೂ ಬರ್ತಿವೆ..ಒಬಮ ಅವರನ್ನ ವಿರೋಧಿಸೋದು ಸರಿಯಲ್ಲ..ಒಬಮ ಅಂದ್ರೆ ಓದುವ , ಬರೆಯುವ ,ಮಾತನಾಡುವ ಕನ್ನಡಿಗನೇ ಹೊರತು ಒಡೆಯುವ, ಬಡಿಯುವ, ಮಡಗುವ ಕನ್ನಡಿಗ ಅಂತ ಅಲ್ಲ. ಸಾಹಿತ್ಯದ ವಿವಿಧ ಪ್ರಕಾರಗಳು ವಿಜೃಂಬಿಸ್ತಿರುವಾಗ ಗೋಡೆ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡೋ ಅಗತ್ಯ ಇದೆ..ಗೋಡೆನೇ ಇಲ್ಲ ಅಂದ್ರೆ ಗೋಡೆ ಸಾಹಿತ್ಯ ನಿರ್ನಾಮ ಆಗಿ ಹೋಗುತ್ತೆ. ಅದು ಸರಿಯಲ್ಲ. ಮುಂದಿನ ಸಮ್ಮೇಳನದಲ್ಲಿ ಗೋಡೆ ಸಾಹಿತ್ಯದ ಮೇಲೆ ಒಂದು ಗೋಷ್ಠಿ ಇಡಬೇಕು. ಸರ್ಕಾರ ಗೋಡೆಗಳನ್ನ ಒಡೆಯದೆ ಅಳಿವಿನಂಚಿಗೆ ಬಂದಿರುವ ಗೋಡೆ ಸಾಹಿತ್ಯವನ್ನು ಉಳಿಸಬೇಕು..
ಬೆಣೆ ತಟ್ಟಣ್ಣ: ಇದೆಲ್ಲಾ ಬುಲ್ಡಜೋರ್ ಸಂಸ್ಕøತಿ! ರಾಜಕೀಯದೋರಿಗೆ ತಟ್ಟುವ ಮತ್ತು ತಟ್ಟದ ಸಾಹಿತ್ಯ ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ. ಈ ತಟ್ಟುವ ಸಾಹಿತ್ಯ ಏನಿದ್ರೂ ಗೋಡೆ ಮೇಲೇ ಇರೋದು. ಯಾಕಂದ್ರೆ ಬಹುತೇಕ ರಾಜಕೀಯದೋರಿಗೆ ಪುಸ್ತಕ ಓದಕ್ಕೆ ಪುರಸೊತ್ತಿರಲ್ಲ..ಅದಕ್ಕೇ ಗೋಡೆ ಇದ್ದೇ ಇರಬೇಕು. ಗೋಡೆಗೆ ಹೊಡೆದ ಚೆಂಡು ಅಂತಾರೆ.ಆದರೆ ಬೆರಣಿ ತರ ತಟ್ಟುದ್ರೆ ಅವಾಗ ಗೊತ್ತಾಗುತ್ತೆ. ಗೋಡೆನೇ ಇಲ್ಲ ಅಂದ್ರೆ ಏನು ತಟ್ಟೋದು? ಎಲ್ಲಾ ಬಟ್ಟಾ ಬಯಲಾಗಿ ಹೋಗುತ್ತೆ. ಗೋಡಿ ಹಿಂದೆ ಕಿವಿ ಇರುತ್ತೆ, ದಾಡಿ ಹಿಂದೆ ಕವಿ ಇರ್ತಾನೆ. ಗೋಡೆ ಒಡೆಸೋ ಬದ್ಲು ರೈತರ ತ್ವಾಟಕ್ಕೆ ಗೋಡ್ ಮಣ್ಣು ಹೊಡೆಸೋದಕ್ಕೆ ಹೇಳಿ’
ಎಂ.ಎ.ತಮ್ಮಣ್ಣ: ನನ್ನ ರಿಮಿಕ್ಸ್ ಕೇಳಿ: ’ಕುಟ್ಟುವೆವು ನಾವು ಕುಟ್ಟುವೆವು ತವುಡು ಕುಟ್ಟುವೆವು, ಕೆಡವುವೆವು ನಾವು ಕೆಡವುವೆವು, ಹಳೆ ಗೋಡೆಗಳನು ಕೆಡುವುವೆವು, ಕಟ್ಟುವೆವು ಕಸದ ನಾಡೊಂದನು.ಚಿಂದಿಯ ಬೀಡೊಂದನು’
ಸಕತ್ತಾಗಿದೆ! 😀
“ಪ್ರಧಾನಿಯಾಗಿ ಕಾಲು ಕೆರ್ಕಂಡು ಬಂದು ಕಂಡೋರ ಮೇಲೆ ವಾರ್ ಡಿಕ್ಲೇರ್ ಮಾಡಬೇಕು…ಅದು ತಾಕತ್ತು!” ನಮೋ ಪ್ರಧಾನಿ ಆದರೆ ದುರಂತ ಖಚಿತ!
ಪ್ರಸಾದ್ ಅವರೆ ನಿಮ್ಮ ಲೇಖನ ಓದಿ ಭಾಳ ಖುಷಿ ಆತ ನೋಡ್ರಿ. ನಾನು ನಕ್ಕಿದ್ದೇ ನಕ್ಕಿದ್ದ್ದು.