ನಾಯಕತ್ವದ ಬೆಲೆ
– ಮಧು ಚಂದ್ರ ಎಚ್ ಬಿ ಭದ್ರಾವತಿ
ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಸಭೆಯ ಅಧಿವೇಶನ ನಡೆಯುತ್ತಿದ್ದ ಸಂಧರ್ಭದಲ್ಲಿ , ಸುವರ್ಣ ವಿಧಾನ ಸೌಧದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ರೈತ ವಿಠ್ಠಲ ಭೀಮಪ್ಪ ಅರಭಾವಿ ಆತ್ಮಹತ್ಯೆ ಮಾಡಿ ಕೊಂಡಿದ್ದು ನಿಮಗೆಲ್ಲ ತಿಳಿದೇ ಇದೆ. ಕಾರಣ ಸಹ ನಿಮಗೆ ತಿಳಿದೇ ಇದೆ ಸರ್ಕಾರ ರೈತರ ಹೋರಾಟಕ್ಕೆ ಸೂಕ್ತ ಪರಿಹಾರ ಹುಡುಕದೆ , ಸ್ಪಂದಿಸಲು ವಿಳಂಬ ಮಾಡಿತು.ಅದಕ್ಕೆ ಸರ್ಕಾರ ತೆತ್ತ ಬೆಲೆ ನೇಗಿಲ ಯೋಗಿಯ ಆತ್ಮಹತ್ಯೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಅಲ್ಲ ಮಾನವರಿರುವ ಪ್ರತಿಯೊಂದು ಸ್ಥಳದಲ್ಲಿ ಸಮಸ್ಯೆ ಇದ್ದೆ ಇದೆ.
ನಮ್ಮಲ್ಲಿ ಸಮಸ್ಯೆಯನ್ನು ಅರಿತು, ಸ್ಪಂದಿಸಿ ಸೂಕ್ತ ಪರಿಹಾರ ಕಂಡು ಹಿಡಿಯುವ ಮಾರ್ಗ ಹುಡುಕುವುದು ದೊಡ್ಡದೊಂದು ಅನಾಹುತವಾದ ಮೇಲೆಯೇ.ಇದಕ್ಕೆ ಎಲ್ಲ ಕಾರ್ಯಕ್ಷೇತ್ರಗಳು, ವರ್ಗ ಮತ್ತು ಪರಿವಾರಗಳು ಬರುತ್ತವೆ. ಇದ್ದಕ್ಕೆ ಮುಖ್ಯ ಕಾರಣ ನಾಯಕನ ದೂರ ದೃಷ್ಟಿ ಹಾಗು ಸಮಸ್ಯೆ ಬಗೆಹರಿಸುವ ಕಲೆಯ ಕೊರತೆ ಎನ್ನಬಹುದು. ಇಂದು ಕೇವಲ ಅಧಿಕಾರ ಸಿಕ್ಕರೆ ಸಾಕು ಎನ್ನುವ ನಾಯಕರು ಇರುವಾಗ ಇವೆಲ್ಲವೂ ದೂರದ ಮಾತೆ ಸರಿ.
ನಮ್ಮ ಹಿಂದಿನ ತೆಲೆಮಾರಿನ ಹಿರಿಯ ಮುಖಂಡರು ಒಬ್ಬರಿದ್ದರು ಅವರ ಕಾರ್ಯವೈಖರಿ ನೋಡಿದರೆ, ನಾವು ಹಾಗು ನಮ್ಮವರು ಹೀಗೆ ಇದ್ದರೆ ಎಷ್ಟು ಚೆನ್ನ ಅಂತ ಅನ್ನಿಸುವುದು ಸಹಜವೆ ಸರಿ.
ಇದು ಸ್ವತಂತ್ರ ಪೂರ್ವದ ಕಥೆ ಮೈಸೂರು ಅರಸರು ಅಳುತ್ತಿದ್ದ ಸಮಯ.
ರಾವ್ ಬಹಾದ್ದೂರ್ ಬಿ ಕೆ ಗರುಡಾಚಾರ್ಯರು ಬೆಂಗಳೂರಿನ ಮುನ್ಸಿಪಲ್ ಕೌನ್ಸಿಲ್ ನ ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಗಲ್ಲಿ ಗಲ್ಲಿಯನ್ನು ಸುತ್ತಿದ್ದ ಅನುಭವಿದ್ದ ಕಾರಣ ಪ್ರತಿಯೊಂದು ಗಲ್ಲಿಯೂ ಸಹ ಅವರಿಗೆ ಚಿರಪರಿಚಿತವಾಗಿತ್ತು . ಪ್ರತಿದಿನ ಬೆಳಗ್ಗೆ ಏಳು ಗಂಟೆಯ ಒಳಗೆ ಸಂಚಾರ ಹೊರಟು ಭೇಟಿ ನೀಡಿದ ಸ್ಥಳದ ಸಮಸ್ಯೆಗಳನ್ನು ಅರಿತು ಒಂದು ಪಟ್ಟಿ ಸಿದ್ಧ ಪಡಿಸಿ , ಸಮಸ್ಯೆಯ ತೀವ್ರತೆಯ ಬಗ್ಗೆ ಅಧ್ಯಯನ ಮಾಡಿ , ಹೇಗೆ ಅ ಸಮಸ್ಯೆಯನ್ನು ಮಿತವ್ಯಯದಿಂದ ಸಾಧಿಸಬೇಕು ಎಂದು ಕಂಡುಕೊಳ್ಳುತ್ತಿದ್ದರು.
ಒಮ್ಮೆ ಮುನ್ಸಿಪಲ್ ಸಭೆ ನಡೆಯುತ್ತಿತ್ತು ಹೀಗಿರುವಾಗ ಒಬ್ಬ ಕೌನ್ಸಿಲರ್ ಎದ್ದು ನಿಂತು
” ಸ್ವಾಮಿ ಓಬಯ್ಯನ ಗಲ್ಲಿಯಲ್ಲಿ ” ಎಂದು ಮಾತನಾಡಲು ಶುರು ಮಾಡಿದರು.
ಗರುಡಾಚಾರ್ಯರು : ಯಾರು ರಂಗಪ್ಪ ಅಲ್ಲವೇ ಮಾತನಾಡುವುದು ?
ರಂಗಪ್ಪ : ಹೌದು ಸ್ವಾಮಿ
ಗರುಡಾಚಾರ್ಯರು : ಈಗ ನೀವು ಎಷ್ಟನೇ ವಿಷಯದಲ್ಲಿದ್ದಿರಿ ?
ರಂಗಪ್ಪ : ಹದಿನೈದನೆಯ ವಿಷಯ .
ಗರುಡಾಚಾರ್ಯರು : ಈಗ ನಾವಿರುವುದು ಇಪ್ಪತೈದನೆಯ ವಿಷಯ .
ರಂಗಪ್ಪ : ಸ್ವಾಮಿ ಕಷ್ಟವಾಗಿದೆ .
ಗರುಡಾಚಾರ್ಯರು : ನೀವು ಹೇಳುವುದು , ಕೊಳಾಯಿಯ ವಿಷಯ ತಾನೆ .
ರಂಗಪ್ಪ : ಹೌದು ಸ್ವಾಮಿ, ಬಹು ದಿನ ದಿಂದ…
ಗರುಡಾಚಾರ್ಯರು : ಈಗ ಹನ್ನೆರಡು ಗಂಟೆಗೆ ಹೋಗಿ ನೋಡಿ ,ಅದು ಸರಿಯಾಗಿಲ್ಲದಿದ್ದರೆ ಆಮೇಲೆ ವಿಷಯ ತಗೆದು ಕೊಂಡು ಬನ್ನಿ
ರಂಗಪ್ಪನವರು ಹೋಗಿ ನೋಡುವ ವೇಳೆಗೆ ರಿಪೇರಿಯಲ್ಲ ಆಗಿರುತ್ತಿತ್ತು.
ಈಗ ನಿಮಗೆ ಅನ್ನಿಸುವುದಿಲ್ಲವೇ, ನಾವು ಮತ್ತು ನಮ್ಮ ನಾಯಕರಿಗೆ ಏನು ಅವಶ್ಯಕವೆಂದು.
ಹಿಂದೆ ರಾಜರು ಸಹ ಮಾರು ವೇಷದಲ್ಲಿ ರಾಜ್ಯವನ್ನು ಸುತ್ತಾಡಿ ಸಮಸ್ಯೆಗಳನ್ನು ಅರಿತು ಅದಕ್ಕೆ ತುರ್ತಾಗಿ ಸ್ಪಂದಿಸುತ್ತಿದ್ದರೆಂದು ನಾವು ತಿಳಿದಿದ್ದೇವೆ. ದೇಶ , ರಾಜ್ಯ ದೊಡ್ಡದು ಸರಿ ನಮಗೆ ನಾವು ಓಡಾಡುವ ರಸ್ತೆಯನ್ನೇ ದುರಸ್ತಿ ಮಾಡದ ನಾಯಕರು ಇರುವಾಗ ನಮ್ಮ ಮಾಧ್ಯಮಗಳು, ಸ್ವಯಂ ಸೇವಕ ಸಂಘಗಳು ಮತ್ತು ಸಾಮಾನ್ಯ ಜನತೆ ಸರ್ಕಾರಕ್ಕೆ ಸಮಸ್ಯೆಗಳ ಸುದ್ದಿ ಮುಟ್ಟಿಸಿದರು ನಾಯಕರ ನಿಲುವುಗಳು ದೊಡ್ಡ ಅಪರಾಧವೆನ್ನಬಹುದು.
ಇದಕ್ಕೆ ನೀವೇನು ಹೇಳುತ್ತೀರಾ , ಸ್ವಲ್ಪ ತರ್ಕ ಬದ್ಧವಾಗಿ ಯೋಚಿಸಿ..
———————————————————————————————————————————————
ಚಿತ್ರ ಕೃಪೆ : ಅಂತರ್ಜಾಲ