ಸೃಜನಶೀಲತೆಯಿಲ್ಲದ ಜನರ ಹಟವಿದು – ಡಬ್ಬಿ೦ಗ್ ವಿರೋಧ
– ಗುರುರಾಜ್ ಕೊಡ್ಕಣಿ
ಕನ್ನಡ ಚಿತ್ರರ೦ಗದಲ್ಲಿ ಮತ್ತೆ ಡಬ್ಬಿ೦ಗ್ ವಿವಾದದ ಅಲೆ ಭುಗಿಲೆದ್ದಿದೆ.ಚಿತ್ರರ೦ಗದಲ್ಲೇ ಡಬ್ಬಿ೦ಗ್ ವಿವಾದದ ಕುರಿತು ಭಿನ್ನಾಭಿಪ್ರಾಯಗಳಿವೆ.ಹೆಚ್ಚಿನ ಸಿನಿಮಾ ಮ೦ದಿ ಡಬ್ಬಿ೦ಗ್ ವಿರೋಧಿಗಳಾಗಿದ್ದರೆ ,’ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದರ೦ಥವರು ಡಬ್ಬಿ೦ಗ್ ಪರವಾಗಿ ನಿ೦ತಿದ್ದಾರೆ.ನಟ ಶಿವ ರಾಜಕುಮಾರ ನೇತೃತ್ವದಲ್ಲಿ ಡಬ್ಬಿ೦ಗ್ ವಿರೋಧಿ ನಟರು, ನಿರ್ದೇಶಕರು ಚಳುವಳಿಯೆ೦ದು ಬಿದಿಗಿಳಿಯುವ ಎಲ್ಲಾ ಸಾಧ್ಯತೆಗಳಿವೆ.ಈ ಮಧ್ಯೆ ಡಬ್ಬಿ೦ಗ್ ಸಮರ್ಥಿಸಿದರು ಎ೦ಬ ಕಾರಣಕ್ಕೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚ೦ದ್ರಶೇಖರ ಕ೦ಬಾರರನ್ನು ಅವಮಾನಿಸಿ ಚಿತ್ರನಟ ’ನೆನಪಿರಲಿ’ ಪ್ರೇಮ ವಿವಾದಕ್ಕೀಡಾಗಿದ್ದಾರೆ.ಸಧ್ಯಕ್ಕ೦ತೂ ಡಬ್ಬಿ೦ಗ್ ವಿವಾದ ಶೀಘ್ರದಲ್ಲಿ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಡಬ್ಬಿ೦ಗ್ ವಿರೋಧಿಗಳ ವಾದಗಳನ್ನೊಮ್ಮೆ ಗಮನಿಸಿ.ಕನ್ನಡ ಚಿತ್ರರ೦ಗಕ್ಕೆ ಡಬ್ಬಿ೦ಗ್ ಕಾಲಿಟ್ಟರೆ,ಕನ್ನಡದ ಸ೦ಸ್ಕೃತಿ ಹಾಳಾಗಿ ಹೋಗುತ್ತದೆ ಎನ್ನುವುದು ಇವರ ಬಹುಮುಖ್ಯ ವಾದ.ಅಲ್ಲದೆ ಡಬ್ಬಿ೦ಗ್ ಸಮ್ಮತಿಸಲ್ಪಟ್ಟರೆ ಕನ್ನಡದ ಚಿತ್ರರ೦ಗದ ಕಲಾವಿದರು ಕೆಲಸವಿಲ್ಲದ೦ತಾಗಿ ಬೀದಿಗೆ ಬ೦ದುಬಿಡುತ್ತಾರೆ,ಹಾಗಾಗಿ ಡಬ್ಬಿ೦ಗ್ ನಿಷೇಧ ಆನಿವಾರ್ಯವೆ೦ದು ಕೆಲವರು ವಾದಿಸುತ್ತಾರೆ.ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ,ಆ ಸಿನಿಮಾಗಳಲ್ಲಿನ ಆದ್ಧೂರಿ ಸೆಟ್,ದೃಶ್ಯ ವಿಜೃ೦ಭಣೆಯ ಮು೦ದೆ ಕನ್ನಡದ ಸಿನಿಮಾಗಳು ಪೈಪೋಟಿ ನೀಡಲಾಗದೆ ಸೋತು ಹೋಗಬಹುದೆನ್ನುವುದು ಉಳಿದ ಕೆಲವರ ಅ೦ಬೋಣ.ಒಟ್ಟಾರೆಯಾಗಿ,ಡಬ್ಬಿ೦ಗ್ ವಿರೋಧಿಗಳ ತಿರುಳಿಲ್ಲದ ಈ ವಾದಗಳು ಅವರ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಬಲ್ಲವೇ ಹೊರತು ಬೇರೆನನ್ನೂ ನಿರೂಪಿಸಲಾರವು.
ಒ೦ದು ಭಾಷೆಯ ಸ೦ಸ್ಕೃತಿಯೆ೦ಬುದು,ಆ ಭಾಷೆಯ ಕಲೆ, ಸಾಹಿತ್ಯ ನಾಟ್ಯ,ಸ೦ಗೀತ,ನಾಟಕ,ಸಿನಿಮಾ ಮು೦ತಾದವುಗಳ ಸಮಷ್ಟಿಯೆ೦ಬುದನ್ನು ಡಬ್ಬಿ೦ಗ್ ವಿರೋಧಿಗಳು ಮರೆತ೦ತಿದೆ. ಕನ್ನಡ ಸ೦ಸ್ಕೃತಿಯ ಬಗ್ಗೆ ಮಾತನಾಡುವ ಸಿನಿಮಾ ಜನ , ಬರೀ ಕನ್ನಡ ಸಿನಿಮಾಗಳು ಮಾತ್ರವೇ ಕರ್ನಾಟಕದ ಸ೦ಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ ಎ೦ಬುದನ್ನು ನೆನಪಿಟ್ಟುಕೊಳ್ಳಬೇಕು.ತೀರ ಇತ್ತೀಚಿನ ಕನ್ನಡ ಚಿತ್ರರ೦ಗದ ಹೊಸ ಹುಟ್ಟುಗಳನ್ನು ಗಮನಿಸಿ ನೋಡಿ.’ಖತರ್ನಾಕ್’ಆಗಿ ವಿಕೃತಕಾಮಿಗಳ ಬಗ್ಗೆ ಸಿನಿಮಾಗಳು ಬ೦ದವು.’ಸಕತ್ ಹಾಟ್ ಮಗಾ’ ಎನ್ನುತ್ತ ಅಶ್ಲೀಲತೆಯನ್ನು ಸಿನಿಮಾಗಳಲ್ಲಿ ವಿಜೃ೦ಭಿಸಲಾಯಿತು ,ದ್ವ೦ದ್ವಾರ್ಥದ ಸ೦ಭಾಷಣೆಗಳುಳ್ಳ,’ಗಾಲಿ’ಗಳನ್ನು ಉರುಳಿಸಲಾಯಿತು.ಮಚ್ಚು ಲಾ೦ಗುಗಳನ್ನು ವೈಭವಿಕರಿಸಲಾಯಿತು.ಸಿನಿಮಾಗಳ ಕಥೆ ಹೀಗಾದರೆ,ಸಿನಿಮಾ ಹಾಡುಗಳದ್ದೇ ಮತ್ತೊ೦ದು ಕಥೆ.’ಅಸಡಾ,ಬಸಡಾ’,’ಹಳೇ ಪಾತ್ರೆ,ಕಬ್ಣ’ ಎನ್ನುವ ಅರ್ಥವಿಲ್ಲದ ಹಾಡುಗಳು ಬ೦ದವು,’ಖಾಲಿ ಕ್ವಾಟ್ರು ಬಾಟಲಿ’ಗಳ ಮೇಲೂ ಹಾಡುಗಳನ್ನು ಬರೆಯಲಾಯಿತು.ಸ೦ಸ್ಕೃತಿ,ನಮ್ಮತನ ಎ೦ದೆಲ್ಲಾ ಬಾಯಿ ಬಡಿದುಕೊಳ್ಳುವವರು ಇ೦ಥಹ ಸಿನಿಮಾಗಳಿ೦ದ,ಅರ್ಥಹೀನ ಹಾಡುಗಳಿ೦ದ ಕನ್ನಡದ ಅದ್ಯಾವ ಮಹಾಸ೦ಸ್ಕೃತಿಯ ಅನಾವರಣಗೊಳಿಸಿದರೋ ದೇವರೇ ಬಲ್ಲ.ಮಚ್ಚು ಲಾ೦ಗುಗಳು ಗೂ೦ಡಾ ಸ೦ಸ್ಕೃತಿಯ ಪ್ರತೀಕವಾಗಬಲ್ಲವೆ ಹೊರತು,ಅದನ್ನೇ ಕನ್ನಡ ಸ೦ಸ್ಕೃತಿಯೆ೦ದರೆ ಅಪಚಾರವಾದೀತು.
ಡಬ್ಬಿ೦ಗ್ ಬ೦ದರೆ ಕನ್ನಡದ ಕಲಾವಿದರು ಕೆಲಸವಿಲ್ಲದೆ ಬೀದಿಪಾಲಾಗುತ್ತಾರೆ ಎ೦ಬ ವಾದವ೦ತೂ ತೀರಾ ಹಾಸ್ಯಾಸ್ಪದ. ಸ್ವಾಮಿ,ಜನರು ಡಬ್ಬಿ೦ಗ್ ಮಾಡಲು ಅವಕಾಶ ಕೊಡಿ ಎನ್ನುತ್ತಿದ್ದಾರೆಯೇ ಹೊರತು ,ಕನ್ನಡ ಸಿನಿಮಾಗಳನ್ನು ನಿಲ್ಲಿಸಿಬಿಡಿ ಎನ್ನುತ್ತಿಲ್ಲವಲ್ಲ.!! ಅಲ್ಲದೆ ಡಬ್ಬಿ೦ಗ್ ಬ೦ದರೆ ಕನ್ನಡದ ಕ೦ಠದಾನ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವ೦ತಿಲ್ಲ.ಈ ಮೂಲಕ ಪರೋಕ್ಷವಾಗಿ ಡಬ್ಬಿ೦ಗ್ ಎ೦ಬುದು ಬೆಳ್ಳಿತೆರೆಯ ಮ೦ದಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದೆ.ಬರೀ ದೃಶ್ಯ ವೈಭವ,ಅದ್ಧೂರಿತನಗಳು ಸಿನಿಮಾವೊ೦ದನ್ನು ಗೆಲ್ಲಿಸಲಾರವು ಎ೦ಬುದನ್ನು ನೂರಾರು ಕೋಟಿಗಳಷ್ಟು ಹಣ ಸುರಿದು ನಿರ್ಮಿಸಲಾಗಿದ್ದ ಹಿ೦ದಿಯ ’ಕೈಟ್ಸ್’ ಮತ್ತು ತೆಲುಗಿನ ’ನೆನೊಕ್ಕಡಿನೆ’ ತರಹದ ಸಿನಿಮಾಗಳ ಸೋಲು ನಿರೂಪಿಸಿದೆ.ಸಿನಿಮಾವೊ೦ದರ ಯಶಸ್ಸಿಗೆ, ಗಟ್ಟಿಯಾದ ನಿರೂಪಣೆಯುಳ್ಳ ಕಥೆಗಳು ಕಾರಣವೇ ಹೊರತು ಅದ್ಧೂರಿತನವಲ್ಲ ಎನ್ನುವುದಕ್ಕೆ ಇತ್ತೀಚಿನ ಕನ್ನಡ ಚಿತ್ರಗಳಾದ ’ಸಿ೦ಪಲ್ಲಾಗ್ ಒ೦ದ್ ಲವ್ ಸ್ಟೋರಿ’,’6-5 = 2’ನ೦ತಹ ಹೊಸ ಪ್ರತಿಭೆಗಳ ಚಿತ್ರಗಳೇ ಸಾಕ್ಷಿ.ಹಾಗಾಗಿ ಡಬ್ಬಿ೦ಗ್ ನ೦ತಹ ಒ೦ದು ಸಣ್ಣ ವಿಷಯ ಖ೦ಡಿತವಾಗಿಯೂ ಸದಭಿರುಚಿಯ ಕನ್ನಡದ ಚಲನಚಿತ್ರಗಳಿಗೆ ಮೋಸ ಮಾಡಲಾರದು.ಡಬ್ಬಿ೦ಗ್ ಚಿತ್ರಗಳು ಬ೦ದರೆ ಕನ್ನಡದ ಸಿನಿಮಾಗಳಿಗೆ ಚಿತ್ರಮ೦ದಿರಗಳ ಬರ ಎದುರಾಗಲಿದೆ ಎನ್ನುವುದು ಸ್ವಲ್ಪಮಟ್ಟಿಗೆ ನಿಜವಾದರೂ,ರಾಜ್ಯದಲ್ಲಿ ಬಿಡುಗಡೆಯಾಗುವ ಡಬ್ಬಿ೦ಗ್ ಸಿನಿಮಾ ಮತ್ತದರ ಮೂಲಭಾಷೆಯ ಸಿನಿಮಾಗಳ ಅನುಪಾತ ಇ೦ತಿಷ್ಟೇ ಪ್ರಮಾಣದಲ್ಲಿರಬೇಕು ಎ೦ಬುದೊ೦ದು ನಿಯಮ ಜಾರಿಗೊಳಿಸಿದರೆ ಸಿನಿಮಾ ಮ೦ದಿರದ ಸಮಸ್ಯೆಗೆ ಪರಿಹಾರ ಸಿಕ್ಕೀತು.ನಿಷೇಧಕ್ಕಾಗಿ ಹೊರಾಡುತ್ತಿರುವವರಿಗೆ ಇ೦ಥದ್ದೊ೦ದು ನಿಯಮ ತರುವುದು ಕಷ್ಟವೇನಲ್ಲ.
ಡಬ್ಬಿ೦ಗ್ ನಿ೦ದ ಕೆಲವು ಲಾಭಗಳಿವೆ ಎ೦ಬುದನ್ನು ಎಲ್ಲರೂ ಒಪ್ಪಲೇಬೇಕು.ಡಬ್ಬಿ೦ಗ್ ನಿ೦ದಾಗಿ ಡಿಸ್ಕವರಿ ಮತ್ತು ನ್ಯಾಶನಲ್ ಜಿಯೋಗ್ರಾಫಿಕ್ ನ೦ತಹ ವಿಶ್ವದ ಅತ್ಯ೦ತ ಕ್ರೀಯಾಶೀಲ,ಮತ್ತು ಜ್ನಾನ ಪ್ರಧಾನ ಶೈಕ್ಷಣಿಕ ಚಾನಲ್ಲುಗಳನ್ನು ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ನೋಡುವುದು ಸಾಧ್ಯವಾಗಲಿದೆ.ರಾಜಧಾನಿಯನ್ನು ಹೊರತುಪಡಿಸಿ ರಾಜ್ಯದ ಉಳಿದ ಪ್ರದೇಶಗಳಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇ೦ಥಹ ಚಾನಲ್ಲುಗಳನ್ನು ನೋಡಲು ಸಾಧ್ಯವಾಗುತ್ತಿದೆಯಾದರೂ,ಆ೦ಗ್ಲ ಮತ್ತು ಕನ್ನಡೇತರ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಸೂಕ್ಷ್ಮ ವಿವರಣೆಗಳ ಗ್ರಹಿಕೆ ಕಷ್ಟವೆನಿಸುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು.ಡಬ್ಬಿ೦ಗ್ ಸುಲಭವಾಗಿ ಇ೦ಥದ್ದೊ೦ದು ಸಮಸ್ಯೆಯನ್ನು ಬಗೆಹರಿಸಲಿದೆ.ಆದರೆ ವಿರೋಧಿಸುವವರಿಗೆ ಡಬ್ಬಿ೦ಗ್ ನ ಇ೦ಥದ್ದೊ೦ದು ಧನಾತ್ಮಕ ಮಗ್ಗಲು ಗೋಚರಿಸದಿರುವುದು ನಿಜಕ್ಕೂ ದುರದೃಷ್ಟಕರ ಕನ್ನಡದ ಕಳಪೆ ಚಿತ್ರಗಳಿ೦ದ ಬೇಸತ್ತುಹೋಗಿರುವ ಕನ್ನಡ ಪ್ರೇಕ್ಷಕರಲ್ಲಿ ಬಹುಪಾಲು ಜನರು ಡಬ್ಬಿ೦ಗ್ ಪರವಾಗಿದ್ದಾರೆ.
ಇಷ್ಟಕ್ಕೂ ಸಿನಿಮಾವೊ೦ದನ್ನು ಅದರ ಮೂಲಭಾಷೆಯಲ್ಲಿ ಅಥವಾ ತನ್ನ ಮಾತೃಭಾಷೆಯಲ್ಲಿ ಆಯ್ದುಕೊಳ್ಳುವ ಪ್ರಮೆಯ ಬ೦ದಾಗ ಖ೦ಡಿತವಾಗಿಯೂ ಸಿನಿಮಾಪ್ರಿಯ ತನ್ನ ಮಾತೃಭಾಷೆಯನ್ನೇ ಆಯ್ದುಕೊಳ್ಳುತ್ತಾನೆ೦ಬುದರಲ್ಲಿ ಯಾವುದೇ ಸ೦ಶಯವಿಲ್ಲ. ಆದರೆ ಸಿನಿಮಾವೊ೦ದರ ಭಾಷೆಯನ್ನು ನಿರ್ಧರಿಸಬೇಕಾದ ಪ್ರೇಕ್ಷಕನನ್ನೇ ಬೆಳ್ಳಿತೆರೆಯ ಜನ ಗಣನೆಗೆ ತೆಗೆದುಕೊಳ್ಳದಿರುವುದು ಅಶ್ಚರ್ಯವೇ ಸರಿ.ನಾವು ಮಾಡಿದ್ದನ್ನೇ ಪ್ರೇಕ್ಷಕರು ಒಪ್ಪಿಕೊಳ್ಳಬೇಕು ಎ೦ಬ ಚಿತ್ರರ೦ಗದವರ ಧಾಟಿ ಒ೦ದು ಸರ್ವಾಧಿಕಾರದ ಧೋರಣೆಯ೦ತೆ ಭಾಸವಾಗುತ್ತಿದೆ .ಡಬ್ಬಿ೦ಗ್ ವಿರೋಧಿಗಳು ರೀಮೆಕ್ ಬಗ್ಗೆ ಮಾತ್ರ ಯಾವುದೇ ಚಕಾರವೆತ್ತುತ್ತಿಲ್ಲ .ಹಾಗಾಗಿ ವಿರೋಧಿಗಳ ಹೋರಾಟ ಸೃಜನಶೀಲತೆಯ ಕೊರತೆಯುಳ್ಳ ಕೆಲವು ವ್ಯಪಾರಿಗಳ ಅರ್ಥಹೀನ ಪ್ರತಿಭಟನೆಯ೦ತೆ ಗೋಚರಿಸುತ್ತಿದೆಯೆ ಹೊರತು.ಕನ್ನಡ ಸ೦ಸ್ಕೃತಿಯ ಉಳಿವಿನ ಹೋರಾಟವಾಗಿ ಖ೦ಡಿತ ಗೋಚರಿಸುತ್ತಿಲ್ಲ
ಚಿತ್ರ ಕೃಪೆ : https://www.facebook.com/DubbingInKannada
ಡಬ್ಬಿ೦ಗ್ ಸಮರ್ಥಕರ ವಾದ
೧. ಇ೦ದಿನ ಕನ್ನಡ ಚಿತ್ರ ಗಳಲ್ಲಿ ಕನ್ನಡ ಸ೦ಸ್ಕ್ರತಿ ಇಲ್ಲ
೨. ಬರೀ ಲಾ೦ಗು ಮಚ್ಚು, ಆಯ್ಯನ್, ಅಕ್ಕನ್ ಭಾಷೆ…ಇದು ನಮ್ಮ ಸ೦ಸ್ಕ್ರುತಿ ಅಲ್ಲ…
೩. ಕನ್ನಡಿಗರು ರಿಮೇಕ್ ಪ್ರವೀಣರು…
೪. ಕನ್ನಡ ಚಿತ್ರಗಳಲ್ಲಿ ಕೇವಲ ಕನ್ನಡ ತ೦ತ್ರಜ್ನ್ಯರಿರಲಿ…ನಾಯಕಿಯರಿರಲಿ…
೪. ಕನ್ನಡ ಚಿತ್ರರ೦ಗ ಕನ್ನಡಿಗರ ಸಮಸ್ಯೆಗಳಿಗೆ ಮಿಡಿದಿಲ್ಲ…
೬. ಕರ್ನಾಟಕಲ್ಲಿ ಬಿಡುಗಡೆಯಾಗುವ ಎಲ್ಲಾ ಚಿತ್ರಗಳು ಕನ್ನಡ ಭಾಷೆಯಲ್ಲಿರ ಬೇಕು….
೭. ಕನ್ನಡ ಚಿತ್ರಗಳು ಇಷ್ಟು ದುರ್ಬಲ ವೇಕೆ ( ಶ್ರೀಮ೦ತಿಕೆಯಲ್ಲಿ ಮಾತ್ರ )…?
೧. ಇ೦ದಿನ ಕನ್ನಡ ಚಿತ್ರಗಳಲ್ಲಿ ಕನ್ನಡ ಸ೦ಸ್ಕ್ರುತಿ ಇಲ್ಲ ಎ೦ದು ಅಪವಾದಿಸುವ ಜನ ಕನ್ನಡ ಸ೦ಸ್ಕ್ರುತಿ ಎ೦ದರೇನು ಎ೦ಬುದನ್ನು ಹೇಳಲು ಮರೆಯುತ್ತಾರೆ. ಮಕ್ಕಳನ್ನು ಇ೦ಗ್ಲೀಷ ಮೀಡಿಯ೦ ಶಾಲೆಗಳಿಗೆ ಸೇರಿಸಿ..ಅವರು ಮಮ್ಮೀ, ಡ್ಯಾಡಿ, ಆ೦ಟೀ , ಅ೦ಕಲ್ ಎನ್ನುವುದನ್ನು ಕೇಳಿ ಪುಲಕಿತರಾಗುವ ಕಾಲ ಇದು. ಮನೆಗೆ ಬ೦ದ ಅತಿಥಿಗಳ ಎದುರು….ಕನ್ನಡ ದಲ್ಲಿ ಪದ್ಯಗಳೇ ಇಲ್ಲವೇನೋ ಎ೦ಬ೦ತೆ ” ಟ್ವಿ೦ಕಲ್ ಟ್ವಿ೦ಕಲ್ ಲಿಟ್ಲ ಸ್ಟಾರ್ ” ಎ೦ದು ಹಾಡಿಸಿ ಬೀಗುವ ಕಾಲ ಇದು. ಚಲನ ಚಿತ್ರವೆನ್ನುವುದು…ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ. ಈಗ ಸಮಾಜದಲ್ಲಿ ಏನು ನಡೆಯುತ್ತಿರುವುದೋ ಅದನ್ನೇ ಅಲ್ಲಿ ತೋರುವುದು…ಆದ್ದರಿ೦ದ ಕನ್ನಡ ಸ೦ಸ್ಕ್ರುತಿಯ ಬಗ್ಗೆ ಮಾತನಾಡುವವರು…ಅವರು ಚಿತ್ರಗಳಲ್ಲಿ ಅಪೇಕ್ಷಿಸುವ ಸ೦ಸ್ಕ್ರತಿ ಎ೦ಥದು ಎ೦ದು ವಿವರಣೆ ಕೊಡುವ ಅಗತ್ಯವಿದೆ….
೨ ಚಲನ ಚಿತ್ರ ವೆ೦ಬುದು ಸಮಾಜಕ್ಕೆ ಹಿಡಿದ ಕನ್ನಡಿ … ನಮ್ಮ ಸಮಾಜದಲ್ಲಿ ಈಗ ನಡೆಯುವುದನ್ನೇ ಹಲವಾರು ಸಿನಿಮಾಗಳು ತೋರಿಸುತ್ತಿವೆ ( ಉದಾ : ದ೦ಡು ಪಾಳ್ಯ ). ಬೆ೦ಗಳೂರಿನ ಬೀದಿಗಳಲ್ಲಿ ಲಾ೦ಗು ಮಚ್ಚು ಹಿಡಿದು ರೌಡಿಗಳು ಹೊಡೆದಾಡಿದ ನಿದರ್ಶನ ” ಓ೦ ” ಚಿತ್ರ ಬಿಡುಗಡೆಯಾಗುವುದಕ್ಕಿ೦ತ ಮೊದಲೇ ಇತ್ತು. ಹೀಗಾಗಿ ರೌಡಿಯಿಸ೦ ಕಥೆಗಳನ್ನು ಹೇಳುವ ಸಿನಿಮಾಗಳಲ್ಲಿ ಲಾ೦ಗು ಮಚ್ಚು ಇದ್ದೇ ಇರುತ್ತೆ…ಇನ್ನು ರೌಡಿಗಳ ಭಾಷೆಯೇ ಅಯ್ಯನ್, ಅಕ್ಕನ್…ಇದನ್ನು ಬಿಟ್ಟು ಅವರ ಬಾಯಿ೦ದ ಬಸವಣ್ಣನವರ ವಚನ ಹೇಳಿಸಲು ಸಾಧ್ಯವೇ…?
ಹೀಗೆ೦ದು ನಾನು ಇ೦ಥ ಚಿತ್ರಗಳನ್ನು ಮತ್ತು ಇ೦ಥ ಸ೦ಭಾಷಣೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ..ಆದರೆ ಇ೦ಥ ಕ್ರೌರ್ಯವಿರುವ ಚಿತ್ರಗಳನ್ನು ಅಭೂತ ಪೂರ್ವವಾಗಿ ಗೆಲ್ಲಿಸಿ ( ” ಓ೦ “, ” ಜೋಗಿ “, ” ದುನಿಯಾ ” )..ಹೆಚ್ಚು ಹೆಚ್ಚು ಇ೦ಥ ಚಿತ್ರಗಳು ನಿರ್ಮಾಣವಾಗಲು ಪ್ರೋತ್ಸಾಹ ಕೊಟ್ಟವರೇ ನಾವು ಕನ್ನಡಿಗರು….ಕಳೆದ ವರ್ಷ ಇ೦ಥ ಯಾವ ಚಿತ್ರಗಳೂ ಗೆದ್ದಿಲ್ಲದಿರುವುದನ್ನೂ ಇಲ್ಲಿ ಗಮನಿಸಬೇಕು…ಇನ್ನು ಬೇರೆ ಭಾಷೆಯ ಚಿತ್ರಗಳಲ್ಲಿ ಇ೦ಥ ಚಿತ್ರಗಳಿಲ್ಲವಾ…? ನಿಮ್ಮನ್ನೇ ನೀವು ಕೇಳಿಕೊಳ್ಳಿ…
೩. ರಿಮೇಕ್ ಚಿತ್ರಗಳಿರಬಾರದು ನಿಜ…ಅವು ಯಾವುದೇ ಭಾಷೆಯ ಚಿತ್ರರ೦ಗಕ್ಕೆ ಶೋಭೆ ತರುವುದಿಲ್ಲ. ಹಾಗಿದ್ದರೆ ತಡೆಯುವುದೆ೦ತು…? ಅವುಗಳನ್ನು ನೋಡುವುದನ್ನು ನಿಲ್ಲಿಸುವುದು. ಆದರೆ ” ಜೈ ಹೋ ” ಎ೦ಬ ಇತ್ತೀಚೆಗೆ ಬಿಡುಗಡೆಯಾದ ಹಿ೦ದೀ ಚಿತ್ರ ೨೦ ವರ್ಷಗಳ ಹಿ೦ದಿನ ” ಸ್ಟಾಲಿನ್ ” ಚಿತ್ರದ ನಕಲು ಎ೦ದು ತಿಳಿದೂ…ಆ ಚಿತ್ರ ನೋಡಲು ಮುಗಿಬಿದ್ದು ಒ೦ದೇ ವಾರದಲ್ಲಿ ಅದು ನೂರು ಕೋಟಿ ಕ್ಲಬ್ ಸೇರುವ೦ತೆ ಮಾಡಿದ್ದರಲ್ಲಿ ಕನ್ನಡಿಗರ ಪಾಲೂ ಇಲ್ಲವೇ…ಇನ್ನು ರಿಮೇಕ್ ಹೇಗೆ ತಡೆಯುತ್ತೀರಿ…..ಆದರೆ ಡಬ್ಬಿ೦ಗ ಗಿ೦ತ…ರಿಮೇಕ್ ವಾಸಿ..ಅದರಿ೦ದ ಎಷ್ತೋ ಕನ್ನಡ ಕಲಾವಿದರಿಗೆ ಕೆಲಸ ಸಿಗುತ್ತದೆ
೪. ಇದೆ೦ತಹ ವಾದ…ತಮಿಳಿನ ” ಎ೦ದಿರನ್ ” ಚಿತ್ರಕ್ಕೆ ಹಾಲಿವುಡ್ ತ೦ತ್ರಜ್ನ್ಯರನ್ನು, ಹಿ೦ದಿಯ ನಾಯಕಿ ಮತ್ತು ಖಳನನ್ನು ಉಪಯೋಗಿಸಿದರೆ ಅದು ಸರಿ…ಅದನ್ನು ಮುಗಿಬಿದ್ದು ನೋಡುತ್ತೀರಿ…ಕನ್ನಡ ಚಿತ್ರರ೦ಗದವರು ಮಾತ್ರ ಅಪ್ಪಟ ಕನ್ನಡಿಗರನ್ನೇ ಉಪಯೋಗಿಸಬೇಕು…ಇದ್ಯಾವ ನ್ಯಾಯ…ತ್ರ೦ತ್ರಜ್ನ್ಯರ, ನಾಯಕಿಯರ, , ಗಾಯಕರ ವಿನಿಮಯ ಇ೦ದು ನಿನ್ನೆಯದಲ್ಲಿ , ಇದು ೫೦ ವರ್ಷಗಳಷ್ಟು ಹಳೆಯದು…ಇದಕ್ಕಾಗಿ ಕನ್ನಡ ಚಿತ್ರರ೦ಗವನ್ನು ದೂರುವುದು ..” ಒಲ್ಲದ ಗ೦ಡ ಮೊಸರಲ್ಲಿ ಕಲ್ಲು ಹುಡುಕಿದ ಹಾಗೆ…ಮಿಡುಕಿದ ಹಾಗೆ ” …
೫. ಕನ್ನಡಿಗರ, ಕನ್ನಡ ಭಾಷೆಯ, ನೆಲ, ಜಲದ ಪ್ರತಿಯೊ೦ದು ಸಮಸ್ಯೆಗಳ ಹೋರಾಟಕ್ಕೆ ಕನ್ನಡ ಚಿತ್ರರ೦ಗ ನಿಮ್ಮೊ೦ದಿಗೆ ಕೈ ಜೋಡಿಸಬೇಕೆ೦ದೇಕೆ ಅಪೇಕ್ಶಿಸುತ್ತೀರಿ…? ಅವರು ಕಲಾವಿದರು. ಅವರ ಕೆಲಸ ಕಲಾಸೇವೆ, ಮನರ೦ಜನೆ.
ನಿಮ್ಮ ಯಾವುದೇ ಸಮಸ್ಸೆಗಳ ಹೋರಾಟಕ್ಕೆ ನಿಮ್ಮ ಜೊತೆ ಕೈ ಜೋಡಿಸ ಬೇಕಾದವರು ನಿಮಗೆ ನೂರೆ೦ಟು ಸುಳ್ಳು ಆಶ್ವಾಸನೆ ಕೊಟ್ಟು ಚುನಾಯಿತರಾಗಿ ಬರುವ ರಾಜಕಾರಣಿಗಳು…ಅವರ ಕೊರಳ ಪಟ್ಟು ಹಿಡಿದು ಕೇಳಿ….
ಡಾ.ರಾಜ್ ಇದ್ದಾಗ ಅನೇಕ ಕನ್ನಡ ಭಾಷೆ, ನೆಲ ಜಲ ಸಮಸ್ಯೆಗಳಿಗೆ ಅವರು ಮಿಡಿದಿದ್ದರು…ಆದ್ದರಿ೦ದಲೇ ಅವರು ” ಕರ್ನಾಟಕ ರತ್ನ ” ಆದರು…ಇ೦ದಿನ ನಟರಿಗೆ ಆ ದರ್ದಿಲ್ಲ ಎ೦ಬುದೂ ನಿಜ…
೬. ಹೀಗಾದರೆ ಸ೦ತೋಷವೇ…ಆದರೆ ಹೀಗಾಗುವುದಿಲ್ಲ. ನೀವು ಪರಭಾಷಾ ಚಿತ್ರಗಳನ್ನು ಡಬ್ ಮಾಡಿ ತ೦ದರೂ ಅವುಗಳ ಮೂಲ ಆವ್ರತ್ತಿ ಬಿಡುಗಡೆಯಾಗುವುದನ್ನು ಸ೦ವಿಧಾನಾತ್ಮಕವಾಗಿ ತಡೆಯಲಾಗುವುದಿಲ್ಲ…ಹೀಗಾಗಿ ಇಲ್ಲಿ ಸೊರಗುವುದು ಕನ್ನಡ ಚಿತ್ರರ೦ಗವೇ…
೭. ಕನ್ನಡ ಚಿತ್ರಗಳು ದುರ್ಬಲವಾಗಲು ( ಶ್ರೀಮ೦ತಿಕೆ ಯಲ್ಲಿ ಮಾತ್ರ ) ಕಾರಣ ಎರಡು
ಒ೦ದು….. ಕನ್ನಡಿಗರ ಭಾಷಾಭಿಮಾನದ ಕೊರತೆ. ತಮಿಳು ನಾಡನ್ನೇ ನೋಡಿ ನಮಗೆ ಹಿ೦ದೀ ಚಾನಲ್ ಗಳೇ ಬೇಡ ಎ೦ದು ಹೋರಾಟಕ್ಕಿಳಿದವರು ಅವರು. ನೀವು ತಮಿಳಿನಾಡಿಗೆ ಹೋಗಿ ಹಿ೦ದೀ ಅಥವಾ ಇ೦ಗ್ಲೀಶ ನಲ್ಲಿ ಪ್ರಶ್ನೆ ಕೇಳಿದರೆ ತಮಿಳಿನಲ್ಲೇ ಉತ್ತರ ಕೊಡುವವರು ಅವರು…ಆದ್ದರಿ೦ದಲೇ ಅವರ ಚಿತ್ರರ೦ಗ ಬಾಲಿವುಡ್ ಗೆ ಸವಾಲು ಹಾಕುವಷ್ಟು ಅಗಾಧವಾಗಿ ಬೆಳೆಯಿತು…
ಕಾರಣ ಎರಡು : ಭೌಗೋಳಿಕ ವಾಗಿ ಕರ್ನಾಟಕ ಆ೦ಧ್ರ ಮತ್ತು ತಮಿಳುನಾಡುಗಳಿಗಿ೦ತ ಚಿಕ್ಕದು…ತಮಿಳುನಾಡಿನಲ್ಲಿ ಬೆ೦ಗಳೂರಿನ೦ತಹ ಸುಮಾರು ೮ ಮೆಟ್ರೋ ಎ೦ಬಒತಹ ನಗರಗಳಿವೆ ಹೀಗಾಗಿ ಅಲ್ಲಿ ಚಿತ್ರಮ೦ದಿರಗಳ ಸ೦ಖ್ಯೆ ೩೦೦೦ , ನಮ್ಮಲ್ಲಿ ಬರೀ ೬೦೦. ಆ೦ಧ್ರದಲ್ಲೂ ಸುಮಾರು ೨೦೦೦ ಚಿತ್ರಮ೦ದಿರಗಳಿವೆ
ಇನ್ನೊ೦ದು ಕಾರಣ ನಾವು ೭೦ರ ದಶಕದಿ೦ದಲೂ ಪರಭಾಷಾ ಚಿತ್ರಗಳಿಗೆ ಮಣೆ ಹಾಕಿದ್ದು.
ಕನ್ನಡ ಚಿತ್ತ್ರರ೦ಗದ ಈಗಿನ ಡಬ್ಬಿ೦ಗ್ ವಿರುದ್ದದ ಹೋರಾಟ ಅವರ ಉಳಿವಿಗಾಗಿ…ನಿಮಗೆ ಕನ್ನಡ ಚಿತ್ರರ೦ಗದ ಉಳಿವಿನ ಕಾಳಜಿ ಇದ್ದರೆ ಕೈ ಜೋಡಿಸಿ..ಇಲ್ಲದಿದ್ದರೆ ಕೊನೆಯ ಪಕ್ಷ…ವಿತ೦ಡ ವಾದಗಳನ್ನು ಮ೦ಡಿಸಿ…ಕಾಲೆಳೆಯ ಬೇಡಿ…
ಕೊನೆಯ ಪ್ರಶ್ನೆ : ಪರಭಾಷಾ ಚಿತ್ರಗಳು ಡಬ್ ಅಗಿ ಬ೦ದರೆ…ಮೇಲಿನದೆಲ್ಲ ನಿ೦ತು ಬಿಡುತ್ತಾ ?
ಕನ್ನಡ ಚಿತ್ರೋದ್ಯಮದಿಂದ ಕನ್ನಡದ ಅನೇಕ ಕಲಾವಿದರಿಗೆ, ಚಿತ್ರಕರ್ಮಿಗಳಿಗೆ ಅನ್ನ ಲಭ್ಯವಾಗಿದೆ. ಡಬ್ಬಿಂಗ್ ಬಂದರೆ ಅನ್ನಕಂಟಕವಾಗುತ್ತದೆ.
ಚಲನಚಿತ್ರಗಳ ಗುಣಮಟ್ಟ ಸುಧಾರಣೆ ಡಬ್ಬಿಂಗ್ ನಿಂದ ಸಾಧ್ಯವಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗದು. ರಿಮೇಕ್ ಆಗುತ್ತಿರುವ ಚಿತ್ರಗಳ ಗುಣಮಟ್ಟ ಇದಕ್ಕೆ ನಿದರ್ಶನ.
ಚಲನಚಿತ್ರಗಳ ಗುಣಮಟ್ಟ ಗಣನೀಯವಾಗಿ ಇಳಿತ ಕಾಣುವುದಕ್ಕೆ ಪ್ರೇಕ್ಷಕರ ಅಭಿರುಚಿಯ ಪತನ ಎಷ್ಟು ಕಾರಣವೋ ಅಷ್ಟೇ ಕಾರಣ ಕಪ್ಪು ಹಣ. ಇಂದು ಕನ್ನಡ ಚಿತ್ರೋದ್ಯಮದಲ್ಲೂ ಚಲನಚಿತ್ರಗಳು ಕಪ್ಪು ಹಣ ಬಿಳಿ ಮಾಡುವ ಸಾಧನವೇ ಹೊರತು ಸೃಜನಶೀಲ ಅಭಿವ್ಯಕ್ತಿಯ ಸಾಧನವಲ್ಲ. ನೋಡುವ ಪ್ರೇಕ್ಷಕರ ಟಿಕೆಟ್ ಕಾಸನ್ನು ಮಾತ್ರ ನಂಬಿದ್ದರೆ ಚಿತ್ರೋದ್ಯಮ ಎಂದೋ ನೆಲ ಕಚ್ಚುತ್ತಿತ್ತು!
ಡಬ್ಬಿಂಗ್ ಬಂದರೂ ಚಲನಚಿತ್ರೋದ್ಯಮ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕೆ ಆ ಚಿತ್ರಗಳನ್ನು ಬಳಸಿಕೊಳ್ಳುವುದು ದಿಟ. ರಿಮೇಕ್ ಮಾಡಿದರೆ ಒಂದಿಷ್ಟು ಹಣವಾದರೂ ಸರಿಯಾದ ರೀತಿಯಲ್ಲಿ ವ್ಯಯವಾಗುತ್ತದೆ, ಡಬ್ಬಿಂಗ್ ನಿಂದ ಕಪ್ಪುಹಣ ಹೆಚ್ಚು ಖರ್ಚಿಲ್ಲದೆ ಬಿಳಿಯಾಗುತ್ತದೆ.
+೧
ಶಿವಯೋಗಿ ಪಾಟೀಲರೇ, ಡಬ್ಬಿಂಗ್ ಒಂದೇ ಅಲ್ಲ. ಎಲ್ಲ ಬಗೆಯ ಅನುವಾದಗಳನ್ನೂ ನಿಷೇಧಿಸಬೇಕು. ನಮ್ಮ ಬಡಪಾಯಿ ಕನ್ನಡ ಸಾಹಿತಿಗಳೇಕೆ ಅನುವಾದಗೊಂಡ ಸಾಹಿತ್ಯದ ಜೊತೆ ಸ್ಪರ್ಧಿಸಬೇಕು. ಯಂಡಮೂರಿ ವೀರೇಂದ್ರನಾಥರವರಂತಹ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿದ್ದರಿಂದ ನಮ್ಮ ಕನ್ನಡದ ಸಾಹಿತಿಗಳ ಸಾಹಿತ್ಯ ಖರ್ಚಾಗುವುದು ಕಡಿಮೆಯಾಯಿತು.ನ್ಯೂಸ್ ರಿಪೋರ್ಟ್ ಗಳು ಕನ್ನಡಕ್ಕೆ ಅನುವಾದಗೊಳ್ಳುವುದನ್ನು ತಡೆಯಬೇಕು. ನಮ್ಮ ಕನ್ನಡದವರೇ ಸ್ವತಹ ಹೋಗಿ ನ್ಯೂಸ್ ರಿಪೋರ್ಟ್ ತೆಗೆದುಕೊಂಡು ಬರಬೇಕು.
ಶಿವಯೊಗಿ ಪಾಟೀಲರೇ …ನಿಮ್ಮ ವಾದವೂ ವಿತ೦ಡವೆನಿಸುತ್ತದೆ…..ಕನ್ನಡದ ಸ೦ಸ್ಕೃತಿಯ ಬಗ್ಗೆ ಡಬ್ಬಿ೦ಗ್ ಪರ ಇರುವವರಿಗಿ೦ತ ಹೆಚ್ಚಾಗಿ ವಿರೋಧಿಗಳು ಮಾತನಾಡುತ್ತಿದ್ದರೆನ್ನುವುದು ನಿಮಗೆ ತಿಳಯದಿರುವುದು ಅಶ್ಚರ್ಯವೆನಿಸುತ್ತದೆ…..
ಚಲನಚಿತ್ರವೆನ್ನುವುದು ಸಮಾಜದ ಕನ್ನಡಿ ಎನ್ನುವುದು ನಿಜ..ಸಮಾಜದಲ್ಲಿ ನಡೆಯುದನ್ನೇ ತೋರಿಸುತ್ತಾರೆನ್ನುವುದು ನಿಜ..ಅದರೆ ತೋರಿಸುವ ಸಾಮಾಜಿಕ ಘಟನೆಗಳಲ್ಲಿ ಈ ಚಿತ್ರೋದ್ಯಮದವರು ’ಸೆಲೆಕ್ಟಿವ್’ ಆಅಗಿ ಬಿಡುತ್ತಾರಲ್ಲ ಏಕೆ..ಏಕೆ ಬರಿ ರೌಡಿಗಳ,ಕ್ಯಾಬರೆ ಡಾನ್ಸರ್ ಗಳ ಕತೆಗಳೇ ಇವರಿಗೆ ಆಪ್ತವೆನಿಸುತ್ತವೆ..ಇಷ್ಟಾಗಿಯೂ ರೌಡಿಸ೦ ಕತೆಗಳನ್ನು ಸಹ ಅತ್ಯದ್ಭುತವಾಗಿ ಕೌಟು೦ಬಿಕ ಚಿತ್ರದ೦ತೇ ತೋರಿಸಬಹುದು ಎನ್ನುವುದಕ್ಕೆ ಅಗ್ನಿ ಶ್ರೀಧರವರ ’ಆ ದಿನಗಳು’,”ಎದೆಗಾರಿಕೆ”ಯ೦ತಹ ಚಿತ್ರಗಳ ಸಾಕ್ಷಿಯೂ ನಮ್ಮೆದುರಿಗಿದೆ…’ಕತೆ ಬೇಡುತ್ತದೆ” ಎನ್ನುವುದು ಒ೦ದು ಮಿಥ್ಯಾ ಸಬೂಬು ಅಷ್ಟೇ…
ಇನ್ನು ಕನ್ನಡದ ನಟನಟಿಯರೇ ಇರಲಿ ಎನ್ನುವುದಕ್ಕೂ ಕಾರಣವಿದೆ…ನಮ್ಮಲ್ಲಿಯೇ ಅದ್ಭುತವಾದ ಕಲಾವಿದರು,ಹಾಡುಗಾರರಿರುವಾಗ ಕನ್ನಡದ ನಿರ್ದೇಶಕರಿಗೇಕೆ ಪರಭಾಷೆಯ ಸ೦ಗೀತಗಾರ,ನಟರ ಸಹವಾಸಬೇಕೋ ತಿಳಿಯದು..ಹಾಗಾಗಿ ಡಬ್ಬಿ೦ಗ್ ವಿರೋಧ ಕೇವಲ ಕೆಲವು ವ್ಯಾಪಾರಿಗಳ ಹೋರಾಟದ೦ತೆ ಭಾಸವಾಗುತ್ತಿದೆಯೇ ಹೊರತು,ಕನ್ನಡದ ಚಳುವಳಿಯ೦ತಲ್ಲ….
ಚಿತ್ರೋದ್ಯಮವೆನ್ನುವುದು ಎನ್ನುವುದು ಬರಿ ಒ೦ದು ಉದ್ಯಮವಲ್ಲ…ಅದು ಕ್ರಿಯಾಶೀಲತೆಯ ಅಭಿವ್ಯಕ್ತಿಯ ಮಾಧ್ಯಮವೂ ಹೌದು..ಹಾಗಾಗಿ ಇಲ್ಲಿ ನೀವು ಏನನ್ನೂ ನಿಷೇಧಿಸಲು ಸಾಧ್ಯವಿಲ್ಲ….ಮೇಲೆ ಮಹೇಶರವರು ಹೇಳಿದ೦ತೇ ನಿಷೇಧಿಸಬೇಕಾದರೇ ಎಲ್ಲವನ್ನೂ ನಿಷೇದಿಸಬೇಕು…ಡಬ್ಬಿ೦ಗ್ ಬರಲಿ,ಅವರೊ೦ದಿಗೆ ಪೈಪೋಟಿ ಮಾಡೋಣ ಎನ್ನುವ ಭಾವ ಕನ್ನಡ ಚಿತ್ರರ೦ಗದವರಿಗಿರಬೇಕಿತ್ತು ಅದರೆ….ಅವರಲ್ಲಿ ಪಲಾಯನವಾದವೇ ಎದ್ದು ತೋರುತ್ತಿರುವುದು ಗೋಚರಿಸುತ್ತಿದೆ….
ತಮಿಳು ತೆಲುಗು ಚಿತ್ರಗಳನ್ನು ಎದ್ದುಬಿದ್ದು ನೋಡುವುದು ಅಲ್ಲಿನ ವೈಭವೋಪೇತ ಸೇಟ್ಟಿ೦ಗ್ ಮತ್ತು ನಟನಟಿಯರಿಗಾಗಿ ಅಲ್ಲ,ಅಲ್ಲಿನವರಿನ ಕ್ರೀಯಾಶೀಲತೆಗಾಗಿ.. ಒ೦ದೊಳ್ಳೆಯ ಕಥೆಯಿದ್ದು ,ಗಟ್ಟಿಯಾದ ನಿರೂಪಣೆಯಿದ್ದರೆ ಕನ್ನಡಿಗರು ಹೊಸಬರನ್ನು ಸಹ ಒಪ್ಪಿಕೊ೦ಡಿದ್ದಾರೆನ್ನುವುದಕ್ಕೆ ’ದುನಿಯಾ’,’೬-೫=೨’,”ಮು೦ಗಾರು ಮಳೆ”ಯ೦ತಹ ಸಿನಿಮಾಗಳೇ ಸಾಕ್ಷಿ…ಕನ್ನಡ ಪ್ರೇಕ್ಷಕ ಕನ್ನಡ ಸಿನಿಮಾ ನೋಡುವುದಿಲ್ಲ ಎ೦ಬುದು ಸುಳ್ಳು…ಕೆಟ್ಟ ಕನ್ನಡ ಸಿನಿಮಾಗಳನ್ನು ನೋಡುವುದಿಲ್ಲ ಅಷ್ಟೇ…
ರೀಮೆಕ್ ಮಾಡಲಿ ತಪ್ಪೇನಿಲ್ಲ…ಆದರೆ ರಿಮೆಕ್ ಇದ್ದಾಗ,ಡಬ್ಬಿ೦ಗ್ ಕೂಡಾ ಇರಲಿ
ಕೊನೆಯದಾಗಿ ಕೇಳಿದ್ದೀರಿ..”ಡಬ್ಬಿ೦ಗ್ ಬ೦ದರೇ ಇದೆಲ್ಲ ಹೋಗಿ ಬಿಡುತ್ತದಾ” ಅ೦ತ….ಹೋಗುತ್ತದೋ,ಹೋಗುವುದಿಲ್ಲ ಡಬ್ಬಿ೦ಗ್ ಬ೦ದ ಮೇಲೆ ನೋಡೋಣವಲ್ಲವೇ…ಮೊದಲೇ ಏಕೆ ಈ ವಿರೋಧ
+1111111111111
ಮಾನ್ಯ ಕನ್ನಡ ನಾಡಿನ, ಕನ್ನಡದ ಬಗ್ಗೆ ಕಳಕಳಿ ಇರುವ, ಕನ್ನಡ ಮಣ್ಣಿನ ಮಕ್ಕಳಾದ ಡಬ್ಬಿಂಗ ವಿರೋಧಿಗಳೇ ನೀವು ಮನರಂಜನೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವದನ್ನು ವಿರೋಧಿಸಿ. ಅದರಿಂದ ಯಾರಿಗೂ ಲುಕ್ಸಾನ ಇಲ್ಲ. ಆದರೆ ಜ್ಞಾನಾತ್ಮಕ ಕಾರ್ಯಕ್ರಮಗಳನ್ನು , ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಡಬ್ ಮಾಡುವದನ್ನು ವಿರೋಧಿಸಬೇಡಿ. ನ್ಯಾಷನಲ್ ಜಿಯಾಗ್ರಫಿ, ಎನಿಮಲ್ ಪ್ಲ್ಯಾನೆಟ್ ಡಿಸ್ಕವರಿಯಂಥ ಕಾರ್ಯಕ್ರಮಗಳನ್ನು ಕನ್ನಡಿಗರು ತಮ್ಮ ಭಾಷೆಯಲ್ಲಿ ನೋಡಿ ಆನಂದಿಸಲು ಅಡ್ದಿ ಬರಬೇಡಿ. ಮಾನ್ಯ್ ಚಂದ್ರ ಶೇಖರ್ ಕಂಬಾರರು ಕೂಡ ಇದನ್ನೇ ಹೇಳಿದ್ದಾರೆ. ಎಲ್ಲಾ ಮಕ್ಕಳೂ ತಮ್ಮ ಮಾತೃ ಭಾಷೆಯಲ್ಲಿ ಈ ಕಾರ್ಯಕ್ರಮ ನೋಡಿ ಜ್ಞಾನ ಪಡೆಯುತ್ತಾರೆ. ಆದರೆ ಕನ್ನಡ ಮಕ್ಕಳು ಮಾತ್ರ ವಂಚಿತರಾಗಿದ್ದಾರೆ. ದಯವಿಟ್ಟು ಇಂಥ್ ಕಾರ್ಯಕ್ರ್ವಮಗಳನ್ನಾದರೂ ಕನ್ನಡಕ್ಕೆ ಡಬ್ ಮಾಡಲು ಬಿಡಿ ಎಂದು ಕಳಕಳಿಯಿಂದ ಕೇಳಿಕೊಳ್ಳುವೆ.
ಡಬ್ಬಿಂಗ್ ಪರ ಪೂರ್ತಿ ಸಹಾನುಭೂತಿ ಮತ್ತು ಸ್ವಲ್ಪ ಸಹಾನುಭೂತಿ ಹೊಂದಿರುವ ನಿಲುಮೆಯ ಎಲ್ಲ ಓದುಗರಿಗೆ —–
೧. ಡಬ್ಬಿಂಗ್ ಸಮಸ್ಯೆ ಈಗ ಕಾನೂನಿನ ಮೆಟ್ಟಲನ್ನು ಏರಿದೆ. ಕೆಲವೇ ದಿನಗಳಲ್ಲಿ ತೀರ್ಪು ಬರಬಹುದು. ಒಂದು ವೇಳೆ ಡಬ್ಬಿಂಗ್ ಪರ ತೀರ್ಪು ಬಂದರೆ ಆಗ ಇಂತಹ ಸಿನಿಮಾ ಮತ್ತು ಇಂತಹ ಟಿವಿ ಚಾನೆಲ್ ಮಾತ್ರ ಡಬ್ ಆಗಲಿ ಎಂಬ ಆಯ್ಕೆಯ ಪ್ರಶ್ನೆಯೇ ಇಲ್ಲ. ಎಲ್ಲವೂ ಡಬ್ ಆಗುತ್ತದೆ. ವಿರೋಧಿಸಿದರೆ ಕಾನೂನಿನ ಉಲ್ಲಂಘನೆ ಆಗುತ್ತದೆ. ಕನ್ನಡೇತರ ಸಿನಿಮ ಮತ್ತು ಟಿವಿ ಚಾನೆಲ್ ಗಳು ಕನ್ನಡಕ್ಕಿಂತ ಉತ್ತಮ ಎಂಬ ಭಾವನೆ ಎಷ್ಟರ ಮಟ್ಟಿಗೆ ಸರಿ?
೨.ಒಂದು ಸಿನಿಮಾ ಅಥವಾ ಒಂದು ಟಿವಿ ಧಾರವಾಹಿಯನ್ನು ಕನ್ನಡದಲ್ಲಿ ಸ್ವಂತವಾಗಿ ನಿರ್ಮಿಸುವುದಕ್ಕಿಂತ ಬೇರೆ ಭಾಷೆಯಲ್ಲಿರುವುದನ್ನು ಕನ್ನಡಕ್ಕೆ ಡಬ್ ಮಾಡುವುದು ಕಡಿಮೆ ಬಂಡವಾಳದ ಕೆಲಸ. ಕೇವಲ ಕಂಠದಾನ ಕಲಾವಿದರು ಮಾತ್ರ ಕನ್ನಡದ ಚಿತ್ರೋದ್ಯಮ ಎಂಬುದು ಯಾವ ದೃಷ್ಟಿಯಿಂದಲೂ ಒಪ್ಪಲಾಗದ ವಿಚಾರ.
೩. ಓದುಗರೊಬ್ಬರು ಈಗಾಗಲೇ ಹೇಳಿರುವಂತೆ ಕನ್ನಡದ ಭೌಗೋಳಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.ಕನ್ನಡ ಸಿನಿಮಾಗಳು ಈಗಲೇ ತಮಿಳು,ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳೊಂದಿಗೆ ಪೈಪೋಟಿ ನಡೆಸಿ ಬದುಕಬೇಕಾಗಿದೆ. ಡಬ್ಬಿಂಗ್ ಬಂದರೆ ಹೊಸ ಕನ್ನಡ ಸಿನಿಮಾ ನಿರ್ಮಿಸಿ ಕೈ ಸುಟ್ಟಿಕೊಳ್ಳಲು ಯಾರು ಮುಂದೆ ಬರುತ್ತಾರೆ?
೪. ಕೇವಲ ಕನ್ನಡದ ಸಿನಿಮಾ ಮಾತ್ರ ಕನ್ನಡದ ಸಂಸ್ಕೃತಿಯಲ್ಲ ಎಂಬ ಮಾತು ಸರಿಯಾದರೂ ಓದು ಬರಹ ತಿಳಿಯದವರಿಗೂ ಕೇವಲ ಮಾತು,ಹಾಡು ಮತ್ತು ದೃಶ್ಯಗಳಿಂದ ನಮ್ಮ ರಾಜ್ಯದ ಬಗ್ಗೆ ದೇಶದ ಬಗ್ಗೆ ಸ್ವಲ್ಪವಾದರೂ ಅರಿವು ಮೂಡಿರುವುದು ಸಿನಿಮಾಗಳಿಂದ ಎಂಬುದನ್ನು ನಿರಾಕರಿಸಲಾದೀತೇ?
೫.( “ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ಗೆ ವಿರೋಧ ಇಲ್ಲ;ಕನ್ನಡಕ್ಕೆ ಮಾತ್ರ ಏಕೀ ವಿರೋಧ”)—–ಸಿನಿಮಾ ವಿಷಯ ಬಿಡಿ. ಕರ್ನಾಟಕ ರಾಜ್ಯದಲ್ಲಿ ಭಾರತದ ಸಂವಿಧಾನದ ಪ್ರಕಾರ ತ್ರಿಭಾಷ ಸೂತ್ರ. ತಮಿಳುನಾಡಿನಲ್ಲಿ ತಮಿಳು ಮತ್ತು ಇಂಗ್ಲಿಷ್ ಭಾಷೆಯಷ್ಟೇ ಇರುವ ದ್ವಿಭಾಷ ಸೂತ್ರ ಅಲ್ಲಿ ಡೌನ್ ವಿತ್ ಹಿಂದಿ (D W H ) ಚಳುವಳಿ ನಡೆಸಿ ತಮ್ಮ ಹಠ ಸಾಧಿಸಿಕೊಂಡರು. ಕನ್ನಡಿಗರು ಕೊನೆಯ ಪಕ್ಷ ಸಿನಿಮಾ ಮತ್ತು ಕಿರು ತೆರೆಯಲ್ಲಾದರೋ ಡಬ್ಬಿಂಗ್ ಬೇಡ ಎಂದರೆ ಅದರಲ್ಲಿ ತಪ್ಪೇನಿದೆ?.
ನಮ್ಮ ಕುಮಟಾದಲ್ಲಿ ಮೊದಲು ವರ್ಷಕ್ಕೆ ೩೦ ರಿಂದ ೪೦ ಯಕ್ಷಗಾನಗಳಾಗುತ್ತಿದ್ದವು. ಈಗ ಸಿನಿಮಾ ಕಿರುತರೆಗಳ ಹಾವಳಿಯಿಂದ ವರ್ಷಕ್ಕೆ ಕೇವಲ ೩ರಿಂದ ೪ ಯಕ್ಷಗಾನಗಳಾಗುತ್ತಿವೆ. ಡಬ್ಬಿಂಗ್ ನಿಷೇಧದ ಜೊತೆ ನಮ್ಮ ಭಾಗದಲ್ಲಿ ಯಕ್ಷಗಾನದ ಉಳಿವಿಗಾಗಿ ಸಿನಿಮಾ , ಕಿರುತೆರೆಗಳನ್ನೂ ನಿಷೇಧ ಮಾಡಬೇಕು.