ವಿಷಯದ ವಿವರಗಳಿಗೆ ದಾಟಿರಿ

ಜನವರಿ 30, 2014

2

ಜೀವನ ಪ್ರೀತಿಯ ಪ್ರತಿಬಿಂಬ – ಗೋಲ್ಡ್ ಅಂಡ್ ಕಾಪರ್

‍ನಿಲುಮೆ ಮೂಲಕ

– ಡಾ ಅಶೋಕ್ ಕೆ ಆರ್

Gold and Copper Movieಸಿನಿಮಾ ಅಂದ್ರೆ ಹೀರೋ ಹೀರೋಯಿನ್ ವಿಲನ್ ಇರಲೇಬೇಕೆಂಬ ಮನೋಭಾವವೇ ಹೆಚ್ಚು. ವಿಲನ್ ಇದ್ದ ಮೇಲೆ ಫೈಟು, ಹೀರೋ ಹೀರೋಯಿನ್ ಇದ್ದ ಮೇಲೆ ಒಂದಷ್ಟು ಸಾಂಗ್ಸು ಕಂಪಲ್ಸರಿ! ಪರದೇಶದ ಚಿತ್ರಗಳನ್ನು ವೀಕ್ಷಿಸಿದಾಗ ಹಾಡುಗಳಿರದೇ ಇದ್ದರೂ ಉಳಿದ ಅಂಶಗಳು ಹೆಚ್ಚು ಕಡಿಮೆ ಇದ್ದೇ ಇರುತ್ತವೆ. ಇವೆಲ್ಲ ಸಿದ್ಧಸೂತ್ರಗಳನ್ನು ತಿರಸ್ಕರಿಸಿ ಹೊಸತೊಂದು ನಿರೂಪಣೆಯ ಚಿತ್ರಗಳು ಅವಾಗಿವಾಗ ನಿರ್ಮಾಣವಾಗುತ್ತವೆ. ಅಂಥದೊಂದು ಇರಾನಿ ಚಿತ್ರ “ಗೋಲ್ಡ್ ಅಂಡ್ ಕಾಪರ್”. ಇಲ್ಲೂ ಹೀರೋ ಇದ್ದಾನೆ ಹೀರೋಯಿನ್ ಇದ್ದಾಳೆ ವಿಲನ್ ಕೂಡ ಇದೆ! ಇದೆ ಯಾಕೆಂದರೆ ವಿಲನ್ ಒಂದು ಖಾಯಿಲೆಯ ರೂಪದಲ್ಲಿ ಹೀರೋನ ಮನಸ್ಸಿನ ರೂಪದಲ್ಲಿ ಇದೆಯೇ ಹೊರತು ವಿಲನ್ ಒಬ್ಬ ವ್ಯಕ್ತಿಯ ರೂಪದಲ್ಲಿಲ್ಲ. ಹೋಮಾಯುನ ಅಸಾದಿಯನ್ (Homayoun Asadian) ನಿರ್ದೇಶನದ ಪರ್ಷಿಯನ್ ಭಾಷೆಯ ಈ ಚಿತ್ರ ಅಪರೂಪದ ಖಾಯಿಲೆಯೊಂದು ಹೇಗೆ ಒಂದು ಇಡೀ ಕುಟುಂಬದ ಜೀವನ ರೀತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ತಿಳಿಸುವುದರ ಜೊತೆಜೊತೆಗೆ ಆ ಮಾರಣಾಂತಿಕ ಖಾಯಿಲೆ ಮನುಷ್ಯನ ಮನದ ಒಳಪದರದಲ್ಲಿ ಕಳೆದುಹೋಗಿದ್ದ ಸೂಕ್ಷ್ಮತೆಯನ್ನು ಹೊರತೆಗೆಯುವುದರಲ್ಲಿಯೂ ಸಹಕರಿಸುತ್ತದೆ!
ಸಯ್ಯದ್, ಝೋಹ್ರಾ ಮತ್ತವರಿಬ್ಬರ ಮಕ್ಕಳಿಬ್ಬರದು ಸುಖೀ ಕುಟುಂಬ. ಮೌಲ್ವಿಯಾಗಬೇಕೆಂಬ ಸಯ್ಯದ್ ನ ಆಸೆಯಿಂದಾಗಿ ತಮ್ಮ ಸಣ್ಣ ಊರಿನಿಂದ ಟೆಹ್ರಾನ್ ಗೆ ಆಗಮಿಸುತ್ತಾರೆ. ತನ್ನ ಊರಿನಲ್ಲಿ ಮೌಲ್ವಿಯಾಗಲು ಪ್ರಾಥಮಿಕ ಪಾಠ ಓದಿಕೊಂಡ ಸಯ್ಯದ್ ಟೆಹ್ರಾನಿನ ದೊಡ್ಡ ಮದರಸಾವೊಂದಕ್ಕೆ ಉನ್ನತ ಶಿಕ್ಷಣಕ್ಕೆ ಸೇರುತ್ತಾನೆ. ಓದಿಕೊಳ್ಳುತ್ತ ಸಂಪಾದನೆ ಮಾಡಲಾಗದ ಸಯ್ಯದನಿಗೆ ಬೆಂಬಲಕ್ಕೆ ನಿಲ್ಲುವುದು ಆತನ ಪತ್ನಿ. ಜೀವನೋಪಾಯಕ್ಕೆ ಕಾರ್ಪೆಟ್ ನೇಯುತ್ತ, ಗಂಡನ ಅಧ್ಯಯನಕ್ಕೆ ತೊಂದರೆಯಾಗದಂತೆ ಮಕ್ಕಳನ್ನು ಸುಧಾರಿಸುತ್ತ ಲವಲವಿಕೆಯಿಂದಿರುತ್ತಾಳೆ. ಮಧ್ಯೆ ಮಧ್ಯೆ ಯಾಕೋ ಝೋಹ್ರಾಳಿಗೆ ಸುಸ್ತು, ಕಣ್ಣು ಮಂಜು ಮಂಜು. ತುಂಬಾ ಕೆಲಸ ಮಾಡುತ್ತಿರುವುದರಿಂದ ಹೀಗಾಗುತ್ತಿರಬೇಕು ಎಂದು ಸಯ್ಯದ್ ಮತ್ತು ಝೋಹ್ರಾ ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾರೆ. ಅದು ಕೆಲವೇ ದಿನಗಳವರೆಗೆ ಮಾತ್ರ. ಒಮ್ಮೆ ಝೋಹ್ರಾಗೆ ಅತಿ ಆಯಾಸವಾಗಿ ಕೈಕಾಲು ಆಡಿಸಲಾಗದೆ ಕುಸಿಯುತ್ತಾಳೆ. ಆಸ್ಪತ್ರೆಗೆ ಸೇರಿಸುತ್ತಾನೆ ಸಯ್ಯದ್. Multiple Sclerosis (ಮಲ್ಟಿಪಲ್ ಸ್ಕ್ಲೀರೋಸಿಸ್) ಹೆಸರಿನ ಮಾರಣಾಂತಿಕ ಗುಣಪಡಿಸಲು ಕಷ್ಟಸಾಧ್ಯವಾದ ಖಾಯಿಲೆಗೆ ತುತ್ತಾಗಿರುತ್ತಾಳೆ ಝೋಹ್ರ.
ಒಂದೆಡೆ ಮೌಲ್ವಿಯಾಗುವುದನ್ನೇ ಜೀವನದ ಗುರಿಯಾಗಿಸಿಕೊಂಡ ಸಯ್ಯದ್ ಕುಟುಂಬದ ಕರೆಗೆ ಓಗೊಟ್ಟು ಓದಿಗೆ ನೀಡುತ್ತಿದ್ದ ಗಮನವನ್ನೆಲ್ಲ ಮಕ್ಕಳ ಲಾಲನೆ ಪಾಲನೆಗೆ ಮನೆಯ ನಿರ್ವಹಣೆಗೆ, ಕಾರ್ಪೆಟ್ ನೇಯ್ಗೆಗೆ ಮೀಸಲಿಡುತ್ತಾನೆ; ಮತ್ತೊಂದೆಡೆ ಆಸ್ಪತ್ರೆಯಲ್ಲಿದ್ದರೂ ತನ್ನ ಮಕ್ಕಳ ತನ್ನ ಮನೆಯ ಆಗುಹೋಗುಗಳ ಬಗ್ಗೆ ಚಿಂತಿಸುತ್ತಾ ಅನ್ಯಮನಸ್ಕಳಾಗುವ ಝೋಹ್ರ. ಸಯ್ಯದನಿಗೆ ಮನೆಗೆಲಸದ ಮಧ್ಯೆ ಮಧ್ಯೆ ತನ್ನ ಮೌಲ್ವಿಯಾಗಬೇಕಾದ ಕನಸು ನೆನಪಾಗಿ ಜೀವನದ ಮೇಲೆಯೇ ಜಿಗುಪ್ಸೆ ಉಂಟಾಗುತ್ತದೆ. ಆಸ್ಪತ್ರೆಯಿಂದ ಹಿಂದಿರುಗಿದ ನಂತರ ತನ್ನ ಅಸಹಾಯಕತೆಯನ್ನು ನೆನೆದು ನೆನೆದು ಮತ್ತಷ್ಟು ಖಿನ್ನತೆಗೊಳಗಾಗಿ ಕೆಲವೊಮ್ಮೆ ಮನಸ್ಸಿನ ಹಿಡಿತ ತಪ್ಪಿಹೋಗಿ ವರ್ತಿಸುವ ಝೋಹ್ರ. ವ್ಹೀಲ್ ಛೇರಿನಲ್ಲಿ ಬಂದ ತಾಯಿಯೊಡನೆ ಒಂದು ಮಾತನ್ನೂ ಆಡದೆ ಒಳಗ್ಹೋಡುವ ಮಗಳು ಝೋಹ್ರಾಳ ಖಿನ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಾಳೆ. ಇಷ್ಟೆಲ್ಲ ಕಷ್ಟಗಳಿದ್ದಾಗ್ಯೂ ಅವರೀರ್ವರನ್ನು ಹಿಡಿದಿಟ್ಟ ಅಂಶ ಪ್ರೀತಿ. ಮನೆಯ ಕೆಲಸ ಮಾಡುತ್ತ ಕೆಲವೊಮ್ಮೆ ಸಯ್ಯದ್ ತನ್ನ ಶಾಂತತೆಯನ್ನು ಕಳೆದುಕೊಳ್ಳುತ್ತಾನಾದರೂ ಮನೆಯ ಕೆಲಸಗಳನ್ನು ಮಾಡಲಾರಂಭಿಸಿದ ಮೇಲೆಯಷ್ಟೇ ಝೋಹ್ರಾ ಸಂಸಾರ ಸಾಗಿಸಲು ಪಟ್ಟ ಕಷ್ಟಗಳ ಅರಿವಾಗುವುದು.
ಒಂದು ಸಣ್ಣ ಕಥಾ ಎಳೆಯನ್ನು ಶಕ್ತವಾಗಿ ಪ್ರೇಕ್ಷಕರ ಮನಮುಟ್ಟುವಂತೆ ಚಿತ್ರಿಸಿದ್ದಾರೆ ನಿರ್ದೇಶಕರು. ಅವಶ್ಯಕತೆಗಿಂತ ಹೆಚ್ಚು ನಿಧಾನವಾಯಿತೇನೋ ಎಂದು ಹಲವೆಡೆ ಅನ್ನಿಸುತ್ತದಾರೂ ಆ ಕೊರತೆಯನ್ನು ನೀಗಿಸುವುದು ಎರಡು ದೃಶ್ಯ! ಒಂದು ಅನಾರೋಗ್ಯಪೀಡಿತೆ ಝೋಹ್ರ ಮಕ್ಕಳಿಗೆ ಅಡುಗೆ ಮಾಡಲು ಪಡುವ ಪಾಡು. ಇನ್ನೊಂದು ಚಿತ್ರದ ಕೊನೆಯಲ್ಲಿ ಜೀವನ ಪ್ರೀತಿ ಮೌಲ್ವಿಯಾಗುವುದಕ್ಕಿಂತ ಹೆಚ್ಚು ಮಹತ್ವದ್ದು ಎಂದು ಸಯ್ಯದನಿಗೆ ಅರಿವಾಗುವ ಕ್ಷಣ. ಸಯ್ಯದನ ಕುಟುಂಬದೊಂಡನೆ ಮದುವೆಯಾಗದ ಡ್ರೈವರನಿದ್ದಾನೆ, ಸಯ್ಯದನ ಮನಸ್ಸನ್ನು ಚಂಚಲಗೊಳಿಸಿದ ಸುಂದರ ನರ್ಸ್ ಇದ್ದಾಳೆ. ಮನೆಯ ಪಕ್ಕದ ಅಜ್ಜಿ ಯಾವಾಗಲೂ ಪಾಪ್ ಸಾಂಗ್ ಕೇಳುವ ಅಭ್ಯಾಸವಿರುವ ಆಕೆಯ ಮೊಮ್ಮಗಳಿದ್ದಾಳೆ. ಇವರೆಲ್ಲರ ಜೀವನ ಪ್ರೀತಿಯ ಹುಮ್ಮಸ್ಸು ಪ್ರೇಕ್ಷಕನಿಗೂ ತಲುಪಿ ಅರಳುತ್ತದೆ.
ಚಿತ್ರ ಕೃಪೆ : filmbalaya.com
2 ಟಿಪ್ಪಣಿಗಳು Post a comment
  1. Nagshetty Shetkar
    ಜನ 30 2014

    ಇರಾನಿ ಚಿತ್ರದ ಬಗ್ಗೆ ಉತ್ತಮ ಬರಹ. ಲೇಖಕರಿಗೆ ಧನ್ಯವಾದಗಳು.

    ಇರಾನಿ ಚಿತ್ರಗಳು ತುಂಬ ಚೆನ್ನಾಗಿರುತ್ತವೆ. ವಾಸ್ತವಿಕ ನೆಲೆಯಲ್ಲಿ ಮಾನವತಾವಾದವನ್ನು ಮೆರೆಸುತ್ತವೆ.

    ಉತ್ತರ
  2. ಜನ 30 2014

    ನಿಜ ಶೆಟ್ಕರ್ ರವರೇ, ಆರ್ಯರ ದೇಶದವರಾದ ಇರಾನಿಗಳ ನಿರ್ದೇಶನದ ಚಿತ್ರಗಳು ತುಂಬಾ ಚೆನ್ನಾಗಿರುತ್ತವೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments