ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 17, 2014

ಪೆಪ್ಪರ್ ಸ್ಪ್ರೇ ಮತ್ತು ಕಾಂಗ್ರೆಸ್ಸ್

‍ನಿಲುಮೆ ಮೂಲಕ

– ಪ್ರಸನ್ನ,ಬೆಂಗಳೂರು

Pepper Spray in Parlimentಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಪ್ರಸಂಗವನ್ನು ಎಲ್ಲ ಮಾಧ್ಯಮಗಳು ಒಕ್ಕೊರಲಿನಿಂದ ಪೆಪ್ಪರ್ ಸ್ಪ್ರೇಯಷ್ಟೇ ಖಾರವಾದ ಮತ್ತು ಚಾಕುವಿನಷ್ಟೇ ಹರಿತವಾದ ಶಬ್ದಗಳಲ್ಲಿ ಖಂಡಿಸಿವೆ. ಆದರೆ ಈ ಘಟನೆಗೆ ಕಾರಣಾರು? ಎಂಬುದನ್ನು ಎಲ್ಲಿಯಾದರೂ ವಿಶ್ಲೇಷಣೆಗೊಳಪಡಿಸಿವೆಯೆ?

ನಮ್ಮ ನ್ಯಾಯಾಲಯಗಳೂ ಕೂಡ ಎಲ್ಲ ಪ್ರಕರಣಗಳಲ್ಲೂ ಉತ್ತೇಜನಕಾರಿ ಮತ್ತು ಅಪರಾಧಕ್ಕೆ ಕಾರಣವಾಗುವ ಪ್ರಚೋದನಾಕಾರಿ ಅಂಶಗಳನ್ನು ಹುಡುಕಲು ಪ್ರಯತ್ನಿಸುತ್ತದೆ. ಬಲವಾದ ಕಾರಣವಿಲ್ಲದೆ ನಡೆದ ಪ್ರಕರಣಗಳನ್ನು ನ್ಯಾಯಾಲಯ ಹೆಚ್ಚು ಕಠಿಣ ಶಿಕ್ಷೆಗೆ ಗುರಿ ಪಡಿಸಲು ಹೋಗುವುದಿಲ್ಲ. ಕೆಲವೊಮ್ಮೆ ಕಾರಣವಿಲ್ಲದೆ ಜರುಗುವ ಅಪರಾಧಗಳನ್ನು ಕೇವಲ ಕಣ್ತಪ್ಪಿನಿಂದಾದ ಅನಾಹುತಗಳೆಂದೆ ಪರಿಗಣಿಸಿದ ಉದಾಹರಣೆಗಳಿವೆ.

೨೦೦೪ ರಲ್ಲಿ ಕೇವಲ ಪ್ರಾದೇಶಿಕ ಪಕ್ಷಗಳ ವೈಫಲ್ಯದಿಂದ ಚುಕ್ಕಾಣಿ ಹಿಡಿದ ಸರಕಾರದ ನಡವಳಿಕೆಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿ ನೋಡಿ. ಇಂದಿನ ಸಂಸದರ ನಡವಳಿಕೆಗೆ ಒಂದು ಸಣ್ಣ ಕಾರಣದ ಎಳೆ ಕಾಣಿಸಿಕೊಳ್ಳುತ್ತದೆ. ಅದು ಹೇಗೋ ಹಿಂದಿನ ಸರಕಾರದ ಆರ್ಥಿಕ ನೀತಿಗಳಿಂದ ಮೊದಲ ಮೂರು ವರ್ಷ ತಳ್ಳಿದ ಈ ಸರಕಾರ, ಯುಪಿಎ-೧ರ ಕೊನೆಯ ೨ ವರ್ಷಗಳಲ್ಲಿ ನಡೆಸಿದ ಹಗರಣಗಳು ಹೊರ ಬರುವಷ್ಟರಲ್ಲಿ ಎರಡನೇ ಬಾರಿ ಚುನಾವಣೆ ಗೆದ್ದಿತ್ತು. ಅದರಲ್ಲೂ ನಮ್ಮ ಮೂಕ ಪ್ರಧಾನಿಯವರು ನಾವು ಚುನಾವಣೆ ಗೆದ್ದಿದ್ದೇವೆ ಹಾಗಾಗಿ ನಾವು ಮಾಡಿದ್ದೆಲ್ಲ ಸರಿ ೫ ವರ್ಷ ನಮಗೆ ಅಧಿಕಾರ ಕೊಟ್ಟಿದ್ದಾರೆ ನಾವು ಯಾರಿಗೂ ಉತ್ತರದಾಯಿಗಳಲ್ಲ ಎನ್ನುವಂತೆ ಹೇಳಿಕೆಗಳನ್ನು ಕೊಟ್ಟು ಅಂತೆಯೇ ನಡೆದು ಕೊಂಡರು.

ಇವರ ನಡೆಯಿಂದ ಬೇಸತ್ತ ಕಮ್ಯುನಿಷ್ಠರು ತಮ್ಮ ಬೆಂಬಲ ಹಿಂಪಡೆದುಕೊಂಡರೂ ತನ್ನ ಹಟಮಾರಿ ಧೋರಣೆಯನ್ನು ಈ ಸರಕಾರ ಬಿಡಲೇ ಇಲ್ಲ. ವಿರೋಧ ಪಕ್ಷಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ಎಲ್ಲಾ ಸಂಸತ್ ಮತ್ತು ಸರಕಾರದ ಸಂಪ್ರದಾಯ ವಿಧಾನಗಳಿಗೂ ತಿಲಾಂಜಲಿ ಇತ್ತು ಸರ್ವಾಧಿಕಾರಿಯಂತೆ ನಡೆದು ಕೊಂಡಿತು. ತನ್ನ ಬೆಂಬಲಕ್ಕೆ ಭ್ರಷ್ಠರನ್ನು ಸಿಬಿಐ ಮೂಲಕ ಹೆದರಿಸಿ ಹದ್ದು ಬಸ್ತಿನಲ್ಲಿರಿಸಿಕೊಂಡು ಸಹಜ ನ್ಯಾಯವನ್ನು ನಿರಾಕರಿಸಿತು. ಸರಕಾರವನ್ನು ಮಣಿಸುವ ಸರಿದಾರಿಗೆ ತರುವ ಬೇರೆ ಯಾವುದೇ  ಪ್ರಜಾಪ್ರಭುತ್ವದ ರೀತ್ಯಾ ಮಾರ್ಗಗಳನ್ನೆಲ್ಲಾ ಮುಚ್ಚಿಬಿಟ್ಟಿತ್ತು. ವಿರೋಧ ಪಕ್ಷಗಳಿರುವುದೇ ಟೀಕಿಸುವುದಕ್ಕೆ, ಅವರ ಮಾತಿಗೆ ಬೆಲೆ ಕೊಡುವ ಅವಶ್ಯಕತೆಯಿಲ್ಲ ಎಂಬ ಹುಂಬ ನಿರ್ಧಾರಕ್ಕೆ ಬಂದು ಬಿಟ್ಟಿತು.

ವಿರೋಧ ಪಕ್ಷಗಳು ಕಿವಿ ಹಿಂಡಿ ತನ್ನನ್ನು ಸರಿ ದಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ, ತನ್ನಲ್ಲಿನ ಲೋಪವನ್ನು ಎತ್ತಿ ತೋರಿಸಿದಾಗ ಅದನ್ನು ತಿದ್ದಿಕೊಳ್ಳ ಬೇಕೆಂಬ, ಬಿಕ್ಕಟ್ಟು ಎದುರಾದಾಗ ಅವುಗಳೊಂದಿಗೆ ಮಾತುಕತೆ ನಡೆಸುವ ಕನಿಷ್ಠ ಸೌಜನ್ಯವನ್ನೂ ಸರಕಾರ ಪ್ರದರ್ಶಿಸಲಿಲ್ಲ. ಇಂತಹ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸಿದ  ಈ ಪಕ್ಷಗಳಿಗೆ ಸಂಸತ್ತನ್ನು ಸ್ಥಗಿತಗೊಳಿಸುವುದು ಧರಣಿ ಬಿಟ್ಟರೆ ಬೇರೆ ಮಾತುಕತೆಯ ದಾರಿಯೇ ಇಲ್ಲದಂತೆ ಮಾಡಿ ಬಿಟ್ಟಿತು. ಅದು ಮೊದಲಬಾರಿ ಆರಂಭವಾಗಿದ್ದು. ಪಿಜೆ ಥಾಮಸ್ ಅವರನ್ನು ನೇಮಿಸುವ ಸಲುವಾಗಿ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿಗೆ ಸರ್ವ ಸಮ್ಮತವಾಗಿರುವ ವ್ಯಕ್ತಿಯನ್ನೇ ನೇಮಿಸಿ ಬೇಕೆಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ತನ್ನ ಅನುಕೂಲಕರ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಹವಣಿಸಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಲ್ಲಿಂದ ಆರಂಭವಾದ ಇಂತಹ ಧೋರಣೆ, ತನ್ನ ಹಗರಣಗಳು ಒಂದೊಂದೆ ಹೊರಬರತೊಡಗಿದಾಗ ಸಂಸತ್ತಿನ ಜಂಟಿ ತನಿಖಾ ಸಮಿತಿಗಳಿಗೆ ತನ್ನ ಪರ ಇರುವ ಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅಲ್ಲಿಂದಲೂ, ಸಿಬಿಐ ಅನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ಹಗರಣಗಳ ತನಿಖೆಯಲ್ಲೂ ಮೂಗು ತೂರಿಸಿ ತನಗೆ ಅನುಕೂಲಕರ ವಾತಾವರಣವನ್ನೇ ಸೃಷ್ಠಿಸಿಕೊಂಡಿತು.

ಇನ್ನೂ ಮುಂದೆ ಹೋಗಿ ನ್ಯಾಯಾಲಯಗಳಿಗೆ ಕಡತ ಕಳೆದು ಹೋಗಿದೆ ಎನ್ನುವ ಸಬೂಬು ನೀಡುವ ನಾಚಿಕೆಗೇಡಿನ ಮಟ್ಟಕ್ಕೆ ಇಳಿದುಬಿಟ್ಟಿತು. ಕೇವಲ ಮೂರುದಿನದ ಹಿಂದೆಯೂ ವಿಚಕ್ಷಣ ದಳದ ಅಧ್ಯಕ್ಷರ ನೇಮಕದ ವಿಷಯದಲ್ಲೂ ೫ ವರ್ಷದ ಹಿಂದೆ ನಡೆದ ತಪ್ಪನ್ನೆ ಮತ್ತು ಪುನರಾವರ್ತಿಸಿರುವುದು ಇದರ ಬೇಜವಾಬ್ದಾರಿಯಂತೆ ಗೋಚರಿಸಿದರೂ, ಮುಂದೆ ಸರಕಾರ ಬದಲಾದಾಗ ಆತ ತನ್ನನ್ನು ರಕ್ಷಿಸಲಿ ಎಂಬುದರ ಹುನ್ನಾರವೂ ಇದೆ.ಈ ಎಲ್ಲಾ ತನ್ನ ಪ್ರಜಾಸತ್ತಾತ್ಮಕ ವಿರುದ್ದ ನಡವಳಿಕೆಗಳಿಂದ ವಿರೋಧ ಪಕ್ಷಗಳು ಹತಾಶರಾಗುವಂತೆ ಮಾಡಿತು. ರಾಷ್ಟ್ರಪತಿಗಳ ಬಳಿ ಮನವಿ ಮಾಡಿದ ವಿರೋಧ ಪಕ್ಷಗಳಿಗೆ ಕೊನೆಗೆ ಯಾವುದೇ ದಾರಿಯೂ ಉಳಿಯದಿದ್ದಾಗ ಅಸಹಾಯಕರಾಗಿ ಕೈ ಚೆಲ್ಲಿ ಕುಳಿತು ಕೊಂಡಿದ್ದು ಅವರ ವಿಫಲತೆಯಂತೆ ಗೋಚರಿಸುವುದು ಸಹಜವೇ. ಸ್ಪಂದನೆಯೇ ಇಲ್ಲದ ದಪ್ಪ ಚರ್ಮದ ಸರಕಾರವೊಂದು ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸತೊಡಗಿದಾಗ ವಿರೋಧ ಪಕ್ಷಗಳು ವಿಫಲರಾಗುವುದು ಸಹಜವೆ. ಇಂತಹ ನಡವಳಿಕೆಗಳು ಯಾವ ದಿಕ್ಕಿನೆಡೆಗೆ ಕರೆದೊಯ್ಯುತ್ತವೆ ಎಂಬುದು ನಿನ್ನೆ ನಡೆದ ಪೆಪ್ಪರ್ ಸ್ಪ್ರೇ ಮತ್ತು ಚಾಕು ಹೊರಬರುವಿಕೆಯ ಮೂಲ ಕಾರಣ.

ಯಾವುದೇ ಜಗಳ ವಿಪರೀತಕ್ಕೆ ಹೋಗುವುದಕ್ಕೆ ಮೊದಲ ಕಾರಣ ಸಹಜ ನ್ಯಾಯದ ಪಾಲನೆಯಾಗದಿರುವುದು . ನಿನ್ನೆಯೂ ಅಷ್ಟೆ ಕಾಂಗ್ರೆಸ್ಸಿನದು ಅತ್ಯಂತ ನಾಜೂಕಿನ ಹುನ್ನಾರ. ಮಸೂದೆ ಮಂಡಿಸುವ ವಾತಾವರಣವೇ ಇಲ್ಲದಿದ್ದರೂ ಗೃಹ ಸಚಿವರು ಮಸೂದೆ ಮಂಡನೆಯಾಗಿದೆ ಎನ್ನುತ್ತಾರೆ. ಸಭೆ ಸಹಜ ಮತ್ತು ಶಾಂತ ಸ್ಥಿತಿಯಲ್ಲಿಲ್ಲದಾಗ ಮಸೂದೆಗಳು ಮಂಡನೆಯಾಗುವಂತೆ ಇಲ್ಲ. ತನ್ನದೇ ಸದಸ್ಯರನ್ನು ಛೂಬಿಟ್ಟು ಮಸೂದೆ ಮಂಡಿಸಿದ್ದೇವೆ ಎಂದು ಮೂಗಿಗೆ ತುಪ್ಪ ಸವರುವ, ಅದೇ ಸಮಯದಲ್ಲಿ ವಿಭಜನೆಗೂ ಕೈ ಹಾಕದ ಮತ್ತೊಂದು ಕೆಟ್ಟ ಸಂಪ್ರದಾಯವನ್ನು ನಿನ್ನೆ ಇಡೀ ದೇಶ ಸಾಕ್ಷೀಕರಿಸಿತು. ಇದಕ್ಕೆ ಆಳುವ ಪಕ್ಷದ ಅಸಡ್ಡಾಳ ಬೇಜವಾಬ್ದಾರಿತನದ ನಡವಳಿಕೆಯೇ ನೇರ ಕಾರಣ. ೨೦೧೪ರಲ್ಲಿ ದೇಶದ ಪ್ರಜೆ ಈ ಪಕ್ಷಕ್ಕೆ ಪೆಪ್ಪರ್ ಸ್ಪ್ರೇ ಮಾಡದಿದ್ದರೆ ಅದು ನಿಜಕ್ಕೂ ಈ ದೇಶಕ್ಕೊದಗುವ ದೊಡ್ಡ ದುರಂತ. ದೇಶದ ಹೃದಯಕ್ಕೆ ಹಾಕುವ ಚಾಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments