ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2014

1

ಆರ್.ಕೆ ಶ್ರೀಕಂಠನ್ ಅವರೊಂದಿಗಿನ ಮಾತುಕತೆಯ ನೆನಪು

‍ನಿಲುಮೆ ಮೂಲಕ

ಆರ್.ಕೆ ಶ್ರೀಕಂಠನ್ಕರ್ನಾಟಕ ಸಂಗೀತದ ಹಿರಿಯ ಗಾಯಕರಾದ ಆರ್.ಕೆ ಶ್ರೀಕಂಠನ್ ಅವರು ನಿನ್ನೆ ವಿಧಿವಶರಾದರು.ತಮ್ಮ ೯೪ರ ವಯಸ್ಸಿನಲ್ಲೂ ಸಂಗೀತ ಕಛೇರಿಯನ್ನು ನಡೆಸಿಕೊಡುತಿದ್ದ ಶ್ರೀಕಂಠನ್ ಅವರ ಬಗ್ಗೆ ಹಂಸಾನಂದಿ ಹಾಗೂ ಪ್ರಭುಮೂರ್ತಿಯವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಪರವಾಗಿ ೨೦೦೮ರಲ್ಲಿ ನಡೆಸಿದ ಸಂದರ್ಶನವನ್ನು ಪ್ರಕಟಿಸುತಿದ್ದೇವೆ – ನಿಲುಮೆ

ಒಂದು ಮಾಘದ ತಂಪಿನಿರುಳಲಿ
ನಂದನದಿ ಸೇರಿರಲು ಸುರಗಣ
ಚಂದದಲಿ ತಲೆದೂಗಲಿಕೆ ನಾರದನ
ಗಾಯನಕೆ
ಇಂದದೇಕೋ ತನ್ನ ಹಾಡ
ಲ್ಲೊಂದು ಸೊಗಸೂ ಕಾಣದೆಯೆ ಕರೆ
ತಂದನೈ ಹಾಡಲಿಕೆ ಕರ್ನಾಟಕದ
ಕೋಗಿಲೆಯ!

( ಪರದೇಶಿಗಳಾಗಿರೋದ್ರಲ್ಲಿ, ಅಂದ್ರೆ ಹೊಟ್ಟೆಬಟ್ಟೆಗಾಗಿ ನಮ್ಮೂರಲ್ದೇ ಬೇರೆ ಊರಿನಲ್ಲಿ ನೆಲೆ ನಿಂತಾಗ ಅದರಿಂದ ಒಂದು ಒಳ್ಳೇ ಪರಿಣಾಮ ಕೂಡ ಇದೆ. ನಮ್ಮೂರಲ್ಲಿ ಖ್ಯಾತರಾದ ನಟರೋ, ಕಲಾವಿದರೋ, ಯಾರಾದರೂ ನಾವಿದ್ದಲ್ಲಿಗೆ ಬಂದಾಗ ಅವರನ್ನು ಸುಲಭವಾಗಿ ಭೇಟಿ ಮಾಡಬಹುದು. ಮಾತಾಡಬಹುದು. ನಮ್ಮೂರಲ್ಲೇ ಇದ್ದರೆ ಅದು, ಅಸಾಧ್ಯವಲ್ಲದಿದ್ದರೂ ಸ್ವಲ್ಪ ಕಷ್ಟವೇನೋ ಅನ್ನಿಸುತ್ತೆ. ಅದೇ ಕಾರಣಕ್ಕೋ ಏನೋ, ನನಗೂ ಎಷ್ಟೋ ಹೆಸರುವಾಸಿಯಾದವರನ್ನು ನೋಡಿ ಮಾತಾಡಿಸೋ, ಇನ್ನೂ ಹೆಚ್ಚು ಅಂದ್ರೆ ಅವರನ್ನೊಮ್ಮೆ ಮನೆಗೆ ಕರೆದು ಸತ್ಕರಿಸುವ ಭಾಗ್ಯವೂ ಕಳೆದ ಕೆಲವು ವರ್ಷಗಳಲ್ಲಿ ದಕ್ಕಿದೆ .

ಜನವರಿ ೧೫, ೨೦೦೯ ರಂದು ಪುಷ್ಯ ಬಹುಳ ಪಂಚಮಿ. ತ್ಯಾಗರಾಜರ ಆರಾಧನೆ. ಅವತ್ತಿಗೆ ಸರಿಯಾಗಿ, ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರಿದ, ಹಿರಿಯ ವಿದ್ವಾಂಸರಾದ ಸಂಗೀತ ಕಲಾನಿಧಿ ಡಾ.ಆರ್.ಕೆ. ಶ್ರೀಕಂಠನ್ ಮತ್ತು ಅವರ ಮಗ ಸಂಗೀತ ವಿದ್ವಾಂಸರಾದ ಆರ್.ಕೆ. ರಮಾಕಾಂತ್ ಅವರೊಡನೆ (ಮೇ ೨೦೦೮ ರಲ್ಲಿ ಅವರು ಕ್ಯಾಲಿಫೋರ್ನಿಯಾಗೆ ಭೇಟಿ ಕೊಟ್ಟಿದ್ದಾಗ) ನಾನು ಗೆಳೆಯರೊಬ್ಬರೊಡನೆ ಕೂಡಿ ನಡೆಸಿದ ಸಂದರ್ಶನದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳಸಂತೋಷವಾಗುತ್ತಿದೆ.

ಅಂದ ಹಾಗೆ, ಜನವರಿ ೧೪ ಶ್ರೀಕಂಠನ್ ಅವರ ಹುಟ್ಟಿದ ದಿನ ಕೂಡ. ಈ ಸಂದರ್ಶನವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸ್ವರ್ಣಸೇತು-೨೦೦೮ ಸಂಚಿಕೆಯಲ್ಲಿ ಪ್ರಕಟವಾಗಿದೆ. -ಹಂಸಾನಂದಿ)

ಸಂದರ್ಶಕರು: ನಮಸ್ಕಾರ ಶ್ರೀಕಂಠನ್ ಮತ್ತು ರಮಾಕಾಂತ್ ಅವರೆ, ನಾವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಪರವಾಗಿ ಬಂದಿದೇವೆ.

ಶ್ರೀಕಂಠನ್ ಮತ್ತು ರಮಾಕಾಂತ್ : ನಮಸ್ಕಾರ.

ಸಂ: ನಿಮ್ಮ ಬಾಲ್ಯದ ಬಗ್ಗೆ, ನಿಮ್ಮ ಸಂಗೀತದ ಹಿನ್ನಲೆ ಬಗ್ಗೆ ಸ್ವಲ್ಪ ಹೇಳ್ತೀರಾ?

ನನ್ನ ಕುಟುಂಬದಲ್ಲಿ ಹಿಂದಿನವರೆಲ್ಲ ಸಂಗೀತ, ಸಂಸ್ಕೃತ, ಕನ್ನಡ, ವೇದ ಇವುಗಳಲ್ಲಿ ದೊಡ್ಡ ವಿದ್ವಾಂಸರು. ತಂದೆಯವರು ಆ ಕಾಲದ ಪಂಡಿತ ಪರೀಕ್ಷೆಯಲ್ಲಿ ಬಹಳ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿದ್ದರು. ಅವರು ಸಾಹಿತಿ, ಸಂಗೀತಗಾರ, ಕವಿ, ಚಿತ್ರಕಾರ ಹೀಗೆ ಹಲವು ವಿಧಗಳಲ್ಲಿ ಪರಿಣತರು. ನಮ್ಮ ತಾಯಿ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಹೋಗಿಬಿಟ್ಟರು. ಅವರೂ ಬಹಳ ಚೆನ್ನಾಗಿ ಹಾಡುತ್ತಿದ್ದರಂತೆ. ನನ್ನ ಸೋದರಮಾನೂ ಬಹಳ ಚೆನ್ನಾಗಿ ಹಾಡ್ತಿದ್ದರು. ಜೊತೆಗೆ ವೀಣೆ ವೈಯೊಲಿನ್ ಕೂಡ ನುಡಿಸ್ತಿದ್ರು. ನನ್ನ ಅಜ್ಜ ವೀಣಾ ನಾರಾಯಣ ಸ್ವಾಮಿ ಅಂತೂ ಗಂಧರ್ವರ ತರಹ ಹಾಡ್ತಿದ್ದರು. ವಾಸುವೇವಾಚಾರ್ಯರ ಗುರುಗಳಾದ ವೀಣಾ ಪದ್ಮನಾಭಯ್ಯನವರು ಮತ್ತೆ ನಮ್ಮ ತಾತ ಬಹಳ ಹತ್ತಿರದ ಗೆಳೆಯರು.

ನಮ್ಮ ತಾಯಿಯವರು ತೀರಿಕೊಂಡಮೇಲೆ ನಾವು ಮೈಸೂರಿಗೆ ಬಂದೆವು. ಆಲ್ಲಿ ನಮಗೆ ಮೈಸೂರಿನ ಪ್ರಖ್ಯಾತ ವಿದ್ವಾಂಸರಾದ ವೀಣೆ ಶೇಷಣ್ಣ, ಸುಬ್ಬಣ್ಣ, ವಾಸುದೇವಾಚಾರ್ಯರು ಮೊದಲಾದವರ ಪರಿಚಯವಾಯ್ತು. ನಮ್ಮಣ್ಣ ವೆಂಕಟರಾಮಾಶಾಸ್ತ್ರಿ ಅವರು ವೀಣಾ ಸುಬ್ಬಣ್ಣನವರ ಹತ್ತಿರ ವೈಯೊಲಿನ್ ಕಲೀತಿದ್ರಂತೆ. ಒಂದು ಸಲ ಅರಮನೆಯಲ್ಲಿ ಕಚೇರಿ ಒಂದರ ಸಮಯದಲ್ಲಿ, ಸುಬ್ಬಣ್ಣನವರು ನಮ್ಮಣ್ಣನ್ನ ಪರಿಚಯ ಮಾಡಿಸಿ, ಅವರಿಗೆ ವೈಯೊಲಿನ್ ಪಾಠ ಮುಂದುವರಿಸೋದಕ್ಕೆ ಹೇಳಿದರು. ಹತ್ತುವರುಷ ಅವರು ಚೌಡಯ್ಯ ಅವರ ಹತ್ತಿರ ಅವರ ಸಂಗೀತಪಾಠ ಆಯಿತು ನಮ್ಮ ಅಣ್ಣನಿಗೆ.

ಸಂ: ಚಿಕ್ಕ ವಯಸ್ಸಿಂದಲೇ ಸಂಗೀತವನ್ನೇ ನಿಮ್ಮ ಕ್ಷೇತ್ರವಾಗಿ ಆರಿಸಿಕೊಂಡಿರಾ?

ನನ್ನ ಅಣ್ಣನೇ ನನಗೆ ಸಂಗೀತ ಕಲಿಸಿದ್ದು. ಆಗ ನನಗೆ ಐದಾರು ವರ್ಷ ಇರಬಹುದು. ನನಗೂ ಸಂಗೀತಕ್ಕೆ ಪೂರ್ತಿ ನನ್ನನ್ನೇ ಕೊಟ್ಕೋಬೇಕು ಅಂತ ಅನ್ನಿಸಿ ನಮ್ಮಣ್ಣನಿಗೆ ಹೇಳಿಯೂ ಬಿಟ್ಟೆ. ಅವರು, ಸಂಗೀತವನ್ನ ಬೇಕಾದರೆ ಇಟ್ಟುಕೋ, ಆದರೆ ಓದನ್ನು ಬಿಡಬೇಡ ಅಂತ ಬುದ್ಧಿ ಹೇಳಿದರು. ಹಾಗೇ ಓದಿ ಪದವೀಧರನಾಗಿ, ಚರಿತ್ರೆಯಲ್ಲಿ ಎಮ್.ಎ. ತರಗತಿಗೂ ಸೇರಿಕೊಂಡಿದ್ದೆ. ಆಮೇಲೆ ಆಕಾಶವಾಣಿಯಲ್ಲಿ ಸಂಗೀತ ಶಿಕ್ಷಕನಾಗಿ, ಅಲ್ಲೇ ಮೂವತ್ತೆರಡುವರ್ಷ ಕೆಲಸಮಾಡಿ ನಿವೃತ್ತನಾದೆ.

ಸಂ: ಆಕಾಶವಾಣಿಯಲ್ಲಿ ನಿಮ್ಮ ಅನುಭವಗಳನ್ನ ಸ್ವಲ್ಪ ಹಂಚಿಕೊಳ್ಳಿ ನಮ್ಮ ಜೊತೆ …

ಆಕಾಶವಾಣಿಯ ಕೆಲಸ ನನ್ನ ಸಂಗೀತ ಬೆಳೆಯೋದಕ್ಕೆ ಬಹಳ ಅನುಕೂಲವಾಯಿತು. ಅಲ್ಲಿ ಹಲವಾರು ಗೀತರೂಪಕವನ್ನು ತಯಾರು ಮಾಡಿದೆ. ಅಲ್ಲಿ ಬೇಂದ್ರೆ, ವಿ ಸೀತಾರಾಮಯ್ಯ, ಪುತಿನ, ನಾ ಕಸ್ತೂರಿ, ದೇವುಡು ಇಂತಹ ದೊಡ್ಡ ಕವಿಗಳು, ಸಾಹಿತಿಗಳು ಹಾಗೇ ಜಿ.ಎನ್.ಬಿ. , ಸೆಮ್ಮಂಗುಡಿಯವರು ಇಂತಹ ಸಂಗೀತಗಾರ ಜೊತೆ ನನಗೆ ಒಡನಾಟ ಸಿಕ್ಕಿತು.ದೊಡ್ಡವರ ಜೊತೆ ಇದ್ದು, ಅವರಿಂದ ಕಲಿತೋ ಅವಕಾಶ ಆಗಿದ್ದು ಒಳ್ಳೇ ಸೌಭಾಗ್ಯವೇ! ಗಾನವಿಹಾರ ಅನ್ನೋ ಕಾರ್ಯಕ್ರಮದಲ್ಲಿ ಹಲವಾರು ವರ್ಷ ಸಂಗೀತಪಾಠವನ್ನು ಮಾಡ್ತಿದ್ದೆ. ಆಸಕ್ತ ಅಭ್ಯಾಸಿಗಳಿಗೆ ಬಹಳ ಇಷ್ಟ ಆಗೋದು. ಕರ್ನಾಟಕದಿಂದ ಹೊರಗೆ ಸೇಲಂ, ಈರೋಡ್, ತಿರುಚ್ಚಿ ಮೊದಲಾದ ಕಡೆಯಿಂದಲೂ ಅದನ್ನ ಮೆಚ್ಚಿ ಕಾಗದ ಬರೆಯೋರಿದ್ದರು. ನಾನೂ ಕೇಳುಗರು ಆಸೆಪಟ್ಟ ರಚನೆಗಳು ನನಗೆ ಗೊತ್ತಿಲ್ಲದಿದ್ದರೆ ಹೊಸದಾಗಿ ಕಲಿತಾದರೂ ಹೇಳಿಕೊಡುತ್ತಿದ್ದೆ.

ಸಂ: ಇಪ್ಪತ್ತನೇ ಶತಮಾನದ ಸಂಗೀತದಲ್ಲಿ ಈಗ ಆಗಿರೋ ಬದಲಾವಣೆಗಳು, ತಿರುವುಗಳ ಬಗ್ಗೆ ಏನಂತೀರಿ? ನಿಮ್ಮ ದೃಷ್ಟಿಯಲ್ಲಿ ರೇಡಿಯೋ, ಕ್ಯಾಸೆಟ್‌ಗಳು ಮೊದಲಾದ ಮಾಧ್ಯಮಗಳಿಂದ ಸಂಗೀತಕ್ಕೆ ಆದ ಅನುಕೂಲವೇನು?

ಆಲ್ ಇಂಡಿಯಾ ರೇಡಿಯೋ ಬಂದದ್ದು ಕಲೆಯ ಅಭಿವೃದ್ಧಿಗೆ, ಕಲಾವಿದರ ಅಭಿವೃದ್ಧಿಗೆ ಬಹಳ ಅನುಕೂಲವಾಯ್ತು. ಸಂಗೀತ ಎಲ್ಲಾ ಕಡೇಗೂ, ಎಲ್ಲ ಜನರಿಗೂ ತಲುಪಿತು. ದೊಡ್ಡ ದೊಡ್ಡ ವಿದ್ವಾಂಸರೆಲ್ಲ ಜನಪ್ರಿಯರಾದದ್ದು, ಅವರಿಗೆ ಗಣನೆ, ಗೌರವ ಸಿಕ್ಕಿತು. ಒಳ್ಳೇ ಸಂಭಾವನೆ ಕೂಡಾ ದೊರೆಯಲಾರಂಭಿಸಿತು. ಬೇರೆ ಬೇರೆ ವಿದ್ವಾಂಸರ ವಿಚಾರಧಾರೆಯನ್ನು ತಿಳಿದುಕೊಳೋದಕ್ಕೆ ಅದೊಂದು ದೊಡ್ಡ ವೇದಿಕೆಯಾಯ್ತು. ಹಾಗೇ, ಅದ್ರಿಂದ ಒಂದು ತೊಂದ್ರೇನೂ ಆಯ್ತು ಅನ್ನಿ. ಇದು ಒusiಛಿ mಚಿಜe ಣo oಡಿಜeಡಿ. ಸಮಯದ ಮಿತಿ ಇರೋದ್ರಿಂದ, ಮನೋಧರ್ಮಕ್ಕೂ ಸ್ವಲ್ಪ ಕಡಿವಾಣ ಹಾಕ್ಬೇಕಾಗುತ್ತೆ. ಇನ್ನು ನಂತರ ಬಂದ ಕ್ಯಾಸೆಟ್‌ಗಳ ಬಗ್ಗೆ ಹೇಳೋದಾದರೂ, ಅಲ್ಲಿಯೂ ಅದೇ ತರಹ ನಿಯಂತ್ರಿತವಾಗಿ ಹಾಡೋದನ್ನೂ, ಎದುರುಗಡೆ ಕೇಳುಗರಿಲ್ಲದೇ ಹಾಡುವ ಅಭ್ಯಾಸವನ್ನೂ ಮಾಡಿಕೊಳ್ಳಬೇಕಾಯ್ತು. ಈಗಿನ ಪೀಳಿಗೆಯವರಿಗೆ, ಮೊದಲಿನಿಂದಲೇ ಇವೆಲ್ಲ ಅಭ್ಯಾಸವಾಗಿದೆ. ಮೈಕ್ ಇಲ್ಲದ ಕಾಲದಲ್ಲಿ, ಶಾರೀರವನ್ನು ಅದಕ್ಕೆ ತಕ್ಕ ಹಾಗೆ ಮಾರ್ಪಾಡು ಮಾಡಿಕೊಳ್ಳಬೇಕಿತ್ತು. ಮೈಕ್ ಬಂದಮೇಲೆ, ಆ ರೀತಿ ಕಷ್ಟ ಪಟ್ಟು ಹಾಡುವ ಅವಶ್ಯಕತೆಯೂ ಇಲ್ಲ. ಮತ್ತೆ ಈಗ ನಾಕು-ಐದು ಸಾವಿರ ಜನ ಸೇರೋ ಅಂತಹ ಸಭೆಗಳಲ್ಲಿಯೂ ಕುಳಿತು ಹಾಡೋ ಅವಕಾಶ ಇದೆ ಈಗ. ಹಿಂದೆ ಇವೆಲ್ಲ ಸಾಧ್ಯ ಇರಲಿಲ್ಲ ನೋಡಿ.

ಸಂ: ಸುಮಾರು ಎಪ್ಪತ್ತು ವರ್ಷಗಳಿಂದ ಕಚೇರಿ ಮಾಡ್ತಿದ್ದೀರಿ. ನಿಮ್ಮ ಕಂಠವನ್ನು ಇಷ್ಟು ಚೆನ್ನಾಗಿ ಕಾಪಾಡ್ಕೊಳೋದಕ್ಕೆ ನೀವು ಏನು ಮಾಡ್ತೀರಿ?

ದಿವ್ಯ ಶರೀರ ಭವ್ಯ ಶಾರೀರ ಅನ್ನೋ ಮಾತಿದೆ. ಅತಿ ಸರ್ವತ್ರ ವರ್ಜಯೇತ್. ಊಟದಲ್ಲಿ ಹುಳಿ, ಉಪ್ಪು ಖಾರ ಯಾವುದೂ ಅತಿಯಾಗಬಾರದು. ಷಡ್ರಸಗಳೂ ಬೇಕು, ಆದರೆ ಎಲ್ಲ ಮಿತಿಯಲ್ಲಿ. ದಿನಕ್ಕೆ ಐದಾರು ಗಂಟೆಯಷ್ಟು ಒಳ್ಳೇ ಸಾಧನೆ ಮಾಡಬೇಕು. ಹಾಗೇ ವಿಶ್ರಾಂತಿ ಕೂಡಾ ಬೇಕು. ಪುಷ್ಟಿಕರವಾದ ಆಹಾರ ತೊಗೋಬೇಕು. ಮೂರು ನಾಕು ಗಂಟೆ ಕಚೇರಿ ಹಾಡೋದು ಹುಡುಗಾಟ ಅಲ್ಲ ಅಲ್ಲವೇ? ಬಾದಾಮಿಹಾಲು ಗಂಟಲಿಗೆ ಒಳ್ಳೆಯದು. ಮನಸ್ಸನ್ನು ಉದ್ವೇಗವಿಲ್ಲದೇ ಶುದ್ಧವಾಗಿ, ಶಾಂತವಾಗಿಟ್ಟುಕೊಳ್ಳಬೇಕು. ಜ್ಞಾನಿಗಳ ಸಹವಾಸ ಮಾಡಬೇಕು. ನಾನು ಯಾವಾಗಲೂ ದೊಡ್ಡ ವ್ಯಕ್ತಿಗಳ ಜೊತೆಯೇ ಕಾಲ ಕಳೀತೀನಿ. ತ್ಯಾಗರಾಜ, ಪುರಂದರದಾಸ, ಶಾಮಾಶಾಸ್ತ್ರಿ, ದೀಕ್ಷಿತರು ಇಂತಹ ವ್ಯಕ್ತಿಗಳ ವಿಷಯವನ್ನೇ ಓದುತ್ತಿರುತ್ತೇನೆ. ಮತ್ತೆ ಅವರ ಹಾಡುಗಳನ್ನೇ ಹಾಡುತ್ತೇನೆ. ಮತ್ತೆ, ಎಲ್ಲರೊಳಗೊಂದಾಗಿ ಬಾಳಬೇಕು. ಯಾರಿಗೂ ಕೇಡು ಎಣಿಸಬಾರದು, ಅಸೂಯೆ ಪಡಬಾರದು. ಅಸೂಯೆ, ದ್ವೇಷ ಎಲ್ಲ ಇಟ್ಟುಕೊಂಡರೆ ಮನ ಕ್ಲೇಶವಾಗಿ, ಅದರಿಂದ ನಿಮ್ಮ ಸಂಗೀತ ಕಳೆಕಟ್ಟೋದಿಲ್ಲ. ಕಲಾವಿದ ಆದೋನು ಮನಸ್ಸನ್ನು ಸರಿಯಾಗಿಟ್ಟುಕೊಳ್ಳೋದು ಅತ್ಯಂತ ಅಗತ್ಯ. ಒಟ್ಟಿನಲ್ಲಿ. ಜೀವನ ಪದ್ಧತಿಯನ್ನೇ ಇದಕ್ಕೆ ಮಾರ್ಪಾಡು ಮಾಡ್ಕೋಬೇಕು. ನಾನು ಹಾಗೇ ಮಾಡ್ಕೊಂಡುಬಿಟ್ಟೆ ಅನ್ನಬಹುದು.

ಸಂ: ನಿಮ್ಮ ಸಂಗೀತದ ಬೆಳವಣಿಗೆಗೆ ನಿಮ್ಮ ಮನೆಯವರಿಂದ ಸಹಕಾರ ಹೇಗೆ ಸಿಕ್ಕಿತು?

ನಮ್ಮ ತಂದೆ ತಾಯಿ ಅಣ್ಣಂದಿರೆಲ್ಲ ಸಂಗೀತಗಾರರೇ ಅಂತ ಹೇಳಿದ್ದೆನಲ್ಲ? ಕಲಿಯೋವಾಗ ಬಹಳ ಪ್ರೋತ್ಸಾಹಿಸಿದರು. ನಂತರ ನನ್ನ ಶ್ರೀಮತಿ ಮೈತ್ರೇಯಿ ಅಂತೂ ಇಷ್ಟು ವರ್ಷದ ಸಂಸಾರದಲ್ಲಿ ಒಂದೇ ಒಂದು ಬಾರಿಯೂ ಮನೆವಾರ್ತೆಯ ಕೆಲಸಗಳಿಗಾಗಲಿ, ಇನ್ಯಾವ ಲೌಕಿಕವಾದ ಜವಾಬ್ದಾರಿಯನ್ನೇ ಆಗಲಿ, ಪ್ರತಿಯೊಂದನ್ನೂ ತಾನೇ ನಿಭಾಯಿಸಿ, ನನ್ನನ್ನು ಪೂರ್ತಿ ಸಂಗೀತ ಪ್ರಪಂಚದಲ್ಲೇ ಇರೋಹಾಗೆ ನೋಡಿಕೊಂಡಿದ್ದಾರೆ. ಈಗ ಕೂಡ ಎಲ್ಲವನ್ನೂ ಅವರೇ ನೋಡಿಕೊಳ್ಳೋದು.

ಸಂ: ಕರ್ನಾಟಕ ಸಂಗೀತದಲ್ಲಿ ಭಕ್ತಿಪರವಾದ ರಚನೆಗಳು ಹೆಚ್ಚು. ಸಂಗೀತದಲ್ಲಿ ಭಕ್ತಿಯ ಮಹತ್ವ ಏನು?

ಸಂಗೀತದಲ್ಲಿ ಭಕ್ತಿ, ಅಂದರೆ ಹಾಡುತ್ತಿರುವ ಸಂಗೀತದ ಬಗ್ಗೆ ಶ್ರದ್ಧೆ ಇಲ್ಲದೇ ಒಳ್ಳೇ ಸಂಗೀತ ಉಂಟಾಗೋಕ್ಕೆ ಸಾಧ್ಯವಿಲ್ಲ. ಇದು ಸಂಗೀತ ಒಂದಕ್ಕೇ ಅಲ್ಲ! ಯಾವ ಕಲೆಗಾದರೂ ಅದು ಇರಲೇಬೇಕು. ಉದಾಹರಣೆಗೆ ಯಾವುದೇ ವಿಷಯದಲ್ಲಿ ಪಿಎಚ್‌ಡಿ ಮಾಡ್ಬೇಕಾದ್ರೆ, ಆ ವಿಷಯವನ್ನು ಚೆನ್ನಾಗಿ ಮನನ ಮಾಡಿ ಆರಾಧನೆ ಮಾಡದೇ ಇದ್ದರೆ ಅದು ಸಿದ್ಧಿಸೋದು ಸಾಧ್ಯವೇ ಇಲ್ಲ ಅಲ್ವೇ ?

ಸಂ: ಹೆಚ್ಚಾಗಿ ಕಚೇರಿಗಳಲ್ಲಿ ಕನ್ನಡ ರಚನೆಗಳು ಕಾಣಬರುವುದಿಲ್ಲವಲ್ಲ? ಅದು ಯಾಕೆ?

ಹರಿದಾಸರು ಬರೆದ ದೇವರನಾಮಗಳಲ್ಲಿ ಸಾಹಿತ್ಯ ಹೆಚ್ಚು. ಹಾಗಾಗಿ, ಬಹಳ ಸಂಗತಿಗಳನ್ನು ಸೇರಿಸಿ ಹಾಡಿದರೆ, ಎಲ್ಲಾ ದೇವರನಾಮಗಳಿಗೂ ಸರಿ ಹೊಂದೋದಿಲ್ಲ. ಅಲ್ಲದೇ ದಾಸರು ಅವುಗಳಿಗೆ ಹೇಗೆ ಕಲ್ಪಿಸಿದ್ದರೋ, ಆ ಮಟ್ಟುಗಳೂ ಎಲ್ಲ ರಚನೆಗಳಿಗೂ ಸಿಕ್ಕೋದಿಲ್ಲ. ಆದರೂ ಪರಂಪರೆಯಿಂದ ಬಂದಿರೋ ರಾಗಗಳಲ್ಲೇ ಸೊಗಸಾಗಿ, ಹಿತವಾಗಿ ಕಚೇರಿಯಲ್ಲಿ ವಿಸ್ತರಿಸಬಹುದು. ಒಟ್ಟಿನಲ್ಲಿ sense of proportion ಕಳ್ಕೋಬಾರದು ಅಷ್ಟೇ. ನಾನು ಹಲವಾರು ಕಚೇರಿಗಳನ್ನು ಬರೀ ದಾಸರ ರಚನೆಗಳಿಂದಲೇ ಮಾಡಿಯೂ ಇದ್ದೇನೆ.

ಸಂ: ದಾಸರ ರಚನೆಗಳನ್ನು ಹಾಡುವ ಮಟ್ಟುಗಳು ಏಕೆ ಕಳೆದುಹೋದವು?

ಎಷ್ಟೋ ಹರಿದಾಸರಿಗೆ ಶಿಷ್ಯ ಪರಂಪರೆ ಇರಲಿಲ್ಲ. ಹಾಗಾಗಿ ಅವರ ಸಂಗೀತದ ಎಷ್ಟೋ ಅಂಶಗಳು ಕಳೆದು ಹೋದವು ಅಂತ ಕಾಣುತ್ತೆ. ಅದೂ ಅಲ್ಲದೆ, ಅವರ ಮುಖ್ಯ ಗುರಿ ಸಂಗೀತವನ್ನು ಬೆಳೆಸುವುದು ಮಾತ್ರವೇ ಆಗಿರಲಿಲ್ಲ. ಅದೂ ಒಂದು ಕಾರಣವಿರಬಹುದು. ಈಗ ನೋಡಿ, ಹರಿದಾಸರು ಬರೆದ ಸುಳಾದಿಗಳನ್ನ ಹಾಡುವ ಕ್ರಮ ಈಗ ಯಾರಿಗೂ ಗೊತ್ತಿಲ್ಲ. ಅದಕ್ಕೇ ಅವು ಹೆಚ್ಚು ಚಾಲನೆಯಲ್ಲಿಲ್ಲದೇ ಹೋದವು.

ಸಂ: ನವೀನ ರಾಗಳು, ಹೊಸ ಕೃತಿಗಳು ಹುಟ್ಟುತ್ತಿಲ್ಲ ಅನ್ನುವ ಮಾತನ್ನು ಹೇಳುತ್ತಾರಲ್ಲ? ಅದೊಂದು ಕೊರತೆಯೇ?

ಯಾವ ಕೊರತೆಯೂ ಇಲ್ಲ! ಕರ್ನಾಟಕ ಸಂಗೀತವೇ ಒಂದು ಸಮುದ್ರ. ನವೀನವಾಗಿ ಏನೂ ಬೇಕೇ ಇಲ್ಲ. ನಿಮಗೆ ಏನು ಬೇಕೋ ಎಲ್ಲವೂ ಆಗಲೇ ಇಲ್ಲೇ ಇದೆ. ನೀವೇನಾದರೂ ಹೊಸದಾಗಿ ಮಾಡಬೇಕೆಂದರೆ, ಅದು ಪೂರಕವಾಗಿರುತ್ತೆ ಅಂತಲೂ ಹೇಳೋಕಾಗೋದಿಲ್ಲ. ಸುಮ್ಮನೆ ನಿಮ್ಮ ಆತ್ಮ ಸಂತೋಷಕ್ಕೆ ನೀವು ಮಾಡಿಕೋಬಹ್ಮದಷ್ಟೇ. ಇರೋ ರಾಗಗಳನ್ನೇ ಹಾಡೋದಕ್ಕೆ ಸಮಯವಾಗ್ದೇ ಇರೋವಾಗ, ಅವುಗಳನ್ನೇ ಹಾಡೋದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದೇ ಇರುವಾಗ, ಹೊಸ ಹೊಸ ರಚನೆಗಳನ್ನ ಇಟ್ಟುಕೊಂಡು ಏನುಮಾಡೋದು ಹೇಳಿ? ಉದಾಹರಣೆಗೆ ತ್ಯಾಗರಾಜರ ೭೦೦-೮೦೦ ಕೃತಿಗಳಲ್ಲಿ ಚೆನ್ನಾಗಿ ರೂಢಿಯಲ್ಲಿ ಇರೋದು ೧೦೦-೧೫೦ ಅಷ್ಟೇ. ಹಾಡದೇ ಇರುವ ರಚನೆಗಳು ಬಹಳಷ್ಟಿವೆ. ಹೀಗೆ ಅನೇಕ ಕೃತಿಗಳು ಬೆಳಕಿಗೆ ಬರದೇ ಹೊರಟು ಹೋಗುತ್ತಾ ಇವೆ.

ಸಂ: ಸಂಗೀತ ನಿಂತ ನೀರಾಗಬಾರದು ಅನ್ನೋ ಮಾತಿಗೆ ಏನು ಹೇಳ್ತೀರಾ?

ಆ ಮಾತಿನಲ್ಲಿ ಅರ್ಥವಿಲ್ಲ. ನಮ್ಮ ಸಂಗೀತದಲ್ಲಿ ಮನೋಧರ್ಮಕ್ಕೆ ಅಷ್ಟು ಒತ್ತು ಕೊಟ್ಟಿರೋವಾಗ ಅದು ನಿಂತ ನೀರಾಗುವುದು ಹೇಗೆ ಸಾಧ್ಯ? ಅವರವರ ಮನೋಧರ್ಮಕ್ಕೆ ತಕ್ಕಂತೆ, ಸಂಗೀತದ ಚೌಕಟ್ಟನ್ನು ಮೀರದೇ ಹಾಡೋದೇ ನಮ್ಮ ಸಂಗೀತದ ಹೆಚ್ಚುಗಾರಿಕೆ ಆಗಿರೋವಾಗ ಅದು ನಿಂತ ನೀರು ಆಗೋದೇ ಇಲ್ಲ.

ಸಂ: ಕರ್ನಾಟಕದಲ್ಲಿ ಕರ್ನಾಟಕ ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹವಿಲ್ಲದೇ ಹೋಗಿದೆಯಲ್ಲ- ಇದಕ್ಕೇನಂತೀರ?

ಇದೊಂದು ಬಹಳ ಬೇಸರದ ಸಂಗತಿಯೇ. ಅದು ನಮ್ಮ ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ವಿಷಯ. ಕನ್ನಡಿಗರಿಗೆ ಸ್ವಾಭಿಮಾನವೂ ಕಡಿಮೆಯಾಗಿಬಿಟ್ಟಿದೆ. ನಮ್ಮ ಕಲೆಗಳನ್ನ ನಾವು ಉಳಿಸಿ ಬೆಳೆಸಿಕೊಳ್ಳಬೇಕು ಅನ್ನೋ ಸಂಸ್ಕಾರ ನಮಗೆ ಬಂದ ಹೊರತು ಏನೂ ಮಾಡೋದಕ್ಕೆ ಸಾಧ್ಯವಿಲ್ಲ. ಸಮೂಹ ಮಾಧ್ಯಮಗಳೂ ಇದಕ್ಕೆ ತಕ್ಕ ಹೊಣೆಯನ್ನೂ ಹೊರುತ್ತಾ ಇಲ್ಲ. ಎ.ಆರ್. ಕೃಷ್ಣ ಶಾಸ್ತ್ರಿಗಳು ಹೇಳ್ತಿದ್ದರು “ಕನ್ನಡಿಗರು ಬೇರೆಯರಿಗೆ ಮಣೆ ಹಾಕೋದಲ್ಲಿ ಅಗ್ರಗ್ರಣ್ಯರು – ಯಾಕೆಂದರೆ ರಾಮನನ್ನು ಆದರಿಸಿದ ಹನುಮ ಸುಗ್ರೀವರ ನಾಡು ಅಲ್ಲವೇ ನಮ್ಮದು? ಅಂತ. ಜನಕ್ಕೆ, ಸಂಸ್ಥೆಗಳಿಗೆ, ಸರಕಾರಕ್ಕೆ, ಯಾರಿಗೂ ಕಾಳಜಿ ಇಲ್ಲದೇ ಇದ್ದಾಗ ನಮ್ಮ ಕಲಾವಿದರನ್ನು ಕೇಳೋರು ಯಾರು ಹೇಳಿ? ಅಕ್ಕ ವಿಶ್ವಕನ್ನಡ ಸಮ್ಮೇಳನದಂತಹ ಜಾಗದಲ್ಲಿ ಕರ್ನಾಟಕ ಸಂಗೀತದ ಕಾರ್ಯಕ್ರಮಕ್ಕೆ ೧೫-೨೦ ನಿಮಿಷಗಳ ಸಂಗೀತ ಕಾರ್ಯಕ್ರಮ ಇಡ್ತಾರೆ – ಇದು ನಮ್ಮ ಸ್ಥಿತಿ! ಹಿಂದೂಸ್ತಾನಿ ಸಂಗೀತಕ್ಕೆ ಇನ್ನೊಂದು ಸ್ವಲ್ಪ ಜಾಸ್ತಿ ಪ್ರೋತ್ಸಾಹ ಇದೆ ಅನ್ನಿಸುತ್ತೆ. ಈಗ ನಾವು ನೃಪತುಂಗನ ಕಾಲದಲ್ಲಿ ಕನ್ನಡಿಗರು “ಚೆಲ್ವರ್ಗಳ್, ಸುಭಟರ್ಗಳ್, ಸುಕವಿಗಳ್” ಅಂತ ಹೇಳ್ತಿದ್ದರು ಅಂತ ಸುಮ್ಮನೆ ಪುಸ್ತಕದಲ್ಲಿ ಓದಿ ಸಂತೋಷಪಡಬೇಕು ಅಷ್ಟೇ.

ಸಂ: ಕನ್ನಡ ಟಿವಿ ವಾಹಿನಿಗಳಲ್ಲಿ ಸಂಗೀತಕ್ಕೆ ಒಳ್ಳೇ ಪ್ರೋತ್ಸಾಹ ಇದೆಯೇ?

ಸಾಲದು. ಈ ವರ್ಷ ಕ್ಲೀವ್‌ಲ್ಯಾಂಡ್ ನಲ್ಲಿ ನಡೆಯೋ ತ್ಯಾಗರಾಜ ಆರಾಧನೆಗೆ ನನ್ನನ್ನು ಕರೆದಿದ್ದರು ಹಾಡೋದಕ್ಕೆ. ಅಲ್ಲಿ ಮೂರು ನಾಕು ದಿನದ ಕಾರ್ಯಕ್ರಮಗಳನ್ನ ಮದ್ರಾಸಿನ ಜಯ ಟಿವಿಯವರು ಬಂದು ರೆಕಾರ್ಡ್ ಮಾಡಿ, ಅವರ ತಮಿಳು ವಾಹಿನಿಯಲ್ಲಿ ಪ್ರಸಾರ ಮಾಡ್ತಿದ್ದರು. ಆ ತರಹ ಕೆಲಸವನ್ನು ಕನ್ನಡದ ವಾಹಿನಿಗಳು, ನಮ್ಮ ಬೆಂಗಳೂರಿನಲ್ಲೇ ನಡೆಯೋ ಕಚೇರಿಗಳಲ್ಲೇ ಮಾಡೋದಿಲ್ಲ ಅನ್ನೋದು ಬೇಸರದ ವಿಷಯ.

ಸಂ: ಒಳ್ಳೇ ಸಂಗೀತದಲ್ಲಿ ಮಕ್ಕಳಿಗೆ ಅಭಿರುಚಿ ಬೆಳೆಸೋದು ಹೇಗೆ? ಮತ್ತೆ ಸಂಗೀತ ಅಭ್ಯಾಸ ಮಾಡೋವ್ರಿಗೆ ನಿಮ್ಮ ಕಿವಿ ಮಾತೇನು?

ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಸಂಗೀತ ಕೇಳಿಸಬೇಕು. ಚಿಕ್ಕವಯಸ್ಸಿನಲ್ಲೇ ಏಕಾಗ್ರತೆಯಿಂದ ಕುಳಿತು ಕೇಳಿದರೆ ಸಂಗೀತ ರಸಿಕನಾಗಲು ಅನುಕೂಲವಾಗುತ್ತೆ. ಕ್ರಮೇಣ ಮಕ್ಕಳಿಗೆ ಆ ವಿಷಯದಲ್ಲಿ ಇರೋ ಆಸಕ್ತಿ ಹೆಚ್ಚಾಗ್ತಾ ಹೋಗತ್ತೆ. ಸಂಗೀತವೇ ಆಗಲಿ, ವಾದ್ಯವೇ ಆಗಲಿ, ಅಥವ ಚಿತ್ರಕಲೆ ಶಿಲ್ಪಕಲೆ ಆಗಲಿ, ಯಾವುದೇ ರೀತಿಯ ಕಲೆಗೂ ಅನ್ವಯ ಆಗೋ ಅಂತಹ ಮಾತು. ಇನ್ನು ಸಂಗೀತ ಚೆನ್ನಾಗಿ ಕಲೀಬೇಕು ಅಂದರೆ ಬಿಡದ ಅಭ್ಯಾಸ ಬೇಕು. ಮತ್ತೆ ಜೊತೆಯಲ್ಲೇ ಒಳ್ಳೇ ವಿದ್ವಾಂಸರ ಸಂಗೀತವನ್ನ ಹೆಚ್ಚು ಹೆಚ್ಚು ಕೇಳಬೇಕು. ಅದು ತುಂಬಾನೇ ಮುಖ್ಯ.

ಸಂ: ಹಿಂದೂಸ್ತಾನಿ ಸಂಗೀತ ಅಥವಾ ಪಾಶ್ಚಾತ್ಯ ಸಂಗೀತವನ್ನ ನೀವು ಅದರ ಅಧ್ಯಯನ ಮಾಡಿದೀರಾ?

ಇಲ್ಲ. ಅದನ್ನು ಕೇಳುವ ಒಳ್ಳೇ ಕಿವಿ ಇದೆ. ಆಯಾ ಪದ್ಧತಿಗಳಲ್ಲಿ ಅವುಗಳ ಹೆಚ್ಚುಗಾರಿಕೆ, ಗೌರವ ಇದ್ದೇ ಇದೆ. ಹಿಂದೂಸ್ತಾನಿ ಸಂಗೀತವನ್ನ ಬೇಕಾದಷ್ಟು ಕೇಳಿದ್ದೇನೆ.ಆನಂದಿಸುತ್ತೇನೆ. ಪಾಶ್ಚಾತ್ಯ ಸಂಗೀತವನ್ನೂ ಕೇಳಿದ್ದೇನೆ, ಆದರೆ ಅದನ್ನ ಬಹಳ ಚೆನ್ನಾಗಿ ಆಸ್ವಾದಿಸೋ ಅಷ್ಟು ಪರಿಶ್ರಮವಿಲ್ಲ.

ಸಂ: ಹಿಂದೂಸ್ತಾನಿ-ಕರ್ನಾಟಕ ಸಂಗೀತದ ಜುಗಲ್ ಬಂದಿ,ಭಾರತೀಯ ಸಂಗೀತ-ಪಾಶ್ಚಾತ್ಯ ಸಂಗೀತದ ಫ್ಯೂಶನ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನನಗೆ ಹಿಂದೂಸ್ತಾನಿ-ಕರ್ನಾಟಕ ಸಂಗೀತದ ಜುಗಲ್ ಬಂದಿಗಳಲ್ಲಿ ಅಂತಹ ಸ್ವಾರಸ್ಯ ಇಲ್ಲ. ಇನ್ನೂ ಜುಗಲ್ ಬಂದಿ ಮಾಡಬೇಕಾದರೆ, ಕರ್ನಾಟಕ ಸಂಗೀತದ ಇಬ್ಬರು ವಿದ್ವಾಂಸರ ಜುಗಲ್ ಬಂದಿ ಇಡೋಣ. ಇಬ್ಬರದ್ದು ಕಲ್ಪನೆಗಳು ಹೇಗಿರುತ್ತೆ ಅನ್ನೋದನ್ನು ಕೇಳಿ ನೋಡೋಣ. ಅಥವಾ ಇಬ್ಬರು ಹಿಂದೂಸ್ತಾನಿ ಸಂಗೀತದ ವಿದ್ವಾಂಸರು ಇಬ್ಬರನ್ನೂ ಒಟ್ಟಿಗೆ ಹಾಡಿಸಿ ಅವರವರ ಶೈಲಿ ಒಟ್ಟಿಗೆ ನೋಡಿದರೆ ಅದೊಂದು ಸೊಗಸು. ಮಲ್ಲಿಗೆ ಮಲ್ಲಿಗೆಯೇ – ಸಂಪಿಗೆ ಸಂಪಿಗೆಯೇ. ಎರಡೂ ಸೊಗಸು, ಒಂದಕ್ಕೊಂದು ಬೆರೆಸೋ ಅಗತ್ಯವೇ ಇಲ್ಲ ಅನ್ನಿಸುತ್ತೆ.

ಸಂ: ನಿಮ್ಮ ಜೊತೆ ಮಾತನಾಡೋ ಈ ಸುಯೋಗಕ್ಕೆ ಕನ್ನಡಕೂಟದ ಪರವಾಗಿ ಧನ್ಯವಾದಗಳು

ನಿಮ್ಮೊಡನೆ ಈ ಸಂದರ್ಭದಲ್ಲಿ ಈ ಸಂಭಾಷಣೆ ನಡೆಸಿದ್ದು ನಮಗೂ ಬಹಳ ಆನಂದ ತಂದಿದೆ! ನಮಸ್ಕಾರ.

ಚಿತ್ರ ಕೃಪೆ : http://www.thehindu.com

1 ಟಿಪ್ಪಣಿ Post a comment
  1. Umesh
    ಫೆಬ್ರ 19 2014

    Outstanding singer. Karnataka Music has lost a fatherly figure, and it is very hard to replace him. Hasana District’s Rudrapatna village has always produced eminent musicians, Veda scholars, Gamaka pandits. May his soul rest in peace.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments