ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 19, 2014

1

ಕಾನೂನಿನ ಶಂಖದಿಂದ ಪರಿಹಾರದ ತೀರ್ಥ ಬರುತ್ತದೆಯೇ?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Mala Horuvuduಇತ್ತೀಚೆಗೆ ಪ್ರಕಟವಾದ ಸುದ್ದಿಗಳಲ್ಲಿ ಬಹುವಾಗಿ ಕಾಡಿದ್ದು,ವಿಜಯವಾಣಿಯಲ್ಲಿ ಜನವರಿ ೨೯ರಂದು ಮತ್ತೆ ಫೆಬ್ರವರಿ ೫ರಂದು ಪ್ರಕಟವಾದ ೨ ಸುದ್ದಿಗಳು.ಒಂದು ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ವರದಿಯಾದ ಮಲಹೊರುವ ಪ್ರಕರಣ ಮತ್ತು ಇನ್ನೊಂದು ಮಂಡ್ಯದ ಕಾಂಗ್ರೆಸ್ಸ್ ಕಛೇರಿಗೆ ಸಂಬಂಧಿಸಿದ ಮ್ಯಾನ್ ಹೋಲ್ ಅನ್ನು ಪೌರಕಾರ್ಮಿಕನೊಬ್ಬ ಬರಿಗೈಯಿಂದ ಸ್ವಚ್ಚ ಮಾಡುತಿದ್ದ ವರದಿ.

ಆನೇಕಲ್ಲಿನ ಪ್ರಕರಣ ವರದಿಯಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡು, ‘ಮಲಹೊರುವಂತೆ ಪ್ರೇರೆಪಿಸಿದ’ ಮತ್ತು ‘ಜಾತಿನಿಂದನೆ’ಯ (ಇದರಲ್ಲಿ ಜಾತಿ ನಿಂದನೆಯಾಗಿದ್ದು ಹೇಗೆ ಅನ್ನುವುದು ತಿಳಿಯಲಿಲ್ಲ) ಆರೋಪದ ಮೇಲೆ ಒಬ್ಬರನ್ನು ಬಂಧಿಸಿದ ಫಾಲೋ-ಅಪ್ ಸುದ್ದಿಯೂ ಪತ್ರಿಕೆಯಲ್ಲಿ ಬಂದಿತ್ತು. ಆದರೆ,ಸರಿಯಾದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸದ ಸರ್ಕಾರ ಇಂತ ಪ್ರಕರಣದಲ್ಲಿ ಮೊದಲ ಆರೋಪಿಯಾಗಬೇಕೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದ ಅನಿವಾರ್ಯತೆಗೆ ಬಿದ್ದು,ಕಾರ್ಮಿಕರಿಂದ ಮಲಹೊರಿಸುವ ಸ್ಥಿತಿಗೆ ಬಂದು ನಿಲ್ಲುವವರು ಆರೋಪಿಗಳಾಗಬೇಕೆ?

ಅತ್ಯಾಧುನಿಕ ಉಪಕರಣಗಳು ಆಯಾ ಪಾಲಿಕೆ/ನಗರಸಭೆ/ಪುರಸಭೆ/ಗ್ರಾಮಪಂಚಾಯಿತಿ ಗಳಲ್ಲಿ ಲಭ್ಯವಿದ್ದೂ ಮತ್ತು ಅವುಗಳನ್ನು ಬಳಸುವ ಬಗ್ಗೆ ಜನರಿಗೆ ಅರಿವು ಮೂಡಿಸಿ,ಅವು ಸುಲಭವಾಗಿ ದಕ್ಕುವಂತೆ ಸರ್ಕಾರ ಮಾಡಿದ್ದರೆ,ಒಬ್ಬರು ಜೈಲಿಗೆ ಹೋಗುವುದನ್ನು ತಪ್ಪಿಸಬಹುದಿತ್ತಲ್ಲವೇ?

ಅದೇ ಪತ್ರಿಕೆಯಲ್ಲಿ ಶಿರಸಿ ತಾಲೂಕಿನ ೨೭ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಕೇಂದ್ರ ಸರ್ಕಾರದ ಗ್ರಾಮೀಣ ಮಂತ್ರಾಲಯ’ದ ಮನೆಗೊಂದು ಶೌಚಾಲಯ ಕಾರ್ಯಕ್ರಮದಡಿ ಕಟ್ಟಿಸಲ್ಪಟ್ಟ ಶೌಚಾಲಯಗಳಲ್ಲಿ ಸೆಪ್ಟಿಕ್ ಟ್ಯಾಂಕ್ ಅಳವಡಿಸಿದ್ದು, ಅವು ತುಂಬಿಕೊಂಡು ಬಳಸಲಾರದ ಮಟ್ಟಿನ ಸಮಸ್ಯೆ ಕಾಡಿದ್ದು,ಕಡೆಗೆ ಶಿರಸಿ ನಗರಸಭೆಯಲ್ಲಿ ಸಕ್ಕಿಂಗ್ ಯಂತ್ರ ಬಳಸಲು ಎರಡೂವರೆ ಸಾವಿರದಷ್ಟು ದುಬಾರಿ ಹಣ ತೆರಲು ಶಕ್ತರಲ್ಲದ ಬಡ ಜನ ತಾವೇ ಖುದ್ದು ಸ್ವಚ್ಚಗೊಳಿಸಲು ಮುಂದಾಗಿದ್ದಾಗ, ಪರಿಸ್ಥಿತಿಯ ಗಂಭೀರತೆ ಅರಿತ ಉಪ ವಿಭಾಗಧಿಕಾರಿ ರಾಜು ಮೊಗವೀರ ಅವರು ನಗರಸಭೆಯ ಮನವೊಲಿಸಿ ಕಡಿಮೆ ದರದಲ್ಲಿ ಈ ಕಾರ್ಯವಾಗುವಂತೆ ಮಾಡಿದ್ದೂ ವರದಿಯಾಗಿದೆ.ಎಲ್ಲ ಕಡೆಯೂ ರಾಜು ಮೊಗವೀರರಂತ ಅಧಿಕಾರಿಗಳಿದ್ದರೆ ಪರವಾಗಿಲ್ಲ.ಆದರೆ,ಹಾಗಿರುವುದಿಲ್ಲವಲ್ಲ. ಅದಕ್ಕೂ ಮುಖ್ಯವಾಗಿ ಇಂತ ಯೋಜನೆಗಳನ್ನು ಹಾಕಿಕೊಂಡಾಗ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತಿಸದಷ್ಟು ಮೂಢರೇನು ನಮ್ಮ ಯೋಜನಾ ಪಂಡಿತರು ಮತ್ತು ಸರ್ಕಾರಗಳು? ವಸ್ತುಸ್ಥಿತಿ ಹೀಗಿರುವಾಗ ಅಮಾಯಕರ ಮೇಲೆ ಕೇಸು ಹಾಕುವ ನೈತಿಕ ಹಕ್ಕು ಈ ಸರ್ಕಾರಗಳಿಗೆ ಇದೆಯೇ?

ಭಾರತದಲ್ಲೇ ಮೊದಲ ಬಾರಿಗೆ ೧೯೬೮ರಲ್ಲಿ,ಈ ಮಲಹೊರುವ ಅನಾಗರೀಕ ಕಾರ್ಯವನ್ನು ನಿಷೇಧಿಸಿದ್ದು ಉಡುಪಿ ನಗರಸಭೆ, ಬಿಜೆಪಿ ದಿವಂಗತ ಡಾ||ವಿ.ಎಸ್ ಆಚಾರ್ಯರ ನೇತೃತ್ವದಲ್ಲಿ.ಆ ನಂತರ ೧೯೭೩ರಲ್ಲಿ ದೇವರಾಜ್ ಅರಸು ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬಸಲಿಂಗಯ್ಯನವರು ಸುತ್ತೋಲೆಯೊಂದನ್ನು ಹೊರಡಿಸುವುದರ ಮೂಲಕ ನಿಷೇಧಿಸಿದರೂ,ಅದಕ್ಕೆ ಕಾನೂನು ರೂಪುಗೊಂದಿದ್ದು ೧೯೯೩ರಲ್ಲಿ…! (ಬರೋಬ್ಬರಿ ೨೦ ವರ್ಷಗಳ ಬಳಿಕ…!)

ಕರ್ನಾಟಕದ ಸರ್ಕಾರದ ಸುತ್ತೋಲೆಯನ್ನೇ ಪರಿಗಣಿಸಿ ಕೇಂದ್ರವೂ ೧೯೯೩ರಲ್ಲಿ ಮಸೂದೆಯನ್ನು ಮಂಡಿಸಿ, ೨೦೧೩ರಲ್ಲಿ ಆ ಕಾನೂನನ್ನು ಬಿಗಿಗೊಳಿಸಿತ್ತು. ಇನ್ನು ಮುಂದೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಒಳಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಮತ್ತು ಶೌಚಾಲಯಕ್ಕೆ ಗುಂಡಿಗಳ ಬದಲು ದೊಡ್ಡ ಪೈಪುಗಳನ್ನು ಅಳವಡಿಸುವಂತೆ ಸೂಚಿಸಿತ್ತು.

ರಾಜ್ಯದಲ್ಲಿ ಮಲಹೊರುವ ಕಾರ್ಯ ನಿಷೇಧವಾಗಿದ್ದು ೧೯೭೩ರಲ್ಲಿ, ನಾವು ಓದಿದ ಈ ಮೇಲಿನ ಈ ಸುದ್ದಿಗಳು ವರದಿಯಾಗಿದ್ದು ೨೦೧೪ ರಲ್ಲಿ.ಅಂದರೆ ನಿಷೇಧವಾಗಿ ೪೧ ವರ್ಷಗಳಾದ ಮೇಲೆ …!

ಅಸಲಿಗೆ ನೋಡಲಿಕ್ಕೆ ಹೋದರೆ, ವರದಿಯಾಗಿದ್ದು ಎರಡೇ ಸುದ್ದಿಗಳು.ವರದಿಯಾಗದೇ ದಿನನಿತ್ಯ ಈಗಲೂ ರಾಜ್ಯದ ಮೂಲೆ ಮೂಲೆಗಳಲ್ಲಿಯೂ (ಇನ್ನೂ ದೇಶದ ವಿಷಯ ಬೇಡ ಬಿಡಿ) ನಮಗೆ ಇಂತ ಸುದ್ದಿಗಳು ಸಿಗುತ್ತವೆ.ಬೆಂಗಳೂರಿನ ಮುಖ್ಯ ರಸ್ತೆಗಳಲ್ಲೇ ಯಾವುದೇ ಆರೋಗ್ಯ ರಕ್ಷಣಾ ಸಲಕರಣೆಗಳನ್ನು ಧರಿಸದೇ ತಲೆಯ ಮೇಲೊಂದು ಬಟ್ಟೆ ಕಟ್ಟಿಕೊಂಡು ಕಸಗುಡಿಸುವ ಹೆಂಗಸರು ಮತ್ತು ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸುವ ಮತ್ತು ಆ ತ್ಯಾಜ್ಯವನ್ನು ಲಾರಿ/ಟ್ರಾಕ್ಟರ್ಗಳಿಗೆ ತುಂಬಿಕೊಳ್ಳುವವರು,ಚರಂಡಿಗಳನ್ನು ಸ್ವಚ್ಚಗೊಳಿಸುವವರು ಯಾವ ರಕ್ಷಣಾ ಸಲಕರೆಣೆಗಳನ್ನು ಹಾಕಿಕೊಂಡಿರುತ್ತಾರೆ ಹೇಳಿ?

ಪೌರ ಕಾರ್ಮಿಕರು ಹಾಗೆ ಯಾವುದೇ ಆರೋಗ್ಯ ರಕ್ಷಣಾ ಸಲಕರಣೆಗಳನ್ನು ಧರಿಸಿಕೊಳ್ಳದಿರಲು ಏನು ಕಾರಣಗಳಿದ್ದಿರಬಹುದು?

೧) ಸರ್ಕಾರವೇ ಆ ರೀತಿಯ ಯಾವ ಸಲಕರಣೆಗಳನ್ನು ಅವರಿಗೆ ಕೊಡದಿರುವುದು.
೨) ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಆ ಸಾಮಗ್ರಿಗಳ ಬಳಕೆಯ ಬಗ್ಗೆ ಪೌರ ಕಾರ್ಮಿಕರಲ್ಲಿ ಅರಿವು ಮೂಡಿಸದಿರುವುದು.
೩) ಯಾವುದೇ ಅತ್ಯಾಧುನಿಕ ಉಪಕರಣಗಳು ಆಯಾ ಪಾಲಿಕೆ/ನಗರಸಭೆ/ಪುರಸಭೆ/ಗ್ರಾಮಪಂಚಾಯಿತಿ ಗಳಲ್ಲಿ ಲಭವಿಲ್ಲದೇ ಇರಬಹುದು.

ಮಂಡ್ಯದ ಪ್ರಕರಣ ವರದಿಯಾದ ಮೇಲೆ ವಿವಿಧ ಸಂಘಟನೆಗಳು ಇದನ್ನು ಖಂಡಿಸಿ ಪ್ರತಿಭಟಿಸಿವೆಯಂತೆ! ಮತ್ತು ಜಿಲ್ಲೆಯಲ್ಲಿ ಮಲಹೊರುವಂತ,ಒಳಚರಂಡಿ ವ್ಯವಸ್ಥೆ ಸರಿಯಿಲ್ಲದಿರುವ ಮತ್ತು ಸಕ್ಕಿಂಗ್ ಯಂತ್ರಗಳು ಇಲ್ಲದ ಬಗ್ಗೆಯೂ ಮನವಿ ಸಲ್ಲಿಸಿದರಂತೆ.ಇಷ್ಟು ದಿನ ಇವೆಲ್ಲ ಇವರಿಗೆ ಇದ್ಯಾವುದು ಗೊತ್ತಿಲ್ಲದೇ ಬದುಕುತಿದ್ದರೇ?

ಇಲ್ಲ!

ಸತ್ಯವೇನೆಂದರೆ,ಇದು ನಮ್ಮೆಲ್ಲರ ಗಮನಕ್ಕೂ ಬಂದಿರುತ್ತದೆ.ಸರ್ಕಾರದಲ್ಲಿರುವ ದೊಡ್ಡ ಜನರ ಕಣ್ಣಿಗೂ ಬಿದ್ದಿರುತ್ತದೆ.ಆದರೆ, ಅವರ ಮನಸ್ಸಿಗೆ ಇವೆಲ್ಲ ಕಾಣುವುದಿಲ್ಲ.ಇನ್ನು ಸಂಘಟನೆಗಳವರಿಗೆ ಮೈಕು ಹಿಡಿದು ಭಾಷಣ ಮಾಡುವುದರಲ್ಲಿ ಸಿಗುವ ಲಾಭ,ಸಮಸ್ಯೆ ಬಗೆಹರಿಸುವುದರಿಂದ ಸಿಗುವುದಿಲ್ಲವಲ್ಲ!

ಕೇವಲ ಕಾನೂನಗಳನ್ನು ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿದ್ದರೆ,ಇಂತ ಸುದ್ದಿಗಳು ಮತ್ತೆ ಮತ್ತೆ ವರದಿಯಾಗುತ್ತಲೂ ಇರುತ್ತಲಿರಲಿಲ್ಲ ಅಲ್ಲವೇ?

ಹೌದು. ಇಂತ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗಲಿಕ್ಕೇನು ಕಾರಣ?

ಆನೇಕಲ್ಲಿನಲ್ಲಿ ಮಲಹೊರುವಂತ ಅನಾಗರಿಕ ಕಾರ್ಯದ ಬಲಿಪಶುವಾದ ಯಲ್ಲಪ್ಪ ಅವರು ಹೇಳುವುದು,”ಈ ಪ್ರದೇಶದಲ್ಲಿ ಮಳೆ ಇಲ್ಲದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ನಿಂತು ಹೋಗಿದೆ.ನಮ್ಮನ್ನು ಯಾರೂ ಕೂಲಿಗೆ ಕರೆಯುವುದಿಲ್ಲ.ಇಬ್ಬರು ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನ ನಿರ್ವಹಣೆಗೆ ಮಲಹೊರುವ ಕಾಯಕವೇ ಆಧಾರವಾಗಿದೆ.ಈ ಕೆಲಸ ಬಿಟ್ಟು ಬೇರೊಂದು ಕೆಲ್ಸ ನಮಗೆ ಸಿಗುವುದೂ ಇಲ್ಲ. ಮಲಹೊರುವ ಕಾರ್ಯ ಅಮಾನವೀಯ ಎಂದು ಗೊತ್ತಿದ್ದರೂ ಬದುಕಿನ ಅನಿವಾರ್ಯತೆಗಾಗಿ ಈ ಕೆಲಸ ಮಾಡುತಿದ್ದೇವೆ.ಈ ಪ್ರದೇಶದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದಿಂದ ಯಾವುದೇ ಕ್ರಮ ಜರುಗಿಸಲಾಗಿಲ್ಲ.ನಮ್ಮ ಕೂಗು ಸರ್ಕಾರಕ್ಕೆ ಮುಟ್ಟುವುದೂ ಇಲ್ಲ.ಈ ಪ್ರದೇಶದ ತೋಟಗಳೆಲ್ಲ ನಾಶವಾಗಿವೆ.ಹೀಗಾಗಿ ಕೂಲಿ ಕೆಲಸ ಸಿಗುತ್ತಿಲ್ಲ. ಆರೋಗ್ಯ ಹಾಳಾಗುತ್ತದೆ ಎಂಬುದು ಗೊತ್ತಿದ್ದರೂ ನಾವು ಅನಿವಾರ್ಯವಾಗಿ ನಾವು ಈ ಕೆಲಸ ಮುಂದುವರೆಸುತಿದ್ದೇವೆ”.

ಅಂದರೆ, ನಮ್ಮ ಸರ್ಕಾರಗಳು ನಿಷೇಧ ಹೇರುವಲ್ಲಿ ತೋರುವ ಉತ್ಸಾಹವನ್ನು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಕೆಲಸ ಮಾಡುವಲ್ಲಿ ಸೋಲುತ್ತಿವೆ ಎಂದರ್ಥವಲ್ಲವೇ? ಬದುಕಿನ ಅನಿವಾರ್ಯತೆ,ಹಸಿವು ಎಂತ ಕೆಲಸವನ್ನಾದರೂ ಮಾಡಿಸುತ್ತದೆ. ಯಲ್ಲಪ್ಪನಂತವರಿಗೆ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಕುಟುಂಬಸ್ಥರ ಹೊಟ್ಟೆ-ಬಟ್ಟೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿರುತ್ತದೆ.ಅಂತವರ ಅನಿವಾರ್ಯತೆಯನ್ನು/ವಸ್ತುಸ್ಥಿತಿಯನ್ನು,ಸರ್ಕಾರ/ವ್ಯವಸ್ಥೆ ಅರ್ಥಮಾಡಿಕೊಂಡು ಶಾಶ್ವತ ಪರಿಹಾರ ರೂಪಿಸುವ ಕಾರ್ಯಕ್ರಮ ಕೈಗೊಳ್ಳದೇ, ಶಿಕ್ಷೆಯ ಭಯ ಬೀಳಿಸುತ್ತದೆ ಸರ್ಕಾರ.ಮಲಗುಂಡಿ ಸ್ವಚ್ಛಗೊಳಿಸುವ ಮತ್ತು ಬರಿಗೈಯಲ್ಲಿ ಚರಂಡಿ ಸ್ವಚ್ಚಗೊಳಿಸುವ ಕೆಲಸಕ್ಕೆ ಮುಂದಾದರೆ, ಮೊದಲನೇ ಬಾರಿ ೧ ವರ್ಷ ಶಿಕ್ಷೆ,೫೦ ಸಾವಿರ ದಂಡ,ಮತ್ತಿದು ಪುನಾರವರ್ತನೆಯಾದರೆ ೫ ವರ್ಷ ಜೈಲು,೫ ಲಕ್ಷ ದಂಡವಂತೆ…! ತುತ್ತು ಕೂಳಿಗಾಗಿ, ಪುಡಿಗಾಸಿಗಾಗಿ ಇಂತ ಕೆಲಸ ಮಾಡುವವರಿಗೆ ೫೦ ಸಾವಿರದಿಂದ ೫ ಲಕ್ಷ ದಂಡವಂತೆ…! ಹೇಗಿದೆ ಸರ್ಕಾರದ/ಕಾನೂನು/ವ್ಯವಸ್ಥೆಯ ವರಸೆ? ಶೀತವಾದರೆ ಚುಚ್ಚುಮದ್ದು/ಮಾತ್ರೆ ತೆಗೆದುಕೊಳ್ಳುವುದರ ಬದಲು ಮೂಗನ್ನೇ ಕತ್ತರಿಸಿಕೊಳ್ಳಿ ಅನ್ನುವ ಕಾನೂನು…!

ಸಾಮಾಜಿಕ ಸಮಸ್ಯೆ/ಪಿಡುಗುಗಳ ನಿವಾರಣೆಗೆ ವ್ಯಾಪಕವಾದ ಸಮಾಜ ವಿಜ್ನಾನ ಹಿನ್ನೆಲೆಯ ಅಧ್ಯಯನ ಮಾಡಬೇಕಲ್ಲವೆ? ಸಮಸ್ಯೆಯ ಆಳ-ಅಗಲಗಳನ್ನು ಅದರ ವ್ಯಾಪ್ತಿಯನ್ನು ಅಧ್ಯಯನ ಮಾಡದೇ ಕೇವಲ ಒಂದು ಕಾನೂನು,ಅದಕ್ಕೊಂದು ಆಯೋಗ ಮತ್ತು ಜೈಲು ಶಿಕ್ಷೆಯ ಬೆದರು ಬೊಂಬೆಯನ್ನಿಟ್ಟರೆ ‘ಸಮಸ್ಯೆ’ಗಳು ಮಾಯವಾಗುತ್ತವೆಯೇ?

ಸರ್ಕಾರಗಳು ಕಾನೂನಿನ ಮೂಲಕ ನಿಷೇಧ ಹೇರುವಲ್ಲಿ ತೋರುವ ಉತ್ಸಾಹವನ್ನು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಕೆಲಸ ಮಾಡುವಲ್ಲಿ ಸೋಲುತ್ತಿವೆಯೇ? ಒಂದು ಕಾನೂನು ರಚನೆಯಾಗಿ ೪೧ ವರ್ಷವಾದ ಮೇಲೂ ಅದರ ಉಲ್ಲಂಘನೆಯಾದ ವರದಿಗಳು ಬರುತ್ತಿವೆಯೆಂದರೆ,ಸರ್ಕಾರಗಳು ವಿಫಲವಾಗಿವೆ ಅಂತಲೇ ಅರ್ಥವಲ್ಲವೇ?

ಹೀಗೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಗಳಲ್ಲೊಂದಾದ ಮತ್ತು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರೇ ಅಲ್ಲಿನ ಚಿಕಿತ್ಸಾ ಸೌಲಭ್ಯದ ಬಗ್ಗೆ ಮೆಚ್ಚಿ ಪತ್ರ ಬರೆದಿದ್ದ.”ಜಯದೇವ ಹೃದ್ರೋಗ ಆಸ್ಪತ್ರೆ”ಯ ಸೌಲಭ್ಯಗಳು, ಕಾರ್ಯವಿಧಾನವನ್ನು ನೋಡುವ ಅವಕಾಶ ಸಿಕ್ಕಿತ್ತು.ಅಂದು ಆಸ್ಪತ್ರೆಯ ಸಾಧನೆಯ ಹಿಂದಿನ ಕರ್ತೃ ಡಾ||ಮಂಜುನಾಥ್ ಅವರನ್ನು ಭೇಟಿಯಾದಾಗ ಅವರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ.”ದೊಡ್ಡ ದೊಡ್ಡ ಡಾಕ್ಟರು,ಪ್ರೊಫೆಸರುಗಳಿಗೆ ಸರ್ಕಾರ ಒಳ್ಳೆಯ ಸಂಬಳವನ್ನೇ ಕೊಡುತ್ತದೆ.ಆದರೆ ಸಣ್ಣ-ಪುಟ್ಟ ಕೆಲಸ ಮಾಡುವವರನ್ನು ಯಾರೂ ಅಷ್ಟಾಗಿ ಗಮನಿಸುವುದಿಲ್ಲ.ಕೆಳಗಿನವರು ಚೆನ್ನಾಗಿದ್ದರಷ್ಟೇ ಅಲ್ಲವೇ,ಅದು ಮೇಲಿನವರ ಕೆಲಸಕ್ಕೆ ಮೆರುಗು ತರುವುದು, ಹಾಗಾಗಿ ನಮ್ಮ ಕೈಕೆಳಗಿನವರ ಬೇಕು-ಬೇಡಗಳನ್ನು ನೋಡಿಕೊಳ್ಳಬೇಕು,ಅವರಿಗೂ ಕಷ್ಟಗಳಿರುತ್ತವೆ, ಅವರಿಗೂ ಒಳ್ಳೆ ಸಂಬಳವನ್ನು ಕೊಡಬೇಕು” ಅಂದಿದ್ದರು.

ಎಷ್ಟು ನಿಜವಲ್ಲವೇ ಅವರ ಮಾತುಗಳು! ಇಡೀ ಬೆಂಗಳೂರು ಕಸದಿಂದ ತುಂಬಿ ಹೋಗಿದ್ದಾಗ ಅದನ್ನು ತೆರವುಗೊಳಿಸಿ ಬೆಂಗಳೂರಿಗರ ಆರೋಗ್ಯ ಕಾಪಾಡಿದ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲದಷ್ಟು ಕೃತಘ್ನರು ನಾವೆಲ್ಲರು.ಯಾವುದೇ ಆರೋಗ್ಯ ರಕ್ಷಣಾ ಸಲಕರಣೆಗಳನ್ನು ಬಳಸದೇ ದಿನನಿತ್ಯವೂ ಆ ತ್ಯಾಜ್ಯಗಳ ನಡುವೆ ಕೆಲಸ ಮಾಡುವ ಆ ಪೌರಕಾರ್ಮಿಕರಿಗೆ ಸರ್ಕಾರ ಕೊಡುವ ಸವಲತ್ತುಗಳೇನು? ಅವರ ಆರೋಗ್ಯಕ್ಕೆ,ಅವರ ಮಕ್ಕಳ ಶಿಕ್ಷಣ,ಜೀವನ ಭದ್ರತೆಗೆ ಸರ್ಕಾರವೇನಾದ್ರೂ ಕ್ರಮ ಕೈಗೊಂಡಿದೆಯೇ? ಬಹುತೇಕ ಪೌರ ಕಾರ್ಮಿಕರೆಲ್ಲರೂ ಗುತ್ತಿಗೆ ಆಧಾರದಲ್ಲೇ ಕೆಲಸ ಮಾಡುವವರು ಮತ್ತು ಅವರ ಸಂಬಳವೂ ಕಡಿಮೆಯೇ ಇದ್ದಿರುತ್ತದೆ.

ಅವರಿಗೂ ಉತ್ತಮವಾದ ಸಂಬಳ,ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಜೀವನಕ್ಕೆ ಭದ್ರತೆ ಮತ್ತು ಅವರು ಮಾಡುವ ಕೆಲಸವನ್ನೇ ಘನತೆಯಿಂದ ಮಾಡಲು ಸಾಧ್ಯವಗುವಂತ ಆಧುನಿಕ ಮತ್ತು ಆರೋಗ್ಯ ರಕ್ಷಣಾ ಸಾಧನಗಳನ್ನು ಕೊಡುವುದು ಸರ್ಕಾರದ ಕೆಲಸವೇ ಹೌದು.

ಮಲಹೊರುವಂತೆ ಪ್ರೇರೆಪಿಸಿದರು ಮತ್ತು ಜಾತಿನಿಂದನೆ (?) ಅಂತ ಅಮಾಯಕರ ಮೇಲೆ ಕೇಸುಗಳನ್ನು ಹಾಕುವ ಮೊದಲು ಸರ್ಕಾರ ಸಮರ್ಥವಾದ ಒಳಚರಂಡಿ ವ್ಯವಸ್ಥೆಗಳನ್ನು ಮತ್ತು ರಾಜ್ಯದ ಪ್ರತಿಮೂಲೆಗಳಲ್ಲಿನ್ನ ಪಾಲಿಕೆ/ನಗರಸಭೆ/ಪುರಸಭೆ/ಗ್ರಾಮಪಂಚಾಯಿತಿಗಳಲ್ಲಿ ಅತ್ಯಾಧುನಿಕ ಉಪಕರಣಗಳು ಲಭ್ಯವಾಗುವಂತೆ ಮತ್ತು ಅವು ಯಾವುದೇ ಅಧಿಕಾರಶಾಹಿಯ ಕಿರಿಕಿರಿಯಿಲ್ಲದೆ ಸುಲಭವಾಗಿ ಜನರಿಗೆ ದಕ್ಕುವಂತೆ ಮಾಡಬೇಕು.ಮತ್ತು ಜನರಿಗೆ ಈ ಬಗ್ಗೆ ಅರಿವೂ ಮೂಡಿಸಬೇಕು.

ಇದನ್ನೆಲ್ಲ ಬಿಟ್ಟು,ಕೇವಲ ಕಠಿಣ ಕಾನೂನುಗಳನ್ನು ತರುವುದರಿಂದ ಮಲಹೊರುವಂತ ಮತ್ತು ಬರಿಗೈಯಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸುವಂತ ಅಮಾನವೀಯ ಪಿಡುಗುಗಳು ಕೊನೆಯಾಗುವುದಿಲ್ಲ,ಯಾವುದೇ ಸಮಸ್ಯೆಯ ಪರಿಹಾರವಿರುವುದು ಸಮಸ್ಯೆಯ ಆಳ-ಅಗಲ ಮತ್ತು ಮೂಲಕ್ಕಿಳಿದು ನೋಡಿದಾಗ ಮಾತ್ರ.ಸರ್ಕಾರಗಳು ಈಗಲಾದರೂ ಈ ಬಗ್ಗೆ ಯೋಚಿಸಬೇಕಿದೆ. ಅದನ್ನು ಬಿಟ್ಟು,ಸುಮ್ಮನೇ ಕಾನೂನು,ಶಿಕ್ಷೆ ಅಂತ ಬೊಬ್ಬಿರಿಯುತಿದ್ದರೆ, ಮತ್ತೆ ಮತ್ತೆ ಇಂತ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ.

ನಮ್ಮ ಸರ್ಕಾರಗಳು ರೂಪಿಸುವ ಕಾನೂನುಗಳು ಮತ್ತು ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ,ಅವನ್ನು ಇನ್ನಷ್ಟು ಜಟಿಲಗೊಳಿಸುತ್ತಲೇ ಸಾಗಿವೆ ಅನಿಸುತ್ತದೆ.ಉದಾಹರಣೆಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯಿಂದು ಕುಟುಂಬಗಳನ್ನು ಮುರಿಯುತ್ತಿರುವ ಪ್ರಕರಣಗಳೇ ಹೆಚ್ಚಾಗಿವೆ.ಅದೇ ರೀತಿಯಲ್ಲಿ ತೀರಾ ಇತ್ತೀಚೆಗೆ,ಕರ್ನಾಟಕ ಸರ್ಕಾರ ಜಾರಿಗೆ ತರಲು ಯೋಜಿಸಿದ್ದ ಮೌಢ್ಯ ವಿರೋಧಿ ಕಾಯ್ದೆಯೂ ಕೂಡ ಹಾಸ್ಯಾಸ್ಪದವಾಗಿತ್ತು. ನಾವೀಗ ೨೦೧೪ರಲ್ಲಿ ಇದ್ದರೂ ನಮ್ಮ ಕಾನೂನುಗಳು ೧೮೬೧ರಲ್ಲೇ ಇವೆ! ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ ಆರ್ಟಿಕಲ್ ೩೭೭ ಜಾರಿಯಾಗಿದ್ದು ಬ್ರಿಟೀಶ್ ಆಡಳಿತದಲ್ಲಿ ೧೮೬೧ರಲ್ಲಿ.

ನಮ್ಮ ಸಾಮಾಜಿಕ ಪರಿಸರ,ನಡವಳಿಕೆಯನ್ನು ಪಾಶ್ಛಾತ್ಯ ಸಮಾಜ ವಿಜ್ನಾನದ ಮಾನದಂಡಗಳ ಮೂಲಕ ಅರ್ಥಮಾಡಿಕೊಂಡು ರೂಪಿಸುವ ಕಾನೂನುಗಳು ಸಮಾಜದ ಸಮಸ್ಯೆಗಳನ್ನು ಪರಿಹರಿಸಿ,ಎಲ್ಲರನ್ನೂ ಒಗ್ಗೂಡಿಸುವುದಕ್ಕಿಂತ, ಸಮಸ್ಯೆಗಳ ಸ್ವರೂಪವನ್ನು ಬದಲಿಸಿ,ಸಮಾಜದ ನಡುವೆ ಒಡಕುಂಟು ಮಾಡುವಂತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಮಾಜವನ್ನು, ಪಾಶ್ಛಾತ್ಯ ಸಮಾಜ ವಿಜ್ನಾನದ ಮಾನದಂಡಗಳ ಮೂಲಕ ನೋಡುವುದನ್ನು ನಿಲ್ಲಿಸಿ ಅಕಾಡೆಮಿಕ್ ಆಗಿ ನಮ್ಮದೇ ನೆಲೆಯಲ್ಲಿ ಸಮಾಜ ವಿಜ್ನಾನ ಅಧ್ಯಯನ ಕೈಗೊಳ್ಳುವುದು ಈ ಹೊತ್ತಿನ ತುರ್ತುಗಳಲ್ಲಿ ಒಂದಾಗಿದೆ.

1 ಟಿಪ್ಪಣಿ Post a comment
  1. tuLuva
    ಫೆಬ್ರ 20 2014

    ಎಷ್ಟೋ ಬಾರಿ ನಮ್ಮ ಸರಕಾರಗಳು ಸಮಸ್ಯೆಯ ಮೂಲ ಹುಡುಕುವ ಬದಲು ಸಮಸ್ಯೆಯ ಲಕ್ಷಣಗಳನ್ನಷ್ಟೇ ತಾತ್ಕಾಲಿಕ್ವಾಗಿ ಶಮನಗೊಳಿಸಿಬಿಡುತ್ತಾರೆ, ಇದು ಸುಲಭದ ದಾರಿ ಅಲ್ಲವೇ? ವಿವಿಧ ಮೀಸಲಾತಿಗಳು, ಚಿನ್ನ ಕೊಳ್ಳಬೇಡಿರೆಂದು ಚಿದಂಬರಂ ಕರೆ ಕೊಡುವುದು ಎಲ್ಲವೂ ಇದೆ ಮಾದರಿಗೆ ಸೇರುತ್ತವೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments