ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 20, 2014

ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 3

‍ನಿಲುಮೆ ಮೂಲಕ

– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoಜಾತಿ ವರ್ಗೀಕರಣ

ಜಾತಿ ವರ್ಗೀಕರಣದ ಬಗ್ಗೆ ಅನೇಕ ಜನಾಂಗ ಅಧ್ಯಯನಕಾರರು ಮತ್ತು ಸಮಾಜಶಾಸ್ತ್ರಜ್ಞರುಗಳು ವಿವರಣೆಗಳನ್ನು ನೀಡಿದರೂ ಸಹ ಅದರ ಬಗೆಗಿನ ಅಸ್ಪಷ್ಟತೆ ಹಾಗೆಯೇ ಮುಂದುವರೆದಿದೆ. ಈ ಸಂಗತಿಯ ಬಗ್ಗೆ ಅಧ್ಯಯನಕಾರರು ನೀಡಿರುವ ವಿವರಣೆಗಳನ್ನು ನೋಡುತ್ತಾ ಹೋದಂತೆ ಮುಖ್ಯವಾದ ಕೆಲವು ಸಮಸ್ಯೆಗಳಿರುವುದು ಕಂಡುಬರುತ್ತವೆ. ಅವುಗಳನ್ನು ಕೆಳಗಿನಂತೆ ನೋಡೋಣ.

ಜಾತಿ, ಉಪ-ಜಾತಿ – ರಚನಾಂಶದ ಸಮಸ್ಯೆ: ಜನಾಂಗ ಮತ್ತು ಸಮಾಜಶಾಸ್ತ್ರ ಅಧ್ಯಯನಕಾರರು ಜಾತಿ, ಉಪ-ಜಾತಿಯ ರಚನಾಂಶಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ನೀಡುವಾಗ ಒಳವಿವಾಹ ಪದ್ಧತಿ(Endogamy)ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದಾರೆ, ಮತ್ತು ಇಂದಿನ ಸಮಾಜಶಾಸ್ತ್ರಜ್ಞರುಗಳು ಜಾತಿ, ಉಪ-ಜಾತಿಯ ರಚನಾಂಶವೆಂದರೆ ಒಳವಿವಾಹ ಪದ್ಧತಿ ಎಂದೇ ನಿಖರವಾಗಿ ಹೇಳುತ್ತಾರೆ. ಅಧ್ಯಯನಕಾರರು ಇಷ್ಟು ನಿಖರತೆಯಿಂದ ಹೇಳಿದರೂ ಸಹ ಜಾತಿಯ ರಚನಾಂಶದ ಕುರಿತಂತೆ ಸ್ಪಷ್ಟತೆಯಿಲ್ಲ. ಒಳವಿವಾಹ ಪದ್ಧತಿಯು ಜಾತಿಯ ರಚನಾಂಶ ಎಂದು ಒಬ್ಬ ಅಧ್ಯಯನಕಾರನು ತನ್ನ ಅಧ್ಯಯನದ ತಿರುಳನ್ನು ಮುಂದಿಟ್ಟರೆ, ಇಲ್ಲ ಒಳವಿವಾಹ ಪದ್ಧತಿಯು ಉಪ-ಜಾತಿಯ ನಿರ್ಣಾಯಕ ರಚನಾಂಶ ಎಂದು ಮತ್ತೊಬ್ಬ ಅಧ್ಯಯನಕಾರನು ಪ್ರತಿವಾದವನ್ನು ಮುಂದಿಡುವುದು ಕಂಡುಬರುತ್ತದೆ. ಇದರ ಜೊತೆಗೆ (ಏಕಕಾಲದಲ್ಲಿಯೇ) ಜಾತಿ, ಉಪ-ಜಾತಿ ಎರಡು ಘಟಕಗಳೂ ಸಹ ಒಳ ವಿವಾಹ ಪದ್ಧತಿಯ ಗುಂಪುಗಳು ಎಂಬ ವಾದಗಳೂ ಕೂಡ ಲಭ್ಯವಿದೆ. ಅಧ್ಯಯನಕಾರರ ವಿವರಣೆಗಳನ್ನು ಗಮನಿಸಿದರೆ ಒಳವಿವಾಹ ಪದ್ಧತಿಯು ಜಾತಿ, ಉಪ-ಜಾತಿ ಮತ್ತು ಕೆಲವೊಮ್ಮೆ ಉಪ-ಉಪ-ಜಾತಿಯ ರಚನಾಂಶವೂ ಸಹ ಆಗುತ್ತದೆ. ಹಾಗೂ ಏಕಕಾಲದಲ್ಲಿಯೇ ಇದು ಜಾತಿ ಮತ್ತು ಅದರ ಉಪ-ಜಾತಿಗಳ ರಚನಾಂಶವೂ ಸಹ ಆಗುತ್ತದೆ. ಈ ವಿವರಣೆಗಳು ಮುಂದಿನ ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತಿವೆ; ಜಾತಿಯು ಒಳವಿವಾಹ ಪದ್ಧತಿಯ ಘಟಕವಾಗಿ ಮತ್ತು ಅದರ ಉಪ-ಜಾತಿಗಳೂ ಸಹ ಒಳವಿವಾಹ ಪದ್ಧತಿಯ ಘಟಕಗಳಾದರೆ ಜಾತಿಯು ಅದರ ಉಪ-ಜಾತಿಗಳೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತದೆ? ಹಾಗೆಯೇ ಒಂದು ಜಾತಿಯ, ಉಪ-ಜಾತಿಗಳು ಮಧ್ಯೆ ವೈವಾಹಿಕ ಸಂಬಂಧ ಏರ್ಪಡುವುದಿಲ್ಲ ಎಂದಾದ ಮೇಲೆ ಉಪ-ಜಾತಿಗಳು ಪರಸ್ಪರ ಯಾವ ರೀತಿಯ ಸಂಬಂಧವನ್ನು ಹೊಂದಿರುತ್ತವೆ? ಆದ್ದರಿಂದ ಯಾವ ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಅಥವಾ ಯಾವ ಇನ್ನೊಂದು ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಉಪ-ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಸ್ಪಷ್ಟತೆಯಿಲ್ಲ.

ವರ್ಗೀಕರಿಸುವ ವಿಧಾನದಲ್ಲಿನ ಸಮಸ್ಯೆ: ಜಾತಿ ಮತ್ತು ಉಪ-ಜಾತಿಗಳ ವರ್ಗೀಕರಣದ ವಿಧಾನವೂ ಸಹ ಚರ್ಚಾಸ್ಪದವಾಗಿದೆ. ಇದರ ಬಗ್ಗೆ ಈಗಾಗಲೇ ನಡೆದಿರುವ ಸಂಶೋಧನೆಗಳನ್ನು ಆದರಿಸಿ ಜಾತಿ ವರ್ಗೀಕರಣ ವಿಧಾನದಲ್ಲಿರುವ ಸಮಸ್ಯೆಯನ್ನು ಗುರುತಿಸಬಹುದು; ಸಮಾಜದಲ್ಲಿ ಜಾತಿ, ಉಪ-ಜಾತಿ, ಮತ್ತು ಉಪ-ಉಪ-ಜಾತಿ ಎಂಬ ವ್ಯವಸ್ಥಿತ ವರ್ಗೀಕರಣವು ಕಂಡುಬರುತ್ತದೆ ಎಂದು ಕೆಲವರು ವಾದಿಸಿದರೆ, ಇದಕ್ಕೆ ಪ್ರತಿಯಾಗಿ ಜಾತಿ ವರ್ಗೀಕರಣ ಎನ್ನುವುದು ಅಸ್ತಿತ್ವದಲ್ಲಿಯೇ ಇಲ್ಲ. ಬದಲಿಗೆ ಜಾತಿ ಎನ್ನುವುದು ಹಲವು ಜಾತಿಗಳ ಸಮುಚ್ಚಯವಾಗಿದೆ ಎನ್ನುವ ವಾದವೂ ಇದೆ.

ಪರಿಕಲ್ಪನಾತ್ಮಕ ಸಮಸ್ಯೆ: ಜಾತಿ ವರ್ಗೀಕರಣವನ್ನು ಸೂಚಿಸಲು ಬಳಸಿರುವ ಪರಿಕಲ್ಪನೆಗಳು ವೈವಿಧ್ಯಮಯವಾಗಿವೆ. ಜನಗುಂಪುಗಳನ್ನು ಗುರುತಿಸಲು ಜನಾಂಗ ಮತ್ತು ಸಮಾಜಶಾಸ್ತ್ರ ಅಧ್ಯಯನಕಾರರು ಈ ಮುಂದಿನ ಪರಿಕಲ್ಪನೆಗಳನ್ನು ಬಳಸಿರುವುದು ವಿವರಣೆಗಳಲ್ಲಿ ಕಂಡು ಬರುತ್ತದೆ; ‘ಜಾತಿ, ಉಪ-ಜಾತಿ, ‘ವಿಭಾಗ, ಉಪ-ವಿಭಾಗ’, ‘ಬುಡಕಟ್ಟು’, ‘ವರ್ಗ, ದೇಶ, ‘ಪ್ರಮುಖ ಉಪ-ಜಾತಿ, ಸಣ್ಣ ಉಪ-ಜಾತಿ’. ಒಂದೆಡೆ ಅಧ್ಯಯನಕಾರರು ಈ ಪರಿಕಲ್ಪನೆಗಳನ್ನು ಕೆಲವು ನಿರ್ದಿಷ್ಟ ರಚನಾಂಶ ಮತ್ತು ಲಕ್ಷಣಗಳಿಂದ ಗುರುತಿಸಿದರೆ ಇನ್ನೊಂದೆಡೆ, ಈ ಭಿನ್ನ ರಚನಾಂಶ ಹೊಂದಿರುವ ಜನಗುಂಪುಗಳನ್ನು ಒಂದೇ ಜಾತಿಯಡಿಯಲ್ಲಿ ವರ್ಗೀಕರಿಸುವ ಕಾರ್ಯ ಮಾಡಿದ್ದಾರೆ. ಉದಾಹರಣೆಗೆ- ‘ಜಾತಿಯು ಅನೇಕ ಉಪ-ವಿಭಾಗಳನ್ನು ಹೊಂದಿದೆ, ಈ ಉಪ-ವಿಭಾಗಗಳು ಪುನಃ ಅನೇಕ ಶಾಖೆಗಳಿಂದ ಕೂಡಿದೆ’ ಎಂದೋ ಅಥವಾ ‘ಬುಡಕಟ್ಟು ಅನೇಕ ಜಾತಿ’ಗಳನ್ನು ಹೊಂದಿದೆ ಎಂದೋ ವಿವರಿಸುತ್ತಾರೆ. ಈಗ ಏಳುವ ಪ್ರಶ್ನೆ ಎಂದರೆ ಭಿನ್ನ ರಚನಾಂಶಗಳನ್ನು ಹೊಂದಿರುವ ಭಿನ್ನ ಜನಗುಂಪುಗಳನ್ನು ಒಂದೇ ಜಾತಿಯಡಿಯಲ್ಲಿ ವರ್ಗೀಕರಿಸಲು ಸಾಧ್ಯವೇ? ಏಕೆ ನಿಖರವಾಗಿ ಜನಗುಂಪುಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ? ಮತ್ತು ಪರಿಕಲ್ಪನೆಗಳ ಈ ಕಲಸುಮೇಲೋಗರದ ವಗರ್ೀಕರಣದಿಂದ ಜನಗುಂಪುಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವೇ?

ಸಮಾಜಶಾಸ್ತ್ರ ಅಧ್ಯಯನಕಾರರು ಜಾತಿಯ ಬಗ್ಗೆ ವಿವರಣೆಗಳನ್ನು ನೀಡಿದರೂ ಸಹ ಯಾವ ಅಧ್ಯಯನಕಾರರು ಜಾತಿಯು ಅಸ್ಪಷ್ಟತೆಗಳಿಂದ ಮುಕ್ತವಾಗಿದೆ ಎಂದು ಹೇಳುವುದಿಲ್ಲ. ಬದಲಿಗೆ ಜಾತಿ ಎಂದರೇನು ಎನ್ನುವುದಕ್ಕೆ ನಿಖರವಾದ ಉತ್ತರವನ್ನು ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದು ಸಾಕಷ್ಟು ವಿದ್ವಾಂಸರ ಅಭಿಪ್ರಾಯವಾಗಿದೆ. ಜಾತಿ ವಿವರಣೆಗಳು ಅಸ್ಪಷ್ಟತೆಗಳಿಂದ ತುಂಬಿದೆ ಎನ್ನುವುದಕ್ಕೆ ಕೆಲವು ನಿದರ್ಶನಗಳನ್ನು ಅಧ್ಯಯನಕಾರರ ವಿವರಣೆಗಳಲ್ಲಿಯೇ ಗುರುತಿಸಬಹುದು: ‘ಜಾತಿಯು ಒಂದು ಮಾದರಿಯನ್ನು ಹೊಂದಿಲ್ಲ’, ‘ಒಂದು ಸ್ವರೂಪವನ್ನು ಹೊಂದಿಲ್ಲ, ‘ಚಲನಶೀಲವಾದದ್ದು’, ‘ನಿರ್ದಿಷ್ಟ ಹೆಸರಿನಿಂದ ಗುರುತಿಸುವ ಸಮಸ್ಯೆ’ ‘ಏಕ ವ್ಯಾಖ್ಯಾನವನ್ನು ಹೊಂದಿಲ್ಲ, ಇವುಗಳು ಮುಖ್ಯವಾದ ಸಮಸ್ಯೆಗಳಾಗಿವೆ. ಈಗ ಏಳುವ ಪ್ರಶ್ನೆಗಳೆಂದರೆ, ಜಾತಿವ್ಯವಸ್ಥೆ ಸೂಚಿಸುವ ರಚನಾಂಶಗಳ ಆದಾರದ ಮೇಲೆ ಏಕೆ ಜಾತಿ ಮತ್ತು ಜಾತಿ ವರ್ಗೀಕರಣ ಸಂಗತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ? ಜಾತಿ ಪರಿಕಲ್ಪನೆಯೇ ಸಮಸ್ಯೆಗಳಿಂದ ಕೂಡಿರುವಾಗ ಜಾತಿ ವರ್ಗೀಕರಣವನ್ನು ಮಾಡಲು ಸಾಧ್ಯವೇ? ಇದರಿಂದ, ಜಾತಿ ವರ್ಗೀಕರಣವನ್ನು ಅರ್ಥಮಾಡಿಕೊಳ್ಳಲು ಜಾತಿ ಪರಿಕಲ್ಪನೆಯು ನೆರವಾಗುತ್ತದೆ ಎನ್ನುವುದಕ್ಕೆ ಯಾವುದೇ ಸುಳಿವಿಲ್ಲದಿರುವುದು ಕಂಡುಬರುತ್ತದೆ.

ಜಾತಿಯ ಬಗ್ಗೆ ಆಳವಾಗಿ ಆದ್ಯಯನ ಮಾಡಿದ ವಿದ್ವಾಂಸರೆ ಗುರುತಿಸುವಂತೆ ಜಾತಿಯನ್ನು ವಿವರಿಸುವಲ್ಲಿ ಹಲವಾರು ಅಡಚಣೆಗಳಿವೆ. ಇವರು ವಿವರಿಸುವಂತೆ, ಭಾರತೀಯ ಸಮಾಜವು ವೈವಿಧ್ಯಮಯ ಜನಗುಂಪುಗಳನ್ನು ಹೊಂದಿರುವುದರಿಂದ ಏಕಪ್ರಕಾರದ ಅಥವಾ ಏಕಸ್ವರೂಪದ ಜನಗುಂಪುಗಳನ್ನು ಕಾಣಲು ಸಾಧ್ಯವಿಲ್ಲ; ಅಲ್ಲದೆ ಏಕಪ್ರಕಾರದ ಜನಗುಂಪುಗಳನ್ನು ಗುರುತಿಸುವಲ್ಲಿ ತೊಡಕುಗಳಿವೆ. ಇಂಥ ತೊಡಕುಗಳ ವಿಚಾರವನ್ನು ಚರ್ಚಿಸಿದ ಪ್ರಮುಖರು ಬ್ಲಂಟ್, ರೈನ್ ಮತ್ತು ಹಟ್ಟನ್.

ಈ ನಿಟ್ಟಿನಲ್ಲಿ ಜೆ. ಹೆಚ್. ಹಟ್ಟನ್ ಅವರು ಹೇಳುವುದು ಹೀಗೆ: ಸಮಾಜದ ಅರೆ-ಜೈವಿಕ ವ್ಯವಸ್ಥೆಯಲ್ಲಿ ಜಾತಿ ಒಂದು ಸಾಮಾಜಿಕ ಘಟಕವಾಗಿರುವಾಗ… ಈ ಘಟಕದ ಸ್ವರೂಪವು ಸಾಕಷ್ಟು ಅನಿರ್ದಿಷ್ಟವಾಗಿದ್ದು ಇದರ ಒಂದು ಸಂಕ್ಷಿಪ್ತ ವ್ಯಾಖ್ಯಾನವನ್ನು ಕೊಡುವುದು ಕಷ್ಟಕರ ಎಂಬುದು ಇಲ್ಲಿನ ಸತ್ಯ (1946, 50,). ಈ ವಿವರಣೆಯಲ್ಲಿ ಎರಡು ಪ್ರಮುಖ ಅಂಶಗಳನ್ನು ಗುರುತಿಸಬಹುದು; ಅ) ಜಾತಿಯ ಸ್ವರೂಪವು ಅನಿರ್ದಿಷ್ಟವಾಗಿರುವುದು ಮತ್ತು ಆ). ಅನಿರ್ದಿಷ್ಟವಾಗಿರುವುದರಿಂದ ಇದಕ್ಕೆ ಖಚಿತವಾದ ವ್ಯಾಖ್ಯಾನವನ್ನು ನೀಡಲು ಆಗದು.

ಜಾತಿಗೆ ಏಕರೂಪದ ವ್ಯಾಖ್ಯಾನ ನೀಡಲು ಅಸಾಧ್ಯ ಎಂಬ ಇಂಗಿತವು ಲೀಚ್ ಅವರ ವಾದದಲ್ಲಿ ಕಂಡುಬರುತ್ತದೆ. ಅವರು ಹೇಳುವುದು ಹೀಗೆ: ಭಾರತದಲ್ಲಿನ ಹಿಂದೂ ಸಮಾಜವು ಅಪ್ಪಟ ಜಾತಿಗಳಿಂದ ಕೂಡಿದ ಸಮಾಜ. ಜಾತಿಯ ವ್ಯಾಖ್ಯಾನಗಳು ಹಲವು. ಒಬ್ಬ ಲೇಖಕನ ವ್ಯಾಖ್ಯಾನವು ಮತ್ತೊಬ್ಬ ಲೇಖಕನ ವ್ಯಾಖ್ಯಾನಕ್ಕಿಂತ ವಿಭಿನ್ನವೇ ಆಗಿರುತ್ತದೆ. ಒಂದೇ ವ್ಯಾಖ್ಯಾನವು ಕಂಡುಬರುವುದಿಲ್ಲ. ಜಾತಿಯನ್ನು ಸಾಮಾಜಿಕ ಸ್ತರಗಳ ರಚನೆಯ ಒಂದು ವಿಶೇಷ ಪ್ರಕಾರ ಎಂದು ಕೆಲವರು ಪರಿಗಣಿಸುತ್ತಾರೆ. ಇನ್ನುಳಿದವರು ಅದನ್ನು ಹಿಂದು ಭಾರತಕ್ಕೆ ಮಾತ್ರ ಸಮಂಜಸವೆನಿಸುವ ಒಂದು ‘ಜನಾಂಗಿಕ ಪ್ರಕಾರ’ ಎಂದು ಪರಿಗಣಿಸುತ್ತಾರೆ. ಇನ್ನೂ ಹಲವರು ಅದನ್ನು ‘ಅಖಿಲ ಭಾರತೀಯ ನಾಗರಿಕತೆಯ ಜೊತೆ ಅವಿಭಾಜ್ಯವಾಗಿ’ ಬೆಸೆದುಕೊಂಡ, ಹಾಗೂ ‘ಜಾಗತಿಕವಾಗಿ ಅನ್ವಯವಾಗದ’ ಒಂದು ‘ರಚನಾತ್ಮಕ ವಿದ್ಯಮಾನ’ ಎಂದು ಪರಿಗಣಿಸುತ್ತಾರೆ (1960, 5).

ಹಟ್ಟನ್ ಮತ್ತು ಲೀಚ್ ಕ್ರಮವಾಗಿ ಜಾತಿಯ ಸ್ವರೂಪ ಮತ್ತು ವ್ಯಾಖ್ಯಾನ ನೀಡುವಲ್ಲಿ ಇರುವ ತೊಂದರೆಗಳನ್ನು ವಿಶ್ಲೇಷಿಸಿದರೆ ಡೇವಿಸ್, ಅವರು ಜಾತಿಯನ್ನು ಅರ್ಥಮಾಡಿಕೊಳ್ಳಲು ಇರುವ ಇನ್ನೊಂದು ತೊಡಕಿನ ಸಂಗತಿಯನ್ನು ಈ ಮುಂದಿನಂತೆ ವಿವರಿಸುತ್ತಾರೆ. ಜಾತಿಯನ್ನು ನಿರ್ದಿಷ್ಟ ಹೆಸರಿನಿಂದ ಗುರುತಿಸುವ ಬದಲಿಗೆ ಒಂದು ಕಸುಬಿನ ಹೆಸರನ್ನೋ, ಒಂದು ಪ್ರದೇಶದ ಹೆಸರನ್ನೋ, ಅಥವಾ ಒಂದು ಭಾಷೆಯ ಹೆಸರಿನಿಂದ ಗುರುತಿಸಿದಾಗ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ… ಇಲ್ಲವೇ ಮೇಲುಸ್ತರದಲ್ಲಿರುವ ಒಂದು ಜಾತಿಯ ಹೆಸರನ್ನು ಕೊಟ್ಟುಕೊಳ್ಳಲು ವೈಯಕ್ತಿಕ ಮಟ್ಟದಲ್ಲೂ ಹಾಗೂ ಜಾತಿಗಳಿಂದಲೂ ಆಗಾಗ ವ್ಯಾಪಕವಾದ ಪ್ರಯತ್ನಗಳಾಗುತ್ತವೆ (1951, 163).

ಹಾಗೆಯೇ ಮಾದರಿಗೆ ಸಂಬಂಧಿಸಿದ ಸಮಸ್ಯೆಯ ಕುರಿತು ಮಾತನಾಡುವ ಬ್ಲಂಟ್ ಅವರು ಇಲ್ಲಿಯ ಸಮಸ್ಯೆಯನ್ನು ವಿವರಿಸುವುದು ಹೀಗೆ: ಒಂದೇ ಮಾದರಿಯ ಆಧಾರದ ಮೇಲೆ ಎಲ್ಲ ಜಾತಿಗಳನ್ನೂ ರಚಿಸಲಾಗಿಲ್ಲ. ಈ ವ್ಯವಸ್ಥೆಯು ಸ್ವಲ್ಪ ಸ್ವಲ್ಪ ನಿಧಾನವಾಗಿ ಬೆಳೆದಿರುವಂಥದ್ದು. ಅಲ್ಲದೆ ವಿಭಿನ್ನ ಮೂಲದಿಂದ ಬಂದಿರುವ ಜಾತಿಗಳ ಸ್ವರೂಪವೂ ಕೂಡ ವಿಭಿನ್ನವೇ (1931,).

ರೈನ್, ಅವರು ತಮ್ಮ Caste in Modern Ceylon ಗ್ರಂಥದಲ್ಲಿ ಈ ಕುರಿತು ವಿವರಿಸುವುದು ಹೀಗೆ: ಹಿಂದೂ ಸಾಮಾಜಿಕ ಸಂದರ್ಭದೊಳಗೆ ಹಲವು ಬಗೆಯ ಸಾಮಾಜಿಕ ರಚನಾವ್ಯವಸ್ಥೆಗಳು ಕಂಡುಬರುವ ಕಾರಣದಿಂದಲೇ ಜಾತಿಗೆ ಒಂದು ಸಮಾಧಾನಕರ ವ್ಯಾಖ್ಯಾನವು ಕಂಡುಬರುವುದಿಲ್ಲ. ಜಾತಿಯ ಒಂದು ನಿರ್ದಿಷ್ಟ ರಚನೆಗೆ ಹೊಂದಿಕೊಳ್ಳುವಂಥ ವಿವರಣೆಯನ್ನು ಕೊಡಲು ಜಾತಿಯೂ ಯಾವುದೇ ಖಚಿತ ವ್ಯಾಖ್ಯಾನವನ್ನು ಹೊಂದಿಲ್ಲ (1953, 18,).
ಈ ಮೂಲಭೂತ ಸಮಸ್ಯೆಗಳನ್ನು ಹೊರತುಪಡಿಸಿಯೂ ಕೂಡ, ಕಾಣುವ ಮತ್ತೊಂದು ಸಮಸ್ಯೆಯ ಅಂಶ ಎಂದರೆ ಜಾತಿಯು ಅಸ್ಥಿರ ಸ್ವರೂಪವನ್ನು/ಗುಣವನ್ನು ಹೊಂದಿದೆ ಎಂಬ ಸಂಗತಿ. ಈ ಜಾತಿ ಅಸ್ತಿರತೆಯ ಬಗ್ಗೆ ಹಟ್ಟನ್ ವಿವರಿಸುವುದು ಹೀಗೆ: “ಜಾತಿಯನ್ನು ವ್ಯಾಖ್ಯಾನಿಸಲು ಇರುವ ಇನ್ನೊಂದು ಅಡ್ಡಿ ಆತಂಕವೆಂದರೆ ಜಾತಿಯು ಅಸ್ಥಿರ ಲಕ್ಷಣವನ್ನು ಹೊಂದಿರುವುದು. ಜಾತಿಯ ಒಟ್ಟು ಸ್ವರೂಪವು ವಿಭಜನೆಯಾದಾಗಲೋ, ಇಲ್ಲವೇ ಈಚಿನ ದಿನಗಳಲ್ಲಿ ಕಾಣುವ ಹಾಗೆ ಹಲವು ಸಮರೂಪಿ ಜಾತಿಗಳು ಒಂದರೊಳಗೊಂದು ವಿಲೀನಗೊಳ್ಳುವ ಕಡೆಗೆ ತಿರುಗಿದಾಗಲೋ ಇಂಥ ಅಸ್ಥಿರತೆಯು ಉಂಟಾಗುತ್ತದೆ”… (1961, 50,). ಜಾತಿಯು ಚಲನಶೀಲವಾಗಿರುವುದರಿಂದ ಇದನ್ನು ವಿವರಿಸಲು ಆಗುತ್ತಿಲ್ಲ ಎನ್ನುವುದನ್ನು ಹಟ್ಟನ್ ರವರು ಖಾಯಬರ್ತಾ ಎಂಬ ಜಾತಿಯ ನಿದರ್ಶನವನ್ನು ನೀಡುವ ಮೂಲಕ ವಿವರಿಸುತ್ತಾರೆ. ಒಂದು ಜಾತಿಯು ತನ್ನ ಮೂಲ ಜಾತಿಯಿಂದ ಬೇರ್ಪಟ್ಟು ಹೊಸದಾದ ಜನಗುಂಪನ್ನು ಸೃಷ್ಟಿಸಿಕೊಳ್ಳುವ ಮೂಲಕ ಹೊಸ ಹೆಸರನ್ನು ಪಡೆಯಬಹುದು ಅಥವಾ ಒಂದು ಜಾತಿಯು ಇನ್ನೊಂದು ಜಾತಿಯೊಂದಿಗೆ ವಿಲೀನಗೊಳ್ಳುವ ಮೂಲಕ ಹೊಸದಾದ ಹೆಸರು ಹಾಗೂ ಅಸ್ತಿತ್ವವನ್ನು ಪಡೆದುಕೊಳ್ಳಬಹುದು. ಆದ್ದರಿಂದ ಜಾತಿಯ ಸ್ವರೂಪವನ್ನು ಕುರಿತು ಖಚಿತವಾಗಿ ವಿವರಿಸಲು ಆಗದ ಸ್ಥಿತಿಯಿದೆ. ಇದರಿಂದ ಜಾತಿಯು ಚಲನಶೀಲ/ಅಸ್ಥಿರ ಗುಣವನ್ನು ಹೊಂದಿದೆ ಎನ್ನುವುದು ಕಂಡುಬರುತ್ತದೆ ಎಂದು ಹಟ್ಟನ್ ವಿವರಿಸುತ್ತಾರೆ.

ಈ ವಿವರಣೆಗಳು ಸ್ಪಷ್ಟಪಡಿಸುವಂತೆ ಜಾತಿಯ ಸ್ವರೂಪವನ್ನು ಅರ್ಥೈಸಿಕೊಳ್ಳುವುದು ಸುಲಭದ ಕೆಲಸವಲ್ಲ. ಜಾತಿಯನ್ನು ಯಾವುದೇ ಒಂದು ರಚನಾಂಶದಿಂದ ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ, ಜಾತಿಯು ‘ವಿಭಿನ್ನ ಪ್ರಕಾರದ ಸ್ವರೂಪವನ್ನು ಹೊಂದಿರುವಂತಹದ್ದು’, ‘ಭಿನ್ನ ಮಾದರಿಗಳನ್ನು ಹೊಂದಿದೆ’, ‘ಏಕ ರೂಪದ ನಿರ್ದಿಷ್ಟ ವ್ಯಾಖ್ಯಾನವಿಲ್ಲ’, ‘ಅದು ಚಲನಶೀಲವಾಗಿದೆ’, ಹಾಗೂ ಒಂದು ‘ನಿರ್ದಿಷ್ಟವಾದ ಸಂರಚನೆಯನ್ನೂ ಹೊಂದಿಲ್ಲ. ಆದ್ದರಿಂದಲೇ ಜಾತಿ ಸಂಗತಿಯು ಒಗಟಿನಂತಾಗಿದೆ ಎಂಬುದು ಅಧ್ಯಯನಕಾರರದ್ದೇ ಅಭಿಮತವಾಗಿದೆ. ಇದರ ಜೊತೆಯಲ್ಲೇ ‘ಪಾರಿಭಾಷಿಕ ಪದಗಳ ಸಮಸ್ಯೆ’, ‘ವಿವಿಧ ಸಾಮಾಜಿಕ ಸಂಘಟನೆಗಳ ವ್ಯವಸ್ಥೆ’, ‘ವರ್ಣ ಮತ್ತು ಜಾತಿಯ ಬಗ್ಗೆ ಗೊಂದಲ’ ಈ ಎಲ್ಲ ಅಂಶಗಳು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ.

ಕರ್ನಾಟಕದಲ್ಲಿ ಮಾಡಿದ ಕೆಲವು ಕ್ಷೇತ್ರಾಧ್ಯಯನದಲ್ಲಿ ಕಂಡುಬಂದಂತೆ ಕೆಲವು ಜಾತಿಗಳ ಗುರುತಿಸುವಿಕೆಯಲ್ಲಿ ಇರುವ ಅಡಚಣೆಗೆ ಈ ಕೆಳಗಿನ ಕೆಲವು ನಿದರ್ಶನಗಳನ್ನು ಕೊಡಬಹುದು.

ಮಾಲೆ ಬ್ರಾಹ್ಮಣರು – ಶೃಂಗೇರಿಯಲ್ಲಿ ಕಂಡುಬಂದಂತೆ, ಬ್ರಾಹ್ಮಣ ಎಂದು ಕರೆದುಕೊಳ್ಳುವ ಶಿವಳ್ಳಿ, ಕೋಟ, ಕಂದಾವರ, ಬಬ್ರುಕಮ್ಮೆ, ಹೊಯ್ಸಳ ಕರ್ನಾಟಕದವರು ಇವರನ್ನು ಬ್ರಾಹ್ಮಣ ಎಂದು ಗುರುತಿಸುವುದಿಲ್ಲ (ಇವರುಗಳು ನೀಡುವ ಕಾರಣವೆಂದರೆ, ಮಾಲೆ ಬ್ರಾಹ್ಮಣರು ಶುದ್ಧ ಬ್ರಾಹ್ಮಣರಲ್ಲ, ಮೂಲದಲ್ಲಿ ಕುರುಬ, ನಾಯಕ, ಇತರೆ ಜಾತಿಗಳೊಂದಿಗಿನ ಸಂಕರದಿಂದ ಮಾಲೆ ಬ್ರಾಹ್ಮಣರು ಉಗಮವಾದವರು) ಆದರೆ ಈ ಸಮುದಾಯವದವರು ತಾವು ಮಾಲೆ ಬ್ರಾಹ್ಮಣರು ಎಂದೇ ಕರೆದುಕೊಳ್ಳುತ್ತಾರೆ. ಊರಿನ ಇತರೆ ಕೆಲವು ಜಾತಿಯವರು ಮಾಲೆಯರನ್ನು ಬ್ರಾಹ್ಮಣರು ಎಂದು ಕರೆದರೆ ಇನ್ನೂ ಕೆಲವು ಜಾತಿಯವರು ಇವರನ್ನು ಬ್ರಾಹ್ಮಣರಲ್ಲ ಎಂದು ಕರೆಯುತ್ತಾರೆ.
ಕುಂಚಿಟಿಗ – ಇವರನ್ನು ಕುಂಚಿಟಿಗ ಲಿಂಗಾಯಿತರು ಎಂದು ಮತ್ತು ಕುಂಚಿಟಿಗ ಒಕ್ಕಲಿಗರು ಎಂದೂ ಗುರುತಿಸುತ್ತಾರೆ. ಇಷ್ಟೇ ಅಲ್ಲದೇ ಕೇವಲ ಕುಂಚಿಟಗರು ಎಂದೂ ಗುರುತಿಸಿಕೊಳ್ಳುವವರು ಇದ್ದಾರೆ. ಕುಂಚಿಟಿಗ ಲಿಂಗಾಯಿತರು ಮತ್ತು ಒಕ್ಕಲಿಗರ ಮಧ್ಯೆ ಯಾವುದೇ ರೀತಿಯ ವೈವಾಹಿಕ ಸಂಬಂಧ ನಡೆಯುವುದಿಲ್ಲ.
ಮೇದರು – ಎಸ್.ಟಿ ಗೆ ಸೇರಿದ ಮೇದರು ಎರಡು ರೀತಿಯಾಗಿ ಗುರುತಿಸಿಕೊಳ್ಳುವುದಿದೆ; ಕೇವಲ ಮೇದರು ಮತ್ತು ಮೇದ ಲಿಂಗಾಯಿತರು ಎಂದು. ಮೇದ ಲಿಂಗಾಯಿತರು ಲಿಂಗಧಾರಣೆ ಮಾಡಿಕೊಂಡರೆ ಮೇದ ಎಂದು ಗುರುತಿಸಿಕೊಳ್ಳುವವರು ಲಿಂಗಧರಿಸಿಕೊಳ್ಳುವುದಿಲ್ಲ. ಇವರ ಮಧ್ಯೆ ವೈವಾಹಿಕ ಸಂಬಂಧ ನಡೆಯುವುದಿಲ್ಲ.
ಅಗಸ ಲಿಂಗಾಯಿತರು- ಇವರು ಅಗಸ ಲಿಂಗಾಯಿತರು ಎಂದು ಕರೆದುಕೊಂಡರೂ ಸಹ ಸರ್ಕಾರಿ ದಾಖಲಾತಿಯಲ್ಲಿ ಕೇವಲ ಅಗಸರು ಎಂದೆ ಬರೆಸಿಕೊಳ್ಳುತ್ತಾರೆ.

ಲಿಂಗಾಯತ, ಕುರುಬ, ದಲಿತ ಹಾಗೂ ಈಡಿಗ ಸಂಘಟನೆಗಳನ್ನು ತೆಗೆದುಕೊಂಡು ಅಸ್ಮಿತೆ ರಾಜಕೀಯದಲ್ಲಿ ಜಾತಿ ಸಂಘಟನೆಗಳು ಎದುರಿಸುತ್ತಿರುವ ಸಮಸ್ಯೆಗಳ ಚಿತ್ರಣವನ್ನು ಮುಂದಿನ ಸಂಚಿಕೆಯಲ್ಲಿ ವಿವರಿಸಲಾಗುವುದು..(ಮುಂದುವರೆಯುವುದು)

ನಾಡು ನುಡಿ: ಮರುಚಿಂತನೆ ಭಾಗ 1,

ನಾಡು ನುಡಿ: ಮರುಚಿಂತನೆ ಭಾಗ 2

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments