ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 22, 2014

ವಿಡಂಬನೆ : ರಾಮನ್ ದೇವನ್ ಟೀ!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

dantavillada_kathegalu_nilumeಗುದ್ಲಿಂಗ ತನ್ನ ಗುಡ್ಲು ಹೋಟ್ಲಲ್ಲಿ ಪುಕ್ಕಟೆ ಟೀ ಕೊಡ್ತಿದಾನೆ ಅಂತ ಊರೆಲ್ಲಾ ಗುಲ್ಲಾಗಿತ್ತು. ಎಂಜಲು ಕೈಲಿ ಕಾಗೆ ಓಡಿಸ್ದೋನು, ಟೀಗೆ ಹುಣಿಸೇಬೀಜ ಕುಟ್ ಹಾಕಿ ಬೇಸ್ ಕೊಡ್ತಿದ್ದೋನು, ಮೂರು ದಿನದ ಹಿಂದಿನ ಒಡೆದ ಹಾಲಿಗೆ ಸೋಡಾ ಹಾಕ್ತಿದ್ದೋನು ಪುಕ್ಕಟೆ ಟೀ ಕೊಡೋಕೆ ಹೇಗೆ ಸಾಧ್ಯ ಅಂತ ಅಚ್ಚರಿ ಪಟ್ಟು ಪರ್ಮೇಶಿ ಪಟಾಲಂ ಗುದ್ಲಿಂಗನ ಟೀ ಹೋಟ್ಲು ಹತ್ರ ದೌಡಾಯಿಸುದ್ರು. ಗುದ್ಲಿಂಗನ ಹೋಟ್ಲು ತುಂಬಾ ಜನವೋ ಜನ! ಎಲ್ಲಾ ಪುಕ್ಕಟೆ ಟೀ ಹೀರ್ತಿದ್ರು, ಹಾಗೇ ಗುದ್ಲಿಂಗನ ಟೀ ಬಗ್ಗೆ, ರಾಜಕೀಯದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದಿದ್ವು. ಎಲ್ಲಾ ಬೆಕ್ಕಸ ಬೆರಗಾಗಿ ನೋಡುದ್ರು.

                ‘ಏನೋ ಗುದ್ಲಿಂಗ? ಬಿಟ್ಟಿ ಟೀ ಸಮಾರಾಧನೆ ಮಾಡ್ತಿದೀಯ..’ಕೇಳಿದ ಪರ್ಮೇಶಿ

                ‘  ಹೂ ಕಣ್ರೋ! ಯಾವ್ದೋ ಕಂಪನಿಯೋರು ಸ್ಯಾಂಪಲ್‍ಗೆ ಅಂತ ಟೀ ಕೊಟ್ಟಿದ್ರು. ಅದನ್ನ ನಾನ್ಯಾಕೆ ದುಡ್ಡಿಗೆ ಮಾರ್ಕೊಬೇಕು ಅಂತ ಜನಕ್ಕೆ ಫ್ರೀ ಟೀ ಕೊಡ್ತಿದೀನಿ. ಕೆರೆಯ ನೀರನು ಕೆರೆಗೆ ಚೆಲ್ಲಿ’ ಅಂತಾರಲ್ಲ ಹಾಗೆ ಎಂದು ಹಲ್ಕಿರಿದ.

                ‘ ಕೆರೆಯ ನೀರನು ಕೆರೆಗೆ ಚೆಲ್ಲಿ ಅಲ್ಲ,ಕೆರೆಯ ನೀರನು ಟೀಗೆ ಚೆಲ್ಲಿ ಅಂತ ಹೇಳು’ ವ್ಯಂಗ್ಯವಾಡಿದ ದೀಕ್ಷಿತ.

                ‘ ಹೌದು,ಅದ್ಯಾವುದಪ್ಪ ಪುಕ್ಕಟೆ ಪುಡಿ ಕೊಡ್ತಿರೋ ಟೀ ಕಂಪನಿ?’

                ‘ಅದು ಎನ್‍ಎಂಸಿ ಕಂಪನಿ ಕಣ್ರಲೇ’

                ‘ ಅಂದ್ರೆ ನೀನು ದೇಸೀ ಚಹಾ ಬಿಟ್ಟು ಎಂಎನ್‍ಸಿ ಟೀ ಮಾರ್ತಿದೀಯಾ? ಥೂ ದ್ರೋಹಿ’ ಅವಡುಗಚ್ಚಿದ ಸೀನ.

                ‘ ಲೇಯ್! ಇದು ವಿದೇಶೀನೂ ಅಲ್ಲ ಪರದೇಶಿನೂ ಅಲ್ಲ, ಅಪ್ಪಟ ಹದಿನಾರಾಣೆ ಸ್ವದೇಶಿ ಕಣಲೇ,

                ‘ ಈಗ ತಾನೆ ನೀನೇ ಎಂಎನ್‍ಸಿ ಅಂದೆ. ಈಗ ದೇಸೀ ಅಂತಿದೀಯ, ನಿಂಗೇನು ತಲೆ ಕೆಟ್ಟಿದೆಯಾ?’

                ‘ ಇದು ಎಂಎನ್‍ಸಿ ಅಲ್ಲಲೇ,  ಎನ್‍ಎಂಸಿ ದೇಶೀ.ಇದೆಲ್ಲಾ ಟ್ರೇಡ್ ಸೀಕ್ರೆಟ್ ನೀವು ಕೇಳ್ಳು ಬಾರದು, ನಾವು ಹೇಳ್ಳೂಬಾರದು’

                ಪರ್ಮೇಶಿ ಪಟಾಲಂ ‘ಎಲಾ ಇವ್ನ? ನಮ್ಗೇ ಚಳ್ಳೆಹಣ್ಣು ತಿನ್ನುಸ್ತಿದಾನಲ್ಲ’ ಅಂತ ಯೋಚ್ನೆಗೆ ಬಿದ್ರು. ಇದ್ದಕ್ಕಿದ್ದಂತೆ ದೀಕ್ಷಿತಂಗೆ ಏನೋ ಹೊಳೀತು.’  ಯುರೇಕಾ! ಲೇಯ್! ಇದು ಎನ್‍ಎಂಸಿ ಅಂದ್ರೆ ನಮೋ ಚಾಯ್ ಕಣ್ರೋ’ ಎಂದು ಕಿರುಚಿದ. ಗುದ್ಲಿಂಗ ಪೆಚ್ಚಾದ.

                ‘ ಅದ್ಯಾವುದೋ ನಮೋ ಚಾಯ್ ?’

                ‘ ಲೇಯ್, ನಮೋ ಮೋಡಿ ಟೀ ಮಾರ್ಕಂಡು ಇದ್ದೋರು ಅಂತ ಕೈ ಪಕ್ಷದೋರು ಮೂತಿ ತಿವಿದಿದ್ರಲ್ಲ. ಅದಕ್ಕೇ ಕಮಲ ಪಕ್ಷದೋರು ‘ಚಾಯ್ ಪೇ ಚರ್ಚಾ’ ಅನ್ನೋ ಹೊಸ ಆಂದೋಲನ ಮಾಡ್ತಾರಂತೆ, ಅಂದ್ರೆ ದೇಶದ ಉದ್ದಗಕ್ಕೂ ಚಹಾ ಹಂಚಿ ಜನರನ್ನ ಚರ್ಚೆಗೆ ಹಚ್ಚೋದು! ಈ ಗುದ್ಲಿಂಗನೂ ಅದ್ನೇ ಶುರು ಮಾಡಿದಾನೆ’

                ‘ ಕಳ್‍ನನ್ ಮಗ್ನೇ, ನಮ್ಗೇ ಫ್ರೀ ಸ್ಯಾಂಪಲ್ಲು ಅಂತ ರೈಲು ಬಿಡ್ತೀಯಾ? ಹೆಂಗೂ ಪುಕ್ಕಟೆ ಅಲ್ವಾ? 4 ಫುಲ್‍ಡೋಸ್ ಟೀ ತಗಂಡು ಬಾ’ ಆರ್ಡರ್ ಮಾಡಿದ ಪರ್ಮೇಶಿ

                ‘ ಲೇಯ್, ಬೀಡಿ ಸೇದಿ ಟೀ ಕುಡಿದು ಧೂಳು ಕೊಡವಿಕೊಂಡು ಎದ್ ಹೋಗೋದಲ್ಲ, ಈ ಟೀ ಕುಡೀತಾ ಚರ್ಚೆ ಮಾಡ್ಬೇಕು” ಗುದ್ಲಿಂಗ ಶರತ್ತು ಹಾಕಿದ.

                ‘ ಏನ್ ಚರ್ಚೆ ಮಾಡ್ಬೇಕು?’

                ‘ ಇಷ್ಟು ವರ್ಷ ಕೈ ನಮ್ಗೆ ಡಸ್ಟ್ ಟೀ,ಗಸ್ಟ್ ಟೀ ಕುಡ್ಸಿದೆ. ನಮ್ ಮೋಡಿ ಅವರಿಗೆ ಒಳ್ಳೇ ಸ್ಟ್ರಾಂಗ್ ಟೀ ಮಾರಿ ಅಭ್ಯಾಸ ಇದೆ. ಅವರನ್ನ ಪ್ರಧಾನಿ ಮಾಡುದ್ರೆ ಒಳ್ಳೇ ಟೀ ಕುಡುಸ್ತಾರೆ’ ನಾಲ್ವರೂ ಮುಖ ಮುಖ ನೋಡಿಕೊಂಡು ಸಮ್ಮತಿ ಸೂಚಿಸಿದ್ರು.

                ‘ ಆಯ್ತು ಬಿಡಪ್ಪ, ಅರಳಿಕಟ್ಟೆ ಹತ್ರ ಹೊಡೆಯೋ ಕಾಡು ಹರಟೇನ ಇಲ್ಲೇ ಹೊಡುದ್ರಾಯ್ತು’

                ‘ ಆದ್ರೆ ಟೀ ಮಾತ್ರ ಸಕತ್ತಾಗಿರಬೇಕು. ಕೈಲಾಸಂ ಹೇಳ್ತಿದ್ರಲ್ಲ ‘ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಚಾಗರಂ’ ಅಂತ. ಹಾಗೆ ತೊಳ್ ನೀರಾಗಿರಬಾರದು. ಗಟ್ಟಿ ಪಾಯಸ ಇದ್ದ ಹಾಗಿರಬೇಕು.’ ಎಂದ ದೀಕ್ಷಿತ

                ‘ಹೂ ಕಣೊ, ಮಾಮೂಲಿ ಕೆಟಿ(ಕಡೇಲಿ ಉಳ್ದಿರೋ ಟೀ) ಗಸ್ಟ್ ಟೀ ಎಲ್ಲಾ ಬೇಕಾಗಿಲ್ಲ.ಸೋಡಾ ಹಾಕದ ಒಳ್ಳೇ ಹಾಲಲ್ಲಿ ಟೀ ಮಾಡಿ ಕೊಡ್ಬೇಕು’

                ‘ಆಯ್ತು ಬಿಡ್ರಲೇ ! ಒಳ್ಳೇ ಟೀನೇ ಕೊಡ್ತೀನಿ’

                ಗುದ್ಲಿಂಗ ತಲೆಯಾಡಿಸಿ ಜಗ್ಗಿನಲ್ಲಿದ್ದ ಟೀಗೆ ಇನ್ನೊಂದಿಷ್ಟು ಸೊಪ್ಪು ಹಾಕಿ ಬೇಸಿ, ಕಾಸಿ ಒಂದು ಮೀಟರ್ ಎತ್ತರದಿಂದ ಸೊಯ್ಯನೆ ಲೋಟಕ್ಕೆ ಅಳೆದು ನಾಕು ಕಪ್ ಟೀ ತಂದು ಟೇಬಲ್ ಮೇಲೆ ಕುಟ್ಟಿದ.ನಾಲ್ವರೂ ಟೀ ಕಪ್ ಕೈಗೆತ್ತಿಕೊಂಡರು.

                ‘ನೀನು ಏನೇ ಹೇಳು, ನಮ್ ಯಶೋಧಾ ಗಲ್ ಗಲ್ ಅಂತ ಗೆಜ್ಜೆ, ಬಳೆ ಶಬ್ಧ ಮಾಡಿ ಕೊಡೋ ಟೀನಲ್ಲಿರೋ ಮತ್ತು, ಗಮ್ಮತ್ತು ಇದ್ರಲ್ಲಿಲ್ಲ. ಯಶೋಧನ್ನ ನೋಡ್ತಾ ಚಾ ಕುಡೀತಿದ್ರೆ ‘ಚಾ ಆಹಾ!’ ಅನ್ನೋ ಹಾಗಿರ್ತಿತ್ತು’

                ‘ ಲೇಯ್! ನನ್ಮಕ್ಳಾ, ಟೀ ಪುಕ್ಕಟೆ ಕೊಟ್ಟಿರೋದು ಯಶೋಧನ್ನ ಮೇಲೆ ಚರ್ಚೆ ಮಾಡ್ಲಿ ಅಂತ ಅಲ್ಲ,ದೇಶದ ಭವಿಷ್ಯದ ಬಗ್ಗೆ, ಬದಲಾವಣೆ ಬಗ್ಗೆ ಚರ್ಚೆ ಮಾಡಿ ಅಂತ, ಗೊತ್ತಾಯ್ತಾ?’

                ‘ಈ ಟೂ ಬೈ ಫೋರ್ ಟೀಗೆ ಇದು ಬೇರೆ ಕೇಡು’ ಎಂದು ನಾಲ್ವರೂ ಮುಖ ಹುಳ್ಳಗೆ ಮಾಡಿಕೊಂಡರು.

                ‘ಸರಿ ಸರಿ! ಈ ಟೀಗೆ ಏನಂತ ಹೆಸರಿಟ್ಟಿದೀರಿ?’ಪರ್ಮೇಶಿ ಮಾತು ತೆಗೆದ.

                ‘ನಮ್ದು ಎಲ್ಲಾ ರಾಮನ ಬ್ರಾಂಡೇ. ಅದಕ್ಕೇ ಟೀಗೆ ಕಣ್ಣನ್ ದೇವನ್ ಟೀ ತರ ರಾಮನ್ ದೇವನ್ ಟೀ ಅಂತ ಹೆಸರಿಟ್ಟಿದೀವಿ’ ಎಂದು ಗುದ್ಲಿಂಗ.

                ‘ ಓಹ್! ಸೂಪರ್..ಅಲ್ಲ ಗುದ್ಲಿಂಗ, ಹೀಗೆ ಲೋಟದಲ್ಲಿ ಟೀ ಕೊಟ್ರೆ ಜನಕ್ಕೆ ಲೋಟನೇ ಆಮಿಶವಾಗಿ ಕೊಟ್ರು ಅನ್ನೋ ಹಾಗಾಗಲ್ಲವಾ?

                ‘ ಇಲ್ಲ ಅದಕ್ಕೇ ನಾವು ಪ್ಲಾಸ್ಟಿಕ್ ಕಪ್‍ನಲ್ಲಿ ಟೀ ಕೊಡ್ತೀವಿ’

                ‘ ಲಕ್ಷಾಂತರ ಪ್ಲಾಸ್ಟಿಕ್ ಲೋಟ ಕೊಟ್ರೆ ಅದ್ರಿಂದ ಪರಿಸರ ಮಾಲಿನ್ಯ ಆಗಲ್ವಾ?’

                ‘ ಹೌದಲ್ವಾ? ಹಾಗಿದ್ರೆ ನಾವು ಟೀನ ಮಣ್ಣಿನ ಕಪ್‍ನಲ್ಲಿ ಕೊಡ್ತೀವಿ.’

                ‘ಮಣುಕು ವಾಸನೆ ಬರಲ್ವಾ?’

                ‘ ಮಣುಕು ವಾಸನೆ ಅಲ್ಲಲೇ , ಅದು ಮಣ್ಣಿನ ವಾಸನೆ, ನಮ್ ಮೋಡಿ ಸಾಹೇಬ್ರು ಮಣ್ಣಿನ ಮಗನಾಗಿ ಚಹಾಮಾರಿ ಮುಂದೆ ಬಂದೋರು. ಮಣ್ಣಿಂದ ಕಾಯ ಮಣ್ಣಿಂದ ಅಂತ ನೆಲ ಸಂಸ್ಕøತಿ ಬಗ್ಗೆ, ಶ್ರಮ ಸಂಸ್ಕøತಿ ಬಗ್ಗೆ ಜಾಗೃತಿ ಮೂಡಿಸೋದೇ ನಮ್ಮ ಉದ್ದೇಶ’

                ‘ ಹಿಂದೆ ಲಾಲು ಇದೇ ತರ ರೈಲ್ವೇ ಸ್ಟೇಷನ್‍ನಲ್ಲಿ ಮಣ್ಣಿನ ಲೋಟದಲ್ಲಿ ಟೀ ಕೊಡೋ ಯೋಜನೆ ಜಾರಿಗೆ ತಂದಿದ್ರಲ್ಲ..’

                ‘ ಅದು ರೈಲು ಬಿಡೋ ಯೋಜನೆ ಬಿಡು. ನಮ್ದು ಹಾಗಲ್ಲ’

                ‘ ನಿಮ್ದೂ ಎಲೆಕ್ಷನ್ ರೈಲೇ ಬಿಡು,  ಅಲ್ಲ ಈ ವಿಸ್ಕಿ, ಬ್ರಾಂಡಿ ಕುಡ್ಕಂಡು ರೂಢಿ ಆಗಿರೋರಿಗೆ ಟೀ ರುಚಿ ಹಿಡಿಯುತ್ತಾ? ರಾಮನ್ ದೇವನ್ ಟೀ ಕಿಕ್ ಹೊಡೆಯುತ್ತಾ?’

                ‘ ನಮ್ ರಾಮನ್ ದೇವನ್ ಟೀನಲ್ಲಿ ರಾಮರಸ ಅಂದ್ರೆ ರಾಮನ ಭಕ್ತಿ ರಸ ಇರುತ್ತೆ. ಜನ ಪಾನಕದ ತರ ಕುಡೀತಾರೆ ನೋಡ್ತಿರಿ’

                ‘ ಅದ್ಸರಿ ಟೀ ಕುಡಿಸೋದ್ರ ಮೂಲ ಉದ್ದೇಶ?’

                ‘ ಜಾಗೃತಿ! ಸತ್ತಂತಿಹರನು ಬಡಿದೆಬ್ಬರಿಸು ಅಂತ ಕುವೆಂಪು ಹೇಳಿಲ್ವಾ? ಟೀ ಕುಡುದ್ರೆ ನಿದ್ದೆ ಬರಲ್ಲ. ಮನಸ್ಸು ಎಚ್ಚರದ ಸ್ಥಿತೀಲಿರುತ್ತೆ. ಅದಕ್ಕೇ ಚಹಾ ಕುಡುಸ್ತಿರೋದು. ಈ ತರಹ ತಲೆಹರಟೆ ಬಿಟ್ಟು ಅಭಿಪ್ರಾಯ ಮಂಡನೆ, ಪ್ರಶ್ನೆ, ಚರ್ಚೆ ಇವನ್ನ ಮಾಡಿ.’ ಗುದ್ಲಿಂಗ ಆರ್ಡರ್ ಮಾಡಿದ.

                ‘ ಸರಿ, ಅಭಿಪ್ರಾಯ: ತಿನ್ನೋದು ಏನೂ ಇಲ್ದೆ ಬರೀ ಟೀ ಕುಡ್ಸಿ ಪ್ರಧಾನಿ ಆಗೋದು ಅಷ್ಟು ಸುಲಭ ಅಲ್ಲ’

                ‘ ಪ್ರಶ್ನೆ:  ರಾಮನ್ ದೇವನ್ ಟೀಗೆ ಮುಂಚೆ ಯಾರಾದ್ರೂ  ಮಲ್ಯನ್ ದೇವನ್ ಓಟಿ ಕುಡ್ಸುದ್ರೆ ಏನ್ ಮಾಡ್ತೀರಿ ?

                ‘ಚರ್ಚೆ ವಿಷಯ:  ಕೇಜ್ರೀವಾಲರ ಭ್ರಷ್ಟರ ಹಿಟ್ ಲಿಸ್ಟ್ ಮತ್ತು ರಾಮನ್ ದೇವನ್ ಟೀಕಪ್ಪಿನಲ್ಲಿ ಬಿರುಗಾಳಿ.’

                ‘ ಅಯ್ಯೋ ನನ್ ಮಕ್ಳಾ! ಪುಕ್ಸಟೆ ಟೀ ಕುಡ್ದು ನಮ್ ಕಾಲ್ ಎಳೀತೀರಾ? ಏಳ್ರೋ ಮೇಲೆ’ ಗುದ್ಲಿಂಗ ಸೌಟು ಕೈಗೆತ್ತಿಕೊಳ್ಳುವಷ್ಟರಲ್ಲಿ ನಾಲ್ವರೂ ಟೀ ಕಪ್ ಎಸೆದು ಪರಾರಿಯಾಗಿದ್ದರು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments