Skip to content

ಮಾರ್ಚ್ 1, 2014

3

ಒಂದು ಊರಿನ ಕಥೆ

by ನಿಲುಮೆ

– ಹಂಸಾನಂದಿ

ಅಡುಗೆಒಂದೂರಿತ್ತಂತೆ. ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ.  ಎಲ್ರೂ ಅವರವರ ಮನೆಯಲ್ಲಿ ಅಡುಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ  ಬಡಿಸ್ತಿದ್ದರಂತೆ.

ಆಗ ಊರಿಗೊಬ್ಬ ಹೊಸ ಡೊಣೆ ನಾಯಕ ಬಂದು ಠರಾವು ಮಾಡಿದನಂತೆ. ಈಗ ಇರೋ ಅಡುಗೆಗೆಳಲ್ಲಿ ಪೌಷ್ಟಿಕತೆ ಸಾಲದು. ಯಾವ ಅಡಿಗೇಭಟ್ಟರಿಗೂ ಒಂದು ಚೂರೂ ಹೊಸತು ಮಾಡೋ ಆಸೆಯಾಗಲಿ, ಕ್ರಿಯಾಶೀಲತೆಯಾಗಲೀ ಒಂದೂ ಇಲ್ಲ. ಅದಲ್ಲದೆ ಇದು ಪೀಟ್ಜ್ಝಾ ಬರ್ಗರ್ ಕಾಲ. ನಾವೂ ಎಲ್ಲರ ಸಮಕ್ಕೆ ಇರಬೇಕಾದರೆ ಹೊಸತನ್ನೇನಾದರೂ ತರಲೇ ಬೇಕು. ಅದು ಬಿಟ್ಟು  ಅಪ್ಪ ಹಾಕಿದ ಆಲದ ಮರ ಅಂತ ಬರೀ ಇಡ್ಲಿ ಸಾಂಬಾರ್ ತಿನ್ನುತ್ತಾ ಇರಬೇಕೇನು? ಪ್ರಪಂಚದಲ್ಲಿ ಇರೋದೆಲ್ಲ ನಾವು ಮಾಡೋಕಾಗ್ದೇನು?   ನಾವು ಒಂದು ಹೊಸ ಆಡಿಗೇ ಕಾರ್ಖಾನೆಯನ್ನೇ ತೆಗೆಯೋಣ ಅಂದನಂತೆ. ಹಲವಾರು  ಜನ ಚಪ್ಪಾಳೆ ತಟ್ಟಿದರಂತೆ.  ಒಂದಷ್ಟು ಜನ ಅವನನ್ನೂ ಹಿಂಬಾಲಿಸಿದರಂತೆ. ಒಂದಷ್ಟು ಜನ ಸುಮ್ಮನೇ ಕುತೂಹಲದಿಂದ ನೋಡಿದರಂತೆ. ಒಂದಷ್ಟು ಜನ ಈ ಡೊಣೆನಾಯಕಂದೇನು, ನಾವೇ ನೋಡ್ಕೋತೀವಿ ನಮ್ಮ ನಮ್ಮ ಅಡಿಗೇ ಮನೇಲೇನೇ, ಅಕ್ಕಿ ರೊಟ್ಟಿ ಬದಲು ಜೋಳದ ರೊಟ್ಟಿ ಮಾಡ್ತೀವಿ. ಮೆಣಸಿನ ಕಾಯಿ ಬದಲು ಕಾಳು ಮೆಣಸು ಹಾಕಿ ಕೂಟಿನ ರುಚಿ ಚೆನ್ಣಾಗಿರತ್ತೋ ಇಲ್ವೋ ಅಂತ. ಅದಕ್ಕೆ ಕಾರ್ಖಾನೆ ಯಾಕೆ ಬೇಕು ಅಂದರಂತೆ. ಆದರೆ ಗುಂಪಿನ ಗದ್ದಲದಲ್ಲಿ ಅವರ ಮಾತು ಯಾರಿಗೂ ಕೇಳಲಿಲ್ಲವಂತೆ.

ಇತ್ತ ಕಡೆ ಕಾರ್ಖಾನೆ ಕೆಲಸ ಜೋರಾಗಿ ನಡೀತಿತ್ತಂತೆ. ಒಬ್ಬೊಬ್ಬರು ಒಂದೊಂದು ಗೋಡೆ ಕಟ್ತಾ ಇದ್ದರಂತೆ.  ಮೊದಲು ಜಾಗ ಅಳತೆ ಮಾಡದೇ ಇದ್ದಿದ್ದರಿಂದ ಗೋಡೆಗಳು ಒಂದಕ್ಕೊಂದಕ್ಕೆ ಎಲ್ಲೆಲ್ಲೋ ಅಡ್ಡ ಬಂದವಂತೆ. ಆದರೂ ಪರವಾಗಿಲ್ಲ, ನಾಲ್ಕಾರು ಒಲೆ ಹೂಡಿದರೆ ಸರಿ ಅಡುಗೆಗೆ ಅಂತ ಒಲೆ ಹೂಡಿದ್ದೂ ಆಯ್ತಂತೆ. ಕೆಲವರು ಮಾಡಿರೋ ಅಡುಗೆಯ ಪದಾರ್ಥಗಳನ್ನು ಹೊತ್ತು ತಂದರಂತೆ. ಕೆಲವರು ಮಸಾಲೆ ಪದಾರ್ಥ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಏಲಕ್ಕಿ ಲವಂಗ ಇತ್ಯಾದಿ.  ಒಗ್ಗರಣೆ ಹಾಕೋ ವಸ್ತುಗಳೆಲ್ಲ ಇನ್ನೊಬ್ಬರು ಇಟ್ಟರಂತೆ. ಅಕ್ಕಿ, ಬೇಳೆ , ಗೋದಿ ರಾಗಿ ಜೋಳಗಳೆಲ್ಲ ಇನ್ನೊಂದು ಕಡೆ ಇಟ್ಟರಂತೆ.  ಸರಿ ಹೊಸ ಅಡಿಗೇ ಶುರು.  ಚಿತ್ರಾನ್ನಕ್ಕೆ ನಿಂಬೆ ಹುಳಿ ಬದಲು ಚಕ್ಕೋತದ ಹುಳಿ ಬಿಟ್ಟರಂತೆ.  ಬಿಸಿಬೇಳೆ ಹುಳಿಯನ್ನಕ್ಕೆ ಅನ್ನದ ಬದಲು ಸ್ವಲ್ಪ ಅವಲಕ್ಕಿ ಹಾಕಿ ನೋಡಿದರಂತೆ. ಇಡ್ಲಿಗೆ ರವೆ ಜೊತೆಗೆ ಸ್ವಲ್ಪ ರಾಗಿ ಹಿಟ್ಟೂ ಬೆರೆಸಿದರಂತೆ. ರುಚಿಯಾಗೇ ಆಗಿತ್ತಂತೆ. ನೋಡಿ, ನಾವು ಮಾಡೋ ಅಡುಗೆ ಸಿಕ್ಕಾಪಟ್ಟೆ ಚೆನ್ನಾಗಿರುತ್ತೆ, ಚಪ್ಪರಿಸಿ ತಿನ್ನಿ ಅಂತ ಎಲ್ಲರಿಗೂ ನೀಡಿದರಂತೆ.

ಅದೇನೋ ಇಂಗ್ಲಿಷ್ ಗಾದೆ ಇದೆಯಂತಲ್ಲ, ಟೂ ಮೆನೀ ಕುಕ್ಸ್ ಸ್ಪಾಯ್ಲ್ ದ ಬ್ರಾತ್ ಅಂತ ಹಾಗೆ ಆಯ್ತಂತೆ.  ಗುಂಪಿನಲ್ಲಿ ಒಬ್ಬರಿಗೆ ಗೊತ್ತಿರೋದು ಇನ್ನೊಬ್ಬರಿಗೆ ಗೊತ್ತಿಲ್ಲ. ಕೆಲವರದೋ ಬರೀ ಪುಸ್ತಕದ ಬದನೇಕಾಯಿ. ಯಾವತ್ತೂ  ಒಂದು ಉಪ್ಪಿಟ್ಟು ಮಾಡಿ ಗೊತ್ತಿಲ್ಲದಿದ್ದರೂ, ಮೃಷ್ಟಾನ್ನ ಕೂಡ ಮಾಡಬಲ್ಲೆ ಅಂತ ಬರೀ ಬಾಯಿ ಮಾತಂತೆ.  ಕೆಲವರಿಗೆ ಅಲ್ಪ ಸ್ವಲ್ಪ ಅಡುಗೆ ಗೊತ್ತು. ಇನ್ನೊಬ್ಬರಿಗೆ ಸುತ್ತು ಕೆಲಸ ಮಾಡಿ ಗೊತ್ತೇ ಹೊರತು, ಅಡುಗೆ ಮನೆ ಕಡೆ ನೋಡಿಯೂ ಪರಿಚಯವಿಲ್ಲ. ಕೆಲವರಿಗೆ ದೊಡ್ಡ ಪಾತ್ರೆಯಲ್ಲಿ ಅನ್ನ ಒಂದು ಮಾಡಿಡೋಕೆ ಗೊತ್ತು ಹೊರತು  ಒಪ್ಪ ಓರಣ ಗೊತ್ತಿಲ್ಲ. ಇನ್ನು ಕೆಲವರಿಗೆ ಸಾರಿಗೆ ತೊಗರೀಬೇಳೆ ಹಾಕ್ಬೇಕೋ ಕಡ್ಲೇಕಾಳು ಹಾಕ್ಬೇಕು ಅನ್ನೋದೂ ಗೊತ್ತಿಲ್ಲ.  ಆದ್ರೇನು, ಹಾಡ್ತಾ ಹಾಡ್ತಾ ರಾಗ ಅಲ್ವೇ. ಕಲ್ತುಕೊಂಡರಾಯ್ತು ಬಿಡಿ, ಏನು ಈ ಪ್ರಪಂಚದಲ್ಲಿ ಹುಟ್ಟಿದಾಗಲೇ ಯಾರಾದರೂ ಎಲ್ಲಾ ಕಲಿತಿರ್ತಾರೇನು ಅಂದನಂತೆ ಡೊಣೆ ನಾಯಕ.  ಒಂದಷ್ಟು ಜನ ಹೂಗುಟ್ಟಿದರಂತೆ. ಇನ್ನೊಂದಷ್ಟು ಜನ ಆಗಲೇ ತಮ್ಮ ಪಾಡಿಗೆ ತಾವೇ, ಅಕ್ಕಿ ಬೇಳೆ ರವೆ ಎಲ್ಲವನ್ನು ಮನಸ್ಸಿಗೆ ಬಂದಳತೆಯಲ್ಲಿ ಸೇರಿಸಿ ಒಲೆ ಮೇಲಿಟ್ಟ ಎಸರಿಗೆ ಸುರಿದರಂತೆ.

ಇದೆಲ್ಲದರ ನಡುವೆ ಇನ್ನೊಂದು  ಕಡೆ ಕೆಲವರು ಕೂತ್ಕೊಂಡು, ಇಟಲಿ ದೇಶದಲ್ಲಿ ಪೀಟ್ಜಾ ಮಾಡ್ತಾರಲ್ಲ, ಚೈನಾದಲ್ಲಿ ನೂಡಲ್ ಮಾಡ್ತಾರಲ್ಲ,  ಕೊರಿಯಾದಲ್ಲಿ ಇನ್ನೊಂದೇನೋ ಮಾಡ್ತಾರಲ್ಲ, ಅದೆಲ್ಲ ನಾವು ಗೋದಿ ಹಿಟ್ಟಿನಲ್ಲೇ ಯಾಕೆ ಮಾಡ್ಬಾರ್ದು? ಜೋಳದ ಹಿಟ್ಟಲ್ಲೇ ಯಾಕೆ ಮಾಡಬಾರದು? ಚೀಸ್ ಬದಲಿಗೆ ಅದಕ್ಕೆ ಮೊಸರೇ ಯಾಕೆ ಹಾಕ್ಬಾದ್ರು ಅಂತ ಲೆಕ್ಕಾಚಾರ ಹಾಕ್ತಿದ್ದರಂತೆ.  ಅಲ್ಲ, ಆಸೆಯಾದರೆ ನೂಡಲ್ನೇ ಒಂದು ಸಲ ತಿನ್ನಿ, ಪೀಟ್ಜಾನೇ ತಿನ್ನಿ, ಅದನ್ನ ಗೋದಿ ಹಿಟ್ಟಲ್ಲೇ ಮಾಡ್ಬೇಕು ಅನ್ನೋ ಹಠ ಯಾಕೆ ಅಂತ ಕೇಳಿದವರ್ನ, ಸುಮ್ನೇ ಕೂತ್ಕೊಳ್ರೀ, ಎಲ್ಲೆಲ್ಲಿ ಏನೇನಡುಗೆ ಮಾಡ್ತಾರೋ ಎಲ್ಲಾನೂ ನಾವು ನಮ್ಮಲ್ಲಿ ಸಿಕ್ಕೋ ಪದಾರ್ಥದಲ್ಲೇ ಮಾಡ್ತೀವಿ. ಹಾಗೆಲ್ಲಾ ಕಂಡಕಂಡವರ ಬಾಯಿರುಚಿಯ ದಾಸರಾಗೋಲ್ಲ ನಾವು ಅಂತ ಬಾಯಿ ಮುಚ್ಚಿಸಿದರಂತೆ.

ಅಡಿಗೇ ಮನೆ ಇನ್ನೊಂದು ಮೂಲೇಲಿ,  ಗಸಗಸೆ ಪಾಯಸಕ್ಕೆ ಏಲಕ್ಕಿ ಚೆನ್ನಾಗಿರತ್ತೆ ಅಂತ ಒಬ್ಬರಂದರಂತೆ. ಸರಿ ಮತ್ತೆ, ಅದನ್ನೇ ಗೊಜ್ಜು ಮಜ್ಜಿಗೆ ಹುಳಿ ಪಳದ್ಯಕ್ಕೂ ಸೇರಿಸೋಣ ಅಂದರಂತೆ ಇನ್ನೊಬ್ಬರು. ಅದೇನು ಪರವಾಗಿಲ್ಲ , ಯಾಕೆ ಗೊಜ್ಜಿಗೆ ಏಲಕ್ಕಿ ಯಾಕೆ ಬೇಡ ಅಂತ ಇನ್ನೊಬ್ಬರು ಜಗಳ ತೆಗೆದರಂತೆ.  ಇನ್ನೊಬ್ಬರು ಮಾಡಿದ್ದ  ಹುಗ್ಗಿಯಲ್ಲಿದ್ದ ಅವರೇಕಾಳುಗಳನ್ನೆಲ್ಲ ಹೆಕ್ಕಿ ಆರಿಸೀ ಆರಿಸೀ, ಕೊಬ್ಬರಿ ಮಿಠಾಯಿ ಮಾಡುತ್ತಿದ್ದ ಪಾತ್ರೆಗೆ ಬೆರೆಸಿದರಂತೆ.   ಆಗ ಯಾರೋ ಹೊರಗಡೆ ಕಾರ್ಖಾನೆ ಬಾಗಿಲು ಬಡಿದರಂತೆ. ಏನು ಕಥೆ ವಿಪರೀತ ಹೊಗೆ ಬರ್ತಿದೆಯಲ್ಲ, ಏನಾದ್ರೂ ಬೆಂಕಿ ಗಿಂಕಿ ಹತ್ತಿದೆಯಾ ವಿಚಾರಿಸೋಕೆ ಬಂದೆ ಅಂದ್ರಂತೆ. ಆಮೇಲೆ, ಇಲ್ಲಿ ನಡೆದ ವಿಷಯ ಎಲ್ಲ ಕೇಳಿ ,  ಆಗಲಪ್ಪ, ಹೊಸ ಅಡುಗೆ ಮಾಡೀ, ಯಾರು ಬೇಡ ಅಂದ್ರು? ಆದ್ರೆ ರುಚಿಯಾಗಿದೆಯಾ ನೋಡಿ, ಅದಕ್ಕೆ ತಕ್ಕ ಹಾಗೆ ಮಾಡಿ.  ಪಾಯಸಕ್ಕೆ ಚೆನ್ನಾಗಿರೋ ಏಲಕ್ಕಿ ನ ಗೊಜ್ಜಿಗೂ ಮಜ್ಜಿಗೆಗೂ ಹಾಕೋದು ಬೇಡ. ಅವರೇಕಾಳು ಹುಗ್ಗಿಗೆ ಹೊಂದುತ್ತೆ ಅಂದರೆ, ಕೊಬ್ಬರಿ ಮಿಠಾಯಿಗೂ ಅದು ಹಾಕಿದರೆ ಅದೇನು ಚೆನ್ನ   ಅಲ್ವೇ?  ಅಂದರಂತೆ. ’ಏಯ್’ ಅದನ್ನೆಲ್ಲಾ ಹೇಳೋಕೆ ನೀವ್ ಯಾರ್ರೀ? ಏಲಕ್ಕಿ ಗೊಜ್ಜು ಇಷ್ಟ ಆದೋರು ಹಾಕ್ಕೊಂಡು ತಿನ್ತಾರೆ, ಊಟ ತನ್ನಿಚ್ಛೆ ಅಲ್ವಾ?ನಾವು ಪಾಯಸಕ್ಕೆ ಮೆಣಸಿನಕಾಯಾದ್ರೂ ಹಾಕ್ತೀವಿ,  ಹುಣಿಸೇಹಣ್ಣಿನ ಒಗ್ಗರಣೇನಾದ್ರೂ ಹಾಕ್ತೀವಿ, ನಿಮ್ದೇನ್ರೀ ಕಾರುಬಾರು   ಅಂತ ಒಂದಷ್ಟು ಜನ ಅವನ ಮೇಲೆ ದೊಣ್ಣೆ ತಂದರಂತೆ.

ಅಲ್ಲ ಕಣ್ರಪ್ಪ , ಮಾಡಿದ ಅಡುಗೆ ರುಚಿಯಾಗಿರಬೇಕು, ಶುಚಿಯಾಗಿರಬೇಕು, ಊಟ ಮಾಡೋ ಹಾಗಿರಬೇಕು , ತಿಂದಿದ್ದು ಅರಗಬೇಕು, ಆರೋಗ್ಯಕ್ಕೆ ಒಳ್ಳೇದಾಗಿರಬೇಕು.  ಉಗ್ರಾಣದಲ್ಲಿ ಇದೆ ಅಂತ ಎಲ್ಲ ಬೆರೆಸಿ ಗೊಟಾಯಿಸಿದ್ರೆ ಸರೀನಾ?  ಅಷ್ಟಕ್ಕೂ ಈಗ ನಿಮ್ಮ ಮನೆಗಳಲ್ಲಿ ಈಗ ಮಾಡೋ ಅನ್ನ ಸಾರು ಹುಳಿ ಪಳದ್ಯ ಗಂಜಿ ಚಿತ್ರಾನ್ನ ಪಾಯಸ ಎಲ್ಲ ತಕ್ಕಮಟ್ಟಿಗೆ ಇದ್ದೇ ಇರತ್ತಲ್ಲ? ಅದು ಬಿಟ್ಟು ಒಂದೇ ಎಲ್ಲ ಗುಡಿಸಿ ಗುಂಡಾಂತರ ಮಾಡಿ ಎಲ್ಲ ಬದಲಾಯಿಸಿ ಮಾಡೋ ಅಡುಗೆ ಯಾಕೆ? ಒಂದು ವೇಳೆ ಏನಾದರೂ ಹೊಸರುಚಿ ಮಾಡಿದರೂ ಅದನ್ನ ಸ್ವಲ್ಪ ರುಚಿಯಾಗಿದೆಯಾ, ಊಟ ಮಾಡ್ಕಕಾಗತ್ತಾ ಅದನ್ನ ನೋಡಿ ಮಾಡೋದಲ್ವಾ ಅಂತ ಅವರು ಹೇಳ್ತಾ  ಇದ್ದ ಇದ್ದಹಾಗೆ ಮತ್ತೊಬ್ಬರು ಬಂದು ಇವರನ್ನ ಹಾಕ್ಕೊಂಡು ತದಕ್ರೀ , ಹಿಂದಿನಿಂದ ಇಂಥ ಜನಗಳದು ಇದ್ದಿದ್ದೇ ಕೆಟ್ಟಬುದ್ದ್ಜಿ, ಈಗಿನ  ಕಾಲದಲ್ಲಿ ಇವರ್ದೇನು ಗಂಟು? ಇವರ ತಾತನ ರಾಜ್ಯದ ಕಾಲವಲ್ಲ, ನಮ್ಮಾಳ್ತಕ್ಕೆ ನಾವು ಅಡುಗೆ ಮಾಡಿ ಬಡಿಸೋ ಹಕ್ಕನ್ನ ಕಿತ್ಕೊಳೋಕೆ ಇವರ್ಯಾರು? ಸರಿಯಾಗಿ ಗೊತ್ತಾಗೋ ತರಹ   ಹಾಕ್ರೋ ಸರಿಯಾಗಿ.  ತಿಳ್ಕೊಳ್ಳಲಿ  ಅನ್ನುತ್ತಿದ್ದ ಹಾಗೆ ದೊಣ್ಣೆಗಳು ಸರಿಯಾಗಿ ಬೀಳಲು ತೊಡಗಿದವಂತೆ …..

ಚಿತ್ರ ಕೃಪೆ: ಗೂಗಲೇಶ್ವರ (www.optibacprobiotics.co.uk)

Advertisements
3 ಟಿಪ್ಪಣಿಗಳು Post a comment
 1. ವಿಜಯ್ ಪೈ
  ಮಾರ್ಚ್ 2 2014

  ಇಲ್ಲಿ ಕೂಡ ಅಂತಹ ಒಬ್ಬ ದೊಣ್ಣೆನಾಯಕರು ಆಗಾಗ ಪ್ರತ್ಯಕ್ಷವಾಗಿ, ತಮ್ಮದೇ ಬ್ರಾಂಡಿನ ಅಪ್ಪಣೆಗಳನ್ನು ಹೊರಡಿಸುತ್ತಾರೆ..ಆಮೇಲೆ ಎಲ್ಲರಿಂದ ‘ಹೊಗಳಿಸಿ’ಕೊಂಡು ಮತ್ತೊಂದು ಲೇಖನಕ್ಕೆ ಜಿಗಿಯುತ್ತಾರೆ 🙂

  ಉತ್ತರ
 2. ಮಾರ್ಚ್ 3 2014

  ಇದು ಈಗ ಬರೀ ಒಂದು ಊರಿನ ಕಥೆಯಾಗಿ ಉಳಿಯದೆ ಎಲ್ಲಕಡೆಯ ಕಥೆಯಾಗಿರುವುದು ಬೇಸರದ ಸಂಗತಿಯೇ 😦 ಏನು ಮಾಡೋಣ ?

  ಉತ್ತರ
 3. ಮಾರ್ಚ್ 6 2014

  ವಿಡಂಬನೆ ಚೆನ್ನಾಗಿದೆ. ಒಳ್ಳೆ ದೆಹಲಿಯ ಆಪ್ ಪ್ರಯೋಗದ ಕುರಿತಾಗಿ ಬರೆದಂತಿದೆ! 😉

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Note: HTML is allowed. Your email address will never be published.

Subscribe to comments