ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 7, 2014

3

ನಾಡು- ನುಡಿ:ಮರುಚಿಂತನೆ :– “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 5

‍ನಿಲುಮೆ ಮೂಲಕ

– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoಕುರುಬರು ಹಾಗೂ ಜಾತಿ ಅಸ್ಮಿತೆ

ಕುರುಬರ ಮೂಲವನ್ನು ಕುರಿತಾದ ವಿಶ್ಲೇಷಣೆಗಳನ್ನು ನೋಡವುದಾದರೆ ಪ್ರಸ್ತುತ ಲಭ್ಯವಿರುವ ಸಾಹಿತ್ಯವು ಕುರುಬರ ಮೂಲಕ್ಕೆ ಕೆಲವು ಕಥೆ ಮತ್ತು ಪುರಾಣಗಳನ್ನು ಆಧಾರವಾಗಿರಿಸಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ ಹಾಲುಮತ ಪುರಾಣ ಮತ್ತು ಉಂಡಾಡು ಪದ್ಮಣ್ಣನ ಕಥೆಗಳು ಕುರುಬರ ಮೂಲದ ಕುರಿತಾದ ವಿಶ್ಲೇಷಣೆಗಳನ್ನು ಬಹಳವಾಗಿ ಪ್ರಭಾವಿಸಿದೆ. ಇದನ್ನು ನಾವು ಕುರುಬರ ಕುರಿತಾಗಿ ಅಧ್ಯಯನ ನಡೆಸಿರುವ ಪಾಶ್ಚಾತ್ಯ ಚಿಂತಕರಾದ ಎಡ್ಗರ್ ಥಸ್ರ್ಟನ್ ರವರ ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ ಆಫ್ ಸೌಥ ಇಂಡಿಯಾ (1987) ಮತ್ತು ಎಂಥೋವೆನ್ ರವರ ದಿ ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಬಾಂಬೆ, (1990) ಪುಸ್ತಕಗಳ ವಿವರಗಳಲ್ಲಿಯೇ ಗುರುತಿಸಬಹುದಾಗಿದೆ. ಕುರುಬರ ಮೂಲವನ್ನು ಕುರಿತಾಗಿ ಹಲವಾರು ಕಥೆಗಳು ಚಾಲಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕುರುಬರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾದಂತಹ ಕಥೆಗಳನ್ನು ಹೇಳುವುದು ಅಲ್ಲದೇ, ಈ ಎಲ್ಲಾ ಕಥೆಗಳು ಅಂದಿನ ಅಥವಾ ಆ ಪ್ರದೇಶದ ಜಾನಪದ ಹಿನ್ನೆಲೆಯಲ್ಲಿ ರೂಪ ಪಡೆದಿದ್ದು, ಮೌಖಿಕವಾಗಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬದಲಾವಣೆಗಳೊಂದಿಗೆ ಉಳಿದು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಈ ಎಲ್ಲಾ ಕಥೆಗಳು ಕುರುಬರ ಮೂಲವನ್ನೇ ವಿವರಿಸುತ್ತವೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಬಹುಪಾಲು ಉಪಜಾತಿಗಳು (ಅವುಗಳನ್ನು ಉಪಜಾತಿಗಳು ಎಂದು ಹೇಗೆ ಗುರುತಿಸುವುದು ಎನ್ನುವುದು ಬೇರೆಯದೇ ಪ್ರಶ್ನೆ) ತಮ್ಮದೇ ಆದಂತಹ ಬೇರೆ ಬೇರೆ ಕಥೆಗಳನ್ನು ಹೇಳುವುದು ಕಂಡುಬರುತ್ತದೆ. ಕುರುಬ ಸಮುದಾಯದಲ್ಲಿನ ಆಚರಣೆ ಮತ್ತು ಉಪಜಾತಿಗಳ ಕುರಿತಾದ ವಿವರವನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗಲಿದೆ.

ಆಚರಣೆಗಳು: ಕುರುಬರ ಆಚರಣೆಗಳ ಕುರಿತಾದಂತೆ ಇರುವ ಬೌದ್ಧಿಕ ಮಾಹಿತಿ ಹಾಗೂ ಕ್ಷೇತ್ರಾಧ್ಯಯನದ ಅಂಕಿ-ಅಂಶಗಳ ನಡುವೆ ಬಹಳಷ್ಟು ಅಂತರವಿರುವುದನ್ನು ಕುರುಬರ ಬಗ್ಗೆ ನಡೆದಿರುವ ಸಂಶೋಧನೆ ಗುರುತಿಸಿದೆ. ಕುರುಬರ ಆಚರಣೆಗಳ ಕುರಿತಾದಂತೆ ಇರುವ ಸಾಹಿತ್ಯ, ಒಟ್ಟು 14 ಆಚರಣೆಗಳನ್ನು ಕುರುಬ ಜಾತಿಯವರ ಆಚರಣೆ ಎಂಬಂತೆ ವ್ಯಾಖ್ಯಾನಿಸಿದೆ. ಮತ್ತು ಈ ಆಚರಣೆಗಳನ್ನು ನಡೆಸುತ್ತಿರುವುದರಿಂದ ಸಮಾಜದಲ್ಲಿ ಕುರುಬರು ಉನ್ನತ ಸ್ಥಾನ ಹೊಂದಿದ್ದಾರೆ ಎಂಬರ್ಥದಲ್ಲಿ ವಿವರಿಸಲಾಗಿದೆ. ಆದರೆ ಕುರುಬರ ಕುರಿತು ನಡೆದಿರುವ ಸಂಶೋಧನೆಯ ಕ್ಷೇತ್ರಾಧ್ಯಯನದಲ್ಲಿ ಕಂಡುಬಂದಿರುವಂತೆ, ಕುರುಬರಲ್ಲಿನ ಆಚರಣೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಕುರುಬರೆಂದು ಗುರುತಿಸಲ್ಪಡುವ ಎಲ್ಲಾ ಜನರಿಗೂ ಈ ಆಚರಣೆಗಳ ಕುರಿತಂತೆ ಮಾಹಿತಿ ಇಲ್ಲದಿರುವುದನ್ನು ಕಾಣಬಹುದಾಗಿದೆ. ಮತ್ತು ಕುರುಬರಿಗೆ ವಿಶಿಷ್ಟವಾದದ್ದೆಂದು ಗುರುತಿಸಲಾಗಿರುವ ಈ ಆಚರಣೆಗಳು ಉದಾ: ಅಲಗು ಹಾಕಿಕೊಳ್ಳುವ, ಕಬ್ಬಿಣದ ಸರಪಳಿಯಿಂದ ಬೆನ್ನಿಗೆ ಹೊಡೆದುಕೊಳ್ಳುವುದು, ತಲೆಯಿಂದ ತೆಂಗಿನಕಾಯಿ ಹೊಡೆಯುವುದು, ಕಬ್ಬಿಣದ ಸಲಾಕೆಯನ್ನು ಹೊಟ್ಟೆಗೆ ಚುಚ್ಚಿಕೊಳ್ಳುವುದು, ಕುದುರೆ ಕುಣಿತ ಇತ್ಯಾದಿ ಆಚರಣೆಗಳನ್ನು ಜಾತ್ರಾ ಸಮಯದಲ್ಲಿ ಎಲ್ಲಾ ಜಾತಿಯ ಜನರು ಆಚರಿಸುವುದನ್ನು ಕಾಣಬಹುದಾಗಿದೆ. ಕುರುಬರಲ್ಲಿನ ಉಪಜಾತಿಗಳೆಂದು ಗುರುತಿಸುವ ಸಮುದಾಯಗಳ ಕುರಿತಂತೆ ಗಮನಹರಿಸಿದರೆ ಈ ಕುರಿತಂತೆ ಇನ್ನೂ ಸ್ಪಷ್ಟ ಮಾಹಿತಿಯನ್ನು ಪಡೆಯಬಹುದಾಗಿದೆ. ಕುರುಬರಲ್ಲಿನ ಉಪಜಾತಿಗಳ ಕುರಿತಾಗಿ ನೋಡುವುದಾದರೆ, ಸಾಮಾನ್ಯವಾಗಿ ಈ ಎಲ್ಲಾ ವಿದ್ವಾಂಸರು ಕುರುಬ ಎಂಬುದು ಒಂದು ಜಾತಿ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಪ್ರತಿಯೊಂದು ಕುರುಬ ಉಪಜಾತಿಯು ಸಹ ಒಂದು ಜಾತಿ ಹೊಂದಿರಬಹುದಾದ ಎಲ್ಲಾ ಲಕ್ಷಣಗಳನ್ನು ಹೊಂದಿರುವುದು ಕಂಡುಬರುತ್ತದೆ. ಕುರುಬರಲ್ಲಿನ ಉಪಜಾತಿಗಳೆಂದು ಕರೆಯಲ್ಪಡುವ ಎಲ್ಲಾ ಸಮುದಾಯಗಳು ಅವರದೇ ಅದಂತಹ ಆಚರಣೆ, ಕಥೆ ಮತ್ತು ಕೊಡು-ಕೊಳ್ಳುವಿಕೆಯನ್ನು ಹೊಂದಿರುತ್ತವೆ. ಕುರುಬರಲ್ಲಿನ ಉಪಜಾತಿಗಳೆಂದು ಕರೆಯಲ್ಪಡುವ ಈ ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಿ ಕುರುಬರೆಂದು ಗುರುತಿಸುವ ಅಂಶ ಯಾವುದು? ಎಂಬುದು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕುರುಬ ಎನ್ನುವುದು ಒಂದು ಜಾತಿ ಎಂದು ನಿರ್ಧರಿಸಲು ಸಾಧ್ಯವಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕುರುಬ ಎನ್ನುವುದು ಒಂದು ಜಾತಿ ಎಂದು ಯಾವುದನ್ನು ಪ್ರಚಲಿತ ಬೌದ್ದಿಕ ವಲಯ ಗುರುತಿಸುತ್ತದೆಯೋ (ಮೂಲ, ಆಚರಣೆ, ಕಥೆ ಇತ್ಯಾದಿಗಳ ಆಧಾರದಲ್ಲಿ) ಅದು ಸಮಾಜದಲ್ಲಿ ಒಂದು ಜಾತಿಯಾಗಿ ಕಾಣಸಿಗದ ಸಮುದಾಯವಾಗಿದೆ.

ಈಡಿಗ ಜಾತಿ ಅಸ್ಮಿತೆ
ಈಡಿಗ ಸಮುದಾಯದವನ್ನು ಸಂಘಟಿಸುವ ಕಾರ್ಯ ಇತ್ತೀಚೆಗೆ ಪ್ರಾರಂಭವಾಗಿದ್ದಾಗಿದೆ. ‘ಕರ್ನಾಟಕದಲ್ಲಿ ಈಡಿಗ ಸಮುದಾಯವನ್ನು ಸಂಘಟಿಸಲು ಹತ್ತೊಂಭತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಥರ್ಸಟನ್, ಹೆಚ್. ವಿ. ನಂಜುಂಡಯ್ಯ (1926) ಮುಂತಾದವರು ನಡೆಸಿದ ಸಮೀಕ್ಷೇಗಳೇ ಆಕರಗಳಾಗಿವೆ.’ ಅಂದರೆ, ‘ಈ ಹಿಂದೆ ಈಡಿಗ ವೃತ್ತಿ ನಡೆಸುವ ಸಮುದಾಯಗಳು ಪ್ರಾದೇಶಿಕ ಭಿನ್ನತೆಗಳಿಂದ ದೂರ ದೂರವಾಗಿದ್ದವು. ಈಡಿಗರು, ದೀವರು, ಬಿಲ್ಲವರು, ಪೂಜಾರಿಗಳು, ಆಂದ್ರದ ಗೌಡರು ಎಲ್ಲರೂ ತಮ್ಮ ಪಾಡಿಗೆ ತಾವು ವಾಸಿಸುತ್ತಿದ್ದರು, ಸಂಘಟನೆ ಸಾಧ್ಯವಾಗಿರಲಿಲ್ಲ. ಥರ್ಸಟನ್, ಹೆಚ್.ವಿ. ನಂಜುಂಡಯ್ಯ ಮುಂತಾದವರು ಜಾತಿ ಮತ್ತು ಬುಡಕಟ್ಟುಗಳ ಅಧ್ಯಯನ ನೆಡೆಸಿದ ಮೇಲೆ ಸಮಾನವೃತ್ತಿ ಮಾಡುವವರು ಎಲ್ಲೆಲ್ಲಿ ವಾಸಿಸುತ್ತಿದ್ದಾರೆಂಬುದು ತಿಳಿಯಿತು.’ ಆ ನಂತರ ಈಡಿಗ ಸಮುದಾಯದ ಸಂಘಟನಾ ಕಾರ್ಯಗಳು ಆರಂಭವಾದವು. ಈಡಿಗ ಸಮುದಾಯದ ಕುರಿತ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ವೃತ್ತಿ ಆಧಾರದ ಮೇಲೆ ಹಲವು ಜಾತಿಗಳನ್ನು ಸಮೀಕರಿಸಿ(ಒಟ್ಟುಗೂಡಿಸಿ) ಈಡಿಗ ಸಮುದಾಯವೆಂದು ಗುರುತಿಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಈಳಿಗರು, ಈಳವ, ಮೂರ್ತೆದಾರ, ಹಳೆಪೈಕ, ದೀವರು, ಬಿಲ್ಲವರು, ನಾಮಾಧಾರಿಗಳು, ಬೈದ್ಯರು, ಪೂಜಾರಿಗಳು, ಮಲಯಾಳಿ, ಬಿಲ್ಲವರು ಮುಂತಾದ 26 ಜಾತಿಗಳನ್ನು ಈಡಿಗರೆಂದು ಗುರುತಿಸಲಾಗಿದೆ. ಈ ಜಾತಿಗಳನ್ನು ಒಟ್ಟುಗೂಡಿಸಿ ಈಡಿಗರೆಂದು ಗುರುತಿಸುವಾಗ ಈ ಜಾತಿಗಳು ಸಾಮಾನ್ಯವಾಗಿ ವಿವಿಧ ಮರಗಳಿಂದ ಮದ್ಯವನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವೃತಿಯ ಜಾತಿಗಳಾಗಿದ್ದು, ಈ ವೃತ್ತಿಯ ಮೂಲ ಒಂದೇ ಆಗಿರುವುದರಿಂದ ಇವರನ್ನು ಈಡಿಗರೆಂದು ಗುರುತಿಸಿರುವುದಾಗಿ ವಿವರಣೆಗಳು ತಿಳಿಸುತ್ತವೆ. ಹೀಗೆ ವೃತ್ತಿ, ಆಚರಣೆ ಹಾಗೂ ಐತಿಹ್ಯದಲ್ಲಿನ ಸಮಾನ್ಯತೆಯ ಆಧಾರದ ಮೇಲೆ ಈ ಸಮುದಾಯವನ್ನು ಸಂಘಟಿಸುವ ಪ್ರಯತ್ನಗಳು ನೆಡೆಯುತ್ತಿವೆ. ಆದರೆ ಈಡಿಗ ಸಮುದಾಯದ ಜಾತಿಗಳೆಂದು ಗುರುತಿಸುವ ಜಾತಿಗಳ ನಡುವೆ ಹಲವು ವ್ಯತ್ಯಾಸಗಳನ್ನು ಈ ಸಮುದಾಯದ ಕುರಿತ ವಿವರಣೆಗಳಿಂದ ಗಮನಿಸಬಹುದು.

ಈಡಿಗ ಸಮುದಾಯವೆಂದು ಗುರುತಿಸಲಾಗಿರುವ ಬಿಲ್ಲವರು, ದೀವರು, ನಾಮಾಧಾರಿಗಳು, ಬೈದ್ಯರು, ಪೂಜಾರಿಗಳು, ಈಳವರು ಮುಂತಾದ ಜಾತಿಗಳ ಆಚರಣೆಗಳಲ್ಲಿ, ವೃತ್ತಿಯಲ್ಲಿ, ಆ ಜಾತಿಗಳಿಗಿರುವ ಐತಿಹಾಸಿಕ ಕಥೆ, ಪುರಾಣಗಳಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಬಹುದು. ಹಾಗೂ ಈ ವ್ಯತ್ಯಾಸಗಳ ಹಿನ್ನಲೆಯಲ್ಲಿ ಈ ಜಾತಿಗಳು ತಾವು ಈಡಿಗರಿಗಿಂತ ಬೇರೆಯೆಂದು ಗುರುತಿಸಿಕೊಳ್ಳುವ ಪ್ರಕ್ರಿಯೆಯನ್ನು ನೋಡಬಹುದು.
ಈಡಿಗ ಸಮುದಾಯವೆಂದು ಕಳ್ಳು(ಮದ್ಯ)ವನ್ನು ಇಳಿಸುವ ಮತ್ತು ಮಾರಾಟವನ್ನು ಉದ್ಯೋಗವನ್ನಾಗಿ ಮಾಡಿಕೊಂಡಿರುವ ಜಾತಿಗಳನ್ನು ಈಡಿಗ ಸಮುದಾಯ ಅಥವಾ ಜಾತಿಯೆಂದು ಸಂಘಟಿಸಲಾಗಿದೆ. ಆದರೆ ಈ ಸಮುದಾಯದವರೆಂದು ಗುರುತಿಸಲ್ಪಟ್ಟಿರುವ ವಿವಿಧ ಜಾತಿಗಳು ಕಳ್ಳು ಇಳಿಸುವ ವೃತ್ತಿಯ ಕುರಿತಾಗಿ ಸಮ್ಮತ ಅಭಿಪ್ರಾಯವನ್ನು ಹೊಂದಿರದೆ ಇರುವುದು ಹಾಗೂ ಬೇರೆ ಬೇರೆ ವೃತ್ತಿಯ ಮೂಲಕ ತಮ್ಮ ಜಾತಿಯನ್ನು ಪ್ರತಿನಿಧಿಸುವುದು ಕಂಡುಬರುತ್ತದೆ. ಅದನ್ನು ಈ ಕೆಳಗಿನಂತೆ ಗುರುತಿಸಬಹುದು.

ಒಂದು ಕಡೆ, ಈ ಜಾತಿಗಳನ್ನು ಸಮಾನ ವೃತ್ತಿ ಮಾಡುವ ಸಮುದಾಯದವರೆಂದು ಒಟ್ಟುಗೂಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಇನ್ನೊಂದು ಕಡೆ, ಈ ಜಾತಿಗಳೇ ತಮ್ಮ ವೃತ್ತಿ ಈಡಿಗರೆಂದು ಗುರುತಿಸುವ ವೃತ್ತಿಗಿಂತ ಭಿನ್ನವಾದುದೆಂದು ಹೇಳಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ ಜಾತಿಗಳು ತಮ್ಮ ಮತ್ತು ಈಡಿಗರೆಂದು ಗುರುತಿಸಿರುವವರ ನಡುವೆ ಆಚರಣೆಗಳಲ್ಲಿಯೂ ಸಹ ಅನೇಕ ವ್ಯತ್ಯಾಸಗಳಿವೆ. ತಮ್ಮನ್ನು ಈಡಿಗರೆಂದು ಗ್ರಹಿಸದೆ ಪ್ರತ್ಯೇಕವಾಗಿ ಗುರುತಿಸುವಂತೆ ತಿಳಿಸುತ್ತಿವೆ ಹಾಗೂ ತಮ್ಮನ್ನು ಈಡಿಗ ಸಮುದಾಯಕ್ಕೆ ಸೇರಿದವರೆಂದು ಗುರುತಿಸಿಕೊಳ್ಳಲು ನಿರಾಕರಿಸುತ್ತವೆ. ಹೀಗಿರುವಾಗ, ಜಾತಿಗಳನ್ನು ವೃತ್ತಿ ಆಧಾರಿತವಾಗಿ ಸಂಘಟಿಸಬೇಕು ಎಂದು ಹೇಳಲು ಕಾರಣ ಏನು? ಈ ಜಾತಿಗಳನ್ನು ಸಂಘಟಿಸುವಾಗ ವೃತ್ತಿ ಏಕೆ ನಿರ್ಧಾರಕವಾಗುತ್ತದೆ? ಎಂಬುದು ಸ್ಪಷ್ಟವಾಗುವುದಿಲ್ಲ. ಈಡಿಗ ಸಮುದಾಯವೆಂದು ಗುರುತಿಸುವ ವೃತ್ತಿ ಸಾಮ್ಯತೆಯಲ್ಲಿ ಈ ಮೇಲಿನ ಸಮಸ್ಯೆಗಳು ಕಂಡುಬರುತ್ತವೆ. ಈ ರೀತಿಯ ಸಮಸ್ಯೆಯನ್ನು ಬೇರೆ ಬೇರೆ ಅಂಶಗಳಲ್ಲಿಯೂ ಗುರುತಿಸಬಹುದು.

ಜಾತಿಗಳ ಆಚರಣೆ ಮತ್ತು ಗುರುತಿಸಿಕೊಳ್ಳುವಿಕೆಯಲ್ಲಿನ ಭಿನ್ನತೆಗಳು:
ವಿವಿಧ ಜಾತಿಗಳನ್ನು ಒಟ್ಟುಗೂಡಿಸಿ ಈಡಿಗ ಸಮುದಾಯವನ್ನು ಸಂಘಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಕೆಲವು ಅಂಶಗಳ ಸಾಮ್ಯತೆಯ ಆಧಾರದ ಮೇಲೆ ಈ ಜಾತಿಗಳನ್ನು ಈಡಿಗ ಸಮುದಾಯದಲ್ಲಿ ಸಮೀಕರಿಸಲಾಗಿದೆ. ಆದರೆ ಆ ಜಾತಿಗಳು ತಮ್ಮನ್ನು ಈಡಿಗರು ಎಂದು ಗುರಿತಿಸಿಕೊಳ್ಳಲು ಬಯಸದಿರುವುದನ್ನು ಗಮನಿಸಬಹುದು. ಈ ಜಾತಿಗಳ ನಡುವಿನ ಆಚರಣೆ, ವೃತ್ತಿ ಮುಂತಾದ ವಿಷಯಗಳಲ್ಲಿನ ವ್ಯತ್ಯಾಸ ಈಡಿಗ ಸಮುದಾಯಕ್ಕಿಂತ ಭಿನ್ನವಾಗಿರಲು ಕಾರಣವೆಂದು ಹೇಳಿಕೊಳ್ಳುತ್ತಾರೆ.

ದೀವರು ತಮ್ಮನ್ನು ಈಡಿಗರಿಗಿಂತ ಭಿನ್ನವೆಂದು ಗುರುತಿಸಿಕೊಳ್ಳುವುದನ್ನು ಈ ರೀತಿಯಲ್ಲಿ ಗಮನಿಸಬಹುದು ‘ಒಂದೇ ರೀತಿಯ ಉದ್ಯೋಗ ಮತ್ತು ಜೀವನಾವರ್ತಗಳನ್ನು ಆಧರಿಸಿ ಸಂವಾದಿಯಾಗಿ ಹಲವು ಸಮುದಾಯಗಳನ್ನು ದೀವರ ಜೊತೆ ಕೂಡಿಸಿದ್ದು ಗಮನಾರ್ಹ ಇಂತಹ ಸಮುದಾಯಗಳನ್ನುಕರ್ನಾಟಕ ಹಿಂದುಳಿದ ವರ್ಗದ ಆಯೋಗದ ವರದಿಯಲ್ಲಿ ಈಡಿಗ ಎಂಬ ಹೆಸರಿನಲ್ಲಿ ಗುರುತಿಸಲಾಗಿದೆ. ರಾಜಕೀಯ ಕಾರಣಕ್ಕಾಗಿ ಇಂತಹ ಐಕ್ಯತೆ ಸಾಧಿಸಲಾಯಿತಾದರೂ ಇವರ ಆಚರಣಾ ವಿಧಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.’ ಆದ್ದರಿಂದ ತಮ್ಮನ್ನು ಅವರಿಗಿಂತ ಬೇರೆಯಾಗಿ ಗುರುತಿಸಬೇಕೆಂದು, ‘ಗಣಪತಿಯಪ್ಪನವರ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಲಾದ ಮನವಿ ಪತ್ರದಲ್ಲಿ ಹಳೇಪೈಕ, ನಾಯಕರು, ನಾಯಕರ ಮಕ್ಕಳು ಎಂದು ಕರೆಯಲ್ಪಡುವ ದೀವರು ಬುಡಕಟ್ಟಾಗಿದ್ದು ಸೊರಬ, ಹೊಸನಗರ, ತೀರ್ಥಹಳ್ಳಿ, ಸಾಗರ, ಶಿರಸಿ, ಸಿದ್ದಾಪುರಗಳಲ್ಲಿ ಹರಡಿದ್ದಾರೆ. ಇವರನ್ನು ಈಡಿಗರೆಂದು ಗ್ರಹಿಸದೇ ಪ್ರತ್ಯೇಕ ಬುಡಕಟ್ಟು ಎಂದು ಗ್ರಹಿಸಬೇಕು. ಎಂದು ಪ್ರತಿಪಾದಿಸಿದರು. ಇದಕ್ಕೆ ಪೂರಕವಾಗಿ ಶ್ರೀಯುತರು ಈಡಿಗರಿಗಿಂತ ದೀವರು ಭಿನ್ನವಾದ ಆಚಾರ ವಿಚಾರ ನಂಬಿಕೆ ಉಡುಗೆ-ತೊಡುಗೆ ಭಾಷೆಯ ರಚನಾಕ್ರಮವನ್ನು ಹೊಂದಿದ್ದಾರೆಂದು ಮಾಹಿತಿ ನೀಡಿದ್ದಾರೆ’ ಪೂಜಾರಿಗಳು ಸಹ ಅರ್ಚಕ ವೃತ್ತಿಯನ್ನು ಮಾಡುತ್ತಿದ್ದು, ಪೂಜಾರಿಯೆಂಬುದೆ ತಮ್ಮ ಜಾತಿಯೆಂದು ಗುರುತಿಸಿಕೊಳ್ಳುವುದನ್ನು ನೋಡಬಹುದು. ‘ಈ ಜನಾಂಗದ ವ್ಯಕ್ತಿಗಳು ತಮ್ಮ ಹೆಸರಿನ ಮುಂದೆ ಜಾತಿಸೂಚಕವಾಗಿ ಪೂಜಾರಿಗಳೆಂದು ಸೇರಿಸಿಕೊಳ್ಳುತ್ತಾರೆ ಮಾತ್ರವಲ್ಲದೆ ತಮ್ಮ ಜಾತಿಯೇ ಪೂಜಾರಿ ಎಂದು ಕರೆದುಕೊಳ್ಳುತ್ತಾರೆ. ಪೂಜಾರಿಯೆಂದರೆ ದೇವರ ಪೂಜೆ ಮಾಡುವವ ಎಂದೇ ಅರ್ಥ.’ ಹಾಗೆಯೇ, ಬಿಲ್ಲವರು ಸಹ ಈ ರೀತಿಯಲ್ಲಿ ‘ಬಯಲು ಸೀಮೆಯ ಈಡಿಗರಿಗಿಂತ ಇದೇ ವೃತ್ತಿಯಿಂದ ಜೀವಿಸುತ್ತಿದ್ದ ಕರಾವಳಿ ಪ್ರದೇಶದ ಬಿಲ್ಲವರು ಅನೇಕ ವಿಷಯಗಲ್ಲಿ ಭಿನ್ನರಾಗಿ ಕಾಣಿಸುತ್ತಾರೆ. ಬಿಲ್ಲವರಿಗೆ ಭೂತಾರಾಧನೆಯ ಸಾಂಸ್ಕೃತಿಕ ಹಿನ್ನಲೆಯಿದೆ. ಪಾಡ್ದನ ಮುಂತಾದ ಸಾಹಿತ್ಯಿಕ ಬಗೆಗಳ ಸಂಪತ್ತಿದೆ.’

ಈಡಿಗ ಸಮುದಾಯದ ಕುರಿತು ಎರಡು ರೀತಿಯ ವಿವರಣೆಗಳಿವೆ. ಒಂದು ಕಡೆ, ಜಾತಿಗಳ ನಡುವಿನ ಸಾಮ್ಯತೆಯ ಅಂಶಗಳ ಆಧಾರದ ಮೇಲೆ ವಿವಿಧ ಜಾತಿಗಳನ್ನು ಸಂಘಟಿಸಿ ಒಂದು ಸಮುದಾಯವನ್ನಾಗಿ ರಚಿಸುವ ಪ್ರಯತ್ನ ನೆಡೆಯುತ್ತಿದೆ. ಇನ್ನೊಂದು ಕಡೆ, ಅದೇ ಈಡಿಗ ಸಮುದಾಯವೆಂದು ಗುರುತಿಸಿರುವ ಜಾತಿಗಳು ತಮ್ಮನ್ನು ಈಡಿಗರಿಗಿಂತ ಬೇರೆಯೆಂದು ಗುರುತಿಸಿಕೊಳ್ಳುತ್ತಿವೆ. ಈ ಜಾತಿಗಳ ನಡುವೆ ವೃತ್ತಿ, ಆಚರಣೆ ಹಾಗೂ ಐತಿಹಾಸಿಕ ಕಥೆ ಪುರಾಣಗಳಲ್ಲಿಯೂ ಸಹ ವ್ಯತ್ಯಾಸವಿದೆ. ಈ ವ್ಯತ್ಯಾಸಗಳನ್ನು ಮರೆಮಾಚಿ ಈ ಎಲ್ಲಾ ಜಾತಿಗಳನ್ನು ಸಂಘಟಿಸಿಲಾಗುತ್ತಿದೆ.

1. ಜಾತಿವ್ಯವಸ್ಥೆಯ ವಿವರಣೆಗಳ ಆಧಾರದ ಮೇಲೆ ಪ್ರಭುತ್ವದ ನೀತಿ ನಿಯಮಗಳು ರಚನೆಯಾಗಿವೆ. ಈ ಪ್ರಭುತ್ವದ ನೀತಿ ನಿಯಮಗಳ ಪರಿಣಾಮವಾಗಿ ಈಡಿಗ ಸಮುದಾಯದಂತಹ ಜಾತಿ ಸಮುದಾಯಗಳು ಸಂಘಟಿತವಾಗುತ್ತಿವೆ.
2. ಪ್ರಭುತ್ವದ ಅನಿವಾರ್ಯತೆಯಿಂದ ಹಲವು ಜಾತಿಗಳನ್ನು ಒಟ್ಟುಗೂಡಿಸಿದ್ದರೂ ಸಹ, ಆ ಜಾತಿಗಳು ರಾಜಕೀಯ ಗುರುತಿಸಿಕೊಳ್ಳುವಿಕೆಯಲ್ಲಿ ಮಾತ್ರ ಒಂದುಗೂಡಿವೆ. ವಾಸ್ತವದಲ್ಲಿ ಅವುಗಳು ಪ್ರತ್ಯೇಕ ಅಸ್ಮಿತೆಯನ್ನು ಹೊಂದಿವೆ. ಈಡಿಗ ಸಮುದಾಯಕ್ಕೂ, ಅದರ ಪಂಗಡ ಅಥವಾ ಉಪಜಾತಿಯೆಂದು ಗುರುತಿಸಿರುವ ಜಾತಿಗಳಿಗೂ ಯಾವುದೇ ಸಂಬಂಧವಿಲ್ಲ.

ಈ ವಿಷಯಕ್ಕೆ ಸಂಬಂಧಿಸಿದಂತೆ ಜಾತಿಗಳನ್ನು ಒಟ್ಟುಗೂಡಿಸಿ ಒಂದು ಸಮುದಾಯವನ್ನಾಗಿಸುವ ಕಾರ್ಯದ ಹಿನ್ನಲೆ, ಈ ಸಮುದಾಯಗಳ ರಚನೆಯ ಸ್ವರೂಪ, ಈಡಿಗ ಸಮುದಾಯಕ್ಕೂ ಅದು ಒಳಗೊಂಡಿರುವ ಜಾತಿಗಳಿಗೂ ಇರುವ ಸಂಬಂಧ ಅಸ್ಮಿತೆ ರಾಜಕೀಯ ಸೃಷ್ಟಿಸಿರುವ ಸಂಬಂಧ. ಜಾತಿಗಳ ನಡುವಿನ ಸಂಬಂಧವನ್ನು ಪರಿಕಲ್ಪಿಸಿದ ಜಾತಿ ವ್ಯವಸ್ಥೆಯ ಸಿದ್ಧಾಂತ ಲಿಂಗಾಯಿತ, ಕುರುಬ, ಈಡಿಗ ಸಮುದಾಯಗಳ ರಾಜಕೀಯ ಸಂಘಟನೆಗಳ ತಾತ್ವಿಕ ತಳಹದಿಯಾಗಿದೆ. ಅಸ್ಮಿತೆ ರಾಜಕೀಯ ಇಚಿತಹ ಸಂಘಟನೆಗಳನ್ನು ಸಾಮಾಜಿಕ ವಾಸ್ತವವೆಂಬಂತೆ ನೋಡುತ್ತದೆ. ಆದರೆ ಈ ಮೇಲೆ ನಾವು ಗುರುತಿಸರುವಂತೆ ಸಮಾಜದ ವಾಸ್ತವ ಘಟಕಗಳಂತಿರುವ ಜಾತಿಗಳಿಗೂ ಅಸ್ಮಿತೆ ರಾಜಕೀಯವು ಗುರುತಿಸುವ ಜಾತಿ ಸಂಘಟನೆಗಳಿಗೂ ನಡುವೆ ಸಾಮ್ಯತೆಯೇ ಕಂಡುಬರುವುದಿಲ್ಲ. ಇದನ್ನೇ ಮತ್ತೊಂದು ಬಗೆಯಲ್ಲಿ ಹೇಳುವುದಾದರೆ ಜಾತಿ ಸಂಘಟನೆಗಳಿಗೆ ಸಂಬಂಧಿಸಿದಂತೆ ಅಸ್ಮಿತೆ ರಾಜಕೀಯವು ಅವಾಸ್ತವವನ್ನೇ ವಾಸ್ತವವೆಂಬಂತೆ ಪ್ರತಿಬಿಂಬಿಸುತ್ತದೆ.

ಅಸ್ಮಿತೆ ರಾಜಕೀಯದ ಚೌಕಟ್ಟಿನಲ್ಲಿ ಜಾತಿ ಸಂಘಟನೆಗಳನ್ನು ಗುರುತಿಸುವ ಪ್ರಯತ್ನ ಉತ್ತರ ಸಿಗದ ಹಲವಾರು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ:
1.ಜನರ ವ್ಯೆಯಕಿಕ್ತ ಅನುಭವ ಮತ್ತು ಅವರ ರಾಜಕೀಯ ನಿಲುವುಗಳ ನಡುವಿನ ವ್ಯತ್ಯಾಸವನ್ನು ವಿವರಿಸುವುದು ಹೇಗೆ?
2.ಶೋಷಣೆಯ ವಿರುದ್ಧ ಹೋರಾಟದ ಉದ್ದೇಶದಿಂದ ಜಾತಿ ಅಸ್ಮಿತೆಯ ಆಧಾರದ ಮೇಲೆ ಕಟ್ಟಿಕೊಂಡಿರುವ ಚಳುವಳಿಯು ಅದೇ ಕಾಲಕ್ಕೆ ಅದು ಗುರುತಿಸುವ ಸಮುದಾಯಗಳು ಅವು ಒಳಗೊಂಡಿರುವ ಜಾತಿಗಳ ನಡುವಿನ ಶೋಷಣೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
3.ಅಸ್ಮಿತೆ ರಾಜಕೀಯದ ಸಾಂಸ್ಸೃತಿಕ ರಾಜಕೀಯ ಗುರಿಗಳಿಗೂ ಅದರ ಅಧಿಕಾರದ ನಿರ್ದಿಷ್ಟ ಪರಿಕಲ್ಪನೆಗೂ ಪರಸ್ಪರ ಸಂಬಂಧ ಕಲ್ಪಿಸುವುದು ಹೇಗೆ?

ಈ ಮೇಲಿನ ಪ್ರಶ್ನೆಗಳು ಅತ್ಯಂತ ಮಹತ್ವವಾಗಿವೆ ಏಕೆಂದರೆ ಜಾತಿ ಅಸ್ಮಿತೆಯ ಆದಾರದ ಮೇಲೆ ರಚಿತವಾದ ರಾಜಕೀಯ ಸಮುದಾಯಗಳು (ಲಿಂಗಾಯತ, ಈಡುಗ, ಕುರುಬ ಇತ್ಯಾದಿ) ತಮ್ಮ ರಾಜಕೀಯ ಗುರಿಯನ್ನು ಈಡೇರಿಸಿಕೊಳ್ಳಲು ಇತರ ಸಮುದಾಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ್ದು ಅನಿವಾರ್ಯ. ಆದರೆ ಜಾತಿ ಅಸ್ಮಿತೆ ಅದಕ್ಕೆ ಅಡ್ಡಿಯಾಗುತ್ತದೆ. ಜಾತಿ ಅಸ್ಮಿತೆಯನ್ನು ಉಳಿಸಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ ಎನ್ನುವುದು ಜಾತಿ ಅಸ್ಮಿತೆ ರಾಜಕೀಯದಲ್ಲಿ ಸಕ್ರೀಯವಾಗಿರುವ ಕಾರ್ಯಕರ್ತರು ಎದುರಿಸುವ ದೊಡ್ಡ ಸವಾಲಾಗಿದೆ. ಒಂದೊಮ್ಮೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಗಳಿಸುವಲ್ಲಿ ಯಶಸ್ವಿಯಾದರೂ ಸಹ ಅದರ ಫಲವಾಗಿ ಯಾರ ಹಿತಾಸಕ್ತಿಯ ರಕ್ಷಣೆಯಾಗುತ್ತದೆ ಯಾರಿಗೆ ಅನ್ಯಾಯವಾಗುತ್ತದೆ ಎಂದು ನಿರ್ಧರಿಸುವುದು ಕಷ್ಟ.

ರಾಜಕೀಯವಾಗಿ ರಚಿಸಲ್ಪಟ್ಟ ಜಾತಿ ಸಂಘಟನೆಗಳು ಸಮಾಜದಲ್ಲಿ ಕಂಡುಬರುವ ಜಾತಿಗಳನ್ನು ಪ್ರತಿನಿಧಿಸುವುದಲ್ಲವೆಂದಾದರೆ ಅಂತಹ ಸಂಘಟನೆಗಳನ್ನು ರೂಪಿಸುವಲ್ಲಿ ಆಸಕ್ತಿ ವಹಿಸುವವರ ಹಿತಾಸಕ್ತಿಗೂ ಅಂತಹ ಸಂಘಟನೆಗಳು ಒಳಗೊಂಡಿರುವ ಜಾತಿಗಳ ಸದಸ್ಯರ ಹಿತಾಸಕ್ತಿಗಳಿಗೂ ನಡುವೆ ಕಂದರವೇರ್ಪಡುತ್ತದೆ. ಅಂತಹ ಸಂದರ್ಭದಲ್ಲಿ ಜಾತಿ ಸಂಘಟನೆಗಳು ಮಾಡಿಕೊಳ್ಳುವ ರಾಜಕೀಯ ಹೊಂದಾಣಿಕೆ ಅಂತಹ ಸಂಘಟನೆಗಳ ನಾಯಕರುಗಳಿಗಷ್ಟೇ ಲಾಭವನ್ನುಂಟು ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದು ಕ್ರಮೇಣ ತಮ್ಮ ಲಾಭಕ್ಕೊಸ್ಕರ ಜಾತಿ ಅಸ್ಮಿತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಜಕೀಯ ನಾಯಕರುಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳನ್ನು ಹುಟ್ಟುಹಾಕುತ್ತದೆ. ತಮ್ಮ ಅನುಯಾಯಿಗಳಲ್ಲಿ ವಿಶಿಷ್ಟವಾದ ಜಾತಿ ಅಸ್ಮಿತೆಯನ್ನು ಗಟ್ಟಿಗೊಳಿಸುವ ಮತ್ತು ಅದೇ ಸಮಯದಲ್ಲಿ ಸಮಾನ ಹಿತಾಸಕ್ತಿಗಳನ್ನು ಕಂಡುಕೊಳ್ಳಬೇಕಾದ ಪ್ರಜಾಪ್ರಭುತ್ವದ ಒತ್ತಡದಿಂದಾಗಿ ಜಾತಿ ಅಸ್ಮಿತೆಯ ಗಡಿಯನ್ನು ಮೀರಿ ಹೊಂದಾಣಿಕೆ ಮಾಡಿಕ್ಕೊಳ್ಳಬೇಕಾದ ವಿಪರ್ಯಾಸದ ಪರಿಸ್ಥಿತಿ ಎದುರಾಗುತ್ತದೆ.

(ಈ ಲೇಖನದಲ್ಲಿ ಉಲ್ಲೇಖಿಸಿರುವ ಲಿಂಗಾಯಿತ, ಕುರುಬ, ಈಡಿಗ ದಲಿತ ಜಾತಿ ಸಂಘಟನೆಗಳ ಮಾಹಿತಿಯನ್ನು ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧಕರಾದ ಕವಿತ, ಡಾ.ಕಿರಣ್, ವೀಣಾ, ಶಂಕರಪ್ಪ ಹಾಗೂ ಚೈತ್ರ ಇವರ ಅಪ್ರಕಟಿತ ಸಂಶೋಧನಾ ಪ್ರಬಂಧಗಳಿಂದ ಮತ್ತು ಪ್ರಸ್ತಾವನೆಗಳಿಂದ ತೆಗೆದುಕೊಳ್ಳಲಾಗಿದೆ.)

3 ಟಿಪ್ಪಣಿಗಳು Post a comment
  1. ಮಾರ್ಚ್ 7 2014

    “ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕುರುಬ ಎನ್ನುವುದು ಒಂದು ಜಾತಿ ಎಂದು ನಿರ್ಧರಿಸಲು ಸಾಧ್ಯವಿಲ್ಲ.”

    ನಿಮ್ಮ ಈ ತರ್ಕವನ್ನು ಹಿಡಿದು ಹೊರಟರೆ, ಯಾವ ಜಾತಿಯ ಅಸ್ತಿತ್ವದ ಬಗ್ಗೆಯೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಅಲ್ಲವೇ? ಕುರುಬ ಉಪಜಾತಿಯೊಂದನ್ನು ತೆಗೆದು ಕೊಂದು ನಾವು ಸಂಶೋಧನೆ ಮಾಡಿದರೂ ಇದೇ ರೀತಿಯ ಮಾಹಿತಿ ಸಿಗಬೇಕು. ಉದಾಹರಣೆಗೆ, ಉತ್ತರ ಕರ್ನಾಟಕದ ಕಾಡು ಕುರುಬರಿಗೂ, ದಕ್ಷಿಣದ ಕಾಡು ಕುರುಬರಿಗೂ ಆಚರಣೆಗಳಲ್ಲಿ, ಭಾಷೆಯಲ್ಲಿ ಖಂಡಿತಾ ವೆತ್ಯಾಸವಿದೆ. ಆದ್ದರಿಂದ, ನಿಮ್ಮದೇ ಮಾತಿನಲ್ಲಿ ಹೇಳುವುದಾದರೆ, “ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕಾಡು ಕುರುಬ ಎನ್ನುವುದು ಒಂದು (ಉಪ)ಜಾತಿ ಎಂದು ನಿರ್ಧರಿಸಲು ಸಾಧ್ಯವಿಲ್ಲ.”

    ಉತ್ತರ
    • ರೋಮ್ಲೀಲಾ ಥೂಪರ್
      ಮಾರ್ಚ್ 10 2014

      ಡಿಯರ್ ವೆಂಡಿ.ನಾವು ಇಷ್ಟು ದಿನ ಕಷ್ಟಪಟ್ಟು ಕಟ್ಟಿರುವ ಈ ಕಣ್ಕಟ್ಟಿನ ಸಮಾಜ ವಿಜ್ನಾನವನ್ನು ಅಲುಗಾಡಿಸುವುದೇ ಇವರ ಉದ್ದೇಶವೆನಿಸುತ್ತದೆ

      ಉತ್ತರ
  2. CharlesDew
    ಮೇ 27 2019

    Enjoy Your Coffee Your way with A 12-Volt Coffee Maker
    When you leave home, whether its running errands, on a journey, or taking a trip somewhere, it can be challenging to find coffee made the way you like it.
    Sure, there are gas stations, rest stops and takeaway food places that sell coffee, however there is absolutely nothing to inform you how fantastic it’s going to taste.
    The coffee may be too strong, too weak or a brand you don’t like.
    For more information please go to https://www.electricpercolatorcoffeepot.com/10-top-coffee-bloggers/

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments