ಸತ್ಕಾರದ ಸ್ವರೂಪ
-ಮಯೂರಲಕ್ಷ್ಮಿ
ಮನೆಗೆ ಬರುವ ಅತಿಥಿ ಅಭ್ಯಾಗತರನ್ನು ಆದರದಿಂದ ಸ್ವಾಗತಿಸಿ ಸತ್ಕರಿಸುವುದು ನಮ್ಮ ಭಾರತೀಯ ಸಂಸ್ಕೃತಿಯಷ್ಟೇ! ಸುಭಾಷಿತವೊಂದು ಹೀಗಿದೆ:
ಯ: ಸಾಯಮತಿಥಿಂ ಪ್ರಾಪ್ತಂ
ಯಥಾಶಕ್ತಿ ನ ಪೂಜಯೇತ್|
ತಸ್ಯಾಸೌ ದುಷ್ಕೃತಂ ದತ್ತ್ವಾ
ಸುಕೃತಂ ಚಾಪಕರ್ಪತಿ||
ಇದರರ್ಥ ಸಂಜೆಯ ಹೊತ್ತಿನಲ್ಲಿ ಯಾರು ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವುದಿಲ್ಲವೋ ಅವನು ತನ್ನ ಪುಣ್ಯವನ್ನೆಲ್ಲಾ ಅತಿಥಿಗೆ ಕೊಟ್ಟು ಅವನ ಪಾಪವನ್ನೇ ಪಡೆದುಕೊಳ್ಳುತ್ತಾನೆ ಎಂದು.
ನಮ್ಮ ಬಂಧುಗಳನ್ನು ಸ್ನೇಹಿತರನ್ನು ಮನೆಗೆ ಕರೆದು ಸತ್ಕರಿಸುವುದು ಸಹಜವಾಗಿರಬೇಕು. ಇಂದಿನ ಯಾಂತ್ರಿಕ ಜೀವನದಲ್ಲಿ ಅತಿಥಿಗಳಿರಲಿ ಮನೆಯವರೊಡನೆ ಮಾತಾಡಲೂ ನಮಗೆ ಸಮಯವಿಲ್ಲ. ಅರಿತವರಿಗೆ ಸತ್ಕರಿಸುವುದೊಂದೇ ಅಲ್ಲ, ನಮಗೆ ಪರಿಚಯವಿಲ್ಲದವರಿಗೂ ನಾವು ಮಾಡುವ ಕೆಲಸಗಳು ಉಪಚಾರವೇ ಆಗಬಹುದು. ಗೋಶಾಲೆಗಳಿಗೆ ಸಹಾಯ ಮಾಡುವುದು ಉಪಕಾರವೇ, ಮನೆಯ ಮುಂದೆ ನಿರಾಶ್ರಿತರಿಗಾಗಿ ನೆರಳು ನೀಡುವ ಗಿಡಮರಗಳನ್ನು ನೆಡುವುದು, ಉಪಚಾರವೇ!
ಹಿಂದೆಲ್ಲಾ ಗೋವುಗಳಿಗಾಗಿ ರಸ್ತೆಗಳಲ್ಲಿ ಪುಟ್ಟ ನೀರಿನ ತೊಟ್ಟಿ ಕಟ್ಟುತ್ತಿದ್ದರು. ಎಂದೋ ಫಲ ನೀಡುವ ಸಿಹಿಯಾದ ಹಣ್ಣಿನ ಮರಗಳನ್ನು ಎಷ್ಟೋ ವರ್ಷಗಳ ಹಿಂದೆ ನೆಟ್ಟವರು ತ್ಯಾಗಿಗಳಲ್ಲವೇ?
ದಿನನಿತ್ಯ ನಾವು ಟ್ರಾಫಿಕ್ ಸಿಗ್ನಲ್‍ಗಳಲ್ಲಿ ನಿಂತಾಗ ನಮ್ಮೆದುರಿರುವವರನ್ನು ಮುಂದೆ ಸಾಗಲು ಅವಸರಿಸದೆ ನಂತರ ಹೊರಡುವುದೂ ಒಂದು ಉಪಕಾರವೇ. ರಸ್ತೆಯ ಬದಿಯಲ್ಲಿಯೇ ಜನರು ಸ್ವೇಚ್ಛೆಯಿಂದ ಬಳಸಿ ಬಿಸಾಡುವ ಪ್ಲ್ಯಾಸ್ಟಿಕ್‍ಗಳನ್ನು ನಡೆಯುವಾಗ ‘ಇದು ನನ್ನ ಕೆಲಸವಲ್ಲ!’ ಎಂದು ಭಾವಿಸದೆ ಪಕ್ಕಕ್ಕೆ ಸರಿಸಿ ಮುಂದೆ ಸಾಗುವ ಅನೇಕ ಮಹನೀಯರೂ ಇದ್ದಾರೆ. ತಮ್ಮ ಕೆಲಸಗಳಿಗಾಗಿ ಕ್ಯೂ ನಿಂತಾಗ ಬಹಳ ಸಮಯದಿಂದ ಕಾಯುತ್ತಾ ನಿಂತಿರುವ ಬಳಲಿದಂತೆ ಕಾಣುವ ಹಿರಿಯರಿಗೆ ಅವಕಾಶ ಕೊಟ್ಟು ನಂತರ ನಮ್ಮ ಸರದಿ ತೆಗೆದುಕೊಳ್ಳುವುದೂ ಒಳ್ಳೆಯ ಕಾರ್ಯವೇ. ಇಂತಹ ಕೆಲಸಗಳಿಗಾಗಿ ನಾವೆಂದೂ ಹಿಂಜರಿಯಬೇಕಿಲ್ಲ! ಇವೆಲ್ಲವೂ ಸತ್ಕಾರದ ಸ್ವರೂಪ.
ಚಿತ್ರಕೃಪೆ :http://www.mouthshut.com