ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 10, 2014

ಜಾತೀಯತೆ: ಏನು? ಎತ್ತ?

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್

ಜಾತಿ ರಾಜಕಾರಣಸೆಪ್ಟೆಂಬರ್ 13, 2007ರಂದು 11 ನೇ ಪಂಚವಾರ್ಷಿಕ ಯೋಜನೆ ಕುರಿತ ಯೋಜನಾ ಆಯೋಗದ ಸಮಾಲೋಚನಾ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ “ಸ್ಪೆಶಲ್ ಅಟೆನ್ಷನ್ ವುಡ್ ನೀಡ್ ಟು ಬಿ ಪೇಯ್ಡ್ ಟು ಡಿಸ್ಟ್ರಿಕ್ಟ್ಸ್ ವಿತ್ ಎಸ್‍ಸಿ, ಎಸ್‍ಟಿ, ಒಬಿಸಿ ಆಂಡ್ ಮೈನಾರಿಟಿ ಕಾನ್ಸನ್‍ಟ್ರೇಶನ್’’ ಎಂದು ಭಾಷಣ ಮಾಡಿದ್ದರು. ಅಲ್ಪ ಸಂಖ್ಯಾತರಿಗೆ ಸರ್ಕಾರಿ ಯೋಜನೆಯಲ್ಲಿ ಸಿಂಹಪಾಲು ದೊರೆಯಬೇಕು ಎಂದೂ ಅವರು ಹೇಳಿದ್ದರು. ಸಿಂಗ್ ಮೂಲತಃ ಅರ್ಥಶಾಸ್ತ್ರಜ್ಞರು, ರಾಜಕಾರಣಿಯಲ್ಲ. ಆದರೆ ಅವರ ಧಾಟಿ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಯಾವ ರಾಜಕಾರಣಿಗೂ ಕಡಿಮೆ ಇರಲಿಲ್ಲ. ಅಂದಿನ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು ಎಲ್ಲ ಹಾಜರಿದ್ದರು. ಸರ್ಕಾರದ ಯೋಜನೆಯ ಲಾಭ ಬಡವರಿಗೆ ದೊರೆಯಬೇಕು ಎಂದು ಹೇಳುವ ಬದಲು ಅಲ್ಪ ಸಂಖ್ಯಾತರಿಗೆ ದೊರೆಯಬೇಕು ಎಂದು ಅವರು ಹೇಳಿದ್ದರಲ್ಲಿ ಅಭಿವೃದ್ಧಿಗಿಂತಲೂ ಮತಗಳಿಕೆಯ ವಾಸನೆ ಢಾಳಾಗಿ ರಾಚಿದರೆ ಅದರಲ್ಲಿ ಅವರ ತಪ್ಪಿಲ್ಲ. ಕರ್ನಾಟಕದಲ್ಲಿ ಶಾದಿ ಭಾಗ್ಯ ಯೋಜನೆ ಕುರಿತ ಸರ್ಕಾರದ ನಿಲುವನ್ನು ಕೂಡ ಇದೇ ದೃಷ್ಟಿಯಲ್ಲಿ ನೋಡಬಹುದು. ಆ ಸರ್ಕಾರ, ಈ ಸರ್ಕಾರ ಎಂದಲ್ಲ ಎಲ್ಲ ಸರ್ಕಾರಗಳ ಯೋಜನೆಗಳೂ ಮತಗಳಿಕೆಯತ್ತ ನೆಟ್ಟಿರುವುದರಿಂದ ಅವರ ಘೋಷಣೆಗಳು ಹೀಗಾಗಿಬಿಡುತ್ತವೆ ಅಷ್ಟೆ.

ನಮಗೆ ಸ್ವಾತಂತ್ರ್ಯ ಬಂದು 66 ವರ್ಷಗಳಾದವು. 1950ರಲ್ಲಿ ರೂಪುಗೊಂಡ ದೇಶದ ಯೋಜನಾ ಆಯೋಗ ಇದುವರೆಗೆ 11 ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶಾಭಿವೃದ್ಧಿಯತ್ತ ಗಮನ ಹರಿಸಿದೆ. ಆದರೆ ನಿರೀಕ್ಷಿತ ಫಲಿತಾಂಶ ಮಾತ್ರ ಲಭಿಸಿಲ್ಲ. ಏಕೆಂದರೆ ಇದು ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸುವುದಿಲ್ಲ; ಜಾತಿ ಮತಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆ ರೂಪಿಸುತ್ತಿದೆ. ಜನತಂತ್ರ ವ್ಯವಸ್ಥೆಯಲ್ಲಿ ಹೀಗೆ ಯೋಚಿಸುವುದೇ ಅಸಂಗತ. ನಮ್ಮ ಸಂವಿಧಾನ ಹೇಳುವುದೂ ಇದನ್ನೇ. ರಾಜಕೀಯ ಪಕ್ಷಗಳು ಹೇಳುವುದೂ ಇದನ್ನೇ. ಜಾತ್ಯತೀತತೆ ಬಗ್ಗೆ ವೇದಿಕೆ ಮೇಲೆ ಭಾಷಣ ಬಿಗಿಯುವವರೂ, ಲೋಕಾಯುಕ್ತರ ಬಳಿ ಸಿಕ್ಕಿಬೀಳುವವರೆಗೆ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಆವೇಶದ ಮಾತನಾಡುವವರೂ ಎಲ್ಲರೂ ಒಂದೇ. ಆದರೆ ನಡೆಯುತ್ತಿರುವುದು ಮಾತ್ರ ಬೇರೆ.

ದೇಶದ ಉದ್ಧಾರಕ್ಕೆ ಬಡತನ ನಿರ್ಮೂಲನೆಯಾಗಬೇಕು, ಎಲ್ಲರಿಗೂ ಶಿಕ್ಷಣ ದೊರೆಯಬೇಕು, ಮೂಲಸೌಕರ್ಯ ಹೆಚ್ಚಬೇಕು. ಈ ಸಂಬಂಧ ಯೋಜನೆ ಹಮ್ಮಿಕೊಳ್ಳಲು ವಾಸ್ತವ ಅಂಕಿ ಅಂಶ ಬೇಕು. ಸರ್ಕಾರಗಳು ಎಡವುತ್ತಿರುವುದು ಅಥವಾ ಬೇಕೆಂತಲೇ ಮಾಡುತ್ತಿರುವ ತಪ್ಪು ಇರುವುದೇ ಇಲ್ಲಿ. ಅಂಕಿ ಅಂಶ ಸಂಗ್ರಹಣೆಗೆ ಅವು ಬಳಸುತ್ತಿರುವ ಮಾದರಿ ಜಾತಿ ಮತ್ತು ಮತಾಧಾರಿತ. ಜಾತೀಯತೆಯನ್ನು ಹೀಗೆ ನೋಡುವ ಕೆಲಸವನ್ನು “ಗುಣಾತ್ಮಕ ಜಾತೀಯತೆ’’ ಎಂದು ರಾಜಕೀಯ ಕಾರಣಕ್ಕಾಗಿ ಕೆಲವರು ಕರೆಯುವುದುಂಟು. ಹೇಗೆ ನೋಡಿದರೂ ಜನತಂತ್ರದಲ್ಲಿ ಜಾತೀಯತೆ ನಕಾರಾತ್ಮಕವೇ.

ಮೂಲಭೂತ ಅಂಕಿ ಅಂಶಗಳ ಸಂಗ್ರಹಣೆಗೆ ಸರ್ಕಾರ ನಿಯೋಜಿಸಿದ ಆಯೋಗಗಳು ಮೊದಲು ಆಧಾರವಾಗಿ ಇಟ್ಟುಕೊಳ್ಳುವುದೇ ಜಾತಿಯನ್ನು. ಬಡತನ, ಸಾಕ್ಷರತೆ, ಉದ್ಯೋಗಗಳನ್ನು ಆಧಾರವಾಗಿಟ್ಟುಕೊಂಡ ಯಾವ ಯೋಜನೆಯೂ ನಮ್ಮಲ್ಲಿ ರೂಪುಗೊಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ಆದ್ಯತೆ ಕೊಡಬೇಕು ಎಂದು ಸಂವಿಧಾನ ಹೇಳುವುದು ನಿಜ. ಆದರೆ ಜಾತಿಗಳ ಆಧಾರದಲ್ಲಿ ಆದ್ಯತೆ ಕೊಡಿ ಎಂದು ಅದು ಹೇಳಿಲ್ಲ. 1990ರಲ್ಲಿ ಜನತಾದಳ ಸರ್ಕಾರ ಇಂತಹ ಆದ್ಯತೆಯನ್ನು ಸೃಷ್ಟಿಸಿಕೊಂಡಿತು. 1980ರಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗಿದ್ದ, ಇನ್ನೂ ಚರ್ಚೆಯಲ್ಲೇ ಇದ್ದ ಮಂಡಲ್ ವರದಿಯನ್ನು ಇದಕ್ಕೆ ಆಧಾರವಾಗಿ ಇಟ್ಟುಕೊಳ್ಳಲಾಯಿತು. ಅಂದಿನ ಪ್ರಧಾನಿ ವಿ.ಪಿ ಸಿಂಗ್ ಏಕಾಏಕಿ ವರದಿಯ ಜಾರಿಗೆ ಮುಂದಾಗಿಬಿಟ್ಟರು. ಈ ವರದಿಯಲ್ಲಿ 3,742 ಜಾತಿಗಳನ್ನು ಹಿಂದುಳಿದ ವರ್ಗ ಎಂದು ಗುರುತಿಸಲಾಗಿದ್ದು, ಹಿಂದೂಗಳಲ್ಲಿ ಶೇ.52ರಷ್ಟು, ಹಿಂದೂಯೇತರ ಸಮುದಾಯಗಳಲ್ಲಿಯೂ ಶೇ.52ರಷ್ಟು ಹಿಂದುಳಿದ ವರ್ಗಗಳಿವೆ ಎಂದು ಹೇಳಿ ಇವುಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ. 1931ರ ಗಣತಿಯ ಆಧಾರದಲ್ಲಿ ಮಂಡಲ್ ವರದಿ ಮೀಸಲಾತಿ ಹೇಳಿದೆ ಎಂಬುದು ಕುತೂಹಲಕರ. ಈ ವರದಿ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡ ಕ್ರಮ ಅಸಂಬದ್ಧ ಎಂಬುದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಹಾಗಾಗಿಯೇ ಅದು ಇತರ ಹಿಂದುಳಿದ ವರ್ಗದ ನಿರ್ಧಾರದ ಮಾನದಂಡವೇನು ಮತ್ತು ಶೇ.27 ಮೀಸಲಾತಿ ನೀಡುವ ಕಾರಣ ಏನು ಎಂದು ಎರಡು ಪ್ರಶ್ನೆಗಳನ್ನು 2006ರಲ್ಲಿಯೇ ಕೇಂದ್ರದ ಮುಂದೆ ಇಟ್ಟಿದೆ. ಇದಕ್ಕೆ ಸರ್ಕಾರ ಇನ್ನೂ ಉತ್ತರ ನೀಡಿಲ್ಲ!

ಶಾಲಾ ಪ್ರವೇಶಾತಿಯಿಂದ ಹಿಡಿದು, ಮತಪತ್ರದ ದಾಖಲೆವರೆಗೆ ಸರ್ಕಾರ ವ್ಯಕ್ತಿ ವಿವರ ಪಡೆಯುವ ಯಾವುದೇ ಅರ್ಜಿಯಲ್ಲಿ ರಾಷ್ಟ್ರೀಯತೆಯ ಕಾಲಂ ಇರಲಿ, ಬಿಡಲಿ, “ಜಾತಿ” ಉಲ್ಲೇಖ ತುಂಬುವುದು ಕಡ್ಡಾಯ. ಯಾವ ಜಾತಿಯವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂದು ಪತ್ತೆ ಹಚ್ಚುವುದಷ್ಟೇ ಇದರ ಉದ್ದೇಶ. ಈಗ ಜಾತಿ ಗಣತಿಗೂ ಸರ್ಕಾರ ಮುಂದಾಗಿದೆ. ಕೆಲವು ಜಾತಿಗಳು ತಮ್ಮದು ಇದೇ ಜಾತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ ಎಂದು ಕರೆಕೊಡುವುದೂ ಇದೆ. ಇದರಿಂದ ಯಾವ ಅಭಿವೃದ್ಧಿ ಯೋಜನೆಗೂ ಆಗುವ ಲಾಭ ಅಷ್ಟರದ್ದೇ. ಯಾವ ಜಾತಿಯವರೇ ಆಗಲಿ, ಅವರ ಉದ್ಧಾರಕ್ಕೆ ಶಿಕ್ಷಣ, ಉದ್ಯೋಗ, ಮೂಲಸೌಕರ್ಯಗಳು ಬೇಕೇ ಬೇಕು. ಇವುಗಳನ್ನು ಒದಗಿಸುವುದಕ್ಕೂ ಜಾತಿಗೂ ಏನು ಸಂಬಂಧ?

ಭಾಷೆ, ಧರ್ಮ ಮತ್ತು ಜಾತಿಯ ಹೆಸರಲ್ಲಿ ಜನರನ್ನು ಬೇಗನೇ ತಲುಪಬಹುದು. ಅಮೂರ್ತವಾದ ಈ ಸಂಗತಿಗಳ ಆಂತರಿಕ ಜಾಲ ಬಹು ಸಂಕೀರ್ಣ. ಈ ವಿಷಯಗಳಲ್ಲಿ ಸಮಾನವಾಗಿರುವ ಜನ ಬೇಗನೇ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಜನತಂತ್ರದಲ್ಲಿ ಜನರನ್ನು ತಲುಪುವುದು ಮುಖ್ಯ. ಅಭಿವೃದ್ಧಿ ಸಾಧಿಸಿ ಜನ ಗುರುತಿಸುವಂತೆ ಮಾಡುವುದು ಕಷ್ಟದ ಕೆಲಸ. ಜನತಂತ್ರದಲ್ಲಿ ಅಧಿಕಾರ ಬರುವುದು ಬಹುಮತದಿಂದ. ಇದನ್ನು ಪಡೆಯುವ ಸುಲಭ ಮಾರ್ಗ ಜಾತಿ, ಮತ, ಧರ್ಮ ಮತ್ತು ಭಾಷೆಗಳಲ್ಲಿದೆ. ಈ ರಹಸ್ಯ ರಾಜಕಾರಣಿಗಳಿಗೆ ತಿಳಿದಿದೆ.

ಹಾಗಾಗಿಯೇ ನಮ್ಮಲ್ಲಿ ಪಂಚಾಯ್ತಿಯಿಂದ ಸಂಸತ್‍ವರೆಗೆ ಯಾವುದೇ ಚುನಾವಣೆ ನಡೆಯಲಿ, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಜಾತಿಯ ಎಷ್ಟು ಜನರ ಮತವಿದೆ ಎಂಬುದೇ ಎಲ್ಲ ಪಕ್ಷದವರ ಕಾಳಜಿ. ಹೆಚ್ಚು ಮತವಿರುವ ಜಾತಿಯ ಅಭ್ಯರ್ಥಿಯೇ ಉಮೇದುವಾರ. ಪ್ರಗತಿಪರ ಎಂದು ಕರೆದುಕೊಳ್ಳುವ ಪತ್ರಿಕೆಗಳೂ ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ಜಾತಿಗಳ ಎಷ್ಟು ಓಟುಗಳಿವೆ ಎಂದು ವಿಸ್ತೃತ ಸಮೀಕ್ಷೆ ಮಾಡಿ, ನಿಂತ ಅಭ್ಯರ್ಥಿ ಗೆಲ್ಲುತ್ತಾನೋ ಇಲ್ಲವೋ ಎಂದು ಭವಿಷ್ಯ ಹೇಳುತ್ತವೆ! “ಜಾತ್ಯಾತೀತ ಪಕ್ಷ’’ ಎಂದು ಬೋರ್ಡು ಹಾಕಿಕೊಂಡವರ ಕತೆಯೂ ಇದೇ. ನಿಂತ ಅಭ್ಯರ್ಥಿ “ನಮ್ಮವನೇ” ಎಂದು ನೋಡುವುದಷ್ಟೇ ಮತದಾರರ ಕೆಲಸ. ಅಭ್ಯರ್ಥಿಯಲ್ಲಿ ಅವರು ಗುರುತಿಸಿಕೊಳ್ಳುವ ಬೇರೆ ಯಾವ ಸಮಾನ ಅಂಶವೂ ಇರುವುದಿಲ್ಲ!

ಜಾತಿ ರಾಜಕಾರಣಕ್ಕೆ ಕರ್ನಾಟಕವನ್ನೇ ಮಾದರಿಯಾಗಿ ನೋಡೋಣ. 1991ರ ಜನಗಣತಿಯಲ್ಲಿ ಕರ್ನಾಟಕದಲ್ಲಿ ಇದ್ದ ಆದಿವಾಸಿ ಸಂಖ್ಯೆ 19.16 ಲಕ್ಷ. 2001ರ ಗಣತಿಯಲ್ಲಿ ಇದರ ಪ್ರಮಾಣ 34.64 ಲಕ್ಷವಾಗಿಬಿಟ್ಟಿತು! 2011ರಲ್ಲಿ ಇದರ ಪ್ರಮಾಣ 11621787 (ಗ್ರಾಮೀಣ:3,429,791 ಹಾಗೂ ನಗರ: 819,196). ಅಂದರೆ ಶೇ.54.7! ಹತ್ತು ವರ್ಷದಲ್ಲಿ ಶೇ.80.8ಕ್ಕಿಂತ ಹೆಚ್ಚಳ! ಇದು ಜನನ ಪ್ರಮಾಣದಿಂದ ಆದುದಲ್ಲ. ಹೊಸ ಹೊಸ ಗುಂಪುಗಳನ್ನು ಆದಿವಾಸಿ ಪಟ್ಟಿಗೆ ಸೇರಿಸಿದ್ದರಿಂದ ಆದುದು. ಈ ಪಟ್ಟಿಗೆ ತಮ್ಮನ್ನೂ ಸೇರಿಸಿ ಎಂದು ಹೋರಾಟ ಮಾಡುವ ಗುಂಪುಗಳೂ ಇವೆ. ಇಲ್ಲಿರುವುದು ಆದಿವಾಸಿ ಗುಂಪುಗಳಿಗೆ ಇರುವ ಸವಲತ್ತು ತೋರಿಸಿ ಈ ಪ್ರಮಾಣದ ಜನರನ್ನು ಓಲೈಸುವ ಮಸಲತ್ತು.

ಜನರೂ ಇಂಥ ರಾಜಕಾರಣವನ್ನು ಒಪ್ಪಿಕೊಂಡಿದ್ದಾರೆ. ಸಾಲದ್ದಕ್ಕೆ ಜಾತಿಯನ್ನು ಹಕ್ಕಾಗಿ ಪರಿಗಣಿಸಿದ್ದಾರೆ. ಜನರ ಓಲೈಕೆಗೆ ರಾಜಕಾರಣಿಗಳು ಕಂಡುಕೊಂಡ ಕಳ್ಳ ಮಾರ್ಗ ಅವರಿಗೇ ತಿರುಮಂತ್ರವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ವರ್ಷ ಮೀಸಲಾತಿಗಾಗಿ ರಾಜಸ್ಥಾನದಲ್ಲಿ ಗುರ್ಜರರು ಮತ್ತು ಮೀನಾ ಸಮುದಾಯದ ನಡುವೆ ನಡೆದ ಗಲಭೆ ಇದಕ್ಕೆ ಸಾಕ್ಷಿ. ಜಾತಿ ಧರ್ಮದ ಹೆಸರಲ್ಲಿ ಜನರನ್ನು ಒಡೆಯುತ್ತಿರುವವರು ಯಾರು? ಒಂದು ಗುಂಪು ಹೆಚ್ಚು ಮತ್ತೊಂದು ಗುಂಪು ಕಡಿಮೆ ಎನ್ನುವಂತಾಗಲು ಕಾರಣ ಯಾರು? ಮತಬ್ಯಾಂಕಿನ ಉದ್ದೇಶದಿಂದ ಆಮಿಷ ತೋರುವ ಸರ್ಕಾರವೇ ಸಮಾಜವನ್ನು ಛಿದ್ರ ಮಾಡುತ್ತಿದೆ.

ಬಡತನ, ನಿರಕ್ಷರತೆ, ನಿರುದ್ಯೋಗ, ಮೂಲಸೌಕರ್ಯ ಕೊರತೆ ಮೊದಲಾದವುಗಳ ಆಧಾರದಲ್ಲಿ ಜಾತಿ ನಿರಪೇಕ್ಷವಾದ ವರದಿ ಮತ್ತು ಅಂಥ ಯೋಜನೆಯ ಜಾರಿ ನಮ್ಮಲ್ಲಿ ಅಸಾಧ್ಯವೇನಲ್ಲ. ಆದರೆ ಜನರ ದೌರ್ಬಲ್ಯ ತಿಳಿದ ಜನತಂತ್ರ ವ್ಯವಸ್ಥೆಯ ಸೂತ್ರ ಹಿಡಿದ ನೇತಾಗಳು ಇದಕ್ಕೆ ಅವಕಾಶ ಕೊಡಬೇಕಲ್ಲ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments