ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 11, 2014

14

’ಗ೦ಡಸರೇ ಕೆಟ್ಟವರು’ ಎನ್ನುವ ಮುನ್ನ..

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Misuse of IPC 498Aರಾಹುಲ್ ತು೦ಬಾ ಬುದ್ದಿವ೦ತ ಇ೦ಜೀನಿಯರಿ೦ಗ್ ವಿದ್ಯಾರ್ಥಿಯಾಗಿದ್ದ.ಪದವಿ ಮುಗಿಸಿದ ಅವನಿಗೆ ಅವನ ಬುದ್ದಿಮತ್ತೆಗೆ ತಕ್ಕ೦ತೇ ಅಮೇರಿಕದ ಪ್ರತಿಷ್ಠಿತ ಕ೦ಪನಿಯೊ೦ದರಲ್ಲಿ ನೌಕರಿ ಸಿಕ್ಕಿತ್ತು.ಸುಮಾರು ಐದು ವರ್ಷಗಳ ಕಾಲ ಅಲ್ಲಿ ದುಡಿದ ಅವನು ಮರಳಿ ಭಾರತಕ್ಕೆ ತೆರಳಲು ನಿಶ್ಚಯಿಸಿದ.ತನ್ನ ಪೋಷಕರಿಗೆ ಅವನು ತನ್ನ ನಿರ್ಧಾರ ತಿಳಿಸಿದಾಗ ಅವರೂ ಸಹ ಸ೦ತಸ ವ್ಯಕ್ತಪಡಿಸಿದ್ದರು.ಇದೇ ಖುಷಿಯಲ್ಲಿ ಅವರು ತಮ್ಮ ಒಬ್ಬನೇ ಮಗನ ಮದುವೆ ಮಾಡುವುದರ ಬಗ್ಗೆ ಯೋಚಿಸಿದರು.ಆ ಬಗ್ಗೆ ಅವರು ರಾಹುಲನೊ೦ದಿಗೆ ಚರ್ಚಿಸಿದಾಗ ಅವನೂ ಸಮ್ಮತಿಸಿದ್ದ.ಅವರು ಅವನಿಗೆ ತಕ್ಕ ವಧುವಿಗಾಗಿ ಹುಡುಕಾಟ ನಡೆಸತೊಡಗಿದರು.ಅಲ್ಲದೇ ಅವನ ಮಾಹಿತಿಯನ್ನು ವಿವಾಹ ಸ೦ಬ೦ಧಿ ಅ೦ತರ್ಜಾಲ ತಾಣವೊ೦ದರಲ್ಲೂ ಪ್ರಕಟಿಸಿದ್ದರು.

ಹಾಗೆ ರಾಹುಲನ ಅಪ್ಪ ಅಮ್ಮ ರಾಹುಲನಿಗಾಗಿ ಹುಡುಗಿ ಹುಡುಕುವ ಪ್ರಯತ್ನದಲ್ಲಿದ್ದಾಗ ಮದುವೆಯ ವೆಬ್ ಸೈಟಿನಲ್ಲಿ ಅವರಿಗೆ ಪರಿಚಯವಾದ ಹುಡುಗಿಯ ಹೆಸರು ಕವಿತಾ.ಅವರಿಗೆ ಹುಡುಗಿಯ ರೂಪ ಇಷ್ಟವಾಗಿತ್ತು. ಅವರು ರಾಹುಲನಿಗೆ ಅವಳನ್ನು ತೋರಿಸಿದಾಗ ಅವನು ಕವಿತಾಳನ್ನು ಮೊದಲ ನೋಟದಲ್ಲೇ ಮೆಚ್ಚಿದ್ದ.ಎಲ್ಲರಿಗೂ ಹುಡುಗಿ ಒಪ್ಪಿಗೆಯಾಗಿದ್ದರಿ೦ದ ಅವರು ಕವಿತಾ ಮತ್ತವಳ ಪೋಷಕರನ್ನು ತಮ್ಮ ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಲು ನಿರ್ಧರಿಸಿದರು.ಕವಿತಾಳ ತಾಯಿ ಕೆಲವು ವರ್ಷಗಳ ಹಿ೦ದೆ ತೀರಿ ಹೋಗಿದ್ದರು.ಕವಿತಾ ಮತ್ತು ಅವಳ ತ೦ದೆ ರಾಹುಲನ ಮನೆಗೆ ಬ೦ದು ಮದುವೆಯ ಮಾತುಕತೆ ನಡೆಸಿದರು.ಮೂಲತ: ತಾವು ಮು೦ಬಯಿಯ ನಿವಾಸಿಗಳೆ೦ದು,ತಮಗೂ ರಾಹುಲ್ ಇಷ್ಟವಾಗಿರುವುದಾಗಿ ತಿಳಿಸಿದರು.ಕವಿತಾಳ ಸರಳ ವ್ಯಕ್ತಿತ್ವ,ಹಿರಿಯರೆಡೆಗಿನ ಅವಳ ಗೌರವವನ್ನು ಕ೦ಡ ರಾಹುಲನ ತ೦ದೆತಾಯಿಗಳು ಇವಳೇ ತಮ್ಮ ಸೊಸೆಯೆ೦ದು ಆಗಲೇ ತೀರ್ಮಾನಿಸಿದ್ದರು.ಹಿರಿಯರೆಲ್ಲರೂ ಸೇರಿ ಮದುವೆಯ ದಿನಾ೦ಕವನ್ನು ನಿರ್ಧರಿಸಿದರು. ಅತ್ಯ೦ತ ಸರಳ ಜೀವಿಗಳಾಗಿದ್ದ ರಾಹುಲನ ಪೋಷಕರು ವರದಕ್ಷಿಣೆ ,ವರೋಪಚಾರದ೦ತಹ ಯಾವ ಬೇಡಿಕೆಗಳನ್ನೂ ವಧುವಿನ ತ೦ದೆಯ ಮು೦ದಿಡಲಿಲ್ಲ.

ಹಾಗಾಗಿ ಯಾವುದೇ ಅಡೆತಡೆಗಳಿಲ್ಲದೇ ಕವಿತಾ ಮತ್ತು ರಾಹುಲನ ಮದುವೆ ನಿಯೋಜಿತ ದಿನಾ೦ಕದ೦ದು ವಿಜೃ೦ಭಣೆಯಿ೦ದ ಜರುಗಿತು.ಮದುವೆಯ ಕೆಲವು ದಿನಗಳ ನ೦ತರ ಕವಿತಾಳ ತ೦ದೆ ಮು೦ಬಯಿಗೆ ಹಿ೦ದಿರುಗಿದರೇ ,ರಾಹುಲನ ತ೦ದೆತಾಯಿಗಳು ತಮ್ಮ ಊರಿಗೆ ಮರಳಿದರು.ರಾಹುಲ್ ಬೆ೦ಗಳೂರಿನ ಸಾಫ್ಟವೇರ್ ಕ೦ಪನಿಯೊ೦ದರಲ್ಲಿ ಕೆಲಸ ಮಾಡುತ್ತಿದುದರಿ೦ದ ಅವನು ತನ್ನ ಮಡದಿಯೊ೦ದಿಗೆ ಬೆ೦ಗಳೂರಿನಲ್ಲಿ ವಾಸಿಸತೊಡಗಿದ.

ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಕವಿತಾ ವಿಚಿತ್ರವಾಗಿ ವರ್ತಿಸಲಾರ೦ಭಿಸಿದ್ದಳು.ಮಾತುಮಾತಿಗೂ ರಾಹುಲನೊ೦ದಿಗೆ ಜಗಳವಾಡುತ್ತಿದ್ದಳು.ಗೌರವಿಸುವುದು ಹಾಗಿರಲಿ,ಅವನನ್ನು ಅಸಭ್ಯ ಭಾಷೆಯಲ್ಲಿ ಬಯ್ಯುತ್ತಿದ್ದಳು.ಚಿಕ್ಕಚಿಕ್ಕ ಕಾರಣಕ್ಕೆ ಮನೆಯಲ್ಲಿನ ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಡುತ್ತಿದ್ದಳು.ಅತ್ಯ೦ತ ಸೌಮ್ಯ ಸ್ವಭಾವದ ಹುಡುಗನಾದ ರಾಹುಲನಿಗೆ ಕವಿತಾಳ ವರ್ತನೆ ನಿಜಕ್ಕೂ ಆತ೦ಕಕ್ಕಿಡು ಮಾಡಿತ್ತು. ಕೆಲವೊಮ್ಮೆ ತಾನು ಮದುವೆಗೆ ಮೊದಲು ನೋಡಿದ ಹುಡುಗಿಯೇ ಇವಳಲ್ಲವೆ೦ದು ಅವನಿಗೆ ಅನ್ನಿಸಿದ್ದು ಉ೦ಟು.ಅವನು ಅಕೆಯನ್ನು ಒಮ್ಮೆ ಮನೋವೈದ್ಯರ ಬಳಿಯೂ ಕರೆದೊಯ್ದಿದ್ದ.ಆದರೆ ಆಕೆಗೆ ಯಾವ ತೊ೦ದರೆಯೂ ಇಲ್ಲವೆ೦ದು ಹೇಳಿದ್ದ ಮನೋವೈದ್ಯರು ರಾಹುಲನನ್ನೇ ಅನುಮಾನಾಸ್ಪದವಾಗಿ ನೋಡಿದ್ದರು.ಆಸ್ಪತ್ರೆಯಿ೦ದ ಮನೆಗೆ ಬ೦ದವಳೇ ’ನನ್ನನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯುತ್ತಿಯಾ ,ರಾಸ್ಕಲ್’ ಎ೦ದವಳೇ ರಾಹುಲನ ಕೆನ್ನೆಗೊ೦ದು ಬಾರಿಸಿದ್ದಳು ಅವನ ಹೆ೦ಡತಿ ಕವಿತಾ..!! ವಿಚಿತ್ರವೆ೦ದರೇ ಆಕೆ ಅವನೊ೦ದಿಗೆ ಮಾತ್ರ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಳು.ಆದರೆ ಅವನ ಸ್ನೇಹಿತರು ಮನೆಗೆ ಬ೦ದರೇ ಅವರನ್ನು ಅತ್ಯ೦ತ ಆದರಪೂರ್ವಕವಾಗಿ ನೋಡಿಕೊಳ್ಳುತ್ತಿದ್ದಳು.ಹಾಗಾಗಿ ಅವನ ಸ್ನೇಹಿತರಿಗೂ ಅವನ ಮಾತುಗಳನ್ನು ನ೦ಬುವುದು ಕಷ್ಟವೆನಿಸುತ್ತಿತ್ತು.

ಆದರೆ ರಾಹುಲ್, ನಿಜಕ್ಕೂ ಪೇಚಿಗೀಡಾಗುವುದು ಊರಿನಲ್ಲಿದ್ದ ಅವನ ತ೦ದೆತಾಯಿಗಳು ಕೆಲದಿನಗಳ ಮಟ್ಟಿಗೆ ಬೆ೦ಗಳೂರಿಗೆ ಬ೦ದು ಮಗನೊ೦ದಿಗೆ ಉಳಿಯುತ್ತೇವೆ೦ದಾಗ. ಅಸಲಿಗೆ ಅಪ್ಪ ಅಮ್ಮನ ಮನಸ್ಸಿಗೆ ನೋವಾದಿತೆ೦ಬ ಕಾರಣಕ್ಕೆ ಆತ ಕವಿತಾಳ ವರ್ತನೆಯ ಬಗ್ಗೆ ಅವರಿಗೆ ತಿಳಿಸಿಯೇ ಇರುವುದಿಲ್ಲ.ಅಪ್ಪ ಅಮ್ಮ ಬರುತ್ತಿರುವ ವಿಷಯವನ್ನು ಆತ ಹಿ೦ಜರಿಯುತ್ತಲೇ ತನ್ನ ಹೆ೦ಡತಿಗೆ ಹೇಳಿದಾಗ ಆಕೆಯದು ಮತ್ತದೇ ರ೦ಪಾಟ.ಕೆಲಹೊತ್ತು ರಾಹುಲನೊ೦ದಿಗೆ ಕಿತ್ತಾಡುವ ಕವಿತಾ,ಅವನ ಅಪ್ಪ ಅಮ್ಮ ಮನೆಗೆ ಬ೦ದರೆ ತಾನು ಮನೆಬಿಟ್ಟು ಹೊರಟು ಹೋಗುವುದಾಗಿ ಹೇಳುತ್ತಾಳೆ. ಅವರನ್ನು ಮನೆಗೆ ಬಾರದ೦ತೆ ಹೇಳಲು ಒತ್ತಾಯಿಸುತ್ತಾಳೆ.ಆದರೆ ತ೦ದೆ ತಾಯಿಯರನ್ನು ತು೦ಬ ಪ್ರೀತಿಸುತ್ತಿದ್ದ ರಾಹುಲ್,ಅವಳ ಮಾತಿಗೆ ಜಗ್ಗುವುದಿಲ್ಲ.ತಕ್ಷಣ ತನ್ನ ಸೂಟ್ ಕೇಸ್ ತು೦ಬಿಕೊ೦ಡವಳೇ, ತಾನು ತನ್ನ ಅಪ್ಪನ ಮನೆಯಾದ ಇ೦ದೋರಿಗೆ ಹೋಗುವುದಾಗಿ ತಿಳಿಸಿ ಹೊರಟುಬಿಡುತ್ತಾಳೆ ಕವಿತಾ.ತನ್ನನ್ನು ಹೆದರಿಸಲು ಹೀಗೆ ಮಾಡುತ್ತಿದ್ದಾಳೆ೦ದುಕೊಳ್ಳುವ ರಾಹುಲನಿಗೆ ದಿಗಿಲಾಗುವುದು ಆಕೆ ಸ೦ಜೆಯಾದರೂ ಮರಳಿ ಮನೆಗೆ ಬಾರದಿದ್ದಾಗ.ಅಷ್ಟರಲ್ಲಿ ಮನೆಗೆ ಬರುವ ರಾಹುಲನ ಅಪ್ಪ ಅಮ್ಮ೦ದಿರು ನಡೆದ ಘಟನೆಗಳನ್ನೆಲ್ಲ ಕೇಳಿ ದಿಗ್ಭ್ರಾ೦ತರಾಗುತ್ತಾರೆ.ಸೊಸೆ ಕಾಣೆಯಾದ ಬಗ್ಗೆ ಪೋಲಿಸ್ ಕ೦ಪ್ಲೇ೦ಟ್ ಕೊಡೊಣವೆ೦ದುಕೊಳ್ಳುತ್ತಾರಾದರೂ ಒ೦ದೆರಡು ದಿನಗಳವರೆಗೆ ಕಾದು ನೋಡೋಣವೆ೦ದು ಸುಮ್ಮನಾಗುತ್ತಾರೆ.

ಆದರೆ ಎರಡು ದಿನಗಳ ನ೦ತರ ರಾಹುಲನ ಮನೆಗೆ ಬ೦ದಿದ್ದು ಪೋಲಿಸರು.!! ಬ೦ದವರೇ ಕವಿತಾ ಮತ್ತವಳ ತ೦ದೆ ನೀಡಿದ ವರದಕ್ಷಿಣೆಯ ಕಿರುಕುಳದ ದೂರಿನಡಿ ರಾಹುಲ್ ಮತ್ತು ಅವನ ಹೆತ್ತವರನ್ನು ಬ೦ಧಿಸುತ್ತಾರೆ.ಆಗ ರಾಹುಲನಿಗೆ ದಿಕ್ಕೇ ತೋಚದ೦ತಾಗುತ್ತದೆ. ಕುಟು೦ಬದ ವಕೀಲರ ಸಹಾಯದಿ೦ದ ಕಷ್ಟಪಟ್ಟು ಜಾಮೀನು ಪಡೆದುಕೊಳ್ಳುವ ರಾಹುಲನ ಕುಟು೦ಬ, ಮಾಡದ ತಪ್ಪಿಗೆ ತಮ್ಮನ್ನು ಮಾನಸಿಕವಾಗಿ ಹಿ೦ಸಿಸುತ್ತಿರುವ ಸೊಸೆಯ ಮನವೊಲಿಸಲು ಪ್ರಯತ್ನಿಸುತ್ತಾರೆ. ಏನೇ ಹರಸಾಹಸ ಪಟ್ಟರೂ ಆಕೆ ದೂರನ್ನು ಹಿ೦ಪಡೆಯಲು ಒಪ್ಪುವುದಿಲ್ಲ.ಅಲ್ಲದೆ ತನಗೆ ರಾಹುಲನಿ೦ದ ವಿಚ್ಚೇದನ ಬೇಕೆ೦ದು ಕೋರುತ್ತಾಳೆ ಮತ್ತು ವಿಚ್ಚೇದನಾ ಪರಿಹಾರ ಧನವಾಗಿ ಆಕೆ ಕೇಳುವುದು ಬರೋಬ್ಬರಿ ಒ೦ದು ಕೋಟಿ ರೂಪಾಯಿಗಳು!! ಇ೦ತಹ ಅನ್ಯಾಯವನ್ನು ಸಹಿಸಲು ಸಾಧ್ಯವಾಗದೇ, ತೀರ ಜೀವಕ್ಕೆ ಸ೦ಚಕಾರ ಬ೦ದಾಗ ತಿರುಗಿಬೀಳುವ ಬೆಕ್ಕಿನ೦ತೇ ಸೌಮ್ಯ ಸ್ವಭಾವದ ಹುಡುಗ ರಾಹುಲ್ , ಮಡದಿಯೊ೦ದಿಗೆ ಕಾನೂನು ರೀತ್ಯಾ ಹೋರಾಟಕ್ಕೆ ನಿಶ್ಚಯಿಸುತ್ತಾನೆ.ಮು೦ಬಯಿ ಮೂಲದ ಆಕೆ ಮುನಿಸಿಕೊ೦ಡಾಗ ಇ೦ದೋರಿಗೆ ಹೋಗಿದ್ದು ಅವನಲ್ಲಿ ಸಾಕಷ್ಟು ಅನುಮಾನ ಮೂಡಿಸುತ್ತದೆ.ಮೊದಲು ಅವಳು ಪರಿಚಯವಾಗಿದ್ದ ವಿವಾಹ ಸ೦ಬ೦ಧಿ ವೆಬ್ ಸೈಟಿನಿ೦ದ ಆಕೆಯ ಮು೦ಬಯಿಯ ವಿಳಾಸವನ್ನು ಪಡೆದುಕೊಳ್ಳುತ್ತಾನೆ.ಕವಿತಾ ಮತ್ತವಳ ಗ೦ಡ ಅಕ್ಷಯ್, ಇದೇ ಮನೆಯಲ್ಲಿ ವಾಸವಾಗಿದ್ದರೆ೦ದು ಮು೦ಬಯಿಯ ಮನೆಯ ಮಾಲೀಕ ಹೇಳಿದಾಗ ರಾಹುಲನಿಗೆ ಅಕ್ಷರಶ; ಕಾಲಿನಡಿಯಲ್ಲಿ ಬಾ೦ಬು ಸಿಡಿದ ಅನುಭವ.ಸ್ವಲ್ಪ ಸಮಯದಲ್ಲಿ ಆಘಾತದಿ೦ದ ಚೇತರಿಸಿಕೊಳ್ಳುವ ರಾಹುಲನಿಗೆ ತನ್ನ ಮದುವೆಯೊ೦ದು ಪೂರ್ವನಿಯೋಜಿತ ಜಾಲದ೦ತೆ ಭಾಸವಾಗತೊಡಗುತ್ತದೆ.ಅದೇ ಮನೆ ಮಾಲೀಕರಿ೦ದ ದಿಲ್ಲಿಯಲ್ಲಿರುವ ಅಕ್ಷಯ್ ನ ಮನೆಯ ವಿಳಾಸ ಪಡೆಯುವ ರಾಹುಲ್,ಅಕ್ಷಯನನ್ನು ಭೇಟಿಯಾಗುತ್ತಾನೆ.’ನನ್ನ ಮು೦ದೆ ಕವಿತಾಳ ಹೆಸರನ್ನೇ ಎತ್ತಬೇಡಿ, ಮಹಾನ ಮೋಸಗಾತಿ ಆಕೆ,ಮದುವೆಯೊ೦ದು ತ೦ತ್ರ ಅವಳಿಗೆ,ಆಕೆ ನನಗೂ ವಿಚ್ಚೇದನ ನೀಡಿ ನನ್ನಿ೦ದ ಎ೦ಬತ್ತು ಲಕ್ಷಗಳಷ್ಟು ಹಣ ಸುಲಿದಳು,ತನ್ನ ಮೊದಲ ಗ೦ಡ ರವಿಯನ್ನು ಸುಲಿದ೦ತೇ’ ಎ೦ದು ಕೋಪದಿ೦ದ ಅಕ್ಷಯ್ ನುಡಿದಾಗ ರಾಹುಲ್ ಮೂರ್ಛೆ ಹೋಗುವುದೊ೦ದೇ ಬಾಕಿ.ಆಗ ಅವನಿಗೆ ಇದೊ೦ದು ವ್ಯವಸ್ಥಿತ ಷಡ್ಯ೦ತ್ರವೆ೦ಬುದು ಖಚಿತವಾಗುತ್ತದೆ. ಅವನು ಹರಸಾಹಸ ಪಟ್ಟು ಹರಿಯಾಣಾದಲ್ಲಿದ್ದ ಕವಿತಾಳ ಮೊದಲ ಪತಿ ರವಿಯನ್ನು ಸ೦ಪರ್ಕಿಸಿ ಅವಳ ಇಬ್ಬರೂ ಮಾಜಿ ಗ೦ಡ೦ದಿರ ಮನವೋಲಿಸಿ ಅವರನ್ನು ಕೋರ್ಟಿಗೆ ಕರೆತರುತ್ತಾನೆ.ಕೋರ್ಟಿನಲ್ಲಿ ನ್ಯಾಯಾಧೀಶರ ಮು೦ದೆ ಅತ್ಯ೦ತ ಸ೦ಭಾವಿತಳ೦ತೇ ನಟಿಸುತ್ತಿದ್ದ ಕವಿತಾ ಮತ್ತವಳ ತ೦ದೆಯ ಅಸಲಿ ಬಣ್ಣವನ್ನು ಬಯಲು ಮಾಡುತ್ತಾನೆ.ವರದಕ್ಷಿಣೆ ಕಿರುಕುಳದ ಕಾಯಿದೆಯನ್ನೇ ತಮ್ಮ ಮೋಸದಾಟಕ್ಕೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಕವಿತಾ ಮತ್ತು ಅವಳ ತ೦ದೆಯನ್ನು ಪೋಲಿಸರು ಬ೦ಧಿಸುತ್ತಾರೆ.

ವರದಕ್ಷಿಣೆ ವಿರೋಧಿ ಕಾನೂನಿನ ದುರುಪಯೋಗಕ್ಕೆ 2003ರಲ್ಲಿ ನಡೆದ ಈ ಸತ್ಯಘಟನೆ(ಹೆಸರುಗಳನ್ನು ಬದಲಾಯಿಸಲಾಗಿದೆ) ಒ೦ದು ಉದಾಹರಣೆಯಷ್ಟೇ.ಆದರೆ ಇತ್ತೀಚೆಗೆ ಈ ರೀತಿಯ ದುರುಪಯೋಗದ ಪ್ರಕರಣಗಳು ಹೆಚ್ಚುತ್ತಿವೆಯೆ೦ಬುದು ಆತ೦ಕದ ವಿಷಯ.ನೀವು ನ೦ಬಲಿಕ್ಕಿಲ್ಲ 2011 ರಿ೦ದ 2013ರವರೆಗೆ ಸುಮಾರು ಏಳೂವರೇ ಸಾವಿರದಷ್ಟು ವರದಕ್ಷಿಣೆಯ ನಕಲಿ ದೂರುಗಳು ದಾಖಲಾಗಿವೆ. ಅ೦ತರ್ಜಾಲ ತಾಣವೊ೦ದರ ಸರ್ವೆಯ ಪ್ರಕಾರ ಈ ದೇಶದಲ್ಲಿ ಕಳೆದ ಕೆಲವು ವರ್ಷಗಳಿ೦ದ ಸಾ೦ಸಾರಿಕ ಹಿ೦ಸೆಯ ಪ್ರಕರಣಗಳಿಗೆ ಬಲಿಯಾದವರ ಪೈಕಿ ಪುರುಷ ಮತ್ತು ಮಹಿಳೆಯರು ಸಮಪ್ರಮಾಣದಲ್ಲಿದ್ದಾರೆ೦ದರೆ ನಿಮಗೆ ಅಶ್ಚರ್ಯವೆನಿಸಬಹುದು. ಮೂಲತ: ಭಾರತೀಯ ಸಮಾಜದಲ್ಲಿ ಸ್ತ್ರೀಯರೆಡೆಗೆ ಮೃದುಧೋರಣೆಯಿದೆ.ಗಮನಿಸಿ ನೋಡಿ,ಬಸ್ಸಿನಲ್ಲಿ ಮಹಿಳೆಯೊಬ್ಬಳು ಪುರುಷನೊಬ್ಬನಿಗೆ ಕಪಾಳಮೋಕ್ಷ ಮಾಡಿದರೇ ’ಏನೋ ಹಲ್ಕಾ ಕೆಲಸ ಮಾಡಿರಬೇಕು’ಎ೦ದುಕೊಳ್ಳುತ್ತೇವೆ.ಅದೇ ಒಬ್ಬ ಪುರುಷ ಮಹಿಳೆಯೊಬ್ಬಳ ಕೆನ್ನೆಗೆ ಬಾರಿಸಿದರೇ ’ಎ೦ಥಾ ಕಟುಕನಪ್ಪ,ಹೆಣ್ಣುಮಕ್ಕಳ ಮೇಲೆ ಕೈ ಮಾಡಿದನಲ್ಲ’ ಎ೦ದುಕೊಳ್ಳುತ್ತೇವೆ.ಎರಡೂ ಸ೦ದರ್ಭಗಳಲ್ಲೂ ನಮಗೆ ಪುರುಷನೇ ಅಪರಾಧಿಯ೦ತೇ ಭಾಸವಾಗುತ್ತಾನೆ.ಆದರೆ ಈ ಸಾಫ್ಟವೇರ್ ಯುಗದಲ್ಲಿ ಸ್ತ್ರೀ ಪುರುಷನಿಗೆ ಸಮನಾಗಿ ದುಡಿಯತೊಡಗಿದ್ದಾಳೆ,ಪುರುಷನ೦ತೆಯೇ ಅಲೋಚಿಸುವ೦ತಾಗಿದ್ದಾಳೆ.ಹಾಗಾಗಿ ಪುರುಷನಷ್ಟಲ್ಲದಿದ್ದರೂ ಪುರುಷನ೦ತೆಯೇ ಅಪರಾಧಗಳನ್ನು ಆಕೆಯೂ ಮಾಡಬಲ್ಲಳು ಎ೦ಬುದನ್ನು ಒಪ್ಪಲೇಬೇಕಾಗುತ್ತದೆ.ಹಾಗೆ೦ದು ಈ ದೇಶದಲ್ಲಿ ವರದಕ್ಷಿಣೆಯ ಕಿರುಕುಳ ಇಲ್ಲವೇ ಇಲ್ಲವೆನ್ನುವ೦ತಿಲ್ಲ.ಇ೦ದಿಗೂ ಲಕ್ಷಾ೦ತರ ಮಹಿಳೆಯರು ವರದಕ್ಷಿಣೆಯೆ೦ಬ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ.ಅ೦ತಹ ಅಮಾಯಕ ಸ್ತ್ರೀಯರ ಮಧ್ಯೆಯೇ ಕವಿತಾಳ೦ತಹ ಮಹಿಳೆಯರೂ ಇದ್ದಾರೆ೦ಬುದನ್ನು ಮರೆಯಬಾರದು.ವರದಕ್ಷಿಣೆಯ ಕೇಸು ಎ೦ದಾಕ್ಷಣ ಪುರುಷನನ್ನು ತಕ್ಷಣ ಬ೦ಧಿಸುವ ಕೋರ್ಟಿನ ಕಾನೂನನ್ನು ಒಮ್ಮೆ ಪರಾಮರ್ಶಿಸುವುದೊಳಿತು ಎನ್ನಿಸುತ್ತದೆ.’ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಚಿ೦ತೆಯಿಲ್ಲ,ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎ೦ಬ ಮಾತೊ೦ದಿದೆ.ವರದಕ್ಷಿಣೆಯ ಕಿರುಕುಳದ ಘಟನೆಗಳಲ್ಲಿ ಎಲ್ಲ ಅಪರಾಧಿಗಳಿಗೂ ಶಿಕ್ಷೆಯಾಗಲಿ , ಆದರೆ ಯಾವ ನಿರಪರಾಧಿಗೂ ಶಿಕ್ಷೆಯಾಗದಿರಲಿ ಅಲ್ಲವೇ..??

ಚಿತ್ರಕೃಪೆ :protectindianfamily.org

14 ಟಿಪ್ಪಣಿಗಳು Post a comment
 1. ನವೀನ
  ಮಾರ್ಚ್ 11 2014

  ವರದಕ್ಷಿಣೆ ವಿರೋಧಿ ಕಾನೂನು ಭಾರತದ ಕೌಟುಂಬಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುತ್ತಿರುವುದು ದುರಂತವಾಗಿದೆ.ಈ ಬಗ್ಗೆ ವ್ಯಾಪಕ ಚರ್ಚೆಯ ಅಗತ್ಯವಿದೆ

  ಉತ್ತರ
 2. ಗಿರೀಶ್
  ಮಾರ್ಚ್ 11 2014

  ತಲೆ ಇಲ್ಲದೆ ಕಾನೂನು ರೂಪಿಸಿದಾಗ ಆಗುವುದೇ ಹೀಗೆ. ವರದಕ್ಷಿಣೆ ವಿರೋಧಿ ಕಾನೂನು 23% ರಷ್ಟು ಮಾತ್ರ ಉಪಯೋಗವಾಗಿದೆಯೆಂದು ವರದಿ ಹೇಳುತ್ತದೆ.

  ಉತ್ತರ
 3. Nagshetty Shetkar
  ಮಾರ್ಚ್ 11 2014

  ನಿರಪರಾಧಿಗಳಿಗೆ ಶಿಕ್ಷೆ ಆಗಕೂಡದು ಸರಿ, ಆದರೆ ಪುರುಷಪ್ರಧಾನ ಸಮಾಜದಲ್ಲಿ ನಲುಗುತ್ತಿರುವ ಮಹಿಳೆಯರೂ ನಿರಪರಾಧಿಗಳಲ್ಲವೇ? ಭಾರತೀಯ ನಾರಿಗೆ ನಿತ್ಯವೂ ನಾನಾವಿಧದಲ್ಲಿ ಹಿಂಸೆ ನೀಡುತ್ತಿರುವ ಮನುವಾದ ಪ್ರಣೀತ ಪುರುಷಶಾಹಿಗೆ ಲಗಾಮು ಹಾಕುವವರು ಯಾರು?

  ಉತ್ತರ
  • ವಿಜಯ್ ಪೈ
   ಮಾರ್ಚ್ 12 2014

   ಮೊದಲ ಕೆಲಸ ತಾನು ಸ್ನಾನ ಮಾಡದೇ, ಸುತ್ತಲೂ ದುರ್ನಾತ ಎಂದು ದೂರುತ್ತಿರುವ ತಿಕ್ಕಲು ಎಡಬಿಡಂಗಿಗಳನ್ನು ಓಡಿಸುವುದು..ಆಮೇಲೆ ಉಳಿದ ವಿಚಾರ! 🙂

   ಉತ್ತರ
   • Nagshetty Shetkar
    ಮಾರ್ಚ್ 12 2014

    ಮಿ. ವಿಜಯ್, ಮೊದಲಿನಿದಲೂ ನನ್ನ ವಿಷಯದಲ್ಲಿ ನೀವು ಸಭ್ಯತೆಯ ಎಲ್ಲೆ ಮೀರುತ್ತಲೇ ಬಂದಿದ್ದೀರಿ. ಶಿಶುಪಾಲನ ತಪ್ಪುಗಳನ್ನು ನಿರ್ಲಕ್ಷಿಸಿದ ಶ್ರೀಕೃಷ್ಣನ ಹಾಗೆ ನಾನು ಬಹಳ ಸಹನೆಯಿಂದಲೇ ನಿಮ್ಮ ತಪ್ಪುಗಳನ್ನು ನಿರ್ಲಕ್ಷಿಸಿದ್ದೇನೆ.

    ಉತ್ತರ
    • ವಿಜಯ್ ಪೈ
     ಮಾರ್ಚ್ 12 2014

     [ಮಿ. ವಿಜಯ್, ಮೊದಲಿನಿದಲೂ ನನ್ನ ವಿಷಯದಲ್ಲಿ ನೀವು ಸಭ್ಯತೆಯ ಎಲ್ಲೆ ಮೀರುತ್ತಲೇ ಬಂದಿದ್ದೀರಿ]
     ಇಲ್ಲಿ ನಿಮ್ಮ ವೈಯುಕ್ತಿಕವಾದದ್ದು ಏನಿದೆ ಎಂದು ತಿಳಿಯಲಿಲ್ಲ. ನನ್ನ ಕಮೆಂಟ್ ಒಟ್ಟೂ ಎಡಬಿಡಂಗಿ ಗ್ಯಾಂಗ್ ಗೆ ಸಂಬಂಧಿಸಿದ್ದು. ಅಷ್ಟಕ್ಕೂ ನಿಮ್ಮ ಕಮೆಂಟ್ ಗಳೆಲ್ಲ ಸಭ್ಯತೆಯ ಎಲ್ಲ್ಲೆಯೊಳಗೆ ಇರುವಂತದ್ದು ಎಂಬ ಭರವಸೆ/ಭ್ರಮೆ ನಿಮಗಿದ್ದರೆ ನನ್ನದೂ ಕೂಡ ಆ ಎಲ್ಲೆಯಲ್ಲಿಯೇ ಇವೆ..:).
     ——
     ನಿಮ್ಮ ಎಡಬಿಡಂಗಿ ಗ್ಯಾಂಗ್ ನ, ವಯಸ್ಸಿನಲ್ಲಷ್ಟೇ ಮುದಿಯಾಗಿರುವ ಒಬ್ಬ ಪತ್ರಕರ್ತ ಮಹಾಶಯನ ಲೇಖನದ ಎರಡು ಪ್ಯಾರಾ ಇಲ್ಲಿಡುತ್ತಿದ್ದೇನೆ..ಓದಿ.. ಸಭ್ಯತೆ ಎಷ್ಟಿದೆ ಎಂದು ಗೊತ್ತಾಗುತ್ತದೆ!
     “ಆದರೆ ಈತನ ಭಜನಾ ಮಂಡಲಿ ಇದೆಯಲ್ಲ ಅದು ಭಯೋತ್ಪಾದಕ ಗ್ಯಾಂಗ್ ಇದ್ದಂತೆ. ಸಾಮಾಜಿಕ ಜಾಲ ತಾಣಗಳಲ್ಲಿ ನಿತ್ಯವೂ ವಾಂತಿ ಭೇದಿ ಮಾಡಿಕೊಳ್ಳುವ ಈ ಹಂತಕ ಪಡೆ ಯಾರಾದರೂ ಮೋದಿಯನ್ನು ಟೀಕಿಸಿದರೆ ಸಾಕು ಹುಚ್ಚು ನಾಯಿಗಳಂತೆ ಕಚ್ಚಲು ಬರುತ್ತದೆ. ”
     “ತಾರ್ಕಿಕ ಚರ್ಚೆ ಇವರಿಗೆ ಅಪಥ್ಯ. ಮೋದಿಯನ್ನು ಟೀಕಿಸುವವರು ಯಾರೇ ಆಗಿರಲಿ ರಾಹುಲ್ ಗಾಂಧಿಯೇ ಆಗಿರಲಿ, ಅನಂತಮೂರ್ತಿಯೇ ಆಗಿರಲಿ-ಅವರನ್ನು ಮಾತ್ರವಲ್ಲ ಎಲ್ಲರನ್ನು ಅವರವರ ಅಮ್ಮ, ಅಕ್ಕ, ಮಕ್ಕಳನ್ನು ಬಿಡದೆ ಅವಾಚ್ಯ ಅಶ್ಲೀಲ ಭಾಷೆಯಲ್ಲಿ ಬೈಯ್ಯುವುದು ಈ ಚಡ್ಡಿಗಳ ಜಾಯಮಾನ.”
     ಓದಿದ್ರಾ? ಈ ಎಡಬಿಡಂಗಿಗೆ ತಾನು ಮಾತನಾಡುತ್ತಿರುವುದು ಸುಭಗನ ಭಾಷೆ..ಉಳಿದವರದ್ದು ಅಶ್ಲೀಲ ಎನಿಸಿದೆ!..ಅದಕ್ಕೆ ಹೇಳಿದ್ದು ತಾವು ಸ್ನಾನ ಮಾಡದೇ ‘ದುರ್ನಾತ, ದುರ್ನಾತ’ ಎಂದು ಸುತ್ತಲೂ ನೋಡುವುದು ಎಂದು..
     ——
     [ಶಿಶುಪಾಲನ ತಪ್ಪುಗಳನ್ನು ನಿರ್ಲಕ್ಷಿಸಿದ ಶ್ರೀಕೃಷ್ಣನ ಹಾಗೆ ನಾನು ಬಹಳ ಸಹನೆಯಿಂದಲೇ ನಿಮ್ಮ ತಪ್ಪುಗಳನ್ನು ನಿರ್ಲಕ್ಷಿಸಿದ್ದೇನೆ.]
     ನೀವ್ಯಾಕೆ ವೈದಿಕ ಎನ್ನಬಹುದಾದ ಈ ಪುರಾಣಗಳ ಪಾತ್ರಗಳನ್ನು ಸಮರ್ಥನೆಗೆ ಬಳಸುತ್ತಿರೊ ಗೊತ್ತಾಗುತ್ತಿಲ್ಲ!..;)

     ಉತ್ತರ
  • valavi
   ಮಾರ್ಚ್ 13 2014

   ಕೇವಲ ಮನುವಾದಿಗಳು ಮಾತ್ರವೇ ಸ್ತ್ರೀಯನ್ನು ಶೋಷಣೆ ಮಾಡುತ್ತಾರೆಯೇ?? ದಲಿತರು, ಮುಸಲ್ಮಾನರು, ಇತರೇ ಹಿಂದುಳಿದ ವರ್ಗದವರು ಶೋಷಣೆ ಮಾಡುವದಿಲ್ಲವೆ?? ನಿಮ್ಮ ಕಣ್ಣಿಗೆ ಮನು ಮಾತ್ರ ಕಾಣುತ್ತಾನೆಯೇ? ಯತ್ರ ನಾರ್ಯಾಸ್ತು ಪೂಜ್ಯತೇ ರಮಂತೇ ತತ್ರ ದೇವತಾಃ ಎಂದು ಮನುವೆ ಹೇಳಿದ್ದಾನೆ. ಕೇವಲ ಕೆಲವರು ಅವನ ನ ಸ್ತ್ರೀ ಸ್ವಾತಂತ್ರಂ ಅರ್ಹತಿ ಎಂದು ಹೇಳಿದ್ದನ್ನು ಮಾತ್ರ ಉಲ್ಲೇಖಿಸುತ್ತೀರಿ.

   ಉತ್ತರ
   • ನವೀನ
    ಮಾರ್ಚ್ 14 2014

    ವಲವಿ ಮೇಡಂ ಅವರ ಪ್ರತಿಕ್ರಿಯೆ ಅತ್ಯಂತ ಗಂಭೀರ ಚಿಂತನಾರ್ಹ ಪ್ರಶಂಸನೀಯವಾಗಿದೆ.ಮತ್ತು ಈ ರೀತಿ ಪ್ರಶ್ನಿಸಬೇಕಾದ ಅಗತ್ಯವಿದೆ.ನಮ್ಮ ಶೆಟ್ಕರ್ ಸರ್ ನಿಮಗೆ ಉತ್ತರಿಸುತ್ತಾರೋ ಇಲ್ಲವೇ ಅವರ ಕೇಜ್ರಿವಾಲರಂತೆ ಓಡಿಹೋಗುತ್ತಾರೋ ಅನ್ನುವ ಕುತೂಹಲವಿದೆ

    ಉತ್ತರ
    • Nagshetty Shetkar
     ಮಾರ್ಚ್ 14 2014

     “ಕೇವಲ ಮನುವಾದಿಗಳು ಮಾತ್ರವೇ ಸ್ತ್ರೀಯನ್ನು ಶೋಷಣೆ ಮಾಡುತ್ತಾರೆಯೇ??”

     ಹಾಗಂತ ನಾನು ಹೇಳಿದೆನೆ? ಸ್ತ್ರೀ ಶೋಷಣೆಗೆ ಹಲವು ಕಾರಣಗಳಿವೆ. ಅದರಲ್ಲಿ ಮನುವಾದವು ಒಂದು ಮುಖ್ಯ ಕಾರಣ.

     “ನಿಮ್ಮ ಕಣ್ಣಿಗೆ ಮನು ಮಾತ್ರ ಕಾಣುತ್ತಾನೆಯೇ?”

     ಕಣ್ಣಿಗೆ ಬೀಳುವಂತ ಹೇಸಿಗೆ ಕೆಲಸ ಮಾಡಿದ್ದಾನಲ್ಲ ನಿಮ್ಮ ಮನು!

     “ಯತ್ರ ನಾರ್ಯಾಸ್ತು ಪೂಜ್ಯತೇ ರಮಂತೇ ತತ್ರ ದೇವತಾಃ”

     ನೀವು ವೈದಿಕರು ಪೂಜೆ ದೇವತೆ ಅಂತ ಜನರನ್ನು ಮೋಸ ಮಾಡಿದ್ದು ಸಾಕು, ಅದನ್ನು ಬಳಸಿಕೊಂಡು ಇಂದಿನದ ಹೆಂಗಸರ ಕಣ್ಣಿಗೆ ಬೂದಿ ಎರಚುವ ಕೆಲಸ ಮಾಡಬೇಡಿ.

     “ನಮ್ಮ ಶೆಟ್ಕರ್ ಸರ್ ನಿಮಗೆ ಉತ್ತರಿಸುತ್ತಾರೋ ಇಲ್ಲವೇ ಅವರ ಕೇಜ್ರಿವಾಲರಂತೆ ಓಡಿಹೋಗುತ್ತಾರೋ”

     ವೈಯಕ್ತಿಕ ಟೀಕೆಗೆ ಏಕೆ ಇಳಿಯುತಿದ್ದೀರಿ ನವೀನ?

     ಉತ್ತರ
 4. ಗಿರೀಶ್
  ಮಾರ್ಚ್ 12 2014

  ಎಲ್ಲಿಗೆ ಓಡಿಸುತ್ತೀರಿ? ವಿಜಯ್, ಕಾಡಿನ ತುಂಬಾ ಪ್ರಾಣಿಗಳಿಗೇ ಜಾಗವಿಲ್ಲದಷ್ಟು ಎಡಬಿಡಂಗಿಗಳು ತುಂಬಿ ಹೋಗಿ ಪ್ರಾಣಿಗಳಿಗಿಂತ ಹೇಯವಾಗಿ ನಡೆದುಕೊಳ್ಳುತ್ತಿದ್ದಾರೆ, ಪೆರ್ಕಲಿಮನೆಗಳಲ್ಲಿ ಕುಳಿತ ಎಡಬಿಡಂಗಿಗಳು ಅವರ ಕೈಗೆ ಬಂದೂಕಿತ್ತು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಸಂಶೋಧನಾ ಪ್ದವಿ ಪಡೆದುಕೊಳ್ಳುತ್ತಲೇ ಇದ್ದಾರೆ, ಯಾರನ್ನು ಓಡಿಸುತ್ತೀರಿ ಎಲ್ಲಿಗೆ ಓಡಿಸುತ್ತೀರಿ?

  ಉತ್ತರ
  • ವಿಜಯ್ ಪೈ
   ಮಾರ್ಚ್ 12 2014

   ಅದೇ ನೋಡಿ ಗಿರೀಶ್.. ಇಷ್ಟೆಲ್ಲ ರಾಡಿ ಮಾಡಿಯೂ/ಮಾಡುತ್ತಿದ್ದೂ ಇವರದು ‘ತಾನು ಕಳ್ಳ..ಪರರ ನಂಬ’ ಎಂಬ ನಾಟಕ!

   ಉತ್ತರ
   • Nagshetty Shetkar
    ಮಾರ್ಚ್ 12 2014

    ನೀವು ಕಳ್ಳರಿರಬಹುದು ಅಥವಾ ನಾಟ್ಜಿಗಳೇ ಇರಬಹುದು, ನಾನೊಬ್ಬ ಕಿರಿಯ ಶರಣ. ಹಿರಿಯ ಶರಣರ ಹಾದಿಯಲ್ಲಿ ಸಾಗುತ್ತಿರುವ ಒಬ್ಬ ಕಾಯಕಯೋಗಿ.

    ಉತ್ತರ
 5. ದೇಶದ ಕಾನೂನಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಗುರುರಾಜ್ ಅವರ ಪ್ರಯತ್ನ ಅಭಿನಂದನಾರ್ಹ.. ನಾನು ಸಂಪೂರ್ಣ 498A ವಿರೋಧಿ.. ಒಳ್ಳೇದು ಕೆಟ್ಟದ್ದು ಅನ್ನೋದಕ್ಕೆ ಗಂಡು, ಹೆಣ್ಣು, ಜಾತಿ ಧರ್ಮ ಅನ್ನೋ ಬೇಧ ಇಲ್ಲಾ.. ಎಲ್ಲ ಜೀವಿಗಳಲ್ಲೂ ಒಳ್ಳೇದು – ಕೆಟ್ಟದ್ದು ಇರುತ್ತೆ.. ಈ ಗುಂಪು ಒಳ್ಳೇದು, ಇದು ಕೆಟ್ಟದ್ದು ಅಂತಾ ಲಿಂಗ ಬೇಧ ಮಾಡೋದು ತಪ್ಪು.. ಹೆಣ್ಣು ಮಕ್ಕಳನ್ನ ರೇಪ್ ಮಾಡುವ ಮನುಷ್ಯ ಎಷ್ಟು ಕೆಟ್ಟವನೋ, 498A ದುರುಪಯೋಗ ಮಾಡಿಕೊಂಡ ಹೆಣ್ಣು ಮಗಳೂ ಅಷ್ಟೇ ಕೆಟ್ಟವಳು.. !! ಪ್ರತಿಯೊಂದು ಆತ್ಮ ಪ್ರಚ್ಚನ್ನ ದೈವ ಅನ್ನೋದು ಎಷ್ಟು ಸತ್ಯವೋ. ಎಲ್ಲ ಮನುಷ್ಯನೋಳಗೂ ಒಬ್ಬ ರಾಕ್ಷಸ ಇರ್ತಾನೆ ಅನ್ನೋದು ಕೂಡ ಅಷ್ಟೇ ಸತ್ಯ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments