ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 22, 2014

1

೨೦೧೪ರ ಚುನಾವಣ ಕಣದ ಸುತ್ತ

‍ನಿಲುಮೆ ಮೂಲಕ

– ಡಾ.ಕಿರಣ್ ಎಂ ಗಾಜನೂರು

Modi vs Rahulಭಾರತದಲ್ಲಿ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದೆ.ಹಾಗೆ ನೋಡುವುದಾದರೆ ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳಿಗಿಂತ ೨೦೧೪ರ ಈ ಲೋಕಸಭಾ ಚುನಾವಣೆ ಹೆಚ್ಚು ಚರ್ಚೆಯಲ್ಲಿದೆ ಮತ್ತು ಜನ ಸಮಾನ್ಯರಲ್ಲಿಯು ಒಂದು ಸಹಜ ಕುತೂಹಲವನ್ನು ಈ ಚುನಾವಣೆ ಹುಟ್ಟುಹಾಕಿದೆ.ಭಾರತದಲ್ಲಿನ ಪ್ರಮುಖ ರಾಜಕೀಯ ಚಿಂತಕರು,ಮಾಧ್ಯಮಗಳು ಈ ವಿದ್ಯಮಾನಕ್ಕೆ ಹಲವಾರು ಕಾರಣಗಳನ್ನು ಗುರುತಿಸಿದ್ದಾರೆ ಅದರಲ್ಲಿ ಬಹಳ ಮುಖ್ಯವಾದದ್ದು

೧) ಆಡಳಿತಾತ್ಮಕ ಮತ್ತು ಭ್ರಷ್ಟಾಚಾರದ ಕಾರಣಕ್ಕಾಗಿ (ಮುಖ್ಯವಾಗಿ ಬೆಲೆ ಎರಿಕೆ) ರೂಪಿತಗೊಂಡ ಕಾಂಗ್ರೆಸ್ಸ್ ವಿರೋಧಿ ನಿಲುವು
೨) ಬಿ.ಜೆ.ಪಿ ತನ್ನ ಪ್ರಧಾನಿ ಆಭ್ಯರ್ಥಿ ನರೆಂದ್ರ ಮೋದಿಯವರ ಹಿನ್ನಲೆಯಲ್ಲಿ ರೂಪಿಸಿಕೊಂಡ ಜನಪ್ರಿಯತೆ.

ಹಾಗಾದರೆ, ೨೦೧೪ ರ ಚುನಾವಣೆ ಈ ಎರಡು ನಿಲುಗಳ ಆಧಾರದಲ್ಲಿಯೆ ನಡೆಯುತ್ತದಾ? ದೇಶದ ಎಲ್ಲಾ ಭಾಗದ ಮತದಾರ ಈ ನಿಲುವುಗಳ ಆಧಾರದಲ್ಲಿಯೆ ಮತ ಚಲಾಯಿಸುತ್ತಾನಾ?  ಎಂಬ ಪ್ರಶ್ನೆಯನ್ನು ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳ ಹಿನ್ನಲೆಯಲ್ಲಿ ವಿಶ್ಲೇಷಿಸಿ ಕೇಳಿಕೊಂಡರೆ, ’ಖಂಡಿತಾ ಇಲ್ಲಾ’ ಎಂಬ ಉತ್ತರವನ್ನೂ ಯಾರಾದರೂ ನೀರಿಕ್ಷಿಸಬಹುದಾಗಿದೆ…! ಏಕೆಂದರೆ ಕಳೆದ ಹತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ ಯುಪಿಎ ಸರ್ಕಾರ ಹಲವಾರು ಹಗರಣಗಳನ್ನು ತನ್ನ ಮೇಲೆ ಎಳೆದುಕೊಂಡಿದ್ದರೂ ಆದರ ಜೊತೆ ಜೊತೆಗೆ ’ಆರ್.ಟಿ.ಐ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನ”ಯಂತಹ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಸಮಾಜದ ಹಲವು ವರ್ಗಗಳ ಜನರ ಬೆಂಬಲವನ್ನು ಗಳಿಸಿಕೊಂಡಿದೆ .ಅದೂ ಅಲ್ಲದೆ, ಈ ದೇಶವನ್ನು ಹೆಚ್ಚು ಕಾಲ ಆಳಿದ ಕಾಂಗ್ರೆಸ್ಸ್ ಪಕ್ಷ ಅದರದ್ದೆ ಆದಂತಹ ಒಂದು ಮತದಾರರ ವರ್ಗ ಮತ್ತು ಬುದ್ದಿಜೀವಿಗಳ ಗುಂಪನ್ನು ಸೃಷ್ಟಿಸಿಕೊಂಡಿದೆ ಅವರು ಎಂದಿಗೂ ಕಾಂಗ್ರೆಸ್ಸ್ ಅನ್ನು ಬೆಂಬಲಿಸುತ್ತಾರೆ ಮತ್ತು ಚುನಾವಣೆಯಲ್ಲಿ ಈ ಅಂಶ ಖಂಡಿತವಾಗಿ ಪ್ರಭಾವ ಬೀರಲಿದೆ.ಇದರ ಜೊತೆಗೆ ದೇಶದ ಭವಿಷ್ಯದ ಪ್ರಧಾನಿ ಎಂದು ಕಾಂಗ್ರೆಸ್ಸ್ ವಲಯದಲ್ಲಿ ಗುರುತಿಸಿಕೊಂಡಿರುವ ರಾಹುಲ್ ಗಾಂಧಿಯವರು ಇತ್ತಿಚೆಗೆ “ಭಾರತಕ್ಕೆ ಬೇಕಿರುವುದು ಇಲ್ಲಿನ ವಿವಿಧತೆಯನ್ನು ಅವುಗಳ ನೆಲೆಯಲ್ಲಿಯೆ ಗುರುತಿಸಿ ಬೆಳೆಸಬೇಕಾದ ರಾಜಕೀಯ ಪಕ್ಷವೆ ಹೊರತು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ” ಎಂಬ ಮಾದರಿಯ ಪ್ರಜಾಸತ್ತಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಕಾಂಗ್ರೆಸ್ಸಿನಲ್ಲಿ ತಮ್ಮ ಈ ನಿಲುವನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದಕ್ಕೆ ಉದಾಹರಣೆ ಇತ್ತೀಚೆಗೆ ಕಾಂಗ್ರೆಸ್ಸ್ ಪಕ್ಷದೊಳಗೆ ನಡೆದ ಆಂತರಿಕ ಚುನಾವಣೆ.ಈ ಅಂಶವು ದೇಶದ ಮಧ್ಯಮ ವರ್ಗದ ಮತದಾರರನ್ನು ಖಂಡಿತಾ ಸೆಳೆಯುತ್ತದೆ.

ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ,ಕಾಂಗ್ರೆಸ್ಸ್ ಪಾಳಯ ಸ್ವಲ್ಪ ಮಂಕಾಗಿರುವಂತೆಯೆ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಆ ಪಕ್ಷದ ನಾಯಕರಲ್ಲಿನ ಹೊಂದಾಣಿಕೆಯ ಕೊರತೆ ಮತ್ತು ಅಸಹನೆ.ಈ ಅಂಶ ಖಂಡಿತವಾಗಿ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ಸ್ ಮತ್ತು ರಾಹುಲ್ ಗಾಂಧಿಯವರ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಕುರಿತಾದ ಮಾತುಗಳನ್ನು ಸಮಾನ್ಯ ಜನರಿಗೆ ತಲುಪಿಸುವಲ್ಲಿ ಕರ್ನಾಟಕ ಕಾಂಗ್ರೆಸ್ಸ್ ಖಂಡಿತಾ ಯಶಸ್ವಿಯಾಗಿಲ್ಲ ಎಂದೆ ಹೇಳಬಹುದು.ರಾಷ್ಟ್ರೀಯ ನಾಯಕರ ಅಲೋಚನೆಗಳಿರಲಿ ಕರ್ನಾಟಕದಲ್ಲಿ ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಅನ್ನಭಾಗ್ಯ,ಮೈತ್ರಿಯಂತಹ ಜನಪರ ಯೋಜನೆಗಳನ್ನು ಮತದಾರರಿಗೆ ತಲುಪಿಸಿ ಕಾಂಗ್ರೆಸ್ಸಿಗೆ ಅಗತ್ಯವಾದ ಜನಪರತೆಯನ್ನು ಸೃಷ್ಟಿಸುವ ಉತ್ಸಾಹವನ್ನು ರಾಜ್ಯ ಕಾಂಗ್ರೆಸ್ಸ್ ಮಾಡದಿರುವುದು ನಿಜಕ್ಕೂ ಸೋಜಿಗದ ಸಂಗತಿ ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಸ್ ಸೋತರೆ ಅದಕ್ಕೆ ನೇರ ಹೊಣೆ ನಾಯಕರ ನಡುವಿನ ಭಿನ್ನಾಭಿಪ್ರಾಯವೇ ಆಗಿರುತ್ತದೆ.

ಇನ್ನೂ ಬಿ.ಜೆ.ಪಿಯ ವಿಷಯಕ್ಕೆ ಬಂದರೆ ೨೦೧೪ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ಸಿನ ಭ್ರಷ್ಟಾಚಾರ ಮತ್ತು ಆಡಳಿತ ವಿರೋಧಿ ಅಲೆಯ ಜೊತೆಗೆ ಪ್ರಮುಖವಾಗಿ ಪರಿಗಣಿಸಿರುವ ವಿಷಯಗಳು,ನರೇಂದ್ರ ಮೋದಿ ಮತ್ತು ಗುಜರಾತ್ ನ ಅಭಿವೃದ್ದಿಯ ಮಾದರಿ.ಖಂಡಿತವಾಗಿಯೂ ಈ ಎರಡು ಅಂಶಗಳು ಚುನಾವಣೆಯಲ್ಲಿ ಬಿ.ಜೆ.ಪಿಗೆ ಮತವನ್ನು ತಂದುಕೊಡುತ್ತವೆ.ಬಿ.ಜೆ.ಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ವ್ಯಕ್ತಿತ್ವ ಮತ್ತು ದೇಶದ ಅಭಿವೃದ್ದಿಯ ಕುರಿತಾದ ಅವರ ಮಾತುಗಳು, ಅಲೋಚನೆಗಳು ಯುವ ಮತದಾರರನ್ನು ದಿನದಿಂದ ದಿನಕ್ಕೆ ಸೂಜಿಗಲ್ಲಿನಂತೆ ಸೆಳೆಯುತ್ತಿವೆ.ಅದೂ ಅಲ್ಲದೆ ವಾಜಪೇಯಿ ಅವರ ಆಡಳಿತ ಕಾಲದಲ್ಲಿ ಜಾರಿಗೆ ಬಂದ ಹಲವಾರು ಯೋಜನೆಗಳನ್ನು (ಮುಖ್ಯವಾಗಿ ಚತುಷ್ಕೋನ ರಸ್ತೆ, ಗ್ರಾಮ ಸಡಕ್ ಮತ್ತು ನದಿ ಜೋಡಣಾ ಯೋಜನೆ) ಬಿ.ಜೆ.ಪಿ ತನ್ನ ಚುನಾವಣಾ ವಿಷಯಗಳಾಗಿ ಪ್ರಸ್ತಾಪಿಸುತ್ತಿರುವುದು ಬಿ.ಜೆ.ಪಿ ಮತ್ತು ಸಂಘಪರಿವಾರದ ಚುನಾವಣಾ ತಂತ್ರಗಾರಿಕೆಗೆ ಸಾಕ್ಷಿಯಾಗಿವೆ.

ಇನ್ನೂ ಕರ್ನಾಟಕ ಬಿ.ಜೆ.ಪಿ ಘಟಕ ಕಾಂಗ್ರೆಸ್ಸಿಗೆ ವ್ಯತಿರಿಕ್ತವಾದ ಸ್ಥಿತಿಯಲ್ಲಿದೆ.ಯಡಿಯೂರಪ್ಪನವರ ಆಗಮನ ಬಿ.ಜೆ.ಪಿ ಪಾಳಯದಲ್ಲಿ ಮತ್ತಷ್ಟು ಉತ್ಸಾಹವನ್ನು ತಂದಿದೆ.ಎಲ್ಲಾ ನಾಯಕರು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದ್ದಾರೆ. ಖಂಡಿತ ಈ ಚುನಾವಣೆಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ಬಿ.ಜೆ.ಪಿಗೆ ವರದಾನವಾಗಲಿದೆ.ಆದರೆ,ರಾಜ್ಯ ಬಿ.ಜೆ.ಪಿ ನರೇಂದ್ರ ಮೋದಿಯವರಿಗೆ ಹೆಚ್ಚು ಒತ್ತು ಕೊಟ್ಟು ಅವರ ಕೇಂದ್ರಿತವಾಗಿ ತನ್ನ ಚುನಾವಣಾ ಪ್ರಚಾರನ್ನು ನಡೆಸುತ್ತಿರುವುದರಿಂದ,ಲೋಕಸಭಾ ಕ್ಷೇತ್ರಗಳ ಸ್ಥಳಿಯ ಸಮಸ್ಯೆಗಳು ಚುನಾವಣಾ ವಿಷಯಗಳಾಗಿ ಪ್ರಸ್ತಾಪವಾಗುತ್ತಿಲ್ಲ.ಈ ಕುರಿತ ಅಸಮಧಾನಗಳು ಬಿ.ಜೆ.ಪಿ ಕಾರ್ಯಕರ್ತರಲ್ಲಿಯೇ ಇವೆ.ಏಕೆಂದರೆ, ಯಾವುದೇ ಚುನಾವಣೆಯಾಗಲಿ ಅಲ್ಲಿ ಪ್ರಮುಖ ಪಾತ್ರ ವಹಿಸುವುದು ಸ್ಥಳಿಯ ಸಮಸ್ಯೆಗಳು ಮತ್ತು ಅಲ್ಲಿನ ನಾಯಕತ್ವ.ಮೋದಿಯವರ ಭರಾಟೆಯಲ್ಲಿ ರಾಜ್ಯ ಬಿ.ಜೆ,ಪಿ ಈ ಅಂಶಗಳನ್ನು ಕಡೆಗಣಿಸುತ್ತಿರುವಂತೆ ಕಾಣುತ್ತಿದೆ.ಒಂದು ವೇಳೆ ಅದು ನಿಜವಾದರೆ ಖಂಡಿತ ಬಿ.ಜೆ,ಪಿ ಅಪಾಯವನ್ನು ಎದುರಿಸಲಿದೆ.ಅದೂ ಅಲ್ಲದೆ ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಜನಪರ ಯೋಜನೆಗಳನ್ನು ಮುಖ್ಯವಾಗಿ ಅನ್ನಭಾಗ್ಯ,ಮೈತ್ರಿ ಮತ್ತು ಶಾದಿ ಭಾಗ್ಯ ಯೋಜನೆಗಳು ಮಧ್ಯಮ ವರ್ಗದವರಲ್ಲಿ ಅಸಹನೆ ಹೆಚ್ಚಿಸಿದ್ದರೂ,ಹೆಚ್ಚಿನ ಪ್ರಮಾಣದ ಗ್ರಾಮೀಣ ಮತದಾರರಲ್ಲಿ ಕಾಂಗ್ರೆಸ್ಸ್ ಪರ ನಿಲುವುಗಳನ್ನು ಬೆಳೆಸಿದೆ.ಕಾಂಗ್ರೆಸ್ಸ್ ಕಾರ್ಯಕರ್ತರ ಪಡೆ ಈ ಅಂಶವನ್ನು ಮತವಾಗಿ ಪರಿವರ್ತಿಸಿಕೊಂಡಲ್ಲಿ,ಇದು ಚುನಾವಣೆಯಲ್ಲಿ ಬಿ.ಜೆ.ಪಿಗೆ ವ್ಯತಿರಿಕ್ತವಾಗುವ ಅವಕಾಶವಿದೆ.ಆದರೆ,ಸದ್ಯಕ್ಕೆ ಕಾಂಗ್ರೆಸ್ಸ್ ಪಾಳಯದಲ್ಲಿ ಅಂತಹ ಉತ್ಸಾಹ ಕಾಣುತ್ತಿಲ್ಲ ಎಂಬದು ಬಿ.ಜೆ.ಪಿಯ ಪಾಲಿಗೆ ಸಿಹಿಸುದ್ದಿ. ಒಟ್ಟಾರೆ ಕರ್ನಾಟಕದಲ್ಲಿ ಈ ಭಾರಿ ಬಿ.ಜೆ.ಪಿ  ಯಾವ ಸಣ್ಣ ಅಂಶವನ್ನೂ ಉಪೇಕ್ಷೆ ಮಾಡದೆ ತನ್ನ ಸಂಪೂರ್ಣ ಬಲದೊಂದಿಗೆ ಹೋರಾಡಬೇಕಿದೆ. ಇನ್ನೂ ಈ ಚುನಾವಣೆಯಲ್ಲಿ ಜೆ.ಡಿ.ಎಸ್ ಕೆಲವು ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಲಿದೆ.ಇನ್ನೂ ಕೆಲವು ಕ್ಷೇತ್ರಗಳನ್ನು ಎಂದಿನಂತೆ ತನ್ನ ರಾಜಕೀಯ ವಿರೋಧಿಗಳನ್ನು ಸೋಲಿಸಲು ಬೇಕಾದ ತಂತ್ರಗಾರಿಕೆ ರೂಪಿಸುವಲ್ಲಿ ನಿರತವಾಗಿದೆ. ಇನ್ನೂ ಬಿ.ಜೆ.ಪಿ, ಕಾಂಗ್ರೆಸ್ಸ್ ಸರ್ಕಾರಗಳ ಭ್ರಷ್ಟಾಚಾರವನ್ನು ವಿಮರ್ಶಿಸುವುದೆ ರಾಜಕಾರಣ ಎಂಬಂತೆ ವರ್ತಿಸುತ್ತಿರುವ ಆಮ್ ಆದ್ಮಿ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡಲಿಕ್ಕಿಲ್ಲ. ಏಕೆಂದರೆ,ಅವರು ಸರಿ ಇಲ್ಲ ಇವರು ಸರಿ ಇಲ್ಲ ಹಾಗಾಗಿ ನನಗೆ ಮತ ನೀಡಿ ಎಂಬ ಮಾದರಿಯ ಲಾಜಿಕ್ ಚುನಾವಣೆಯಲ್ಲಿ ಉಪಯೋಗವಾಗಲಿಕ್ಕಿಲ್ಲ.ಇದಕ್ಕೆ ಬದಲಾಗಿ ಆಮ್ ಆದ್ಮಿ ಇದುವರೆಗೂ ಈ ದೇಶವನ್ನು ಆಳಿದ ಬಿ.ಜೆ.ಪಿ ಮತ್ತು ಕಾಂಗ್ರೆಸ್ಸ್ ಪಕ್ಷಗಳು ಬಳಸಿದ ಅಭಿವೃದ್ದಿಯ ಮಾದರಿಗೆ ಪರ್ಯಾವಾದ ಮತ್ತು ಭ್ರಷ್ಟಾಚಾರ ಮುಕ್ತ, ಸಮಾಜದ ಎಲ್ಲರನ್ನು (ಅವರೆ ಹೇಳುವಂತೆ ಸಮಾನ್ಯನನ್ನು) ಒಳಗೊಳ್ಳುವ ಅಭಿವೃದ್ದಿಯ ಮಾದರಿಯೊಂದನ್ನು ರೂಪಿಸಿ ಜನರ ಬಳಿ ಹೋಗಿದ್ದರೆ ಒಳ್ಳೆಯದಿತ್ತು ಆದರೆ ಈಗ ಕಾಲ ಮಿಂಚಿದೆ. . . . . .

ಚಿತ್ರ ಕೃಪೆ : musetheplace.com

1 ಟಿಪ್ಪಣಿ Post a comment
 1. ಮಾರ್ಚ್ 23 2014

  ದೇಶಾದ್ಯಂತ ಮೋದಿ ಅಲೆಯೆದ್ದಿರುವುದು ಸುಸ್ಪಷ್ಟ.
  ಇಷ್ಟು ವರ್ಷಗಳವರೆಗೂ ಕಾಂಗ್ರೆಸ್ಸಿನಲ್ಲಿದ್ದ, ರಾಜೀವ ಗಾಂಧಿಯವರ ಆಪ್ತರೂ ಆಗಿದ್ದ, ಕಾಂಗ್ರೆಸ್ ವಕ್ತಾರರಾಗಿಯೂ ಕೆಲಸ ಮಾಡಿರುವ ಎಂ.ಜೆ.ಅಕ್ಬರ್ ಅವರು ಕಾಂಗ್ರೆಸ್ ತ್ಯಜಿಸಿ ಭಾಜಪ ಸೇರಿರುವುದು, ಮೋದಿ ಅಲೆಯು ಪ್ರವಾಹೋಪಾದಿಯಲ್ಲಿ ಕಾಂಗ್ರೆಸ್ಸನ್ನು ಅಪ್ಪಳಿಸಲಿರುವುದರ ಸಂಕೇತವಾಗಿದೆ. ಮೋದಿ ಎಂದ ಕೂಡಲೇ 2002ರ ಗಲಭೆಗಳ ಕುರಿತಾಗಿ ಮಾತ್ರ ಮಾತನಾಡುತ್ತಿದ್ದ ಕಾಂಗ್ರೆಸ್ಸಿನ ತಂತ್ರ ಇನ್ಮುಂದೆ ನಡೆಯುವುದಿಲ್ಲ ಎನ್ನುವುದು ದಿನಗಳೆದಂತೆ ಸ್ಪಷ್ಟವಾಗುತ್ತಿದೆ. ಬಿಹಾರದಲ್ಲಿ ರಾಂ ವಿಲಾಸ್ ಪಾಸ್ವಾನ್, ಆಂಧ್ರದಲ್ಲಿ ವಿವಿಧ ಪಕ್ಷಗಳು ಮತ್ತು ತಮಿಳು ನಾಡಿನಂತಹ ದ್ರಾವಿಡ ಚಳುವಳಿಗಳೇ ತುಂಬಿರುವ ರಾಜ್ಯದಲ್ಲೂ ನಾಲ್ಕು ಪಕ್ಷಗಳು ಭಾಜಪಕ್ಕೆ ಹತ್ತಿರವಾಗಿರುವುದು, ಮೋದಿಯವರೂ ಮಿತ್ರ ಪಕ್ಷಗಳನ್ನು ಆಕರ್ಷಿಸಬಲ್ಲರೆಂಬುದಕ್ಕೆ ಸಾಕ್ಷಿಯಾಗಿದೆ.
  ಇನ್ನು ಕಾಂಗ್ರೆಸ್ಸಿಗೆ ತನ್ನದೇ ಆದ ಮತಬ್ಯಾಂಕ್ ಇದೆ ಎನ್ನುವುದೂ ಇಂದು ಸುಳ್ಳಾಗಿದೆ. ಆ ರೀತಿಯ ಮತಬ್ಯಾಂಕುಗಳು ಸದಾ ಕಾಂಗ್ರೆಸ್ಸಿಗೆ ಒಲಿದಿದ್ದರೆ, ಅದು ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತಿತ್ತು. ಆದರೆ, ದೇಶದ ದೊಡ್ಡ ರಾಜ್ಯಗಳಲ್ಲೆಲ್ಲಾ ಕಾಂಗ್ರೆಸ್ ಮಣ್ಣು ಮುಕ್ಕಿದೆ. ಅನೇಕ ರಾಜ್ಯಗಳಲ್ಲಿ ಭಾಜಪ ಎರಡನೇ ಬಾರಿ ಮತ್ತು ಮೂರನೇ ಬಾರಿ ಅಧಿಕಾರಕ್ಕೆ ಮರಳಿದೆ. ಕೆಲವು ತಿಂಗಳ ಹಿಂದೆ ನಡೆದ ರಾಜಾಸ್ಥಾನ, ಮಧ್ಯಪ್ರದೇಶ, ಚತ್ತೀಸಘಡ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಜನ ಮತ ಚಲಾಯಿಸಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಸಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

  1989ರಿಂದ ಪ್ರಾರಂಭವಾದ ಕಾಂಗ್ರೆಸ್ಸಿನ ಅಧಃಪತನ, 2004ರ ಚುನಾವಣೆಯಲ್ಲಿ ಒಂದು ಮೈಲಿಗಲ್ಲನ್ನು ಮುಟ್ಟಿತ್ತು. ಅಲ್ಲಿಯವರೆಗೂ ತನ್ನದೇ ಬಲದ ಮೇಲೆ ಸರಕಾರ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್, ಮೊತ್ತಮೊದಲ ಬಾರಿಗೆ ಯುಪಿಎ ಹೆಸರಿನಲ್ಲಿ ಸಮ್ಮಿಶ್ರ ಸರಕಾರ ನಡೆಸುವ ಹಂತಕ್ಕೆ ತಲುಪಿತ್ತು. ಇಷ್ಟಾದರೂ, ತಾನು ಇಳಿಜಾರಿನಲ್ಲಿ ಜಾರುತ್ತಿದ್ದೇನೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಕಾಂಗ್ರೆಸ್ಸಿನ ನಾಯಕತ್ವ ವಿಫಲವಾಯಿತು. ಅದು ಜಾರುವುದು ಮುಂದುವರೆಯಿತು; ದೇಶ ಹಿಂದೆಂದೂ ಕಂಡರಿಯದಂತಹ ಬ್ರಹ್ಮಾಂಡದಂತಹ ಹಗರಣಗಳಿಗೆ ಅದು ಸಾಕ್ಷಿಯಾಯಿತು. ಅದೇ ಸಮಯದಲ್ಲಿ, ಹಣದುಬ್ಬರ ಎರಡಂಕೆ ದಾಟಿ, ಜನರ ಜೀವನ ದುಸ್ತರವಾಯಿತು. ಬಡವರ ಜೀವನ ಹೈರಾಣಾಯಿತು. ಇದೆಲ್ಲವನ್ನೂ ನರೇಂದ್ರ ಮೋದಿ ತಮ್ಮ ಲಾಭಕ್ಕೆ ಬಳಸಿಕೊಂಡರು. ಗುಜರಾತಿನಲ್ಲಿ ನಡೆದ ಅಭಿವೃದ್ಧಿಯನ್ನು ಚೆನ್ನಾಗಿ ಪ್ರಚಾರ ಮಾಡಿದರು. 2002ರ ನಂತರ ಗುಜರಾತಿನಲ್ಲಿ ಒಮ್ಮೆಯೂ ಗಲಭೆಗಳು ನಡೆಯಲಿಲ್ಲವೆನ್ನುವುದೂ ಮೋದಿಯವರಿಗೆ ಒಳ್ಳೆಯ ಪ್ರತಿಮೆ ತಂದುಕೊಟ್ಟಿತು. ಮತ್ತು ಅವರು ಗುಜರಾತಿನಲ್ಲಿ ನಾಲ್ಕನೇ ಬಾರಿ ಉತ್ತಮ ಬಹುಮತದೊಂದಿಗೆ ಅಧಿಕಾರ ಹಿಡಿದದ್ದೂ ಜನರ ಗಮನ ಸೆಳೆಯಿತು.

  ಹೀಗೆ, ಕಾಂಗ್ರೆಸ್ಸಿನ ವೈಫಲ್ಯದಿಂದ ಜನ ಬೇಸೆತ್ತು ಬದಲಾವಣೆ ಬಯಸುತ್ತಿರುವಾಗಲೇ, ಆಶಾಕಿರಣವಾಗಿ ಗೋಚರಿಸಿದ್ದು ನರೇಂದ್ರ ಮೋದಿಯವರು. ಚುನಾವಣೆಗೆ ಮುಂಚೆಯೇ ಎದ್ದಿದ್ದ ಮೋದಿ ಅಲೆ, ಇದೀಗ ಪ್ರವಾಹವಾಗಿ ಪರಿವರ್ತಿತವಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಲೋಕಸಭಾ ಸ್ಥಾನಗಳ ಸಂಖ್ಯೆ 100ಕ್ಕಿಂತ ಕೆಳಗಿಳಿದರೂ ಆಶ್ಚರ್ಯವಿಲ್ಲ! ಮತ್ತು ಭಾಜಪ ತನ್ನ ಸ್ವಂತ ಬಲದ ಮೇಲೇ ಅಧಿಕಾರಿ ಹಿಡಿಯುವುದೆಂದು ದಿನಗಳೆದಂತೆ ಅನ್ನಿಸುತ್ತಿದೆ. ಕಾಂಗ್ರೆಸ್ ಆಗಲೀ, ಭಾಜಪ ಆಗಲೀ, ಒಂದೇ ಪಕ್ಷ ಅಧಿಕಾರ ಹಿಡಿಯುವುದು ದೇಶದ ಪ್ರಜಾಪ್ರಭುತ್ವದ ಯಶಸ್ಸಿನ ದೃಷ್ಟಿಯಿಂದ ಅತ್ಯಾವಶ್ಯಕ. ಈ ಎಲ್ಲಾ ನಿಟ್ಟಿನಿಂದ, ಈ ಸಲದ ಚುನಾವಣೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments