ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 23, 2014

2

ಸಾಯುವ ಕೊನೆ ಕ್ಷಣದಲ್ಲೂ ಆ ಮೂವರ ಬಾಯಲ್ಲಿ ಮೊಳಗಿದ ಮಂತ್ರ…. ಭಾರತ್ ಮಾತಾ ಕೀ ಜೈ!

‍ನಿಲುಮೆ ಮೂಲಕ

– ನಿತ್ಯಾನಂದ ವಿವೇಕವಂಶಿ

ಭಗತ್ ಸಿಂಗ್,ರಾಜ್ ಗುರು,ಸುಖ ದೇವ್ಓದುವ ಮುನ್ನ..

ಈ ದೇಶಕ್ಕೆ ಸ್ವಾತಂತ್ರ್ಯವೆಂಬುದು ಸುಮ್ಮನೆ ಬರಲಿಲ್ಲ. ಸುಮಾರು ಆರೂವರೆ ಲಕ್ಷ ವೀರ ವೀರಾಂಗನೆಯರ ಪ್ರಾಣತ್ಯಾಗದ ಫಲವಾಗಿ ಈ ಸ್ವಾತಂತ್ರ್ಯ ದೊರಕಿದೆ. ಅವರು ತಮ್ಮ ನೆತ್ತರು ಹರಿಸಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ಸ್ವಾತಂತ್ರ್ಯ ಹೋರಾಟವೆಂಬ ಮಹಾ ಯಜ್ಞದಲ್ಲಿ ತಮ್ಮ ಪ್ರಾಣವನ್ನೇ ಆಹುತಿಯನ್ನಾಗಿ ನೀಡಿದ ವೀರರ ತ್ಯಾಗ ಬಲಿದಾನಗಳು ಅನನ್ಯವಾದವು. ಹೋರಾಟದ ಈ ಇತಿಹಾಸದಲ್ಲಿ ಹಲವಾರು ರೋಚಕ ಘಟನೆಗಳು, ರೋಮಾಂಚನಕಾರಿ ಕಥೆಗಳು, ಅದ್ವಿತೀಯ ತ್ಯಾಗ ಬಲಿದಾನದ ಘಟನೆಗಳಿವೆ. ಅವುಗಳಲ್ಲಿ ಕೆಲವು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದ್ದರೆ, ಇನ್ನು ಕೆಲವು ಅಜ್ಞಾತವಾಗಿ, ಹೊರ ಪ್ರಪಂಚಕ್ಕೆ ಪ್ರಕಟಗೊಳ್ಳದೇ, ಕಾಲಗರ್ಭದಲ್ಲಿ ಹೂತುಹೋಗಿ ಕಣ್ಮರೆಯಾಗಿವೆ. ಹೀಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿ ಉಳಿದಿರುವ ರೋಚಕ ಘಟನೆಗಳಲ್ಲಿ ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ತ್ಯಾಗ ಬಲಿದಾನಗಳು ಚಿರಸ್ಮರಣೀಯವಾದುದಾಗಿದೆ. ತಮ್ಮ ಮಾತೃಭೂಮಿಯನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸಲು, ದಾಸ್ಯದ ಸಂಕೋಲೆಯನ್ನು ಕಿತ್ತೊಗೆಯಲು ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಮರವನ್ನೇ ಸಾರಿದ ಈ ಮೂವರು ಕ್ರಾಂತಿಕಾರಿಗಳಿಗೆ ಬ್ರಿಟೀಷ್ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತು. 23 ಮಾರ್ಚ್ 1931 ರಂದು ತಮ್ಮ 23-24 ನೇ ವಯಸ್ಸಿನಲ್ಲಿಯೇ ಈ ಮೂವರು ಕ್ರಾಂತಿಸೋದರರು ನಗುನಗುತ್ತಾ ಬಲಿಗಂಬವನ್ನೇರಿದರು. ದುರದೃಷ್ಟಕರ ಸಂಗತಿಯೆಂದರೆ ನಮಗ್ಯಾರಿಗೂ ಆ ದಿನದ ನೆನಪೇ ಇಲ್ಲ. ಪ್ರತೀ ವರ್ಷ ಮಾರ್ಚ್ 23 ರಂದು ವಾರ್ತಾ ಇಲಾಖೆಯಿಂದ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಜಾಹಿರಾತು ಬಿಟ್ಟರೆ, ‘ಶಹೀದ್ ಡೇ’ಯನ್ನು ಆಚರಿಸುವ ಕೆಲವು ಸಂಘಟನೆಗಳನ್ನು ಬಿಟ್ಟರೆ ಇಡೀ ದೇಶದಲ್ಲಿ ಎಲ್ಲಿಯೂ ಈ ಅಪೂರ್ವ ಬಲಿದಾನವನ್ನು ಸ್ಮರಿಸಿಕೊಳ್ಳುತ್ತಿಲ್ಲ. ಕಾರಣವೇನೆಂದರೆ ನಮಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರೂ ಕೂಡಾ ನೆನಪಿಲ್ಲ.

ಇಂದು ಯಾವುದಾದರೂ ಕಾಲೇಜಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು “ವ್ಯಾಲೆಂಟೈನ್ ಡೇ ಯಾವತ್ತು?” ಎಂದು ಕೇಳಿ ನೋಡಿ. ಥಟ್ಟನೆ ಉತ್ತರ ಬರುತ್ತದೆ. ಶೇಕಡಾ 90ರಷ್ಟು ವಿದ್ಯಾರ್ಥಿಗಳು ಸರಿ ಉತ್ತರ ನೀಡಿರುತ್ತಾರೆ. ಅದೇ ವಿದ್ಯಾರ್ಥಿಗಳಿಗೆ “ಕ್ರಾಂತಿಕಾರಿಗಳಾದ ಭಗತ್‍ಸಿಂಗ್, ರಾಜಗುರು, ಸುಖದೇವ್‍ರು ಈ ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಗಲ್ಲಿಗೇರಿದ ಪವಿತ್ರ ದಿನ ಯಾವುದು?” ಎಂದು ಕೇಳಿ ನೋಡಿ. ಊಹೂಂ… ನೂರಕ್ಕೆ ಹತ್ತು ವಿದ್ಯಾರ್ಥಿಗಳೂ ಸರಿ ಉತ್ತರ ನೀಡಿರುವುದಿಲ್ಲ. ಇನ್ನು ಅದೇ ಪ್ರಶ್ನೆಯನ್ನು ಅದೇ ಕಾಲೇಜಿನ ಅಧ್ಯಾಪಕರಿಗೆ ಕೇಳಿ ನೊಡಿ. ಇತಿಹಾಸ ಶಿಕ್ಷಕರೊಬ್ಬರಿಗೆ ಆ ದಿನಾಂಕ ನೆನಪಿನಲ್ಲಿದ್ದರೆ ಅದೇ ಪುಣ್ಯ. ಹೋಗಲಿ ಕಾಲೇಜು ಬಿಟ್ಟು ಮನೆಗೆ ಬಂದು ನಮ್ಮ ತಾಯಂದಿರನ್ನು ಕೇಳಿನೋಡಿ. ಅವರಿಗೆ ಟಿವಿ.ಯಲ್ಲಿ ಬರುವ ಧಾರಾವಾಹಿಗಳು, ಸಿನಿಮಾಗಳು, ರಿಯಾಲಿಟಿ ಶೋಗಳೇ ಸರ್ವಸ್ವ. ಅವರು ಯಾವ ಧಾರಾವಾಹಿಯ ಎಷ್ಟನೇ ಕಂತಿನಲ್ಲಿ ಯಾರಿಗೆ ಏನಾಯಿತು ಎಂಬುದರ ಬಗ್ಗೆ ಎಷ್ಟು ಬೇಕಾದರೂ ಹೇಳುತ್ತಾರೆ. ಆದರೆ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾ ಪುರುಷರ ಚರಿತ್ರೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಮಕ್ಕಳನ್ನು ಕೂರಿಸಿಕೊಂಡು ಹೇಳುವ ವ್ಯವಧಾನವಿರುವುದಿಲ್ಲ. ಇನ್ನು ಅಪ್ಪಂದಿರನ್ನು ಕೇಳುತ್ತೀರಾ? ಅವರ ಪಾಲಿಗೆ ಹಣ ಸಂಪಾದನೆಯೊಂದೇ ಗುರಿಯಾಗಿಹೋಗಿದೆ. “ನಮ್ಮ ಮಕ್ಕಳಿಗೆ ಇದನ್ನೇಲ್ಲಾ ಹೇಳಿಕೊಟ್ಟರೆ ಎಷ್ಟು ಸಿಗುತ್ತೆ?” ಅಂತ ಕೇಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನು ಉಳಿದವರು ತಾತಾ-ಅಜ್ಜಿ. ಅವರನ್ನು ಈಗಾಗಲೇ ನಾವು ವೃದ್ಧಾಶ್ರಮಗಳಿಗೆ ಕಳುಹಿಸಿಬಿಟ್ಟಿದ್ದೇವೆ!

ಹಾಗಾದರೆ ನಮ್ಮ ಮಕ್ಕಳಿಗೆ ದೇಶಪ್ರೇಮಿಗಳ ಕಥೆ ಹೇಳುವವರ್ಯಾರು? ಇದು ಮಿಲಿಯನ್ ಡಾಲರ್ ಪ್ರಶ್ನೆ. ಸಿನೆಮಾ-ಸೀರಿಯಲ್ಲುಗಳಲ್ಲಿ, 20-20 ಆಟಗಳಲ್ಲಿ, ಇಂಟರ್‍ನೆಟ್-ಮೊಬೈಲುಗಳಲ್ಲಿ, ಕಾಫಿ ಡೇ–ಡಿಸ್ಕೋ ಥೆಕ್ಕುಗಳಲ್ಲಿ, ಮೋಜು-ಮಜಾಗಳಲ್ಲಿ, ಹಣ ಸಂಪಾದನೆಯ ಹುಚ್ಚಿನಲ್ಲಿ ಮುಳುಗಿಹೋಗಿರುವ ನಮ್ಮ ಸ್ಥಿತಿ ಹೇಗಿದೆ ಎಂದರೆ, ನಮಗೆ ಕ್ರಿಕೇಟ್ ಆಡುವ ಯುವರಾಜ್ ಸಿಂಗ್ ಗುತ್ತು ಆದರೆ ಭಗತ್ ಸಿಂಗ್ ಗೊತ್ತಿಲ್ಲ. ಕಪಿಲ್‍ದೇವ್ ಗೊತ್ತು ಸುಖ್‍ದೇವ್ ಗೊತ್ತಿಲ್ಲ. ಅಭಿಷೇಕ್ ಬಚ್ಚನ್ ಅಭಿನಯದ ಹಿಂದಿ ಸಿನೆಮಾ ‘ಗುರು’ ಗೊತ್ತು. ರಾಜಗುರು ಹೆಸರು ಕೇಳಿಯೇ ಇಲ್ಲ. ಕ್ರಿಕೇಟ್ ಕಮೆಂಟರ್ ರವಿಶಾಸ್ತ್ರಿ ಗೊತ್ತು. ಜೈ ಜವಾನ್ – ಜೈ ಕಿಸಾನ್ ಎಂಬ ಮಂತ್ರದಿಂದ ಇಡೀ ದೇಶವನ್ನೇ  ಬಡಿದೆಬ್ಬಿಸಿದ ಸರಳತೆಯ ಸಾಕಾರ ಮೂರ್ತಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹೆಸರು ಗೊತ್ತಿಲ್ಲ. ಸೆಂಚುರಿ ಹೊಡೆದು ಕೋಟಿ ಕೋಟಿ ಬಾಚಿಕೊಳ್ಳುವ ತೆಂಡೂಲ್ಕರ್‍ನ ಫೋಟೋಗಳನ್ನು ನಮ್ಮ ಕೊಠಡಿಯ ಗೋಡೆಗಳ ಮೇಲೆ ತೂಗು ಹಾಕಿದ್ದೇವೆ. ದೇಶಕ್ಕಾಗಿ ದಶಕಗಳ ಕಾಲ ಅಂಡಾಮಾನಿನ ಭೀಕರ ಕರಿನೀರಿನ ಶಿಕ್ಷೆಯನ್ನು ಅನುಭವಿಸಿದ ಸಾವರ್ಕರ್‍ರ ಫೋಟೋವನ್ನೇ ನೋಡಿಲ್ಲ. ಹೀರೋಯಿನ್ ಪೂಜಾ ಗಾಂಧಿಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿರುವ ನಮಗೆ ಮಹಾತ್ಮಾ ಗಾಂಧಿಯವರೇ ಮರೆತುಹೋಗಿದ್ದಾರೆ.
ಛೆ.. ನಾಚಿಕೆಯಾಗಬೇಕು ನಮಗೆ!

ಸ್ವಾತಂತ್ರ್ಯ ದೊರಕಿದ ಕೇವಲ 63 ವರ್ಷಗಳೊಗೆ ದೇಶದ ಸ್ವಾತಂತ್ರ್ಯಕ್ಕಾಗಿ ಗಲ್ಲು ಶಿಕ್ಷೆಯನ್ನು ಅನುಭವಿಸಿದ ನಿಸ್ವಾರ್ಥ ದೇಶಭಕ್ತರನ್ನೇ ಮರೆತುಬಿಡುವಷ್ಟು ಕೃತಘ್ನರಾಗಿಬಿಟ್ಟೆವೇ ನಾವು? ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ಸುಖ, ಸಂತೋಷಗಳಿಗೆ ಕಾರಣರಾದ ಆ ಮಹನೀಯರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಳ್ಳಲಾಗದಷ್ಟು ಸಣ್ಣವರಾಗಿಬಿಟ್ಟೆವೇ ನಾವು?

ಇಂಥಾ ಸಂದರ್ಭದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್‍ರ ಮಾತುಗಳು ನೆನಪಿಗೆ ಬರುತ್ತವೆ. ಭಾರತದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಬೇಕೆಂದು ಹಂಬಲಿಸುತ್ತಿದ್ದ ಅವರು, ಇತಿಹಾಸ ಮರೆತು ಹೇಡಿಗಳಂತೆ ಕುಳಿತಿದ್ದ ಜನರನ್ನು ನೋಡಿ ನೊಂದುಕೊಳ್ಳುತ್ತಾರೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ಗುಂಡಿಗೆಯನ್ನು ನಡುಗಿಸಿ, ಕೊನೆಗೆ ಗಲ್ಲಿಗೇರಿದ ಧೀರ ತಾತ್ಯಾಟೋಪಿಯನ್ನು ಸ್ಮರಿಸಿಕೊಳ್ಳುತ್ತಾ ಹೀಗೆ ಹೇಳುತ್ತಾರೆ. “ಓ ತಾತ್ಯಾ.. ಹತಭಾಗ್ಯ ತಾತ್ಯಾ.. ಬರೀ ಹೇಡಿಗಳು, ಕೃತಘ್ನರೇ ತುಂಬಿರುವ ಈ ದೇಶದಲ್ಲಿ ನೀನೇಕೆ ಜನಿಸಿದೆ? ಈ ದೇಶದಲ್ಲಿ ಅಲ್ಲದೇ ಬೇರಾವುದೇ ದೇಶದಲ್ಲಿ ನೀನು ಜನಿಸಿದ್ದರೂ ಕೂಡಾ ಅಲ್ಲಿನ ಜನ ನಿನ್ನ ಭಾವಚಿತ್ರವನ್ನು ಚಿನ್ನದ ಅಭಾರಿಯಲ್ಲಿಟ್ಟು ಮೆರವಣಿಗೆ ಮಾಡುತ್ತಿದ್ದರು.”

ಹೌದು. ಪ್ರಪಂಚದ ಬೇರೆಲ್ಲಾ ದೇಶದ ಜನರು ತಮ್ಮ ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುತ್ತಾ ಅಪಾರ ಗೌರವದಿಂದ ಪೂಜಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಮಾತ್ರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರನ್ನು ಪೂಜಿಸುವುದಿರಲಿ ಸ್ಮರಿಸಿಕೊಳ್ಳುವುದೂ ಇಲ್ಲ. ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ಬಲಿದಾನದಂಥಾ ಘಟನೆ ಬೇರೆ ಯಾವುದೇ ದೇಶದಲ್ಲಿ ನಡೆದಿದ್ದರೂ ಕೂಡಾ ಅಲ್ಲಿನ ಜನ ಅವರ ಬಾವಚಿತ್ರಗಳನ್ನು ತಮ್ಮ ಮನೆಗಳಲ್ಲಿಟ್ಟು ಪೂಜಿಸುತ್ತಿದ್ದರು, ಪ್ರತೀ ವರ್ಷ ಮಾರ್ಚ್ 23 ರಂದು ಅವರ ಬಲಿದಾನದ ಸ್ಮರಣೆ ಮಾಡುತ್ತಿದ್ದರು. ಆದರೆ ನಮಗೆ ಮಾತ್ರ ಅವರು ಬಲಿದಾನ ಮಾಡಿದ ಆ ಪವಿತ್ರ ದಿನದ ನೆನಪೂ ಕೂಡಾ ಇಲ್ಲ.

ಹಾಗಾದರೆ ಆ ಕ್ರಾಂತಿಕಾರಿಗಳೆಲ್ಲಾ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ತಪ್ಪು ಮಾಡಿದರೆ……? ಹಾಗಂತ ಹೇಳಲೂ ಮನಸ್ಸಾಗದಿದ್ದರೂ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಖಂಡಿತಾ ಹಾಗೆನ್ನಿಸುತ್ತದೆ. ಇಂದಿಗೆ ಸರಿಯಾಗಿ 78 ವರ್ಷಗಳ ಹಿಂದೆ ಆ ಮೂವರೂ ಯುವಕರು “ಇನ್ಕಿಲಾಬ್ ಜಿಂದಾಬಾದ್, ಭಾರತ್ ಮಾತಾ ಕೀ ಜೈ, ವಂದೇ ಮಾತರಂ” ಎಂದು ಉಚ್ಛ ಕಂಠದಿಂದ ಘೋಷಿಸುತ್ತಾ, ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಂಡ ಈ ದಿನವನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರತಿಯೊಂದು ಮನೆ ಮನೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ-ಖಾಸಗಿ ಕಛೇರಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಬೀದಿ-ಬೀದಿಗಳಲ್ಲಿ, ವೃತ್ತಗಳಲ್ಲಿಈ ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ಆಚರಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್ ನಮಗೆ ಆ ಬಲಿದಾನದ ಕಥೆಯೇ ಗೊತ್ತಿಲ್ಲ.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ. “ಯಾವ ದೇಶ ಅಥವಾ ಜನಾಂಗವು ತನ್ನ ಚರಿತ್ರೆಯನ್ನು ಹಾಗೂ ಚಾರಿತ್ರಿಕ ಮಹಾಪುರುಷರನ್ನು ಮರೆಯುತ್ತದೆಯೋ ಆ ದೇಶಕ್ಕಾಗಲೀ, ಆ ಜನಾಂಗಕ್ಕಾಗಲೀ ಭವಿಷ್ಯವಿಲ್ಲ” ಅಂತ. ವಿವೇಕಾನಂದರ ಈ ವಾಣಿಯನ್ನು ಕೇಳಿದಾಗ ನಮಗೆ ಖಂಡಿತ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತದೆ. ಈ ದೇಶದ ಭವ್ಯ ಇತಿಹಾಸದ ಬಗ್ಗೆ, ಈ ದೇಶಕ್ಕಾಗಿ ಹೋರಾಡಿ ಮಡಿದ ಧೀರೋದ್ದಾತ್ತ ನಾಯಕರ ಮತ್ತು ವೀರಯೋಧರ ಬಗ್ಗೆ ತಿಳಿಯದ ನಮಗೆ ನಮ್ಮ ದೇಶದ ಮೇಲೆ ನಮ್ಮ ಪರಂಪರೆಯ ಮೇಲೆ ಹೆಮ್ಮೆ ಅಭಿಮಾನ ಮೂಡಲು ಹೇಗೆ ತಾನೆ ಸಾಧ್ಯ? ದೇಶದ ಬಗ್ಗೆ ಅಭಿಮಾನವಿರದ ನಮ್ಮಂಥಾ ಪ್ರಜೆಗಳಿಂದ ದೇಶಕ್ಕಾಗಿ ಸೇವೆಯನ್ನು ನಿರೀಕ್ಷಿಸುವುದೇ ತಪ್ಪಾಗುತ್ತದೆ ಅಲ್ಲವೇ?
ಹಾಗಾದರೆ ನಾವೇನು ಮಾಡಬೇಕು?

ಹೂಂ. ಖಂಡಿತಾ ಏನಾದರೂ ಮಾಡಲೇಬೇಕು. ಇನ್ನಾದರೂ ನಮ್ಮ ಮಕ್ಕಳಿಗಾದರೂ ದೇಶಭಕ್ತರ ಚರಿತ್ರೆಯನ್ನು ಹೇಳಬೇಕು. ಭಾರತ ದೇಶದ ಪುಣ್ಯ ಚರಿತೆಯನ್ನು ಕೇಳಿದ ಮಕ್ಕಳು ಖಂಡಿತಾ ಈ ದೇಶದ ನಗ್ಗೆ ಹೆಮ್ಮೆ ಪಡುತ್ತಾರೆ. ಈ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನ ನಮ್ಮದು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರ ಪುರುಷರಾದ ಭಗತ್‍ಸಿಂಗ್ ರಾಜಗುರು, ಸುಖದೇವ್‍ರ ವೀರ ಬಲಿದಾನದ ರೋಚಕ ಘಟನೆ ನಿಮ್ಮ ಕಣ್ಣ ಮುಂದಿದೆ. ಕ್ರಾಂತಿವೀರರ ಅಮರ ತ್ಯಾಗದ ಕಥೆಯೊಂದನ್ನು ಓದಿಬಿಡಿ…

23 ಮಾರ್ಚ್ 1931
ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಮಿಕ್ಕಿದ ಜನಪ್ರವಾಹ. ಕ್ರಾಂತಿಕಾರಿಗಳಾದ ಭಗತ್‍ಸಿಂಗ್ ರಾಜಗುರು, ಸುಖದೇವ್‍ರಿಗೆ ಬ್ರಿಟೀಷ್ ಸರ್ಕಾರ ವಿಧಿಸಿದ್ದ ಫಾಸಿ ಶಿಕ್ಷೆಯನ್ನು ರದ್ದುಗೊಳಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ಅದಕ್ಕಾಗಿಯೇ ಭಾರತ ದೇಶಾದ್ಯಂತ ತಿಂಗಳಿಂದಲೇ ಹರತಾಳ, ಮೆರವಣಿಗೆ, ರೈಲುತಡೆ, ಪ್ರತಿಭಟನೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಅಡ್ಡಿ, ಧರಣಿ, ಉಪವಾಸ ಸತ್ಯಾಗ್ರಹಗಳು ನಡೆಯುತ್ತಿದ್ದವು. ಇಡೀ ದೇಶ ಹೊತ್ತಿ ಉರಿಯುತ್ತಿತ್ತು. ಇತ್ತ ಬ್ರಿಟೀಷ್ ಸರ್ಕಾರ ಈ ಕ್ರಾಂತಿಕಾರಿಗಳು ಬದುಕಿದ್ದಷ್ಟು ದಿನ ನಾವು ನೆಮ್ಮದಿಯಿಂದ ಇರಲು ಆಗುವುದಿಲ್ಲವೆಂದರಿತು, ಆದಷ್ಟು ಶೀಘ್ರದಲ್ಲಿ ಶಿಕ್ಷೆಯನ್ನು ಜಾರಿಗೊಳಿಸಿಬಿಡಬೇಕೆಂದು ತೀರ್ಮಾನಿಸಿತು. ದೇಶಾದ್ಯಂತ ತಮ್ಮ ವಿರುದ್ಧ ಏಳುತ್ತಿದ್ದ ಪ್ರಬಲ ವಿರೋಧೀ ಅಲೆಯನ್ನು ನೋಡಿ ಅದುರಿಹೋದ ಬ್ರಿಟೀಷ್ ಸರ್ಕಾರ ಮಾರ್ಚ್ 24 ರಂದು ನೀಡಬೇಕಾಗಿದ್ದ ಗಲ್ಲು ಶಿಕ್ಷೆಯನ್ನು ಒಂದು ದಿನ ಮೊದಲೇ ಅಂದರೆ ಮಾರ್ಚ್ 23ನೇ ತಾರೀಖಿನಂದೇ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದಕ್ಕಾಗಿ ಸಕಲ ಸಿದ್ಧತೆಗಳೂ ನಡೆದು ಹೋದವು.

ಕ್ರಾಂತಿಯ ಕಿಡಿಗಳು
ಭಗತ್‍ಸಿಂಗ್, ರಾಜಗುರು, ಸುಖದೇವ್. ಮೂವರೂ ಚಿಕ್ಕಂದಿನಲ್ಲೇ ದೇಶಸೇವೆಯ ಕಾರ್ಯಕ್ಕಿಳಿದವರು. ಕ್ರಾಂತಿಕಾರಿಗಳು ಮತ್ತು ಉಜ್ವಲ ದೇಶಭಕ್ತರು. ಸೈಮನ್ ಕಮಿಷನ್‍ನ ಭಾರತ ಭೇಟಿಯನ್ನು ವಿರೋಧಿಸಿ “ಸೈಮನ್ ಗೋ ಬ್ಯಾಕ್” ಎಂದು ಕೂಗುತ್ತಾ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಇವರನ್ನು ಬ್ರಿಟೀಷರು ಕ್ರೂರವಾಗಿ ನಡೆಸಿಕೊಂಡರು. ಇದೇ ಸಂದರ್ಭದಲ್ಲಿ ಭಗತ್‍ಸಿಂಗ್ ಮತ್ತು ಗೆಳೆಯರ ಗುರುಗಳಾದ ‘ಪಂಜಾಬಿನ ಕೇಸರಿ’ ಎಂದೇ ಖ್ಯಾತರಾದ ಲಾಲಾ ಲಜಪತರಾಯರನ್ನು ಬ್ರಿಟೀಷ್ ಅಧಿಕಾರಿ ಸ್ಯಾಂಡರ್ಸ್ ಲಾಠಿಯಿಂದ ಬಡಿದು ಕ್ರೂರವಾಗಿ ಕೊಂದುಹಾಕಿದ. ಅದಕ್ಕಾಗಿಯೇ ಮೂವರೂ ಸ್ಯಾಂಡರ್ಸ್‍ನನ್ನು ಪೋಲೀಸ್ ಠಾಣೆಯ ಎದುರೇ ಗುಂಡಿಟ್ಟು ಕೊಂದು ಸೇಡು ತೀರಿಸಿಕೊಂಡರು. ದೇಶಭಕ್ತರ ಮೈ ಮುಟ್ಟಿದವನನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸುವುದರ ಜೊತೆಗೆ ಮತ್ತು ಭಾರತೀಯರ ಸ್ವಾಭಿಮಾನ, ಘನತೆ ಗೌರವಗಳನ್ನು ಎತ್ತಿ ಹಿಡಿದರು. ಆಜಾದ್, ಬಿಸ್ಮಿಲ್, ಮುಂತಾದ ಶ್ರೇಷ್ಠ ಕ್ರಾಂತಿಕಾರಿಗಳ ಜೊತೆ ಸೇರಿ ಕಾಕೋರಿಯಲ್ಲಿ ಬ್ರಿಟೀಷರು ಹೊತ್ತೊಯ್ಯುತ್ತಿದ್ದ ಹಣವನ್ನು ಕ್ರಾಂತಿಕಾರ್ಯಕ್ಕಾಗಿ ದರೋಡೆ ಮಾಡಿದ್ದರು. ಭಗತ್‍ಸಿಂಗ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಯಾರಿಗೂ ಅಪಾಯವಾಗದ ರೀತಿಯಲ್ಲಿ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ ಮಾಡಿದ್ದ. ಇದರಿಂದಾಗಿ ಭಾರತೀಯರ ಸ್ವಾತಂತ್ರ್ಯದ ಕೂಗು ಇಡೀ ಪ್ರಪಂಚಕ್ಕೆ ಕೇಳಿಸಿತ್ತು. ಬ್ರಿಟೀಷ್ ನ್ಯಾಯಾಲಯ ಈ ಎಲ್ಲಾ ದೇಶಭಕ್ತಿಯ ಅಪರಾಧಗಳಿಗಾಗಿ ಈ ಮೂವರಿಗೂ ಮರಣದಂಡನೆಯನ್ನು ವಿಧಿಸಿತ್ತು. ಆದರೆ ಭಗತ್‍ಸಿಂಗ್ ತನ್ನ ವಿಚಾರಗಳನ್ನು ದೇಶವಾಸಿಗಳಿಗೆ ಮುಟ್ಟಿಸಲು ನ್ಯಾಯಾಲಯವನ್ನೇ ವೇದಿಕೆಯನ್ನಾಗಿ ಮಾಡಿಕೊಂಡಿದ್ದ. ಪತ್ರಿಕೆಗಳು ಇವನ ಮಾತುಗಳನ್ನು ಮುಖಪುಟದಲ್ಲಿ ಪ್ರಕಟಿಸತೊಡಗಿದವು. ಇದರಿಂದಾಗಿ ಲಕ್ಷಾಂತರ ಜನರು ಭಗತ್‍ಸಿಂಗ್‍ನನ್ನು ತಮ್ಮ ಆದರ್ಶನಾಯಕನಾಗಿ ಸ್ವೀಕರಿಸಿದರು. ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವ ಸಲುವಾಗಿ ಸಾವಿರಾರು ಯುವಕ ಯುವತಿಯರು ಕ್ರಾಂತಿ ಕಾರ್ಯಕ್ಕೆ ಧುಮುಕಿದರು. ಆದ್ದರಿಂದಲೇ ಭಗತ್‍ಸಿಂಗ್, ರಾಜಗುರು, ಸುಖದೇವರಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅಷ್ಟು ಜನ ಲಾಹೋರ್ ಸೆಂಟ್ರಲ್ ಜೈಲಿನ ಎದುರು ಜಮಾಯಿಸಿದ್ದರು.

ಗುಂಡು ಹೊಡೆದು ಸಾಯಿಸಿ
ಇತ್ತ ಜೈಲಿನ ಒಳಗೆ ಜೈಲರನು, ಶಿಕ್ಷೆಯು ಹಿಂದೂಡಲ್ಪಟ್ಟಿರುವ ವಿಷಯವನ್ನು ಮೂವರೂ ಕ್ರಾಂತಿಕಾರಿಗಳಿಗೂ ತಿಳಿಸಿದ. ಸಾಯಲು ಸಿದ್ಧರಾಗುವಂತೆ ಸೂಚಿಸಿದ. ಆ ಸಮಯದಲ್ಲೂ ಪುಸ್ತಕ ಓದುತ್ತಿದ್ದ ಭಗತ್‍ಸಿಂಗ್ ಬೇರೆ ಪ್ರಶ್ನೆಯನ್ನೂ ಕೇಳದೇ ನಗು ನಗುತ್ತಾ ಎದ್ದು ನಿಂತು ಫಾಸಿ ಶಿಕ್ಷೆಗೆ ತಯಾರಾಗಲು ಸೆಲ್‍ನಿಂದ ಹೊರಬಂದ. ಅವನನ್ನು ರಾಜಗುರು ಸುಖದೇವರು ಕೂಡಿಕೊಂಡರು. ಮೂವರ ಮುಖದಲ್ಲೂ ಅಪಾರ ಸಂತೋಷ. ಭಾರತ ಮಾತೆಯ ಅಡಿದಾವರೆಗಳಲ್ಲಿ ತಮ್ಮ ಪ್ರಾಣ ಪುಷ್ಪಗಳನ್ನು ಅರ್ಪಿಸಿ ಹುತಾತ್ಮರಾಗುವ ಈ ಸುಸಂದರ್ಭಕ್ಕಾಗಿ ಬಹುದಿನಗಳಿಂದ ಕಾಯುತ್ತಿದ್ದವರಂತೆ ಮೂವರು ನಿರ್ಭಯವಾಗಿ ನಿಂತಿದ್ದರು. ಸಾಯುವ ಘಳಿಗೆ ಹತ್ತಿರ ಬಂದಿತೆಂದು ಹೆದರಿ ಬೆಚ್ಚುವರೆಂದು ತಿಳಿದಿದ್ದ ಜೈಲರನಿಗೆ ಇದು ವಿಚಿತ್ರವೆನಿಸಿತು. ಸಾಯುವವರ ದೈರ್ಯವನ್ನು ನೋಡಿ ಜೈಲರನಿಗೇ ನಡುಕ ಹುಟ್ಟಿತ್ತು!

ಜೈಲರನು ಮೂವರ ಹತ್ತಿರ ಬಂದು “ನಿಮ್ಮ ಕೊನೇ ಆಸೆ ಏನಾದರೂ ಇದ್ದರೆ ಹೇಳಿ” ಎಂದ. ಮೂವರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ನಸುನಕ್ಕು “ಜೈಲರ್ ಸಾಬ್, ನಮ್ಮ ಮೊದಲ ಆಸೆ ಕೊನೇ ಆಸೆ ಎರಡೂ ಒಂದೇ. ಅದು ನಮ್ಮ ತಾಯಿನಾಡಿಗೆ ಸ್ವಾತಂತ್ರ್ಯ ಕೊಡಿಸುವುದು” ಎಂದರು. ಆಗ ಜೈಲರನು “ನೋಡಿ ಅದು ನಮ್ಮ ಕೈಲಿಲ್ಲ. ಬೇರೆ ಏನಾದರೂ ಕೇಳಿ” ಎಂದನು. ಆಗ ಭಗತ್‍ಸಿಂಗ್ ಹೀಗೆಂದನು. “ಜೈಲರ್ ಸಾಬ್, ನಿಮ್ಮ ನ್ಯಾಯಾಲಯದ ಆದೇಶದ ಪ್ರಕಾರ ನಮ್ಮ ಮೇಲೆ ಯುದ್ಧ ಸಾರಿದ ಆರೋಪವಿದೆ. ಆದ್ದರಿಂದ ನಾವು ಯುದ್ಧ ಖೈದಿಗಳಾಗಿದ್ದೇವೆ. ನಮ್ಮನ್ನು ಯುದ್ಧ ಖೈದಿಗಳಂತೆ ನಡೆಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ನಮ್ಮನ್ನು ಯುದ್ಧ ಖೈದಿಗಳಂತೆ ಗುಂಡು ಹೊಡೆದು ಸಾಯಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ನಮ್ಮನ್ನು ನೇಣು ಹಾಕಬೇಡಿ ಗುಂಡು ಹೊಡೆದು ಸಾಯಿಸಿ. ನಾವು ಈಗಾಗಲೇ ಪಂಜಾಬ್ ಗವರ್ನರ್‍ಗೆ ಬರೆದಿರುವ ಪತ್ರದಲ್ಲಿ ನಮಗೆ ಗುಂಡು ಹೊಡೆದು ಸಾಯಿಸಲು ಸೈನ್ಯದ ತುಕಡಿಯೊಂದನ್ನು ಕಳುಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇವೆ” ಎಂದನು.

ಅಬ್ಭಾ! ಸಾಯುವ ಕೊನೇ ಕ್ಷಣದಲ್ಲೂ ಎಂಥಾ ಧೈರ್ಯ! ಇಂಥಾ ಪರಿಸ್ಥಿತಿಯಲ್ಲೂ ಈ ಪರಿಯ ವೀರವಾಣಿ.

ಅಸ್ಪೃಶ್ಯತೆ ಒಂದು ರಾಷ್ಟ್ರೀಯ ಕಳಂಕ
ಜೈಲರ್ ಒಂದು ಕ್ಷಣ ಮೂಕವಿಸ್ಮಿತನಾದ. ಭಗತ್‍ಸಿಂಗ್ ಮತ್ತು ಸಂಗಡಿಗರ ಈ ಮಾತು ಕೇಳಿ ಜೈಲರನ ಗುಂಡಿಗೆಯೇ ಅದುರಿಹೋಗಿತ್ತು. ಅವನು ಇನ್ನೇನನ್ನಾದರೂ ಕೇಳುವಂತೆ ಮನವೊಲಿಸಲು ಪ್ರಯತ್ನಿಸಿದ. ಆಗ ಭಗತ್‍ಸಿಂಗ್ ತನ್ನ ತಾಯಿಯ ಕೈಯಿಂದ ಮಾಡಿದ ರೊಟ್ಟಿಯನ್ನು ತಿನ್ನಬೇಕೆಂಬ ಆಸೆಯನ್ನು ಹೇಳಿಕೊಂಡ. ಆಗ ಜೈಲರ್ “ನಿಮಗೆ ಕುಟುಂಬದವರನ್ನು ನೋಡುವ ಅವಕಾಶವನ್ನು ನಿರಾಕರಿಸಲಾಗಿದೆ. ಅಂದ ಮೇಲೆ ಅವರು ಮಾಡಿಕೊಟ್ಟ ರೊಟ್ಟಿಯನ್ನು ನೀನು ತಿನ್ನುವುದಾದರೂ ಹೇಗೆ?” ಎಂದು ಕೇಳಿದ. ಭಗತ್‍ಸಿಂಗ್ ನಸುನಗುತ್ತಾ “ಜೈಲರ್ ಸಾಬ್, ಅದು ನನಗೆ ಗೊತ್ತಿದೆ. ನಾನು ಹೇಳಿದ್ದು ನನ್ನ ಹೆತ್ತ ತಾಯಿಯ ಬಗ್ಗೆ ಅಲ್ಲ. ಈ ಜೈಲಿನ ಸಫಾಯಿ ಕರ್ಮಾಚಾರಿ ತೇಲೂರಾಮನ ಬಗ್ಗೆ. ಬಾಲ್ಯದಲ್ಲಿ ನನ್ನ ತಾಯಿ ಹೇಗೆ ನನ್ನ ಹೊಲಸನ್ನು ಸ್ವಚ್ಛಗೊಳಿಸುತ್ತಿದ್ದಳೋ ಅದೇ ರೀತಿ ಇಷ್ಟು ದಿನ ಈ ಜೈಲಿನಲ್ಲಿ ತೇಲೂರಾಮನೂ ಸ್ವಚ್ಛಗೊಳಿಸುತ್ತಿದ್ದಾನೆ. ಆದ್ದರಿಂದ ಈತ ನನ್ನ ತಾಯಿಯ ಸಮಾನ” ಎಂದು ಹೇಳಿ ತೇಲೂರಾಮ ಮಾಡಿಕೊಟ್ಟ ರೊಟ್ಟಿಯನ್ನು ಅತ್ಯಂತ ಪ್ರೀತಿಯಿಂದ ತಿಂದನು.

ವಾಹ್..! ತನ್ನ ಕ್ರಾಂತಿ ಕಾರ್ಯದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಗತ್‍ಸಿಂಗ್, ಭಾರತದಲ್ಲಿ ಬೇರು ಬಿಟ್ಟಿದ್ದ ಅಸ್ಪøಶ್ಯತೆ, ಜಾತಿಪದ್ಧತಿಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಇತರರಿಗೆ ಎಂತಹಾ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ. ಭಗತ್‍ಸಿಂಗ್ ಸಾಮಾಜಿಕ ಸಮಾನತೆಯ ಬಗ್ಗೆ ಎಂಥಾ ದೂರದೃಷ್ಟಿ ಹೊಂದಿದ್ದನೆಂಬುದು ಈ ಘಟನೆಯಿಂದ ನಮಗೆ ತಿಳಿಯುತ್ತದೆ.

ರಂಗ್ ದೇ ಬಸಂತಿ ಚೋಲಾ
ಜೈಲರನು ಮೂವರಿಗೂ ಸಾಯುವ ಮೊದಲು ಸ್ನಾನ ಮಾಡಿಕೊಂಡು ಬರುವಂತೆ ಸೂಚಿಸಿದ. ತಾಯಿ ಭಾರತಿಯ ಚರಣ ಕಮಲಗಳಿಗೆ ಅರ್ಪಿತವಾಗಲಿದ್ದ ತಮ್ಮ ದೇಹಕುಸುಮಗಳನ್ನು ಶುಭ್ರಗೊಳಿಸುವುದಕ್ಕಾಗಿ ಮೂವರೂ ಸ್ನಾನ ಗೃಹದತ್ತ ನಡೆದರು. ಸ್ನಾನವನ್ನು ಮುಗಿಸಿ ಶುಭ್ರವಾದ ಕಪ್ಪು ಬಟ್ಟೆಗಳನ್ನು ಧರಿಸಿದರು. ಮೂವರೂ ಕ್ರಾಂತಿಕಾರಿ ಗೆಳೆಯರು ಒಬ್ಬರನ್ನೊಬ್ಬರು ಅಪ್ಪಿಕೊಂಡರು. ನಂತರ ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿಕೊಂಡು, ಕ್ರಾಂತಿಕಾರಿ ರಾಮಪ್ರಸಾದ ಬಿಸ್ಮಿಲ್‍ರು ಬರೆದಿದ್ದ “ಮೇರಾ ರಂಗ್ ದೇ ಬಸಂತಿ ಚೋಲಾ” ಗೀತೆಯನ್ನು ಹಾಡುತ್ತಾ ಸಂತೋಷದಿಂದ ಬಲಿವೇದಿಕೆಯ ಕಡೆ ಧೀರೋದ್ಧಾತ್ತ ಹೆಜ್ಜೆ ಹಾಕತೊಡಗಿದರು. ಎಳ್ಳಷ್ಟು ಸಾವಿನ ಭಯವಿಲ್ಲದೇ ನೇಣುಗಂಬದತ್ತ ಸಾಗುತ್ತಿರುವ ಕ್ರಾಂತಿವೀರರನ್ನು ಕಂಡು ಬ್ರಿಟೀಷ್ ಅಧಿಕಾರಿಗಳಿಗೇ ಭಯವಾಗುತ್ತಿತ್ತು. ಇದನ್ನು ಗಮನಿಸಿದ ಭಗತ್‍ಸಿಂಗ್, ಅವರನ್ನು ಕುರಿತು “ನೀವು ಅದೃಷ್ಟವಂತರು” ಎಂದ. ಅಧಿಕಾರಿಗಳಿಗೆ ಗರಬಡಿದಂತಾಯಿತು.

“ಸಾಯುವ ಕೊನೆ ಕ್ಷಣಗಳನ್ನು ಏಣಿಸುತ್ತಿರುವ ಈತ ನಮ್ಮ ಅದೃಷ್ಟದ ಬಗ್ಗೆ ಮಾತನಾಡುತ್ತಿದ್ದಾನಲ್ಲ!” ಎಂದು ಅಶ್ಚರ್ಯಪಟ್ಟರು. ಭಗತ್‍ಸಿಂಗ್ ಮುಂದುವರೆದು ಹೀಗೆ ಹೇಳಿದ. “ಅಧಿಕಾರಿಗಳೇ, ಜೈಲಿನ ಹೊರಗಡೆ ನಮಗಾಗಿ ಕಾಯುತ್ತಿರುವ ಸಹಸ್ರಾರು ಜನರಿದ್ದಾರೆ. ಹುತಾತ್ಮರಾಗಲಿರುವ ನಮ್ಮನ್ನು ನೋಡಿ ಕಣ್ತುಂಬಿಕೊಳ್ಳಲು ದೇಶಾದ್ಯಂತ ಕೋಟ್ಯಾಂತರ ಜನ ದೇಶಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರಾರಿಗೂ ಭಾರತದ ಈ ಕ್ರಾಂತಿಕಾರಿಗಳು ತಮ್ಮ ಘನ ಉದ್ದೇಶ ಪ್ರಾಪ್ತಿಗಾಗಿ ಸಾವನ್ನೂ ಕೂಡಾ ಅತ್ಯಂತ ಸಂತೋಷದಿಂದ ಬಿಗಿದಪ್ಪಿಕೊಳ್ಳುವುದನ್ನು ವೀಕ್ಷಿಸುವ ಭಾಗ್ಯವಿಲ್ಲ. ಅವರಿಗೆ ಇಲ್ಲದ ಭಾಗ್ಯ ನಿಮಗೆ ಮಾತ್ರ ಲಭಿಸಿದೆ. ಆದ್ದರಿಂದ ನೀವೇ ಭಾಗ್ಯವಂತರು” ಎಂದ. ಅಧಿಕಾರಿಗಳಿಗೆ ಬಾಯಿಂದ ಮಾತೇ ಹೊರಡಲಿಲ್ಲ.

ಭಾರತ್ ಮಾತಾ ಕೀ ಜೈ

ಮೂವರೂ ಕ್ರಾಂತಿಕಾರಿಗಳು ಲಗುಬಗೆಯಿಂದ ಬಲಿಗಂಬದ ಮೆಟ್ಟಿಲುಗಳನ್ನು ಹತ್ತಿದರು. ಭಗತ್ ಸಿಂಗ್ ಉಚ್ಛಕಂಠದಿಂದ ಘೋಷಿಸಿದ. “ಭಾರತ್ ಮಾತಾ ಕೀ ಜೈ”
“ಭಾರತ್ ಮಾತಾ ಕೀ ಜೈ” ಏಕೆ?

ಸರಿಯಾಗಿ 20 ದಿನಗಳ ಹಿಂದೆ ಭಗತ್‍ಸಿಂಗ್‍ನ ತಾಯಿ ವಿದ್ಯಾವತಿ ಅವನನ್ನು ಭೇಟಿ ಮಾಡುವ ಸಲುವಾಗಿ ಜೈಲಿಗೆ ಬಂದಿದ್ದರು. ಮಗನನ್ನು ಮದುವೆ ದಿಬ್ಬಣದಲ್ಲಿ ಮದುಮಗನಂತೆ ಕಣ್ತುಂಬ ನೋಡಿ ಆನಂದಿಸಬೇಕೆಂದುಕೊಂಡಿದ್ದ ಆ ತಾಯಿಗೆ ಬಲಿಗಂಬವನ್ನೇರಿ ಹುತಾತ್ಮನಾಗಲು ಹೊರಟ ಮಗನನ್ನು ನೋಡುವ ಸ್ಥಿತಿ ಬಂದಿತ್ತು. ಮಗನ ಮುಖವನ್ನು ನೋಡಿ ಕರುಳು ಕಿತ್ತು ಬಂದಂತಾಯಿತು. ಕಣ್ಣಿಂದ ಅಶ್ರುಧಾರೆ ಸುರಿಯಿತು. ಇದನ್ನು ನೋಡಿದ ಭಗತ್‍ಸಿಂಗ್‍ನಿಗೆ ಏನನ್ನಿಸಿತೋ. ತಾಯಿಗೆ ಒಂದು ಮಾತು ಕೇಳಿದ. “ಅಮ್ಮ. ದಯವಿಟ್ಟು ನನ್ನ ಒಂದು ಕೊನೆಯ ಆಸೆಯನ್ನು ನೆರವೇರಿಸಿಕೊಡುತ್ತೀಯಾ?” ತಾಯಿಗೆ ಕರುಳೇ ಬಾಯಿಗೆ ಬಂದಂತಾಯಿತು. ತಾನು ಸಾಯುವ ಹೊತ್ತಿನಲ್ಲಿ ಮಗನ ತೊಡೆಯ ಮೇಲೆ ತಲೆ ಇಟ್ಟು ಕೇಳಬೇಕೆಂದಿದ್ದ ಮಾತನ್ನು ಮಗನೇ ಕೇಳುತ್ತಿದ್ದಾನೆ. ಎಂಥಾ ವಿಪರ್ಯಾಸ. ಕೇವಲ 24ರ ಎಳೇ ಪ್ರಾಯದ ಮಗ ತಾಯಿಯ ಬಳಿ ತನ್ನ ಕೊನೆ ಆಸೆಯನ್ನು ನೆರವೇರಿಸಿಕೊಡುವಂತೆ ಕೇಳುತ್ತಿದ್ದ ಆ ದೃಶ್ಯವನ್ನು ನೋಡಿದ್ದರೆ ಎಂಥಾ ಕಟುಕನ ಕಣ್ಣಲ್ಲೂ ನೀರು ಬರುತ್ತಿತ್ತು.

ನಿನ್ನ ಕಣ್ಣಿಂದ ಹನಿ ನೀರೂ ಬರಬಾರದು
ತಾಯಿ ಹೂಂ… ಎಂಬಂತೆ ತಲೆ ಆಡಿಸಿದಳು. ಮಾತನಾಡಲು ಆಕೆಯ ಬಳಿ ತ್ರಾಣವೇ ಉಳಿದಿರಲಿಲ್ಲ. ತನಗಿಂತಲೂ ಎತ್ತರ ಬೆಳೆದ ಮಗನನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಆಕೆಗೆ ಮೌನ ಮತ್ತು ಕಣ್ಣೀರು ಇವೆರಡನ್ನೂ ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಭಗತ್‍ಸಿಂಗ್ ಮುಂದುವರೆದ, “ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ನಿನಗೆ ಮಾತು ಕೊಡುತ್ತಿದ್ದೇನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ಅದೇ ರೀತಿ ನನ್ನ ತಾಯಿಯೂ ತನ್ನ ಮಗನ ಸಾವಿನಿಂದ ಧೈರ್ಯಗೆಟ್ಟು ಕಣ್ಣೀರಿಡಬಾರದು. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ. ಒಂದು ವೇಳೆ ನೀನು ಕಣ್ಣೀರಿಟ್ಟರೆ ಬ್ರಿಟೀಷರು ಹೇಳುತ್ತಾರೆ “ನೋಡಿ ಭಗತ್‍ಸಿಂಗ್‍ನ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ” ಅಂತ. “ಅವರು ಹಾಗೆನ್ನುವುದು ನನಗೆ ಖಂಡಿತಾ ಇಷ್ಟವಿಲ್ಲವಮ್ಮಾ. ನಾನು ಸತ್ತಾಗ ನಿನ್ನ ಕಣ್ಣಿಂದ ಒಂದೇ ಒಂದು ಹನಿ ಕಣ್ಣೀರು ಬರಬಾರದು. ಇದೇ ನನ್ನ ಕೊನೆಯ ಆಸೆ. ನೆರವೇರಿಸಿಕೊಡುತ್ತೀಯ ಅಲ್ಲವೇನಮ್ಮಾ?”

ಆ ತಾಯಿಗೆ ಕಣ್ಣೀರು ಬಿಟ್ಟು ಮತ್ತೇನೂ ಉಳಿದಿರಲಿಲ್ಲ. ಈಗ ಅದನ್ನೂ ಮಗ ಬೇಡವೆನ್ನುತ್ತಿದ್ದಾನೆ. ಆ ತಾಯಿ ಮಗನಿಗೆ ಹೀಗೆ ಹೇಳಿದಳು. “ಮಗೂ ಭಗತ್ ನಿನ್ನನ್ನು ನಾನು ಪುಟ್ಟ ಹುಡುಗ ಎಂದುಕೊಂಡುಬಿಟ್ಟಿದ್ದೆ. ಅದು ತಪ್ಪು. ನನ್ನ ಮಗ ತನ್ನ ಮಾತೃಭೂಮಿಯನ್ನು ಪರಕೀಯರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಳಿಸಲು ತನ್ನ ಪ್ರಾಣವನ್ನೇ ಅರ್ಪಿಸುತ್ತಿದ್ದಾನೆ. ಈ ಸಮಯದಲ್ಲಿ ನಾನು ಕಣ್ಣೀರು ಹಾಕಿ ಹುತಾತ್ಮನಾಗಲಿರುವ ಆ ಮಗನ ಗೌರವಕ್ಕೆ ಚ್ಯುತಿ ತರುವುದಿಲ್ಲ. ಆದರೆ ಮಗನೇ, ನಾನು ನಿನಗೆ ಮಾತು ಕೊಟ್ಟಂತೆ, ನೀನು ನನ್ನ ಒಂದು ಮಾತನ್ನು ನಡೆಸಿಕೊಡುತ್ತೀಯಾ? ಭಗತ್ ಹೂಂ.. ಎಂದು ತಲೆ ಆಡಿಸಿದ.
ಆಕೆ ಬರೀ ಮಾತೆಯಲ್ಲ. ಭಾರತ ಮಾತೆ.

ಇಡೀ ಪ್ರಪಂಚದ ಇತಿಹಾಸ ಕಂಡು ಕೇಳರಿಯದ ಅಭೂತಪೂರ್ವ ಘಟನೆ ಅಂದು ನಡೆಯಿತು. ಭಾರತದ ತಾಯಂದಿರ ಶ್ರೇಷ್ಠ ಪರಂಪರೆ ಅಂದು ಜಗತ್ತಿಗೆ ತಿಳಿಯಿತು. ಆ ತಾಯಿ ಕೇಳಿದಳು. “ಮಗೂ ಭಗತ್ ನಾಳೆ ನೀನು ಮತ್ತು ನಿನ್ನ ಸ್ನೇಹಿತರು ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಳ್ಳುವಾಗ ನಿನ್ನ ಬಾಯಿಂದ ಬರುವ ಕೊನೆಯ ಮಾತು ‘ಭಾರತ್ ಮಾತಾ ಕೀ ಜೈ’ ಆಗಿರಬೇಕು!!!”
ಅಬ್ಭಾ! ಮಗನನ್ನು ಕಳೆದುಕೊಳ್ಳುವ ಅಂಥಾ ಸಂದರ್ಭದಲ್ಲೂ ಆ ತಾಯಿಯ ಬಾಯಲ್ಲಿ ಎಂಥಾ ದೇಶಪ್ರೇಮದ ಮಾತುಗಳು. ತಾಯಿಯ ಮಾತುಗಳನ್ನು ಭಗತ್ ಸಿಂಗ್ ಈಗ ನೆನಪಿಸಿಕೊಂಡಿದ್ದ. ಅದಕ್ಕಾಗಿಯೇ ಆತ ಸಾಯುವ ಆ ಕೊನೇ ಕ್ಷಣಗಳಲ್ಲಿ ದಿಕ್‍ತಟಗಳು ಅನುರಣಿತವಾಗುವಂತೆ ಘರ್ಜಿಸಿದ್ದ. “ಭಾರತ್ ಮಾತಾ ಕೀ ಜೈ” ಜೈಲಿನ ಹೊರಗಿದ್ದ ತಾಯಿಗೆ ಅದು ಭಗತ್ ಸಿಂಗ್ ಮತ್ತು ಗೆಳೆಯರ ಅಂತಿಮ ನುಡಿಗಳೆಂದು ಅರಿವಾಯಿತು. ಆ ತಾಯಿಯ ಕಣ್ಣುಗಳಲ್ಲಿ ನೀರು ಜಿನುಗಲಿಲ್ಲ. ಬದಲಾಗಿ ಮಗ ಹುತಾತ್ಮನಾಗುತ್ತಿದ್ದಾನೆಂಬ ಹೆಮ್ಮೆಯಿಂದ ತನ್ನೆಲ್ಲಾ ದುಃಖವನ್ನು ಒಳಗೇ ಅದುಮಿಟ್ಟುಕೊಂಡು ಬಿಟ್ಟಳು ಮಹಾತಾಯಿ.

ಉರುಳನ್ನು ಚುಂಬಿಸಿದರು

“ಇನ್ಕಿಲಾಬ್ ಜಿಂದಾಬಾದ್” ಸುಖದೇವ್ ಘೋಷಿಸಿದ. ರಾಜಗುರು ಉಚ್ಛ ಕಂಠದಿಂದ ಕೂಗಿದ. ಮೂವರು ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು. ಮತ್ತೊಮ್ಮೆ ಮೂವರೂ ಕೂಡಿ ಬ್ರಿಟೀಷ್ ಸಿಂಹಾಸನವೇ ಅದುರುವಂತೆ ಭಾರತ್ ಮಾತಾ ಕೀ ಜೈ ಮಂತ್ರವನ್ನು ಘೋಷಿಸಿದರು. ಜೈಲಿನ ಗೋಡೆಗಳು ಆ ಮಂತ್ರವನ್ನು ಪ್ರತಿಧ್ವನಿಸಿದವು. ಮಧ್ಯದಲ್ಲಿ ಭಗತ್‍ಸಿಂಗ್, ಎಡಗಡೆ ಸುಖದೇವ್, ಬಲಗಡೆ ರಾಜಗುರು ಬಲಿ ವೇದಿಕೆಯ ಮೇಲೆ ನಿಂತು ಹುತಾತ್ಮರಾಗಲು ಸಿದ್ಧರಾದರು. ಉರುಳನ್ನು ಚುಂಬಿಸಿ ತಾವೇ ತಮ್ಮ ಕೈಯ್ಯಾರೆ ಕೊರಳಿಗೆ ಹಾಕಿಕೊಂಡರು. ಅಧಿಕಾರಿಗಳಿಗೆ ನಿಮ್ಮ ಕರ್ತವ್ಯ ಮುಂದುವರೆಸಿ ಎಂಬಂತೆ ಸೂಚನೆ ನೀಡಿದರು. ಜೈಲು ಸಿಬ್ಬಂದಿಗಳು ತಮ್ಮ ಕೆಲಸ ಪ್ರಾರಂಭಿಸಿದರು. ಮೂವರ ಕೈಗಳನ್ನು ಹಗ್ಗದಿಂದ ಕಟ್ಟಿದರು. ಮುಖಕ್ಕೆ ಕಪ್ಪು ಮುಸುಕು ಹಾಕಿದರು. ಸಮಯ ಸಂಜೆ 7 ಗಂಟೆ 27 ನಿಮಿಷಗಳಾಗಿದ್ದವು. ಆ ಮೂವರು ಕ್ರಾಂತಿ ಸೋದರರು ನಿಂತಿದ್ದ ಬಲಿವೇದಿಕೆಯ ನೇಣು ಹಲಗೆ ‘ಕಟಕ್’ ಎಂದು ಶಬ್ಧ ಮಾಡಿ ಕೆಳಕ್ಕೆ ಕಳಚಿಕೊಂಡಿತ್ತು. ಮೂವರ ಪ್ರಾಣಪುಷ್ಪಗಳು ತಾಯಿ ಭಾರತಿಯ ಅಡಿದಾವರೆಗಳಲ್ಲಿ ಸೇರಿಹೋದವು. ಮೂವರ ಪವಿತ್ರ ಜೀವಗಳು ಸ್ವಾತಂತ್ರ್ಯಾಗ್ನಿಗೆ ಹವಿಸ್ಸಾಗಿ ಹೋದವು.

ನನಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ.
ಭಗತ್ ಸಿಂಗನ ಸಾವಿನ ವಿಷಯ ತಿಳಿದ ತಾಯಿ ಮಗನಿಗೆ ಕೊಟ್ಟ ಮಾತಿನಂತೆ ಕಣ್ಣೀರು ಹಾಕಲಿಲ್ಲ. ಆ ತಾಯಿಗೆ ಯಾರೋ ಕೇಳಿದರು. ನಿನ್ನ ಮಗ ಸತ್ತು ಹೋದುದಕ್ಕೆ ನಿನಗೆ ದುಃಖವಾಗುತ್ತಿಲ್ಲವೇ? ಅಂತ. ಆ ತಾಯಿ ಹೇಳಿದಳು. “ನನ್ನ ಒಬ್ಬ ಮಗನನ್ನು ಬ್ರಿಟೀಷರು ನೇಣುಹಾಕಿ ಕೊಂದರು. ಮೈದುನ ಸರ್ದಾರ್ ಸ್ವರ್ಣಸಿಂಗ್‍ನನ್ನು ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಿದರು. ಇನ್ನೊಬ್ಬ ಮೈದುನ ಅಜಿತ್‍ಸಿಂಗ್‍ನನ್ನು ದೇಶದಿಂದಲೇ ಹೊರಹಾಕಿದರು. ಈಗ ಇನ್ನುಳಿದ ಇಬ್ಬರು ಮಕ್ಕಳನ್ನು ಕಾರಣವಿಲ್ಲದೇ ಜೈಲಿಗೆ ಹಾಕಿದ್ದಾರೆ. ಇವೆಲ್ಲವುಗಳಿಂದ ನಾನು ಹೆದರಿದ್ದೇನೆಂದು ಭಾವಿಸಿದ್ದರೆ ಅದು ಬ್ರಿಟೀಷರ ಮೂರ್ಖತನ. ನಾನು ಬ್ರಿಟೀಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುತ್ತಿದ್ದೇನೆ. ನಾನಿಂದು ನನ್ನ ಉಳಿದ ಇಬ್ಬರು ಮಕ್ಕಳನ್ನೂ ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ. ನಿಮಗೆ ಗುಂಡಿಗೆ ಇದ್ದರೆ ಅವರನ್ನು ಕರೆದೊಯ್ಯಿರಿ.”
ಧನ್ಯ ಭಾರತ ಮಾತೆ ಧನ್ಯ. ಭಗತ್‍ಸಿಂಗ್‍ನಂತಹಾ ಮಗನನ್ನು, ಇಂತಹಾ ವೀರ ಮಾತೆಯರನ್ನು ಪಡೆದ ತಾಯಿ ಭಾರತಿಯೇ ಧನ್ಯ.

ಶವಗಳನ್ನೂ ಬಿಡದ ಪಾಪಿಗಳು
ಗಲ್ಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಬ್ರಿಟೀಷರಿಗೆ ಈಗ ಹೊಸದೊಂದು ಹೆದರಿಕೆ ಶುರುವಾಗಿತ್ತು. ಭಗತ್ ಸಿಂಗ್, ರಾಜಗುರು, ಸುಖದೇವರು ಈಗಾಗಲೇ ದೇಶಾದ್ಯಂತ ಹೀರೋಗಳಾಗಿದ್ದರು. ಮೂವರು ಯುವಕರು ಸಾವಿನ ಕೊನೇ ಕ್ಷಣದಲ್ಲೂ ನಿರ್ಭಿತಿಯಿಂದ ನಗುನಗುತ್ತಾ ಪ್ರಾಣ ಅರ್ಪಿಸಿದರೆಂಬ ವಾರ್ತೆಯನ್ನು ಕೇಳಿದ ಯುವಕ ಯುವತಿಯರು ರೋಮಾಂಚನಗೊಂಡು ಬ್ರಿಟೀಷರ ವಿರುದ್ದ ಹೋರಾಡಲು ಪಣತೊಡುತ್ತಿದ್ದರು. ಹುತಾತ್ಮರ ಪಾರ್ಥೀವ ಶರೀರಗಳೇನಾದರೂ ಹೊರಗಿರುವ ಜನರಿಗೆ ಸಿಕ್ಕಿಬಿಟ್ಟರೆ ಅದರ ಸ್ಫೂರ್ತಿಯಿಂದಲೇ ಬ್ರಿಟೀಷರ ಸರ್ವನಾಶವಾದೀತೆಂದು ಹೆದರಿದ ಬ್ರಿಟೀಷ್ ಸರ್ಕಾರ, ಅವರ ಶವವನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಸುಟ್ಟುಹಾಕಿಬಿಡಲು ಆದೇಶಿಸಿತು. ಜೈಲು ಅಧಿಕಾರಿಗಳು ಮೂವರ ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿದರು. ಹಿಂದಿನ ಬಾಗಿಲ ಮೂಲಕ ಜೈಲಿನಿಂದ ಹೊರಕ್ಕೆ ಸಾಗಿಸಿದರು. ಟ್ರಕ್‍ವೊಂದಕ್ಕೆ ಆ ಚೀಲಗಳನ್ನು ತುಂಬಿಕೊಂಡು ಸಟ್ಲೇಜ್ ನದಿ ತೀರಕ್ಕೆ ಸಾಗಿಸಿದರು. ಅಲ್ಲಿ ಶವಗಳನ್ನು ಕೆಳಗಿಳಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ದೂರದಿಂದಲೇ ಬೆಂಕಿಯನ್ನು ನೋಡಿದ ಜನಕ್ಕೆ ವಿಷಯ ಅರ್ಥವಾಗಿಹೋಯಿತು. ಕೂಡಲೇ ಜನ ಸಾಗರೋಪಾದಿಯಲ್ಲಿ ಅಲ್ಲಿಗೆ ಧಾವಿಸತೊಡಗಿದರು. ಪಂಜು ಹಿಡಿದು ಪ್ರವಾಹದಂತೆ ಬರುತ್ತಿದ್ದ ಜನರನ್ನು ಕಂಡು ಅಧೀರರಾದ ಅಧಿಕಾರಿಗಳು ಅರ್ಧ ಬೆಂದ ಶವಗಳನ್ನು ಸಟ್ಲೇಜ್ ನದಿಯಲ್ಲಿ ಎಸೆದು ಪ್ರಾಣ ಉಳಿಸಿಕೊಳ್ಳಲು ಕತ್ತಲಲ್ಲಿ ಪರಾರಿಯಾದರು. ಇದನ್ನು ನೋಡಿದ ಜನರು ನದಿಗಿಳಿದು ಶವಗಳನ್ನು ಹುಡುಕಿ ತಂದರು. ಅಪಾರ ಗೌರವದಿಂದ ಪೂಜ್ಯಭಾವದಿಂದ ವಿಧಿವತ್ತಾಗಿ ಶವ ಸಂಸ್ಕಾರ ಮಾಡಿದರು.

ಸತ್ತ ಮೇಲೂ ನನ್ನ ದೇಹದಿಂದ ಭೂಮಾತೆಯ ಸುವಾಸನೆ ಹೊರಹೊಮ್ಮುತ್ತದೆ.

ಭಗತ್‍ಸಿಂಗ್ ಸಾಯುವ ಮುನ್ನ ಹೀಗೆ ಹೇಳಿದ್ದ. “ನನ್ನೊಬ್ಬನನ್ನು ಗಲ್ಲಿಗೆ ಹಾಕಿ ಈ ಬ್ರಿಟೀಷ್ ಸರ್ಕಾರ ಸಾದಿಸುವುದೇನೂ ಇಲ್ಲ. ಬದಲಾಗಿ ನನ್ನ ಬಲಿದಾನದಿಂದ ಈ ದೇಶದಲ್ಲಿ ಕ್ರಾಂತಿಕಾರ್ಯ ಬಹುಬೇಗ ವ್ಯಾಪಿಸಿಕೊಳ್ಳುತ್ತದೆ.  ಹಿಂದೂಸ್ಥಾನದ ತಾಯಂದಿರು ತಮ್ಮ ಒಡಲಲ್ಲಿ ಭಗತ್‍ಸಿಂಗ್ ನಂತಹಾ ಮಕ್ಕಳು ಜನಿಸಲಿ ಎಂದು ಬಯಸುತ್ತಾರೆ. ನಾನು ಸತ್ತ ಮೇಲೆ ನನ್ನ ದೇಹದಿಂದಲೂ ಭೂಮಾತೆಯ ಸುವಾಸನೆ ಹೊರಹೊಮ್ಮುತ್ತದೆ. ಸಾವಿರಾರು ಜನ ಭಗತ್‍ಸಿಂಗ್‍ರು ಆ ಸುಗಂಧದಿಂದ ಉದ್ಭವಿಸುತ್ತಾರೆ. ಬ್ರಿಟೀಷ್ ಸಿಂಹಾಸನವನ್ನು ಕಿತ್ತೊಗೆದು ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತಾರೆ.” ಮುಂದೆ ಆ ಮಾತು ನಿಜವಾಯಿತು. ಭಗತ್‍ಸಿಂಗ್‍ನ ಆತ್ಮಾರ್ಪಣೆಯಿಂದ ಸ್ಫೂರ್ತಿಗೊಂಡ ಅನೇಕ ಯುವಕ ಯುವತಿಯರು ಸಾಗರೋಪಾದಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅಸೀಮ ಪರಿಶ್ರಮದ ಫಲವಾಗಿ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು.

ಮುಗಿಸುವ ಮುನ್ನ.
ಅಬ್ಭಾ! ಅಂತೂ ಮೂವರು ಮಹಾನ್ ದೇಶಭಕ್ತರ ಬಲಿದಾನದ ಕಥೆಯನ್ನು ಓದಿ ಮುಗಿಸಿದ್ದೀರಿ. ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದೆಯಲ್ಲವೇ? ಹೌದು. ಭಗತ್ ಸಿಂಗ್ ರಾಜಗುರು ಸುಖದೇವ್ ಈ ಮೂವರ ಬಲಿದಾನ ನಡೆದ ದಿನವನ್ನು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ತಮ್ಮ 23-24 ನೆಯ ವಯಸ್ಸಿನಲ್ಲಿಯೇ ನಗುನಗುತ್ತಾ ಗಲ್ಲಿಗೆ ತಲೆಕೊಟ್ಟ ಈ ವೀರರ ಅಪೂರ್ವ ತ್ಯಾಗದ ಈ ಘಟನೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ. ಆದರೆ ಅದನ್ನು ನಮ್ಮ ಮನಸ್ಸಿನೊಳಕ್ಕೆ ಇಳಿಸಿಕೊಳ್ಳಬೇಕಾಗಿದೆ ಅಷ್ಟೇ. ಇಂದು ಈ ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಜರೂರತ್ತಾಗಿ ಆಗಬೇಕಾಗಿರುವ ಕೆಲಸವೆಂದರೆ ನಮ್ಮ ಮಕ್ಕಳಿಗೆ ನಮ್ಮ ದೇಶದ ಇತಿಹಾಸದ ಬಗ್ಗೆ ದೇಶಭಕ್ತರ ತ್ಯಾಗದ ಬಗ್ಗೆ ತಿಳಿಸಬೇಕಾಗಿರುವುದು. ಭಗತ್‍ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ರಾಂ ಪ್ರಸಾದ್ ಬಿಸ್ಮಿಲ್, ಮದನ್ ಲಾಲ್ ಧಿಂಗ್ರಾ, ಚಾಫೇಕರ್, ಕರ್ತಾರ್ ಸಿಂಗ್, ಊಧಮ್ ಸಿಂಗ್, ಖುದೀರಾಂ ಬೋಸ್, ಫಡಕೆ, ಸಾವರ್ಕರ್, ತಾತ್ಯಾ ಟೋಪಿ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚನ್ನಮ್ಮ ಮುಂತಾದ ಅನೇಕ ದೇಶಭಕ್ತ ಕ್ರಾಂತಿಕಾರಿಗಳ ಇತಿಹಾಸವನ್ನು ಕೇಳಿದರೆ ಖಂಡಿತಾ ನಮ್ಮ ಮಕ್ಕಳು ನಮ್ಮ ದೇಶದ ಪರಂಪರೆಯ ಬಗ್ಗೆ ಅಭಿಮಾನಪಡುತ್ತಾರೆ. ದೇಶಕ್ಕಾಗಿ ಕೆಲಸ ಮಾಡಲು ಟೊಂಕ ಕಟ್ಟಿ ನಿಲ್ಲುತ್ತಾರೆ. ಮುಂದೊಮ್ಮೆ ಕಾಲೇಜೊಂದಕ್ಕೆ ಹೋಗಿ “ನಿಮ್ಮ ಹೀರೋ ಯಾರು?” ಎಂದು ವಿದ್ಯಾರ್ಥಿಗಳನ್ನು ಕೇಳಿದರೆ, ಅವರು ಶಾರುಖ್ ಖಾನ್ ಅಂತಲೋ ಧೋನಿ ಅಂತಲೋ ಹೇಳದೇ “ನಮ್ಮ ಹೀರೋ ಭಗತ್ ಸಿಂಗ್” ಅಂತ ಹೇಳಿದರೆ ಈ ಲೇಖನ ಬರೆದ ನನ್ನ ಶ್ರಮ ಸಾರ್ಥಕ.
ವಂದೇ….

2 ಟಿಪ್ಪಣಿಗಳು Post a comment
 1. ಮಾರ್ಚ್ 24 2014

  [[ನಮಗೆ ಕ್ರಿಕೇಟ್ ಆಡುವ ಯುವರಾಜ್ ಸಿಂಗ್ ಗುತ್ತು ಆದರೆ ಭಗತ್ ಸಿಂಗ್ ಗೊತ್ತಿಲ್ಲ. ಕಪಿಲ್‍ದೇವ್ ಗೊತ್ತು ಸುಖ್‍ದೇವ್ ಗೊತ್ತಿಲ್ಲ. ಅಭಿಷೇಕ್ ಬಚ್ಚನ್ ಅಭಿನಯದ ಹಿಂದಿ ಸಿನೆಮಾ ‘ಗುರು’ ಗೊತ್ತು. ರಾಜಗುರು ಹೆಸರು ಕೇಳಿಯೇ ಇಲ್ಲ]]

  ನಮ್ಮ ದೇಶದ ಈ ದುರವಸ್ಥೆಗೆ ಕಾರಣ, ಕಳೆದ 7 ದಶಕಗಳಿಂದ ಈ ‘ಸತ್ಯ’ವನ್ನು ನಮ್ಮಿಂದ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ದೇಶದ ಜನರಿಗೆ ಕೇವಲ ಎರಡು ಹೆಸರು ಮಾತ್ರ ತಿಳಿದಿರಬೇಕೆಂಬ ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿಯೇ, ದೇಶದ ತುಂಬಾ ಯಾವುದೇ ಹೊಸ ಯೋಜನೆಗಳು ಪ್ರಾರಂಭಗೊಂಡರೂ, ಅದಕ್ಕೆ ನೆಹರೂ ಅಥವಾ ಗಾಂಧಿ ಹೆಸರಿರುತ್ತದೆ!!
  ಈ ರೀತಿ ಮಾಡಿದವರು ಯಾರು, ಅವರು ಯಾತಕ್ಕಾಗಿ ಇದನ್ನು ಮಾಡಿದರು ಮತ್ತು ಹೇಗೆ ಮಾಡಿದರು ಎನ್ನುವುದನ್ನು ತಿಳಿಯಲು, ಅರುಣ್ ಶೌರಿಯವರು ಬರೆದಿರುವ “Eminent Historians” ಪುಸ್ತಕ ಓದಿ. ಕನ್ನಡಕ್ಕೆ ಅದನ್ನು ಮಂಜುನಾಥ ಅಜ್ಜಂಪುರ ಅವರು “ಮಹಾನ್ ಇತಿಹಾಸಕಾರರು” ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.
  “ನಾನು ಈ ದೇಶದ ಮಗ/ಮಗಳು” ಎಂದು ಕರೆದುಕೊಳ್ಳುವ ಪ್ರತಿಯೊಬ್ಬ ಭಾರತೀಯನೂ/ಳೂ ಓದಲೇಬೇಕಾದ ಪುಸ್ತಕವಿದು.

  ನೀವು ಬರೆದ ಲೇಖನ ಅತ್ಯುತ್ತಮವಾಗಿದೆ. ಸಮಯ ತೆಗೆದುಕೊಂಡು ಲೇಖನವನ್ನು ಬರೆದು, ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments