ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 25, 2014

2

ಕಥೆಯಾದರು ಚಿತ್ತಾಲ

‍ನಿಲುಮೆ ಮೂಲಕ

– ರಾಘವೇಂದ್ರ ಅಡಿಗ ಎಚ್ಚೆನ್

ಯಶವಂತ ಚಿತ್ತಾಲಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಎಂದಿದ್ದ ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ

ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದಲ್ಲಿ ನವ್ಯ ಯುಗ ಪ್ರಾರಂಭಾವಾಗಿದ್ದ ಕಾಲಘಟ್ಟದಲ್ಲಿ ತಮ್ಮನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಚಿತ್ತಾಲರು ನವ್ಯ ಮಾರ್ಗದಲ್ಲಿನ ಕಥೆಗಳು, ಕಾದಂಬರಿಗಳು ಅಂದು ಸಾಕಷ್ಟು ಪ್ರಸಿದ್ದವಾಗಿದ್ದವು. ‘ಪುರುಷೋತ್ತಮ’, ‘ಛೇದ’, ‘ಶಿಕಾರಿ’ ಗಳಂತಹ ಪ್ರಸಿದ್ದ ಹಾಗೂ ಮಹತ್ವದ ಕಾದಂಬರಿಗಳನ್ನು ರಚಿಸಿದ್ದ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕನ್ನಡದ ಅತ್ಯಂತ ಜನಪ್ರಿಯ ಕಥಾ ಸಂಕಲನಗಳಲ್ಲಿ ಒಂದು.

ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕುಮಟಾದ ಹನೇಹಳ್ಳಿಯವರಾದ ಚಿತ್ತಾಲರು ತಮ್ಮ ಜೀವನದ ಅರ್ಧಕ್ಕೂ ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದಿದ್ದರು. ಹನೇಹಳ್ಳಿಯ ವಿಠೋಬಾ, ರುಕ್ಮಿಣಿ ದಂಪತಿಗಳ ಏಳು ಮಕ್ಕಳುಗಳ ಪೈಕಿ ಐದನೆಯವರಾಗಿದ್ದ ಯಶವಂತ ಚಿತ್ತಾಲರು 1928 ರಲ್ಲಿ ಜನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಚಿತ್ತಾಲರು ಕುಮಟಾ, ಧಾರವಾಡ್, ಮುಂಬೈ ಹಾಗೂ ನ್ಯೂ ಜರ್ಸಿಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದರು. ಇವರು ವಿಜ್ಞಾನ ಪದವೀಧರರಾಗಿದ್ದು ರಸಾಯನ ಶಾಸ್ತ್ರದಲ್ಲಿ ಉನ್ನತ ಮಟ್ಟದ ಪ್ರೌಢಿಮೆಯನ್ನು ಹೊಂದಿದ್ದರು. ಅದರಲ್ಲಿಯೂ ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಅನುಭವ ಹೊಂದಿದ್ದ ಚಿತ್ತಾಲರು . ಮುಂಬೈ ವಿವಿಯ ಪ್ಲಾಸ್ಟಿಕ್ ತಂತ್ರವಿಜ್ಞಾನದ ಬಿಎಸ್‌ಸಿಯಲ್ಲಿ ಪ್ರಥಮ ಸ್ಥಾನ ಸುವರ್ಣ ಪದಕ ಪಡೆದಿರು. ನಲ್ವತ್ತ ನಾಲ್ಕನೇ ವಯಸ್ಸಿನಲ್ಲಿ ಅಮೆರಿಕದ ಸ್ಟೂವನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಎ ಪದವಿ ಪಡೆದಿದ್ದ. ಚಿತ್ತಾಲರು ಬೆಕಾಲೈಟ್ ಹೈಲಮ್ ಲಿ. ಕಂಪನಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ. ಇಲ್ಲಿ ಹಲವು ವರ್ಷಗಳ ಕಾಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಮುಂಬೈನಲ್ಲಿ ಅದೇ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಡೈರಕ್ಟರ್ ಆಗಿ 1985ರಲ್ಲಿ ನಿವೃತ್ತಿ ಹೊಂದಿದ್ದರು.

ಕವಿ ಗಂಗಾಧರ ಚಿತ್ತಾಲರ ಸಹೋದರರಾಗಿದ್ದ ಯಶವಂತ ಚಿತ್ತಾಲರಿಗೆ ಬಾಲ್ಯದಿಂದಲೂ ಸಾಹಿತ್ಯದ ಕಡೆಗೆ ಒಲವಿದ್ದಿತು. ಪಾಶ್ಚಾತ್ಯ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿನ ಸಾಹಿತ್ಯದ ಮೌಲ್ಯಗಳ ತೌಲನಿಕ ಚಿಂತನೆಯನ್ನು ನಡೆಸಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಯಶವಂತ ಚಿತ್ತಾಲರಿಗೆ ಮನಃಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರಗಳಲ್ಲಿ ಬಹಳ ಆಸಕ್ತಿ ಇದ್ದಿತು. ಇವರು ತಮ್ಮ ವಿಶಿಷ್ಟ ಬಗೆಯ ಸಾಹಿತ್ಯದಿಂದ ಜನರನ್ನು ಸಮ್ಮೋಹಗೊಳಿಸಿದ್ದಲ್ಲದೆ ತಮ್ಮ ಸಜ್ಜನಿಕೆಯ ಜೀವನ ಶೈಲಿ, ಜೀವನ ಪ್ರೀತಿಯಿಂದಲೂ ಅಪಾರ ಜನ ಮೆಚ್ಚುಗೆಗೆ ಭಾಜನರಾಗಿದ್ದವರು.

ಶಾಂತಿನಾಥ ದೇಸಾಯಿ, ಗೌರೀಶ ಕಾಯ್ಕಿಣಿಯವರುಗಳಿಂದ ಅಪಾರ ಪ್ರಭಾವಕ್ಕೊಳಗಾಗಿದ್ದ ಚಿತ್ತಾಲರು 1957 ರಲ್ಲಿ ಹೊರತಂದ ‘ಸಂದರ್ಶನ’ ಕಥಾ ಸಂಕಲನದಿಂದ ಪ್ರಾರಂಭಿಸಿ ತಾವು ಆಸ್ಪತ್ರೆಗೆ ಸೇರುವ ಹಿಂದಿನ ದಿನದವರೆಗೂ ನಿರಂತರವಾಗಿ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಚಿತ್ತಾಲರು ಆಸ್ಪತ್ರೆಗೆ ಸೇರುವ ಮುನ್ನಿನ ದಿನ ‘ದಿಗಂಬರ’ ಎನ್ನುವ ಹೆಸರಿನ ಕಾದಂಬರಿಯ ೨೫ ನೇ ಅಧ್ಯಾಯವನ್ನು ಮುಗಿಸಿದ್ದರು. ವಿನೂತನ ವಸ್ತುವಿನಿಂದ ಕೂಡಿದ್ದ ಈ ಕಾದಂಬರಿ ಚಿತ್ತಾಲರ ಅನಿರೀಕ್ಷಿತ ಮರಣದಿಂದಾಗಿ ಅಪೂರ್ಣವಾಗಿಯೇ ಉಳಿಯುವಂತಾಗಿದೆ.

ಚಿತ್ತಾಲರ ವಿವಿಧ ಕೃತಿಗಳನ್ನು ಓದುತ್ತಾ ಹೋದಂತೆ ಆ ಬರವಣಿಗೆ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಬಾಲ್ಯಕಾಲದ ಜಗತ್ತನ್ನು ವರ್ತಮಾನದ ಸಂಕೀರ್ಣ ಬದುಕಿನೊಡನೆ ಹೋಲಿಸುವ ಅವರ ರೀತಿಯು ಬಹಳವೇ ಅದ್ಭುತವಾದುದು. ಯಶವಂತ ಚಿತ್ತಾಲರು ತಮ್ಮ ವೈಯುಕ್ತಿಕ ಬದುಕಿನಲ್ಲಿ ತಾವು ಅನುಭವಿಸಿದ ದುರಂತಗಳನ್ನೆಲ್ಲವನ್ನೂ ಮೆಟ್ಟಿ ನಿಂತು ಅದಕ್ಕೂ ಹೆಚ್ಚಿನ ಜೀವನ ಶ್ರದ್ದೆಯಿಂದ, ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ ಕಥೆ, ಕಾದಂಬರಿಗಳ ಮುಖೇನ ತಮ್ಮ ಅನಯತೆಯನ್ನು ಮೆರೆದಿದ್ದಾರೆ. ಇವರ ‘ಕಥೆಯಾದಳು ಹುಡುಗಿ’ ಕಥಾ ಸಂಕಲನಕ್ಕೆ 1983 ರ ಕೇಂದ್ರ ಸಾಹಿತ್ಯ ಅಕಾಡ್ಮಿ ಪ್ರಶಸ್ತಿ ದೊರಕಿದ್ದರೆ, ಇವರ ಖ್ಯಾತ ಕಾದಂಬರಿ ‘ಶಿಕಾರಿ’ 1979 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಬಹುಮಾನದಿಂದ ಪುರಸ್ಕೃತವಾಗಿದೆ ಇವರ ಮತ್ತೊಂದು ಮಹತ್ವದ ಕಾದಂಬರಿ ‘ಪುರುಷೋತ್ತಮ’ ಕ್ಕೆ 2000 ನೇ ಸಾಲಿನ ನಿರಂಜನ ಪುರಸ್ಕಾರ, ಬಾರತ ಬಾಷಾ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಅಕಾಡ್ಮಿ ಪ್ರಶಸ್ತಿಗಳು ಲಭಿಸಿದೆ.

ಒಟ್ತಾರೆಯಾಗಿ ಐದು ಕಾದಂಬರಿಗಳು, ಒಂಭತ್ತು ಕಥಾ ಸಂಕಲನಗಳು, ಮೂರು ವಿಮರ್ಶಾ ಪ್ರಬಂಧ ಲೇಖನ ಸಂಗ್ರಹಗಳನ್ನು ರಚಿಸಿರುವ ಚಿತ್ತಾಲರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ(1988), ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರಗಳು ಸಂದಿವೆ.

“ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ನಾನು ನಾನಾಗಿಯೇ ಉಳಿದು ಉಳಿದವರಿಂದ ಬರೆಯಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಚಿತ್ತಾಲರು ಬರವಣಿಗೆಯನ್ನು ಕುರಿತು ತಾಳಿದ್ದ ನಿಲುವು ಇದು. ಇಂದು ಚಿತ್ತಾಲರ ಭೌತಿಕ ದೇಹ ನಮ್ಮೊಂದಿಗಿಲ್ಲ. ಆದರೆ ಅವರ ಸಾಹಿತ್ಯ, ಬರವಣಿಗೆಯ ಮೂಲಕ ಅವರೆಂದಿಗೂ ನಮ್ಮೊಡಾನಿರುತ್ತಾರೆ. ಕನ್ನಡ ಇರುವವರೆಗೂ ಕನ್ನಡ ಸಾಹಿತ್ಯವಿರುತ್ತದೆ. ಕನ್ನಡ ಸಾಹಿತ್ಯವಿರುವವರೆಗೂ ಯಶವಂತ ಚಿತ್ತಾಲರ ಬರಹಗಳಿರುತ್ತವೆ. ಅವರ ಬರಹಗಳಿರುವವರೆಗೂ ಅವರೂ ನಮ್ಮೊಡನಿರುತ್ತಾರೆ. ಎಲ್ಲಾ ಕನ್ನಡ ಸಾಹಿತ್ಯಾಭಿಮನಿಗಳ ಹೃದಯದಲ್ಲಿ ‘ಕಥೆ’ಯಾಗಿ, ಪುರುಷೋತ್ತಮನಾಗಿ…..

ಚಿತ್ರ ಕೃಪೆ : http://www.thehindu.com

2 ಟಿಪ್ಪಣಿಗಳು Post a comment
 1. ವಿಜಯ್ ಪೈ
  ಮಾರ್ಚ್ 27 2014

  ಅಗಲಿದ ಯಶವಂತ ಚಿತ್ತಾಲರ ನೆನಪಿನಲ್ಲಿ ಬರೆದ ಲೇಖನಕ್ಕೆ ಅಡಿಗರಿಗೆ ಧನ್ಯವಾದಗಳು.

  ಚಿತ್ತಾಲರ ಶಿಕಾರಿ, ಪುರುಷೋತ್ತಮ, ಕೇಂದ್ರ ವೃತ್ತಾಂತ, ಛೇಧ ಗಳನ್ನು ಮತ್ತೆ ಮತ್ತೆ ಓದಿದ್ಧೇನೆ. ಅವರ ಕಥನ ಕಲೆ, ಓದುಗ ತನಗೆ ಗೊತ್ತಿಲ್ಲದೆಯೇ ಅವರ ಕಾದಂಬರಿಯ ಪಾತ್ರವಾಗುವುದು, ಮನುಷ್ಯನ ಸಂಕೀರ್ಣ ವ್ಯಕ್ತಿತ್ವ/ಮಾನವೀಯತೆಯ ಹುಡುಕಾಟವೆ ಪ್ರಧಾನವಾಗಿ, ಜಾತಿ-ಮತದ ವಾಸನೆ ದಟ್ಟವಾಗಿ ಕಾಡದೇ ಬೆಳೆಯುವ, ಕುಗ್ಗುವ, ಹೊಳೆಯುವ, ಕಾಡಿಸುವ, ನಮ್ಮೊಳಗೆ ಒಂದಾಗುವ ಪಾತ್ರಗಳು. ಚಿತ್ತಾಲರು ಅದ್ಭುತ..ಚಿತ್ತಾಲರು ಅಪರೂಪ.

  ಚಿತ್ತಾಲರು ಕರ್ನಾಟಕದ ದರಿದ್ರ ಸಾಹಿತಿ/ಸಾಹಿತ್ಯ ರಾಜಕಾರಣದಲ್ಲಿ ಬಿಳದೇ, ಯಾವ ಗುಂಪಿಗೂ ಸೇರದೇ..ದೂರದ ಮುಂಬಯಿಯಲ್ಲಿಯೇ ಉಳಿದು, ಬರೆದದ್ದೇ ಒಳ್ಳೆಯದಾಯಿತು. ಇಲ್ಲವಾದರೇ ಗೋಪಾಲಕೃಷ್ಣ ಅಡಿಗರನ್ನು ಕಾಡಿಸಿದಂತೆ, ಇವರನ್ನೂ ಕೂಡ ಜಾತಿವ್ಯಾಧಿಗಳು ನೆಮ್ಮದಿಯಿಂದ ಇರಲು ಬಿಡುತ್ತೀರಲಿಲ್ಲ. ಇಷ್ಟಾದರೂ ತಮ್ಮ ಯೋಗ್ಯತೆಗೆ ತಕ್ಕಂತೆ ಅವರ ಕಥನ ಕಲೆಯಲ್ಲಿ ಜಾತಿಯನ್ನು ಹುಡುಕಿದ ವಿಮರ್ಶಕ ಮಹಾಶಯರಿದ್ದಾರೆ ನಮ್ಮಲ್ಲಿ!.

  ಚಿತ್ತಾಲರು ಮತ್ತು ಹನೇಹಳ್ಳಿ ಅವರ ಓದುಗರ ನೆನಪಿನಿಂದ ಅಳಿಸಲಾಗುವುದಿಲ್ಲ.. ಧನ್ಯವಾದ ಚಿತ್ತಾಲರೆ .ನಿಮಗೆ ನಾವು ಋಣಿ. 🙂

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments