ಪೋಲಿಸ್ ಸಿಬ್ಬಂದಿ ಮತ್ತು ಚುನಾವಣೆಗಳ ನಡುವೆ
– ಬೆಳ್ಳಿ
ಈಗ ಎಲ್ಲೆಲ್ಲೂ ಚುನಾವಣೆಯ ಅಬ್ಬರ.ಹಳ್ಳಿ ಹಳ್ಳಿ ಗಲ್ಲಿ ಗಲ್ಲಿಗಳಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ.ಎಲ್ಲರೂ ತಮ್ಮ ಪಾಡಿಗೆ ತಾವು ಹಾಯಾಗಿ ಜೀವನ ಸಾಗಿಸುತ್ತಿದ್ದರೆ,ಕಾನೂನು ಮತ್ತು ಸುವ್ಯವಸ್ಧೆಯ ಅಡಿಯಲ್ಲಿ ಬರುವ ಪೋಲಿಸ್ ವ್ಯವಸ್ಧೆ ಯಾವ ರೀತಿಯಾಗಿ ಅವರಿಗೆ ಒತ್ತಡಗಳಿದ್ರೂ ಕೆಲಸ ಮಾಡುತ್ತದೆಂದು ಯಾರಿಗೂ ಗೊತ್ತಿಲ್ಲ.ಅವರು ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಚುನಾವಣೆಯ ಫಲಿತಾಂಶ ಬರುವವರೆಗೂ ಸತತವಾಗಿ ಎರಡು ತಿಂಗಳುಗಳ ಕಾಲ ಹಗಲಿರುಳೆನ್ನದೆ ದುಡಿಯುತ್ತಾರೆ.ಚುನಾವಣೆ ಸಮೀಪ ಬಂತೆಂದರೆ ಸಾಕು ಯಾರು ಒಂದು ತಿಂಗಳು ಕಾಲ ರಜೆ ಕೇಳಬಾರದೆಂಬ ಆದೇಶ ಹೊರಡಿಸಿಬಿಟ್ಟಿರುತ್ತಾರೆ.ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಮಾತ್ರ ರಜೆ ಕೇಳಬೇಕು.ಅದೂ ಸಹ ಎಸ್.ಪಿ.ಸರ್ ಅಪ್ಪಣೆ ನೀಡಬೇಕು.
ಇದು ಹಿಂಗಾದರೆ,ಚುನಾವಣೆಯ ಕಾಲಕ್ಕೆ ಯಾವುದೋ ಹಳ್ಳಿಗೆ ಕರ್ತವ್ಯ ಬಂದಿರುತ್ತೆ.ನಮಗೆ ಮೈಯಲ್ಲಿ ಆರಾಮ ಇಲ್ಲದಿದ್ರೂ,ಅಥವಾ ಮನೆಯಲ್ಲಿ ಗಂಡ,ಅತ್ತೆ,ಮಾವ,ಮಕ್ಕಳಗೆ,ಹೆಂಡತಿಗೆ ಮೈಯಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿ ಸೇರಿದ್ರೂ ಎಲ್ಲ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು.ಮನೆಯ ಕಡೆ ವಿಷಯ ತಿಳಿದುಕೊಳ್ಳೋಣವೆಂದರೆ ಅಲ್ಲಿ ಮೊಬೈಲ್ ನೆಟ್ ವರ್ಕ್ ಬರೋಲ್ಲ.ಅದೇ ಒತ್ತಡಗಳ ಜೊತೆಗೆ ಹಳ್ಳಿಗೆ ಹೋಗಿ ಕೊಟ್ಟಿರುವ ಬೂತ್ ಎನ್ನುವ ಭೂತ ಬಂಗಲೆಗೆ ಕಾಲಿಟ್ಟಾಗ ಮೊದಲು ಅದು ಆ ಗ್ರಾಮದ ಸಾರ್ವಜನಿಕರೆಲ್ಲರ ಶೌಚಾಲಯದ ತಾಣ.ಚುನಾವಣೆಯ ವೇಳೆಯಲ್ಲಿ ಗಿಡ ಕಂಟಿ ಕಡಿದು ಅಲ್ಲಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ,ಒಂದೇ ಒಂದು ಕೋಣೆ ರೆಡಿ ಮಾಡಿ,ಅದರಲ್ಲಿ 60 ವೋಲ್ಟೆಜಿನ ಬಲ್ಬ್ ಹಾಕುತ್ತಾರೆ.ನಲವತ್ಮೂರರಿಂದ ನಲವತ್ತೈದು ಡಿಗ್ರಿ ಬಿಸಿಲ ಧಗೆಯಲ್ಲಿ ಹ್ಯಾಗೆ ಕರ್ತವ್ಯ ಮಾಡಬೇಕು.
ಇನ್ನೂ ಆ ರೂಮಿಗೆ ಬಾಗಿಲಿದ್ರೆ,ಕಿಟಕಿಯಿರಲ್ಲ,ಕಿಟಕಿಯಿದ್ರೆ,ಬಾಗಿಲಿರೊಲ್ಲ.ಎರಡೂ ಇದ್ರೆ ಬೋಲ್ಟೇಯಿರೊಲ್ಲ. ಒಂದು ರೂಂನಲ್ಲಿ ಐದಾರು ಜನ ಪುರುಷ ಶಿಕ್ಷಕರಿದ್ದು,ಒಬ್ಬ ಪೋಲಿಸ್ ಮಹಿಳಾ ಸಿಬ್ಬಂದಿಗೆ ಅಲ್ಲಿ ಕರ್ತವ್ಯಕ್ಕೆ ಹಾಕುತ್ತಾರೆ.ಒಳಗಡೆ ಮಲಗಿದ್ರೆ ಧಗೆ,ಹೊರಗೆ ಮಲಗಿದ್ರೆ ಸುರಕ್ಷೆಯ ಸಮಸ್ಯೆ. ರೂಂಗಳ ಗತಿ ಹೀಗಾದ್ರೆ ಹ್ಯಾಗೋ ರಾತ್ರಿಯೆಲ್ಲ ಸೊಳ್ಳೆ ಕೈಲಿ ಕಚ್ಚಿಸಿಕೊಂಡ ಮಲಗಿ ಬೆಳಗ ಎದ್ದರೆ ಮತ್ತೊಂದು ಸಮಸ್ಯೆ ಎದುರಿಗೆ ನಿಂತಿರುತ್ತೆ.ಅಲ್ಲಿ ಶೌಚಾಲಯಗಳಿರುವುದಿಲ್ಲ.ಇದ್ರೂ ಅವು ನಾಮ್ ಕಾ ವಾಸ್ತೆ ನೀರು ಇರೊಲ್ಲ.ಸ್ನಾನ ಮಾಡಬೇಕು ಅದರಲ್ಲಿ ಕೆಲವರು ಮುಟ್ಟಾದವರಿರುತ್ತಾರೆ ಆಗ ಆ ಪೋಲಿಸ್ ಮಹಿಳಾ ಸಿಬ್ಬಂದಿಯವರ ಸ್ಧಿತಿ ಏನು? ಯಾರೇ ಪೋಲಿಸ್್ ಸಿಬ್ಬಂದಿಗಳು ಅನಾರೋಗ್ಯದ ನಿಮಿತ್ತ ರಜೆ ಹೋಗಿದ್ದರೆ ಅವರನ್ನು ಸಹ ವಾಪಸ್ಸು ಕರೆಸಿಕೊಂಡು ಚುನಾವಣಾ ಕರ್ತವ್ಯಕ್ಕೆ ಹಾಕುತ್ತಾರೆ.ಗರ್ಭಿಣಿ ಸ್ತ್ರೀಯರಿಗೂ ದೂರ ದೂರದ ಹಳ್ಳಿಗೆ ಹಾಕುತ್ತಾರೆ.ರಸ್ತೆ ಸರಿಯಿರೋಲ್ಲ ಎಷ್ಟೋ ಸಲ ಏಳು ತಿಂಗಳ ಬಸುರಿ ಹೆಂಗಸರು ಮನೆಯ ಒತ್ತಡ,ಚುನಾವಣೆಯ ಭೀತಿಯಿಂದ ಕರ್ತವ್ಯಕ್ಕೆ ಬಂದ ಬಸ್ಸಿನಲ್ಲೆ ಹೆರಿಗೆಯಾಗಿವೆ.ಇನ್ನೂ ಹೆರಿಗೆಯಾದ ಸ್ತ್ರೀಯರು ಪುಟ್ಟ ಪುಟ್ಟ ಮಗುವಿನ ಜೊತೆಗೆ ಮಗು ನೋಡಿಕೊಳ್ಳಲಿಕ್ಕೆ,ಅವರ ಮನೆಯವರು ಯಾರಾದ್ರು ಬರ್ತಾರೆ.
ಈ ಬೇಸಿಗೆಲಿ, ಎಲ್ಲೋ ಹಳ್ಳಿಯಲ್ಲಿ,ಧಗೆಯ ಮಧ್ಯೆ ಸೊಳ್ಳಗಳ ಗಾನ ಕೇಳುತ್ತ ಸುರಕ್ಷೆಯ ಮರೀಚಿಕೆ ನಡುವೆ ನಲುಗುತ್ತ ಮೂರು ದಿನಗಳ ಕಾಲ ಪೋಲಿಸ್್ ಸಿಬ್ಬಂದಿಗಳು ಕರ್ತವ್ಯ ಮಾಡಬೇಕು.ಗಂಡ ಹೆಂಡತಿ ಇಬ್ಬರೂ ಪೋಲಿಸ್ ಕರ್ತವ್ಯದಲ್ಲಿದ್ದರೆ ಅವರ ಗ್ರಹಚಾರ ಕೆಟ್ಟಂತೆ. ಯಾಕಂದ್ರೆ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳು.ಅವರನ್ನ ಮನೆಯಲ್ಲೆ ಬಿಟ್ಟು ಚುನಾವಣೆ ಕೆಲಸಕ್ಕೆ ಬರಬೇಕು.ಅವರನ್ನು ನೋಡಿಕೋಳ್ಳಲಿಕ್ಕೆ ಯಾರು ಇರುವುದಿಲ್ಲ. ಇವೆಲ್ಲ ಒಂದು ರೀತಿಯಾದ್ರೆ ಚುನಾವಣೆಯ ಮತದಾನದ ಕಾಲಕ್ಕೆ ಕುಡಿದು ಬಂದು ಪೋಲಿಸ್ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಗಲಾಟೆ ಮಾಡುತ್ತಾರೆ.ತಮ್ಮ ಮೇಲಾಧಿಕಾರಿಗೆ ಹೇಳಿದ ಅರ್ಧಗಂಟೆ ಅದೂ ರಸ್ತೆ ಸರಿಯಿರದಿದ್ರೆ ಬರೊಬ್ಬರಿ ಒಂದು ಗಂಟೆ ಮೇಲೆ ಬರುತ್ತಾರೆ.ಅವರಿಗೆ ಸುಮಾರು ಏಳರಿಂದ ಎಂಟು ಹಳ್ಳಿ ನೀಡಿರುತ್ತಾರೆ.ಎಲ್ಲ ಕಡೆ ಓಡಾಡಬೇಕು ಆಗ ಕರ್ತವ್ಯ ನಿರ್ವಹಿಸುವ ಪೋಲಿಸ್ ಸಿಬ್ಬಂದಿಗಳ ಗತಿ ಏನು? ಮತ ಹಾಕಲು ಸಾಲಾಗಿ ನಿಲ್ಲಿಸುತ್ತಾರೆ ಆದ್ರೂ ಅಡ್ಡಡ್ಡ ಬಂದು ನಿಲ್ತಾರೆ ಕೇಳಿದ್ರೆ ಅವರಿಗೆ ಜಗಳಕ್ಕೆ ಬರ್ತಾರೆ.ನೂರು ಮೀಟರ ಒಳಗೆ ಯಾರು ಬರಬಾರ್ದು ಅಂತಾ ಸುಣ್ಣದ ಗೆರೆ ಹಾಕಿದ್ರೂ ಕೂಡಾ ಬರ್ತಾರೆ,ವಾಹನ ತಂದು ನಿಲ್ಲಿಸ್ಥಾರೆ.ಪೋಲಿಸ್ರು ಒಬ್ಬರೆಯಿರ್ತಾರೆ ಅವರು ಮತ ಹಾಕುವ ಜನರ ಕಡೆ ನೋಡಬೇಕಾ, ನೂರು ಮೀಟರ ಒಳಗೆ ಬಂದ ಜನ ಹಾಗೂ ವಾಹನದ ಕಡೆ ನೋಡಬೇಕಾ ಒಂದು ಗೊತ್ತಾಗೊಲ್ಲ. ಒಂದು ಕಡೆ ಹೋಗಿ ಎಲ್ಲ ಸರಿ ಮಾಡಿ ಬರುವಷ್ಟರಲ್ಲಿ ಇನ್ನೊಂದು ಕಡೆ ಗಲಾಟೆ ಮಾಡ್ತಾಯಿರ್ತಾರೆ.
ಅಲ್ಲಿ ಯಾವುದೇ ಖಾನಾವಳಿ ಸಹ ಇರೊಲ್ಲ.ಪೋಲಿಸ್ ಸಿಬ್ಬಂದಿಯವರಿಗೆ ಇಲಾಖೆ ಊಟ ತಂದು ಕೊಡುವಷ್ಟರಲ್ಲಿ ಸಾಯಂಕಾಲ ನಾಲ್ಕು ಅಥವಾ ಐದು ಗಂಟೆಯಾಗಿರುತ್ತೆ.ಮುಂಜಾನೆ ತಮ್ಮ ಹಣದಿಂದ ತಿಂಡಿ ತರಿಸಿಕೊಂಡು ತಿಂದರೆ ಯಾವುದೊ ಪಾರ್ಟಿಯವರು ತಂದು ಕೊಟ್ಟಿದ್ದಾರೆ ಅಂತಾ ಸುಮ್ಮ ಸುಮ್ಮನೆ ಗುಲ್ಲೆಬ್ಬಿಸುತ್ತಾರೆ. ಎಷ್ಟೋ ಜನ ಪೋಲಿಸ್ ಸಿಬ್ಬಂದಿಯವರು ಬೆಳಗಿನ ನಾಷ್ಟಾ ಮಾಡದೆ ಕರ್ತವ್ಯ ನಿರ್ವಹಿಸುತ್ತಾ ಇರ್ತಾರೆ. ಅವರಲ್ಲಿ ಎಷ್ಟೊ ಜನರು ಬಿ.ಪಿ. ಶುಗರ್ ನಂತಹ ಕಾಯಿಲೆಯಿಂದ ಬಳಲುತ್ತಾ ಇರುತ್ತಾರೆ ಅವರ ಸ್ಥಿತಿ ಏನಾಗಬೇಡ? ಕುಡಿಯಲಿಕ್ಕೆ ನೀರು ಸಹ ಇರೋಲ್ಲ.ನೀರು ಇದ್ರೆ ಶೌಚಾಲಯವಿಲ್ಲ.ಹೆಣ್ಣು ಮಕ್ಕಳಿಗೆ ಮೂತ್ರವಿಸರ್ಜನೆ ಬಂದ್ರೆ ಹೊರಗೆ ಬಯಲು ಕಡೆನೇ ಹೊಗಬೇಕು.ಹೀಗೆ ಕರ್ತವ್ಯದ ವೇಳೆಯಲ್ಲಿ ಹೇಗೆ ಹೊರಗೆ ಹೋಗಬೇಕೆಂದು ನೀರೆ ಕುಡಿಯುವುದಿಲ್ಲ.ವೈಜ್ನಾನಿಕವಾಗಿ ಇದು ಎಷ್ಟು ಸಮಂಜಸ.ಹಳ್ಳಿಗಳಲ್ಲಿನ ನೀರು ಕುಡಿದು ಎಷ್ಟೋ ಬಾರಿ ವಾಂತಿ ಭೇದಿಯಾಗಿದ್ದಿದೆ.ಎಲ್ಲಾ ಮುಗಿದು ಮತದಾನದ ಡಬ್ಬಿಗಳನ್ನು ತಂದು ತಾಲೂಕಾ ಕಛೇರಿಗೆ ಮುಟ್ಟಿಸಿ ಮನೆಗೆ ಹೋಗುವಷ್ಟರಲ್ಲಿ ಪೋಲಿಸ್ ಸಿಬ್ಬಂದಿಯವರ ಹೆಣ ವಾಸನೆ ಎದ್ದಿರುತ್ತೆ ಎಂದು ಹೇಳಬಹುದು.ಇದು ಪೋಲಿಸ್ ಸಿಬ್ಬಂದಿ ಮತ್ತು ಚುನಾವಣೆಯ ನಡುವೆ ನಡೆವ ಘಟನೆಗಳ ಹಕಿಕ್ಕತ್ತಾದ್ರೆ ಮತದಾನದ ಬಾಕ್ಸಗಳನ್ನು ಒಂದೆಡೆಯಿಟ್ಟು ಏಣಿಕೆಯ ವೇಳೆಯವರೆಗೂ ಹಗಲಿರುಳೆನ್ನದೆ ಅಲ್ಲಿ ಕಾವಲು ಕಾಯಬೇಕು. ಏಣಿಕೆಯ ಕಾಲಕ್ಕೆ ಪೋಲಿಸ್ ಸಿಬ್ಬಂದಿಯವರ ರೋಲಕಾಲ ಮಾಡಿ ಮತ್ತೆ ಬಂದೋಬಸ್ತ್ ಗೆ ನೇಮಕ ಮಾಡುತ್ತಾರೆ.ಯಾವ ಪಕ್ಷದವರು ಗೆದ್ರು ಅವರು ಮೆರವಣಿಗೆ ಮಾಡಿಕೊಳ್ಳುವಾಗ ಪೋಲಿಸ್ ಸಿಬ್ಬಂದಿಯವರು ಅವರ ಬೆಂಗಾವಲು ಮಾಡಬೇಕು.
ಕೇಂದ್ರ ಸರ್ಕಾರ ಮಹಿಳಾ ಸರ್ಕಾರಿ ನೌಕರರಿಗೆ ಚುನಾವಣೆಯಲ್ಲಿ ರಾತ್ರಿ ವಾಸ್ತವ್ಯದಲ್ಲಿ ರಿಯಾಯಿತಿ ನೀಡಿದೆ ಆದರೆ ಮಹಿಳಾ ಪೋಲಿಸರಿಗೆ ಇದು ಅನ್ವಯವಾಗುವಂತೆ ಮಾಡಿ, ಪೋಲಿಸ್ ಸಿಬ್ಬಂದಿಯವರ ಒತ್ತಡ ಮತ್ತು ಸಮಸ್ಯೆ ಅರಿತು ಸರ್ಕಾರ ಅವರ ಕಡೆ ಗಮನ ಹರಿಸಿದಾಗ ಮಾತ್ರ ಅವರ ಭವಿಷ್ಯ ಸ್ಪಲ್ಪಾದ್ರೂ ಬದಲಾಗಬಹುದೆಂದು ನನ್ನ ಅನಿಸಿಕೆ.
ಚಿತ್ರ ಕೃಪೆ : peoplefriendlypolice.wordpress.com
ಚುನಾವಣಾ ಸಮಯದಲ್ಲಿ ಪೋಲಿಸ ಸಿಬ್ಬಂದಿಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಲೇಖನ.
ಪೋಲಿಸರು ಮತ್ತು ಸಾಮಾನ್ಯ ಜನರ ನಡುವೆ ಬಹುದೊಡ್ಡ ಕಂದಕ ಇದೆ. ಯಾರ ಸಹವಾಸ ಬೇಕಾದರೂ ಮಾಡಬಹುದು ಆದರೆ ಪೋಲಿಸರ ಸಹವಾಸ ಮಾತ್ರ ಬೇಡ ಎನ್ನುವ ಭಾವನೆ ಜನಸಾಮಾನ್ಯರಲ್ಲಿದೆ. ಇದಕ್ಕೆ ಕಾರಣ ಪೋಲಿಸರು/ಪೋಲಿಸಠಾಣೆಗಳು ಜನಸ್ನೇಹಿ ಆಗಿಲ್ಲದಿರುವುದು. ದೂರು ಕೊಡಲು ಹೋದವರನ್ನೇ ಕಳ್ಳರಂತೆ ನೋಡುವ/ಅವಮಾನಿಸುವ/ಸುಲಿಯುವ ವರ್ತನೆಯಿಂದಾಗಿ, ಸಾಮಾನ್ಯವಾಗಿ ಜನರಿಗೆ ಪೋಲಿಸರ ಮೇಲೆ ಯಾವುದೇ ರೀತಿಯ ಕರುಣೆ ಇರುವುದಿಲ್ಲ. ಪೋಲಿಸರೆಂದರೆ ಸುಲಿಗೆಕೋರರು ಎಂಬ ಭಾವನೆಯಿದೆ. ಬಹುತೇಕ ಪೋಲಿಸ ಸಿಬ್ಬಂದಿಗಳ ಜನಪರವಲ್ಲದ ವರ್ತನೆಗೆ ಕಾರಣ ಹುಡುಕಲು ಹೋದಾಗ ನಮ್ಮ ಸರಕಾರಗಳು ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನಾವು ಕಾಣುತ್ತೇವೆ. ದಿನದ ೨೪ ಗಂಟೆಯೂ ಸೇವೆಗೆ ಸಿದ್ಧವಿರಬೇಕಾದ ಅನಿವಾರ್ಯತೆ, ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗೆ ಸರಕಾರ ಒದಗಿಸುವ ನರಕದಂತಹ ಸೌಲಭ್ಯಗಳು, ಎಷ್ಟೊ ಕೆಲಸಗಳಿಗೆ ಹಣವನ್ನು ಅವರೇ ಹೊಂಚುಹಾಕಬೇಕಾದ ಪರಿಸ್ಥಿತಿ, ಅಧಿಕಾರದಲ್ಲಿರುವವರ/ಮೇಲಾಧಿಕಾರಿಗಳ ಮಾತನ್ನು ಶಿರಸಾವಹಿಸಿ (ತಪ್ಪಿದ್ದರೂ) ಕೇಳಬೇಕಾದ ಅನಿವಾರ್ಯತೆ..ಇಂತಹುದರ ಜೊತೆ ಹೆಣಗಾಡಿದ ಮನುಷ್ಯ ಮಾನಸಿಕವಾಗಿ ಯಾವ ಮಟ್ಟದಲ್ಲಿರಬಹುದು? ಈತನಲ್ಲಿ ಸೇವಾ ಮನೋಭಾವನೆ/ಮಾನವೀಯತೆಯನ್ನು ನಾವು ಅದು ಹೇಗೆ ನಿರೀಕ್ಷಿಸಿಸಬಹುದು?
ಕೇರಳದಲ್ಲಿ ಈ ನಿಟ್ಟಿನಲ್ಲಿ ಕೇರಳದಲ್ಲಿ ಜನಮೈತ್ರಿ ಎಂಬ ಕಾರ್ಯಕ್ರಮದೊಂದಿಗೆ ಅಚ್ಚರಿಯೆನಿಸುವಂತಹ ಸುಧಾರಣೆಯನ್ನು ತಂದವರು ಡೈರೆಕ್ಟರ್ ಜನರಲ್ ಆಫ್ ಪೋಲಿಸ್ ಆಗಿದ್ದ ಶ್ರೀ ಜೇಕಬ್ ಪೂನ್ನುಸ್ ಅವರು.
http://www.keralapolice.org/newsite/janamaithri_social.html
ಇಡಿ ಭಾರತದಲ್ಲಿ ಪೋಲಿಸ ವ್ಯವಸ್ಥೆ ಸುಧಾರಿಸಬೇಕಾಗಿದೆ. ಪೋಲಿಸ ಸಿಬ್ಬಂದಿಗಳ ಜೀವನಮಟ್ಟ ಸುಧಾರಿಸಿದರೆ ಅವರ ವರ್ತನೆಯಲ್ಲೂ ಖಂಡಿತ ಬದಲಾವಣೆ ಕಾಣಬಹುದು.
+1