ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2014

1

ಚಿದಂಬರಂ ಪಿಳ್ಳೆ

‍ನಿಲುಮೆ ಮೂಲಕ

– ನವೀನ್ ನಾಯಕ್

ಚಿದಂಬರಂ ಪಿಳ್ಳೆಭರತಖಂಡದ ಒಂದೊಂದೆ ಭಾಗಗಳನ್ನು ತಮ್ಮ ಕುತಂತ್ರದಿಂದ ಕಬಳಿಸಿದ ಬ್ರಿಟೀಶರು ಎಲ್ಲೆಲ್ಲೂ ತಮ್ಮ ಧಾರ್ಷ್ಟ್ಯವನ್ನು ತೋರತೊಡಗಿದರು. ನಮ್ಮ ಸಂಸ್ಕೃತಿಯನ್ನು ಒಂದೆಡೆ ಹೀಯಾಳಿಸುತ್ತ ಇನ್ನೊಂದೆಡೆ ಮತಾಂತರಿಸುತ್ತ ತಮ್ಮ ಸಾಮ್ರಾಜ್ಯವನ್ನು ಶಾಶ್ವತಗೊಳಿಸಲು ಸರ್ವಪ್ರಯತ್ನವನ್ನು ಮಾಡುತ್ತಲೇ ಇದ್ದರು. ತೆರಿಗೆ ಪದ್ದತಿಯ ವಿರೂಪದಿಂದ ಲಕ್ಷಾಂತರ ನೇಕಾರರು , ಕಾರ್ಮಿಕರು ಬೀದಿಗೆ ಬಿದ್ದರು.ದೇಶಿಯ ಮಾರುಕಟ್ಟೆಯನ್ನು ತಮ್ಮ ಕೈವಶ ಮಾಡಿಕೊಂಡು ಅನಾವಶ್ಯಕ ತೆರಿಗೆಗಳನ್ನು ಹೇರಿ ಸಾಮಾನ್ಯ ಜನರು ತತ್ತರಿಸುವಂತೆ ಮಾಡತೊಡಗಿದರು. ಸಮುದ್ರ ಪಯಣಗಳಿಗೂ ಇದರ ಬಿಸಿ ತಟ್ಟಿತ್ತು. ಆ ದಿನಗಳಲ್ಲಿ ಕೊಲೊಂಬೊ ಹಾಗು ತೂತ್ತುಕುಡಿಯ ನಡುವಿನ ಹಡಗು ಪಯಣದ ಸಂಪೂರ್ಣ ಅಧಿಕಾರ ಬ್ರಿಟೀಶರ ಕೈಯಲ್ಲಿತ್ತು. ಬ್ರಿಟೀಶ್ ಇಂಡಿಯಾ ಸ್ಟೀಮ್ ನ್ಯಾವಿಗೇಶನ್ ಕಂಪನಿ ಎಂಬ ಈ ಸಂಸ್ಥೆ ತಮಗಿಷ್ಟ ಬಂದಂತೆ ಪ್ರಯಾಣ ವೆಚ್ಚವನ್ನು ಏರಿಸತೊಡಗಿದರು. ಇವರ ದುರಹಂಕಾರಕ್ಕೆ ಸೆಡ್ಡು ಹೊಡೆಯಲು ಲೆಕ್ಕಚಾರ ಹಾಕಿ ಕುಳಿತವರೇ ಚಿದಂಬರಂ ಪಿಳ್ಳೆ.

ತಮಿಳುನಾಡಿನ ಓಟ್ಟಪ್ಪಿದಪುರಂನಲ್ಲಿ ಉಳಗನಾಥಂ ಮತ್ತು ಪರಮಾಯಿ ಅಮ್ಮಾಳ್ ದಂಪತಿಗೆ ಸೆಪ್ಟಂಬರ್ 5 1827 ರಲ್ಲಿ  ಚಿದಂಬರಂ ಪಿಳ್ಳೆಯವರು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನವರೆಗೆ ಜನ್ಮಸ್ಥಳದಲ್ಲೇ ಕಳೆದ ಚಿದಂಬರಂರವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ತೂತ್ತುಕುಡಿ ಎಂಬಲ್ಲಿಗೆ ಬಂದರು. ತಮ್ಮ ವಿದ್ಯಾಭ್ಯಾಸ ಮಾಡುತ್ತ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿಕೊಂಡರು. ತದನಂತರ ಕೆಲಕಾಲ ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತನಾಗಿ ದುಡಿದರು. ಈ ಕೆಲಸ ಚಿದಂಬರಂರವರಿಗೆ ತೃಪ್ತಿಯನ್ನು ತಂದು ಕೊಡುವಲ್ಲಿ ವಿಫಲವಾಯಿತು. ಚಿದಂಬರಂರವರ ವಂಶದ ಹಿರಿತಲೆಗಳು ವಕೀಲಿ ವೃತ್ತಿಯಲ್ಲಿ ನಿಷ್ಣಾತರಾಗಿದ್ದರು.  ಇದೇ ಪ್ರಭಾವವನ್ನು ಬಳಸಿಕೊಂಡು ಅನ್ಯಾಯವಾಗಿ ಪೋಲಿಸ್ ಇಲಾಕೆಯ ಕಪಿಮುಷ್ಟಿಯಲ್ಲಿ ಸಿಲುಕಿದ ನಿರಪರಾಧಿಗಳ ಪರವಾಗಿ ವಾದಿಸಲು ವಕೀಲಿ ಅಭ್ಯಸಿಸಿ ತಿರುಚ್ಚಿಯ ಸಬ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಎಷ್ಟೋ ಬಾರಿ ನಿರಪರಾಧಿಗಳ ಪರವಾಗಿ ನಿಃಶುಲ್ಕವಾಗಿ ಮೊಕದ್ದಮೆ ನಡೆಸಿಕೊಟ್ಟು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದರು. ಚಿದಂಬರಂರವರ ಈ ಕೆಲಸದಿಂದ ಬ್ರಿಟೀಶರು,ಪೋಲಿಸ್ ಅಧಿಕಾರಿಗಳ ದ್ವೇಷಕ್ಕೆ ಒಳಗಾಗತೊಡಗಿದರು.

ಆಧ್ಯಾತ್ಮ ಮತ್ತು ಶಿವನ ಕುರಿತು ಅಪಾರ ಶ್ರದ್ದೆಯನ್ನು ಚಿದಂಬರಂ ಬೆಳೆಸಿಕೊಂಡಿದ್ದರು.ತಮಿಳು ಸಾಹಿತ್ಯವನ್ನು ಓದಿ ಅದ್ಭುತ ಜ್ಞಾನವನ್ನು ಮೈಗೂಡಿಸಿಕೊಂಡಿದ್ದರಲ್ಲದೇ ಯೋಗ್ಯ ಗುರುಗಳ ಮತ್ತು ಸಾಧುಗಳ ಸಂಪರ್ಕವನ್ನು ಸಹ ಬೆಳೆಸಿಕೊಂಡಿದ್ದರು. ಜೊತೆಗೆ ರಾಷ್ಟ್ರೀಯ ವಿಚಾರಗಳಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. 1898 ಡಿಸೆಂಬರ್  ಸಮಯದಲ್ಲಿ ಮದ್ರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯ ಹೊಣೆಯನ್ನು ಹೊತ್ತಿಕೊಂಡಿದ್ದರು. ಆ ಮಹಾಧಿವೇಶನದಲ್ಲಿ ಭಾಗವಹಿಸಿದ ಒಟ್ಟು 614 ಪ್ರತಿನಿಧಿಗಳಲ್ಲಿ 519ಜನ ತಮಿಳುನಾಡಿನಿಂದಲೇ ಬಂದಿದ್ದರು. ಅಷ್ಟು ಜನರನ್ನು ಅಧಿವೇಶನಕ್ಕಾಗಿ ಕಲೆಹಾಕಿದ್ದ ಶ್ರೇಯಸ್ಸು ಚಿದಂಬರಂರವರದೇ !

ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿಂದು ಧರ್ಮದ ಪತಾಕೆಯನ್ನು ಎತ್ತಿ ಹಿಡಿದಿದ್ದ ಸ್ವಾಮಿ ವಿವೇಕಾನಂದರು ಮದರಾಸಿನಲ್ಲಿ ಮಂಡಿಸಿದ ಹಲವಾರು ವಿಚಾರಧಾರೆಗಳಿಗೆ ಚಿದಂಬರಂರವರು ರೋಮಾಂಚಿತರಾದರು. ಆ ಧೀರ ಸನ್ಯಾಸಿಯ ವಿಚಾರಗಳಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಒಂದು ಸಂಕ್ರಮಣ ಕಾಲದಲ್ಲಿ ಚಿದಂಬರಂ ಮತ್ತು ಸ್ವಾಮಿ ರಾಮಕೃಷ್ಣಾನಂದರ ಪ್ರಥಮ ಭೇಟಿ ಸಂಭವಿಸಿತ್ತು. ಚಿದಂಬರಂರವರು ತಮ್ಮ ಮನಸ್ಸಿನಲ್ಲಿ ಹೆಚ್ಚುತ್ತಿರುವ ದ್ವಂದ್ವಗಳಗಳನ್ನು ಸ್ವಾಮಿ ರಾಮಕೃಷ್ಣಾನಂದರ ಬಳಿ ತೋಡಿಕೊಂಡರು. ಆಧ್ಯಾತ್ಮ ಸೆಳೆತ, ಶಿವಪೂಜೆ, ಧರ್ಮಗ್ರಂಥಗಳ ಪಠಣ, ದೇಶದ ಆಗುಹೋಗುವ ವಿಚಾರಗಳು ಹೀಗೆ ಯಾವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕುರಿತೇ ದ್ವಂದ್ವಕ್ಕೆ ಈಡಾಗಿದ್ದರು. ರಾಮಕೃಷ್ಣಾನಂದರು ಈ ಸಮಯದಲ್ಲಿ ದೇಶದೆಡೆಗೆ ಗಮನ ಹರಿಸುವ ಕುರಿತು ಯೋಚಿಸುವುದು ಒಳ್ಳೆಯದು ಎಂಬ ಸಲಹೆ ನೀಡುವುದರೊಂದಿಗೆ ಬಂಗಾಳದಲ್ಲಿ ಭುಗಿಲೆದ್ದಿರುವ ಸ್ವದೇಶಿ ಚಳುವಳಿಯ ಕುರಿತ ಮಾಹಿತಿ ನೀಡಿದರು. ಸ್ವರಾಜ್ಯ, ಸ್ವದೇಶಿ, ವಿದೇಶಿ ಬಹಿಷ್ಕಾರ ಹಾಗು ರಾಷ್ಟ್ರೀಯ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಇಡೀ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕಾದ ಸಂದರ್ಭವಿದು. ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದು ಸೂಕ್ತ ಎಂದು ನನಗನ್ನಿಸುತ್ತದೆ. ಸ್ವದೇಶಿಯಂ ನಿಮ್ಮ ಧ್ಯೇಯವಾಗಬೇಕು, ಅದೇ ನಿಮ್ಮ ಬಾಳಿಗೆ ದಾರಿದೀಪವಾಗಬೇಕು. ನಿಮ್ಮ ಮನಸ್ಸು ಸ್ವದೇಶಿಯಂ ಸ್ವದೇಶಿಯಂ ಎಂದು ಸದಾ ಆವರಿಸಿರಬೇಕು. ( ತಮಿಳಿನಲ್ಲಿ ಸ್ವದೇಶಿಯಂ ಎಂದರೆ ರಾಷ್ಟ್ರೀಯತೆ ) ಸ್ವಾಮೀಜಿಯವರ ಮಾತಿನಂತೆ ತಮ್ಮ ಮುಂದಿನ ಹಾದಿಯನ್ನು ಚಿದಂಬರಂ ಕಂಡುಕೊಂಡರು.

ಪಿಳ್ಳೆಯವರು ಅಂದಿನ ರಾಷ್ಟ್ರೀಯ ನಾಯಕರಾದ ಅರವಿಂದ್ ಘೋಷ್, ಖಾರ್ಪಡೆ, ಸಾವರ್ಕರ್, ಮೂಂಜೆ, ಬಿಪಿನ್ ಚಂದ್ರಪಾಲ್ ಮುಂತಾದವರೊಂದಿಗೆ ಮುಂದಿನ ತೀರ್ಮಾನಗಳ ಕುರಿತು ಪತ್ರ ವ್ಯವಹಾರ ನಡೆಸತೊಡಗಿದರು. ತಮ್ಮ ಗುರುವನ್ನಾಗಿ ತಿಲಕರನ್ನು ಸ್ವೀಕರಿಸಿದರು. ವಿವೇಕನಂದರ  ವಿಚಾರಗಳು, ಹಲವಾರು ನಾಯಕರ ಸಹವಾಸದಿಂದ ತಮ್ಮ ಬಾಳಿನಲ್ಲಿ ದೇಶಪ್ರೇಮದ ಅಪೂರ್ವ ಸಮ್ಮಿಲನವನ್ನು ಸಾಧಿಸಿದರು. ಹಗಲು ರಾತ್ರಿ ಸ್ವದೇಶಿಯ ಕುರಿತು ಹೋರಾಟಗಳನ್ನು ನಡೆಸುತಿದ್ದಾಗ ಒಂದು ಅಪೂರ್ವ ಯೋಚನೆ ಹೊಮ್ಮಿತ್ತು ! ಅದೇ ಸ್ವದೇಶಿ ಹಡಗು ಕಂಪನಿ. ಕೈಯಲ್ಲಿ ಬಿಡುಗಾಸಿಲ್ಲದೇ ಮಹಾನ್ ಕಾರ್ಯಕ್ಕೆ ಮುಂದಾದ ಸಾಹಸಿ ! ಪಿಳ್ಳೆಯವರ ಲೆಕ್ಕಚಾರದಂತೆ ಕಂಪನಿಗೆ ಬೇಕಾದ ಹಣ ಹತ್ತು ಲಕ್ಷ ರುಪಾಯಿಗಳು. ನಮ್ಮ ಕಣ್ಣಿಗೆ ಅಜಗಜಾಂತರ !

ತನ್ನ ಯೋಜನೆಯನ್ನು ಮದರಾಸಿನ ಇಂಡಿಯಾ ಪತ್ರಿಕೆಯ ಸಂಪಾದಕರಾಗಿದ್ದ ಭಾರತಿಯವರ  ಬಳಿ ಚರ್ಚಿಸತೊಡಗಿದರು. ಹತ್ತು ಲಕ್ಷ ಹಣವನ್ನು ಕೆಲವರಿಂದ ಮಾತ್ರ ಸಿಗುವುದಿಲ್ಲ ಅದರ ಬದಲಾಗಿ ಹನಿ ಹನಿಗೂಡಿದರೆ ಹಳ್ಳವೆಂಬಂತೆ ನಲವತ್ತು ಸಾವಿರ ಷೇರುಗಳಾಗಿ ಮಾರ್ಪಡಿಸಿದರು. ಪ್ರತಿಯೊಂದು ಷೇರಿನ ಮುಖಬೆಲೆ ಇಪ್ಪತೈದು ರುಪಾಯಿಗಳು. ತಮ್ಮ ಕಂಪನಿಗೆ ತಮಿಳು ಸಂಘದ ಅಧ್ಯಕ್ಷ ಮತ್ತು ಜಮೀನ್ದಾರರಾಗಿದ್ದ ಪಾಂಡಿದೊರೈ ತೇವರ್ ಸ್ವದೇಶಿ ಕಂಪನಿಯ ಅಧ್ಯಕ್ಷರಾಗಲು ಒಪ್ಪಿಕೊಂಡಿದ್ದಾರೆ. ಅದಲ್ಲದೇ ಹದಿನೈದು ಜನ ಡೈರೆಕ್ಟರ್ ಗಳು ಮತ್ತು ಹಾಜಿ ಫಕೀರ್ ಮೊಹಮ್ಮದ್ ಸೇಟ್ ಹಾಗು ಪಿಳ್ಳೆಯವರು ಕಾರ್ಯದರ್ಶಿಗಳಾಗಿರುತ್ತಾರೆ. ಇದೆಲ್ಲವನ್ನು ಸಾಧಿಸಲು ಎಂಟು ಅಂಶಗಳ ಧ್ಯೇಯ ಮತ್ತು ಧೋರಣೆಗಳ ಪತ್ರವನ್ನು ಪಿಳ್ಳೆಯವರು ಸಿದ್ಧಪಡಿಸಿರುತ್ತಾರೆ. ಇದರ ಕುರಿತಾದ ಮಾಹಿತಿಯೂ ತಿಲಕ್, ಪಾಲ್, ಅರವಿಂದರವರಿಗೂ ಪತ್ರದ ಮುಖಾಂತರ ಹೋಗಿರುತ್ತದೆ. ಅವರೆಲ್ಲರೂ ತುಂಬಾ ಸ್ಪೂರ್ತಿಯಿಂದ ಪಿಳ್ಳೆಯವರನ್ನು ಉತ್ತೇಜಿಸಿದ್ದರು. ಈ ಎಲ್ಲಾ ಚರ್ಚೆಗಳ ನಂತರ ಷೇರು ಹಣ ಸಂಗ್ರಹಕ್ಕಾಗಿ ಪಿಳ್ಳೆಯವರು ಕಾರ್ಯೋನ್ಮುಕರಾಗುತ್ತಾರೆ. ಪುಣೆ, ಬಾಂಬೆ ಮುಂತಾದ ಕಡೆಗೆ ತಮ್ಮ ಪ್ರವಾಸವನ್ನು ನಿಗದಿಪಡಿಸುತ್ತಾರೆ.

ಚಿದಂಬರಂ ಪಿಳ್ಳೆಯವರಿಗೆ ಕೈಗೊಂಡ ಮಹತ್ಕಾರ್ಯದ್ದೇ ಹಗಲು ರಾತ್ರಿ ಕನಸು. ಈ ಯೋಜನೆಯನ್ನು ಸಫಲಗೊಳಿಸಿ ಬ್ರಿಟೀಶರ ಗುಂಡಿಗೆ ನಡುಗಿಸಬೇಕು , ಸೆಡ್ಡುಹೊಡೆಯಬೇಕೆಂಬ ಅದಮ್ಯ ಛಲ. ಅರ್ಜುನನು ಗಿಳಿಯ ಕಣ್ಣಿಗೆ ಗುರಿ ಇಟ್ಟ ಹಾಗೆ ತಮ್ಮ ಕನಸ್ಸನ್ನೇ ನನಸು ಮಾಡಲು ಮುಂಬಯಿಗೆ ಹೊರಟೇ ಬಿಟ್ಟರು. ಅದೇ ಸಮಯದಲ್ಲಿ ಇತ್ತ ಮಗನಾದ ಲೋಕನಾಥನಿಗೆ ಆರೋಗ್ಯ ಹದಗೆಟ್ಟಿತ್ತು, ಸೊಸೆ ತುಂಬು ಗರ್ಬಿಣಿಯಾಗಿದ್ದರು. ಹೆಂಡತಿ ಮೀನಾಕ್ಷಿಯಮ್ಮಾಳ್ ಗಂಡನನ್ನು ಈ ಸಮಯದಲ್ಲಿ ಕಳುಹಿಸಿಕೊಡಲು ಅಂಜುತಿದ್ದರು. ಪ್ರಯಾಣವನ್ನು ಸ್ವಲ್ಪ ಮುಂದಕ್ಕೆ ಹಾಕಲು ಒತ್ತಾಯಿಸುತಿದ್ದರು. ಉಹುಂ ಪಿಳ್ಳೆಯವರು ಸುತರಾಂ ಒಪ್ಪಲೇ ಇಲ್ಲ. ತಿಲಕರ ಮಾತನ್ನು ನೆನಪಿಸಿಕೊಂಡರು Nation First, Self Next ! ಇವಕ್ಕೆಲ್ಲಾ ಅಂಜಿ ದೇಶದ ಕಾರ್ಯ ಮುಂದೂಡಲು ಸಾಧ್ಯವಿಲ್ಲ ಎಂದು ಹೆಂಡತಿಗೆ ಉತ್ತರಿಸಿ ಮುಂಬೈ ಕಡೆ ಹೊರಟೇಬಿಟ್ಟರು.

ಮುಂಬಯಿ ತುಂಬ ಧನ ಸಂಗ್ರಹಕ್ಕಾಗಿ ಅಲೆದರು. ಎಷ್ಟೋ ಉದ್ಯೋಗಪತಿಗಳನ್ನು ಭೇಟಿ ಮಾಡಿ ತಮ್ಮ ಹಡಗು ಕಂಪನಿಯ ಕುರಿತು ಚರ್ಚಿಸಿದರು. ಅವರ ಮನಸ್ಸನ್ನು ಒಲಿಸುವಲ್ಲಿ ಯಶಸ್ವಿಯೂ ಆದರು. ಹೀಗೆ ಒಂದು ದಿನ ಹಲವಾರು ಉದ್ಯೋಗಪತಿಗಳ ಬೆಂಬಲ ಸಂಪಾದಿಸಲು ದಿನವಿಡೀ ಸುತ್ತಾಡಿದ್ದರು. ಅಂದು ಅವರ ಮನಸ್ಸೇಕೋ ಅಶಾಂತಗೊಂಡಿತ್ತು. ಮನಸ್ಸಲ್ಲಿ ಕೆಟ್ಟ ವಿಚಾರಗಳು ಬರತೊಡಗಿದವು. ಕುಟುಂಬದವರ ನೆನಪಾಗತೊಡಗಿತು. ಮಗನ ಆರೋಗ್ಯ ಹದಗೆಟ್ಟಿರುವುದು ಪದೇ ಪದೇ ಕಾಡತೊಡಗಿತು. ಬರಲಿರುವ ಘೋರಸುದ್ದಿಯ ಸೂಚನೆ ಏನೋ. ಈ ಚಿಂತೆಯಲ್ಲಿ ಮುಳುಗಿ ತಮ್ಮ ಹೋಟೆಲಿಗೆ ರಾತ್ರಿ ಹಿಂದಿರುಗಿದಾಗ ಮ್ಯಾನೇಜರ್ ಬಳಿ ಟೆಲಿಗ್ರಾಂ ಇವರಿಗಾಗಿ ಕಾದು ಕುಳಿತಿತ್ತು. ಹೋಟೆಲ್ ಮ್ಯಾನೇಜರ್ ಟೆಲಿಗ್ರಾಂನ್ನು ತಂದು ಪಿಳ್ಳೆಯವರ ಕೈಗಿಟ್ಟರು. ಕೈ ನಡುಗತೊಡಗಿತು. ತಾನು ಅನುಭವಿಸುತ್ತಿರುವ ದುಸ್ವಪ್ನ ನಿಜವಾಗಿರಬಹುದೇ . ಹೃದಯದಲ್ಲಿ ಬಡಿತ ಜೋರಾಯಿತು. ಟೆಲಿಗ್ರಾಂನ್ನು ಓದಲು ಶುರು ಮಾಡಿದಾಗ ತಟ್ಟನೇ ಕಣ್ಣಿಂದ ನೀರಿಳಿಯಲು ಶುರುವಾಯಿತು. ನಿಂತಲ್ಲೇ ದಸಕ್ಕನೇ ಕುಸಿದರು. ತಮಗೆ ಭ್ರಮೆಯೋ ಎಂಬಂತೆ ಮತ್ತೆ ಮತ್ತೆ ಸುದ್ದಿಯನ್ನು ಓದಿದರು. ಹೌದು ! ಅಲ್ಲಿಯವರೆಗೆ ಅವರಿಗೇನು ಕಾಡಿತ್ತೋ ಆ ಘೋರ ದುಸ್ವಪ್ನ ನಿಜವಾಗಿತ್ತು. ಮಗ ಲೋಕನಾಥ ತುಂಬು ಗರ್ಬಿಣಿ ಹೆಂಡತಿ ಮತ್ತು ಅಪ್ಪ ಅಮ್ಮನನ್ನು ಬಿಟ್ಟು ಜೀವನಯಾತ್ರೆಗೆ ಪೂರ್ಣ ವಿರಾಮವನ್ನಿಟ್ಟಿದ್ದನು.

ಪಿಳ್ಳೆಯವರ ಕಂಠದಿಂದ ಗದ್ಗದವಾಗಿ ಭಾವನೆ ಹೊರಹೊಮ್ಮಿತ್ತು ” ಮಗನೇ ಲೋಕನಾಥ ಹೊರಟುಬಿಟ್ಟಯೇನಪ್ಪಾ ! ತಮ್ಮ ಭಾವನೆಗಳನ್ನು ಬಲವಂತವಾಗಿ ಹತೋಟಿಗೆ ತಂದುಕೊಂಡರು. ಒಂದೆರಡು ನಿಮಿಷಗಳಲ್ಲಿ ಸಂಭಾಳಿಸಿಕೊಂಡು ಪ್ರತ್ಯುತ್ತರವಾಗಿ ತಂತಿಯನ್ನು ಕಳುಹಿಸಲು ಹೇಳಿದರು. ತಂತಿಗೆ ವಿಷಯವನ್ನು ಪಿಳ್ಳೆಯವರು ತಿಳಿಸುವಾಗ ಮ್ಯಾನೇಜರ್ ಗಾಬರಿ ಬಿದ್ದ ! ಪಿಳ್ಳೆಯವರ ಮುಖವನ್ನು ದಿಟ್ಟಿಸಿ ನೋಡತೊಡಗಿದ . ಅಷ್ಟಕ್ಕೂ ಕಳುಹಿಸಿದ ತಂತಿಯ ವಿಷಯವೇನು ಗೊತ್ತೆ ? ” Don’t wait for me. Proceed with last rites. Coming after completion of job. V. O. Chidambaram Pillay ” ಮ್ಯಾನೇಜರ್ ಕಸಿವಿಸಯಿಂದ ಕೇಳಿದ ” ಸರ್ , ತಾವು ಇಂಥ ಸುದ್ದಿ ಕೇಳಿಯೂ ಹೋಗದಿದ್ದರೆ ಹೇಗೆ ? ” ಉತ್ತರಿಸಿದ ಪಿಳ್ಳೆಯವರು ಮ್ಯಾನೇಜರ್ , ನಾನು ನನ್ನ ಗುರು ತಿಲಕ್ ರಿಂದ ಒಂದು ಪಾಠ ಕಲಿತಿದ್ದೇನೆ Nation First, Self Next ! . ನನ್ನ ಮಗನನ್ನು ಕಿತ್ತುಕೊಂಡ ಶಿವ ಅವನನ್ನು ತಾನೇ ಕರೆಸಿಕೊಳ್ಳುವ ವ್ಯವಸ್ತೆಯನ್ನು ಮಾಡಿಕೊಳ್ಳಲಿ. ! ಇದೇ ಮಾದರಿಯಲ್ಲಿ ಶಿವಾಜಿಯವರ ಸರದಾರನಾಗಿದ್ದ ತಾನಾಜಿ ಮಾಲಸುರೆಯವರು ಕೊಂಡಾಣದ ರಣರಂಗಕ್ಕೆ ಹೊರಡುವಾಗ ಪರಿಸ್ತಿತಿ ಘಟಿಸಿತ್ತು ಯುದ್ದದ ಸಮಯದಲ್ಲಿ ಮಗನ ಮದುವೆ ಎದುರಾಗಿತ್ತು ! ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಮಾಲಸಾರೆ ಮೊದಲು ಕೊಂಡಾಣದ ಗೆಲುವು ನಂತರ ಮಗನ ಮದುವೆ ಎಂದು ರಣರಂಗಕ್ಕೆ ಹೊರಟಿದ್ದ ! ಇತಿಹಾಸ ವಿಭಿನ್ನವಾಗಿ ಮರುಕಳಿಸಿತ್ತು . ಕೊನೆಯ ಬಾರಿ ಮಗನ ಮುಖ ನೋಡಲೂ ಹೋಗದೇ ಚಿತೆಗೆ ಬೆಂಕಿಯನ್ನು ಇಡಲು ಹೋಗದೆ ಮುಂಬಯಿಯಲ್ಲಿನ ತಮ್ಮ ಉದ್ದೇಶ ಈಡೇರಿದ ನಂತರ ತಿನ್ನವೆಲ್ಲಿಗೆ ಬಂದು ತಮ್ಮ ಮಗ ಲೋಕನಾಥನಿಗೆ ತರ್ಪಣ ನೀಡಿದರು.

ಮತ್ತೆ ತಿನ್ನೆವಲ್ಲಿಯಲ್ಲಿ ಸ್ವದೇಶಿ ಪ್ರಚಾರ ವಿದೇಶಿ ಬಹಿಶ್ಕಾರ ತೀರ್ವವಾಗಿ ಹರಡತೊಡಗಿದವು. ಅದ್ಭುತ ವಾಗ್ಮಿ ಸುಬ್ರಹ್ಮಣ್ಯಂ ಶಿವಂ, ಭಾರತಿ, ಪಿಳ್ಳೆಯವರು ಜಿಲ್ಲೆ ತುಂಬ ಸಂಚರಿಸುತ್ತ ತಮ್ಮ ಭಾಷಣಗಳಿಂದ ಚಳುವಳಿ ಯಶಸ್ವಿಯಾಗುವಂತೆ ನೋಡಿಕೊಂಡರು.  ಸಾಮಾನ್ಯ ಜನರು ಪರಸ್ಪರ ಭೇಟಿಯಾದಾಗ ” ವಂದೇ ಮಾತರಂ ” ಎಂದು ಅಭಿನಂದಿಸುವುದು ರೂಡಿಗೆ ಬಂತು. ಇತ್ತ ತಮ್ಮ ಕನಸ್ಸಿನ ಯೋಜನೆಗೆ ಹಣ ಸಾಕಷ್ಟು ಪಡೆದುಕೊಂಡಾಗ ಮುಂದಿನ ಚಟುವಟಿಕೆಗಳಿಗೆ ಪಿಳ್ಳೆಯವರು ತೊಡಗಿಕೊಂಡರು. ಆ ಸಮಯದಲ್ಲೇ ಇಬ್ಬರ ಹಡಗು ಕಂಪನಿಗಳನ್ನು ದರ ಸಮರದಲ್ಲಿ ಮುಳುಗಿಸಿದ್ದ ಬ್ರಿಟಿಶ್ ಹುನ್ನಾರವನ್ನು ಪಿಳ್ಳೆಯವರು ಚೆನ್ನಾಗೇ ಅರಿತಿದ್ದರು. ಅದಕ್ಕಾಗಿ ಹಡಗು ಕಂಪನಿಯ ಪ್ರಚಾರ ಮಾಡುವಾಗ ಸ್ವದೇಶಿಯನ್ನು ಎತ್ತಿ ಹಿಡಿದಿದ್ದರು. ಹಲವು ತಿಂಗಳ ತಮ್ಮ ಸತತ ಪ್ರಯತ್ನದ ಫಲವಾಗಿ 1906 ಅಕ್ಟೋಬರ್ 16 ರಂದು ಇಂಡಿಯನ್ ಕಂಪನೀಸ್ ( 1882 ) ಆಕ್ಟ್ ಪ್ರಕಾರ ಸ್ವದೇಶಿ ಸ್ಟೀಮ್ ನ್ಯಾವಿಗೇಶನ್ ಕಂಪನಿ ರಿಜಿಸ್ಟರ್ ಆಯಿತು. ಅಂದಿನಿಂದ ಪಿಳ್ಳೆಯವರನ್ನು ಕಪ್ಪಲೋಟ್ಟಿಯ ತಮಿಳನ್ ( ಹಡಗುಗಳನ್ನು ನಡೆಸಿದ ತಮಿಳ ) ಎಂದು ಜನರು ಕರೆಯಲಾರಂಭಿಸಿದರು.  ಈ ಸಮಯದಲ್ಲಿ ಜನರು ಪಿಳ್ಳೆಯವರನ್ನು ವಂದೇ ಮಾತರಂ ಪಿಳ್ಳೆ, ದಳಪತಿ ಚಿದಂಬರಂ ಪಿಳ್ಳೆ ಎಂಬ ಹಲವು ಹೆಸರುಗಳಿಂದ ಕರೆಯಲಾರಂಭಿಸಿದರು.

ಕಂಪನಿ ರಿಜಿಸ್ಟರ್ ಆದ ನಂತರ ಹಡಗುಗಳನ್ನು ಕೊಂಡುಕೊಳ್ಳಲು ಪಿಳ್ಳೆಯವರ ಮಿತ್ರರಾದ ವೇದಮೂರ್ತಿ ಮೊದಲಿಯಾರ್ ಪ್ಯಾರೀಸ್ ಗೆ ಹೋಗಿ ವ್ಯವಹಾರವನ್ನು ಕುದುರಿಸಿದರು. 1907 ಮೇ ತಿಂಗಳಲ್ಲಿ ಎಸ್ ಎಸ್ ಗೇಲಿಯೋ ಮತ್ತು ಎಸ್ ಎಸ್ ಲಾವೋ ಎಂಬ ಎರಡು ಹಡಗುಗಳನ್ನು ಕೊಂಡುಕೊಂಡು ತೂತ್ತಕುಡಿಯ ಬಂದರಿನೆಡೆ ಪಯಣಿಸಿದರು. ಭಾರತೀಯವರಂತೂ ಹರ್ಷದ ಶಿಖರವನ್ನೇರಿದ್ದರು. ತಮ್ಮ ಇಂಡಿಯಾ ಪತ್ರಿಕೆಯಲ್ಲಿ ಒಂದರ ಮೇಲೊಂದಂತೆ ಲೇಖನಗಳನ್ನು ಬರೆದು ಚಿದಂಬರಂ ಕುರಿತು ನಾಡಿನಲ್ಲಿ ಒಂದು ಉತ್ತಮ ವಾತಾವರಣವನ್ನು ನಿರ್ಮಿಸಿದ್ದರು. ಮದ್ರಾಸಿನಲ್ಲಿ ಬುಗಿಲೆದ್ದ ಸ್ವದೇಶಿ ಚಳುವಳಿ ಕುರಿತು ಅರವಿಂದ ಘೋಷರು ಬಂಗಾಳದಲ್ಲಿ ಲೇಖನಗಳನ್ನು ಬರೆದು ಪ್ರಕಟಿಸಿ ಚಳುವಳಿಗೆ ಇನ್ನಷ್ಟು ಉತ್ಸಾಹವನ್ನು ತುಂಬತೊಡಗಿದರು. ಇತ್ತ ಹಡಗುಗಳು ಮೇಲೆ ನಾಗರಿ ಲಿಪಿಯಲ್ಲಿ ವಂದೇ ಮಾತರಂ ಎಂದು ಬರೆಯಲಾಗಿದ್ದ ದ್ವಜಗಳು ನೀರ್ಭೀತಿಯಿಂದ ಹಾರಾಡುತಿದ್ದವು. ಸಮುದ್ರ ದಡದಲ್ಲಿ ಜನಸಾಗರವೇ ಉತ್ಸಾಹದಿಂದ ಕಾಯುತಿತ್ತು. ಹಡಗು ಕಂಡ ಕೂಡಲೇ ಜನರ ಘೋಷಣೆಗಳು ಮುಗಿಲುಮುಟ್ಟಿತ್ತು ! ವಂದೇ ಮಾತರಂ,  ಸ್ವದೇಶಿಗೆ ಜಯವಾಗಲಿ, ದಳಪತಿ ಚಿದಂಬರಂ ಪಿಳ್ಳೆಗೆ ಜಯವಾಗಲಿ ಎಂದು ಕೂಗತೊಡಗಿದರು. ನಾದಸ್ವರಗಳು , ಬಾಜಬಜಂತ್ರಿಗಳು ಹಡಗುಗಳನ್ನು ಸ್ವಾಗತಿಸತೊಡಗಿದರು.

ತಮ್ಮ ಮಹದಾಸೆಯನ್ನು ನೆರವೇರಿಸಿದ ಚಿದಂಬರಂ ಭಾವಗರ್ಭಿತರಾಗಿದ್ದರು. ಕಣ್ಣಲ್ಲಿ ಆನಂದಭಾಷ್ಪ ತುಂಬಿಕೊಂಡಿತ್ತು.  ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ಈಡೇರಿಸಿದ ತೃಪ್ತಿ ಮುಖದಲ್ಲಿ ಎದ್ದು ಕಾಣುತಿತ್ತು. ಆ ಜನಸಾಗರಗಳ ನಡುವೆಯೇ ಲೋಕನಾಥ ವಂದೇ ಮಾತರಂ ಘೋಷಣೆ ಹಾಕುತ್ತಿರುವಂತೆ ಕಂಡರು. ಸತತ ಪ್ರಯತ್ನಗಳ ಫಲವಾಗಿ ಬ್ರಿಟೀಶ್ ಸಾಮ್ರಾಜ್ಯಕ್ಕೆ ಸವಾಲೆಸೆದು ಭರ್ಜರಿಯಾಗಿ ಗೆದ್ದಿದ್ದರು. ಇದರ ಮುಂದುವರಿದ ಭಾಗವೆಂಬಂತೆ ಮದ್ರಾಸಿನಲ್ಲಿ ನಡೆಯುತಿದ್ದ ಸಾರ್ವಜನಿಕ ಸಭೆಗಳ ಮೊದಲ ದಿನವೇ ಮುವತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸತೊಡಗಿದರು. ಸ್ವದೇಶಿ ಕ್ರಾಂತಿ ಯಶಸ್ವಿಯಾಗಿತ್ತು. ಎಲ್ಲೆಂದರಲ್ಲಿ ವಂದೇ ಮಾತರಂ ಘೋಷಣೆ ಜನರಲ್ಲಿ ನವ ಉತ್ಸಾಹವನ್ನು ಮೂಡಿಸಿತ್ತು. ಚಿದಂಬರಂ ತಮ್ಮ ಮುಂದಿನ ಯೋಜನೆಯ ಲೆಕ್ಕಚಾರ ಹಾಕತೊಡಗಿದರು. ಅದೇ ಹಡಗಿನಲ್ಲಿ ಬ್ರಿಟೀಶರನ್ನು ಗಂಟು ಮೂಟೆ ಕಟ್ಟಿ ವಾಪಾಸ್ ಕಳುಹಿಸಬೇಕೆಂದಾಗಿತ್ತು!

ಚಿತ್ರಕೃಪೆ : http://www.tamilspider.com

1 ಟಿಪ್ಪಣಿ Post a comment
  1. naveennayak799
    ಏಪ್ರಿಲ್ 3 2014

    ತಿದ್ದುಪಡಿ. :- ಜನ್ಮ ದಿನಾಂಕ ಸೆಪ್ಟಂಬರ್ 5 1872

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments