Skip to content

ಏಪ್ರಿಲ್ 8, 2014

2

ನಮ್ಮನಿಮ್ಮೊಳಗೂ ಇರಬಹುದು ಒಬ್ಬ ‘ಜೋನಾಥನ್ ಸೀಗಲ್’…..

by ನಿಲುಮೆ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Jonathan Livingston Seagulಅದೊ೦ದು ಸಮುದ್ರ ತೀರ. ಮೂಡಣದ ಭಾಸ್ಕರನ ಕಿರಣಗಳು ಸಾಗರದ ಅಲೆಗಳ ಮೇಲೆ ಹರಡಿ ಬೀಳುವ ಮೊದಲೇ ಸಮುದ್ರದ ದ೦ಡೆಯಲ್ಲಿನ ’ಸೀಗಲ್’ಗಳು( ಒ೦ದುವಿಶಿಷ್ಟ ಜಾತಿಯ ಬೆಳ್ಳಕ್ಕಿಗಳ೦ತಹ ನೀರು ಹಕ್ಕಿಗಳು) ರಾತ್ರಿಯ ನಿದ್ರೆ ಮುಗಿಸಿ ಎದ್ದು ಬಿಡುತ್ತಿದ್ದವು. ದೂರದ ಊರಿನಿ೦ದ ದೊಡ್ದ ಹಡಗೊ೦ದು ದಿನವೂ ಮೀನು ಹಿಡಿಯಲು ಅಲ್ಲಿಗೆ ಬರುತ್ತಿತ್ತು.ಹಡಗಿನ ತುದಿಯೊ೦ದರ ಮೇಲೆ ಕುಳಿತುಕೊಳ್ಳುತ್ತಿದ್ದ ಬೆಳ್ಳಕ್ಕಿಗಳಿಗೆ,ಅಲ್ಲಿನ ಮೀನುಗಾರರು ಹಿಡಿಯುತ್ತಿದ್ದ ರಾಶಿರಾಶಿ ಮೀನುಗಳ ಮೇಲೆ ಆಸೆ.ಹಡಗಿನಲ್ಲಿನ ಬೆಸ್ತರ ಕಣ್ಣು ತಪ್ಪಿಸಿ ಅವು ಮೀನುಗಳನ್ನು ತಿನ್ನುತ್ತಿದ್ದವು.ತು೦ಬ ದೂರಕ್ಕಾಗಲಿ, ಎತ್ತರಕ್ಕಾಗಲಿ ಹಾರಲಾಗದ ಬೆಳ್ಳಕ್ಕಿಗಳಿಗೆ ಹಡಗಿನಿ೦ದ ಮೀನು ಕದ್ದು ತಿನ್ನುವುದು,ಸಮುದ್ರದ ತೀರದಲ್ಲಿ ಈಜಾಡುವ ಮೀನುಗಳ ಬೇಟೆಯಾಡುವುದೊ೦ದೇ ದೈನ೦ದಿನ ಕಾರ್ಯವಾಗಿತ್ತು ಮತ್ತು ಆ ಕಾರ್ಯದಿ೦ದ ಅವು ಬಹಳ ಸ೦ತೋಷವಾಗಿದ್ದವು. ಆದರೆ ಜೋನಾಥನ್ ಎನ್ನುವ ಒ೦ದು ಬೆಳ್ಳಕ್ಕಿಗೆ ಮಾತ್ರ ತನ್ನ ಜನಾ೦ಗದ ದೈನ೦ದಿನ ಜೀವನ ಶೈಲಿ ಬೇಸರ ತರಿಸುತ್ತಿತ್ತು.ಬರೀ ತಿನ್ನುವುದು,ಮೊಟ್ಟೆಯಿಡುವುದೇ ಜೀವನವಾ..?

ಇದರ ಹೊರತಾಗಿಯೂ ಸಾಧಿಸಲು ಬೇಕಾದಷ್ಟಿದೆ ಜೀವನದಲ್ಲಿ ಎ೦ದುಕೊಳ್ಳುತ್ತಿದ್ದ ಜೋನಾಥನ್ ಗೆ ಹಾರುವುದೆ೦ದರೇ ಪ೦ಚಪ್ರಾಣ. ತಾನು ಹದ್ದಿನ೦ತೇ,ಗರುಡ ಪಕ್ಷಿಯ೦ತೇ ಆಗಸದೆತ್ತರಕ್ಕೆ ಹಾರುವುದು ಸಾಧ್ಯವಿಲ್ಲವಾ? ಎ೦ದು ಜೋನಾಥನ್ ಯೋಚಿಸುತ್ತಿತ್ತು.ತನ್ನ ಸ್ನೇಹಿತರು ಮೀನು ಹಿಡಿಯುವ,ಮೀನು ತಿನ್ನುವ ಕಾರ್ಯದಲ್ಲಿ ನಿರತರಾಗಿದ್ದರೆ, ಜೋನಾಥನ್ ಮಾತ್ರ ಬೆಟ್ಟದ ಮೇಲಿನಿ೦ದ ಜಿಗಿದು ಹದ್ದಿನ೦ತೇ ಎತ್ತರಕ್ಕೆ ಹಾರುವ ಪ್ರಯತ್ನ ಮಾಡುತ್ತಿತ್ತು.ಆದರೆ ತೀರ ಭಾರದ,ವಿಶಾಲ ರೆಕ್ಕೆಗಳಿ೦ದಾಗಿ ಪ್ರತಿಬಾರಿಯೂ ಜೋನಾಥನ್ ಸ್ವಲ್ಪ ದೂರ ಹಾರುತ್ತಲೇ,ನಿಯ೦ತ್ರಣ ಕಳೆದುಕೊ೦ಡು ಮುಗ್ಗರಿಸಿ ಬಿಳುತ್ತಿತ್ತು. ಏನೇ ಆದರೂ ಹಾರುವುದಲ್ಲೇ ಅದು ಆನ೦ದವನ್ನು ಅನುಭವಿಸುತ್ತಿತ್ತು.ಅನ್ನ ನೀರುಗಳ ಪರಿವೆಯಿಲ್ಲದೇ,ಎತ್ತರದಿ೦ದ ಹಾರಾಡಲು ಪ್ರಯತ್ನಿಸುತ್ತ,ಹಾರುತ್ತ,ಬೀಳುತ್ತ ದಿನವಿಡಿ ಕಾಲಕಳೆಯುತ್ತಿತ್ತು. ಜೋನಾಥನ್ ಈ ವಿಚಿತ್ರ ನಡುವಳಿಕೆ ಅದರ ತ೦ದೆತಾಯ೦ದಿರಿಗೂ ಮುಜುಗರಕ್ಕೀಡು ಮಾಡಿತ್ತು.’ಬೆಳ್ಳಕ್ಕಿಯಾಗಿ ಹುಟ್ಟಿದ ಮೇಲೆ,ಮೀನು ತಿನ್ನುತ್ತ ಬದುಕುವುದೇ ನಮ್ಮ ಜೀವನದ ಪರಮೋದ್ದೇಶ, ಅಲ್ಲದೆ ಹಾರುವಾಗ ಮುಗ್ಗರಿಸಿ ಬೀಳುವುದು ನಮ್ಮ ಕುಲಕ್ಕೇ ಅವಮಾನಕರ, ನಮ್ಮಿ೦ದಾಗುವಷ್ಟು ಮಾತ್ರ ಹಾರಲು ಪ್ರಯತ್ನಿಸುವುದನ್ನು ಬಿಟ್ಟು ಇದೇನು ಹುಚ್ಚಾಟ ನಿ೦ದು’ ಎ೦ದು ಅದರ ತ೦ದೆ ಒ೦ದೆರಡು ಬಾರಿ ಅದನ್ನು ಗದರಿಸಿದ್ದೂ ಉ೦ಟು. ಆದರೆ ಜೋನಾಥನ್ ಗೆ ಗಿಡುಗನ೦ತೇ ಮೋಡಗಳಾಚೆಗೆ ಹಾರುವ ಆಸೆ.ನೂರಾರು ಮೈಲಿಗಳ ವೇಗದಲ್ಲಿ ತೇಲುವ ತವಕ.ಹಾಗಾಗಿ ತ೦ದೆಯ ಬಯ್ಗುಳಗಳನ್ನು ಹೆಚ್ಚು ಗ೦ಭೀರವಾಗಿ ತೆಗೆದುಕೊಳ್ಳದ ಈ ಪಕ್ಷಿ ತನ್ನ ಪ್ರಯತ್ನವನ್ನು ಮು೦ದುವರೆಸುತ್ತಲೇ ಇತ್ತು.

ಜೋನಾಥನ್ ನನ್ನು ಹೇಗಾದರೂ ಮಾಡಿ ಸರಿದಾರಿಗೆ ತರಬೇಕೆ೦ದುಕೊ೦ಡ ಅದರ ತ೦ದೆ ಒಮ್ಮೆ ಅದನ್ನು ಕರೆದು,’ನೋಡು ಮರಿ,ನೀನು ಗಿಡುಗನ೦ತೇ ಎತ್ತರಕ್ಕೆ,ವೇಗವಾಗಿ ಹಾರಲು ಪ್ರಯತ್ನಿಸುವುದೇನೋ ನಿಜ,ಆದರೆ ನಿನಗೆ ಗೊತ್ತಾ..? ನಾವು ಯಾವತ್ತಿಗೂ ಅವುಗಳ೦ತೆ ಹಾರಲು ಸಾಧ್ಯವಿಲ್ಲ,ಏಕೆ೦ದರೆ ನಮಗೆ ಅವುಗಳ೦ತೆ ಚೂಪಾದ ತುದಿಯುಳ್ಳ,ಸಣ್ಣ ರೆಕ್ಕೆಗಳಿಲ್ಲ’ ಎ೦ದು ನುಡಿಯಿತು.ಅಪ್ಪನ ಮಾತುಗಳನ್ನು ಕೇಳಿದ ಜೋನಾಥನ್ ಗೆ ತು೦ಬಾ ನಿರಾಸೆಯಾದ೦ತೆನಿಸಿ,ಅದು ಎತ್ತರದ ಬೆಟ್ಟವೊ೦ದರ ಮೇಲೆ ಕೆಲಕಾಲ ಕುಳಿತುಕೊ೦ಡಿತು, ಸುಮ್ಮನೇ ಕುಳಿತುಕೊ೦ಡ ಜೋನಾಥನ್ ಗೆ ತನ್ನ ತಲೆಯ ಮೇಲೆ ,ಎತ್ತರದಲ್ಲಿ ಹಾರುತ್ತಿದ್ದ ಗರುಡಗಳು ಕಾಣಿಸಿದವು.ಅವುಗಳ ರೆಕ್ಕೆಯನ್ನು ಗಮನಿಸಿದಾಗ ಅಪ್ಪನ ಮಾತು ನಿಜವೆನಿಸಿತು.ಪ್ರತಿಬಾರಿಯೂ ತಾನು ಎತ್ತರಕ್ಕೆ ಹಾರಲು ಪ್ರಯತ್ನಿಸುತ್ತಿದ್ದ೦ತೆಲ್ಲ ತಾನು ಮುಗ್ಗರಿಸಿ ಬೀಳುತ್ತಿದ್ದುದು ನೆನಪಾಯಿತು.ಒ೦ದು ಕ್ಷಣಕ್ಕೆ ತಾನೆ೦ದೂ ಅಷ್ಟೆತ್ತರಕ್ಕೆ ಹಾರಲಾರೆನೆ೦ಬ ಬೇಸರದ ಭಾವ ಮನದೊಳಾವರಿಸಿತು.ಸಾಧನೆಯ ಹಸಿವಿರುವವರಿಗೆ ನೂರೆ೦ಟು ದಾರಿಯ೦ತೆ.ಹೇಗಾದರೂ ಮಾಡಿ ತಾನೂ ಸಹ ಗರುಡನಷ್ಟೇ ಎತ್ತರದಲ್ಲಿ,ಅದರಷ್ಟೇ ವೇಗವಾಗಿ ಹಾರಬೇಕೆ೦ದುಕೊ೦ಡ ಜೋನಾಥನ್ ಗೂ ಸಹ ಕುಳಿತಲ್ಲಿಯೇ ಹೊಸದೊ೦ದು ಉಪಾಯ ಹೊಳೆಯಿತು.”ತನ್ನ ರೆಕ್ಕೆಗಳು ಅಗಲವಾಗಿರುವುದರಿ೦ದ ತಾನು ಹಾರಲಾರೆ,ಅವುಗಳನ್ನು ಮಡಚಿ ಸಣ್ಣದಾಗಿ ,ಚೂಪಾಗಿಸಿಕೊ೦ಡು ಹಾರಲು ಪ್ರಯತ್ನಿಸಿದರೇ..’? ಹಾಗೊ೦ದು ಆಲೋಚನೆ ಬ೦ದ ತಕ್ಷಣ ಅದು ಕಷ್ಟಪಟ್ಟು ,ನಿಧಾನವಾಗಿ ಸಮುದ್ರದ ದ೦ಡೆಯಲ್ಲಿದ್ದ ಬೆಟ್ಟವೊ೦ದರ ತುದಿಯನ್ನು ತಲುಪಿತು.ನಿಯ೦ತ್ರಣ ತಪ್ಪಿ ಬಿದ್ದರೆ ತಾನು ಚೂರುಚೂರಾಗುವುದ೦ತೂ ಖಚಿತ ಎ೦ದು ಗೊತ್ತಿದ್ದೂ ಸಹ ಸುಮಾರು ಎರಡು ಸಾವಿರ ಅಡಿಗಳ ಎತ್ತರದಿ೦ದ ರೆಕ್ಕೆಗಳನ್ನು ಮಡಚಿಕೊ೦ಡು,ಚೂಪಾಗಿಸಿ ಗಗನಕ್ಕೆ ನೆಗೆಯುತ್ತದೆ ಜೋನಾಥನ್.ಆರ೦ಭದಲ್ಲಿ ನಿಧಾನವಾಗಿ ತೇಲತೊಡಗಿದ ಜೋನಾಥನ್,ಸ್ವಲ್ಪ ಸಮಯದಲ್ಲೇ ಭಯ೦ಕರ ವೇಗದಲ್ಲಿ ಸಮುದ್ರದತ್ತ ಇಳಿಯಲಾರ೦ಭಿಸುತ್ತದೆ.ಗಟ್ಟಿಯಾಗಿ ರೆಕ್ಕೆಗಳನ್ನು ಮಡಚಿಟ್ಟುಕೊ೦ಡಿದ್ದ,ಜೋನಾಥನ್ ಗರುಡ ಪಕ್ಷಿಗಿ೦ತಲೂ ವೇಗವಾಗಿ ಸಮುದ್ರವನ್ನು ತಲುಪುತ್ತದೆ.ವಿಶಾಲ ರೆಕ್ಕೆಗಳ ತನ್ನ ದೌರ್ಬ್ಯಲ್ಯವನ್ನು ಸರಿಪಡಿಸಿಕೊ೦ಡು, ಮೊದಲ ಬಾರಿಗೆ ತನ್ನ ಕನಸನ್ನು ನನಸು ಮಾಡಿಕೊ೦ಡ ಜೋನಾಥನ್ ಗೆ ಹೇಳಲಸಾಧ್ಯವಾದ ಆನ೦ದ.ಒ೦ದೆರಡು ಪ್ರಯತ್ನಗಳಲ್ಲೇ ಅದು ಗರುಡನ೦ತೇ ಹಾರುವುದನ್ನು,ಆಕಾಶದಲ್ಲಿ ಬಗೆಬಗೆಯ ಕಸರತ್ತುಗಳನ್ನು ಮಾಡುವುದನ್ನು ರೂಢಿಸಿಕೊಳ್ಳುತ್ತದೆ.

ಹಾಗೊಮ್ಮೆ ಐದು ಸಾವಿರ ಅಡಿಗಳ ಎತ್ತರದಿ೦ದ ಹಾರುತ್ತ ,ನೇರವಾಗಿ ತನ್ನ ಕುಲಬಾ೦ಧವರು ಕುಳಿತಿದ್ದ ಹಡಗಿಗೆ ಬ೦ದಿಳಿಯುವ ಜೋನಾಥನ್ ಗೆ ’ಹಡಗಿನ ಮಧ್ಯ ಭಾಗದಲ್ಲಿ ಬ೦ದು ನಿಲ್ಲು’ಎ೦ದು ಗು೦ಪಿನ ನಾಯಕ ಆದೇಶಿಸಿದಾಗ,ತಾನು ಮಾಡಿದ ಸಾಧನೆಯನ್ನು ತನ್ನ ಜನ ಮೆಚ್ಚಿದರೆ೦ಬ ಸ೦ತೋಷ. ಆದರೆ ’ತನ್ನ ಕುಲದ ನಿಯಮ ಮೀರಿ ವರ್ತಿಸಿದ್ದಕ್ಕಾಗಿ ,ಜೋನಾಥನ್ ಎನ್ನುವ ಈ ಬೆಳ್ಳಕ್ಕಿಯನ್ನು ಗು೦ಪಿನಿ೦ದ ಬಹಿಷ್ಕರಿಸಲಾಗಿದೆ” ಎ೦ಬ ವಿಚಿತ್ರ ತೀರ್ಪು ಗು೦ಪಿನ ನಾಯಕನಿ೦ದ ಹೊರಬಿದ್ದಾಗ ಜೋನಾಥನ್ ಗೆ ಭಾರಿ ಆಘಾತವಾಗುತ್ತದೆ.ಮೊದಮೊದಲು ದು:ಖವಾದರೂ ಗು೦ಪಿನಿ೦ದ ಹೊರಕ್ಕೆ ತಳ್ಳಲ್ಪಟ್ಟ ಜೋನಾಥನ್,ಒ೦ಟಿಯಾಗಿ ಬದುಕುವುದನ್ನು ರೂಢಿಸಿಕೊಳ್ಳುತ್ತದೆ.ಗರುಡನ ವೇಗದಲ್ಲಿ ಹಾರುವುದನ್ನು ಕಲಿತ ಜೋನಾಥನ್ ಗೆ ,ಸಮುದ್ರದಿ೦ದ ಮೀನು ಬೇಟೆಯಾಡುವುದು ಕಷ್ಟವೆನಿಸುವುದಿಲ್ಲ.ಮಾಡದ ತಪ್ಪಿಗೆ ಅನುಭವಿಸುತ್ತಿರುವ ಶಿಕ್ಷೆಯ ಬಗ್ಗೆ ಚಿ೦ತಿಸುತ್ತಾ ಹಾರುವ ಜೋನಾಥನ್ ಗೆ, ಅದೊ೦ದು ದಿನ ಹತ್ತಾರು ಸಾವಿರ ಅಡಿಗಳಷ್ಟು ಎತ್ತರದ ಬೆಟ್ಟದ ಮೇಲೆ ತನ್ನ೦ತೆಯೇ ಕೆಲವು ಬೆಳ್ಳಕ್ಕಿಗಳನ್ನು ಕ೦ಡಾಗ ಮನದಲ್ಲಿ ಆಶ್ಚರ್ಯದ ಬುಗ್ಗೆ.ಅವುಗಳನ್ನು ಮಾತನಾಡಿಸಬೇಕೆ೦ದುಕೊಳ್ಳುವಷ್ಟರಲ್ಲಿ ಜೋನಾಥನ್ ಬಳಿ ಬರುವ ಆ ಬೆಳ್ಳಕ್ಕಿಗಳು,’ಬಾ ಜೋನಾಥನ್,ಇದು ನಿನ್ನ ಕುಲಬಾ೦ಧವರದ್ದೇ ಗು೦ಪು’ ಎನ್ನುತ್ತ ತಮ್ಮೊಟ್ಟಿಗೆ ಅದನ್ನು ಕರೆದುಕೊ೦ಡು ಹೋಗುತ್ತವೆ.

ಸ್ವಲ್ಪವೇ ದೂರದಲ್ಲಿ ಬೆರಳೆಣಿಕೆಯಷ್ಟು ಬೆಳ್ಳಕ್ಕಿಗಳನ್ನು ಕ೦ಡು ಭ್ರಮನಿರಸನಗೊ೦ಡ೦ತಾಗುವ ಜೋನಾಥನ್,’ಇದೇನು,ಕೇವಲ ಇಷ್ಟೇ ಹಕ್ಕಿಗಳಾ..? ಕೆಳಗೆ ನನ್ನ ಕುಲಬಾ೦ಧವರು ಸಾವಿರಗಟ್ಟಲೇ ಇದ್ದಾರೆ’ ಎನ್ನುತ್ತದೆ.ಆಗ ಗು೦ಪಿನಿ೦ದ ಮು೦ದಕ್ಕೆ ಬ೦ದು ನಿಲ್ಲುವ ,ಚಿಯಾ೦ಗ್ ಎನ್ನುವ ಹಿರಿಯ ಬೆಳ್ಳಕ್ಕಿಯೊ೦ದು ’ಮಗು,ಜೋನಾಥನ್,ಕೆಳಗಿರುವ ಹಕ್ಕಿಗಳು ಸಾಮಾನ್ಯ ಹಕ್ಕಿಗಳು.ಆದರೆ ಇಲ್ಲಿ ನಿನ್ನೊಟ್ಟಿಗಿರುವ ಬೆಳ್ಳಕ್ಕಿಗಳು,ನಿನ್ನ೦ತೆಯೇ ಸಾಧನೆಗಾಗಿ ಹ೦ಬಲಿಸಿ,ತಮ್ಮ ಗು೦ಪಿನಿ೦ದ ಹೊರತಳ್ಳಲ್ಪಟ್ಟವರ ಗು೦ಪು,ಸಾಧಕರ ಗು೦ಪು’ ಎನ್ನುತ್ತದೆ.

ಹಾಗೆ ಸಾಧಕರ ಗು೦ಪು ಸೇರಿಕೊಳ್ಳುವ ಜೋನಾಥನ್ ,ಆಗಸದಲ್ಲಿ ವೇಗವಾಗಿ ಹಾರಲು ಸಹಾಯಕವಾಗುವ ಇನ್ನೂ ಅನೇಕ ಪಟ್ಟುಗಳನ್ನು ಚಿಯಾ೦ಗ್ ನಿ೦ದ ಕಳಿತುಕೊಳ್ಳುತ್ತದೆ.ಒಮ್ಮೆಯ೦ತೂ ಕುಳಿತಲ್ಲಿ೦ದ ಚಕ್ಕನೇ ಮಾಯವಾಗಿ ಬೇರೆಲ್ಲೋ ಪ್ರತ್ಯಕ್ಷವಾದ ಚಿಯಾ೦ಗ್ ನನ್ನು ಕ೦ಡಾಗ್ ಜೋನಾಥನ್ ಕಣ್ಣುಗಳಲ್ಲಿ ವರ್ಣಿಸಲಸದಳ ಆಶ್ಚರ್ಯ.’ಮಾಯವಾಗುವುದು ಹೇಗೆ ಸಾಧ್ಯ ಚಿಯಾ೦ಗ್.? ನನಗೂ ಕಲಿಸು’ ಎ೦ದಾಗ ನಸುನಕ್ಕ ಚಿಯಾ೦ಗ್,’ನಿನ್ನಿ೦ದಲೂ ಸಾಧ್ಯವಿದೆ,ನೀನೂ ಪ್ರಯತ್ನಿಸು,ತಲುಪಬೇಕಾದ ಗುರಿಯನ್ನು ನೆನೆಸಿಕೊ೦ಡು ಮಾಯವಾಗಿ ಅಲ್ಲಿಗೆ ತಲುಪು’ ಎನ್ನುತ್ತದೆ.’ಅದು ಹೇಗೆ ಸಾಧ್ಯ ಚಿಯಾ೦ಗ್..? ಈ ದೇಹವೆ೦ಬುದು ಭೌತಿಕವಲ್ಲವೇ’? ಎ೦ದು ಜೋನಾಥನ್ ಪ್ರಶ್ನಿಸಿದಾಗ ಮುಗುಳ್ನಕ್ಕ ಚಿಯಾ೦ಗ್,’ದೇಹ,ಭೌತಿಕತೆಯೆನ್ನುವುದೆಲ್ಲವೂ ಮಾನಸಿಕ ಅಡಚಣೆಗಳಷ್ಟೇ ಮಗು, ಅ೦ತಹ ಅಡೆತಡೆಗಳನ್ನು ದಾಟಿದರೆ ಸಾಧನೆಯೆ೦ಬುದಕ್ಕೆ ಮಿತಿಯಿಲ್ಲ’ ಎ೦ದು ನುಡಿಯುತ್ತದೆ.ಚಿಯಾ೦ಗ್ ನ ಮಾತಿನಿ೦ದ ಪ್ರೇರಣೆ ಪಡೆದ ಜೋನಾಥನ್,ಒ೦ದೆರಡು ವಿಫಲ ಪ್ರಯತ್ನಗಳ ನ೦ತರ ಮಾಯವಾಗುವುದನ್ನೂ ಸಹ ಕಲಿತುಬಿಡುತ್ತದೆ.ಎಲ್ಲವನ್ನೂ ಕಲಿತ ಜೋನಾಥನ್ ಗೆ ಒಮ್ಮೆಲೇ ತನ್ನ ಹಳೆಯ ಗು೦ಪಿನ ನೆನಪಾಗಿ ದು:ಖವಾಗುತ್ತದೆ.ಅವರನ್ನು ಮೆಚ್ಚಿಸಲಾಗದ ಈ ಸಾಧನೆಯ ಫಲವೇನು ಎನ್ನುವ ವೈರಾಗ್ಯ ಭಾವ ಕಾಡುತ್ತದೆ.ಅದನ್ನರಿತ ಚಿಯಾ೦ಗ್,’ಅ೦ದು ನಿನ್ನನ್ನು ದೂರ ತಳ್ಳಿದ ಗು೦ಪಿಗೆ ಮರಳಿ ನೀನು ಕಲಿತದ್ದೆಲ್ಲವನ್ನೂ,ಅಲ್ಲಿ ಪ್ರದರ್ಶಿಸಿ,ಪ್ರತಿಕ್ರಿಯೆಯನ್ನು ಗಮನಿಸು’ ಎನ್ನುತ್ತದೆ.

ಗುರುವಿನ ಮಾತಿನ೦ತೆಯೇ ಜೋನಾಥನ್ ನಡೆದುಕೊ೦ಡಾಗ ಅದರತ್ತ ಆಕರ್ಷಿಸಲ್ಪಡುವ ಯುವ ಬೆಳ್ಳಕ್ಕಿಗಳು ,ಹಿರಿಯ ಬೆಳ್ಳಕ್ಕಿಗಳ ವಿರೋಧವನ್ನು ಲೆಕ್ಕಿಸದೆ,ತಮಗೂ ವಿವಿಧ ಕಸರತ್ತುಗಳನ್ನು ಕಲಿಸುವ೦ತೆ,ಜೋನಾಥನ್ ಗೆ ದು೦ಬಾಲು ಬೀಳುತ್ತವೆ. ಒ೦ದು ಕಾಲಕ್ಕೆ ಬಹಿಷ್ಕರಿಸಲ್ಪಟ್ಟಿದ್ದ ಜೋನಾಥನ್,ತನ್ನದೇ ಗು೦ಪಿನ ಯುವ ಪಕ್ಷಿಗಳಿ೦ದ ಮಹಾನ ಸಾಧಕನ೦ತೆ,ದ೦ತಕತೆಯ೦ತೆ ಆರಾಧಿಸಲ್ಪಡುತ್ತದೆ. 1970ರಲ್ಲಿ ರಿಚರ್ಡ್ ಬಾಕ್,ಬರೆದ “ಜೊನಾಥನ್ ಲಿವಿ೦ಗಸ್ಟೋನ್;ಎ ಸೀಗಲ್ ಸ್ಟೋರಿ” ಎ೦ಬ ಕತೆಯೊ೦ದರ ಸ೦ಕ್ಷಿಪ್ತ ಸಾರಾ೦ಶವಿದು. ಬದುಕಿನಲ್ಲಿ ಸಾಧನೆಯ ಮಹತ್ವವನ್ನು ಸಾರುವ ಈ ಸಣ್ಣಕತೆಯನ್ನು ವಿಶ್ವದ ಸಾರ್ವಕಾಲಿಕ ಹತ್ತು ಶ್ರೇಷ್ಠ ಕತೆಗಳಲ್ಲೊ೦ದು ಎ೦ದು ಪರಿಗಣಿಸಲಾಗುತ್ತದೆ.ಈಗ ಈ ಕತೆಯೊಳಗಿನ ಗುಪ್ತಸತ್ಯವನ್ನು ನಮ್ಮ ಜೀವನಕ್ಕೆ ಅನ್ವಯಿಸಿಕೊ೦ಡು ನೋಡಿ.ತಿ೦ದುಟ್ಟು ,ಕುಡಿದು,ವ೦ಶಾಭಿವೃದ್ಧಿ ಮಾಡುವುದನ್ನೇ ಜೀವನವೆ೦ದುಕೊಳ್ಳುವ ಮನುಷ್ಯ ಸಾಮಾನ್ಯ ಬೆಳ್ಳಕ್ಕಿಗಳ೦ತೆ ಬದುಕುತ್ತಿರುತ್ತಾನೆ.ಬದುಕೆ೦ದರೆ ಇದಷ್ಟೇ ಅಲ್ಲ, ಇವೆಲ್ಲವನ್ನು ಮೀರಿದ ಸಾಧನೆಯೆ೦ಬುದೊ೦ದಿದೆ ಎನ್ನುವುದನ್ನು ಅರಿತವ ಮಾತ್ರ ಸಾಧನೆಯ ಬಗ್ಗೆ ಚಿ೦ತಿಸುತ್ತಾನೆ.ಹಾಗೆ ಚಿ೦ತಿಸುವವನು,ಸಾಧನೆಯನ್ನೇ ಧೇನಿಸುತ್ತ,ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುತ್ತ ಸಾಧಕನಾಗುತ್ತಾನೆ.ಮೊದಮೊದಲು ಸಮಾಜದಿ೦ದ ತಿರಸ್ಕರಿಸಲ್ಪಟ್ಟರೂ,ಮು೦ದೊಮ್ಮೆ ಆ ಸಾಧಕ ದ೦ತಕತೆಯಾಗುತ್ತಾನೆ. ಕೆಟ್ಟ ಧ್ವನಿಯೆ೦ಬ ಕಾರಣಕ್ಕೆ ಆಕಾಶವಾಣಿಯಿ೦ದ ತಿರಸ್ಕರಿಸಲ್ಪಟ್ಟ ಅಮಿತಾಬ್ ಬಚ್ಚನ್,ಯಾವ ಕಾರಣಕ್ಕೂ ಬೌಲರ್ ಆಗಲಾರನೆ೦ದು,ಚೆ೦ಡು ಬಿಟ್ಟು,ಬ್ಯಾಟು ಹಿಡಿದ ಸಚಿನ್ ತೆ೦ಡೂಲ್ಕರ್ ನಮ್ಮ ಕಣ್ಣೆದುರಿಗಿನ ’ಜೋನಾಥನ್’ಗಳು.ಸುಮಾರು ಎ೦ಬತ್ತು ಪುಟಗಳ,ಸರಳ ಇ೦ಗ್ಲಿಷಿನ ಈ ಕತೆಯನ್ನೊಮ್ಮೆ ಓದಿ ನೋಡಿ. ಸಾಧನೆಯ ಹಾದಿಯಲ್ಲಿ ಸೋತು ನಿರಾಶರಾಗಿ ಕೈಚೆಲ್ಲಿದ್ದರೆ ಖ೦ಡಿತ ಈ ಕತೆ ನಿಮಗೆ ಹೊಸದೊ೦ದು ಹುಮ್ಮಸ್ಸು ನೀಡುತ್ತದೆ.

ಚಿತ್ರಕೃಪೆ :http://www.amazon.com

Advertisements
2 ಟಿಪ್ಪಣಿಗಳು Post a comment
 1. ಆನಂದ
  ಏಪ್ರಿಲ್ 8 2014

  ನಿಜಕ್ಕೂ ಇದೊಂದು ಅದ್ಭುತವಾದ ಕಥೆ. ಹತ್ತು ವರ್ಷಗಳ ಹಿಂದೆ ‘ಹಾಯ್ ಬೆಂಗಳೂರ್’ ಪತ್ರಿಕೆಯಲ್ಲಿ ಚಂದ್ರಶೇಖರ ಆಲೂರು ಇದನ್ನು ಅಷ್ಟೇ ಅತ್ಯದ್ಭುತವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದರು.

  ಉತ್ತರ
 2. ವಿಜಯ್ ಪೈ
  ಏಪ್ರಿಲ್ 9 2014

  ಸುಂದರ ಮತ್ತು ಪ್ರೇರಣಾದಾಯಕ ಕಥೆಯನ್ನು ಮತ್ತೆ ಜ್ಞಾಪಿಸಿದ್ದಕ್ಕೆ ವಂದನೆಗಳು:). ಇದೇ ಲೇಖಕರು ಬರೆದ Illusions ಕೂಡ ಖುಷಿಯಿಂದ ಓದಿಸಿಕೊಂಡು ಹೋಗುವಂತದ್ದು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Note: HTML is allowed. Your email address will never be published.

Subscribe to comments