Skip to content

ಏಪ್ರಿಲ್ 10, 2014

2

ಉಸಿರೇ ಭಾರ: ಇಲ್ಲದಿರೆ ಆಧಾರ!

by ನಿಲುಮೆ

– ತುರುವೇಕೆರೆ ಪ್ರಸಾದ್

ಆಧಾರ್ದೇಶದ ಶತಕೋಟಿ ನಾಗರಿಕರಿಗೆ ಬಯೋಮೆಟ್ರಿಕ್  ಮಾಹಿತಿ ಆಧಾರದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ( ಯುಐಡಿ) ನೀಡುವ ಯೋಜನೆಯೇ ಆಧಾರ್. ಈ ಯೋಜನೆ ವಿಶ್ವದಲ್ಲೇ ಪ್ರಥಮ ಮತ್ತು ವಿಶಿಷ್ಟವಾದುದು, ಗುರುತಿನ ದಾಖಲೆಗಳಿಲ್ಲದವರೂ ಆಧಾರ್ ಚೀಟಿ ಪಡೆಯಬಹುದು ಎಂದು ಹೇಳಲಾಗಿದೆ. ಈ ಚೀಟಿ ವಿತರಣೆಗೆ ಬೆರಳಚ್ಚು, ಅಕ್ಷಿಪಟಲ ಸ್ಕ್ಯಾನ್, ಭಾವಚಿತ್ರ ಈ ಮೂರು ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

‘ಆಧಾರ್ ಕಾರ್ಡ್ ಕಡ್ಡಾಯವಲ್ಲ, ಐಚ್ಚಿಕ’ ಎಂದು ಕೇಂದ್ರ ಸರ್ಕಾರ ಈಚೆಗೆ  ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದೆ.  ಇದರಿಂದ ಆಧಾರ್ ಬಗೆಗಿದ್ದ ಗೊಂದಲ, ಅನಗತ್ಯ ಕಿರಿಕಿರಿಗಳಿಗೆ ಕೇಂದ್ರವೇ ಸ್ಪಷ್ಟನೆ ನೀಡಿದಂತಾಗಿದೆ. ಇದು ನಿಜಕ್ಕೂ ಸ್ವಾಗತಾರ್ಹ ಕ್ರಮ.  ಉದ್ಯೋಗ ಖಾತ್ರಿ ಯೋಜನೆ, ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಗ್ರಾಮಿಣ ಆರೋಗ್ಯ ಕಾರ್ಯಕ್ರಮ, ಭಾರತ್ ನಿರ್ಮಾಣ್‍ನಂತಹ ಯೋಜನೆಗಳಡಿ  ಉದ್ದೇಶಿತ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಚೀಟಿ ನೆರವಾಗುತ್ತದೆ ಎಂದು ಹೇಳಲಾಗಿತ್ತು.  ಆಧಾರ್ ಚೀಟಿ ಪಡೆಯುವುದು ಸ್ವಯಂಪ್ರೇರಣೆಗೆ ಬಿಟ್ಟಿದ್ದು ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಮಕ್ಕಳನ್ನು ಶಾಲೆಗೆ ಸೇರಿಸಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಪಡಿತರ ಚೀಟಿ ಪಡೆಯಲು, ವಿದ್ಯಾರ್ಥಿ ವೇತನ ಪಡೆಯಲು  ಆಧಾರ್ ಏಕೈಕ ಕಡ್ಡಾಯ ದಾಖಲೆ ಎಂಬಂತೆ  ಬಿಂಬಿಸಲಾಗುತ್ತಿದೆ. ಆಧಾರ್  ಇಲ್ಲದಿದ್ದರೆ ಸಾರ್ವಜನಿಕರಿಗೆ  ಈ ದೇಶದ ಪೌರತ್ವ ಮತ್ತು ನಾಗರಿಕ ಸೌಲಭ್ಯಗಳು ದಕ್ಕುವುದಿಲ್ಲ ಎಂದು ಬೆದರಿಕೆ ಹಾಕುವ ಮಟ್ಟಿಗೆ  ಅಧಿಕಾರಿಗಳು ಸಾರ್ವಜನಿಕರ ಮೇಲೆ ಒತ್ತಡ ಹೇರಿದ್ದಾರೆ. ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯೊಂದರಲ್ಲಿ ಜಿಲ್ಲಾಧಿಕಾರಿಗಳು ಆಧಾರ್ ಇಲ್ಲದೆ ಯಾವ ಯೋಜನೆಯನ್ನೂ ಅನುಷ್ಠಾನಕ್ಕೆ ತರಕೂಡದು ಎಂದು ಕಟ್ಟಾಜ್ಞೆಯನ್ನೇ ಮಾಡಿದರು. ಅಧಿಕಾರಿಗಳೇ ಈ ರೀತಿ ಅಂಕುಶ ಹಿಡಿದು ಹೊರಟರೆ ಸಾರ್ವಜನಿಕರ ಗತಿ ಏನು ಎಂದು ಯೋಚಿಸಬೇಕಿದೆ.

ಆಧಾರ್ ನಿಂದಾಗಿ ಲಕ್ಷಾಂತರ ಜನರು ಜೀವನಾಧಾರವನ್ನೇ ಕಳೆದುಕೊಳ್ಳುವ ಹಂತ ತಲುಪಿದ್ದಾರೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ. ಯೋಜನೆಗೆ ಸೇರ್ಪಡೆಯಾಗುವ ಬದಲು 150 ಮಿಲಿಯನ್‍ಗೂ ಅಧಿಕ ಫಲಾನುಭವಿಗಳು ಆಧಾರ್‍ನಿಂದಾಗಿ ಸರ್ಕಾರಿ ಯೋಜನೆಗಳಿಂದ ಹೊರಗುಳಿದಿರುವ ಅಂದಾಜಿದೆ. ಕೃಷಿಕರು, ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರೇ ಮೊದಲಾಗಿ ಜೀವನದಾದ್ಯಂತ ಶ್ರಮದ ಕೆಲಸವನ್ನೇ ಮಾಡುವವರ ಹೆಬ್ಬೆಟ್ಟಿನ ಗುರುತುಗಳು ಸವೆದು ಹೋಗಿದ್ದು ಕಳಪೆ ಗುಣಮಟ್ಟದ ಹೆಬ್ಬೆಟ್ಟಿನ ಗುರುತುಗಳು ಎಂಬ ಕಾರಣಕ್ಕೆ ಅವರು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಂದ ಮತ್ತು ಸರ್ಕಾರಿ ದಾಖಲೆಗಳಿಂದ ಹೊರಗುಳಿದಿದ್ದಾರೆ.  ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕನೊಬ್ಬ ಕೂಲಿ ಪಡೆಯಲು ತನ್ನ ಗುರುತಿಗಾಗಿ ಈ ಹೊಸ  ಆಧಾರ್ ಕಾರ್ಡ್‍ಗಳನ್ನು ನೀಡಬಹುದು. ಅಂತಹ ಕ್ಲೈಮ್‍ಗಳು ಕೃಷಿಕನ ಹೆಬ್ಬೆರಳ ಗುರುತು ಸವೆದು ಹೋಗಿರುವುದರಿಂದ ಫಾಲ್ಸ್ ನೆಗಟೀವ್ ಎಂಬ ಕಾರಣದಿಂದ ಸ್ಕಾನರ್ ಅವನನ್ನು ಗುರುತಿಸದೆ ಕೂಲಿಯಿಂದ ವಂಚಿತನಾಗಿರುವ ಪ್ರಸಂಗಗಳಿವೆ. ಸಾಮಾಜಿಕ ಭದ್ರತಾ ಯೋಜನೆಯಡಿ ಗ್ರಾಮೀಣ ಪ್ರದೇಶದ ವೃದ್ಧರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಇದೊಂದು ಅನಗತ್ಯ ಕಿರಿಕಿರಿಯಾಗಿದೆ. ಬ್ಯಾಂಕ್‍ನವರು ಆಧಾರ್ ಚೀಟಿ ಇಲ್ಲದೆ ಖಾತೆ ತೆಗೆಯುವುದಿಲ್ಲ. ಈ ವೃದ್ಧರ ಬಯೋಮೆಟ್ರಿಕ್ ಚಹರೆಗಳು ವಯೋಸಹಜ ಕಾರಣಗಳಿಗಾಗಿ ದಾಖಲಾಗದೆ ಅವರು ಸೌಲಭ್ಯಗಳಿಂದ ವಂಚಿತರಾಗಿ ಪಾಡು ಪಡುವಂತಾಗಿದೆ. ಅಂಗವಿಕಲರದ್ದೂ ಇದೇ ಗೋಳು!

ಆಧಾರ್ ನಿಂದ ಉಪಯೋಗಕ್ಕಿಂತ ಕಿರಿಕಿರಿಯೇ ಹೆಚ್ಚು ಮತ್ತು ಅದು ಕಡ್ಡಾಯ ಅಲ್ಲ ಎಂದು ಗೊತ್ತಿದ್ದರೂ ಅಧಿಕಾರಿಗಳು ಯಾವುದೇ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅದನನ್ನೊಂದು  ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಂತೆ ಬಳಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಆಧಾರ್ ಯೋಜನೆ ಎಷ್ಟರಮಟ್ಟಿಗೆ ಪ್ರಾಯೋಗಿಕವಾಗಿ ಸರಿ? ಅದು ನಮಗೆ ಅನಿವಾರ್ಯವಾಗಿತ್ತಾ? ಎಂಬ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಅವುಗಳಲ್ಲಿ ಪ್ರಮುಖ ಅಂಶಗಳು ಹೀಗಿವೆ.

ವ್ಯಕ್ತಿಯನ್ನು ಪರೀಕ್ಷಿಸಬಹುದಾದ ನಿಖರ ಗುರುತಿನೊಂದಿಗೆ ಈ ಯೋಜನೆ ಭಾರತದ ಅಭಿವೃದ್ದಿಗೆ ಮಹತ್ವದ ಕೊಡುಗೆ ನೀಡುತ್ತದೆ. ಸಾರ್ವಜನಿಕ ಹಣದ ದುರುಪಯೋಗ ಮತ್ತು ಸೋರಿಕೆಯನ್ನು ತಡೆಗಟ್ಟಿ ಸಾಮಾಜಿಕ ವಲಯದ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯಕ್ಷಮತೆಯನ್ನು ಚುರುಕುಗೊಳಿಸುತ್ತದೆ ಎಂದು ಹೇಳಲಾಗಿದೆ. ಆದರೆ ಈವರೆಗಿನ ಯಾವುದೇ ಲೋಪದೋಷಗಳಿಗೆ ವ್ಯಕ್ತಿಯ ಗುರುತಿಸುವಿಕೆಯಲ್ಲಿನ ಹಿನ್ನಡೆ/ವಿಫಲತೆ ಮುಖ್ಯ ಕಾರಣವಾಗಿಲ್ಲ, ಅದು ವ್ಯವಸ್ಥೆಯ ಮತ್ತು ಸೌಲಭ್ಯಗಳನ್ನು ನೀಡುವ ಅಧಿಕಾರವುಳ್ಳವರ ಉದ್ದೇಶ ಪೂರ್ವಕ ಮ್ಯಾನುಪುಲೇಶನ್ ಅನ್ನುವುದು ಎಲ್ಲಿರಿಗೂ ಗೊತ್ತಿದೆ. ಉದಾಹರಣೆಗೆ ಹೇಳುವುದಾದರೆ ಬಿಪಿಎಲ್ ಯೋಜನೆಯಡಿ ಕುಟಂಬವನ್ನು ಗುರುತಿಸಲಾಗಿಲ್ಲ ಎಂದು ಪಡಿತರ ನೀಡಿದ ಉದಾಹರಣೆ ಇಲ್ಲ. ಆದರೆ ಪಡಿತರ ಅಂಗಡಿಯ ಮಾಲೀಕರು ಶೋಷಣೆ ಮಾಡುವ ಮೂಲಕ ಕುಟುಂಬಗಳನ್ನು ಪಡಿತರ ವಂಚಿತರನ್ನಾಗಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ! ಹಾಗೆಯೇ ದಲಿತ ಮಕ್ಕಳನ್ನು ವಿದ್ಯಾರ್ಥಿ ವೇತನದಿಂದ ವಂಚಿತರನ್ನಾಗಿ ಮಾಡಿರುವುದು ಅವರನ್ನು ಗುರುತಿಸಲು ಆಗುತ್ತಿಲ್ಲ ಎಂದಲ್ಲ. ಶಿಕ್ಷಕರು ಮತ್ತು ಆಡಳಿತ ವ್ಯವಸ್ಥೆಯ ಲಾಲಸೆಯಿಂದ ಆ ಮಕ್ಕಳು ತಮ್ಮ ನ್ಯಾಯೋಚಿತ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಅಧೇ ರೀತಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ತ್ರೀ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡಿ ಅವರ ಪಾಲಿನ ಹಣ ನುಂಗಿ ಹಾಕುತ್ತಿರುವುದು ಅವರನ್ನು ಗುರುತು ಹಿಡಿಯಲಾಗುತ್ತಿಲ್ಲ ಎಂದಲ್ಲ, ಆದರೆ ಗಂಡರಷ್ಟು ಕೂಲಿಗೆ ಅವರು ಅರ್ಹರಲ್ಲ ಎಂಬ ತಾರತಮ್ಯ ಭಾವನೆಯೇ ಅವರನ್ನು ಸಮಾನ ಕೂಲಿ ಪಡೆಯುವುದರಿಂದ ವಂಚಿತರನ್ನಾಗಿ ಮಾಡಿದೆ. ಈ ಯಾವ ಸಮಸ್ಯೆಯನ್ನೂ ಆಧಾರ್ ಚೀಟಿಯಿಂದ ಬಗೆಹರಿಸಲು ಸಾಧ್ಯವಿಲ್ಲ. ಆಧಾರ್ ವ್ಯಕ್ತಿಯ ಗುರುತು ಖಾತರಿ ನೀಡಬಲ್ಲದೇ ಹೊರತು ಅವನಿಗೆ ಪೌರತ್ವವನ್ನಾಗಲೀ ಸೌಲಭ್ಯವನ್ನಾಗಲಿ ಖಾತರಿ ಮಾಡಿಕೊಡುತ್ತದೆ ಎಂದು ನಂಬುವ ಹಾಗಿಲ್ಲ. ಫಲಾನುಭವಿಗಳನ್ನು ಗುರುತಿಸುವ ಮತ್ತು ಯೋಜನೆಗಳನ್ನ ಅವರಿಗೆ ತಲುಪಿಸುವ ಅಂತಿಮ ಜವಾಬ್ಧಾರಿ ಸರ್ಕಾರ ಅಥವಾ ನಿಗಧಿಯಾದ ಏಜೆನ್ಸಿಯ ವಶದಲ್ಲೇ ಉಳಿಯುತ್ತದೆ. ಪರಿಸ್ಥಿತಿ ಹೀಗಿರುವಾಗ ಯೋಜನೆಗಳ ಅನುಷ್ಠಾನದಲ್ಲಿ ಕೇವಲ ಆಧಾರ್‍ನಿಂದ ಸುಧಾರಣೆ ಹೇಗೆ ಸಾಧ್ಯ?

ಆಧಾರ್ ಬಗ್ಗೆ ಮತ್ತೊಂದು ಗುರುತರವಾದ ಆರೋಪವೆಂದರೆ ಅದು ಖಾಸಗಿತನ ಮತ್ತು ನಾಗರಿಕ ಸ್ವಾತಂತ್ರವನ್ನು ಹರಣ ಮಾಡುತ್ತದೆ ಎಂಬುದು.ಅಂತರ ರಾಷ್ಟ್ರೀಯ ಹಾಗೂ ಭಾರತದ ಕಾನೂನುಗಳು ಶ್ರೀ ಸಾಮಾನ್ಯನ ಖಾಸಗಿತನಕ್ಕೆ ಧಕ್ಕೆ ಬಾರದಂತೆ ರಕ್ಷಣೆ ನೀಡುತ್ತವೆ. ಯಾವುದೇ ಸರ್ಕಾರ ಅಥವಾ ಸಂಸ್ಥೆಯಿಂದ ವ್ಯಕ್ತಿಯೊಬ್ಬನ ಖಾಸಗಿ ಮಾಹಿತಿಯನ್ನು ಅತಿಕ್ರಮಣ ಮಾಡುವುದು ಸುಪ್ರೀಂ ಕೋರ್ಟಿನಿಂದಲೇ ಪರಿಚ್ಛೇದ 21ರ ಪ್ರಕಾರ ನಿಷೇಧಿಸಲ್ಪಟ್ಟಿದೆ ಎಂದು ಹೇಳಲಾಗಿದೆ.( ರಾಜ್‍ಗೋಪಾಲ್ ವರ್ಸಸ್ ತಮಿಳುನಾಡು ಸರ್ಕಾರ, 1964). ಹಿಂದೂ ವಿವಾಹ ಕಾಯ್ದೆ, ಕಾಫಿರೈಟ್ ಕಾಯಿದೆ,ಕ್ರಿಮಿನಲ್ ಕೋಡ್‍ಗಳು ಈ ಎಲ್ಲದರಲ್ಲೂ ವ್ಯಕ್ತಿಯ ಖಾಸಗಿತನದಲ್ಲಿ ಅತಿಕ್ರಮಿಸುವುದನ್ನು ನಿರ್ಬಧಿಸುತ್ತವೆ.ಆದರೆ ಆಧಾರ್ ಬಿಲ್(ಯುಐಡಿಎಐ)ನ ಸೆಕ್ಷನ್ 33 ಪ್ರಕಾರ  ಆಧಾರ್ ಗುರುತಿನ ಚೀಟಿಗಾಗಿ ಸಂಗ್ರಹಿಸುವ ವ್ಯಕ್ತಿಯ ಮಾಹಿತಿಯನ್ನು ಯಾವುದೇ ಕೋರ್ಟ್ ಅಥವಾ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರದ ಆದೇಶದ ಮೇರೆಗೆ ಬಹಿರಂಗಪಡಿಸುವುದಾಗಿದೆ. ಇದು ಸವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ದವಾದುದು ಎಂದೇ ಅಭಿಪ್ರಾಯಪಡಲಾಗುತ್ತಿದೆ. ಇದು ಅಧಿಕಾರದಲ್ಲಿರುವ ವ್ಯಕ್ತಿಗಳು  ವ್ಯಕ್ತಿಯೊಬ್ಬನ ಮಾಹಿತಿಯನ್ನು ಅವನಿಗೇ ಅರಿವಿಲ್ಲದಂತೆ ಪಡೆದು ಅದರ ದುರ್ಲಾಭ ಪಡೆಯಬಹುದಾಗಿದೆ. ಇದು ವೈಯಕ್ತಿಕ ಮತ್ತು ಖಾಸಗಿತನಕ್ಕೆ ಒಡ್ಡಿದ ಬೆದರಿಕೆಯೆಂದೇ ಹೇಳಬೇಕು. ಇದೇ ಮಾಹಿತಿಯನ್ನು ಅಧಿಕಾರಸ್ಥರು ರಾಜಕೀಯ ಕಾರಣಗಳಿಗಾಗಿ ತಮ್ಮ ವಿರೋಧಿಗಳ ಮೇಲೆ ಪ್ರಯೋಗಿಸಲು ಪ್ರಬಲ ಅಸ್ತ್ರವಾಗಿ ಉಪಯೋಗಿಸುವ ಸಾಧ್ಯತೆಯೂ ಇಲ್ಲದಿಲ್ಲ. ಸಾಲದ್ದಕ್ಕೆ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‍ನಲ್ಲಿ ದಾಖಲಿಸಿಕೊಂಡ ವೈಯಕ್ತಿಕ ವಿವರಗಳನ್ನು ಬಹಿರಂಗಗೊಳಿಸುವಂತಿಲ್ಲ. ಆದರೆ ಈ ವಿವರವನ್ನು ಅವಶ್ಯವೆನಿಸಿದಲ್ಲಿ ಆಧಾರ್ ಯೋಜನೆಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದ್ದು ಇದು ಸೆನ್ಸಸ್ ಕಾಯಿದೆಯ 15ನೇ ಪರಿಚ್ಚೇದದ ಉಲ್ಲಂಘನೆ ಎಂದೇ ಹೇಳಲಾಗಿದೆ.

ಮೂರನೆಯ ಸಮಸ್ಯೆಯೆಂದರೆ ಕಾರ್ಯದಕ್ಷತೆಯ ಲೋಪ. ಒಂದು ಡಾಟಾ ಬೇಸ್‍ನಲ್ಲಿ ಸಂಗ್ರಹಿಸಿದ ವಿವರಗಳನ್ನು ಮತ್ತೊಂದು ಡಾಟಾಬೇಸ್‍ಗೆ ವರ್ಗಾಯಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಲ್ಲದೆ ಸರ್ಕಾರ ವ್ಯಕ್ತಿಯೊಬ್ಬನ ಒಪ್ಪಿಗೆ ಇಲ್ಲದೆ ಈಗಿರುವ ಅಂಕಿ/ಅಂಶ-ವಿವರಗಳಲ್ಲಿ  ವ್ಯಕ್ತಿಯ ಖಾಸಗಿತನದ ಪುನರ್‍ಮೌಲ್ಯಮಾಪನ ಮಾಡದೆ ಯಾವುದೇ ಬದಲಾವಣೆ ಮಾಡಬಹುದು. ಆಧಾರ್ ಯೋಜನೆಯಡಿ ಸಂಗ್ರಹಿಸಿದ ವಿವರಗಳನ್ನು ಕೇವಲ ವ್ಯಕ್ತಿಯ ಗುರುತು ಹಿಡಿಯಲೇ ಬಳಸಲಾಗುತ್ತದೆ ಎಂದು ನಂಬುವಂತಿಲ್ಲ. ಅವನ್ನು ಬೇರೆ ಉದ್ದೇಶಗಳಿಗೂ ಬಳಸಬಹುದು. ಪೋಲೀಸರು ಮತ್ತು ಇಂಟಲೆಜೆನ್ಸ್  ವಿಭಾಗಕ್ಕೆ ಈ ಮಾಹಿತಿಯನ್ನು ಲಿಂಕ್ ಮಾಡಬಹುದು. ಎನ್‍ಕೌಂಟರ್ ಪ್ರಕರಣಗಳಲ್ಲಿ ಮತ್ತು ಗಲಬೆ, ದೊಂಬಿಗಳಲ್ಲಿ( ಗುಜರಾತ್-2002, ದೆಹಲಿ1984) ಸ್ಥಳಿಯ ಆಢಳಿತಗಳು ಪೋಲೀಸ್ ಮತ್ತು ಸಶಸ್ತ್ರ ಸೈನಿಕರಿಗೆ ಈ ರೀತಿ ಪ್ರಜಾಪ್ರಭುತ್ವಕ್ಕೆ ವಿರೋಧವಾದ ರೀತಿಯಲ್ಲಿ ಅಕ್ರಮವಾಗಿ, ಅನೈತಿಕವಾಗಿ ಮಾಹಿತಿ ಸಂಗ್ರಹಿಸಲು ಸಹಕರಿಸಿದ ಉದಾಹರಣೆಗಳಿವೆ. ಅದರಲ್ಲೂ ಹೆಬ್ಬೆಟ್ಟಿನ ಗುರುತು, ಅಕ್ಷಿಪಟಲದ ಸ್ಕ್ಯಾನ್ ಮತ್ತು ಭಾವಚಿತ್ರಗಳಂತಹ ಬಯೋಮೆಟ್ರಿಕ್ ಚಹರೆಯನ್ನು ಪೋಲೀಸ್ ಇಲಾಖೆ ದುರುಪಯೋಗ ಮಾಡಿಕೊಳ್ಳಬಹುದು ಎಂಬ ಭೀತಿ ಇದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಆರೋಪವೂ ಇದೆ. ಅಲ್ಲದೆ ಆಧಾರ್ ಬಿಲ್‍ನಲ್ಲಿ ಅಧಿಕೃತ ವ್ಯಕ್ತಿಗಳಿಂದ ಉಂಟಾಗಬಹುದಾದ ಮಾಹಿತಿ ಸೋರಿಕೆಗೆ ಶಿಕ್ಷೆ ವಿಧಿಸಲು ಯಾವ ಅವಕಾಶವೂ ಇಲ್ಲ. ಹಾಗಾಗಿ ಸರ್ಕಾರ ಮತ್ತು ಅಧಿಕಾರಿಗಳು ಮಾವೋವಾದಿಗಳು, ನಕ್ಸಲರು, ಭಯೋತ್ಪಾದಕರೂ ಸೇರಿದಂತೆ ತನಗೆ ವಿರುದ್ಧವಾಗಿ ಧನಿಎತ್ತಿದರವರ ವಿರುದ್ದ ಅಸ್ತ್ರವಾಗಿ ಆಧಾರ್  ಬಳಸುವ ಇನ್ ಬಿಲ್ಟ್ ಪೊಟೆನ್ಶಿಯಲ್ ಹೊಂದಿದೆ.

ಮತ್ತೊಂದು ಸಮಸ್ಯೆಯೆಂದರೆ  ಆಧಾರ್ ಚೀಟಿಗಾಗಿ ಬಯೋಮೆಟ್ರಿಕ್ ವಿಧಾನಗಳಲ್ಲಿ ಒಂದಾದ ಅಕ್ಷಿಪಟಲದ ಸ್ಕಾನಿಂಗ್ ಮಾಡುವುದು. ಗ್ಲುಕೋಮ, ಕಾರ್ನಿಯಲ್ ಕುರುಡುತನ, ಕಾರ್ನಿಯಾದಲ್ಲಿ ಕಲೆ ಇರುವವರ ಕಣ್ಣಿನ ಅಕ್ಷಿಪಟದ ಸ್ಯಾನ್ ಮಾಡುವುದು ಕಷ್ಟ ಸಾಧ್ಯ ಎಂದು ತಜÐವೈದ್ಯರು ಅಭಿಪ್ರಾಯಪಡುತ್ತಾರೆ.  ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸೈಯ ಪ್ರಕಾರ 6-8ಲಕ್ಷ ಜನ ಕಾರ್ನಿಯಾ ಕುರುಡುತನದಿಂದ ನರಳುತ್ತಿದ್ದಾರೆ. ಕಣ್ಣಿನ ಸೋಂಕು ಮತ್ತು ಗಾಯಳಿಂದ ಕಾರ್ನಿಯಾ ಮೇಲೆ ಕಲೆ ಹೊಂದಿರುವ ಜನ ಇನ್ನೂ ಹೆಚ್ಚು. ಹಿಂದಿನ ಕೇಂದ್ರ ಸಂಪುಟ ಕಾರ್ಯದರ್ಶಿ ಚಂದ್ರಶೇಖರ್ ಅವರೇ ಇದೊಂದು ವ್ಯರ್ಥ ವೆಚ್ಚ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಲ್ಯಾಟೆಕ್ಸ್ ಮತ್ತು ಅಡಸೀವ್‍ಗಳ ಮೂಲಕ ನಕಲಿ ಹೆಬ್ಬೆರಳ ಗುರುತುಗಳನ್ನು ಸೃಷ್ಟಿಸುವ  ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಇಷ್ಟಾಗಿಯೂ ಸೈಬರ್ ಭದ್ರತೆಗಾಗಿ ಭಾರತ ಯಾವುದೇ ಕಾನೂನು ಬದ್ಧವಾದ ಚೌಕಟ್ಟನ್ನಾಗಲೀ, ಮೂಲಭೂತ ಸೌಲಭ್ಯವನ್ನಾಗಲೀ ಹೊಂದಿಲ್ಲ. ತೀರಾ ಇತ್ತೀಚೆಗೆ ನಮ್ಮ ದೇಶದ ಎಷ್ಟೋ ಅತಿ ಭದ್ರತೆ ಮತ್ತು ರಹಸ್ಯವಾಗಿಟ್ಟ ಅಂಕಿತಾಣಗಳು ಸೋರಿಕೆಯಾಗಿರುವ ಉದಾಹರಣೆಗಳಿವೆ. ಈ ಹಿನ್ನಲೆಯಲ್ಲಿ ಯುಐಡಿ ಅಂಕೀಯತಾಣವನ್ನು ಅತಿ ಭದ್ರತೆ ಮತ್ತು ಗೋಪ್ಯತೆಯಿಂದ ಕಾಯ್ದಿಡಬೆಕಿದೆ. ಇಲ್ಲವೆಂದರೆ ಹಾಕರ್‍ಗಳು ಮತ್ತು ಇತರೆ ಸೈಬರ್ ಕಳ್ಳರು ಮಾಹಿತಿ ವಿವರಗಳನ್ನು ಕಳುವ ಮಾಡುವ ಅಪಾಯವಿದೆ. ಜಗತ್ತಿನ ಯಾವುದೇ ರಾಷ್ಟ್ರವೂ ಯುಐಡಿಗೆ ಸಂಗ್ರಹಿಸಿದಷ್ಟು ಅಘಾದ ಪ್ರಮಾಣದಲ್ಲಿ ಅಂಕೀಯ ಮಾಹಿತಿಯನ್ನು ಸಂಗ್ರಹಿಸಿಟ್ಟ ಉದಾಹರಣೆಯಿಲ್ಲ. ಜೊತೆಗೆ ಯಾವುದೇ ಸಂಸ್ಥೆ ಅಥವಾ ರಾಷ್ಟ್ರವಾಗಲೀ ಇದರ ಭದ್ರತೆಗೆ ಖಾತರಿ ಕೊಡುವಷ್ಟು ಅನುಭವ ಮತ್ತು ತಾಂತ್ರಿಕ ಕೌಶಲ ಹೊಂದಿಲ್ಲ ಎಂದೇ ಹೇಳಲಾಗುತ್ತಿದೆ. ಯೋರೋಪ್ ಮತ್ತು ಅಮೇರಿಕಾಗಳಂತೆ ಅಂಕಿ-ಅಂಶಗಳನ್ನು ರಕ್ಷಿಸುವ ಯಾವುದೇ ಕಾನೂನು ಭಾರತದಲ್ಲಿಲ್ಲ. ಹಾಗಾಗಿ ದೇಶಾದ್ಯಂತ ಹಂಚಿಹೋಗುವ ಮಾಹಿತಿಗಿಂತ ಒಂದು ಕೇಂದ್ರೀಯ ಅಂಕಿತಾಣದಲ್ಲಿರುವ ಕ್ರೋಡೀಕೃತ, ಆಘಾದ ಮಾಹಿತಿ ಸೋರಿಹೋಗುವ, ತಿರುಚಲ್ಪಡುವ  ಅಥವಾ ಎಕ್ಸ್‍ಪ್ಲಾಯಿಟ್ ಮಾಡಲು ಬಳಸುವ ಸಾಧ್ಯತೆಯೇ ಹೆಚ್ಚು! ಇದಕ್ಕೆ ಉದಾಹರಣೆಯೆಂದರೆ ಆಧಾರ್ ಯೋಜನೆಗೆ ಸಂಬಂಧಿಸಿದ ರಹಸ್ಯವಾದ ಕಾರ್ಯಸೂಚಿಯೊಂದು ಟ್ರಾನ್ಸಪರೆನೆನ್ಸಿ ವೆಬ್‍ತಾಣ ಎಂದು ಹೆಸರಾದ  ವಿಕಿಲೀಕ್‍ನಲ್ಲಿ ಕಾಣಿಸಿಕೊಂಡಿರುವುದು. ಅರ್ನೆಸ್ಟ್ ಮತ್ತು ಎಂಗ್‍ನಂತಹ ವಿದೇಶಿ ಕಂಪನಿಗಳಿಗೆ ಮಾಹಿತಿ ಸೋರಿಹೋಗುವ ಬಗ್ಗೆಯೂ ಆತಂಕ ಉಂಟಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ ಈ ಯೋಜನೆಗೆಂದು ಮೀಸಲಿಟ್ಟಿರುವ ಹಣದ ಪ್ರಮಾಣ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಯುಐಡಿ ಯೋಜನೆಯ ಒಟ್ಟಾರೆ ವೆಚ್ಚ 15 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಈಗಾಗಲೇ 3000 ಕೋಟಿ ರೂಗಳನ್ನು ಈ ಯೋಜನೆಗಾಗಿ ಖರ್ಚು ಮಾಡಲಾಗಿದೆ. ನಂದನ್ ನಿಲೇಖಿಣಿ ಅವರು ಹೇಳುವ ಪ್ರಕಾರ ವಿವಿಧ ಯೋಜನೆಗಳಲ್ಲಿ ಆಧಾರ್ ಆಧಾರಿತ ಫಲಾನುಭವಿಗಳ ಗುರುತಿಸುವಿಕೆಯಿಂದ ಸಾವಿರಾರು ಕೋಟಿ ರೂಗಳ ರಾಷ್ಟ್ರೀಯ ಉಳಿತಾಯವಾಗುತ್ತದೆ. ಆದರೆ ಆ ಬಗ್ಗೆ  ಈವರೆಗೆ ಯಾವ ಅಧ್ಯಯನವೂ ನಡೆದಿಲ್ಲ, ನಂಬಲರ್ಹವಾದ ಅಂಕಿ-ಅಂಶಗಳೂ ಹೊರಬಿದ್ದಿಲ್ಲ. ಆಧಾರ್‍ನ ಅಬ್ಬರದಲ್ಲಿ ಚುನಾವಣಾ ಆಯೋಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನೀಡಿದ ಮತದಾರರ ಗುರುತಿನ ಚೀಟಿ(ಇPIಅ) ಮೂಲೆಗುಂಪಾಗಿದೆ. ಜಮ್ಮ ಕಾಶ್ಮೀರದಂತಹ ರಾಜ್ಯಗಳಲ್ಲಿ ಶೇ.46ರಷ್ಟು ಮಾತ್ರ ಗುರುತಿನ ಚೀಟಿ ವಿತರಿಸಲಾಗಿದೆ. ಈಗ ಕೇಂದ್ರ ಸರ್ಕಾರ ಅದನ್ನು ಬದಿಗೊತ್ತಿ ಆಧಾರ್‍ಗೆ ಮಹತ್ವ ನೀಡಲು ಹೊರಟಿದೆ.  ಜೊತೆಗೆ ಭಾರತದ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಪಂಚಾಯಿತಿಗಳಲ್ಲಿ ಮತ್ತು ಪಡಿತರ ವಿತರಣಾ ಅಂಗಡಿಗಳಲ್ಲಿ ಬೆರಳಚ್ಚು ಪತ್ತೆಮಾಡುವ ಯಂತ್ರವನ್ನು ಇಡಬೇಕಾಗಿದೆ. ಪ್ರತಿ ಯಂತ್ರಕ್ಕೆ ಸುಮಾರು 50 ಅಮೇರಿಕನ್ ಡಾಲರ್ ಬೆಲೆ ಇದ್ದು ಈ  ವೆಚ್ಚ ಯೋಜನಾ ವೆಚ್ಚಗೆ ಸೇರ್ಪಡೆಯಾಗಿಲ್ಲ ಎಂದು ಹೇಳಲಾಗಿದೆ.

ಜೊತೆಗೆ ಆಧಾರ್ ಯೋಜನೆ ಪ್ರಜಾತಾಂತ್ರಿಕ ವಿಧಿವಿಧಾನಗಳನ್ನು ಮತ್ತು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಯುಐಡಿ ಪ್ರಾಧಿಕಾರಕ್ಕೆ ವಿಶೇಷ, ಸ್ಥಾನಮಾನ ಮತ್ತು ಅಧಿಕಾರಗಳನ್ನು ನೀಡಿರುವುದು ಪ್ರಶ್ನಾರ್ಹವಾಗಿದೆ. ಸಾಂವಿಧಾನಿಕ ಬೆಂಬಲ ಮತ್ತು ಕ್ರಮಬದ್ಧ ಚೌಕಟ್ಟು ಇಲ್ಲದಿರುವುದರಿಂದ ಯುಐಡಿ ಪ್ರಾಧಿಕಾರದ ಚಟುವಟಿಕೆಗಳು ಅಕ್ರಮ ಎಂದೇ ಪರಿಗಣಿಸಬೇಕಾಗುತ್ತದೆಂದು ಖ್ಯಾತ ಮಾಧ್ಯಮ ವಿಮರ್ಶಕ ಕಲ್ಯಾಣಿ ಮೆನನ್-ಸೆನ್ ಮೊದಲಾದ ಹಲವರು ಅಭಿಪ್ರಾಯಪಟ್ಟಿದ್ದಾರೆ.ನಿರ್ಧಾರಗಳ ಬಗ್ಗೆಯಾಗಲೀ, ವೆಚ್ಚದ ಕುರಿತಾಗಲೀ ಪಾರದರ್ಶಕ ವಿಧಿವಿಧಾನಗಳನ್ನು ಅನುಸರಿಸುತ್ತಿಲ್ಲ ಎಂದು ದೂರಲಾಗುತ್ತಿದೆ. ಇಷ್ಟಾಗಿಯೂ ಸರ್ಕಾರ ಸಾರ್ವಜನಿಕವಾಗಿ ಆಧಾರ್ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡದೆ ಆಕ್ಷೇಪಗಳಿಗೆಲ್ಲಾ ಮೌನವಾಗಿದೆ ಎಂಬ ಗಂಭೀರ ಆರೋಪವೂ ಇದೆ.

ಭಾರತ ವಿಶಿಷ್ಟ ಗುರುತಿನ ಚೀಟಿ ನೀಡುವ ಆಧಾರ್  ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮುಂಚೆ ಅದರ ಸಾಧಕ-ಬಾಧಕಗಳ ಬಗ್ಗೆ ಯೋಚಿಸಬೇಕಿತ್ತು. 308 ಮಿಲಿಯನ್ ಜನಸಂಖ್ಯೆ ಇರುವ ಅಮೇರಿಕಾ, 61 ಮಿಲಿಯನ್  ಜನಸಂಖ್ಯೆ ಇರುವ ಬ್ರಿಟನ್, 21 ಮಿಲಿಯನ್ ಜನಸಂಖ್ಯೆ ಹೊಂದಿರುವ ಆಸ್ಟ್ರೇಲಿಯಾಕ್ಕೆ ಆರ್ಥಿಕವಾಗಿ ಅತಿಹೊರೆ ಎನಿಸಿ ಕೈ ಬಿಟ್ಟ ಯೋಜನೆ 125 ಕೋಟಿ ಜನಸಂಖ್ಯೆ ಹೊಂದಿರುವ ಭಾರತಕ್ಕೆ ನಿಜವಾಗಿಯೂ ಅವಶ್ಯವಿತ್ತಾ ಎಂದು ಹಲವು ಚಿಂತಕರು ಆಕ್ಷೇಪವೆತ್ತಿದ್ದಾರೆ. ಚೀನಾ, ಕೆನಡಾ, ಜರ್ಮನಿಗಳೂ ಕೂಡ ಇದೊಂದು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗದ ಅಸಮರ್ಥನೀಯ ಮತ್ತು ಅಪಾಯಕಾರಿ ಸಾಹಸ ಎಂದು ವರ್ಣಿಸಿ ಕೈಚೆಲ್ಲಿವೆ. ಬ್ರಿಟನ್ ಇದೊಂದು  ದುಬಾರಿ ಹಾಗೂ ವ್ಯರ್ಥ ಕಸರತ್ತು. ಈ ಯೋಜನೆ ಜನರ ಖಾಸಗಿತನ ಮತ್ತು ನಾಗರಿಕ ಸ್ವಾತಂತ್ಯಕ್ಕೆ  ಬಿದ್ದ ದೊಡ್ಡ ಹೊಡೆತ, ಆಡಳಿತಗಳು ಜನರಿಗೆ ಮಾಡುವ ವಿಶ್ವಾಸದ್ರೋಹ ಎಂದು ಅಭಿಪ್ರಾಯಪಟ್ಟಿದೆ. ಇದು ಎಲ್ಲ ರೀತಿಯಲ್ಲೂ ಭಾರತಕ್ಕೂ ಅನ್ವಯವಾಗುತ್ತದೆ. ಈ ಎಲ್ಲಾ ಲೋಪದೋಷಗಳ ನಡುವೆಯೂ ಭಾರತ ಆಧಾರ್ ಯೋಜನೆಯ ನಿರ್ವಹಣೆಗೆ ಬೇಕಾದ ತಾಂತ್ರಿಕ ಮತ್ತು ಭದ್ರತಾ ಅಂಶಗಳನ್ನು  ಸಜ್ಜುಗೊಳಿಸಿಕೊಳ್ಳಬೇಕಿದೆ.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಆಧಾರ್ ಕಡ್ಡಾಯವಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ  ಬೆನ್ನಿಗೇ ಆಧಾರ್ ಅನಿಲ ಸಂಪರ್ಕಗಳಿಗೆ ಹಾಗೂ ನೇರ ಹಣ ವರ್ಗಾವಣೆಗೆ ಅತ್ಯವಶ್ಯ ಎನ್ನುವುದನ್ನು ಸುಪ್ರೀಂ ಕೋರ್ಟ್‍ಗೆ ಮನವರಿಕೆ ಮಾಡಲು ಹೊರಟಿದೆ. ಜೊತೆಗೆ  ಯುಪಿಎ ಸರ್ಕಾರ ಆಧಾರ್‍ಗೆ ಕಾನೂನು ಚೌಕಟ್ಟು ನೀಡಲು ಹೊರಟಿತ್ತು.  ಈಗಾಗಲೇ  50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅನಿಲ ಸಂಪರ್ಕದಿಂದ ಹಿಡಿದು ಪಡಿತರ ವಿತರಣೆವರೆಗೆ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಲಾಗಿದೆ. ಆಯ್ದ ಕೆಲ ಯೋಜನೆಗಳನ್ನು ಬಿಟ್ಟು ಎಲ್ಲಾ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡಿರುವುದನ್ನು ಕೈ ಬಿಡಬೇಕು.  ಸರ್ಕಾರ ಸಾಮಾನ್ಯ ಜನರ ಖಾಸಗಿ ಬದುಕು ಮತ್ತು ನಾಗರಿಕ ಸ್ವಾತಂತ್ಯ್ರ ಕಾಪಾಡುವ, ಮಾನವ ಹಕ್ಕುಗಳನ್ನು ಗೌರವಿಸುವ ಖಾತರಿ ನೀಡಬೇಕೆಂದು ಒತ್ತಾಯಿಸಿ ಸಾಮಾಜಿಕ ಸಂಘ, ಸಂಸ್ಥೆಗಳು ಇದರ ವಿರುದ್ಧ ಒಂದು ಸಂಘಟಿತ ಹೋರಾಟವನ್ನೇ ನಡೆಸಬೇಕಿದೆ.

ಚಿತ್ರಕೃಪೆ :http://www.aadhar-card.com

Advertisements
2 ಟಿಪ್ಪಣಿಗಳು Post a comment
 1. Nagshetty Shetkar
  ಏಪ್ರಿಲ್ 10 2014

  ಆಧಾರ್ ಭಾರತದ ಮಟ್ಟಿಗೆ ಕ್ರಾಂತಿಕಾರ ಜನಪರ ಯೋಜನೆ. ಇದು ಮಹತ್ವಾಕಾಂಕ್ಷೆಯ ಯೋಜನೆಯಾದುದರಿಂದ ಇದರ ಅನುಷ್ಠಾನದಲ್ಲಿ ಸಹಜವಾಗಿಯೇ ಕೆಲವು ಲೋಪದೋಷಗಳಿವೆ. ಆದರೆ ಅವುಗಳನ್ನೇ ನೆಪವಾಗಿಟ್ಟಿಸಿಕೊಂಡು ಆಧಾರ್ ಯೋಜನೆ ಹಾಗು ನೀಲೇಕಣಿ ಅವರನ್ನು ಹಳಿಯುವುದು ಸರಿಯಲ್ಲ. ಸಹಸ್ರ ಕೋಟಿಗಳ ಒಡೆಯ ನೀಲೇಕಣಿ ತಮ್ಮ ಸಂಪತ್ತನ್ನು ವರ್ಧಿಸುವ ಕೆಲಸಕ್ಕೆ ಇಳಿಯದೆ ದೇಶಕ್ಕೆ ಪ್ರಯೋಜನವಾಗುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಾನ್ ವ್ಯಕ್ತಿ. ನೀಲೇಕಣಿ ಅವರ ಪುರೋಗಾಮಿತ್ವಕ್ಕೆ ಆಧಾರ್ ಉತ್ತಮ ನಿದರ್ಶನ. ನೀಲೇಕಣಿ ಅವರು ಮುಂಬರುವ ದಿನಗಳಲ್ಲಿ ಭಾರತದ ಯೋಜನಾ ಆಯೋಗದ ಅಧ್ಯಕ್ಷರಾಗಲಿ ಎಂದು ಆಶಿಸೋಣ.

  ಉತ್ತರ
  • ವಿಜಯ್ ಪೈ
   ಏಪ್ರಿಲ್ 14 2014

   ಕುರಿಗಳು ಸಾರ್ ಕುರಿಗಳು!
   “ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಲೋಪವಿರುವುದು ಸಹಜ”!! ವಾವ್ .ಅದೂ ದೇಶದ ನಾಗರಿಕನ ಅಧಿಕೃತ ಗುರುತು ಪತ್ರ ಎಂದು ಮಾಡಲು ಹೊರಟಿರುವ ಆಧಾರ ಕಾರ್ಡ ಯೋಜನೆಯಲ್ಲಿ!. ಮಹಾನುಭಾವರೆ.. ಯಾವುದೇ ಧಾಖಲೆಗಳಿಲ್ಲದೇ, ಎರಡುನೂರಾ ಐವತ್ತು ರೂಪಾಯಿಗಳಿಗೆ ಈ ಕಾರ್ಡ ಮಾಡಿಕೊಡುತ್ತಿದ್ದಾರೆ. ಸ್ವಲ್ಪ ಕಣ್ಣು ತೆರೆದು ಸುತ್ತ-ಮುತ್ತಲೂ ನೋಡಿ..ಏನೋ ಅಣಿಮುತ್ತನ್ನು ಉದುರಿಸಬೇಕೆಂದು ಉದುರಿಸದಿರಿ.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Note: HTML is allowed. Your email address will never be published.

Subscribe to comments