ಹೊಸದನ್ನೇನೋ ಕಂಡಂತೆ…!!
– ಅವಿನಾಶ್ ಜಿ ರಾಮ್
ವಿಚಿತ್ರವಾಗಿ ಕಾಡುವ ರಿಚ್ಚಿ, ಮೌನವಾಗಿಯೇ ಕೊಲ್ಲುವ ಮುನ್ನಾ ಅಲಿಯಾಸ್ ಪ್ರಣಯರಾಜ.. ನೋಡುವವರ ಕಣ್ಣು ತೇವ ಮಾಡಲೇಂದೆ ಕಾದು ಕುಳಿತ ರತ್ನಕ್ಕ ಮತ್ತವಳ ಮಗ ರಾಘು.. ಪಾಪ ಎನಿಸುವ ಬಾಲು.. ಕಣ್ಣೆದುರು ಬಂದಾಗೆಲ್ಲಾ ಬೆರಗು ಮೂಡಿಸುವ ಡೆಮಾಕ್ರಸಿ.. ಹೀಗೆ ಪಟ್ಟಿ ಮಾಡುತ್ತ ಹೋದರೆ ಉಳಿದವರ ಗುಂಪು ದೊಡ್ಡದಾಗುತ್ತ ಹೋಗುತ್ತದೆ..
ಅತ್ಯಂತ ವಿಭಿನ್ನ ಆಯಾಮಗಳೊಂದಿರುವ ಈ ಸಿನಿಮಾ ನನ್ನ ಕುತೂಹಲಕ್ಕೆ ಮೋಸ ಮಾಡಿಲ್ಲ. ಪ್ರತಿ ಪ್ರೇಮ್ನಲ್ಲೂ ತನ್ನ ಸಹಿ ಉಳಿಸಿರುವ ಕರಮ್ ಚಾವ್ಲಾರ ಕ್ಯಾಮೆರಾ ಕೈಚಳಕ, ಇಡೀ ಸಿನಿಮಾದಲ್ಲೊಂದು ಯಶಸ್ವಿ ಪಾತ್ರವಾಗಿರುವ ಅಜನೀಶ್ ರ ಸಂಗೀತ..:) ಕತ್ತರಿ ಪ್ರಯೋಗದಲ್ಲಿ ಕುಶಲತೆ ತೋರಿರುವ ಸಚಿನ್. ಈ ಎಲ್ಲಾ ತಂತ್ರಜ್ಞರ ತಾಂತ್ರಿಕತೆಯಲ್ಲಿ ಮಿಂದಿದೆ ‘ಉಳಿದವರು..‘
ತಂಡದ ನಾಯಕನಾಗಿರುವ ರಕ್ಷಿತ್ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನದ್ದು ನೀಡಬಲ್ಲೇ ಎಂದು ಸಾಬೀತು ಮಾಡಿದ್ದಾರೆ. ಚಿತ್ರಕಥೆಯ ಶೈಲಿ ಭಿನ್ನವಾಗಿದೆ. ವರ್ಲ್ಡ್ ಸಿನಿಮಾಗಳ ಪ್ರಭಾವ ಅವರಿಗಾಗಿದೆ. ರಕ್ಷಿತ್ ಬರೀ ನಟನಾಗಿ ಮಾತ್ರ ಉಳಿದು ಹೋಗಬಾರದಾಗಿ ವಿನಂತಿ..
ಇನ್ನೂ ಲಾಭಾಂಶಗಳ ಲೆಕ್ಕಾಚಾರ ಮಾಡದೇ ಚಿತ್ರ ನಿರ್ಮಾಣ ಮಾಡಿದ ಸಿಂಪಲ್ ಸುನಿ ಮತ್ತು ತಂಡಕ್ಕೆ ಕೃತಜ್ಞತೆ ಹೇಳಲೇಬೇಕು..ಈ ಚಿತ್ರ ಅರ್ಥ ಆಗ್ತಿಲ್ಲ ಅನ್ನೋ ಕೊರಗು ಹಾಗೂ ವಿಮರ್ಶೆಗಳು ಎಲ್ಲೆಡೆ ಉಚಿತವಾಗಿ ಕೇಳಿ ಬರುತ್ತಿವೆ. ಇದುವರೆಗೂ ಎಂತೆಂಥ ಅನರ್ಥಗಳು, ಹೊಲಸು ತುಂಬಿರುವ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅಂತವುಗಳನ್ನು ಗೆಲ್ಲಿಸಿ ಯಶಸ್ವಿ ಚಿತ್ರ ಎಂಬ ಹಣೆ ಪಟ್ಟಿ ಕೊಟ್ಟವರು ನಾವು ಇನ್ನು ಈ ‘ ಉಳಿದವರನ್ನು ಅರಗಿಸಿಕೊಳ್ಳಲಾಗಲಿಲ್ಲವೆಂದರೇ ಹೇಗೆ..?
ಬಹಳ ದಿನಗಳ ನಂತರ ಪ್ರಾದೇಶಿಕತೆಯ ಸೊಗಡನ್ನು ಅಚ್ಚುಕಟ್ಟಾಗಿ ಬಳಸಿಕೊಂಡ ಕೀರ್ತಿ ಕೂಡ ಈ ಚಿತ್ರಕ್ಕೆ ಸಲ್ಲಬೇಕು. ಕರಾವಳಿ ಬದುಕಿನ ಒಳಗು ಹೊರಗಿನ ಬಗ್ಗೆ ಸವಿಸ್ತಾರವಾದ ನೋಟ ಇಲ್ಲಿದೆ..
ಮುಖ್ಯವಾಗಿ ಇಷ್ಟವಾಗುವುದು ಚಿತ್ರತಂಡದ ಶ್ರದ್ದೆ. ಇಡೀ ತಂಡಕ್ಕೆ ಸಿನಿಮಾಗಳ ಮೇಲಿನ ಮೋಹ ಪರಿಚಯವಾಗುತ್ತದೆ. ಈ ತೆರನಾದ ಸಿನಿಮಾ ವ್ಯಾಮೋಹಿಗಳಿಗೆ ರಿಮೇಕ್ ಮಾಡಿಯೋ.. ಡಬ್ಬಿಂಗ್ ಮಾಡಿಯೋ ದುಡ್ಡು ಮಾಡಬೇಕೆಂಬ ದರ್ದು ಇರುವುದಿಲ್ಲ.. ಪರಭಾಷೆಯಲ್ಲಿ ಬರುವ ಚೂರು ವಿಭಿನ್ನ ಬಗೆಯ ಸಿನಿಮಾಗಳನ್ನು ಬಾಯಿ ತುಂಬಾ ಹೊಗಳುವ ನಾವು ನಮ್ಮಲ್ಲೇ ಬರುವ ಈ ಸಿನಿಮಾಗಳಿಗೆ ಅಡ್ಡಗಾಲು ಹಾಕುವುದೆಕೋ..?
‘ಉಳಿದವರು ಕಂಡಂತೆ’ ಯಲ್ಲಿ ತಪ್ಪುಗಳೇ ಇಲ್ಲವೆಂದಲ್ಲ, ತಪ್ಪುಗಳು ಇವೆ. ಮೊದಲ ಪ್ರಯತ್ನದಲ್ಲೇ ಉತ್ಸಾಹದಿಂದ ರಂಗ ಪ್ರವೇಶ ಮಾಡಿರುವ ರಕ್ಷಿತ್ ಒಂಚೂರು ತಪ್ಪುಗಳಿಗೆ ಕಾರಣಕರ್ತರಾಗಿದ್ದಾರೆ. ಆದರೆ ಇವರ ಈ ಪ್ರಯತ್ನಕ್ಕೆ ಬೆನ್ನುತಟ್ಟಿದರೆ ಮುಂಬರುವ ದಿನಗಳಲ್ಲಿ ಈ ಸಿನಿ ಮೋಹಿಗಳ ತಂಡ ಕನ್ನಡ ಚಿತ್ರರಂಗದ ಮಟ್ಟವನ್ನ ಒಂದು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಎಲ್ಲದಕ್ಕಿಂತ ಮೊದಲು ಹೊಸತನಕ್ಕೆ ಮುಕ್ತವಾಗಿ ತೆರದುಕೊಳ್ಳುವ ಮನಸ್ಥಿತಿ ನಮ್ಮವರಲ್ಲಿ ನಿರ್ಮಾಣವಾಗಬೇಕಿದೆ.
ಜಗತ್ತು ಕಂಡ ಶ್ರೇಷ್ಠ ಚಿತ್ರಗಳಲ್ಲಿನ ಚಾಯೆ ಉಳಿದವರಲ್ಲಿ ಕಂಡು ಬರುತ್ತದೆ. ಆದರೆ ಅದು ಜನರಿಗೇಕೆ ರುಚಿಸಿತ್ತಿಲ್ಲ ಎಂಬುದೇ ದುರಂತ.
ಮಚ್ಚು ಕೊಚ್ಚು ತುಂಬಿದ ಸಿನಿಮಾಗಳು ಹೆಚ್ಚಾಗಿ, ಮಸಾಲೆ ಅಂಶಗಳು ಅಧಿಕವಾಗಿ ಕನ್ನಡ ಪ್ರೇಕ್ಷಕ ಸ್ವಲ್ಪ ಜಡ್ಡು ಹಿಡಿದಿರಬಹುದು. ಅಂತಹವರಿಗೆ ಈ ಚಿತ್ರ ಕಹಿ ಎನಿಸಿರಬಹುದು. ಅದಕ್ಕೆ ಚಿತ್ರ ತಂಡ ಕಾರಣವಲ್ಲ.. ಅಂತಹುದೇ ಚಿತ್ರಗಳಿಗೆ ನಮ್ಮ ಪ್ರೇಕ್ಷಕರನ್ನು ಬ್ರಾಂಡ್ ಮಾಡಿರುವ ಅರೆ ಬೆಂದ ಸಿನಿ ನಿರ್ಮಾತೃಗಳು ಇದಕ್ಕೆ ನೇರ ಹೊಣೆ.
ಮುಕ್ತವಾಗಿ ಸಿನಿಮಾ ನೋಡಿ.. ಉಳಿದವರ ಗುಂಪಿನಲ್ಲಿ ನೀವು ಒಬ್ಬರಾಗಿ..