Skip to content

ಏಪ್ರಿಲ್ 15, 2014

8

ಪ್ರತ್ಯಕ್ಷ ಕಂಡು ಪರಾಂಬರಿಸಿ ನೋಡಿದ ಮೇಲೂ ನಮೋ ಎನ್ನದಿದ್ದರೆ…

by ನಿಲುಮೆ

– ರಾಜೇಶ್ ರಾವ್

ಮೋದಿಯಾವ ಘಟನೆ ಸಹನೆಯ ಕಟ್ಟೆಯೊಡೆದು ಸ್ವಾಭಿಮಾನ ಸಿಡಿದೆದ್ದು ನಡೆದಿತ್ತೋ ಆ ಘಟನೆ ಆತನನ್ನು ಜಗತ್ತಿಗೇ ಪರಿಚಯಿಸಿತು. ಜಗತ್ತಿಗೆ ಜಗತ್ತೇ ಆತನನ್ನು ಖಳನಾಯಕನನ್ನಾಗಿ, ರಾಕ್ಷಸನನ್ನಾಗಿ ಕಂಡು ದೂಷಿಸಿತು. ಜೊತೆಯಲ್ಲಿದ್ದವರೂ ದೂರವಾದರು. ಮಾಧ್ಯಮಗಳಿಂದ ನಿತ್ಯ ದೂಷಣೆಗಳ ಸಹಸ್ರನಾಮ. ರಾಷ್ಟ್ರವಿರೋಧಿ ಶಕ್ತಿಗಳಂತೂ ಹಬ್ಬದೂಟವೆಂಬಂತೆ ಈ ಸನ್ನಿವೇಶವನ್ನು ತಮಗೆ ತಕ್ಕಂತೆ ಮಾರ್ಪಡಿಸಿಕೊಂಡು ಕಣ್ಣಿಗೆ ರಾಚುವ ಸತ್ಯವನ್ನು ಕಾಲಗರ್ಭದಲ್ಲಿ ಅಡಗುವಂತೆ ಮಾಡಿದರು. ಮಾಧ್ಯಮಗಳು ಮುಚ್ಚಿಟ್ಟ ಕಾರಣ ಸಾಮಾನ್ಯ ಜನರಿಗೂ ಸತ್ಯ ತಿಳಿಯದೆ ಅವರೂ ದ್ವೇಷಿಸತೊಡಗಿದರು. ಅವನದೆಲ್ಲವನ್ನೂ ಮೌನವಾಗಿ ಸಹಿಸಿದ. ಮೌನವಾಗಿಯೇ ಕೆಲಸವನ್ನು ಮಾಡುತ್ತಾ ತನ್ನ ಜವಾಬ್ದಾರಿಯನ್ನು ಚ್ಯುತಿಯಿಲ್ಲದಂತೆ ಪೂರೈಸಿದ. ಯಾಕೆಂದರೆ ಅವನಲ್ಲೊಬ್ಬ ನಾಯಕನಿದ್ದ, ಸಂಘಟನಕಾರನಿದ್ದ, ಸಂಘದ ಶಿಸ್ತು, ಸಂಯಮ, ಸೇವಾಗುಣದ ಮೂರ್ತರೂಪವಿತ್ತು!

ಅದು 2013ರ ಜೂನ್ ತಿಂಗಳು. ಶಾಂತವಾಗಿದ್ದ ಗಂಗೆ ಉಕ್ಕಿ ಹರಿದಿದ್ದಳು. ಉತ್ತರ ಭಾರತ ಜಲ ಪ್ರಳಯದಿಂದ ತತ್ತರಿಸಿತ್ತು. ಚಾರ್ ಧಾಮಗಳಲ್ಲಿ ಯಾತ್ರಿಕರು ನಾಲ್ಕೂ ಕಡೆ ದಿಕ್ಕಾಪಾಲಾಗಿದ್ದರು. ಉತ್ತರಾಖಂಡದ ಜನರ ಬವಣೆಗೆ ಉತ್ತರ ಹೇಳುವವರಿರಲಿಲ್ಲ. ಕೇಂದ್ರ, ರಾಜ್ಯ ಸರಕಾರಗಳೆರಡೂ ನಿಷ್ಕ್ರಿಯವಾಗಿದ್ದ ಅಂತಹ ಕ್ಲಿಷ್ಟಕರ ಸಮಯದಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿದ್ದ ಸಾವಿರಾರು ಸಂತ್ರಸ್ಥರಲ್ಲಿ ಸುಮಾರು 15,000 ಮಂದಿ ಸಂತ್ರಸ್ಥರನ್ನು ಹುಡುಕಾಡಿ ಅವರ ನೆರವಿಗೆ ಧಾವಿಸಿದ ಆತನ ಪಡೆ, ಸುಮಾರು 80 ಟೊಯೊಟಾ ಇನ್ನೋವಾ ಕಾರುಗಳಲ್ಲಿ ಅವರನ್ನು ಡೆಹ್ರಾಡೂನಿನ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರಲ್ಲದೆ, ಅಲ್ಲಿಂದ 25 ಐಷಾರಾಮಿ ಬಸ್ಸುಗಳ ಸಹಾಯದಿಂದ ನವದೆಹಲಿಗೆ ಪ್ರಯಾಣ ವ್ಯವಸ್ಥೆ ಕಲ್ಪಿಸಿದರು. ಇದು ಒಬ್ಬ ನಾಯಕನಾದವ ಮಾಡುವ ಕಾರ್ಯ.ಪಾಕಿಸ್ತಾನದ ಪ್ರಧಾನಿ ನಮ್ಮ ದೇಶದ ಪ್ರಧಾನಿಯನ್ನು ಹಳ್ಳಿ ಹೆಂಗಸು ಎಂದು ಜರೆದಾಗ ಬೇರೆ ನಾಯಕರಿರಲಿ ಪ್ರಧಾನಿಯ ಪಕ್ಷದ ನಾಯಕರೇ ತುಟಿಪಿಟಿಕ್ಕೆನ್ನದಿದ್ದಾಗ ನಮ್ಮ ದೇಶದ ಪ್ರಧಾನಿಯನ್ನು ಹೀಯಾಳಿಸುವ ಅಧಿಕಾರ ತಮಗಿಲ್ಲವೆಂದು ಹೇಳುವ ಮೂಲಕ ಯುಧಿಷ್ಟಿರನ “ಮೂರನೆಯವ ಎದುರಾದಾಗ ನಾವು ನೂರೈವರು” ಎಂಬ ಮಾತನ್ನು ಅಕ್ಷರಷಃ ಪಾಲಿಸಿದ ನಾಯಕ ಪ್ರಸಕ್ತ ಸನ್ನಿವೇಶದಲ್ಲಿ ಆತನೊಬ್ಬನೇ!

ಮುನ್ನುಗ್ಗುತ್ತಿದ್ದ ವಿಸ್ತರಣಾ ಮನೋಭಾವದ ಚೀನಾಕ್ಕೆ ಖಡಕ್ಕಾಗಿ ಉತ್ತರ ನೀಡಿದ ನಾಯಕ ಆತನಲ್ಲದೆ ಮತ್ಯಾರು? ವೀಸಾಕ್ಕಾಗಿ ಅಂಗಲಾಚದೇ ಅಮೇರಿಕಾದವರನ್ನೇ ಭಾರತದ ವೀಸಾಕ್ಕಾಗಿ ಸರತಿಯಲ್ಲಿ ನಿಲ್ಲುವಂತೆ ಮಾಡುತ್ತೇನೆಂದು ಘೋಷಿಸುವ ಧೈರ್ಯ ಮತ್ಯಾರಿಗಿದೆ? ಹೌದು, ಯಾವ ದೊಣ್ಣೆನಾಯಕನ ಅಪ್ಪಣೆಗೆ ಕಾಯದೇ ಸಂಧಿಗ್ಧ ಪರಿಸ್ಥಿತಿಯಲ್ಲಿ ಸ್ವಯಂ ಖಚಿತ ನಿರ್ಧಾರದೊಂದಿಗೆ ಮುನ್ನುಗ್ಗುವುದು ಮಾತ್ರವಲ್ಲ ಅದನ್ನು ಯಶಸ್ವಿಯಾಗಿ ಪೂರೈಸುವುದನ್ನು ಹಾಗೂ ದೇಶದ ಘನತೆ, ಸ್ವಾಭಿಮಾನ, ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಧೈರ್ಯ-ಸ್ಥೈರ್ಯ ಪ್ರದರ್ಶಿಸುವುದನ್ನು ಸರ್ದಾರ ಪಟೇಲ್ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯವರ ನಂತರದ ರಾಜಕೀಯ ನಾಯಕರಲ್ಲಿ ನೋಡಬಹುದಾದ ಏಕೈಕ ವ್ಯಕ್ತಿ ನರೇಂದ್ರ ಮೋದಿ!

          2012ರಲ್ಲಿ ಇಡೀ ದೇಶ ವಿದ್ಯುತ್ ಇಲ್ಲದೆ 48 ಘಂಟೆಗಳ ಕಾಲ ಕತ್ತಲಲ್ಲಿ ಮುಳುಗಿತ್ತು. ಆದರೆ ಗುಜರಾತ್ ಮಾತ್ರ ಝಗಮಗಿಸುತ್ತಾ ನಿಂತಿತ್ತು. ಕಾರಣ “ಜ್ಯೋತಿಗ್ರಾಮ” ಎನ್ನುವ ಯೋಜನೆ! ಇದನ್ನು ರೂಪುಗೊಳಿಸಿದ ಮೋದಿ ಇಡೀ ಗುಜರಾತಿಗೆ ದಿನದ 24 ಘಂಟೆಗಳ ಕಾಲವೂ ವಿದ್ಯುತ್ ಪೂರೈಸುತ್ತಿದ್ದಾರೆ. 2002ರ ಮೊದಲು ಅಲ್ಲಿನ ಜನ ವಿದ್ಯುತ್ ಅಭಾವದಿಂದ ಪರಿತಪಿಸುತ್ತಿದ್ದರು. ಇದೀಗ ಗುಜರಾತಿನ ಪ್ರತಿ 18,065 ಹಳ್ಳಿಹಳ್ಳಿಗೂ ವರ್ಷದ 365 ದಿನವೂ 3 ಫೇಸ್ ವಿದ್ಯುತ್ ದೊರೆಯುತ್ತಿದೆ. ಇದರ ಅನುಷ್ಠಾನಕ್ಕೆ ಮೋದಿ ಮಾಡಿದ ಮೋಡಿಯಾದರೂ ಏನು? ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ವಿದ್ಯುತ್ ಕಳ್ಳತನ ಮಾಡುವವರನ್ನು ಒದ್ದು ಜೈಲಿಗೆ ಕಳಿಸಲಾಯಿತು, ಸರಕಾರಿ ಲೆಕ್ಕದ ವಿದ್ಯುತ್ತಿನ ಪಾಲನ್ನು ನಿಖರವಾಗಿ ಲೆಕ್ಕಹಾಕುವ ವ್ಯವಸ್ಥೆಮಾಡಲಾಯಿತು ಮತ್ತು ಗ್ರಹಪಯೋಗಿ ಹಾಗು ಕೃಷಿಸಂಬಂಧಿ ವಿದ್ಯುತ್ ಸರಬರಾಜು ಲೈನ್ ಗಳನ್ನು ಬೇರ್ಪಡಿಸಲಾಯಿತು.

16 ಲಕ್ಷ ಹೊಸ ವಿದ್ಯುತ್ ಕಂಬಗಳು, 15,500 ಹೊಸ ಟ್ರಾನ್ಸಫಾರ್ಮರ್ಗಳು ಮತ್ತು 75,000 KM ಉದ್ದದ ಕೇಬಲ್ ಗಳನ್ನು ಹೊಸದಾಗಿ ಹಾಕಲಾಯಿತು. ಈ ಯೋಜನೆಗೆ ಒಟ್ಟು ಖರ್ಚಾದ ಮೊತ್ತ ಬರೇ 1100 ಕೋಟಿ ಮಾತ್ರ. ಇದು ಹೇಳಲು ಸುಲಭ. ಆದರೆ ಬಿಟ್ಟಿ ಸಿಕ್ಕಿದ್ದನ್ನು ಎಲ್ಲಾ ಕಡೆಯಿಂದ ಬಾಚುವ ಜನರಿರುವ, ಲಂಚವನ್ನೇ ವ್ಯವಸ್ಥೆಯನ್ನಾಗಿಸಿದ ಅಧಿಕಾರ-ರಾಜಕೀಯ ವರ್ಗವಿರುವ ವ್ಯವಸ್ಥೆಯೊಂದನ್ನು ಬದಲಾಯಿಸಿದ್ದು ಸಾಮಾನ್ಯವೇನು?

ನಮ್ಮಲ್ಲೂ ಗ್ರಾಮ ಪಂಚಾಯತ್ ಚುನಾವಣೆಗಳಾಗುತ್ತವೆ. ಪಕ್ಷ, ಪಕ್ಷಗಳ ನಡುವೆ ಹೊಡೆದಾಟ,ಮಾತಿನ ಚಕಮಕಿ, ಕೋಲಾಹಲ… ಕೊನೆಗೆ ಅಭಿವೃದ್ಧಿ ಶೂನ್ಯ. ಜನತೆಗೆ ಹಾಲಾಹಲ! ಅದೇ ಗುಜರಾತಿನಲ್ಲಿ ನೋಡಿ…. ಗ್ರಾಮಸಭಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಗ್ರಾಮಕ್ಕೆ ನರೇಂದ್ರ ಮೋದಿ ಸರಕಾರ “ಸಮರಸ” ಗ್ರಾಮವೆಂದು ಹೆಸರಿಸಿ ಪ್ರೋತ್ಸಾಹ ಧನ ನೀಡುತ್ತಿದೆ. 45 ಪ್ರತಿಶತ ಗ್ರಾಮಸಭೆಗಳು ಈ ಯೋಜನೆಯಲ್ಲಿ ಪ್ರಯೋಜನ ಪಡೆಯುತ್ತಿವೆ. ಗ್ರಾಮಸಭಾ ಚುನಾವಣೆಯಲ್ಲಿ ನಡೆಯುವ ದ್ವೇಷ ಸಾಧನೆಗೆ, ರಾಜಕೀಯ ಕಲಹಕ್ಕೆ ಪೂರ್ಣ ವಿರಾಮ. ಗ್ರಾಮಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಪಕ್ಷವನ್ನು ಬೆಳೆಸುವ ಅವಕಾಶವಿರುವ ಸಂದರ್ಭದಲ್ಲಿ ಚುನಾವಣೆಯೇ ನೆಡೆಯದಂತೆ ಮಾಡಿ ಗ್ರಾಮೀಣ ಸಾಮರಸ್ಯವನ್ನು ಮೂಡಿಸುವ ಇಂತಹ ಯೋಜನೆಗಳನ್ನು ನಿಜವಾದ ದೇಶ ಭಕ್ತ ಮಾತ್ರ ಘೋಷಿಸುವ ತಾಕತ್ತು ತೋರಿಸಬಲ್ಲ!

ಗುಜರಾತ್ ರಾಜ್ಯಕ್ಕೆ ಕೌಶಲ್ಯವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿದೆ. ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಐಟಿಐ ಗಳನ್ನು ತೆರೆದು ಆ ಪ್ರದೇಶದ ಉದ್ದಿಮೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಉದ್ಯಮಕ್ಕೆ ಸಂಬಂಧಪಟ್ಟ ಕೋರ್ಸುಗಳನ್ನು ಕಲಿಸಲಾಗುತ್ತಿದೆ. ಇದು ಸ್ಥಳಿಯರಿಗೆ ಉದ್ಯೋಗ, ಉದ್ದಿಮೆದಾರರಿಗೆ ಕೌಶಲ್ಯಯುತ ಉದ್ಯೋಗಿಗಳನ್ನು ಸರಿಯಾದ ಸಮಯಕ್ಕೆ ಪೂರೈಸಿ, ಉತ್ಪಾದನೆಯನ್ನು ಹೆಚ್ಚಿಸಿ, ಆ ಭಾಗದ ಆರ್ಥಿಕತೆ ಪುನಶ್ಚೇತನಗೊಳ್ಳುತ್ತದೆ. ಅಂದರೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಯುವಜನರಿಗೆ ಕೋರ್ಸುಗಳನ್ನು ಆಯ್ಕೆ ಮಾಡಿ, ತಮಗಿಷ್ಟಬಂದ ಉದ್ಯೋಗ ಪಡೆಯುವ ಸದವಕಾಶ. ಸಣ್ಣ ಬದಲಾವಣೆಯಾದರೂ ಎಂತಹ ಸುಂದರ ಪರಿಕಲ್ಪನೆ.

ವಿದ್ಯುತ್ಕೊರತೆನೀಗಿಸಿದಏಷ್ಯಾದಲ್ಲೇಅತೀದೊಡ್ಡಸೋಲಾರ್ಪ್ರೊಜೆಕ್ಟ್ಚರಂಕಾ, ಥೇಮ್ಸ್ನದಿಯಂತೆಹೊಳೆಯುತ್ತಿರುವಸರ್ದಾರ್ಸರೋವರ, ತುಂಬಿಹರಿಯುತ್ತಿರುವನರ್ಮದಾ, ಸಬರ್ಮತಿಹಾಗೂಒಂದುಕಾಲದಲ್ಲಿಬತ್ತಿಹೋಗಿದ್ದಸರಸ್ವತಿ, ಅತ್ಯಧಿಕ ಹಾಲಿನ ಉತ್ಪಾದನೆ ಹಾಗೂ ಅದರ ಉತ್ಪನ್ನಗಳ ರಫ್ತು, ವಿಶ್ವದ ಮೊದಲ ಗೋ ಉದ್ಯಾನ, ಕೃಷಿ ಹಾಗೂ ಕೃಷಿ ಭೂಮಿಯಲ್ಲಾಗಿರುವ ಬೆಳವಣಿಗೆ, ಸಾಕ್ಷರತೆ-ಉದ್ಯೋಗವಕಾಶ-ಉದ್ಯೋಗ ನೇಮಕಾತಿಗಳಲ್ಲಾಗಿರುವ ಅಭೂತಪೂರ್ವ ಏರಿಕೆ, ಮೂಲಭೂತ ಸೌಕರ್ಯ-ಪ್ರವಾಸೋದ್ಯಮಗಳಲ್ಲಾದ ಕ್ಷಿಪ್ರ ಬೆಳವಣಿಗೆ, ವಜ್ರ ಮತ್ತು ಹತ್ತಿಯ ಮಾರಾಟದಲ್ಲಾಗಿರುವ ಉತ್ಕರ್ಷ, ಸುಭದ್ರ ರಕ್ಷಣಾ ವ್ಯವಸ್ಥೆ,ಲಂಚವನ್ನೇ ನಿರ್ಮೂಲನಗೊಳಿಸಿದ, ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ವಿಭಾಗದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ಜವಾಬ್ದಾರಿ ಮತ್ತು ಸಮಾಜ ಸುಧಾರಣೆಯ ಅಡಿಯಲ್ಲಿ ಪ್ರಶಸ್ತಿ ಸಿಕ್ಕಿರುವ ನಾಗರಿಕರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತಿರುವ “ಸ್ವಾಗತ್”, ಸ್ವತಃ ನರೇಂದ್ರ ಮೋದಿಯೇ ಭಾಗವಹಿಸಿ ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸುವ “ಕನ್ಯಾ ಕಲಾವಣಿ”, ಮೀನುಗಾರಿಕೆ ಇಲ್ಲದ ಸಮಯದಲ್ಲಿ ಬೆಸ್ತರನ್ನು ಆರ್ಥಿಕವಾಗಿ ಬಲಪಡಿಸಿದ ಸರಕಾರವೇ ಮುಂದೆ ನಿಂತು ಅಭಿವೃದ್ಧಿಪಡಿಸಿದ ಔಷಧ, ರಸಗೊಬ್ಬರವಾಗಿ ಉಪಯೋಗವಾಗುವ ಸಮುದ್ರಕಳೆ ಎಂಬ ಬೆಳೆ, “ಬೇಟಿ ಬಚಾವೋ” ಆಂದೋಲನ, “ಬಾಲ ಸಖಾ”, ಚಿರಂಜೀವಿ ಯೋಜನಾ, ಬಾಲ ಭೋಗ್ ಯೋಜನಾ, ಖಿಖಿಲಾತ್ ಯೋಜನಾ, ನಾರಿ ಗೌರವ್ ನಿಧಿ, ಮಿಷನ್ ಮಂಗಳಮ್, ಸವಚೇಟಿ ಮಾಜ್ ಸುರಕ್ಷಾ ಮುಂತಾದ ಹಲವಾರು ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಗೆ ನೀಡಿರುವ ಮಹತ್ವ ಮೋದಿಯವರ ಸರ್ವರೊಂದಿಗೆ ಸಮಗ್ರ ವಿಕಾಸವನ್ನು ಸಮರ್ಥವಾಗಿ ಬಿಂಬಿಸುತ್ತವೆ.

ನಮ್ಮಲ್ಲಿ ಎಲ್ಲೆಲ್ಲೂ ನೋಡಿದರೂ ನೀರಿನ ಅಭಾವ. ಇದ್ದ ಕೆರೆಗಳನ್ನು ಭಾರೀ ಕುಳಗಳು ನುಂಗುತ್ತಿವೆ. ಇತ್ತೀಚೆಗಂತೂ ಅಗಾಧ ಮಳೆ ಸುರಿವ ಮಲೆನಾಡಿನಲ್ಲಿಯೂ ಇದೇ ದುಃಸ್ಥಿತಿ. ಮಹಾರಾಷ್ಟ್ರದ ಒಬ್ಬ ಕಾಂಗ್ರೆಸ್ ಮಂತ್ರಿಯಂತೂ ಕೆರೆಯಲ್ಲಿ ನೀರಿಲ್ಲದೆ ಇದ್ದರೆ ನಾನೇನೂ ಮೂತ್ರಿಸಿ ಅದನ್ನು ತುಂಬಿಸಲೇ ಎಂದು ನೀರಿಲ್ಲದೆ ಪರಿತಪಿಸುತ್ತಿದ್ದ ಜನರನ್ನು ಅಪಹಾಸ್ಯ ಮಾಡಿದರು. ಅದೇ ಗುಜರಾತಿನಲ್ಲಿ ಸಮುದ್ರ ಪಾಲಾಗುತ್ತಿದ್ದ ನರ್ಮದಾ ಅಣೆಕಟ್ಟಿನ ಹೆಚ್ಚುವರಿ ನೀರನ್ನು ಸದಾ ನೀರಿನ ಅಭಾವವಿರುವ ಸೌರಾಷ್ಟ್ರ ಪ್ರದೇಶದ ಏಳು ಜಿಲ್ಲೆಗಳಲ್ಲಿ 115 ಚಿಕ್ಕ ಅಣೆಕಟ್ಟುಗಳನ್ನು ಕಟ್ಟಿ 1115 ಕಿ.ಮೀ ಉದ್ದದ ಕಾಲುವೆಯಿಂದ ನೀರನ್ನು ತುಂಬಲಾಗುತ್ತದೆ. ಗುರುತ್ವಾಕರ್ಷಣ ಶಕ್ತಿಯಿಂದ ಹರಿಯುವ ಈ ನೀರಿನಿಂದ 10 ಲಕ್ಷ ಎಕರೆ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ನಿಲ್ಲಲಿರುವ ಈ ಯೋಜನೆ 2017 ರಲ್ಲಿ ಪೂರ್ಣಗೊಂಡಾಗ ಬರೇ 10,000 ಕೋಟಿ ಖರ್ಚಾಗಲಿದೆ.

ಸುಮಾರು 986 ಎಕ್ರೆಯಲ್ಲಿ ನಿರ್ಮಾಣವಾಗುತ್ತಿರುವ ನರೇಂದ್ರಮೋದಿಯವರ ಕನಸಿನ GIFT [Gujarat International Finance Tech-City] ಎಂಬ ಹೆಸರಿನ ಈ ವಾಣಿಜ್ಯನಗರವು 2020 ರ ಹೊತ್ತಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾರತದಲ್ಲಿ ಸುಮಾರು 1 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತದೆ. ವಿಶ್ವದ ಗಮನ ಸೆಳೆಯಲಿರುವ ಈ ನಗರದಲ್ಲಿ ಶ್ರೇಷ್ಠ ರಸ್ತೆಯಲ್ಲದೆ, ಭೂಗತ ಪೈಪ್ ಲೈನಿನ ಮೂಲಕ ತ್ಯಾಜ್ಯವಿಲೇವಾರಿ ವ್ಯವಸ್ಥೆ, ಮೆಟ್ರೋ ರೈಲು, 8 ಪಥಗಳ ರಸ್ತೆ, 50,000 ಕಾರ್ ಪಾರ್ಕಿಂಗ್ ವ್ಯವಸ್ಥೆ, ಭೂಮಿಯಡಿಯಲ್ಲಿ ಏರ್ ಕಂಡೀಶನ್ ಯಂತ್ರ ವ್ಯವಸ್ಥೆಯ, ಕೇಂದ್ರೀಕ್ರತ ನೆಟ್ ವರ್ಕ್ ಕೇಬಲಿಂಗ್ ವ್ಯವಸ್ಥೆ, ಸುಸಜ್ಜಿತ ಆಸ್ಪತ್ರೆ, ಶಾಲೆ, ವಸತಿ, ನಳ್ಳಿಯಲ್ಲೇ ಸಿಗುವ ಶುದ್ಧ ಕುಡಿಯುವ ನೀರು ಇವೇ ಮುಂತಾದ ಸುಸಜ್ಜಿತ ಸೌಲಭ್ಯಗಳಿರಲಿವೆ. SIR-ಧೊಲೆರಾ ಎಂಬ ಜಗತ್ತಿನ ಅತ್ಯಂತ ಯೋಚಿತ, ಯೋಜಿತ, ವ್ಯವಸ್ಥಿತ ನಗರ, ಜಗತ್ತಿನ ಅತ್ಯಂತ ದೊಡ್ಡ ಮಾನವ ನಿರ್ಮಿತ ಸಿಹಿನೀರಿನ ಸರೋವರ, ಜಗತ್ತಿನ ಹದಿನೆಂಟು ವಿಶ್ವವಿದ್ಯಾಲಯಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಒದಗಿಸುವ “ನ್ಯಾನೋ ಸಿಟಿ” ನಿರ್ಮಾಣ ಹಂತದಲ್ಲಿರುವ ನರೇಂದ್ರ ಮೋದಿಯವರ ದೂರದೃಷ್ಟಿಯ ಸೃಷ್ಟಿಗಳು!ಒಂದರಲ್ಲೇ ಬಹುಮುಖಿ ಫಲ ನೀಡುವ ಯೋಜನೆಗಳು ಮೋದಿ ರಾಜ್ಯದಲ್ಲಿ ಕಾಣಸಿಗುವ ಪ್ರತಿಯೊಬ್ಬ ಭಾರತೀಯ ಬಯಸುವ ಅಂಶಗಳು. ಬೇರೆ ರಾಜಕಾರಣಿಗಳಾದರೆ ಇಂತಹ ಯೊಜನೆಗಳನ್ನು ಮಾಡಿದರೂ ಪ್ರತ್ಯೇಕವಾಗಿ ಮಾಡುತ್ತಿದ್ದರು. ಯಾಕೆಂದರೆ ಜೇಬಿಗೆ ಬರಬೇಕಾದ್ದು ಪ್ರತಿಯೊಂದರಿಂದಲೂ ಪ್ರತ್ಯೇಕವಾಗಿ ಬರುತ್ತದಲ್ಲ!

ವಿಶ್ವದಲ್ಲೇ ಮೊತ್ತಮೊದಲ ಫೊರೆನ್ಸಿಕ್ ವಿಶ್ವವಿದ್ಯಾಲಯ, ಪೊಲೀಸ್ ಪಡೆಗೆ ವಿಶೇಷ ತರಬೇತಿ ನೀಡುವ ‘ರಕ್ಷಕ್ ವಿಶ್ವ ವಿದ್ಯಾಲಯ”, ದೇಶದ ನಲವತ್ತು ಪ್ರತಿಶತ ಫಾರ್ಮಸೆಟಿಕಲ್ ಕಾರ್ಖಾನೆಗಳು ಗುಜರಾತಿನಲ್ಲಿರಲು ಕಾರಣವಾದ ಫಾರ್ಮಸಿ ವಿಶ್ವವಿದ್ಯಾಲಯ ಗುಜರಾತಿನ ಶಿಕ್ಷಣ ಸಮೃದ್ಧಿಯ ಪ್ರತೀಕಗಳು. “2/3 ಭಾಗ ಸಮುದ್ರದಿಂದಾವೃತವಾದ ಈ ದೇಶದಲ್ಲಿ ಮರೈನ್ ಇಂಜಿನಿಯರಿಂಗ್, ಪೋರ್ಟ್ ಮ್ಯಾನೇಜ್ ಮೆಂಟ್ ಶಿಕ್ಷಣವೇ ಇಲ್ಲ. ಅಮೇರಿಕಾ ತನ್ನ ಜನತೆ ಮಾಡಿದ ಪಿ ಎಚ್ ಡಿ ಯನ್ನು ದೇಶ ನಿರ್ಮಾಣಕ್ಕೆ ಬಳಸುತ್ತದೆ. ಆದರೆ ನಮ್ಮಲ್ಲಿ ಅದರ ಸಂಗ್ರಹವನ್ನೇ ಮಾಡೋದಿಲ್ಲ. ಗುಣಾತ್ಮಕ ಸಂಶೋಧನೆಗೆ ಪ್ರಾಮುಖ್ಯತೆ ಕೊಡಬೇಕು. ಶಿಕ್ಷಣ ಎನ್ನುವುದು ಮನಿ ಮೇಕಿಂಗ್ ಮೆಶಿನ್ ಆಗದೇ ಮ್ಯಾನ್ ಮೇಕಿಂಗ್ ಮೆಶಿನ್ ಆಗಬೇಕು. ನಮ್ಮ ಶಿಕ್ಷಣ ಪದ್ದತಿಯ ಆಧುನೀಕರಣವಾಗಬೇಕು, ಪಾಶ್ಚಾತ್ಯೀಕರಣವಲ್ಲ. ವಿಶ್ವಕ್ಕೆ ಇಂದು ಅಗತ್ಯವಿರುವುದು ಶಿಕ್ಷಕರು ಹಾಗೂ ನರ್ಸ್ ಗಳು.

ಶಿಕ್ಷಕರನ್ನು ರಫ್ತು ಮಾಡಿದರೆ ನಮ್ಮ ದೇಶದ ಸಂಸ್ಕೃತಿಯೂ ಅಲ್ಲಿಗೆ ಹರಿಯುತ್ತೆ.” ಎಂದು ಚಿಂತನಾ ಸರಣಿ ಹರಿಬಿಡುವ ನರೇಂದ್ರ ಮೋದಿ ದೇಶದ ಇತರ ರಾಜಕಾರಣಿಗಳು ಯೋಚಿಸಿಯೇ ಇಲ್ಲದಿದ್ದಾಗ್ಯೂ ಹೇಗೆ ಕಾಲದ ಬದಲಾವಣೆಯೊಂದಿಗೆ ಭಾರತದ ಔನ್ನತ್ಯವನ್ನು ಸಾಧಿಸಲು ಹೆಜ್ಜೆ ಹಾಕುತ್ತಿದ್ದಾರೆ ಅನ್ನುವುದನ್ನು ಸೂಚಿಸುತ್ತದೆ. ಅಗಾಧ ನೆನಪಿನ ಶಕ್ತಿ, ದೂರದೃಷ್ಟಿ, ತತ್ವಕ್ಕೆ ಬದ್ಧತೆ ಹೀಗೆ ಒಬ್ಬ ನಾಯಕನಿರಬೇಕಾದ ಎಲ್ಲ ಗುಣಗಳು ಮೋದಿಯಲ್ಲಿದೆ.ದೂರದೃಷ್ಟಿಯ ಯೋಜನೆಗಳು ಹಾಗೂ ಅವುಗಳ ಸಮರ್ಪಕ ಅನುಷ್ಟಾನ, ಕಾರ್ಯಕ್ಷೇತ್ರದಲ್ಲಿನ ಕ್ಷಿಪ್ರತೆ, ಸರ್ವರೊಂದಿಗೆ ಸಮಗ್ರ ವಿಕಾಸ ಎಂಬ ಧೋರಣೆ, ಕಾಲದ ಬದಲಾವಣೆಗೆ ಹೊಂದಿಕೊಂಡು ಸಾಮಾನ್ಯ ಜನರೊಂದಿಗೆ ಒಡನಾಡುತ್ತಾ ಸಾಮಾನ್ಯನಂತೆ ಸರ್ವರಿಗೂ ಸರ್ವ ಕಾಲಕ್ಕೂ ಒದಗಬಲ್ಲ ವ್ಯಕ್ತಿತ್ವ, ನಿರ್ಧಾರದಲ್ಲಿನ ಧೃಡತೆ, ಅನುಷ್ಟಾನದಲ್ಲಿನ ಕಟ್ಟುನಿಟ್ಟು, ಮನಸ್ಸಿನೊಳಗಿನ ಮುಗ್ಧತೆ, ಶುದ್ಧ ಹಸ್ತ, ತನ್ನ ದೇಶದ ಗತವೈಭವದ ಬಗೆಗಿನ ಜ್ಞಾನ, ದೇಶಕ್ಕಾಗಿ ಕೆಲಸ ಮಾಡಬೇಕೆಂಬ ತುಡಿತ ಇವೇ ನರೇಂದ್ರ ಮೋದಿಯವರನ್ನು ಇತರೆಲ್ಲಾ ರಾಜಕಾರಣಿಗಳಿಗಿಂತ ಭಿನ್ನವಾಗಿ ಗುರುತಿಸುವಂತೆ ಮಾಡಿದ್ದು. ಪ್ರತ್ಯಕ್ಷ ಕಂಡು ಪರಾಂಬರಿಸಿ ನೋಡಿದ ಮೇಲೂ ನಮೋ ಎನ್ನದಿದ್ದರೆ ನೀವು ಭಾರತೀಯರೇ?

Advertisements
8 ಟಿಪ್ಪಣಿಗಳು Post a comment
  1. ಏಪ್ರಿಲ್ 15 2014

    ಭಾರತದ ಪ್ರತಿಯೊಂದು ರಾಜ್ಯಕ್ಕೂ ಬೇಕು ಇಂತಹ ಒಬ್ಬ ಮುಖ್ಯಮಂತ್ರಿ
    ಆಗ ಭಾರತ ಆಗುವುದು ರಾಮರಾಜ್ಯ

    2014ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಜನರು ‘ನರೇಂದ್ರ’ನನ್ನೇ ಆರಿಸುವರು
    ನರೇಂದ್ರನು ಮುನ್ನಡೆಸುವನು ಭಾರತವನ್ನು ನವದಿಗಂತದತ್ತ

    ನಮೋ ಎನ್ನೋಣ
    ಭಾರತವನ್ನು ಪರಮವೈಭವಕ್ಕೆ ಒಯ್ಯೋಣ

    ಉತ್ತರ
    • Nagshetty Shetkar
      ಏಪ್ರಿಲ್ 17 2014

      ನಿಮ್ಮ ರಾಮರಾಜ್ಯ ನಾಡಿನ ದಲಿತರಿಗೆ, ಶೂದ್ರರಿಗೆ, ಅಲ್ಪಸಂಖ್ಯಾತರಿಗೆ, ದೀನರಿಗೆ, ಸ್ತ್ರೀಯರಿಗೆ, ಅಬಲರಿಗೆ, ಲೈಂಗಿಕ ಅಲ್ಪಸಂಖ್ಯಾತರಿಗೆ ಜೀವಂತ ನರಕವೇ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ! ನಮೋಸುರನ ಪಾದತಳದಲ್ಲಿ ಬಾಲವಾಡಿಸುತ್ತಾ ಮಾಂಸದ ಚೂರಿಗೆ ಎಂಜಲು ಸುರಿಸುತ್ತಿರುವ ಸೇವಕರೇ ನಿಮ್ಮ ರಾಮರಾಜ್ಯದ ಕನಸನ್ನು ನನಸಾಗಲು ಭಾರತದ ಪ್ರಜ್ಞಾವಂತರು ಬಿಡುವುದಿಲ್ಲ. ಆಪ್ ಎಂಬ ಚಂಡಮಾರುತ ನಮೋಸುರನ ಅಲೆಯನ್ನು ಕೊಚ್ಚಿಕೊಂಡು ಹೋಗಲಿದೆ. ನೋಡುತ್ತಿರಿ.

      ಉತ್ತರ
      • ವಿಜಯ್ ಪೈ
        ಏಪ್ರಿಲ್ 17 2014

        ಭಾ.ಪ್ರ.ಗಂ = ಭಾರತದ ಪ್ರಜ್ಞಾವಂತ ಗಂಜಿಗಿರಾಕಿಗಳು
        [ಆಪ್ ಎಂಬ ಚಂಡಮಾರುತ ನಮೋಸುರನ ಅಲೆಯನ್ನು ಕೊಚ್ಚಿಕೊಂಡು ಹೋಗಲಿದೆ. ನೋಡುತ್ತಿರಿ.]
        ಮೊದಲು ನಿಮ್ಮ ಅಂಗಡಿಯ ಮೇಲೆ ತೂಗುತ್ತಿರುವ ‘ಕಾಂಗೈ ಪ್ರಾಯೋಜಿತ ತಾತ್ಕಾಲಿಕ ಗಂಜಿ ಕೇಂದ್ರ’ ಎನ್ನುವ ಬೋರ್ಡ ತೆಗೆದು, ಆಮೇಲೆ ಆಪ್ ಪ್ರಚಾರ ಸುರು ಹಚ್ಚಿಕೊಳ್ಳಿ. ಗೊಂದಲಗೊಳ್ಳಬೇಡಿ..ಗೊಂದಲ ಮಾಡಬೇಡಿ!

        ಉತ್ತರ
        • Nagshetty Shetkar
          ಏಪ್ರಿಲ್ 17 2014

          ಮತ್ತದೇ ಅಸಹ್ಯಕರ ಅಪಹಾಸ್ಯದ ಮಾತುಗಳು! ನೀವೆಂತಹ ಜನರಿರಬಹುದು ಅಂತ ನಿಮ್ಮ ಮಾತುಗಳೇ ಸಾರಿ ಹೇಳುತ್ತಿವೆ ಮಿ. ವಿಜಯ್.

          ಉತ್ತರ
          • Nagshetty Shetkar
            ಏಪ್ರಿಲ್ 17 2014

            ಮಿ. ವಿಜಯ್, ಅವಧಿಯ ಚರ್ಚೆಯಲ್ಲೂ ನೀವು ಇಷ್ಟೇ ಅಸಭ್ಯ ಭಾಷೆ ಬಳಸಿ ಪದೇ ಪದೇ ಅವಹೇಳನ ಮಾಡುತ್ತಿದ್ದರೂ ನಿಮ್ಮ ಪ್ರಶ್ನೆಗಳಿಗೆ ದರ್ಗಾ ಸರ್ ಬಹಳ ಸಂಯಮದಿಂದ ಅತ್ಯಂತ ಸಮಂಜಸ ಉತ್ತರಗಳನ್ನು ನೀಡಿದರು. ಅವರಿಂದ ಸ್ವಲ್ಪವಾದರೂ ಕಲಿಯಿರಿ ಮಿ. ವಿಜಯ್.

            ಉತ್ತರ
            • ವಿಜಯ್ ಪೈ
              ಏಪ್ರಿಲ್ 18 2014

              [ನಮೋಸುರನ ಪಾದತಳದಲ್ಲಿ ಬಾಲವಾಡಿಸುತ್ತಾ ಮಾಂಸದ ಚೂರಿಗೆ ಎಂಜಲು ಸುರಿಸುತ್ತಿರುವ ಸೇವಕರೇ]
              ಇದು ‘ಶರಣ’ ರ ಸುಸಂಸ್ಕೃತ ಭಾಷೆ ಎಂದು ಗೊತ್ತಿರಲಿಲ್ಲ!. ಕನ್ನಡಿ ಇದೆಯೇ ಮನೆಯಲ್ಲಿ??

              ಉತ್ತರ
              • Nagshetty Shetkar
                ಏಪ್ರಿಲ್ 18 2014

                ಸತ್ಯವನ್ನೇ ಕಾವ್ಯದ ಭಾಷೆಯಲ್ಲಿ ಹೇಳಿದ್ದೇನೆ ಮಿ. ವಿಜಯ್.

                ಉತ್ತರ
  2. valavi
    ಏಪ್ರಿಲ್ 15 2014

    +100000000

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Note: HTML is allowed. Your email address will never be published.

Subscribe to comments