Skip to content

ಏಪ್ರಿಲ್ 17, 2014

5

ಕಾಂಗ್ರೆಸ್ ರಹಿತ ಭಾರತ ಸಾಧ್ಯವೇ?

by Dr Ashok K R

– ಡಾ.ಅಶೋಕ್. ಕೆ. ಆರ್

indian-politician1‘ಯಥಾಸ್ಥಿತಿಗೋ ಬದಲಾವಣೆಗೋ ಸ್ಥಿರತೆಗೋ ಅಭಿವೃದ್ಧಿಗೋ ಸ್ಥಳೀಯ ಅನಿವಾರ್ಯತೆಗೋ ಮತ್ತೊಂದಕ್ಕೋ ಮಗದೊಂದಕ್ಕೋ ಒಟ್ಟಿನಲ್ಲಿ ಹೋಗಿ ವೋಟ್ ಮಾಡಿ!’

ಮೋದಿ ಜಪದ ಭಾಜಪ ಕಾಂಗ್ರೆಸ್ಸನ್ನು ಭಾರತದಿಂದ ಸಂಪೂರ್ಣ ನಿರ್ನಾಮವಾಗಿಸುವುದೇ ನಮ್ಮ ಗುರಿ ಎಂದು ಬಹಳಷ್ಟು ಪ್ರಚರಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಏಳಿಗೆಯಿಂದ ರಾಷ್ಟ್ರೀಯ ಪಕ್ಷಗಳೆನ್ನಿಸಿಕೊಂಡ ಕಾಂಗ್ರೆಸ್ ಮತ್ತು ಭಾಜಪ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲೂ ಎಣಗುತ್ತಿರುವ ಪರಿಸ್ಥಿತಿಯಿದೆ. ಒಂದಷ್ಟು ರಾಜ್ಯಗಳಲ್ಲಿ ಭಾಜಪ ಪ್ರಭಾವಶಾಲಿಯಾಗಿ ಮಗದೊಂದಷ್ಟು ಕಡೆ ಕಾಂಗ್ರೆಸ್ ಪ್ರಭಾವಶಾಲಿಯಾಗಿ ಮತ್ತೊಂದು ಪಕ್ಷದ ಏಳಿಗೆಗೆ ಅಡ್ಡಿಯಾಗಿದ್ದರೆ ಇನ್ನುಳಿದವುಗಳಲ್ಲಿ ಮತದಾರ ಒಮ್ಮೆ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾಜಪಕ್ಕೆ ಅವಕಾಶ ನೀಡುವ ಮನಸ್ಸು ಮಾಡಿದ್ದಾನೆ.
ಕಾಂಗ್ರೆಸ್ಸಿಗರು ಮಾಡುವ ಭ್ರಷ್ಟಾಚಾರದಿಂದ ರೋಸಿ ಹೋಗಿ ಬೇರೊಂದು ಪಕ್ಷಕ್ಕೆ ಮತ ಹಾಕುವ ಜನರ ತೀರ್ಮಾನ ಬಹಳಷ್ಟು ಸಲ ಬೆಂಕಿಯಿಂದ ಬಾಣಲೆಗೆ ಹಾಕಿಸಿಕೊಂಡಂತೆ ಆಗುತ್ತಿದೆ. ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಲು ಹೊರಟು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಮಯದಲ್ಲಿ ದೇಶಾದ್ಯಂತ ಕಾಂಗ್ರೆಸ್ ವಿರೊಧಿ ಅಲೆ ಎದ್ದು ತುರ್ತು ಪರಿಸ್ಥಿತಿಯ ನಂತರದಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಆರಿಸಿ ಬಂದು ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾದರು. ಜನತಾ ಪಕ್ಷದ ಆಂತರಿಕ ಕಚ್ಚಾಟಗಳು (ಜನತಾ ಪಕ್ಷದವರು ಸತತವಾಗಿ ಕಿತ್ತಾಡಿಕೊಳ್ಳುತ್ತಲೇ ದೇಶಾದ್ಯಂತ ಅನೇಕ ಚೂರು ಚೂರುಗಳಾಗಿ ಒಡೆದುಹೋಗಿದ್ದಾರೆ. ಇನ್ನೂ ಕಿತ್ತಾಡುತ್ತಲೇ ಇದ್ದಾರೆ!), ಆಡಳಿತಾವಧಿಯನ್ನು ಕಾಂಗ್ರೆಸ್ ನಾಯಕರ ಹರಣಕ್ಕಾಗಿಯೇ ಹೆಚ್ಚು ಬಳಸಿಕೊಂಡಿದ್ದು, ಜನತಾ ಪಕ್ಷದ ಬೇಗುದಿಯನ್ನು ರಾಜಕೀಯವಾಗಿ ಬಳಸಿಕೊಂಡ ಕಾಂಗ್ರೆಸ್ – ಇವೆಲ್ಲವೂ ಕಾರಣಗಳಾಗಿ ಜನತಾ ಪಕ್ಷ ಅಧಿಕಾರ ಕಳೆದುಕೊಂಡು ಮತ್ತೆ ತುರ್ತು ಪರಿಸ್ಥಿತಿ ಹೇರಿ ಜನವಿರೋಧಿ ಎಂಬ ಪಟ್ಟ ಪಡೆದುಕೊಂಡಿದ್ದ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದು ಇಂದಿರಾ ಗಾಂಧಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿಬಿಟ್ಟರು! ಇಂದಿರಾ ಗಾಂಧಿ ಹತ್ಯೆಯ ನಂತರ ಹುಟ್ಟಿದ ಅಲೆಯಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಜಯ ಸಾಧಿಸಿ ರಾಜೀವ್ ಗಾಂಧಿ ಪ್ರಧಾನಿಯಾದರು. ರಾಜೀವ್ ಹತ್ಯೆಯ ನಂತರ ಜನತಾ ಪರಿವಾರದ ವಿ.ಪಿ.ಸಿಂಗ್, ಚಂದ್ರಶೇಖರ್ ಕೆಲವು ಕಾಲ ಪ್ರಧಾನಿ ಮಂತ್ರಿಯಾದರೂ ಕಾಂಗ್ರೆಸ್ ಬೆಂಬಲಿತ ಸರಕಾರಗಳು ಹೆಚ್ಚು ಕಾಲ ಬಾಳಲು ಕಾಂಗ್ರೆಸ್ ಬಿಡಲಿಲ್ಲ. ಕಾಂಗ್ರೆಸ್ಸಿಗೆ ಮತ್ತೆ ಬಹುಮತ ದೊರೆತು ಪಿ.ವಿ.ನರಸಿಂಹರಾವ್ ಐದು ವರುಷ ಆಡಳಿತ ನಡೆಸಿದರು. ಹಗರಣಗಳು ಕಾಂಗ್ರೆಸ್ಸಿನ ಪ್ರತಿ ಸರಕಾರದ ಹಕ್ಕು ಎಂಬಂತೆ ಕಂಡುಬರುತ್ತಿದ್ದವು. ಕೆಲವೇ ದಿನಗಳಿಗೆ ಅಟಲ್ ಬಿಹಾರಿ ವಾಜಪೇಯಿ, ನಂತರ ಎರಡು ವರುಷ ಕಾಂಗ್ರೆಸ್ಸಿನ ಬೆಂಬಲದೊಂದಿಗೆ ದೇವೇಗೌಡ ಮತ್ತು ಗುಜ್ರಾಲ್ ಪ್ರಧಾನಮಂತ್ರಿಯಾದರು. ಬೆಂಬಲ ನೀಡಿಯೂ ಕಾಂಗ್ರೆಸ್ ನೀಡುತ್ತಿದ್ದ ಕಾಟದಿಂದ ಒಂದಷ್ಟು ಒಳ್ಳೆ ಕೆಲಸ ಮಾಡುತ್ತಿದ್ದ ಈರ್ವರೂ ರಾಜೀನಾಮೆ ನೀಡಿಬಿಟ್ಟರು. ಇಷ್ಟರಲ್ಲಿ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಗಳಿಸುತ್ತ ಲೋಕಸಭಾ ಚುನಾವಣೆಗಳಲ್ಲೂ ಪ್ರಾಬಲ್ಯ ಮೆರೆಯಲಾರಂಭಿಸಿದ ಮೇಲೆ ಇನ್ನು ಮುಂದೆ ಸ್ವತಂತ್ರವಾಗಿ ಸರಕಾರ ರಚಿಸುವುದು ಅಸಾಧ್ಯವಾದ ಮಾತು ಎಂಬ ಸತ್ಯದ ಅರಿವು ಮೂಡಿದ ‘ರಾಷ್ಟ್ರೀಯ’ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮತ್ತು ಚುನಾವಣಾ ನಂತರ ಹೊಂದಾಣಿಕೆ ಮಾಡಿಕೊಳ್ಳಲು ಪ್ರಾರಂಭಿಸಿದವು. ಆಗ ರಚಿತವಾದದ್ದೇ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ. ಕಾಂಗ್ರೆಸ್ಸಿನ ವಂಶಾಡಳಿತ, ಅದರ ಭ್ರಷ್ಟಾಚಾರವನ್ನು ವಿರೋಧಿಸುತ್ತ, ಕಾಂಗ್ರೆಸ್ ಮುಸ್ಲಿಮರನ್ನು ಮತ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸುತ್ತಾ ಬೆಳೆದ ಭಾಜಪ Party With a Difference ಎಂದೇ ಪ್ರಸಿದ್ಧಿಯಾಗಿತ್ತು. ನಂತರದ ಚುನಾವಣೆಯಲ್ಲಿ ‘india shining’ ಎಂಬ ಅಬ್ಬರದ ಪ್ರಚಾರದೊಂದಿಗೆ ಚುನಾವಣೆಗಿಳಿದ ಭಾಜಪಕ್ಕೆ ಸ್ವಂತ ಬಲದಿಂದ ಆಡಳಿತದ ಚುಕ್ಕಾಣಿಯಿಡಿಯುವ ಭರವಸೆ ಇತ್ತಾದರೂ ಹೋಯಿತು ಎನ್ನುವ ಭಾವನೆ ಮೂಡಿದಾಗೆಲ್ಲ ಆ ಚುನಾವಣೆಯಲ್ಲೋ ಮುಂದಿನ ಚುನಾವಣೆಯಲ್ಲೋ ಮತ್ತೆ ಮೈಕೊಡವಿ ಕಾಂಗ್ರೆಸ್ ಎದ್ದು ನಿಲ್ಲುವುದಕ್ಕೇನು ಕಾರಣ? ಹೋಗಲಿ ಕಾಂಗ್ರೆಸ್ ಯಶಸ್ವಿ ವಿರೋಧಿ ಪಕ್ಷವಾಗಿ ಕಾರ್ಯನಿರ್ವಹಿಸಿ ಜನರ ಮನ ಗೆಲ್ಲುತ್ತದಾ? ಅದೂ ಇಲ್ಲ. ಹಾಗಿದ್ದರೆ ಕಾಂಗ್ರೆಸ್ ಮತ್ತೆ ಮತ್ತೆ ಗೆಲ್ಲಲು ಕಾರಣವೇನು?

ಬಹುಮುಖ್ಯ ಕಾರಣ ಕಾಂಗ್ರೆಸ್ಸನ್ನು, ಅದರ ಕಾರ್ಯವೈಖರಿಯನ್ನು, ಅದರ ನೀತಿಗಳನ್ನು ವಿರೋಧಿಸಿ ಗೆದ್ದವರೆಲ್ಲ ಕಾಲ ಸವೆದ ಹಾಗೆಲ್ಲ ಕಾಂಗ್ರೆಸ್ಸಿಗರಂತೆಯೇ ಆಗಿ ಹೋಗಿದ್ದು. ಕೆಲವೊಮ್ಮೆ ಕಾಂಗ್ರೆಸ್ಸನ್ನೂ ಮೀರಿ ಹೋಗಿದ್ದು. ಕಾಂಗ್ರೆಸ್ಸಿನ ವಂಶಾಡಳಿತವನ್ನು ವಿರೋಧಿಸುತ್ತಲೇ ಬೆಳೆದ ಜನತಾ ಪರಿವಾರದ ಬಹಳಷ್ಟು ಪಕ್ಷಗಳಲ್ಲಿ ಇವತ್ತು ವಂಶಾಡಳಿತದ್ದೇ ಕಾರುಬಾರು. ದೇವೇಗೌಡ, ಲಾಲೂ ಪ್ರಸಾದ್ ಯಾದವರ ಪಕ್ಷಗಳೇ ಸಾಕು ಇವರ ವಂಶಾಡಳಿತದ ಸಾಕ್ಷ್ಯಕ್ಕೆ. ಇನ್ನು ಕಾಂಗ್ರೆಸ್ಸಿನ ಹೈಕಮಾಂಡ್ ಸಂಸ್ಕೃತಿ, ಏಕ ವ್ಯಕ್ತಿ ಪ್ರದರ್ಶನವನ್ನು ವಿರೋಧಿಸಿದ ಪಕ್ಷಗಳಲ್ಲೂ ಅದೇ ಸಂಸ್ಕೃತಿ ನೆಲೆಯೂರಿತು, ಭಾಜಪದಲ್ಲಿ ಈ ಬಾರಿ ನೆಲೆಯೂರುತ್ತಿರುವಂತೆ, ಹೊಸ ಪಕ್ಷ ಎಎಪಿಯಲ್ಲೂ ಕಾಣಲಾರಂಭಿಸಿರುವಂತೆ. ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುತ್ತದೆ ಎಂದಬ್ಬರಿಸುವ ಭಾಜಪ ಹಿಂದೂ ಓಲೈಕೆಗೆ ತೊಡಗಿದ್ದು ಮತಬ್ಯಾಂಕಿನ ಮೇಲೆ ಕಣ್ಣಿಡುವ ಪಕ್ಷಗಳು ಕಾರ್ಯನಿರ್ವಹಿಸುವ ರೀತಿಯನ್ನು ತಿಳಿಸಿತು. ಇನ್ನು ಭ್ರಷ್ಟಾಚಾರದ ಬಗೆಗಿನ ಮಾತು. ಭ್ರಷ್ಟಾಚಾರವೆಂಬುದು ಕಾಂಗ್ರೆಸ್ಸಷ್ಟೇ ಅಲ್ಲದೆ ಎಲ್ಲ ಪಕ್ಷಗಳ ಸದಸ್ಯರೂ ಮಾಡುತ್ತಿರುವ ಅನಾಚಾರ. ಭ್ರಷ್ಟಾಚಾರ ಹಣದ ಮೌಲ್ಯದಿಂದ ದೊಡ್ಡದು ಚಿಕ್ಕದು ಎಂದೆನ್ನಿಸಬಹುದೇ ಹೊರತು ಬಹುತೇಕರು ಭ್ರಷ್ಟರೇ. ಮತ್ತೀ ಭ್ರಷ್ಟತೆ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗದೆ ಜನರಲ್ಲೂ ಹಬ್ಬಿ ಬಿಟ್ಟಿದೆ. ಸರಕಾರೀ ಕೆಲಸದಲ್ಲಿರುವವರಿಗೆ ‘Income ಚೆನ್ನಾಗಿರಬೇಕು?’ ಎಂದು ಕೇಳುವುದು ಇಂದು ಅವಮಾನದ ವಿಷಯವಾಗಿಲ್ಲ. ಇವತ್ತಿನ ಮಟ್ಟಿಗೆ ನಮಗೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ತನ್ನ ಹತ್ತು ವರುಷದ ಆಡಳಿತಾವಧಿಯಲ್ಲಿ ನಡೆಸಿದ ಹಗರಣಗಳು ಎದ್ದು ಕಾಣುತ್ತಿವೆಯಷ್ಟೇ. ವಾಜಪೇಯಿ ಸರಕಾರದ ಕಾಲದಲ್ಲೂ ನಡೆದ ಶವಪೆಟ್ಟಿಗೆ ಹಗರಣ, ಹುಡ್ಕೋ ಹಗರಣಗಳು ಸದ್ಯಕ್ಕೆ ಮರೆಯಾಗಿಹೋಗಿವೆ. ಬಂಗಾರು ಲಕ್ಷಣ್ ಹಣ ಪಡೆದಿದ್ದೂ ಮರೆತುಹೋಗಿದೆ. ಮುಂದಿನ ಸರಕಾರದಲ್ಲಿ ಮತ್ತೊಂದು ದೊಡ್ಡ ಹಗರಣ ನಡೆದುಬಿಟ್ಟರೆ ಯು.ಪಿ.ಎ ನಡೆಸಿದ ಹಗರಣಗಳೂ ಮರೆತುಹೋಗುವಷ್ಟು ನಾವು ಮತ್ತು ನಮ್ಮ ವ್ಯವಸ್ಥೆ ಜಡಗಟ್ಟಿದೆ. ಕಾಂಗ್ರೆಸ್ಸಿಗೆ ಯಾಕೆ ಕೊನೆಯಿಲ್ಲ ಎಂಬುದಕ್ಕೆ ಕರ್ನಾಟಕ ರಾಜಕೀಯ ಮತ್ತೊಂದು ಉತ್ತಮ ಉದಾಹರಣೆ. ತಡಿಯಪ್ಪ ಒಂದು ಸಲ ಭಾಜಪಕ್ಕೆ ಅವಕಾಶ ಕೊಡೋಣ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ನಿರ್ಧರಿಸಿದ ಜನತೆ ಭಾಜಪವನ್ನು ಬಹುಮತದ ಸಮೀಪಕ್ಕೆ ಕರೆತಂದರು. ನಂತರದ ಐದು ವರುಷಗಳು ಕರ್ನಾಟಕ ಕಂಡಿದ್ದು ಅಪಸವ್ಯದ ಅಪಹಾಸ್ಯದ ರಾಜಕೀಯ. ಈ ಸಮಯದಲ್ಲೂ ಅಧಿಕೃತ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಅದೆಲ್ಲೋ ಒಮ್ಮೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದು ಹೊರತುಪಡಿಸಿದರೆ ನಿಷ್ಕ್ರಿಯವಾಗಿಯೇ ಇತ್ತು. ಕಾರಣಗಳೇನೇ ಇದ್ದರೂ ಕುಮಾರಸ್ವಾಮಿ ವಿರೋಧ ಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡಿದರು, ಕೊನೇಪಕ್ಷ ಯಡಿಯೂರಪ್ಪ ಆಡಳಿತದಲ್ಲಿರುವವರೆಗೆ. ಭ್ರಷ್ಟಾಚಾರಕ್ಕೆ, ಅನಾಚಾರಕ್ಕೆ ಕೊನೆಯಿರಲಿಲ್ಲ, ವಂಶಾಡಳಿತ ವಿರೋಧಿಸುತ್ತಿದ್ದ ಭಾಜಪದಲ್ಲೂ ಮಕ್ಕಳಿಗೆ ಸಂಬಂಧಿಕರಿಗೆ ರಾಜಕೀಯ ಆಶ್ರಯ ಕಲ್ಪಿಸುವ ಕಾರ್ಯ ಪ್ರಾರಂಭವಾಯಿತು. ಇವೆಲ್ಲವುಗಳಿಂದ ಬೇಸತ್ತ ಜನ, ಹೆಚ್ಚೇನೂ ಪ್ರಯತ್ನಪಡದಿದ್ದರೂ ಕಾಂಗ್ರೆಸ್ಸನ್ನು ಸರಳ ಬಹುಮತದೊಂದಿಗೆ ಮತ್ತೆ ಆರಿಸಿತು.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ದಟ್ಟವಾಗಿದೆ. ಮೋದಿ ಅಲೆ(ಮುರಳಿ ಮನೋಹರ ಜೋಶಿಯವರ ಪ್ರಕಾರ ಅದು ಮೋದಿ ಅಲೆಯಲ್ಲ, ಭಾಜಪ ಅಲೆ!) ಕಾಂಗ್ರೆಸ್ ವಿರೋಧಿ ಅಲೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಮೋದಿ ಮತ್ತು ಭಾಜಪದ ಹಿಂದೂ ಮತಬ್ಯಾಂಕ್ ಓಲೈಕೆಯ ರಾಜಕಾರಣವನ್ನು ಒಪ್ಪದವರೂ ಎಲ್ಲೋ ಒಂದೆಡೆ ‘ಈ ಮೋದಿ ಅಷ್ಟೊಂದು ಅಭಿವೃದ್ಧಿ ಮಾಡಿದ್ದಾನೆ ಅಂತಾರೆ. ಒಂದು ಅವಕಾಶ ಕೊಡಬಹುದೇನೋ’ ಎಂಬ ಭಾವನೆ ಬೆಳೆಸಿಕೊಂಡಿರುವುದೂ ಸುಳ್ಳಲ್ಲ. ಆದರೆ ಭಾಜಪದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಇತ್ತೀಚಿನ ಭಾಷಣಗಳು, ಭಾಜಪದ ಚುನಾವಣಾ ಪ್ರಣಾಳಿಕೆ ಹೆಚ್ಚು ಬದಲಾವಣೆಗಳನ್ನು ನಿರೀಕ್ಷೆ ಮಾಡವುದು ತಪ್ಪು ಎಂಬುದನ್ನು ಮನದಟ್ಟು ಮಾಡಿಸುತ್ತಿವೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಮಾರಕಕ್ಕೆ ಪ್ರತೀ ಊರಿನಿಂದ ಕಬ್ಬಿಣ ಕೊಡಿ ಎಂದು ಹೇಳಿದ್ದು ದಶಕಗಳ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ಮನೆಯಿಂದಲೂ ಒಂದು ಇಟ್ಟಿಗೆ ಕೊಡಿ ಎಂದು ಜನರನ್ನು ಮರಳು ಮಾಡಿದಂತೆಯೇ ಕೇಳಿಸುತ್ತದೆ. ಜೊತೆಗೆ ಸಾವಿರಾರು ಕೋಟಿಯ ಪ್ರತಿಮೆಯ ಉದ್ದೇಶವಾದರೂ ಏನು? ಕಾಂಗ್ರೆಸ್ಸಿನ ಏಕವ್ಯಕ್ತಿ ಪ್ರದರ್ಶನವನ್ನು ವಿರೋಧಿಸುವ ಭಾಜಪದಲ್ಲಿ ಈಗ ನರೇಂದ್ರ ಮೋದಿಯದೇ ಜಪ! ಅಬ್ ಕೀ ಬಾರ್ ಮೋದಿ ಸರ್ಕಾರ್, ಬದಲಾವಣೆಗೆ ಮೋದಿ ಸರ್ಕಾರ ಎಂಬುದು ಏಕವ್ಯಕ್ತಿ ಪ್ರದರ್ಶನದ ಪ್ರಾರಂಭಿಕ ರೂಪವಷ್ಟೆ. ಮೋದಿ ಪ್ರಧಾನಿಯಾಗುವ ಸಲುವಾಗಿ ಸ್ಥಳೀಯವಾಗಿ ಅನುಪಯುಕ್ತ ವ್ಯಕ್ತಿಯನ್ನು ಆರಿಸಿಬಿಟ್ಟರೆ ಕ್ಷೇತ್ರಕ್ಕಾಗುವ ಲಾಭವೇನು ಎಂದು ಮತದಾರ ಯೋಚಿಸದೆ ಇರಲಾರ. ‘ಗುಜರಾತ್ ಅಭಿವೃದ್ಧಿಯ’ ಹರಿಕಾರನ ಮಾತುಗಳು ಭಾರತದ ಇನ್ನುಳಿದ ರಾಜ್ಯಗಳೆಲ್ಲ ದರಿದ್ರವಾದಂತವು ಎಂಬ ಭಾವ ಸೂಚಿಸುತ್ತಿರುವುದು ಕೂಡ ಮೋದಿಯನ್ನು ಒಂದಷ್ಟು ಅನುಮಾನದಿಂದ ನೋಡುವಂತೆ ಮಾಡಿವೆ. ಗುಜರಾತ್ ಆಸ್ಮಿತೆಯ ಬಗ್ಗೆ ಹಿಂದೊಮ್ಮೆ ಹೇಳಿದ್ದ ಮೋದಿ ಉಳಿದ ರಾಜ್ಯಗಳವರಿಗೂ ಒಂದು ಆಸ್ಮಿತೆ ಇರುತ್ತದೆ ಎಂಬುದನ್ನು ಮರೆತುಬಿಟ್ಟರೇನೋ. ವೈಯಕ್ತಿಕ ದೋಷಾರೋಪಗಳಿಗಷ್ಟೇ ಸೀಮಿತವಾಗುತ್ತಿರುವ ಮೋದಿಯ ಮಾತುಗಳು ಅವರು ಒಂದು ವೇಳೆ ಅಧಿಕಾರಕ್ಕೆ ಬಂದರೆ ನಿಜಕ್ಕೂ ಬದಲಾವಣೆ ತರಬಲ್ಲರಾ ಎಂಬುದರ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿಬಿಟ್ಟಿವೆ.

ಅನ್ಯ ಪಕ್ಷಗಳ ಈ ರೀತಿಯ ದುರಾಚಾರಗಳೇ ಕಾಂಗ್ರೆಸ್ಸನ್ನು ಮತ್ತೆ ಮತ್ತೆ ಅಧಿಕಾರದ ಹತ್ತಿರಕ್ಕೆ ತಂದಿವೆ. “ಜನ ಎಲೆಕ್ಷನ್ ಹಿಂದಿನ ದಿನದವರೆಗೂ ಬಿಜೆಪಿಗೋ ದಳಕ್ಕೋ ವೋಟ್ ಹಾಕೋಣ ಅಂದುಕೊಂಡಿರ್ತಾರೆ. ಬೆಳಿಗ್ಗೆ ಏಳುತ್ತಿದ್ದಂತೆ ‘ಅಯ್ಯೋ ಅವರೇನೂ ಸಾಚಾಗಳಾ ಅವರಿಗಿಂತ ಇವರೇ ವಾಸಿಯೇನೋ’ ಎಂದುಕೊಂಡು ಅದ್ಯಾವುದೋ ಮ್ಯಾಜಿಕ್ಕಿಗೆ ಒಳಗಾಗಿ ಮತ್ತೆ ಹೋಗಿ ಕಾಂಗ್ರೆಸ್ಸಿಗೇ ವೋಟ್ ಹಾಕಿ ಬಿಡುತ್ತಾರೆ. ನಮ್ಮ ಮನೇಲೂ ಆ ರೀತಿ ಆಗೋದನ್ನು ನೋಡಿದ್ದೀನಿ. ನನಗೂ ಒಮ್ಮೊಮ್ಮೆ ಆ ರೀತಿ ಅನ್ನಿಸಿಬಿಡುತ್ತೆ” ಕಾಂಗ್ರೆಸ್ಸನ್ನು ವಿರೋಧಿಸುವ ಭಾಜಪದ ಬೆಂಬಲಿಗ ಗೆಳೆಯನೊಬ್ಬ ಹೇಳಿದ ಮಾತುಗಳು ಈ ಲೇಖನ ಬರೆಯಲು ಪ್ರೇರಣೆ.

ಚಿತ್ರ ಮೂಲ – lifearattle

Advertisements
5 ಟಿಪ್ಪಣಿಗಳು Post a comment
 1. M.A.Sriranga
  ಏಪ್ರಿಲ್ 17 2014

  ಅಶೋಕ್ ಅವರಿಗೆ — ನಮ್ಮ ಭಾರತದ ರಾಜಕೀಯದಲ್ಲಿ ಒಂದು ಪಕ್ಷದ ಮುಖ್ಯಮಂತ್ರಿ/ ಪ್ರಧಾನಿ ಮಾತ್ರ ಪ್ರಾಮಾಣಿಕರಾಗಿದ್ದರೆ ಸಾಲದು. ಅವರ ಮಂತ್ರಿ ಮಂಡಲದವರು ಶಾಸಕರು/ಸಂಸದರೂ ಅಷ್ಟೇ ಪ್ರಾಮಾಣಿಕರಾಗಿರಬೇಕಾಗುತ್ತದೆ. ಇದು ಒಂದು ಆದರ್ಶದ ಸ್ಥಿತಿ ಅಷ್ಟೇ. ನಮ್ಮ ಗುರಿ ಆ ಕಡೆ ಇರಬೇಕು. ಆದರೆ ಅದನ್ನು ಸಾಧಿಸುವುದು ಸುಲಭದ ಹಾದಿಯಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಾಂಗ್ರೆಸ್ಸ್ ನವರೇ a right person in a wrong party ಎಂದದ್ದು,ಈಗಲೂ ಹೇಳುವುದು ತಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ. ಅದಕ್ಕೆ person right ಆಗಿದ್ದರೆ party ಹೇಗೆ wrong ಆಗುತ್ತದೆ ಎಂದು ಅಟಲ್ ಅವರು ಟಾಂಗ್ ಕೊಟ್ಟಿದ್ದರು. ಇನ್ನು ಜಾರ್ಜ್ ಫರ್ನಾಂಡಿಸ್ ಅವರ ಬಳಿ ಒಂದೆರೆಡು ಜುಬ್ಬಾ ಪೈಜಾಮ ಮತ್ತು ಒಂದಷ್ಟು ಪುಸ್ತಕಗಳನ್ನು ಬಿಟ್ಟರೆ ಬೇರೆ ಆಸ್ತಿ ಇರಲಿಲ್ಲ. ಆದರೆ ಅಂತಹವರಿಗೂ ಅಪವಾದ ತಪ್ಪಲಿಲ್ಲ. ಈಗ ಮನಮೋಹನಸಿಂಗರ ಬಗ್ಗೆ ಎರಡು ಪುಸ್ತಕಗಳು ಬಂದಿವೆ. ಅವರ ಮೇಲಿನ ಅಪವಾದಗಳು “ಕಾಣದ ಕೈಗಳ” ಚಳಕದಿಂದ ಬಂದಿರುವ ಸಾಧ್ಯತೆಗಳೂ ಇವೆ. ಇನ್ನು ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆಯೇ ಭವಿಷ್ಯ ನುಡಿದು ಕಾಂಗ್ರೆಸ್ಸ್ ಬಿಟ್ಟರೆ ಭಾರತಕ್ಕೆ ಬೇರೆ ದಾರಿ ಇಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ?

  ಉತ್ತರ
  • Nagshetty Shetkar
   ಏಪ್ರಿಲ್ 17 2014

   ” ಜಾರ್ಜ್ ಫರ್ನಾಂಡಿಸ್ ಅವರ ಬಳಿ ಒಂದೆರೆಡು ಜುಬ್ಬಾ ಪೈಜಾಮ ಮತ್ತು ಒಂದಷ್ಟು ಪುಸ್ತಕಗಳನ್ನು ಬಿಟ್ಟರೆ ಬೇರೆ ಆಸ್ತಿ ಇರಲಿಲ್ಲ. ”

   ಸಮಾಜವಾದಿಗಳೇ ಹೀಗೆ. ದೀನದಲಿತರ ಅಭ್ಯುದಯವೇ ಸಮಾಜವಾದಿಗಳ ಧ್ಯೇಯ. ಪ್ರಗತಿಪರ ಚಿಂತನೆಯೇ ಸಮಾಜವಾದಿಗಳ ಆಸ್ತಿ. ನಮ್ಮ ಶಾಂತವೇರಿ ಗೋಪಾಲ ಗೌಡರೂ ಇಂಥವರೇ ಆಗಿದ್ದರು. ದರ್ಗಾ ಸರ್ ಅವರು ರಾಜಕಾರಣಿಯಲ್ಲ, ಆದರೆ ಅವರೂ ಸಮಾಜವಾದಿ ಶರಣರು. ಇಂಥವರಿಂದ ನಾವು ಸ್ಫೂರ್ತಿ ಪಡೆದು ಸಮಾನತೆಯ ಸಮಾಜವನ್ನು ಕಟ್ಟೋಣ. ಅದಕ್ಕಾಗಿಯಾದರೂ ಆಪ್ಗೆ ವೋಟು ಹಾಕಿ.

   ಉತ್ತರ
   • ವಿಜಯ್ ಪೈ
    ಏಪ್ರಿಲ್ 17 2014

    ಶಾಂತವೇರಿ ಗೋಪಾಲಗೌಡರೇ ದಯವಿಟ್ಟು ನಮ್ಮ ಈ ಸಾಹೇಬರನ್ನು ಕ್ಷಮಿಸಿ…ಬಟ್ಟಂಗಿತನನದ ಭ್ರಮೆಯಲ್ಲಿ ಪುಂಗಿ ಊದುವ ಕಾಯಕಕ್ಕೆ ಇಳಿದಿದ್ದಾರೆ. ತಪ್ಪಿ ಯಾರ್ಯಾರಿಗೊ ನಿಮ್ಮನ್ನು ಹೋಲಿಸುತ್ತಿದ್ದಾರೆ..ಇಷ್ಟು ಬಿಟ್ಟರೆ, ಮುಗ್ಧರು ಅವರು ! 🙂

    ಉತ್ತರ
 2. M.A.Sriranga
  ಏಪ್ರಿಲ್ 17 2014

  ಶೆಟ್ಕರ್ ಅವರಿಗೆ – ಜಾರ್ಜ್ ಫರ್ನಾಡಿಸ್ = ಕೇಜ್ರಿವಾಲ್ =ಆಪ್ ಎಂಬ ಈ ಸಮೀಕರಣ ಸರಿಯಿಲ್ಲ. ಅಶೋಕ್ ಅವರ ಕಾಂಗ್ರೆಸ್ಸ್ ರಹಿತ ಭಾರತ ಸಾಧ್ಯವೇ? ಎಂಬುದರ ಚರ್ಚೆಯನ್ನು ಬೇರೆ ಕಡೆ ಎಳೆಯುವುದು ಸರಿಯಿಲ್ಲ.

  ಉತ್ತರ
  • Nagshetty Shetkar
   ಏಪ್ರಿಲ್ 17 2014

   Congress free India is the India to be rebuilt by AAP.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Note: HTML is allowed. Your email address will never be published.

Subscribe to comments