Skip to content

ಏಪ್ರಿಲ್ 25, 2014

10

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 1

by CSLC Ka

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

ಇಂದಿನ ಪ್ರತಿನಿಧಿತ್ವದ ಬಗ್ಗೆ ವಿಚಾರಮಾಡಬೇಕಾದಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಎದುರಿಸುತ್ತಿರುವಂತಹ ಸವಾಲುಗಳೇನು ಎಂದು ಆಲೋಚಿಸಬೇಕಿದೆ. ಸಹಸ್ರಾರು ವರ್ಷಗಳ ಇತಿಹಾಸವಿರುವಂತಹ ನಮ್ಮ ದೇಶದಲ್ಲಿ ಈ ರೀತಿಯ ಶೋಷಣೆ, ತಾರತಮ್ಯ ಎನ್ನುವಂತದ್ದು ಹಾಸುಹೊಕ್ಕಾಗಿ ಬಂದು, ಅದೊಂದು ಜೀವನ ವಿಧಾನ ಎನ್ನುವ ರೀತಿಯಲ್ಲಿ ಅಂಗೀಕಾರ ಮಾಡಿರುವಂತಹ ದೇಶಗಳಲ್ಲಿ ನಮ್ಮದು ಕೂಡ ಒಂದು. ಅದರ ವಿರುದ್ಧ ಈ ದೇಶದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಅದರಿಂದಾಗಿ ಇಡೀ ಪ್ರಪಂಚಕ್ಕೆ ಬೆಳಕು ಸಿಕ್ಕಿದೆ. ಆದರೆ ಭಾರತಕ್ಕೆ ಎಷ್ಟು ಸಿಕ್ಕಿದೆ ಎನ್ನುವುದು ಗೊತ್ತಿಲ್ಲ. ಅದು ಬುದ್ಧ ಇರಬಹುದು, ಬಸವೇಶ್ವರರು, ಸ್ವಾಮಿ ವಿವೇಕಾನಂದ, ಪರಹಂಸರು, ಮಹಾತ್ಮ ಗಾಂಧಿ ಇರಬಹುದು, ರಾಜಾರಾಮ್ ಮೋಹನ್ ರಾಯ್, ಲೋಹಿಯಾ, ಅಂಬೇಡ್ಕರ್ ಇಂತವರು ಅನೇಕ ಜನ ಅಥವಾ ಅನೇಕ ವಿಚಾರಧಾರೆಗಳು ಬರಲಿಕ್ಕೆ ಸಾಧ್ಯ ಆಗಿದೆ. ಆದರೆ ಇಲ್ಲಿ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿಕ್ಕೆ ಸಹಾಯ ಆಗಿದೆ ಎನ್ನುವುದನ್ನು ಹೇಳಲಿಕ್ಕೆ ಸಾಧ್ಯ ಆಗುವುದಿಲ್ಲ. ಆದರೆ, ಆಗಬೇಕಾದಂತಹ ಕೆಲಸ ಬಹಳಷ್ಟಿದೆ. ಅಂದರೆ ಇವೆಲ್ಲವೂ ಕೂಡಾ ಕಾನೂನುಗಳ ಮುಖಾಂತರವೇ ಆಗುವುದಿಲ್ಲ ಎನ್ನುವುದು ಕೂಡಾ ನಮ್ಮ ಅನುಭವಕ್ಕೆ ಬಂದಿರುವ ವಿಚಾರ. ಕಾನೂನುಗಳ ಕೊರತೆಯಿಂದ ಈ ದೇಶದಲ್ಲಿ ಜಾತೀಯತೆ ಇದೆ, ಭ್ರ್ರಷ್ಟಾಚಾರ ಇದೆ, ಸ್ವಜನ ಪಕ್ಷಪಾತ ಇದೆ ಎಂದೇನೂ ಅಲ್ಲ. ಕಾನೂನಿನ ಕೊರತೆಯೇನಿಲ್ಲ. ಬ್ರಿಟಿಷರ ಕಾಲದಲ್ಲೇ ಆಗಬೇಕಾದಂತಹ ಕಾನೂನುಗಳೆಲ್ಲಾ ಆಗಿಹೋಗಿವೆ. ಇನ್ನುಳಿದಿರುವಂತಹ ಕೆಲವನ್ನು ಈ ನಾವು ಮಾಡುತ್ತಿದ್ದೇವೆ.

ಆದರೆ ಕಾನೂನಿನ ಪರಿಪಾಲನೆ ಮಾಡುವುದರಿಂದ ಏನು ಪರಿಣಾಮವಾಗುವುದಿಲ್ಲ ಎನ್ನುವುದು ನಮ್ಮ ಜನರಿಗೆ ಗೊತ್ತಿರುವುದರಿಂದ ಸಮಸ್ಯೆಗಳು ಇನ್ನೂ ಕೂಡಾ ಉಳಿದುಕೊಂಡಿರುವುದು ದೊಡ್ಡ ಸಮಸ್ಯೆ. ನಾವು ಯಾವುದನ್ನು ಮಾದರಿ ಪ್ರಜಾಪ್ರಭುತ್ವ ಎಂದು ಹೇಳುತ್ತೇವೆ? ಅದು ಬ್ರಿಟನ್ ಮತ್ತು ಅಮೇರಿಕ. ಅಮೇರಿಕದಲ್ಲೂ ಕೂಡಾ ಸಂವಿಧಾನ ರಚನೆಯಾಗಿ 140 ವರ್ಷಗಳ ಕಾಲ ಅಲ್ಲಿ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕನ್ನೇ ನೀಡಿರಲಿಲ್ಲ. ಹಾಗೆಯೇ ಬ್ರಿಟನ್ ನನ್ನು ನಾವು ಕಾರ್ಬನ್ ಕಾಪಿ ಮಾಡಿಕೊಂಡು ಅನುಸರಿಸುತ್ತಿದ್ದರೂ ಸಹ ಅಲ್ಲಿಯೂ ಕೂಡಾ ಸಂವಿಧಾನ ರಚನೆಯಾಗಿ 110 ವರ್ಷಗಳ ಕಾಲ ಮಹಿಳೆಯರಿಗೆ ಮತದಾನದ ಹಕ್ಕನ್ನೇ ನೀಡಿರಲಿಲ್ಲ. ಸ್ವೀಡನ್ ದೇಶದಲ್ಲಿ ಇತ್ತೀಚಿನವರೆಗೂ ಕೂಡಾ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿರಲಿಲ್ಲ. ಆ ದೃಷ್ಟಿಯಿಂದ ಭಾರತ ದೇಶದಲ್ಲಿ ಬಡವರು ಮತ್ತು ಮಹಿಳೆಯರು ಎಲ್ಲರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಎಲ್ಲರೂ ಕೃತಜ್ಞತೆಯನ್ನು ಅರ್ಪಿಸಲೇಬೇಕು.

ಸಂವಿಧಾನ ರಚನೆಯಾದ ದಿನದಿಂದಲೇ ಮಹರಾಜನಿಗೂ ಸಾಮಾನ್ಯ ಕೂಲಿಕಾರನಿಗೂ ಒಂದೇ ಓಟು. ಪುರುಷ ಮತ್ತು ಮಹಿಳೆಯರಿಬ್ಬರಿಗೂ ಒಂದೇ ಓಟು. ಅದರಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರಬಾರದು ಎನ್ನುವುದನ್ನು ಬಹಳ ಅಧಿಕಾರಯುತವಾಗಿ ಸಂವಿಧಾನಿಕ ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಅದಕ್ಕೆ ಸಮ್ಮತಿಯ ಮುದ್ರೆಯನ್ನು ಒತ್ತುವಲ್ಲಿ ಅಂಬೇಡ್ಕರ್ ಅವರಿಗಿದ್ದಂತಹ ಬದ್ಧತೆ, ಪಾಂಡಿತ್ಯ ಮತ್ತು ಅದನ್ನು ಇತರರಿಗೆ ಒಪ್ಪಿಸುವಂತ ಕಲೆ ಅಪಾರವಾದುದು. ಈ ಕಾರಣದಿಂದ ಅದು ಜಾರಿಗೆ ಬರುವುದಕ್ಕೆ ಸಾಧ್ಯವಾಯಿತು. ಇಲ್ಲದಿದ್ದರೆ ಇಲ್ಲಿ ರಾಜರಿಗೆ ಜಾಸ್ತಿ ಓಟು, ಭೂಮಿ ಇರೋರಿಗೆ ಜಾಸ್ತಿ ಓಟು, ಶೆಡ್ಯೂಲ್ ಕ್ಯಾಸ್ಟ್ಗೆ ಬೇರೆ, ಮುಸಲ್ಮಾನರಿಗೆ ಬೇರೆ ಓಟು ಎಂಬಂತಹ ವ್ಯತ್ಯಾಸಗಳು ಬರುವ ಸಾಧ್ಯತೆ ಇತ್ತು. ಸ್ವತಃ ಒಬ್ಬ ಶೆಡ್ಯೂಲ್ಕ್ಯಾಸ್ಟ್ಗೆ ಸೇರಿದವರಾಗಿ ಅಂಬೇಡ್ಕರ್ ಸೀಟ್ ರಿಸರ್ವೇಶನ್ ಕೇಳಿದರೆ ಹೊರತು ಓಟ್ ರಿಸರ್ವೇಶನ್ ಬೇಡ ಎನ್ನುವುದನ್ನು ಪ್ರತಿಪಾದನೆ ಮಾಡಿದರು. ಮುಸಲ್ಮಾನರಿಗೆ ಪ್ರತ್ಯೇಕವಾದಂತಹ ಸೀಟು ಮತ್ತು ಓಟು ಇರಬೇಕು ಎನ್ನುವಂತಹುದನ್ನು ಅಷ್ಟೇ ಖಡಾಖಂಡಿತವಾಗಿ ವಾದದ ಮೂಲಕ ಅದರ ಅವಶ್ಯಕತೆ ಇಲ್ಲ, ಅದರಿಂದಾಗಿ ಹೆಚ್ಚು ಗೊಂದಲಗಳಾಗುತ್ತವೆ ಹೊರತು ಸಮಸ್ಯೆಗಳು ಬಗೆಹರಿಯುವುದಿಲ್ಲ ಎನ್ನುವಂತಹ ಮಾತನ್ನು ಕೂಡಾ ಹೇಳಿದರು.

ಈ ದೇಶದ ವೈವಿಧ್ಯತೆಗೆ ಕಾರಣ ಅದು ಯಾವಾಗ ಯಾಕೆ ಹುಟ್ಟಿತು ಎನ್ನುವುದು ಗೊತ್ತಿಲ್ಲ. ಜಾತಿಯ ಬಗ್ಗೆ ಮತದ ಬಗ್ಗೆ ಸಾಕಷ್ಟು ಪ್ರಸ್ತಾಪ ಆಗಿದೆ. ಯಾರು ಯಾರನ್ನು ಪ್ರತಿನಿಧಿಸುತ್ತಾರೆ ಎನ್ನುವಂತದ್ದು. ಭಾರತದಲ್ಲಿ ಸರಿಸುಮಾರು 6452 ಜಾತಿಗಳಿವೆ, ಆರು ಮತಗಳಲ್ಲಿ ಗುರುತಿಸಿಕೊಂಡಿರುವಂತಹ ಜನಗಳಿದ್ದಾರೆ. ಐವತ್ತೆರಡು ಬುಡಕಟ್ಟುಗಳಿವೆ. 1618 ಭಾಷೆಗಳನ್ನು ಮಾತನಾಡುವ ಜನರದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ. ಇಂತಹ ಒಂದು ಹಿನ್ನೆಲೆಯಿರುವಂತಹ ಒಂದು ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವವೇ ಸೂಕ್ತ ಎನ್ನುವಂತಹ ತೀರ್ಮಾನಕ್ಕೆ ಬರುವಂತದ್ದು ಸರಿಯಾದ ನಿರ್ಧಾರವೇ ಆಗಿತ್ತು. ಇದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಈ ಚರ್ಚೆಗಳ ನಂತರ ಇಷ್ಟೊಂದು ವೈವಿಧ್ಯತೆಯಿರುವಂತಹ ದೇಶವನ್ನು ಬಹಳ ಪರಿಣಾಮಕಾರಿಯಾಗಿ ಪ್ರತಿನಿಧಿಸಬೇಕು, ಅದರಿಂದ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ಸಾಧ್ಯತೆಗಳಿರುವುದು ಇದರಲ್ಲಿ ಮಾತ್ರ. ಅಧ್ಯಕ್ಷೀಯ ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿಯಾಗುವಂತಹ ಸಾಧ್ಯತೆಗಳಿರುವೆ.

ಈ ದೃಷ್ಟಿಯಿಂದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಲೋಪವಿಲ್ಲ ಎಂದು ತಿಳಿದುಕೊಳ್ಳುವ ಅಗತ್ಯವಿಲ್ಲ್ಲ. ಆದರೆ, ಬೇರೆ ಎಲ್ಲ ವ್ಯವಸ್ಥೆಗಳಿಗಿಂತ ಹೆಚ್ಚು ಉತ್ತಮ ಎನ್ನುವ ಕಾರಣಕ್ಕೆ ಇದನ್ನು ಒಪ್ಪಿದ್ದೇವೆ. ಈ ಪ್ರಯೋಗದಲ್ಲಿ ಇನ್ನು ಕೇವಲ ಆರು ದಶಕಗಳನ್ನು ಕಂಡಿದ್ದೇವೆ. ಇನ್ನು ಸಾಕಷ್ಟು ಪ್ರಯೋಗಗಳು ನಿರಂತರವಾಗಿ ಆಗಬೇಕಾಗಿದೆ ಮತ್ತು ಅದು ಆಗುತ್ತಿರುತ್ತದೆ. ಹಾಗಾಗಿ ಸಾಮಾನ್ಯವಾಗಿ ಇಂತಹ ಎಲ್ಲ ವಿಚಾರಗಳು ಬಂದಾಗ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಒಂದು ಭಾಗವಷ್ಟೆ, ಕಾರ್ಯಾಂಗ, ನ್ಯಾಯಾಂಗ, ಮತ್ತು ನಂತರದ ಹಂತದಲ್ಲಿ ಮೀಡಿಯಾ, ಪತ್ರಿಕೋದ್ಯಮವೂ ಇದ್ದೇ ಇದೆ. ಆದರೆ ಹೆಚ್ಚು ಚರ್ಚೆಯಾಗುವುದು, ಹೆಚ್ಚು ಟೀಕೆಗೊಳಗಾಗುವುದು ಶಾಸಕಾಂಗವೇ. ದೃಶ್ಯ ಮಾಧ್ಯಮಗಳಲ್ಲಿ ಟಿ.ಅರ್.ಪಿ. ಹೆಚ್ಚು ಮಾಡುವವರೂ, ಪತ್ರಿಕೆಗಳು ಹೆಚ್ಚು ಪ್ರಸಾರವಾಗುವುದಕ್ಕೆ ಕಾರಣವಾಗುವವರೂ, ಕಾರ್ಟೂನಿಸ್ಟ್ಗಳಿಗೆ ಅತ್ಯಂತ ಪ್ರಿಯವಾಗಿರುವಂತವರು ಯಾರಾದರೂ ಇದ್ದರೆ ಅದೂ ಸಹ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಂತಹ ವ್ಯಕ್ತಿಗಳೇ.

ಹಾಗೆಯೇ ಬಹಳಷ್ಟು ಜನರಿಗೆ ಪರೋಕ್ಷವಾಗಿ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಾರಣಕರ್ತರಾಗಿರುವಂತವರು ಸಹ ಶಾಸಕಾಂಗದಲ್ಲಿ ಕೆಲಸ ಮಾಡುತ್ತಿರುವಂತಹ ನಮ್ಮಂತವರೆ. ಅದು ನಮ್ಮ ಮಾತುಗಳು, ತೀರ್ಮಾನಗಳು ಇತ್ಯಾದಿ ಕಾರಣಗಳಿಂದ ಇರಬಹುದು. ಹಾಗಾಗಿ ಇಷ್ಟೊಂದು ಚರ್ಚೆಗೊಳಗಾಗಲಿಕ್ಕೆ ಕಾರಣ ಈ ಕ್ಷೇತ್ರ ಇಡೀ ವ್ಯವಸ್ಥೆಯ ಮುಖ ಇದ್ದಹಾಗೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮುಖ ನೋಡುತ್ತಿದ್ದ ಹಾಗೆ ಅವರು ಎಂತವರು ಎನ್ನುವ ಒಂದು ತೀರ್ಮಾನಕ್ಕೆ ಬರುತ್ತಾರೆ. ಹಾಗೆಯೇ, ಈ ಸಮಾಜದ ವ್ಯವಸ್ಥೆಯ ಮುಖ ಶಾಸಕಾಂಗ ಆಗಿರುವುದರಿಂದ ಸಹಜವಾಗಿ ಈ ಕ್ಷೇತ್ರ ಹೆಚ್ಚು ವಿಮರ್ಶೆಗೆ ಒಳಗಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರಿಗೆ, ದೂರದಿಂದ ನೋಡುತ್ತಿರುವವರಿಗೆ ಎಲ್ಲ ಚೆನ್ನಾಗಿ ಕಾಣುತ್ತದೆ. ಎಲ್ಲ ಅಧಿಕಾರ ಸ್ಥಾನಗಳಲ್ಲಿದ್ದಾರೆ, ಬಹಳ ಅನುಕೂಲವಾಗಿದ್ದಾರೆ, ಎಲ್ಲಿ ಹೋದರು ಜನ ಗುರುತಿಸುತ್ತಾರೆ ಎನಿಸುತ್ತದೆ. ಆದರೆ, ಆಂತರಿಕವಾಗಿ ಬಹಳ ಗಂಭೀರವಾಗಿ ವಿಮರ್ಶೆಗೆ ಒಳಪಡಿಸುವುದಾದರೆ ನನ್ನ ದೃಷ್ಟಿಯಲ್ಲಿ ಈ ಕ್ಷೇತ್ರದಲ್ಲಿ ಇರುವಷ್ಟು ಸವಾಲುಗಳು, ರಿಸ್ಕ್ಗಳು, ಅನೀರಿಕ್ಷಿತವಾಗಿ ಸಂಭವಿಸುವಂತಹ ಘಟನಾವಳಿಗಳು, ಕ್ಷಣ ಕ್ಷಣಕ್ಕೂ ಆಗುವಂತಹ ಬದಲಾವಣೆಗಳು ಬೇರೆ ಯಾವ ಕ್ಷೇತ್ರದಲ್ಲೂ ಕೂಡಾ ಬಹುಶಃ ಆಗುವುದಿಲ್ಲ.

ನಿಮ್ಮ ಮನೆ ಅಥವಾ ಇತ್ಯಾದಿ ಸಂಬಂಧಿತ ವಿಚಾರಗಳಲ್ಲಿ ಆಗುವ ಸಮಸ್ಯೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ. ನೀವು ಉತ್ತರದಾಯಕರಾಗಿರುತ್ತೀರಿ. ಆದರೆ, ನಮ್ಮ ಕ್ಷೇತ್ರದಲ್ಲಿ ನಾವು ಅದರಲ್ಲಿ ಪಾತ್ರಧಾರಿಗಳಾಗದೇ ಹೋದರೂ ಕೂಡಾ ಎಲ್ಲೋ ಕೂತಿರುವಂತಹ ಸೂತ್ರದಾರರ ನಿರ್ಧಾರದ ಕಾರಣದಿಂದಾಗಿ ಪಾತ್ರದಾರಿಗಳಾಗಿ ನಾವೆಲ್ಲರೂ ಕೂಡಾ ಉತ್ತದಾಯಿಗಳಾಗಬೇಕಾದಂತಹ ಸ್ಥಿತಿ ಅನೇಕ ಸಂದರ್ಭಗಳಲ್ಲಿ ನಿರ್ಮಾಣ ಆಗಿದೆ. ಆ ಕಾರಣದಿಂದ ಈ ಕ್ಷೇತ್ರದ ಬಗ್ಗೆ ಬಾಹ್ಯ ನೋಟಕ್ಕೆ ಕಾಣುವಂತಹ ಅನುಕೂಲಗಳು, ಪ್ರಸಿದ್ಧಿ, ಸವಲತ್ತುಗಳು ಇದರ ಜೊತೆ ಜೊತೆಗೆ ಅನೇಕ ರೀತಿಯ ಸವಾಲುಗಳು, ಸಮಸ್ಯೆ ಮತ್ತು ಸಂದಿಗ್ಧಗಳನ್ನು ಈ ಕ್ಷೇತ್ರ ಒಳಗೊಂಡಿರುತ್ತದೆ.

ವಿನ್ಸ್ಟನ್ ಚರ್ಚಿಲ್ ಪ್ರಪಂಚದ ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬ, ಮತ್ತು ರಾಜಕಾರಣದಲ್ಲಿ ಪ್ರಸಿದ್ಧ ವ್ಯಕ್ತಿ. ಅವನು ರಾಜಕಾರಣದ ಬಗ್ಗೆ ಒಂದು ಮಾತನ್ನ ಹೇಳುತ್ತಾನೆ; ರಾಜಕಾರಣ ಯುದ್ಧದಷ್ಟೇ ಕುತೂಹಲಕಾರಿಯಾಗಿರುವಂತದ್ದು ಮತ್ತು ಅಷ್ಟೇ ಅಪಾಯಕಾರಿಯಾಗಿರುವಂತದ್ದು ಕೂಡಾ, ಯುದ್ಧದಲ್ಲಿ ಸಾಯಲೇ ಬೇಕು ಅಂತಿಲ್ಲ. ಆದರೆ ಒಂದು ಸಾರಿ ಸತ್ತರೂ ಸಾಯಬಹುದು. ಆದರೆ, ರಾಜಕಾರಣದಲ್ಲಿ ಮಾತ್ರ ಹಲವು ಬಾರಿ ಸಾಯಬೇಕಾಗುತ್ತದೆ. ಬಹಳ ಸಾರಿ ಸಾಯುವುದು ಎಂದರೇನು? ದೈಹಿಕವಾಗಿ ಸಾವನ್ನಪ್ಪುವುದು ಎಂದಲ್ಲ. ನನ್ನ ದೃಷ್ಟಿಯಲ್ಲಿ ಅವಮಾನ ಆಗುವುದು ಒಂದೇ ಸಾಯುವುದು ಒಂದೇ. ಒಬ್ಬ ಜನಪ್ರತಿನಿಧಿಗೆ ಸಾರ್ವಜನಿಕವಾಗಿ ಆಗುವ ಅವಮಾನ ಒಂದು ದೃಷ್ಟಿಯಲ್ಲಿ ಅದು ಸಾವು ಇದ್ದಂತೆ. ಬಹಳಷ್ಟು ಜನ ರಾಜಕಾರಣಿಗಳು ಇವುಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕಾಗಿ ನಿಮ್ಮಗಳ ಪರಿಭಾಷೆಯಲ್ಲಿ ಅದು ದಪ್ಪ ಚರ್ಮ ಬೆಳೆಸಿಕೊಂಡಿದ್ದಾರೆ ಎಂಬ ಮಾತನ್ನು ಹೇಳುತ್ತಿರಬಹುದು. ಆದರೆ ಅವಮಾನ ಅವಮಾನವೇ. ಹಾಗಾಗಿ ಈ ಕ್ಷೇತ್ರದಲ್ಲಿರುವಂತಹ ಜನ ಪ್ರಾತಿನಿಧ್ಯವನ್ನ ನಿರ್ಧಾರ ಮಾಡಬೇಕಾದಂತಹ ಸಂದರ್ಭದಲ್ಲಿ ನಾನು ಪೀಠಿಕೆಯ ಮಾತುಗಳನ್ನು ಹೇಳಲಿಕ್ಕೆ ಕಾರಣ ಇಷ್ಟೊಂದು ವೈವಿಧ್ಯವಿರುವಂತಹ ದೇಶದಲ್ಲಿ, ಸಂಸದೀಯ ಪ್ರಜಾಪ್ರಭುತ್ವ ಬೇಕೋ ಅಥವಾ ಅಧ್ಯಕ್ಷೀಯ ಪ್ರಭುತ್ವ ಬೇಕೋ ಎನ್ನುವುದನ್ನೇ ನಾವು ಬಹಳಷ್ಟು ಸಂದರ್ಭದಲ್ಲಿ ಸುಧೀರ್ಘವಾದಂತಹ ಚರ್ಚೆ ನಡೆಸಿದ್ದೇವೆ. (ಮುಂದುವರೆಯುವುದು..)

ಪ್ರಸ್ತುತ ಲೇಖನ ಹಾಗೂ ಈ ಹಿಂದೆ ಪ್ರಕಟಿಸಿರುವ ಆಯನೂರು ಮಂಜುನಾಥ್ ರವರ ಲೇಖನಗಳು ಕುವೆಂಪು ವಿವಿಯಲ್ಲಿ ನಡೆದ ರಾಜ್ಯಶಾಸ್ತ್ರ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಭಾಷಣಗಳಾಗಿವೆ. ನಮ್ಮ ಕಾಲಂ ನಲ್ಲಿ ಮರುಚಿಂತನೆಯ ಉದ್ದೇಶವನ್ನು ಹೊಂದಿರುವುದರಿಂದ ಪ್ರಾತಿನಿಧ್ಯದ ಕುರಿತ ಅವರ ಒಳನೋಟಗಳು ಎಲ್ಲರಿಗೂ ಲಭ್ಯವಾಗಲಿ ಎಂಬ ಉದ್ದೇಶದಿಂದ ಇಲ್ಲಿ ಪ್ರಕಟಿಸುತ್ತಿದ್ದೇವೆ

Advertisements
Read more from ಲೇಖನಗಳು
10 ಟಿಪ್ಪಣಿಗಳು Post a comment
 1. Nagshetty Shetkar
  ಏಪ್ರಿಲ್ 25 2014

  {“ಸಹಸ್ರಾರು ವರ್ಷಗಳ ಇತಿಹಾಸವಿರುವಂತಹ ನಮ್ಮ ದೇಶದಲ್ಲಿ ಈ ರೀತಿಯ ಶೋಷಣೆ, ತಾರತಮ್ಯ ಎನ್ನುವಂತದ್ದು ಹಾಸುಹೊಕ್ಕಾಗಿ ಬಂದು, ಅದೊಂದು ಜೀವನ ವಿಧಾನ ಎನ್ನುವ ರೀತಿಯಲ್ಲಿ ಅಂಗೀಕಾರ ಮಾಡಿರುವಂತಹ ದೇಶಗಳಲ್ಲಿ ನಮ್ಮದು ಕೂಡ ಒಂದು.”}

  ಕರೆಕ್ಟ್ ಸರ್!

  {“ಭಾರತ ದೇಶದಲ್ಲಿ ಬಡವರು ಮತ್ತು ಮಹಿಳೆಯರು ಎಲ್ಲರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಎಲ್ಲರೂ ಕೃತಜ್ಞತೆಯನ್ನು ಅರ್ಪಿಸಲೇಬೇಕು.”}

  ಕರೆಕ್ಟ್ ಸರ್!!

  {“ಅಂಬೇಡ್ಕರ್ ಸೀಟ್ ರಿಸರ್ವೇಶನ್ ಕೇಳಿದರೆ ಹೊರತು ಓಟ್ ರಿಸರ್ವೇಶನ್ ಬೇಡ ಎನ್ನುವುದನ್ನು ಪ್ರತಿಪಾದನೆ ಮಾಡಿದರು.”}

  ಕರೆಕ್ಟ್ ಸರ್!!!

  ವಚನಕಾರರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತುವ ಕೆಲಸ ಮಾಡಿದರೆ ಬಸವಣ್ಣನವರು ಕಂಡ ಆದರ್ಶ ಸಮಾಜದ ಕನಸು ನನಸಾಗುವುದರಲ್ಲಿ ಅನುಮಾನವೇ ಇಲ್ಲ. ಈ ನಿಟ್ಟಿನಲ್ಲಿ ಮಾಡಬೇಕಾದ ಮೊಟ್ಟಮೊದಲ ಕೆಲಸ ವೈದಿಕಶಾಹಿಯ ನಿರ್ನಾಮ. ಎಲ್ಲಿಯವರೆಗೆ ಮನುವಾದವು ಈ ನಾಡಿನ ಅಲಿಖಿತ ಸಂವಿಧಾನವಾಗಿರುತ್ತದೆಯೋ ಅಲ್ಲಿಯವರೆಗೆ ಅಂಬೇಡ್ಕರ್ ರಚಿತ ಸಂವಿಧಾನ ಹಿಂದಿನ ಸೀಟಿನಲ್ಲಿ ಕುಳಿತಿರುತ್ತದೆ. ಆದುದರಿಂದ ಮನುವಾದವನ್ನು ಚಾಲನೆಯಲ್ಲಿಟ್ಟಿರುವ ವೈದಿಕಶಾಹಿಯನ್ನು ಹತ್ತಿಕ್ಕುವ ಕೆಲಸ ಮಾಡಲೇಬೇಕು.

  ಉತ್ತರ
 2. ಯಮ್
  ಏಪ್ರಿಲ್ 25 2014

  “ಪ್ರಾತಿನಿಧ್ಯದ ಕುರಿತ ಅವರ ಒಳನೋಟಗಳು ಎಲ್ಲರಿಗೂ ಲಭ್ಯವಾಗಲಿ” ಎಂಬ ಉದ್ದೇಶವೇನೋ ಒಳ್ಳೆಯದೇ. ಆದರೆ ಆ ಒಳನೋಟಗಳು ಎಲ್ಲಿವೆ ಎಂದು ಹುಡುಕಿ ಸಾಕಾದೆ. cslc ಗೆಳೆಯರು ಬಿಡುವಿದ್ದಾಗ ಅಂಥ ಒಂದಷ್ಟು ಒಳನೋಟಗಳನ್ನು ಹೆಕ್ಕಿ ತೆಗೆದ ತೋರಿಸಿದರೆ ಒಳ್ಳೆಯದು. ಹಾಗೆ ಅವು ಏಕೆ ‘ಒಳನೋಟಗಳು’ ಮತ್ತು ಅವು ಎಲ್ಲರಿಗೂ ಏಕೆ ಸಿಗಬೇಕು ಎಂಬುದನ್ನೂ ತಿಳಿಸಿ ಬಿಡಿ. (ಇಲ್ಲದಿದ್ದರೆ ಜನರು cslc ಗೆಳೆಯರು ಕೂಡ ರಾಜಕಾರಣಿಗಳ ಬಾಲ ಹಿಡಿಯಲು ಆರಂಭಿಸಿದ್ದಾರೆ ಎಂದುಕೊಂಡರೆ ಕಷ್ಟ. ಹಾಗೆ ಅವರ fb ಪುಟಗಳನ್ನು ನೋಡಿದರೆ ಅದು ನಿಜವೆಂದೂ ಅನಿಸುತ್ತದೆ.)

  ಉತ್ತರ
  • Nagshetty Shetkar
   ಏಪ್ರಿಲ್ 25 2014
  • ಏಪ್ರಿಲ್ 26 2014

   ಯಮ್ ರವರೆ

   ರಾಜಕಾರಣಿಗಳ ಬಾಲ ಹಿಡಿಯುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ, ಆಸಕ್ತಿದಾಯಕವಾದ ವಿಷಯಗಳನ್ನು ಯಾರೇ ಹೇಳಿದರೂ ಕೇಳಿಸಿಕೊಳ್ಳುವಂತಹ ವ್ಯವಧಾನವನ್ನು ಉಳಿಸಿಕೊಂಡಿದ್ದೇವೆ. ಶಂಕರ್ ರವರ ಲೇಖನದ ಪೂರ್ಣ ಭಾಗಗಳು ಪ್ರಕಟವಾದ ನಂತರ ನಿಮ್ಮ ಪ್ರಶ್ನೆಗಳಿಗೆ ಉತ್ತರ ದೊರಕಬಹುದು.

   ಇನ್ನು ಫೇಸ್ ಬುಕ್ ನಲ್ಲಿ ಯಾರದ್ದೋ ರಾಜಕಾರಣಿಗಳ ಪೋಸ್ಟ್ ಗಳಿಗೆ ಲೈಕ್ ಒತ್ತಿದರೆ ಅದು ಅವರವರ ವೈಯುಕ್ತಿಕ ವಿಚಾರ. ಆದರೆ ವಿಚಾರ ಮತ್ತು ಸಂಶೋಧನೆಯ ವಿಷಯಕ್ಕೆ ಬಂದರೆ ಯಾವ ರಾಜಕಾರಣಿಗಳ ನಿಲುವನ್ನಾಗಲಿ ಅಪ್ಪಣೆಯನ್ನಾಗಲಿ ಕಾಯುವುದಿಲ್ಲ.

   ಉತ್ತರ
 3. ಏಪ್ರಿಲ್ 25 2014

  (ಸಹಸ್ರಾರು ವರ್ಷಗಳ ಇತಿಹಾಸವಿರುವಂತಹ ನಮ್ಮ ದೇಶದಲ್ಲಿ ಈ ರೀತಿಯ ಶೋಷಣೆ, ತಾರತಮ್ಯ ಎನ್ನುವಂತದ್ದು ಹಾಸುಹೊಕ್ಕಾಗಿ ಬಂದು, ಅದೊಂದು ಜೀವನ ವಿಧಾನ ಎನ್ನುವ ರೀತಿಯಲ್ಲಿ ಅಂಗೀಕಾರ ಮಾಡಿರುವಂತಹ ದೇಶಗಳಲ್ಲಿ ನಮ್ಮದು ಕೂಡ ಒಂದು.)
  ಈ ಮಾತು ಎಷ್ಟರ ಮಟ್ಟಿಗೆ ವೈಜ್ನಾನಿಕ? ಶೋಷಣೆ ಇದ್ದ ಮೇಲೆ ಆ ಶೋಷಣೆಯ ವಿರುದ್ಧ ಸಂಘರ್ಷಗಳೂ ಇರಲೇಬೇಕಲ್ಲವೇ? ಇದನ್ನು ಮಾರ್ಕ್ಸ್ ಕೂಡ ಹೇಳಿದ್ದ. ಒಂದು ವೇಳೆ ಶೋಷಣೆ ಸ್ಥಾಪಿಸಲ್ಪಟ್ಟಿದ್ದರೆ ಅದನ್ನು ಕಾಪಾಡಿಕೊಂಡು ಬರಲು ಒಂದು ವ್ಯವಸ್ಥೆಯೂ ಇರಬೇಕಿತ್ತಲ್ಲವೇ? ವ್ಯವಸ್ಥೆ ಇದ್ದರೂ ಸಂಘರ್ಷಗಳು ಇರಬಾರದೆಂದೆನಿಲ್ಲ, ಹಾಗಿದ್ದಾಗ ಯಾವುದೇ ವ್ಯವಸ್ಥೆ ಇಲ್ಲದೇ ಸಮಾಜ ಆ ಶೋಷಣೆಯನ್ನು ಅಪ್ಪಿಕೊಂಡು ಸಹಸ್ರಾರು ವರ್ಷಗಳವರೆಗೆ ಸಂಘರ್ಷಗಳೇ ಇಲ್ಲದೆ ಬದಲಾವಣೆಗೆ ಒಳಪಡದೆ ಇರುತ್ತದೆ ಎನ್ನುವದು ವೈಜ್ನಾನಿಕವಾಗಿ ಸಾಧ್ಯವೇ?

  ಉತ್ತರ
  • ಯಮ್
   ಏಪ್ರಿಲ್ 25 2014

   ನಿಜ. ಇಂಥ ಲೇಖನಗಳನ್ನು cslc ಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ 🙂

   ಉತ್ತರ
   • ಏಪ್ರಿಲ್ 26 2014

    ಈ ಲೇಖನದ ಬಗ್ಗೆ ಸಿ.ಎಸ್.ಎಲ್.ಸಿ ಯವರ ನಿಲುವೇನು ಎಂದು ನನಗೂ ಗೊತ್ತಿಲ್ಲ. I believe CSLC had just shared this to present his views.

    ಉತ್ತರ
    • ಏಪ್ರಿಲ್ 26 2014

     ಬಾಲಚಂದ್ರ ಭಟ್

     ಇಡೀ ಲೇಖನವನ್ನು ಪ್ರಕಟಿಸಿದ ನಂತರ ನನ್ನ ನಿಲುವೇನು ಎಂದು ಹೇಳುತ್ತೇನೆ, ಆದರೆ ಭಾಷಣ ಕೇಳಿದ ನಮಗೆ ಅವರ ಅಪಾರ್ಥಗಳು ಹಾಗೂ ದ್ವಂದ್ವಗಳ ಆಚೆಗೆ ನಾವು ಗಮನಿಸಬಹುದಾದ ಸಂಗತಿಗಳಿವೆ ಎನ್ನುವ ಉದ್ದೇಶದಿಂದ ಇಲ್ಲಿ ಪ್ರಕಟಿಸಲು ಕೇಳಿದೆವು. ಅವರ ಚಿಂತನೆಗಳಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳ ಹೊರತಾಗಿ ಹಲವಾರು ತಪ್ಪುಗ್ರಹಿಕೆಗಳು ಇದ್ದದ್ದು ನಿಜ

     ಉತ್ತರ
   • ಏಪ್ರಿಲ್ 26 2014

    ಕೆಲವು ರಿಯಾಲಿಟಿ ಶೊ-ಹಾಡಿನ ಕಾರ್ಯಕ್ರಮಗಳಲ್ಲಿ- ನೋಡಿದ್ದೇನೆ. ಸಂಗೀತ ಕಲಾವಿದರ ಜೊತೆ, ಚಿತ್ರನಟಿಯರು, ಸಂಗೀತದ ಗಂಧವೇ ಇರದಿದ್ದವರು ಜಡ್ಜ್ ಸ್ಥಾನವೊಂದರಲ್ಲಿ ಪವಡಿಸಿರುತ್ತಾರೆ. ಇವರು ಹಾಡಿನ ವಿಮರ್ಷೆಗೆ ತೊಡಗುವಾಗ ಅಲ್ಲಿದ್ದ ಸಂಗೀತ ಕಲಾವಿದರಿಗೆ ವಿಮರ್ಶೆಯನ್ನು ಕೇಳಿ ಅಲ್ಲಲ್ಲೆ ಮುಜುಗರವಾಗುತ್ತದೆ.
    ಕ್ರಿಕೆಟ್ ಆಟ ಮುಗಿದ ನಂತರ ಪ್ರಶಸ್ತಿ ವಿತರಿಸುವಾಗ ಆ ದೇಶದ ಪ್ರೆಸಿಡೆಂಟ್ ಕ್ರಿಕೆಟ್ ಪಂದ್ಯವನ್ನು ಸ್ತೂಲವಾಗಿ ವಿಮರ್ಶಿಸತೊಡಗುತ್ತಾನೆ. ಆಗ ಆಟಗಾರರು ಹೇಗೆ ಕೇಳಿಸಿಕೊಳ್ಳುತ್ತಿರಬಹುದು?
    ಇಂತಹುದೆ ಪರಿಸ್ತಿತಿ ಆ ವಿಚಾರ ಸಂಕಿರಣದಲ್ಲಿ ನೆರೆದ ಸಂಶೋಧಕ audience ಗಳಿಗೂ ಆಗಿರಬಹುದೆಂದು ಅಂದುಕೊಳ್ಳುತ್ತೇನೆ. 😉

    ಉತ್ತರ
    • ಏಪ್ರಿಲ್ 26 2014

     ನೀವು ಹೇಳುವ ರಿಯಾಲಿಟಿ ಶೋ ಖಂಡಿತವಾಗಿಯೂ ಅಂತಹ ಅನುಭವವನ್ನು ನೀಡಿದೆ. ಆದರೆ ಬಿ.ಎಲ್ ಶಂಕರ್ ರವರ ಚಿಂತನೆ ಅಷ್ಟರ ಮಟ್ಟಿಗೆ ಕಳಪೆಯಾಗಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ಆ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಿ ಏನನ್ನೋ ಕಂಡುಕೊಳ್ಳಲು ಮಾಡುವ ಪ್ರಯತ್ನ ಗೋಚರಿಸುತ್ತದೆ..ಲೇಖನ ಪೂರ್ಣವಾದ ನಂತರ ಅಂದರೆ ಎಲ್ಲಾ ಭಾಗಗಳು ಪ್ರಕಟವಾದ ನಂತರ ನೋಡಿ ನಿರ್ಧರಿಸಿ, ಹಾಗೆ ನೋಡಿದರೆ ಇದು ಪೀಠಿಕೆ ಮಾತ್ರ..

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Note: HTML is allowed. Your email address will never be published.

Subscribe to comments