ವಿಷಯದ ವಿವರಗಳಿಗೆ ದಾಟಿರಿ

ಮೇ 5, 2014

ರಾಜಕೀಯ ಪಕ್ಷಗಳಿಗೆ ಬೇಕು, RTI ಬ್ರೇಕು!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್           

RTI Political partiesನಾವು ಮತ್ತೊಂದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದೇವೆ.ರಾಜಕೀಯ ಪಕ್ಷಗಳು ತಮ್ಮ ಮಾಮೂಲಿ ಬೂಟಾಟಿಕೆ ಹಾಗೂ ಡೋಂಗಿ ಮಾತುಗಳೊಂದಿಗೆ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿವೆ. ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತದ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ಆದರೆ 9ತಿಂಗಳ ಹಿಂದೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಕಾಂಗ್ರೆಸ್, ಬಿಜೆಪಿ,ಸಿಪಿಐ, ಸಿಪಿಐ-ಎಂ, ಬಿಎಸ್ಪಿಷ ಹಾಗೂ ಎನ್ಸಿಿಪಿ-ಈ 6ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಸಾರ್ವಜನಿಕ ಸಂಸ್ಥೆಗಳು ಎಂದು ಘೋಷಿಸಿತ್ತು. ಸಿಐಸಿಯ ಆ ಆದೇಶವನ್ನು ಎಲ್ಲಾ ರಾಜಕೀಯ ಪಕ್ಷಗಳು ಧಿಕ್ಕರಿಸಿವೆ. ಆ ಬಗ್ಗೆ ಚಕಾರವೆತ್ತದೆ ಮತದಾರರೂ ಎಲ್ಲಾ ಮರೆತಂತಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತರಾದ ಸುಭಾಷ್ ಅಗರ್ವಾದಲ್ ಮತ್ತು ಅನಿಲ್ ಬೈರ್ವಾೋಲ್ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ ಪಕ್ಷಗಳ ದೇಣಿಗೆ ಸ್ವೀಕೃತಿ ಹಾಗೂ ಖರ್ಚು-ವೆಚ್ಚಗಳ ಮಾಹಿತಿ ಕೋರಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ತಾವು ಸಾರ್ವಜನಿಕ ಸಂಸ್ಥೆಗಳಲ್ಲ ಹಾಗೂ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಬರುವುದಿಲ್ಲ ಎಂದು ತಿಳಿಸಿದ್ದವು. ಆದರೆ ಮಾಹಿತಿ ಹಕ್ಕು ಕಾರ್ಯಕರ್ತರು ರಾಜಕೀಯ ಪಕ್ಷಗಳನ್ನೂ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಚ್) ಅಡಿ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಬೇಕೆಂದು ಸಿಐಸಿಗೆ ಮನವಿ ಮಾಡಿದ್ದರು.ಅದರಂತೆ ಆಯೋಗದ ಪೂರ್ಣ ಪೀಠ ಜೂನ್ 3, 2013ರಂದು ಮೇಲಿನ 6ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವು ಉತ್ತರದಾಯಿತ್ವ ಹೊಂದಿವೆ ಎಂದು ಆದೇಶ ನೀಡಿತು. ಅದಕ್ಕೆ ಸಿಐಸಿ ಕಾರಣಗಳನ್ನೂ ನೀಡಿತ್ತು. ಎಲ್ಲಾ 6ರಾಜಕೀಯ ಪಕ್ಷಗಳು ಪರೋಕ್ಷವಾಗಿ ಕೇಂದ್ರ ಸರ್ಕಾರದಿಂದ ಸಹಾಯ ಧನ ಪಡೆದಿದ್ದವು. ದೆಹಲಿಯ ಹೃದಯ ಭಾಗದಲ್ಲಿ ಅತಿ ಕಡಿಮೆ ಅಥವಾ ಪುಕ್ಕಟೆಯಾಗಿ ನಿವೇಶನ/ಕಟ್ಟಡಗಳನ್ನು ಪಡೆದಿದ್ದವು. ಎಲ್ಲಾ ಪಕ್ಷಗಳಿಗೂ ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರೂ.28.56ಲಕ್ಷ ಮೌಲ್ಯದ ಉಚಿತ ಪ್ರಸಾರ ಸೇವೆ ನೀಡಲಾಗಿತ್ತು. 2006-09ರ ಅವಧಿಯಲ್ಲಿ ಎಲ್ಲಾ ಪಕ್ಷಗಳಿಗೆ ಒಟ್ಟಾರೆ 510ಕೋಟಿ ಆದಾಯ ಕರ ವಿನಾಯತಿಯನ್ನು ನೀಡಲಾಗಿತ್ತು.

ಚುನಾವಣಾ ಆಯೋಗದಲ್ಲಿ ಪ್ರಜಾಪ್ರತಿನಿಧಿ ಕಾಯಿದೆ, 1951ರ ಸೆಕ್ಷನ್ 29ಎ ಪ್ರಕಾರ ನೊಂದಾಯಿಸಲಾಗುವ ಎಲ್ಲಾ ರಾಜಕೀಯ ಪಕ್ಷಗಳು ಕಾನೂನು ಬದ್ಧ ಅಸ್ತಿತ್ವವನ್ನು ಹೊಂದಿರುತ್ತವೆ. ಆರ್ಟಿಕಲ್ 102(2) ಹಾಗೂ 191(2)ಗೆ ಮಾಡಿರುವ 42ನೇ ತಿದ್ದುಪಡಿ ಹಾಗೂ 10ನೇ ಶೆಡ್ಯೂಲ್ ಪ್ರಕಾರ ರಾಜಕೀಯ ಪಕ್ಷಗಳು ಸಂವಿಧಾನಿಕ ಅಸ್ತಿತ್ವ ಹೊಂದಿರುತ್ತವೆ ಎಂಬುದನ್ನು ಮಾಹಿತಿ ಆಯೋಗ ಒಪ್ಪಿತ್ತು.

ಸಿಐಸಿ ಆದೇಶ ಹೊರಬಿದ್ದೊಡನೆ ಎಲ್ಲಾ 6ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳಲ್ಲ, ಅವು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಬರುವುದಿಲ್ಲ. ಹಾಗೊಂದು ವೇಳೆ ಅವು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಲ್ಲಿ ಬಂದದ್ದೇ ಆದರೆ ಅದು ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡುತ್ತದೆ ಹಾಗೂ ರಾಜಕೀಯ ಸಂರಚನೆಗಳಲ್ಲಿ ಅಸ್ಥಿರತೆ ಮೂಡಿಸಿದಂತಾಗುತ್ತದೆ ಎಂದು ಒಕ್ಕೊರಲಿನಿಂದ ಬೊಬ್ಬಿಟ್ಟವು. ಆಯೋಗದ ಕ್ರಮವನ್ನು ಹುಚ್ಚುಸಾಹಸ, ಅತಿರೇಕ ಹಾಗೂ ರಾಜಕೀಯ ಪಕ್ಷಗಳ ಆಂತರಿಕ ಆಡಳಿತದ ಅತಿಕ್ರಮಣ ಎಂದು ದೂರಿದವು. ಆದೇಶ ಹೊರಬಿದ್ದ ಕೇವಲ 10ದಿನಗಳಲ್ಲಿ ತರಾತುರಿಯಲ್ಲಿ ಮಾಹಿತಿ ಹಕ್ಕು ಕಾಯಿದೆಯ 2ನೇ ಸೆಕ್ಷನ್ಗೆ ತಿದ್ದುಪಡಿ ತಂದು ರಾಜಕೀಯ ಪಕ್ಷಗಳನ್ನು ಆರ್ಟಿ್ಐ ವ್ಯಾಪ್ತಿಯಿಂದ ಹೊರಗಿಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಪ್ರಯತ್ನಿಸಲಾಯಿತು. ಆ ನಂತರ ಅದನ್ನು ಸ್ಥಾಯಿ ಸಮಿತಿಯ ಪರಾಮರ್ಶೆಗೆ ನೀಡಲಾಯಿತು. ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಸಹ ಸ್ಥಾಯಿ ಸಮಿತಿಯ ಮುಂದೆ ತಿದ್ದುಪಡಿ ಮಸೂದೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಬೇರೆ ಎಲ್ಲಾ ಪಕ್ಷಗಳು ತಾವು ಸಾರ್ವಜನಿಕ ಸಂಸ್ಥೆಗಳಲ್ಲ ಎಂಬ ನಿಲುವಿಗೆ ಅಂಟಿಕೊಂಡಿದ್ದರೂ ಸಿಪಿಐನಲ್ಲಿ ಮಾತ್ರ ಈ ಬಗ್ಗೆ ಗೊಂದಲವಿತ್ತು. ಸಿಪಿಐ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ ತಮ್ಮ ಪಕ್ಷ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಪಾದಿಸಿದ್ದರೆ ಹಿಂದಿನ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ದನ್ ಸಿಪಿಐ ಪಬ್ಲಿಕ್ ಅಥಾರಿಟಿ ಎಂಬುದನ್ನು ಒಪ್ಪಿಕೊಂಡಿದ್ದರು. ಅಂತೆಯೇ ಆ ಪಕ್ಷ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಪಕ್ಷದ 2005-09ಸಾಲುಗಳ ಪ್ರಮುಖ ದೇಣಿಗೆ ವಿವರಗಳನ್ನು ನೀಡುವ ಮೂಲಕ ದೊಡ್ಡತನ ಪ್ರದರ್ಶಿಸಿತ್ತು. ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸಹ ಪಕ್ಷ ದೆಹಲಿಯಲ್ಲಿ ಹೊಂದಿರುವ ಆಸ್ತಿಯ ವಿವರ ನೀಡಿ ಪಕ್ಷ ಸಾರ್ವಜನಿಕ ಸಂಸ್ಥೆ ಎನ್ನುವುದನ್ನು ಭಾಗಶಃ ಒಪ್ಪಿಕೊಂಡಿದ್ದರು.

ಕೇಂದ್ರ ಸರ್ಕಾರದಿಂದ ರೂ.1303ಕೋಟಿ ಹಣ ಪಡೆದು ಶೇ.66ಸರ್ಕಾರಿ ಬಂಡವಾಳ ಹೊಂದಿದ್ದ ದೆಹಲಿಯ ಪೆನ್ಶನ್ ಟ್ರಸ್ಟ್ ,ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್, ಸಂಸ್ಕøತಿ ಶಾಲೆ, ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ( ಪಿಎಚ್ಎ್ಫ್ ಐ)ಗಳನ್ನು ದೆಹಲಿ ಹೈಕೋರ್ಟ್ ಹಾಗೂ ಮಾಹಿತಿ ಆಯೋಗ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಿದೆ. ಹಾಗೆಯೇ 3.85ಲಕ್ಷ ಚದುರಡಿ ಜಾಗವನ್ನು ಅಗ್ಗದ ದರದಲ್ಲಿ ಬಾಡಿಗೆ ಪಡೆದಿದ್ದ ಚಂಡೀಘರ್ ಕ್ಲಬ್ ಸಹ ಆರ್ಟಿೇಐ ವ್ಯಾಪ್ತಿಗೆ ಬರುತ್ತದೆಂದು ಮಾಹಿತಿ ಆಯೋಗ ಆದೇಶ ನೀಡಿದೆ. ಹೀಗಿರುವಾಗ ಪರೋಕ್ಷ ಲಾಭ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13ರಡಿ ಕೋಟ್ಯಂತರ ರೂಪಾಯಿ ಕರ ವಿನಾಯಿತಿ ಪಡೆಯುವ ರಾಜಕೀಯ ಪಕ್ಷಗಳೇಕೆ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಿಕೊಳ್ಳಲು ತಕರಾರು ಮಾಡಬೇಕು?

ರಾಜಕೀಯ ಪಕ್ಷಗಳು ಕಾರ್ಪೊರೇಟ್ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಪಡೆಯುತ್ತವೆ. ಸರ್ಕಾರದಿಂದ ಪರೋಕ್ಷ ಲಾಭ ಮಾಡಿಕೊಂಡಿವೆ. ಪಕ್ಷಗಳು ಕಂಪನಿಯೂ ಅಲ್ಲ ಸಾರ್ವಜನಿಕ ಸಂಸ್ಥೆಯೂ ಅಲ್ಲ ಎಂದಾದರೆ ಅವುಗಳ ಅಸ್ವಿತ್ವ ಯಾವ ಸ್ವರೂಪದ್ದು? ಕೇಂದ್ರಸರ್ಕಾರ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರಕರಣದಲ್ಲಿ ಚುನಾವಣಾ ಆಯೋಗಕ್ಕೆ ಪಕ್ಷದ ಲೆಕ್ಕ ಪತ್ರಗಳನ್ನು ವಿವೇಚಿಸುವ ಅಧಿಕಾರ ಇಲ್ಲ ಎಂದು ತಕರಾರು ಸಲ್ಲಿಸಿದೆ. ಚುನಾವಣಾ ಆಯೋಗಕ್ಕೂ ಆ ಅಧಿಕಾರ ಇಲ್ಲ, ಪಕ್ಷಗಳು ಆರ್ಟಿಧಐ ವ್ಯಾಪ್ತಿಗೂ ಬರುವುದಿಲ್ಲ ಎಂದಾದರೆ ಈ ಪಕ್ಷಗಳು ಯಾರಿಗೆ ಉತ್ತರದಾಯಿತ್ವ ಹೊಂದಿವೆ? ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೀರಿದ ಸರ್ವಾಧಿಕಾರಿ ಧೋರಣೆ ಅಲ್ಲವೇ?

ಭಾರತದ ರಾಜಕೀಯ ಪಕ್ಷಗಳು ಒಂದು ರೀತಿ ವಿಶೇಷ ವ್ಯವಹಾರಿಕ ಸಂಸ್ಥೆಗಳಾಗಿವೆ. ಸಾರ್ವಜನಿಕ ಹಿತರಕ್ಷಣೆಯ ನೆಪದಲ್ಲಿ ಬಡ ಜನರನ್ನು ಅಗ್ಗದ ಗಿಮಿಕ್ಗಕಳಿಂದ ಮೋಸ ಮಾಡುವುದು, ಶತಾಯಗತಾಯ ಅಧಿಕಾರ ಹಿಡಿಯುವುದು, ಅಧಿಕಾರಶಾಯಿ ಹಾಗೂ ಶಾಸಕಾಂಗದ ಕಾರ್ಯಭಾರದಲ್ಲಿ ಅನಗತ್ಯ ಮೂಗು ತೂರಿಸುವುದು, ಅಧಿಕಾರಿಗಳನ್ನು ತಮ್ಮ ಇಚ್ಚಾನುಸಾರ ಬಳಸಿಕೊಂಡು ಹಣ ಎತ್ತುವ ಯಂತ್ರಗಳಂತೆ ಬಳಸಿಕೊಳ್ಳುವುದು, ಜನರ ಮಧ್ಯೆ ಕೋಮುದ್ವೇಷದ ವಿಷ ಬೀಜ ಬಿತ್ತುವುದು ಬಹುತೇಕ ರಾಜಕೀಯ ಪಕ್ಷಗಳ ಹಿಡನ್ ಅಜೆಂಡ್ ಎಂದು ಎಲ್ಲರಿಗೂ ಗೊತ್ತಿದೆ . ಆದರೂ ಎಲ್ಲಾ ಪಕ್ಷಗಳೂ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಬೊಬ್ಬೆ ಹೊಡೆಯುತ್ತವೆ. ಹಾಗೆ ಹೇಳುವ ಪಕ್ಷಗಳೇ ತಾವು ಪಾರದರ್ಶಕವಾಗಿರಲು ಬಯಸುವುದಿಲ್ಲ. ಸ್ವಿಸ್ ಬ್ಯಾಂಕಿಂದ 1456ಕೋಟಿ ಬಿಲಿಯನ್ ಡಾಲರ್ ಕಪ್ಪು ಹಣ ಹಿಂದೆ ತರಲು ಒತ್ತಾಯಿಸುವ ಪಕ್ಷ ತನ್ನ ದೇಣಿಗೆ,ಖರ್ಚು ವೆಚ್ಚ, ಆದಾಯದ ಮೂಲ ಹಾಗೂ ಚುನಾವಣೆಗೆ ನಿಲ್ಲಿಸುವ ಅಭ್ಯರ್ಥಿಗಳ ಸಾಚಾತನವನ್ನು ಬಹಿರಂಗೊಳಿಸುವ ಇಚ್ಚಾಶಕ್ತಿ ಪ್ರದರ್ಶಿಸುವುದಿಲ್ಲ.

ಈಗ ಮತ್ತೊಂದು ಚುನಾವಣೆ ಬಂದಿದೆ. ಮತದಾರರಿಗೆ ತಾವು ಓಟು ಹಾಕುವ ಅಭ್ಯರ್ಥಿಯ ಹಾಗೂ ಅವನು ಪ್ರತಿನಿಧಿಸುವ ಪಕ್ಷದ ವಿವರಗಳನ್ನು ತಿಳಿಯುವ ಅರ್ಹತೆ ಇದೆ. ಅಗಾಧ ಪ್ರಮಾಣದ ಕಪ್ಪು ಹಣದ ಹರಿವು ಹಾಗೂ ಅಕ್ರಮ ವೆಚ್ಚ, ಆಮಿಷಗಳನ್ನು ತಡೆಗಟ್ಟಲು ಮತದಾರರಿಗೆ ಸಿಗಬಹುದಾಗಿದ್ದ ಒಂದೇ ಒಂದು ಅಸ್ತ್ರವನ್ನು ರಾಜಕೀಯ ಪಕ್ಷಗಳು ಕಿತ್ತುಕೊಂಡಿವೆ. ಹಾಗಾಗಿ ಈ ಹಿಂದೆ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಡಿದ್ದಂತೆ ಮತದಾರರು ಹಾಗೂ ಸಂಘಸಂಸ್ಥೆಗಳು ಸಿಐಸಿ ಆದೇಶ ಪಾಲಿಸುವಂತೆ ಮತ್ತು ಕೇಂದ್ರ ಹಾಗು ರಾಜ್ಯ ಮಟ್ಟದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಬೇಕು. ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತರಾದ ಅರುಣ್ ರಾಯ್,ಅಂಜಲಿ ಭರದ್ವಾಜ್, ನಿಖಿಲ್ ದೇವ್ ಮೊದಲಾದವರು ನಡೆಸುತ್ತಿರುವ ಆಂದೋಲಕ್ಕೆ ಸ್ಥಳೀಯವಾಗಿ ಬೆಂಬಲ ನೀಡಬೇಕು. ಅಲ್ಲದೆ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಬರುವ ಸಂಗತಿಯನ್ನು ಚುನಾವಣಾ ವಿಷಯವನ್ನಾಗಿ ಹೊರಹೊಮ್ಮಿಸಬೇಕಿದೆ. ಈ ಆಂದೋಲನಕ್ಕೆ ಸ್ಥಳೀಯವಾಗಿ ಅಮ್ ಆದ್ಮಿ ಪಕ್ಷ ನೇತೃತ್ವ ವಹಿಸಬೇಕು ಎಂಬುದೇ ಎಲ್ಲರ ನಿರೀಕ್ಷೆಯಾಗಿದೆ.

ಚಿತ್ರ ಕೃಪೆ :post.jagran.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments