ವಿಷಯದ ವಿವರಗಳಿಗೆ ದಾಟಿರಿ

ಮೇ 7, 2014

30

ಪಂಕ್ತಿ ಭೋಜನದ ಸುತ್ತಮುತ್ತ

‍ನಿಲುಮೆ ಮೂಲಕ

-ಪ್ರಜ್ಞಾ ಆನಂದ್

ಪ್ರತ್ಯೇಕ ಪಂಕ್ತಿ ಬೇಧಉಡುಪಿಯಲ್ಲಿ ಊಟದ ಮಧ್ಯೆ ಬ್ರಾಹ್ಮಣಳಲ್ಲವೆಂಬ ಕಾರಣಕ್ಕೆ ಓರ್ವ ಮಹಿಳೆಯನ್ನು ಊಟದ ಪಂಕ್ತಿಯಿಂದ ಹೊರಹಾಕಿದ ಘಟನೆ ಬಹಳ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಆ ಘಟನೆಯನ್ನು ವಿಶ್ಲೇಶಿಸುವ ಸಂದರ್ಭದಲ್ಲಿ ಪರ ಹಾಗೂ ವಿರೋಧದ ಬಗ್ಗೆ ನಡೆದ ಚರ್ಚೆಗಳು ತೀರ ಬಾಲಿಶವಾಗಿಯೂ, ಅನುಚಿತವಾಗಿಯೂ ಇದ್ದಂತೆ ಕಂಡುಬಂದಿತು;ಒಂದು ರೀತಿಯಲ್ಲಿ ನಿಷ್ಪ್ರಯೋಜಕವೂ ಹೌದು.ಪರವಾಗಿ ವಾದಿಸಿದ ಬಹುತೇಕರು ಹೇಳಿದ್ದೇನೆಂದರೆ ಊಟ ಎನ್ನುವದು ಬ್ರಾಹ್ಮಣರಿಗೆ ಯಜ್ಞ ಇದ್ದಂತೆ ಹಾಗೂ ಅನೇಕ ವಿಧಿ ವಿಧಾನಗಳನ್ನು ಅನುಸರಿಸಬೇಕಾದ್ದರಿಂದ ಬ್ರಾಹ್ಮಣರಿಗೆ ಬೇರೆಯದೆ ಪಂಕ್ತಿಭೋಜನ ಸರಿ ಎಂದು. ಇದನ್ನು ವಿರೋಧಿಸಿ ಹೇಳಿದವರಲ್ಲಿ ಇದೊಂದು ಅಮಾನವೀಯ, ಹಿಂದೂ ಧರ್ಮಕ್ಕೆ ತೊಡಕು, ಜಾತ್ಯಾತೀತವಲ್ಲ ಇತ್ಯಾದಿ ಹೇಳಿಕೆಗಳು. ಬಹುತೇಕವಾಗಿ ಎಲ್ಲರೂ ಜಾತ್ಯಾತೀತದ ಆಧಾರದ ಮೇಲೆ ಇದನ್ನು ವಿರೋದಿಸಿದ್ದಾರೆ. ಬ್ರಾಹ್ಮಣ, ಶೂದ್ರ ಇತ್ಯಾದಿಯಾಗಿ ಹೈಪೊಥೆಟಿಕಲ್ ಥಿಯರಿಯನ್ನು ಹೊಂದಿದ್ದವನಿಗೆ ಈ ಘಟನೆ ಹೊಸ ಫಾರ್ಮುಲಾದ ಅವಿಷ್ಕಾರವನ್ನು ನೀಡಿರಬಹುದು. ಇದಕ್ಕೂ ಮೀರಿದ ರೀತಿಯಲ್ಲಿ ಪಂಕ್ತಿಭೇದದ ಬಗ್ಗೆ ವಿವರಣೆಯನ್ನು ನೀಡಬಹುದಾದರೆ ನೈಜತೆಯ ಬಗ್ಗೆ ಪರಿಶೀಲಿಸಲು ಅನುಕೂಲವಾಗಬಹುದು.

ಪಂಕ್ತಿಭೇದದ ಪರ ವಾದಿಸುವವರನ್ನು ತೆಗೆದುಕೊಂಡರೆ ಅವರ ಪ್ರಕಾರ ಬ್ರಾಹ್ಮಣರ ಊಟ ಎಂಬುದು ಯಜ್ಞ.ಈ ವಿಧಿ ವಿಧಾನದ ಆಚರಣೆಗೋಸ್ಕರ ಪ್ರತ್ಯೇಕ ಪಂಕ್ತಿಭೋಜನದ ಅಗತ್ಯತೆಯನ್ನು ವಿವರಿಸುತ್ತಾರೆ. ಆದರೆ ಅದು ನಿಜವಾದಲ್ಲಿ, ಎಲ್ಲಾ ಬ್ರಾಹ್ಮಣರೂ ಎಲ್ಲಾ ಪ್ರದೇಶದಲ್ಲಿಯೂ, ಎಲ್ಲಾ ಸಂದರ್ಭದಲ್ಲಿಯೂ ಅಂತಹ ಆಚರಣೆಗಳನ್ನು ಅನುಸರಿಸಬೇಕಾಗಿತ್ತು. ಆದರೆ ಇಂತಹ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವ ಬ್ರಾಹ್ಮಣರು ತೀರ ಅತ್ಯಲ್ಪ;ದೇವಾಲಯ, ಮಠಗಳಲ್ಲಿರುವ ಕೆಲವೇ ಮಂದಿ ಮಾತ್ರ. ಉಳಿದವರು ಕಟ್ಟುನಿಟ್ಟಾಗಿ ಆಚರಣೆಗಳನ್ನು ಪಾಲಿಸುವವರಲ್ಲ. ಎಷ್ಟೋ ಸಮಯದಲ್ಲಿ ಹೊಟೆಲ್ ಗಳಲ್ಲಿ ತಿನ್ನುವದು ಸಾಮಾನ್ಯವೆ. ಅಲ್ಲೆಲ್ಲಾ ಪಂಕ್ತಿಬೇದಗಳೂ ಲೆಕ್ಕಕ್ಕಿರುವದಿಲ್ಲ, ಅಡುಗೆ ಮಾಡಿದ ಜನರ ಕುಲ ಗೋತ್ರಗಳೂ ಲೆಕ್ಕಕ್ಕಿರುವದಿಲ್ಲ. ಊಟದ ಆಚರಣೆ/ಪದ್ದತಿಗಳೂ ಅನುಸರಿಸಲೇಬೇಕಾದ ಯಜ್ಞವೆಂಬಂತೆ ಎಲ್ಲಾ ಬ್ರಾಹ್ಮಣರಿಗೆ ತೋರುವದೂ ಇಲ್ಲ. ಕೆಲವು ದಿವಸಗಳಲ್ಲಿ, ಕೆಲವು ಸಂದರ್ಭಗಳಲ್ಲಿ, ಕೆಲವು ಸ್ಥಳಗಳಲ್ಲಿ ಮಾತ್ರ ಆ ಸ್ಥಳದ ಸಂಪ್ರದಾಯ ಎಂಬಂತೆ ಪಾಲಿಸುತ್ತಾರೆ.ಹಾಗಾಗಿ, ಉಡುಪಿ ಮಠದಲ್ಲಿನ ಪಂಕ್ತಿಭೇದ ಆ ಸ್ಥಳಕ್ಕೆ, ಸಂದರ್ಭಕ್ಕೆ ಮಾತ್ರ ಸೀಮಿತವಾಗಿರುವದೇ ಹೊರತು, ಬ್ರಾಹ್ಮಣ ಆಚರಣೆ/ವಿಧಿ ವಿಧಾನಗಳು, ಯಜ್ಞ ಎಂಬೆಲ್ಲಾ ಕಾರಣ ಕೊಟ್ಟು ಸಮರ್ಥಿಸುವದು ಹಾಸ್ಯಾಸ್ಪದ.

ಇನ್ನು ಇದನ್ನು ವಿರೋಧಿಸುವವರಲ್ಲಿ ಬೇರೆ ಬೇರೆಯ ಗುಂಪಿಗೆ ಸೇರಲ್ಪಟ್ಟವರಿದ್ದಾರೆ. ಪ್ರೊಟೆಸ್ಟಂಟ್ -ಹಿಂದೂಗಳು, ರಾಜಕೀಯ ಹಿತಾಸಕ್ತರು, ಹಾಗೂ ಸಾಮಾಜಿಕ ಚಳುವಳಿಗಳಿಂದ, ಅಧ್ಯಯನಗಳಿಂದ ಪ್ರೇರೆಪಿತಗೊಂಡವರು. ಈ ಮೂರು ಗುಂಪುಗಳಲ್ಲಿ ನನಗೆ ಉತ್ತರಿಸಲೇಬೇಕಾದ ಅನಿವಾರ್ಯತೆ ಇದ್ದಂತೆ ತೋರುವದು ಪ್ರೊಟೆಸ್ಟಂಟ್ -ಹಿಂದೂಗಳಿಗೆ. ಈ ಬಗ್ಗೆ ಪ್ರೊಟೆಸ್ಟಂಟ್-ಹಿಂದುಗಳ ಕಾಳಜಿ, ಪ್ರಾಮಾಣಿಕತೆ ಅಭಿನಂದನೀಯ. ಅದರೆ ಇಂತಹ ಘಟನೆಯನ್ನು ಅವಲೋಕಿಸುವಲ್ಲಿ ಅವರ ಉತ್ಪ್ರೇಕ್ಷಣೀಯ ನಿಲುವು, ಅಸಹನೆ ಅನಗತ್ಯ ಅನಿಸುತ್ತದೆ. ಪ್ರೊಟೆಸ್ಟಂಟ್-ಹಿಂದುಗಳ ಪ್ರಕಾರ ಜಾತಿಗಳ ನಡುವಿನ ಈ ಕಂದಕ ಅವರ ಹಿಂದೂಯಿಸಂ ಗೆ ಮಾರಕ. ಹಾಗಾಗಿ ಪಂಕ್ತಿಭೇದವನ್ನು ಉಗ್ರವಾಗಿ ಖಂಡಿಸುವದು ಅವರ ಆದ್ಯತೆ. ಅವರ ಹಿಂದೂಯಿಸಂನ ಪರಿಕಲ್ಪನೆಯಲ್ಲಿ ಈ ನಿಲುವು ಸ್ವಾಗತಾರ್ಹ ಹೌದು. ಆದರೆ, ಈ ದಿಸೆಯಲ್ಲಿ ತಮ್ಮ ಕಲ್ಪನೆಯ ಹಿಂದೂಯಿಸಂನೊಳಗೆ ಉಡುಪಿ ಮಠ (ಅಥವಾ ಉಡುಪಿ ಮಠಗಳಂತಿರುವ ಉಳಿದ ಮಠಗಳನ್ನು) ಸೇರಿದೆ ಎಂದು ಊಹಿಸಿಕೊಂಡು, ತಮ್ಮದೇ ಹಿಂದೂಯಿಸಂನ ಆದರ್ಶಗಳನ್ನು ಅನಿರ್ಭಂದಿತವಾಗಿ(unconditionally) ಉಡುಪಿ ಮಠಗಳಂತ ಧಾರ್ಮಿಕ ಸಂಸ್ಥೆಗಳಿಂದ ಅಪೇಕ್ಷಿಸುತ್ತಿರುವದು ಅವರ ಅಸಹನೆಗೆ ಮೂಲ ಕಾರಣ.

ಉದಾರಣೆಗೆ, ಒಂದು ಹಳ್ಳಿ ಇದೆ ಅಂದುಕೊಳ್ಳಿ. ಆ ಹಳ್ಳಿಯ ಜನರು ಒಂದಿಲ್ಲೊಂದು ರೀತಿಯಿಂದ ಪರಸ್ಪರ ಅವಲಂಬನೆಯಿಂದಲೋ ಪರಸ್ಪರ ಹತ್ತಿರವಿದ್ದಿರುತ್ತಾರೆ. ಅವರವರೊಳಗೆ ಒಂದು ಅಲಿಖಿತ ನಾರ್ಮ್ ಬೆಳೆದುಬಂದಿರುತ್ತದೆ. ಹಾಗಿದ್ದಾಗ ಆ ಹಳ್ಳಿಯವನೊಬ್ಬ ಭಿನ್ನವಾದ ರೀತಿ ರಿವಾಜುಗಳನ್ನು ಬೆಳೆಸಿಕೊಂಡನೆಂದರೆ ಉಳಿದವರಿಗೆ ಅಸಹನೆಯಾಗತೊಡಗುತ್ತದೆ. ಆತ ತಮ್ಮಿಂದ ದೂರವಾಗುತ್ತಿದ್ದಾನೆ ಎಂಬುದೆ ಅವರ ಆತಂಕವಾಗುತ್ತದೆ. ಆತನೂ ಆ ಹಳ್ಳಿಯ ನೀತಿ ಸಂಹಿತೆಯ ಭಾಗವಾಗಿರಲೇಬೇಕು ಎನ್ನುವದು ಅವರ ಹಠವಾಗಿರುತ್ತದೆ. ಇಂತಹುದೆ ಮಾನಸಿಕ ಸನ್ನಿವೇಶ ಪ್ರೊಟೆಸ್ಟಂಟ್ -ಹಿಂದೂಗಳಲ್ಲಿ ಮೂಡಿದೆ. ಉಡುಪಿ ಮಠ ಹಾಗೂ ಇನ್ಯಾವುದೇ ಹಿಂದೂಗಳ ಅಂಗಗಳೆಂದು ಗುರುತಿಸಲ್ಪಡುವ ಸಂಸ್ಥೆಗಳು ಅವರ ಕಲ್ಪನೆಯ ಹಿಂದೂ ಧರ್ಮವನ್ನು ಪ್ರತಿನಿಧಿಸಲೆಬೇಕು ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ. ಹಾಗಿದ್ದಾಗ ಅಲ್ಲಿ ನಡೆಯುತ್ತಿರುವ ಪಂಕ್ತಿಬೇಧವಾಗಲೀ ಅಥವಾ ಅವರ ಬೇರಾವುದೇ ಅವರ ಹಿಂದೂಯಿಸಂಗೆ ವಿರುದ್ಧವೆನಿಸಿದ ಪದ್ದತಿಗಳು ಹಿಂದೂಯಿಸಂನಲ್ಲಿನ ಬಿರುಕು ಎಂದು ಭ್ರಮನಿರಸನಗೊಳ್ಳುತ್ತಾರೆ.

ಅವರಿಗೆ ನಾನಿದಿಷ್ಟನ್ನೆ ಹೇಳಬಯಸುತ್ತೇನೆ. ‘ನಿಮ್ಮ ಹಿಂದೂಯಿಸಂನ ಕಲ್ಪನೆಗೆ ಸ್ಪಷ್ಟವಾದ ರೂಪ ಕೊಡಿ. ಅದಕ್ಕೆ ಹೊರತಾದ ಪದ್ದತಿ ಆಚರಣೆಗಳನ್ನು ಅನುಸರಿಸುವ ಸಂಪ್ರದಾಯವಾದಿಗಳನ್ನು ಮಠ, ಸಂಸ್ಥೆಗಳನ್ನು ನಿಮ್ಮ ಲಿಸ್ಟ್ ನಿಂದ ಹೊರಹಾಕಿ. ಹೆಚ್ಚೆಂದರೆ ಅವರನ್ನು ಮನವೊಲಿಸಿ ನಿಮ್ಮ ಲಿಸ್ಟ್ ನೊಳಗೆ ಸೇರಿಸಿಕೊಳ್ಳಲು ನಿಮ್ಮದೆ ಮಿಶನ್ ನಡೆಸಿರಿ. ಅವರಿಗೆ ನಿಮ್ಮ ರಾಜಕೀಯ, ಸಾಮಾಜಿಕ ಅಗತ್ಯ ಇದ್ದರೆ ನಿಮ್ಮನ್ನು ಅನುಸರಿಸುತ್ತಾರೆ, ಇಲ್ಲದಿದ್ದಲ್ಲಿ ಬೇರೆಯಾಗುತ್ತಾರೆ. ಇನ್ನು ಆ ಮಠ ನ್ಯಾಯಯುತವಾಗಿ ಸಾರ್ವಜನಿಕ ಸ್ವತ್ತಾಗಿದ್ದರೆ, ಅದನ್ನು ಸಾರ್ವತ್ರೀಕರಣಗೊಳಿಸಲು ಕಾನೂನು ಹೋರಾಟ ಮಾಡಿ. ಅದರ ಬದಲು ಅಂತಹ ಮಠ, ಸಂಸ್ಥೆಗಳನ್ನು ನಿಮ್ಮ ಕಲ್ಪನೆಯ ಆದರ್ಶ ಹಿಂದೂಯಿಸಂ ನ ಭಾಗವಾಗಿ, ಅಥವಾ ವಾರಸುದಾರರಾಗಿ ನೋಡಲು ಬಯಸಿದರೆ ಅಂತಹ ನಿಮ್ಮ ಪ್ರಯತ್ನ ಹುರುಳಿಲ್ಲದ್ದು. ನಾಳೆ ಯಾವುದೋ ಒಂದು ದೇವಸ್ಥಾನದಲ್ಲಿ ತೀರ್ಥದ ಬದಲು ಕೋಕ್, ಪೆಪ್ಸಿ ಕೊಡಬಹುದು, ಪೂಜೆಯ ವಿಧಿ ವಿಧಾನವನ್ನು ನಿಮ್ಮ ಕಲ್ಪನೆಗೆ ವ್ಯತಿರಿಕ್ತವಾಗಿ ಆಚರಿಸಬಹುದು. ಆಗೆಲ್ಲ ಅದನ್ನು ವಿರೋಧಿಸಲು, ಚರ್ಚಿಸಲು, ನಿಮ್ಮ ದಂಡಿನೊಂದಿಗೆ ತೆರಳಬೇಕಾಗಬಹುದು. ನಿಮ್ಮ ಹಿಂದುತ್ವದ ಅಸ್ತಿತ್ವವನ್ನು ಉಡುಪಿ ಮಠದಲ್ಲಿಟ್ಟು ಅವರಿಂದ ನಿಮ್ಮ ಆದರ್ಶಗಳನ್ನು ನಿರೀಕ್ಷಿಸುವದು ಮೂರ್ಖತನ. ಅದು ನೀವು ಅವರ ಮೇಲೆ ಅವಲಂಬಿತರಾಗಿದ್ದೀರಿ ಎನ್ನುವದನ್ನು ಸ್ಪಷ್ಟ ಪಡಿಸುತ್ತದೆ. ಹಾಗಾಗಬಾರದು. ಅವರು ನಿಮ್ಮ ಮೇಲೆ ಅವಲಂಬಿತರಾಗುವಂತೆ ಮಾಡಬೇಕೆ ಹೊರತೂ ನೀವು ಅವರ ಅವಲಂಬಿಗಳಾಗಕೂಡದು. ನಿಮ್ಮ ಹಿಂದೂ ನೀತಿ ಸಂಹಿತೆಯನ್ನು ನಿಮ್ಮ ಆದರ್ಶಗಳನ್ನು ಒಪ್ಪುವ ಅಂಗ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಿರಿ. ನಿಮ್ಮ ನೀತಿ ಸಂಹಿತೆಗಳನ್ನು ಎಲ್ಲಾ ಹಿಂದೂ ಅಂಗ ಸಂಸ್ಥೆಗಳೂ ಒಪ್ಪಲೆಬೇಕೆನ್ನುವ ಮನಸ್ಥಿತಿಯೆ ನಿಮ್ಮ ಗೊಂದಲಗಳಿಗೆ ಕಾರಣ’.

ಇನ್ನು ಮಾನವೀಯ ಕಾರಣಗಳಿಗಾಗಿ ವಿರೋಧಿಸುವವರು ’ಮಾನವೀಯತೆ’ ಎಂಬುದರ ಬಗ್ಗೆ ಸ್ಪಷ್ಟ ವಿವರಣೆ ಹೊಂದಿರುವದಿಲ್ಲ. ಒಬ್ಬ ಸೆಕಂಡ್ ಕ್ಲಾಸ್ ನಲ್ಲಿ ಟಿಕೆಟ್ ತೆಗೆದುಕೊಂಡವನು ಬಾಲ್ಕನಿಗೆ ಹೋಗಿ ಕುಳಿತುಕೊಂಡರೆ ಆತನನ್ನು ಮಧ್ಯದಲ್ಲಿ ಎಬ್ಬಿಸಬಹುದು. ಆಗ ಅದು ನಮಗೆ ಅಮಾನವೀಯ ಎಂದೆನಿಸದೇ ಇರಬಹುದು. ಹಾಗೆ ಸಮಾಜದಲ್ಲಿನ ಎಷ್ಟೋ ಅಂತರಗಳಲ್ಲಿನ ಜೀವನಗಳನ್ನು ನಾವು ಕೆಲವೊಮ್ಮೆ ಒಪ್ಪಿಕೊಳ್ಳುತ್ತೇವೆ, ಕೆಲವೊಮ್ಮೆ ಅದು ಸಾಮಾನ್ಯ ಎಂದು ನಿರ್ಲಕ್ಷಿಸುತ್ತೇವೆ ಅಥವಾ ವಿರೋಧಿಸಲೂಬಹುದು. ಆಗೆಲ್ಲಾ ನಮ್ಮ ಜೀವನದ ಸಾಂಸ್ಕೃತಿಕ, ವೈಯಕ್ತಿಕ ಜೀವನದ ಹಿನ್ನೆಲೆಗಳು ಪೂರಕವಾಗಿರುತ್ತದೆ. ಅವು ನಮ್ಮಲ್ಲಿ ಒಂದು ಕಾನ್ಷಿಯಸ್ ನೆಸ್ ಅನ್ನು ಹುಟ್ಟುಹಾಕಿಬಿಡುತ್ತದೆ. ಒಬ್ಬಳು ಹುಡುಗಿ ಒಬ್ಬ ಹುಡುಗನನ್ನು ಕರಿಯ ಎಂಬ ಕಾರಣಕ್ಕೆ ಆತನನ್ನು ಮದುವೆಯಾಗಲು ನಿರಾಕರಿಸಿದರೆ ರೇಸ್ ಕಾನ್ಷಿಯಸ್ ನೆಸ್ ಇರುವ ಸುಧಾರಣಾವಾದಿ ಹಿನ್ನೆಲೆಯಿಂದ ಬಂದಿರುವವನಿಗೆ ಇದೊಂದು ಅತಿ ಅಮಾನವೀಯ ಅನಿಸುತ್ತದೆ. ಒಂದು ವೇಳೆ ಆತ ಆರ್ಥಿಕವಾಗಿ ಪ್ರಬಲನಲ್ಲ ಎಂಬ ಕಾರಣಕ್ಕೆ ನಿರಾಕರಿಸಿದರೆ ಕ್ಲಾಸ್ ಕಾನ್ಷಿಯಸ್ ನೆಸ್ ಇರುವ ಸುಧಾರಣವಾದಿಗೆ ಅದು ಅಮಾನವೀಯ ಎಂದೆನಿಸಬಹುದು. ಆತ ಓದಿಲ್ಲ, ಅಶಿಕ್ಷಿತ ಎಂಬ ಕಾರಣಕ್ಕೆ ನಿರಾಕರಿಸಿದರೆ ಅದು ಅವರಿಬ್ಬರಿಗೂ ರೀಸನೇಬಲ್ ಎನಿಸಬಹುದು. ಆದರೆ ಅಶಿಕ್ಷಿತ-ಸುಶಿಕ್ಷಿತ ಅಂತರದ ಸಮಾಜದಿಂದ ಒಬ್ಬ ಬೆಳೆದುಬಂದವನಿದ್ದರೆ, ಹಾಗೂ ಆತ ಅಶಿಕ್ಷಿತರ ಪರ ಹೋರಾಟ ನಡೆಸಿದ್ದರೆ, ಆತನಿಗೆ ಅಶಿಕ್ಷಿತ ಎಂಬ ನಿರಾಕರಣೆಯು ಅಮಾನವೀಯ ಎಂದು ಅಗತ್ಯವಾಗಿ ಎನಿಸುತ್ತದೆ.

ನನ್ನ ಪರಿಚಯದೊಬ್ಬರ ಬ್ರಾಹ್ಮಣರ ಮನೆಯಲ್ಲಿ ಮನೆಯ ವಯಸ್ಸಾದವರೊಬ್ಬರು ಮರಣ ಹೊಂದಿದರು. ’ಸೂತಕ’ ಎನ್ನುವದನ್ನು ಅಲ್ಲಿನ ಬ್ರಾಹ್ಮಣರಷ್ಟೆ ಅಲ್ಲ, ಬ್ರಾಹ್ಮಣೆತರರೂ ನಂಬುತ್ತಾರೆ. ಬ್ರಾಹ್ಮಣೆತರಳಾದ ಅವರ ಮನೆಯ ಕೆಲಸದವಳು ಆ ಮನೆಯಲ್ಲಿ ೧೧ ದಿನಗಳ ತನಕ ನೀರನ್ನೂ ಕುಡಿಯಲಿಲ್ಲ. ಮನೆಯ ಜನರನ್ನು, ಬಟ್ಟೆಬರೆಗಳನ್ನು ಮುಟ್ಟಿಸಿಕೊಳ್ಳುವದಂತೂ ಸಾಧ್ಯವೇ ಇರಲಿಲ್ಲ. ನನಗೆ ಆಶ್ಚರ್ಯವಾಗಿ ಮನೆಯವರನ್ನು ಕೇಳಿದಾಗ ಅವರು ಉತ್ತರಿಸಿದರು. ಆ ಕೆಲಸದಾಕೆಯ ಜಾತಿಯವರು, ದೆವ್ವವನ್ನು ಬಹಳವಾಗಿ ನಂಬುತ್ತಾರಂತೆ. ಹಾಗಾಗಿ ಸೂತಕದ ದಿನಗಳಲ್ಲಿ ಕೆಲಸದವಳ ಪಾಲಿಗೆ ಇವರು ಬ್ರಾಹ್ಮಣರಾದಾಗ್ಯೂ ಅಸ್ಪೃಶ್ಯರೆ! ಇದನ್ನು ಆ ಮನೆಯವರು ಅಸ್ಪೃಶ್ಯತೆ, ಅಮಾನವೀಯ  ಎಂದು ಕಣ್ಣೀರಿಟ್ಟಿಲ್ಲ. ಯಾಕೆಂದರೆ ಇದನ್ನು ಸಂಸ್ಕೃತಿಯ ಭಾಗವೆಂಬಂತೆ ಅರ್ಥೈಸಿಕೊಳ್ಳುತ್ತಾರೆ. ಮೂರನೆಯವನಿಗೆ ಇದು ಅಮಾನವೀಯವಾಗಿ ಕಂಡರೆ ಅದು ಮಾನವೀಯತೆಯ ಬಗೆಗಿನ ಆತನ ಚಿಂತನೆಯ ಕೊರತೆ.

ಹಾಗಾಗಿ, ಹೀಗೆ ಬೇರೂರಿದ ಕಾನ್ಷಿಯಸ್ ನೆಸ್ ಹಾಗೂ ಅದು ಹುಟ್ಟುಹಾಕಿದ ಮೌಲ್ಯಗಳು ಆಯಾ ಪ್ರದೇಶ,ಸಂಸ್ಕೃತಿ,ಕಾಲಕ್ಕನುಸಾರವಾಗಿ ಬದಲಾವಣೆಯಾಗುತ್ತದೆ. ನಾವು ಆಯಾ ಸಂಸ್ಕೃತಿಗಳಲ್ಲಿ ಕಾಣಸಿಗದ ಕೆಲವು ಮೌಲ್ಯಗಳು ಸಾರ್ವತ್ರಿಕವಾಗಿರಲೇಬೇಕು ಎಂದು ಆಶಯಿಸಿದಾಗ ಇಂತಹ ಆಚರಣೆಗಳು, ಅಮಾನವೀಯ, ಭ್ರಷ್ಟ ಎಂಬ ನಿಲುವಿಗೆ ಬರುತ್ತೇವೆ. ಹಾಗಾಗಿ ಅದನ್ನು ’ಮಾನವೀಯ’ ನೆಲೆಗಟ್ಟಿನಲ್ಲಿ ತಪ್ಪು ಸರಿ ಎಂದು ನಿರ್ಣಯಿಸುವದು ಬಾಲಿಷತನ.

ಇನ್ನು ಮೂರನೆಯದಾಗಿ, ಜಾತ್ಯಾತೀತದ ಬಗ್ಗೆ ಬಾಯಿಪಾಠ ಒಪ್ಪಿಸುವ ಕೆಲವು ಚಳುವಳಿ ಪ್ರೇರಿತ ಗುಂಪುಗಳಿವೆ. ಜಾತ್ಯಾತೀತತೆಯ ಬಗ್ಗೆ ತಮ್ಮ ಅಧ್ಯಯನಗಳ ಕೊರತೆಯನ್ನು ನೀಗಿಸಬೇಕಾದ ಪ್ರಾಮಾಣಿಕ ಪ್ರಯತ್ನವನ್ನು ಇವು ಮಾಡಬೇಕಾಗಿದೆ. ಊಹೆಗಳ ಆಧಾರದ ಮೇಲೆ ನಿಂತ ಇವರ ಅಧ್ಯಯನ, ಜಾತಿಗಳ ಸ್ಟೀರಿಯೋಟೈಪುಗಳನ್ನು ಹುಟ್ಟಿಹಾಕಿರುತ್ತದೆ. ಹಾಗಾಗಿ ಪುಸ್ತಕ ಪಠ್ಯದಲ್ಲಿ ಜಾಜಿಗಳ ಬಗ್ಗೆ ಓದಿದಾಗ ಹಾಗೂ ನಮ್ಮ ಸುತ್ತಮುತ್ತಲಿನ ಜಾತಿಗಳ ಬಗ್ಗೆ ನಮ್ಮ ಅನುಭವ ಒಂದೊಕ್ಕೊಂದು ತಾಳೆಯಾಗುವದೇ ಇಲ್ಲ. ಹಾಗಾಗಿ ಉಡುಪಿ ಮಠದ ಪಂಕ್ತಿ ಭೇದದ ಬಗೆಗಿನ ಇವರ ವಿವರಣೆ ನೈಜತೆಗಿಂತ ಬಹಳ ದೂರ ಇರುವದಂತೂ ನಿಶ್ಚಿತ. ಇವುಗಳಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗನುಗುಣವಾಗಿ ಇವುಗಳ ಅಸ್ತಿತ್ವ ನಿಂತಿರುವದರಿಂದ ಇವರ ವಿರೋಧಗಳೂ ಸಹ ರಾಜಕೀಯ ಲಾಭವನ್ನೆ ಆಶ್ರಯಿಸಿದೆ. ಕೇವಲ ೨೦೦ ಮಂದಿಯೋ ೩೦೦ ಮಂದಿಯೊ ಆಚರಿಸುವ ಪಂಕ್ತಿ ಭೇದ ಲಕ್ಷಗಟ್ಟಲೆ ಬ್ರಾಹ್ಮಣೇತರ ಜನರನ್ನು ಅಸ್ಪೃಶ್ಯರನ್ನಾಗಿ ಮಾಡುತ್ತದೆ ಎನ್ನುವದಕ್ಕಿಂತ ಕಡಿಮೆ ಸಂಖ್ಯೆಯ ಬ್ರಾಹ್ಮಣರನ್ನೆ ಅಸ್ಪೃಶ್ಯರನ್ನಾಗಿ ಮಾಡಿಬಿಡಬಹುದು. ಹಾಗಿದ್ದಾಗ ಪಂಕ್ತಿಭೇದವನ್ನು ಬ್ರಾಹ್ಮಣೆತರರನ್ನು ತುಳಿಯುತ್ತದೆ, ಅಮಾನವೀಯ ಎನ್ನುವದು ತರ್ಕಕ್ಕೆ ನಿಲುಕುವದಿಲ್ಲ.

ಕೊನೆಯದಾಗಿ ಹೇಳಬೇಕೆಂದರೆ ಪಂಕ್ತಿ ಭೇದ ಎನ್ನುವದು ಸಮಸ್ಯೆಯೇ ಅಲ್ಲ. ಸಾಂಸ್ಕೃತಿಕ ವಲಯದಲ್ಲಿ ಹುಟ್ಟಿಕೊಂಡ ಗೊಂದಲಗಳಿಂದಾಗಿ ನಮಗೆ ಸಮಸ್ಯೆ ಎನಿಸಿದೆ. ಮಠ ಎನ್ನುವದು ಸಾರ್ವಜನಿಕರ ಆಸ್ತಿಯಾಗಿದ್ದರೆ ಕಾನೂನು ಹೋರಾಟ ಮಾಡಬಹುದು. ಹಾಗೆ ಕಾನೂನು ಹೋರಾಟ ಮಾಡುವಾಗ ಜಾತಿಯ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಖಾಸಗಿಯಾಗಿದ್ದರೆ, ಅವರ ಸಂಪ್ರದಾಯವನ್ನು ಅವರಿಗೇ ಬಿಟ್ಟು, ಅಲ್ಲಿಗೆ ಹೋಗದೆ ನಿರ್ಲಕ್ಷಿಸಬಹುದು. ಅದರಿಂದ ಕೆಲವೇ ಕೆಲವು ಜನರಿರುವ ಮಠಗಳು ಜನಮಾನ್ಯತೆಯನ್ನು ಕಳೆದುಕೊಳ್ಳಬಹುದೆ ಹೊರತೂ ಜನರು ಏನನ್ನೂ ಕಳೆದುಕೊಳ್ಳುವದಿಲ್ಲ.

30 ಟಿಪ್ಪಣಿಗಳು Post a comment
 1. Harisha
  ಮೇ 7 2014

  ಬಹಳ ವಿಚಾರಪೂರಿತ ಹಾಗೂ ಸಮಯೋಚಿತ ಬರಹ. ಸಮಸ್ಯೆಯ ಎಲ್ಲಾ ಮೂಲೆಗಳನ್ನೂ ವಿಮರ್ಶಿಸಿ ಬರೆದಿದ್ದೀರಿ. ಓದಿ ಬಹಳಾ ಮೆಚ್ಚುಗೆಯಾಯಿತು.

  ಉತ್ತರ
 2. ಹೇಮಾಪತಿ
  ಮೇ 7 2014

  ಪ್ರಿಯ ಪ್ರಜ್ಞಾ ಆನಂದರವರೇ, ನಿಮ್ಮ ಹೇಳಿಕೆ ತರ್ಕಬದ್ಧವಾಗಿದೆ. ಪಂಕ್ತಿ ಭೋಜನವೆಂದರೆ ಸಾಮೂಹಿಕ ಭೋಜನವೆಂದಾದ ಮೇಲೆ ಅಲ್ಲಿ ಪಂಕ್ತಿ ಭೇದವೆಂತಹುದು? ಅಸ್ಪಶ್ಯತೆಯನ್ನು ಯಾರು ಯಾರ ಮೇಲೂ ಹೇರಲಾಗುವುದಿಲ್ಲ. ಯಾರೂ ಅದನ್ನು ಪಾಲಿಸಬೇಕಾಗಿಯೂ ಇಲ್ಲ. ಬ್ರಾಹ್ಮಣರ ಮಠವಾಗಲೀ, ಬೇರೆಯವರ ಮಠವಾಗಲೀ ಅದು ಹತ್ತೂ ಜನ ಹೋಗಿ ಬರುವ ಜಾಗ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಹ್ಯ ರೂಢಿಗಳನ್ನು ಪಾಲಿಸುವುದು ಅಕ್ಷಮ್ಯವೇ ಸರಿ. ಯಾರದೇ ಮಠಗಳಾಗಲೀ ಅದನ್ನು ಮುಜರಾಯಿ ಇಲಾಖೆ ವಹಿಸಿಕೊಳ್ಳುವುದೇ ಸೂಕ್ತ.

  ಉತ್ತರ
  • ವಿಜಯ್ ಪೈ
   ಮೇ 7 2014

   [ಯಾರದೇ ಮಠಗಳಾಗಲೀ ಅದನ್ನು ಮುಜರಾಯಿ ಇಲಾಖೆ ವಹಿಸಿಕೊಳ್ಳುವುದೇ ಸೂಕ್ತ.]
   ಮುಜರಾಯಿ ಇಲಾಖೆ ಏಕೆ ವಹಿಸಿಕೊಳ್ಳಬೇಕು? ಮಠಗಳನ್ನು ಸರ್ಕಾರದ ಒಂದು ಉದ್ಯಮವನ್ನಾಗಿ ಮಾಡಲೆ?
   ದೇವಸ್ಥಾನ/ಮಠಗಳು ತಮ್ಮ ವತಿಯಿಂದ ಸಾರ್ವಜನಿಕ ಊಟ ಹಾಕುವುದನ್ನು ನಿಲ್ಲಿಸಬೇಕು. ಜನ ತಮಗೆ ಬೇಕಾದಲ್ಲಿ ಹೋಗಿ ಊಟ ಮಾಡಲಿ. ಆಗ ಈ ಸಮಸ್ಯೆ ದೂರವಾಗುತ್ತದೆ. ‘ಚಳುವಳಿ’ ದಂಧೆಯವರಿಗೂ ಕೆಲಸ ಕಡಿಮೆಯಾಗುತ್ತದೆ.

   ಉತ್ತರ
   • ಹೇಮಾಪತಿ
    ಮೇ 7 2014

    ಸರ್ಕಾರ ನಡೆಯುತ್ತಿರುವುದೇ ತೆರಿಗೆ ವಸೂಲಾತಿಯಿಂದ. ಅದಕ್ಕೆ ಬೇರೆಲ್ಲಿಂದಲೂ ಹಣ ಬರುವುದಿಲ್ಲ. ಸರ್ಕಾರವನ್ನು ನಡೆಸುವ ರಾಜಕೀಯ ಧುರೀಣರು ಸರಿಯಿಲ್ಲವೆಂದಾಕ್ಷಣ ಸರ್ಕಾರವೇ ಸರಿಯಿಲ್ಲ, ಸರ್ಕಾರದಲ್ಲಿರುವವರೂ ಸರಿಯಿಲ್ಲವೆಂದು ಹೇಳುವುದು ತರ್ಕಬದ್ಧವಲ್ಲ. ಸರ್ಕಾರದಲ್ಲಿರುವವರೂ ಮನುಷ್ಯರೇ. ನಾವು ಬೇರೆ, ಅವರು ಬೇರೆ ಅಲ್ಲ. ಮನುಷ್ಯರು ನಿಷ್ಠೆಯಿಂದ, ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಗಳನ್ನರಿತು ಕೆಲಸ ಮಾಡಿದರೆ ರಾಜ್ಯಕ್ಕಾಗಲೀ, ದೇಶಕ್ಕಾಗಲೀ ಅನ್ಯಾಯವಾಗುವುದಿಲ್ಲ. ಮಠಗಳನ್ನು ಮುಜರಾಯಿ ಇಲಾಖೆಗೆ ವಹಿಸಿಕೊಳ್ಳುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಬರುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುಕೂಲ. ಕೇರಳದ ಅನಂತ ಪದ್ಮನಾಭ ದೇವಸ್ಥಾನದ ಕೊಠಡಿಗಳಲ್ಲಿರುವ ಕೋಟಿಗಟ್ಟಲೇ ಬೆಲೆ ಬಾಳುವ ಚಿನ್ನಗಳನ್ನು ಹೊತ್ತೊಯ್ದು ನಕಲಿ ಆಭರಣಗಳನ್ನು ಮಾಡಿ ಬದಲಾಯಿಸುತ್ತಿರುವುದು ಸರಿಯೇ? ಮೊನ್ನೆ ಮೇಲುಕೋಟೆಯ ಅರ್ಚಕನಿಂದ ನಡೆದಿರುವ ಕಳ್ಳತನ ನಡೆದಿರುವುದೂ ಕೂಡ ಅವುಗಳನ್ನು ನಡೆಸಲು ಸೂಕ್ತ ಆಡಳಿತಾಧಿಕಾರಿಗಳಿಲ್ಲದಿರುವುದು. ಅದೇ ರೀತಿ ಎಲ್ಲ ದೇವಸ್ಥಾನಗಳ ಸ್ಥಿತಿಯೂ ಹಾಗೆ ಇದೆ. ಇವುಗಳನ್ನು ತಡೆಹಿಡಿಯಲು ಸರ್ಕಾರ ಅವುಗಳನ್ನು ವಹಿಸಿಕೊಳ್ಳುವುದೇ ಸೂಕ್ತ. ಬೇರೆ ದಾರಿಯೇ ಇಲ್ಲ. ಖಾಸಗೀಕರಣದಿಂದ ಸಾರ್ವಜನಿಕರಿಗೆ ಏನೂ ಉಪಯೋಗವಿಲ್ಲ.

    ಉತ್ತರ
    • ವಿಜಯ್ ಪೈ
     ಮೇ 7 2014

     [ಖಾಸಗೀಕರಣದಿಂದ ಸಾರ್ವಜನಿಕರಿಗೆ ಏನೂ ಉಪಯೋಗವಿಲ್ಲ.]
     ಸಾರ್ವಜನಿಕರು ಎಂದರೆ ವಿವಿಧ ಮತದವರು, ವಿವಿಧ ನಂಬಿಕೆಯವರು ಇರುತ್ತಾರೆ. ದೇವಸ್ಥಾನಗಳ ಹುಂಡಿಯಿಂದ ಸರಕಾರ ಸಂಗ್ರಹಿಸುವ ಹಣ ತಿರುಗಿ ಕೇವಲ ಧಾರ್ಮಿಕ ಅನುದಾನಕ್ಕೆ ಬಳಸದೇ, ಊಳಿದ ಸಾರ್ವಜನಿಕ ಕೆಲಸಕ್ಕೂ ಬಳಸಲ್ಪಡುವುದರಿಂದ..ಈ ‘ದೇವರು’ ಕಾನ್ಸೆಪ್ಟನ್ನು ಅಡಿಮುಡಿಯಿಂದ ದ್ವೇಷಿಸುವವರಿಗೆ, ನಿರ್ಧಿಷ್ಟ ಮತ/ಸಮುದಾಯದ ದೇವರನ್ನು ದ್ವೇಷಿಸುವವರಿಗೆ ತಾವು ಇಂತಹ ಹಣದ ಫಲಾನುಭವಿಗಳಾಗುತ್ತಿದ್ದೇವಲ್ಲ ಎಂಬ ಜಿಗುಪ್ಸೆ ಮೂಡಿ..ಅವರುಗಳು ತೀರ ದುಃಖಿತರಾಗಬಹುದು.ಅವರ ನೈತಿಕಪ್ರಜ್ಞೆ ಜಾಗೃತವಾಗಿ ಆತ್ಮಸಾಕ್ಷಿ ವಿಲಿವಿಲಿ ಒದ್ದಾಡಬಹುದು.ಆದ್ದರಿಂದ ಇವರಿಗಾಗುವ ರೇಜಿಗೆಯನ್ನು ತಪ್ಪಿಸಲು ದೇವಸ್ಥಾನವನ್ನು ಸರಕಾರ ವಹಿಸಿಕೊಳ್ಳಬಾರದು/ ದೇವಸ್ಥಾನದ ಹುಂಡಿಗಳಿಂದ ದುಡ್ಡನ್ನು ಹೊಡೆಯಬಾರದು..ಬದಲಿಗೆ,
     ಅ) ದೇವಸ್ಥಾನವನ್ನು ಉಳಿದ ಉದ್ಯಮದಂತೆ ನೋಡಬೇಕು. ಇಲ್ಲಿ ಸಂಗ್ರಹವಾಗುವ ಹಣಕ್ಕೆ ಉಳಿದವರಿಂದ ಮಾಡಿದಂತೆಯೇ ಟ್ಯಾಕ್ಷ್ ವಸೂಲಿ ಮಾಡಬೇಕು.
     ಆ) ದೇವಸ್ಥಾನಕ್ಕೆ ಸರಕಾರ ಒದಗಿಸುವ ಯಾವುದೇ ತರಹದ ಸೌಲಭ್ಯಕ್ಕೂ ತಕ್ಕ ಹಣ ಸಂದಾಯ ಮಾಡುವಂತೆ ಮಾಡಬೇಕು.
     ೩) ಸಾರ್ವಜನಿಕ ಅನ್ನಸಂತರ್ಪಣೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು.
     ಹೀಗೆ ಮಾಡಿದಾಗ ಸಾಕಷ್ಟು ಜನರ ‘ಸಮಸ್ಯೆ’ಗಳು ಕಡಿಮೆಯಾಗಿ, ಅವರುಗಳು ಉಳಿದವರಂತೆ ‘ವಿಚಾರ ನೆಮ್ಮದಿ’ಯ ಜೀವನ ಸಾಗಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

     ಉತ್ತರ
     • ಹೇಮಾಪತಿ
      ಮೇ 8 2014

      ನಿಮ್ಮ ಅಭಿಪ್ರಾಯ ನಿಮ್ಮದು. ನನ್ನದನ್ನು ನಾನು ಹೇಳಿದ್ದೇನೆ.

      ಉತ್ತರ
  • ಮೇ 11 2014

   ಪ್ರಿಯ ಹೇಮಾವತಿಯವರೆ,
   ಅಸ್ಪೃಶ್ಯತೆಯನ್ನು ಉಡುಪಿ ಮಠದಲ್ಲಿ ಎಲ್ಲಿ ಹೇರಲಾಗಿದೆ? ಕಂಪನಿಯವರು ನನಗೆ ಕ್ರೆಡಿಟ್ ಕಾರ್ಡ್ ಕೊಡುತ್ತಿಲ್ಲ(ನನ್ನ ಸಂಬಳ ಕಡಿಮೆ ಎಂಬ ಕಾರಣಕ್ಕಾಗಿ) ಎಂದು ನಾನು ಅಸ್ಪೃಶ್ಯತೆ ಎಂದು ಕಿರುಚಿಕೊಳ್ಳಲೇ?

   ಉತ್ತರ
 3. viji
  ಮೇ 7 2014

  [[ಮಠ ಎನ್ನುವದು ಸಾರ್ವಜನಿಕರ ಆಸ್ತಿಯಾಗಿದ್ದರೆ ಕಾನೂನು ಹೋರಾಟ ಮಾಡಬಹುದು. ಹಾಗೆ ಕಾನೂನು ಹೋರಾಟ ಮಾಡುವಾಗ ಜಾತಿಯ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಖಾಸಗಿಯಾಗಿದ್ದರೆ, ಅವರ ಸಂಪ್ರದಾಯವನ್ನು ಅವರಿಗೇ ಬಿಟ್ಟು, ಅಲ್ಲಿಗೆ ಹೋಗದೆ ನಿರ್ಲಕ್ಷಿಸಬಹುದು. ಅದರಿಂದ ಕೆಲವೇ ಕೆಲವು ಜನರಿರುವ ಮಠಗಳು ಜನಮಾನ್ಯತೆಯನ್ನು ಕಳೆದುಕೊಳ್ಳಬಹುದೆ ಹೊರತೂ ಜನರು ಏನನ್ನೂ ಕಳೆದುಕೊಳ್ಳುವದಿಲ್ಲ.]] prjna ಈ ಹಿಂದೆ ರಾಕೇಶ್ ಶೆಟ್ಟಿ ಅವರು ಬರೆದ ಲೇಖನಕ್ಕೆ ಬರೆದ ಕಮೆಂಟಿನಲ್ಲಿ ನಾನು ಇದನ್ನೇ ಹೇಳಿದ್ದೇನೆ. ಅಹಂಕಾರಕ್ಕೆ ಉದಾಸೀನವೆ ಮದ್ದು ಕಾರಣ ನಮಗೆ ಅನ್ಯಾಯವಾಗುತ್ತಿದೆ ಎಂದಾಗ ಅಂಥಲ್ಲಿ ನಾವು ಹೋಗದೆ ಉದಾಸಿನ ಮಾಡುವದೇ ಒಳ್ಳಿತು. ಒಲ್ಲದ ದೇವರಿಗೇಕೆ ಗುಳ್ಳದ ನೈವೇದ್ಯ ಅರ್ಪಿಸಬೇಕು???????????????

  ಉತ್ತರ
  • ಹೇಮಾಪತಿ
   ಮೇ 7 2014

   ಹಾಗಾದರೆ ಮಠಗಳನ್ನು ಹುಟ್ಟು ಹಾಕಿದವರು ಯಾರು? ಏತಕ್ಕಾಗಿ? ಯಾರ ಅನುಕೂಲಕ್ಕಾಗಿ? ತಮ್ಮ ಜಾತಿಗಳನ್ನು ಉದ್ಧಾರ ಮಾಡಲೋಸುಗವೋ? ಜಾತಿಯ ಹೆಸರಿನಲ್ಲಿ ಸ್ವಂತೋದ್ಧಾರವೋ?

   ಉತ್ತರ
  • ಮೇ 11 2014

   viji ಯವರಿಗೆ,
   ನೀವು ಹೇಳಿದ್ದು ನಿಜ.

   ಉತ್ತರ
 4. ವಿಜಯ್ ಪೈ
  ಮೇ 7 2014

  ಉತ್ತಮ ಲೇಖನ..ಉತ್ತಮ ವಿಶ್ಲೇಷಣೆ ಪ್ರಜ್ಞಾ ಆನಂದ ಅವರೆ 🙂

  ಉತ್ತರ
 5. Nagshetty Shetkar
  ಮೇ 8 2014

  ಜಾತಿ ನಾಶವಾಗದ ಹೊರತು ಉಡುಪಿ ಮಠಗಳಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾತಿ ಆಧಾರಿತ ಶೋಷಣೆ ಹಾಗೂ ಅವಮಾನ ಮುಂದುವರೆಯುತ್ತಲೇ ಇರುತ್ತದೆ.

  http://ladaiprakashanabasu.blogspot.in/2014/05/blog-post_7.html

  “ಭಗವದ್ಗೀತೆ ಅದೊಂದು ಧಾರ್ಮಿಕ ಪುಸ್ತಕ ವಲ್ಲ, ಅದೊಂದು ರಾಜಕೀಯ ಕೃತಿ. ಅದು ಜಾತಿಯನ್ನು ಬಿಟ್ಟು ಬೇರೇನನ್ನು ಬೋಧಿಸುವುದಿಲ್ಲ. ಈ ಕೃತಿಯ ಮುಖ್ಯ ಗುರಿ ಪುರೋಹಿತಶಾಹಿ ವರ್ಗಕ್ಕೆ ಪ್ರಮುಖ ಪ್ರಾಧಾನ್ಯತೆ ನೀಡುವುದಾಗಿದೆ ಹೊರತು ಬೇರೇನಲ್ಲ. ಈ ಕಾರಣದಿಂದ ಈ ಕೃತಿಯನ್ನು ಎಲ್ಲಿಯವರೆಗೆ ಓದಲಾಗುತ್ತದೆಯೋ, ಅಲ್ಲಿಯ ಮಂತ್ರಗಳನ್ನು ಎಲ್ಲಿಯವರೆಗೆ ಉಚ್ಛರಿಸಲಾಗುತ್ತದೆಯೋ ಅಲ್ಲಿಯವರೆಗೂ ಹಿಂದೂಗಳಲ್ಲಿ ಐಕ್ಯತೆ ಸಾಧ್ಯವಿಲ್ಲ. ಸಾಂಖ್ಯ, ಕರ್ಮ ಮತ್ತು ಜ್ಞಾನಕ್ಕೆ ಸಂಬಂಧಿಸಿದ ಅದರ ವ್ಯಾಖ್ಯೆಯು ಜನರನ್ನು ದಿಕ್ಕುತಪ್ಪಿಸುತ್ತದೆ.

  ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡುವುದಾದರೆ ಭಗವದ್ಗೀತೆಯ ಕರ್ಮ ಸಿದ್ಧಾಂತ ಅಪಾಯಕಾರಿ. ಆ ಕೃತಿಯಲ್ಲಿ ಹೊಸದೇನೂ ಇಲ್ಲ. ಆಧ್ಯಾತ್ಮವನ್ನು ಬೋಧಿಸದ ಅದು ಜನಸಮೂಹವನ್ನು ಅಜ್ಞಾನ ಮತ್ತು ಮೌಢ್ಯದಲ್ಲಿ ಇರಿಸಲು ಅಗತ್ಯವಾದ ರಾಜಕೀಯವನ್ನು ಬೋಧಿಸುತ್ತದೆ. ಗೀತೆಯ ಪ್ರಕಾರ ಕರ್ಮವೆಂದರೆ ಅದು ಬೇರೇನಲ್ಲ ಜಾತಿ ಎಂದರ್ಥ. ತನ್ನ ಜಾತಿಗೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿರುವ ಅಮಾಯಕ ಜನರನ್ನು ಯಾವುದೇ ರೀತಿ ಅಸ್ಥಿರಗೊಳಿಸದಂತೆ ಅದು ತನ್ನ ಹಿಂಬಾಲಕರಿಗೆ ಹೇಳುತ್ತದೆ.

  ಈ ಕಾರಣಕ್ಕಾಗಿ ಹಾಗೇ ಅಮಾಯಕ ಜನರ ಮನಸ್ಸನ್ನು ಅಸ್ಥಿರಗೊಳಿಸಿದ್ದೇ ಆದರೆ ಅದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ನಾಶಗೊಳಿಸುತ್ತದೆ ಎಂದೂ ಕೂಡ ಭಗವದ್ಗೀತೆ ಹೇಳುತ್ತದೆ (ಶ್ಲೋಕ, 3-26).”

  ಉತ್ತರ
  • ಗಿರೀಶ್
   ಮೇ 8 2014

   ಅಯ್ಯಾ ಶೆಟ್ಕರ, ಭಗವದ್ಗೀತೆ ಅಪಾಯಕಾರಿಯಾದರೆ ಕಳಬೇಡ ಕೊಲಬೇಡ ಎಂದ ನಿನ್ನ ಬಸವಣ್ಣ ಪ್ರೇಇತ ಜಾತಿಯೂ ಅಪಾಯಕಾರಿಯೇ? ಕೊಲ್ಲದಿದ್ದರೆ ಹಂದಿ ತಿನ್ನುವುದು ಹೇಗೆ ಮಾರಾಯ? ಉಡುಪಿಮಠದಲ್ಲಿ ಹಂದಿ ತಿನ್ನಲ್ಲವಲ್ಲ ನೀವೂ ಕೊಲ್ಬೇಡ ಅಂದ್ರೆ ನಾವೇನ್ ತಿನ್ನೋದೋ, ಹೊಯ್ಕೊಳ್ರೀಪ

   ಉತ್ತರ
  • Maaysa
   ಮೇ 10 2014

   “ಭಗವದ್ಗೀತೆ ಅದೊಂದು ಧಾರ್ಮಿಕ ಪುಸ್ತಕ ವಲ್ಲ”

   ಇದು ತಮಾಷೆ! ಭಗವದ್ಗೀತೆಯಲ್ಲಿ ಕೃಷ್ಣ ಧರ್ಮವೆಂದರೇನು, ಅದು ಯಾವುದು ಎಂದು ಅರ್ಜುನನಿಗೆ ಹೇಳಿಕೊಡುತ್ತಾನೆ. ಅಂತಹ ಗೀತೆ ಧಾರ್ಮಿಕವಲ್ಲ ಅಂದರೇನು ಅರ್ಥ?

   “ಅದೊಂದು ರಾಜಕೀಯ ಕೃತಿ.”
   ಹೌದು. ಧರ್ಮಸ್ಥಾಪನೆಗೆ ರಾಜಕೀಯ ಅಗತ್ಯ.

   “ಅದು ಜಾತಿಯನ್ನು ಬಿಟ್ಟು ಬೇರೇನನ್ನು ಬೋಧಿಸುವುದಿಲ್ಲ.”
   ಅದು ಮುಖ್ಯವಾಗಿ ಜಾತಿಯನ್ನು ಬೋಧಿಸುವುದಿಲ್ಲ. ಆದರೆ ವರ್ಣಸಂಕರದ ಅಪಾಯವನ್ನು ಹೇಳುವುದು. ಜಾತಿ ಹಾಗು ವರ್ಣ ಬೇರೆ ಬೇರೆ. ಜಗತ್ತಿನಲ್ಲಿ ಎಲ್ಲವು ಸಮ ಎಂದು ಒಪ್ಪದ ಬೇಕಾದಷ್ಟು ಸಿದ್ಧಾಂತಗಳಿವೆ .

   “ಈ ಕೃತಿಯ ಮುಖ್ಯ ಗುರಿ ಪುರೋಹಿತಶಾಹಿ ವರ್ಗಕ್ಕೆ ಪ್ರಮುಖ ಪ್ರಾಧಾನ್ಯತೆ ನೀಡುವುದಾಗಿದೆ ಹೊರತು ಬೇರೇನಲ್ಲ”
   ಪುರೋಹಿತಶಾಹಿ ಅನ್ನೋದು Theocracy ಎಂಬ ಪದಕ್ಕೆ ಕನ್ನಡದಲ್ಲಿ ಬಳಕೆಯಲ್ಲಿರುವ ಪದ. ಕೃಷ್ಣ ಯಾವ ಪುರೋಹಿತನ ಇಲ್ಲವೇ ಪೌರೋಹಿತ್ಯದ ವರ್ಣದ ಪರವಾಗಿರಲಿಲ್ಲ. ಅದು ರಾಜಾಶಾಹಿ, ವಂಶಶಾಹಿಯ ಪರ.

   ಉತ್ತರ
   • Nagshetty Shetkar
    ಮೇ 10 2014

    Are you saying Babasaheb doesn’t know what he is saying???

    ಉತ್ತರ
    • Maaysa
     ಮೇ 10 2014

     ಅಕನ್ನಡ ಭಾಷೆಯ ಟಿಪ್ಪಣಿಯು ಅಲಕ್ಷಸಲ್ಪಡುವುದು

     ಉತ್ತರ
     • Nagshetty Shetkar
      ಮೇ 11 2014

      ಅಕನ್ನಡ?? ಇದು ಯಾವ ಭಾಷೆ??

      ಉತ್ತರ
      • Maaysa
       ಮೇ 11 2014

       ಗೂಗಲ್ಸಿ.

       ಉತ್ತರ
       • Nagshetty Shetkar
        ಮೇ 11 2014

        ಗೂಗಲ್ಸಿ?! ಇದು ಯಾವ ಭಾಷೆ???

        ಉತ್ತರ
  • ಮೇ 11 2014

   ಪ್ರಿಯ ಶೆಟ್ಕರ್ ರವರಿಗೆ,
   ನಿಮ್ಮ ಮಾಹಿತಿಗಾಗಿ: ಇದು ಭಗವದ್ಗೀತೆಯ ಬಗೆಗಿನ ಲೇಖನ ಅಲ್ಲ. ನಿಮ್ಮ ಪ್ರತಿಕ್ರಿಯೆ ಲೇಖನಕ್ಕೆ ಸಂಬಂಧಿಸಿದಂತೆ ಕಾಣಿಸುತ್ತಿಲ್ಲ

   ಉತ್ತರ
   • Nagshetty Shetkar
    ಮೇ 11 2014

    ಜಾತೀಯತೆಯ ಮೂಲ ಕರ್ಮ ಸಿದ್ಧಾಂತದಲ್ಲಿದೆ ಹಾಗೂ ಭಗವದ್ಗೀತೆಯು ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ.

    ಉತ್ತರ
    • Maaysa
     ಮೇ 11 2014

     ಕರ್ಮಸಿದ್ಧಾಂತದಲ್ಲಿ ಜಾತೀಯತೆಯಿಲ್ಲ

     ಭಗವದ್ಗೀತೆ ಕರ್ಮಸಿದ್ಧಾಂತವೊಂದನ್ನೇ ಪ್ರತಿಪಾದಿಸಲ್ಲ.

     ಉತ್ತರ
    • ಮೇ 12 2014

     ಪ್ರಿಯ ಶೆಟ್ಕರ್,
     ಇದು ಜಾತಿಯತೆಯ ಬಗ್ಗೆಯೂ ಬರೆದಿದ್ದಲ್ಲ. ಪಂಕ್ತಿಬೇದಕ್ಕೆ ಹಾಗೂ ಭಗವದ್ಗೀತೆಗೂ ಯಾವುದೆ ಸಂಬಂಧವಿಲ್ಲ. ಇಸ್ಕಾನ್ ಗೆ ಒಮ್ಮೆ ಹೋಗಿ, ಅಲ್ಲಿ ಯಾವುದೆ ಪಂಕ್ತಿಬೇದ ಇಲ್ಲ. ಆದರೆ ಭಗವದ್ಗೀತೆಯೆ ಇಸ್ಕಾನ್ ನ ಫೌಂಡೇಶನ್. ನಾನೆತ್ತಿರುವ ವಿಷಯಗಳ ಬಗ್ಗೆ ಮಾತನಾಡಿ, ಬೇರೆಯದರ ಬಗ್ಗೆ ಅಲ್ಲ.

     ಉತ್ತರ
 6. ಗಿರೀಶ್
  ಮೇ 8 2014

  ಎಲ್ಲಾ ಕೋನಗಳಿಂದಲೂ ವಿಮರ್ಷೆ ತುಂಬಾ ಸ್ಪಷ್ಟವಾಗಿ ಮೂಡಿ ಬಂದಿದೆ. ಪ್ರಜ್ಞಾವರೆ, ಇಂತಹ ಲೇಖನಗಳು ನಿಲುಮೆಯಲ್ಲಿ ಮಾತ್ರ ಸಾಧ್ಯವೇನೊ? ನಿಮಗೂ ನಿಲುಮೆ ತಂಡಕ್ಕೂ ಧನ್ಯವಾದಗಳು

  ಉತ್ತರ
 7. ಪ್ರಜ್ಞಾ ಆನಂದ್ ಎಲ್ಲಾ ಸರಿಯಾಗಿ ಬರೆದಿದ್ದೀರಿ.ಆದರೆ ಕಡೆಯದಾಗಿ ಮಾತ್ರ ಯಾಕೋ ನಮ್ಮ ಬುದ್ದಿ ಜೀವಿಗಳಂತೆ ನಿಮ್ಮ ಮಾತು ಕೇಳಿಸಿತು.ನಿಮ್ಮ ಈ ಕೆಳಗಿನ ಮಾತುಗಳು ಸಾಮಾನ್ಯ ಜನರಿಗೆ ಅರ್ಥವಾಗಬಲ್ಲದೇ?

  “ಮಠ ಎನ್ನುವದು ಸಾರ್ವಜನಿಕರ ಆಸ್ತಿಯಾಗಿದ್ದರೆ ಕಾನೂನು ಹೋರಾಟ ಮಾಡಬಹುದು.ಹಾಗೆ ಕಾನೂನು ಹೋರಾಟ ಮಾಡುವಾಗ ಜಾತಿಯ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ.ಖಾಸಗಿಯಾಗಿದ್ದರೆ,ಅವರ ಸಂಪ್ರದಾಯವನ್ನು ಅವರಿಗೇ ಬಿಟ್ಟು,ಅಲ್ಲಿಗೆ ಹೋಗದೆ ನಿರ್ಲಕ್ಷಿಸಬಹುದು.ಅದರಿಂದ ಕೆಲವೇ ಕೆಲವು ಜನರಿರುವ ಮಠಗಳು ಜನಮಾನ್ಯತೆಯನ್ನು ಕಳೆದುಕೊಳ್ಳಬಹುದೆ ಹೊರತೂ ಜನರು ಏನನ್ನೂ ಕಳೆದುಕೊಳ್ಳುವದಿಲ್ಲ.”

  ಉಡುಪಿ ಮಠ ಖಾಸಗಿ ಸ್ವತ್ತು ಅನ್ನುವ ಕಾನೂನು ಹೋರಾಟ ಈ ಮೊದಲೆ ಆಗಿದೆ ಅಲ್ಲವೇ.ಅದನ್ನು ಸದ್ಯಕ್ಕೆ ಖಾಸಗಿ ಸ್ವತ್ತೆಂದೇ ಊಹಿಸಿಕೊಳ್ಳೋಣ.ಆ ಮಠ ತಾನಾಗಿಯೇ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸದೇ ಇದ್ದರೇ,ಸಾಮಾನ್ಯ ಜನರು ಹೋಗುವುದನ್ನು ತಪ್ಪಿಸಬಹುದೇ?ಯಾರು ಎಷ್ಟೇ ಹೇಳಿದರೂ ಜನ ಅಲ್ಲಿಗೆ ಹೋಗುವುದು ದೇವರ ಮೇಲಿನ ಅವರ ನಂಬಿಕೆಯೋ,ಭಕ್ತಿಯೋ ಅಥವಾ ಇನ್ನೊಂದರ ಭಾಗವಾಗಿ ತಾನೇ?ಅವರದನ್ನು ನಿಲ್ಲಿಸುವುದು ಸಾಧ್ಯವೇ ಇಲ್ಲ.ವಿಷಯ ಹೀಗಿರುವಾಗ ನೀವು ಹೇಳಿದ ಪ್ರೊಟೆಸ್ಟಂಟ್ ಹಿಂದೂಗಳು ಇಂತ ವಿಷಯಗಳ ಬಗ್ಗೆ ಯಾಕೆ ಪ್ರಶ್ನಿಸಬಾರದು?

  ಉತ್ತರ
  • ಮೇ 11 2014

   ರಾಕೇಶ್ ಅವರೆ,
   ನನ್ನನ್ನು ಬುದ್ದಿಜೀವಿಗಳ ಸಾಲಿಗೆ ಸೇರಿಸಿದ್ದು ಸಂತೋಶವಾಗಿದೆ. 🙂
   ನೀವನ್ನುವ ಪ್ರಕಾರ, ಮಠವು ತಾನಾಗಿಯೆ ಪ್ರವೇಶವನ್ನು ನಿಲ್ಲಿಸುವವರೆಗೂ ಜನರು ಅಲ್ಲಿ ಹೋಗುವದನ್ನು ನಿಲ್ಲಿಸುವದಿಲ್ಲ ಅನ್ನುವದು ನಿಜ. ಅದರರ್ಥ, ಪಂಕ್ತಿಬೇಧ ನಡೆಯುತ್ತಿದೆ ಎಂದೂ ಗೊತ್ತಿದ್ದೂ ಜನರು ಅಲ್ಲಿಗೆ ಹೋಗುತ್ತಿದ್ದಾರೆ ಎಂದಾಯಿತು. ಹಾಗಾಗಿ ಅಲ್ಲಿ ಹೋಗುತ್ತಿರುವ ಜನರಿಗೆ ಪಂಕ್ತಿಬೇಧ ಎನ್ನುವದು ಸಮಸ್ಯೆ ಅಲ್ಲವೆಂದಾಯಿತು. ಸಮಸ್ಯೆ ಹೋಗುವ ಜನರಿಗೆ ಇಲ್ಲವೆಂದ ಮೇಲೆ ಮೂರನೆಯವರಿಗ್ಯಾಕೆ ಅನ್ನುವದು ನನ್ನ ಪ್ರಶ್ನೆ. ನೀವಾಗ ಹೀಗೆಯೆ ಅಭಿಪ್ರಾಯವನ್ನು ಹೇಳಬಹುದು. ’ಜನರು ಮುಗ್ದರು. ನಾಗರೀಕತೆಯ ಮೌಲ್ಯಗಳ(ಸಮಾನತೆ, ಮಾನವೀಯತೆ ಇತ್ಯಾದಿ) ಅರಿವು ಇಲ್ಲ, ಅವರನ್ನು ತಿದ್ದಲು ಸಾಧ್ಯವಿಲ್ಲ. ನಂಬಿಕೆಯ ಮುಸುಕಲ್ಲಿ ಮೋಸಹೋಗುತ್ತಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ನಾಗರೀಕತೆಯ ಮೌಲ್ಯ ಕೊಚ್ಚಿಹೋಗಲು ಮಠವೇ ಕಾರಣ. ಮಠದಿಂದಲೆ ಸುದಾರಣೆಯ ನಾಂದಿ ಆಗಬೇಕು’.
   ಇಲ್ಲಿ ನಾವು ಎರಡು ಅಂಶಗಳನ್ನು ಗಮನಿಸಬೇಕು.
   ೧. ಈ ಅಭಿಪ್ರಾಯವನ್ನು ಹೇಳುವಾಗ ನೀವು ಕಾನುನಿಗಿಂತಲೂ ಮಿಗಿಲಾಗಿ ಮೌಲ್ಯಗಳ ಆಧಾರದ ಮೇಲೆ ಹೇಳುತ್ತೀರಿ ಅನ್ನುವದು ಸ್ಪಷ್ಟ. ಅಂದರೆ ನೀವು ಭಾವಿಸಿರುವ ಮೌಲ್ಯಗಳು ಸ್ಟಾಂಡರ್ಡ್ ಅಥವಾ ನಿಜವಾದದ್ದು, ಅಥವಾ ಸಾರ್ವತ್ರಿಕ, ಹಾಗು ಇಡೀ ಸಮಾಜ ನೀವು ಭಾವಿಸಿರುವ ಸ್ಟಾಂಡರ್ಡ್ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಅನಾಗರೀಕತೆ ಎಂದು ಭಾವಿಸಿರುತ್ತೀರಿ. ಆದರೆ ನಾನು ಈ ಲೇಖನದಲ್ಲಿ ಉದಾರಣೆಗಳ ಮೂಲಕ ಹೇಳಿದಂತೆ ನಾವು ಮೌಲ್ಯಗಳ ಬಗ್ಗೆ ಮಾತನಾಡುವಾಗ ಗ್ರಹಿಸುವ ತಪ್ಪು ಅದೆ.ನಮ್ಮ ಕಾನ್ಷಿಯಸ್ ನೆಸ್ ನಲ್ಲಿ ಮೂಡಿಬಂದ ಮೌಲ್ಯಗಳೆ ಸಾರ್ವತ್ರಿಕ ಅಥವಾ ಸ್ಟಾಂಡರ್ಡ್ ಎಂದು ಬಗೆಯುತ್ತೇವೆ. ನಮಗೆ ಯಾವುದು ಮಾನವೀಯ ಎನಿಸುವದೋ ಅದು ಇನ್ನೋರ್ವನಿಗೆ ಅಮಾನವೀಯ ಎನಿಸದೆ ಇರಬಹುದು.ಆಗೆಲ್ಲ ಒಬ್ಬನ ಹಕ್ಕು ಸ್ವಾತಂತ್ರ್ಯದ ಚ್ಯುತಿಯನ್ನಷ್ಟೆ ಮಾನದಂಡವನ್ನಾಗಿರಿಸಿ ತಪ್ಪು/ ಸರಿ ಎಂದು ವಿಷ್ಲೇಶಿಸಬಹುದು. ಸಾರ್ವತ್ರಿಕವಾದ(ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯವಾಗುವ) ಮೌಲ್ಯಗಳು ಇವೆಯೇ ಎನ್ನುವದು ಜ್ವಲಂತ ಪ್ರಶ್ನೆ; empirically ಇಲ್ಲ ಎನ್ನಬಹುದು. ಹೀಗಿದ್ದಾಗ ನಿಮ್ಮ ತಿಳುವಳಿಕೆಯಲ್ಲಿನ ಮೌಲ್ಯಗಳೆ ಸರಿ ಎನ್ನಲು ವೈಜ್ನಾನಿಕ ಕಾರಣವೇನು? ನಿಮ್ಮಲ್ಲಿನ emotions ನಾನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ಅದೆ ಮೌಲ್ಯಗಳು ಹಾಗೂ emotions ಎಲ್ಲಾ ಜನರಲ್ಲೂ ಇರಲೇಬೇಕು ಎನ್ನಲು ತಾರ್ಕಿಕ ಕಾರಣಗಳಿಲ್ಲ. ಹೆಚ್ಚೆಂದರೆ ಜನಗಳಲ್ಲಿ/ಮಠದ ಜನರಲ್ಲಿ ನಿಮ್ಮ ಮೌಲ್ಯಗಳ ತಿಳುವಳಿಕೆಯನ್ನು ಮೂಢಿಸುವ ಅಧಿಕಾರ ನಿಮಗೆ ಇದೆ. ಆದರೆ ಅದು ಅನಿವಾರ್ಯ, ಕಡ್ಡಾಯ ಎಂದು ಭಾವಿಸುವದು ತಪ್ಪು. ನಿಮ್ಮ ಮನೆಗೆ ಬರೋ ಕೆಲಸದವನನ್ನ, ಭಿಕ್ಷುಕನನ್ನ ನಿಮ್ಮ ಮನೆಯವರಂತೆ ಯಾಕೆ ಟ್ರೀಟ್ ಮಾಡಲ್ಲ? ಯಾಕೆ ಅಸಮಾನತೆ ತೋರಿಸ್ತೀರಿ ಅಂತ ನಾನು ನಿಮ್ಗೆ ಅಥವಾ ಸಮಾನತೆ ಅಂತ ಬಡ್ಕೊತಿರೊರಿಗೆ ಕೇಳಿದ್ರೆ ಏನ್ ಹೇಳ್ತೀರಿ?
   ೨. ನೀವು ಮಠವನ್ನು ಗುರಿಯಾಗಿಸಿ ಅದು ಜನರನ್ನು ನಂಬಿಸಿ ಮೋಸಮಾಡಿ ಜನರಲ್ಲಿ ಅಜ್ನಾನ ಬೇರೂರುವಂತೆ ಮಾಡಿದೆ ಹಾಗಾಗಿ ಅದೆ ಮೊದಲು ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತೀರಿ ಎಂದು ಅಂದುಕೊಳ್ಳೊಣ. ನೀವು ಮಠದ ಜನರಿಗೆ ತಿಳುವಳಿಕೆ ಹೇಳುವದಕ್ಕೆ ನಿಮಗೆ ಅಧಿಕಾರ ಇದೆ. ಆದರೆ ಆಗ್ರಹಿಸಲು ಸಾಧ್ಯವಿಲ್ಲ. ’ನನ್ ಮಗ ಕಡ್ಮೆ ಮಾರ್ಕ್ಸ್ ತಗೊಂಡಿದ್ದಕ್ಕೆ ಪಕ್ಕದ ಮನೆ ಹುಡುಗನ ಸಹವಾಸನೆ ಕಾರಣ. ನನ್ ಮಗ ಮುಗ್ದ, ಗೊತ್ತಾಗಲ್ಲ, ಹಾಗಾಗಿ ಅವರೇ ನನ್ ಮಗನ್ನ ಅವರ ಮಗನ ಜೊತೆ ಆಟ ಆಡಲು ಬಿಡಬಾರದು” ಅನ್ನೋ ಧಾಟಿಯಲ್ಲೆ ಈ ವಾದ. ಹೌದು ಅದು ನಿಜನೆ ಇರ್ಬಹುದು.ಪಕ್ಕದ ಮನೆ ಹುಡ್ಗ ಕೆಟ್ಟವನೆ ಇರ್ಬಹುದು. ಆದರೆ ನಮ್ಮ ದೌರ್ಬಲ್ಯಕ್ಕೆ ಇನ್ನೊಬ್ಬರನ್ನು ಕಾರಣರನ್ನಾಗಿ ಮಾಡಿ ನ್ಯಾಯ ಬೇಕು ಎನ್ನುವದು ಆಬ್ಜೆಕ್ಟಿವ್ ಥಿಂಕಿಂಗ್ ಅಲ್ಲ. ಪ್ರಪಂಚದಲ್ಲಿ ಎಲ್ಲರೂ ಅನೊನಿಮಸ್/ಇಮ್ಮಟಿರಿಯಲ್ ಕಾರಣವೊಡ್ಡಿ ತಮ್ಮ ಸೋಲುಗಳನ್ನು ಗಳನ್ನು ಜಸ್ಟಿಫೈ ಮಾಡ್ಕೋತಾರೆ. ಅದೊಂದು ನಿರಾಶಾವಾದ ಅಷ್ಟೆ.
   ಹಾಗಾಗಿ ಪ್ರಸ್ತುತದಲ್ಲಿ, ನಮ್ಮ ವೈಯಕ್ತಿಕ ಕಾನ್ಷಿಯಸ್ ನೆಸ್ ನ ಹಿನ್ನೆಲೆಯಿಂದ ಮೂಡಿಬಂದ ಮೌಲ್ಯಗಳ ಮೂಲಕ ಈ ಆಚರಣೆಯನ್ನು ವಿಷ್ಲೇಶಿಸುವದಕ್ಕಿಂತ ನಮ್ಮ ಪ್ರಜಾಪ್ರಭುತ್ವದಲ್ಲಿನ ಹಕ್ಕು ಸ್ವಾತಂತ್ರ್ಯದ ಮೂಲಕವಷ್ಟೆ ನಾವು ಇದನ್ನು ವಿಷ್ಲೇಶಿಸುವದು ಅನಿವಾರ್ಯ. ಅದನ್ನೆ ನಾನು ಲೇಖನದ ಕೊನೆಯಲ್ಲಿ ಹೇಳಿದ್ದು.
   ಇದನ್ನು ನೀವು, ನಾನು ಪಂಕ್ತಿಬೇಧವನ್ನು ಪ್ರೋತ್ಸಾಹಿಸುತ್ತಿದ್ದೇನೆ ಎಂದು ಅರ್ಥ ಮಾಡಿಕೊಂಡರೆ ನಾನು ಜವಾಬ್ದಾರಳಲ್ಲ. ಮಠ ಖಾಸಗಿಯಾಗಿರುವವರೆಗೆ, ನಾನು ಅದನ್ನು ಪ್ರೋತ್ಸಾಹಿಸುವದೂ ಇಲ್ಲ, ವಿರೋಧಿಸುವದೂ ಇಲ್ಲ. ಅದು ಸರ್ಕಾರಿಯ ಸ್ವತ್ತಾಗಿದ್ದರೆ ಪಂಕ್ತಿಬೇಧದ ಬಗೆಗೆ ನಿಮ್ಮ ವಿರೋಧಕ್ಕೆ ನನ್ನ ಬೆಂಬಲ ಖಂಡಿತ ಇದೆ. ನಾನು ಇಲ್ಲಿ ತಾರ್ಕಿಕವಾಗಿ ಇದನ್ನು ವಿಷ್ಲೇಶಿಸುತ್ತಿದ್ದೇನೆ ಹೊರತು ನನ್ನ ವೈಯಕ್ತಿಕ emotions ಹಿಂದಿನ ಅಭಿಪ್ರಾಯ ಅಲ್ಲ. ತಾರ್ಕಿಕ ತಪ್ಪನ್ನು ನೀವು ತೋರಿಸಿದಲ್ಲಿ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಯಾವಾಗಲೂ ರೆಡಿ.
   ಧನ್ಯವಾದ. 🙂
   ಅಂದ ಹಾಗೆ, ನಾನು ಫೇಸ್ಬುಕ್ ನಲ್ಲಿ ನಿಲುಮೆ ಗ್ರುಪ್ಪಿಗೆ ಯಾವತ್ತೋ ರಿಕ್ವೆಸ್ಟ್ ಕಳುಹಿಸಿದ್ದೆ. ಅದು ರಿಜೆಕ್ಟ್ ಆಗಿತ್ತು ಅನಿಸತ್ತೆ. ಮತ್ತೊಮ್ಮೆ ಕಳುಹಿಸಿದ್ದೇನೆ. ಓಹ್ ನಿಲುಮೆ ನಿಮ್ಮ ಖಾಸಗಿ ಸ್ವತ್ತಲ್ಲವೇ, ಯಾರನ್ನು ಹೊರಗಿಡಬೇಕು, ಒಳಗೆ ಬಿಡಬೇಕು ಎನ್ನುವ ಇಷ್ಟ, ಅಧಿಕಾರ ನಿಮಗೆ ಬಿಟ್ಟದ್ದು, ಅದು ಸಾಮಾನ್ಯ. ನಾನು ಅಸ್ಪೃಶ್ಯತೆಯ ಕೂಗನ್ನು ಕೂಗಲಾಗಲೀ, ನಿಮ್ಮನ್ನು ಆಗ್ರಹಿಸಲಾಗಲೀ ಸಾಧ್ಯವಿಲ್ಲವಲ್ಲ! ಛೆ, ನಮ್ಮ ಮನಸ್ಸು ಎಷ್ಟು ವಿಚಿತ್ರ ಅಲ್ವಾ! ಮಾನವೀಯತೆ ಅಸಮಾನತೆಗಳನ್ನೆಲ್ಲಾ ಎಷ್ಟು ಸೆಲೆಕ್ಟಿವ್ ಆಗಿ ಗುರುತಿಸತ್ತೆ 😀

   ಉತ್ತರ
 8. Maaysa
  ಮೇ 10 2014

  ಒಂದು ವಿಚಾರ!

  ಭಾರತದಲ್ಲಿ ಎಲ್ಲಾ ಧರ್ಮೀಯರಿಗೂ ಅವರವರ ಧರ್ಮದ ನಂಬಿಕೆಯನ್ನು ನಂಬಲು ಹಕ್ಕಿದ್ದರೆ, ‘ಪಂಕ್ತಿ ಬೇಧ’ ಎಂಬ ಧಾರ್ಮಿಕ ನಂಬಿಕೆ/ಆಚರಣೆಯನ್ನು ಪಾಲಿಸುವ ಹಕ್ಕು ಅದನ್ನು ನಂಬುವ ಧರ್ಮದವರಿಗೆ ಇದ್ದೇ ಇರಬೇಕಲ್ಲ!

  ಉತ್ತರ
  • viji
   ಮೇ 10 2014

   ಮಾಯಸ ಅವರೆ ಭಾರತೀಯರಿಗೆ ಎಲ್ಲ ಧರ್ಮಗಳನ್ನು ಆಚರಿಸುವ ಮತ್ತು ತಮ್ಮ ತಮ್ಮ ಧರ್ಮಗಳನ್ನು ಆಚರಿಸುವ ಹಕ್ಕು ಇದೆ. ಹಾಗೆನೇ ಧರ್ಮದ ಕಂದಾಚಾರಗಳನ್ನು ಪ್ರಶ್ನಿಸುವ ಹಕ್ಕು ಇದೆ. ಹಲಾಲ ಹೆಸರಿನಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ಕೊಲ್ಲುವ ಹಕ್ಕು ಒಂದು ಧರ್ಮಕ್ಕಿದ್ದರೆ, ಪ್ರಾಣಿಗಳನ್ನು ಬಲಿ ಕೊಡುವ ಹಕ್ಕು ಹಿಂದೂಗಳಿಗೆ ಏಕಿಲ್ಲ?? ಪ್ರಗತಿ ಪರರಿಗೆ ಈ ವಿಚಾರದ ಕುರಿತು ಮಾತನಾಡಲು ಪುರುಸೊತ್ತು ಇಲ್ಲವೆ? ಅಥವಾ ಅವರು ಒದೆಯುತ್ತಾರೆಂದು ಭಯವೆ? ಕೋ ಸೌ ವೇ ಅವರು ಇಲ್ಲಿ ಯಾಕೆ ಗಲಾಟೆ ಮಾಡುವದಿಲ್ಲ?? ಇಂಥಲ್ಲಿ ಇವರ ಪ್ರಾಣಿ ದಯೆ ಎಲ್ಲಿ ಹೋಗಿರುತ್ತದೆ. ಮಾತಿಗೊಮ್ಮೆ ಹಿಂದೂ ಧರ್ಮದಲ್ಲಿ ಯಜ್ಞ ಯಾಗದಲ್ಲಿ ಪ್ರಾಣಿಗಳನ್ನು ಬಲಿ ಕೊಡುವ ಕ್ರೂರ ಪದ್ಧತಿ ಇತ್ತು ಬುದ್ಧ ಬಸವ ಇವರು ಹೋರಾಡಿ ಬಂದ ಮಾಡಿದರೆಂದು ಉದ್ದುದ್ದ ಭಾಷಣ ಮಾಡುವ ಬುದ್ಧಿ ಜೀವಿಗಳು ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ನಿರಾಕರಿಸಿದ ಇವರು ಅದಕ್ಕಾಗಿ ಹೋರಾಟ ಮಾಡಿದ ಇವರಿಗೆ ಹಲ್ಲಾಲ್ ಹೆಸರಿನಲ್ಲಿ ನಡೆಯುವ ಹಿಂಸೆ ಕಣ್ಣಿಗೆ ಕಾಣುವದೇ ಇಲ್ಲವೆ?? ಗೋಮಾಂಸ ತಿನ್ನುವದು ಒಂದು ಧರ್ಮದ ಹಕ್ಕು ಎನ್ನುವದಾದರೆ ಪ್ರಾಣಿಬಲಿಯು ಒಂದು ಧರ್ಮದ ಹಕ್ಕು ಏಕಲ್ಲ?? ನಿಷೇಧ ಎಲ್ಲರಿಗೂ ಇರಲಿ. ಇಲ್ಲವೆ ಅವರವರಿಗೆ ಬಿಟ್ಟು ಕೊಡಿ.

   ಉತ್ತರ
   • Maaysa
    ಮೇ 10 2014

    ನಿಮ್ಮ ಅನಿಸಿಕೆ ನನ್ನ ಅನಿಸಿಕೆಗೆ ಒಡಂಬಡುವುದು.

    ಮ್ಲೇಚ್ಛ ಧರ್ಮಗಳ ಅತಿಪ್ರೊತ್ಸಾಹ ಹೇಯ!

    ಉತ್ತರ
 9. ಮೇ 11 2014

  ಓದಿ ಪ್ರತಿಕ್ರಿಯಿಸಿ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು. 🙂

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments