ವಿಷಯದ ವಿವರಗಳಿಗೆ ದಾಟಿರಿ

ಮೇ 13, 2014

16

ಸುಪ್ರೀಂ ತೀರ್ಪಿಗೆ ತಕರಾರೆತ್ತುವ ಮುನ್ನ…

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿವಿ

kannaಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಯವರಿಗೆ ಸಂಭ್ರಮವಾದರೆ, ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳಿಗೆ ಸಂಕಟ ಆರಂಭವಾಗಿದೆ. ರಾಜ್ಯ ಮಟ್ಟದ ಪತ್ರಿಕೆಯ ಮಿತ್ರರೊಬ್ಬರು ಕರೆ ಮಾಡಿ ಈ ತೀರ್ಪು ಸರಿ ಇಲ್ಲ, ಇದರಿಂದ ಕನ್ನಡ ಸರ್ವನಾಶವಾಗುತ್ತದೆ. ಇದನ್ನು ಕುರಿತು ಸ್ಟ್ರಾಂಗ್ ಆಗಿ ಲೇಖನ ಬರೆದುಕೊಡಿ ಸಾರ್ ಎಂದರು. ಇಲ್ಲ, ಸುಪ್ರೀಂ ತೀರ್ಪು ಸರಿಯಾಗಿಯೇ ಇದೆ ಎಂದು ನನ್ನ ಅಭಿಪ್ರಾಯ ಹೇಳುವಷ್ಟರಲ್ಲಿ ಏನ್ ಸಾರ್, ಕನ್ನಡ ಮೇಷ್ಟ್ರಾಗಿ ನೀವೇ ಹಿಂಗದ್ರೆ ಹೆಂಗೆ ಎನ್ನುತ್ತ ಆಮೇಲೆ ಕರೆ ಮಾಡ್ತೀನಿ ಅಂತ ಫೋನ್ ಇಟ್ಟರು. ಅವರು ನನ್ನನ್ನು ಕನ್ನಡ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟರು. ಈ ತೀರ್ಪು ಕುರಿತಂತೆ ಕನ್ನಡ ಪರ ಎಂದುಕೊಳ್ಳುವ ಬಹುತೇಕರ ನಿಲುವು ಹೀಗೇ ಇದ್ದರೆ ಅಚ್ಚರಿ ಇಲ್ಲ.

ಸಮಸ್ಯೆಯ ಮೂಲ 33 ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ 1981ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ 1982ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 1984ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ 1994ರಲ್ಲಿ 1ರಿಂದ 4 ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್‍ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. 2009ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಈಗ ತೀರ್ಪು ಹೊರಬಿದ್ದಿದೆ. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ?

ಇಸ್ರೇಲಿನಲ್ಲಿ ಅರೇಬಿಕ್ ಜೊತೆ ಹೀಬ್ರೂ ಕೂಡ ಇಂದು ಅಧಿಕೃತ ಆಡಳಿತ ಭಾಷೆ. ಕ್ರಿ.ಶ ಆರಂಭದ ವೇಳೆಗೆ ಜನಮಾನಸದಿಂದ ದೂರವಾಗಿ ನಿಜಕ್ಕೂ ಸತ್ತೇ ಹೋಗಿದ್ದ ಈ ಭಾಷೆಗೆ 19ನೆಯ ಶತಮಾನದಿಂದ ಜೀವಕೊಡುವ ಕೆಲಸ ಒಬ್ಬ ವ್ಯಕ್ತಿಯಿಂದ ನಡೆಯತೊಡಗಿತು. ಒತ್ತಡ, ಹೇರಿಕೆ ಮೂಲಕ ಅಲ್ಲ, ಸಾಂಸ್ಕøತಿಕ ಎಚ್ಚರ ಹಾಗೂ ಅಭಿಮಾನವನ್ನು ಯಹೂದಿ ಜನರಲ್ಲಿ ಹುಟ್ಟಿಸುವ ಮೂಲಕ. ಅದಕ್ಕೆ ಏನೆಲ್ಲ ಕೆಲಸ ನಡೆಯಿತು ಎಂಬುದೇ ಬೇರೆ ಕತೆ. ಆದರೆ ಈಗ ಅಮೆರಿಕವೂ ಸೇರಿ ಪ್ರಪಂಚದ 9 ದಶಲಕ್ಷ ಜನ ಈ ಭಾಷೆ ಮಾತನಾಡುತ್ತಾರೆ! ಸರ್ಕಾರ ಅಲ್ಲಿ ಹೀಬ್ರೂವನ್ನು ಎಲ್ಲೂ ಕಡ್ಡಾಯ ಮಾಡಿರಲಿಲ್ಲ, ಜನರ ಯತ್ನಕ್ಕೆ ಪೂರಕ ವಾತಾವರಣ, ಉತ್ತೇಜನಗಳನ್ನು ನೀಡಿತ್ತು ಅಷ್ಟೆ. ಈಗ ಹೇಳಿ. ಜನ ಮನಸ್ಸು ಮಾಡಿದರೆ ಏನು ಬೇಕಾದರೂ ನಡೆಯುತ್ತದೆ. ಅವರಿಗೆ ಬೇಡ ಅಂದರೆ ಜನತಂತ್ರ ವ್ಯವಸ್ಥೆಯಲ್ಲಿ ನೀವು ಯಾವುದೇ ಹೇರಿಕೆ, ಒತ್ತಡ, ಬೆದರಿಕೆ ಒಡ್ಡುವಂತಿಲ್ಲ. ಅದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸುಪ್ರೀಂ ಕೋರ್ಟ್ ಭಾಷೆ ಎಂದಲ್ಲ, ಯಾವುದೇ ವಿಷಯದಲ್ಲೂ ಗಮನಿಸುವುದು ಈ ಸಂಗತಿಯನ್ನು. ಈಗ ಆಗಿರುವುದು ಅದೇ. ಕನ್ನಡ ಕಲಿಸಬೇಡಿ ಎಂದು ಘನ ನ್ಯಾಯಾಲಯ ಹೇಳಿಲ್ಲ. ಮುಗಿಬಿದ್ದು ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಕಲಿಸುವ ಶಾಲೆಗೆ ಸೇರಿಸುತ್ತೇವೆ ಎಂದರೆ ಅದನ್ನೂ ಬೇಡ ಅನ್ನುವುದಿಲ್ಲ. ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಕುಸ್ಮಾ) ಕೂಡ ಒಂದು ಭಾಷೆಯಾಗಿ, ವಿಷಯವಾಗಿ ಕನ್ನಡವನ್ನು ಕಲಿಸಲು ಸಿದ್ಧವಿದೆ. ಅದು ಕೂಡ ಕನ್ನಡ ವಿರೋಧಿ ಸಂಘವಲ್ಲ. ಆದರೆ ಈ ಸಂಸ್ಥೆಯ ಜೊತೆ ಸೇರಿ ದಶಕಗಳ ಕಾಲ ಕನ್ನಡ ನೆಲದ ಪೋಷಕರು, ಪಾಲಕರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಾರೆಂದರೆ ಸಮಸ್ಯೆಯನ್ನು ಸರ್ಕಾರ ಸರಿಯಾಗಿ ಅರ್ಥಮಾಡಿಕೊಂಡಿಲ್ಲ, ಹೋರಾಟಗಾರರು, ಸಾಹಿತಿಗಳು, ಮಾಧ್ಯಮಗಳು ಸರ್ಕಾರವನ್ನು ಹಾದಿ ತಪ್ಪಿಸುತ್ತಿವೆ ಎಂದೇ ಅರ್ಥ.

ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಬೇಕೆಂಬ ನಿರ್ಧಾರ ಪಾಲಕ, ಪೋಷಕರದ್ದು ಎಂದು ವಿಶ್ವಸಂಸ್ಥೆ ಬಹಳ ಹಿಂದೆಯೇ ಜಾಗತಿಕ ಮಾರ್ಗದರ್ಶಿ ಸೂತ್ರ ನೀಡಿದೆ. ಎಲ್ಲ ದೇಶಗಳೂ ಅದನ್ನು ಪಾಲಿಸುತ್ತಿವೆ ಎಂಬುದನ್ನು ಈ ಜಗತ್ತಿನ ಭಾಗವಾದ ನಾವು ಮರೆಯುವಂತಿಲ್ಲ. 1998ರಲ್ಲಿ ತಮಿಳುನಾಡು ಸರ್ಕಾರವೂ ಪ್ರಾಥಮಿಕ ಹಂತದಲ್ಲಿ ತಮಿಳು ಮಾಧ್ಯಮವೇ ಕಡ್ಡಾಯ ಎಂದು ಆದೇಶ ಹೊರಡಿಸಿದಾಗ ಮದ್ರಾಸ್ ಉಚ್ಚ ನ್ಯಾಯಾಲಯ ಆ ಆದೇಶವನ್ನು 2001ರಲ್ಲಿ ರದ್ದು ಮಾಡಿತ್ತು. ಆಗಲೂ ಆ ನ್ಯಾಯಾಲಯ ನೀಡಿದ ತೀರ್ಪು ಕರ್ನಾಟಕ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪುಗಳಿಗೆ ಅನುಗುಣವಾಗಿಯೇ ಇತ್ತು. ಹಾಗಾದರೆ ಈ ಯಾವುದೇ ನ್ಯಾಯಾಲಯದ ಆಶಯಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ ಅಲ್ಲವೇ?

ಕನ್ನಡವೇ ಕರ್ನಾಟಕದ ಮಾತೃಭಾಷೆ, ಹಾಗಾಗಿ ಅದರಲ್ಲೇ ಕಲಿಕೆ ಎಂದು ಹೇಳುವ ನಮ್ಮ ಸರ್ಕಾರಕ್ಕೆ ಈ ವಾದದ ಸಮಸ್ಯೆ ನಾಳೆ ಏನಾಗಬಹುದೆಂಬ ಅರಿವು ಇದ್ದಂತಿಲ್ಲ. ಮಾತೃಭಾಷೆ ಎಂದರೆ ಸಂವಿಧಾನದ 350 (ಎ) ವಿಧಿಯಂತೆ ಯಾವುದೇ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಭಾಷೆ ಎಂದರ್ಥ ಎಂದಿದೆ ನ್ಯಾಯಾಲಯ. ಹಾಗಾದರೆ ಕನ್ನಡದಲ್ಲಿ ಹವ್ಯಕ, ಕೊಂಕಣಿ, ಕೊಡವ, ತುಳು, ಸಂಕೇತಿ ಮೊದಲಾದ ಭಾಷಾ ಅಲ್ಪ ಸಂಖ್ಯಾತರು ನಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದರೆ… ಸರ್ಕಾರ ಇದನ್ನು ಆಗುಮಾಡಬಲ್ಲುದೇ? ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿರುವ ಪ್ರಾಥಮಿಕ ಶಾಲೆಗಳ ಅಂಕಿ ಅಂಶಗಳನ್ನು ಸುಮ್ಮನೇ ನೋಡೋಣ. ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳು: 45,681; ಅನುದಾನಿತ ಖಾಸಗಿ ಶಾಲೆಗಳು: 2603, ಅನುದಾನವಿಲ್ಲದ ಖಾಸಗಿ ಶಾಲೆಗಳು 10,960. ಎನ್‍ಸಿಇಆರ್‍ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು) ಹೇಳಿರುವಂತೆ 2009ರಲ್ಲಿ 2,532 ಅನುದಾನವಿಲ್ಲದ ಖಾಸಗಿ ಶಾಲೆಗಳಿದ್ದವು. 2013ರಲ್ಲಿ ಅವು 10,960 ಆಗಿವೆ! ಅವು ಇನ್ನೂ ಹೆಚ್ಚುತ್ತಲೇ ಹೋಗಲಿವೆ! ಪಾಲಕ, ಪೋಷಕರ ಒತ್ತಡ ಇದಕ್ಕೆ ಕಾರಣ.

ಡಿ ಐ ಎಸ್ ಇ (ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆ) ಎಂಬುದು ಎಲ್ಲ ರಾಜ್ಯಗಳ ಶೈಕ್ಷಣಿಕ ಅಂಕಿಅಂಶಗಳನ್ನು ದಾಖಲಿಸುವ ರಾಷ್ಟ್ರೀಯ ಸರ್ಕಾರಿ ಸಂಸ್ಥೆ. ಇದು 2012-13ರ ಶೈಕ್ಷಣಿಕ ವಿವರಗಳನ್ನು ತನ್ನ ವೆಬ್‍ಸೈಟಿನಲ್ಲಿ ಹಾಕಿದೆ. ಇದು ಅಧಿಕೃತ ಮಾಹಿತಿ. ಇದರ ಪ್ರಕಾರ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಕೇವಲ ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ 903050, ಇಂಗ್ಲಿಷ್ ಮಾಧ್ಯಮದ ಮಕ್ಕಳು: 35111, ಉರ್ದು-77548, ಮರಾಠಿ-11706 ಹಾಗೂ ತಮಿಳು-1412. ಇನ್ನು ಪ್ರೌಢಶಾಲೆಯ ಮಟ್ಟದವರೆಗೆ ಕನ್ನಡ ಮಾಧ್ಯಮ ಆಯ್ದುಕೊಂಡವರ ಒಟ್ಟು ಸಂಖ್ಯೆ 75 ಲಕ್ಷ ದಾಟುತ್ತದೆ. ಇಂಗ್ಲಿಷ್ ಮಾಧ್ಯಮದ ಸಂಖ್ಯೆ 20 ಲಕ್ಷದಷ್ಟಿದೆ. ಈ ಅಂಕಿಅಂಶ ಏನು ಹೇಳುತ್ತಿದೆ ಅಂದರೆ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಕನ್ನಡವಲ್ಲದೇ ಉಳಿದ ಮಾತೃಭಾಷಿಕ ಮಕ್ಕಳೂ ಕಲಿಕೆಯಲ್ಲಿದ್ದಾರೆ. ಕನ್ನಡವೇ ಕಲಿಕಾ ಮಾಧ್ಯಮ ಎಂದರೆ ಇವರೆಲ್ಲ ಏನು ಮಾಡಬೇಕು? ಕರ್ನಾಟಕದಲ್ಲಿದ್ದ ಮೇಲೆ ಕನ್ನಡದಲ್ಲೇ ಕಲಿಯಬೇಕು ಎಂದು ಷರತ್ತು ವಿಧಿಸುವಂತಿಲ್ಲ. ನಮ್ಮದು ಗಣರಾಜ್ಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಪಂಕ್ತಿಭೇದ ಪ್ರಶ್ನಿಸುವವರು ಭಾಷಾಭೇದವನ್ನೂ ಪ್ರಶ್ನಿಸಬೇಕಾಗುತ್ತದೆ. ಘನ ನ್ಯಾಯಾಲಯ ಇದನ್ನೂ ಗಮನಿಸಿದೆ. ಉಳಿದ ಮಾಧ್ಯಮಗಳಲ್ಲಿ ಓದುವ ಮಕ್ಕಳ ಕತೆ ಹಾಗಿರಲಿ, ಕನ್ನಡದಲ್ಲೇ ಕಲಿಯುತ್ತಿರುವ ಶೇ.74ರಷ್ಟು ಮಕ್ಕಳಿಗೆ ಯಾವ ಪ್ರೋತ್ಸಾಹದಾಯಕ ಕಾರ್ಯಕ್ರಮವನ್ನು ಸರ್ಕಾರ ಕೊಟ್ಟಿದೆ? ಶೇ.1ರ ವ್ಯಾಸಂಗ ಅಥವಾ ಉದ್ಯೋಗ ಮೀಸಲಾತಿ? ಜ್ಞಾನ? ಮಾಹಿತಿ? ಕನ್ನಡದಲ್ಲಿ ಇಲ್ಲದ ಸಂಗತಿಗಳ ಪಟ್ಟಿಗೆ ಕೊನೆ ಇಲ್ಲ. ಪಾಲಕರು ನೋಡುವುದು ಇದನ್ನು.

ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಕಲಿತರೆ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂಬ ಭ್ರಮೆ 1990ರ ದಶಕದಿಂದ ಪಾಲಕರ ತಲೆಯಲ್ಲಿ ಹೊಗತೊಡಗಿತು. ಇಂಥ ವಾತಾವರಣ ನಿರ್ಮಿಸಿದ್ದು ಸರ್ಕಾರದ ನೀತಿಗಳೇ ವಿನಾ ಬೇರೆ ಯಾವುದೂ ಅಲ್ಲ. ಜಿಲ್ಲಾ, ತಾಲ್ಲೂಕು ಕೇಂದ್ರಗಳಿಂದ ದೂರವಿರುವ ಬಹುತೇಕ ಗ್ರಾಮೀಣ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲೇ ಇಂದಿಗೂ ಕಲಿಯುತ್ತಾರೆ. ಏಕೆಂದರೆ ಅವರಿಗೆ ಬೇರೆ ಆಯ್ಕೆ ಇಲ್ಲ. ಆಯ್ಕೆ ಇದ್ದಿದ್ದರೆ? ಸರ್ಕಾರದ ಬಳಿ ಇದಕ್ಕೆ ಉತ್ತರವಿಲ್ಲ. ಶಿಕ್ಷಕರಿಗೆ, ಅಧಿಕಾರಿಗಳಿಗೆ ಇನ್ನಿಲ್ಲದ ಸವಲತ್ತು, ಊಟ ಕೊಡುವ, ಹಣ ಕೊಡುವ ಆಮಿಷಗಳನ್ನು ಮಕ್ಕಳಿಗೆ ನೀಡಿಯೂ ಸರ್ಕಾರಿ ಶಾಲೆಗಳು ದಿನೇ ದಿನೇ ಸೊರಗುತ್ತಿವೆ. ಇದರ ಬಗ್ಗೆ ಬೇಕಾದಷ್ಟು ಚರ್ಚೆಗಳೂ ಆಗಿವೆ. ಆದರೂ ಪಾಲಕರು ಅನಿವಾರ್ಯವಲ್ಲದಿದ್ದರೆ ಖಂಡಿತ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಬಯಸುತ್ತಿಲ್ಲ. ಇದರ ಮೂಲ ಕಾರಣಗಳನ್ನು ಸರ್ಕಾರ ಶೋಧಿಸಿ ಸರಿಪಡಿಸಿದ್ದರೆ ಇಂಥ ದುರ್ಗತಿ ಬರುತ್ತಿರಲಿಲ್ಲ. ಬೇಡವೆಂದು ದೂರ ಹೋಗುವ ಜನರನ್ನು ಹಗ್ಗ ಹಾಕಿ ಎಳೆದು ತರುತ್ತೇವೆ ಎಂಬುದು ಸರಿಯಲ್ಲ. ಮಕ್ಕಳಿಗೆ ಉತ್ತಮ ವ್ಯವಸ್ಥೆ, ಮೂಲಸೌಕರ್ಯ ಒದಗುವುದನ್ನು ಕಂಡು ಅವರೇ ಒಲಿದು ಓಡೋಡಿ ಬರುವಂತೆ ಮಾಡದೇ ಹಿಡಿದಿಡುವ ಕಾನೂನು ಮಾಡಲು ಹೊರಟರೆ ಯಶ ದೊರೆಯದು.

ಪ್ರಾಥಮಿಕ ಹಂತದಲ್ಲಿರುವ ಮೂರು ಬಗೆಯ ಪಠ್ಯಗಳು, ಸರ್ಕಾರ ಪದೇ ಪದೇ ಮೂಗು ತೂರಿಸುವ 14 ಹಂತಗಳ ಅಸಂಬದ್ಧ ಆಡಳಿತ ವ್ಯವಸ್ಥೆ, ಬದ್ಧತೆ ಇಲ್ಲದ ಶಿಕ್ಷಕರು, ಇತ್ಯಾದಿ ಸಮಸ್ಯೆಗಳನ್ನು ಜರೂರಾಗಿ ಸರಿಪಡಿಸಲು ಮುಂದಾಗುವ ಬದಲು ಕನ್ನಡವನ್ನೇ ಮಾಧ್ಯಮವನ್ನಾಗಿ ಹೇರುವ ಕಾನೂನು ಮಾರ್ಗ ಹುಡುಕುವ ವಿಫಲ ಯತ್ನದಲ್ಲಿ ಕಾಲತಳ್ಳಿದರೆ ಕನ್ನಡ ಉಳಿಸುವ ಆಶಯ ಮತ್ತಷ್ಟು ದೂರಾಗುತ್ತದೆ.

ಚಿತ್ರಕೃಪೆ :putti-prapancha.blogspot.com

16 ಟಿಪ್ಪಣಿಗಳು Post a comment
  1. Maaysa
    ಮೇ 13 2014

    [[ಕನ್ನಡದಲ್ಲಿ ಹವ್ಯಕ, ಕೊಂಕಣಿ, ಕೊಡವ, ತುಳು, ಸಂಕೇತಿ ಮೊದಲಾದ ಭಾಷಾ ಅಲ್ಪ ಸಂಖ್ಯಾತರು ನಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆಯಲ್ಲೇ ಶಿಕ್ಷಣ]]

    ಇದರ ಆಯ್ಕೆಯ ಸವಲತ್ತು ಸರಕಾರ ಕೊಡಬೇಕು. ಆದರೆ ಕಡ್ಡಾಯ ಮಾಡಕೂಡದು. ಈ ಭಾಷೆಗಳಿಗೆ ಸರಕಾರವಿಂದು ಮೋಸವನ್ನು ಮಾಡುತ್ತಿದೆ.

    ಕರ್ನಾಟಕದಲ್ಲಿ ಕನ್ನಡದ ಕಲಿಯದೇ ಇರುವ ಸಂವಿಧಾನದತ್ತ ಹಕ್ಕನ್ನು ಸರಕಾರಗಳು ಕಿತ್ತುಕೊಂಡು ಅನ್ಯಾಯವನ್ನು ಮಾಡುತ್ತಿವೆ.

    ಉತ್ತರ
  2. ಹೇಮಾಪತಿ
    ಮೇ 13 2014

    ಶ್ರೀಪಾದ್ ಭಟ್ ರವರ ಅಭಿಪ್ರಾಯವನ್ನು ನಾನು ಅನುಮೋದಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದಾಗಿ ನಾನು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ನನ್ನ ಮಗನನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಿದ್ದರಿಂದಾಗಿ ಇಂದು ಆತ ಉತ್ತಮ ಕೆಲಸದಲ್ಲಿದ್ದಾನೆ.

    ಉತ್ತರ
    • ಅಜಯ
      ಮೇ 13 2014

      ನಿಮಗೆ ಸಾಮರ್ಥ್ಯ ಇರಲಿಲ್ಲ ಹಾಗಾಗಿ ನೀವು ತೊಂದರೆ ಅನುಭವಿಸಿದಿರಿ. ಕನ್ನಡ ಮಾಧ್ಯಮದಲ್ಲೇ ಓದಿ ಒಳ್ಳೆಯ ಜೀವನ ಮಾಡುತ್ತಿರುವು ಲಕ್ಷಾಂತರ ಜನರಿದ್ದಾರೆ. ತೊಂದರೆ ಇರುವುದು ನಿಮ್ಮಲ್ಲಿಯೇ ಹೊರತು ಮಾಧ್ಯಮದಲ್ಲ. ಹಾಗಾಗಿ ಕನ್ನಡ ಮಾಧ್ಯಮದ ಬಗ್ಗೆ ಈ ರೀತಿ ಕೀಳರಿಮೆ ಹರಡಬೇಡಿ.

      ಉತ್ತರ
    • Maaysa
      ಮೇ 13 2014

      ಒಳ್ಳೆಯ ಕೆಲಸ ಮಾಡಿದಿರಿ.

      ಆಂಗ್ಲ ಭಾಷೆಯನ್ನು ಕರ್ನಾಟಕ ಸರಕಾರವೇ ಧಾರಾಳವಾಗಿ ಬಳಸುತ್ತಿದೆ. ನೋಡಿ ನಮ್ಮ ಮುಖ್ಯಮಂತ್ರಿಗಳು ತಿಪ್ಪರಲಾಗ ಹಾಕಿದರೂ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ

      ಉತ್ತರ
      • ಗಿರೀಶ್
        ಮೇ 14 2014

        ಕನ್ನಡ ಕೆಲ ಕಿತ್ತು ತಿನ್ನುವ ಹೋರಾಟಗಾರರಿಗೆ ಚಿನ್ನದ ಭಾಷೆಯಾಗಿದೆ. ಎಲ್ಲಿಯವರಿಗೆ ಈ ಹೋರಾಟಗಾರರಿತ್ತಾರೊ ಅಲ್ಲಿಯವರೆಗೆ ಈ ಭಾಷೆಗೆ ಮಾನ್ಯತೆ ಸಿಗುವುದಿಲ್ಲ

        ಉತ್ತರ
        • Maaysa
          ಮೇ 14 2014

          ಭ್ರಷ್ಟತೆ ಅನ್ನೋದು ಏನು ರಕ್ತಗತವೋ!

          ಮಕ್ಕಳ ಭವಿಷ್ಯಗಳು ಎಕ್ಕುಟ್ಟು ಹೋದರೂ ಇವರ ಸ್ವಹಿತಾಸಕ್ತಿಗಳು ವೃದ್ಧಿಸಿ ಭದ್ರವಾಗಬೇಕು.

          ಇಂತವರಿಗೆ ಏನು ಸನ್ಮಾನ, ಬಿರುದು, ಬಿಡಿಎ ಸೈಟುಗಳು!

          ಉತ್ತರ
    • viji
      ಮೇ 14 2014

      ಹೇಮಾಪತಿಯವರೇ ನಿಮ್ಮ ಮಾತಿಗೆ ನನ್ನ ಸಹಮತವಿದೆ. ಕನ್ನಡ ಕಲಿಯುವದರಿಂದ ನಾನೂ ಸಹ ಅನೇಕ ರೀತಿಯಲ್ಲಿ ಅವಕಾಶ ವಂಚಿತ ಮತ್ತು ತೊಂದರೆಗೆ ಒಳಗಾಗಿದ್ದೇನೆ. ನಮ್ಮಂತೆ ನಮ್ಮ ಮಕ್ಕಳಿಗೆ ತೊಂದರೆ ಆಗುವದು ಬೇಡವೆಂದು ನಾನೂ ಸಹ ನನ್ನ ಮಗನ್ನ ಇಂಗ್ಲೀಷ ಮಾಧ್ಯಮದಲ್ಲಿ ಕಲಿಸಿದ್ದೇನೆ. ಆದರೆ ಕನ್ನಡಾಭಿಮಾನ ಬೆಳೆಸಿದ್ದೇನೆ. ಕನ್ನಡದ ಪುಸ್ತಕ ಮ್ಯಾಗಝಿನ್ ಪೇಪರ್ ಓದುವಂತೆ ಸಲಹೆ ನೀಡಿ ಕನ್ನಡಾಭಿಮಾನ ಮೂಡುವಂತೆ ಮಾಡಿದ್ದೆನೆ. ಇನ್ನು ಅಜಯ ಅವರೆ ನಿಮ್ಮ ಮಗನಿಗೆ ಯಾವ ಮಾಧ್ಯಮದಲ್ಲಿ ಓದಲು ಹಚ್ಚುತ್ತೀರಿ? ಅಥವಾ ಹಚ್ಚಿದ್ದೀರಿ?? ಪ್ರಾಮಾಣಿಕತೆಯಿಂದ ಉತ್ತರಿಸಿರಿ.

      ಉತ್ತರ
  3. M.A.Sriranga
    ಮೇ 13 2014

    ಶ್ರೀಪಾದ್ ಭಟ್ ಅವರಿಗೆ — >>>>ಮಾತೃಭಾಷೆ ಎಂದರೆ ಸಂವಿಧಾನದ 350(ಎ) ವಿಧಿಯಂತೆ ಯಾವುದೇ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಭಾಷೆ ಎಂದಿದೆ ನ್ಯಾಯಾಲಯ >>>>> ಹಾಗಾದರೆ ಇಂಗ್ಲಿಷ್ ಕರ್ನಾಟಕದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರ ಮಾತೃ ಭಾಷೆಯೇ? ಅಲ್ಲ ಎಂದು ತಾವೇ ತುಳು,ಕೊಂಕಣಿ,ಹವ್ಯಕ….. ಈ ಭಾಷೆಗಳ ಉದಾಹರಣೆ ಕೊಟ್ಟಿದ್ದೀರಿ. ತಮ್ಮ ಈ ವಾಕ್ಯಗಳು ಸ್ವಲ್ಪ ಗೊಂದಲ ಮೂಡಿಸುತ್ತವೆ. ಇನ್ನು ಸುಪ್ರೀಂ ಕೋರ್ಟಿನ ತೀರ್ಪು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು ಕೆಲವರು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಅವರ ಮಾತು ನಿಜವಾಗಿದ್ದರೆ ಈ ವೇಳೆಗೆ ತಮಿಳುನಾಡಿನಲ್ಲಿ ಜನ,ರಾಜಕೀಯ ಪಕ್ಷಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಚುನಾವಣಾ ಸಂಹಿತೆ ಅಡ್ಡವಿದೆ ಎಂದಾದರೆ ಹೇಳಿಕೆ ಕೊಡುವುದಕ್ಕೆ ಅದು ಅಡ್ಡ ಬರುತ್ತದೆಯೇ? ಇಲ್ಲವಲ್ಲ. ಸುಪ್ರೀಂ ಕೋರ್ಟು ಈ ತೀರ್ಪು ಕೊಟ್ಟಿರುವುದು “ಕರ್ನಾಟಕದ” ಕೇಸಿಗೆ ಸಂಬಂಧಿಸಿದಂತೆ. ಅದೂ ಅಲ್ಲದೆ ಸಾಮಾನ್ಯವಾಗಿ ಕೋರ್ಟುಗಳು ಇಂತಹ ಸೀಮಿತ ವಿವಾದಗಳ ಪ್ರಕರಣಗಳಲ್ಲಿ ಕೊಡುವ ತೀರ್ಪು ಆಯಾ ರಾಜ್ಯದ ವಾದಿ-ಪ್ರತಿವಾದಿಗಳಿಗೆ ಸಂಬಂಧಿಸಿರುತ್ತದೆ. ಸುಪ್ರೀಂ ಕೋರ್ಟು ಸಹ ಇದು ಎಲ್ಲಾ ರಾಜ್ಯಗಳಿಗೂ ಸಂಬಂಧಿಸಿದ್ದು ಎಂದು ಹೇಳಿದೆಯೇ? ಒಂದು ವೇಳೆ ಕೇಂದ್ರ ಸರ್ಕಾರ ಕೇಸು ಹಾಕಿದ್ದರೆ ಎಲ್ಲಾ ರಾಜ್ಯಗಳಿಗೂ ಆ ತೀರ್ಪು ಅನ್ವಯವಾಗುತ್ತಿತ್ತೇನೋ? ವ್ಯಕ್ತಿ ಸ್ವಾಂತಂತ್ರ್ಯ ಎಂಬುದು with conditions apply ಎಂಬ ರೀತಿಯದು. ರಾಜ್ಯದ/ದೇಶದ ಹಿತಕ್ಕೆ ಧಕ್ಕೆ ಬಂದಾಗ ಅದನ್ನು ಪಕ್ಕಕ್ಕಿಟ್ಟು ಮುಂದುವರಿಯುವ ಅವಕಾಶವನ್ನು ಅದೇ ಸಂವಿಧಾನ ನೀಡಿದೆ. ೧೯೭೫ರಲ್ಲಿ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ್ದು ಅದೇ ಸಂವಿಧಾನದತ್ತವಾದ ಅಧಿಕಾರದಿಂದ. ಕನ್ನಡ ಭಾಷೆಯ ಅಳಿವು ಉಳಿವಿನ ವಿಚಾರ ಕೇವಲ ಸಾಹಿತಿಗಳ,ಹೋರಾಟಗಾರರ ಸಮಸ್ಯೆ ಅಲ್ಲ. ಜನಗಳ , ಸರ್ಕಾರದ ಆಶ್ರಯ ಬೆಂಬಲವಿಲ್ಲದೆ ಹೋದರೆ ಇನ್ನು ಮೂವತ್ತು ನಲವತ್ತು ವರ್ಷಗಳಲ್ಲಿ ಕನ್ನಡ ಮೃತಭಾಷೆಯ ಪಟ್ಟಿಗೆ ಸೇರಿಹೋಗುತ್ತದೆ.

    ಉತ್ತರ
    • shripadt
      ಮೇ 13 2014

      ಮಾತೃಭಾಷೆ ಎಂದರೆ ಸಂವಿಧಾನದ 350(ಎ) ವಿಧಿಯಂತೆ ಯಾವುದೇ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಭಾಷೆ ಎಂದಿದೆ ನ್ಯಾಯಾಲಯ >>>>> ಹಾಗಾದರೆ ಇಂಗ್ಲಿಷ್ ಕರ್ನಾಟಕದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರ ಮಾತೃ ಭಾಷೆಯೇ? ಅಲ್ಲ ಎಂದು ತಾವೇ ತುಳು,ಕೊಂಕಣಿ,ಹವ್ಯಕ….. ಈ ಭಾಷೆಗಳ ಉದಾಹರಣೆ ಕೊಟ್ಟಿದ್ದೀರಿ. ತಮ್ಮ ಈ ವಾಕ್ಯಗಳು ಸ್ವಲ್ಪ ಗೊಂದಲ ಮೂಡಿಸುತ್ತವೆ.
      -ಗೊಂದಲ ಆಗಿರುವುದು ನೀವು ಸರಿಯಾಗಿ ಓದಿಕೊಳ್ಳದ ಕಾರಣ. ಕನ್ನಡ ಎಂದಲ್ಲ, ಯಾವ ಭಾಷೆಯನ್ನೂ ಮಾಧ್ಯಮವಾಗಿ ಯಾರೂ ಹೇರುವಂತಿಲ್ಲ. ಇಂಗ್ಲಿಷಲ್ಲಾದರೂ ಕಲಿಸಿ, ಡಚ್ಚಲ್ಲಾದರೂ ಕಲಿಸಿ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಬೇಕು ಅಷ್ಟೆ. ತಮಿಳುನಾಡಲ್ಲಿ ತಮಿಳೇ ಕಡ್ಡಾಯ ಮಾಧ್ಯಮವಲ್ಲ. ಕನ್ನಡ ಉಳಿಸಲು ಬೇರೆ ಮಾರ್ಗಗಳಿವೆ.
      -ಶ್ರೀಪಾದ ಭಟ್

      ಉತ್ತರ
      • Maaysa
        ಮೇ 13 2014

        [[ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಬೇಕು ಅಷ್ಟೆ. ]]

        ಯಾವ ಶಿಕ್ಷಣ ಕಡ್ಡಾಯ?

        ನಮ್ಮ ಮಕ್ಕಳು ಬರೀ ವೇದಾಭ್ಯಾಸವನ್ನು ಮಾಡಿದರೆ ಅದಕ್ಕೆ ಸರಕಾರವು ತಗಾದೆಯನ್ನು ತೆಗೆಯಬಹುದು. ಆದರೆ ಮದರಸಾಗಳಲ್ಲಿ ಕಲಿಯುವವರಿಗೆ ಸಂವಿಧಾನದ ಆಸರೆಯಿದೆ.

        ಉತ್ತರ
        • viji
          ಮೇ 14 2014

          [[ನಮ್ಮ ಮಕ್ಕಳು ಬರೀ ವೇದಾಭ್ಯಾಸವನ್ನು ಮಾಡಿದರೆ ಅದಕ್ಕೆ ಸರಕಾರವು ತಗಾದೆಯನ್ನು ತೆಗೆಯಬಹುದು.]] ವೇದಾಭ್ಯಾಸ ಮಾಡಿದರೆ ಹೊಟ್ಟೆ ತುಂಬುವದಿಲ್ಲ. ಜೀವನ ಸುಗಮವಾಗಿ ಸಾಗುವದಿಲ್ಲ ಎಂದು ನಾವೇ ನಮ್ಮ ಮಕ್ಕಳನ್ನು ಹೆಚ್ಚಿನ ಹಣ ತರುವ ಇಂಗ್ಲೀಷ ಶಾಲೆಗಳಿಗೆ ಹೆಚ್ಚಿನ ಹಣ ಸುರುವಿ ಕಳಿಸುತ್ತೇವೆ. ಸುಮ್ಮನೆ ಎಲ್ಲಕ್ಕೂ ಸರಕಾರದ ಮೇಲೇಕೆ ಗೂಬೆ? ?

          ಉತ್ತರ
          • Maaysa
            ಮೇ 17 2014

            ಅಲ್ರಿ.

            ಒಂದು ವೇಳೆ ಒಬ್ಬರು ಹಾಗೆ ಮಾಡಿದರೆ.!

            ಉತ್ತರ
    • Maaysa
      ಮೇ 13 2014

      [[ಸರ್ಕಾರದ ಆಶ್ರಯ ಬೆಂಬಲವಿಲ್ಲದೆ ಹೋದರೆ]]

      ಸರಕಾರ ಯಾಕೆ ಆಶ್ರಯ ಹಾಗು ಬೆಂಬಲ ಕೊಡಬೇಕು?

      ಸರಕಾರ ಮೊದಲು ಬಡತನ ಹೋಗಲಾಡಿಸಲಿ. ಬಡತನದಿಂದ ಮುಕ್ತಿಗೆ ಇಂಗ್ಲೀಶ್ ಒಂದು ಸುಲಭ ದಾರಿ. ಬೆಂಗಳೂರಿನ ಶೋರೂಮ್ಗಳಲ್ಲಿ ಸೇಲ್ಸ ಕೆಲಸವನ್ನು ಮಾಡಲು ಕೂಡ ಕನ್ನಡ ಬೇಡ, ಇಂಗ್ಲೀಶ್ ಬೇಕೇ ಬೇಕು.

      ಕನ್ನಡವನ್ನು ಉಳಿಸಲು ಆಸಕ್ತಿ ಇಲ್ಲದೇ ಇರೋ ಜನರಿಗೆ ಕನ್ನಡವನ್ನು ಹೇರಿ ಹಿಂಸಿಸಬಾರದು.

      ಉತ್ತರ
  4. ವಲವಿ ಬಿಜಾಪೂರ
    ಮೇ 15 2014

    [[ಶಿಕ್ಷಕರಿಗೆ, ಅಧಿಕಾರಿಗಳಿಗೆ ಇನ್ನಿಲ್ಲದ ಸವಲತ್ತು, ಊಟ ಕೊಡುವ, ಹಣ ಕೊಡುವ ಆಮಿಷಗಳನ್ನು ಮಕ್ಕಳಿಗೆ ನೀಡಿಯೂ ಸರ್ಕಾರಿ ಶಾಲೆಗಳು ದಿನೇ ದಿನೇ ಸೊರಗುತ್ತಿವೆ. ಇದರ ಬಗ್ಗೆ ಬೇಕಾದಷ್ಟು ಚರ್ಚೆಗಳೂ ಆಗಿವೆ. ಆದರೂ ಪಾಲಕರು ಅನಿವಾರ್ಯವಲ್ಲದಿದ್ದರೆ ಖಂಡಿತ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಬಯಸುತ್ತಿಲ್ಲ. ಇದರ ಮೂಲ ಕಾರಣಗಳನ್ನು ಸರ್ಕಾರ ಶೋಧಿಸಿ ಸರಿಪಡಿಸಿದ್ದರೆ ಇಂಥ ದುರ್ಗತಿ ಬರುತ್ತಿರಲಿಲ್ಲ.]] ಒಬ್ಬ ಸರಕಾರಿ ಶಾಲಾ ಶಿಕ್ಷಕಿಯಾಗಿ ನಾನು ಸರಕಾರಿ ಶಾಲೆಗಳು ಕಲಿಸುವಲ್ಲಿ ಹಿಂದೆ ಬೀಳಲು ಕಾರಣಗಳನ್ನು ನೀಡುತ್ತಿದ್ದೇನೆ. ಇವುಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಆದರೆ ಸಮಸ್ಯೆಗಳ ಮೇಲೆ ಸ್ವಲ್ಪವಾದರೂ ಬೆಳಕು ಚಲ್ಲಬಹುದು ಎಂಬುದು ನನ್ನ ಆಶಯ. ಸರಕಾರಿ ಶಾಲೆಗಳಲ್ಲಿ ಕೆಲಸಕ್ಕೆ ಬಾರದ ನಿಯಮಗಳು ವಿಪರೀತ ಇವೆ. ಮಕ್ಕಳಿಗೆ ಪಾಠ ಮಾಡುವದಕ್ಕಿಂತ ಶಿಕ್ಷಕರು ದಾಖಲೆಗಳನ್ನು ಇಡುವದರಲ್ಲಿಯೇ ಸಮಯ ಹಾಳು ಮಾಡಿಕೊಳ್ಳ ಬೇಕಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಪಾಠದ ಟಿಪ್ಪಣಿಯನ್ನು ಕೆಲವರು ಬರೆಯುವದೇ ಇಲ್ಲ. ಇನ್ನು ಕೆಲವು ಶಾಲೆಗಳಲ್ಲಿ ಬರೆದರೂ ಕೇವಲ 8/10 ವಾಕ್ಯಗಳಲ್ಲಿ ಆ ಟಿಪ್ಪಣಿ ಮುಗಿಯುತ್ತದೆ. ಸರಕಾರಿ ಶಾಲೆಗಳಲ್ಲಿ ಸುಮಾರು 3/4 ಪುಟ ಟಿಪ್ಪಣಿಗಳನ್ನು ಒಂದು ಪಾಠದ ಮೇಲೆ ಬರೆಯಬೇಕು. ಶಾಲೆ ಪ್ರಾರಂಭವಾದೊಡನೆ ಖಾಸಗಿ ಶಾಲೆಗಳಲ್ಲಿ ತರಗತಿಗಳು ಪ್ರಾರಂಭವಾಗಿ ಪಾಠಗಳನ್ನು ಹೇಳಲು ಶುರು ಮಾಡುತ್ತಾರೆ. ಆದರೆ ಸರಕಾರಿ ಶಾಲೆಗಳಲ್ಲಿ ನೈದಾನಿಕ ಪರೀಕ್ಷೆ ಪೂರ್ವಜ್ಞಾನ ಪರೀಕ್ಷೆ , ಹಿಮ್ಮಾಹಿತಿ ಹಿಂದುಳಿದ ಸಾಮರ್ಥ್ಯಗಳ ಪುನರ್ ಬೋಧನೆ ಇತ್ಯಾದಿಗಳಲ್ಲಿ 20 ದಿನಗಳು ಹಾಳಾಗಿ ಹೋಗುತ್ತವೆ. ಇನ್ನು ಸಿ.ಸಿ. ಇ ದ ರೀತಿಯಲ್ಲಿ ರೂಪಣಾತ್ಮಕ ಮೌಲ್ಯಮಾಪನವನ್ನು ಮಾಡಬೇಕೆಂದರೆ ವಿಪರೀತ ದಾಖಲೆಗಳನ್ನು {ಎಲ್ಲವೂ ಬೋಗಸ್} ನಿರ್ವಹಿಸಬೇಕಾಗುತ್ತದೆ. ಬೋಗಸ್ ದಾಖಲೆ ಏಕೆಂದರೆ ಶಿಕ್ಷಕರೊಂದಿಗೆ ಮಗುವಿನ ವರ್ತನೆಯಲ್ಲಿನ ಕಾಲಂನಲ್ಲಿ ನೀವೇನಾದರೂ ಅವನು ಚನ್ನಾಗಿ ವರ್ತಿಸುವದಿಲ್ಲ. ವಿಧೇಯನಾಗಿಲ್ಲ ಎಂದೇನಾದರೂ ಸತ್ಯ ಬರೆದರೆ ಪಾಲಕರಿಂದ ಗೂಸಾ ತಿನ್ನಬೇಕು ಇಲ್ಲವೆ ಅವಾಚ್ಯ ಬೈಗಳನ್ನು ಬೈಸಿಕೊಳ್ಳಬೇಕು. ಅವನು ಹೇಗಿದ್ದರೂ {ಭಾವನಾತ್ಮಕ ವಲಯದಲ್ಲಿ} ಚನ್ನಾಗಿದ್ದಾನೆಂದೇ ನಮೂದಿಸಬೇಕು. ಇನ್ನು ರೇಡಿಯೋ ಪಾಠಗಳ ಬಗ್ಗೆ ಹೇಳುವದೇ ಬೇಡ . ಅವನ್ನು ಯಾವ ಮಕ್ಕಳೂ ಕೇಳುವದಿಲ್ಲ. ಆದರೂ ಕೇಳಿಸಿ ದಾಖಲೆ ಇಡಬೇಕು. ಇನ್ನು ಪರೀಕ್ಷೆಯಲ್ಲಿ ಮೊದಲೆಲ್ಲ ಕೇವಲ ಪ್ರಶ್ನೆಗಳನ್ನು ಮಾತ್ರ ಕೇಳಿದರೆ ಮುಗಿಯುತ್ತಿತ್ತು. ಇವತ್ತು ಒಂದು ವಿಷಯದ ಸಂಕಲನಾತ್ಮಕ ಪರೀಕ್ಷೆಗೆ ಒಂದು ವಾರ ಹತ್ತು ಹಂತಗಳನ್ನು ಬರೆಯಬೇಕು. ಇರಲಿ ಕೇವಲ ಬರೆಯುವ ದಾಖಲೆ ನಿರ್ಮಿಸುವ ಪುರಾಣವಾಯಿತು. ಆದರೆ ಮುಖ್ಯ ವಿಷಯಕ್ಕೆ ಬರಲಿಲ್ಲ ನಾನು. ಈಗ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಶಿಕ್ಷಕರನ್ನು ಕಡಿಮೆ ಮಾಡಿದ್ದಾರೆ. 1ರಿಂದ 7 ನೇ ತರಗತಿವರೆಗೆ ಕೇವಲ 3/4 ಶಿಕ್ಷಕರು ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ. ಮಕ್ಕಳು ಕೇವಲ 4 ಇದ್ದರೂ ಎಲ್ಲ ವಿಷ್ಯಗಳ ಬೋಧನೆ ಆಗಬೇಕು. ಎಲ್ಲಾ ವಿಷಯಗಳ ಸಿ. ಸಿ. ಇ. ದಾಖಲೆ, ಪಾಠಟಿಪ್ಪಣೆ, ರೇಡಿಯೋ ದಾಖಲೆ, ಹತ್ತು ಹಂತಗಳ ಮೌಲ್ಯಮಾಪನ ದಾಖಲೆ ಇವೆಲ್ಲ ಬರೆಯಲೇ ಬೇಕು. ಸುಮಾರು 9 ವಿಷಯಗಳದ್ದು. ಇದಲ್ಲದೇ ವಿಷಯ ಶಿಕ್ಷಕರೆ ಮಕ್ಕಳನ್ನು ಪಂದ್ಯಾಟಕ್ಕೆ , ಪ್ರತಿಭಾಕಾರಂಜಿಗೆ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಎಲ್ಲಕ್ಕೂ ತಯಾರಿ ಮಾಡಿಕೊಂಡು ಕರೆದೊಯ್ಯಬೇಕು . ಕಲಿಕೊತ್ಸವ , ಇನ್ನಿತರ ಕಾರ್ಯಕ್ರಮಗಳಿಗೂ ನಮ್ಮ ಮಕ್ಕಳನ್ನು ವಿಷಯ ಶಿಕ್ಷಕರೇ ಕರೆದೊಯ್ಯಬೇಕು. ಖಾಸಗಿ ಶಾಲೆಗಳಲ್ಲಿ ಎಷ್ಟೇ ಮಕ್ಕಳಿದ್ದರೂ ಪಿ. ಈ. ಶಿಕ್ಷಕ, ಚಿತ್ರಕಲಾ ಶಿಕ್ಷಕ, ಕಂಪ್ಯೂಟರ್ ಶಿಕ್ಷಕ, ಸಂಗೀತ ಶಿಕ್ಷಕರು ಬೇರೆ ಬೇರೆ ಇರುತ್ತಾರೆ. ನಾವು ನಾವೇ ಹಣ ನಮ್ಮ ಕೈಲಿಂದಲೇ ಕೊಟ್ಟು ಈ ಶಿಕ್ಷಕರನ್ನು ನೇಮಿಸಿಕೊಳ್ಳಬೇಕೆಂದರೂ ಅಧಿಕಾರಿಗಳು ಏನ್ರಿ ಶಾಲೆಯೇನು ನಿಮ್ಮಪ್ಪನದಾ? ಯಾರನ್ನ್ ಕೇಳಿ ಅವರನ್ನು ನೇಮಿಸಿಕೊಂಡಿರೆಂದು ನಮ್ಮನ್ನು ದಬಾಯಿಸುತ್ತಾರೆ. ಇನ್ನು ತರಬೇತಿಗಳಿಗಂತು ಲೆಕ್ಕವೇ ಇಲ್ಲ. ದಿನಾ ಯಾವುದಾದರೊಂದು ತರಬೇತಿ ಇದ್ದೇ ಇರುತ್ತದೆ. ಕೇವಲ ಸರಕಾರಿ ಶಿಕ್ಷಕರಿಗೆ ಇವು ಹೆಚ್ಚಿಗೇ ಇರುತ್ತವೆ. ಅಲ್ಲದೇ ಮತದಾರರ ಯಾದಿ ತಯಾರಿಸುವದಕ್ಕೆ ಶಿಕ್ಷಕರ ಬಳಕೆ ನಿಂತೇ ಇಲ್ಲ. ಇವೆಲ್ಲ ಸಮಸ್ಯೆಗಳ ಮಧ್ಯ ಸರಕಾರಿ ಶಾಲಾ ಶಿಕ್ಷಕರು ರಾಜಕೀಯ ಮಾಡುತ್ತಾ ಶಾಲೆಗೆ ಬಾರದೇ ಪಗಾರ ತೆಗೆದುಕೊಳ್ಳುವ ಸಮಸ್ಯೆಯೂ ಇದೆ. ಇದು ಕೇವಲ 10% ಇದ್ದರೆ ಉಳಿದ ಸಮಸ್ಯೆಗಳು 90% ಇವೆ. ಇವುಗಳನ್ನು ನಿವಾರಿಸಿ ಶಿಕ್ಷಕರಿಗೆ ಕಲಿಸಲು ಬಿಟ್ಟರೆ ಸರ್ಕಾರಿ ಶಾಲೆಗಳು ಉದ್ದಾರವಾಗುತ್ತವೆ. ಹೊಸ ಹೊಸ ಯೋಜನೆಗಳ ಬಲಿಪಶುಗಳು ಕೆವಲ ಸರ್ಕಾರಿ ಶಾಲಾ ಮಕ್ಕಳು ಮಾತ್ರ ಆಗುತ್ತಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ಯಾವ ನಿಯಮಗಳೂ ಅನುಸರಿಸಲ್ಪಡುವದಿಲ್ಲ. ಅಲ್ಲಿಯ ಶಿಕ್ಷಕರ ಗುಣಮಟ್ಟ ತುಂಬಾ ಕಡಿಮೆ ಇದ್ದರೂ ಆ ಶಾಲೆಗಳ ಮಕ್ಕಳು ಎಲ್ಲದರಲ್ಲೂ ಮುಂದಿರುತ್ತಾರೆ. ಏಕೆಂದರೆ ಕಲಿತ ಸುಶಿಕ್ಷಿತ ಅಮ್ಮಂದಿರನ್ನು ಅವರು ಪಡೆದಿರುತ್ತಾರೆ. [ಅಪ್ಪಂದಿರೆಂದು ಬೇಕೆಂದೆ ಹೇಳಿಲ್ಲ.ಗಮನಿಸಿ.] ನಮ್ಮ ಮಕ್ಕಳ ತಾಯಂದಿರು ತುತ್ತಿನ ಚೀಲ ತುಂಬಿಸುವದರ ಲ್ಲೆ ತಲ್ಲೀನರಾಗಿ ಮಕ್ಕಳನ್ನು ಕಡೆಗಣಿಸುತ್ತಾರೆ. ಅದು ಅನಿವಾರ್ಯ ಕೂಡ ಆಗಿದೆ. ವಸ್ತು ಸ್ಥಿತಿ ಹೀಗಿರುವಾಗ ಸರ್ಕಾರಿ ಶಾಲೆಗಳು ಹೆಗೆ ಉದ್ದಾರವಾಗುತ್ತವೆ????

    ಉತ್ತರ
    • shripad Bhat
      ಮೇ 15 2014

      ವಲವಿಯವರೇ ನೀವು ಹೇಳಿರುವುದು ಸರಿ. ಇಷ್ಟೆಲ್ಲ ಅಸಂಗತಗಳ ಜೊತೆಗೆ ರಗಸದಅ ಎಂಬ ಅಸಂಬದ್ಧ ವರ್ಣಮಾಲೆ ಹಾಗೂ ಕಲಿಕಾ ವಿಧಾನ ಬೇರೆ. ಕನ್ನಡದ ಇಂದಿನ ಸ್ಥಿತಿಗೆ ಸರ್ಕಾರದ ನೀತಿಗಳೇ ಕಾರಣವಲ್ಲದೇ ಬೇರಲ್ಲ.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments