ಚುನಾವಣೆ 2014: ಯುಪಿಎ ಸೋಲಿಗೆ ಕಾರಣಗಳೇನು?
– ತುರುವೇಕೆರೆ ಪ್ರಸಾದ್
ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದು ಅದರಂತೆ ಬಿಜೆಪಿ ಮತ್ತು ಅದರ ಮಿತ್ರಪಕ್ಕಗಳನ್ನೊಳಗೊಂಡ ಎನ್‍ಡಿಎ ಕಳೆದ 25 ವರ್ಷಗಳಲ್ಲೇ ಐತಿಹಾಸಿಕ ಎನ್ನಬಹುದಾದ ಭಾರೀ ಗೆಲುವು ದಾಖಲಿಸಿದೆ. ಯುಪಿಎ ನೂರರ ಗಡಿ ಮುಟ್ಟಲಾಗದೆ ದಯನೀಯ ಸೋಲು ಕಂಡಿದೆ. ಯುಪಿಎ ವೈಫಲ್ಯಕ್ಕೆ ಕಾರಣವಾದ ಹಲವು ಅಂಶಗಳಿವೆ. ಅವುಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳು, ಹಣದುಬ್ಬರ, ಬೆಲೆಯೇರಿಕೆ ಇವು ಪ್ರಮುಖ ಕಾರಣಗಳು. ಯುಪಿಎ ಸರ್ಕಾರದ ವೈಫಲ್ಯಕ್ಕೆ ಕಾರಣವಾದ ಅಂಕಿ-ಅಂಶಗಳನ್ನು ಖ್ಯಾತ ಪತ್ರಕರ್ತ ಸೆನ್‍ಗುಪ್ತ ಪಟ್ಟಿ ಮಾಡಿದ್ದಾರೆ. ಅವುಗಳ ಸಾರಾಂಶ ಈ ಕೆಳಕಂಡಂತಿದೆ
• ಯುಪಿಎ ಆಢಿತಾವಧಿಯಲ್ಲಿ ನಡೆದ 1.76 ಲಕ್ಷ ಕೋಟಿಯ 2ಜಿ ಹಗರಣ, 1.85 ಲಕ್ಷ ಕೋಟಿಯ ಕಲ್ಲಿದ್ದಲು ಹಂಚಿಕೆ ಹಗರಣ, ರೂ.3600 ಕೋಟಿಯ ಅಗಸ್ಟಾ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಹಗರಣ, 90 ಕೋಟಿ ಹಣ ದುರುಪಯೋಗದ ಕಾಮನ್‍ವೆಲ್ತ್ ಕ್ರೀಡಾಕೂಟದ ಹಗರಣ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‍ನಿಂದ 5000 ಕೋಟಿ ದುರುಪಯೋಗದ ಆರೋಪ ಹೊತ್ತಿರುವ ಮಾಯಾವತಿ ಸರ್ಕಾರದ ಹಗರಣ- ಇವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ.
• 2011ರಲ್ಲಿ ಸುಮಾರು 4 ಲಕ್ಷ ಕೋಟಿ ಕಪ್ಪು ಹಣ ಭಾರತದಿಂದ ಆಚೆ ಸಾಗಿಸಲಾಗಿದೆ. ಇದು 2010ರ ಶೇ.24ರಷ್ಟು ಹೆಚ್ಚು. ಪ್ರತಿ ವರ್ಷ ಇದು ಅವ್ಯಾಹತವಾಗಿ ನಡೆದು ಬಂದಿದೆ. ಆದರೆ ಸ್ವಿಸ್ ಬ್ಯಾಂಕ್‍ನಲ್ಲಿದೆ ಎಂದು ಹೇಳಾಗಿರುವ 1456 ಬಿಲಿಯನ್ ಡಾಲರ್ ಹಣ ಹಿಂದೆ ಪಡೆಯಲು ಯುಪಿಎ ಸರ್ಕಾರ ಯಾವ ಗಂಭೀರ ಪ್ರಯತ್ನವನ್ನೂ ಮಾಡಲಿಲ್ಲ.
• ಯುಪಿಎ ಸರ್ಕಾರದ ಮಹದಾಕಾಂಕ್ಷಿ ಯೋಜನೆ ಎನಿಸಿದ ಉದ್ಯೋಗ ಖಾತ್ರಿ ಯೋಜನೆಯಡಿ ಯುಪಿಎ ಸರ್ಕಾರ 1.9ಲಕ್ಷ ಕೋಟಿ ಹಣ ವೆಚ್ಚ ಮಾಡಿದೆ. ಆದರೆ ಶೇ.31 ಗ್ರಾ.ಪಂಚಾಯ್ತಿಗಳಿಗೆ ಈ ಹಣ ಹೇಗೆ ವಿನಿಯೋಗಿಸಬೇಕು ಎಂಬುದೇ ಗೊತ್ತಿಲ್ಲ, ರಾಜ್ಯದಲ್ಲಿನ ಹಳೆ ಉಳಿಕೆ, ಬಳಕೆಯ ಲೆಕ್ಕವೇ ಇಡದೆ ಕಳೆದ 3 ವರ್ಷಗಳಿಂದ ಒಟ್ಟಾರೆ 11549 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 4.33 ಲಕ್ಷ ಜಾಬ್ ಕಾರ್ಡ್‍ಗಳಿಗೆ ಭಾವಚಿತ್ರವೇ ಇಲ್ಲ, ಗ್ರಾಮೀಣ ಪ್ರದೇಶದಲ್ಲಿ ಕೇವಲ ಶೇ.20 ಹಣವನ್ನು ಮಾತ್ರ ಉದ್ದೇಶಿತ ಯೋಜನೆಗಳಿಗೆ ಬಳಸಲಾಗಿದ್ದು ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಸಿಎಜಿ ಆಕ್ಷೇಪಿಸಿದೆ.
• 2003-04ನೇ ಸಾಲಿನಲ್ಲಿ ಭಾರತದ ಚಾಲ್ತಿ ಖಾತೆಯಲ್ಲಿ 14 ಬಿಲಿಯನ್ ಡಾಲರ್ ಉಳಿಕೆ ಹಣವಿತ್ತು.ಅದರೆ ಈಗ ಶೇ.90 ಅಂದರೆ ಜಿಡಿಪಿಯ ಶೇ.5 ರಷ್ಟು ಹಣ ಚಾಲ್ತಿ ಖಾತೆಯಲ್ಲಿ ಖೋತಾ ಆಗಿದೆ.ಮಾರ್ಚ್ 2014ರ ಅಂತ್ಯಕ್ಕೆ ಭಾರತ ರೂ.172 ಬಿಲಿಯನ್ ಡಾಲರ್ ಅಲ್ಪಾವಧಿ ಸಾಲ ಹೊಂದಿತ್ತು. ಬಹುತೇಕ ಸಾಲದ ಹಣವನ್ನು ಅಭಿವೃದ್ದಿ ಕಾಮಗಾರಿಗಳಾದ ರಸ್ತೆ, ಆಸ್ಪತ್ರೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಿಂತ ಆಢಳಿತಾತ್ಮಕ ಖರ್ಚು ಹಾಗೂ ಸಂಬಳ, ಭತ್ಯೆಗಳಿಗೇ ವ್ಯಯಮಾಡಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಹಿಂದೆಂದೂ ಇಲ್ಲದಷ್ಟು ( ಶೇ.11.24 )ಏರಿ ದಾಖಲೆ ಸೃಷ್ಟಿಸಿತ್ತು.
• ಏನೆಲ್ಲಾ ಆಹಾರ ಭದ್ರತೆಯ ಮಸೂದೆ ತಂದರೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಯ ಸೋರಿಕೆ ನಿಯಂತ್ರಿಸಲಾಗಲೇ ಇಲ್ಲ. ಜಸ್ಟಿಸ್ ವಾದಾ ಸಮಿತಿ ದೇಶದಲ್ಲಿ 7 ಲಕ್ಷ ಬೋಗಸ್ ಪಡಿತರ ಚೀಟಿ ಇದೆ ಎಂದು ಹೇಳಿತ್ತು. ಇದು ಈಗಲೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ.
• ಭಾರತೀಯ ಯೋಜನಾ ಆಯೋಗದ ಅಂಕಿ ಅಂಶಗಳ ಪ್ರಕಾರ 2004-10ರ ನಡುವೆ ದೇಶದ ಬಡತನದ ಮಟ್ಟ ಶೇ. 37.2ರಿಂದ ಶೇ.29.8ಕ್ಕೆ ಕುಸಿದು ಸುಮಾರು ಶೇ. 10ರಷ್ಟು ಕಡಿಮೆ ಆಗಿತ್ತು.ಅಧಿಕೃತ ಮೂಲಗಳ ಪ್ರಕಾರ ದೇಶದಲ್ಲಿ 216.5 ಮಿಲಿಯನ್ ಬಡವರಿದ್ದರು. ಆದರೆ ಈಚೆಗೆ ಭಾರತ ಸರ್ಕಾರ ಆಹಾರ ಖಾತರಿ ಯೋಜನೆಯಡಿ 125 ಕೋಟಿ ಜನಸಂಖ್ಯೆಯ ಶೇ.67 ರಷ್ಟು ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವುದಾಗಿ ಹೇಳಿತ್ತು. ಶೇ.29.8ರಷ್ಟಿದ್ದ ಬಡವರು ಶೇ.67ಕ್ಕೆ ದಿಡೀರನೆ ಏರಿದ್ದು ಹೇಗೆ? 4 ವರ್ಷಗಳಲ್ಲಿ ಬಡತನ ಶೇ.40ರಷ್ಟು ಹೆಚ್ಚಿದರೆ ಯಪಿಎ ನೇತೃತ್ವದ ಸರ್ಕಾರ ಬಡವರಿಗಾಗಿ ಮಾಡಿದ್ದಾದರೂ ಏನು ?
• ನಮ್ಮಲ್ಲಿ ಶೇ.72.63ರಷ್ಟು ಕುಟುಂಬಗಳಿಗೆ ಈಗಲೂ ಶೌಚಾಲಯ ಇಲ್ಲ. ಅವರು ಬಯಲು ಶೌಚಾಲಯವನ್ನೇ ಅವಲಂಭಿಸಿದ್ದಾರೆ ಎಂದು ಯೋಜನಾ ಆಯೋಗ ಕಳೆದ ವರ್ಷ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ವರದಿ ನೀಡಿದೆ. ಯೂನಿಸೆಫ್ ಪ್ರಕಾರ ದೇಶದ ಶೇ.67 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅತ್ಯಂತ ಹಿಂದುಳಿದ ಆಫ್ರಿಕಾ ದೇಶಗಳಲ್ಲೂ ಸಹ ನಮ್ಮಷ್ಟು ಕಡಿಮೆ ತೂಕದ ಮಕ್ಕಳಿಲ್ಲ. ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ 5 ವರ್ಷದೊಳಗಿನ ಮಕ್ಕಳ ಮರಣಕ್ಕೆ ಅತಿಸಾರ ಭೇದಿಯೇ ಕಾರಣ. ಪ್ರಪಂಚದಲ್ಲಿ ಈ ರೀತಿ ಸಾವಿಗೀಡಾಗುತ್ತಿರುವ ಪ್ರತಿ 4 ಮಕ್ಕಳಲ್ಲಿ ಒಂದು ಭಾರತೀಯ ಮಗು ಎಂದು ವರದಿಗಳು ಹೇಳುತ್ತವೆ. ಭಾರತದ ಶೇ.50 ರಷ್ಟು ಜನಕ್ಕೆ ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈ ತೊಳೆಯಲು ಚೂರು ಸೋಪೂ ಇಲ್ಲ. ಈ ಪರಿಸ್ಥಿತಿ 10 ವರ್ಷ ಆಳಿದ ಯಪಿಎ ಅಧಿಕಾರಾವಧಿಯಲ್ಲಿ ಸ್ವಲ್ಪವೂ ಸುಧಾರಿಸಲಿಲ್ಲ.
• 1995ರಿಂದ ದೇಶದಲ್ಲಿ ಸುಮಾರು 2.70 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಮಾಣ ಪ್ರತಿ ವರ್ಷ ಹೆಚ್ಚಾಗುತ್ತಿದ್ದು ಕಳೆದ ಒಂದು ದಶಕದಿಂದ ಪ್ರತಿವರ್ಷ 16, 743 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿ ನಿತ್ಯ 46 ರೈತರು ಅಂದರೆ ಅರ್ಧಗಂಟೆಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಾಲ್‍ಮಾರ್ಟ್‍ನಂತಹ ಸಂಸ್ಥೆಗಳು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತವೆ ಎಂದು ಹೇಳಲಾಗಿದ್ದರೂ ಅಮೇರಿಕಾ ತನ್ನ ರೈತರಿಗೆ ಕಳೆದ ವರ್ಷ 877 ಕೋಟಿ ರೂಗಳ ಬೆಳೆ ವಿಮೆ ಪರಿಹಾರವೊಂದನ್ನೇ ನೀಡಿದೆ(ಇತರೆ ಸಬ್ಸಿಡಿ ಹೊರತು ಪಡಿಸಿ). ಆದರೆ ಯುಪಿಎ ಸರ್ಕಾರ ರೈತರನ್ನು ಮಧ್ಯವರ್ತಿಗಳ ಕಪಿಮುಷ್ಠಿಯಿಂದಲೂ ತಪ್ಪಿಸಿಲ್ಲ, ಅವರ ಜೀವನ ಭದ್ರತೆಗೆ ಯಾವ ಯೋಜನೆಯನ್ನೂ ರೂಪಿಸಲಿಲ್ಲ.
• ಯುಪಿಎ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳುತ್ತಲೇ ಬಂದಿತ್ತು. 40ಮಿಲಿಯನ್ ಯುವಕರು ವಿವಿಧ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಕೆಲಸ ಸಿಗುತ್ತಿರುವುದು ಶೇ.0.2 ಮಂದಿಗೆ ಮಾತ್ರ. ಉದ್ಯೋಗ ಸೃಷ್ಟಿ ಎಲ್ಲಿ ಆಗಿದೆ? ಮೂಲಭೂತ ಸೌಕರ್ಯ ಕಲ್ಪಿಸುವ ಕೈಗಾರಿಕೆಗಳಲ್ಲಿ 103 ಮಿಲಿಯನ್, ಯಂತ್ರೋಪಕರಣ ಕ್ಷೇತ್ರದಲ್ಲಿ 35ಮಿಲಿಯನ್, ಜವಳಿ ಉದ್ಯಮದಲ್ಲಿ 27 ಮಿಲಿಯನ್, ಆರೋಗ್ಯ ಕ್ಷೇತ್ರಗಳಲ್ಲಿ 12 ಮಿಲಿಯನ್ ಕೆಲಸಗಳಿಗೆ ಅವಕಾಶ ಇದೆ ಎಂದು ಹೇಳಲಾಗಿದೆ . ಆದರೆ ಶೇ.80 ರಷ್ಟು ಪದವೀಧರ ಯುವಕರಿಗೆ ಇಂದಿಗೂ ಸಿದ್ಧ ಉದ್ಯೋಗ ದೊರಕಿಸಿಕೊಳ್ಳುವ ಕೌಶಲ, ಅರ್ಹತೆ ಇಲ್ಲ ಎಂದು ಎಪ್‍ಐ ಸಿಸಿಐ ಹೇಳಿದೆ. ಅಂದರೆ ಅಂತಹ ಶಿಕ್ಷಣವೇ ನಮ್ಮ ಯುವ ಜನಕ್ಕೆ ಸಿಗುತ್ತಿಲ್ಲ. ಹೀಗಾಗಿಯೇ ಯುವಕರು ಯುಪಿಎ ಸರ್ಕಾರದ ಬಗ್ಗೆ ಭ್ರಮನಿರಸನ ಹೊಂದಿದ್ದರು.
• ದೇಶದ ಬಡತನದ ರೇಖೆಯ ಮೇಲಿರುವ ಶ್ರೀ ಸಾಮಾನ್ಯನ ಸ್ಥಿತಿ ಏನು ಗೊತ್ತೆ? ಅವನು ದೇಶದ ರಾಜಧಾನಿ ದೆಹಲಿಯಲ್ಲಿ ಒಂದು ಕೆಜಿ ಅಕ್ಕಿ ಕೊಳ್ಳಬಹುದು ಮತ್ತು 3 ನಿಲ್ದಾಣದ ತನಕ ಬಸ್‍ನಲ್ಲಿ ಪ್ರಯಾಣಿಸಬಹುದು. ಅವನ ಬಟ್ಟೆ,ಬರೆ, ವಾಸ,ಆರೋಗ್ಯ ಇವುಗಳ ಲೆಕ್ಕವೇ ಇಲ್ಲ..
• ಯುಪಿಎ ಸರ್ಕಾರಕ್ಕೆ ಉತ್ತಮ ಕುಡಿಯುವ ನೀರನ್ನೂ ಒದಗಿಸಲಾಗಿಲ್ಲ. ದೇಶದ 159 ಜಿಲ್ಲೆಗಳಲ್ಲಿ ಕುಡಿಯುವ ನೀರು ಉಪ್ಪಾಗಿದೆ.267ಜಿಲ್ಲೆಗಳ ಜನ ಇಂದಿಗೂ ಫ್ಲೋರೈಡ್ ನೀರು ಕುಡಿಯುತ್ತಿದ್ದಾರೆ.585 ಜಿಲ್ಲೆಗಳ ಜನ ಹೆಚ್ಚು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವ ನೈಟ್ರೇಟ್ ನೀರು ಕುಡಿಯುತ್ತಿದ್ದಾರೆ. 53 ಜಿಲ್ಲೆಗಳಲ್ಲಿ ಜನ ಕುಡಿಯುತ್ತಿರುವ ನೀರಿನಲ್ಲಿ ಆರ್ಸೆನಿಕ್ ವಿಷ ಇರುವುದು ಕಂಡು ಬಂದಿದೆ. 270 ಜಿಲ್ಲೆಗಳಲ್ಲಿ ಕುಡಿಯುವ ನೀರಿನಲ್ಲಿ ಅತಿ ಹೆಚ್ಚು ಪ್ರಮಾಣದ ಕಬ್ಬಿಣದ ಅಂಶ ಇರುವುದು ಕಂಡು ಬಂದಿದೆ.
• ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಅಪರಾಧ ಪ್ರಕರಣ ಶೇ.74ಕ್ಕೆ ತಲುಪಿದೆ. ಕೌಂಟುಂಬಿಕ ದೌರ್ಜನ್ಯ ಶೇ.140, ಹೆಣ್ಣು ಮಕ್ಕಳ ಅಪಹರಣ ಶೇ.117, ಅತ್ಯಾಚಾರ ಶೇ.60 ಮತ್ತು ಘನತೆ ಇಲ್ಲದೆ ನಡೆಸಿಕೊಳ್ಳುವುದು ಶೇ.40 ರಷ್ಟು ಹೆಚ್ಚಿದೆ
• ಯುಪಿಎ ಆಢಳಿತಾವಧಿಯಲ್ಲಿ ಭ್ರಷ್ಟಾಚಾರ ಮೇರೆ ಮೀರಿತ್ತು. ಟಿಐಸಿಪಿಐ ಸಮೀಕ್ಷೆ ಪ್ರಕಾರ 2007ರಲ್ಲಿ ಭಾರತ ಭ್ರಷ್ಟಾಚಾರದ ಪಟ್ಟಿಯಲ್ಲಿ 72ನೇ ಸ್ಥಾನದಲ್ಲಿತ್ತು, 2010ರಲ್ಲಿ 87ಕ್ಕೆ ಜಿಗಿದು ಈಗ 94ನೇ ಸ್ಥಾನದಲ್ಲಿದೆ.
• ಭಾರತದಲ್ಲಿ ಇಂದಿಗೂ 65 ಮಿಲಿಯನ್ ಜನ ಕೊಳಗೇರಿಗಳಲ್ಲಿ ವಾಸ ಮಾಡುತ್ತಾರೆ.ನಗರ ಪ್ರದೇಶದಲ್ಲಿರುವ ಕುಟುಂಬಗಳಿಗೆ 9.42 ಲಕ್ಷ ಮನೆಗಳು ನಿರ್ಮಾಣವಾಗಬೇಕಿದೆ. ಯುಪಿಎ ಸರ್ಕಾರ ವಸತಿ ಹೀನರ ಬದುಕನ್ನು ಸುಧಾರಿಸುವ ಪ್ರಯತ್ನವನ್ನೂ ಮಾಡಲಿಲ್ಲ.
• ಬಡವರ ಬದುಕು ತುಂಬಾ ದುಸ್ತರವಾಗಿದೆ. ತಕ್ಷಣಕ್ಕೆ ಸಂಭವಿಸುವ ವಿಪತ್ತುಗಳು, ಅಕಸ್ಮಿಕಗಳನ್ನು ಎದುರಿಸಲು ಬಡವರ ಬಳಿ ಯಾವ ಸುರಕ್ಷಿತ ಆರ್ಥಿಕ ಬೆಂಬಲವಿಲ್ಲ. ಪ್ರತಿ ವರ್ಷ ಭಾರತದಲ್ಲಿ 2000 ಜನ ತಮ್ಮ ಕಿಡ್ನಿ ಮಾರಿಕೊಂಡು ಸಂಕಷ್ಟದ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
• ನಮ್ಮಲ್ಲಿ ಒಂದು ಲಕ್ಷ ಜನರಿಗೆ ಒಂದು ಆಪರೇಶನ್ ಥಿಯೇಟರ್ ಇದೆ. ಈ ವಿಷಯದಲ್ಲಿ ನಾವು ಪಾಕಿಸ್ತಾನಕ್ಕಿಂತ ಕಡೆಯಾಗಿದ್ದೇವೆ. ಯೋರೋಪಿನಲ್ಲಿ 1 ಲಕ್ಷ ಜನರಿಗೆ 25 ಓಟಿಗಳಿವೆ, ಆಸ್ಟ್ರೇಲಿಯಾದಲ್ಲಿ 1 ಲಕ್ಷ ಜನರಿಗೆ 14 ಓಟಿಗಳಿವೆ.
• ಭಾರತದ ಜನ ತಾವೇ ಆರಿಸಿದ ಸರ್ಕಾರದ ಬಗ್ಗೆ ಯಪಿಎ ಸರ್ಕಾರಕ್ಕೆ ತೋರಿಸದಷ್ಟು ಅವಿಶ್ವಾಸವನ್ನು ಬೇರೆ ಯಾವುದೇ ಸರ್ಕಾರಕ್ಕೆ ತೋರಿರಲಿಲ್ಲ. ಡಬ್ಲ್ಯು ಇ ಎಫ್ ವರದಿಯ ಪ್ರಕಾರ ಈ ನಿಟ್ಟಿನಲ್ಲಿ ಭಾರತ 148 ರಾಷ್ಟ್ರಗಳ ಪೈಕಿ 115ನೇ ಸ್ಥಾನದಲ್ಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ 27 ಸ್ಥಾನ ಹಿಂದಕ್ಕೆ ಕುಸಿದಿದೆ.
• ನಮ್ಮ ದೇಶದಲ್ಲಿ 40 ಮಿಲಿಯನ್ ಜನ ಬಂದೂಕು ಮೊದಲಾದ ಮಾರಕಾಸ್ತ್ರ ಹೊಂದಿದ್ದಾರೆ. ಇದರಲ್ಲಿ ಶೇ.15 ಜನ ಮಾತ್ರ ಅಧಿಕೃತ ಪರವಾನಗಿ ಹೊಂದಿದ್ದಾರೆ. ಮಿಕ್ಕವರು? ಈ ಕಾರಣದಿಂದಾಗಿಯೇ ನಮ್ಮಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿರುವುದು ಎಂದು ಹೇಳಲಾಗಿದೆ. ಯುಪಿಎ ಅಧಿಕಾರಾವಧಿಯಲ್ಲೂ ಇದು ನಿಯಂತ್ರಣಕ್ಕೆ ಬರಲಿಲ್ಲ.
• ಭಾರತದ ಸಂಸತ್ ಕಲಾಪದ ಪ್ರತಿ ನಿಮಿಷದ ಖರ್ಚು ರೂ.2.5 ಲಕ್ಷ. ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಿ ಪವನ್ ಕುಮಾರ್ ಬನ್ಸಾಲ್ ಸೆಪ್ಟೆಂಬರ್ 2012ರಲ್ಲಿ ಸ್ವತಃ ಈ ಹೇಳಿಕೆ ನೀಡಿದ್ದಾರೆ. 15ನೇ ಲೋಕಸಭೆಯ ಕೊನೆಯ ಅಧಿವೇಶನ 61 ಗಂಟೆ 45 ನಿಮಿಷ ನಡೆದಿತ್ತು.ಅದರಲ್ಲಿ 59 ಗಂಟೆ 7 ನಿಮಿಷ ಯಾವುದೇ ಕಲಾಪ ನಡೆಯದೆ ವ್ಯರ್ಥವಾಗಿತ್ತು. ಅಧಿವೇಶನ ಕೊನೆಯಲ್ಲಿ 104 ಮಸೂದೆಗಳು ಮಂಡನೆಯಾಗದೆ ಉಳಿದವು. 400 ಪ್ರಶ್ನೆಗಳ ಪೈಕಿ ಕೇವಲ 49 ಪ್ರಶ್ನೆಗಳಿಗೆ ಉತ್ತರ ಹೇಳುವ ಅವಕಾಶ ಸಿಕ್ಕಿತು. ಒಟ್ಟಾರೆ ಒಂದು ಅಧಿವೇಶದಲ್ಲಿ ಪೋಲಾದ ಹಣ ಬರೋಬ್ಬರಿ 88.5 ಕೋಟಿ. ಈ ಹಣ ಯಾರದು ? ಯುಪಿಎ ಸರ್ಕಾರ ಅಧಿವೇಶನಗಳನ್ನು ನಿಭಾಯಿಸುವುದಲ್ಲಿ ಕೂಡ ವಿಫಲವಾಯಿತು. ಈ ಎಲ್ಲಾ ವಿಫಲತೆಗಳಿಂದಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಜನರ ವಿಶ್ವಾಸ ಕಳೆದುಕೊಂಡು ಭಾರೀ ಬೆಲೆ ತೆರುವಂತಾಯಿತು.
ಚಿತ್ರ ಕೃಪೆ :www.thehindu.com
65 ವರ್ಷಗಳಿಂದ ನಮ್ಮ ದೇಶವನ್ನು ಆಳಿದವರು ಯಾರಿಗೂ ಆಡಳಿತವೆಂದರೇನೆಂಬುದೇ ಗೊತ್ತಿರಲಿಲ್ಲ. ಅವರುಗಳ ದುರಾಡಳಿತದಿಂದ ಸ್ವಿಸ್ ಬ್ಯಾಂಕಿಗೆ ಹಣ ಹೋಗಿ ಆ ದೇಶದ ಜನತೆ ಮಜಾ ಮಾಡುವಂತಾಯಿತು. ನಮ್ಮ ದೇಶದಲ್ಲಿ ಬಡತನ ಹೆಚ್ಚಾಯಿತು. ಇಲ್ಲಿಯವರೆಗೂ ಅಷ್ಟೇ ಆಗಿದ್ದು. ಹಾಗಾಗಿ ಅವರುಗಳು ಹೀನಾಯವಾಗಿ ನೆಲ ಕಚ್ಚಬೇಕಾಯಿತು. ದೇಶಕ್ಕೆ ಇನ್ನಾದರೂ ಒಳ್ಳೆಯ ದಿನಗಳು ಬರಲೆಂದು ಆಶಿಸೋಣ.
ಕಾಂಗ್ರೆಸ್ ಪಕ್ಷ ಮೋದಿ ಆಡಳಿತದ ಅವಧಿಯಲ್ಲಿ ಒಂದು ಉತ್ತಮ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಮೋದಿ ಸರಕಾರವನ್ನು ಸದಾ ಎಚ್ಚರದಲ್ಲಿಡುವ ಹಾಗೂ ನ್ಯಾಯ ನೀತಿ ಮಾನವೀಯತೆ ಹಾಗೂ ಜಾತ್ಯತೀತ ಮಾರ್ಗದಲ್ಲಿ ಸಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ರಾಹುಲ್ ಗಾಂಧೀ ಒಬ್ಬ ಪ್ರಬುಧ್ಧ ಹಾಗೂ ಧೀಮಂತ ರಾಜಕಾರಣಿಯಾಗಿ ರೂಪುಗೊಳ್ಳಲಿ ಎಂದು ಆಶಿಸೋಣ.